Sauptika Parva: Chapter 12

ಸೌಪ್ತಿಕಪರ್ವ: ಐಷೀಕ ಪರ್ವ

೧೨

ಅಶ್ವತ್ಥಾಮನ ಮೇಲೆ ಪ್ರತೀಕಾರವನ್ನೆಸಗಲು ಭೀಮಸೇನನು ಹೊರಟುಹೋಗಲು ಕೃಷ್ಣನು ಯುಧಿಷ್ಠಿರನಿಗೆ ಹಿಂದೆ ಅಶ್ವತ್ಥಾಮನು ಬ್ರಹ್ಮಶಿರ ಅಸ್ತ್ರದ ಬದಲಿಗಾಗಿ ಸುದರ್ಶನ ಚಕ್ರವನ್ನು ಕೇಳಿದ್ದನು ಎಂಬ ಕಥೆಯನ್ನು ಹೇಳಿ ಅಶ್ವತ್ಥಾಮನಿಂದ ಭೀಮಸೇನನನ್ನು ಉಳಿಸಬೇಕು ಎಂದು ಸೂಚಿಸಿದುದು (೧-೪೦).

10012001 ವೈಶಂಪಾಯನ ಉವಾಚ|

10012001a ತಸ್ಮಿನ್ಪ್ರಯಾತೇ ದುರ್ಧರ್ಷೇ ಯದೂನಾಮೃಷಭಸ್ತತಃ|

10012001c ಅಬ್ರವೀತ್ಪುಂಡರೀಕಾಕ್ಷಃ ಕುಂತೀಪುತ್ರಂ ಯುಧಿಷ್ಠಿರಂ||

ವೈಶಂಪಾಯನನು ಹೇಳಿದನು: “ಆ ದುರ್ಧರ್ಷನು ಹೊರಟುಹೋಗಲು ಯದುಗಳ ಋಷಭ ಪುಂಡರೀಕಾಕ್ಷನು ಕುಂತೀಪುತ್ರ ಯುಧಿಷ್ಠಿರನಿಗೆ ಹೇಳಿದನು:

10012002a ಏಷ ಪಾಂಡವ ತೇ ಭ್ರಾತಾ ಪುತ್ರಶೋಕಮಪಾರಯನ್|

10012002c ಜಿಘಾಂಸುರ್ದ್ರೌಣಿಮಾಕ್ರಂದೇ ಯಾತಿ ಭಾರತ ಭಾರತಃ||

“ಭಾರತ! ನಿನ್ನ ಈ ಭ್ರಾತಾ ಪಾಂಡವ ಭಾರತನು ಪುತ್ರಶೋಕದ ಭಾರವನ್ನು ಹೊತ್ತು ಯುದ್ಧದಲ್ಲಿ ದ್ರೌಣಿಯನ್ನು ಸಂಹರಿಸಲು ಬಯಸಿ ಹೋಗುತ್ತಿದ್ದಾನೆ!

10012003a ಭೀಮಃ ಪ್ರಿಯಸ್ತೇ ಸರ್ವೇಭ್ಯೋ ಭ್ರಾತೃಭ್ಯೋ ಭರತರ್ಷಭ|

10012003c ತಂ ಕೃಚ್ಚ್ರಗತಮದ್ಯ ತ್ವಂ ಕಸ್ಮಾನ್ನಾಭ್ಯವಪದ್ಯಸೇ||

ಭರತರ್ಷಭ! ನಿನ್ನ ಎಲ್ಲ ಸಹೋದರರಲ್ಲಿ ಭೀಮನು ನಿನಗೆ ಅತ್ಯಂತ ಪ್ರಿಯನಾದವನು. ಇಂದು ಅವನು ಕಷ್ಟಕ್ಕೆ ಸಿಲುಕಲಿದ್ದಾನೆ. ಅವನ ಸಹಾಯಕ್ಕೆ ನೀನು ಏಕೆ ಏನನ್ನೂ ಮಾಡುತ್ತಿಲ್ಲ?

10012004a ಯತ್ತದಾಚಷ್ಟ ಪುತ್ರಾಯ ದ್ರೋಣಃ ಪರಪುರಂಜಯಃ|

10012004c ಅಸ್ತ್ರಂ ಬ್ರಹ್ಮಶಿರೋ ನಾಮ ದಹೇದ್ಯತ್ಪೃಥಿವೀಮಪಿ||

ಪರಪುರಂಜಯ ದ್ರೋಣನು ತನ್ನ ಮಗನಿಗೆ ನೀಡಿದ್ದ ಬ್ರಹ್ಮಶಿರ ಎಂಬ ಹೆಸರಿನ ಅಸ್ತ್ರವು ಇಡೀ ಭೂಮಿಯನ್ನೇ ದಹಿಸಿಬಿಡಬಲ್ಲದು.

10012005a ತನ್ಮಹಾತ್ಮಾ ಮಹಾಭಾಗಃ ಕೇತುಃ ಸರ್ವಧನುಷ್ಮತಾಂ|

10012005c ಪ್ರತ್ಯಪಾದಯದಾಚಾರ್ಯಃ ಪ್ರೀಯಮಾಣೋ ಧನಂಜಯಂ||

ಸರ್ವಧನುಷ್ಮತರಲ್ಲಿ ಕೇತುಪ್ರಾಯನಾದ ಆ ಮಹಾಭಾಗ ಆಚಾರ್ಯನು ಪ್ರೀತಿಯಿಂದ ಧನಂಜಯನಿಗೆ ಆ ಅಸ್ತ್ರವನ್ನು ಪ್ರತಿಪಾಲಿಸಿದ್ದನು.

10012006a ತತ್ಪುತ್ರೋಽಸ್ಯೈವಮೇವೈನಮನ್ವಯಾಚದಮರ್ಷಣಃ|

10012006c ತತಃ ಪ್ರೋವಾಚ ಪುತ್ರಾಯ ನಾತಿಹೃಷ್ಟಮನಾ ಇವ||

ಅದನ್ನು ಸಹಿಸಿಕೊಳ್ಳಲಾರದ ಅವನ ಪುತ್ರನು ಆ ಅಸ್ತ್ರವನ್ನು ಕೇಳಿಕೊಳ್ಳಲು ದ್ರೋಣನು ಅಸಂತೋಷನಾಗಿಯೇ ಅದನ್ನು ತನ್ನ ಮಗನಿಗೆ ಉಪದೇಶಿಸಿದ್ದನು.

10012007a ವಿದಿತಂ ಚಾಪಲಂ ಹ್ಯಾಸೀದಾತ್ಮಜಸ್ಯ ಮಹಾತ್ಮನಃ|

10012007c ಸರ್ವಧರ್ಮವಿದಾಚಾರ್ಯೋ ನಾನ್ವಿಷತ್ಸತತಂ ಸುತಂ||

ತನ್ನ ಮಗನು ಚಪಲನೆಂದು ತಿಳಿದಿದ್ದ ಆ ಮಹಾತ್ಮ ಸರ್ವಧರ್ಮವಿದು ಆಚಾರ್ಯನು ಮಗನಿಗೆ ಸತತವೂ ಈ ಅನುಶಾಸನವಿತ್ತಿದ್ದನು:

10012008a ಪರಮಾಪದ್ಗತೇನಾಪಿ ನ ಸ್ಮ ತಾತ ತ್ವಯಾ ರಣೇ|

10012008c ಇದಮಸ್ತ್ರಂ ಪ್ರಯೋಕ್ತವ್ಯಂ ಮಾನುಷೇಷು ವಿಶೇಷತಃ||

“ಮಗೂ! ರಣದಲ್ಲಿ ಪರಮ ಆಪತ್ತಿನಲ್ಲಿ ಸಿಲುಕಿಕೊಂಡಿದ್ದಾಗಲೂ ನೀನು ಈ ಅಸ್ತ್ರವನ್ನು ಉಪಯೋಗಿಸಕೂಡದು. ಅದರಲ್ಲೂ ವಿಶೇಷವಾಗಿ ಮನುಷ್ಯರ ಮೇಲೆ ಪ್ರಯೋಗಿಸಬಾರದು!”

10012009a ಇತ್ಯುಕ್ತವಾನ್ಗುರುಃ ಪುತ್ರಂ ದ್ರೋಣಃ ಪಶ್ಚಾದಥೋಕ್ತವಾನ್|

10012009c ನ ತ್ವಂ ಜಾತು ಸತಾಂ ಮಾರ್ಗೇ ಸ್ಥಾತೇತಿ ಪುರುಷರ್ಷಭ||

ಪುರುಷರ್ಷಭ! ಇದನ್ನು ಹೇಳಿದ ಗುರುದ್ರೋಣನು ನಂತರ ಮಗನಿಗೆ “ನೀನು ಯಾವಾಗಲೂ ಸತ್ಪುರುಷರ ಮಾರ್ಗದಲ್ಲಿ ನಡೆಯುವವನಲ್ಲ ಎಂದು ನನಗೆ ತಿಳಿದಿದೆ!” ಎಂದೂ ಹೇಳಿದ್ದನು.

10012010a ಸ ತದಾಜ್ಞಾಯ ದುಷ್ಟಾತ್ಮಾ ಪಿತುರ್ವಚನಮಪ್ರಿಯಂ|

10012010c ನಿರಾಶಃ ಸರ್ವಕಲ್ಯಾಣೈಃ ಶೋಚನ್ಪರ್ಯಪತನ್ಮಹೀಂ||

ತಂದೆಯ ಆ ಅಪ್ರಿಯ ಮಾತನ್ನು ಸ್ವೀಕರಿಸಿ ದುಷ್ಟಾತ್ಮ ಅಶ್ವತ್ಥಾಮನು ಸರ್ವಕಲ್ಯಾಣಗಳಿಂದ ನಿರಾಶನಾಗಿ ಶೋಕಿಸುತ್ತಾ ಭೂಮಿಯಲ್ಲಿ ಅಲೆಯತೊಡಗಿದನು.

10012011a ತತಸ್ತದಾ ಕುರುಶ್ರೇಷ್ಠ ವನಸ್ಥೇ ತ್ವಯಿ ಭಾರತ|

10012011c ಅವಸದ್ದ್ವಾರಕಾಮೇತ್ಯ ವೃಷ್ಣಿಭಿಃ ಪರಮಾರ್ಚಿತಃ||

ಕುರುಶ್ರೇಷ್ಠ! ಭಾರತ! ನೀವು ವನದಲ್ಲಿದ್ದಾಗ ಅವನು ದ್ವಾರಕೆಗೂ ಬಂದಿದ್ದ ಮತ್ತು ವೃಷ್ಣಿಗಳು ಅವನನ್ನು ಪರಮ ಗೌರವದಿಂದ ಸತ್ಕರಿಸಿದ್ದರು.

10012012a ಸ ಕದಾ ಚಿತ್ಸಮುದ್ರಾಂತೇ ವಸನ್ದ್ವಾರವತೀಮನು|

10012012c ಏಕ ಏಕಂ ಸಮಾಗಮ್ಯ ಮಾಮುವಾಚ ಹಸನ್ನಿವ||

ಒಮ್ಮೆ ಅವನು ದ್ವಾರವತಿಯ ಹತ್ತಿರ ಸಮುದ್ರತೀರದಲ್ಲಿ ವಾಸಿಸುತ್ತಿದ್ದಾಗ ಏಕಾಂಗಿಯಾಗಿದ್ದ ನನ್ನನ್ನು ಒಂಟಿಯಾಗಿ ಸಂಧಿಸಿ ನಗುತ್ತಾ ಇದನ್ನು ಹೇಳಿದ್ದನು:

10012013a ಯತ್ತದುಗ್ರಂ ತಪಃ ಕೃಷ್ಣ ಚರನ್ಸತ್ಯಪರಾಕ್ರಮಃ|

10012013c ಅಗಸ್ತ್ಯಾದ್ಭಾರತಾಚಾರ್ಯಃ ಪ್ರತ್ಯಪದ್ಯತ ಮೇ ಪಿತಾ||

10012014a ಅಸ್ತ್ರಂ ಬ್ರಹ್ಮಶಿರೋ ನಾಮ ದೇವಗಂಧರ್ವಪೂಜಿತಂ|

10012014c ತದದ್ಯ ಮಯಿ ದಾಶಾರ್ಹ ಯಥಾ ಪಿತರಿ ಮೇ ತಥಾ||

“ಕೃಷ್ಣ! ದಾಶಾರ್ಹ! ಸತ್ಯಪರಾಕ್ರಮಿ ಮತ್ತು ಭಾರತರ ಆಚಾರ್ಯ ನನ್ನ ತಂದೆಯು ಉಗ್ರತಪಸ್ಸನ್ನು ಆಚರಿಸಿ ಅಗಸ್ತ್ಯನಿಂದ ದೇವಗಂಧರ್ವ ಪೂಜಿತ ಬ್ರಹ್ಮಶಿರ ಎಂಬ ಹೆಸರಿನ ಅಸ್ತ್ರವನ್ನು ಪಡೆದುಕೊಂಡಿದ್ದನು. ತಂದೆಯಲ್ಲಿದ್ದ ಆ ಅಸ್ತ್ರವು ಇಂದು ನನ್ನಲ್ಲಿಯೂ ಇದೆ.

10012015a ಅಸ್ಮತ್ತಸ್ತದುಪಾದಾಯ ದಿವ್ಯಮಸ್ತ್ರಂ ಯದೂತ್ತಮ|

10012015c ಮಮಾಪ್ಯಸ್ತ್ರಂ ಪ್ರಯಚ್ಚ ತ್ವಂ ಚಕ್ರಂ ರಿಪುಹರಂ ರಣೇ||

ಯದೂತ್ತಮ! ನನ್ನಿಂದ ಈ ದಿವ್ಯಾಸ್ತ್ರವನ್ನು ಪಡೆದುಕೊಂಡು ನೀನು ನನಗೆ ರಣದಲ್ಲಿ ರಿಪುಹರಣಮಾಡಬಲ್ಲ ಚಕ್ರವನ್ನು ದಯಪಾಲಿಸು!”

10012016a ಸ ರಾಜನ್ಪ್ರೀಯಮಾಣೇನ ಮಯಾಪ್ಯುಕ್ತಃ ಕೃತಾಂಜಲಿಃ|

10012016c ಯಾಚಮಾನಃ ಪ್ರಯತ್ನೇನ ಮತ್ತೋಽಸ್ತ್ರಂ ಭರತರ್ಷಭ||

ರಾಜನ್! ಭರತರ್ಷಭ! ಹೀಗೆ ಕೈಮುಗಿದು ನನ್ನ ಅಸ್ತ್ರವನ್ನು ಕೇಳುತ್ತಿದ್ದ ಅವನಿಗೆ ಪ್ರಯತ್ನಪಟ್ಟು ಪ್ರೀತಿಯಿಂದಲೇ ನಾನು ಹೇಳಿದೆ:

10012017a ದೇವದಾನವಗಂಧರ್ವಮನುಷ್ಯಪತಗೋರಗಾಃ|

10012017c ನ ಸಮಾ ಮಮ ವೀರ್ಯಸ್ಯ ಶತಾಂಶೇನಾಪಿ ಪಿಂಡಿತಾಃ||

“ದೇವ-ದಾನವ-ಗಂಧರ್ವ-ಮನುಷ್ಯ-ಪಕ್ಷಿ-ಉರಗಗಳಲ್ಲಿ ನನ್ನ ವೀರ್ಯದ ನೂರನೆಯ ಒಂದು ಭಾಗದಷ್ಟು ಸಮನಾದವರು ಯಾರೂ ಇಲ್ಲ.

10012018a ಇದಂ ಧನುರಿಯಂ ಶಕ್ತಿರಿದಂ ಚಕ್ರಮಿಯಂ ಗದಾ|

10012018c ಯದ್ಯದಿಚ್ಚಸಿ ಚೇದಸ್ತ್ರಂ ಮತ್ತಸ್ತತ್ತದ್ದದಾನಿ ತೇ||

ಇದು ನನ್ನ ಧನುಸ್ಸು. ಇದು ಶಕ್ತಿ. ಇದು ಚಕ್ರ. ಇದು ಗದೆ. ನೀನು ನನ್ನಿಂದ ಯಾವ ಅಸ್ತ್ರವನ್ನು ಪಡೆಯಲಿಚ್ಛಿಸುವೆಯೋ ಆ ಅಸ್ತ್ರವನ್ನು ನಾನು ನಿನಗೆ ಕೊಡುತ್ತೇನೆ.

10012019a ಯಚ್ಚಕ್ನೋಷಿ ಸಮುದ್ಯಂತುಂ ಪ್ರಯೋಕ್ತುಮಪಿ ವಾ ರಣೇ|

10012019c ತದ್ಗೃಹಾಣ ವಿನಾಸ್ತ್ರೇಣ ಯನ್ಮೇ ದಾತುಮಭೀಪ್ಸಸಿ||

ಯಾವುದನ್ನು ಎತ್ತಿಕೊಳ್ಳಲು ಅಥವಾ ರಣದಲ್ಲಿ ಪ್ರಯೋಗಿಸಲು ನಿನಗೆ ಸಾಧ್ಯವಾಗುವುದೋ ಅದನ್ನು ನೀನು, ನನಗೆ ಕೊಡಬೇಕೆಂದು ಬಯಸಿರುವ ಆ ಅಸ್ತ್ರವನ್ನು ಕೊಡದೇ, ನನ್ನಿಂದ ಪಡೆದುಕೊಳ್ಳಬಹುದು.”

10012020a ಸ ಸುನಾಭಂ ಸಹಸ್ರಾರಂ ವಜ್ರನಾಭಮಯಸ್ಮಯಂ|

10012020c ವವ್ರೇ ಚಕ್ರಂ ಮಹಾಬಾಹೋ ಸ್ಪರ್ಧಮಾನೋ ಮಯಾ ಸಹ||

ಮಹಾಬಾಹೋ! ನನ್ನೊಡನೆ ಸ್ಪರ್ಧಿಸುತ್ತಿದ್ದ ಅವನು ಸುಂದರ ನಾಭಿಯಿಂದ ಕೂಡಿದ್ದ, ವಜ್ರಮಯ ನಾಭಿಯನ್ನು ಹೊಂದಿದ್ದ, ಸಹಸ್ರ ಅರೆಗಳುಳ್ಳ ಚಕ್ರವನ್ನು ಆರಿಸಿಕೊಂಡನು.

10012021a ಗೃಹಾಣ ಚಕ್ರಮಿತ್ಯುಕ್ತೋ ಮಯಾ ತು ತದನಂತರಂ|

10012021c ಜಗ್ರಾಹೋಪೇತ್ಯ ಸಹಸಾ ಚಕ್ರಂ ಸವ್ಯೇನ ಪಾಣಿನಾ|

10012021e ನ ಚೈತದಶಕತ್ ಸ್ಥಾನಾತ್ಸಂಚಾಲಯಿತುಮಚ್ಯುತ||

ಚಕ್ರವನ್ನು ಎತ್ತಿಕೋ ಎಂದು ನಾನು ಹೇಳಿದ ನಂತರ ಬೇಗನೇ ಹಾರಿಬಂದು ಅವನು ಎಡಗೈಯಿಂದ ಚಕ್ರವನ್ನು ಹಿಡಿದುಕೊಂಡನು. ಅಚ್ಯುತ! ಆದರೆ ಅವನಿಗೆ ಅದನ್ನು ಎತ್ತುವುದಿರಲಿ ಅದಿದ್ದ ಸ್ಥಳದಿಂದ ಅಲುಗಿಸಲು ಕೂಡ ಅವನಿಗೆ ಸಾಧ್ಯವಾಗಲಿಲ್ಲ!

10012022a ಅಥ ತದ್ದಕ್ಷಿಣೇನಾಪಿ ಗ್ರಹೀತುಮುಪಚಕ್ರಮೇ|

10012022c ಸರ್ವಯತ್ನೇನ ತೇನಾಪಿ ಗೃಹ್ಣನ್ನೇತದಕಲ್ಪಯತ್||

ಆಗ ಅವನು ಬಲಗೈಯನ್ನೂ ಮುಂದೆ ಚಾಚಿ ಎರಡೂ ಕೈಗಳಿಂದ ಚಕ್ರವನ್ನು ಮೇಲೆತ್ತಲು ಪ್ರಯತ್ನಿಸಿದನು. ಸರ್ವ ಪ್ರಯತ್ನದಿಂದಲೂ ಅವನಿಗೆ ಅದನ್ನು ಹಿಡಿದೆತ್ತಲು ಸಾಧ್ಯವಾಗಲಿಲ್ಲ.

10012023a ತತಃ ಸರ್ವಬಲೇನಾಪಿ ಯಚ್ಚೈತನ್ನ ಶಶಾಕ ಸಃ|

10012023c ಉದ್ಧರ್ತುಂ ವಾ ಚಾಲಯಿತುಂ ದ್ರೌಣಿಃ ಪರಮದುರ್ಮನಾಃ|

10012023e ಕೃತ್ವಾ ಯತ್ನಂ ಪರಂ ಶ್ರಾಂತಃ ಸ ನ್ಯವರ್ತತ ಭಾರತ||

ಭಾರತ! ಹೀಗೆ ಸರ್ವಬಲವನ್ನುಪಯೋಗಿಸಿಯೂ ಅದನ್ನು ಅಲುಗಾಡಿಸಲು ಅಥವಾ ಎತ್ತಲು ಸಾಧ್ಯವಾಗದಿದ್ದಾಗ ಪರಮ ದುರ್ಮನನಾದ ದ್ರೌಣಿಯು ಪರಮ ಯತ್ನವನ್ನು ಮಾಡಿ ಆಯಾಸಗೊಂಡು ಹಿಂದೆ ಸರಿದನು.

10012024a ನಿವೃತ್ತಮಥ ತಂ ತಸ್ಮಾದಭಿಪ್ರಾಯಾದ್ವಿಚೇತಸಂ|

10012024c ಅಹಮಾಮಂತ್ರ್ಯ ಸುಸ್ನಿಗ್ಧಮಶ್ವತ್ಥಾಮಾನಮಬ್ರುವಂ||

ಹಿಂದೆಸರಿದ ಮತ್ತು ಅದರಿಂದಾಗಿ ಮನಸ್ಸನ್ನು ಕೆಡಿಸಿಕೊಂಡಿದ್ದ ಉದ್ವಿಗ್ನ ಅಶ್ವತ್ಥಾಮನಿಗೆ ನಾನು ಹೀಗೆ ಹೇಳಿದ್ದೆನು:

10012025a ಯಃ ಸ ದೇವಮನುಷ್ಯೇಷು ಪ್ರಮಾಣಂ ಪರಮಂ ಗತಃ|

10012025c ಗಾಂಡೀವಧನ್ವಾ ಶ್ವೇತಾಶ್ವಃ ಕಪಿಪ್ರವರಕೇತನಃ||

10012026a ಯಃ ಸಾಕ್ಷಾದ್ದೇವದೇವೇಶಂ ಶಿತಿಕಂಠಮುಮಾಪತಿಂ|

10012026c ದ್ವಂದ್ವಯುದ್ಧೇ ಪರಾಜಿಷ್ಣುಸ್ತೋಷಯಾಮಾಸ ಶಂಕರಂ||

10012027a ಯಸ್ಮಾತ್ಪ್ರಿಯತರೋ ನಾಸ್ತಿ ಮಮಾನ್ಯಃ ಪುರುಷೋ ಭುವಿ|

10012027c ನಾದೇಯಂ ಯಸ್ಯ ಮೇ ಕಿಂ ಚಿದಪಿ ದಾರಾಃ ಸುತಾಸ್ತಥಾ||

“ದೇವ-ಮನುಷ್ಯರಲ್ಲಿ ಅತ್ಯಂತ ಪ್ರಾಮಾಣಿಕನೆಂದು ಖ್ಯಾತಿಗೊಂಡಿರುವ, ಗಾಂಡೀವಧನ್ವಿ, ಶ್ವೇತಾಶ್ವ, ಕಪಿಪ್ರವರನನನ್ನು ಧ್ವಜದಲ್ಲಿಟ್ಟಿಕೊಂಡಿರುವ, ಸಾಕ್ಷಾತ್ ದೇವದೇವೇಶ ಶಿತಿಕಂಠ ಉಮಾಪತಿ ಶಂಕರನನ್ನು ದ್ವಂದ್ವಯುದ್ಧದಲ್ಲಿ ಪರಾಜಯಗೊಳಿಸಲು ಪ್ರಯತ್ನಿಸಿ ತೃಪ್ತಿಗೊಳಿಸಿದ ಅರ್ಜುನನಿಗಿಂತ ಹೆಚ್ಚಿನ ಪ್ರಿಯ ಪುರುಷನು ಈ ಭುವಿಯಲ್ಲಿ ಬೇರೆ ಯಾರೂ ಇಲ್ಲ. ನನ್ನ ಪತ್ನಿಯರು ಮತ್ತು ಮಕ್ಕಳಲ್ಲಿಕೂಡ ಅವನಿಗೆ ನಾನು ಕೊಡಲಾರದವರು ಯಾರೂ ಇಲ್ಲ.

10012028a ತೇನಾಪಿ ಸುಹೃದಾ ಬ್ರಹ್ಮನ್ಪಾರ್ಥೇನಾಕ್ಲಿಷ್ಟಕರ್ಮಣಾ|

10012028c ನೋಕ್ತಪುರ್ವಮಿದಂ ವಾಕ್ಯಂ ಯತ್ತ್ವಂ ಮಾಮಭಿಭಾಷಸೇ||

ಬ್ರಾಹ್ಮಣ! ನನಗೆ ಅತ್ಯಂತ ಸುಹೃದನಾದ ಅಕ್ಲಿಷ್ಟಕರ್ಮಿ ಪಾರ್ಥನೂ ಕೂಡ ನೀನು ನನ್ನೊಡನೆ ಕೇಳಿದಂತೆ ಇದೂವರೆಗೂ ಕೇಳಿಲ್ಲ.

10012029a ಬ್ರಹ್ಮಚರ್ಯಂ ಮಹದ್ಘೋರಂ ಚೀರ್ತ್ವಾ ದ್ವಾದಶವಾರ್ಷಿಕಂ|

10012029c ಹಿಮವತ್ಪಾರ್ಶ್ವಮಭ್ಯೇತ್ಯ ಯೋ ಮಯಾ ತಪಸಾರ್ಚಿತಃ||

10012030a ಸಮಾನವ್ರತಚಾರಿಣ್ಯಾಂ ರುಕ್ಮಿಣ್ಯಾಂ ಯೋಽನ್ವಜಾಯತ|

10012030c ಸನತ್ಕುಮಾರಸ್ತೇಜಸ್ವೀ ಪ್ರದ್ಯುಮ್ನೋ ನಾಮ ಮೇ ಸುತಃ||

ಹನ್ನೆರಡು ವರ್ಷಗಳು ಹಿಮವತ್ಪರ್ವತದಲ್ಲಿ ಬ್ರಹ್ಮಚರ್ಯದಿಂದ ಘೋರ ತಪಸ್ಸನ್ನು ಮಾಡಿದ ನನ್ನಿಂದ ಸಮಾನವ್ರತಚಾರಿಣಿ ರುಕ್ಮಿಣಿಯಲ್ಲಿ ಜನಿಸಿದ ಸನತ್ಕುಮಾರನ ತೇಜಸ್ಸುಳ್ಳ ಪ್ರದ್ಯುಮ್ನನೆಂಬ ನನ್ನ ಮಗನಿದ್ದಾನೆ.

10012031a ತೇನಾಪ್ಯೇತನ್ಮಹದ್ದಿವ್ಯಂ ಚಕ್ರಮಪ್ರತಿಮಂ ಮಮ|

10012031c ನ ಪ್ರಾರ್ಥಿತಮಭೂನ್ಮೂಢ ಯದಿದಂ ಪ್ರಾರ್ಥಿತಂ ತ್ವಯಾ||

ಮೂಢ! ಆ ನನ್ನ ಮಗನೂ ಕೂಡ ಇಂದು ನೀನು ನನ್ನಿಂದ ಕೇಳಿದ ಈ ದಿವ್ಯವಾದ ಅಪ್ರತಿಮ ಚಕ್ರವನ್ನು ಇದೂವರೆಗೆ ಕೇಳಲಿಲ್ಲ!

10012032a ರಾಮೇಣಾತಿಬಲೇನೈತನ್ನೋಕ್ತಪೂರ್ವಂ ಕದಾ ಚನ|

10012032c ನ ಗದೇನ ನ ಸಾಂಬೇನ ಯದಿದಂ ಪ್ರಾರ್ಥಿತಂ ತ್ವಯಾ||

ನೀನು ಕೇಳಿದ ಇದನ್ನು ಎಂದೂ ಅತಿಬಲನಾದ ರಾಮನೂ, ಗದನೂ, ಸಾಂಬನೂ ನನ್ನನ್ನು ಕೇಳಲಿಲ್ಲ!

10012033a ದ್ವಾರಕಾವಾಸಿಭಿಶ್ಚಾನ್ಯೈರ್ವೃಷ್ಣ್ಯಂಧಕಮಹಾರಥೈಃ|

10012033c ನೋಕ್ತಪೂರ್ವಮಿದಂ ಜಾತು ಯದಿದಂ ಪ್ರಾರ್ಥಿತಂ ತ್ವಯಾ||

ನೀನು ಕೇಳುವ ಇದನ್ನು ದ್ವಾರಕಾವಾಸಿಗಳಲ್ಲಿ ಮತ್ತು ವೃಷ್ಣಿ-ಅಂಧಕ ಮಹಾರಥರಲ್ಲಿ ಬೇರೆ ಯಾರೂ ಮೊದಲು ಕೇಳಿರಲಿಲ್ಲ!

10012034a ಭಾರತಾಚಾರ್ಯಪುತ್ರಃ ಸನ್ಮಾನಿತಃ ಸರ್ವಯಾದವೈಃ|

10012034c ಚಕ್ರೇಣ ರಥಿನಾಂ ಶ್ರೇಷ್ಠ ಕಿಂ ನು ತಾತ ಯುಯುತ್ಸಸೇ||

ಅಯ್ಯಾ! ಭಾರತಾಚಾರ್ಯಪುತ್ರ! ಸರ್ವಯಾದವರಿಂದ ಸನ್ಮಾನಿತನಾಗಿರುವ ರಥಿಗಳಲ್ಲಿ ಶ್ರೇಷ್ಠನಾದ ನೀನು ಯಾರೊಡನೆ ಯುದ್ಧಮಾಡಲು ಬಯಸುತ್ತಿರುವೆ?”

10012035a ಏವಮುಕ್ತೋ ಮಯಾ ದ್ರೌಣಿರ್ಮಾಮಿದಂ ಪ್ರತ್ಯುವಾಚ ಹ|

10012035c ಪ್ರಯುಜ್ಯ ಭವತೇ ಪೂಜಾಂ ಯೋತ್ಸ್ಯೇ ಕೃಷ್ಣ ತ್ವಯೇತ್ಯುತ||

ನಾನು ಇದನ್ನು ಕೇಳಲು ದ್ರೌಣಿಯು ನನಗೆ ಉತ್ತರಿಸಿದ್ದನು: “ಕೃಷ್ಣ! ನಿನ್ನನ್ನು ಪೂಜಿಸಿ ನಿನ್ನೊಡನೆಯೇ ಯುದ್ಧಮಾಡಲು ಬಯಸಿದ್ದೆ.

10012036a ತತಸ್ತೇ ಪ್ರಾರ್ಥಿತಂ ಚಕ್ರಂ ದೇವದಾನವಪೂಜಿತಂ|

10012036c ಅಜೇಯಃ ಸ್ಯಾಮಿತಿ ವಿಭೋ ಸತ್ಯಮೇತದ್ಬ್ರವೀಮಿ ತೇ||

ಅಜೇಯನೆನಿಸಿಕೊಳ್ಳಬೇಕೆಂದೇ ನಾನು ನಿನ್ನ ದೇವದಾನವಪೂಜಿತ ಚಕ್ರವನ್ನು ಕೇಳಿದೆನು. ವಿಭೋ! ನಾನು ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.

10012037a ತ್ವತ್ತೋಽಹಂ ದುರ್ಲಭಂ ಕಾಮಮನವಾಪ್ಯೈವ ಕೇಶವ|

10012037c ಪ್ರತಿಯಾಸ್ಯಾಮಿ ಗೋವಿಂದ ಶಿವೇನಾಭಿವದಸ್ವ ಮಾಂ||

ಕೇಶವ! ನಿನ್ನಿಂದ ನಾನು ಈ ದುರ್ಲಭ ಕಾಮನೆಯನ್ನು ಪಡೆಯದೇ ಹಿಂದಿರುಗುತ್ತೇನೆ. ಗೋವಿಂದ! ನನ್ನನ್ನು ಮಂಗಳಕರ ಮಾತಿನಿಂದ ಬೀಳ್ಕೊಡು!

10012038a ಏತತ್ಸುನಾಭಂ ವೃಷ್ಣೀನಾಮೃಷಭೇಣ ತ್ವಯಾ ಧೃತಂ|

10012038c ಚಕ್ರಮಪ್ರತಿಚಕ್ರೇಣ ಭುವಿ ನಾನ್ಯೋಽಭಿಪದ್ಯತೇ||

ಸುಂದರ ನಾಭಿಯುಳ್ಳ ಇದನ್ನು ವೃಷ್ಣಿಗಳಲ್ಲಿ ಋಷಭನಾದ ನೀನೇ ಧರಿಸಬೇಕು. ಈ ಅಪ್ರತಿಮ ಚಕ್ರವನ್ನು ತಿರುಗಿಸಲು ಭುವಿಯಲ್ಲಿ ಬೇರೆ ಯಾರಿಗೂ ಸಾಧ್ಯವಾಗಲಾರದು!”

10012039a ಏತಾವದುಕ್ತ್ವಾ ದ್ರೌಣಿರ್ಮಾಂ ಯುಗ್ಯಮಶ್ವಾನ್ಧನಾನಿ ಚ|

10012039c ಆದಾಯೋಪಯಯೌ ಬಾಲೋ ರತ್ನಾನಿ ವಿವಿಧಾನಿ ಚ||

ನನಗೆ ಹೀಗೆ ಹೇಳಿ ಬಾಲಕ ದ್ರೌಣಿಯು ಎರಡು ಕುದುರೆಗಳನ್ನೂ, ಧನವನ್ನೂ, ವಿವಿಧರತ್ನಗಳನ್ನೂ ತೆಗೆದುಕೊಂಡು ಹೊರಟು ಹೋದನು.

10012040a ಸ ಸಂರಂಭೀ ದುರಾತ್ಮಾ ಚ ಚಪಲಃ ಕ್ರೂರ ಏವ ಚ|

10012040c ವೇದ ಚಾಸ್ತ್ರಂ ಬ್ರಹ್ಮಶಿರಸ್ತಸ್ಮಾದ್ರಕ್ಷ್ಯೋ ವೃಕೋದರಃ||

ಅವನು ಮಹಾಕೋಪಿಷ್ಟ. ದುರಾತ್ಮಿ. ಚಪಲ ಮತ್ತು ಕ್ರೂರಿ ಕೂಡ. ಬ್ರಹ್ಮಶಿರಾಸ್ತ್ರವನ್ನು ತಿಳಿದಿರುವ ಅವನಿಂದ ವೃಕೋದರನನ್ನು ರಕ್ಷಿಸು!””

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಣಿ ಯುಧಿಷ್ಠಿರಕೃಷ್ಣಸಂವಾದೇ ದ್ವಾದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವದಲ್ಲಿ ಯುಧಿಷ್ಠಿರಕೃಷ್ಣಸಂವಾದ ಎನ್ನುವ ಹನ್ನೆರಡನೇ ಅಧ್ಯಾಯವು.

Comments are closed.