Shalya Parva: Chapter 12

ಶಲ್ಯಪರ್ವ: ಶಲ್ಯವಧ ಪರ್ವ

೧೨

ಧರ್ಮರಾಜ-ಸಾತ್ಯಕಿ-ಭೀಮಸೇನ-ಮಾದ್ರೀಪುತ್ರರೊಂದಿಗೆ ಶಲ್ಯನ ಯುದ್ಧ (೧-೪೫).

09012001 ಸಂಜಯ ಉವಾಚ

09012001a ಪೀಡಿತೇ ಧರ್ಮರಾಜೇ ತು ಮದ್ರರಾಜೇನ ಮಾರಿಷ|

09012001c ಸಾತ್ಯಕಿರ್ಭೀಮಸೇನಶ್ಚ ಮಾದ್ರೀಪುತ್ರೌ ಚ ಪಾಂಡವೌ||

09012001e ಪರಿವಾರ್ಯ ರಥೈಃ ಶಲ್ಯಂ ಪೀಡಯಾಮಾಸುರಾಹವೇ||

ಸಂಜಯನು ಹೇಳಿದನು: “ಮಾರಿಷ! ಧರ್ಮರಾಜನು ಹಾಗೆ ಮದ್ರರಾಜನಿಂದ ಪೀಡಿತನಾಗಿರಲು ಸಾತ್ಯಕಿ, ಭೀಮಸೇನ ಮತ್ತು ಮಾದ್ರೀಪುತ್ರ ಪಾಂಡವರೀರ್ವರು ರಥಗಳಿಂದ ಶಲ್ಯನನ್ನು ಸುತ್ತುವರೆದು ಯುದ್ಧದಲ್ಲಿ ಅವನನ್ನು ಪೀಡಿಸತೊಡಗಿದರು.

09012002a ತಮೇಕಂ ಬಹುಭಿರ್ದೃಷ್ಟ್ವಾ ಪೀಡ್ಯಮಾನಂ ಮಹಾರಥೈಃ|

09012002c ಸಾಧುವಾದೋ ಮಹಾನ್ಜಜ್ಞೇ ಸಿದ್ಧಾಶ್ಚಾಸನ್ಪ್ರಹರ್ಷಿತಾಃ||

09012002e ಆಶ್ಚರ್ಯಮಿತ್ಯಭಾಷಂತ ಮುನಯಶ್ಚಾಪಿ ಸಂಗತಾಃ|

ಅವನೊಬ್ಬನನ್ನು ಅನೇಕ ಮಹಾರಥರು ಪೀಡಿಸುತ್ತಿರುವುದನ್ನು ಕಂಡು ಸಾಧು ಸಾಧುವೆನ್ನುವ ಜೋರಾದ ಕೂಗುಗಳು ಕೇಳಿಬಂದವು. ಸಿದ್ಧರು ಪ್ರಹರ್ಷಿತರಾದರು. ಸೇರಿದ ಮುನಿಗಳೂ ಕೂಡ ಆಶ್ಚರ್ಯದಿಂದ ಮಾತನಾಡಿಕೊಳ್ಳುತ್ತಿದ್ದರು.

09012003a ಭೀಮಸೇನೋ ರಣೇ ಶಲ್ಯಂ ಶಲ್ಯಭೂತಂ ಪರಾಕ್ರಮೇ||

09012003c ಏಕೇನ ವಿದ್ಧ್ವಾ ಬಾಣೇನ ಪುನರ್ವಿವ್ಯಾಧ ಸಪ್ತಭಿಃ|

ರಣದಲ್ಲಿ ಭೀಮಸೇನನು ತನ್ನ ಪರಾಕ್ರಮಕ್ಕೆ ಕಂಟಕಪ್ರಾಯನಾಗಿದ್ದ ಶಲ್ಯನನ್ನು ಒಂದೇ ಬಾಣದಿಂದ ಹೊಡೆದು ಪುನಃ ಏಳರಿಂದ ಹೊಡೆದನು.

09012004a ಸಾತ್ಯಕಿಶ್ಚ ಶತೇನೈನಂ ಧರ್ಮಪುತ್ರಪರೀಪ್ಸಯಾ||

09012004c ಮದ್ರೇಶ್ವರಮವಾಕೀರ್ಯ ಸಿಂಹನಾದಮಥಾನದತ್|

ಸಾತ್ಯಕಿಯೂ ಕೂಡ ಧರ್ಮಪುತ್ರನನ್ನು ರಕ್ಷಿಸಲೋಸುಗ ಮದ್ರೇಶ್ವರನನ್ನು ನೂರು ಬಾಣಗಳಿಂದ ಮುಚ್ಚಿ ಸಿಂಹನಾದಗೈದನು.

09012005a ನಕುಲಃ ಪಂಚಭಿಶ್ಚೈನಂ ಸಹದೇವಶ್ಚ ಸಪ್ತಭಿಃ||

09012005c ವಿದ್ಧ್ವಾ ತಂ ತು ತತಸ್ತೂರ್ಣಂ ಪುನರ್ವಿವ್ಯಾಧ ಸಪ್ತಭಿಃ|

ನಕುಲನು ಐದು ಮತ್ತು ಸಹದೇವನು ಏಳು ಬಾಣಗಳಿಂದ ಅವನನ್ನು ಹೊಡೆದು ನಂತರ ತಕ್ಷಣವೇ ಪುನಃ ಏಳರಿಂದ ಹೊಡೆದರು.

09012006a ಸ ತು ಶೂರೋ ರಣೇ ಯತ್ತಃ ಪೀಡಿತಸ್ತೈರ್ಮಹಾರಥೈಃ||

09012006c ವಿಕೃಷ್ಯ ಕಾರ್ಮುಕಂ ಘೋರಂ ವೇಗಘ್ನಂ ಭಾರಸಾಧನಂ|

09012007a ಸಾತ್ಯಕಿಂ ಪಂಚವಿಂಶತ್ಯಾ ಶಲ್ಯೋ ವಿವ್ಯಾಧ ಮಾರಿಷ||

09012007c ಭೀಮಸೇನಂ ತ್ರಿಸಪ್ತತ್ಯಾ ನಕುಲಂ ಸಪ್ತಭಿಸ್ತಥಾ|

ಮಾರಿಷ! ರಣದಲ್ಲಿ ಮಹಾರಥರಿಂದ ಪೀಡಿತನಾದ ಶೂರ ಶಲ್ಯನು -ವೇಗವಾಗಿ ಕೊಲ್ಲುವ ಘೋರ ಭಾರಸಾಧನ ಕಾರ್ಮುಕವನ್ನು ಸೆಳೆದು ಸಾತ್ಯಕಿಯನ್ನು ಇಪ್ಪತ್ತೈದು ಬಾಣಗಳಿಂದ, ಭೀಮನನ್ನು ಎಪ್ಪತ್ತು ಬಾಣಗಳಿಂದ ಮತ್ತು ನಕುಲನನ್ನು ಏಳರಿಂದ ಹೊಡೆದನು.

09012008a ತತಃ ಸವಿಶಿಖಂ ಚಾಪಂ ಸಹದೇವಸ್ಯ ಧನ್ವಿನಃ||

09012008c ಚಿತ್ತ್ವಾ ಭಲ್ಲೇನ ಸಮರೇ ವಿವ್ಯಾಧೈನಂ ತ್ರಿಸಪ್ತಭಿಃ|

ಆಗ ಧನ್ವಿ ಶಲ್ಯನು ಸಮರದಲ್ಲಿ ವಿಶಿಖದೊಂದಿಗೆ ಸಹದೇವನ ಧನುಸ್ಸನ್ನು ಭಲ್ಲದಿಂದ ತುಂಡರಿಸಿ ಅವನನ್ನು ಎಪ್ಪತ್ಮೂರು ಬಾಣಗಳಿಂದ ಹೊಡೆದನು.

09012009a ಸಹದೇವಸ್ತು ಸಮರೇ ಮಾತುಲಂ ಭೂರಿವರ್ಚಸಂ||

09012009c ಸಜ್ಯಮನ್ಯದ್ಧನುಃ ಕೃತ್ವಾ ಪಂಚಭಿಃ ಸಮತಾಡಯತ್|

09012009e ಶರೈರಾಶೀವಿಷಾಕಾರೈರ್ಜ್ವಲಜ್ಜ್ವಲನಸಂನಿಭೈಃ||

ಸಹದೇವನಾದರೋ ಸಮರದಲ್ಲಿ ಇನ್ನೊಂದು ಧನುಸ್ಸನ್ನು ಸಜ್ಜುಗೊಳಿಸಿ ಪ್ರಜ್ವಲಿತ ಅಗ್ನಿ ಸಮಾನ ಸರ್ಪವಿಷದಾಕಾರದ ಐದು ಶರಗಳಿಂದ ತನ್ನ ಭೂರಿವರ್ಚಸ ಸೋದರಮಾವನನ್ನು ಹೊಡೆದನು.

09012010a ಸಾರಥಿಂ ಚಾಸ್ಯ ಸಮರೇ ಶರೇಣಾನತಪರ್ವಣಾ|

09012010c ವಿವ್ಯಾಧ ಭೃಶಸಂಕ್ರುದ್ಧಸ್ತಂ ಚ ಭೂಯಸ್ತ್ರಿಭಿಃ ಶರೈಃ||

ಸಮರದಲ್ಲಿ ಅವನು ನತಪರ್ವ ಶರದಿಂದ ಅವನ ಸಾರಥಿಯನ್ನು ಹೊಡೆದು ಪುನಃ ಕ್ರುದ್ಧನಾಗಿ ಮೂರು ಬಾಣಗಳಿಂದ ಶಲ್ಯನನ್ನು ಹೊಡೆದನು.

09012011a ಭೀಮಸೇನಸ್ತ್ರಿಸಪ್ತತ್ಯಾ ಸಾತ್ಯಕಿರ್ನವಭಿಃ ಶರೈಃ|

09012011c ಧರ್ಮರಾಜಸ್ತಥಾ ಷಷ್ಟ್ಯಾ ಗಾತ್ರೇ ಶಲ್ಯಂ ಸಮರ್ಪಯತ್||

ಭೀಮಸೇನನು ಎಪ್ಪತ್ಮೂರು ಶರಗಳಿಂದಲೂ, ಸಾತ್ಯಕಿಯು ಒಂಭತ್ತರಿಂದಲೂ, ಹಾಗೆಯೇ ಧರ್ಮರಾಜನು ಅರವತ್ತು ಶರಗಳಿಂದಲೂ ಶಲ್ಯನ ದೇಹವನ್ನು ಚುಚ್ಚಿದರು.

09012012a ತತಃ ಶಲ್ಯೋ ಮಹಾರಾಜ ನಿರ್ವಿದ್ಧಸ್ತೈರ್ಮಹಾರಥೈಃ|

09012012c ಸುಸ್ರಾವ ರುಧಿರಂ ಗಾತ್ರೈರ್ಗೈರಿಕಂ ಪರ್ವತೋ ಯಥಾ||

ಮಹಾರಾಜ! ಆ ಮಹಾರಥರಿಂದ ಚೆನ್ನಾಗಿ ಪ್ರಹರಿಸಲ್ಪಟ್ಟ ಶಲ್ಯನ ದೇಹದಿಂದ ರಕ್ತವು ಗೈರಕಾದಿ ಧಾತುಗಳುಳ್ಳ ಕೆಂಪು ನೀರು ಪರ್ವತದಿಂದ ಸುರಿಯುವಂತೆ ಸುರಿಯಿತು.

09012013a ತಾಂಶ್ಚ ಸರ್ವಾನ್ಮಹೇಷ್ವಾಸಾನ್ಪಂಚಭಿಃ ಪಂಚಭಿಃ ಶರೈಃ|

09012013c ವಿವ್ಯಾಧ ತರಸಾ ರಾಜಂಸ್ತದದ್ಭುತಮಿವಾಭವತ್||

ರಾಜನ್! ಕೂಡಲೇ ಅವನು ಆ ಎಲ್ಲ ಮಹಾರಥರನ್ನೂ ಐದೈದು ಶರಗಳಿಂದ ಹೊಡೆದನು. ಅದೊಂದು ಅದ್ಭುತವಾಗಿತ್ತು.

09012014a ತತೋಽಪರೇಣ ಭಲ್ಲೇನ ಧರ್ಮಪುತ್ರಸ್ಯ ಮಾರಿಷ|

09012014c ಧನುಶ್ಚಿಚ್ಚೇದ ಸಮರೇ ಸಜ್ಯಂ ಸ ಸುಮಹಾರಥಃ||

ಮಾರಿಷ! ಅನಂತರ ಇನ್ನೊಂದು ಭಲ್ಲದಿಂದ ಆ ಸುಮಹಾರಥನು ಸಮರದಲ್ಲಿ ಧರ್ಮಪುತ್ರನ ಧನುಸ್ಸನ್ನು ತುಂಡರಿಸಿದನು.

09012015a ಅಥಾನ್ಯದ್ಧನುರಾದಾಯ ಧರ್ಮಪುತ್ರೋ ಮಹಾರಥಃ|

09012015c ಸಾಶ್ವಸೂತಧ್ವಜರಥಂ ಶಲ್ಯಂ ಪ್ರಾಚ್ಚಾದಯಚ್ಚರೈಃ||

ಆಗ ಮಹಾರಥ ಧರ್ಮಪುತ್ರನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಶರಗಳಿಂದ ಕುದುರೆಗಳು, ಸಾರಥಿ, ಧ್ವಜ ಮತ್ತು ರಥಗಳ ಸಹಿತ ಶಲ್ಯನನ್ನು ಮುಚ್ಚಿಬಿಟ್ಟನು.

09012016a ಸ ಚ್ಚಾದ್ಯಮಾನಃ ಸಮರೇ ಧರ್ಮಪುತ್ರಸ್ಯ ಸಾಯಕೈಃ|

09012016c ಯುಧಿಷ್ಠಿರಮಥಾವಿಧ್ಯದ್ದಶಭಿರ್ನಿಶಿತೈಃ ಶರೈಃ||

ಸಮರದಲ್ಲಿ ಧರ್ಮಪುತ್ರನ ಸಾಯಕಗಳಿಂದ ಮುಚ್ಚಿಹೋದ ಶಲ್ಯನು ಕೂಡಲೇ ಯುಧಿಷ್ಠಿರನನ್ನು ಹತ್ತು ನಿಶಿತ ಶರಗಳಿಂದ ಪ್ರಹರಿಸಿದನು.

09012017a ಸಾತ್ಯಕಿಸ್ತು ತತಃ ಕ್ರುದ್ಧೋ ಧರ್ಮಪುತ್ರೇ ಶರಾರ್ದಿತೇ|

09012017c ಮದ್ರಾಣಾಮಧಿಪಂ ಶೂರಂ ಶರೌಘೈಃ ಸಮವಾರಯತ್||

ಧರ್ಮಪುತ್ರನನ್ನು ಶರಗಳಿಂದ ಪೀಡಿಸಲು, ಕ್ರುದ್ಧನಾದ ಸಾತ್ಯಕಿಯು ಶೂರ ಮದ್ರಾಧಿಪನನ್ನು ಶರಸಮೂಹಗಳಿಂದ ತುಂಬಿಬಿಟ್ಟನು.

09012018a ಸ ಸಾತ್ಯಕೇಃ ಪ್ರಚಿಚ್ಚೇದ ಕ್ಷುರಪ್ರೇಣ ಮಹದ್ಧನುಃ|

09012018c ಭೀಮಸೇನಮುಖಾಂಸ್ತಾಂಶ್ಚ ತ್ರಿಭಿಸ್ತ್ರಿಭಿರತಾಡಯತ್||

ಶಲ್ಯನು ಕ್ಷುರಪ್ರದಿಂದ ಸಾತ್ಯಕಿಯ ಮಹಾ ಧನುಸ್ಸನ್ನು ಕತ್ತರಿಸಿದನು ಮತ್ತು ಭೀಮಸೇನನೇ ಮೊದಲಾದವರನ್ನು ಮೂರು ಮೂರು ಬಾಣಗಳಿಂದ ಹೊಡೆದನು.

09012019a ತಸ್ಯ ಕ್ರುದ್ಧೋ ಮಹಾರಾಜ ಸಾತ್ಯಕಿಃ ಸತ್ಯವಿಕ್ರಮಃ|

09012019c ತೋಮರಂ ಪ್ರೇಷಯಾಮಾಸ ಸ್ವರ್ಣದಂಡಂ ಮಹಾಧನಂ||

ಮಹಾರಾಜ! ಆಗ ಕ್ರುದ್ಧ ಸತ್ಯವಿಕ್ರಮಿ ಸಾತ್ಯಕಿಯು ಮಹಾಬೆಲೆಬಾಳುವ ಸ್ವರ್ಣದಂಡದ ತೋಮರವನ್ನು ಶಲ್ಯನ ಮೇಲೆ ಪ್ರಯೋಗಿಸಿದನು.

09012020a ಭೀಮಸೇನೋಽಥ ನಾರಾಚಂ ಜ್ವಲಂತಮಿವ ಪನ್ನಗಂ|

09012020c ನಕುಲಃ ಸಮರೇ ಶಕ್ತಿಂ ಸಹದೇವೋ ಗದಾಂ ಶುಭಾಂ||

09012020e ಧರ್ಮರಾಜಃ ಶತಘ್ನೀಂ ತು ಜಿಘಾಂಸುಃ ಶಲ್ಯಮಾಹವೇ|

ಯುದ್ಧದಲ್ಲಿ ಶಲ್ಯನನ್ನು ಸಂಹರಿಸಲೋಸುಗ ಭೀಮಸೇನನು ಸರ್ಪದಂತೆ ಪ್ರಜ್ಚಲಿಸುತ್ತಿದ್ದ ನಾರಾಚವನ್ನೂ, ನಕುಲನು ಶಕ್ತಿಯನ್ನೂ, ಸಹದೇವನು ಶುಭ ಗದೆಯನ್ನೂ ಮತ್ತು ಧರ್ಮರಾಜನು ಶತಘ್ನಿಯನ್ನೂ ಪ್ರಯೋಗಿಸಿದರು.

09012021a ತಾನಾಪತತ ಏವಾಶು ಪಂಚಾನಾಂ ವೈ ಭುಜಚ್ಯುತಾನ್||

09012021c ಸಾತ್ಯಕಿಪ್ರಹಿತಂ ಶಲ್ಯೋ ಭಲ್ಲೈಶ್ಚಿಚ್ಚೇದ ತೋಮರಂ|

ಈ ಐವರ ಭುಜಗಳಿಂದ ಹೊರಟ ಅಸ್ತ್ರಗಳು ತನ್ನ ಮೇಲೆ ಬೀಳುವುದರೊಳಗೇ ಶಲ್ಯನು ಅವುಗಳನ್ನು ನಿವಾರಿಸಿದನು. ಸಾತ್ಯಕಿಯು ಕಳುಹಿಸಿದ ತೋಮರವನ್ನು ಭಲ್ಲಗಳಿಂದ ತುಂಡರಿಸಿದನು.

09012022a ಭೀಮೇನ ಪ್ರಹಿತಂ ಚಾಪಿ ಶರಂ ಕನಕಭೂಷಣಂ||

09012022c ದ್ವಿಧಾ ಚಿಚ್ಚೇದ ಸಮರೇ ಕೃತಹಸ್ತಃ ಪ್ರತಾಪವಾನ್|

ಭೀಮನು ಪ್ರಯೋಗಿಸಿದ ಕನಕಭೂಷಣ ಶರವನ್ನು ಕೂಡ ಸಮರದಲ್ಲಿ ಕೃತಹಸ್ತ ಪ್ರತಾಪವಾನ್ ಶಲ್ಯನು ಎರಡಾಗಿ ತುಂಡರಿಸಿದನು.

09012023a ನಕುಲಪ್ರೇಷಿತಾಂ ಶಕ್ತಿಂ ಹೇಮದಂಡಾಂ ಭಯಾವಹಾಂ||

09012023c ಗದಾಂ ಚ ಸಹದೇವೇನ ಶರೌಘೈಃ ಸಮವಾರಯತ್|

ಶರೌಘಗಳಿಂದ ನಕುಲನು ಪ್ರಯೋಗಿಸಿದ ಭಯವನ್ನುಂಟುಮಾಡುವ ಹೇಮದಂಡಯುಕ್ತ ಶಕ್ತಿಯನ್ನು ಮತ್ತು ಸಹದೇವನ ಗದೆಯನ್ನು ನಿವಾರಿಸಿದನು.

09012024a ಶರಾಭ್ಯಾಂ ಚ ಶತಘ್ನೀಂ ತಾಂ ರಾಜ್ಞಶ್ಚಿಚ್ಚೇದ ಭಾರತ||

09012024c ಪಶ್ಯತಾಂ ಪಾಂಡುಪುತ್ರಾಣಾಂ ಸಿಂಹನಾದಂ ನನಾದ ಚ|

09012024e ನಾಮೃಷ್ಯತ್ತಂ ತು ಶೈನೇಯಃ ಶತ್ರೋರ್ವಿಜಯಮಾಹವೇ||

ಭಾರತ! ಧರ್ಮರಾಜನ ಶರಗಳನ್ನೂ ಶತಘ್ನಿಯನ್ನೂ ತುಂಡರಿಸಿ, ಪಾಂಡುಪುತ್ರರು ನೋಡುತ್ತಿದ್ದಂತೆಯೇ ಸಿಂಹನಾದಗೈದನು. ಯುದ್ಧದಲ್ಲಿ ಶತ್ರುವಿನ ಆ ವಿಜಯವನ್ನು ಶೈನೇಯನಿಗೆ ಸಹಿಸಿಕೊಳ್ಳಲಾಗಲಿಲ್ಲ.

09012025a ಅಥಾನ್ಯದ್ಧನುರಾದಾಯ ಸಾತ್ಯಕಿಃ ಕ್ರೋಧಮೂರ್ಚಿತಃ|

09012025c ದ್ವಾಭ್ಯಾಂ ಮದ್ರೇಶ್ವರಂ ವಿದ್ಧ್ವಾ ಸಾರಥಿಂ ಚ ತ್ರಿಭಿಃ ಶರೈಃ||

ಆಗ ಕ್ರೋಧಮೂರ್ಛಿತ ಸಾತ್ಯಕಿಯು ಇನ್ನೊಂದು ಧನುಸ್ಸನ್ನೆತ್ತಿಕೊಂಡು ಎರಡು ಬಾಣಗಳಿಂದ ಮದ್ರೇಶ್ವರನನ್ನೂ ಮೂರರಿಂದ ಅವನ ಸಾರಥಿಯನ್ನೂ ಹೊಡೆದನು.

09012026a ತತಃ ಶಲ್ಯೋ ಮಹಾರಾಜ ಸರ್ವಾಂಸ್ತಾನ್ದಶಭಿಃ ಶರೈಃ|

09012026c ವಿವ್ಯಾಧ ಸುಭೃಶಂ ಕ್ರುದ್ಧಸ್ತೋತ್ತ್ರೈರಿವ ಮಹಾದ್ವಿಪಾನ್||

ಮಹಾರಾಜ! ಆಗ ಕ್ರುದ್ಧ ಶಲ್ಯನು ಅವರೆಲ್ಲರನ್ನು ಮಹಾಗಜಗಳನ್ನು ಅಂಕುಶಗಳಿಂದ ಹೇಗೋ ಹಾಗೆ ಹತ್ತು ಬಾಣಗಳಿಂದ ಪ್ರಹರಿಸಿದನು.

09012027a ತೇ ವಾರ್ಯಮಾಣಾಃ ಸಮರೇ ಮದ್ರರಾಜ್ಞಾ ಮಹಾರಥಾಃ|

09012027c ನ ಶೇಕುಃ ಪ್ರಮುಖೇ ಸ್ಥಾತುಂ ತಸ್ಯ ಶತ್ರುನಿಷೂದನಾಃ||

ಸಮರದಲ್ಲಿ ಮದ್ರರಾಜನಿಂದ ತಡೆಯಲ್ಪಡುತ್ತಿದ್ದ ಆ ಶತ್ರುನಿಷೂದನ ಮಹಾರಥರು ಅವನ ಎದಿರು ನಿಲ್ಲಲು ಶಕ್ಯರಾಗಿರಲಿಲ್ಲ.

09012028a ತತೋ ದುರ್ಯೋಧನೋ ರಾಜಾ ದೃಷ್ಟ್ವಾ ಶಲ್ಯಸ್ಯ ವಿಕ್ರಮಂ|

09012028c ನಿಹತಾನ್ಪಾಂಡವಾನ್ಮೇನೇ ಪಾಂಚಾಲಾನಥ ಸೃಂಜಯಾನ್||

ಆಗ ಶಲ್ಯನ ವಿಕ್ರಮವನ್ನು ನೋಡಿ ರಾಜಾ ದುರ್ಯೋಧನನು ಪಾಂಡವ-ಪಾಂಚಾಲ-ಸೃಂಜಯರು ಹತರಾದರೆಂದೇ ಭಾವಿಸಿದನು.

09012029a ತತೋ ರಾಜನ್ಮಹಾಬಾಹುರ್ಭೀಮಸೇನಃ ಪ್ರತಾಪವಾನ್|

09012029c ಸಂತ್ಯಜ್ಯ ಮನಸಾ ಪ್ರಾಣಾನ್ಮದ್ರಾಧಿಪಮಯೋಧಯತ್||

ರಾಜನ್! ಆಗ ಪ್ರತಾಪವಾನ್ ಮಹಾಬಾಹು ಭೀಮಸೇನನು ಮನಸಾ ಪ್ರಾಣಗಳನ್ನೇ ಪರಿತ್ಯಜಿಸಿ ಮದ್ರಾಧಿಪನೊಡನೆ ಯುದ್ಧಮಾಡಿದನು.

09012030a ನಕುಲಃ ಸಹದೇವಶ್ಚ ಸಾತ್ಯಕಿಶ್ಚ ಮಹಾರಥಃ|

09012030c ಪರಿವಾರ್ಯ ತದಾ ಶಲ್ಯಂ ಸಮಂತಾದ್ವ್ಯಕಿರನ್ ಶರೈಃ||

ನಕುಲ, ಸಹದೇವ ಮತ್ತು ಮಹಾರಥ ಸಾತ್ಯಕಿಯರು ಎಲ್ಲಕಡೆಗಳಲ್ಲಿ ಶರಗಳನ್ನು ಎರಚುತ್ತಾ ಶಲ್ಯನನ್ನು ತಡೆದರು.

09012031a ಸ ಚತುರ್ಭಿರ್ಮಹೇಷ್ವಾಸೈಃ ಪಾಂಡವಾನಾಂ ಮಹಾರಥೈಃ|

09012031c ವೃತಸ್ತಾನ್ಯೋಧಯಾಮಾಸ ಮದ್ರರಾಜಃ ಪ್ರತಾಪವಾನ್||

ಪ್ರತಾಪವಾನ್ ಮದ್ರರಾಜನು ಆ ನಾಲ್ಕು ಪಾಂಡವ ಮಹೇಷ್ವಾಸ ಮಹಾರಥರಿಂದ ಸುತ್ತುವರೆಯಲ್ಪಟ್ಟು ಯುದ್ಧಮಾಡಿದನು.

09012032a ತಸ್ಯ ಧರ್ಮಸುತೋ ರಾಜನ್ ಕ್ಷುರಪ್ರೇಣ ಮಹಾಹವೇ|

09012032c ಚಕ್ರರಕ್ಷಂ ಜಘಾನಾಶು ಮದ್ರರಾಜಸ್ಯ ಪಾರ್ಥಿವ||

ರಾಜನ್! ಮಹಾಯುದ್ಧದಲ್ಲಿ ಪಾರ್ಥಿವ ಧರ್ಮಸುತನು ಮದ್ರರಾಜನ ಚಕ್ರರಕ್ಷಕನನ್ನು ಕ್ಷುರಪ್ರದಿಂದ ಸಂಹರಿಸಿದನು.

09012033a ತಸ್ಮಿಂಸ್ತು ನಿಹತೇ ಶೂರೇ ಚಕ್ರರಕ್ಷೇ ಮಹಾರಥೇ|

09012033c ಮದ್ರರಾಜೋಽತಿಬಲವಾನ್ಸೈನಿಕಾನಸ್ತೃಣೋಚ್ಚರೈಃ||

ಚಕ್ರರಕ್ಷಕನು ಹತನಾಗಲು ಶೂರ ಮಹಾರಥಿ ಬಲವಾನ್ ಮದ್ರರಾಜನು ಶರಗಳಿಂದ ಸೈನಿಕರನ್ನು ಮುಚ್ಚಿಬಿಟ್ಟನು.

09012034a ಸಮಾಚ್ಚನ್ನಾಂಸ್ತತಸ್ತಾಂಸ್ತು ರಾಜನ್ವೀಕ್ಷ್ಯ ಸ ಸೈನಿಕಾನ್|

09012034c ಚಿಂತಯಾಮಾಸ ಸಮರೇ ಧರ್ಮರಾಜೋ ಯುಧಿಷ್ಠಿರಃ||

ರಾಜನ್! ಸೈನಿಕರು ಶಲ್ಯನ ಬಾಣಗಳಿಂದ ಮುಚ್ಚಿಹೋಗಿರುವುದನ್ನು ವೀಕ್ಷಿಸಿದ ಧರ್ಮರಾಜ ಯುಧಿಷ್ಠಿರನು ಸಮರದಲ್ಲಿ ಚಿಂತಿಸತೊಡಗಿದನು:

09012035a ಕಥಂ ನು ನ ಭವೇತ್ಸತ್ಯಂ ತನ್ಮಾಧವವಚೋ ಮಹತ್|

09012035c ನ ಹಿ ಕ್ರುದ್ಧೋ ರಣೇ ರಾಜಾ ಕ್ಷಪಯೇತ ಬಲಂ ಮಮ||

“ಮಾಧವನ ಮಹಾ ವಚನವು ಹೇಗೆ ತಾನೇ ಸತ್ಯವಾಗಬಲ್ಲದು? ರಣದಲ್ಲಿ ಕ್ರುದ್ಧನಾದ ಈ ರಾಜನು ನನ್ನ ಸೇನೆಯನ್ನು ಸಂಪೂರ್ಣವಾಗಿ ನಾಶಮಾಡದೇ ಇರುವನೇ?”

09012036a ತತಃ ಸರಥನಾಗಾಶ್ವಾಃ ಪಾಂಡವಾಃ ಪಾಂಡುಪೂರ್ವಜ|

09012036c ಮದ್ರೇಶ್ವರಂ ಸಮಾಸೇದುಃ ಪೀಡಯಂತಃ ಸಮಂತತಃ||

ಪಾಂಡುವಿನ ಅಣ್ಣನೇ! ಅನಂತರ ರಥ-ಗಜ-ಅಶ್ವ ಸೇನಾ ಸಮೇತರಾದ ಪಾಂಡವರು ಮದ್ರೇಶ್ವರನನ್ನು ಎಲ್ಲ ಕಡೆಗಳಿಂದ ಪೀಡಿಸುತ್ತಾ ಅವನ ಮೇಲೆ ಧಾಳಿನಡೆಸಿದರು.

09012037a ನಾನಾಶಸ್ತ್ರೌಘಬಹುಲಾಂ ಶಸ್ತ್ರವೃಷ್ಟಿಂ ಸಮುತ್ಥಿತಾಂ|

09012037c ವ್ಯಧಮತ್ಸಮರೇ ರಾಜನ್ಮಹಾಭ್ರಾಣೀವ ಮಾರುತಃ||

ರಾಜನ್! ಮೇಲೆದ್ದ ದೊಡ್ಡ ದೊಡ್ಡ ಮೇಘಗಳನ್ನು ಭಿರುಗಾಳಿಯು ಹೇಗೋ ಹಾಗೆ ಅವನು ಸಮರದಲ್ಲಿ ನಾನಾ ಶಸ್ತ್ರಗಳಿಂದ ಕೂಡಿದ್ದ ಆ ಅನೇಕ ಶರವೃಷ್ಟಿಯನ್ನು ನಾಶಗೊಳಿಸಿದನು.

09012038a ತತಃ ಕನಕಪುಂಖಾಂ ತಾಂ ಶಲ್ಯಕ್ಷಿಪ್ತಾಂ ವಿಯದ್ಗತಾಂ|

09012038c ಶರವೃಷ್ಟಿಮಪಶ್ಯಾಮ ಶಲಭಾನಾಮಿವಾತತಿಂ||

ಶಲ್ಯನು ಪ್ರಯೋಗಿಸಿದ ಸುವರ್ಣಮಯ ಬುಡಗಳಿದ್ದ ಬಾಣಗಳ ವೃಷ್ಟಿಯು ಮಿಡತೆಗಳ ಹಿಂಡುಗಳಂತೆ ಆಕಾಶವನ್ನೇ ತುಂಬಿದುದನ್ನು ನಾವು ನೋಡಿದೆವು.

09012039a ತೇ ಶರಾ ಮದ್ರರಾಜೇನ ಪ್ರೇಷಿತಾ ರಣಮೂರ್ಧನಿ|

09012039c ಸಂಪತಂತಃ ಸ್ಮ ದೃಶ್ಯಂತೇ ಶಲಭಾನಾಂ ವ್ರಜಾ ಇವ||

ಮದ್ರರಾಜನಿಂದ ಪ್ರಯೋಗಿಸಲ್ಪಟ್ಟ ಆ ಬಾಣಗಳು ಮಿಡತೆಗಳ ಗುಂಪುಗಳಂತೆ ರಣಮೂರ್ಧನಿಯಲ್ಲಿ ಬೀಳುತ್ತಿರುವುದನ್ನು ನಾವು ನೋಡಿದೆವು.

09012040a ಮದ್ರರಾಜಧನುರ್ಮುಕ್ತೈಃ ಶರೈಃ ಕನಕಭೂಷಣೈಃ|

09012040c ನಿರಂತರಮಿವಾಕಾಶಂ ಸಂಬಭೂವ ಜನಾಧಿಪ||

ಜನಾಧಿಪ! ಮದ್ರರಾಜನ ಧನುಸ್ಸಿನಿಂದ ಹೊರಟ ಆ ಕನಕಭೂಷಣ ಶರಗಳಿಂದ ತುಂಬಿಹೋದ ಆಕಾಶದಲ್ಲಿ ಸ್ವಲ್ಪವೂ ಸ್ಥಳಾವಕಾಶವಿಲ್ಲದಂತಾಯಿತು.

09012041a ನ ಪಾಂಡವಾನಾಂ ನಾಸ್ಮಾಕಂ ತತ್ರ ಕಶ್ಚಿದ್ವ್ಯದೃಶ್ಯತ|

09012041c ಬಾಣಾಂಧಕಾರೇ ಮಹತಿ ಕೃತೇ ತತ್ರ ಮಹಾಭಯೇ||

ಅವನು ಸೃಷ್ಟಿಸಿದ ಮಹಾ ಬಾಣಾಂಧಕಾರದಿಂದ ನಮ್ಮವರಿಗಾಗಲೀ ಪಾಂಡವರಿಗಾಗಲೀ ಏನೂ ಕಾಣುತ್ತಿರಲಿಲ್ಲ. ಅಲ್ಲಿ ಮಹಾಭಯವೇ ಉತ್ಪನ್ನವಾಯಿತು.

09012042a ಮದ್ರರಾಜೇನ ಬಲಿನಾ ಲಾಘವಾಚ್ಚರವೃಷ್ಟಿಭಿಃ|

09012042c ಲೋಡ್ಯಮಾನಂ ತಥಾ ದೃಷ್ಟ್ವಾ ಪಾಂಡವಾನಾಂ ಬಲಾರ್ಣವಂ|

09012042e ವಿಸ್ಮಯಂ ಪರಮಂ ಜಗ್ಮುರ್ದೇವಗಂಧರ್ವದಾನವಾಃ||

ಬಲಶಾಲೀ ಮದ್ರರಾಜನ ಹಸ್ತಲಾಘವದಿಂದ ಸೃಷ್ಟಿಸಲ್ಪಟ್ಟ ಆ ಶರವೃಷ್ಟಿಯಿಂದ ಪಾಂಡವರ ಸೇನಾಸಾಗರವು ಅಲ್ಲೋಲಕಲ್ಲೋಲವಾಗುತ್ತಿರುವುದನ್ನು ನೋಡಿ ದೇವ-ಗಂಧರ್ವ-ದಾನವರಲ್ಲಿಯೂ ಪರಮ ವಿಸ್ಮಯವುಂಟಾಯಿತು.

09012043a ಸ ತು ತಾನ್ಸರ್ವತೋ ಯತ್ತಾನ್ ಶರೈಃ ಸಂಪೀಡ್ಯ ಮಾರಿಷ|

09012043c ಧರ್ಮರಾಜಮವಚ್ಚಾದ್ಯ ಸಿಂಹವದ್ವ್ಯನದನ್ಮುಹುಃ||

ಮಾರಿಷ! ಶಲ್ಯನು ಆ ಪ್ರಯತ್ನಶೀಲರೆಲ್ಲರನ್ನೂ ಶರಗಳಿಂದ ಪೀಡಿಸಿ, ಧರ್ಮರಾಜನನ್ನೂ ಶರಗಳಿಂದ ಮುಚ್ಚಿ, ಪುನಃ ಪುನಃ ಸಿಂಹನಾದಗೈದನು.

09012044a ತೇ ಚನ್ನಾಃ ಸಮರೇ ತೇನ ಪಾಂಡವಾನಾಂ ಮಹಾರಥಾಃ|

09012044c ನ ಶೇಕುಸ್ತಂ ತದಾ ಯುದ್ಧೇ ಪ್ರತ್ಯುದ್ಯಾತುಂ ಮಹಾರಥಂ||

ಸಮರದಲ್ಲಿ ಅವನಿಂದ ಮುಸುಕಲ್ಪಟ್ಟ ಪಾಂಡವ ಮಹಾರಥರು ಆಗ ಯುದ್ಧದಲ್ಲಿ ಆ ಮಹಾರಥ ಶಲ್ಯನನ್ನು ಎದುರಿಸಿ ಯುದ್ಧಮಾಡಲು ಶಕ್ಯರಾಗಿರಲಿಲ್ಲ.

09012045a ಧರ್ಮರಾಜಪುರೋಗಾಸ್ತು ಭೀಮಸೇನಮುಖಾ ರಥಾಃ|

09012045c ನ ಜಹುಃ ಸಮರೇ ಶೂರಂ ಶಲ್ಯಮಾಹವಶೋಭಿನಂ||

ಆದರೂ ಧರ್ಮರಾಜನ ನಾಯಕತ್ವದಲ್ಲಿದ್ದ ಭೀಮಸೇನನೇ ಮೊದಲಾದ ಮಹಾರಥರು ಸಮರದಲ್ಲಿ ಆಹವಶೋಭೀ ಶೂರ ಶಲ್ಯನನ್ನು ಬಿಟ್ಟು ಹಿಂದೆ ಸರಿಯಲಿಲ್ಲ.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಶಲ್ಯಯುದ್ಧೇ ದ್ವಾದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಶಲ್ಯಯುದ್ಧ ಎನ್ನುವ ಹನ್ನೆರಡನೇ ಅಧ್ಯಾಯವು.

Comments are closed.