Shalya Parva: Chapter 10

ಶಲ್ಯಪರ್ವ: ಶಲ್ಯವಧ ಪರ್ವ

೧೦

ಶಲ್ಯನ ಪರಾಕ್ರಮ (೧-೩೨). ದ್ವಂದ್ವಯುದ್ಧ (೩೩-೪೧). ಭೀಮಸೇನನಿಂದ ಶಲ್ಯನ ಪರಾಜಯ (೪೨-೫೬).

09010001 ಸಂಜಯ ಉವಾಚ

09010001a ತಸ್ಮಿನ್ವಿಲುಲಿತೇ ಸೈನ್ಯೇ ವಧ್ಯಮಾನೇ ಪರಸ್ಪರಂ|

09010001c ದ್ರವಮಾಣೇಷು ಯೋಧೇಷು ನಿನದತ್ಸು ಚ ದಂತಿಷು||

ಸಂಜಯನು ಹೇಳಿದನು: “ಪರಸ್ಪರರನ್ನು ವಧಿಸುತ್ತಾ ಹೋರಾಡುತ್ತಿದ್ದ ಆ ಸೇನೆಗಳಲ್ಲಿ ಯೋಧರು ಓಡಿ ಹೋಗುತ್ತಿದ್ದರು ಮತ್ತು ಆನೆಗಳು ಚೀತ್ಕರಿಸುತ್ತಿದ್ದವು.

09010002a ಕೂಜತಾಂ ಸ್ತನತಾಂ ಚೈವ ಪದಾತೀನಾಂ ಮಹಾಹವೇ|

09010002c ವಿದ್ರುತೇಷು ಮಹಾರಾಜ ಹಯೇಷು ಬಹುಧಾ ತದಾ||

ಮಹಾರಾಜ! ಆ ಮಹಾಹವದಲ್ಲಿ ಪದಾತಿಗಳು ಜೋರಾಗಿ ಕೂಗಿಕೊಳ್ಳುತ್ತಿದ್ದರು. ಅನೇಕ ಕುದುರೆಗಳು ಓಡಿಹೋಗುತ್ತಿದ್ದವು.

09010003a ಪ್ರಕ್ಷಯೇ ದಾರುಣೇ ಜಾತೇ ಸಂಹಾರೇ ಸರ್ವದೇಹಿನಾಂ|

09010003c ನಾನಾಶಸ್ತ್ರಸಮಾವಾಪೇ ವ್ಯತಿಷಕ್ತರಥದ್ವಿಪೇ||

ಸರ್ವದೇಹಿಗಳ ಸಂಹಾರಕ ದಾರುಣ ಕ್ಷಯವು ನಡೆಯಿತು. ನಾನಾ ಶಸ್ತ್ರಗಳ ಪ್ರಹಾರಗಳಾಗುತ್ತಿದ್ದವು ಮತ್ತು ರಥ-ಆನೆಗಳು ಸಂಘರ್ಷಿಸುತ್ತಿದ್ದವು.

09010004a ಹರ್ಷಣೇ ಯುದ್ಧಶೌಂಡಾನಾಂ ಭೀರೂಣಾಂ ಭಯವರ್ಧನೇ|

09010004c ಗಾಹಮಾನೇಷು ಯೋಧೇಷು ಪರಸ್ಪರವಧೈಷಿಷು||

ಯುದ್ಧಶೌಂಡರಿಗೆ ಹರ್ಷವನ್ನುಂಟುಮಾಡುವ, ಹೇಡಿಗಳ ಭಯವನ್ನು ಹೆಚ್ಚಿಸುವ ಆ ಯುದ್ಧದಲ್ಲಿ ಯೋಧರು ಪರಸ್ಪರರನ್ನು ವಧಿಸಲು ಬಯಸಿ ನುಗ್ಗಿ ಹೋಗುತ್ತಿದ್ದರು.

09010005a ಪ್ರಾಣಾದಾನೇ ಮಹಾಘೋರೇ ವರ್ತಮಾನೇ ದುರೋದರೇ|

09010005c ಸಂಗ್ರಾಮೇ ಘೋರರೂಪೇ ತು ಯಮರಾಷ್ಟ್ರವಿವರ್ಧನೇ||

ಯಮರಾಷ್ಟ್ರವನ್ನು ವರ್ಧಿಸುವ ಆ ಘೋರರೂಪೀ ಸಂಗ್ರಾಮದಲ್ಲಿ ಪ್ರಾಣಗಳನ್ನು ಪಣವಾಗಿಟ್ಟ ಮಹಾ ಜೂಜಾಟವು ನಡೆಯುತ್ತಿತ್ತು.

09010006a ಪಾಂಡವಾಸ್ತಾವಕಂ ಸೈನ್ಯಂ ವ್ಯಧಮನ್ನಿಶಿತೈಃ ಶರೈಃ|

09010006c ತಥೈವ ತಾವಕಾ ಯೋಧಾ ಜಘ್ನುಃ ಪಾಂಡವಸೈನಿಕಾನ್||

ಪಾಂಡವರು ನಿನ್ನ ಸೈನ್ಯವನ್ನು ನಿಶಿತ ಶರಗಳಿಂದ ವಧಿಸುತ್ತಿದ್ದರು. ನಿನ್ನ ಕಡೆಯ ಯೋಧರೂ ಕೂಡ ಪಾಂಡವ ಸೈನಿಕರನ್ನು ಸಂಹರಿಸುತ್ತಿದ್ದರು.

09010007a ತಸ್ಮಿಂಸ್ತಥಾ ವರ್ತಮಾನೇ ಯುದ್ಧೇ ಭೀರುಭಯಾವಹೇ|

09010007c ಪೂರ್ವಾಹ್ಣೇ ಚೈವ ಸಂಪ್ರಾಪ್ತೇ ಭಾಸ್ಕರೋದಯನಂ ಪ್ರತಿ||

ಹೇಡಿಗಳಿಗೆ ಭಯವನ್ನು ನೀಡುವ ಆ ಯುದ್ಧವು ಹಾಗೆ ನಡೆಯುತ್ತಿರಲು, ಸೂರ್ಯನು ಉದಯಿಸಿ ಪೂರ್ವಾಹ್ಣವು ಪ್ರಾಪ್ತವಾಯಿತು.

09010008a ಲಬ್ಧಲಕ್ಷಾಃ ಪರೇ ರಾಜನ್ರಕ್ಷಿತಾಶ್ಚ ಮಹಾತ್ಮನಾ|

09010008c ಅಯೋಧಯಂಸ್ತವ ಬಲಂ ಮೃತ್ಯುಂ ಕೃತ್ವಾ ನಿವರ್ತನಂ||

ರಾಜನ್! ಮಹಾತ್ಮ ಅರ್ಜುನನಿಂದ ರಕ್ಷಿತವಾಗಿದ್ದ, ಮೃತ್ಯುವನ್ನೇ ಹಿಂದಿರುಗುವ ಸ್ಥಾನವನ್ನಾಗಿ ಮಾಡಿಕೊಂಡು ಗುರಿಯನ್ನಿಟ್ಟುಕೊಂಡಿದ್ದ ಶತ್ರುಸೇನೆಯು ನಿನ್ನ ಸೇನೆಯೊಂದಿಗೆ ಹೋರಾಡುತ್ತಿತ್ತು.

09010009a ಬಲಿಭಿಃ ಪಾಂಡವೈರ್ದೃಪ್ತೈರ್ಲಬ್ಧಲಕ್ಷೈಃ ಪ್ರಹಾರಿಭಿಃ|

09010009c ಕೌರವ್ಯಸೀದತ್ಪೃತನಾ ಮೃಗೀವಾಗ್ನಿಸಮಾಕುಲಾ||

ಪ್ರಹಾರ ಕುಶಲ ಲಬ್ಧಲಕ್ಷ್ಯ ದೃಪ್ತ ಬಲಿಷ್ಠ ಪಾಂಡವ ಯೋಧರಿಂದ ಪ್ರಹರಿಸಲ್ಪಟ್ಟ ನಿನ್ನ ಸೇನೆಯು ದಾವಾಗ್ನಿಯಿಂದ ಸುತ್ತುವರೆಯಲ್ಪಟ್ಟ ಹರಿಣಿಯಂತೆ ವ್ಯಾಕುಲಗೊಂಡಿತ್ತು.

09010010a ತಾಂ ದೃಷ್ಟ್ವಾ ಸೀದತೀಂ ಸೇನಾಂ ಪಂಕೇ ಗಾಮಿವ ದುರ್ಬಲಾಂ|

09010010c ಉಜ್ಜಿಹೀರ್ಷುಸ್ತದಾ ಶಲ್ಯಃ ಪ್ರಾಯಾತ್ಪಾಂಡುಚಮೂಂ ಪ್ರತಿ||

ಕೆಸರಿನಲ್ಲಿ ಸಿಕ್ಕಿಬಿದ್ದ ದುರ್ಬಲ ಹಸುವಿನಂತೆ ಕೌರವ ಸೇನೆಯು ಕುಸಿಯುತ್ತಿರುವುದನ್ನು ನೋಡಿ ಶಲ್ಯನು ಅದನ್ನು ಮೇಲೆತ್ತಲು ಬಯಸಿ ಪಾಂಡವ ಸೇನೆಯ ಕಡೆ ಹೋದನು.

09010011a ಮದ್ರರಾಜಸ್ತು ಸಂಕ್ರುದ್ಧೋ ಗೃಹೀತ್ವಾ ಧನುರುತ್ತಮಂ|

09010011c ಅಭ್ಯದ್ರವತ ಸಂಗ್ರಾಮೇ ಪಾಂಡವಾನಾತತಾಯಿನಃ||

ಮದ್ರರಾಜನಾದರೋ ಸಂಕ್ರುದ್ಧನಾಗಿ ಉತ್ತಮ ಧನುಸ್ಸನ್ನು ಹಿಡಿದು ಸಂಗ್ರಾಮದಲ್ಲಿ ಆತತಾಯಿನ ಪಾಂಡವರನ್ನು ಆಕ್ರಮಣಿಸಿದನು.

09010012a ಪಾಂಡವಾಶ್ಚ ಮಹಾರಾಜ ಸಮರೇ ಜಿತಕಾಶಿನಃ|

09010012c ಮದ್ರರಾಜಂ ಸಮಾಸಾದ್ಯ ವಿವ್ಯಧುರ್ನಿಶಿತೈಃ ಶರೈಃ||

ಮಹಾರಾಜ! ವಿಜಯೋತ್ಸಾಹಿಗಳಾಗಿದ್ದ ಪಾಂಡವರು ಕೂಡ ಸಮರದಲ್ಲಿ ಮದ್ರರಾಜನನ್ನು ಎದುರಿಸಿ ನಿಶಿತ ಶರಗಳಿಂದ ಹೊಡೆದರು.

09010013a ತತಃ ಶರಶತೈಸ್ತೀಕ್ಷ್ಣೈರ್ಮದ್ರರಾಜೋ ಮಹಾಬಲಃ|

09010013c ಅರ್ದಯಾಮಾಸ ತಾಂ ಸೇನಾಂ ಧರ್ಮರಾಜಸ್ಯ ಪಶ್ಯತಃ||

ಆಗ ಧರ್ಮರಾಜನು ನೋಡುತ್ತಿದ್ದಂತೆಯೇ ಮಹಾಬಲ ಮದ್ರರಾಜನು ನೂರಾರು ತೀಕ್ಷ್ಣ ಶರಗಳಿಂದ ಅವನ ಸೇನೆಯನ್ನು ಮರ್ದಿಸತೊಡಗಿದನು.

09010014a ಪ್ರಾದುರಾಸಂಸ್ತತೋ ರಾಜನ್ನಾನಾರೂಪಾಣ್ಯನೇಕಶಃ|

09010014c ಚಚಾಲ ಶಬ್ದಂ ಕುರ್ವಾಣಾ ಮಹೀ ಚಾಪಿ ಸಪರ್ವತಾ||

ರಾಜನ್! ಆಗ ನಾನಾ ರೂಪದ ಅನೇಕ ನಿಮಿತ್ತಗಳು ಕಾಣಿಸಿಕೊಂಡವು. ಶಬ್ಧಮಾಡುತ್ತಾ ಪರ್ವತಗಳೊಂದಿಗೆ ಭೂಮಿಯು ನಡುಗಿತು.

09010015a ಸದಂಡಶೂಲಾ ದೀಪ್ತಾಗ್ರಾಃ ಶೀರ್ಯಮಾಣಾಃ ಸಮಂತತಃ|

09010015c ಉಲ್ಕಾ ಭೂಮಿಂ ದಿವಃ ಪೇತುರಾಹತ್ಯ ರವಿಮಂಡಲಂ||

ಆಕಾಶದಿಂದ ಅನೇಕ ಉಲ್ಕೆಗಳು ಮತ್ತು ದಂಡಗಳೊಡನೆ ದೀಪ್ತಾಗ್ರ ಶೂಲಗಳು ಸೂರ್ಯಮಂಡಲವನ್ನು ಅಪ್ಪಳಿಸಿ ಸೀಳುವಂತೆ ಎಲ್ಲ ಕಡೆಗಳಿಂದ ಭೂಮಿಯ ಮೇಲೆ ಬಿದ್ದವು.

09010016a ಮೃಗಾಶ್ಚ ಮಾಹಿಷಾಶ್ಚಾಪಿ ಪಕ್ಷಿಣಶ್ಚ ವಿಶಾಂ ಪತೇ|

09010016c ಅಪಸವ್ಯಂ ತದಾ ಚಕ್ರುಃ ಸೇನಾಂ ತೇ ಬಹುಶೋ ನೃಪ||

ವಿಶಾಂಪತೇ! ನೃಪ! ಮೃಗಗಳು, ಎಮ್ಮೆಗಳು ಮತ್ತು ಪಕ್ಷಿಗಳು ಅನೇಕ ಸಂಖ್ಯೆಗಳಲ್ಲಿ ನಿನ್ನ ಸೇನೆಯನ್ನು ಬಲಬದಿಯಿಂದ ಸುತ್ತುತ್ತಿದ್ದವು.

09010017a ತತಸ್ತದ್ಯುದ್ಧಮತ್ಯುಗ್ರಮಭವತ್ಸಂಘಚಾರಿಣಾಂ|

09010017c ತಥಾ ಸರ್ವಾಣ್ಯನೀಕಾನಿ ಸಂನಿಪತ್ಯ ಜನಾಧಿಪ||

09010017e ಅಭ್ಯಯುಃ ಕೌರವಾ ರಾಜನ್ಪಾಂಡವಾನಾಮನೀಕಿನೀಂ||

ಆಗ ಸಂಘಟಿತರಾಗಿದ್ದವರ ನಡುವೆ ಅತ್ಯುಗ್ರ ಯುದ್ಧವು ನಡೆಯಿತು. ಜನಾಧಿಪ! ಕೌರವರು ಸರ್ವ ಸೇನೆಗಳನ್ನೂ ಒಟ್ಟುಮಾಡಿಕೊಂಡು ಪಾಂಡವಸೇನೆಯನ್ನು ಆಕ್ರಮಣಿಸಿದರು.

09010018a ಶಲ್ಯಸ್ತು ಶರವರ್ಷೇಣ ವರ್ಷನ್ನಿವ ಸಹಸ್ರದೃಕ್|

09010018c ಅಭ್ಯವರ್ಷದದೀನಾತ್ಮಾ ಕುಂತೀಪುತ್ರಂ ಯುಧಿಷ್ಠಿರಂ||

ಶಲ್ಯನಾದರೋ ವರ್ಷಾಕಾಲದಲ್ಲಿ ಸಹಸ್ರಾಕ್ಷನು ಮಳೆಸುರಿಸುವಂತೆ ಶರವರ್ಷಗಳನ್ನು ಅದೀನಾತ್ಮ ಕುಂತೀಪುತ್ರ ಯುಧಿಷ್ಠಿರನ ಮೇಲೆ ಸುರಿಸಿದನು.

09010019a ಭೀಮಸೇನಂ ಶರೈಶ್ಚಾಪಿ ರುಕ್ಮಪುಂಖೈಃ ಶಿಲಾಶಿತಃ|

09010019c ದ್ರೌಪದೇಯಾಂಸ್ತಥಾ ಸರ್ವಾನ್ಮಾದ್ರೀಪುತ್ರೌ ಚ ಪಾಂಡವೌ||

09010020a ಧೃಷ್ಟದ್ಯುಮ್ನಂ ಚ ಶೈನೇಯಂ ಶಿಖಂಡಿನಮಥಾಪಿ ಚ|

09010020c ಏಕೈಕಂ ದಶಭಿರ್ಬಾಣೈರ್ವಿವ್ಯಾಧ ಚ ಮಹಾಬಲಃ||

09010020e ತತೋಽಸೃಜದ್ಬಾಣವರ್ಷಂ ಘರ್ಮಾಂತೇ ಮಘವಾನಿವ||

ಆ ಮಹಾಬಲನು ರುಕ್ಮಪುಂಖ ಶಿಲಾಶಿತ ಶರಗಳಿಂದ ಭೀಮಸೇನ, ದ್ರೌಪದೇಯರೆಲ್ಲರು, ಮಾದ್ರೀಪುತ್ರ ಪಾಂಡವರಿಬ್ಬರು, ಧೃಷ್ಟದ್ಯುಮ್ನ, ಶೈನೇಯ, ಶಿಖಂಡಿಯರು ಒಬ್ಬೊಬ್ಬರನ್ನೂ ಹತ್ತತ್ತು ಬಾಣಗಳಿಂದ ಹೊಡೆದನು. ಅನಂತರ ಬೇಸಗೆಯ ಕೊನೆಯಲ್ಲಿ ಇಂದ್ರನು ಮಳೆ ಸುರಿಸುವಂತೆ ಬಾಣವರ್ಷಗಳನ್ನು ಸೃಷ್ಟಿಸಿದನು.

09010021a ತತಃ ಪ್ರಭದ್ರಕಾ ರಾಜನ್ಸೋಮಕಾಶ್ಚ ಸಹಸ್ರಶಃ|

09010021c ಪತಿತಾಃ ಪಾತ್ಯಮಾನಾಶ್ಚ ದೃಶ್ಯಂತೇ ಶಲ್ಯಸಾಯಕೈಃ||

ರಾಜನ್! ಆಗ ಸಹಸ್ರಾರು ಪ್ರಭದ್ರಕ-ಸೋಮಕರು ಶಲ್ಯಸಾಯಕಗಳಿಂದ ಉರುಳಿಸಲ್ಪಟ್ಟು ಕೆಳಗೆ ಬೀಳುತ್ತಿರುವುದು ಕಾಣುತ್ತಿತ್ತು.

09010022a ಭ್ರಮರಾಣಾಮಿವ ವ್ರಾತಾಃ ಶಲಭಾನಾಮಿವ ವ್ರಜಾಃ|

09010022c ಹ್ರಾದಿನ್ಯ ಇವ ಮೇಘೇಭ್ಯಃ ಶಲ್ಯಸ್ಯ ನ್ಯಪತನ್ ಶರಾಃ||

ಶಲ್ಯನ ಶರಗಳು ದುಂಬಿಗಳ ಸಮೂಹಗಳಂತೆ, ಮಿಡತೆಗಳ ಗುಂಪುಗಳಂತೆ, ಮತ್ತು ಮೇಘಗಳ ಗುಂಪುಗಳಂತೆ ಸೇನೆಗಳ ಮೇಲೆ ಬೀಳುತ್ತಿದ್ದವು.

09010023a ದ್ವಿರದಾಸ್ತುರಗಾಶ್ಚಾರ್ತಾಃ ಪತ್ತಯೋ ರಥಿನಸ್ತಥಾ|

09010023c ಶಲ್ಯಸ್ಯ ಬಾಣೈರ್ನ್ಯಪತನ್ಬಭ್ರಮುರ್ವ್ಯನದಂಸ್ತಥಾ||

ಶಲ್ಯನ ಬಾಣಗಳಿಂದ ಆರ್ತರಾಗಿ ಆನೆಗಳೂ, ಕುದುರೆಗಳೂ, ಪದಾತಿಗಳೂ, ರಥಿಗಳೂ ಕೆಳಗುರುಳುತ್ತಿದ್ದವು. ದಿಕ್ಕುಕಾಣದೇ ತಿರುಗುತ್ತಿದ್ದವು.

09010024a ಆವಿಷ್ಟ ಇವ ಮದ್ರೇಶೋ ಮನ್ಯುನಾ ಪೌರುಷೇಣ ಚ|

09010024c ಪ್ರಾಚ್ಚಾದಯದರೀನ್ಸಂಖ್ಯೇ ಕಾಲಸೃಷ್ಟ ಇವಾಂತಕಃ||

ಕಾಲಸೃಷ್ಟ ಅಂತಕನಂತೆ ಕೋಪ-ಪೌರುಷಗಳಿಂದ ಆವಿಷ್ಟನಾಗಿದ್ದ ಮದ್ರೇಶನು ಯುದ್ಧದಲ್ಲಿ ಶತ್ರುಗಳನ್ನು ಬಾಣಗಳಿಂದ ಮುಚ್ಚಿಬಿಟ್ಟನು.

09010024e ವಿನರ್ದಮಾನೋ ಮದ್ರೇಶೋ ಮೇಘಹ್ರಾದೋ ಮಹಾಬಲಃ||

09010025a ಸಾ ವಧ್ಯಮಾನಾ ಶಲ್ಯೇನ ಪಾಂಡವಾನಾಮನೀಕಿನೀ|

09010025c ಅಜಾತಶತ್ರುಂ ಕೌಂತೇಯಮಭ್ಯಧಾವದ್ ಯುಧಿಷ್ಠಿರಂ||

ಮಹಾಬಲ ಮದ್ರೇಶನು ಮೇಘಗಳಂತೆ ಗರ್ಜಿಸುತ್ತಿದ್ದನು. ಶಲ್ಯನಿಂದ ಹಾಗೆ ವಧಿಸಲ್ಪಡುತ್ತಿದ್ದ ಪಾಂಡವ ಸೇನೆಯು ಅಜಾತಶತ್ರು ಕೌಂತೇಯ ಯುಧಿಷ್ಠಿರನ ಬಳಿ ಸಾರಿತು.

09010026a ತಾಂ ಸಮರ್ಪ್ಯ ತತಃ ಸಂಖ್ಯೇ ಲಘುಹಸ್ತಃ ಶಿತೈಃ ಶರೈಃ|

09010026c ಶರವರ್ಷೇಣ ಮಹತಾ ಯುಧಿಷ್ಠಿರಮಪೀಡಯತ್||

ಲಘುಹಸ್ತ ಶಲ್ಯನು ನಿಶಿತ ಶರಗಳಿಂದ ಆ ಸೇನೆಯನ್ನು ಮರ್ದಿಸಿ ಮಹಾ ಶರವರ್ಷದಿಂದ ಯುಧಿಷ್ಠಿರನನ್ನು ಪೀಡಿಸಿದನು.

09010027a ತಮಾಪತಂತಂ ಪತ್ತ್ಯಶ್ವೈಃ ಕ್ರುದ್ಧೋ ರಾಜಾ ಯುಧಿಷ್ಠಿರಃ|

09010027c ಅವಾರಯಚ್ಚರೈಸ್ತೀಕ್ಷ್ಣೈರ್ಮತ್ತಂ ದ್ವಿಪಮಿವಾಂಕುಶೈಃ||

ಪದಾತಿ-ಅಶ್ವಗಳೊಂದಿಗೆ ತನ್ನ ಮೇಲೆ ಎರಗುತ್ತಿದ್ದ ಶಲ್ಯನನ್ನು ಕ್ರುದ್ಧ ರಾಜಾ ಯುಧಿಷ್ಠಿರನು ತೀಕ್ಷ್ಣ ಶರಗಳಿಂದ ಮುಸುಕಿ ಮದಿಸಿದ ಆನೆಯನ್ನು ಅಂಕುಶಗಳಿಂದ ಹೇಗೋ ಹಾಗೆ ನಿಯಂತ್ರಿಸಿದನು.

09010028a ತಸ್ಯ ಶಲ್ಯಃ ಶರಂ ಘೋರಂ ಮುಮೋಚಾಶೀವಿಷೋಪಮಂ|

09010028c ಸೋಽಭ್ಯವಿಧ್ಯನ್ಮಹಾತ್ಮಾನಂ ವೇಗೇನಾಭ್ಯಪತಚ್ಚ ಗಾಂ||

ಅವನ ಮೇಲೆ ಶಲ್ಯನು ಘೋರ ಸರ್ಪವಿಷದಂತಿರುವ ಶರವನ್ನು ಪ್ರಯೋಗಿಸಿದನು. ಅದು ಮಹಾತ್ಮ ಯುಧಿಷ್ಠಿರನನ್ನು ಭೇಧಿಸಿ ವೇಗದಿಂದ ಭೂಮಿಯನ್ನು ಹೊಕ್ಕಿತು.

09010029a ತತೋ ವೃಕೋದರಃ ಕ್ರುದ್ಧಃ ಶಲ್ಯಂ ವಿವ್ಯಾಧ ಸಪ್ತಭಿಃ|

09010029c ಪಂಚಭಿಃ ಸಹದೇವಸ್ತು ನಕುಲೋ ದಶಭಿಃ ಶರೈಃ||

ಆಗ ಶಲ್ಯನನ್ನು ಕ್ರುದ್ಧ ವೃಕೋದರನು ಏಳು ಬಾಣಗಳಿಂದ, ಸಹದೇವನು ಐದರಿಂದ ಮತ್ತು ನಕುಲನು ಹತ್ತು ಶರಗಳಿಂದ ಹೊಡೆದರು.

09010030a ದ್ರೌಪದೇಯಾಶ್ಚ ಶತ್ರುಘ್ನಂ ಶೂರಮಾರ್ತಾಯನಿಂ ಶರೈಃ|

09010030c ಅಭ್ಯವರ್ಷನ್ಮಹಾಭಾಗಂ ಮೇಘಾ ಇವ ಮಹೀಧರಂ||

ದ್ರೌಪದೇಯರು ಕೂಡ ಮೇಘಗಳು ಭೂಮಿಯ ಮೇಲೆ ಹೇಗೋ ಹಾಗೆ ಶತ್ರುಘ್ನ-ಶೂರ-ಆರ್ತಾಯನಿ-ಮಹಾಭಾಗ ಶಲ್ಯನ ಮೇಲೆ ಶರಗಳನ್ನು ಸುರಿಸಿದರು.

09010031a ತತೋ ದೃಷ್ಟ್ವಾ ತುದ್ಯಮಾನಂ ಶಲ್ಯಂ ಪಾರ್ಥೈಃ ಸಮಂತತಃ|

09010031c ಕೃತವರ್ಮಾ ಕೃಪಶ್ಚೈವ ಸಂಕ್ರುದ್ಧಾವಭ್ಯಧಾವತಾಂ||

ಎಲ್ಲಕಡೆಗಳಲ್ಲಿ ಪಾರ್ಥರಿಂದ ಆಕ್ರಮಣಿಸಲ್ಪಟ್ಟ ಶಲ್ಯನನ್ನು ನೋಡಿ ಸಂಕ್ರುದ್ಧ ಕೃತವರ್ಮ-ಕೃಪರು ಅಲ್ಲಿಗೆ ಧಾವಿಸಿದರು.

09010032a ಉಲೂಕಶ್ಚ ಪತತ್ರೀ ಚ ಶಕುನಿಶ್ಚಾಪಿ ಸೌಬಲಃ|

09010032c ಸ್ಮಯಮಾನಶ್ಚ ಶನಕೈರಶ್ವತ್ಥಾಮಾ ಮಹಾರಥಃ||

09010032e ತವ ಪುತ್ರಾಶ್ಚ ಕಾರ್ತ್ಸ್ನ್ಯೆನ ಜುಗುಪುಃ ಶಲ್ಯಮಾಹವೇ||

ಉಲೂಕ, ಪತತ್ರೀ, ಸೌಬಲ ಶಕುನಿ, ಮೆಲ್ಲನೆ ನಗುತ್ತಿದ್ದ ಮಹಾರಥ ಅಶ್ವತ್ಥಾಮ, ನಿನ್ನ ಪುತ್ರರು ಎಲ್ಲರೂ ಯುದ್ಧದಲ್ಲಿ ಶಲ್ಯನ ಸಹಾಯಕ್ಕಾಗಿ ಹೋದರು.

09010033a ಭೀಮಸೇನಂ ತ್ರಿಭಿರ್ವಿದ್ಧ್ವಾ ಕೃತವರ್ಮಾ ಶಿಲೀಮುಖೈಃ|

09010033c ಬಾಣವರ್ಷೇಣ ಮಹತಾ ಕ್ರುದ್ಧರೂಪಮವಾರಯತ್||

ಕೃತವರ್ಮನು ಮೂರು ಶಿಲೀಮುಖಗಳಿಂದ ಭೀಮಸೇನನನ್ನು ಹೊಡೆದು ಮಹಾ ಬಾಣವರ್ಷದಿಂದ ಆ ಕ್ರುದ್ಧರೂಪನನ್ನು ತಡೆದನು.

09010034a ಧೃಷ್ಟದ್ಯುಮ್ನಂ ಕೃಪಃ ಕ್ರುದ್ಧೋ ಬಾಣವರ್ಷೈರಪೀಡಯತ್|

09010034c ದ್ರೌಪದೇಯಾಂಶ್ಚ ಶಕುನಿರ್ಯಮೌ ಚ ದ್ರೌಣಿರಭ್ಯಯಾತ್||

ಕೃಪನು ಕ್ರುದ್ಧ ಧೃಷ್ಟದ್ಯುಮ್ನನನ್ನು ಬಾಣವರ್ಷಗಳಿಂದ ಪೀಡಿಸಿದನು. ದ್ರೌಪದೇಯರನ್ನು ಶಕುನಿಯೂ, ದ್ರೌಣಿಯು ಯಮಳರನ್ನೂ ಆಕ್ರಮಣಿಸಿದರು.

09010035a ದುರ್ಯೋಧನೋ ಯುಧಾಂ ಶ್ರೇಷ್ಠಾವಾಹವೇ ಕೇಶವಾರ್ಜುನೌ|

09010035c ಸಮಭ್ಯಯಾದುಗ್ರತೇಜಾಃ ಶರೈಶ್ಚಾಭ್ಯಹನದ್ಬಲೀ||

ಯೋಧರಲ್ಲಿ ಶ್ರೇಷ್ಠ ಉಗ್ರತೇಜಸ್ವಿ ಬಲಶಾಲೀ ದುರ್ಯೋಧನನು ಯುದ್ಧದಲ್ಲಿ ಕೇಶವಾರ್ಜುನರನ್ನು ಎದುರಿಸಿ ಬಾಣಗಳಿಂದ ಅವರನ್ನು ಪ್ರಹರಿಸಿದನು.

09010036a ಏವಂ ದ್ವಂದ್ವಶತಾನ್ಯಾಸಂಸ್ತ್ವದೀಯಾನಾಂ ಪರೈಃ ಸಹ|

09010036c ಘೋರರೂಪಾಣಿ ಚಿತ್ರಾಣಿ ತತ್ರ ತತ್ರ ವಿಶಾಂ ಪತೇ||

ವಿಶಾಂಪತೇ! ಹೀಗೆ ನಿನ್ನ ಮತ್ತು ಶತ್ರುಗಳ ನಡುವೆ ನೂರಾರು ಘೋರರೂಪೀ-ವಿಚಿತ್ರ ದ್ವಂದ್ವಯುದ್ಧಗಳು ಅಲ್ಲಲ್ಲಿ ನಡೆಯುತ್ತಿದ್ದವು.

09010037a ಋಶ್ಯವರ್ಣಾನ್ಜಘಾನಾಶ್ವಾನ್ಭೋಜೋ ಭೀಮಸ್ಯ ಸಂಯುಗೇ|

09010037c ಸೋಽವತೀರ್ಯ ರಥೋಪಸ್ಥಾದ್ಧತಾಶ್ವಃ ಪಾಂಡುನಂದನಃ||

09010037e ಕಾಲೋ ದಂಡಮಿವೋದ್ಯಮ್ಯ ಗದಾಪಾಣಿರಯುಧ್ಯತ||

ಯುದ್ಧದಲ್ಲಿ ಭೋಜನು ಭೀಮನ ಕರಡಿಬಣ್ಣದ ಕುದುರೆಗಳನ್ನು ಸಂಹರಿಸಿದನು. ಹತಾಶ್ವ ಪಾಂಡುನಂದನನು ರಥದಿಂದ ಕೆಳಗಿಳಿದು ಕಾಲದಂಡದಂತಿರುವ ಗದೆಯನ್ನು ಎತ್ತಿಹಿಡಿದು ಯುದ್ಧಮಾಡಿದನು.

09010038a ಪ್ರಮುಖೇ ಸಹದೇವಸ್ಯ ಜಘಾನಾಶ್ವಾಂಶ್ಚ ಮದ್ರರಾಟ್|

09010038c ತತಃ ಶಲ್ಯಸ್ಯ ತನಯಂ ಸಹದೇವೋಽಸಿನಾವಧೀತ್||

ಎದುರಾಳಿಯಾಗಿದ್ದ ಸಹದೇವನ ಕುದುರೆಗಳನ್ನು ಮದ್ರರಾಜನು ಸಂಹರಿಸಿದನು. ಆಗ ಸಹದೇವನು ಖಡ್ಗದಿಂದ ಶಲ್ಯನ ಮಗನನ್ನು ವಧಿಸಿದನು.

09010039a ಗೌತಮಃ ಪುನರಾಚಾರ್ಯೋ ಧೃಷ್ಟದ್ಯುಮ್ನಮಯೋಧಯತ್|

09010039c ಅಸಂಭ್ರಾಂತಮಸಂಭ್ರಾಂತೋ ಯತ್ನವಾನ್ಯತ್ನವತ್ತರಂ||

ಆಚಾರ್ಯ ಗೌತಮನು ಅಸಂಭ್ರಾಂತನಾಗಿ, ಪ್ರಯತ್ನಪಟ್ಟು ಅಸಂಭ್ರಾಂತನಾಗಿದ್ದ, ಪ್ರಯತ್ನಪಡುತ್ತಿದ್ದ ಧೃಷ್ಟದ್ಯುಮ್ನನೊಡನೆ ಹೋರಾಡಿದನು.

09010040a ದ್ರೌಪದೇಯಾಂಸ್ತಥಾ ವೀರಾನೇಕೈಕಂ ದಶಭಿಃ ಶರೈಃ|

09010040c ಅವಿಧ್ಯದಾಚಾರ್ಯಸುತೋ ನಾತಿಕ್ರುದ್ಧಃ ಸ್ಮಯನ್ನಿವ||

ಆಚಾರ್ಯಸುತ ಅಶ್ವತ್ಥಾಮನು ಹೆಚ್ಚು ಕೋಪಗೊಳ್ಳದೇ ನಗುತ್ತಿರುವನೋ ಎನ್ನುವಂತೆ ಹತ್ತತ್ತು ಶರಗಳಿಂದ ಒಬ್ಬೊಬ್ಬ ದ್ರೌಪದೇಯ ವೀರನನ್ನೂ ಪ್ರಹರಿಸಿದನು.

09010041a ಶಲ್ಯೋಽಪಿ ರಾಜನ್ಸಂಕ್ರುದ್ಧೋ ನಿಘ್ನನ್ಸೋಮಕಪಾಂಡವಾನ್|

09010041c ಪುನರೇವ ಶಿತೈರ್ಬಾಣೈರ್ಯುಧಿಷ್ಠಿರಮಪೀಡಯತ್||

ರಾಜನ್! ಶಲ್ಯನೂ ಕೂಡ ಸಂಕ್ರುದ್ಧನಾಗಿ ಸೋಮಕ-ಪಾಂಡವರನ್ನು ವಧಿಸುತ್ತ ಪುನಃ ನಿಶಿತ ಬಾಣಗಳಿಂದ ಯುಧಿಷ್ಠಿರನನ್ನು ಪೀಡಿಸಿದನು.

09010042a ತಸ್ಯ ಭೀಮೋ ರಣೇ ಕ್ರುದ್ಧಃ ಸಂದಷ್ಟದಶನಚ್ಚದಃ|

09010042c ವಿನಾಶಾಯಾಭಿಸಂಧಾಯ ಗದಾಮಾದತ್ತ ವೀರ್ಯವಾನ್||

09010043a ಯಮದಂಡಪ್ರತೀಕಾಶಾಂ ಕಾಲರಾತ್ರಿಮಿವೋದ್ಯತಾಂ|

09010043c ಗಜವಾಜಿಮನುಷ್ಯಾಣಾಂ ಪ್ರಾಣಾಂತಕರಣೀಮಪಿ||

ಅದರಿಂದ ವೀರ್ಯವಾನ್ ಭೀಮನು ಕ್ರುದ್ಧನಾಗಿ ತುಟಿಯನ್ನು ಕಚ್ಚುತ್ತಾ ರಣದಲ್ಲಿ ಶಲ್ಯನನ್ನು ವಿನಾಶಗೊಳಿಸಲು ಯಮದಂಡ ಸದೃಶ, ಮೇಲೆದ್ದುಬಂದ ಕಾಳರಾತ್ರಿಯಂತೆ ಕಾಣುತ್ತಿದ್ದ, ಆನೆ-ಕುದುರೆ-ಪದಾತಿ ಶರೀರಗಳನ್ನು ವಿನಾಶಗೊಳಿಸಬಹುದಾದ ಮಹಾ ಗದೆಯನ್ನು ಎತ್ತಿ ಹಿಡಿದನು.

09010044a ಹೇಮಪಟ್ಟಪರಿಕ್ಷಿಪ್ತಾಮುಲ್ಕಾಂ ಪ್ರಜ್ವಲಿತಾಮಿವ|

09010044c ಶೈಕ್ಯಾಂ ವ್ಯಾಲೀಮಿವಾತ್ಯುಗ್ರಾಂ ವಜ್ರಕಲ್ಪಾಮಯಸ್ಮಯೀಂ||

09010045a ಚಂದನಾಗುರುಪಂಕಾಕ್ತಾಂ ಪ್ರಮದಾಮೀಪ್ಸಿತಾಮಿವ|

09010045c ವಸಾಮೇದೋಸೃಗಾದಿಗ್ಧಾಂ ಜಿಹ್ವಾಂ ವೈವಸ್ವತೀಮಿವ||

09010046a ಪಟುಘಂಟಾರವಶತಾಂ ವಾಸವೀಮಶನೀಮಿವ|

09010046c ನಿರ್ಮುಕ್ತಾಶೀವಿಷಾಕಾರಾಂ ಪೃಕ್ತಾಂ ಗಜಮದೈರಪಿ||

09010047a ತ್ರಾಸನೀಂ ರಿಪುಸೈನ್ಯಾನಾಂ ಸ್ವಸೈನ್ಯಪರಿಹರ್ಷಿಣೀಂ|

09010047c ಮನುಷ್ಯಲೋಕೇ ವಿಖ್ಯಾತಾಂ ಗಿರಿಶೃಂಗವಿದಾರಿಣೀಂ||

ಸುವರ್ಣಪಟ್ಟಿಯನ್ನು ಸುತ್ತಿದ್ದ, ಉಲ್ಕೆಯಂತೆ ಪ್ರಜ್ವಲಿಸುತ್ತಿದ್ದ, ವಜ್ರದಂತಹ ಕಠಿನ ಲೋಹಮಯವಾಗಿದ್ದ, ಉಯ್ಯಾಲೆಯ ಮೇಲಿರುವ ಭಯಂಕರ ವಿಷಸರ್ಪಿಣಿಯಂತಿದ್ದ, ಚಂದನ-ಅಗರುಗಳಿಂದ ಲೇಪಿತಗೊಂಡು ಅಭೀಷ್ಟಳಾದ ಪ್ರಿಯತಮೆಯಂತಿದ್ದ ಆ ಗದೆಯು ಪ್ರಾಣಿಗಳ ವಸೆ-ಮೇಧಸ್ಸುಗಳಿಂದ ಲೇಪಿಸಲ್ಪಟ್ಟು ಯಮರಾಜನ ನಾಲಿಗೆಯಂತೆ ಭಯಂಕರವಾಗಿತ್ತು. ಆ ಗದೆಯಲ್ಲಿದ್ದ ನೂರಾರು ಕಿರುಗಂಟೆಗಳು ಯಾವಾಗಲೂ ಧ್ವನಿಗೈಯುತ್ತಿದ್ದವು. ವಾಸವನ ವಜ್ರದಂತಿದ್ದ ಆ ಗದೆಯು ಪೊರೆಕಳಚಿದ ವಿಷಸರ್ಪದಂತಿತ್ತು ಮತ್ತು ಆನೆಗಳ ಮದೋದಕಗಳಿಂದ ತೋಯ್ದುಹೋಗಿತ್ತು. ಶತ್ರುಸೇನೆಗಳಿಗೆ ಭಯದಾಯಕವೂ ಸ್ವಸೈನ್ಯಗಳಿಗೆ ಹರ್ಷದಾಯಕವೂ ಆಗಿದ್ದ ಅದು ಮನುಷ್ಯಲೋಕದಲ್ಲಿ ಗಿರಿಶೃಂಗಗಳನ್ನೂ ಸೀಳಬಲ್ಲದು ಎಂದು ವಿಖ್ಯಾತವಾಗಿತ್ತು.

09010048a ಯಯಾ ಕೈಲಾಸಭವನೇ ಮಹೇಶ್ವರಸಖಂ ಬಲೀ|

09010048c ಆಹ್ವಯಾಮಾಸ ಕೌಂತೇಯಃ ಸಂಕ್ರುದ್ಧಮಲಕಾಧಿಪಂ||

ಆ ಗದೆಯ ಆಶ್ರಯದಿಂದಲೇ ಸಂಕ್ರುದ್ದ ಕೌಂತೇಯನು ಕೈಲಾಸಭವನದಲ್ಲಿ ಮಹೇಶ್ವರಸಖ-ಬಲಶಾಲಿ-ಅಲಕಾಧಿಪ ಕುಬೇರನನ್ನು ಯುದ್ಧಕ್ಕೆ ಆಹ್ವಾನಿಸಿದ್ದನು.

09010049a ಯಯಾ ಮಾಯಾವಿನೋ ದೃಪ್ತಾನ್ಸುಬಹೂನ್ಧನದಾಲಯೇ|

09010049c ಜಘಾನ ಗುಹ್ಯಕಾನ್ಕೃದ್ಧೋ ಮಂದಾರಾರ್ಥೇ ಮಹಾಬಲಃ||

09010049e ನಿವಾರ್ಯಮಾಣೋ ಬಹುಭಿರ್ದ್ರೌಪದ್ಯಾಃ ಪ್ರಿಯಮಾಸ್ಥಿತಃ||

ದ್ರೌಪದಿಗೆ ಪ್ರಿಯವನ್ನುಂಟುಮಾಡಲು ಮಂದಾರ ಪುಷ್ಪಕ್ಕಾಗಿ ಮಹಾಬಲ ಕ್ರುದ್ಧ ಭೀಮನು ಅನೇಕರು ತಡೆದಿದ್ದರೂ ಗಣನೆಗೆ ತೆಗೆದುಕೊಳ್ಳದೇ ಆ ಗದೆಯನ್ನೇ ಅವಲಂಬಿಸಿ ಕುಬೇರನ ಪಟ್ಟಣದಲ್ಲಿ ಮಾಯಾವೀ ದೃಪ್ತ ಗುಹ್ಯಕರನ್ನು ಸಂಹರಿಸಿದ್ದನು.

09010050a ತಾಂ ವಜ್ರಮಣಿರತ್ನೌಘಾಮಷ್ಟಾಶ್ರಿಂ ವಜ್ರಗೌರವಾಂ|

09010050c ಸಮುದ್ಯಮ್ಯ ಮಹಾಬಾಹುಃ ಶಲ್ಯಮಭ್ಯದ್ರವದ್ರಣೇ||

ಮಹಾಬಾಹು ಭೀಮನು ವಜ್ರ-ಮಣಿ-ರತ್ನ ಚಿತ್ರಿತ, ವಜ್ರದಂತೆ ಭಾರವಾಗಿದ್ದ ಆ ಗದೆಯನ್ನೆತ್ತಿಕೊಂಡು ರಣದಲ್ಲಿ ಶಲ್ಯನನ್ನು ಆಕ್ರಮಣಿಸಿದನು.

09010051a ಗದಯಾ ಯುದ್ಧಕುಶಲಸ್ತಯಾ ದಾರುಣನಾದಯಾ|

09010051c ಪೋಥಯಾಮಾಸ ಶಲ್ಯಸ್ಯ ಚತುರೋಽಶ್ವಾನ್ಮಹಾಜವಾನ್||

ದಾರುಣ ಶಬ್ಧಮಾಡುತ್ತಿದ್ದ ಆ ಗದೆಯಿಂದ ಯುದ್ಧಕುಶಲ ಭೀಮಸೇನನು ಶಲ್ಯನ ನಾಲ್ಕೂ ಮಹಾವೇಗಯುಕ್ತ ಕುದುರೆಗಳನ್ನು ಅಪ್ಪಳಿಸಿ ಧ್ವಂಸಮಾಡಿದನು.

09010052a ತತಃ ಶಲ್ಯೋ ರಣೇ ಕ್ರುದ್ಧಃ ಪೀನೇ ವಕ್ಷಸಿ ತೋಮರಂ|

09010052c ನಿಚಖಾನ ನದನ್ವೀರೋ ವರ್ಮ ಭಿತ್ತ್ವಾ ಚ ಸೋಽಭ್ಯಗಾತ್||

ಆಗ ರಣದಲ್ಲಿ ಕ್ರುದ್ಧನಾದ ವೀರ ಶಲ್ಯನು ಗರ್ಜಿಸುತ್ತಾ ಭೀಮಸೇನನ ವಿಶಾಲ ವಕ್ಷಃಸ್ಥಳಕ್ಕೆ ತೋಮರವನ್ನು ಎಸೆಯಲು ಅದು ಅವನ ಕವಚವನ್ನು ಭೇದಿಸಿ ನೆಟ್ಟಿಕೊಂಡಿತು.

09010053a ವೃಕೋದರಸ್ತ್ವಸಂಭ್ರಾತಸ್ತಮೇವೋದ್ಧೃತ್ಯ ತೋಮರಂ|

09010053c ಯಂತಾರಂ ಮದ್ರರಾಜಸ್ಯ ನಿರ್ಬಿಭೇದ ತತೋ ಹೃದಿ||

ಅಸಂಭ್ರಾಂತ ವೃಕೋದರನು ಆ ತೋಮರವನ್ನು ಕಿತ್ತೆತ್ತಿ ಅದರಿಂದಲೇ ಮದ್ರರಾಜನ ಸಾರಥಿಯ ಹೃದಯವನ್ನು ಭೇದಿಸಿದನು.

09010054a ಸ ಭಿನ್ನವರ್ಮಾ ರುಧಿರಂ ವಮನ್ವಿತ್ರಸ್ತಮಾನಸಃ|

09010054c ಪಪಾತಾಭಿಮುಖೋ ದೀನೋ ಮದ್ರರಾಜಸ್ತ್ವಪಾಕ್ರಮತ್||

ಭಿನ್ನ ಕವಚನಾದ ಅವನು ರಕ್ತವನ್ನು ಕಾರುತ್ತಾ ಭಯಗೊಂಡು ನಡುಗುತ್ತಾ ದೀನನಾಗಿ ಶಲ್ಯನಿಗೆ ಅಭಿಮುಖನಾಗಿ ಬಳಿಯಲ್ಲಿಯೇ ಬಿದ್ದನು.

09010055a ಕೃತಪ್ರತಿಕೃತಂ ದೃಷ್ಟ್ವಾ ಶಲ್ಯೋ ವಿಸ್ಮಿತಮಾನಸಃ|

09010055c ಗದಾಮಾಶ್ರಿತ್ಯ ಧೀರಾತ್ಮಾ ಪ್ರತ್ಯಮಿತ್ರಮವೈಕ್ಷತ||

ಪ್ರತೀಕಾರಮಾಡಿದುದನ್ನು ನೋಡಿ ವಿಸ್ಮಿತಮಾನಸನಾದ ಧೀರಾತ್ಮಾ ಶಲ್ಯನು ಗದೆಯನ್ನು ಹಿಡಿದು ಶತ್ರುವನ್ನು ದುರುಗುಟ್ಟಿ ನೋಡಿದನು.

09010056a ತತಃ ಸುಮನಸಃ ಪಾರ್ಥಾ ಭೀಮಸೇನಮಪೂಜಯನ್|

09010056c ತದ್ದೃಷ್ಟ್ವಾ ಕರ್ಮ ಸಂಗ್ರಾಮೇ ಘೋರಮಕ್ಲಿಷ್ಟಕರ್ಮಣಃ||

ಸಂಗ್ರಾಮದಲ್ಲಿ ಅನಾಯಾಸವಾಗಿ ಘೋರಕರ್ಮಗಳನ್ನೆಸಗುವ ಭೀಮಸೇನನ ಆ ಕೃತ್ಯವನ್ನು ನೋಡಿ ಸುಮನಸ್ಕ ಪಾರ್ಥರು ಭೀಮಸೇನನನ್ನು ಗೌರವಿಸಿದರು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಭೀಮಸೇನಶಲ್ಯಯುದ್ಧೇ ದಶಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಭೀಮಸೇನಶಲ್ಯಯುದ್ಧ ಎನ್ನುವ ಹತ್ತನೇ ಅಧ್ಯಾಯವು.

Comments are closed.