Sauptika Parva: Chapter 10

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸೌಪ್ತಿಕಪರ್ವ: ಐಷೀಕ ಪರ್ವ

೧೦

ಶಿಬಿರದಿಂದ ತಪ್ಪಿಸಿಕೊಂಡಿದ್ದ ಧೃಷ್ಟದ್ಯುಮ್ನನ ಸಾರಥಿಯಿಂದ ರಾತ್ರಿಯುದ್ಧದ ಕುರಿತು ಕೇಳಿದ ಯುಧಿಷ್ಠಿರನು ವಿಲಪಿಸಿ ದ್ರೌಪದಿಯನ್ನು ಕರೆತರಲು ನಕುಲನನ್ನು ಕಳುಹಿಸಿದ್ದುದು (೧-೩೦).

10010001 ವೈಶಂಪಾಯನ ಉವಾಚ|

10010001a ತಸ್ಯಾಂ ರಾತ್ರ್ಯಾಂ ವ್ಯತೀತಾಯಾಂ ಧೃಷ್ಟದ್ಯುಮ್ನಸ್ಯ ಸಾರಥಿಃ|

10010001c ಶಶಂಸ ಧರ್ಮರಾಜಾಯ ಸೌಪ್ತಿಕೇ ಕದನಂ ಕೃತಂ||

ವೈಶಂಪಾಯನನು ಹೇಳಿದನು: “ಆ ರಾತ್ರಿಯು ಕಳೆಯಲು ಮಲಗಿರುವಾಗ ನಡೆದ ಕದನದ ಕುರಿತು ಧೃಷ್ಟದ್ಯುಮ್ನನ ಸಾರಥಿಯು ಧರ್ಮರಾಜನಿಗೆ ವರದಿಮಾಡಿದನು.

10010002a ದ್ರೌಪದೇಯಾ ಮಹಾರಾಜ ದ್ರುಪದಸ್ಯಾತ್ಮಜೈಃ ಸಹ|

10010002c ಪ್ರಮತ್ತಾ ನಿಶಿ ವಿಶ್ವಸ್ತಾಃ ಸ್ವಪಂತಃ ಶಿಬಿರೇ ಸ್ವಕೇ||

10010003a ಕೃತವರ್ಮಣಾ ನೃಶಂಸೇನ ಗೌತಮೇನ ಕೃಪೇಣ ಚ|

10010003c ಅಶ್ವತ್ಥಾಮ್ನಾ ಚ ಪಾಪೇನ ಹತಂ ವಃ ಶಿಬಿರಂ ನಿಶಿ||

“ಮಹಾರಾಜ! ರಾತ್ರಿ ದ್ರೌಪದೇಯರು ದ್ರುಪದನ ಮಕ್ಕಳೊಂದಿಗೆ ಮೈಮರೆತು ನಿಶ್ಚಿಂತೆಯಿಂದ ತಮ್ಮ ತಮ್ಮ ಶಿಬಿರಗಳಲ್ಲಿ ಮಲಗಿದ್ದರು. ರಾತ್ರಿವೇಳೆ ಶಿಬಿರಕ್ಕೆ ಧಾಳಿಯಿಟ್ಟ ಕೃತವರ್ಮ, ಗೌತಮ ಕೃಪ ಮತ್ತು ಅಶ್ವತ್ಥಾಮರ ಕ್ರೂರ ಪಾಪದಿಂದ ನಾವುಗಳು ಹತರಾದೆವು!

10010004a ಏತೈರ್ನರಗಜಾಶ್ವಾನಾಂ ಪ್ರಾಸಶಕ್ತಿಪರಶ್ವಧೈಃ|

10010004c ಸಹಸ್ರಾಣಿ ನಿಕೃಂತದ್ಭಿರ್ನಿಃಶೇಷಂ ತೇ ಬಲಂ ಕೃತಂ||

ಅವರು ಪ್ರಾಸ-ಶಕ್ತಿ-ಪರಶುಗಳಿಂದ ಸಹಸ್ರಾರು ನರ-ಗಜ-ಅಶ್ವಗಳನ್ನು ಕತ್ತರಿಸಿ ನಿನ್ನ ಸೇನೆಯನ್ನು ನಿಃಶೇಷಗೊಳಿಸಿದರು.

10010005a ಚಿದ್ಯಮಾನಸ್ಯ ಮಹತೋ ವನಸ್ಯೇವ ಪರಶ್ವಧೈಃ|

10010005c ಶುಶ್ರುವೇ ಸುಮಹಾನ್ ಶಬ್ದೋ ಬಲಸ್ಯ ತವ ಭಾರತ||

ಭಾರತ! ಮಹಾವನವನ್ನು ಪರಶುಗಳಿಂದ ತುಂಡರಿಸುವಾಗ ಹೇಗೋ ಹಾಗೆ ನಿನ್ನ ಸೇನೆಯಲ್ಲಿ ಮಹಾಶಬ್ಧವು ಕೇಳಿಬರುತ್ತಿತ್ತು.

10010006a ಅಹಮೇಕೋಽವಶಿಷ್ಟಸ್ತು ತಸ್ಮಾತ್ಸೈನ್ಯಾನ್ಮಹೀಪತೇ|

10010006c ಮುಕ್ತಃ ಕಥಂ ಚಿದ್ಧರ್ಮಾತ್ಮನ್ವ್ಯಗ್ರಸ್ಯ ಕೃತವರ್ಮಣಃ||

ಧರ್ಮಾತ್ಮನ್! ಮಹೀಪತೇ! ಕೃತವರ್ಮನು ಬೇರೆ ಕಡೆ ಗಮನಹರಿಸಿದ್ದಾಗ ಆ ಸೇನೆಯಲ್ಲಿ ನಾನೊಬ್ಬನೇ ಹೇಗೋ ಮಾಡಿಕೊಂಡು ಉಳಿದುಕೊಂಡೆನು.”

10010007a ತಚ್ಚ್ರುತ್ವಾ ವಾಕ್ಯಮಶಿವಂ ಕುಂತೀಪುತ್ರೋ ಯುಧಿಷ್ಠಿರಃ|

10010007c ಪಪಾತ ಮಹ್ಯಾಂ ದುರ್ಧರ್ಷಃ ಪುತ್ರಶೋಕಸಮನ್ವಿತಃ||

ಆ ಅಮಂಗಳಕರ ವಾಕ್ಯವನ್ನು ಕೇಳಿ ದುರ್ಧರ್ಷ ಕುಂತೀಪುತ್ರ ಯುಧಿಷ್ಠಿರನು ಪುತ್ರಶೋಕಸಮನ್ವಿತನಾಗಿ ನೆಲದಮೇಲೆ ಬಿದ್ದನು.

10010008a ತಂ ಪತಂತಮಭಿಕ್ರಮ್ಯ ಪರಿಜಗ್ರಾಹ ಸಾತ್ಯಕಿಃ|

10010008c ಭೀಮಸೇನೋಽರ್ಜುನಶ್ಚೈವ ಮಾದ್ರೀಪುತ್ರೌ ಚ ಪಾಂಡವೌ||

ಕೆಳಗೆ ಬೀಳುವುದರೊಳಗೆ ಅವನನ್ನು ಸಾತ್ಯಕಿ, ಭೀಮಾರ್ಜುನರು ಮತ್ತು ಮಾದ್ರೀಪುತ್ರ ಪಾಂಡವರಿಬ್ಬರೂ ಹಿಡಿದು ತಡೆದರು.

10010009a ಲಬ್ಧಚೇತಾಸ್ತು ಕೌಂತೇಯಃ ಶೋಕವಿಹ್ವಲಯಾ ಗಿರಾ|

10010009c ಜಿತ್ವಾ ಶತ್ರೂಂಜಿತಃ ಪಶ್ಚಾತ್ಪರ್ಯದೇವಯದಾತುರಃ||

ಚೇತರಿಸಿಕೊಂಡ ಕೌಂತೇಯನು ಆತುರದಿಂದ ಶೋಕವಿಹ್ವಲ ಸ್ವರದಲ್ಲಿ “ಶತ್ರುಗಳನ್ನು ಜಯಿಸಿ ನಂತರ ಅವರಿಂದಲೇ ಸೋತೆವು!” ಎಂದು ಪರಿವೇದಿಸಿದನು.

10010010a ದುರ್ವಿದಾ ಗತಿರರ್ಥಾನಾಮಪಿ ಯೇ ದಿವ್ಯಚಕ್ಷುಷಃ|

10010010c ಜೀಯಮಾನಾ ಜಯಂತ್ಯನ್ಯೇ ಜಯಮಾನಾ ವಯಂ ಜಿತಾಃ||

“ದಿವ್ಯದೃಷ್ಟಿಯಿರುವವರಿಗೂ ಪರಿಣಾಮಗಳ ಗತಿಯನ್ನು ತಿಳಿಯುವುದು ಕಷ್ಟ. ಸೋತ ಅವರು ಗೆದ್ದುಬಿಟ್ಟರು. ವಿಜಯಿಗಳಾಗಿದ್ದ ನಾವು ಸೋತುಹೋದೆವು!

10010011a ಹತ್ವಾ ಭ್ರಾತೄನ್ವಯಸ್ಯಾಂಶ್ಚ ಪಿತೄನ್ಪುತ್ರಾನ್ಸುಹೃದ್ಗಣಾನ್|

10010011c ಬಂಧೂನಮಾತ್ಯಾನ್ಪೌತ್ರಾಂಶ್ಚ ಜಿತ್ವಾ ಸರ್ವಾಂಜಿತಾ ವಯಂ||

ಭ್ರಾತೃಗಳನ್ನು, ಸ್ನೇಹಿತರನ್ನು, ಪಿತೃಗಳನ್ನು, ಪುತ್ರರನ್ನು, ಸುಹೃದಯರ ತಂಡಗಳನ್ನು, ಬಂಧುಗಳನ್ನು, ಅಮಾತ್ಯರನ್ನು ಮತ್ತು ಮೊಮ್ಮಕ್ಕಳನ್ನು ಸಂಹರಿಸಿ ನಮ್ಮೆಲ್ಲರನ್ನೂ ಅವರು ಪರಾಜಿತಗೊಳಿಸಿದರು.

10010012a ಅನರ್ಥೋ ಹ್ಯರ್ಥಸಂಕಾಶಸ್ತಥಾರ್ಥೋಽನರ್ಥದರ್ಶನಃ|

10010012c ಜಯೋಽಯಮಜಯಾಕಾರೋ ಜಯಸ್ತಸ್ಮಾತ್ಪರಾಜಯಃ||

ಅನರ್ಥಗಳೂ ಅರ್ಥಸದೃಶವಾಗಿರುತ್ತವೆ. ಹಾಗೆಯೇ ಅರ್ಥಗಳೂ ಅನರ್ಥಗಳಾಗಿ ಕಾಣುತ್ತವೆ. ಈ ಜಯವು ಪರಾಜಯಕರವಾಗಿದೆ. ಆದುದರಿಂದ ಈ ಜಯವು ಪರಾಜಯವೇ ಸರಿ!

10010013a ಯಂ ಜಿತ್ವಾ ತಪ್ಯತೇ ಪಶ್ಚಾದಾಪನ್ನ ಇವ ದುರ್ಮತಿಃ|

10010013c ಕಥಂ ಮನ್ಯೇತ ವಿಜಯಂ ತತೋ ಜಿತತರಃ ಪರೈಃ||

ಯಾವ ದುರ್ಮತಿಯು ವಿಜಯಿಯಾಗಿಯೂ ಪಶ್ಚಾತ್ತಾಪಪಡುತ್ತಾನೋ ಅವನು ಹೇಗೆ ತಾನೇ ವಿಜಯಿಯಾದೆನೆಂದು ಒಪ್ಪಿಕೊಳ್ಳಬಹುದು? ನಾನು ಶತ್ರುಗಳಿಂದ ಜಯಿಸಲ್ಪಟ್ಟಿದ್ದೇನೆ!

10010014a ಯೇಷಾಮರ್ಥಾಯ ಪಾಪಸ್ಯ ಧಿಗ್ಜಯಸ್ಯ ಸುಹೃದ್ವಧೇ|

10010014c ನಿರ್ಜಿತೈರಪ್ರಮತ್ತೈರ್ಹಿ ವಿಜಿತಾ ಜಿತಕಾಶಿನಃ||

ಸುಹೃದಯರ ವಧೆಯ ಪಾಪವನ್ನೆಸಗಿ ನಾವು ಗಳಿಸಿದ ಜಯಕ್ಕೆ ಧಿಕ್ಕಾರ! ವಿಜಯಗಳಿಸಿದವರನ್ನು ಎಚ್ಚರಿಕೆಯಿಂದಿದ್ದ ಜಿತಾಕಾಂಕ್ಷಿ ಶತ್ರುಗಳು ಸೋಲಿಸಿಬಿಟ್ಟರು!

10010015a ಕರ್ಣಿನಾಲೀಕದಂಷ್ಟ್ರಸ್ಯ ಖಡ್ಗಜಿಹ್ವಸ್ಯ ಸಂಯುಗೇ|

10010015c ಚಾಪವ್ಯಾತ್ತಸ್ಯ ರೌದ್ರಸ್ಯ ಜ್ಯಾತಲಸ್ವನನಾದಿನಃ||

10010016a ಕ್ರುದ್ಧಸ್ಯ ನರಸಿಂಹಸ್ಯ ಸಂಗ್ರಾಮೇಷ್ವಪಲಾಯಿನಃ|

10010016c ಯೇ ವ್ಯಮುಚ್ಯಂತ ಕರ್ಣಸ್ಯ ಪ್ರಮಾದಾತ್ತ ಇಮೇ ಹತಾಃ||

ಯುದ್ಧದಲ್ಲಿ ಕರ್ಣಿ-ನಾಲೀಕಗಳೇ ಹಲ್ಲಾಗಿದ್ದ, ಖಡ್ಗವೇ ನಾಲಿಗೆಯಂತಿದ್ದ, ಧನುಸ್ಸೇ ಬಾಯಿಯಂತಿದ್ದ, ರೌದ್ರ ಟೇಂಕಾರವೇ ಗರ್ಜನೆಯಂತಿದ್ದ, ಕ್ರುದ್ಧ ನರಸಿಂಹ ಕರ್ಣನೊಡನೆ ಹೋರಾಡುವಾಗಲೂ ಪಲಾಯನ ಮಾಡದಿದ್ದ ನಮ್ಮವರು ಮೈಮರೆತು ಮಲಗಿರುವಾಗ ಹತರಾದರಲ್ಲ!

10010017a ರಥಹ್ರದಂ ಶರವರ್ಷೋರ್ಮಿಮಂತಂ

         ರತ್ನಾಚಿತಂ ವಾಹನರಾಜಿಯುಕ್ತಂ|

10010017c ಶಕ್ತ್ಯೃಷ್ಟಿಮೀನಧ್ವಜನಾಗನಕ್ರಂ

         ಶರಾಸನಾವರ್ತಮಹೇಷುಫೇನಂ||

10010018a ಸಂಗ್ರಾಮಚಂದ್ರೋದಯವೇಗವೇಲಂ

         ದ್ರೋಣಾರ್ಣವಂ ಜ್ಯಾತಲನೇಮಿಘೋಷಂ|

10010018c ಯೇ ತೇರುರುಚ್ಚಾವಚಶಸ್ತ್ರನೌಭಿಸ್

         ತೇ ರಾಜಪುತ್ರಾ ನಿಹತಾಃ ಪ್ರಮಾದಾತ್||

ಯಾರ ರಥವು ಸಾಗರದಂತಿತ್ತೋ, ಯಾರ ಶರವರ್ಷಗಳು ಅಲೆಗಳಿಂತಿದ್ದವೋ, ಅಲಂಕಾರಗಳೇ ಸಾಗರದ ರತ್ನಗಳಂತಿದ್ದವೋ, ವಾಹನಗಳೇ ಸಮುದ್ರದಿಂದೆದ್ದ ಕುದುರೆಗಳಂತಿದ್ದವೋ, ಯಾರ ಶಕ್ತಿ-ಋಷ್ಟಿಗಳು ಸಾಗರದ ಮೀನುಗಳಂತಿದ್ದವೋ, ಯಾರ ಧ್ವಜಗಳೇ ಹಾವು-ಮೊಸಳೆಗಳಂತಿದ್ದವೋ, ಯಾರ ಧನುಸ್ಸೇ ಸುಳಿಯಂತಿತ್ತೋ, ಯಾರ ಮಹಾ ಬಾಣಗಳು ಸಮುದ್ರದ ನೊರೆಗಳಂತಿದ್ದವೋ, ಯಾರ ಸಂಗ್ರಾಮವು ಚಂದ್ರೋದಯದಲ್ಲಿ ಉಕ್ಕಿಬರುವ ಅಲೆಯಂತಿದ್ದಿತೋ, ಯಾರ ಟೇಂಕಾರ ಮತ್ತು ರಥಚಕ್ರಗಳ ಶಬ್ಧಗಳು ಸಮುದ್ರದ ಗರ್ಜನೆಯಂತಿದ್ದವೋ ಆ ದ್ರೋಣನೆಂಬ ಸಮುದ್ರವನ್ನೇ ನಮ್ಮಕಡೆಯ ಯೋಧರು ಬಗೆ ಬಗೆಯ ಶಸ್ತ್ರಗಳನ್ನೇ ನೌಕೆಗಳನ್ನಾಗಿಸಿಕೊಂಡು ದಾಟಿದರು. ಆ ರಾಜಪುತ್ರರೇ ಇಂದು ಪ್ರಮಾದದಿಂದ ಹತರಾಗಿದ್ದಾರೆ!

10010019a ನ ಹಿ ಪ್ರಮಾದಾತ್ಪರಮೋಽಸ್ತಿ ಕಶ್ಚಿದ್

         ವಧೋ ನರಾಣಾಮಿಹ ಜೀವಲೋಕೇ|

10010019c ಪ್ರಮತ್ತಮರ್ಥಾ ಹಿ ನರಂ ಸಮಂತಾತ್

         ತ್ಯಜಂತ್ಯನರ್ಥಾಶ್ಚ ಸಮಾವಿಶಂತಿ||

ಈ ಜೀವಲೋಕದಲ್ಲಿ ನರರಿಗೆ ಪ್ರಮಾದಕ್ಕಿಂತಲೂ ಹೆಚ್ಚಿನ ಮೃತ್ಯುವು ಬೇರೆ ಯಾವುದೂ ಇರಲಿಕ್ಕಿಲ್ಲ! ಪ್ರಮತ್ತನಾದ ನರನನ್ನು ಅರ್ಥಗಳು ಎಲ್ಲಕಡೆಗಳಿಂದಲೂ ತ್ಯಜಿಸಿ ಅವನನ್ನು ಅನರ್ಥಗಳೇ ಮುತ್ತಿಕೊಳ್ಳುತ್ತವೆ.

10010020a ಧ್ವಜೋತ್ತಮಾಗ್ರೋಚ್ಚ್ರಿತಧೂಮಕೇತುಂ

         ಶರಾರ್ಚಿಷಂ ಕೋಪಮಹಾಸಮೀರಂ|

10010020c ಮಹಾಧನುರ್ಜ್ಯಾತಲನೇಮಿಘೋಷಂ

         ತನುತ್ರನಾನಾವಿಧಶಸ್ತ್ರಹೋಮಂ||

10010021a ಮಹಾಚಮೂಕಕ್ಷವರಾಭಿಪನ್ನಂ

         ಮಹಾಹವೇ ಭೀಷ್ಮಮಹಾದವಾಗ್ನಿಂ|

10010021c ಯೇ ಸೇಹುರಾತ್ತಾಯತಶಸ್ತ್ರವೇಗಂ

         ತೇ ರಾಜಪುತ್ರಾ ನಿಹತಾಃ ಪ್ರಮಾದಾತ್||

ಎತ್ತರದಲ್ಲಿ ಹಾರಾಡುತ್ತಿದ್ದ ಯಾರ ಉತ್ತಮ ಧ್ವಜಗಳೇ ಹೊಗೆಯಂತಿದ್ದವೋ, ಯಾರ ಶರವೃಷ್ಟಿಗಳೇ ಜ್ವಾಲೆಗಳಂತಿದ್ದವೋ, ಯಾರ ಕೋಪವೇ ಚಂಡಮಾರುತದಂತೆ ಬೆಂಕಿಯನ್ನು ಉರಿಸುತ್ತಿತ್ತೋ, ಯಾರ ಟೇಂಕಾರ-ಚಪ್ಪಾಳೆ ಮತ್ತು ರಥಚಕ್ರಗಳ ಶಬ್ಧಗಳೂ ಉರಿಯುತ್ತಿರುವ ಬೆಂಕಿಯ ಚಟ ಚಟಾ ಶಬ್ಧದಂತಿದ್ದವೋ, ಯಾರ ನಾನಾವಿಧದ ಶಸ್ತ್ರಗಳು ಹೋಮದ ಆಹುತಿಗಳಂತಿದ್ದವೋ, ಮಹಾರಣದಲ್ಲಿ ಕಾಡ್ಗಿಚ್ಚಿನಂತಿದ್ದ ಭೀಷ್ಮನ ಕೋಟಿಗಟ್ಟಲೇ ಶಸ್ತ್ರವೇಗಗಳನ್ನು ಸಹಿಸಿದ್ದ ನಮ್ಮ ರಾಜಪುತ್ರರು ಇಂದು ಪ್ರಮಾದದಿಂದ ಹತರಾದರು!

10010022a ನ ಹಿ ಪ್ರಮತ್ತೇನ ನರೇಣ ಲಭ್ಯಾ

         ವಿದ್ಯಾ ತಪಃ ಶ್ರೀರ್ವಿಪುಲಂ ಯಶೋ ವಾ|

10010022c ಪಶ್ಯಾಪ್ರಮಾದೇನ ನಿಹತ್ಯ ಶತ್ರೂನ್

         ಸರ್ವಾನ್ಮಹೇಂದ್ರಂ ಸುಖಮೇಧಮಾನಂ||

ಪ್ರಮತ್ತನಾಗಿರುವ ನರನಿಗೆ ವಿದ್ಯೆ, ತಪಸ್ಸು, ಸಂಪತ್ತು ಅಥವಾ ವಿಪುಲ ಯಶಸ್ಸು ದೊರೆಯಲಾರದು! ಜಾಗರೂಕತೆಯಿಂದ ಸರ್ವ ಶತ್ರುಗಳನ್ನೂ ಸಂಹರಿಸಿ ಸುಖಪಡುತ್ತಿರುವ ಮಹೇಂದ್ರನನ್ನಾದರೂ ನೋಡಿರಿ!

10010023a ಇಂದ್ರೋಪಮಾನ್ಪಾರ್ಥಿವಪುತ್ರಪೌತ್ರಾನ್

         ಪಶ್ಯಾವಿಶೇಷೇಣ ಹತಾನ್ಪ್ರಮಾದಾತ್|

10010023c ತೀರ್ತ್ವಾ ಸಮುದ್ರಂ ವಣಿಜಃ ಸಮೃದ್ಧಾಃ

         ಸನ್ನಾಃ ಕುನದ್ಯಾಮಿವ ಹೇಲಮಾನಾಃ||

10010023e ಅಮರ್ಷಿತೈರ್ಯೇ ನಿಹತಾಃ ಶಯಾನಾ

         ನಿಃಸಂಶಯಂ ತೇ ತ್ರಿದಿವಂ ಪ್ರಪನ್ನಾಃ|

ಸಮೃದ್ಧ ವರ್ತಕರು ಮಹಾಸಮುದ್ರವನ್ನು ದಾಟಿ ಹಳ್ಳವನ್ನು ಕಂಡು ತಾತ್ಸಾರಭಾವದಿಂದ ಅಜಾಗರೂಕರಾಗಿದ್ದು ಆ ಪುಟ್ಟ ಹಳ್ಳದಲ್ಲಿಯೇ ಮುಳುಗಿಹೋಗುವಂತೆ ಯಾವ ವಿಶೇಷಕಾರಣವೂ ಇಲ್ಲದೇ ಕೇವಲ ಅಜಾಗರೂಕತೆಯಿಂದಾಗಿ ಇಂದ್ರೋಪಮ ರಾಜಪುತ್ರ-ಪೌತ್ರರು ಹತರಾದುದನ್ನು ನೋಡು! ಮಲಗಿರುವಾಗ ಕುಪಿತ ಶತ್ರುಗಳಿಂದ ಹತರಾದ ಅವರು ನಿಸ್ಸಂಶಯವಾಗಿ ಸ್ವರ್ಗಕ್ಕೇ ಹೋಗಿ ಪ್ರಪನ್ನರಾಗಿರಬೇಕು!

10010024a ಕೃಷ್ಣಾಂ ನು ಶೋಚಾಮಿ ಕಥಂ ನ ಸಾಧ್ವೀಂ

         ಶೋಕಾರ್ಣವೇ ಸಾದ್ಯ ವಿನಂಕ್ಷ್ಯತೀತಿ||

10010024c ಭ್ರಾತೄಂಶ್ಚ ಪುತ್ರಾಂಶ್ಚ ಹತಾನ್ನಿಶಮ್ಯ

         ಪಾಂಚಾಲರಾಜಂ ಪಿತರಂ ಚ ವೃದ್ಧಂ|

10010024e ಧ್ರುವಂ ವಿಸಂಜ್ಞಾ ಪತಿತಾ ಪೃಥಿವ್ಯಾಂ

         ಸಾ ಶೇಷ್ಯತೇ ಶೋಕಕೃಶಾಂಗಯಷ್ಟಿಃ||

ಸಾಧ್ವೀ ಕೃಷ್ಣೆಯು ಶೋಕಾರ್ಣವದಲ್ಲಿ ಮುಳುಗಿ ಹೇಗೆ ನಾಶಗೊಳ್ಳುವುದಿಲ್ಲ ಎಂದು ಈಗ ನಾನು ಶೋಕಿಸುತ್ತಿದ್ದೇನೆ. ಸಹೋದರರು, ಪುತ್ರರು ಹಾಗೂ ವೃದ್ಧ ತಂದೆ ಪಾಂಚಾಲರಾಜನೂ ನಾಶಗೊಂಡರೆನ್ನುವುದನ್ನು ಕೇಳಿ ಅವಳು ನಿಶ್ಚಯವಾಗಿಯೂ ಭೂಮಿಯ ಮೇಲೆ ಮೂರ್ಛಿತಳಾಗಿ ಬೀಳುತ್ತಾಳೆ! ಶೋಕದಿಂದಾಗಿ ಅವಳು ಒಣಗಿದ ಕಡ್ಡಿಯಂತಾಗಿಬಿಟ್ಟಿದ್ದಾಳೆ!

10010025a ತಚ್ಚೋಕಜಂ ದುಃಖಮಪಾರಯಂತೀ

         ಕಥಂ ಭವಿಷ್ಯತ್ಯುಚಿತಾ ಸುಖಾನಾಂ|

10010025c ಪುತ್ರಕ್ಷಯಭ್ರಾತೃವಧಪ್ರಣುನ್ನಾ

         ಪ್ರದಹ್ಯಮಾನೇವ ಹುತಾಶನೇನ||

ಸುಖಗಳಿಗೆ ಅರ್ಹಳಾಗಿರುವ ಅವಳು ಮುಂದೇನಾಗುವಳೆಂದು ನಾನು ಊಹಿಸಲೂ ಅಸಮರ್ಥನಾಗಿದ್ದೇನೆ. ಪುತ್ರಕ್ಷಯ ಮತ್ತು ಭ್ರಾತೃವಧೆಗಳ ಕುರಿತು ಕೇಳಿ ಶೋಕಾಗ್ನಿಯಲ್ಲಿ ಬೆಂದುಹೋಗುತ್ತಾಳೆ!”

10010026a ಇತ್ಯೇವಮಾರ್ತಃ ಪರಿದೇವಯನ್ಸ

         ರಾಜಾ ಕುರೂಣಾಂ ನಕುಲಂ ಬಭಾಷೇ|

10010026c ಗಚ್ಚಾನಯೈನಾಮಿಹ ಮಂದಭಾಗ್ಯಾಂ

         ಸಮಾತೃಪಕ್ಷಾಮಿತಿ ರಾಜಪುತ್ರೀಂ||

ಹೀಗೆ ಆರ್ತನಾಗಿ ಪರಿವೇದಿಸುತ್ತಾ ಆ ಕುರುಗಳ ರಾಜನು ನಕುಲನಿಗೆ ಹೇಳಿದನು: “ಹೋಗು! ಮಂದಭಾಗ್ಯಳಾದ ಆ ರಾಜಪುತ್ರಿಯನ್ನು ತಾಯಿಯ ಕಡೆಯ ಸ್ತ್ರೀಯರ ಸಮೇತವಾಗಿ ಇಲ್ಲಿಗೆ ಕರೆದುಕೊಂಡು ಬಾ!”

10010027a ಮಾದ್ರೀಸುತಸ್ತತ್ಪರಿಗೃಹ್ಯ ವಾಕ್ಯಂ

         ಧರ್ಮೇಣ ಧರ್ಮಪ್ರತಿಮಸ್ಯ ರಾಜ್ಞಃ|

10010027c ಯಯೌ ರಥೇನಾಲಯಮಾಶು ದೇವ್ಯಾಃ

         ಪಾಂಚಾಲರಾಜಸ್ಯ ಚ ಯತ್ರ ದಾರಾಃ||

ಧರ್ಮದಲ್ಲಿ ಧರ್ಮನಿಗೆ ಸಮನಾಗಿದ್ದ ರಾಜನ ಆ ಮಾತನ್ನು ಸ್ವೀಕರಿಸಿ ಮಾದ್ರೀಸುತನು ರಥದಲ್ಲಿ ಕುಳಿತು ಪಾಂಚಾಲರಾಜನ ದೇವಿಯರು ಮತ್ತು ಪತ್ನಿಯರಿರುವಲ್ಲಿಗೆ ಹೋದನು.

10010028a ಪ್ರಸ್ಥಾಪ್ಯ ಮಾದ್ರೀಸುತಮಾಜಮೀಢಃ

         ಶೋಕಾರ್ದಿತಸ್ತೈಃ ಸಹಿತಃ ಸುಹೃದ್ಭಿಃ|

10010028c ರೋರೂಯಮಾಣಃ ಪ್ರಯಯೌ ಸುತಾನಾಮ್

         ಆಯೋಧನಂ ಭೂತಗಣಾನುಕೀರ್ಣಂ||

ಮಾದ್ರೀಸುತನನ್ನು ಕಳುಹಿಸಿಕೊಟ್ಟು ಆಜಮೀಢನು ಶೋಕಾರ್ದಿತ ಸುಹೃದಯರ ಸಹಿತ ರೋದಿಸುತ್ತಲೇ ಭೂತಗಣಗಳಿಂದ ತುಂಬಿಹೋಗಿದ್ದ ಸುತರು ಅಸುನೀಗಿದ್ದ ಸ್ಥಳಕ್ಕೆ ಹೋದನು.

10010029a ಸ ತತ್ಪ್ರವಿಶ್ಯಾಶಿವಮುಗ್ರರೂಪಂ

         ದದರ್ಶ ಪುತ್ರಾನ್ಸುಹೃದಃ ಸಖೀಂಶ್ಚ|

10010029c ಭೂಮೌ ಶಯಾನಾನ್ರುಧಿರಾರ್ದ್ರಗಾತ್ರಾನ್

         ವಿಭಿನ್ನಭಗ್ನಾಪಹೃತೋತ್ತಮಾಂಗಾನ್||

ಅವನು ಅಲ್ಲಿಗೆ ಪ್ರವೇಶಿಸಿ ರಕ್ತದಲ್ಲಿ ತೋಯ್ದು ಹೋಗಿದ್ದ ಮತ್ತು ನೆಲದಮೇಲೆ ಮಲಗಿದ್ದ, ಶಿರಗಳನ್ನು ಕಳೆದುಕೊಂಡು ಉಗ್ರವಾಗಿ ಕಾಣುತ್ತಿದ್ದ, ಪುತ್ರರ, ಸುಹೃದಯರ ಮತ್ತು ಸಖರ ತುಂಡು ತುಂಡಾಗಿದ್ದ ಮೃತ ಶರೀರಗಳನ್ನು ನೋಡಿದನು.

10010030a ಸ ತಾಂಸ್ತು ದೃಷ್ಟ್ವಾ ಭೃಶಮಾರ್ತರೂಪೋ

         ಯುಧಿಷ್ಠಿರೋ ಧರ್ಮಭೃತಾಂ ವರಿಷ್ಠಃ|

10010030c ಉಚ್ಚೈಃ ಪ್ರಚುಕ್ರೋಶ ಚ ಕೌರವಾಗ್ರ್ಯಃ

         ಪಪಾತ ಚೋರ್ವ್ಯಾಂ ಸಗಣೋ ವಿಸಂಜ್ಞಃ||

ಅವರನ್ನು ನೋಡಿ ಧರ್ಮಭೃತರಲ್ಲಿ ಶ್ರೇಷ್ಠ ಕೌರವಾಗ್ರ್ಯ ಯುಧಿಷ್ಠಿರನು ತುಂಬಾ ಆರ್ತರೂಪನಾಗಿ ಜೋರಾಗಿ ಕೂಗಿಕೊಂಡು ಮೂರ್ಛಿತನಾಗಿ ಅನುಯಾಯಿಗಳೊಡನೆ ನೆಲದ ಮೇಲೆ ಬಿದ್ದುಬಿಟ್ಟನು.”

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಣಿ ಯುಧಿಷ್ಠಿರಶಿಬಿರಪ್ರವೇಶೇ ದಶಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವದಲ್ಲಿ ಯುಧಿಷ್ಠಿರಶಿಬಿರಪ್ರವೇಶ ಎನ್ನುವ ಹತ್ತನೇ ಅಧ್ಯಾಯವು.

Comments are closed.