ಶಲ್ಯಪರ್ವ: ಶಲ್ಯವಧ ಪರ್ವ
Contents
Toggle೧೫
ಪಾಂಡವಸೇನೆಯ ಪಲಾಯನ (೧-೩). ಸಂಕುಲಯುದ್ಧ (೪-೮). ಶಲ್ಯನ ಪರಾಕ್ರಮ (೯-೧೩). ಯುಧಿಷ್ಠಿರವಾಕ್ಯ (೧೪-೨೫). ಯುಧಿಷ್ಠಿರ-ಶಲ್ಯರ ಯುದ್ಧ (೨೬-೩೫). ಭೀಮಸೇನ-ದುರ್ಯೋಧನರ ಯುದ್ಧ (೩೬-೪೩). ಶಲ್ಯ-ಯುಧಿಷ್ಠಿರರ ಯುದ್ಧ (೪೪-೬೭).
09015001 ಸಂಜಯ ಉವಾಚ
09015001a ತತಃ ಸೈನ್ಯಾಸ್ತವ ವಿಭೋ ಮದ್ರರಾಜಪುರಸ್ಕೃತಾಃ|
09015001c ಪುನರಭ್ಯದ್ರವನ್ಪಾರ್ಥಾನ್ವೇಗೇನ ಮಹತಾ ರಣೇ||
ಸಂಜಯನು ಹೇಳಿದನು: “ವಿಭೋ! ಮದ್ರರಾಜನ ನಾಯಕತ್ವದಲ್ಲಿದ್ದ ನಿನ್ನ ಸೇನೆಯು ಆ ಮಹಾರಣದಲ್ಲಿ ಪುನಃ ವೇಗದಿಂದ ಪಾರ್ಥರನ್ನು ಆಕ್ರಮಣಿಸಿತು.
09015002a ಪೀಡಿತಾಸ್ತಾವಕಾಃ ಸರ್ವೇ ಪ್ರಧಾವಂತೋ ರಣೋತ್ಕಟಾಃ|
09015002c ಕ್ಷಣೇನೈವ ಚ ಪಾರ್ಥಾಂಸ್ತೇ ಬಹುತ್ವಾತ್ಸಮಲೋಡಯನ್||
ಪೀಡೆಗೊಳಗಾಗಿದ್ದರೂ ರಣೋತ್ಕಟರಾದ ನಿನ್ನವರೆಲ್ಲರೂ ಸಂಖ್ಯೆಯಲ್ಲಿ ಅಧಿಕರಾಗಿದ್ದುದರಿಂದ ಕ್ಷಣದಲ್ಲಿಯೇ ಮುನ್ನುಗ್ಗಿ ಪಾರ್ಥರನ್ನು ಮರ್ದಿಸತೊಡಗಿದರು.
09015003a ತೇ ವಧ್ಯಮಾನಾಃ ಕುರುಭಿಃ ಪಾಂಡವಾ ನಾವತಸ್ಥಿರೇ|
09015003c ನಿವಾರ್ಯಮಾಣಾ ಭೀಮೇನ ಪಶ್ಯತೋಃ ಕೃಷ್ಣಪಾರ್ಥಯೋಃ||
ಅವರಿಂದ ವಧಿಸಲ್ಪಡುತ್ತಿದ್ದ ಪಾಂಡವರು, ಭೀಮನಿಂದ ತಡೆಯಲ್ಪಟ್ಟರೂ, ಕೃಷ್ಣ-ಪಾರ್ಥರು ನೋಡುತ್ತಿದ್ದಂತೆಯೇ ಅಲ್ಲಿ ನಿಲ್ಲದೇ ಪಲಾಯನಮಾಡತೊಡಗಿದರು.
09015004a ತತೋ ಧನಂಜಯಃ ಕ್ರುದ್ಧಃ ಕೃಪಂ ಸಹ ಪದಾನುಗೈಃ|
09015004c ಅವಾಕಿರಚ್ಚರೌಘೇಣ ಕೃತವರ್ಮಾಣಮೇವ ಚ||
ಆಗ ಧನಂಜಯನು ಕ್ರುದ್ಧನಾಗಿ ಅನುಯಾಯಿಗಳಿಂದ ಕೂಡಿದ್ದ ಕೃಪ-ಕೃತವರ್ಮರನ್ನು ಬಾಣಗಳ ಸಮೂಹಗಳಿಂದ ಮುಚ್ಚಿಬಿಟ್ಟನು.
09015005a ಶಕುನಿಂ ಸಹದೇವಸ್ತು ಸಹಸೈನ್ಯಮವಾರಯತ್|
09015005c ನಕುಲಃ ಪಾರ್ಶ್ವತಃ ಸ್ಥಿತ್ವಾ ಮದ್ರರಾಜಮವೈಕ್ಷತ||
ಸಹದೇವನು ಸೇನಾಸಮೇತನಾಗಿ ಶಕುನಿಯನ್ನು ತಡೆದನು. ನಕುಲನು ಪಕ್ಕದಲ್ಲಿಯೇ ನಿಂತು ಮದ್ರರಾಜನನ್ನು ನೋಡುತ್ತಿದ್ದನು.
09015006a ದ್ರೌಪದೇಯಾ ನರೇಂದ್ರಾಂಶ್ಚ ಭೂಯಿಷ್ಠಂ ಸಮವಾರಯನ್|
09015006c ದ್ರೋಣಪುತ್ರಂ ಚ ಪಾಂಚಾಲ್ಯಃ ಶಿಖಂಡೀ ಸಮವಾರಯತ್||
ದ್ರೌಪದೇಯರು ಮುನ್ನುಗ್ಗಿ ಅನೇಕ ಕುರು ನರೇಂದ್ರರರನ್ನು ತಡೆದರು. ಪಾಂಚಾಲ್ಯ ಶಿಖಂಡಿಯು ದ್ರೋಣಪುತ್ರನನ್ನು ಎದುರಿಸಿದನು.
09015007a ಭೀಮಸೇನಸ್ತು ರಾಜಾನಂ ಗದಾಪಾಣಿರವಾರಯತ್|
09015007c ಶಲ್ಯಂ ತು ಸಹ ಸೈನ್ಯೇನ ಕುಂತೀಪುತ್ರೋ ಯುಧಿಷ್ಠಿರಃ||
ಭೀಮಸೇನನಾದರೋ ರಾಜರನ್ನು ಗದಾಪಾಣಿಯಾಗಿ ತಡೆದನು. ಕುಂತೀಪುತ್ರ ಯುಧಿಷ್ಠಿರನು ಸೇನೆಗಳೊಡಗೂಡಿ ಶಲ್ಯನನ್ನು ತಡೆದನು.
09015008a ತತಃ ಸಮಭವದ್ಯುದ್ಧಂ ಸಂಸಕ್ತಂ ತತ್ರ ತತ್ರ ಹ|
09015008c ತಾವಕಾನಾಂ ಪರೇಷಾಂ ಚ ಸಂಗ್ರಾಮೇಷ್ವನಿವರ್ತಿನಾಂ||
ಆಗ ಸಂಗ್ರಾಮದಿಂದ ಹಿಂದಿರುಗದ ನಿನ್ನವರು ಮತ್ತು ಶತ್ರುಗಳು ಅಲ್ಲಲ್ಲಿಯೇ ಯುದ್ಧದಲ್ಲಿ ತೊಡಗಿದರು.
09015009a ತತ್ರ ಪಶ್ಯಾಮಹೇ ಕರ್ಮ ಶಲ್ಯಸ್ಯಾತಿಮಹದ್ರಣೇ|
09015009c ಯದೇಕಃ ಸರ್ವಸೈನ್ಯಾನಿ ಪಾಂಡವಾನಾಮಯುಧ್ಯತ||
ಆ ಮಹಾರಣಲ್ಲಿ ನಾವು ಪಾಂಡವರ ಸರ್ವಸೇನೆಗಳೊಡನೆ ಶಲ್ಯನೋರ್ವನೇ ಹೋರಾಡಿದ ಅತಿದೊಡ್ಡ ಸಾಹಸವನ್ನು ನೋಡಿದೆವು.
09015010a ವ್ಯದೃಶ್ಯತ ತದಾ ಶಲ್ಯೋ ಯುಧಿಷ್ಠಿರಸಮೀಪತಃ|
09015010c ರಣೇ ಚಂದ್ರಮಸೋಽಭ್ಯಾಶೇ ಶನೈಶ್ಚರ ಇವ ಗ್ರಹಃ||
ಆಗ ಚಂದ್ರಗ್ರಹದ ಸಮೀಪದಲ್ಲಿ ಶನೈಶ್ಚರಗ್ರಹವು ಕಾಣಿಸಿಕೊಳ್ಳುವಂತೆ ಯುಧಿಷ್ಠಿರನ ಬಳಿ ಶಲ್ಯನು ಕಾಣಿಸಿಕೊಂಡನು.
09015011a ಪೀಡಯಿತ್ವಾ ತು ರಾಜಾನಂ ಶರೈರಾಶೀವಿಷೋಪಮೈಃ|
09015011c ಅಭ್ಯಧಾವತ್ ಪುನರ್ಭೀಮಂ ಶರವರ್ಷೈರವಾಕಿರತ್||
ಸರ್ಪವಿಷಗಳಿಂತಿದ್ದ ಬಾಣಗಳಿಂದ ರಾಜ ಯುಧಿಷ್ಠಿರನನ್ನು ಪೀಡಿಸಿ, ಪುನಃ ಭೀಮನ ಬಳಿ ಹೋಗಿ ಅವನನ್ನು ಶರವರ್ಷಗಳಿಂದ ಮುಚ್ಚಿದನು.
09015012a ತಸ್ಯ ತಲ್ಲಾಘವಂ ದೃಷ್ಟ್ವಾ ತಥೈವ ಚ ಕೃತಾಸ್ತ್ರತಾಂ|
09015012c ಅಪೂಜಯನ್ನನೀಕಾನಿ ಪರೇಷಾಂ ತಾವಕಾನಿ ಚ||
ಅವನ ಆ ಹಸ್ತಲಾಘವನ್ನು ಮತ್ತು ಹಾಗೆಯೇ ಅಸ್ತ್ರಗಳ ಪಾಂಡಿತ್ಯವನ್ನೂ ನೋಡಿ ನಿನ್ನ ಮತ್ತು ಶತ್ರುಸೇನೆಗಳು ಅವನನ್ನು ಶ್ಲಾಘಿಸಿದರು.
09015013a ಪೀಡ್ಯಮಾನಾಸ್ತು ಶಲ್ಯೇನ ಪಾಂಡವಾ ಭೃಶವಿಕ್ಷತಾಃ|
09015013c ಪ್ರಾದ್ರವಂತ ರಣಂ ಹಿತ್ವಾ ಕ್ರೋಶಮಾನೇ ಯುಧಿಷ್ಠಿರೇ||
ಶಲ್ಯನಿಂದ ಪೀಡಿಸಲ್ಪಟ್ಟು ತುಂಬಾ ಗಾಯಗೊಂಡಿದ್ದ ಪಾಂಡವ ಸೈನಿಕರು ಯುಧಿಷ್ಠಿರನು ಕೂಗಿ ಕರೆಯುತ್ತಿದ್ದರೂ ರಣವನ್ನು ಬಿಟ್ಟು ಓಡಿಹೋಗುತ್ತಿದ್ದರು.
09015014a ವಧ್ಯಮಾನೇಷ್ವನೀಕೇಷು ಮದ್ರರಾಜೇನ ಪಾಂಡವಃ|
09015014c ಅಮರ್ಷವಶಮಾಪನ್ನೋ ಧರ್ಮರಾಜೋ ಯುಧಿಷ್ಠಿರಃ||
09015014e ತತಃ ಪೌರುಷಮಾಸ್ಥಾಯ ಮದ್ರರಾಜಮಪೀಡಯತ್||
ಮದ್ರರಾಜನಿಂದ ತನ್ನ ಸೇನೆಗಳು ವಧಿಸಲ್ಪಡುತ್ತಿರುವುದನ್ನು ನೋಡಿ ಕುಪಿತನಾದ ಪಾಂಡವ ಧರ್ಮರಾಜ ಯುಧಿಷ್ಠಿರನು ಪೌರುಷವನ್ನು ತಾಳಿ ಮದ್ರರಾಜನನ್ನು ಪೀಡಿಸಿದನು.
09015015a ಜಯೋ ವಾಸ್ತು ವಧೋ ವೇತಿ ಕೃತಬುದ್ಧಿರ್ಮಹಾರಥಃ|
09015015c ಸಮಾಹೂಯಾಬ್ರವೀತ್ಸರ್ವಾನ್ ಭ್ರಾತೄನ್ ಕೃಷ್ಣಂ ಚ ಮಾಧವಂ||
ಜಯವಾಗಲಿ ಅಥವಾ ವಧೆಯಾಗಲಿ ಎಂದು ನಿಶ್ಚಯಿಸಿ ಮಹಾರಥ ಯುಧಿಷ್ಠಿರನು ತನ್ನ ಸಹೋದರರನ್ನೂ ಮಾಧವ ಕೃಷ್ಣನನ್ನೂ ಕರೆಯಿಸಿ ಹೇಳಿದನು:
09015016a ಭೀಷ್ಮೋ ದ್ರೋಣಶ್ಚ ಕರ್ಣಶ್ಚ ಯೇ ಚಾನ್ಯೇ ಪೃಥಿವೀಕ್ಷಿತಃ|
09015016c ಕೌರವಾರ್ಥೇ ಪರಾಕ್ರಾಂತಾಃ ಸಂಗ್ರಾಮೇ ನಿಧನಂ ಗತಾಃ||
“ಭೀಷ್ಮ, ದ್ರೋಣ, ಕರ್ಣ ಮತ್ತು ಪರಾಕ್ರಾಂತ ಅನ್ಯ ಪೃಥಿವೀಪತಿಗಳು ಕೌರವನಿಗಾಗಿ ಯುದ್ಧಮಾಡಿ ನಿಧನಹೊಂದಿದ್ದಾರೆ.
09015017a ಯಥಾಭಾಗಂ ಯಥೋತ್ಸಾಹಂ ಭವಂತಃ ಕೃತಪೌರುಷಾಃ|
09015017c ಭಾಗೋಽವಶಿಷ್ಟ ಏಕೋಽಯಂ ಮಮ ಶಲ್ಯೋ ಮಹಾರಥಃ||
ನೀವು ಕೂಡ ನಿಮಗೆ ಹಂಚಿಕೊಟ್ಟ ಯುದ್ಧಭಾಗಳೊಡನೆ ಉತ್ಸಾಹಪೂರ್ಣರಾಗಿ ಪೌರುಷವನ್ನು ಪ್ರದರ್ಶಿಸುತ್ತಾ ಹೋರಾಡಿದ್ದೀರಿ. ನನ್ನ ಭಾಗವಾದ ಮಹಾರಥ ಶಲ್ಯನೋರ್ವನೇ ಉಳಿದುಕೊಂಡಿದ್ದಾನೆ.
09015018a ಸೋಽಹಮದ್ಯ ಯುಧಾ ಜೇತುಮಾಶಂಸೇ ಮದ್ರಕೇಶ್ವರಂ|
09015018c ತತ್ರ ಯನ್ಮಾನಸಂ ಮಹ್ಯಂ ತತ್ಸರ್ವಂ ನಿಗದಾಮಿ ವಃ||
ಇಂದು ಯುದ್ಧದಲ್ಲಿ ನಾನು ಮದ್ರಕೇಶ್ವರನನ್ನು ಜಯಿಸಲು ಬಯಸುತ್ತೇನೆ. ಈ ವಿಷಯದಲ್ಲಿ ನನ್ನ ಮನಸ್ಸಿನಲ್ಲಿರುವುದನ್ನು ಹೇಳಿಬಿಡುತ್ತೇನೆ. ಎಲ್ಲರೂ ಕೇಳಿರಿ.
09015019a ಚಕ್ರರಕ್ಷಾವಿಮೌ ಶೂರೌ ಮಮ ಮಾದ್ರವತೀಸುತೌ|
09015019c ಅಜೇಯೌ ವಾಸವೇನಾಪಿ ಸಮರೇ ವೀರಸಮ್ಮತೌ||
ಸಮರದಲ್ಲಿ ವಾಸವನಿಂದಲೂ ಅಜೇಯರಾಗಿರುವ ವೀರಸಮ್ಮತ ಶೂರ ಮಾದ್ರವತೀ ಸುತರಿಬ್ಬರೂ ನನ್ನ ಚಕ್ರರಕ್ಷಕರಾಗಲಿ.
09015020a ಸಾಧ್ವಿಮೌ ಮಾತುಲಂ ಯುದ್ಧೇ ಕ್ಷತ್ರಧರ್ಮಪುರಸ್ಕೃತೌ|
09015020c ಮದರ್ಥಂ ಪ್ರತಿಯುಧ್ಯೇತಾಂ ಮಾನಾರ್ಹೌ ಸತ್ಯಸಂಗರೌ||
ಯುದ್ಧದಲ್ಲಿ ಕ್ಷತ್ರಧರ್ಮವನ್ನು ಮುಂದಿಟ್ಟುಕೊಂಡು ಈ ಇಬ್ಬರು ಸಾಧ್ವಿಗಳೂ, ಮಾನಾರ್ಹರೂ ಸತ್ಯಸಂಗರರೂ ನನಗಾಗಿ ತಮ್ಮ ಸೋದರಮಾವನೊಂದಿಗೆ ಯುದ್ಧಮಾಡುತ್ತಾರೆ.
09015021a ಮಾಂ ವಾ ಶಲ್ಯೋ ರಣೇ ಹಂತಾ ತಂ ವಾಹಂ ಭದ್ರಮಸ್ತು ವಃ|
09015021c ಇತಿ ಸತ್ಯಾಮಿಮಾಂ ವಾಣೀಂ ಲೋಕವೀರಾ ನಿಬೋಧತ||
ರಣದಲ್ಲಿ ನಾನಾಗಲೀ ಶಲ್ಯನಾಗಲೀ ಹತರಾಗುತ್ತೇವೆ. ನಿಮಗೆ ಮಂಗಳವಾಗಲಿ! ಲೋಕವೀರರೇ! ನನ್ನ ಈ ಸತ್ಯವಚನವನ್ನು ನೀವೆಲ್ಲರೂ ಕೇಳಿಕೊಳ್ಳಿರಿ!
09015022a ಯೋತ್ಸ್ಯೇಽಹಂ ಮಾತುಲೇನಾದ್ಯ ಕ್ಷತ್ರಧರ್ಮೇಣ ಪಾರ್ಥಿವಾಃ|
09015022c ಸ್ವಯಂ ಸಮಭಿಸಂಧಾಯ ವಿಜಯಾಯೇತರಾಯ ವಾ||
ಪಾರ್ಥಿವರೇ! ಕ್ಷತ್ರಧರ್ಮವನ್ನು ಅನುಸರಿಸಿ ನಾನಿಂದು ನನ್ನ ಭಾಗದ ಪ್ರತಿಜ್ಞೆಯನ್ನು ಪೂರೈಸಲು ವಿಜಯವಾಗಲೀ ಇನ್ನೊಂದಾಗಲೀ ಸೋದರಮಾವನೊಂದಿಗೆ ಯುದ್ಧಮಾಡುತ್ತೇನೆ.
09015023a ತಸ್ಯ ಮೇಽಭ್ಯಧಿಕಂ ಶಸ್ತ್ರಂ ಸರ್ವೋಪಕರಣಾನಿ ಚ|
09015023c ಸಮ್ಯುಝ್ಜಂತು ರಣೇ ಕ್ಷಿಪ್ರಂ ಶಾಸ್ತ್ರವದ್ರಥಯೋಜಕಾಃ||
ರಥಯೋಜಕರು ನನ್ನ ರಥವನ್ನು ಅಧಿಕ ಶಸ್ತ್ರಗಳಿಂದ ಮತ್ತು ಸರ್ವೋಪಕರಣಗಳಿಂದ ಶಾಸ್ತ್ರವತ್ತಾಗಿ ರಣದಲ್ಲಿ ಸಿದ್ಧಗೊಳಿಸಲಿ.
09015024a ಶೈನೇಯೋ ದಕ್ಷಿಣಂ ಚಕ್ರಂ ಧೃಷ್ಟದ್ಯುಮ್ನಸ್ತಥೋತ್ತರಂ|
09015024c ಪೃಷ್ಠಗೋಪೋ ಭವತ್ವದ್ಯ ಮಮ ಪಾರ್ಥೋ ಧನಂಜಯಃ||
ಶೈನೇಯ ಸಾತ್ಯಕಿಯು ಬಲಚಕ್ರವನ್ನೂ ಧೃಷ್ಟದ್ಯುಮ್ನನು ಎಡಚಕ್ರವನ್ನೂ ಮತ್ತು ಇಂದು ನನ್ನ ರಥದ ಹಿಂಭಾಗವನ್ನು ಪಾರ್ಥ ಧನಂಜಯನು ರಕ್ಷಿಸಲಿ.
09015025a ಪುರಃಸರೋ ಮಮಾದ್ಯಾಸ್ತು ಭೀಮಃ ಶಸ್ತ್ರಭೃತಾಂ ವರಃ|
09015025c ಏವಮಭ್ಯಧಿಕಃ ಶಲ್ಯಾದ್ಭವಿಷ್ಯಾಮಿ ಮಹಾಮೃಧೇ||
ಶಸ್ತ್ರಪಾಣಿಗಳಲ್ಲಿ ಶ್ರೇಷ್ಠ ಭೀಮನು ಇಂದು ನನ್ನ ಮುಂದಿರಲಿ. ಹೀಗೆ ನಾನು ಮಹಾರಣದಲ್ಲಿ ಶಲ್ಯನಿಗಿಂತ ಅಧಿಕನಾಗುತ್ತೇನೆ!”
09015026a ಏವಮುಕ್ತಾಸ್ತಥಾ ಚಕ್ರುಃ ಸರ್ವೇ ರಾಜ್ಞಃ ಪ್ರಿಯೈಷಿಣಃ|
09015026c ತತಃ ಪ್ರಹರ್ಷಃ ಸೈನ್ಯಾನಾಂ ಪುನರಾಸೀತ್ತದಾ ನೃಪ||
ಅವನು ಹೀಗೆ ಹೇಳಲು ರಾಜ-ಹಿತೈಷಿಗಳೆಲ್ಲರೂ ಹಾಗೆಯೇ ಮಾಡಿದರು. ನೃಪ! ಆಗ ಸೇನೆಗಳು ಪುನಃ ಹರ್ಷಿತರಾದವು.
09015027a ಪಾಂಚಾಲಾನಾಂ ಸೋಮಕಾನಾಂ ಮತ್ಸ್ಯಾನಾಂ ಚ ವಿಶೇಷತಃ|
09015027c ಪ್ರತಿಜ್ಞಾಂ ತಾಂ ಚ ಸಂಗ್ರಾಮೇ ಧರ್ಮರಾಜಸ್ಯ ಪೂರಯನ್||
ಸಂಗ್ರಾಮದಲ್ಲಿ ಧರ್ಮರಾಜನು ಪ್ರತಿಜ್ಞೆಯನ್ನು ಪೂರೈಸುವನೆಂದು ವಿಶೇಷವಾಗಿ ಪಾಂಚಾಲ-ಸೋಮಕ-ಮತ್ಸ್ಯರು ಉತ್ಸಾಹಿತರಾದರು.
09015028a ತತಃ ಶಂಖಾಂಶ್ಚ ಭೇರೀಶ್ಚ ಶತಶಶ್ಚೈವ ಪುಷ್ಕರಾನ್|
09015028c ಅವಾದಯಂತ ಪಾಂಚಾಲಾಃ ಸಿಂಹನಾದಾಂಶ್ಚ ನೇದಿರೇ||
ಆಗ ಪಾಂಚಾಲರು ನೂರಾರು ಶಂಖ-ಭೇರಿ-ಪುಷ್ಕರಗಳನ್ನು ಮೊಳಗಿಸಿ ಮತ್ತು ಸಿಂಹನಾದಗೈದರು.
09015029a ತೇಽಭ್ಯಧಾವಂತ ಸಂರಬ್ಧಾ ಮದ್ರರಾಜಂ ತರಸ್ವಿನಃ|
09015029c ಮಹತಾ ಹರ್ಷಜೇನಾಥ ನಾದೇನ ಕುರುಪುಂಗವಾಃ||
09015030a ಹ್ರಾದೇನ ಗಜಘಂಟಾನಾಂ ಶಂಖಾನಾಂ ನಿನದೇನ ಚ|
09015030c ತೂರ್ಯಶಬ್ದೇನ ಮಹತಾ ನಾದಯಂತಶ್ಚ ಮೇದಿನೀಂ||
ಕುರುಪುಂಗವರು ಕುಪಿತರಾಗಿ, ಭೂಮಿಯನ್ನೇ ಮೊಳಗಿಸುವ ಜೋರಾದ ಹರ್ಷನಾದ, ಆನೆಗಳ ಗಂಟೆಗಳ ಶಬ್ಧ, ಶಂಖ ನಿನಾದ ಮತ್ತು ಜೋರಾದ ತೂರ್ಯಶಬ್ಧಗಳೊಂದಿಗೆ ವೇಗಶಾಲೀ ಮದ್ರರಾಜನನ್ನು ಆಕ್ರಮಣಿಸಿದರು.
09015031a ತಾನ್ ಪ್ರತ್ಯಗೃಹ್ಣಾತ್ಪುತ್ರಸ್ತೇ ಮದ್ರರಾಜಶ್ಚ ವೀರ್ಯವಾನ್|
09015031c ಮಹಾಮೇಘಾನಿವ ಬಹೂನ್ ಶೈಲಾವಸ್ತೋದಯಾವುಭೌ||
ಉದಯಾಚಲ ಮತ್ತು ಅಸ್ತಾಚಲ ಪರ್ವತಗಳು ಅನೇಕ ಮಹಾಮೇಘಗಳನ್ನು ತಡೆದು ನಿಲ್ಲಿಸುವಂತೆ ನಿನ್ನ ಮಗ ದುರ್ಯೋಧನ ಮತ್ತು ವೀರ್ಯವಾನ್ ಮದ್ರರಾಜರು ಪಾಂಡವ ಸೇನೆಯನ್ನು ತಡೆದು ನಿಲ್ಲಿಸಿದರು.
09015032a ಶಲ್ಯಸ್ತು ಸಮರಶ್ಲಾಘೀ ಧರ್ಮರಾಜಮರಿಂದಮಂ|
09015032c ವವರ್ಷ ಶರವರ್ಷೇಣ ವರ್ಷೇಣ ಮಘವಾನಿವ||
ಸಮರಶ್ಲಾಘೀ ಶಲ್ಯನಾದರೋ ಅರಿಂದಮ ಧರ್ಮರಾಜನ ಮೇಲೆ ಇಂದ್ರನು ಮಳೆಸುರಿಸುವಂತೆ ಶರಗಳ ಮಳೆಗರೆದನು.
09015033a ತಥೈವ ಕುರುರಾಜೋಽಪಿ ಪ್ರಗೃಹ್ಯ ರುಚಿರಂ ಧನುಃ|
09015033c ದ್ರೋಣೋಪದೇಶಾನ್ವಿವಿಧಾನ್ದರ್ಶಯಾನೋ ಮಹಾಮನಾಃ||
09015034a ವವರ್ಷ ಶರವರ್ಷಾಣಿ ಚಿತ್ರಂ ಲಘು ಚ ಸುಷ್ಠು ಚ|
ಹಾಗೆಯೇ ಕುರುರಾಜ ಮಹಾಮನ ಯುಧಿಷ್ಠಿರನೂ ಕೂಡ ಸುಂದರ ಧನುಸ್ಸನ್ನು ಹಿಡಿದು ದ್ರೋಣನು ಉಪದೇಶಿಸಿದ್ದ ವಿವಿಧ ಅಸ್ತ್ರಗಳನ್ನು ಪ್ರದರ್ಶಿಸುತ್ತಾ ಶೀಘ್ರವಾಗಿ ವಿಚಿತ್ರ-ದಟ್ಟ ಶರವರ್ಷಗಳನ್ನು ಸುರಿಸಿದನು.
09015034c ನ ಚಾಸ್ಯ ವಿವರಂ ಕಶ್ಚಿದ್ದದರ್ಶ ಚರತೋ ರಣೇ||
09015035a ತಾವುಭೌ ವಿವಿಧೈರ್ಬಾಣೈಸ್ತತಕ್ಷಾತೇ ಪರಸ್ಪರಂ|
09015035c ಶಾರ್ದೂಲಾವಮಿಷಪ್ರೇಪ್ಸೂ ಪರಾಕ್ರಾಂತಾವಿವಾಹವೇ||
ರಣದಲ್ಲಿ ಅವನು ಚರಿಸುತ್ತಿದ್ದ ರೀತಿಯಲ್ಲಿ ಯಾವುದೇ ದೋಷವು ಕಾಣುತ್ತಿರಲಿಲ್ಲ. ಮಾಂಸದ ಲೋಭಕ್ಕಾಗಿ ಹೊಡೆದಾಡುತ್ತಿರುವ ಎರಡು ಶಾರ್ದೂಲಗಳಂತೆ ಅವರಿಬ್ಬರು ಪರಾಕ್ರಾಂತರೂ ಯುದ್ಧದಲ್ಲಿ ಪರಸ್ಪರರನ್ನು ವಿವಿಧ ಬಾಣಗಳಿಂದ ಗಾಯಗೊಳಿಸಿದರು.
09015036a ಭೀಮಸ್ತು ತವ ಪುತ್ರೇಣ ರಣಶೌಂಡೇನ ಸಂಗತಃ|
09015036c ಪಾಂಚಾಲ್ಯಃ ಸಾತ್ಯಕಿಶ್ಚೈವ ಮಾದ್ರೀಪುತ್ರೌ ಚ ಪಾಂಡವೌ||
09015036e ಶಕುನಿಪ್ರಮುಖಾನ್ವೀರಾನ್ ಪ್ರತ್ಯಗೃಹ್ಣನ್ಸಮಂತತಃ||
ಭೀಮನಾದರೋ ಯುದ್ಧಕುಶಲನಾದ ನಿನ್ನ ಮಗನೊಂದಿಗೆ ಯುದ್ಧದಲ್ಲಿ ತೊಡಗಿದನು. ಪಾಂಚಾಲ್ಯ ಧೃಷ್ಟದ್ಯುಮ್ನ, ಸಾತ್ಯಕಿ, ಮತ್ತು ಪಾಂಡವ ಮಾದ್ರೀಪುತ್ರರಿಬ್ಬರೂ ಶಕುನಿಪ್ರಮುಖ ವೀರರನ್ನು ಎದುರಿಸಿ ಯುದ್ಧಮಾಡುತ್ತಿದ್ದರು.
09015037a ತದಾಸೀತ್ತುಮುಲಂ ಯುದ್ಧಂ ಪುನರೇವ ಜಯೈಷಿಣಾಂ|
09015037c ತಾವಕಾನಾಂ ಪರೇಷಾಂ ಚ ರಾಜನ್ ದುರ್ಮಂತ್ರಿತೇ ತವ||
ರಾಜನ್! ನಿನ್ನ ದುರ್ಮಂತ್ರದ ಫಲವಾಗಿ ವಿಜಯೇಚ್ಛುಗಳಾದ ನಿನ್ನವರ ಮತ್ತು ಶತ್ರುಗಳ ನಡುವೆ ತುಮುಲ ಯುದ್ಧವು ಪುನಃ ಪ್ರಾರಂಭವಾಯಿತು.
09015038a ದುರ್ಯೋಧನಸ್ತು ಭೀಮಸ್ಯ ಶರೇಣಾನತಪರ್ವಣಾ|
09015038c ಚಿಚ್ಚೇದಾದಿಶ್ಯ ಸಂಗ್ರಾಮೇ ಧ್ವಜಂ ಹೇಮವಿಭೂಷಿತಂ||
ದುರ್ಯೋಧನನಾದರೋ ನತಪರ್ವ ಶರದಿಂದ ಸಂಗ್ರಾಮದಲ್ಲಿ ಭೀಮನ ಹೇಮವಿಭೂಷಿತ ಧ್ವಜವನ್ನು ಕತ್ತರಿಸಿದನು.
09015039a ಸಕಿಂಕಿಣೀಕಜಾಲೇನ ಮಹತಾ ಚಾರುದರ್ಶನಃ|
09015039c ಪಪಾತ ರುಚಿರಃ ಸಿಂಹೋ ಭೀಮಸೇನಸ್ಯ ನಾನದನ್||
ಕಿರು-ಗಂಟೆಗಳ ಸಮೂಹದಿಂದ ಕೂಡಿ ನೋಡಲು ಸುಂದರವಾಗಿದ್ದ ಭೀಮಸೇನನ ಆ ಧ್ವಜವು ಕೆಳಗೆ ಬೀಳಲು ಭೀಮಸೇನನು ಸಿಂಹದಂತೆ ಗರ್ಜಿಸಿದನು.
09015040a ಪುನಶ್ಚಾಸ್ಯ ಧನುಶ್ಚಿತ್ರಂ ಗಜರಾಜಕರೋಪಮಂ|
09015040c ಕ್ಷುರೇಣ ಶಿತಧಾರೇಣ ಪ್ರಚಕರ್ತ ನರಾಧಿಪಃ||
ನರಾಧಿಪ ದುರ್ಯೋಧನನು ಪುನಃ ಆನೆಯ ಸೊಂಡಿಲಿನಂತಿದ್ದ ಭೀಮನ ಚಿತ್ರಿತ ಧನುಸ್ಸನ್ನು ನಿಶಿತ ಅಲುಗಿನ ಕ್ಷುರದಿಂದ ಕತ್ತರಿಸಿದನು.
09015041a ಸ ಚ್ಚಿನ್ನಧನ್ವಾ ತೇಜಸ್ವೀ ರಥಶಕ್ತ್ಯಾ ಸುತಂ ತವ|
09015041c ಬಿಭೇದೋರಸಿ ವಿಕ್ರಮ್ಯ ಸ ರಥೋಪಸ್ಥ ಆವಿಶತ್||
ಧನುಸ್ಸು ತುಂಡಾದ ಭೀಮಸೇನನು ವಿಕ್ರಮದಿಂದ ರಥಶಕ್ತಿಯನ್ನು ನಿನ್ನ ಮಗನ ಎದೆಗೆ ಎಸೆಯಲು ಅದರಿಂದ ಪೀಡಿತ ದುರ್ಯೋಧನನು ರಥದಲ್ಲಿ ಕುಸಿದು ಬಿದ್ದನು.
09015042a ತಸ್ಮಿನ್ಮೋಹಮನುಪ್ರಾಪ್ತೇ ಪುನರೇವ ವೃಕೋದರಃ|
09015042c ಯಂತುರೇವ ಶಿರಃ ಕಾಯಾತ್ ಕ್ಷುರಪ್ರೇಣಾಹರತ್ತದಾ||
ಅವನು ಮೂರ್ಛಿತನಾಗಲು ವೃಕೋದರನು ಪುನಃ ಕ್ಷುರಪ್ರದಿಂದ ದುರ್ಯೋಧನನ ಸಾರಥಿಯ ಶಿರವನ್ನು ಶರೀರದಿಂದ ಪ್ರತ್ಯೇಕಿಸಿದನು.
09015043a ಹತಸೂತಾ ಹಯಾಸ್ತಸ್ಯ ರಥಮಾದಾಯ ಭಾರತ|
09015043c ವ್ಯದ್ರವಂತ ದಿಶೋ ರಾಜನ್ ಹಾಹಾಕಾರಸ್ತದಾಭವತ್||
ಸಾರಥಿಯನ್ನು ಕಳೆದುಕೊಂಡ ಆ ಕುದುರೆಗಳು ರಥವನ್ನೆಳೆದುಕೊಂಡು ದಿಕ್ಕಾಪಾಲಾಗಿ ಓಡಿಹೋದವು. ಭಾರತ! ಆಗ ಹಾಹಾಕಾರವುಂಟಾಯಿತು.
09015044a ತಮಭ್ಯಧಾವತ್ತ್ರಾಣಾರ್ಥಂ ದ್ರೋಣಪುತ್ರೋ ಮಹಾರಥಃ|
09015044c ಕೃಪಶ್ಚ ಕೃತವರ್ಮಾ ಚ ಪುತ್ರಂ ತೇಽಭಿಪರೀಪ್ಸವಃ||
ಆಗ ನಿನ್ನ ಮಗನನ್ನು ರಕ್ಷಿಸಲು ಅಲ್ಲಿಗೆ ಮಹಾರಥ ದ್ರೋಣಪುತ್ರ, ಕೃಪ ಮತ್ತು ಕೃತವರ್ಮರು ಧಾವಿಸಿ ಬಂದರು.
09015045a ತಸ್ಮಿನ್ವಿಲುಲಿತೇ ಸೈನ್ಯೇ ತ್ರಸ್ತಾಸ್ತಸ್ಯ ಪದಾನುಗಾಃ|
09015045c ಗಾಂಡೀವಧನ್ವಾ ವಿಸ್ಫಾರ್ಯ ಧನುಸ್ತಾನಹನಚ್ಚರೈಃ||
ದುರ್ಯೋಧನನ ಸೇನೆಯು ಅಸ್ತವ್ಯಸ್ತಗೊಳ್ಳಲು ಅವನ ಅನುಚರರು ಭಯಗ್ರಸ್ತರಾದರು. ಆಗ ಗಾಂಡೀವಧನ್ವಿಯು ಧನುಸ್ಸನ್ನು ಟೇಂಕರಿಸುತ್ತಾ ಅವರನ್ನು ಶರಗಳಿಂದ ಸಂಹರಿಸಿದನು.
09015046a ಯುಧಿಷ್ಠಿರಸ್ತು ಮದ್ರೇಶಮಭ್ಯಧಾವದಮರ್ಷಿತಃ|
09015046c ಸ್ವಯಂ ಸಂಚೋದಯನ್ನಶ್ವಾನ್ದಂತವರ್ಣಾನ್ಮನೋಜವಾನ್||
ಅಸಹನಾಯುಕ್ತ ಯುಧಿಷ್ಠಿರನಾದರೋ ದಂತದ ಬಣ್ಣದ ಮನೋವೇಗದ ಕುದುರೆಗಳನ್ನು ತಾನೇ ಓಡಿಸುತ್ತಾ ಮದ್ರೇಶನನ್ನು ಆಕ್ರಮಣಿಸಿದನು.
09015047a ತತ್ರಾದ್ಭುತಮಪಶ್ಯಾಮ ಕುಂತೀಪುತ್ರೇ ಯುಧಿಷ್ಠಿರೇ|
09015047c ಪುರಾ ಭೂತ್ವಾ ಮೃದುರ್ದಾಂತೋ ಯತ್ತದಾ ದಾರುಣೋಽಭವತ್||
ಆಗ ನಾವು ಕುಂತೀಪುತ್ರ ಯುಧಿಷ್ಠಿರನಲ್ಲಿ ಒಂದು ಅದ್ಭುತವನ್ನು ಕಂಡೆವು. ಹಿಂದೆ ಮೃದುಸ್ವಭಾವದವನೂ ಜಿತೇಂದ್ರಿಯನೂ ಆಗಿದ್ದ ಅವನು ಆಗ ಕಠೋರಸ್ವಭಾವದವನಾಗಿದ್ದನು.
09015048a ವಿವೃತಾಕ್ಷಶ್ಚ ಕೌಂತೇಯೋ ವೇಪಮಾನಶ್ಚ ಮನ್ಯುನಾ|
09015048c ಚಿಚ್ಚೇದ ಯೋಧಾನ್ನಿಶಿತೈಃ ಶರೈಃ ಶತಸಹಸ್ರಶಃ||
ಕೌಂತೇಯನು ಕೋಪದಿಂದ ಕಣ್ಣುಗಳನ್ನರಳಿಸಿಕೊಂಡು ಕಂಪಿಸುತ್ತಾ ನಿಶಿತ ಶರಗಳಿಂದ ನೂರಾರು ಸಹಸ್ರಾರು ಯೋಧರನ್ನು ಸಂಹರಿಸಿದನು.
09015049a ಯಾಂ ಯಾಂ ಪ್ರತ್ಯುದ್ಯಯೌ ಸೇನಾಂ ತಾಂ ತಾಂ ಜ್ಯೇಷ್ಠಃ ಸ ಪಾಂಡವಃ|
09015049c ಶರೈರಪಾತಯದ್ರಾಜನ್ಗಿರೀನ್ವಜ್ರೈರಿವೋತ್ತಮೈಃ||
ಯಾವ ಸೇನೆಗಳು ಎದುರಿಸಿ ಯುದ್ಧ ಮಾಡುತ್ತಿದ್ದವೋ ಆ ಸೇನೆಗಳನ್ನು ಜ್ಯೇಷ್ಠ ಪಾಂಡವನು ಇಂದ್ರನು ಉತ್ತಮ ವಜ್ರಪ್ರಹಾರಗಳಿಂದ ಪರ್ವತಗಳನ್ನು ಕೆಳಗುರುಳಿಸಿದಂತೆ ಬಾಣಗಳಿಂದ ಧ್ವಂಸಮಾಡುತ್ತಿದ್ದನು.
09015050a ಸಾಶ್ವಸೂತಧ್ವಜರಥಾನ್ರಥಿನಃ ಪಾತಯನ್ಬಹೂನ್|
09015050c ಆಕ್ರೀಡದೇಕೋ ಬಲವಾನ್ಪವನಸ್ತೋಯದಾನಿವ||
ಭಿರುಗಾಳಿಯು ಮೇಘಗಳನ್ನು ಛಿನ್ನ-ಭಿನ್ನಗೊಳಿಸುವಂತೆ ಅವನು ಒಬ್ಬನೇ ಅಶ್ವ-ಸಾರಥಿ-ಧ್ವಜ-ರಥಗಳೊಂದಿಗೆ ರಥಿಗಳನ್ನು ಅನೇಕ ಸಂಖ್ಯೆಗಳಲ್ಲಿ ಕೆಡವುತ್ತಾ ರಣರಂಗದಲ್ಲಿ ಆಟವಾಡುತ್ತಿದ್ದನು.
09015051a ಸಾಶ್ವಾರೋಹಾಂಶ್ಚ ತುರಗಾನ್ಪತ್ತೀಂಶ್ಚೈವ ಸಹಸ್ರಶಃ|
09015051c ವ್ಯಪೋಥಯತ ಸಂಗ್ರಾಮೇ ಕ್ರುದ್ಧೋ ರುದ್ರಃ ಪಶೂನಿವ||
ಅಶ್ವಾರೋಹಿಗಳೊಂದಿಗೆ ಕುದುರೆಗಳೂ ಪದಾತಿಗಳೂ ಸಹಸ್ರಾರು ಸಂಖ್ಯೆಗಳಲ್ಲಿ ಕ್ರುದ್ಧ ರುದ್ರನಿಂದ ಪಶುಗಳು ಹೇಗೋ ಹಾಗೆ ಸಂಗ್ರಾಮದಲ್ಲಿ ಬೀಳುತ್ತಿದ್ದರು.
09015052a ಶೂನ್ಯಮಾಯೋಧನಂ ಕೃತ್ವಾ ಶರವರ್ಷೈಃ ಸಮಂತತಃ|
09015052c ಅಭ್ಯದ್ರವತ ಮದ್ರೇಶಂ ತಿಷ್ಠ ಶಲ್ಯೇತಿ ಚಾಬ್ರವೀತ್||
ಶರವರ್ಷಗಳಿಂದ ಸುತ್ತಲೂ ರಣರಂಗವನ್ನು ಶೂನ್ಯವನ್ನಾಗಿ ಮಾಡಿ “ಶಲ್ಯ! ನಿಲ್ಲು!” ಎಂದು ಕೂಗುತ್ತಾ ಮದ್ರೇಶನನ್ನು ಆಕ್ರಮಣಿಸಿದನು.
09015053a ತಸ್ಯ ತಚ್ಚರಿತಂ ದೃಷ್ಟ್ವಾ ಸಂಗ್ರಾಮೇ ಭೀಮಕರ್ಮಣಃ|
09015053c ವಿತ್ರೇಸುಸ್ತಾವಕಾಃ ಸರ್ವೇ ಶಲ್ಯಸ್ತ್ವೇನಂ ಸಮಭ್ಯಯಾತ್||
ಸಂಗ್ರಾಮದಲ್ಲಿ ಅವನ ಭಯಂಕರ ಕೃತ್ಯವನ್ನು ನೋಡಿ ನಿನ್ನವರೆಲ್ಲರೂ ಭಯದಿಂದ ನಡುಗಿದರು. ಆದರೆ ಶಲ್ಯನೊಬ್ಬನೇ ನಿರ್ಭಯನಾಗಿ ಅವನನ್ನು ಎದುರಿಸಿದನು.
09015054a ತತಸ್ತೌ ತು ಸುಸಂರಬ್ಧೌ ಪ್ರಧ್ಮಾಪ್ಯ ಸಲಿಲೋದ್ಭವೌ|
09015054c ಸಮಾಹೂಯ ತದಾನ್ಯೋನ್ಯಂ ಭರ್ತ್ಸಯಂತೌ ಸಮೀಯತುಃ||
ಕುಪಿತರಾಗಿದ್ದ ಶಲ್ಯ-ಧರ್ಮಜರಿಬ್ಬರೂ ಶಂಖಗಳನ್ನೂದಿ ಅನ್ಯೋನ್ಯರನ್ನು ಯುದ್ಧಕ್ಕೆ ಆಹ್ವಾನಿಸುತ್ತಾ, ಗರ್ಜನೆಗಳಿಂದ ಅನ್ಯೋನ್ಯರನ್ನು ಭಯಪಡಿಸುತ್ತಾ ಭೀಕರ ಯುದ್ಧದಲ್ಲಿ ತೊಡಗಿದರು.
09015055a ಶಲ್ಯಸ್ತು ಶರವರ್ಷೇಣ ಯುಧಿಷ್ಠಿರಮವಾಕಿರತ್|
09015055c ಮದ್ರರಾಜಂ ಚ ಕೌಂತೇಯಃ ಶರವರ್ಷೈರವಾಕಿರತ್||
ಶಲ್ಯನಾದರೋ ಶರವರ್ಷದಿಂದ ಯುಧಿಷ್ಠಿರನನ್ನು ಮುಚ್ಚಿಬಿಟ್ಟನು. ಕೌಂತೇಯನೂ ಕೂಡ ಮದ್ರರಾಜನನ್ನು ಶರವರ್ಷದಿಂದ ಮುಚ್ಚಿದನು.
09015056a ವ್ಯದೃಶ್ಯೇತಾಂ ತದಾ ರಾಜನ್ಕಂಕಪತ್ರಿಭಿರಾಹವೇ|
09015056c ಉದ್ಭಿನ್ನರುಧಿರೌ ಶೂರೌ ಮದ್ರರಾಜಯುಧಿಷ್ಠಿರೌ||
ರಾಜನ್! ಆಗ ಯುದ್ಧದಲ್ಲಿ ಕಂಕಪತ್ರಿ ಬಾಣಗಳಿಂದ ಗಾಯಗೊಂಡ ಶೂರ ಮದ್ರರಾಜ-ಯುಧಿಷ್ಠಿರರಿಬ್ಬರ ಶರೀರಗಳಿಂದ ರಕ್ತವು ಹರಿಯುತ್ತಿರುವುದು ಕಾಣುತ್ತಿತ್ತು.
09015057a ಪುಷ್ಪಿತಾವಿವ ರೇಜಾತೇ ವನೇ ಶಲ್ಮಲಿಕಿಂಶುಕಾ|
09015057c ದೀಪ್ಯಮಾನೌ ಮಹಾತ್ಮಾನೌ ಪ್ರಾಣಯೋರ್ಯುದ್ಧದುರ್ಮದೌ||
ಪ್ರಾಣಗಳನ್ನೇ ಪಣವಾಗಿಟ್ಟ ಆ ಮಹಾತ್ಮ ಯುದ್ಧದುರ್ಮದರಿಬ್ಬರೂ ವಸಂತಕಾಲದಲ್ಲಿ ವನದಲ್ಲಿ ಹೂಬಿಟ್ಟ ಮುತ್ತುಗದ ಮರಗಳಂತೆ ಪ್ರಕಾಶಿಸುತ್ತಿದ್ದರು.
09015058a ದೃಷ್ಟ್ವಾ ಸರ್ವಾಣಿ ಸೈನ್ಯಾನಿ ನಾಧ್ಯವಸ್ಯಂಸ್ತಯೋರ್ಜಯಂ|
09015058c ಹತ್ವಾ ಮದ್ರಾಧಿಪಂ ಪಾರ್ಥೋ ಭೋಕ್ಷ್ಯತೇಽದ್ಯ ವಸುಂಧರಾಂ||
09015059a ಶಲ್ಯೋ ವಾ ಪಾಂಡವಂ ಹತ್ವಾ ದದ್ಯಾದ್ದುರ್ಯೋಧನಾಯ ಗಾಂ|
09015059c ಇತೀವ ನಿಶ್ಚಯೋ ನಾಭೂದ್ಯೋಧಾನಾಂ ತತ್ರ ಭಾರತ||
ಭಾರತ! ಯುದ್ಧವನ್ನು ನೋಡುತ್ತಿದ್ದ ಸರ್ವ ಸೇನೆಗಳೂ ಅವರಿಬ್ಬರಲ್ಲಿ ಯಾರಿಗೆ ಜಯವಾಗುತ್ತದೆಯೆಂದು ನಿರ್ಧರಿಸಲು ಅಶಕ್ಯರಾಗಿದ್ದರು. “ಯುಧಿಷ್ಠಿರನು ಮದ್ರಾಧಿಪತಿಯನ್ನು ಸಂಹರಿಸಿ ವಸುಂಧರೆಯನ್ನು ಭೋಗಿಸುತ್ತಾನೋ ಅಥವಾ ಪಾಂಡವನನ್ನು ಸಂಹರಿಸಿ ಶಲ್ಯನು ಈ ಭೂಮಂಡಲವನ್ನು ದುರ್ಯೋಧನನಿಗೆ ನೀಡುತ್ತಾನೋ” ಎಂದು ಯೋಧರು ಯಾವ ನಿಶ್ಚಯಕ್ಕೂ ಬರಲಿಲ್ಲ.
09015060a ಪ್ರದಕ್ಷಿಣಮಭೂತ್ಸರ್ವಂ ಧರ್ಮರಾಜಸ್ಯ ಯುಧ್ಯತಃ|
09015061a ತತಃ ಶರಶತಂ ಶಲ್ಯೋ ಮುಮೋಚಾಶು ಯುಧಿಷ್ಠಿರೇ||
09015061c ಧನುಶ್ಚಾಸ್ಯ ಶಿತಾಗ್ರೇಣ ಬಾಣೇನ ನಿರಕೃಂತತ|
ಆದರೆ ಯುದ್ಧದಲ್ಲಿ ಎಲ್ಲವೂ ಧರ್ಮರಾಜನಿಗೆ ಅನುಕೂಲವಾಗಿಯೇ ನಡೆಯುತ್ತಿತ್ತು. ಅನಂತರ ಶಲ್ಯನು ಯುಧಿಷ್ಠಿರನ ಮೇಲೆ ನೂರು ಬಾಣಗಳನ್ನು ಪ್ರಯೋಗಿಸಿದನು ಮತ್ತು ನಿಶಿತ ಮೊನೆಯಿರುವ ಬಾಣದಿಂದ ಅವನ ಧನುಸ್ಸನ್ನೂ ಕತ್ತರಿಸಿದನು.
09015062a ಸೋಽನ್ಯತ್ಕಾರ್ಮುಕಮಾದಾಯ ಶಲ್ಯಂ ಶರಶತೈಸ್ತ್ರಿಭಿಃ||
09015062c ಅವಿಧ್ಯತ್ಕಾರ್ಮುಕಂ ಚಾಸ್ಯ ಕ್ಷುರೇಣ ನಿರಕೃಂತತ|
ಕೂಡಲೇ ಯುಧಿಷ್ಠಿರನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಶಲ್ಯನನ್ನು ಮುನ್ನೂರು ಬಾಣಗಳಿಂದ ಪ್ರಹರಿಸಿ, ಅವನ ಧನುಸ್ಸನ್ನೂ ಕ್ಷುರದಿಂದ ಕತ್ತರಿಸಿದನು.
09015063a ಅಥಾಸ್ಯ ನಿಜಘಾನಾಶ್ವಾಂಶ್ಚತುರೋ ನತಪರ್ವಭಿಃ||
09015063c ದ್ವಾಭ್ಯಾಮಥ ಶಿತಾಗ್ರಾಭ್ಯಾಮುಭೌ ಚ ಪಾರ್ಷ್ಣಿಸಾರಥೀ|
ಅನಂತರ ನತಪರ್ವ ಬಾಣಗಳಿಂದ ಶಲ್ಯನ ನಾಲ್ಕುಕುದುರೆಗಳನ್ನೂ ಸಂಹರಿಸಿದನು. ಶಿತಾಗ್ರ ಬಾಣಗಳೆರಡರಿಂದ ಅವನ ಇಬ್ಬರು ಪಾರ್ಶ್ವಸಾರಥಿಗಳನ್ನೂ ಸಂಹರಿಸಿದನು.
09015064a ತತೋಽಸ್ಯ ದೀಪ್ಯಮಾನೇನ ಪೀತೇನ ನಿಶಿತೇನ ಚ||
09015064c ಪ್ರಮುಖೇ ವರ್ತಮಾನಸ್ಯ ಭಲ್ಲೇನಾಪಾಹರದ್ಧ್ವಜಂ|
ಉರಿಯುತ್ತಿದ್ದ ನಿಶಿತ ಹೊಂಬಣ್ಣದ ಭಲ್ಲದಿಂದ ಎದಿರು ಯುದ್ಧಮಾಡುತ್ತಿದ್ದ ಶಲ್ಯನ ಧ್ವಜವನ್ನೂ ಕತ್ತರಿಸಿದನು.
09015064e ತತಃ ಪ್ರಭಗ್ನಂ ತತ್ಸೈನ್ಯಂ ದೌರ್ಯೋಧನಮರಿಂದಮ||
09015065a ತತೋ ಮದ್ರಾಧಿಪಂ ದ್ರೌಣಿರಭ್ಯಧಾವತ್ತಥಾಕೃತಂ|
09015065c ಆರೋಪ್ಯ ಚೈನಂ ಸ್ವರಥಂ ತ್ವರಮಾಣಃ ಪ್ರದುದ್ರುವೇ||
ಆಗ ದುರ್ಯೋಧನನ ಸೈನ್ಯವು ಭಗ್ನವಾಗಿ ಹೋಯಿತು. ಅನಂತರ ದ್ರೌಣಿಯು ಧಾವಿಸಿಬಂದು ತ್ವರೆಮಾಡಿ ಮದ್ರಾಧಿಪನನ್ನು ತನ್ನ ರಥದಲ್ಲೇರಿಸಿಕೊಂಡು ಹೊರಟುಹೋದನು.
09015066a ಮುಹೂರ್ತಮಿವ ತೌ ಗತ್ವಾ ನರ್ದಮಾನೇ ಯುಧಿಷ್ಠಿರೇ|
09015066c ಸ್ಥಿತ್ವಾ ತತೋ ಮದ್ರಪತಿರನ್ಯಂ ಸ್ಯಂದನಮಾಸ್ಥಿತಃ||
09015067a ವಿಧಿವತ್ಕಲ್ಪಿತಂ ಶುಭ್ರಂ ಮಹಾಂಬುದನಿನಾದಿನಂ|
09015067c ಸಜ್ಜಯಂತ್ರೋಪಕರಣಂ ದ್ವಿಷತಾಂ ರೋಮಹರ್ಷಣಂ||
ಯುಧಿಷ್ಠಿರನು ಸ್ವಲ್ಪಹೊತ್ತು ಅವನನ್ನು ಹಿಂಬಾಲಿಸಿ ಹೋಗಿ ಗರ್ಜಿಸಿದನು. ಅನಂತರ ಮದ್ರಪತಿಯು ವಿಧಿವತ್ತಾಗಿ ಸಜ್ಜಾಗಿಸಿದ, ಯಂತ್ರೋಪಕರಣಗಳಿಂದ ಸುಸಜ್ಜಿತವಾದ, ಶುಭ್ರ, ಮಹಾಮೇಘದ ಗುಡುಗಿನಂತೆ ಶಬ್ಧಮಾಡುತ್ತಿದ್ದ, ಶತ್ರುಗಳಿಗೆ ರೋಮಾಂಚನವನ್ನುಂಟುಮಾಡುವ ಇನ್ನೊಂದು ರಥವನ್ನೇರಿ ನಿಂತನು.
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಶಲ್ಯಯುಧಿಷ್ಠಿರಯುದ್ಧೇ ಪಂಚಾದಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಶಲ್ಯಯುಧಿಷ್ಠಿರಯುದ್ಧ ಎನ್ನುವ ಹದಿನೈದನೇ ಅಧ್ಯಾಯವು.
