ಶಲ್ಯಪರ್ವ: ಶಲ್ಯವಧ ಪರ್ವ
Contents
Toggle೧೬
ಶಲ್ಯನ ಪರಾಕ್ರಮ (೧-೩೪). ಯುಧಿಷ್ಠಿರನಿಂದ ಶಲ್ಯನ ವಧೆ (೩೫-೫೭). ಯುಧಿಷ್ಠಿರನಿಂದ ಶಲ್ಯನ ಸಹೋದರನ ವಧೆ (೫೮-೬೫). ಸಾತ್ಯಕಿ-ಕೃತವರ್ಮರ ಯುದ್ಧ (೬೬-೭೬). ಸಂಕುಲ ಯುದ್ಧ(೭೭-೮೭).
09016001 ಸಂಜಯ ಉವಾಚ
09016001a ಅಥಾನ್ಯದ್ಧನುರಾದಾಯ ಬಲವದ್ವೇಗವತ್ತರಂ|
09016001c ಯುಧಿಷ್ಠಿರಂ ಮದ್ರಪತಿರ್ವಿದ್ಧ್ವಾ ಸಿಂಹ ಇವಾನದತ್||
ಸಂಜಯನು ಹೇಳಿದನು: “ಕೂಡಲೇ ಇನ್ನೊಂದು ಬಲವತ್ತರ-ವೇಗವತ್ತರ ಧನುಸ್ಸನ್ನು ಎತ್ತಿಕೊಂಡು ಮದ್ರಪತಿಯು ಯುಧಿಷ್ಠಿರನನ್ನು ಗಾಯಗೊಳಿಸಿ ಸಿಂಹದಂತೆ ಗರ್ಜಿಸಿದನು.
09016002a ತತಃ ಸ ಶರವರ್ಷೇಣ ಪರ್ಜನ್ಯ ಇವ ವೃಷ್ಟಿಮಾನ್|
09016002c ಅಭ್ಯವರ್ಷದಮೇಯಾತ್ಮಾ ಕ್ಷತ್ರಿಯಾನ್ ಕ್ಷತ್ರಿಯರ್ಷಭಃ||
ಆಗ ಮಳೆಸುರಿಸುವ ಪರ್ಜನ್ಯನಂತೆ ಆ ಅಮೇಯಾತ್ಮ ಕ್ಷತ್ರಿಯರ್ಷಭ ಶಲ್ಯನು ಪಾಂಡವ ಕ್ಷತ್ರಿಯರ ಮೇಲೆ ಶರವರ್ಷಗಳನ್ನು ಸುರಿಸಿದನು.
09016003a ಸಾತ್ಯಕಿಂ ದಶಭಿರ್ವಿದ್ಧ್ವಾ ಭೀಮಸೇನಂ ತ್ರಿಭಿಃ ಶರೈಃ|
09016003c ಸಹದೇವಂ ತ್ರಿಭಿರ್ವಿದ್ಧ್ವಾ ಯುಧಿಷ್ಠಿರಮಪೀಡಯತ್||
ಸಾತ್ಯಕಿಯನ್ನು ಹತ್ತು ಬಾಣಗಳಿಂದ, ಭೀಮಸೇನನನ್ನು ಮೂರರಿಂದ ಮತ್ತು ಸಹದೇವನನ್ನು ಮೂರರಿಂದ ಹೊಡೆದು ಯುಧಿಷ್ಠಿರನನ್ನು ಪೀಡಿಸಿದನು.
09016004a ತಾಂಸ್ತಾನನ್ಯಾನ್ಮಹೇಷ್ವಾಸಾನ್ಸಾಶ್ವಾನ್ಸರಥಕುಂಜರಾನ್|
09016004c ಕುಂಜರಾನ್ಕುಂಜರಾರೋಹಾನಶ್ವಾನಶ್ವಪ್ರಯಾಯಿನಃ||
09016004e ರಥಾಂಶ್ಚ ರಥಿಭಿಃ ಸಾರ್ಧಂ ಜಘಾನ ರಥಿನಾಂ ವರಃ||
ಆ ರಥಿಗಳಲ್ಲಿ ಶ್ರೇಷ್ಠನು ರಥ-ಕುಂಜರಗಳೊಂದಿಗೆ ಅನ್ಯ ಮಹೇಷ್ವಾಸರನ್ನೂ, ಆನೆಸವಾರರೊಂದಿಗೆ ಆನೆಗಳನ್ನು, ಸವಾರರೊಂದಿಗೆ ಕುದುರೆಗಳನ್ನು, ಮತ್ತು ರಥಿಗಳನ್ನು ರಥಗಳೊಂದಿಗೆ ಸಂಹರಿಸಿದನು.
09016005a ಬಾಹೂಂಶ್ಚಿಚ್ಚೇದ ಚ ತಥಾ ಸಾಯುಧಾನ್ಕೇತನಾನಿ ಚ|
09016005c ಚಕಾರ ಚ ಮಹೀಂ ಯೋಧೈಸ್ತೀರ್ಣಾಂ ವೇದೀಂ ಕುಶೈರಿವ||
ಬಾಹುಗಳನ್ನು ಕತ್ತರಿಸಿದನು ಮತ್ತು ಹಾಗೆಯೇ ಆಯುಧಗಳನ್ನೂ ಧ್ವಜಗಳನ್ನು ತುಂಡರಿಸಿ ದರ್ಬೆಗಳನ್ನು ಹಾಸಿದ ಯಜ್ಞವೇದಿಕೆಯಂತೆ ರಣಭೂಮಿಯನ್ನು ಯೋಧರ ಮೃತಶರೀರಗಳಿಂದ ತುಂಬಿದನು.
09016006a ತಥಾ ತಮರಿಸೈನ್ಯಾನಿ ಘ್ನಂತಂ ಮೃತ್ಯುಮಿವಾಂತಕಂ|
09016006c ಪರಿವವ್ರುರ್ಭೃಶಂ ಕ್ರುದ್ಧಾಃ ಪಾಂಡುಪಾಂಚಾಲಸೋಮಕಾಃ||
ಅಂತಕ ಮೃತ್ಯುವಿನಂತೆ ಹಾಗೆ ಶತ್ರುಸೇನೆಗಳನ್ನು ನಾಶಪಡಿಸುತ್ತಿದ್ದ ಅವನನ್ನು ಅತೀವ ಕ್ರುದ್ಧರಾದ ಪಾಂಡವ-ಪಾಂಚಾಲ-ಸೋಮಕರು ಸುತ್ತುವರೆದರು.
09016007a ತಂ ಭೀಮಸೇನಶ್ಚ ಶಿನೇಶ್ಚ ನಪ್ತಾ
ಮಾದ್ರ್ಯಾಶ್ಚ ಪುತ್ರೌ ಪುರುಷಪ್ರವೀರೌ|
09016007c ಸಮಾಗತಂ ಭೀಮಬಲೇನ ರಾಜ್ಞಾ
ಪರ್ಯಾಪುರನ್ಯೋನ್ಯಮಥಾಹ್ವಯಂತಃ||
ಭೀಮಸೇನ, ಶಿನಿಯ ಮೊಮ್ಮಗ ಸಾತ್ಯಕಿ, ಮಾದ್ರೀಪುತ್ರ ಪುರುಷಪ್ರವೀರರು, ಭೀಮಬಲದಿಂದೊಡಗೂಡಿ ಯುಧಿಷ್ಠಿರನೊಡನೆ ಯುದ್ಧಮಾಡುತ್ತಿದ್ದ ಶಲ್ಯನನ್ನು ಪ್ರತ್ಯೇಕ ಪ್ರತ್ಯೇಕವಾಗಿ ಆಹ್ವಾನಿಸುತ್ತಿದ್ದರು.
09016008a ತತಸ್ತು ಶೂರಾಃ ಸಮರೇ ನರೇಂದ್ರಂ
ಮದ್ರೇಶ್ವರಂ ಪ್ರಾಪ್ಯ ಯುಧಾಂ ವರಿಷ್ಠಂ|
09016008c ಆವಾರ್ಯ ಚೈನಂ ಸಮರೇ ನೃವೀರಾ
ಜಘ್ನುಃ ಶರೈಃ ಪತ್ರಿಭಿರುಗ್ರವೇಗೈಃ||
ನರೇಂದ್ರ! ಆಗ ಸಮರದಲ್ಲಿ ಆ ಶೂರ ನರವೀರರು ಯೋಧವರಿಷ್ಠ ಮದ್ರೇಶ್ವರನ ಸಮೀಪಕ್ಕೆ ಹೋಗಿ ತಡೆದು, ಉಗ್ರವೇಗದ ಪತ್ರಿ ಶರಗಳಿಂದ ಗಾಯಗೊಳಿಸಿದರು.
09016009a ಸಂರಕ್ಷಿತೋ ಭೀಮಸೇನೇನ ರಾಜಾ
ಮಾದ್ರೀಸುತಾಭ್ಯಾಮಥ ಮಾಧವೇನ|
09016009c ಮದ್ರಾಧಿಪಂ ಪತ್ರಿಭಿರುಗ್ರವೇಗೈಃ
ಸ್ತನಾಂತರೇ ಧರ್ಮಸುತೋ ನಿಜಘ್ನೇ||
ಭೀಮಸೇನ, ಮಾದ್ರೀಸುತರು ಮತ್ತು ಮಾಧವ ಸಾತ್ಯಕಿಯಿಂದ ಸಂರಕ್ಷಿತನಾಗಿದ್ದ ರಾಜಾ ಧರ್ಮಸುತನು ಉಗ್ರವೇಗದ ಪತ್ರಿಗಳಿಂದ ಮದ್ರಾಧಿಪನ ವಕ್ಷಸ್ಥಳಕ್ಕೆ ಪ್ರಹರಿಸಿದನು.
09016010a ತತೋ ರಣೇ ತಾವಕಾನಾಂ ರಥೌಘಾಃ
ಸಮೀಕ್ಷ್ಯ ಮದ್ರಾಧಿಪತಿಂ ಶರಾರ್ತಂ|
09016010c ಪರ್ಯಾವವ್ರುಃ ಪ್ರವರಾಃ ಸರ್ವಶಶ್ಚ
ದುರ್ಯೋಧನಸ್ಯಾನುಮತೇ ಸಮಂತಾತ್||
ರಣದಲ್ಲಿದ್ದ ಮದ್ರಾಧಿಪತಿಯು ಶರಗಳಿಂದ ಪೀಡಿತನಾಗಿದ್ದುದನ್ನು ಕಂಡು ನಿನ್ನವರ ಪ್ರಮುಖ ರಥಗುಂಪುಗಳು ಎಲ್ಲವೂ ದುರ್ಯೋಧನನ ಅನುಮತಿಯಂತೆ ಶಲ್ಯನನ್ನು ಸುತ್ತುವರೆದು ಬಂದವು.
09016011a ತತೋ ದ್ರುತಂ ಮದ್ರಜನಾಧಿಪೋ ರಣೇ
ಯುಧಿಷ್ಠಿರಂ ಸಪ್ತಭಿರಭ್ಯವಿಧ್ಯತ್|
09016011c ತಂ ಚಾಪಿ ಪಾರ್ಥೋ ನವಭಿಃ ಪೃಷತ್ಕೈರ್
ವಿವ್ಯಾಧ ರಾಜಂಸ್ತುಮುಲೇ ಮಹಾತ್ಮಾ||
ಆಗ ರಣದಲ್ಲಿ ಮದ್ರಾಧಿಪನು ಬೇಗನೇ ಏಳು ಬಾಣಗಳಿಂದ ಯುಧಿಷ್ಠಿರನನ್ನು ಹೊಡೆದನು. ರಾಜನ್! ಆ ತುಮುಲ ಯುದ್ಧದಲ್ಲಿ ಪಾರ್ಥನೂ ಕೂಡ ಅವನನ್ನು ಒಂಭತ್ತು ಪೃಷತಗಳಿಂದ ಹೊಡೆದನು.
09016012a ಆಕರ್ಣಪೂರ್ಣಾಯತಸಂಪ್ರಯುಕ್ತೈಃ
ಶರೈಸ್ತದಾ ಸಮ್ಯತಿ ತೈಲಧೌತೈಃ|
09016012c ಅನ್ಯೋನ್ಯಮಾಚ್ಚಾದಯತಾಂ ಮಹಾರಥೌ
ಮದ್ರಾಧಿಪಶ್ಚಾಪಿ ಯುಧಿಷ್ಠಿರಶ್ಚ||
ಮಹಾರಥ ಮದ್ರಾಧಿಪ ಯುಧಿಷ್ಠಿರರಿಬ್ಬರೂ ಎಣ್ಣೆಯಿಂದ ಹದಮಾಡಲ್ಪಟ್ಟ ಬಾಣಗಳನ್ನು ಕಿವಿಯ ತುದಿಯವರೆಗೂ ಸೆಳೆದು ಬಿಟ್ಟು ಅನ್ಯೋನ್ಯರನ್ನು ಮುಚ್ಚಿಬಿಟ್ಟರು.
09016013a ತತಸ್ತು ತೂರ್ಣಂ ಸಮರೇ ಮಹಾರಥೌ
ಪರಸ್ಪರಸ್ಯಾಂತರಮೀಕ್ಷಮಾಣೌ|
09016013c ಶರೈರ್ಭೃಶಂ ವಿವ್ಯಧತುರ್ನೃಪೋತ್ತಮೌ
ಮಹಾಬಲೌ ಶತ್ರುಭಿರಪ್ರಧೃಷ್ಯೌ||
ಆಗ ಸಮರದಲ್ಲಿ ಪರಸ್ಪರರ ದುರ್ಬಲತೆಯನ್ನು ಹುಡುಕುತ್ತಿದ್ದ, ಶತ್ರುಗಳಿಂದ ಎದುರಿಸಲು ಅಸಾಧ್ಯರಾಗಿದ್ದ, ಮಹಾರಥ ಮಹಾಬಲ ನೃಪೋತ್ತಮರಿಬ್ಬರೂ ಬೇಗ ಬೇಗನೇ ಶರಗಳಿಂದ ಪರಸ್ಪರರನ್ನು ಹೊಡೆಯುತ್ತಿದ್ದರು.
09016014a ತಯೋರ್ಧನುರ್ಜ್ಯಾತಲನಿಸ್ವನೋ ಮಹಾನ್
ಮಹೇಂದ್ರವಜ್ರಾಶನಿತುಲ್ಯನಿಸ್ವನಃ|
09016014c ಪರಸ್ಪರಂ ಬಾಣಗಣೈರ್ಮಹಾತ್ಮನೋಃ
ಪ್ರವರ್ಷತೋರ್ಮದ್ರಪಪಾಂಡುವೀರಯೋಃ||
ಪರಸ್ಪರರ ಮೇಲೆ ಬಾಣಗಣಗಳನ್ನು ಸುರಿಸುತ್ತಿದ್ದ ಆ ಪಾಂಡವ-ಮದ್ರ ವೀರರ ಧನುಸ್ಸಿನ ಶಿಂಜನಿಯ ಟೇಂಕಾರ ಶಬ್ಧವು ಮಹೇಂದ್ರನ ವಜ್ರಾಯುಧದ ಗರ್ಜನೆಗೆ ಸಮನಾಗಿದ್ದಿತು.
09016015a ತೌ ಚೇರತುರ್ವ್ಯಾಘ್ರಶಿಶುಪ್ರಕಾಶೌ
ಮಹಾವನೇಷ್ವಾಮಿಷಗೃದ್ಧಿನಾವಿವ|
09016015c ವಿಷಾಣಿನೌ ನಾಗವರಾವಿವೋಭೌ
ತತಕ್ಷತುಃ ಸಮ್ಯುಗಜಾತದರ್ಪೌ||
ಮಹಾವನದಲ್ಲಿ ಮಾಂಸದ ತುಂಡಿಗಾಗಿ ಪರಚಾಡುವ ಹುಲಿಯ ಮರಿಗಳಂತಿದ್ದ ಮತ್ತು ದಂತಗಳುಳ್ಳ ಸಲಗಶ್ರೇಷ್ಠರಂತೆ ದರ್ಪಿತರಾಗಿದ್ದ ಅವರಿಬ್ಬರೂ ಪರಸ್ಪರರನ್ನು ಗಾಯಗೊಳಿಸಿದರು.
09016016a ತತಸ್ತು ಮದ್ರಾಧಿಪತಿರ್ಮಹಾತ್ಮಾ
ಯುಧಿಷ್ಠಿರಂ ಭೀಮಬಲಂ ಪ್ರಸಹ್ಯ|
09016016c ವಿವ್ಯಾಧ ವೀರಂ ಹೃದಯೇಽತಿವೇಗಂ
ಶರೇಣ ಸೂರ್ಯಾಗ್ನಿಸಮಪ್ರಭೇಣ||
ಆಗ ಮಹಾತ್ಮ ಮದ್ರಾಧಿಪತಿಯು ಸೂರ್ಯಾಗ್ನಿತೇಜಸ್ಸಿಗೆ ಸಮಾನ ತೇಜಸ್ಸುಳ್ಳ ಅತಿವೇಗದ ಶರವನ್ನು, ಭಯಂಕರ ಬಲವನ್ನುಪಯೋಗಿಸಿ, ವೀರ ಯುಧಿಷ್ಠಿರನ ಎದೆಗೆ ಪ್ರಹರಿಸಿದನು.
09016017a ತತೋಽತಿವಿದ್ಧೋಽಥ ಯುಧಿಷ್ಠಿರೋಽಪಿ
ಸುಸಂಪ್ರಯುಕ್ತೇನ ಶರೇಣ ರಾಜನ್|
09016017c ಜಘಾನ ಮದ್ರಾಧಿಪತಿಂ ಮಹಾತ್ಮಾ
ಮುದಂ ಚ ಲೇಭೇ ಋಷಭಃ ಕುರೂಣಾಂ||
ರಾಜನ್! ಅತಿಯಾಗಿ ಗಾಯಗೊಂಡ ಮಹಾತ್ಮಾ ಕುರುಋಷಭ ಯುಧಿಷ್ಠಿರನಾದರೋ ಚೆನ್ನಾಗಿ ಹೂಡಿದ ಬಾಣದಿಂದ ಮದ್ರಾಧಿಪತಿಯನ್ನು ಹೊಡೆದು ಮತ್ತು ಅವನು ಮೂರ್ಛಿತನಾದುದನ್ನು ಕಂಡು ಆನಂದಿಸಿದನು.
09016018a ತತೋ ಮುಹೂರ್ತಾದಿವ ಪಾರ್ಥಿವೇಂದ್ರೋ
ಲಬ್ಧ್ವಾ ಸಂಜ್ಞಾಂ ಕ್ರೋಧಸಂರಕ್ತನೇತ್ರಃ|
09016018c ಶತೇನ ಪಾರ್ಥಂ ತ್ವರಿತೋ ಜಘಾನ
ಸಹಸ್ರನೇತ್ರಪ್ರತಿಮಪ್ರಭಾವಃ||
ಸಹಸ್ರನೇತ್ರನಂತೆ ಅಪ್ರತಿಮ ಪ್ರಭಾವವುಳ್ಳ ಪಾರ್ಥಿವೇಂದ್ರ ಶಲ್ಯನು ಮುಹೂರ್ತಕಾಲದಲ್ಲಿಯೇ ಸಂಜ್ಞೆಯನ್ನು ಪಡೆದು ಕ್ರೋಧದಿಂದ ಕೆಂಗಣ್ಣನಾಗಿ ತ್ವರೆಮಾಡಿ ನೂರು ಬಾಣಗಳಿಂದ ಪಾರ್ಥನನ್ನು ಪ್ರಹರಿಸಿದನು.
09016019a ತ್ವರಂಸ್ತತೋ ಧರ್ಮಸುತೋ ಮಹಾತ್ಮಾ
ಶಲ್ಯಸ್ಯ ಕ್ರುದ್ಧೋ ನವಭಿಃ ಪೃಷತ್ಕೈಃ|
09016019c ಭಿತ್ತ್ವಾ ಹ್ಯುರಸ್ತಪನೀಯಂ ಚ ವರ್ಮ
ಜಘಾನ ಷಡ್ಭಿಸ್ತ್ವಪರೈಃ ಪೃಷತ್ಕೈಃ||
ಆಗ ತ್ವರೆಮಾಡಿ ಮಹಾತ್ಮ ಕ್ರುದ್ಧ ಧರ್ಮಸುತನು ಒಂಭತ್ತು ಬಾಣಗಳಿಂದ ಶಲ್ಯನ ಸುವರ್ಣಮಯ ಕವಚವನ್ನು ಭೇದಿಸಿ ಪುನಃ ಆರು ಪೃಷತಗಳಿಂದ ಅವನ ವಕ್ಷಸ್ಥಳಕ್ಕೆ ಹೊಡೆದನು.
09016020a ತತಸ್ತು ಮದ್ರಾಧಿಪತಿಃ ಪ್ರಹೃಷ್ಟೋ
ಧನುರ್ವಿಕೃಷ್ಯ ವ್ಯಸೃಜತ್ ಪೃಷತ್ಕಾನ್|
09016020c ದ್ವಾಭ್ಯಾಂ ಕ್ಷುರಾಭ್ಯಾಂ ಚ ತಥೈವ ರಾಜ್ಞಶ್
ಚಿಚ್ಚೇದ ಚಾಪಂ ಕುರುಪುಂಗವಸ್ಯ||
ಆಗ ಪ್ರಹೃಷ್ಟ ಮದ್ರಾಧಿಪತಿಯು ಧನುಸ್ಸನ್ನು ಸೆಳೆದು ಪೃಷತಗಳನ್ನೂ ಎರಡು ಕ್ಷುರಗಳನ್ನು ಪ್ರಯೋಗಿಸಿ ರಾಜನನ್ನು ಹೊಡೆದು ಕುರುಪುಂಗವನ ಧನುಸ್ಸನ್ನು ತುಂಡರಿಸಿದನು.
09016021a ನವಂ ತತೋಽನ್ಯತ್ಸಮರೇ ಪ್ರಗೃಹ್ಯ
ರಾಜಾ ಧನುರ್ಘೋರತರಂ ಮಹಾತ್ಮಾ|
09016021c ಶಲ್ಯಂ ತು ವಿದ್ಧ್ವಾ ನಿಶಿತೈಃ ಸಮಂತಾದ್
ಯಥಾ ಮಹೇಂದ್ರೋ ನಮುಚಿಂ ಶಿತಾಗ್ರೈಃ||
ಆಗ ಮಹಾತ್ಮ ರಾಜನು ಸಮರದಲ್ಲಿ ಘೋರತರ ಅನ್ಯ ಧನುಸ್ಸನ್ನು ತೆಗೆದುಕೊಂಡು ನಿಶಿತ ಶರಗಳಿಂದ ಮಹೇಂದ್ರನು ಶಿತಾಗ್ರಗಳಿಂದ ನಮುಚಿಯನ್ನು ಹೇಗೋ ಹಾಗೆ ಎಲ್ಲ ಕಡೆಗಳಲ್ಲಿ ಪ್ರಹರಿಸಿದನು.
09016022a ತತಸ್ತು ಶಲ್ಯೋ ನವಭಿಃ ಪೃಷತ್ಕೈರ್
ಭೀಮಸ್ಯ ರಾಜ್ಞಶ್ಚ ಯುಧಿಷ್ಠಿರಸ್ಯ|
09016022c ನಿಕೃತ್ಯ ರೌಕ್ಮೇ ಪಟುವರ್ಮಣೀ ತಯೋರ್
ವಿದಾರಯಾಮಾಸ ಭುಜೌ ಮಹಾತ್ಮಾ||
ಆಗ ಮಹಾತ್ಮಾ ಶಲ್ಯನು ಒಂಭತ್ತು ಪೃಷತಗಳಿಂದ ಭೀಮಸೇನ ಮತ್ತು ರಾಜಾ ಯುಧಿಷ್ಠಿರರ ಸುವರ್ಣಮಯ ಸುದೃಢ ಕವಚಗಳನ್ನು ಕತ್ತರಿಸಿ ಅವರಿಬ್ಬರ ಭುಜಗಳನ್ನು ಸೀಳಿದನು.
09016023a ತತೋಽಪರೇಣ ಜ್ವಲಿತಾರ್ಕತೇಜಸಾ
ಕ್ಷುರೇಣ ರಾಜ್ಞೋ ಧನುರುನ್ಮಮಾಥ|
09016023c ಕೃಪಶ್ಚ ತಸ್ಯೈವ ಜಘಾನ ಸೂತಂ
ಷಡ್ಭಿಃ ಶರೈಃ ಸೋಽಭಿಮುಖಂ ಪಪಾತ||
ಅನಂತರ ಇನ್ನೊಂದು ಅಗ್ನಿ ಮತ್ತು ಸೂರ್ಯರ ತೇಜಸ್ಸಿನಿಂದ ಬೆಳಗುತ್ತಿದ್ದ ಕ್ಷುರದಿಂದ ರಾಜ ಯುಧಿಷ್ಠಿರನ ಧನುಸ್ಸನ್ನು ಧ್ವಂಸಗೊಳಿಸಿದನು. ಎದುರಿಗಿದ್ದ ಕೃಪನೂ ಕೂಡ ಆರು ಶರಗಳಿಂದ ಯುಧಿಷ್ಠಿರನ ಸಾರಥಿಯನ್ನು ಕೆಳಗುರುಳಿಸಿದನು.
09016024a ಮದ್ರಾಧಿಪಶ್ಚಾಪಿ ಯುಧಿಷ್ಠಿರಸ್ಯ
ಶರೈಶ್ಚತುರ್ಭಿರ್ನಿಜಘಾನ ವಾಹಾನ್|
09016024c ವಾಹಾಂಶ್ಚ ಹತ್ವಾ ವ್ಯಕರೋನ್ ಮಹಾತ್ಮಾ
ಯೋಧಕ್ಷಯಂ ಧರ್ಮಸುತಸ್ಯ ರಾಜ್ಞಃ||
ಮದ್ರಾಧಿಪತಿಯೂ ಕೂಡ ಶರಗಳಿಂದ ಯುಧಿಷ್ಠಿರನ ನಾಲ್ಕು ಕುದುರೆಗಳನ್ನು ಸಂಹರಿಸಿದನು. ಕುದುರೆಗಳನ್ನು ಸಂಹರಿಸಿ ಮಹಾತ್ಮ ರಾಜನು ಧರ್ಮಸುತನ ಯೋಧರನ್ನು ನಾಶಗೊಳಿಸಿದನು.
09016025a ತಥಾ ಕೃತೇ ರಾಜನಿ ಭೀಮಸೇನೋ
ಮದ್ರಾಧಿಪಸ್ಯಾಶು ತತೋ ಮಹಾತ್ಮಾ|
09016025c ಚಿತ್ತ್ವಾ ಧನುರ್ವೇಗವತಾ ಶರೇಣ
ದ್ವಾಭ್ಯಾಮವಿಧ್ಯತ್ ಸುಭೃಶಂ ನರೇಂದ್ರಂ||
ಮದ್ರಾಧಿಪನು ರಾಜನನ್ನು ಈ ಅವಸ್ಥೆಗೊಳಪಡಿಸಿದುದನ್ನು ನೋಡಿದ ಮಹಾತ್ಮ ಭೀಮಸೇನನು ವೇಗವತ ಶರದಿಂದ ಅವನ ಧನುಸ್ಸನ್ನು ತುಂಡರಿಸಿ, ಇನ್ನೆರಡು ಶರಗಳಿಂದ ನರೇಂದ್ರನನ್ನು ಬಹಳವಾಗಿ ಗಾಯಗೊಳಿಸಿದನು.
09016026a ಅಥಾಪರೇಣಾಸ್ಯ ಜಹಾರ ಯಂತುಃ
ಕಾಯಾಚ್ಚಿರಃ ಸಂನಹನೀಯಮಧ್ಯಾತ್|
09016026c ಜಘಾನ ಚಾಶ್ವಾಂಶ್ಚತುರಃ ಸ ಶೀಘ್ರಂ
ತಥಾ ಭೃಶಂ ಕುಪಿತೋ ಭೀಮಸೇನಃ||
ತುಂಬಾ ಕುಪಿತನಾಗಿದ್ದ ಭೀಮಸೇನನು ಹಾಗೆಯೇ ಶೀಘ್ರವಾಗಿ ಇನ್ನೊಂದು ಶರದಿಂದ ಸಾರಥಿಯ ಶಿರವನ್ನು ಶರೀರದಿಂದ ಬೇರ್ಪಡಿಸಿ, ಅವನ ನಾಲ್ಕು ಕುದುರೆಗಳನ್ನೂ ಸಂಹರಿಸಿದನು.
09016027a ತಮಗ್ರಣೀಃ ಸರ್ವಧನುರ್ಧರಾಣಾಂ
ಏಕಂ ಚರಂತಂ ಸಮರೇಽತಿವೇಗಂ|
09016027c ಭೀಮಃ ಶತೇನ ವ್ಯಕಿರಚ್ಚರಾಣಾಂ
ಮಾದ್ರೀಪುತ್ರಃ ಸಹದೇವಸ್ತಥೈವ||
ಸಮರದಲ್ಲಿ ಅತಿವೇಗದಿಂದ ಸಂಚರಿಸುತ್ತಿದ್ದ ಆ ಸರ್ವಧನುರ್ಧರರಲ್ಲಿ ಅಗ್ರಣಿ ಶಲ್ಯನ ಮೇಲೆ ಭೀಮ ಮತ್ತು ಮಾದ್ರೀಪುತ್ರ ಸಹದೇವರು ನೂರು ಬಾಣಗಳನ್ನು ಎರಚಿದರು.
09016028a ತೈಃ ಸಾಯಕೈರ್ಮೋಹಿತಂ ವೀಕ್ಷ್ಯ ಶಲ್ಯಂ
ಭೀಮಃ ಶರೈರಸ್ಯ ಚಕರ್ತ ವರ್ಮ|
09016028c ಸ ಭೀಮಸೇನೇನ ನಿಕೃತ್ತವರ್ಮಾ
ಮದ್ರಾಧಿಪಶ್ಚರ್ಮ ಸಹಸ್ರತಾರಂ||
09016029a ಪ್ರಗೃಹ್ಯ ಖಡ್ಗಂ ಚ ರಥಾನ್ಮಹಾತ್ಮಾ
ಪ್ರಸ್ಕಂದ್ಯ ಕುಂತೀಸುತಮಭ್ಯಧಾವತ್|
ಆ ಸಾಯಕಗಳಿಂದ ಶಲ್ಯನು ಮೂರ್ಛಿತನಾದುದನ್ನು ಕಂಡು ಭೀಮನು ಶರಗಳಿಂದ ಅವನ ಕವಚವನ್ನು ತುಂಡರಿಸಿದನು. ಭೀಮಸೇನನು ಕವಚಗಳನ್ನು ಕತ್ತರಿಸಲು ಮದ್ರಾಧಿಪನು ಸಹಸ್ರತಾರೆಗಳ ಚಿತ್ರವುಳ್ಳ ಗುರಾಣಿ-ಖಡ್ಗಗಳನ್ನು ಹಿಡಿದು ರಥದಿಂದ ಧುಮಿಕಿ ಕುಂತೀಸುತನೆಡೆಗೆ ಧಾವಿಸಿದನು.
09016029c ಚಿತ್ತ್ವಾ ರಥೇಷಾಂ ನಕುಲಸ್ಯ ಸೋಽಥ
ಯುಧಿಷ್ಠಿರಂ ಭೀಮಬಲೋಽಭ್ಯಧಾವತ್||
09016030a ತಂ ಚಾಪಿ ರಾಜಾನಮಥೋತ್ಪತಂತಂ
ಕ್ರುದ್ಧಂ ಯಥೈವಾಂತಕಮಾಪತಂತಂ|
09016030c ಧೃಷ್ಟದ್ಯುಮ್ನೋ ದ್ರೌಪದೇಯಾಃ ಶಿಖಂಡೀ
ಶಿನೇಶ್ಚ ನಪ್ತಾ ಸಹಸಾ ಪರೀಯುಃ||
ನಕುಲನ ರಥದ ಈಷಾದಂಡವನ್ನು ತುಂಡರಿಸಿ ಆ ಭೀಮಬಲನು ಯುಧಿಷ್ಠಿರನನನ್ನು ಆಕ್ರಮಣಿಸಿದನು. ಹಾಗೆ ಕ್ರುದ್ಧ ಅಂತಕನಂತೆ ಮೇಲೆ ಬೀಳುತ್ತಿದ್ದ ರಾಜನನ್ನು ಧೃಷ್ಟದ್ಯುಮ್ನ, ದ್ರೌಪದೇಯರು, ಶಿಖಂಡೀ, ಮತ್ತು ಶೈನೇಯರು ಕೂಡಲೇ ಸುತ್ತುವರೆದರು.
09016031a ಅಥಾಸ್ಯ ಚರ್ಮಾಪ್ರತಿಮಂ ನ್ಯಕೃಂತದ್
ಭೀಮೋ ಮಹಾತ್ಮಾ ದಶಭಿಃ ಪೃಷತ್ಕಃ|
09016031c ಖಡ್ಗಂ ಚ ಭಲ್ಲೈರ್ನಿಚಕರ್ತ ಮುಷ್ಟೌ
ನದನ್ಪ್ರಹೃಷ್ಟಸ್ತವ ಸೈನ್ಯಮಧ್ಯೇ||
ಕೂಡಲೇ ಮಹಾತ್ಮ ಭೀಮನು ಹತ್ತು ಪೃಷತಗಳಿಂದ ಅವನ ಅಪ್ರತಿಮ ಗುರಾಣಿಯನ್ನು ಪುಡಿಮಾಡಿ, ಭಲ್ಲದಿಂದ ಮುಷ್ಟಿಪ್ರದೇಶದಲ್ಲಿ ಅವನ ಖಡ್ಗವನ್ನೂ ಕತ್ತರಿಸಿ ನಿನ್ನ ಸೇನಾಮಧ್ಯದಲ್ಲಿ ಪ್ರಹೃಷ್ಟನಾಗಿ ಗರ್ಜಿಸಿದನು.
09016032a ತತ್ಕರ್ಮ ಭೀಮಸ್ಯ ಸಮೀಕ್ಷ್ಯ ಹೃಷ್ಟಾಸ್
ತೇ ಪಾಂಡವಾನಾಂ ಪ್ರವರಾ ರಥೌಘಾಃ|
09016032c ನಾದಂ ಚ ಚಕ್ರುರ್ಭೃಶಮುತಯಂತಃ
ಶಂಖಾಂಶ್ಚ ದಧ್ಮುಃ ಶಶಿಸಂನಿಕಾಶಾನ್||
ಭೀಮನ ಆ ಕರ್ಮವನ್ನು ನೋಡಿ ಪಾಂಡವರ ಕಡೆಯ ಪ್ರಮುಖ ರಥಸೇನೆಗಳು ಉತ್ಸಾಹದಿಂದ ಜೋರಾಗಿ ಸಿಂಹನಾದಗೈದು ಚಂದ್ರಪ್ರಭೆಯ ಶಂಖಗಳನ್ನು ಊದಿದರು.
09016033a ತೇನಾಥ ಶಬ್ದೇನ ವಿಭೀಷಣೇನ
ತವಾಭಿತಪ್ತಂ ಬಲಮಪ್ರಹೃಷ್ಟಂ|
09016033c ಸ್ವೇದಾಭಿಭೂತಂ ರುಧಿರೋಕ್ಷಿತಾಂಗಂ
ವಿಸಂಜ್ಞಕಲ್ಪಂ ಚ ತಥಾ ವಿಷಣ್ಣಂ||
ರಕ್ತದಿಂದ ತೋಯ್ದುಹೋಗಿದ್ದ ನಿನ್ನ ಸೇನೆಯು ಆ ವಿಭೀಷಣ ಶಬ್ಧದಿಂದ ತಪಿಸಿ ದುಃಖಗೊಂಡು ವಿಷಣ್ಣರಾಗಿ ದಿಕ್ಕುಗಾಣದೇ ಸ್ತಬ್ಧವಾಗಿ ನಿಂತುಬಿಟ್ಟಿತು.
09016034a ಸ ಮದ್ರರಾಜಃ ಸಹಸಾವಕೀರ್ಣೋ
ಭೀಮಾಗ್ರಗೈಃ ಪಾಂಡವಯೋಧಮುಖ್ಯೈಃ|
09016034c ಯುಧಿಷ್ಠಿರಸ್ಯಾಭಿಮುಖಂ ಜವೇನ
ಸಿಂಹೋ ಯಥಾ ಮೃಗಹೇತೋಃ ಪ್ರಯಾತಃ||
ಪಾಂಡವ ಯೋಧಮುಖ್ಯ ಭೀಮಸೇನನೇ ಮೊದಲಾದವರ ಶರಗಳಿಂದ ಪೀಡಿತ ಮದ್ರರಾಜನು ಜಿಂಕೆಯ ಸಲುವಾಗಿ ಸಿಂಹವು ಹೇಗೋ ಹಾಗೆ ವೇಗದಿಂದ ಯುಧಿಷ್ಠಿರನ ಬಳಿಗೆ ಓಡಿದನು.
09016035a ಸ ಧರ್ಮರಾಜೋ ನಿಹತಾಶ್ವಸೂತಂ
ಕ್ರೋಧೇನ ದೀಪ್ತಜ್ವಲನಪ್ರಕಾಶಂ|
09016035c ದೃಷ್ಟ್ವಾ ತು ಮದ್ರಾಧಿಪತಿಂ ಸ ತೂರ್ಣಂ
ಸಮಭ್ಯಧಾವತ್ತಮರಿಂ ಬಲೇನ||
ಕುದುರೆ-ಸಾರಥಿಯರನ್ನು ಕಳೆದುಕೊಂಡು ಕ್ರೋಧದಿಂದ ಪ್ರಜ್ವಲಿಸುತ್ತಿರುವ ಅಗ್ನಿಯಂತೆ ಪ್ರಕಾಶಿಸುತ್ತಿದ್ದ ಧರ್ಮರಾಜನು ಮದ್ರಾಧಿಪತಿಯನ್ನು ನೋಡಿ ಬೇಗನೆ ಬಲವನ್ನುಪಯೋಗಿಸಿ ಶತ್ರುವನ್ನು ಆಕ್ರಮಣಿಸಿದನು.
09016036a ಗೋವಿಂದವಾಕ್ಯಂ ತ್ವರಿತಂ ವಿಚಿಂತ್ಯ
ದಧ್ರೇ ಮತಿಂ ಶಲ್ಯವಿನಾಶನಾಯ|
09016036c ಸ ಧರ್ಮರಾಜೋ ನಿಹತಾಶ್ವಸೂತೇ
ರಥೇ ತಿಷ್ಠನ್ ಶಕ್ತಿಮೇವಾಭಿಕಾಂಕ್ಷನ್||
ಕೂಡಲೇ ಗೋವಿಂದನ ಮಾತನ್ನು ನೆನಪಿಸಿಕೊಂಡ ಅವನು ಶಲ್ಯನ ವಿನಾಶಕ್ಕೆ ಮನಸ್ಸುಮಾಡಿದನು. ಕುದುರೆ-ಸಾರಥಿಗಳನ್ನು ಕಳೆದುಕೊಂಡಿದ್ದ ಆ ಧರ್ಮರಾಜನು ರಥದಲ್ಲಿ ನಿಂತು ಶಕ್ತಿಯನ್ನೇ ಬಯಸಿದನು.
09016037a ತಚ್ಚಾಪಿ ಶಲ್ಯಸ್ಯ ನಿಶಮ್ಯ ಕರ್ಮ
ಮಹಾತ್ಮನೋ ಭಾಗಮಥಾವಶಿಷ್ಟಂ|
09016037c ಸ್ಮೃತ್ವಾ ಮನಃ ಶಲ್ಯವಧೇ ಯತಾತ್ಮಾ
ಯಥೋಕ್ತಮಿಂದ್ರಾವರಜಸ್ಯ ಚಕ್ರೇ||
ಶಲ್ಯನ ಕರ್ಮಗಳನ್ನು ವೀಕ್ಷಿಸಿ, ತನ್ನ ಭಾಗವೊಂದು ಉಳಿದುಕೊಂಡಿದೆಯೆಂದು ನೆನಪಿಸಿಕೊಂಡು, ಶಲ್ಯವಧೆಗೆ ಪ್ರಯತ್ನಿಸಿ, ಇಂದ್ರಾವರಜ ಕೃಷ್ಣನು ಹೇಳಿದಂತೆಯೇ ಮಾಡಿದನು.
09016038a ಸ ಧರ್ಮರಾಜೋ ಮಣಿಹೇಮದಂಡಾಂ
ಜಗ್ರಾಹ ಶಕ್ತಿಂ ಕನಕಪ್ರಕಾಶಾಂ|
09016038c ನೇತ್ರೇ ಚ ದೀಪ್ತೇ ಸಹಸಾ ವಿವೃತ್ಯ
ಮದ್ರಾಧಿಪಂ ಕ್ರುದ್ಧಮನಾ ನಿರೈಕ್ಷತ್||
ಆ ಧರ್ಮರಾಜನು ಮಣಿಹೇಮದಂಡವುಳ್ಳ ಕನಕಪ್ರಕಾಶಿತ ಶಕ್ತಿಯನ್ನು ಹಿಡಿದು, ಉರಿಯುತ್ತಿದ್ದ ಕಣ್ಣುಗಳನ್ನು ಅರಳಿಸಿಕೊಂಡು, ಕ್ರುದ್ಧಮನಸ್ಕನಾಗಿ ಮದ್ರಾಧಿಪನನ್ನು ದಿಟ್ಟಿಸಿ ನೋಡಿದನು.
09016039a ನಿರೀಕ್ಷಿತೋ ವೈ ನರದೇವ ರಾಜ್ಞಾ
ಪೂತಾತ್ಮನಾ ನಿರ್ಹೃತಕಲ್ಮಷೇಣ|
09016039c ಅಭೂನ್ನ ಯದ್ಭಸ್ಮಸಾನ್ಮದ್ರರಾಜಃ
ತದದ್ಭುತಂ ಮೇ ಪ್ರತಿಭಾತಿ ರಾಜನ್||
ನರದೇವ! ರಾಜನ್! ಆ ಪೂತಾತ್ಮ ಕಲ್ಮಷಗಳೇ ಇಲ್ಲದ ಪರಿಶುದ್ಧ ರಾಜನು ದುರುಗುಟ್ಟಿ ನೋಡಿದರೂ ಮದ್ರರಾಜನು ಭಸ್ಮೀಭೂತನಾಗಲಿಲ್ಲ! ಅದೊಂದು ನನಗೆ ಅದ್ಭುತವಾಗಿಯೇ ತೋರುತ್ತಿತ್ತು.
09016040a ತತಸ್ತು ಶಕ್ತಿಂ ರುಚಿರೋಗ್ರದಂಡಾಂ
ಮಣಿಪ್ರವಾಲೋಜ್ಜ್ವಲಿತಾಂ ಪ್ರದೀಪ್ತಾಂ|
09016040c ಚಿಕ್ಷೇಪ ವೇಗಾತ್ ಸುಭೃಶಂ ಮಹಾತ್ಮಾ
ಮದ್ರಾಧಿಪಾಯ ಪ್ರವರಃ ಕುರೂಣಾಂ||
ಆಗ ಕುರುಗಳ ಪ್ರಮುಖ ಮಹಾತ್ಮ ಯುಧಿಷ್ಠಿರನು ಆ ಸುಂದರ, ಉಗ್ರದಂಡವುಳ್ಳ, ಮಣಿರತ್ನಗಳಿಂದ ಪ್ರಜ್ವಲಿಸುತ್ತಿದ್ದ ಶಕ್ತ್ಯಾಯುಧವನ್ನು ಅತಿವೇಗದಿಂದ ಮದ್ರಾಧಿಪನ ಮೇಲೆ ಪ್ರಹರಿಸಿದನು.
09016041a ದೀಪ್ತಾಮಥೈನಾಂ ಮಹತಾ ಬಲೇನ
ಸವಿಸ್ಫುಲಿಗಾಂಗಂ ಸಹಸಾ ಪತಂತೀಂ|
09016041c ಪ್ರೈಕ್ಷಂತ ಸರ್ವೇ ಕುರವಃ ಸಮೇತಾ
ಯಥಾ ಯುಗಾಂತೇ ಮಹತೀಮಿವೋಲ್ಕಾಂ||
ಮಹಾಬಲದಿಂದ ಪ್ರಯೋಗಿಸಲ್ಪಟ್ಟು ವೇಗವಾಗಿ ಬೀಳುತ್ತಿದ್ದ, ಕಿಡಿಗಳನ್ನು ಕಾರುತ್ತಾ ಉರಿಯುತ್ತಿದ್ದ, ಯುಗಾಂತದಲ್ಲಿ ಕಾಣುವ ಮಹಾ ಉಲ್ಕೆಯಂತೆ ತೋರುತ್ತಿದ್ದ ಆ ಶಕ್ತಿಯನ್ನು ಸರ್ವಕುರುಗಳೂ ನೋಡಿದರು.
09016042a ತಾಂ ಕಾಲರಾತ್ರೀಮಿವ ಪಾಶಹಸ್ತಾಂ
ಯಮಸ್ಯ ಧಾತ್ರೀಮಿವ ಚೋಗ್ರರೂಪಾಂ|
09016042c ಸಬ್ರಹ್ಮದಂಡಪ್ರತಿಮಾಮಮೋಘಾಂ
ಸಸರ್ಜ ಯತ್ತೋ ಯುಧಿ ಧರ್ಮರಾಜಃ||
ಕಾಲರಾತ್ರಿಯಂತಿದ್ದ, ಯಮನ ಕೈಯಲ್ಲಿರುವ ಪಾಶದಂತಿದ್ದ, ಧಾತ್ರಿಯಂತೆ ಉಗ್ರರೂಪದ, ಬ್ರಹ್ಮದಂಡದಂತೆ ಅಪ್ರತಿಮ ಅಮೋಘವಾಗಿದ್ದ ಆ ಶಕ್ತಿಯನ್ನು ಯುದ್ಧದಲ್ಲಿ ಧರ್ಮರಾಜನು ಪ್ರಯತ್ನಿಸಿ ಪ್ರಯೋಗಿಸಿದನು.
09016043a ಗಂಧಸ್ರಗಗ್ರ್ಯಾಸನಪಾನಭೋಜನೈರ್
ಅಭ್ಯರ್ಚಿತಾಂ ಪಾಂಡುಸುತೈಃ ಪ್ರಯತ್ನಾತ್|
09016043c ಸಂವರ್ತಕಾಗ್ನಿಪ್ರತಿಮಾಂ ಜ್ವಲಂತೀಂ
ಕೃತ್ಯಾಮಥರ್ವಾಂಗಿರಸೀಮಿವೋಗ್ರಾಂ||
09016044a ಈಶಾನಹೇತೋಃ ಪ್ರತಿನಿರ್ಮಿತಾಂ ತಾಂ
ತ್ವಷ್ಟ್ರಾ ರಿಪೂಣಾಮಸುದೇಹಭಕ್ಷಾಂ|
09016044c ಭೂಮ್ಯಂತರಿಕ್ಷಾದಿಜಲಾಶಯಾನಿ
ಪ್ರಸಹ್ಯ ಭೂತಾನಿ ನಿಹಂತುಮೀಶಾಂ||
09016045a ಘಂಟಾಪತಾಕಾಮಣಿವಜ್ರಭಾಜಂ
ವೈಡೂರ್ಯಚಿತ್ರಾಂ ತಪನೀಯದಂಡಾಂ|
09016045c ತ್ವಷ್ಟ್ರಾ ಪ್ರಯತ್ನಾನ್ನಿಯಮೇನ ಕ್ಷ್ಲಾಂತಂ
ಬ್ರಹ್ಮದ್ವಿಷಾಮಂತಕರೀಮಮೋಘಾಂ||
09016046a ಬಲಪ್ರಯತ್ನಾದಧಿರೂಢವೇಗಾಂ
ಮಂತ್ರೈಶ್ಚ ಘೋರೈರಭಿಮಂತ್ರಯಿತ್ವಾ|
09016046c ಸಸರ್ಜ ಮಾರ್ಗೇಣ ಚ ತಾಂ ಪರೇಣ
ವಧಾಯ ಮದ್ರಾಧಿಪತೇಸ್ತದಾನೀಂ||
ಪಾಂಡುಸುತನಿಂದ ಗಂಧ-ಮಾಲೆ-ಅಗ್ರಾಸನ-ಪಾನ-ಭೋಜನಗಳಿಂದ ಪ್ರಯತ್ನಪೂರ್ವಕವಾಗಿ ಪೂಜಿಸಲ್ಪಡುತ್ತಿದ್ದ, ಪ್ರಳಯಕಾಲದ ಅಗ್ನಿಗೆ ಸಮನಾಗಿ ಪ್ರಜ್ವಲಿಸುತ್ತಿದ್ದ, ಅಥರ್ವಾಂಗಿರಸ ಮಂತ್ರಗಳಿಂದ ಅಭಿಮಂತ್ರಿತ ಕೃತ್ಯೆಯಂತೆ ಉಗ್ರವಾಗಿದ್ದ, ಈಶಾನನ ಸಲುವಾಗಿ ಶತ್ರುಗಳ ಪ್ರಾಣ-ದೇಹಗಳನ್ನು ಭಕ್ಷಿಸಲು ತ್ವಷ್ಟನಿಂದ ನಿರ್ಮಿಸಲ್ಪಟ್ಟಿದ್ದ, ಭೂಮಿ-ಅಂತರಿಕ್ಷ-ಜಲಾಶಯಾದಿಗಳಲ್ಲಿದ್ದರೂ ಪ್ರಾಣಿಗಳನ್ನು ಸೆಳೆದು ಕೊಲ್ಲಬಹುದಾಗಿದ್ದ, ಘಂಟೆ-ಪತಾಕೆ-ಮಣಿ-ವಜ್ರಗಳಿಂದ ಬೆಳಗುತ್ತಿದ್ದ, ವೈಡೂರ್ಯ ಚಿತ್ರಿತ ಹೇಮದಂಡವಿದ್ದ, ತ್ವಷ್ಟನು ಪ್ರಯತ್ನಪೂರ್ವಕವಾಗಿ ಮತ್ತು ನಿಯಮಬದ್ಧವಾಗಿ ರಚಿಸಿದ್ದ, ಬ್ರಹ್ಮದ್ವೇಷಿಗಳನ್ನು ವಿನಾಶಗೊಳಿಸುವ, ಆ ಅಮೋಘ ಶಕ್ತಿಯನ್ನು ಯುಧಿಷ್ಠಿರನು ಬಲ-ಪ್ರಯತ್ನ ಮತ್ತು ಘೋರ ಮಂತ್ರಗಳಿಂದ ಅಭಿಮಂತ್ರಿಸಿ ಶತ್ರು ಮದ್ರಾಧಿಪತಿಯ ವಧೆಗಾಗಿ ಮಾರ್ಗದಲ್ಲಿ ಅತಿವೇಗವಾಗಿ ಹೋಗುವಂತೆ ಪ್ರಯೋಗಿಸಿದನು.
09016047a ಹತೋಽಸ್ಯಸಾವಿತ್ಯಭಿಗರ್ಜಮಾನೋ
ರುದ್ರೋಽಮ್ತಕಾಯಾಂತಕರಂ ಯಥೇಷುಂ|
09016047c ಪ್ರಸಾರ್ಯ ಬಾಹುಂ ಸುದೃಢಂ ಸುಪಾಣಿಂ
ಕ್ರೋಧೇನ ನೃತ್ಯನ್ನಿವ ಧರ್ಮರಾಜಃ||
ರುದ್ರನು ಅಂತಕನನ್ನು ಸಂಹರಿಸಲು ಹೇಗೆ ಬಾಣಪ್ರಯೋಗ ಮಾಡಿದ್ದನೋ ಹಾಗೆ ಕ್ರೋಧದಿಂದ ನರ್ತಿಸುತ್ತಿರುವನೋ ಎಂಬಂತೆ ಧರ್ಮರಾಜನು ತನ್ನ ಸುಂದರ ಸುದೃಢ ಕೈ-ಬಾಹುಗಳನ್ನು ಚಾಚಿ “ಇವನನ್ನು ಕೊಲ್ಲು!” ಎಂದು ಗರ್ಜಿಸುತ್ತಾ ಆ ಶಕ್ತಿಯನ್ನು ಪ್ರಯೋಗಿಸಿದನು.
09016048a ತಾಂ ಸರ್ವಶಕ್ತ್ಯಾ ಪ್ರಹಿತಾಂ ಸ ಶಕ್ತಿಂ
ಯುಧಿಷ್ಠಿರೇಣಾಪ್ರತಿವಾರ್ಯವೀರ್ಯಾಂ|
09016048c ಪ್ರತಿಗ್ರಹಾಯಾಭಿನನರ್ದ ಶಲ್ಯಃ
ಸಮ್ಯಗ್ ಹುತಾಮಗ್ನಿರಿವಾಜ್ಯಧಾರಾಂ||
ಸರ್ವಶಕ್ತಿಯನ್ನುಪಯೋಗಿಸಿ ವೀರ ಯುಧಿಷ್ಠಿರನು ಪ್ರಯೋಗಿಸಿದ, ತಡೆಯಲಸಾಧ್ಯ ಆ ಶಕ್ತಿಯನ್ನು ಶಲ್ಯನು ಆಜ್ಯಧಾರೆಯನ್ನು ಸ್ವೀಕರಿಸುವಾಗ ಅಗ್ನಿಯು ಚಟಪಟ ಶಬ್ಧಮಾಡುವಂತೆ ಸ್ವೀಕರಿಸಿ ಗರ್ಜಿಸಿದನು.
09016049a ಸಾ ತಸ್ಯ ಮರ್ಮಾಣಿ ವಿದಾರ್ಯ ಶುಭ್ರಂ
ಉರೋ ವಿಶಾಲಂ ಚ ತಥೈವ ವರ್ಮ|
09016049c ವಿವೇಶ ಗಾಂ ತೋಯಮಿವಾಪ್ರಸಕ್ತಾ
ಯಶೋ ವಿಶಾಲಂ ನೃಪತೇರ್ದಹಂತೀ||
ಆ ಶಕ್ತಿಯು ಶಲ್ಯನ ಮರ್ಮಸ್ಥಳಗಳನ್ನು ಸೀಳಿ, ಶುಭ್ರ-ವಿಶಾಲ ಕವಚ-ವಕ್ಷಸ್ಥಲಗಳನ್ನು ಭೇದಿಸಿ, ಸರ್ವತ್ರ ವ್ಯಾಪಿ ನೃಪತಿಯ ಕೀರ್ತಿಯನ್ನು ದಹಿಸುತ್ತಾ, ತಡೆಯಿಲ್ಲದೇ ನೀರನ್ನು ಪ್ರವೇಶಿಸುವಂತೆ ಭೂಮಿಯನ್ನು ಹೊಕ್ಕಿತು.
09016050a ನಾಸಾಕ್ಷಿಕರ್ಣಾಸ್ಯವಿನಿಹ್ಸೃತೇನ
ಪ್ರಸ್ಯಂದತಾ ಚ ವ್ರಣಸಂಭವೇನ|
09016050c ಸಂಸಿಕ್ತಗಾತ್ರೋ ರುಧಿರೇಣ ಸೋಽಭೂತ್
ಕ್ರೌಂಚೋ ಯಥಾ ಸ್ಕಂದಹತೋ ಮಹಾದ್ರಿಃ||
ಮೂಗು-ಕಣ್ಣು-ಕಿವಿ-ಮುಖಗಳಿಂದ ಮತ್ತು ಗಾಯಗಳಿಂದ ಪಸರಿಸುವ ರಕ್ತದಿಂದ ತೋಯ್ದುಹೋಗಿದ್ದ ಶಲ್ಯನ ಶರೀರವು ಸ್ಕಂದನಿಂದ ಪ್ರಹರಿಸಲ್ಪಟ್ಟ ಮಹಾದ್ರಿ ಕ್ರೌಂಚದಂತೆ ತೋರಿತು.
09016051a ಪ್ರಸಾರ್ಯ ಬಾಹೂ ಸ ರಥಾದ್ಗತೋ ಗಾಂ
ಸಂಚಿನ್ನವರ್ಮಾ ಕುರುನಂದನೇನ|
09016051c ಮಹೇಂದ್ರವಾಹಪ್ರತಿಮೋ ಮಹಾತ್ಮಾ
ವಜ್ರಾಹತಂ ಶೃಂಗಮಿವಾಚಲಸ್ಯ||
ಕುರುನಂದನನು ಕವಚವನ್ನು ತುಂಡರಿಸಿದ್ದ ಮಹಾತ್ಮ ಶಲ್ಯನು ಮಹೇಂದ್ರನು ಪ್ರಯೋಗಿಸಿದ ಅಪ್ರತಿಮ ವಜ್ರದಿಂದ ಹತಗೊಂಡ ಪರ್ವತ ಶಿಖರದಂತೆ ಬಾಹುಗಳನ್ನು ಚಾಚಿ ರಥದಿಂದ ಭೂಮಿಯ ಮೇಲೆ ಬಿದ್ದನು.
09016052a ಬಾಹೂ ಪ್ರಸಾರ್ಯಾಭಿಮುಖೋ ಧರ್ಮರಾಜಸ್ಯ ಮದ್ರರಾಟ್|
09016052c ತತೋ ನಿಪತಿತೋ ಭೂಮಾವಿಂದ್ರಧ್ವಜ ಇವೋಚ್ಚ್ರಿತಃ||
ಮದ್ರರಾಜನು ಬಾಹುಗಳನ್ನು ಚಾಚಿ ಎತ್ತರ ಇಂದ್ರಧ್ವಜವು ಬೀಳುವಂತೆ ಧರ್ಮರಾಜನ ಅಭಿಮುಖನಾಗಿಯೇ ಭೂಮಿಯ ಮೇಲೆ ಬಿದ್ದನು.
09016053a ಸ ತಥಾ ಭಿನ್ನಸರ್ವಾಂಗೋ ರುಧಿರೇಣ ಸಮುಕ್ಷಿತಃ|
09016053c ಪ್ರತ್ಯುದ್ಗತ ಇವ ಪ್ರೇಮ್ಣಾ ಭೂಮ್ಯಾ ಸ ನರಪುಂಗವಃ||
09016054a ಪ್ರಿಯಯಾ ಕಾಂತಯಾ ಕಾಂತಃ ಪತಮಾನ ಇವೋರಸಿ|
ಸರ್ವಾಂಗಗಳಲ್ಲಿ ಗಾಯಗೊಂಡು ರಕ್ತದಿಂದ ತೋಯ್ದುಹೋಗಿದ್ದ ಆ ನರಪುಂಗವನು ಬೀಳಲು ಭೂಮಿಯು ಪ್ರೇಮದಿಂದ ಪ್ರಿಯ ಕಾಂತನು ಎದೆಯ ಮೇಲೆ ಬೀಳುವಾಗ ತಬ್ಬಿಕೊಳ್ಳುವಂತೆ ಅವನನ್ನು ಸ್ವೀಕರಿಸಿದಳು.
09016054c ಚಿರಂ ಭುಕ್ತ್ವಾ ವಸುಮತೀಂ ಪ್ರಿಯಾಂ ಕಾಂತಾಮಿವ ಪ್ರಭುಃ|
09016054e ಸರ್ವೈರಂಗೈಃ ಸಮಾಶ್ಲಿಷ್ಯ ಪ್ರಸುಪ್ತ ಇವ ಸೋಽಭವತ್||
ಪ್ರಿಯಕಾಂತೆಯಂತಿದ್ದ ವಸುಮತಿಯನ್ನು ಬಹುಕಾಲ ಭೋಗಿಸಿ ಅವಳನ್ನು ಸರ್ವಾಂಗಗಳಿಂದ ಆಲಿಂಗನಮಾಡಿಕೊಂಡು ಮಲಗಿರುವನೋ ಎನ್ನುವಂತೆ ಪ್ರಭು ಶಲ್ಯನು ತೋರುತ್ತಿದ್ದನು.
09016055a ಧರ್ಮ್ಯೇ ಧರ್ಮಾತ್ಮನಾ ಯುದ್ಧೇ ನಿಹತೋ ಧರ್ಮಸೂನುನಾ|
09016055c ಸಮ್ಯಗ್ ಹುತ ಇವ ಸ್ವಿಷ್ಟಃ ಪ್ರಶಾಂತೋಽಗ್ನಿರಿವಾಧ್ವರೇ||
ಧರ್ಮಯುದ್ಧದಲ್ಲಿ ಧರ್ಮಾತ್ಮಾ ಧರ್ಮಸೂನುವಿನಿಂದ ಹತನಾದ ಶಲ್ಯನು ಯಜ್ಞದಲ್ಲಿ ವಿಧಿಪೂರ್ವಕ ಆಜ್ಯಾಹುತಿಯನ್ನು ಪಡೆದು ಪೂಜಾದಿಗಳಿಂದ ಆರಾಧಿಸಲ್ಪಟ್ಟು ಪ್ರಶಾಂತನಾಗುವ ಅಗ್ನಿಯಂತೆ ಶಾಂತನಾದನು.
09016056a ಶಕ್ತ್ಯಾ ವಿಭಿನ್ನಹೃದಯಂ ವಿಪ್ರವಿದ್ಧಾಯುಧಧ್ವಜಂ|
09016056c ಸಂಶಾಂತಮಪಿ ಮದ್ರೇಶಂ ಲಕ್ಷ್ಮೀರ್ನೈವ ವ್ಯಮುಂಚತ||
ಶಕ್ತಿಯಿಂದ ಹೃದಯವು ಒಡೆದುಹೋಗಿದ್ದ, ಆಯುಧ-ಧ್ವಜಗಳು ವಿನಾಶಗೊಂಡು ಸುಶಾಂತನಾಗಿದ್ದ ಮದ್ರೇಶನನ್ನು ಲಕ್ಷ್ಮಿಯು ಬಿಟ್ಟು ಹೋಗಿರಲಿಲ್ಲ.
09016057a ತತೋ ಯುಧಿಷ್ಠಿರಶ್ಚಾಪಮಾದಾಯೇಂದ್ರಧನುಷ್ಪ್ರಭಂ|
09016057c ವ್ಯಧಮದ್ದ್ವಿಷತಃ ಸಂಖ್ಯೇ ಖಗರಾಡಿವ ಪನ್ನಗಾನ್|
ಅನಂತರ ಯುಧಿಷ್ಠಿರನು ಪ್ರಭೆಯುಳ್ಳ ಧನುಸ್ಸನ್ನೆತ್ತಿಕೊಂಡು ಪಕ್ಷಿರಾಜ ಗರುಡನು ಸರ್ಪಗಳನ್ನು ಹೇಗೋ ಹಾಗೆ ಯುದ್ಧದಲ್ಲಿ ಶತ್ರುಗಳನ್ನು ನಾಶಪಡಿಸಿದನು.
09016057e ದೇಹಾಸೂನ್ನಿಶಿತೈರ್ಭಲ್ಲೈ ರಿಪೂಣಾಂ ನಾಶಯನ್ ಕ್ಷಣಾತ್||
09016058a ತತಃ ಪಾರ್ಥಸ್ಯ ಬಾಣೌಘೈರಾವೃತಾಃ ಸೈನಿಕಾಸ್ತವ|
09016058c ನಿಮೀಲಿತಾಕ್ಷಾಃ ಕ್ಷಿಣ್ವಂತೋ ಭೃಶಮನ್ಯೋನ್ಯಮರ್ದಿತಾಃ|
09016058e ಸಂನ್ಯಸ್ತಕವಚಾ ದೇಹೈರ್ವಿಪತ್ರಾಯುಧಜೀವಿತಾಃ||
ನಿಶಿತ ಭಲ್ಲಗಳಿಂದ ಶತ್ರುಗಳ ಶರೀರಗಳನ್ನು ಕ್ಷಣದಲ್ಲಿ ನಾಶಗೊಳಿಸಿದನು. ಪಾರ್ಥನ ಬಾಣಸಮೂಹಗಳಿಂದ ಆಚ್ಛಾದಿತ ನಿನ್ನ ಸೈನಿಕರು ಕಣ್ಣುಗಳನ್ನು ಮುಚ್ಚಿಕೊಂಡರು. ಪರಸ್ಪರರ ಸಂಘರ್ಷದಿಂದ ಬಹಳವಾಗಿ ಗಾಯಗೊಂಡರು. ಕವಚಗಳು ಕಳಚಿಕೊಂಡಂತೆ ಶರೀರ-ಆಯುಧ-ಜೀವಗಳನ್ನು ತೊರೆದರು.
09016059a ತತಃ ಶಲ್ಯೇ ನಿಪತಿತೇ ಮದ್ರರಾಜಾನುಜೋ ಯುವಾ|
09016059c ಭ್ರಾತುಃ ಸರ್ವೈರ್ಗುಣೈಸ್ತುಲ್ಯೋ ರಥೀ ಪಾಂಡವಮಭ್ಯಯಾತ್||
ಶಲ್ಯನು ಬೀಳಲು ಎಲ್ಲಗುಣಗಳಲ್ಲಿಯೂ ಅಣ್ಣನ ಸಮನಾಗಿದ್ದ ಮದ್ರರಾಜನ ಯುವ ಸಹೋದರ ರಥಿಯು ಪಾಂಡವನನ್ನು ಆಕ್ರಮಣಿಸಿದನು.
09016060a ವಿವ್ಯಾಧ ಚ ನರಶ್ರೇಷ್ಠೋ ನಾರಾಚೈರ್ಬಹುಭಿಸ್ತ್ವರನ್|
09016060c ಹತಸ್ಯಾಪಚಿತಿಂ ಭ್ರಾತುಶ್ಚಿಕೀರ್ಷುರ್ಯುದ್ಧದುರ್ಮದಃ||
ಆ ನರಶ್ರೇಷ್ಠ ಯುದ್ಧದುರ್ಮದನು ಅನೇಕ ನಾರಾಚಗಳಿಂದ ಯುಧಿಷ್ಠಿರನನ್ನು ಗಾಯಗೊಳಿಸಿದನು.
09016061a ತಂ ವಿವ್ಯಾಧಾಶುಗೈಃ ಷಡ್ಭಿರ್ಧರ್ಮರಾಜಸ್ತ್ವರನ್ನಿವ|
09016061c ಕಾರ್ಮುಕಂ ಚಾಸ್ಯ ಚಿಚ್ಚೇದ ಕ್ಷುರಾಭ್ಯಾಂ ಧ್ವಜಮೇವ ಚ||
ಧರ್ಮರಾಜನು ತ್ವರೆಮಾಡಿ ಅವನನ್ನು ಆರು ಆಶುಗಗಳಿಂದ ಹೊಡೆದನು ಮತ್ತು ಎರಡು ಕ್ಷುರಗಳಿಂದ ಅವನ ಧನುಸ್ಸು-ಧ್ವಜಗಳನ್ನು ತುಂಡರಿಸಿದನು.
09016062a ತತೋಽಸ್ಯ ದೀಪ್ಯಮಾನೇನ ಸುದೃಢೇನ ಶಿತೇನ ಚ|
09016062c ಪ್ರಮುಖೇ ವರ್ತಮಾನಸ್ಯ ಭಲ್ಲೇನಾಪಾಹರಚ್ಚಿರಃ||
ಅನಂತರ ಬೆಳಗುತ್ತಿದ್ದ ಸುದೃಢ ನಿಶಿತ ಭಲ್ಲದಿಂದ ಪ್ರಮುಖದಲ್ಲಿದ್ದ ಶಲ್ಯಾನುಜನ ಶಿರವನ್ನು ಅಪಹರಿಸಿದನು.
09016063a ಸಕುಂಡಲಂ ತದ್ದದೃಶೇ ಪತಮಾನಂ ಶಿರೋ ರಥಾತ್|
09016063c ಪುಣ್ಯಕ್ಷಯಮಿವ ಪ್ರಾಪ್ಯ ಪತಂತಂ ಸ್ವರ್ಗವಾಸಿನಂ||
ಕುಂಡಲ ಸಹಿತ ರಥದಿಂದ ಕೆಳಗೆ ಬೀಳುತ್ತಿದ್ದ ಆ ಶಿರವು ಪುಣ್ಯಕಳೆದು ಕೆಳಕ್ಕೆ ಬೀಳುವ ಸ್ವರ್ಗವಾಸಿಯಂತೆ ತೋರುತ್ತಿತ್ತು.
09016064a ತಸ್ಯಾಪಕೃಷ್ಟಶೀರ್ಷಂ ತಚ್ಚರೀರಂ ಪತಿತಂ ರಥಾತ್|
09016064c ರುಧಿರೇಣಾವಸಿಕ್ತಾಂಗಂ ದೃಷ್ಟ್ವಾ ಸೈನ್ಯಮಭಜ್ಯತ||
ಶಿರಸ್ಸಿನಿಂದ ಬೇರ್ಪಟ್ಟಿದ್ದ ಅವನ ಶರೀರವೂ ಕೂಡ ರಥದಿಂದ ಕೆಳಗೆ ಬಿದ್ದಿತು. ರಕ್ತದಿಂದ ತೋಯ್ದುಹೋಗಿದ್ದ ಅವನ ಶರೀರವನ್ನು ನೋಡಿ ಸೈನ್ಯವು ಭಗ್ನವಾಗಿ ಹೋಯಿತು.
09016065a ವಿಚಿತ್ರಕವಚೇ ತಸ್ಮಿನ್ ಹತೇ ಮದ್ರನೃಪಾನುಜೇ|
09016065c ಹಾಹಾಕಾರಂ ವಿಕುರ್ವಾಣಾಃ ಕುರವೋ ವಿಪ್ರದುದ್ರುವುಃ||
ವಿಚಿತ್ರಕವಚಿ ಆ ಮದ್ರನೃಪನ ಅನುಜನು ಹತನಾಗಲು ಸೇನೆಯು ಹಾಹಾಕಾರಮಾಡುತ್ತಾ ಪಲಾಯನಮಾಡಿತು.
09016066a ಶಲ್ಯಾನುಜಂ ಹತಂ ದೃಷ್ಟ್ವಾ ತಾವಕಾಸ್ತ್ಯಕ್ತಜೀವಿತಾಃ|
09016066c ವಿತ್ರೇಸುಃ ಪಾಂಡವಭಯಾದ್ರಜೋಧ್ವಸ್ತಾಸ್ತಥಾ ಭೃಶಂ||
ಶಲ್ಯಾನುಜನು ಹತನಾದುದನ್ನು ಕಂಡು ಜೀವವನ್ನೇ ಮುಡುಪಾಗಿಟ್ಟಿದ್ದ ನಿನ್ನವರು ಪಾಂಡವರ ಭಯದಿಂದ ಗಾಬರಿಗೊಂಡರು.
09016067a ತಾಂಸ್ತಥಾ ಭಜ್ಯತಸ್ತ್ರಸ್ತಾನ್ಕೌರವಾನ್ಭರತರ್ಷಭ|
09016067c ಶಿನೇರ್ನಪ್ತಾ ಕಿರನ್ಬಾಣೈರಭ್ಯವರ್ತತ ಸಾತ್ಯಕಿಃ||
ಭರತರ್ಷಭ! ಭಯಗೊಂಡಿದ್ದ ಕೌರವರ ಮೇಲೆ ಶಿನಿಯ ಮೊಮ್ಮಗ ಸಾತ್ಯಕಿಯು ಬಾಣಗಳನ್ನು ಎರಚುತ್ತಾ ಹಿಂಬಾಲಿಸಿದನು.
09016068a ತಮಾಯಾಂತಂ ಮಹೇಷ್ವಾಸಮಪ್ರಸಹ್ಯಂ ದುರಾಸದಂ|
09016068c ಹಾರ್ದಿಕ್ಯಸ್ತ್ವರಿತೋ ರಾಜನ್ಪ್ರತ್ಯಗೃಹ್ಣಾದಭೀತವತ್||
ಹಾಗೆ ಹಿಂಬಾಲಿಸಿ ಬರುತ್ತಿದ್ದ ಆ ಮಹೇಷ್ವಾಸ-ದುರಾಸದ-ಸಹಿಸಲಸಾಧ್ಯ ಸಾತ್ಯಕಿಯನ್ನು ಹಾರ್ದಿಕ್ಯ ಕೃತವರ್ಮನು ತ್ವರೆಮಾಡಿ ಸ್ವಲ್ಪವೂ ಭಯವಿಲ್ಲದವನಂತೆ ಎದುರಿಸಿದನು.
09016069a ತೌ ಸಮೇತೌ ಮಹಾತ್ಮಾನೌ ವಾರ್ಷ್ಣೇಯಾವಪರಾಜಿತೌ|
09016069c ಹಾರ್ದಿಕ್ಯಃ ಸಾತ್ಯಕಿಶ್ಚೈವ ಸಿಂಹಾವಿವ ಮದೋತ್ಕಟೌ||
ಆ ಇಬ್ಬರು ಮಹಾತ್ಮ-ಅಪರಾಜಿತ-ವಾರ್ಷ್ಣೇಯ ಹಾರ್ದಿಕ್ಯ-ಸಾತ್ಯಕಿಯರು ಮದೋತ್ಕಟ ಸಿಂಹಗಳಂತೆ ಸಂಘರ್ಷಿಸಿದರು.
09016070a ಇಷುಭಿರ್ವಿಮಲಾಭಾಸೈಶ್ಚಾದಯಂತೌ ಪರಸ್ಪರಂ|
09016070c ಅರ್ಚಿರ್ಭಿರಿವ ಸೂರ್ಯಸ್ಯ ದಿವಾಕರಸಮಪ್ರಭೌ||
ದಿವಾಕರನ ಸಮಪ್ರಭೆಯುಳ್ಳ ಅವರಿಬ್ಬರೂ ಸೂರ್ಯಕಿರಣಗಳಂತೆ ವಿಮಲವಾಗಿ ಹೊಳೆಯುತ್ತಿರುವ ಬಾಣಗಳಿಂದ ಪರಸ್ಪರರನ್ನು ಮುಸುಕಿದರು.
09016071a ಚಾಪಮಾರ್ಗಬಲೋದ್ಧೂತಾನ್ಮಾರ್ಗಣಾನ್ ವೃಷ್ಣಿಸಿಂಹಯೋಃ|
09016071c ಆಕಾಶೇ ಸಮಪಶ್ಯಾಮ ಪತಂಗಾನಿವ ಶೀಘ್ರಗಾನ್||
ವೃಷ್ಣಿಸಿಂಹರ ಚಾಪಮಾರ್ಗದಿಂದ ಬಲವಾಗಿ ಹೊರಟ ಮಾರ್ಗಣಗಳು ಆಕಾಶದಲ್ಲಿ ಪತಂಗಗಳಂತೆ ಶೀಘ್ರವಾಗಿ ಹೋಗುತ್ತಿರುವುದನ್ನು ನಾವು ಕಂಡೆವು.
09016072a ಸಾತ್ಯಕಿಂ ದಶಭಿರ್ವಿದ್ಧ್ವಾ ಹಯಾಂಶ್ಚಾಸ್ಯ ತ್ರಿಭಿಃ ಶರೈಃ|
09016072c ಚಾಪಮೇಕೇನ ಚಿಚ್ಚೇದ ಹಾರ್ದಿಕ್ಯೋ ನತಪರ್ವಣಾ||
ಹಾರ್ದಿಕ್ಯನು ಹತ್ತು ಬಾಣಗಳಿಂದ ಸಾತ್ಯಕಿಯನ್ನು ಮತ್ತು ಮೂರು ಶರಗಳಿಂದ ಅವನ ಕುದುರೆಗಳ ಪ್ರಹರಿಸಿ ಒಂದು ನತಪರ್ವಶರದಿಂದ ಅವನ ಧನುಸ್ಸನ್ನು ತುಂಡರಿಸಿದನು.
09016073a ತನ್ನಿಕೃತ್ತಂ ಧನುಃ ಶ್ರೇಷ್ಠಮಪಾಸ್ಯ ಶಿನಿಪುಂಗವಃ|
09016073c ಅನ್ಯದಾದತ್ತ ವೇಗೇನ ವೇಗವತ್ತರಮಾಯುಧಂ||
ತುಂಡಾದ ಆ ಶ್ರೇಷ್ಠ ಧನುಸ್ಸನ್ನು ಎಸೆದು ಶಿನಿಪುಂಗವನು ವೇಗದಿಂದ ವೇಗವತ್ತರವಾದ ಇನ್ನೊಂದು ಆಯುಧವನ್ನು ಎತ್ತಿಕೊಂಡನು.
09016074a ತದಾದಾಯ ಧನುಃ ಶ್ರೇಷ್ಠಂ ವರಿಷ್ಠಃ ಸರ್ವಧನ್ವಿನಾಂ|
09016074c ಹಾರ್ದಿಕ್ಯಂ ದಶಭಿರ್ಬಾಣೈಃ ಪ್ರತ್ಯವಿಧ್ಯತ್ಸ್ತನಾಂತರೇ||
ಸರ್ವಧನ್ವಿಗಳಲ್ಲಿ ವರಿಷ್ಠ ಸಾತ್ಯಕಿಯು ಆ ಶ್ರೇಷ್ಠ ಧನುಸ್ಸನ್ನೆತ್ತಿಕೊಂಡು ಹತ್ತು ಬಾಣಗಳಿಂದ ಹಾರ್ದಿಕ್ಯನ ಎದೆಗೆ ಹೊಡೆದನು.
09016075a ತತೋ ರಥಂ ಯುಗೇಷಾಂ ಚ ಚಿತ್ತ್ವಾ ಭಲ್ಲೈಃ ಸುಸಮ್ಯತೈಃ|
09016075c ಅಶ್ವಾಂಸ್ತಸ್ಯಾವಧೀತ್ತೂರ್ಣಮುಭೌ ಚ ಪಾರ್ಷ್ಣಿಸಾರಥೀ||
ಅನಂತರ ಚೆನ್ನಾಗಿ ಹೂಡಿ ಪ್ರಹರಿಸಿದ ಭಲ್ಲಗಳಿಂದ ಅವನ ರಥದ ನೊಗಗಳನ್ನು ತುಂಡರಿಸಿ, ಅವನ ಕುದುರೆಗಳನ್ನೂ ಇಬ್ಬರು ಪಾರ್ಶ್ವಸಾರಥಿಗಳನ್ನೂ ಬೇಗನೇ ಸಂಹರಿಸಿದನು.
09016076a ಮದ್ರರಾಜೇ ಹತೇ ರಾಜನ್ವಿರಥೇ ಕೃತವರ್ಮಣಿ|
09016076c ದುರ್ಯೋಧನಬಲಂ ಸರ್ವಂ ಪುನರಾಸೀತ್ಪರಾಙ್ಮುಖಂ||
ರಾಜನ್! ಮದ್ರರಾಜನು ಹತನಾಗಲು ಮತ್ತು ಕೃತವರ್ಮನು ವಿರಥನಾಗಲು ದುರ್ಯೋಧನನ ಸೇನೆಗಳೆಲ್ಲವೂ ಪುನಃ ಪರಾಙ್ಮುಖವಾಯಿತು.
09016077a ತತ್ಪರೇ ನಾವಬುಧ್ಯಂತ ಸೈನ್ಯೇನ ರಜಸಾ ವೃತೇ|
09016077c ಬಲಂ ತು ಹತಭೂಯಿಷ್ಠಂ ತತ್ತದಾಸೀತ್ಪರಾಙ್ಮುಖಂ||
ಆದರೆ ಆ ಸಮಯದಲ್ಲಿ ರಣರಂಗವು ಧೂಳಿನಿಂದ ತುಂಬಿಹೋಗಿದ್ದುದರಿಂದ ಅಳಿದುಳಿದ ಸೇನೆಯು ಪರಾಙ್ಮುಖವಾದುದು ಇತರರಿಗೆ ತಿಳಿಯಲಿಲ್ಲ.
09016078a ತತೋ ಮುಹೂರ್ತಾತ್ತೇಽಪಶ್ಯನ್ರಜೋ ಭೌಮಂ ಸಮುತ್ಥಿತಂ|
09016078c ವಿವಿಧೈಃ ಶೋಣಿತಸ್ರಾವೈಃ ಪ್ರಶಾಂತಂ ಪುರುಷರ್ಷಭ||
ಪುರುಷರ್ಷಭ! ಮುಹೂರ್ತದಲ್ಲಿಯೇ ವಿವಿಧ ರಕ್ತಸ್ರಾವಗಳಿಂದ ಭೂಮಿಯ ಮೇಲೆದ್ದಿದ್ದ ಧೂಳು ಪ್ರಶಾಂತವಾದುದನ್ನು ನೋಡಿದೆವು.
09016079a ತತೋ ದುರ್ಯೋಧನೋ ದೃಷ್ಟ್ವಾ ಭಗ್ನಂ ಸ್ವಬಲಮಂತಿಕಾತ್|
09016079c ಜವೇನಾಪತತಃ ಪಾರ್ಥಾನೇಕಃ ಸರ್ವಾನವಾರಯತ್||
ತನ್ನ ಸೇನೆಯು ಭಗ್ನವಾಗುತ್ತಿರುವುದನ್ನು ಹತ್ತಿರದಿಂದಲೇ ನೋಡಿದ ದುರ್ಯೋಧನನು ವೇಗದಿಂದ ಮೇಲೆ ಬೀಳುತ್ತಿದ್ದ ಅನೇಕ ಪಾರ್ಥರೆಲ್ಲರನ್ನೂ ತಡೆದನು.
09016080a ಪಾಂಡವಾನ್ಸರಥಾನ್ದೃಷ್ಟ್ವಾ ಧೃಷ್ಟದ್ಯುಮ್ನಂ ಚ ಪಾರ್ಷತಂ|
09016080c ಆನರ್ತಂ ಚ ದುರಾಧರ್ಷಂ ಶಿತೈರ್ಬಾಣೈರವಾಕಿರತ್||
ರಥವೇರಿದ್ದ ಪಾಂಡವರನ್ನೂ, ಪಾರ್ಷತ ಧೃಷ್ಟದ್ಯುಮ್ನ, ದುರಾಧರ್ಷ ಆನರ್ತನನ್ನೂ ನೋಡಿ ನಿಶಿತ ಬಾಣಗಳಿಂದ ಅವರನ್ನು ಮುಸುಕಿದನು.
09016081a ತಂ ಪರೇ ನಾಭ್ಯವರ್ತಂತ ಮರ್ತ್ಯಾ ಮೃತ್ಯುಮಿವಾಗತಂ|
09016081c ಅಥಾನ್ಯಂ ರಥಮಾಸ್ಥಾಯ ಹಾರ್ದಿಕ್ಯೋಽಪಿ ನ್ಯವರ್ತತ||
ಬಂದಿರುವ ಮೃತ್ಯುವನ್ನು ತಡೆಯಲಾರದ ಮರ್ತ್ಯರಂತೆ ಪಾಂಡವರು ದುರ್ಯೋಧನನನ್ನು ಅತಿಕ್ರಮಿಸಿ ಹೋಗಲಾಗಲಿಲ್ಲ. ಆಗ ಹಾರ್ದಿಕ್ಯನೂ ಇನ್ನೊಂದು ರಥವನ್ನೇರಿ ಹಿಂದಿರುಗಿದನು.
09016082a ತತೋ ಯುಧಿಷ್ಠಿರೋ ರಾಜಾ ತ್ವರಮಾಣೋ ಮಹಾರಥಃ|
09016082c ಚತುರ್ಭಿರ್ನಿಜಘಾನಾಶ್ವಾನ್ಪತ್ರಿಭಿಃ ಕೃತವರ್ಮಣಃ||
09016082e ವಿವ್ಯಾಧ ಗೌತಮಂ ಚಾಪಿ ಷಡ್ಭಿರ್ಭಲ್ಲೈಃ ಸುತೇಜನೈಃ||
ಆಗ ಮಹಾರಥ ರಾಜಾ ಯುಧಿಷ್ಠಿರನು ತ್ವರೆಮಾಡಿ ನಾಲ್ಕು ಪತ್ರಿಗಳಿಂದ ಕೃತವರ್ಮನ ಕುದುರೆಗಳನ್ನು ಸಂಹರಿಸಿದನು. ಮತ್ತು ತೇಜಸ್ಸಿನಿಂದ ಉರಿಯುತ್ತಿರುವ ಆರು ಭಲ್ಲಗಳಿಂದ ಗೌತಮ ಕೃಪನನ್ನು ಪ್ರಹರಿಸಿದನು.
09016083a ಅಶ್ವತ್ಥಾಮಾ ತತೋ ರಾಜ್ಞಾ ಹತಾಶ್ವಂ ವಿರಥೀಕೃತಂ|
09016083c ಸಮಪೋವಾಹ ಹಾರ್ದಿಕ್ಯಂ ಸ್ವರಥೇನ ಯುಧಿಷ್ಠಿರಾತ್||
ರಾಜನಿಂದ ಹತಾಶ್ವನೂ ವಿರಥನೂ ಆಗಿದ್ದ ಹಾರ್ದಿಕ್ಯನನ್ನು ಅಶ್ವತ್ಥಾಮನು ತನ್ನ ರಥದ ಮೇಲೇರಿಸಿಕೊಂಡು ಯುಧಿಷ್ಠಿರನಿಂದ ದೂರಕ್ಕೆ ಕೊಂಡೊಯ್ದನು.
09016084a ತತಃ ಶಾರದ್ವತೋಽಷ್ಟಾಭಿಃ ಪ್ರತ್ಯವಿಧ್ಯದ್ಯುಧಿಷ್ಠಿರಂ|
09016084c ವಿವ್ಯಾಧ ಚಾಶ್ವಾನ್ನಿಶಿತೈಸ್ತಸ್ಯಾಷ್ಟಾಭಿಃ ಶಿಲೀಮುಖೈಃ||
ಅನಂತರ ಪ್ರತಿಯಾಗಿ ಶಾರದ್ವತ ಕೃಪನು ಯುಧಿಷ್ಠಿರನನ್ನು ಎಂಟು ಬಾಣಗಳಿಂದ ಪ್ರಹರಿಸಿ, ಎಂಟು ನಿಶಿತ ಶಿಲೀಮುಖಗಳಿಂದ ಅವನ ಕುದುರೆಗಳನ್ನೂ ಗಾಯಗೊಳಿಸಿದನು.
09016085a ಏವಮೇತನ್ಮಹಾರಾಜ ಯುದ್ಧಶೇಷಮವರ್ತತ|
09016085c ತವ ದುರ್ಮಂತ್ರಿತೇ ರಾಜನ್ಸಹಪುತ್ರಸ್ಯ ಭಾರತ||
ಮಹಾರಾಜ! ಭಾರತ! ರಾಜನ್! ಹೀಗೆ ಪುತ್ರರೊಂದಿಗೆ ನಿನ್ನ ದುರ್ಮಂತ್ರದಿಂದಾದ ಆ ಯುದ್ಧದ ಕೊನೆಯು ಈ ರೀತಿ ನಡೆಯಿತು.
09016086a ತಸ್ಮಿನ್ಮಹೇಷ್ವಾಸವರೇ ವಿಶಸ್ತೇ
ಸಂಗ್ರಾಮಮಧ್ಯೇ ಕುರುಪುಂಗವೇನ|
09016086c ಪಾರ್ಥಾಃ ಸಮೇತಾಃ ಪರಮಪ್ರಹೃಷ್ಟಾಃ|
ಶಂಖಾನ್ಪ್ರದಧ್ಮುರ್ಹತಮೀಕ್ಷ್ಯ ಶಲ್ಯಂ||
ಸಂಗ್ರಾಮದಲ್ಲಿ ಕುರುಪುಂಗವನಿಂದ ಮಹೇಷ್ವಾಸರಲ್ಲಿ ಶ್ರೇಷ್ಠ ಶಲ್ಯನು ಹತನಾದುದನ್ನು ಕಂಡು ಪರಮಹೃಷ್ಟರಾದ ಪಾರ್ಥರು ಒಟ್ಟಿಗೇ ಶಂಖಗಳನ್ನೂದಿದರು.
09016087a ಯುಧಿಷ್ಠಿರಂ ಚ ಪ್ರಶಶಂಸುರಾಜೌ
ಪುರಾ ಸುರಾ ವೃತ್ರವಧೇ ಯಥೇಂದ್ರಂ|
09016087c ಚಕ್ರುಶ್ಚ ನಾನಾವಿಧವಾದ್ಯಶಬ್ದಾನ್
ನಿನಾದಯಂತೋ ವಸುಧಾಂ ಸಮಂತಾತ್||
ಹಿಂದೆ ವೃತ್ರವಧೆಯಾದಾಗ ಸುರರು ಇಂದ್ರನನ್ನು ಹೇಗೋ ಹಾಗೆ ಯುಧಿಷ್ಠಿರನನ್ನು ಪ್ರಶಂಸಿಸಿದರು. ನಾನಾವಿಧದ ವಾದ್ಯಶಬ್ಧಗಳಿಂದ ವಸುಧೆಯ ಎಲ್ಲ ದಿಕ್ಕುಗಳನ್ನು ಮೊಳಗಿಸಿದರು.”
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಶಲ್ಯವಧೇ ಷೋಡಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಶಲ್ಯವಧೆ ಎನ್ನುವ ಹದಿನಾರನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಃ|
ಇದು ಶ್ರೀ ಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೮/೧೮, ಉಪಪರ್ವಗಳು-೭೪/೧೦೦, ಅಧ್ಯಾಯಗಳು-೧೨೩೫/೧೯೯೫, ಶ್ಲೋಕಗಳು-೪೬೦೩೭/೭೩೭೮೪
