Shalya Parva: Chapter 21

ಶಲ್ಯಪರ್ವ: ಹ್ರದಪ್ರವೇಶಪರ್ವ

೨೧

ದುರ್ಯೋಧನನ ಪರಾಕ್ರಮ (೧-೧೭). ಯುಧಿಷ್ಠಿರ-ಶಕುನಿಯರ ಯುದ್ಧ (೧೮-೨೪). ದ್ವಂದ್ವಯುದ್ಧಗಳು (೨೫-೩೫). ಸಂಕುಲಯುದ್ಧ (೩೬-೪೪).

09021001 ಸಂಜಯ ಉವಾಚ

09021001a ಪುತ್ರಸ್ತು ತೇ ಮಹಾರಾಜ ರಥಸ್ಥೋ ರಥಿನಾಂ ವರಃ|

09021001c ದುರುತ್ಸಹೋ ಬಭೌ ಯುದ್ಧೇ ಯಥಾ ರುದ್ರಃ ಪ್ರತಾಪವಾನ್||

ಸಂಜಯನು ಹೇಳಿದನು: “ಮಹಾರಾಜ! ನಿನ್ನ ಮಗನಾದರೋ ರಥಿಗಳಲ್ಲಿ ಶ್ರೇಷ್ಠ ಪ್ರತಾಪವಾನ್ ರುದ್ರನಂತೆ ರಥದಲ್ಲಿ ಕುಳಿತು ಶತ್ರುಗಳಿಗೆ ದುಃಸ್ಸಹನಾಗಿದ್ದನು.

09021002a ತಸ್ಯ ಬಾಣಸಹಸ್ರೈಸ್ತು ಪ್ರಚ್ಚನ್ನಾ ಹ್ಯಭವನ್ಮಹೀ|

09021002c ಪರಾಂಶ್ಚ ಸಿಷಿಚೇ ಬಾಣೈರ್ಧಾರಾಭಿರಿವ ಪರ್ವತಾನ್||

ಬಾಣಧಾರೆಗಳಿಂದ ಪರ್ವತವನ್ನು ತೋಯಿಸುವಂತೆ ಅವನು ಶತ್ರುಸೇನೆಗಳನ್ನು ತೋಯಿಸಲು, ಅವನ ಸಹಸ್ರಾರು ಬಾಣಗಳಿಂದ ರಣಭೂಮಿಯು ಮುಚ್ಚಿಹೋಯಿತು.

09021003a ನ ಚ ಸೋಽಸ್ತಿ ಪುಮಾನ್ಕಶ್ಚಿತ್ಪಾಂಡವಾನಾಂ ಮಹಾಹವೇ|

09021003c ಹಯೋ ಗಜೋ ರಥೋ ವಾಪಿ ಯೋಽಸ್ಯ ಬಾಣೈರವಿಕ್ಷತಃ||

ಆ ಮಹಾರಣದಲ್ಲಿ ಅವನ ಬಾಣದಿಂದ ಗಾಯಗೊಳ್ಳದ ಪಾಂಡವರ ಕಡೆಯ ಯಾರೊಬ್ಬ ಪುರುಷನಾಗಲೀ, ಆನೆಯಾಗಲೀ, ಕುದುರೆಯಾಗಲೀ, ರಥವಾಗಲೀ ಇರಲಿಲ್ಲ.

09021004a ಯಂ ಯಂ ಹಿ ಸಮರೇ ಯೋಧಂ ಪ್ರಪಶ್ಯಾಮಿ ವಿಶಾಂ ಪತೇ|

09021004c ಸ ಸ ಬಾಣೈಶ್ಚಿತೋಽಭೂದ್ವೈ ಪುತ್ರೇಣ ತವ ಭಾರತ||

ವಿಶಾಂಪತೇ! ಭಾರತ! ಸಮರದಲ್ಲಿ ಯಾವ ಯಾವ ಯೋಧರನ್ನು ನಾನು ನೋಡಿದೆನೋ ಅವರೆಲ್ಲರೂ ನಿನ್ನ ಮಗನ ಬಾಣಗಳಿಂದ ಗಾಯಗೊಂಡಿದ್ದರು.

09021005a ಯಥಾ ಸೈನ್ಯೇನ ರಜಸಾ ಸಮುದ್ಧೂತೇನ ವಾಹಿನೀ|

09021005c ಪ್ರತ್ಯದೃಶ್ಯತ ಸಂಚನ್ನಾ ತಥಾ ಬಾಣೈರ್ಮಹಾತ್ಮನಃ||

ಓಡಾಡುತ್ತಿರುವ ಸೈನ್ಯದಿಂದ ಮೇಲೆದ್ದ ಧೂಳಿನಂತೆ ಆ ಮಹಾತ್ಮನ ಬಾಣಗಳಿಂದ ಮುಚ್ಚಿಹೋದ ಸೇನೆಯು ಕಾಣುತ್ತಲೇ ಇರಲಿಲ್ಲ.

09021006a ಬಾಣಭೂತಾಮಪಶ್ಯಾಮ ಪೃಥಿವೀಂ ಪೃಥಿವೀಪತೇ|

09021006c ದುರ್ಯೋಧನೇನ ಪ್ರಕೃತಾಂ ಕ್ಷಿಪ್ರಹಸ್ತೇನ ಧನ್ವಿನಾ||

ಪೃಥಿವೀಪತೇ! ಧನ್ವಿ ದುರ್ಯೋಧನನ ಕ್ಷಿಪ್ರಹಸ್ತದಿಂದ ಪ್ರಯೋಗಿಸಲ್ಪಟ್ಟ ಬಾಣಗಳಿಂದ ಸಮರಭೂಮಿಯೇ ಬಾಣಮಯವಾಗಿದ್ದುದನ್ನು ನೋಡಿದೆವು.

09021007a ತೇಷು ಯೋಧಸಹಸ್ರೇಷು ತಾವಕೇಷು ಪರೇಷು ಚ|

09021007c ಏಕೋ ದುರ್ಯೋಧನೋ ಹ್ಯಾಸೀತ್ಪುಮಾನಿತಿ ಮತಿರ್ಮಮ||

ನಿನ್ನ ಮತ್ತು ಶತ್ರುಗಳ ಸಹಸ್ರಾರು ಯೋಧರಲ್ಲಿ ದುರ್ಯೋಧನನೊಬ್ಬನೇ ವೀರಪುರುಷನೆಂದು ನನಗನ್ನಿಸಿತು.

09021008a ತತ್ರಾದ್ಭುತಮಪಶ್ಯಾಮ ತವ ಪುತ್ರಸ್ಯ ವಿಕ್ರಮಂ|

09021008c ಯದೇಕಂ ಸಹಿತಾಃ ಪಾರ್ಥಾ ನಾತ್ಯವರ್ತಂತ ಭಾರತ||

ಭಾರತ! ಪಾರ್ಥರೆಲ್ಲರೂ ಒಟ್ಟಾಗಿದ್ದರೂ ನಿನ್ನ ಮಗ ವಿಕ್ರಮಿಯೊಬ್ಬನನ್ನೇ ಎದುರಿಸಲಾರದೇ ಹೋದರು!

09021009a ಯುಧಿಷ್ಠಿರಂ ಶತೇನಾಜೌ ವಿವ್ಯಾಧ ಭರತರ್ಷಭ|

09021009c ಭೀಮಸೇನಂ ಚ ಸಪ್ತತ್ಯಾ ಸಹದೇವಂ ಚ ಸಪ್ತಭಿಃ||

09021010a ನಕುಲಂ ಚ ಚತುಃಷಷ್ಟ್ಯಾ ಧೃಷ್ಟದ್ಯುಮ್ನಂ ಚ ಪಂಚಭಿಃ|

09021010c ಸಪ್ತಭಿರ್ದ್ರೌಪದೇಯಾಂಶ್ಚ ತ್ರಿಭಿರ್ವಿವ್ಯಾಧ ಸಾತ್ಯಕಿಂ||

09021010e ಧನುಶ್ಚಿಚ್ಚೇದ ಭಲ್ಲೇನ ಸಹದೇವಸ್ಯ ಮಾರಿಷ|

ಮಾರಿಷ! ಭರತರ್ಷಭ! ಯುಧಿಷ್ಠಿರನನ್ನು ನೂರು ಬಾಣಗಳಿಂದ ಹೊಡೆದನು. ಭೀಮಸೇನನನ್ನು ಎಪ್ಪತ್ತು ಬಾಣಗಳಿಂದಲೂ, ಸಹದೇವನನ್ನು ಏಳರಿಂದಲೂ, ನಕುಲನನ್ನು ಅರವತ್ನಾಲ್ಕರಿಂದಲೂ, ಧೃಷ್ಟದ್ಯುಮ್ನನನ್ನು ಐದರಿಂದಲೂ, ದ್ರೌಪದೇಯರನ್ನು ಏಳರಿಂದಲೂ, ಮೂರರಿಂದ ಸಾತ್ಯಕಿಯನ್ನೂ ಹೊಡೆದು, ಭಲ್ಲದಿಂದ ಸಹದೇವನ ಧನುಸ್ಸನ್ನು ತುಂಡರಿಸಿದನು.

09021011a ತದಪಾಸ್ಯ ಧನುಶ್ಚಿನ್ನಂ ಮಾದ್ರೀಪುತ್ರಃ ಪ್ರತಾಪವಾನ್||

09021011c ಅಭ್ಯಧಾವತ ರಾಜಾನಂ ಪ್ರಗೃಹ್ಯಾನ್ಯನ್ಮಹದ್ಧನುಃ|

09021011e ತತೋ ದುರ್ಯೋಧನಂ ಸಂಖ್ಯೇ ವಿವ್ಯಾಧ ದಶಭಿಃ ಶರೈಃ||

ಪ್ರತಾಪವಾನ್ ಮಾದ್ರೀಪುತ್ರನು ತುಂಡಾದ ಧನುಸ್ಸನ್ನು ಬಿಸುಟು ಇನ್ನೊಂದು ಮಹಾಧನುಸ್ಸನ್ನು ಹಿಡಿದು ರಾಜನನ್ನು ಆಕ್ರಮಣಿಸಿದನು. ಆಗ ರಣದಲ್ಲಿ ದುರ್ಯೋಧನನು ಅವನನ್ನು ಹತ್ತು ಶರಗಳಿಂದ ಪ್ರಹರಿಸಿದನು.

09021012a ನಕುಲಶ್ಚ ತತೋ ವೀರೋ ರಾಜಾನಂ ನವಭಿಃ ಶರೈಃ|

09021012c ಘೋರರೂಪೈರ್ಮಹೇಷ್ವಾಸೋ ವಿವ್ಯಾಧ ಚ ನನಾದ ಚ||

ಆಗ ವೀರ ಮಹೇಷ್ವಾಸ ನಕುಲನಾದರೋ ರಾಜನನ್ನು ಒಂಭತ್ತು ಘೋರರೂಪೀ ಶರಗಳಿಂದ ಹೊಡೆದು ಗರ್ಜಿಸಿದನು.

09021013a ಸಾತ್ಯಕಿಶ್ಚಾಪಿ ರಾಜಾನಂ ಶರೇಣಾನತಪರ್ವಣಾ|

09021013c ದ್ರೌಪದೇಯಾಸ್ತ್ರಿಸಪ್ತತ್ಯಾ ಧರ್ಮರಾಜಶ್ಚ ಸಪ್ತಭಿಃ||

09021013e ಅಶೀತ್ಯಾ ಭೀಮಸೇನಶ್ಚ ಶರೈ ರಾಜಾನಮಾರ್ದಯತ್||

ರಾಜನನ್ನು ಸಾತ್ಯಕಿಯು ನತಪರ್ವ ಶರದಿಂದ, ದ್ರೌಪದೇಯರು ಎಪ್ಪತ್ಮೂರು, ಧರ್ಮರಾಜನು ಏಳು, ಮತ್ತು ಭೀಮಸೇನನು ಎಂಭತ್ತು ಬಾಣಗಳಿಂದಲೂ ಹೊಡೆದರು.

09021014a ಸಮಂತಾತ್ಕೀರ್ಯಮಾಣಸ್ತು ಬಾಣಸಂಘೈರ್ಮಹಾತ್ಮಭಿಃ|

09021014c ನ ಚಚಾಲ ಮಹಾರಾಜ ಸರ್ವಸೈನ್ಯಸ್ಯ ಪಶ್ಯತಃ||

ಮಹಾರಾಜ! ಎಲ್ಲಕಡೆಗಳಿಂದಲೂ ಆ ಮಹಾತ್ಮರು ಬಾಣಸಂಘಗಳನ್ನು ಎರಚಿದರೂ, ಎಲ್ಲ ಸೇನೆಗಳೂ ನೋಡುತ್ತಿದ್ದಂತೆಯೇ, ಅವನು ವಿಚಲಿತನಾಗಲಿಲ್ಲ.

09021015a ಲಾಘವಂ ಸೌಷ್ಠವಂ ಚಾಪಿ ವೀರ್ಯಂ ಚೈವ ಮಹಾತ್ಮನಃ|

09021015c ಅತಿ ಸರ್ವಾಣಿ ಭೂತಾನಿ ದದೃಶುಃ ಸರ್ವಮಾನವಾಃ||

ಸರ್ವಭೂತಗಳನ್ನೂ ಮೀರಿಸಿದ ಆ ಮಹಾತ್ಮನ ಸೊಗಸಾದ ಹಸ್ತಲಾಘವ ಮತ್ತು ವೀರ್ಯವನ್ನು ಸರ್ವಮಾನವರೂ ನೋಡಿದರು.

09021016a ಧಾರ್ತರಾಷ್ಟ್ರಾಸ್ತು ರಾಜೇಂದ್ರ ಯಾತ್ವಾ ತು ಸ್ವಲ್ಪಮಂತರಂ|

09021016c ಅಪಶ್ಯಮಾನಾ ರಾಜಾನಂ ಪರ್ಯವರ್ತಂತ ದಂಶಿತಾಃ||

ರಾಜೇಂದ್ರ! ಸ್ವಲ್ಪದೂರವೇ ಓಡಿಹೋಗಿದ್ದ ಧಾರ್ತರಾಷ್ಟ್ರರು ರಾಜನನ್ನು ನೋಡಿ ಕವಚಧಾರಿಗಳಾಗಿ ಹಿಂದಿರುಗಿದರು.

09021017a ತೇಷಾಮಾಪತತಾಂ ಘೋರಸ್ತುಮುಲಃ ಸಮಜಾಯತ|

09021017c ಕ್ಷುಬ್ಧಸ್ಯ ಹಿ ಸಮುದ್ರಸ್ಯ ಪ್ರಾವೃತ್ಕಾಲೇ ಯಥಾ ನಿಶಿ||

ವರ್ಷಾಕಾಲದ ರಾತ್ರಿಯಲ್ಲಿ ಕ್ಷೋಭೆಗೊಂಡ ಸಮುದ್ರದ ಭೋರ್ಗರೆತದಂತೆ ಹಿಂದಿರುಗಿ ಆಕ್ರಮಣಿಸುತ್ತಿದ್ದ ಸೇನೆಯಿಂದಾಗಿ ಘೋರ ತುಮುಲ ಶಬ್ಧವುಂಟಾಯಿತು.

09021018a ಸಮಾಸಾದ್ಯ ರಣೇ ತೇ ತು ರಾಜಾನಮಪರಾಜಿತಂ|

09021018c ಪ್ರತ್ಯುದ್ಯಯುರ್ಮಹೇಷ್ವಾಸಾಃ ಪಾಂಡವಾನಾತತಾಯಿನಃ||

ರಣದಲ್ಲಿ ಆ ಅಪರಾಜಿತ ರಾಜನನ್ನು ಸೇರಿ ಮಹೇಷ್ವಾಸರು ಆತತಾಯಿ ಪಾಂಡವರೊಡನೆ ಪುನಃ ಯುದ್ಧಮಾಡಿದರು.

09021019a ಭೀಮಸೇನಂ ರಣೇ ಕ್ರುದ್ಧಂ ದ್ರೋಣಪುತ್ರೋ ನ್ಯವಾರಯತ್|

09021019c ತತೋ ಬಾಣೈರ್ಮಹಾರಾಜ ಪ್ರಮುಕ್ತೈಃ ಸರ್ವತೋದಿಶಂ||

09021019e ನಾಜ್ಞಾಯಂತ ರಣೇ ವೀರಾ ನ ದಿಶಃ ಪ್ರದಿಶಸ್ತಥಾ||

ರಣದಲ್ಲಿ ಕ್ರುದ್ಧ ಭೀಮಸೇನನನ್ನು ದ್ರೋಣಪುತ್ರನು ತಡೆದನು. ಮಹಾರಾಜ! ಎಲ್ಲಕಡೆಗಳಿಂದ ಪ್ರಯೋಗಿಸಲ್ಪಟ್ಟ ಬಾಣಗಳಿಂದ ದಿಕ್ಕು-ಉಪದಿಕ್ಕುಗಳೆಲ್ಲ ಮುಚ್ಚಿಹೋಗಿ ರಣದಲ್ಲಿ ವೀರರ್ಯಾರು ಕಾಣುತ್ತಿರಲಿಲ್ಲ.

09021020a ತಾವುಭೌ ಕ್ರೂರಕರ್ಮಾಣಾವುಭೌ ಭಾರತ ದುಃಸ್ಸಹೌ|

09021020c ಘೋರರೂಪಮಯುಧ್ಯೇತಾಂ ಕೃತಪ್ರತಿಕೃತೈಷಿಣೌ||

09021020e ತ್ರಾಸಯಂತೌ ಜಗತ್ಸರ್ವಂ ಜ್ಯಾಕ್ಷೇಪವಿಹತತ್ವಚೌ||

ಭಾರತ! ಆ ಇಬ್ಬರು ಕ್ರೂರಕರ್ಮಿ-ದುಃಸ್ಸಹರು ಪೆಟ್ಟಿಗೆ ಪೆಟ್ಟುಕೊಡಲು ಬಯಸುತ್ತಾ ಘೋರರೂಪದ ಯುದ್ಧದಲ್ಲಿ ತೊಡಗಿದರು, ಅವರು ಶಿಂಜನಿಯನ್ನು ತೀಡಿ ಟೇಂಕಾರಮಾಡುತ್ತಿರಲು ಸರ್ವ ಜಗತ್ತೂ ಭಯಗೊಂಡಿತು.

09021021a ಶಕುನಿಸ್ತು ರಣೇ ವೀರೋ ಯುಧಿಷ್ಠಿರಮಪೀಡಯತ್|

09021021c ತಸ್ಯಾಶ್ವಾಂಶ್ಚತುರೋ ಹತ್ವಾ ಸುಬಲಸ್ಯ ಸುತೋ ವಿಭುಃ||

09021021e ನಾದಂ ಚಕಾರ ಬಲವಾನ್ಸರ್ವಸೈನ್ಯಾನಿ ಕಂಪಯನ್||

ವೀರ ಶಕುನಿಯಾದರೋ ರಣದಲ್ಲಿ ಯುಧಿಷ್ಠಿರನನ್ನು ಪೀಡಿಸಿದನು. ಅವನ ನಾಲ್ಕು ಕುದುರೆಗಳನ್ನು ಸಂಹರಿಸಿ ಸುಬಲನ ಬಲವಾನ್ ಮಗ ವಿಭು ಶಕುನಿಯು ಸರ್ವಸೈನ್ಯಗಳನ್ನೂ ನಡುಗಿಸುವಂಥಹ ಸಿಂಹನಾದಗೈದನು.

09021022a ಏತಸ್ಮಿನ್ನಂತರೇ ವೀರಂ ರಾಜಾನಮಪರಾಜಿತಂ|

09021022c ಅಪೋವಾಹ ರಥೇನಾಜೌ ಸಹದೇವಃ ಪ್ರತಾಪವಾನ್||

ಅಷ್ಟರಲ್ಲಿಯೇ ಪ್ರತಾಪವಾನ್ ಸಹದೇವನು ಅಪರಾಜಿತ ವೀರ ರಾಜ ಯುಧಿಷ್ಠಿರನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಹೊರಟುಹೋದನು.

09021023a ಅಥಾನ್ಯಂ ರಥಮಾಸ್ಥಾಯ ಧರ್ಮರಾಜೋ ಯುಧಿಷ್ಠಿರಃ|

09021023c ಶಕುನಿಂ ನವಭಿರ್ವಿದ್ಧ್ವಾ ಪುನರ್ವಿವ್ಯಾಧ ಪಂಚಭಿಃ||

09021023e ನನಾದ ಚ ಮಹಾನಾದಂ ಪ್ರವರಃ ಸರ್ವಧನ್ವಿನಾಂ||

ಧರ್ಮರಾಜ ಯುಧಿಷ್ಠಿರನು ಕೂಡಲೇ ಇನ್ನೊಂದು ರಥವನ್ನೇರಿ ಶಕುನಿಯನ್ನು ಒಂಭತ್ತು ಶರಗಳಿಂದ ಹೊಡೆದು ಪುನಃ ಐದರಿಂದ ಪ್ರಹರಿಸಿದನು. ಆ ಸರ್ವಧನ್ವಿಶ್ರೇಷ್ಠನು ಜೋರಾಗಿ ಸಿಂಹನಾದವನ್ನೂ ಮಾಡಿದನು.

09021024a ತದ್ಯುದ್ಧಮಭವಚ್ಚಿತ್ರಂ ಘೋರರೂಪಂ ಚ ಮಾರಿಷ|

09021024c ಈಕ್ಷಿತೃಪ್ರೀತಿಜನನಂ ಸಿದ್ಧಚಾರಣಸೇವಿತಂ||

ಮಾರಿಷ! ಆ ಯುದ್ಧವು ವಿಚಿತ್ರವೂ, ಘೋರರೂಪವೂ, ಪ್ರೇಕ್ಷಕರಿಗೆ ಆನಂದದಾಯಕವೂ, ಸಿದ್ಧ-ಚಾರಣರ ಪ್ರಶಂಸೆಗೆ ಪಾತ್ರವೂ ಆಗಿತ್ತು.

09021025a ಉಲೂಕಸ್ತು ಮಹೇಷ್ವಾಸಂ ನಕುಲಂ ಯುದ್ಧದುರ್ಮದಂ|

09021025c ಅಭ್ಯದ್ರವದಮೇಯಾತ್ಮಾ ಶರವರ್ಷೈಃ ಸಮಂತತಃ||

ಅಮೇಯಾತ್ಮಾ ಉಲೂಕನಾದರೋ ಯುದ್ಧದುರ್ಮದ ಮಹೇಷ್ವಾಸ ನಕುಲನನ್ನು ಶರವರ್ಷಗಳನ್ನು ಸುರಿಸಿ ಎಲ್ಲಕಡೆಗಳಿಂದಲೂ ಆಕ್ರಮಣಿಸಿದನು.

09021026a ತಥೈವ ನಕುಲಃ ಶೂರಃ ಸೌಬಲಸ್ಯ ಸುತಂ ರಣೇ|

09021026c ಶರವರ್ಷೇಣ ಮಹತಾ ಸಮಂತಾತ್ಪರ್ಯವಾರಯತ್||

ಹಾಗೆಯೇ ಶೂರ ನಕುಲನೂ ಕೂಡ ರಣದಲ್ಲಿ ಸೌಬಲನ ಮಗನನ್ನು ಮಹಾ ಶರವರ್ಷದಿಂದ ಎಲ್ಲಕಡೆಗಳಿಂದ ಮುಚ್ಚಿಬಿಟ್ಟನು.

09021027a ತೌ ತತ್ರ ಸಮರೇ ವೀರೌ ಕುಲಪುತ್ರೌ ಮಹಾರಥೌ|

09021027c ಯೋಧಯಂತಾವಪಶ್ಯೇತಾಂ ಪರಸ್ಪರಕೃತಾಗಸೌ||

ಪರಸ್ಪರರನ್ನು ನಿರಸನಗೊಳಿಸಲು ತೊಡಗಿದ್ದ ಆ ವೀರ-ಸತ್ಕುಲಪ್ರಸೂತ-ಮಹಾರಥರಿಬ್ಬರೂ ಸಮರದಲ್ಲಿ ಯುದ್ಧಮಾಡುತ್ತಿರುವುದನ್ನು ನೋಡಿದೆವು.

09021028a ತಥೈವ ಕೃತವರ್ಮಾ ತು ಶೈನೇಯಂ ಶತ್ರುತಾಪನಂ|

09021028c ಯೋಧಯನ್ ಶುಶುಭೇ ರಾಜನ್ಬಲಂ ಶಕ್ರ ಇವಾಹವೇ||

ರಾಜನ್! ಹಾಗೆಯೇ ಕೃತವರ್ಮನು ಯುದ್ಧದಲ್ಲಿ ಶತ್ರುತಾಪನ ಶೈನೇಯನೊಡನೆ ಯುದ್ಧಮಾಡುತ್ತಿರಲು ಬಲನೊಂದಿಗೆ ಯುದ್ಧಮಾಡುತ್ತಿದ್ದ ಶಕ್ರನಂತೆ ರಣದಲ್ಲಿ ಶೋಭಿಸಿದನು.

09021029a ದುರ್ಯೋಧನೋ ಧನುಶ್ಚಿತ್ತ್ವಾ ಧೃಷ್ಟದ್ಯುಮ್ನಸ್ಯ ಸಂಯುಗೇ|

09021029c ಅಥೈನಂ ಚಿನ್ನಧನ್ವಾನಂ ವಿವ್ಯಾಧ ನಿಶಿತೈಃ ಶರೈಃ||

ಯುದ್ಧದಲ್ಲಿ ದುರ್ಯೋಧನನು ಧೃಷ್ಟದ್ಯುಮ್ನನ ಧನುಸ್ಸನ್ನು ತುಂಡರಿಸಿ, ಧನುಸ್ಸು ತುಂಡಾದ ಅವನನ್ನು ನಿಶಿತ ಶರಗಳಿಂದ ಪ್ರಹರಿಸಿದನು.

09021030a ಧೃಷ್ಟದ್ಯುಮ್ನೋಽಪಿ ಸಮರೇ ಪ್ರಗೃಹ್ಯ ಪರಮಾಯುಧಂ|

09021030c ರಾಜಾನಂ ಯೋಧಯಾಮಾಸ ಪಶ್ಯತಾಂ ಸರ್ವಧನ್ವಿನಾಂ||

ಧೃಷ್ಟದ್ಯುಮ್ನನಾದರೋ ಸಮರದಲ್ಲಿ ಪರಮಾಯುಧವನ್ನು ಹಿಡಿದು ಸರ್ವಧನ್ವಿಗಳೂ ನೋಡುತ್ತಿರಲು ರಾಜಾ ದುರ್ಯೋಧನನನೊಡನೆ ಯುದ್ಧಮಾಡತೊಡಗಿದನು.

09021031a ತಯೋರ್ಯುದ್ಧಂ ಮಹಚ್ಚಾಸೀತ್ಸಂಗ್ರಾಮೇ ಭರತರ್ಷಭ|

09021031c ಪ್ರಭಿನ್ನಯೋರ್ಯಥಾ ಸಕ್ತಂ ಮತ್ತಯೋರ್ವರಹಸ್ತಿನೋಃ||

ಭರತರ್ಷಭ! ಸಂಗ್ರಾಮದಲ್ಲಿ ಅವರಿಬ್ಬರ ಯುದ್ಧವು ಕುಂಭಸ್ಥಳವೊಡೆದು ಮದಿಸಿದ ಆನೆಗಳು ಸೆಣಸಾಡುವಂತೆ ಜೋರಾಗಿತ್ತು.

09021032a ಗೌತಮಸ್ತು ರಣೇ ಕ್ರುದ್ಧೋ ದ್ರೌಪದೇಯಾನ್ಮಹಾಬಲಾನ್|

09021032c ವಿವ್ಯಾಧ ಬಹುಭಿಃ ಶೂರಃ ಶರೈಃ ಸಂನತಪರ್ವಭಿಃ||

ರಣದಲ್ಲಿ ಕ್ರುದ್ಧನಾದ ಶೂರ ಗೌತಮನಾದರೋ ಮಹಾಬಲ ದ್ರೌಪದೇಯರನ್ನು ಅನೇಕ ಸನ್ನತಪರ್ವ ಶರಗಳಿಂದ ಪ್ರಹರಿಸಿದನು.

09021033a ತಸ್ಯ ತೈರಭವದ್ಯುದ್ಧಮಿಂದ್ರಿಯೈರಿವ ದೇಹಿನಃ|

09021033c ಘೋರರೂಪಮಸಂವಾರ್ಯಂ ನಿರ್ಮರ್ಯಾದಮತೀವ ಚ||

ದೇಹಧಾರಿ ಜೀವ ಮತ್ತು ಪಂಚೇಂದ್ರಿಯಗಳ ನಡುವೆ ನಡೆಯುವ ಸಂಘರ್ಷದಂತೆ ಅವರ ಯುದ್ಧವು ಘೋರರೂಪವೂ, ಅನಿವಾರ್ಯವೂ, ಯುದ್ಧಮರ್ಯಾದೆಯನ್ನು ಮೀರಿದ ಸಂಘರ್ಷವಾಗಿತ್ತು.

09021034a ತೇ ಚ ತಂ ಪೀಡಯಾಮಾಸುರಿಂದ್ರಿಯಾಣೀವ ಬಾಲಿಶಂ|

09021034c ಸ ಚ ತಾನ್ಪ್ರತಿಸಂರಬ್ಧಃ ಪ್ರತ್ಯಯೋಧಯದಾಹವೇ||

ಇಂದ್ರಿಯಗಳು ಬಾಲಿಶ ಮನುಷ್ಯನನ್ನು ಪೀಡಿಸುವಂತೆ ದ್ರೌಪದೇಯರು ಕೃಪರನ್ನು ಬಹಳವಾಗಿ ಪೀಡಿಸಲು, ಅವನು ಪರಮಕೃದ್ಧನಾಗಿ ಪ್ರತಿಪ್ರಹಾರಗಳೊಂದಿಗೆ ಯುದ್ಧಮಾಡಿದನು.

09021035a ಏವಂ ಚಿತ್ರಮಭೂದ್ಯುದ್ಧಂ ತಸ್ಯ ತೈಃ ಸಹ ಭಾರತ|

09021035c ಉತ್ಥಾಯೋತ್ಥಾಯ ಹಿ ಯಥಾ ದೇಹಿನಾಮಿಂದ್ರಿಯೈರ್ವಿಭೋ||

ಭಾರತ! ವಿಭೋ! ಬಾರಿಬಾರಿಗೂ ಉಲ್ಬಣಗೊಳ್ಳುವ ಇಂದಿರ್ಯಗಳಿಗೂ ಜೀವಾತ್ಮನಿಗೂ ಸಂಘರ್ಷಣೆಯಾಗುವಂತೆ ದ್ರೌಪದೇಯರೊಡನೆ ಕೃಪನ ಯುದ್ಧವು ವಿಚಿತ್ರವಾಗಿತ್ತು.

09021036a ನರಾಶ್ಚೈವ ನರೈಃ ಸಾರ್ಧಂ ದಂತಿನೋ ದಂತಿಭಿಸ್ತಥಾ|

09021036c ಹಯಾ ಹಯೈಃ ಸಮಾಸಕ್ತಾ ರಥಿನೋ ರಥಿಭಿಸ್ತಥಾ||

09021036e ಸಂಕುಲಂ ಚಾಭವದ್ಭೂಯೋ ಘೋರರೂಪಂ ವಿಶಾಂ ಪತೇ|

ವಿಶಾಂಪತೇ! ಪದಾತಿಗಳು ಪದಾತಿಗಳೊಡನೆ, ಆನೆಗಳು ಆನೆಗಳೊಡನೆ, ಕುದುರೆಗಳು ಕುದುರೆಗಳೊಡನೆ ಮತ್ತು ರಥಿಗಳು ರಥಿಗಳೊಡನೆ ಘೋರರೂಪದ  ಸಂಕುಲ ಯುದ್ಧವು ಪುನಃ ನಡೆಯಿತು.

09021037a ಇದಂ ಚಿತ್ರಮಿದಂ ಘೋರಮಿದಂ ರೌದ್ರಮಿತಿ ಪ್ರಭೋ||

09021037c ಯುದ್ಧಾನ್ಯಾಸನ್ಮಹಾರಾಜ ಘೋರಾಣಿ ಚ ಬಹೂನಿ ಚ|

ಪ್ರಭೋ! ಮಹಾರಾಜ! ಇಂತಹ ಅನೇಕ ವಿಚಿತ್ರ, ಘೋರ, ರೌದ್ರ ಯುದ್ಧಗಳು ಅಲ್ಲಿ ನಡೆದವು.

09021038a ತೇ ಸಮಾಸಾದ್ಯ ಸಮರೇ ಪರಸ್ಪರಮರಿಂದಮಾಃ||

09021038c ವಿವ್ಯಧುಶ್ಚೈವ ಜಘ್ನುಶ್ಚ ಸಮಾಸಾದ್ಯ ಮಹಾಹವೇ|

ಸಮರದಲ್ಲಿ ಪರಸ್ಪರರನ್ನು ಎದುರಿಸಿ ಆ ಅರಿಂದಮರು ಮಹಾರಣದಲ್ಲಿ ಸಿಂಹನಾದಗೈಯುತ್ತಿದ್ದರು ಮತ್ತು ಸಂಹರಿಸುತ್ತಿದ್ದರು.

09021039a ತೇಷಾಂ ಶಸ್ತ್ರಸಮುದ್ಭೂತಂ ರಜಸ್ತೀವ್ರಮದೃಶ್ಯತ||

09021039c ಪ್ರವಾತೇನೋದ್ಧತಂ ರಾಜನ್ಧಾವದ್ಭಿಶ್ಚಾಶ್ವಸಾದಿಭಿಃ|

ರಾಜನ್! ಶಸ್ತ್ರಗಳಿಂದುಂಟಾದ, ಓಡುತ್ತಿದ್ದ ಕುದುರೆ-ಪದಾತಿಗಳಿಂದುಂಟಾದ ಧೂಳು ಗಾಳಿಯಿಂದ ತೀವ್ರವಾಗಿ ಮೇಲೆದ್ದು ಪಸರಿಸಿದುದು ಕಂಡುಬಂದಿತು.

09021040a ರಥನೇಮಿಸಮುದ್ಭೂತಂ ನಿಃಶ್ವಾಸೈಶ್ಚಾಪಿ ದಂತಿನಾಂ||

09021040c ರಜಃ ಸಂಧ್ಯಾಭ್ರಕಪಿಲಂ ದಿವಾಕರಪಥಂ ಯಯೌ|

ರಥಚಕ್ರಗಳಿಂದ ಮತ್ತು ಆನೆಗಳ ನಿಃಶ್ವಾಸಗಳಿಂದ ಮೇಲೆದ್ದ ಧೂಳು ಸಂಧ್ಯಾಕಾಲದ ಮೋಡದಂತೆ ಸೂರ್ಯನ ಪಥದಲ್ಲಿ ಹೋಗುತ್ತಿತ್ತು.

09021041a ರಜಸಾ ತೇನ ಸಂಪೃಕ್ತೇ ಭಾಸ್ಕರೇ ನಿಷ್ಪ್ರಭೀಕೃತೇ||

09021041c ಸಂಚಾದಿತಾಭವದ್ಭೂಮಿಸ್ತೇ ಚ ಶೂರಾ ಮಹಾರಥಾಃ|

ಆ ಧೂಳಿನಿಂದಾಗಿ ಬಾಸ್ಕರನು ಕಾಂತಿಹೀನನಾದನು. ರಣದಲ್ಲಿ ಮಹಾರಥ ಶೂರರು ಧೂಳಿನಲ್ಲಿ ಮುಚ್ಚಿಹೋದರು.

09021042a ಮುಹೂರ್ತಾದಿವ ಸಂವೃತ್ತಂ ನೀರಜಸ್ಕಂ ಸಮಂತತಃ||

09021042c ವೀರಶೋಣಿತಸಿಕ್ತಾಯಾಂ ಭೂಮೌ ಭರತಸತ್ತಮ|

09021042e ಉಪಾಶಾಮ್ಯತ್ತತಸ್ತೀವ್ರಂ ತದ್ರಜೋ ಘೋರದರ್ಶನಂ||

ಧೂಳು ಸ್ವಲ್ಪಕಾಲ ಮಾತ್ರವೇ ಇತ್ತು. ಭಾರತ! ಭೂಮಿಯು ವೀರಯೋಧರ ರಕ್ತದಿಂದ ತೋಯ್ದುಹೋಗಿ ಘೋರವಾಗಿ ಕಾಣುತ್ತಿದ್ದ ಆ ತೀವ್ರ ಧೂಳು ಉಪಶಮನಹೊಂದಿತು.

09021043a ತತೋಽಪಶ್ಯಂ ಮಹಾರಾಜ ದ್ವಂದ್ವಯುದ್ಧಾನಿ ಭಾರತ|

09021043c ಯಥಾಪ್ರಾಗ್ರ್ಯಂ ಯಥಾಜ್ಯೇಷ್ಠಂ ಮಧ್ಯಾಹ್ನೇ ವೈ ಸುದಾರುಣೇ||

09021043e ವರ್ಮಣಾಂ ತತ್ರ ರಾಜೇಂದ್ರ ವ್ಯದೃಶ್ಯಂತೋಜ್ಜ್ವಲಾಃ ಪ್ರಭಾಃ||

ಮಹಾರಾಜ! ಭಾರತ! ಮಧ್ಯಾಹ್ನದ ಆ ಸಮಯದಲ್ಲಿ ನಾವು ಬಲ ಮತ್ತು ಶ್ರೇಷ್ಠತೆಗಳಿಗನುಗುಣವಾಗಿ ದ್ವಂದ್ವಯುದ್ಧಗಳು ನಡೆದುದನ್ನು ನೋಡಿದೆವು. ರಾಜೇಂದ್ರ! ಯೋಧರ ಕವಚಗಳ ಉಜ್ವಲ ಪ್ರಭೆಯು ಎಲ್ಲೆಡೆ ತೋರಿಬರುತ್ತಿತ್ತು.

09021044a ಶಬ್ದಃ ಸುತುಮುಲಃ ಸಂಖ್ಯೇ ಶರಾಣಾಂ ಪತತಾಮಭೂತ್|

09021044c ಮಹಾವೇಣುವನಸ್ಯೇವ ದಹ್ಯಮಾನಸ್ಯ ಸರ್ವತಃ||

ಬಿದುರಿನ ಮಹಾವನವು ಸುಡುವಾಗ ಉಂಟಾಗುವ ಶಬ್ಧದಂತೆ ಆ ತುಮುಲ ಯುದ್ಧದಲ್ಲಿ ಶರಗಳು ಬೀಳುವ ಶಬ್ಧವು ಎಲ್ಲಕಡೆಗಳಲ್ಲಿ ಕೇಳಿ ಬರುತ್ತಿತ್ತು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ಸಂಕುಲಯುದ್ಧೇ ಏಕವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ಸಂಕುಲಯುದ್ಧ ಎನ್ನುವ ಇಪ್ಪತ್ತೊಂದನೇ ಅಧ್ಯಾಯವು.

Comments are closed.