Shalya Parva: Chapter 24

ಶಲ್ಯಪರ್ವ: ಹ್ರದಪ್ರವೇಶಪರ್ವ

೨೪

ಕೌರವ ಸೇನೆಯ ಪಲಾಯನ ಮತ್ತು ಪುನಃ ಯುದ್ಧಕ್ಕೆ ಹಿಂದಿರುಗಿದುದು (೧-೧೪). ಅರ್ಜುನ-ಭೀಮಸೇನರಿಂದ ಕೌರವ ಗಜಸೇನೆಯ ನಾಶ (೧೫-೩೫). ರಣಭೂಮಿಯಲ್ಲಿ ದುರ್ಯೋಧನನನ್ನು ಕಾಣದೇ ಅಶ್ವತ್ಥಾಮ, ಕೃಪ ಮತ್ತು ಕೃತವರ್ಮರು ಶಕುನಿಯಿದ್ದಲ್ಲಿಗೆ ಹೋದುದು (೩೬-೪೩). ಸಾತ್ಯಕಿಯು ಸಂಜಯನನ್ನು ಸೆರೆಹಿಡಿದುದು (೪೪-೫೨). ಅಶ್ವತ್ಥಾಮ-ಕೃಪ-ಕೃತವರ್ಮರು ದುರ್ಯೋಧನನನ್ನು ಕಾಣದೇ ಉದ್ವಿಗ್ನರಾದುದು (೫೩-೫೬).

09024001 ಸಂಜಯ ಉವಾಚ

09024001a ಅಸ್ಯತಾಂ ಯತಮಾನಾನಾಂ ಶೂರಾಣಾಮನಿವರ್ತಿನಾಂ|

09024001c ಸಂಕಲ್ಪಮಕರೋನ್ಮೋಘಂ ಗಾಂಡೀವೇನ ಧನಂಜಯಃ||

ಸಂಜಯನು ಹೇಳಿದನು: “ಯುದ್ಧದಿಂದ ಪಲಾಯನ ಮಾಡದೇ ಪ್ರಯತ್ನಪಡುತ್ತಿದ್ದ ನಮ್ಮ ಶೂರರ ಸಂಕಲ್ಪಗಳನ್ನು ಧನಂಜಯನು ಗಾಂಡೀವದಿಂದ ವ್ಯರ್ಥಗೊಳಿಸಿದನು.

09024002a ಇಂದ್ರಾಶನಿಸಮಸ್ಪರ್ಶಾನವಿಷಹ್ಯಾನ್ಮಹೌಜಸಃ|

09024002c ವಿಸೃಜನ್ದೃಶ್ಯತೇ ಬಾಣಾನ್ಧಾರಾ ಮುಂಚನ್ನಿವಾಂಬುದಃ||

ಇಂದ್ರನ ವಜ್ರಸ್ಪರ್ಷಕ್ಕೆ ಸಮನಾದ ಸಹಿಸಲಸಾಧ್ಯ ಬಾಣಗಳನ್ನು ಪ್ರಯೋಗಿಸುತ್ತಿದ್ದ ಮಹೌಜಸ ಅರ್ಜುನನು ಮಳೆಗರೆಯುವ ಮೋಡದಂತೆ ಕಾಣುತ್ತಿದ್ದನು.

09024003a ತತ್ಸೈನ್ಯಂ ಭರತಶ್ರೇಷ್ಠ ವಧ್ಯಮಾನಂ ಕಿರೀಟಿನಾ|

09024003c ಸಂಪ್ರದುದ್ರಾವ ಸಂಗ್ರಾಮಾತ್ತವ ಪುತ್ರಸ್ಯ ಪಶ್ಯತಃ||

ಭರತಶ್ರೇಷ್ಠ! ಆ ಸೇನೆಯನ್ನು ಕಿರೀಟಿಯು ವಧಿಸುತ್ತಿರಲು ನಿನ್ನ ಮಗನು ನೋಡುತ್ತಿದ್ದಂತೆಯೇ ಸಂಗ್ರಾಮದಿಂದ ಅದು ಪಲಾಯನಮಾಡಿತು.

09024004a ಹತಧುರ್ಯಾ ರಥಾಃ ಕೇ ಚಿದ್ಧತಸೂತಾಸ್ತಥಾಪರೇ|

09024004c ಭಗ್ನಾಕ್ಷಯುಗಚಕ್ರೇಷಾಃ ಕೇ ಚಿದಾಸನ್ವಿಶಾಂ ಪತೇ||

ವಿಶಾಂಪತೇ! ಕೆಲವರ ರಥದ ಕುದುರೆಗಳು ಹತವಾಗಿದ್ದವು. ಇತರರ ಸಾರಥಿಗಳು ಹತರಾಗಿದ್ದರು. ಇನ್ನು ಕೆಲವರ ರಥದ ನೊಗಗಳು ಮತ್ತು ಚಕ್ರಗಳು ತುಂಡಾಗಿದ್ದವು.

09024005a ಅನ್ಯೇಷಾಂ ಸಾಯಕಾಃ ಕ್ಷೀಣಾಸ್ತಥಾನ್ಯೇ ಶರಪೀಡಿತಾಃ|

09024005c ಅಕ್ಷತಾ ಯುಗಪತ್ಕೇ ಚಿತ್ಪ್ರಾದ್ರವನ್ಭಯಪೀಡಿತಾಃ||

ಅನ್ಯರಲ್ಲಿ ಸಾಯಕಗಳು ಕಡಿಮೆಯಿದ್ದವು. ಅನ್ಯರು ಶರಪೀಡಿತರಾಗಿದ್ದರು. ಕೆಲವರು ಬಾಣಗಳಿಂದ ಗಾಯಗೊಂಡಿರದಿದ್ದರೂ ಭಯಪೀಡಿತರಾಗಿ ಓಡಿಹೋಗುತ್ತಿದ್ದರು.

09024006a ಕೇ ಚಿತ್ಪುತ್ರಾನುಪಾದಾಯ ಹತಭೂಯಿಷ್ಠವಾಹನಾಃ|

09024006c ವಿಚುಕ್ರುಶುಃ ಪಿತೄನನ್ಯೇ ಸಹಾಯಾನಪರೇ ಪುನಃ||

ವಾಹನಗಳನ್ನು ಕಳೆದುಕೊಂಡಿದ್ದ ಕೆಲವರು ಮಕ್ಕಳನ್ನು ಕರೆದುಕೊಂಡು ಪಲಾಯನಮಾಡುತ್ತಿದ್ದರೆ ಇನ್ನು ಕೆಲವರು ಅವರ ಪಿತರನ್ನು ಪುನಃ ಪುನಃ ಕೂಗಿ ಕರೆಯುತ್ತಿದ್ದರು.

09024007a ಬಾಂಧವಾಂಶ್ಚ ನರವ್ಯಾಘ್ರ ಭ್ರಾತೄನ್ಸಂಬಂಧಿನಸ್ತಥಾ|

09024007c ದುದ್ರುವುಃ ಕೇ ಚಿದುತ್ಸೃಜ್ಯ ತತ್ರ ತತ್ರ ವಿಶಾಂ ಪತೇ||

ವಿಶಾಂಪತೇ! ನರವ್ಯಾಘ್ರ! ಕೆಲವರು ಬಾಂಧವರನ್ನೂ, ಸಂಬಂಧಿಗಳನ್ನೂ ಅಲ್ಲಲ್ಲಿಯೇ ಬಿಟ್ಟು ಓಡಿ ಹೋಗುತ್ತಿದ್ದರು.

09024008a ಬಹವೋಽತ್ರ ಭೃಶಂ ವಿದ್ಧಾ ಮುಹ್ಯಮಾನಾ ಮಹಾರಥಾಃ|

09024008c ನಿಷ್ಟನಂತಃ ಸ್ಮ ದೃಶ್ಯಂತೇ ಪಾರ್ಥಬಾಣಹತಾ ನರಾಃ||

ಅಲ್ಲಿ ಅನೇಕ ಮಹಾರಥರು ಬಹಳ ಗಾಯಗೊಂಡು ಮೂರ್ಛಿತರಾಗಿದ್ದರು. ಪಾರ್ಥನ ಬಾಣಗಳಿಂದ ಗಾಯಗೊಂಡ ನರರು ನಿಟ್ಟುಸಿರು ಬಿಡುತ್ತಿರುವುದು ಕಂಡುಬಂದಿತು.

09024009a ತಾನನ್ಯೇ ರಥಮಾರೋಪ್ಯ ಸಮಾಶ್ವಾಸ್ಯ ಮುಹೂರ್ತಕಂ|

09024009c ವಿಶ್ರಾಂತಾಶ್ಚ ವಿತೃಷ್ಣಾಶ್ಚ ಪುನರ್ಯುದ್ಧಾಯ ಜಗ್ಮಿರೇ||

ಅಂಥವರು ಅನ್ಯರ ರಥವನ್ನೇರಿ ಸಮಾಧಾನಗೊಂಡು ಸ್ವಲ್ಪಕಾಲ ವಿಶ್ರಾಂತಿ ಪಡೆದು ಬಾಯಾರಿಕೆಯನ್ನು ತೀರಿಸಿಕೊಂಡು ಪುನಃ ಯುದ್ಧಕ್ಕೆ ಹಿಂದಿರುಗಿದರು.

09024010a ತಾನಪಾಸ್ಯ ಗತಾಃ ಕೇ ಚಿತ್ಪುನರೇವ ಯುಯುತ್ಸವಃ|

09024010c ಕುರ್ವಂತಸ್ತವ ಪುತ್ರಸ್ಯ ಶಾಸನಂ ಯುದ್ಧದುರ್ಮದಾಃ||

ಓಡಿ ಹೋದವರಲ್ಲಿ ಕೆಲವು ಯುದ್ಧದುರ್ಮದರು ನಿನ್ನ ಮಗನ ಶಾಸನದಂತೆ ಮಾಡಲು ಯುದ್ಧೋತ್ಸುಕರಾಗಿ ಪುನಃ ಯುದ್ಧಕ್ಕೆ ಹಿಂದಿರುಗುತ್ತಿದ್ದರು.

09024011a ಪಾನೀಯಮಪರೇ ಪೀತ್ವಾ ಪರ್ಯಾಶ್ವಾಸ್ಯ ಚ ವಾಹನಂ|

09024011c ವರ್ಮಾಣಿ ಚ ಸಮಾರೋಪ್ಯ ಕೇ ಚಿದ್ಭರತಸತ್ತಮ||

ಭರತಸತ್ತಮ! ಕೆಲವರು ಪಾನೀಯಗಳನ್ನು ಕುಡಿದು, ವಾಹನಗಳನ್ನು ಉಪಚರಿಸಿ, ಕವಚಗಳನ್ನು ಧರಿಸಿ ಬರುತ್ತಿದ್ದರು.

09024012a ಸಮಾಶ್ವಾಸ್ಯಾಪರೇ ಭ್ರಾತೄನ್ನಿಕ್ಷಿಪ್ಯ ಶಿಬಿರೇಽಪಿ ಚ|

09024012c ಪುತ್ರಾನನ್ಯೇ ಪಿತೄನನ್ಯೇ ಪುನರ್ಯುದ್ಧಮರೋಚಯನ್||

ಕೆಲವರು ಸಹೋದರರರನ್ನು, ಕೆಲವರು ಮಕ್ಕಳನ್ನು, ಕೆಲವರು ತಂದೆಯರನ್ನು ಶಿಬಿರಗಳಿಗೆ ಕೊಂಡೊಯ್ದು, ಸಮಾಧಾನಪಡಿಸಿ, ಪುನಃ ಯುದ್ಧಕ್ಕೆ ಮರಳುತ್ತಿದ್ದರು.

09024013a ಸಜ್ಜಯಿತ್ವಾ ರಥಾನ್ಕೇ ಚಿದ್ಯಥಾಮುಖ್ಯಂ ವಿಶಾಂ ಪತೇ|

09024013c ಆಪ್ಲುತ್ಯ ಪಾಂಡವಾನೀಕಂ ಪುನರ್ಯುದ್ಧಮರೋಚಯನ್||

ವಿಶಾಂಪತೇ! ಕೆಲವರು ರಥಗಳನ್ನು ಸಜ್ಜುಗೊಳಿಸಿ ಪಾಂಡವ ಸೇನೆಯನ್ನು ಆಕ್ರಮಣಿಸಿ ತಮ್ಮ ತಮ್ಮ ಅಂತಸ್ಥಿಗೆ ಸಮನಾಗಿ ಪುನಃ ಯುದ್ಧದಲ್ಲಿ ತೊಡಗಿದರು.

09024014a ತೇ ಶೂರಾಃ ಕಿಂಕಿಣೀಜಾಲೈಃ ಸಮಾಚ್ಚನ್ನಾ ಬಭಾಸಿರೇ|

09024014c ತ್ರೈಲೋಕ್ಯವಿಜಯೇ ಯುಕ್ತಾ ಯಥಾ ದೈತೇಯದಾನವಾಃ||

ತ್ರೈಲೋಕ್ಯವಿಜಯದಲ್ಲಿ ನಿರತರಾದ ದೈತ್ಯ-ದಾನವರಂತೆ ಆ ಶೂರರು ಕಿಂಕಿಣೀಜಾಲಗಳಿಂದ ಆಚ್ಛಾದಿತರಾಗಿ ಪ್ರಕಾಶಿಸುತ್ತಿದ್ದರು.

09024015a ಆಗಮ್ಯ ಸಹಸಾ ಕೇ ಚಿದ್ರಥೈಃ ಸ್ವರ್ಣವಿಭೂಷಿತೈಃ|

09024015c ಪಾಂಡವಾನಾಮನೀಕೇಷು ಧೃಷ್ಟದ್ಯುಮ್ನಮಯೋಧಯನ್||

ಕೆಲವರು ಸುವರ್ಣವಿಭೂಷಿತ ರಥಗಳಲ್ಲಿ ಬೇಗನೇ ಬಂದು ಪಾಂಡವರ ಸೇನೆಗಳಲ್ಲಿ ಧೃಷ್ಟದ್ಯುಮ್ನನೊಡನೆ ಯುದ್ಧದಲ್ಲಿ ತೊಡಗಿದರು.

09024016a ಧೃಷ್ಟದ್ಯುಮ್ನೋಽಪಿ ಪಾಂಚಾಲ್ಯಃ ಶಿಖಂಡೀ ಚ ಮಹಾರಥಃ|

09024016c ನಾಕುಲಿಶ್ಚ ಶತಾನೀಕೋ ರಥಾನೀಕಮಯೋಧಯನ್||

ಆ ರಥಸೇನೆಯನ್ನು ಪಾಂಚಾಲ್ಯ ಧೃಷ್ಟದ್ಯುಮ್ನ, ಮಹಾರಥ ಶಿಖಂಡೀ, ನಾಕುಲೀ ಶತಾನೀಕರು ಎದುರಿಸಿ ಯುದ್ಧಮಾಡಿದರು.

09024017a ಪಾಂಚಾಲ್ಯಸ್ತು ತತಃ ಕ್ರುದ್ಧಃ ಸೈನ್ಯೇನ ಮಹತಾ ವೃತಃ|

09024017c ಅಭ್ಯದ್ರವತ್ಸುಸಂರಬ್ಧಸ್ತಾವಕಾನ್ ಹಂತುಮುದ್ಯತಃ||

ಆಗ ಪಾಂಚಾಲ್ಯನು ಕ್ರುದ್ಧನಾಗಿ ತನ್ನ ಮಹಾಸೇನೆಯಿಂದ ಆವೃತನಾಗಿ ನಿನ್ನವರನ್ನು ಕೂಡಲೇ ಆಕ್ರಮಣಿಸಿ ಸಂಹರಿಸಲು ತೊಡಗಿದನು.

09024018a ತತಸ್ತ್ವಾಪತತಸ್ತಸ್ಯ ತವ ಪುತ್ರೋ ಜನಾಧಿಪ|

09024018c ಬಾಣಸಂಘಾನನೇಕಾನ್ವೈ ಪ್ರೇಷಯಾಮಾಸ ಭಾರತ||

ಜನಾಧಿಪ! ಭಾರತ! ಆಗ ನಿನ್ನ ಮಗನು ತನ್ನ ಸೇನೆಯನ್ನು ಆಕ್ರಮಣಿಸುತ್ತಿದ್ದ ಧೃಷ್ಟದ್ಯುಮ್ನನ ಮೇಲೆ ಅನೇಕ ಬಾಣಸಮೂಹಗಳನ್ನು ಪ್ರಯೋಗಿಸಿದನು.

09024019a ಧೃಷ್ಟದ್ಯುಮ್ನಸ್ತತೋ ರಾಜಂಸ್ತವ ಪುತ್ರೇಣ ಧನ್ವಿನಾ|

09024019c ನಾರಾಚೈರ್ಬಹುಭಿಃ ಕ್ಷಿಪ್ರಂ ಬಾಹ್ವೋರುರಸಿ ಚಾರ್ಪಿತಃ||

ರಾಜನ್! ಆಗ ನಿನ್ನ ಮಗ ಧನ್ವಿಯು ಕ್ಷಿಪ್ರವಾಗಿ ಅನೇಕ ನಾರಾಚಗಳಿಂದ ಧೃಷ್ಟದ್ಯುಮ್ನನ ಬಾಹು-ಎದೆಗಳಿಗೆ ಹೊಡೆದನು.

09024020a ಸೋಽತಿವಿದ್ಧೋ ಮಹೇಷ್ವಾಸಸ್ತೋತ್ತ್ರಾರ್ದಿತ ಇವ ದ್ವಿಪಃ|

09024020c ತಸ್ಯಾಶ್ವಾಂಶ್ಚತುರೋ ಬಾಣೈಃ ಪ್ರೇಷಯಾಮಾಸ ಮೃತ್ಯವೇ||

09024020e ಸಾರಥೇಶ್ಚಾಸ್ಯ ಭಲ್ಲೇನ ಶಿರಃ ಕಾಯಾದಪಾಹರತ್||

ಅಂಕುಶದಿಂದ ಚುಚ್ಚಲ್ಪಟ್ಟ ಆನೆಯಂತೆ ಅತಿಯಾಗಿ ಗಾಯಗೊಂಡ ಮಹೇಷ್ವಾಸ ಧೃಷ್ಟದ್ಯುಮ್ನನು ಬಾಣಗಳಿಂದ ದುರ್ಯೋಧನನ ನಾಲ್ಕು ಕುದುರೆಗಳನ್ನೂ ಮೃತ್ಯುಲೋಕಗಳಿಗೆ ಕಳುಹಿಸಿದನು. ಮತ್ತು ಭಲ್ಲದಿಂದ ಸಾರಥಿಯ ಶಿರವನ್ನು ಕಾಯದಿಂದ ಅಪಹರಿಸಿದನು.

09024021a ತತೋ ದುರ್ಯೋಧನೋ ರಾಜಾ ಪೃಷ್ಠಮಾರುಹ್ಯ ವಾಜಿನಃ|

09024021c ಅಪಾಕ್ರಾಮದ್ಧತರಥೋ ನಾತಿದೂರಮರಿಂದಮಃ||

ಆಗ ರಥವನ್ನು ಕಳೆದುಕೊಂಡ ಅರಿಂದಮ ರಾಜಾ ದುರ್ಯೋಧನನು ಕುದುರೆಯನ್ನೇರಿ ರಣರಂಗದಿಂದ ಸ್ವಲ್ಪ ದೂರ ಹೋದನು.

09024022a ದೃಷ್ಟ್ವಾ ತು ಹತವಿಕ್ರಾಂತಂ ಸ್ವಮನೀಕಂ ಮಹಾಬಲಃ|

09024022c ತವ ಪುತ್ರೋ ಮಹಾರಾಜ ಪ್ರಯಯೌ ಯತ್ರ ಸೌಬಲಃ||

ಮಹಾರಾಜ! ತನ್ನ ಸೇನೆಯ ವಿಕ್ರಮವು ಹತವಾದುದನ್ನು ನೋಡಿದ ನಿನ್ನ ಪುತ್ರ ಮಹಾಬಲನು ಸೌಬಲನಿದ್ದಲ್ಲಿಗೆ ಹೋದನು.

09024023a ತತೋ ರಥೇಷು ಭಗ್ನೇಷು ತ್ರಿಸಾಹಸ್ರಾ ಮಹಾದ್ವಿಪಾಃ|

09024023c ಪಾಂಡವಾನ್ರಥಿನಃ ಪಂಚ ಸಮಂತಾತ್ಪರ್ಯವಾರಯನ್||

ರಥಸೇನೆಯು ಭಗ್ನವಾಗಲು ಮೂರುಸಾವಿರ ಮಹಾಗಜಗಳು ಐವರು ಮಹಾರಥ ಪಾಂಡವರನ್ನು ಎಲ್ಲ ಕಡೆಗಳಿಂದ ಸುತ್ತುವರೆದವು.

09024024a ತೇ ವೃತಾಃ ಸಮರೇ ಪಂಚ ಗಜಾನೀಕೇನ ಭಾರತ|

09024024c ಅಶೋಭಂತ ನರವ್ಯಾಘ್ರಾ ಗ್ರಹಾ ವ್ಯಾಪ್ತಾ ಘನೈರಿವ||

ಭಾರತ! ಸಮರದಲ್ಲಿ ಗಜಸೇನೆಯಿಂದ ಸಮಾವೃತರಾದ ಆ ಐವರು ನರವ್ಯಾಘ್ರರು ಮೋಡಗಳು ಮುಚ್ಚಿದ ಗ್ರಹಗಳಂತೆ ಶೋಭಿಸಿದರು.

09024025a ತತೋಽರ್ಜುನೋ ಮಹಾರಾಜ ಲಬ್ಧಲಕ್ಷೋ ಮಹಾಭುಜಃ|

09024025c ವಿನಿರ್ಯಯೌ ರಥೇನೈವ ಶ್ವೇತಾಶ್ವಃ ಕೃಷ್ಣಸಾರಥಿಃ||

ಆಗ ಮಹಾರಾಜ! ಲಬ್ಧಲಕ್ಷ-ಮಹಾಭುಜ-ಶ್ವೇತಾಶ್ವ-ಕೃಷ್ಣಸಾರಥಿ ಅರ್ಜುನನು ತನ್ನ ರಥವನ್ನು ಅಲ್ಲಿಗೇ ಕೊಂಡೊಯ್ದನು.

09024026a ತೈಃ ಸಮಂತಾತ್ಪರಿವೃತಃ ಕುಂಜರೈಃ ಪರ್ವತೋಪಮೈಃ|

09024026c ನಾರಾಚೈರ್ವಿಮಲೈಸ್ತೀಕ್ಷ್ಣೈರ್ಗಜಾನೀಕಮಪೋಥಯತ್||

ಪರ್ವತೋಪಮ ಆನೆಗಳಿಂದ ಪರಿವೃತನಾಗಿದ್ದ ಅವನು ವಿಮಲ ತೀಕ್ಷ್ಣ ನಾರಾಚಗಳಿಂದ ಗಜಸೇನೆಯನ್ನು ಧ್ವಂಸಗೊಳಿಸಿದನು.

09024027a ತತ್ರೈಕಬಾಣನಿಹತಾನಪಶ್ಯಾಮ ಮಹಾಗಜಾನ್|

09024027c ಪತಿತಾನ್ಪಾತ್ಯಮಾನಾಂಶ್ಚ ವಿಭಿನ್ನಾನ್ಸವ್ಯಸಾಚಿನಾ||

ಅಲ್ಲಿ ನಾವು ಸವ್ಯಸಾಚಿಯ ಒಂದೊಂದು ಬಾಣದಿಂದ ಹತವಾಗಿ ಕೆಳಗೆ ಬಿದ್ದಿದ್ದ, ಬೀಳುತ್ತಿದ್ದ ಮತ್ತು ಭಿನ್ನಶರೀರವುಳ್ಳ ಮಹಾಗಜಗಳನ್ನು ನೋಡಿದೆವು.

09024028a ಭೀಮಸೇನಸ್ತು ತಾನ್ದೃಷ್ಟ್ವಾ ನಾಗಾನ್ಮತ್ತಗಜೋಪಮಃ|

09024028c ಕರೇಣ ಗೃಹ್ಯ  ಮಹತೀಂ ಗದಾಮಭ್ಯಪತದ್ಬಲೀ|

09024028e ಅವಪ್ಲುತ್ಯ ರಥಾತ್ತೂರ್ಣಂ ದಂಡಪಾಣಿರಿವಾಂತಕಃ||

ಆ ಆನೆಗಳನ್ನು ನೋಡಿ ಮದಿಸಿದ ಆನೆಯಂತಿದ್ದ ಬಲಶಾಲಿ ಭೀಮಸೇನನು ಕೈಯಲ್ಲಿ ಅತಿದೊಡ್ಡ ಗದೆಯನ್ನು ಹಿಡಿದು ಬೇಗನೆ ರಥದಿಂದ ಧುಮುಕಿ ದಂಡಪಾಣಿ ಅಂತಕನಂತೆ ಮುನ್ನುಗ್ಗಿದನು.

09024029a ತಮುದ್ಯತಗದಂ ದೃಷ್ಟ್ವಾ ಪಾಂಡವಾನಾಂ ಮಹಾರಥಂ|

09024029c ವಿತ್ರೇಸುಸ್ತಾವಕಾಃ ಸೈನ್ಯಾಃ ಶಕೃನ್ಮೂತ್ರಂ ಪ್ರಸುಸ್ರುವುಃ||

09024029e ಆವಿಗ್ನಂ ಚ ಬಲಂ ಸರ್ವಂ ಗದಾಹಸ್ತೇ ವೃಕೋದರೇ||

ಗದೆಯನ್ನು ಎತ್ತಿಹಿಡಿದ ಆ ಪಾಂಡವ ಮಹಾರಥನನ್ನು ನೋಡಿ ನಿನ್ನ ಸೇನೆಗಳು ನಡುಗಿದವು ಮತ್ತು ಮಲ-ಮೂತ್ರಗಳನ್ನು ವಿಸರ್ಜಿಸಿದವು. ಗದಾಧಾರಿಯಾದ ವೃಕೋದರನನ್ನು ನೋಡಿ ಎಲ್ಲ ಸೇನೆಗಳೂ ಉದ್ವಿಗ್ನಗೊಂಡವು.

09024030a ಗದಯಾ ಭೀಮಸೇನೇನ ಭಿನ್ನಕುಂಭಾನ್ರಜಸ್ವಲಾನ್|

09024030c ಧಾವಮಾನಾನಪಶ್ಯಾಮ ಕುಂಜರಾನ್ಪರ್ವತೋಪಮಾನ್||

ಪರ್ವತೋಪಮ ಆನೆಗಳು ಭೀಮಸೇನನ ಗದೆಯಿಂದ ಕುಂಭಗಳೊಡೆದು ಧೂಳುಮುಕ್ಕಿ ಓಡಿಹೋಗುತ್ತಿರುವುದನ್ನು ನಾವು ನೋಡಿದೆವು.

09024031a ಪ್ರಧಾವ್ಯ ಕುಂಜರಾಸ್ತೇ ತು ಭೀಮಸೇನಗದಾಹತಾಃ|

09024031c ಪೇತುರಾರ್ತಸ್ವರಂ ಕೃತ್ವಾ ಚಿನ್ನಪಕ್ಷಾ ಇವಾದ್ರಯಃ||

ಭೀಮಸೇನನ ಗದೆಯಿಂದ ಪ್ರಹರಿತಗೊಂಡ ಆ ಆನೆಗಳು ಓಡಿಹೋದವು. ರೆಕ್ಕೆಗಳು ಕತ್ತರಿಸಲ್ಪಟ್ಟ ಪರ್ವತಗಳಂತೆ ಆರ್ತಸ್ವರದಲ್ಲಿ ಚೀರಿಕೊಳ್ಳುತ್ತಾ ಕೆಲವು ಅಲ್ಲಿಯೇ ಬಿದ್ದವು.

09024032a ತಾನ್ಭಿನ್ನಕುಂಭಾನ್ಸುಬಹೂನ್ದ್ರವಮಾಣಾನಿತಸ್ತತಃ|

09024032c ಪತಮಾನಾಂಶ್ಚ ಸಂಪ್ರೇಕ್ಷ್ಯ ವಿತ್ರೇಸುಸ್ತವ ಸೈನಿಕಾಃ||

ಕುಂಭಗಳೊಡೆದು ಹಾಗೆ ಓಡಿಹೋಗುತ್ತಿದ್ದ ಮತ್ತು ಕೆಳಗೆ ಉರುಳುತ್ತಿದ್ದ ಅನೇಕ ಆನೆಗಳನ್ನು ನೋಡಿ ನಿನ್ನ ಸೈನಿಕರು ನಡುಗಿದರು.

09024033a ಯುಧಿಷ್ಠಿರೋಽಪಿ ಸಂಕ್ರುದ್ಧೋ ಮಾದ್ರೀಪುತ್ರೌ ಚ ಪಾಂಡವೌ|

09024033c ಗೃಧ್ರಪಕ್ಷೈಃ ಶಿತೈರ್ಬಾಣೈರ್ಜಘ್ನುರ್ವೈ ಗಜಯೋಧಿನಃ||

ಸಂಕ್ರುದ್ಧ ಯುಧಿಷ್ಠಿರನೂ, ಮಾದ್ರೀಪುತ್ರ ಪಾಂಡವರೂ ಹದ್ದಿನ ಗರಿಗಳುಳ್ಳ ನಿಶಿತ ಬಾಣಗಳಿಂದ ಗಜಯೋಧಿಗಳನ್ನು ಸಂಹರಿಸುತ್ತಿದ್ದರು.

09024034a ಧೃಷ್ಟದ್ಯುಮ್ನಸ್ತು ಸಮರೇ ಪರಾಜಿತ್ಯ ನರಾಧಿಪಂ|

09024034c ಅಪಕ್ರಾಂತೇ ತವ ಸುತೇ ಹಯಪೃಷ್ಠಂ ಸಮಾಶ್ರಿತೇ||

09024035a ದೃಷ್ಟ್ವಾ ಚ ಪಾಂಡವಾನ್ಸರ್ವಾನ್ಕುಂಜರೈಃ ಪರಿವಾರಿತಾನ್|

09024035c ಧೃಷ್ಟದ್ಯುಮ್ನೋ ಮಹಾರಾಜ ಸಹ ಸರ್ವೈಃ ಪ್ರಭದ್ರಕೈಃ||

09024035e ಪುತ್ರಃ ಪಾಂಚಾಲರಾಜಸ್ಯ ಜಿಘಾಂಸುಃ ಕುಂಜರಾನ್ಯಯೌ||

ಧೃಷ್ಟದ್ಯುಮ್ನನಾದರೋ ಸಮರದಲ್ಲಿ ನರಾಧಿಪನನ್ನು ಸೋಲಿಸಿ, ನಿನ್ನ ಮಗನು ಕುದುರೆಯ ಮೇಲೆ ಹೊರಟುಹೋಗಲು, ಸುಧಾರಿಸಿಕೊಂಡು, ಪಾಂಡವರೆಲ್ಲರೂ ಆನೆಗಳಿಂದ ಸುತ್ತುವರೆಯಲ್ಪಟ್ಟಿರುವುದನ್ನು ಕಂಡನು. ಮಹಾರಾಜ! ಆಗ ಪಾಂಚಾಲರಾಜ ಪುತ್ರ ಧೃಷ್ಟದ್ಯುಮ್ನನು ಸರ್ವ ಪ್ರಭದ್ರಕರೊಡನೆ ಆನೆಗಳನ್ನು ಸಂಹರಿಸಲು ಬಂದನು.

09024036a ಅದೃಷ್ಟ್ವಾ ತು ರಥಾನೀಕೇ ದುರ್ಯೋಧನಮರಿಂದಮಂ|

09024036c ಅಶ್ವತ್ಥಾಮಾ ಕೃಪಶ್ಚೈವ ಕೃತವರ್ಮಾ ಚ ಸಾತ್ವತಃ||

09024036e ಅಪೃಚ್ಚನ್ ಕ್ಷತ್ರಿಯಾಂಸ್ತತ್ರ ಕ್ವ ನು ದುರ್ಯೋಧನೋ ಗತಃ||

ರಥಸೇನೆಯಲ್ಲಿ ಅರಿಂದಮ ದುರ್ಯೋಧನನನ್ನು ಕಾಣದೇ ಅಶ್ವತ್ಥಾಮ, ಕೃಪ ಮತ್ತು ಸಾತ್ವತ ಕೃತವರ್ಮರು ಅಲ್ಲಿದ್ದ ಕ್ಷತ್ರಿಯರಲ್ಲಿ ದುರ್ಯೋಧನನು ಎಲ್ಲಿ ಹೋದ ಎಂದು ಪ್ರಶ್ನಿಸಿದರು.

09024037a ಅಪಶ್ಯಮಾನಾ ರಾಜಾನಂ ವರ್ತಮಾನೇ ಜನಕ್ಷಯೇ|

09024037c ಮನ್ವಾನಾ ನಿಹತಂ ತತ್ರ ತವ ಪುತ್ರಂ ಮಹಾರಥಾಃ||

09024037e ವಿಷಣ್ಣವದನಾ ಭೂತ್ವಾ ಪರ್ಯಪೃಚ್ಚಂತ ತೇ ಸುತಂ||

ಜನಕ್ಷಯವು ನಡೆಯುತ್ತಿರುವಾಗ ರಾಜನನ್ನು ಕಾಣದೇ ಆ ಮಹಾರಥರು ನಿನ್ನ ಮಗನು ಅಲ್ಲಿ ಹತನಾದನೆಂದೇ ಭಾವಿಸಿ ವಿಷಣ್ಣವದನರಾಗಿ ನಿನ್ನ ಮಗನ ಕುರಿತಾಗಿ ಪುನಃ ಪುನಃ ಕೇಳತೊಡಗಿದರು.

09024038a ಆಹುಃ ಕೇ ಚಿದ್ಧತೇ ಸೂತೇ ಪ್ರಯಾತೋ ಯತ್ರ ಸೌಬಲಃ|

09024038c ಅಪರೇ ತ್ವಬ್ರುವಂಸ್ತತ್ರ ಕ್ಷತ್ರಿಯಾ ಭೃಶವಿಕ್ಷತಾಃ||

ಸೂತನು ಹತನಾಗಲು ಅವನು ಸೌಬಲನಿದ್ದಲ್ಲಿಗೆ ಹೋದನೆಂದು ಕೆಲವರು ಹೇಳಿದರೆ ತುಂಬಾ ಗಾಯಗೊಂಡಿರುವ ಇತರ ಕ್ಷತ್ರಿಯರು ಅವರಿಗೆ ಹೀಗೆ ಹೇಳಿದರು:

09024039a ದುರ್ಯೋಧನೇನ ಕಿಂ ಕಾರ್ಯಂ ದ್ರಕ್ಷ್ಯಧ್ವಂ ಯದಿ ಜೀವತಿ|

09024039c ಯುಧ್ಯಧ್ವಂ ಸಹಿತಾಃ ಸರ್ವೇ ಕಿಂ ವೋ ರಾಜಾ ಕರಿಷ್ಯತಿ||

“ದುರ್ಯೋಧನನಿಂದ ಇನ್ನೇನು ಕೆಲಸವಾಗಬೇಕಾಗಿದೆ? ಜೀವಂತವಾಗಿದ್ದರೆ ಅವನನ್ನು ನೀವು ಕಾಣುತ್ತಿದ್ದಿರಿ. ನೀವೆಲ್ಲರೂ ಒಟ್ಟಾಗಿ ಯುದ್ಧಮಾಡಿರಿ. ಇದರಲ್ಲಿ ರಾಜನೇನು ಮಾಡಬಲ್ಲನು?”

09024040a ತೇ ಕ್ಷತ್ರಿಯಾಃ ಕ್ಷತೈರ್ಗಾತ್ರೈರ್ಹತಭೂಯಿಷ್ಠವಾಹನಾಃ|

09024040c ಶರೈಃ ಸಂಪೀಡ್ಯಮಾನಾಶ್ಚ ನಾತಿವ್ಯಕ್ತಮಿವಾಬ್ರುವನ್||

ಹೆಚ್ಚು ಭಾಗ ವಾಹನಗಳೆಲ್ಲವನ್ನೂ ಕಳೆದುಕೊಂಡಿದ್ದ ಶರೀರಗಳಲ್ಲಿ ಅತ್ಯಂತ ಗಾಯಗೊಂಡಿದ್ದ ಕ್ಷತ್ರಿಯರು ಶರಗಳಿಂದ ಪೀಡಿಸಲ್ಪಟ್ಟು ಅಸ್ಪಷ್ಟವಾಗಿ ಈ ಮಾತುಗಳನ್ನಾಡಿದರು:

09024041a ಇದಂ ಸರ್ವಂ ಬಲಂ ಹನ್ಮೋ ಯೇನ ಸ್ಮ ಪರಿವಾರಿತಾಃ|

09024041c ಏತೇ ಸರ್ವೇ ಗಜಾನ್ ಹತ್ವಾ ಉಪಯಾಂತಿ ಸ್ಮ ಪಾಂಡವಾಃ||

“ನಮ್ಮನ್ನು ಸುತ್ತುವರೆದಿರುವ ಈ ಸೇನೆಗಳೆಲ್ಲವನ್ನೂ ನಾವು ಸಂಹರಿಸುತ್ತೇವೆ. ಆದರೆ ಆ ಆನೆಗಳೆಲ್ಲವನ್ನೂ ಸಂಹರಿಸಿ ಪಾಂಡವರು ನಮ್ಮ ಕಡೆಗೇ ಬರುತ್ತಿದ್ದಾರೆ!”

09024042a ಶ್ರುತ್ವಾ ತು ವಚನಂ ತೇಷಾಮಶ್ವತ್ಥಾಮಾ ಮಹಾಬಲಃ|

09024042c ಹಿತ್ವಾ ಪಾಂಚಾಲರಾಜಸ್ಯ ತದನೀಕಂ ದುರುತ್ಸಹಂ||

09024043a ಕೃಪಶ್ಚ ಕೃತವರ್ಮಾ ಚ ಪ್ರಯಯುರ್ಯತ್ರ ಸೌಬಲಃ|

09024043c ರಥಾನೀಕಂ ಪರಿತ್ಯಜ್ಯ ಶೂರಾಃ ಸುದೃಢಧನ್ವಿನಃ||

ಅವರ ಆ ಮಾತನ್ನು ಕೇಳಿ ದೃಢಧನ್ವಿ-ಶೂರ-ಮಹಾಬಲ ಅಶ್ವತ್ಥಾಮ, ಕೃಪ ಮತ್ತು ಕೃತವರ್ಮರು ಪಾಂಚಾಲರಾಜನ ಆ ದುರ್ಗಮ ರಥ ಸೇನೆಯನ್ನು ಬಿಟ್ಟು ಸೌಬಲನಿದ್ದಲ್ಲಿಗೆ ತೆರಳಿದರು.

09024044a ತತಸ್ತೇಷು ಪ್ರಯಾತೇಷು ಧೃಷ್ಟದ್ಯುಮ್ನಪುರೋಗಮಾಃ|

09024044c ಆಯಯುಃ ಪಾಂಡವಾ ರಾಜನ್ವಿನಿಘ್ನಂತಃ ಸ್ಮ ತಾವಕಾನ್||

ರಾಜನ್! ಅವರು ಹಾಗೆ ಹೊರಟುಹೋಗಲು ಧೃಷ್ಟದ್ಯುಮ್ನನ ನಾಯಕತ್ವದಲ್ಲಿ ಪಾಂಡವರು ನಿಮ್ಮವರನ್ನು ಸಂಹರಿಸಲು ಮುಂದುವರೆದರು.

09024045a ದೃಷ್ಟ್ವಾ ತು ತಾನಾಪತತಃ ಸಂಪ್ರಹೃಷ್ಟಾನ್ಮಹಾರಥಾನ್|

09024045c ಪರಾಕ್ರಾಂತಾಂಸ್ತತೋ ವೀರಾನ್ನಿರಾಶಾನ್ ಜೀವಿತೇ ತದಾ|

09024045e ವಿವರ್ಣಮುಖಭೂಯಿಷ್ಠಮಭವತ್ತಾವಕಂ ಬಲಂ||

ತಮ್ಮ ಮೇಲೆ ಎರಗುತ್ತಿದ್ದ ಸಂಪ್ರಹೃಷ್ಟ ಮಹಾರಥರನ್ನು ನೋಡಿ ಆ ವೀರರಲ್ಲಿ ಜೀವದ ನಿರಾಶೆಯು ಆವರಿಸಿತು. ನಿನ್ನ ಸೇನೆಯಲ್ಲಿ ಹೆಚ್ಚುಜನರ ಮುಖಗಳು ವಿವರ್ಣವಾದವು.

09024046a ಪರಿಕ್ಷೀಣಾಯುಧಾನ್ದೃಷ್ಟ್ವಾ ತಾನಹಂ ಪರಿವಾರಿತಾನ್|

09024046c ರಾಜನ್ಬಲೇನ ದ್ವ್ಯಂಗೇನ ತ್ಯಕ್ತ್ವಾ ಜೀವಿತಮಾತ್ಮನಃ||

09024047a ಆತ್ಮನಾಪಂಚಮೋಽಯುಧ್ಯಂ ಪಾಂಚಾಲಸ್ಯ ಬಲೇನ ಹ|

09024047c ತಸ್ಮಿನ್ದೇಶೇ ವ್ಯವಸ್ಥಾಪ್ಯ ಯತ್ರ ಶಾರದ್ವತಃ ಸ್ಥಿತಃ||

ರಾಜನ್! ಅವರ ಆಯುಧಗಳೆಲ್ಲವೂ ಮುಗಿದುಹೋಗಿರುವುದನ್ನು ನೋಡಿ ಅವರಿಂದ ಪರಿವಾರಿತನಾಗಿ ನಾನು ನನ್ನ ಜೀವವನ್ನೇ ತೊರೆದು ಆ ಅಶ್ವ-ಗಜ ಸೇನೆಗಳೊಂದಿಗೆ ಎಲ್ಲಿ ಶಾರದ್ವತ ಕೃಪನು ನಿಂತು ಯುದ್ಧಮಾಡಿದ್ದನೋ ಅದೇ ಸ್ಥಳದಲ್ಲಿ ನಿಂತು ನಾನು ಮತ್ತು ಇತರ ಐವರು ಯೋಧರು ಪಾಂಚಾಲ್ಯನ ಸೇನೆಯೊಂದಿಗೆ ಯುದ್ಧಮಾಡಿದೆವು.

09024048a ಸಂಪ್ರಯುದ್ಧಾ ವಯಂ ಪಂಚ ಕಿರೀಟಿಶರಪೀಡಿತಾಃ|

09024048c ಧೃಷ್ಟದ್ಯುಮ್ನಂ ಮಹಾನೀಕಂ ತತ್ರ ನೋಽಭೂದ್ರಣೋ ಮಹಾನ್||

09024048e ಜಿತಾಸ್ತೇನ ವಯಂ ಸರ್ವೇ ವ್ಯಪಯಾಮ ರಣಾತ್ತತಃ||

ಕಿರೀಟಿಯ ಶರಗಳಿಂದ ಪೀಡಿತರಾಗಿದ್ದ ನಾವು ಐವರು ಆ ಮಹಾರಣದಲ್ಲಿ ಧೃಷ್ಟದ್ಯುಮ್ನನ ಮಹಾಸೇನೆಯೊಂದಿಗೆ ಯುದ್ಧಮಾಡಿದೆವು. ಆದರೆ ಅವನಿಂದ ಸೋತ ನಾವೆಲ್ಲರೂ ಆಗ ರಣದಿಂದ ಹಿಂದೆಸರಿದೆವು.

09024049a ಅಥಾಪಶ್ಯಂ ಸಾತ್ಯಕಿಂ ತಮುಪಾಯಾಂತಂ ಮಹಾರಥಂ|

09024049c ರಥೈಶ್ಚತುಹ್ಶತೈರ್ವೀರೋ ಮಾಂ ಚಾಭ್ಯದ್ರವದಾಹವೇ||

ಆಗ ಅಲ್ಲಿಗೆ ಬರುತ್ತಿದ್ದ ಮಹಾರಥ ಸಾತ್ಯಕಿಯನ್ನು ನಾವು ನೋಡಿದೆವು. ಆ ವೀರನು ನಾಲ್ಕು ನೂರು ರಥಗಳೊಡನೆ ನಮ್ಮನ್ನು ಆಕ್ರಮಣಿಸಿದನು.

09024050a ಧೃಷ್ಟದ್ಯುಮ್ನಾದಹಂ ಮುಕ್ತಃ ಕಥಂ ಚಿಚ್ಚ್ರಾಂತವಾಹನಃ|

09024050c ಪತಿತೋ ಮಾಧವಾನೀಕಂ ದುಷ್ಕೃತೀ ನರಕಂ ಯಥಾ||

09024050e ತತ್ರ ಯುದ್ಧಮಭೂದ್ಘೋರಂ ಮುಹೂರ್ತಮತಿದಾರುಣಂ||

ಕುದುರೆಗಳು ಬಳಲಿರಲು ಧೃಷ್ಟದ್ಯುಮ್ನನಿಂದ ಹೇಗೋ ತಪ್ಪಿಸಿಕೊಂಡು ಬಂದ ನಾವು ಪಾಪಿಯು ನರಕವನ್ನು ಹೇಗೋ ಹಾಗೆ ಮಾಧವ ಸಾತ್ಯಕಿಯ ಸೇನೆಯಡಿಯಲ್ಲಿ ಬಿದ್ದೆವು!

09024051a ಸಾತ್ಯಕಿಸ್ತು ಮಹಾಬಾಹುರ್ಮಮ ಹತ್ವಾ ಪರಿಚ್ಚದಂ|

09024051c ಜೀವಗ್ರಾಹಮಗೃಹ್ಣಾನ್ಮಾಂ ಮೂರ್ಚಿತಂ ಪತಿತಂ ಭುವಿ||

ಮಹಾಬಾಹು ಸಾತ್ಯಕಿಯಾದರೋ ನನ್ನ ಕುದುರೆ-ಸಾರಥಿಗಳನ್ನು ಸಂಹರಿಸಿ, ಮೂರ್ಛಿತನಾಗಿ ಭೂಮಿಯ ಮೇಲೆ ಬಿದ್ದ ನನ್ನನ್ನು ಜೀವಂತ ಸೆರೆಹಿಡಿದನು.

09024052a ತತೋ ಮುಹೂರ್ತಾದಿವ ತದ್ಗಜಾನೀಕಮವಧ್ಯತ|

09024052c ಗದಯಾ ಭೀಮಸೇನೇನ ನಾರಾಚೈರರ್ಜುನೇನ ಚ||

ಆಗ ಭೀಮಸೇನನು ಗದೆಯಿಂದಲೂ ಅರ್ಜುನನು ನಾರಾಚಗಳಿಂದಲೂ ಮುಹೂರ್ತಮಾತ್ರದಲ್ಲಿ ಆ ಗಜಸೇನೆಯನ್ನು ಸಂಹರಿಸಿದರು.

09024053a ಪ್ರತಿಪಿಷ್ಟೈರ್ಮಹಾನಾಗೈಃ ಸಮಂತಾತ್ಪರ್ವತೋಪಮೈಃ|

09024053c ನಾತಿಪ್ರಸಿದ್ಧೇವ ಗತಿಃ ಪಾಂಡವಾನಾಮಜಾಯತ||

ಎಲ್ಲ ಕಡೆಗಳಲ್ಲಿಯೂ ಪರ್ವತೋಪಮ ಮಹಾ ‌ಆನೆಗಳ ಮೃತಶರೀರಗಳು ಬಿದ್ದಿರಲು ಪಾಂಡವ ರಥಗಳಿಗೆ ಮುಂದುವರೆಯಲೇ ಸಾಧ್ಯವಾಗಲಿಲ್ಲ.

09024054a ರಥಮಾರ್ಗಾಂಸ್ತತಶ್ಚಕ್ರೇ ಭೀಮಸೇನೋ ಮಹಾಬಲಃ|

09024054c ಪಾಂಡವಾನಾಂ ಮಹಾರಾಜ ವ್ಯಪಕರ್ಷನ್ಮಹಾಗಜಾನ್||

ಆಗ ಮಹಾರಾಜ! ಮಹಾಬಲ ಭೀಮಸೇನನು ಮಹಾ ‌ಆನೆಗಳನ್ನು ಎಳೆದು ಸರಿಸಿ ಪಾಂಡವರಿಗೆ ರಥಮಾರ್ಗವನ್ನು ಮಾಡಿಕೊಟ್ಟನು.

09024055a ಅಶ್ವತ್ಥಾಮಾ ಕೃಪಶ್ಚೈವ ಕೃತವರ್ಮಾ ಚ ಸಾತ್ವತಃ|

09024055c ಅಪಶ್ಯಂತೋ ರಥಾನೀಕೇ ದುರ್ಯೋಧನಮರಿಂದಮಂ|

09024055e ರಾಜಾನಂ ಮೃಗಯಾಮಾಸುಸ್ತವ ಪುತ್ರಂ ಮಹಾರಥಂ||

ಅಶ್ವತ್ಥಾಮ, ಕೃಪ ಮತ್ತು ಸಾತ್ವತ ಕೃತವರ್ಮರು ರಥಸೇನೆಯಲ್ಲಿ ಅರಿಂದಮ ದುರ್ಯೋಧನನನ್ನು ಕಾಣದೇ ನಿನ್ನ ಮಗ ಮಹಾರಥ ರಾಜನನ್ನು ಹುಡುಕತೊಡಗಿದರು.

09024056a ಪರಿತ್ಯಜ್ಯ ಚ ಪಾಂಚಾಲಂ ಪ್ರಯಾತಾ ಯತ್ರ ಸೌಬಲಃ|

09024056c ರಾಜ್ಞೋಽದರ್ಶನಸಂವಿಗ್ನಾ ವರ್ತಮಾನೇ ಜನಕ್ಷಯೇ||

ಪಾಂಚಾಲರನ್ನು ಬಿಟ್ಟು ಸೌಬಲನಿದ್ದಲ್ಲಿಗೆ ಹೋಗಿ ಜನಕ್ಷಯವು ನಡೆಯುತ್ತಿರುವ ಅಲ್ಲಿಯೂ ರಾಜನನ್ನು ಕಾಣದೇ ಅವರು ಉದ್ವಿಗ್ನರಾದರು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ದುರ್ಯೋಧನಾಪಯಾನೇ ಚತುರ್ವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ದುರ್ಯೋಧನಾಪಯಾನ ಎನ್ನುವ ಇಪ್ಪತ್ನಾಲ್ಕನೇ ಅಧ್ಯಾಯವು.

Comments are closed.