Shalya Parva: Chapter 26

ಶಲ್ಯಪರ್ವ: ಹ್ರದಪ್ರವೇಶಪರ್ವ

೨೬

ಕೃಷ್ಣಾರ್ಜುನರ ಸಂವಾದ (೧-೨೫). ಅರ್ಜುನನು ಸತ್ಯಕರ್ಮ, ಸತ್ಯೇಷು ಮತ್ತು ಸುಶರ್ಮ ಮತ್ತು ಸುಶರ್ಮನ ೪೯ ಮಕ್ಕಳನ್ನು ವಧಿಸಿದುದು (೩೦-೪೬). ಭೀಮಸೇನನಿಂದ ಧೃತರಾಷ್ಟ್ರನ ಮಗ ಸುದರ್ಶನನ ವಧೆ (೪೭-೪೮). ಸಂಕುಲಯುದ್ಧ (೪೯-೫೪).

09026001 ಸಂಜಯ ಉವಾಚ

09026001a ದುರ್ಯೋಧನೋ ಮಹಾರಾಜ ಸುದರ್ಶಶ್ಚಾಪಿ ತೇ ಸುತಃ|

09026001c ಹತಶೇಷೌ ತದಾ ಸಂಖ್ಯೇ ವಾಜಿಮಧ್ಯೇ ವ್ಯವಸ್ಥಿತೌ||

ಸಂಜಯನು ಹೇಳಿದನು: “ಮಹಾರಾಜ! ಆಗ ಯುದ್ಧದ ಸೇನಾಮಧ್ಯದಲ್ಲಿ ನಿನ್ನ ಮಕ್ಕಳು ದುರ್ಯೋಧನ ಮತ್ತು ಸುದರ್ಶನ ಇವರಿಬ್ಬರೇ ಹತರಾಗದೇ ಉಳಿದಿದ್ದರು.

09026002a ತತೋ ದುರ್ಯೋಧನಂ ದೃಷ್ಟ್ವಾ ವಾಜಿಮಧ್ಯೇ ವ್ಯವಸ್ಥಿತಂ|

09026002c ಉವಾಚ ದೇವಕೀಪುತ್ರಃ ಕುಂತೀಪುತ್ರಂ ಧನಂಜಯಂ||

ಆಗ ಸೇನಾಮಧ್ಯದಲ್ಲಿ ವ್ಯವಸ್ಥಿತನಾಗಿದ್ದ ದುರ್ಯೋಧನನನ್ನು ನೋಡಿ ದೇವಕೀಪುತ್ರನು ಕುಂತೀಪುತ್ರ ಧನಂಜಯನಿಗೆ ಹೇಳಿದನು:

09026003a ಶತ್ರವೋ ಹತಭೂಯಿಷ್ಠಾ ಜ್ಞಾತಯಃ ಪರಿಪಾಲಿತಾಃ|

09026003c ಗೃಹೀತ್ವಾ ಸಂಜಯಂ ಚಾಸೌ ನಿವೃತ್ತಃ ಶಿನಿಪುಂಗವಃ||

“ಶತ್ರುಗಳು ಅಧಿಕಾಂಶವಾಗಿ ಹತರಾಗಿದ್ದಾರೆ. ನಮ್ಮ ಬಂಧುಜನರು ರಕ್ಷಿತರಾಗಿದ್ದಾರೆ. ಶಿನಿಪುಂಗವ ಸಾತ್ಯಕಿಯು ಸಂಜಯನನ್ನು ಕೂಡ ಸೆರೆಹಿಡಿದು ಹೋಗಿದ್ದಾನೆ.

09026004a ಪರಿಶ್ರಾಂತಶ್ಚ ನಕುಲಃ ಸಹದೇವಶ್ಚ ಭಾರತ|

09026004c ಯೋಧಯಿತ್ವಾ ರಣೇ ಪಾಪಾನ್ಧಾರ್ತರಾಷ್ಟ್ರಪದಾನುಗಾನ್||

ಭಾರತ! ರಣದಲ್ಲಿ ಧಾರ್ತರಾಷ್ಟ್ರರ ಅನುಯಾಯಿಗಳೊಡನೆ ಯುದ್ಧಮಾಡಿ ನಕುಲ-ಸಹದೇವರು ಬಳಲಿದ್ದಾರೆ.

09026005a ಸುಯೋಧನಮಭಿತ್ಯಜ್ಯ ತ್ರಯ ಏತೇ ವ್ಯವಸ್ಥಿತಾಃ|

09026005c ಕೃಪಶ್ಚ ಕೃತವರ್ಮಾ ಚ ದ್ರೌಣಿಶ್ಚೈವ ಮಹಾರಥಃ||

ಸುಯೋಧನನನ್ನು ಬಿಟ್ಟು ಕೃಪ, ಕೃತವರ್ಮ ಮತ್ತು ಮಹಾರಥ ದ್ರೌಣಿ ಈ ಮೂವರೂ ಯುದ್ಧದಲ್ಲಿ ನಿಂತಿದ್ದಾರೆ.

09026006a ಅಸೌ ತಿಷ್ಠತಿ ಪಾಂಚಾಲ್ಯಃ ಶ್ರಿಯಾ ಪರಮಯಾ ಯುತಃ|

09026006c ದುರ್ಯೋಧನಬಲಂ ಹತ್ವಾ ಸಹ ಸರ್ವೈಃ ಪ್ರಭದ್ರಕೈಃ||

ದುರ್ಯೋಧನನ ಸೇನೆಯನ್ನು ಸಂಹರಿಸಿ ಸರ್ವ ಪ್ರಭದ್ರಕರೊಡನೆ ಪಾಂಚಾಲ್ಯನು ಇಲ್ಲಿ ಪರಮ ಕಾಂತಿಯಿಂದ ನಿಂತಿದ್ದಾನೆ.

09026007a ಅಸೌ ದುರ್ಯೋಧನಃ ಪಾರ್ಥ ವಾಜಿಮಧ್ಯೇ ವ್ಯವಸ್ಥಿತಃ|

09026007c ಚತ್ರೇಣ ಧ್ರಿಯಮಾಣೇನ ಪ್ರೇಕ್ಷಮಾಣೋ ಮುಹುರ್ಮುಹುಃ||

ಪಾರ್ಥ! ವಾಜಿಮಧ್ಯದಲ್ಲಿ ದುರ್ಯೋಧನನು ಶ್ವೇತಚತ್ರದಡಿಯಲ್ಲಿ ಬಾರಿ ಬಾರಿಗೂ ಇತ್ತಕಡೆ ನೋಡುತ್ತಾ ನಿಂತಿದ್ದಾನೆ.

09026008a ಪ್ರತಿವ್ಯೂಹ್ಯ ಬಲಂ ಸರ್ವಂ ರಣಮಧ್ಯೇ ವ್ಯವಸ್ಥಿತಃ|

09026008c ಏನಂ ಹತ್ವಾ ಶಿತೈರ್ಬಾಣೈಃ ಕೃತಕೃತ್ಯೋ ಭವಿಷ್ಯಸಿ||

ಸರ್ವ ಸೇನೆಯನ್ನೂ ಇನ್ನೊಮ್ಮೆ ವ್ಯೂಹದಲ್ಲಿ ರಚಿಸಿ ರಣಮಧ್ಯದಲ್ಲಿ ನಿಂತಿರುವ ಅವನನ್ನು ನಿಶಿತಬಾಣಗಳಿಂದ ಸಂಹರಿಸಿದರೆ ನೀನು ಕೃತಕೃತ್ಯನಾಗುತ್ತೀಯೆ.

09026009a ಗಜಾನೀಕಂ ಹತಂ ದೃಷ್ಟ್ವಾ ತ್ವಾಂ ಚ ಪ್ರಾಪ್ತಮರಿಂದಮ|

09026009c ಯಾವನ್ನ ವಿದ್ರವಂತ್ಯೇತೇ ತಾವಜ್ಜಹಿ ಸುಯೋಧನಂ||

ಅರಿಂದಮ! ಗಜಸೇನೆಯು ನಾಶವಾದುದನ್ನು ನೋಡಿ ಮತ್ತು ನೀನು ಇಲ್ಲಿರುವುದನ್ನು ನೋಡಿ ಇವರು ಪಲಾಯಮಾಡುತ್ತಿರುವಾಗ ನೀನು ಸುಯೋಧನನನ್ನು ಸಂಹರಿಸು!

09026010a ಯಾತು ಕಶ್ಚಿತ್ತು ಪಾಂಚಾಲ್ಯಂ ಕ್ಷಿಪ್ರಮಾಗಮ್ಯತಾಮಿತಿ|

09026010c ಪರಿಶ್ರಾಂತಬಲಸ್ತಾತ ನೈಷ ಮುಚ್ಯೇತ ಕಿಲ್ಬಿಷೀ||

ಯಾರಾದರೂ ಬೇಗನೆ ಹೋಗಿ ಪಾಂಚಾಲ್ಯನು ಇಲ್ಲಿಗೆ ಬರುವಂತೆ ಹೇಳಲಿ. ಅಯ್ಯಾ! ಸೇನೆಯು ಬಳಲಿರುವಾಗ ಈ ಪಾಪಿಯು ತಪ್ಪಿಸಿಕೊಂಡು ಹೋಗಬಾರದು!

09026011a ತವ ಹತ್ವಾ ಬಲಂ ಸರ್ವಂ ಸಂಗ್ರಾಮೇ ಧೃತರಾಷ್ಟ್ರಜಃ|

09026011c ಜಿತಾನ್ಪಾಂಡುಸುತಾನ್ಮತ್ವಾ ರೂಪಂ ಧಾರಯತೇ ಮಹತ್||

ನಿನ್ನ ಸೇನೆಗಳೆಲ್ಲವನ್ನೂ ಸಂಹರಿಸಿ ಪಾಂಡುಸುತರನ್ನು ಜಯಿಸುತ್ತೇನೆಂದು ತಿಳಿದುಕೊಂಡು ಧೃತರಾಷ್ಟ್ರಜನು ಮಹಾ ರೂಪವನ್ನು ಧರಿಸಿದ್ದಾನೆ.

09026012a ನಿಹತಂ ಸ್ವಬಲಂ ದೃಷ್ಟ್ವಾ ಪೀಡಿತಂ ಚಾಪಿ ಪಾಂಡವೈಃ|

09026012c ಧ್ರುವಮೇಷ್ಯತಿ ಸಂಗ್ರಾಮೇ ವಧಾಯೈವಾತ್ಮನೋ ನೃಪಃ||

ತನ್ನ ಸೇನೆಯು ನಾಶವಾದುದನ್ನು ಮತ್ತು ಪಾಂಡವರಿಂದ ಪೀಡಿಸಲ್ಪಟ್ಟಿರುವುದನ್ನು ನೋಡಿಯೂ ಕೂಡ ನೃಪನು ಸಂಗ್ರಾಮದಲ್ಲಿ ತನ್ನ ವಧೆಯನ್ನು ನಿಶ್ಚಯಿಸಿಯೇ ಬರುತ್ತಿದ್ದಾನೆ.”

09026013a ಏವಮುಕ್ತಃ ಫಲ್ಗುನಸ್ತು ಕೃಷ್ಣಂ ವಚನಮಬ್ರವೀತ್|

09026013c ಧೃತರಾಷ್ಟ್ರಸುತಾಃ ಸರ್ವೇ ಹತಾ ಭೀಮೇನ ಮಾನದ||

09026013e ಯಾವೇತಾವಸ್ಥಿತೌ ಕೃಷ್ಣ ತಾವದ್ಯ ನ ಭವಿಷ್ಯತಃ||

ಹೀಗೆ ಹೇಳಲು ಫಲ್ಗುನನಾದರೋ ಕೃಷ್ಣನಿಗೆ ಹೇಳಿದನು: “ಮಾನದ! ಧೃತರಾಷ್ಟ್ರನ ಮಕ್ಕಳೆಲ್ಲರೂ ಭೀಮನಿಂದಲೇ ಹತರಾದರು. ಕೃಷ್ಣ! ಇಂದು ಯುದ್ಧಕ್ಕೆ ನಿಂತಿರುವ ಇವರಿಬ್ಬರೂ ಅವನಿಂದ ಉಳಿಯಲಾರರು!

09026014a ಹತೋ ಭೀಷ್ಮೋ ಹತೋ ದ್ರೋಣಃ ಕರ್ಣೋ ವೈಕರ್ತನೋ ಹತಃ|

09026014c ಮದ್ರರಾಜೋ ಹತಃ ಶಲ್ಯೋ ಹತಃ ಕೃಷ್ಣ ಜಯದ್ರಥಃ||

ಕೃಷ್ಣ! ಭೀಷ್ಮನು ಹತನಾದನು. ದ್ರೋಣನು ಹತನಾದನು. ವೈಕರ್ತನ ಕರ್ಣನೂ ಹತನಾದನು. ಮದ್ರರಾಜ ಶಲ್ಯನು ಹತನಾದನು. ಜಯದ್ರಥನೂ ಹತನಾದನು.

09026015a ಹಯಾಃ ಪಂಚಶತಾಃ ಶಿಷ್ಟಾಃ ಶಕುನೇಃ ಸೌಬಲಸ್ಯ ಚ|

09026015c ರಥಾನಾಂ ತು ಶತೇ ಶಿಷ್ಟೇ ದ್ವೇ ಏವ ತು ಜನಾರ್ದನ||

09026015e ದಂತಿನಾಂ ಚ ಶತಂ ಸಾಗ್ರಂ ತ್ರಿಸಾಹಸ್ರಾಃ ಪದಾತಯಃ||

ಸೌಬಲ ಶಕುನಿಯ ಐದುನೂರು ಕುದುರೆಗಳು ಉಳಿದುಕೊಂಡಿವೆ. ಜನಾರ್ದನ! ಇನ್ನೂರು ರಥಗಳು ಉಳಿದುಕೊಂಡಿವೆ. ನೂರು ಆನೆಗಳಿವೆ ಮತ್ತು ಮೂರು ಸಾವಿರ ಪದಾತಿಗಳಿದ್ದಾರೆ.

09026016a ಅಶ್ವತ್ಥಾಮಾ ಕೃಪಶ್ಚೈವ ತ್ರಿಗರ್ತಾಧಿಪತಿಸ್ತಥಾ|

09026016c ಉಲೂಕಃ ಶಕುನಿಶ್ಚೈವ ಕೃತವರ್ಮಾ ಚ ಸಾತ್ವತಃ||

09026017a ಏತದ್ಬಲಮಭೂಚ್ಚೇಷಂ ಧಾರ್ತರಾಷ್ಟ್ರಸ್ಯ ಮಾಧವ|

09026017c ಮೋಕ್ಷೋ ನ ನೂನಂ ಕಾಲಾದ್ಧಿ ವಿದ್ಯತೇ ಭುವಿ ಕಸ್ಯ ಚಿತ್||

ಮಾಧವ! ಅಶ್ವತ್ಥಾಮ, ಕೃಪ, ತ್ರಿಗರ್ತಾಧಿಪತಿ, ಉಲೂಕ, ಶಕುನಿ, ಮತ್ತು ಸಾತ್ವತ ಕೃತವರ್ಮ – ಇವರಿಷ್ಟೇ ಧಾರ್ತರಾಷ್ಟ್ರನ ಸೇನೆಯಲ್ಲಿ ಉಳಿದುಕೊಂಡಿದ್ದಾರೆ. ಭುವಿಯಲ್ಲಿ ಯಾರಿಗೂ ಕಾಲದಿಂದ ಮೋಕ್ಷ ಎನ್ನುವುದಿಲ್ಲ.

09026018a ತಥಾ ವಿನಿಹತೇ ಸೈನ್ಯೇ ಪಶ್ಯ ದುರ್ಯೋಧನಂ ಸ್ಥಿತಂ|

09026018c ಅದ್ಯಾಹ್ನಾ ಹಿ ಮಹಾರಾಜೋ ಹತಾಮಿತ್ರೋ ಭವಿಷ್ಯತಿ||

ಸೇನೆಗಳು ಹತವಾದರೂ ಹಾಗೆ ನಿಂತಿರುವ ದುರ್ಯೋಧನನನ್ನು ನೋಡು! ಇಂದು ರಾತ್ರಿಯಾಗುವುದರೊಳಗೆ ಮಹಾರಾಜ ಯುಧಿಷ್ಠಿರನು ಶತ್ರುರಹಿತನಾಗುತ್ತಾನೆ.

09026019a ನ ಹಿ ಮೇ ಮೋಕ್ಷ್ಯತೇ ಕಶ್ಚಿತ್ಪರೇಷಾಮಿತಿ ಚಿಂತಯೇ|

09026019c ಯೇ ತ್ವದ್ಯ ಸಮರಂ ಕೃಷ್ಣ ನ ಹಾಸ್ಯಂತಿ ರಣೋತ್ಕಟಾಃ||

09026019e ತಾನ್ವೈ ಸರ್ವಾನ್ ಹನಿಷ್ಯಾಮಿ ಯದ್ಯಪಿ ಸ್ಯುರಮಾನುಷಾಃ||

ಇಂದು ಶತ್ರುಗಳ್ಯಾರೂ ನನ್ನಿಂದ ತಪ್ಪಿಸಿಕೊಂಡು ಹೋಗಲಾರರೆಂದು ಭಾವಿಸುತ್ತೇನೆ. ಕೃಷ್ಣ! ಒಂದುವೇಳೆ ಈ ರಣೋತ್ಕಟರು ಸಮರದಿಂದ ಪಲಾಯನ ಮಾಡದಿದ್ದರೆ, ಅವರು ಸುರ-ಅಮಾನುಷರೇ ಆಗಿರಲಿ, ಎಲ್ಲರನ್ನೂ ನಾನು ಸಂಹರಿಸುತ್ತೇನೆ.

09026020a ಅದ್ಯ ಯುದ್ಧೇ ಸುಸಂಕ್ರುದ್ಧೋ ದೀರ್ಘಂ ರಾಜ್ಞಃ ಪ್ರಜಾಗರಂ|

09026020c ಅಪನೇಷ್ಯಾಮಿ ಗಾಂಧಾರಂ ಪಾತಯಿತ್ವಾ ಶಿತೈಃ ಶರೈಃ||

ಇಂದು ಯುದ್ಧದಲ್ಲಿ ಕ್ರುದ್ಧನಾಗಿ ನಿಶಿತ ಶರಗಳಿಂದ ಗಾಂಧಾರನನ್ನು ಕೆಳಗುರುಳಿಸಿ ರಾಜ ಯುಧಿಷ್ಠಿರನ ದೀರ್ಘ ನಿದ್ರಾಹೀನತೆಯನ್ನು ಇಲ್ಲವಾಗಿಸುತ್ತೇನೆ.

09026021a ನಿಕೃತ್ಯಾ ವೈ ದುರಾಚಾರೋ ಯಾನಿ ರತ್ನಾನಿ ಸೌಬಲಃ|

09026021c ಸಭಾಯಾಮಹರದ್ದ್ಯೂತೇ ಪುನಸ್ತಾನ್ಯಾಹರಾಮ್ಯಹಂ||

ದುರಾಚಾರಿ ಸೌಬಲನು ಸಭೆಯಲ್ಲಿ ಮೋಸದ ದ್ಯೂತದಲ್ಲಿ ಯಾವ ರತ್ನಗಳನ್ನು ಅಪಹರಿಸಿದ್ದನೋ ಅವುಗಳನ್ನು ನಾನು ಯುದ್ಧದಲ್ಲಿ ಪುನಃ ಪಡೆಯುತ್ತೇನೆ.

09026022a ಅದ್ಯ ತಾ ಅಪಿ ವೇತ್ಸ್ಯಂತಿ ಸರ್ವಾ ನಾಗಪುರಸ್ತ್ರಿಯಃ|

09026022c ಶ್ರುತ್ವಾ ಪತೀಂಶ್ಚ ಪುತ್ರಾಂಶ್ಚ ಪಾಂಡವೈರ್ನಿಹತಾನ್ಯುಧಿ||

ಇಂದು ಹಸ್ತಿನಾಪುರದ ಸ್ತ್ರೀಯರೆಲ್ಲರೂ ಯುದ್ಧದಲ್ಲಿ ತಮ್ಮ ಪತಿ-ಪುತ್ರರು ಪಾಂಡವರಿಂದ ಹತರಾದರೆಂದು ಕೇಳಿ ಗೋಳಿಡಲಿದ್ದಾರೆ.

09026023a ಸಮಾಪ್ತಮದ್ಯ ವೈ ಕರ್ಮ ಸರ್ವಂ ಕೃಷ್ಣ ಭವಿಷ್ಯತಿ|

09026023c ಅದ್ಯ ದುರ್ಯೋಧನೋ ದೀಪ್ತಾಂ ಶ್ರಿಯಂ ಪ್ರಾಣಾಂಶ್ಚ ತ್ಯಕ್ಷ್ಯತಿ||

ಕೃಷ್ಣ! ಇಂದು ನಮ್ಮ ಕರ್ಮಗಳೆಲ್ಲವೂ ಸಮಾಪ್ತಗೊಳ್ಳುತ್ತವೆ. ಇಂದು ದುರ್ಯೋಧನನು ಬೆಳಗುತ್ತಿದ್ದ ಸಂಪತ್ತಿನೊಂದಿಗೆ ಪ್ರಾಣಗಳನ್ನೂ ತ್ಯಜಿಸಲಿದ್ದಾನೆ.

09026024a ನಾಪಯಾತಿ ಭಯಾತ್ಕೃಷ್ಣ ಸಂಗ್ರಾಮಾದ್ಯದಿ ಚೇನ್ಮಮ|

09026024c ನಿಹತಂ ವಿದ್ಧಿ ವಾರ್ಷ್ಣೇಯ ಧಾರ್ತರಾಷ್ಟ್ರಂ ಸುಬಾಲಿಶಂ||

ಕೃಷ್ಣ! ವಾರ್ಷ್ಣೇಯ! ಬಾಲಮತಿ ಧಾರ್ತರಾಷ್ಟ್ರನು ಒಂದು ವೇಳೆ ಭಯಪಟ್ಟು ಸಂಗ್ರಾಮದಿಂದ ಪಲಾಯನ ಮಾಡದಿದ್ದರೆ ಅವನು ನನ್ನಿಂದ ಹತನಾದನೆಂದೇ ತಿಳಿ!

09026025a ಮಮ ಹ್ಯೇತದಶಕ್ತಂ ವೈ ವಾಜಿವೃಂದಮರಿಂದಮ|

09026025c ಸೋಢುಂ ಜ್ಯಾತಲನಿರ್ಘೋಷಂ ಯಾಹಿ ಯಾವನ್ನಿಹನ್ಮ್ಯಹಂ||

ಅರಿಂದಮ! ಮುಂದೆ ಹೋಗು! ನನ್ನ ಧನುಸ್ಸಿನ ಟೇಂಕಾರವನ್ನೇ ಸಹಿಸಿಕೊಳ್ಳಲು ಅಶಕ್ತವಾಗಿರುವ ಈ ಗಜಸೇನೆಯನ್ನು ನಾನು ಸಂಹರಿಸುತ್ತೇನೆ.”

09026026a ಏವಮುಕ್ತಸ್ತು ದಾಶಾರ್ಹಃ ಪಾಂಡವೇನ ಯಶಸ್ವಿನಾ|

09026026c ಅಚೋದಯದ್ಧಯಾನ್ರಾಜನ್ದುರ್ಯೋಧನಬಲಂ ಪ್ರತಿ||

ರಾಜನ್! ಯಶಸ್ವಿ ಪಾಂಡವನು ಹೀಗೆ ಹೇಳಲು ದಾಶಾರ್ಹನು ಕುದುರೆಗಳನ್ನು ದುರ್ಯೋಧನನ ಸೇನೆಯ ಕಡೆ ಓಡಿಸಿದನು.

09026027a ತದನೀಕಮಭಿಪ್ರೇಕ್ಷ್ಯ ತ್ರಯಃ ಸಜ್ಜಾ ಮಹಾರಥಾಃ|

09026027c ಭೀಮಸೇನೋಽರ್ಜುನಶ್ಚೈವ ಸಹದೇವಶ್ಚ ಮಾರಿಷ||

09026027e ಪ್ರಯಯುಃ ಸಿಂಹನಾದೇನ ದುರ್ಯೋಧನಜಿಘಾಂಸಯಾ||

ಮಾರಿಷ! ಆ ಸೇನೆಯನ್ನು ನೋಡಿ ದುರ್ಯೋಧನನನ್ನು ಸಂಹರಿಸುವ ಇಚ್ಛೆಯಿಂದ ಸಜ್ಜಾಗಿ ಭೀಮಸೇನ, ಅರ್ಜುನ ಮತ್ತು ಸಹದೇವ ಈ ಮೂವರು ಮಹಾರಥರು ಸಿಂಹನಾದಗಳೊಂದಿಗೆ ಹೊರಟರು.

09026028a ತಾನ್ಪ್ರೇಕ್ಷ್ಯ ಸಹಿತಾನ್ಸರ್ವಾನ್ಜವೇನೋದ್ಯತಕಾರ್ಮುಕಾನ್|

09026028c ಸೌಬಲೋಽಭ್ಯದ್ರವದ್ಯುದ್ಧೇ ಪಾಂಡವಾನಾತತಾಯಿನಃ||

ಧನುಸ್ಸುಗಳನ್ನು ಮೇಲೆತ್ತಿ ವೇಗದಿಂದ ಒಟ್ಟಿಗೇ ಬರುತ್ತಿದ್ದ ಆ ಪಾಂಡವರೆಲ್ಲರನ್ನೂ ನೋಡಿ ಆತತಾಯಿ ಸೌಬಲನು ಯುದ್ಧದಲ್ಲಿ ಅವರನ್ನು ಎದುರಿಸಿದನು.

09026029a ಸುದರ್ಶನಸ್ತವ ಸುತೋ ಭೀಮಸೇನಂ ಸಮಭ್ಯಯಾತ್|

09026029c ಸುಶರ್ಮಾ ಶಕುನಿಶ್ಚೈವ ಯುಯುಧಾತೇ ಕಿರೀಟಿನಾ||

09026029e ಸಹದೇವಂ ತವ ಸುತೋ ಹಯಪೃಷ್ಠಗತೋಽಭ್ಯಯಾತ್||

ನಿನ್ನ ಮಗ ಸುದರ್ಶನನು ಭೀಮಸೇನನನ್ನು ಎದುರಿಸಿದನು. ಸುಶರ್ಮ ಶಕುನಿಯರು ಕಿರೀಟಿಯೊಂದಿಗೆ ಹೋರಾಡಿದರು. ಕುದುರೆಯ ಮೇಲೆ ಕುಳಿತಿದ್ದ ನಿನ್ನ ಮಗನು ಸಹದೇವನ ಮೇಲೆ ಆಕ್ರಮಣಿಸಿದನು.

09026030a ತತೋ ಹ್ಯಯತ್ನತಃ ಕ್ಷಿಪ್ರಂ ತವ ಪುತ್ರೋ ಜನಾಧಿಪ|

09026030c ಪ್ರಾಸೇನ ಸಹದೇವಸ್ಯ ಶಿರಸಿ ಪ್ರಾಹರದ್ಭೃಶಂ||

ಜನಾಧಿಪ! ಆಗ ಸತತ ಪ್ರಯತ್ನದಿಂದ ನಿನ್ನ ಮಗನು ಬೇಗನೆ ಪ್ರಾಸದಿಂದ ಸಹದೇವನ ಶಿರಸ್ಸಿಗೆ ಜೋರಾಗಿ ಹೊಡೆದನು.

09026031a ಸೋಪಾವಿಶದ್ರಥೋಪಸ್ಥೇ ತವ ಪುತ್ರೇಣ ತಾಡಿತಃ|

09026031c ರುಧಿರಾಪ್ಲುತಸರ್ವಾಂಗ ಆಶೀವಿಷ ಇವ ಶ್ವಸನ್||

ನಿನ್ನ ಮಗನಿಂದ ಪ್ರಹರಿಸಲ್ಪಟ್ಟು ಸರ್ವಾಂಗಗಳೂ ರಕ್ತದಿಂದ ತೋಯ್ದ ಸಹದೇವನು ವಿಷಸರ್ಪದಂತೆ ನಿಟ್ಟುಸಿರು ಬಿಡುತ್ತಾ ರಥಪೀಠದ ಮೇಲೆ ಕುಳಿತನು.

09026032a ಪ್ರತಿಲಭ್ಯ ತತಃ ಸಂಜ್ಞಾಂ ಸಹದೇವೋ ವಿಶಾಂ ಪತೇ|

09026032c ದುರ್ಯೋಧನಂ ಶರೈಸ್ತೀಕ್ಷ್ಣೈಃ ಸಂಕ್ರುದ್ಧಃ ಸಮವಾಕಿರತ್||

ವಿಶಾಂಪತೇ! ಆಗ ಸಂಜ್ಞೆಗಳನ್ನು ಪುನಃ ಪಡೆದುಕೊಂಡು ಸಹದೇವನು ಕ್ರುದ್ಧನಾಗಿ ದುರ್ಯೋಧನನ್ನು ತೀಕ್ಷ್ಣ ಶರಗಳಿಂದ ಮುಚ್ಚಿದನು.

09026033a ಪಾರ್ಥೋಽಪಿ ಯುಧಿ ವಿಕ್ರಮ್ಯ ಕುಂತೀಪುತ್ರೋ ಧನಂಜಯಃ|

09026033c ಶೂರಾಣಾಮಶ್ವಪೃಷ್ಠೇಭ್ಯಃ ಶಿರಾಂಸಿ ನಿಚಕರ್ತ ಹ||

ಕುಂತೀಪುತ್ರ ಧನಂಜಯ ಪಾರ್ಥನೂ ಕೂಡ ಯುದ್ಧದಲ್ಲಿ ವಿಕ್ರಮದಿಂದ ಕುದುರೆಗಳ ಮೇಲೆ ಕುಳಿತಿದ್ದ ಶೂರರ ಶಿರಗಳನ್ನು ಕತ್ತರಿಸುತ್ತಿದ್ದನು.

09026034a ತದಾನೀಕಂ ತದಾ ಪಾರ್ಥೋ ವ್ಯಧಮದ್ಬಹುಭಿಃ ಶರೈಃ|

09026034c ಪಾತಯಿತ್ವಾ ಹಯಾನ್ಸರ್ವಾಂಸ್ತ್ರಿಗರ್ತಾನಾಂ ರಥಾನ್ಯಯೌ||

ಅನೇಕ ಶರಗಳಿಂದ ಪಾರ್ಥನು ಅ ಸೇನೆಯನ್ನು ಸಂಹರಿಸಿದನು. ಎಲ್ಲ ಕುದುರೆಗಳನ್ನೂ ಕೆಳಗುರುಳಿಸಿ ಅವನು ತ್ರಿಗರ್ತರ ರಥಗಳ ಕಡೆ ಹೋದನು.

09026035a ತತಸ್ತೇ ಸಹಿತಾ ಭೂತ್ವಾ ತ್ರಿಗರ್ತಾನಾಂ ಮಹಾರಥಾಃ|

09026035c ಅರ್ಜುನಂ ವಾಸುದೇವಂ ಚ ಶರವರ್ಷೈರವಾಕಿರನ್||

ಆಗ ಮಹಾರಥ ತ್ರಿಗರ್ತರು ಒಟ್ಟಾಗಿ ಶರವರ್ಷಗಳಿಂದ ಅರ್ಜುನ-ವಾಸುದೇವರನ್ನು ಮುಚ್ಚಿದರು.

09026036a ಸತ್ಯಕರ್ಮಾಣಮಾಕ್ಷಿಪ್ಯ ಕ್ಷುರಪ್ರೇಣ ಮಹಾಯಶಾಃ|

09026036c ತತೋಽಸ್ಯ ಸ್ಯಂದನಸ್ಯೇಷಾಂ ಚಿಚ್ಚಿದೇ ಪಾಂಡುನಂದನಃ||

ಆಗ ಮಹಾಯಶಸ್ವಿ ಪಾಂಡುನಂದನನು ಕ್ಷುರದಿಂದ ಸತ್ಯಕರ್ಮನನ್ನು ಪ್ರಹರಿಸಿ ನಂತರ ಅವನ ರಥದ ಈಷಾದಂಡವನ್ನು ಕತ್ತರಿಸಿದನು.

09026037a ಶಿಲಾಶಿತೇನ ಚ ವಿಭೋ ಕ್ಷುರಪ್ರೇಣ ಮಹಾಯಶಾಃ|

09026037c ಶಿರಶ್ಚಿಚ್ಚೇದ ಪ್ರಹಸಂಸ್ತಪ್ತಕುಂಡಲಭೂಷಣಂ||

ವಿಭೋ! ಮಹಾಯಶಸ್ವಿಯು ಶಿಲಾಶಿತ ಕ್ಷುರಗಳಿಂದ ಅವನ ಸುವರ್ಣಕುಂಡಲ ಭೂಷಿತ ಶಿರವನ್ನು ತುಂಡರಿಸಿ ನಕ್ಕನು.

09026038a ಸತ್ಯೇಷುಮಥ ಚಾದತ್ತ ಯೋಧಾನಾಂ ಮಿಷತಾಂ ತತಃ|

09026038c ಯಥಾ ಸಿಂಹೋ ವನೇ ರಾಜನ್ಮೃಗಂ ಪರಿಬುಭುಕ್ಷಿತಃ||

ರಾಜನ್! ವನದಲ್ಲಿ ಹಸಿದ ಸಿಂಹವು ಮೃಗವನ್ನು ಕಬಳಿಸುವಂತೆ ಯೋಧರು ನೋಡುತ್ತಿದ್ದಂತೆಯೇ ಅವನು ಸತ್ಯೇಷುವನ್ನು ಸಂಹರಿಸಿದನು.

09026039a ತಂ ನಿಹತ್ಯ ತತಃ ಪಾರ್ಥಃ ಸುಶರ್ಮಾಣಂ ತ್ರಿಭಿಃ ಶರೈಃ|

09026039c ವಿದ್ಧ್ವಾ ತಾನಹನತ್ಸರ್ವಾನ್ರಥಾನ್ರುಕ್ಮವಿಭೂಷಿತಾನ್||

ಅವನನ್ನು ಸಂಹರಿಸಿದ ನಂತರ ಪಾರ್ಥನು ಮೂರು ಶರಗಳಿಂದ ಸುಶರ್ಮನನ್ನು ಹೊಡೆದು ಅವನ ಸುವರ್ಣವಿಭೂಷಿತ ರಥಗಳೆಲ್ಲವನ್ನೂ ಧ್ವಂಸಗೊಳಿಸಿದನು.

09026040a ತತಸ್ತು ಪ್ರತ್ವರನ್ಪಾರ್ಥೋ ದೀರ್ಘಕಾಲಂ ಸುಸಂಭೃತಂ|

09026040c ಮುಂಚನ್ಕ್ರೋಧವಿಷಂ ತೀಕ್ಷ್ಣಂ ಪ್ರಸ್ಥಲಾಧಿಪತಿಂ ಪ್ರತಿ||

ಆಗ ಪಾರ್ಥನು ದೀರ್ಘಕಾಲ ಒಟ್ಟುಗೂಡಿದ್ದ ತೀಕ್ಷ್ಣ ಕ್ರೋಧವಿಷವನ್ನು ಪ್ರಸ್ಥಲಾಧಿಪತಿ ಸುಶರ್ಮನ ಮೇಲೆ ಪ್ರಯೋಗಿಸಿದನು.

09026041a ತಮರ್ಜುನಃ ಪೃಷತ್ಕಾನಾಂ ಶತೇನ ಭರತರ್ಷಭ|

09026041c ಪೂರಯಿತ್ವಾ ತತೋ ವಾಹಾನ್ನ್ಯಹನತ್ತಸ್ಯ ಧನ್ವಿನಃ||

ಭರತರ್ಷಭ! ಧನ್ವಿ ಅರ್ಜುನನು ನೂರು ಪೃಷತ್ಕಗಳಿಂದ ಅವನನ್ನು ಮುಚ್ಚಿ, ಅವನ ಕುದುರೆಗಳನ್ನು ಗಾಯಗೊಳಿಸಿದನು.

09026042a ತತಃ ಶರಂ ಸಮಾದಾಯ ಯಮದಂಡೋಪಮಂ ಶಿತಂ|

09026042c ಸುಶರ್ಮಾಣಂ ಸಮುದ್ದಿಶ್ಯ ಚಿಕ್ಷೇಪಾಶು ಹಸನ್ನಿವ||

ಅನಂತರ ಯಮದಂಡದಂತಿರುವ ನಿಶಿತ ಶರವನ್ನೆತ್ತಿಕೊಂಡು ಸುಶರ್ಮನನ್ನೇ ಗುರಿಯನ್ನಾಗಿಸಿ ಬೇಗನೆ ಪ್ರಹರಿಸಿ ನಕ್ಕನು.

09026043a ಸ ಶರಃ ಪ್ರೇಷಿತಸ್ತೇನ ಕ್ರೋಧದೀಪ್ತೇನ ಧನ್ವಿನಾ|

09026043c ಸುಶರ್ಮಾಣಂ ಸಮಾಸಾದ್ಯ ಬಿಭೇದ ಹೃದಯಂ ರಣೇ||

ಆ ಧನ್ವಿಯಿಂದ ಪ್ರಹರಿಸಲ್ಪಟ್ಟ ಕ್ರೋಧದೀಪ್ತವಾದ ಆ ಬಾಣವು ರಣದಲ್ಲಿ ಸುಷರ್ಮನ ಬಳಿ ಹೋಗಿ ಅವನ ಹೃದಯವನ್ನು ಭೇದಿಸಿತು.

09026044a ಸ ಗತಾಸುರ್ಮಹಾರಾಜ ಪಪಾತ ಧರಣೀತಲೇ|

09026044c ನಂದಯನ್ಪಾಂಡವಾನ್ಸರ್ವಾನ್ವ್ಯಥಯಂಶ್ಚಾಪಿ ತಾವಕಾನ್||

ಮಹಾರಾಜ! ಅವನು ಪ್ರಾಣಹೋಗಿ ಸರ್ವಪಾಂಡವರನ್ನೂ ಸಂತೋಷಗೊಳಿಸುತ್ತಾ ಮತ್ತು ನಿನ್ನ ಕಡೆಯವರಿಗೆ ದುಃಖವನ್ನುಂಟುಮಾಡುತ್ತಾ ಧರಣೀತಲದಲ್ಲಿ ಬಿದ್ದನು.

09026045a ಸುಶರ್ಮಾಣಂ ರಣೇ ಹತ್ವಾ ಪುತ್ರಾನಸ್ಯ ಮಹಾರಥಾನ್|

09026045c ಸಪ್ತ ಚಾಷ್ಟೌ ಚ ತ್ರಿಂಶಚ್ಚ ಸಾಯಕೈರನಯತ್ ಕ್ಷಯಂ||

ರಣದಲ್ಲಿ ಸುಶರ್ಮನನ್ನು ಸಂಹರಿಸಿ ಪಾರ್ಥನು ಅವನ ನಲವತ್ತೈದು ಮಹಾರಥ ಪುತ್ರರನ್ನೂ ಸಾಯಕಗಳಿಂದ ಹೊಡೆದು ಯಮಸಾದನಕ್ಕೆ ಕಳುಹಿಸಿದನು.

09026046a ತತೋಽಸ್ಯ ನಿಶಿತೈರ್ಬಾಣೈಃ ಸರ್ವಾನ್ ಹತ್ವಾ ಪದಾನುಗಾನ್|

09026046c ಅಭ್ಯಗಾದ್ಭಾರತೀಂ ಸೇನಾಂ ಹತಶೇಷಾಂ ಮಹಾರಥಃ||

ಅನಂತರ ಆ ಮಹಾರಥನು ನಿಶಿತ ಬಾಣಗಳಿಂದ ಅವರ ಅನುಯಾಯಿಗಳೆಲ್ಲರನ್ನೂ ಸಂಹರಿಸಿ ಹತಶೇಷವಾಗಿದ್ದ ಭಾರತೀ ಸೇನೆಯನ್ನು ಆಕ್ರಮಣಿಸಿದನು.

09026047a ಭೀಮಸ್ತು ಸಮರೇ ಕ್ರುದ್ಧಃ ಪುತ್ರಂ ತವ ಜನಾಧಿಪ|

09026047c ಸುದರ್ಶನಮದೃಶ್ಯಂ ತಂ ಶರೈಶ್ಚಕ್ರೇ ಹಸನ್ನಿವ||

ಜನಾಧಿಪ! ಸಮರದಲ್ಲಿ ಕ್ರುದ್ಧನಾದ ಭೀಮನಾದರೋ ನಗುನಗುತ್ತಲೇ ಬಾಣಗಳಿಂದ ನಿನ್ನ ಮಗ ಸುದರ್ಶನನ್ನು ಅದೃಶ್ಯನನ್ನಾಗಿ ಮಾಡಿದನು.

09026048a ತತೋಽಸ್ಯ ಪ್ರಹಸನ್ಕ್ರುದ್ಧಃ ಶಿರಃ ಕಾಯಾದಪಾಹರತ್|

09026048c ಕ್ಷುರಪ್ರೇಣ ಸುತೀಕ್ಷ್ಣೇನ ಸ ಹತಃ ಪ್ರಾಪತದ್ ಭುವಿ||

ಕ್ರುದ್ಧನಾಗಿ ಜೋರಾಗಿ ನಗುತ್ತಾ ಅವನು ತೀಕ್ಷ್ಣ ಕ್ಷುರಪ್ರದಿಂದ ಅವನ ಶಿರವನ್ನು ಶರೀರದಿಂದ ಬೇರ್ಪಡಿಸಿ ಕೆಳಕ್ಕೆ ಕೆಡವಿದನು.

09026049a ತಸ್ಮಿಂಸ್ತು ನಿಹತೇ ವೀರೇ ತತಸ್ತಸ್ಯ ಪದಾನುಗಾಃ|

09026049c ಪರಿವವ್ರೂ ರಣೇ ಭೀಮಂ ಕಿರಂತೋ ವಿಶಿಖಾನ್ ಶಿತಾನ್||

ಆ ವೀರನು ಹತನಾಗಲು ಅವನ ಅನುಯಾಯಿಗಳು ರಣದಲ್ಲಿ ನಿಶಿತ ವಿಶಿಖಗಳನ್ನು ತೂರುತ್ತಾ ಭೀಮನನ್ನು ಸುತ್ತುವರೆದರು.

09026050a ತತಸ್ತು ನಿಶಿತೈರ್ಬಾಣೈಸ್ತದನೀಕಂ ವೃಕೋದರಃ|

09026050c ಇಂದ್ರಾಶನಿಸಮಸ್ಪರ್ಶೈಃ ಸಮಂತಾತ್ಪರ್ಯವಾಕಿರತ್||

09026050e ತತಃ ಕ್ಷಣೇನ ತದ್ಭೀಮೋ ನ್ಯಹನದ್ಭರತರ್ಷಭ||

ಭರತರ್ಷಭ! ಅನಂತರ ವೃಕೋದರನು ಇಂದ್ರನ ವಜ್ರಾಯುಧದ ಸ್ಪರ್ಶಕ್ಕೆ ಸಮನಾದ ನಿಶಿತ ಬಾಣಗಳಿಂದ ನಿನ್ನ ಸೇನೆಯನ್ನು ಮುಚ್ಚಿದನು. ಕ್ಷಣದಲ್ಲಿಯೇ ಭೀಮನು ಅವರನ್ನು ಸಂಹರಿಸಿದನು.

09026051a ತೇಷು ತೂತ್ಸಾದ್ಯಮಾನೇಷು ಸೇನಾಧ್ಯಕ್ಷಾ ಮಹಾಬಲಾಃ|

09026051c ಭೀಮಸೇನಂ ಸಮಾಸಾದ್ಯ ತತೋಽಯುಧ್ಯಂತ ಭಾರತ||

09026051e ತಾಂಸ್ತು ಸರ್ವಾನ್ ಶರೈರ್ಘೋರೈರವಾಕಿರತ ಪಾಂಡವಃ||

ಭಾರತ! ಅವರು ಹತರಾಗಲು ಮಹಾಬಲ ಸೇನಾಧ್ಯಕ್ಷರು ಭೀಮಸೇನನ ಬಳಿಸಾರಿ ಅವನೊಡನೆ ಯುದ್ಧಮಾಡತೊಡಗಿದರು. ಅವರೆಲ್ಲರನ್ನೂ ಪಾಂಡವನು ಘೋರ ಶರಗಳಿಂದ ಮುಚ್ಚಿದನು.

09026052a ತಥೈವ ತಾವಕಾ ರಾಜನ್ಪಾಂಡವೇಯಾನ್ಮಹಾರಥಾನ್|

09026052c ಶರವರ್ಷೇಣ ಮಹತಾ ಸಮಂತಾತ್ಪರ್ಯವಾರಯನ್||

ರಾಜನ್! ಹಾಗೆಯೇ ನಿನ್ನ ಕಡೆಯ ಮಹಾರಥರು ಮಹಾ ಶರವರ್ಷದಿಂದ ಎಲ್ಲಕಡೆಗಳಿಂದ ಪಾಂಡವೇಯರನ್ನು ಸುತ್ತುವರೆದರು.

09026053a ವ್ಯಾಕುಲಂ ತದಭೂತ್ಸರ್ವಂ ಪಾಂಡವಾನಾಂ ಪರೈಃ ಸಹ|

09026053c ತಾವಕಾನಾಂ ಚ ಸಮರೇ ಪಾಂಡವೇಯೈರ್ಯುಯುತ್ಸತಾಂ||

ಆಗ ಶತ್ರುಗಳೊಡನೆ ಯುದ್ಧಮಾಡುತ್ತಿದ್ದ ಪಾಂಡವರಿಗೂ ಮತ್ತು ಸಮರದಲ್ಲಿ ಪಾಂಡವರೊಂದಿಗೆ ಯುದ್ಧಮಾಡುತ್ತಿದ್ದ ನಿನ್ನವರಿಗೂ ಎಲ್ಲರಿಗೂ ವ್ಯಾಕುಲವುಂಟಾಯಿತು.

09026054a ತತ್ರ ಯೋಧಾಸ್ತದಾ ಪೇತುಃ ಪರಸ್ಪರಸಮಾಹತಾಃ|

09026054c ಉಭಯೋಃ ಸೇನಯೋ ರಾಜನ್ಸಂಶೋಚಂತಃ ಸ್ಮ ಬಾಂಧವಾನ್||

ರಾಜನ್! ಬಾಂಧವರ ಕುರಿತು ಶೋಕಿಸುತ್ತಾ ಪರಸ್ಪರರನ್ನು ಹೊಡೆಯುತ್ತಾ ಎರಡೂ ಕಡೆಯ ಸೇನೆಗಳ ಯೋಧರು ಕೆಳಗುರುಳಿದರು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ಸುಶರ್ಮವಧೇ ಷಡ್ವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ಸುಶರ್ಮವಧ ಎನ್ನುವ ಇಪ್ಪತ್ತಾರನೇ ಅಧ್ಯಾಯವು.

Comments are closed.