ಶಲ್ಯಪರ್ವ: ಹ್ರದಪ್ರವೇಶಪರ್ವ
Contents
Toggle೨೨
ಪಾಂಡವರು ಕೌರವ ಸೇನೆಯ ಏಳುನೂರು ರಥಗಳನ್ನು ನಾಶಗೊಳಿಸಿದುದು (೧-೧೪). ಸಂಕುಲಯುದ್ಧ (೧೫-೨೭). ಶಕುನಿಯ ಯುದ್ಧ (೨೮-೪೦). ಶಕುನಿಯ ಪಲಾಯನ (೪೧-೫೮). ಶಕುನಿಯು ಪುನಃ ಯುದ್ಧಕ್ಕೆ ಬಂದುದು (೫೯-೬೨). ತುಮುಲಯುದ್ಧ (೬೩-೮೮).
09022001 ಸಂಜಯ ಉವಾಚ
09022001a ವರ್ತಮಾನೇ ತಥಾ ಯುದ್ಧೇ ಘೋರರೂಪೇ ಭಯಾನಕೇ|
09022001c ಅಭಜ್ಯತ ಬಲಂ ತತ್ರ ತವ ಪುತ್ರಸ್ಯ ಪಾಂಡವೈಃ||
ಸಂಜಯನು ಹೇಳಿದನು: “ಘೋರರೂಪದ ಆ ಭಯಾನಕ ಯುದ್ಧವು ನಡೆಯುತ್ತಿರಲು ಪಾಂಡವರು ನಿನ್ನ ಪುತ್ರನ ಸೇನೆಯನ್ನು ಭಗ್ನಗೊಳಿಸಿದರು.
09022002a ತಾಂಸ್ತು ಯತ್ನೇನ ಮಹತಾ ಸಂನಿವಾರ್ಯ ಮಹಾರಥಾನ್|
09022002c ಪುತ್ರಸ್ತೇ ಯೋಧಯಾಮಾಸ ಪಾಂಡವಾನಾಮನೀಕಿನೀಂ||
ಓಡಿಹೋಗುತ್ತಿದ್ದ ಮಹಾರಥರನ್ನು ಮಹಾಯತ್ನದಿಂದ ತಡೆಯುತ್ತಾ ನಿನ್ನ ಮಗನು ಪಾಂಡವ ಸೇನೆಗಳೊಡನೆ ಯುದ್ಧಮಾಡುತ್ತಿದ್ದನು.
09022003a ನಿವೃತ್ತಾಃ ಸಹಸಾ ಯೋಧಾಸ್ತವ ಪುತ್ರಪ್ರಿಯೈಷಿಣಃ|
09022003c ಸಂನಿವೃತ್ತೇಷು ತೇಷ್ವೇವಂ ಯುದ್ಧಮಾಸೀತ್ಸುದಾರುಣಂ||
ನಿನ್ನ ಪುತ್ರನಿಗೆ ಪ್ರಿಯವನ್ನೇ ಬಯಸಿದ ಯೋಧರು ಕೂಡಲೇ ಹಿಂದಿರುಗಿದರು. ಅವರು ಹಿಂದಿರುಗಲು, ಅಲ್ಲಿ ಸುದಾರುಣ ಯುದ್ಧವು ನಡೆಯಿತು.
09022004a ತಾವಕಾನಾಂ ಪರೇಷಾಂ ಚ ದೇವಾಸುರರಣೋಪಮಂ|
09022004c ಪರೇಷಾಂ ತವ ಸೈನ್ಯೇ ಚ ನಾಸೀತ್ಕಶ್ಚಿತ್ಪರಾಙ್ಮುಖಃ||
ದೇವಾಸುರರ ಯುದ್ಧದಂತಿದ್ದ ನಿನ್ನವರ ಮತ್ತು ಶತ್ರುಗಳ ಆ ಯುದ್ಧದಲ್ಲಿ ನಿನ್ನ ಅಥವಾ ಶತ್ರು ಸೇನೆಗಳಲ್ಲಿ ಯಾರೂ ಪಾರಙ್ಮುಖರಾಗಲಿಲ್ಲ.
09022005a ಅನುಮಾನೇನ ಯುಧ್ಯಂತೇ ಸಂಜ್ಞಾಭಿಶ್ಚ ಪರಸ್ಪರಂ|
09022005c ತೇಷಾಂ ಕ್ಷಯೋ ಮಹಾನಾಸೀದ್ಯುಧ್ಯತಾಮಿತರೇತರಂ||
ಅನುಮಾನ-ಸಂಜ್ಞೆಗಳಿಂದ ಪರಸ್ಪರರನ್ನು ಗುರುತಿಸಿ ಯುದ್ಧಮಾಡುತ್ತಿದ್ದರು. ಅನ್ಯೋನ್ಯರೊಂದಿಗೆ ಯುದ್ಧಮಾಡುತ್ತಿದ್ದ ಅವರಲ್ಲಿ ಮಹಾ ನಾಶವುಂಟಾಯಿತು.
09022006a ತತೋ ಯುಧಿಷ್ಠಿರೋ ರಾಜಾ ಕ್ರೋಧೇನ ಮಹತಾ ಯುತಃ|
09022006c ಜಿಗೀಷಮಾಣಃ ಸಂಗ್ರಾಮೇ ಧಾರ್ತರಾಷ್ಟ್ರಾನ್ಸರಾಜಕಾನ್||
09022007a ತ್ರಿಭಿಃ ಶಾರದ್ವತಂ ವಿದ್ಧ್ವಾ ರುಕ್ಮಪುಂಖೈಃ ಶಿಲಾಶಿತೈಃ|
09022007c ಚತುರ್ಭಿರ್ನಿಜಘಾನಾಶ್ವಾನ್ಕಲ್ಯಾಣಾನ್ಕೃತವರ್ಮಣಃ||
ಆಗ ರಾಜಾ ಯುಧಿಷ್ಠಿರನು ಮಹಾ ಕ್ರೋಧಯುಕ್ತನಾಗಿ ಸಂಗ್ರಾಮದಲ್ಲಿ ರಾಜನೊಂದಿಗೆ ಧಾರ್ತರಾಷ್ಟ್ರರನ್ನು ಗೆಲ್ಲಲು ಬಯಸಿ, ಮೂರು ರುಕ್ಮಪುಂಖ ಶಿಲಾಶಿತಗಳಿಂದ ಶಾರದ್ವತನನ್ನು ಹೊಡೆದು ನಾಲ್ಕು ಶರಗಳಿಂದ ಕೃತವರ್ಮನ ನಾಲ್ಕು ಕಲ್ಯಾಣ ಕುದುರೆಗಳನ್ನು ಸಂಹರಿಸಿದನು.
09022008a ಅಶ್ವತ್ಥಾಮಾ ತು ಹಾರ್ದಿಕ್ಯಮಪೋವಾಹ ಯಶಸ್ವಿನಂ|
09022008c ಅಥ ಶಾರದ್ವತೋಽಷ್ಟಾಭಿಃ ಪ್ರತ್ಯವಿಧ್ಯದ್ಯುಧಿಷ್ಠಿರಂ||
ಅಶ್ವಾತ್ಥಾಮನು ಯಶಸ್ವಿ ಹಾರ್ದಿಕ್ಯನನ್ನು ಕರೆದುಕೊಂಡು ಹೋದನು. ಶಾರದ್ವತನು ಎಂಟು ಬಾಣಗಳಿಂದ ಯುಧಿಷ್ಠಿರನನ್ನು ಪ್ರತಿಯಾಗಿ ಹೊಡೆದನು.
09022009a ತತೋ ದುರ್ಯೋಧನೋ ರಾಜಾ ರಥಾನ್ಸಪ್ತಶತಾನ್ರಣೇ|
09022009c ಪ್ರೇಷಯದ್ಯತ್ರ ರಾಜಾಸೌ ಧರ್ಮಪುತ್ರೋ ಯುಧಿಷ್ಠಿರಃ||
ಆಗ ರಾಜಾ ದುರ್ಯೋಧನನು ರಣದಲ್ಲಿ ಏಳುನೂರು ರಥಗಳನ್ನು ರಾಜಾ ಧರ್ಮಪುತ್ರ ಯುಧಿಷ್ಠಿರನಿರುವಲ್ಲಿಗೆ ಕಳುಹಿಸಿದನು.
09022010a ತೇ ರಥಾ ರಥಿಭಿರ್ಯುಕ್ತಾ ಮನೋಮಾರುತರಂಹಸಃ|
09022010c ಅಭ್ಯದ್ರವಂತ ಸಂಗ್ರಾಮೇ ಕೌಂತೇಯಸ್ಯ ರಥಂ ಪ್ರತಿ||
ರಥಿಗಳಿಂದ ಕೂಡಿದ ಆ ರಥಗಳು ಮನಸ್ಸು-ಮಾರುತಗಳ ವೇಗದಿಂದ ಸಂಗ್ರಾಮದಲ್ಲಿ ಕೌಂತೇಯನ ರಥದ ಬಳಿ ಬಂದು ಅವನನ್ನು ಆಕ್ರಮಣಿಸಿದವು.
09022011a ತೇ ಸಮಂತಾನ್ಮಹಾರಾಜ ಪರಿವಾರ್ಯ ಯುಧಿಷ್ಠಿರಂ|
09022011c ಅದೃಶ್ಯಂ ಸಾಯಕೈಶ್ಚಕ್ರುರ್ಮೇಘಾ ಇವ ದಿವಾಕರಂ||
ಮಹಾರಾಜ! ಅವರು ಯುಧಿಷ್ಠಿರನನ್ನು ಎಲ್ಲಕಡೆಗಳಿಂದ ಸುತ್ತುವರೆದು ಮೇಘಗಳು ದಿವಾಕರನನ್ನು ಹೇಗೋ ಹಾಗೆ ಸಾಯಕಗಳಿಂದ ಅವನನ್ನು ಅದೃಶ್ಯಗೊಳಿಸಿದರು.
09022012a ನಾಮೃಷ್ಯಂತ ಸುಸಂರಬ್ಧಾಃ ಶಿಖಂಡಿಪ್ರಮುಖಾ ರಥಾಃ|
09022012c ರಥೈರಗ್ರ್ಯಜವೈರ್ಯುಕ್ತೈಃ ಕಿಂಕಿಣೀಜಾಲಸಂವೃತೈಃ|
09022012e ಆಜಗ್ಮುರಭಿರಕ್ಷಂತಃ ಕುಂತೀಪುತ್ರಂ ಯುಧಿಷ್ಠಿರಂ||
ಕುಪಿತರಾದ ಶಿಖಂಡಿ ಮೊದಲಾದ ರಥರು ಅದನ್ನು ಸಹಿಸಿಕೊಳ್ಳಲಾರದೇ ವೇಗಯುಕ್ತ ಕಿಂಕಿಣೀಜಾಲಗಳನ್ನು ಸುತ್ತಿದ್ದ ರಥಗಳ ಮೇಲೆ ಕುಳಿತು ಕುಂತೀಪುತ್ರ ಯುಧಿಷ್ಠಿರನನ್ನು ರಕ್ಷಿಸಲು ಅಲ್ಲಿಗೆ ಧಾವಿಸಿದರು.
09022013a ತತಃ ಪ್ರವವೃತೇ ರೌದ್ರಃ ಸಂಗ್ರಾಮಃ ಶೋಣಿತೋದಕಃ|
09022013c ಪಾಂಡವಾನಾಂ ಕುರೂಣಾಂ ಚ ಯಮರಾಷ್ಟ್ರವಿವರ್ಧನಃ||
ಆಗ ಪಾಂಡವ-ಕೌರವರ ನಡುವೆ ಯಮರಾಷ್ಟ್ರವನ್ನು ವರ್ಧಿಸುವ ರಕ್ತವೇ ನೀರಾಗಿ ಹರಿಯುತ್ತಿದ್ದ ರೌದ್ರ ಸಂಗ್ರಾಮವು ನಡೆಯಿತು.
09022014a ರಥಾನ್ಸಪ್ತಶತಾನ್ ಹತ್ವಾ ಕುರೂಣಾಮಾತತಾಯಿನಾಂ|
09022014c ಪಾಂಡವಾಃ ಸಹ ಪಾಂಚಾಲೈಃ ಪುನರೇವಾಭ್ಯವಾರಯನ್||
ಪಾಂಚಾಲರೊಂದಿಗೆ ಪಾಂಡವರು ಆತಯಾಯಿ ಕುರುಗಳ ಆ ಏಳುನೂರು ರಥಗಳನ್ನು ಧ್ವಂಸಗೊಳಿಸಿ ಪುನಃ ಅವರನ್ನು ತಡೆದರು.
09022015a ತತ್ರ ಯುದ್ಧಂ ಮಹಚ್ಚಾಸೀತ್ತವ ಪುತ್ರಸ್ಯ ಪಾಂಡವೈಃ|
09022015c ನ ಚ ನಸ್ತಾದೃಶಂ ದೃಷ್ಟಂ ನೈವ ಚಾಪಿ ಪರಿಶ್ರುತಂ||
ಆಗ ಪಾಂಡವರೊಂದಿಗೆ ನಿನ್ನ ಪುತ್ರನ ಮಹಾಯುದ್ಧವು ನಡೆಯಿತು. ಅಂತಹ ಯುದ್ಧವನ್ನು ನಾವು ಈ ಹಿಂದೆ ನೋಡಿರಲಿಲ್ಲ, ಕೇಳಿಯೂ ಇರಲಿಲ್ಲ.
09022016a ವರ್ತಮಾನೇ ತಥಾ ಯುದ್ಧೇ ನಿರ್ಮರ್ಯಾದೇ ಸಮಂತತಃ|
09022016c ವಧ್ಯಮಾನೇಷು ಯೋಧೇಷು ತಾವಕೇಷ್ವಿತರೇಷು ಚ||
09022017a ನಿನದತ್ಸು ಚ ಯೋಧೇಷು ಶಂಖವರ್ಯೈಶ್ಚ ಪೂರಿತೈಃ|
09022017c ಉತ್ಕೃಷ್ಟೈಃ ಸಿಂಹನಾದೈಶ್ಚ ಗರ್ಜಿತೇನ ಚ ಧನ್ವಿನಾಂ||
ಎಲ್ಲಕಡೆ ನಿನ್ನಕಡೆಯ ಮತ್ತು ಶತ್ರು ಯೋಧರ ವಧೆಯಾಗುತ್ತಿದ್ದ ಆ ನಿರ್ಮರ್ಯಾದಾಯುಕ್ತ ಯುದ್ಧವು ನಡೆಯುತ್ತಿರುವಾಗ ಯೋಧರು ಗರ್ಜಿಸುತ್ತಿದ್ದರು. ಶಂಖಗಳನ್ನು ಜೋರಾಗಿ ಊದುತ್ತಿದ್ದರು. ಉಚ್ಛಧ್ವನಿಯಲ್ಲಿ ಸಿಂಹನಾದಗೈಯುತ್ತಿದ್ದರು ಮತ್ತು ಧನ್ವಿಗಳು ಗರ್ಜಿಸುತ್ತಿದ್ದರು.
09022018a ಅತಿಪ್ರವೃದ್ಧೇ ಯುದ್ಧೇ ಚ ಚಿದ್ಯಮಾನೇಷು ಮರ್ಮಸು|
09022018c ಧಾವಮಾನೇಷು ಯೋಧೇಷು ಜಯಗೃದ್ಧಿಷು ಮಾರಿಷ||
ಮಾರಿಷ! ಅತಿ ಜೋರಾಗಿದ್ದ ಆ ಯುದ್ಧದಲ್ಲಿ ಜಯೇಚ್ಛು ಯೋಧರು ಮರ್ಮಸ್ಥಾನಗಳಲ್ಲಿ ಗಾಯಗೊಂಡು ಓಡಿ ಹೋಗುತ್ತಿದ್ದರು.
09022019a ಸಂಹಾರೇ ಸರ್ವತೋ ಜಾತೇ ಪೃಥಿವ್ಯಾಂ ಶೋಕಸಂಭವೇ|
09022019c ಬಹ್ವೀನಾಮುತ್ತಮಸ್ತ್ರೀಣಾಂ ಸೀಮಂತೋದ್ಧರಣೇ ತಥಾ||
ರಣಭೂಮಿಯ ಎಲ್ಲಕಡೆ ಸಂಹಾರವು ನಡೆಯುತ್ತಿರಲು ಬಹುಸಂಖ್ಯಾತ ಉತ್ತಮ ಸ್ತ್ರೀಯರ ಸೀಮಂತವು ರಣದಲ್ಲಿ ಹರಣವಾಯಿತು.
09022020a ನಿರ್ಮರ್ಯಾದೇ ತಥಾ ಯುದ್ಧೇ ವರ್ತಮಾನೇ ಸುದಾರುಣೇ|
09022020c ಪ್ರಾದುರಾಸನ್ವಿನಾಶಾಯ ತದೋತ್ಪಾತಾಃ ಸುದಾರುಣಾಃ||
09022020e ಚಚಾಲ ಶಬ್ದಂ ಕುರ್ವಾಣಾ ಸಪರ್ವತವನಾ ಮಹೀ||
ಮರ್ಯಾದೆಗಳನ್ನು ಮೀರಿದ ಆ ಸುದಾರುಣ ಯುದ್ಧವು ನಡೆಯುತ್ತಿರಲು ವಿನಾಶವನ್ನು ಸೂಚಿಸುವ ಸುದಾರುಣ ಉತ್ಪಾತಗಳು ಕಾಣಿಸಿಕೊಂಡವು. ಪರ್ವತ-ವನಗಳೊಂದಿಗೆ ಭೂಮಿಯು ನಡುಗಿ ಶಬ್ಧಮಾಡಿತು.
09022021a ಸದಂಡಾಃ ಸೋಲ್ಮುಕಾ ರಾಜನ್ ಶೀರ್ಯಮಾಣಾಃ ಸಮಂತತಃ|
09022021c ಉಲ್ಕಾಃ ಪೇತುರ್ದಿವೋ ಭೂಮಾವಾಹತ್ಯ ರವಿಮಂಡಲಂ||
ರಾಜನ್! ದಂಡ-ಕೊಳ್ಳಿಗಳುಳ್ಳ ಉಲ್ಕೆಗಳು ರವಿಮಂಡಲವನ್ನು ಅಪ್ಪಳಿಸಿ ಚೂರಾಗಿ ಭೂಮಿಯ ಮೇಲೆ ಎಲ್ಲಕಡೆ ಬಿದ್ದವು.
09022022a ವಿಷ್ವಗ್ವಾತಾಃ ಪ್ರಾದುರಾಸನ್ನೀಚೈಃ ಶರ್ಕರವರ್ಷಿಣಃ|
09022022c ಅಶ್ರೂಣಿ ಮುಮುಚುರ್ನಾಗಾ ವೇಪಥುಶ್ಚಾಸ್ಪೃಶದ್ ಭೃಶಂ||
ಕೆಳಗೆ ಭೂಮಿಯ ಮೇಲೆ ಮರಳುಕಲ್ಲುಗಳನ್ನು ಸುರಿಸುವ ಗಾಳಿಯು ಬೀಸಿತು. ಆನೆಗಳು ಕಣ್ಣೀರಿಡುತ್ತಾ ಥರ ಥರನೆ ನಡುಗುತ್ತಿದ್ದವು.
09022023a ಏತಾನ್ಘೋರಾನನಾದೃತ್ಯ ಸಮುತ್ಪಾತಾನ್ಸುದಾರುಣಾನ್|
09022023c ಪುನರ್ಯುದ್ಧಾಯ ಸಮ್ಮಂತ್ರ್ಯ ಕ್ಷತ್ರಿಯಾಸ್ತಸ್ಥುರವ್ಯಥಾಃ||
09022023e ರಮಣೀಯೇ ಕುರುಕ್ಷೇತ್ರೇ ಪುಣ್ಯೇ ಸ್ವರ್ಗಂ ಯಿಯಾಸವಃ||
ಉಂಟಾದ ಈ ಸುದಾರುಣ ಘೋರ ಶಕುನಗಳನ್ನು ಅನಾದರಿಸಿ ರಮಣೀಯ ಕುರುಕ್ಷೇತ್ರದಲ್ಲಿ ಪುಣ್ಯ ಸ್ವರ್ಗವನ್ನೇ ಬಯಸಿದ್ದ ವ್ಯಥೆಯಿಲ್ಲದ ಕ್ಷತ್ರಿಯರು ಪುನಃ ಯುದ್ಧಕ್ಕಾಗಿ ವಿಚಾರಮಾಡಿ ಸಿದ್ಧರಾದರು.
09022024a ತತೋ ಗಾಂಧಾರರಾಜಸ್ಯ ಪುತ್ರಃ ಶಕುನಿರಬ್ರವೀತ್|
09022024c ಯುಧ್ಯಧ್ವಮಗ್ರತೋ ಯಾವತ್ಪೃಷ್ಠತೋ ಹನ್ಮಿ ಪಾಂಡವಾನ್||
ಆಗ ಗಾಂಧಾರರಾಜನ ಮಗ ಶಕುನಿಯು “ನೀವು ಮುಂದಿನಿಂದ ಪಾಂಡವರೊಡನೆ ಯುದ್ಧಮಾಡಿ. ನಾನು ಹಿಂದಿನಿಂದ ಅವರನ್ನು ಸಂಹರಿಸುತ್ತೇನೆ!” ಎಂದು ಹೇಳಿದನು.
09022025a ತತೋ ನಃ ಸಂಪ್ರಯಾತಾನಾಂ ಮದ್ರಯೋಧಾಸ್ತರಸ್ವಿನಃ|
09022025c ಹೃಷ್ಟಾಃ ಕಿಲಕಿಲಾಶಬ್ದಮಕುರ್ವಂತಾಪರೇ ತಥಾ||
ಆಗ ನಾವು ಮುಂದಿನಿಂದ ಯುದ್ಧಮಾಡಲು ಹೋದೆವು. ತರಸ್ವಿ ಮದ್ರಯೋಧರು ಹೃಷ್ಟರಾಗಿ ಕಿಲಕಿಲಾ ಶಬ್ಧಮಾಡುತ್ತಿದ್ದರು.
09022026a ಅಸ್ಮಾಂಸ್ತು ಪುನರಾಸಾದ್ಯ ಲಬ್ಧಲಕ್ಷಾ ದುರಾಸದಾಃ|
09022026c ಶರಾಸನಾನಿ ಧುನ್ವಂತಃ ಶರವರ್ಷೈರವಾಕಿರನ್||
ಲಕ್ಷಬದ್ಧ-ದುರಾಸದ ಪಾಂಡವರು ಪುನಃ ನಮ್ಮಬಳಿಬಂದು ಧನುಸ್ಸನ್ನು ಟೇಂಕರಿಸುತ್ತಾ ಶರವರ್ಷಗಳಿಂದ ನಮ್ಮನ್ನು ಮುಸುಕಿದರು.
09022027a ತತೋ ಹತಂ ಪರೈಸ್ತತ್ರ ಮದ್ರರಾಜಬಲಂ ತದಾ|
09022027c ದುರ್ಯೋಧನಬಲಂ ದೃಷ್ಟ್ವಾ ಪುನರಾಸೀತ್ ಪರಾಙ್ಮುಖಂ||
ಶತ್ರುಗಳಿಂದ ಮದ್ರರಾಜನ ಬಲವು ನಾಶವಾದುದನ್ನು ನೋಡಿ ದುರ್ಯೋಧನನ ಸೇನೆಯು ಪುನಃ ಪರಾಙ್ಮುಖವಾಯಿತು.
09022028a ಗಾಂಧಾರರಾಜಸ್ತು ಪುನರ್ವಾಕ್ಯಮಾಹ ತತೋ ಬಲೀ|
09022028c ನಿವರ್ತಧ್ವಮಧರ್ಮಜ್ಞಾ ಯುಧ್ಯಧ್ವಂ ಕಿಂ ಸೃತೇನ ವಃ||
ಆಗ ಬಲಶಾಲೀ ಗಾಂಧಾರರಾಜನು “ಧರ್ಮವನ್ನು ತಿಳಿಯದವರೇ! ಹಿಂದಿರುಗಿರಿ! ಕೆಚ್ಚಿನಿಂದ ಯುದ್ಧಮಾಡಿ! ಪಲಾಯನ ಮಾಡುವುದರಿಂದ ಏನು ಪ್ರಯೋಜನ?” ಎಂದು ಕೂಗಿ ಕರೆದನು.
09022029a ಅನೀಕಂ ದಶಸಾಹಸ್ರಮಶ್ವಾನಾಂ ಭರತರ್ಷಭ|
09022029c ಆಸೀದ್ಗಾಂಧಾರರಾಜಸ್ಯ ವಿಮಲಪ್ರಾಸಯೋಧಿನಾಂ||
ಭರತರ್ಷಭ! ಹೊಳೆಯುವ ಪ್ರಾಸಗಳೊಂದಿಗೆ ಯುದ್ಧಮಾಡಬಲ್ಲ ಹತ್ತು ಸಾವಿರ ಅಶ್ವಗಳ ಸೇನೆಯು ಗಾಂಧಾರರಾಜನಲ್ಲಿತ್ತು.
09022030a ಬಲೇನ ತೇನ ವಿಕ್ರಮ್ಯ ವರ್ತಮಾನೇ ಜನಕ್ಷಯೇ|
09022030c ಪೃಷ್ಠತಃ ಪಾಂಡವಾನೀಕಮಭ್ಯಘ್ನನ್ನಿಶಿತೈಃ ಶರೈಃ||
ಹಾಗೆ ಜನಕ್ಷಯವು ನಡೆಯುತ್ತಿರಲಾಗಿ ಆ ವಿಕ್ರಮಿಯು ತನ್ನ ಸೇನೆಯನ್ನೊಡಗೂಡಿ ಪಾಂಡವರ ಸೇನೆಯನ್ನು ಹಿಂದಿನಿಂದ ನಿಶಿತ ಶರಗಳನ್ನು ಪ್ರಯೋಗಿಸಿ ಸಂಹರಿಸತೊಡಗಿದನು.
09022031a ತದಭ್ರಮಿವ ವಾತೇನ ಕ್ಷಿಪ್ಯಮಾಣಂ ಸಮಂತತಃ|
09022031c ಅಭಜ್ಯತ ಮಹಾರಾಜ ಪಾಂಡೂನಾಂ ಸುಮಹದ್ಬಲಂ||
ಮಹಾರಾಜ! ಭಿರುಗಾಳಿಯಿಂದ ಮೋಡಗಳು ಹೇಗೋ ಹಾಗೆ ಪಾಂಡವರ ಮಹಾ ಬಲವು ಆಗ ಭಗ್ನವಾಗಿ ಹೋಯಿತು.
09022032a ತತೋ ಯುಧಿಷ್ಠಿರಃ ಪ್ರೇಕ್ಷ್ಯ ಭಗ್ನಂ ಸ್ವಬಲಮಂತಿಕಾತ್|
09022032c ಅಭ್ಯಚೋದಯದವ್ಯಗ್ರಃ ಸಹದೇವಂ ಮಹಾಬಲಂ||
ತನ್ನ ಸೇನೆಯು ಭಗ್ನವಾಗುತ್ತಿದ್ದುದನ್ನು ಹತ್ತಿರದಿಂದಲೇ ನೋಡಿದ ಅವ್ಯಗ್ರ ಯುಧಿಷ್ಠಿರನು ಮಹಾಬಲ ಸಹದೇವನನ್ನು ಪ್ರಚೋದಿಸಿದನು:
09022033a ಅಸೌ ಸುಬಲಪುತ್ರೋ ನೋ ಜಘನಂ ಪೀಡ್ಯ ದಂಶಿತಃ|
09022033c ಸೇನಾಂ ನಿಸೂದಯಂತ್ಯೇಷ ಪಶ್ಯ ಪಾಂಡವ ದುರ್ಮತಿಂ||
“ಪಾಂಡವ! ಕವಚಧಾರಿಯಾಗಿ ನಮ್ಮ ಸೇನೆಯನ್ನು ಹಿಂಬಾಗದಿಂದ ಪೀಡಿಸಿ ಸಂಹರಿಸುತ್ತಿರುವ ಆ ದುರ್ಮತಿಯನ್ನು ನೋಡು!
09022034a ಗಚ್ಚ ತ್ವಂ ದ್ರೌಪದೇಯಾಶ್ಚ ಶಕುನಿಂ ಸೌಬಲಂ ಜಹಿ|
09022034c ರಥಾನೀಕಮಹಂ ರಕ್ಷ್ಯೇ ಪಾಂಚಾಲಸಹಿತೋಽನಘ||
ಅನಘ! ನೀನು ದ್ರೌಪದೇಯರೊಂದಿಗೆ ಹೋಗು! ಸೌಬಲ ಶಕುನಿಯನ್ನು ಸಂಹರಿಸು! ಪಾಂಚಾಲಸಹಿತನಾಗಿ ನಾನು ಈ ರಥಸೇನೆಯನ್ನು ರಕ್ಷಿಸುತ್ತೇನೆ!
09022035a ಗಚ್ಚಂತು ಕುಂಜರಾಃ ಸರ್ವೇ ವಾಜಿನಶ್ಚ ಸಹ ತ್ವಯಾ|
09022035c ಪಾದಾತಾಶ್ಚ ತ್ರಿಸಾಹಸ್ರಾಃ ಶಕುನಿಂ ಸೌಬಲಂ ಜಹಿ||
ನಿನ್ನೊಂದಿಗೆ ಆನೆ-ಕುದುರೆಗಳೆಲ್ಲವೂ ಮತ್ತು ಮೂರು ಸಾವಿರ ಪದಾತಿಗಳೂ ಹೋಗಲಿ! ಸೌಬಲ ಶಕುನಿಯನ್ನು ಸಂಹರಿಸು!”
09022036a ತತೋ ಗಜಾಃ ಸಪ್ತಶತಾಶ್ಚಾಪಪಾಣಿಭಿರಾಸ್ಥಿತಾಃ|
09022036c ಪಂಚ ಚಾಶ್ವಸಹಸ್ರಾಣಿ ಸಹದೇವಶ್ಚ ವೀರ್ಯವಾನ್||
09022037a ಪಾದಾತಾಶ್ಚ ತ್ರಿಸಾಹಸ್ರಾ ದ್ರೌಪದೇಯಾಶ್ಚ ಸರ್ವಶಃ|
09022037c ರಣೇ ಹ್ಯಭ್ಯದ್ರವಂಸ್ತೇ ತು ಶಕುನಿಂ ಯುದ್ಧದುರ್ಮದಂ||
ಆಗ ಧನುಷ್ಪಾಣಿಗಳೊಂದಿಗೆ ಏಳು ನೂರು ಆನೆಗಳು, ಐದು ಸಾವಿರ ಕುದುರೆಗಳು, ಮೂರು ಸಾವಿರ ಪದಾತಿಗಳೂ ಮತ್ತು ದ್ರೌಪದೇಯರೂ ಸೇರಿ ವೀರ್ಯವಾನ್ ಸಹದೇವನು ರಣದಲ್ಲಿ ಯುದ್ಧದುರ್ಮದ ಶಕುನಿಯನ್ನು ಎಲ್ಲ ಕಡೆಗಳಿಂದ ಮುತ್ತಿದನು.
09022038a ತತಸ್ತು ಸೌಬಲೋ ರಾಜನ್ನಭ್ಯತಿಕ್ರಮ್ಯ ಪಾಂಡವಾನ್|
09022038c ಜಘಾನ ಪೃಷ್ಠತಃ ಸೇನಾಂ ಜಯಗೃಧ್ರಃ ಪ್ರತಾಪವಾನ್||
ರಾಜನ್! ಜಯೇಚ್ಛು ಪ್ರತಾಪವಾನ್ ಸೌಬಲನು ಪಾಂಡವರನ್ನು ಅತಿಕ್ರಮಿಸಿ ಸೇನೆಯನ್ನು ಹಿಂದಿನಿಂದ ಸಂಹರಿಸುತ್ತಿದ್ದನು.
09022039a ಅಶ್ವಾರೋಹಾಸ್ತು ಸಂರಬ್ಧಾಃ ಪಾಂಡವಾನಾಂ ತರಸ್ವಿನಾಂ|
09022039c ಪ್ರಾವಿಶನ್ಸೌಬಲಾನೀಕಮಭ್ಯತಿಕ್ರಮ್ಯ ತಾನ್ರಥಾನ್||
ಕುಪಿತ ತರಸ್ವೀ ಪಾಂಡವ ಅಶ್ವಾರೋಹಿಗಳು ಸುಬಲನ ರಥಸೇನೆಯನ್ನು ಆಕ್ರಮಣಿಸಿ ಪವೇಶಿಸಿದರು.
09022040a ತೇ ತತ್ರ ಸಾದಿನಃ ಶೂರಾಃ ಸೌಬಲಸ್ಯ ಮಹದ್ಬಲಂ|
09022040c ಗಜಮಧ್ಯೇಽವತಿಷ್ಠಂತಃ ಶರವರ್ಷೈರವಾಕಿರನ್||
ಶೂರ ಅಶ್ವಸೈನಿಕರು ಸೌಬಲನ ಮಹಾಸೇನೆಯ ಮಧ್ಯೆ ನಿಂತು ಶರವರ್ಷಗಳಿಂದ ಅದನ್ನು ಮುಸುಕಿದರು.
09022041a ತದುದ್ಯತಗದಾಪ್ರಾಸಮಕಾಪುರುಷಸೇವಿತಂ|
09022041c ಪ್ರಾವರ್ತತ ಮಹದ್ಯುದ್ಧಂ ರಾಜನ್ದುರ್ಮಂತ್ರಿತೇ ತವ||
ರಾಜನ್! ಆಗ ಶತ್ರುಸೇನೆಗಳನ್ನು ಸಂಹರಿಸಲು ಗದ-ಪ್ರಾಸಗಳನ್ನು ಎತ್ತಿ ಹಿಡಿದಿದ್ದ ಪುರುಷರ ನಡುವೆ, ನಿನ್ನ ದುರ್ಮಂತ್ರದಿಂದ ಪ್ರಾರಂಭವಾದ, ಮಹಾ ಯುದ್ಧವು ನಡೆಯಿತು.
09022042a ಉಪಾರಮಂತ ಜ್ಯಾಶಬ್ದಾಃ ಪ್ರೇಕ್ಷಕಾ ರಥಿನೋಽಭವನ್|
09022042c ನ ಹಿ ಸ್ವೇಷಾಂ ಪರೇಷಾಂ ವಾ ವಿಶೇಷಃ ಪ್ರತ್ಯದೃಶ್ಯತ||
ಧನುಸ್ಸಿನ ಶಿಂಜನಿಯ ಶಬ್ಧಗಳು ತಣ್ಣಗಾಗಿ ರಥಿಗಳು ಪ್ರೇಕ್ಷಕರಾದರು. ಅಲ್ಲಿ ನಿನ್ನ ಮತ್ತು ಶತ್ರುಗಳ ನಡುವೆ ಯಾವ ವ್ಯತ್ಯಾಸವೂ ಕಾಣಲಿಲ್ಲ.
09022043a ಶೂರಬಾಹುವಿಸೃಷ್ಟಾನಾಂ ಶಕ್ತೀನಾಂ ಭರತರ್ಷಭ|
09022043c ಜ್ಯೋತಿಷಾಮಿವ ಸಂಪಾತಮಪಶ್ಯನ್ಕುರುಪಾಂಡವಾಃ||
ಭರತರ್ಷಭ! ಶೂರಬಾಹುಗಳು ಪ್ರಯೋಗಿಸಿದ ಶಕ್ತಿಗಳು ನಕ್ಷತ್ರಗಳಂತೆ ಬೀಳುವುದನ್ನು ಕುರು-ಪಾಂಡವರು ನೋಡಿದರು.
09022044a ಋಷ್ಟಿಭಿರ್ವಿಮಲಾಭಿಶ್ಚ ತತ್ರ ತತ್ರ ವಿಶಾಂ ಪತೇ|
09022044c ಸಂಪತಂತೀಭಿರಾಕಾಶಮಾವೃತಂ ಬಹ್ವಶೋಭತ||
ವಿಶಾಂಪತೇ! ಅಲ್ಲಲ್ಲಿ ಬೀಳುತ್ತಿದ್ದ ವಿಮಲ ಋಷ್ಟಿಗಳು ಆಕಾಶದಲ್ಲಿ ತುಂಬಿ ಬಹಳವಾಗಿ ಶೋಭಿಸಿದವು.
09022045a ಪ್ರಾಸಾನಾಂ ಪತತಾಂ ರಾಜನ್ರೂಪಮಾಸೀತ್ಸಮಂತತಃ|
09022045c ಶಲಭಾನಾಮಿವಾಕಾಶೇ ತದಾ ಭರತಸತ್ತಮ||
ರಾಜನ್! ಭರತಸತ್ತಮ! ಆಗ ಸುತ್ತಲೂ ಬೀಳುತ್ತಿದ್ದ ಪ್ರಾಸಗಳು ಆಕಾಶದಲ್ಲಿ ಹಾರಾಡುವ ಮಿಡಿತೆಗಳಂತೆ ತೋರಿದವು.
09022046a ರುಧಿರೋಕ್ಷಿತಸರ್ವಾಂಗಾ ವಿಪ್ರವಿದ್ಧೈರ್ನಿಯಂತೃಭಿಃ|
09022046c ಹಯಾಃ ಪರಿಪತಂತಿ ಸ್ಮ ಶತಶೋಽಥ ಸಹಸ್ರಶಃ||
ಗಾಯಗೊಂಡು ಸರ್ವಾಂಗಗಳೂ ರಕ್ತದಿಂದ ತೋಯ್ದ ಸವಾರರೊಂದಿಗೆ ನೂರಾರು ಸಹಸ್ರಾರು ಕುದುರೆಗಳು ಕೆಳಗುರುಳುತ್ತಿದ್ದವು.
09022047a ಅನ್ಯೋನ್ಯಪರಿಪಿಷ್ಟಾಶ್ಚ ಸಮಾಸಾದ್ಯ ಪರಸ್ಪರಂ|
09022047c ಅವಿಕ್ಷತಾಃ ಸ್ಮ ದೃಶ್ಯಂತೇ ವಮಂತೋ ರುಧಿರಂ ಮುಖೈಃ||
ಪರಸ್ಪರರೊಡನೆ ಸಂಘರ್ಷಿಸಿ ಅನ್ಯೋನ್ಯರನ್ನು ಪಿಂಡಿಗಳನ್ನಾಗಿ ಹಿಂಡಿ, ಗಾಯಗೊಳಿಸಿ, ಬಾಯಿಯಿಂದ ರಕ್ತವನ್ನು ಕಾರುತ್ತಿರುವುದು ಕಂಡುಬಂಡಿತು.
09022048a ತತೋಽಭವತ್ತಮೋ ಘೋರಂ ಸೈನ್ಯೇನ ರಜಸಾ ವೃತೇ|
09022048c ತಾನಪಾಕ್ರಮತೋಽದ್ರಾಕ್ಷಂ ತಸ್ಮಾದ್ದೇಶಾದರಿಂದಮಾನ್||
09022048e ಅಶ್ವಾನ್ರಾಜನ್ಮನುಷ್ಯಾಂಶ್ಚ ರಜಸಾ ಸಂವೃತೇ ಸತಿ||
ಆಗ ಸೇನೆಯು ಧೂಳಿನಿಂದ ತುಂಬಿ ಘೋರ ಕತ್ತಲೆಯು ಆವರಿಸಿತು. ರಾಜನ್! ಧೂಳಿನಿಂದ ತುಂಬಿಹೋಗಿದ್ದ ಆ ಪ್ರದೇಶದಿಂದ ಅನೇಕ ಅರಿಂದಮರು – ಕುದುರೆ-ಮನುಷ್ಯರು - ಓಡಿಹೋಗುತ್ತಿರುವುದನ್ನು ಕಂಡೆನು.
09022049a ಭೂಮೌ ನಿಪತಿತಾಶ್ಚಾನ್ಯೇ ವಮಂತೋ ರುಧಿರಂ ಬಹು|
09022049c ಕೇಶಾಕೇಶಿಸಮಾಲಗ್ನಾ ನ ಶೇಕುಶ್ಚೇಷ್ಟಿತುಂ ಜನಾಃ||
ಅನ್ಯರು ಬಹಳವಾಗಿ ರಕ್ತವನ್ನು ಕಾರುತ್ತಾ ಭೂಮಿಯ ಮೇಲೆ ಬೀಳುತ್ತಿದ್ದರು. ತಮ್ಮ ಜುಟ್ಟನ್ನು ಹಿಡಿದಿದ್ದುದರಿಂದ ಕೆಲವರಿಗೆ ಚಲಿಸಲೂ ಸಾಧ್ಯವಾಗುತ್ತಿರಲಿಲ್ಲ.
09022050a ಅನ್ಯೋನ್ಯಮಶ್ವಪೃಷ್ಠೇಭ್ಯೋ ವಿಕರ್ಷಂತೋ ಮಹಾಬಲಾಃ|
09022050c ಮಲ್ಲಾ ಇವ ಸಮಾಸಾದ್ಯ ನಿಜಘ್ನುರಿತರೇತರಂ||
09022050e ಅಶ್ವೈಶ್ಚ ವ್ಯಪಕೃಷ್ಯಂತ ಬಹವೋಽತ್ರ ಗತಾಸವಃ||
ಕುದುರೆಗಳ ಮೇಲೆ ಕುಳಿತಿದ್ದ ಮಹಾಬಲರು ಅನ್ಯೋನ್ಯರನ್ನು ಎಳೆಯುತ್ತಿದ್ದರು. ಕೆಲವರು ಮಲ್ಲರಂತೆ ಇತರೇತರರನ್ನು ಹೊಡೆದು ಸಂಹರಿಸುತ್ತಿದ್ದರು. ಸತ್ತುಹೋಗಿದ್ದ ಅನೇಕರನ್ನು ಕುದುರೆಗಳು ಅಲ್ಲಿಂದಿಲ್ಲಿಗೆ ಎಳೆದುಕೊಂಡು ಹೋಗುತ್ತಿದ್ದವು.
09022051a ಭೂಮೌ ನಿಪತಿತಾಶ್ಚಾನ್ಯೇ ಬಹವೋ ವಿಜಯೈಷಿಣಃ|
09022051c ತತ್ರ ತತ್ರ ವ್ಯದೃಶ್ಯಂತ ಪುರುಷಾಃ ಶೂರಮಾನಿನಃ||
ರಣಭೂಮಿಯಲ್ಲಿ ಅಲ್ಲಲ್ಲಿ ತಾವೇ ಶೂರರೆಂದು ತಿಳಿದುಕೊಂಡಿದ್ದ ಅನ್ಯ ಅನೇಕ ವಿಜಯೇಚ್ಛು ಪುರುಷರು ಬಿದ್ದುದನ್ನು ನೋಡಿದೆವು.
09022052a ರಕ್ತೋಕ್ಷಿತೈಶ್ಚಿನ್ನಭುಜೈರಪಕೃಷ್ಟಶಿರೋರುಹೈಃ|
09022052c ವ್ಯದೃಶ್ಯತ ಮಹೀ ಕೀರ್ಣಾ ಶತಶೋಽಥ ಸಹಸ್ರಶಃ||
ರಕ್ತದಿಂದ ತೋಯ್ದುಹೋಗಿದ್ದ, ಭುಜಗಳು ತುಂಡಾಗಿದ್ದ, ಕೆದರಿದ ಕೇಶರಾಶಿಗಳಿಂದ ಕೂಡಿದ್ದ ನೂರಾರು ಸಹಸ್ರಾರು ಶರೀರಗಳು ರಣಭೂಮಿಯಲ್ಲಿ ಚೆಲ್ಲಿಹೋಗಿರುವುದು ಕಾಣುತ್ತಿತ್ತು.
09022053a ದೂರಂ ನ ಶಕ್ಯಂ ತತ್ರಾಸೀದ್ಗಂತುಮಶ್ವೇನ ಕೇನ ಚಿತ್|
09022053c ಸಾಶ್ವಾರೋಹೈರ್ಹತೈರಶ್ವೈರಾವೃತೇ ವಸುಧಾತಲೇ||
ಹತರಾದ ಅಶ್ವಾರೋಹಿಗಳು ಮತ್ತು ಕುದುರೆಗಳಿಂದ ತುಂಬಿದ್ದ ರಣಭೂಮಿಯಲ್ಲಿ ಯಾರಿಗೂ ದೂರ ಸಾಗಲು ಸಾಧ್ಯವಾಗುತ್ತಿರಲಿಲ್ಲ.
09022054a ರುಧಿರೋಕ್ಷಿತಸಂನಾಹೈರಾತ್ತಶಸ್ತ್ರೈರುದಾಯುಧೈಃ|
09022054c ನಾನಾಪ್ರಹರಣೈರ್ಘೋರೈಃ ಪರಸ್ಪರವಧೈಷಿಭಿಃ||
09022054e ಸುಸಂನಿಕೃಷ್ಟೈಃ ಸಂಗ್ರಾಮೇ ಹತಭೂಯಿಷ್ಠಸೈನಿಕೈಃ||
ಶಸ್ತ್ರಗಳನ್ನು ಮೇಲೆತ್ತಿ, ಆಯುಧಗಳನ್ನು ಹಿಡಿದು ನಾನಾ ಘೋರ ಪ್ರಹರಗಳಿಂದ ಪರಸ್ಪರರನ್ನು ವಧಿಸಲು ಬಯಸಿ ಹತ್ತಿರ-ಹತ್ತಿರದಲ್ಲಿಯೇ ಇನ್ನೂ ಯುದ್ಧಮಾಡುತ್ತಿದ್ದ ಮತ್ತು ಆಗಲೇ ಸತ್ತುಹೋಗಿದ್ದ ಸೈನಿಕರಿಂದ ರಣಭೂಮಿಯು ತುಂಬಿಹೋಯಿತು.
09022055a ಸ ಮುಹೂರ್ತಂ ತತೋ ಯುದ್ಧ್ವಾ ಸೌಬಲೋಽಥ ವಿಶಾಂ ಪತೇ|
09022055c ಷಟ್ಸಹಸ್ರೈರ್ಹಯೈಃ ಶಿಷ್ಟೈರಪಾಯಾಚ್ಚಕುನಿಸ್ತತಃ||
ವಿಶಾಂಪತೇ! ಸ್ವಲ್ಪವೇ ಹೊತ್ತು ಯುದ್ಧಮಾಡಿದ ಸೌಬಲನು ಅಳಿದುಳಿದ ಅವನ ಆರುಸಾವಿರ ಅಶ್ವಸೈನಿಕರೊಂದಿಗೆ ಪಲಾಯನಗೈದನು.
09022056a ತಥೈವ ಪಾಂಡವಾನೀಕಂ ರುಧಿರೇಣ ಸಮುಕ್ಷಿತಂ|
09022056c ಷಟ್ಸಹಸ್ರೈರ್ಹಯೈಃ ಶಿಷ್ಟೈರಪಾಯಾಚ್ಚ್ರಾಂತವಾಹನಂ||
ಹಾಗೆಯೇ ರಕ್ತದಿಂದ ತೋಯ್ದುಹೋಗಿದ್ದ ಮತ್ತು ಬಳಲಿದ್ದ ಅಳಿದುಳಿದ ಆರುಸಾವಿರ ಅಶ್ವಸೈನಿಕರೊಂದಿಗೆ ಪಾಂಡವ ಸೇನೆಯೂ ಯುದ್ಧದಿಂದ ಹಿಮ್ಮೆಟ್ಟಿತು.
09022057a ಅಶ್ವಾರೋಹಾಸ್ತು ಪಾಂಡೂನಾಮಬ್ರುವನ್ರುಧಿರೋಕ್ಷಿತಾಃ|
09022057c ಸುಸಂನಿಕೃಷ್ಟಾಃ ಸಂಗ್ರಾಮೇ ಭೂಯಿಷ್ಠಂ ತ್ಯಕ್ತಜೀವಿತಾಃ||
ರಕ್ತದಿಂದ ತೋಯ್ದುಹೋಗಿದ್ದ, ಸಂಗ್ರಾಮದಲ್ಲಿ ಜೀವವನ್ನೇ ತೊರೆದು ನಿಕಟದಿಂದ ಯುದ್ಧಮಾಡುತ್ತಿದ್ದ ಪಾಂಡವರ ಅಶ್ವಾರೋಹಿಗಳು ಹೇಳಿದರು:
09022058a ನೇಹ ಶಕ್ಯಂ ರಥೈರ್ಯೋದ್ಧುಂ ಕುತ ಏವ ಮಹಾಗಜೈಃ|
09022058c ರಥಾನೇವ ರಥಾ ಯಾಂತು ಕುಂಜರಾಃ ಕುಂಜರಾನಪಿ||
“ನಾವು ರಥಗಳೊಂದಿಗೆ ಯುದ್ಧಮಾಡಲು ಶಕ್ಯರಿಲ್ಲ. ಇನ್ನು ಮಹಾಗಜಗಳೊಂದಿಗೆ ಹೇಗೆ ಯುದ್ಧಮಾಡಬಲ್ಲೆವು? ರಥಗಳೇ ರಥಗಳನ್ನು ಎದುರಿಸಲಿ ಮತ್ತು ಆನೆಗಳೇ ಆನೆಗಳನ್ನು ಎದುರಿಸಲಿ!
09022059a ಪ್ರತಿಯಾತೋ ಹಿ ಶಕುನಿಃ ಸ್ವಮನೀಕಮವಸ್ಥಿತಃ|
09022059c ನ ಪುನಃ ಸೌಬಲೋ ರಾಜಾ ಯುದ್ಧಮಭ್ಯಾಗಮಿಷ್ಯತಿ||
ಪಲಾಯನಮಾಡಿದ ಶಕುನಿಯು ತನ್ನ ಸೇನೆಯೊಳಗೆ ಸೇರಿಕೊಂಡುಬಿಟ್ಟಿದ್ದಾನೆ. ರಾಜಾ ಸೌಬಲನು ಪುನಃ ಯುದ್ಧಕ್ಕೆ ಬರುವುದಿಲ್ಲ!”
09022060a ತತಸ್ತು ದ್ರೌಪದೇಯಾಶ್ಚ ತೇ ಚ ಮತ್ತಾ ಮಹಾದ್ವಿಪಾಃ|
09022060c ಪ್ರಯಯುರ್ಯತ್ರ ಪಾಂಚಾಲ್ಯೋ ಧೃಷ್ಟದ್ಯುಮ್ನೋ ಮಹಾರಥಃ||
ಆಗ ದ್ರೌಪದೇಯರು ಮತ್ತು ಮದಿಸಿದ ಮಹಾ ಆನೆಗಳು ಮಹಾರಥ ಪಾಂಚಾಲ್ಯ ಧೃಷ್ಟದ್ಯುಮ್ನನಿದ್ದೆಡಗೆ ಹೋದವು.
09022061a ಸಹದೇವೋಽಪಿ ಕೌರವ್ಯ ರಜೋಮೇಘೇ ಸಮುತ್ಥಿತೇ|
09022061c ಏಕಾಕೀ ಪ್ರಯಯೌ ತತ್ರ ಯತ್ರ ರಾಜಾ ಯುಧಿಷ್ಠಿರಃ||
ಕೌರವ್ಯ! ಧೂಳಿನ ಮೋಡಗಳು ಮೇಲೇಳಲು ಸಹದೇವನೂ ಕೂಡ ಏಕಾಂಗಿಯಾಗಿ ರಾಜಾ ಯುಧಿಷ್ಠಿರನಿದ್ದಲ್ಲಿಗೆ ಹೊರಟುಹೋದನು.
09022062a ತತಸ್ತೇಷು ಪ್ರಯಾತೇಷು ಶಕುನಿಃ ಸೌಬಲಃ ಪುನಃ|
09022062c ಪಾರ್ಶ್ವತೋಽಭ್ಯಹನತ್ಕ್ರುದ್ಧೋ ಧೃಷ್ಟದ್ಯುಮ್ನಸ್ಯ ವಾಹಿನೀಂ||
ಅವರು ಹಾಗೆ ಹೊರಟುಹೋಗಲು ಕ್ರುದ್ಧ ಸೌಬಲ ಶಕುನಿಯು ಪುನಃ ಹಿಂದಿನಿಂದ ಧೃಷ್ಟದ್ಯುಮ್ನನ ಸೇನೆಯನ್ನು ಆಕ್ರಮಣಿಸಿದನು.
09022063a ತತ್ಪುನಸ್ತುಮುಲಂ ಯುದ್ಧಂ ಪ್ರಾಣಾಂಸ್ತ್ಯಕ್ತ್ವಾಭ್ಯವರ್ತತ|
09022063c ತಾವಕಾನಾಂ ಪರೇಷಾಂ ಚ ಪರಸ್ಪರವಧೈಷಿಣಾಂ||
ಆಗ ಅಲ್ಲಿ ಪುನಃ ಪ್ರಾಣಗಳನ್ನು ತೊರೆದು ಪರಸ್ಪರರನ್ನು ವಧಿಸಲು ಬಯಸಿದ್ದ ನಿನ್ನವರ ಮತ್ತು ಶತ್ರುಗಳ ನಡುವೆ ತುಮುಲ ಯುದ್ಧವು ಪ್ರಾರಂಭವಾಯಿತು.
09022064a ತೇ ಹ್ಯನ್ಯೋನ್ಯಮವೇಕ್ಷಂತ ತಸ್ಮಿನ್ವೀರಸಮಾಗಮೇ|
09022064c ಯೋಧಾಃ ಪರ್ಯಪತನ್ರಾಜನ್ ಶತಶೋಽಥ ಸಹಸ್ರಶಃ||
ಅವರು ಅನ್ಯೋನ್ಯರನ್ನು ಸಂಹರಿಸುವುದಕ್ಕೇ ಕಾಯುತ್ತಿದ್ದರು. ರಾಜನ್! ಆ ವೀರಸಮಾಗಮದಲ್ಲಿ ನೂರಾರು ಸಹಸ್ರಾರು ಯೋಧರು ಕೆಳಗುರುಳಿದರು.
09022065a ಅಸಿಭಿಶ್ಚಿದ್ಯಮಾನಾನಾಂ ಶಿರಸಾಂ ಲೋಕಸಂಕ್ಷಯೇ|
09022065c ಪ್ರಾದುರಾಸೀನ್ಮಹಾಶಬ್ದಸ್ತಾಲಾನಾಂ ಪತತಾಮಿವ||
ಲೋಕಕ್ಷಯಕಾರಕ ಆ ಮಹಾಯುದ್ಧದಲ್ಲಿ ಖಡ್ಗಗಳಿಂದ ಕತ್ತರಿಸಲ್ಪಟ್ಟ ಶಿರಗಳು ತಾಳೆಯ ಹಣ್ಣುಗಳು ಬೀಳುವಂತೆ ಜೋರಾಗಿ ಶಬ್ಧಮಾಡುತ್ತಾ ಬೀಳುತ್ತಿದ್ದವು.
09022066a ವಿಮುಕ್ತಾನಾಂ ಶರೀರಾಣಾಂ ಭಿನ್ನಾನಾಂ ಪತತಾಂ ಭುವಿ|
09022066c ಸಾಯುಧಾನಾಂ ಚ ಬಾಹೂನಾಮುರೂಣಾಂ ಚ ವಿಶಾಂ ಪತೇ||
09022066e ಆಸೀತ್ಕಟಕಟಾಶಬ್ದಃ ಸುಮಹಾನ್ರೋಮಹರ್ಷಣಃ||
ವಿಶಾಂಪತೇ! ತುಂಡಾಗಿ ಪ್ರಾಣತೊರೆದು ರಣಭೂಮಿಯ ಮೇಲೆ ಬೀಳುತ್ತಿದ್ದ ಶರೀರಗಳ, ಆಯುಧಗಳೊಂದಿಗೆ ಬಾಹುಗಳ ಮತ್ತು ತೊಡೆಗಳ ಕಟ-ಕಟಾ ಶಬ್ಧವು ಮಹಾ ರೋಮಾಂಚನವಾಗಿದ್ದಿತು.
09022067a ನಿಘ್ನಂತೋ ನಿಶಿತೈಃ ಶಸ್ತ್ರೈರ್ಭ್ರಾತೄನ್ಪುತ್ರಾನ್ಸಖೀನಪಿ|
09022067c ಯೋಧಾಃ ಪರಿಪತಂತಿ ಸ್ಮ ಯಥಾಮಿಷಕೃತೇ ಖಗಾಃ||
ಮಾಂಸದ ತುಂಡಿಗಾಗಿ ಪರದಾಡುವ ಪಕ್ಷಿಗಳಂತೆ ನಿಶಿತ ಶಸ್ತ್ರಗಳಿಂದ ಸಹೋದರ-ಪುತ್ರ-ಸಖರನ್ನು ಕೂಡ ಸಂಹರಿಸಿ ಯೋಧರು ಕೆಳಗುರುಳುತ್ತಿದ್ದರು.
09022068a ಅನ್ಯೋನ್ಯಂ ಪ್ರತಿಸಂರಬ್ಧಾಃ ಸಮಾಸಾದ್ಯ ಪರಸ್ಪರಂ|
09022068c ಅಹಂ ಪೂರ್ವಮಹಂ ಪೂರ್ವಮಿತಿ ನ್ಯಘ್ನನ್ಸಹಸ್ರಶಃ||
ಕೋಪದಿಂದ ಪರಸ್ಪರರೊಡನೆ ಸಂಘರ್ಷಿತ್ತಾ “ನಾನು ಮೊದಲು! ನಾನು ಮೊದಲು!” ಎನ್ನುತ್ತಾ ಸಾವಿರಾರು ಸಂಖ್ಯೆಗಳಲ್ಲಿ ಅನ್ಯೋನ್ಯರನ್ನು ಸಂಹರಿಸಿದರು.
09022069a ಸಂಘಾತೈರಾಸನಭ್ರಷ್ಟೈರಶ್ವಾರೋಹೈರ್ಗತಾಸುಭಿಃ|
09022069c ಹಯಾಃ ಪರಿಪತಂತಿ ಸ್ಮ ಶತಶೋಽಥ ಸಹಸ್ರಶಃ||
ಘಾತಿಗೊಂಡು ಆಸನಭ್ರಷ್ಟರಾಗಿ ಪ್ರಾಣತೊರೆದು ಅಶ್ವಾರೋಹಿಗಳು ಮತ್ತು ಕುದುರೆಗಳು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಕೆಳಗುರುಳುತ್ತಿದ್ದವು.
09022070a ಸ್ಫುರತಾಂ ಪ್ರತಿಪಿಷ್ಟಾನಾಮಶ್ವಾನಾಂ ಶೀಘ್ರಸಾರಿಣಾಂ|
09022070c ಸ್ತನತಾಂ ಚ ಮನುಷ್ಯಾಣಾಂ ಸಂನದ್ಧಾನಾಂ ವಿಶಾಂ ಪತೇ||
09022071a ಶಕ್ತ್ಯೃಷ್ಟಿಪ್ರಾಸಶಬ್ದಶ್ಚ ತುಮುಲಃ ಸಮಜಾಯತ|
09022071c ಭಿಂದತಾಂ ಪರಮರ್ಮಾಣಿ ರಾಜನ್ದುರ್ಮಂತ್ರಿತೇ ತವ||
ವಿಶಾಂಪತೇ! ರಾಜನ್! ನಿನ್ನ ದುರ್ಮಂತ್ರದಿಂದಾಗಿ ಜಜ್ಜಿಹೋಗಿ ನಡುಗುತ್ತಿದ್ದ ಶೀಘ್ರಸಾರಿಣ ಕುದುರೆಗಳ ದಾರುಣಧ್ವನಿಯೂ ಮನುಷ್ಯರು ಪ್ರಯೋಗಿಸುತ್ತಿದ್ದ ಶಕ್ತಿ-ಋಷ್ಟಿ-ಪ್ರಾಸಗಳು ಶತ್ರುಗಳ ಕವಚಗಳನ್ನು ಭೇದಿಸುವ ತುಮುಲ ಶಬ್ಧಗಳೂ ಕೇಳಿಬಂದವು.
09022072a ಶ್ರಮಾಭಿಭೂತಾಃ ಸಂರಬ್ಧಾಃ ಶ್ರಾಂತವಾಹಾಃ ಪಿಪಾಸಿತಾಃ|
09022072c ವಿಕ್ಷತಾಶ್ಚ ಶಿತೈಃ ಶಸ್ತ್ರೈರಭ್ಯವರ್ತಂತ ತಾವಕಾಃ||
ಬಾಯಾರಿದ್ದ ಮತ್ತು ಬಳಲಿದ್ದ ಕುದುರೆಗಳನ್ನು ಏರಿದ್ದ ಗಾಯಗೊಂಡು ಬಳಲಿದ್ದ ನಿನ್ನವರು ನಿಶಿತ ಶಸ್ತ್ರಗಳಿಂದ ಆಕ್ರಮಣಿಸಿದರು.
09022073a ಮತ್ತಾ ರುಧಿರಗಂಧೇನ ಬಹವೋಽತ್ರ ವಿಚೇತಸಃ|
09022073c ಜಘ್ನುಃ ಪರಾನ್ಸ್ವಕಾಂಶ್ಚೈವ ಪ್ರಾಪ್ತಾನ್ಪ್ರಾಪ್ತಾನನಂತರಾನ್||
ರಕ್ತದ ವಾಸನೆಯಿಂದ ಮತ್ತರಾಗಿದ್ದ ಅನೇಕರು ಅಲ್ಲಿ ಬುದ್ಧಿಕಳೆದುಕೊಂಡು ಹತ್ತಿರಬಂದ ಶತ್ರುಗಳನ್ನೂ ತಮ್ಮ ಕಡೆಯವರನ್ನೂ ಸಂಹರಿಸುತ್ತಿದ್ದರು.
09022074a ಬಹವಶ್ಚ ಗತಪ್ರಾಣಾಃ ಕ್ಷತ್ರಿಯಾ ಜಯಗೃದ್ಧಿನಃ|
09022074c ಭೂಮಾವಭ್ಯಪತನ್ರಾಜನ್ ಶರವೃಷ್ಟಿಭಿರಾವೃತಾಃ||
ರಾಜನ್! ಜಯವನ್ನು ಬಯಸಿ, ಪ್ರಾಣಗಳನ್ನು ಕಳೆದುಕೊಂಡಿದ್ದ ಅನೇಕ ಕ್ಷತ್ರಿಯರು ಶರವೃಷ್ಟಿಗಳಿಂದ ಆವೃತರಾಗಿ ಭೂಮಿಯ ಮೇಲೆ ಬಿದ್ದರು.
09022075a ವೃಕಗೃಧ್ರಶೃಗಾಲಾನಾಂ ತುಮುಲೇ ಮೋದನೇಽಹನಿ|
09022075c ಆಸೀದ್ಬಲಕ್ಷಯೋ ಘೋರಸ್ತವ ಪುತ್ರಸ್ಯ ಪಶ್ಯತಃ||
ತೋಳ-ಹದ್ದು-ನರಿಗಳಿಗೆ ಆನಂದದಾಯಕವಾಗಿದ್ದ ಆ ದಿನದ ತುಮುಲ ಯುದ್ಧದಲ್ಲಿ ನಿನ್ನ ಮಗನು ನೋಡುತ್ತಿದ್ದಂತೆಯೇ ಘೋರ ಬಲಕ್ಷಯವಾಯಿತು.
09022076a ನರಾಶ್ವಕಾಯಸಂಚನ್ನಾ ಭೂಮಿರಾಸೀದ್ವಿಶಾಂ ಪತೇ|
09022076c ರುಧಿರೋದಕಚಿತ್ರಾ ಚ ಭೀರೂಣಾಂ ಭಯವರ್ಧಿನೀ||
ವಿಶಾಂಪತೇ! ಮನುಷ್ಯರು ಮತ್ತು ಕುದುರೆಗಳ ಶರೀರಗಳಿಂದ ರಣಭೂಮಿಯು ತುಂಬಿಹೋಗಿತ್ತು. ರಕ್ತವೇ ನೀರಾಗಿ ಹರಿಯುತ್ತಿದ್ದ ಅದು ಹೇಡಿಗಳಿಗೆ ಭಯವನ್ನುಂಟುಮಾಡುವಂತಿತ್ತು.
09022077a ಅಸಿಭಿಃ ಪಟ್ಟಿಶೈಃ ಶೂಲೈಸ್ತಕ್ಷಮಾಣಾಃ ಪುನಃ ಪುನಃ|
09022077c ತಾವಕಾಃ ಪಾಂಡವಾಶ್ಚೈವ ನಾಭ್ಯವರ್ತಂತ ಭಾರತ||
ಭಾರತ! ಖಡ್ಗ-ಪಟ್ಟಿಷ-ಶೂಲಗಳಿಂದ ಪುನಃ ಪುನಃ ಗಾಯಗೊಳ್ಳುತ್ತಿದ್ದರೂ ನಿನ್ನಕಡೆಯವರಾಗಲೀ ಪಾಂಡವರ ಕಡೆಯವರಾಗಲೀ ಹಿಮ್ಮೆಟ್ಟಲಿಲ್ಲ.
09022078a ಪ್ರಹರಂತೋ ಯಥಾಶಕ್ತಿ ಯಾವತ್ಪ್ರಾಣಸ್ಯ ಧಾರಣಂ|
09022078c ಯೋಧಾಃ ಪರಿಪತಂತಿ ಸ್ಮ ವಮಂತೋ ರುಧಿರಂ ವ್ರಣೈಃ||
ಪ್ರಾಣವಿರುವವರೆಗೆ ಯಥಾಶಕ್ತಿಯಾಗಿ ಪ್ರಹರಿಸಿ ಗಾಯಗಳಿಂದ ರಕ್ತವನ್ನು ಸುರಿಸುತ್ತಾ ಯೋಧರು ಕೆಳಗುರುಳುತ್ತಿದ್ದರು.
09022079a ಶಿರೋ ಗೃಹೀತ್ವಾ ಕೇಶೇಷು ಕಬಂಧಃ ಸಮದೃಶ್ಯತ|
09022079c ಉದ್ಯಮ್ಯ ನಿಶಿತಂ ಖಡ್ಗಂ ರುಧಿರೇಣ ಸಮುಕ್ಷಿತಂ||
ಕೂದಲಿನಿಂದ ರುಂಡ-ಮುಂಡಗಳನ್ನು ಹಿಡಿದು ರಕ್ತದಿಂದ ತೋಯ್ದ ನಿಶಿತ ಖಡ್ಗವನ್ನು ಮೇಲಿತ್ತಿ ಹಿಡಿದಿರುವವರನ್ನು ನೋಡಿದೆವು.
09022080a ಅಥೋತ್ಥಿತೇಷು ಬಹುಷು ಕಬಂಧೇಷು ಜನಾಧಿಪ|
09022080c ತಥಾ ರುಧಿರಗಂಧೇನ ಯೋಧಾಃ ಕಶ್ಮಲಮಾವಿಶನ್||
ಜನಾಧಿಪ! ಅನೇಕ ಮುಂಡಗಳು ಮೇಲೆದ್ದು ನಿಲ್ಲುತ್ತಿದ್ದವು. ರಕ್ತದ ವಾಸನೆಯಿಂದ ಯೋಧರು ಮೂರ್ಛಿತರಾಗುತ್ತಿದ್ದರು.
09022081a ಮಂದೀಭೂತೇ ತತಃ ಶಬ್ದೇ ಪಾಂಡವಾನಾಂ ಮಹದ್ಬಲಂ|
09022081c ಅಲ್ಪಾವಶಿಷ್ಟೈಸ್ತುರಗೈರಭ್ಯವರ್ತತ ಸೌಬಲಃ||
ಆ ಶಬ್ಧವು ಸ್ವಲ್ಪ ಮಂದವಾಗಲು ಸೌಬಲನು ಅಳಿದುಳಿದ ಅಲ್ಪ ಅಶ್ವಸೈನಿಕರೊಂದಿಗೆ ಪಾಂಡವರ ಮಹಾಸೇನೆಯನ್ನು ಆಕ್ರಮಣಿಸಿದನು.
09022082a ತತೋಽಭ್ಯಧಾವಂಸ್ತ್ವರಿತಾಃ ಪಾಂಡವಾ ಜಯಗೃದ್ಧಿನಃ|
09022082c ಪದಾತಯಶ್ಚ ನಾಗಾಶ್ಚ ಸಾದಿನಶ್ಚೋದ್ಯತಾಯುಧಾಃ||
09022083a ಕೋಷ್ಟಕೀಕೃತ್ಯ ಚಾಪ್ಯೇನಂ ಪರಿಕ್ಷಿಪ್ಯ ಚ ಸರ್ವಶಃ|
09022083c ಶಸ್ತ್ರೈರ್ನಾನಾವಿಧೈರ್ಜಘ್ನುರ್ಯುದ್ಧಪಾರಂ ತಿತೀರ್ಷವಃ||
ಜಯವನ್ನು ಬಯಸಿದ್ದ ಪಾಂಡವರು ಅಲ್ಲಿಗೆ ತ್ವರೆಮಾಡಿ ಬಂದರು. ಪದಾತಿ-ಆನೆ-ಅಶ್ವಾರೋಹಿಗಳೊಂದಿಗೆ ಆಯುಧಗಳನ್ನು ಮೇಲೆತ್ತಿ ಶಕುನಿಯನ್ನು ಎಲ್ಲಕಡೆಗಳಿಂದಲೂ ಸುತ್ತುವರೆದು ನಾನಾವಿಧದ ಶಸ್ತ್ರಗಳಿಂದ ಪ್ರಹರಿಸಿದರು.
09022084a ತ್ವದೀಯಾಸ್ತಾಂಸ್ತು ಸಂಪ್ರೇಕ್ಷ್ಯ ಸರ್ವತಃ ಸಮಭಿದ್ರುತಾನ್|
09022084c ಸಾಶ್ವಪತ್ತಿದ್ವಿಪರಥಾಃ ಪಾಂಡವಾನಭಿದುದ್ರುವುಃ||
ಎಲ್ಲಕಡೆಗಳಿಂದ ಸುತ್ತುವರೆಯಲ್ಪಟ್ಟಿರುವುದನ್ನು ನೋಡಿ ನಿನ್ನ ಕಡೆಯವರು ಕುದುರೆ-ಪದಾತಿ-ಆನೆ-ರಥಗಳಿಂದ ಪಾಂಡವರನ್ನು ಆಕ್ರಮಣಿಸಿದರು.
09022085a ಕೇ ಚಿತ್ಪದಾತಯಃ ಪದ್ಭಿರ್ಮುಷ್ಟಿಭಿಶ್ಚ ಪರಸ್ಪರಂ|
09022085c ನಿಜಘ್ನುಃ ಸಮರೇ ಶೂರಾಃ ಕ್ಷೀಣಶಸ್ತ್ರಾಸ್ತತೋಽಪತನ್||
ಶಸ್ತ್ರಗಳೆಲ್ಲವೂ ಮುಗಿದು ಹೋಗಲು ಕೆಲವು ಶೂರ ಪದಾತಿಗಳು ಸಮರದಲ್ಲಿ ಪರಸ್ಪರರ ಮೇಲೆ ಬಿದ್ದು ಕಾಲು-ಮುಷ್ಟಿಗಳಿಂದ ಸಂಹರಿಸುತ್ತಿದ್ದರು.
09022086a ರಥೇಭ್ಯೋ ರಥಿನಃ ಪೇತುರ್ದ್ವಿಪೇಭ್ಯೋ ಹಸ್ತಿಸಾದಿನಃ|
09022086c ವಿಮಾನೇಭ್ಯ ಇವ ಭ್ರಷ್ಟಾಃ ಸಿದ್ಧಾಃ ಪುಣ್ಯಕ್ಷಯಾದ್ಯಥಾ||
ಪುಣ್ಯಕ್ಷಯವಾಗಲು ಸಿದ್ಧರು ವಿಮಾನಗಳಿಂದ ಭ್ರಷ್ಟರಾಗಿ ಕೆಳಗೆ ಬೀಳುವಂತೆ ರಥಗಳಿಂದ ರಥಿಗಳು ಮತ್ತು ಆನೆಗಳ ಮೇಲಿಂದ ಗಜಸೈನಿಕರು ಕೆಳಗೆ ಬೀಳುತ್ತಿದ್ದರು.
09022087a ಏವಮನ್ಯೋನ್ಯಮಾಯಸ್ತಾ ಯೋಧಾ ಜಘ್ನುರ್ಮಹಾಮೃಧೇ|
09022087c ಪಿತೄನ್ಭ್ರಾತೄನ್ವಯಸ್ಯಾಂಶ್ಚ ಪುತ್ರಾನಪಿ ತಥಾಪರೇ||
ಈ ರೀತಿ ಆ ಮಹಾಯುದ್ಧದಲ್ಲಿ ಯೋಧರು ಅನ್ಯೋನ್ಯರನ್ನು ಇನ್ನು ಕೆಲವರು ತಂದೆ-ಸಹೋದರ-ಸ್ನೇಹಿತ-ಮಕ್ಕಳನ್ನೂ ಕೊಲ್ಲುತ್ತಿದ್ದರು.
09022088a ಏವಮಾಸೀದಮರ್ಯಾದಂ ಯುದ್ಧಂ ಭರತಸತ್ತಮ|
09022088c ಪ್ರಾಸಾಸಿಬಾಣಕಲಿಲೇ ವರ್ತಮಾನೇ ಸುದಾರುಣೇ||
ಭರತಸತ್ತಮ! ಪ್ರಾಸ-ಖಡ್ಗ-ಬಾಣಗಳಿಂದ ವ್ಯಾಪ್ತವಾಗಿದ್ದ ಮರ್ಯಾದೆಗಳಿಲ್ಲದ ಆ ಸುದಾರಣಯುದ್ಧವು ಹೀಗೆ ನಡೆಯಿತು.”
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ಸಂಕುಲಯುದ್ಧೇ ದ್ವಾವಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ಸಂಕುಲಯುದ್ಧ ಎನ್ನುವ ಇಪ್ಪತ್ತೆರಡನೇ ಅಧ್ಯಾಯವು.