Shalya Parva: Chapter 19

ಶಲ್ಯಪರ್ವ: ಹ್ರದಪ್ರವೇಶಪರ್ವ

೧೯

ಮ್ಲೇಚ್ಛ ಗಣಾಧಿಪ ಶಾಲ್ವನ ಯುದ್ಧ (೧-೧೦). ಧೃಷ್ಟದ್ಯುಮ್ನನು ಶಾಲ್ವನ ಆನೆಯನ್ನು ಸಂಹರಿಸಿದುದು (೧೧-೨೪). ಸಾತ್ಯಕಿಯಿಂದ ಶಾಲ್ವನ ವಧೆ (೨೫-೨೬).

09019001 ಸಂಜಯ ಉವಾಚ

09019001a ಸಂನಿವೃತ್ತೇ ಬಲೌಘೇ ತು ಶಾಲ್ವೋ ಮ್ಲೇಚ್ಚಗಣಾಧಿಪಃ|

09019001c ಅಭ್ಯವರ್ತತ ಸಂಕ್ರುದ್ಧಃ ಪಾಂಡೂನಾಂ ಸುಮಹದ್ಬಲಂ||

09019002a ಆಸ್ಥಾಯ ಸುಮಹಾನಾಗಂ ಪ್ರಭಿನ್ನಂ ಪರ್ವತೋಪಮಂ|

09019002c ದೃಪ್ತಮೈರಾವತಪ್ರಖ್ಯಮಮಿತ್ರಗಣಮರ್ದನಂ||

ಸಂಜಯನು ಹೇಳಿದನು: “ಸೇನೆಗಳು ಹಿಂದಿರುಗಲು ಮ್ಲೇಚ್ಛಗಣಾಧಿಪ ಶಾಲ್ವನು ಸಂಕ್ರುದ್ಧನಾಗಿ ಮದೋದಕವನ್ನು ಸುರಿಸುತ್ತಿದ್ದ ಪರ್ವತೋಪಮ ಐರಾವತ ಸಮಾನ ಅಮಿತ್ರಗಣಗಳನ್ನು ಮರ್ದಿಸುವ ಅತಿದೊಡ್ಡ ಆನೆಯನ್ನೇರಿ ಪಾಂಡವರ ಮಹಾಬಲವನ್ನು ಆಕ್ರಮಣಿಸಿದನು.

09019003a ಯೋಽಸೌ ಮಹಾಭದ್ರಕುಲಪ್ರಸೂತಃ

         ಸುಪೂಜಿತೋ ಧಾರ್ತರಾಷ್ಟ್ರೇಣ ನಿತ್ಯಂ|

09019003c ಸುಕಲ್ಪಿತಃ ಶಾಸ್ತ್ರವಿನಿಶ್ಚಯಜ್ಞೈಃ

         ಸದೋಪವಾಹ್ಯಃ ಸಮರೇಷು ರಾಜನ್||

ರಾಜನ್! ಆ ಆನೆಯು ಮಹಾಭದ್ರಕುಲದಲ್ಲಿ ಹುಟ್ಟಿತ್ತು ಮತ್ತು ಧಾರ್ತರಾಷ್ಟ್ರರಿಂದ ನಿತ್ಯವೂ ಪೂಜಿಸಲ್ಪಟ್ಟಿತ್ತು. ಶಾಸ್ತ್ರವಿನಿಶ್ಚಯಗಳನ್ನು ತಿಳಿದು ಚೆನ್ನಾಗಿ ಸಿದ್ಧಪಡಿಸಿದ್ದ ಆ ಆನೆಯನ್ನು ಏರಿ ಶಾಲ್ವನು ಸಮರಕ್ಕೆ ಬಂದಿದ್ದನು.

09019004a ತಮಾಸ್ಥಿತೋ ರಾಜವರೋ ಬಭೂವ

         ಯಥೋದಯಸ್ಥಃ ಸವಿತಾ ಕ್ಷಪಾಂತೇ|

09019004c ಸ ತೇನ ನಾಗಪ್ರವರೇಣ ರಾಜನ್

         ಅಭ್ಯುದ್ಯಯೌ ಪಾಂಡುಸುತಾನ್ ಸಮಂತಾತ್||

ರಾಜನ್! ಅದರ ಮೇಲೇರಿ ಕುಳಿತಿದ್ದ ರಾಜವರನು ರಾತ್ರಿಯು ಕಳೆದ ಉದಯಕಾಲದ ರವಿಯಂತೆ ಪ್ರಕಾಶಿಸುತ್ತಿದ್ದನು. ಆ ಗಜಪ್ರವರದ ಮೇಲೇರಿ ಅವನು ಒಟ್ಟಾಗಿದ್ದ ಪಾಂಡುಸುತರನ್ನು ಆಕ್ರಮಣಿಸಿದನು.

09019004e ಶಿತೈಃ ಪೃಷತ್ಕೈರ್ವಿದದಾರ ಚಾಪಿ

         ಮಹೇಂದ್ರವಜ್ರಪ್ರತಿಮೈಃ ಸುಘೋರೈಃ

09019005a ತತಃ ಶರಾನ್ವೈ ಸೃಜತೋ ಮಹಾರಣೇ

         ಯೋಧಾಂಶ್ಚ ರಾಜನ್ನಯತೋ ಯಮಾಯ|

09019005c ನಾಸ್ಯಾಂತರಂ ದದೃಶುಃ ಸ್ವೇ ಪರೇ ವಾ

         ಯಥಾ ಪುರಾ ವಜ್ರಧರಸ್ಯ ದೈತ್ಯಾಃ||

ಮಹೇಂದ್ರನ ವಜ್ರಸಮ ಘೋರ ನಿಶಿತ ಪೃಷತ್ಕಗಳಿಂದ ಅವನು ಪಾಂಡವ ಸೇನೆಯನ್ನು ಸೀಳತೊಡಗಿದನು. ರಾಜನ್! ಮಹಾರಣದಲ್ಲಿ ಶರಗಳನ್ನು ಪ್ರಯೋಗಿಸಿ ಹಿಂದೆ ವಜ್ರಧರನು ದೈತ್ಯರನ್ನು ಹೇಗೋ ಹಾಗೆ ಪಾಂಡವ ಯೋಧರನ್ನು ಯಮನಲ್ಲಿಗೆ ಕಳುಹಿಸುತ್ತಿರುವಾಗ ನಮ್ಮವರಾಗಲೀ ಶತ್ರುಗಳಾಗಲೀ ಇಂದ್ರನಿಗೂ ಮತ್ತು ಅವನಿಗೂ ಯಾವ ವ್ಯತ್ಯಾಸವನ್ನೂ ಕಾಣಲಿಲ್ಲ.

09019006a ತೇ ಪಾಂಡವಾಃ ಸೋಮಕಾಃ ಸೃಂಜಯಾಶ್ಚ

         ತಮೇವ ನಾಗಂ ದದೃಶುಃ ಸಮಂತಾತ್|

09019006c ಸಹಸ್ರಶೋ ವೈ ವಿಚರಂತಮೇಕಂ

         ಯಥಾ ಮಹೇಂದ್ರಸ್ಯ ಗಜಂ ಸಮೀಪೇ||

ಸಮೀಪದಲ್ಲಿ ಮಹೇಂದ್ರನ ಆನೆಯಿದೆಯೋ ಎನ್ನುವಂತೆ ಪಾಂಡವ-ಸೋಮಕ-ಸೃಂಜಯರಿಗೆ ಆ ಆನೆಯು ಒಂದೇ ಆಗಿದ್ದರೂ ಸುತ್ತಲೂ ಸಹಸ್ರಾರು ಆನೆಗಳು ಸಂಚರಿಸುತ್ತಿರುವಂತೆ ತೋರುತ್ತಿತ್ತು.

09019007a ಸಂದ್ರಾವ್ಯಮಾಣಂ ತು ಬಲಂ ಪರೇಷಾಂ

         ಪರೀತಕಲ್ಪಂ ವಿಬಭೌ ಸಮಂತಾತ್|

09019007c ನೈವಾವತಸ್ಥೇ ಸಮರೇ ಭೃಶಂ ಭಯಾದ್

         ವಿಮರ್ದಮಾನಂ ತು ಪರಸ್ಪರಂ ತದಾ||

ಓಡಿಹೋಗುತ್ತಿದ್ದ ಶತ್ರು ಸೇನೆಯನ್ನು ಅದು ಎಲ್ಲಕಡೆಗಳಿಂದಲೂ ಬೆನ್ನಟ್ಟಿಹೋಗುತ್ತಿರುವಂತೆ ತೋರುತ್ತಿತ್ತು. ಅತ್ಯಂತ ಭಯದಿಂದಾಗಿ ಸಮರದಲ್ಲಿ ನಿಲ್ಲಲಾರದೇ ಓಡಿಹೋಗುತ್ತಿದ್ದ ಅವರು ಪರಸ್ಪರರನ್ನೇ ತುಳಿದು ಗಾಯಗೊಳಿಸುತ್ತಿದ್ದರು.

09019008a ತತಃ ಪ್ರಭಗ್ನಾ ಸಹಸಾ ಮಹಾಚಮೂಃ

         ಸಾ ಪಾಂಡವೀ ತೇನ ನರಾಧಿಪೇನ|

09019008c ದಿಶಶ್ಚತಸ್ರಃ ಸಹಸಾ ಪ್ರಧಾವಿತಾ

         ಗಜೇಂದ್ರವೇಗಂ ತಮಪಾರಯಂತೀ||

ಆ ನರಾಧಿಪನಿಂದ ಪಾಂಡವರ ಮಹಾಸೇನೆಯು ಒಮ್ಮೆಲೇ ಭಗ್ನಗೊಂಡಿತು. ಆನೆಯ ವೇಗವನ್ನು ತಡೆದುಕೊಳ್ಳಲಾಗದೇ ಅವರ ಸೇನೆಯು ನಾಲ್ಕು ದಿಕ್ಕುಗಳಿಗೂ ಪಲಾಯನಗೈದಿತು.

09019009a ದೃಷ್ಟ್ವಾ ಚ ತಾಂ ವೇಗವತಾ ಪ್ರಭಗ್ನಾಂ

         ಸರ್ವೇ ತ್ವದೀಯಾ ಯುಧಿ ಯೋಧಮುಖ್ಯಾಃ|

09019009c ಅಪೂಜಯಂಸ್ತತ್ರ ನರಾಧಿಪಂ ತಂ

         ದಧ್ಮುಶ್ಚ ಶಂಖಾನ್ ಶಶಿಸಂನಿಕಾಶಾನ್||

ವೇಗವತ್ತಾಗಿದ್ದ ಅವರ ಸೇನೆಯು ಭಗ್ನವಾದುದನ್ನು ನೋಡಿ ಯುದ್ಧದಲ್ಲಿ ನಿನ್ನ ಯೋಧಮುಖ್ಯರೆಲ್ಲರೂ ಶಾಲ್ವನನ್ನು ಗೌರವಿಸಿ, ಚಂದ್ರಸಮಾನ ಶಂಖಗಳನ್ನು ಊದಿದರು.

09019010a ಶ್ರುತ್ವಾ ನಿನಾದಂ ತ್ವಥ ಕೌರವಾಣಾಂ

         ಹರ್ಷಾದ್ವಿಮುಕ್ತಂ ಸಹ ಶಂಖಶಬ್ದೈಃ|

09019010c ಸೇನಾಪತಿಃ ಪಾಂಡವಸೃಂಜಯಾನಾಂ

         ಪಾಂಚಾಲಪುತ್ರೋ ನ ಮಮರ್ಷ ರೋಷಾತ್||

ಶಂಖಶಬ್ಧಗಳೊಂದಿಗೆ ಹರ್ಷದಿಂದ ಹೊರಟ ಕೌರವರ ಆ ನಿನಾದವನ್ನು ಪಾಂಡವ-ಸೃಂಜಯರ ಸೇನಾಪತಿ ಪಾಂಚಾಲಪುತ್ರನು ರೋಷದಿಂದ ಸಹಿಸಿಕೊಳ್ಳಲಿಲ್ಲ.

09019011a ತತಸ್ತು ತಂ ವೈ ದ್ವಿರದಂ ಮಹಾತ್ಮಾ

         ಪ್ರತ್ಯುದ್ಯಯೌ ತ್ವರಮಾಣೋ ಜಯಾಯ|

09019011c ಜಂಭೋ ಯಥಾ ಶಕ್ರಸಮಾಗಮೇ ವೈ

         ನಾಗೇಂದ್ರಮೈರಾವಣಮಿಂದ್ರವಾಹ್ಯಂ||

ಇಂದ್ರನೊಡನೆ ಯುದ್ಧಮಾಡುವಾಗ ಇಂದ್ರನ ವಾಹನ ಗಜೇಂದ್ರ ಐರಾವತನನ್ನು ಜಂಭಾಸುರನು ಎದುರಿಸಿದಂತೆ ಮಹಾತ್ಮ ಧೃಷ್ಟದ್ಯುಮ್ನನು ವಿಜಯಕ್ಕಾಗಿ ತ್ವರೆಮಾಡಿ ಆ ಆನೆಯನ್ನು ಎದುರಿಸಿ ಯುದ್ಧಮಾಡಿದನು.

09019012a ತಮಾಪತಂತಂ ಸಹಸಾ ತು ದೃಷ್ಟ್ವಾ

         ಪಾಂಚಾಲರಾಜಂ ಯುಧಿ ರಾಜಸಿಂಹಃ|

09019012c ತಂ ವೈ ದ್ವಿಪಂ ಪ್ರೇಷಯಾಮಾಸ ತೂರ್ಣಂ

         ವಧಾಯ ರಾಜನ್ದ್ರುಪದಾತ್ಮಜಸ್ಯ||

ರಾಜನ್! ಯುದ್ಧದಲ್ಲಿ ಒಮ್ಮೆಲೇ ತನ್ನ ಮೇಲೆ ಬೀಳುತ್ತಿದ್ದ ಪಾಂಚಾಲರಾಜನನ್ನು ನೋಡಿ ರಾಜಸಿಂಹ ಶಾಲ್ವನು ದ್ರುಪದಾತ್ಮಜನ ವಧೆಗಾಗಿ ಬೇಗನೇ ತನ್ನ ಆನೆಯನ್ನು ನುಗ್ಗಿಸಿದನು.

09019013a ಸ ತಂ ದ್ವಿಪಂ ಸಹಸಾಭ್ಯಾಪತಂತಂ

         ಅವಿಧ್ಯದರ್ಕಪ್ರತಿಮೈಃ ಪೃಷತ್ಕೈಃ|

09019013c ಕರ್ಮಾರಧೌತೈರ್ನಿಶಿತೈರ್ಜ್ವಲದ್ಭಿರ್

         ನಾರಾಚಮುಖ್ಯೈಸ್ತ್ರಿಭಿರುಗ್ರವೇಗೈಃ||

ವೇಗದಿಂದ ಬೀಳುತ್ತಿದ್ದ ಆ ಆನೆಯನ್ನು ಧೃಷ್ಟದ್ಯುಮ್ನನು ಸೂರ್ಯನ ತೇಜಸ್ಸಿನಿಂದ ಪ್ರಜ್ವಲಿಸುತ್ತಿದ್ದ, ಕಮ್ಮಾರನಿಂದ ಹದಮಾಡಿಸಲ್ಪಟ್ಟ ನಿಶಿತ ಉಗ್ರವೇಗದ ಮೂರು ನಾರಾಚಮುಖ್ಯ ಪೃಷತ್ಕಗಳಿಂದ ಗಾಯಗೊಳಿಸಿದನು.

09019014a ತತೋಽಪರಾನ್ಪಂಚ ಶಿತಾನ್ಮಹಾತ್ಮಾ

         ನಾರಾಚಮುಖ್ಯಾನ್ವಿಸಸರ್ಜ ಕುಂಭೇ|

09019014c ಸ ತೈಸ್ತು ವಿದ್ಧಃ ಪರಮದ್ವಿಪೋ ರಣೇ

         ತದಾ ಪರಾವೃತ್ಯ ಭೃಶಂ ಪ್ರದುದ್ರುವೇ||

ಆ ಮಹಾತ್ಮನು ಪುನಃ ಐದು ನಿಶಿತ ನಾರಾಚಮುಖ್ಯಗಳನ್ನು ಅವನ ಕುಂಭಸ್ಥಳಕ್ಕೆ ಹೊಡೆಯಲು ಅತಿಯಾಗಿ ಗಾಯಗೊಂಡ ಆ ಶ್ರೇಷ್ಠಗಜವು ಯುದ್ಧದಿಂದ ಹಿಮ್ಮೆಟ್ಟಿ ಓಡಿಹೋಯಿತು.

09019015a ತಂ ನಾಗರಾಜಂ ಸಹಸಾ ಪ್ರಣುನ್ನಂ

         ವಿದ್ರಾವ್ಯಮಾಣಂ ಚ ನಿಗೃಹ್ಯ ಶಾಲ್ವಃ|

09019015c ತೋತ್ತ್ರಾಂಕುಶೈಃ ಪ್ರೇಷಯಾಮಾಸ ತೂರ್ಣಂ

         ಪಾಂಚಾಲರಾಜಸ್ಯ ರಥಂ ಪ್ರದಿಶ್ಯ||

ಒಮ್ಮೆಲೇ ಗಾಯಗೊಂಡು ಓಡುಹೋಗುತ್ತಿದ್ದ ಆ ಗಜರಾಜನನ್ನು ನೋಡಿ ಶಾಲ್ವನು ಚಾವಟಿ-ಅಂಕುಶಗಳಿಂದ ಬೇಗನೇ ಅದನ್ನು ತಿರುಗಿಸಿ ಪಾಂಚಾಲರಾಜನ ರಥದ ಕಡೆ ನುಗ್ಗಿಸಿದನು.

09019016a ದೃಷ್ಟ್ವಾಪತಂತಂ ಸಹಸಾ ತು ನಾಗಂ

         ಧೃಷ್ಟದ್ಯುಮ್ನಃ ಸ್ವರಥಾಚ್ಚೀಘ್ರಮೇವ|

09019016c ಗದಾಂ ಪ್ರಗೃಹ್ಯಾಶು ಜವೇನ ವೀರೋ

         ಭೂಮಿಂ ಪ್ರಪನ್ನೋ ಭಯವಿಹ್ವಲಾಂಗಃ||

ವೇಗದಿಂದ ಮೇಲೆರಗಿ ಬರುತ್ತಿದ್ದ ಆ ಆನೆಯನ್ನು ಕಂಡು ಭಯದಿಂದ ಅಂಗಾಂಗಗಳು ನಡುಗುತ್ತಿರಲು ವೀರ ಧೃಷ್ಟದ್ಯುಮ್ನನು ಶೀಘ್ರದಲ್ಲಿಯೇ ಗದೆಯನ್ನೆತ್ತಿಕೊಂಡು ತನ್ನ ರಥದಿಂದ ವೇಗವಾಗಿ ಧುಮುಕಿ ಭೂಮಿಯ ಆಶ್ರಯವನ್ನು ಪಡೆದನು.

09019017a ಸ ತಂ ರಥಂ ಹೇಮವಿಭೂಷಿತಾಂಗಂ

         ಸಾಶ್ವಂ ಸಸೂತಂ ಸಹಸಾ ವಿಮೃದ್ಯ|

09019017c ಉತ್ಕ್ಷಿಪ್ಯ ಹಸ್ತೇನ ತದಾ ಮಹಾದ್ವಿಪೋ

         ವಿಪೋಥಯಾಮಾಸ ವಸುಂಧರಾತಲೇ||

ಮಹಾ ಆನೆಯು ಕೂಡಲೇ ಆ ಹೇಮವಿಭೂಷಿತ ರಥವನ್ನು ಸಾರಥಿ-ಕುದುರೆಗಳೊಂದಿಗೆ ಸೊಂಡಿಲಿನಿಂದ ಮೇಲೆತ್ತಿ ಗರ್ಜಿಸಿ ಭೂಮಿಯ ಮೇಲೆ ಅಪ್ಪಳಿಸಿತು.

09019018a ಪಾಂಚಾಲರಾಜಸ್ಯ ಸುತಂ ಸ ದೃಷ್ಟ್ವಾ

         ತದಾರ್ದಿತಂ ನಾಗವರೇಣ ತೇನ|

09019018c ತಮಭ್ಯಧಾವತ್ಸಹಸಾ ಜವೇನ

         ಭೀಮಃ ಶಿಖಂಡೀ ಚ ಶಿನೇಶ್ಚ ನಪ್ತಾ||

ಪಾಂಚಾಲರಾಜನ ಮಗನು ಹಾಗೆ ಆ ಶ್ರೇಷ್ಠ ಆನೆಯಿಂದ ಪೀಡಿತನಾದುದನ್ನು ಕಂಡು ಕೂಡಲೇ ಅಲ್ಲಿಗೆ ವೇಗದಿಂದ ಭೀಮ-ಶಿಖಂಡಿ-ಸಾತ್ಯಕಿಯರು ಆಗಮಿಸಿದರು.

09019019a ಶರೈಶ್ಚ ವೇಗಂ ಸಹಸಾ ನಿಗೃಹ್ಯ

         ತಸ್ಯಾಭಿತೋಽಭ್ಯಾಪತತೋ ಗಜಸ್ಯ|

09019019c ಸ ಸಂಗೃಹೀತೋ ರಥಿಭಿರ್ಗಜೋ ವೈ

         ಚಚಾಲ ತೈರ್ವಾರ್ಯಮಾಣಶ್ಚ ಸಂಖ್ಯೇ||

ಎಲ್ಲ ಕಡೆಗಳಿಂದಲೂ ಆಕ್ರಮಣಿಸುತ್ತಿದ್ದ ಅದನ್ನು ಶರವೇಗಗಳಿಂದ ಅವರು ನಿಯಂತ್ರಿಸಿದರು. ರಥಿಗಳಿಂದ ಹಾಗೆ ಸುತ್ತುವರೆಯಲ್ಪಟ್ಟ ಆನೆಯು ರಣದಲ್ಲಿ ಮುಂದೇನುಮಾಡಬೇಕೆಂದು ತಿಳಿಯದೇ ನಡುಗತೊಡಗಿತು.

09019020a ತತಃ ಪೃಷತ್ಕಾನ್ಪ್ರವವರ್ಷ ರಾಜಾ

         ಸೂರ್ಯೋ ಯಥಾ ರಶ್ಮಿಜಾಲಂ ಸಮಂತಾತ್|

09019020c ತೇನಾಶುಗೈರ್ವಧ್ಯಮಾನಾ ರಥೌಘಾಃ

         ಪ್ರದುದ್ರುವುಸ್ತತ್ರ ತತಸ್ತು ಸರ್ವೇ||

ಆಗ ರಾಜಾ ಶಾಲ್ವನು ಸೂರ್ಯನು ರಶ್ಮಿಜಾಲಗಳನ್ನು ಎಲ್ಲದಿಕ್ಕುಗಳನ್ನೂ ಪ್ರಸರಿಸುವಂತೆ ಎಲ್ಲಕಡೆ ಪೃಷತ್ಕಗಳನ್ನು ಸುರಿಸಿದನು. ಆ ಆಶುಗಗಳಿಂದ ವಧಿಸಲ್ಪಡುತ್ತಿದ್ದ ಪಾಂಡವರ ರಥಗುಂಪುಗಳು ಎಲ್ಲವೂ ಅಲ್ಲಲ್ಲಿ ಓಡ ತೊಡಗಿದವು.

09019021a ತತ್ಕರ್ಮ ಶಾಲ್ವಸ್ಯ ಸಮೀಕ್ಷ್ಯ ಸರ್ವೇ

         ಪಾಂಚಾಲಮತ್ಸ್ಯಾ ನೃಪ ಸೃಂಜಯಾಶ್ಚ|

09019021c ಹಾಹಾಕಾರೈರ್ನಾದಯಂತಃ ಸ್ಮ ಯುದ್ಧೇ

         ದ್ವಿಪಂ ಸಮಂತಾದ್ರುರುಧುರ್ನರಾಗ್ರ್ಯಾಃ||

ನೃಪ! ಶಾಲ್ವನ ಆ ಕೃತ್ಯವನ್ನು ನೋಡಿ ಪಾಂಚಾಲ-ಮತ್ಸ್ಯ-ಸೃಂಜಯರು ಹಾಹಾಕಾರ ಮಾಡಿದರು. ಅವರು ಧನುಸ್ಸಿನ ತುದಿಗಳಿಂದ ಆನೆಯನ್ನು ಎಲ್ಲಕಡೆಗಳಿಂದ ತಿವಿದು ಯುದ್ಧಮಾಡತೊಡಗಿದರು.

09019022a ಪಾಂಚಾಲರಾಜಸ್ತ್ವರಿತಸ್ತು ಶೂರೋ

         ಗದಾಂ ಪ್ರಗೃಹ್ಯಾಚಲಶೃಂಗಕಲ್ಪಾಂ|

09019022c ಅಸಂಭ್ರಮಂ ಭಾರತ ಶತ್ರುಘಾತೀ

         ಜವೇನ ವೀರೋಽನುಸಸಾರ ನಾಗಂ||

ಆಗ ವೀರ ಶೂರ ಶತ್ರುಘಾತೀ ಪಾಂಚಾಲರಾಜನು ತ್ವರೆಮಾಡಿ ಗಿರಿಶೃಂಗದಂತಿದ್ದ ಗದೆಯನ್ನು ಹಿಡಿದು ಸ್ವಲ್ಪವೂ ಗಾಬರಿಗೊಳ್ಳದೇ ವೇಗದಿಂದ ಆ ಆನೆಯನ್ನು ಅನುಸರಿಸಿದನು.

09019023a ತತೋಽಥ ನಾಗಂ ಧರಣೀಧರಾಭಂ

         ಮದಂ ಸ್ರವಂತಂ ಜಲದಪ್ರಕಾಶಂ|

09019023c ಗದಾಂ ಸಮಾವಿಧ್ಯ ಭೃಶಂ ಜಘಾನ

         ಪಾಂಚಾಲರಾಜಸ್ಯ ಸುತಸ್ತರಸ್ವೀ||

ತರಸ್ವೀ ಪಾಂಚಾಲರಾಜಕುಮಾರನು ಕೂಡಲೇ ಗದೆಯನ್ನೆತ್ತಿ ಭೂಮಿಯನ್ನು ಹೊತ್ತ ದಿಗ್ಗಜದಂತಿದ್ದ, ಮೋಡದಂತೆ ಹೊಳೆಯುತ್ತಿದ್ದ, ಮದೋದಕವನ್ನು ಸುರಿಸುತ್ತಿದ್ದ ಆ ಆನೆಯನ್ನು ಜೋರಾಗಿ ಹೊಡೆದನು.

09019024a ಸ ಭಿನ್ನಕುಂಭಃ ಸಹಸಾ ವಿನದ್ಯ

         ಮುಖಾತ್ ಪ್ರಭೂತಂ ಕ್ಷತಜಂ ವಿಮುಂಚನ್|

09019024c ಪಪಾತ ನಾಗೋ ಧರಣೀಧರಾಭಃ

         ಕ್ಷಿತಿಪ್ರಕಂಪಾಚ್ಚಲಿತೋ ಯಥಾದ್ರಿಃ||

ಪರ್ವತೋಪಮ ಆ ಆನೆಯು ಕೂಡಲೇ ಕುಂಭವು ಒಡೆದು ಮುಖದಿಂದ ಹೇರಳ ರಕ್ತವನ್ನು ಕಕ್ಕುತ್ತಾ ಗಟ್ಟಿಯಾಗಿ ಚೀತ್ಕಾರ ಮಾಡಿ, ಭೂಕಂಪದಿಂದ ಕೆಳಗುರುಳಿಸಲ್ಪಟ್ಟ ಗಿರಿಯಂತೆ ಭೂಮಿಯ ಮೇಲೆ ಬಿದ್ದಿತು.

09019025a ನಿಪಾತ್ಯಮಾನೇ ತು ತದಾ ಗಜೇಂದ್ರೇ

         ಹಾಹಾಕೃತೇ ತವ ಪುತ್ರಸ್ಯ ಸೈನ್ಯೇ|

09019025c ಸ ಶಾಲ್ವರಾಜಸ್ಯ ಶಿನಿಪ್ರವೀರೋ

         ಜಹಾರ ಭಲ್ಲೇನ ಶಿರಃ ಶಿತೇನ||

ಆ ಗಜೇಂದ್ರವು ಹಾಗೆ ಕೆಳಗುರುಳಲು ನಿನ್ನ ಮಗನ ಸೇನೆಯು ಹಾಹಾಕಾರಮಾಡುತ್ತಿರುವಾಗ ಶಿನಿಪ್ರವೀರ ಸಾತ್ಯಕಿಯು ನಿಶಿತ ಭಲ್ಲದಿಂದ ಶಾಲ್ವರಾಜನ ಶಿರಸ್ಸನ್ನು ತುಂಡರಿಸಿದನು.

09019026a ಹೃತೋತ್ತಮಾಂಗೋ ಯುಧಿ ಸಾತ್ವತೇನ

         ಪಪಾತ ಭೂಮೌ ಸಹ ನಾಗರಾಜ್ಞಾ|

09019026c ಯಥಾದ್ರಿಶೃಂಗಂ ಸುಮಹತ್ ಪ್ರಣುನ್ನಂ

         ವಜ್ರೇಣ ದೇವಾಧಿಪಚೋದಿತೇನ||

ದೇವಾಧಿಪನು ಪ್ರಚೋದಿಸಿದ ವಜ್ರದಿಂದ ಮಹಾ ಗಿರಿಶೃಂಗವು ಚೂರಾದಂತೆ ಯುದ್ಧದಲ್ಲಿ ಸಾತ್ವತನು ಶಿರವನ್ನು ಕತ್ತರಿಸಲು ಶಾಲ್ವನು ಗಜರಾಜನ ಸಹಿತ ಭೂಮಿಯ ಮೇಲೆ ಬಿದ್ದನು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ಶಾಲ್ವವಧೇ ಏಕೋನವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ಶಾಲ್ವವಧ ಎನ್ನುವ ಹತ್ತೊಂಭತ್ತನೇ ಅಧ್ಯಾಯವು.

Comments are closed.