Sauptika Parva: Chapter 1

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸೌಪ್ತಿಕಪರ್ವ

ಸಂಜಯನಲ್ಲಿ ಧೃತರಾಷ್ಟ್ರನ ಪ್ರಶ್ನೆ (೧-೧೭). ಗಹನ ವನಕ್ಕೆ ಪಲಾಯನ ಮಾಡಿ ರಾತ್ರಿ ವಿಶ್ರಮಿಸಿಕೊಳ್ಳುತ್ತಿದ್ದಾಗ ಅಶ್ವತ್ಥಾಮನು ಹತ್ತಿರದಲ್ಲಿಯೇ ಆಲದ ಮರದ ಮೇಲೆ ಮಲಗಿದ್ದ ಸಹಸ್ರಾರು ಕಾಗೆಗಳನ್ನು ಗೂಬೆಯೊಂದು ಆಕ್ರಮಣಿಸಿ ಕೊಂದುದನ್ನು ನೋಡಿದುದು (೧೮-೪೩). ಆ ಗೂಬೆಯಂತೆ ತಾನೂ ಪ್ರತೀಕಾರವನ್ನೆಸಗಬೇಕು ಎಂದು ಅಶ್ವತ್ಥಾಮನು ತನ್ನಲ್ಲಿಯೇ ಯೋಚಿಸಿದುದು (೪೪-೫೩). ಅಶ್ವತ್ಥಾಮನು ತಾನು ಮಾಡಿದ ನಿಶ್ಚಯವನ್ನು ಮಲಗಿದ್ದ ಕೃಪ-ಕೃತವರ್ಮರನ್ನು ಎಬ್ಬಿಸಿ ತಿಳಿಸಿ, ಮುಂದೇನು ಮಾಡಬೇಕೆಂದು ಅವರ ಸಲಹೆಯನ್ನು ಕೇಳಿದುದು (೫೪-೬೬).

10001001 ಸಂಜಯ ಉವಾಚ|

10001001a ತತಸ್ತೇ ಸಹಿತಾ ವೀರಾಃ ಪ್ರಯಾತಾ ದಕ್ಷಿಣಾಮುಖಾಃ|

10001001c ಉಪಾಸ್ತಮಯವೇಲಾಯಾಂ ಶಿಬಿರಾಭ್ಯಾಶಮಾಗತಾಃ||

ಸಂಜಯನು ಹೇಳಿದನು: “ಅನಂತರ ಆ ವೀರರು ಒಟ್ಟಾಗಿ ದಕ್ಷಿಣಾಭಿಮುಖವಾಗಿ ಪ್ರಯಾಣಿಸುತ್ತಾ ಸೂರ್ಯಾಸ್ತದ ವೇಳೆಯಲ್ಲಿ ಶಿಬಿರಗಳ ಬಳಿ ಆಗಮಿಸಿದರು.

10001002a ವಿಮುಚ್ಯ ವಾಹಾಂಸ್ತ್ವರಿತಾ ಭೀತಾಃ ಸಮಭವಂಸ್ತದಾ|

10001002c ಗಹನಂ ದೇಶಮಾಸಾದ್ಯ ಪ್ರಚ್ಚನ್ನಾ ನ್ಯವಿಶಂತ ತೇ||

ಭೀತರಾದ ಅವರು ಗಹನವನಪ್ರದೇಶವನ್ನು ಸೇರಿ ತ್ವರೆಮಾಡಿ ಕುದುರೆಗಳನ್ನು ಬಿಚ್ಚಿ ಯಾರಿಗೂ ಕಾಣದಂತೆ ಒಂದೆಡೆ ಕುಳಿತುಕೊಂಡರು.

10001003a ಸೇನಾನಿವೇಶಮಭಿತೋ ನಾತಿದೂರಮವಸ್ಥಿತಾಃ|

10001003c ನಿಕೃತ್ತಾ ನಿಶಿತೈಃ ಶಸ್ತ್ರೈಃ ಸಮಂತಾತ್ ಕ್ಷತವಿಕ್ಷತಾಃ||

ಸೇನಾಡೇರೆಗಳ ಅನತಿದೂರದಲ್ಲಿಯೇ ಕುಳಿತುಕೊಂಡಿದ್ದ ಅವರು ನಿಶಿತ ಶಸ್ತ್ರಗಳಿಂದ ಪ್ರಹೃತರಾಗಿ ಶರೀರಾದ್ಯಂತ ಕ್ಷತವಿಕ್ಷತರಾಗಿದ್ದರು.

10001004a ದೀರ್ಘಮುಷ್ಣಂ ಚ ನಿಃಶ್ವಸ್ಯ ಪಾಂಡವಾನನ್ವಚಿಂತಯನ್|

10001004c ಶ್ರುತ್ವಾ ಚ ನಿನದಂ ಘೋರಂ ಪಾಂಡವಾನಾಂ ಜಯೈಷಿಣಾಂ||

ಜಯೋಲ್ಲಾಸಿತ ಪಾಂಡವರ ಘೋರ ನಿನಾದವನ್ನು ಕೇಳಿ ಪಾಂಡವರನ್ನೇ ಬಾರಿ ಬಾರಿಗೂ ಚಿಂತಿಸುತ್ತಾ ಸುದೀರ್ಘ ಬಿಸಿಬಿಸಿ ನಿಟ್ಟುಸಿರನ್ನು ಬಿಡುತ್ತಿದ್ದರು.

10001005a ಅನುಸಾರಭಯಾದ್ಭೀತಾಃ ಪ್ರಾಙ್ಮುಖಾಃ ಪ್ರಾದ್ರವನ್ಪುನಃ|

10001005c ತೇ ಮುಹೂರ್ತಂ ತತೋ ಗತ್ವಾ ಶ್ರಾಂತವಾಹಾಃ ಪಿಪಾಸಿತಾಃ||

ಅವರೇನಾದರೂ ತಮ್ಮನ್ನು ಹಿಂಬಾಲಿಸಿ ಬರಬಹುದೆಂಬ ಭಯದಿಂದ ಪುನಃ ಪೂರ್ವಾಭಿಮುಖವಾಗಿ ಓಡಿದರು. ಮುಹೂರ್ತಕಾಲ ಹೋಗಲು ಕುದುರೆಗಳು ಬಳಲಿದವು ಮತ್ತು ಬಾಯಾರಿದವು.

10001006a ನಾಮೃಷ್ಯಂತ ಮಹೇಷ್ವಾಸಾಃ ಕ್ರೋಧಾಮರ್ಷವಶಂ ಗತಾಃ|

10001006c ರಾಜ್ಞೋ ವಧೇನ ಸಂತಪ್ತಾ ಮುಹೂರ್ತಂ ಸಮವಸ್ಥಿತಾಃ||

ರಾಜನ ವಧೆಯಿಂದುಂಟಾದ ಕೋಪವನ್ನು ಸಹಿಸಿಕೊಳ್ಳಲಾಗದೇ ಆ ಮಹೇಷ್ವಾಸರು ಸಂತಪ್ತರಾಗಿ ಮುಹೂರ್ತಕಾಲ ಸುಮ್ಮನೇ ಕುಳಿತುಕೊಂಡರು.”

10001007 ಧೃತರಾಷ್ಟ್ರ ಉವಾಚ|

10001007a ಅಶ್ರದ್ಧೇಯಮಿದಂ ಕರ್ಮ ಕೃತಂ ಭೀಮೇನ ಸಂಜಯ|

10001007c ಯತ್ಸ ನಾಗಾಯುತಪ್ರಾಣಃ ಪುತ್ರೋ ಮಮ ನಿಪಾತಿತಃ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಭೀಮನು ಹತ್ತು ಸಾವಿರ ಆನೆಗಳ ಬಲವನ್ನು ಹೊಂದಿದ್ದ ನನ್ನ ಮಗನನನ್ನು ಸಂಹರಿಸುವ ಕಾರ್ಯವನ್ನು ಮಾಡಿದನು ಎನ್ನುವುದನ್ನು ನಂಬಲಿಕ್ಕೇ ಆಗುತ್ತಿಲ್ಲ!

10001008a ಅವಧ್ಯಃ ಸರ್ವಭೂತಾನಾಂ ವಜ್ರಸಂಹನನೋ ಯುವಾ|

10001008c ಪಾಂಡವೈಃ ಸಮರೇ ಪುತ್ರೋ ನಿಹತೋ ಮಮ ಸಂಜಯ||

ಸರ್ವಭೂತಗಳಿಗೂ ಅವಧ್ಯನೆನಿಸಿಕೊಂಡಿದ್ದ, ವಜ್ರಸಂಹನನಾದ ನನ್ನ ಯುವ ಮಗನು ಸಮರದಲ್ಲಿ ಪಾಂಡವರಿಂದ ಹತನಾದನು ಸಂಜಯ!

10001009a ನ ದಿಷ್ಟಮಭ್ಯತಿಕ್ರಾಂತುಂ ಶಕ್ಯಂ ಗಾವಲ್ಗಣೇ ನರೈಃ|

10001009c ಯತ್ಸಮೇತ್ಯ ರಣೇ ಪಾರ್ಥೈಃ ಪುತ್ರೋ ಮಮ ನಿಪಾತಿತಃ||

ಗಾವಲ್ಗಣೇ! ರಣದಲ್ಲಿ ಪಾರ್ಥರನ್ನು ಎದುರಿಸಿ ನನ್ನ ಮಗನು ಕೆಳಗುರುಳಿದನೆಂದರೆ ನರರಿಗೆ ದೈವವನ್ನು ಮೀರಿ ನಡೆಯಲು ಶಕ್ಯವಿಲ್ಲವೆಂದಾಯಿತು.

10001010a ಅದ್ರಿಸಾರಮಯಂ ನೂನಂ ಹೃದಯಂ ಮಮ ಸಂಜಯ|

10001010c ಹತಂ ಪುತ್ರಶತಂ ಶ್ರುತ್ವಾ ಯನ್ನ ದೀರ್ಣಂ ಸಹಸ್ರಧಾ||

ಸಂಜಯ! ನೂರು ಪುತ್ರರೂ ಹತರಾದರೆನ್ನುವುದನ್ನು ಕೇಳಿಯೂ ನನ್ನ ಹೃದಯವು ಸಹಸ್ರ ಚೂರುಗಳಾಗಿ ಒಡೆದು ಹೋಗಿಲ್ಲವೆಂದರೆ ನನ್ನ ಈ ಹೃದಯವು ನಿಜವಾಗಿಯೂ ಉಕ್ಕಿನಿಂದ ಮಾಡಿದ್ದಿರಬಹುದು!

10001011a ಕಥಂ ಹಿ ವೃದ್ಧಮಿಥುನಂ ಹತಪುತ್ರಂ ಭವಿಷ್ಯತಿ|

10001011c ನ ಹ್ಯಹಂ ಪಾಂಡವೇಯಸ್ಯ ವಿಷಯೇ ವಸ್ತುಮುತ್ಸಹೇ||

ಪುತ್ರರು ಹತರಾದ ಈ ವೃದ್ಧದಂಪತಿಗಳು ಹೇಗೆ ಜೀವಿಸಿರುವರು? ಪಾಂಡವೇಯನ ದೇಶದಲ್ಲಿ ಇರಲು ನನಗೆ ಸ್ವಲ್ಪವೂ ಇಷ್ಟವಿಲ್ಲ!

10001012a ಕಥಂ ರಾಜ್ಞಃ ಪಿತಾ ಭೂತ್ವಾ ಸ್ವಯಂ ರಾಜಾ ಚ ಸಂಜಯ|

10001012c ಪ್ರೇಷ್ಯಭೂತಃ ಪ್ರವರ್ತೇಯಂ ಪಾಂಡವೇಯಸ್ಯ ಶಾಸನಾತ್||

ಸಂಜಯ! ರಾಜನ ಪಿತನಾಗಿದ್ದವನು ಮತ್ತು ಸ್ವಯಂ ರಾಜನಾಗಿದ್ದವನು ಈಗ ಪಾಂಡವೇಯನ ಶಾಸನಕ್ಕೊಳಪಟ್ಟು ಹೇಗೆ ತಾನೇ ಸೇವಕನಂತೆ ಇರಬಹುದು?

10001013a ಆಜ್ಞಾಪ್ಯ ಪೃಥಿವೀಂ ಸರ್ವಾಂ ಸ್ಥಿತ್ವಾ ಮೂರ್ಧ್ನಿ ಚ ಸಂಜಯ|

10001013c ಕಥಮದ್ಯ ಭವಿಷ್ಯಾಮಿ ಪ್ರೇಷ್ಯಭೂತೋ ದುರಂತಕೃತ್||

ಸಂಜಯ! ಪೃಥ್ವಿಯೆಲ್ಲಕ್ಕೂ ಆಜ್ಞಾದಾಯಕನಾಗಿದ್ದೆನು ಮತ್ತು ಎಲ್ಲ ರಾಜರ ತಲೆಗಳನ್ನೂ ಮೆಟ್ಟಿನಿಂತಿದ್ದೆನು. ಇಂದು ಈ ದುರಂತಕ್ಕೆ ಕಾರಣನಾದ ನಾನು ಹೇಗೆ ಸೇವಕನಾಗಿರಬಲ್ಲೆ?

10001014a ಕಥಂ ಭೀಮಸ್ಯ ವಾಕ್ಯಾನಿ ಶ್ರೋತುಂ ಶಕ್ಷ್ಯಾಮಿ ಸಂಜಯ|

10001014c ಯೇನ ಪುತ್ರಶತಂ ಪೂರ್ಣಮೇಕೇನ ನಿಹತಂ ಮಮ||

ಸಂಜಯ! ನನ್ನ ನೂರು ಮಕ್ಕಳನ್ನೂ ಒಬ್ಬನೇ ಸಂಪೂರ್ಣವಾಗಿ ಸಂಹರಿಸಿರುವ ಆ ಭೀಮನ ವಾಕ್ಯಗಳನ್ನು ಕೇಳಲು ನಾನು ಹೇಗೆ ತಾನೇ ಶಕ್ಯ?

10001015a ಕೃತಂ ಸತ್ಯಂ ವಚಸ್ತಸ್ಯ ವಿದುರಸ್ಯ ಮಹಾತ್ಮನಃ|

10001015c ಅಕುರ್ವತಾ ವಚಸ್ತೇನ ಮಮ ಪುತ್ರೇಣ ಸಂಜಯ||

ಸಂಜಯ! ನನ್ನ ಮಗನು ನಾನು ಹೇಳಿದ ಮಾತನ್ನು ಕೇಳದೇ ಮಹಾತ್ಮ ವಿದುರನು ಹೇಳಿದ ಮಾತನ್ನು ಸತ್ಯವನ್ನಾಗಿಸಿದನು!

10001016a ಅಧರ್ಮೇಣ ಹತೇ ತಾತ ಪುತ್ರೇ ದುರ್ಯೋಧನೇ ಮಮ|

10001016c ಕೃತವರ್ಮಾ ಕೃಪೋ ದ್ರೌಣಿಃ ಕಿಮಕುರ್ವತ ಸಂಜಯ||

ಸಂಜಯ! ಅಧರ್ಮದಿಂದ ನನ್ನ ಮಗ ದುರ್ಯೋಧನನು ಹತನಾಗಲು ಕೃತವರ್ಮ, ಕೃಪ ಮತ್ತು ದ್ರೌಣಿಯರು ಏನು ಮಾಡಿದರು?”

10001017 ಸಂಜಯ ಉವಾಚ|

10001017a ಗತ್ವಾ ತು ತಾವಕಾ ರಾಜನ್ನಾತಿದೂರಮವಸ್ಥಿತಾಃ|

10001017c ಅಪಶ್ಯಂತ ವನಂ ಘೋರಂ ನಾನಾದ್ರುಮಲತಾಕುಲಂ||

ಸಂಜಯನು ಹೇಳಿದನು: “ರಾಜನ್! ನಿನ್ನವರು ಕುಳಿತಿದ್ದ ಅನತಿ ದೂರದಲ್ಲಿ ನಾನಾ ವೃಕ್ಷ-ಲತೆಗಳಿಂದ ಕೂಡಿದ್ದ ಘೋರವನವೊಂದನ್ನು ನೋಡಿದರು.

10001018a ತೇ ಮುಹೂರ್ತಂ ತು ವಿಶ್ರಮ್ಯ ಲಬ್ಧತೋಯೈರ್ಹಯೋತ್ತಮೈಃ|

10001018c ಸೂರ್ಯಾಸ್ತಮಯವೇಲಾಯಾಮಾಸೇದುಃ ಸುಮಹದ್ವನಂ||

ಮುಹೂರ್ತಕಾಲ ವಿಶ್ರಮಿಸಿದ ಅವರು ಉತ್ತಮ ಕುದುರೆಗಳಿಗೆ ನೀರುಕುಡಿಸಿ ಸೂರ್ಯಾಸ್ತದ ಸಮಯದಲ್ಲಿ ಆ ಮಹಾವನವನ್ನು ಪ್ರವೇಶಿಸಿದರು.

10001019a ನಾನಾಮೃಗಗಣೈರ್ಜುಷ್ಟಂ ನಾನಾಪಕ್ಷಿಸಮಾಕುಲಂ|

10001019c ನಾನಾದ್ರುಮಲತಾಚ್ಚನ್ನಂ ನಾನಾವ್ಯಾಲನಿಷೇವಿತಂ||

10001020a ನಾನಾತೋಯಸಮಾಕೀರ್ಣಂ ತಡಾಗೈರುಪಶೋಭಿತಂ|

10001020c ಪದ್ಮಿನೀಶತಸಂಚನ್ನಂ ನೀಲೋತ್ಪಲಸಮಾಯುತಂ||

ಆ ಅರಣ್ಯದಲ್ಲಿ ನಾನಾ ಮೃಗಗಣಗಳು ವಾಸಿಸುತ್ತಿದ್ದವು. ನಾನಾ ಪಕ್ಷಿಸಮಾಕುಲಗಳಿದ್ದವು. ನಾನಾ ದ್ರುಮಲತೆಗಳಿಂದ ಮುಚ್ಚಿಕೊಂಡಿತ್ತು. ನಾನಾ ವಿಷಜಂತುಗಳಿಂದ ತುಂಬಿತ್ತು. ನೂರಾರು ಕಮಲಪುಷ್ಪಗಳಿಂದ ಮತ್ತು ನೀಲೋತ್ಪಲಗಳಿಂದ ಮುಚ್ಚಿಹೋಗಿದ್ದ ನಾನಾವಿಧದ ಸರೋವರ-ಕೊಳಗಳಿಂದ ಶೋಭಿಸುತ್ತಿತ್ತು.

10001021a ಪ್ರವಿಶ್ಯ ತದ್ವನಂ ಘೋರಂ ವೀಕ್ಷಮಾಣಾಃ ಸಮಂತತಃ|

10001021c ಶಾಖಾಸಹಸ್ರಸಂಚನ್ನಂ ನ್ಯಗ್ರೋಧಂ ದದೃಶುಸ್ತತಃ||

ಆ ಘೋರ ವನವನ್ನು ಪ್ರವೇಶಿಸಿ ಸುತ್ತಲೂ ನೋಡುತ್ತಿದ್ದ ಅವರು ಸಹಸ್ರ ರೆಂಬೆಗಳಿಂದ ವಿಶಾಲವಾಗಿ ಹರಡಿದ್ದ ಆಲದ ಮರವನ್ನು ಕಂಡರು.

10001022a ಉಪೇತ್ಯ ತು ತದಾ ರಾಜನ್ನ್ಯಗ್ರೋಧಂ ತೇ ಮಹಾರಥಾಃ|

10001022c ದದೃಶುರ್ದ್ವಿಪದಾಂ ಶ್ರೇಷ್ಠಾಃ ಶ್ರೇಷ್ಠಂ ತಂ ವೈ ವನಸ್ಪತಿಂ||

ರಾಜನ್! ಮನುಜರಲ್ಲಿ ಶ್ರೇಷ್ಠ ಆ ಮಹಾರಥರು ಆಲದಮರದ ಬಳಿಹೋಗಿ ಆ ಶ್ರೇಷ್ಠ ವನಸ್ಪತಿಯನ್ನು ನೋಡಿದರು.

10001023a ತೇಽವತೀರ್ಯ ರಥೇಭ್ಯಸ್ತು ವಿಪ್ರಮುಚ್ಯ ಚ ವಾಜಿನಃ|

10001023c ಉಪಸ್ಪೃಶ್ಯ ಯಥಾನ್ಯಾಯಂ ಸಂಧ್ಯಾಮನ್ವಾಸತ ಪ್ರಭೋ||

ಅವರು ರಥಗಳಿಂದ ಕೆಳಗಿಳಿದು ಕುದುರೆಗಳನ್ನು ಬಿಚ್ಚಿದರು. ಪ್ರಭೋ! ಯಥಾನ್ಯಾಯವಾಗಿ ಅವರು ಸ್ನಾನಾಚಮನಾದಿಗಳನ್ನು ಮಾಡಿ ಸಂಧ್ಯಾವಂದನೆಯನ್ನೂ ಪೂರೈಸಿದರು.

10001024a ತತೋಽಸ್ತಂ ಪರ್ವತಶ್ರೇಷ್ಠಮನುಪ್ರಾಪ್ತೇ ದಿವಾಕರೇ|

10001024c ಸರ್ವಸ್ಯ ಜಗತೋ ಧಾತ್ರೀ ಶರ್ವರೀ ಸಮಪದ್ಯತ||

ಆಗ ದಿವಾಕರನು ಪರ್ವತಶ್ರೇಷ್ಠನನ್ನು ಸೇರಿ ಅಸ್ತನಾಗಲು ಸರ್ವ ಜಗತ್ತಿನ ಧಾತ್ರೀ ಶರ್ವರಿಯು ಆವರಿಸಿದಳು.

10001025a ಗ್ರಹನಕ್ಷತ್ರತಾರಾಭಿಃ ಪ್ರಕೀರ್ಣಾಭಿರಲಂಕೃತಂ|

10001025c ನಭೋಽಂಶುಕಮಿವಾಭಾತಿ ಪ್ರೇಕ್ಷಣೀಯಂ ಸಮಂತತಃ||

ಗ್ರಹನಕ್ಷತ್ರತಾರೆಗಳಿಂದ ಅಲಂಕೃತವಾಗಿ ಹರಡಿದ್ದ ನಭೆಯು ಅಂಶುಕ[1]ದಂತೆ ಎಲ್ಲೆಡೆ ಪ್ರೇಕ್ಷಣೀಯವಾಗಿ ಹೊಳೆಯುತ್ತಿತ್ತು.

10001026a ಈಷಚ್ಚಾಪಿ ಪ್ರವಲ್ಗಂತಿ ಯೇ ಸತ್ತ್ವಾ ರಾತ್ರಿಚಾರಿಣಃ|

10001026c ದಿವಾಚರಾಶ್ಚ ಯೇ ಸತ್ತ್ವಾಸ್ತೇ ನಿದ್ರಾವಶಮಾಗತಾಃ||

ರಾತ್ರಿಯಲ್ಲಿ ಸಂಚರಿಸುವ ಪ್ರಾಣಿಗಳು ಇಚ್ಛಾನುಸಾರವಾಗಿ ಸಂಚರಿಸಿ ಕೂಗತೊಡಗಿದವು. ಹಗಲಲ್ಲಿ ಸಂಚರಿಸುವ ಪ್ರಾಣಿಗಳು ನಿದ್ರಾವಶವಾದವು.

10001027a ರಾತ್ರಿಂಚರಾಣಾಂ ಸತ್ತ್ವಾನಾಂ ನಿನಾದೋಽಭೂತ್ಸುದಾರುಣಃ|

10001027c ಕ್ರವ್ಯಾದಾಶ್ಚ ಪ್ರಮುದಿತಾ ಘೋರಾ ಪ್ರಾಪ್ತಾ ಚ ಶರ್ವರೀ||

ಕತ್ತಲೆಯು ಕವಿಯುತ್ತಲೇ ರಾತ್ರಿ ಸಂಚರಿಸುವ ಮಾಂಸಾಹಾರಿ ಪ್ರಾಣಿಗಳು ಸಂತೋಷದಿಂದ ಘೋರ ಸುದಾರುಣ ಕೂಗುಗಳನ್ನು ಕೂಗತೊಡಗಿದವು.

10001028a ತಸ್ಮಿನ್ರಾತ್ರಿಮುಖೇ ಘೋರೇ ದುಃಖಶೋಕಸಮನ್ವಿತಾಃ|

10001028c ಕೃತವರ್ಮಾ ಕೃಪೋ ದ್ರೌಣಿರುಪೋಪವಿವಿಶುಃ ಸಮಂ||

ಆ ಘೋರ ರಾತ್ರಿಯ ಪ್ರಾರಂಭದಲ್ಲಿ ದುಃಖಶೋಕಸಮನ್ವಿತರಾದ ಕೃತವರ್ಮ, ಕೃಪ, ಮತ್ತು ದ್ರೌಣಿಯರು ಒಂದೇ ಸಾಲಿನಲ್ಲಿ ಕುಳಿತುಕೊಂಡರು.

10001029a ತತ್ರೋಪವಿಷ್ಟಾಃ ಶೋಚಂತೋ ನ್ಯಗ್ರೋಧಸ್ಯ ಸಮಂತತಃ|

10001029c ತಮೇವಾರ್ಥಮತಿಕ್ರಾಂತಂ ಕುರುಪಾಂಡವಯೋಃ ಕ್ಷಯಂ||

ಆಲದ ಮರದ ಸಮೀಪದಲ್ಲಿ ಕುಳಿತಿದ್ದ ಅವರು ಅತಿಕ್ರಮಿಸಲು ಸಾಧ್ಯವಾಗದ ಕುರುಪಾಂಡವರ ಕ್ಷಯದ ಕುರಿತೇ ಮಾತನಾಡಿಕೊಳ್ಳುತ್ತಾ ಶೋಕಿಸುತ್ತಿದ್ದರು.

10001030a ನಿದ್ರಯಾ ಚ ಪರೀತಾಂಗಾ ನಿಷೇದುರ್ಧರಣೀತಲೇ|

10001030c ಶ್ರಮೇಣ ಸುದೃಢಂ ಯುಕ್ತಾ ವಿಕ್ಷತಾ ವಿವಿಧೈಃ ಶರೈಃ||

ವಿವಿಧ ಶರಗಳಿಂದ ಗಾಢವಾಗಿ ಕ್ಷತವಿಕ್ಷತರಾಗಿದ್ದ ಅವರು ಬಳಲಿದ್ದು ನಿದ್ದೆಯಿಂದ ತೂಕಡಿಸುತ್ತಾ ನೆಲದ ಮೇಲೆಯೇ ಕುಳಿತಿದ್ದರು.

10001031a ತತೋ ನಿದ್ರಾವಶಂ ಪ್ರಾಪ್ತೌ ಕೃಪಭೋಜೌ ಮಹಾರಥೌ|

10001031c ಸುಖೋಚಿತಾವದುಃಖಾರ್ಹೌ ನಿಷಣ್ಣೌ ಧರಣೀತಲೇ|

10001031e ತೌ ತು ಸುಪ್ತೌ ಮಹಾರಾಜ ಶ್ರಮಶೋಕಸಮನ್ವಿತೌ||

ಮಹಾರಾಜ! ಆಗ ಸುಖೋಚಿತರಾಗಿದ್ದ ಮತ್ತು ದುಃಖಕ್ಕೆ ಅನರ್ಹರಾಗಿದ್ದ ಮಹಾರಥ ಕೃಪ-ಕೃತವರ್ಮರು ನಿದ್ರಾವಶರಾಗಿ ಆಯಾಸ-ಶೋಕಸಮನ್ವಿತರಾಗಿ ನೆಲದ ಮೇಲೆಯೇ ಮಲಗಿಕೊಂಡರು.

10001032a ಕ್ರೋಧಾಮರ್ಷವಶಂ ಪ್ರಾಪ್ತೋ ದ್ರೋಣಪುತ್ರಸ್ತು ಭಾರತ|

10001032c ನೈವ ಸ್ಮ ಸ ಜಗಾಮಾಥ ನಿದ್ರಾಂ ಸರ್ಪ ಇವ ಶ್ವಸನ್||

ಭಾರತ! ಆದರೆ ಕ್ರೋಧ-ಅಸಹನೆಗಳ ವಶನಾಗಿದ್ದ ದ್ರೋಣಪುತ್ರನಿಗೆ ಮಾತ್ರ ನಿದ್ದೆಯು ಬರಲಿಲ್ಲ. ಅವನು ಸರ್ಪದಂತೆ ಸುದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ಎಚ್ಚೆತ್ತೇ ಇದ್ದನು.

10001033a ನ ಲೇಭೇ ಸ ತು ನಿದ್ರಾಂ ವೈ ದಹ್ಯಮಾನೋಽತಿಮನ್ಯುನಾ|

10001033c ವೀಕ್ಷಾಂ ಚಕ್ರೇ ಮಹಾಬಾಹುಸ್ತದ್ವನಂ ಘೋರದರ್ಶನಂ||

ಅತಿಕೋಪದಿಂದ ಸುಡುತ್ತಾ ನಿದ್ರೆಯೇ ಬರದಿದ್ದ ಆ ಮಹಾಬಾಹುವು ಘೋರವಾಗಿ ಕಾಣುತ್ತಿದ್ದ ಆ ವನವನ್ನೇ ವೀಕ್ಷಿಸುತ್ತಿದ್ದನು.

10001034a ವೀಕ್ಷಮಾಣೋ ವನೋದ್ದೇಶಂ ನಾನಾಸತ್ತ್ವೈರ್ನಿಷೇವಿತಂ|

10001034c ಅಪಶ್ಯತ ಮಹಾಬಾಹುರ್ನ್ಯಗ್ರೋಧಂ ವಾಯಸಾಯುತಂ||

ನಾನಾ ಪ್ರಾಣಿಗಳಿಂದ ಕೂಡಿದ್ದ ಆ ವನಪ್ರದೇಶವನ್ನು ನೋಡುತ್ತಿದ್ದ ಆ ಮಹಾಬಾಹುವು ಆಲದ ಮರದಲ್ಲಿ ವಾಸಿಸುತ್ತಿದ್ದ ಕಾಗೆಗಳ ಗುಂಪನ್ನು ಕಂಡನು.

10001035a ತತ್ರ ಕಾಕಸಹಸ್ರಾಣಿ ತಾಂ ನಿಶಾಂ ಪರ್ಯಣಾಮಯನ್|

10001035c ಸುಖಂ ಸ್ವಪಂತಃ ಕೌರವ್ಯ ಪೃಥಕ್ಪೃಥಗಪಾಶ್ರಯಾಃ||

ಕೌರವ್ಯ! ಸಹಸ್ರಾರು ಕಾಗೆಗಳು ಆ ಮರದ ಪ್ರತ್ಯೇಕ ಪ್ರತ್ಯೇಕ ರೆಂಬೆಗಳನ್ನು ಆಶ್ರಯಿಸಿ ಸುಖವಾಗಿ ನಿದ್ರೆಮಾಡುತ್ತಾ ರಾತ್ರಿಯನ್ನು ಕಳೆಯುತ್ತಿದ್ದವು.

10001036a ಸುಪ್ತೇಷು ತೇಷು ಕಾಕೇಷು ವಿಸ್ರಬ್ಧೇಷು ಸಮಂತತಃ|

10001036c ಸೋಽಪಶ್ಯತ್ಸಹಸಾಯಾಂತಮುಲೂಕಂ ಘೋರದರ್ಶನಂ||

10001037a ಮಹಾಸ್ವನಂ ಮಹಾಕಾಯಂ ಹರ್ಯಕ್ಷಂ ಬಭ್ರುಪಿಂಗಲಂ|

10001037c ಸುದೀರ್ಘಘೋಣಾನಖರಂ ಸುಪರ್ಣಮಿವ ವೇಗಿನಂ||

ಸುತ್ತಲೂ ನಿಃಶಬ್ಧವಾಗಿದ್ದು ಆ ಕಾಗೆಗಳು ಮಲಗಿರಲು ಒಮ್ಮೆಲೇ ಅಲ್ಲಿ ಮಹಾಸ್ವರದ, ಮಹಾಕಾಯದ, ಹಳದೀ ಬಣ್ಣದ ಕಣ್ಣುಳ್ಳ, ಪಿಂಗಲ ಹುಬ್ಬುಗಳುಳ್ಳ, ಸುದೀರ್ಘ ಕೊಕ್ಕು-ಉಗುರುಗಳುಳ್ಳ, ಗರುಡನಂತಹ ವೇಗವುಳ್ಳ ಘೋರ ಗೂಬೆಯೊಂದು ಕಂಡುಬಂದಿತು.

10001038a ಸೋಽಥ ಶಬ್ದಂ ಮೃದುಂ ಕೃತ್ವಾ ಲೀಯಮಾನ ಇವಾಂಡಜಃ|

10001038c ನ್ಯಗ್ರೋಧಸ್ಯ ತತಃ ಶಾಖಾಂ ಪ್ರಾರ್ಥಯಾಮಾಸ ಭಾರತ||

ಆಗ ಶಬ್ಧವನ್ನು ಮೃದುವಾಗಿಸಿ, ಅಡಗಿಕೊಂಡೇ ಆ ಪಕ್ಷಿಯು ಆಲದಮರದ ರೆಂಬೆಗಳ ಮೇಲೆ ಹಾರಿ ಹುಡುಕತೊಡಗಿತು.

10001039a ಸಂನಿಪತ್ಯ ತು ಶಾಖಾಯಾಂ ನ್ಯಗ್ರೋಧಸ್ಯ ವಿಹಂಗಮಃ|

10001039c ಸುಪ್ತಾಂಜಘಾನ ಸುಬಹೂನ್ವಾಯಸಾನ್ವಾಯಸಾಂತಕಃ||

ಆಲದಮರದ ರೆಂಬೆಯಿಂದ ರೆಂಬೆಗೆ ಹಾರುತ್ತಾ ಆ ಕಾಗೆಗಳ ಅಂತಕ ಪಕ್ಷಿಯು ಮಲಗಿದ್ದ ಅನೇಕ ಕಾಗೆಗಳನ್ನು ಸಂಹರಿಸಿತು.

10001040a ಕೇಷಾಂ ಚಿದಚ್ಚಿನತ್ಪಕ್ಷಾನ್ ಶಿರಾಂಸಿ ಚ ಚಕರ್ತ ಹ|

10001040c ಚರಣಾಂಶ್ಚೈವ ಕೇಷಾಂ ಚಿದ್ಬಭಂಜು ಚರಣಾಯುಧಃ||

ಕಾಲುಗಳೇ ಆಯುಧವಾಗಿದ್ದ ಆ ಗೂಬೆಯು ಕೆಲವು ಕಾಗೆಗಳ ರೆಕ್ಕೆಗಳನ್ನು ಕತ್ತರಿಸಿತು. ಕೆಲವು ಕಾಗೆಗಳ ತಲೆಗಳನ್ನು ಕತ್ತರಿಸಿತು. ಕೆಲವು ಕಾಗೆಗಳ ಕಾಲುಗಳನ್ನು ಮುರಿಯಿತು.

10001041a ಕ್ಷಣೇನಾಹನ್ಸ ಬಲವಾನ್ಯೇಽಸ್ಯ ದೃಷ್ಟಿಪಥೇ ಸ್ಥಿತಾಃ|

10001041c ತೇಷಾಂ ಶರೀರಾವಯವೈಃ ಶರೀರೈಶ್ಚ ವಿಶಾಂ ಪತೇ|

10001041e ನ್ಯಗ್ರೋಧಮಂಡಲಂ ಸರ್ವಂ ಸಂಚನ್ನಂ ಸರ್ವತೋಽಭವತ್||

ವಿಶಾಂಪತೇ! ಕ್ಷಣದಲ್ಲಿಯೇ ಆ ಬಲವಾನ್ ಪಕ್ಷಿಯು ತನ್ನ ದೃಷ್ಟಿ ಪಥದಲ್ಲಿ ಬಂದ ಕಾಗೆಗಳೆಲ್ಲವನ್ನೂ ಕೊಂದುಹಾಕಿತು. ಆ ವಟವೃಕ್ಷದ ಮಡಲವು ಸತ್ತುಹೋದ ಕಾಗೆಗಳಿಂದಲೂ ಮತ್ತು ಅವುಗಳ ಛಿನ್ನ-ಛಿನ್ನ ಅವಯವಗಳಿಂದಲೂ ತುಂಬಿಹೋಯಿತು.

10001042a ತಾಂಸ್ತು ಹತ್ವಾ ತತಃ ಕಾಕಾನ್ಕೌಶಿಕೋ ಮುದಿತೋಽಭವತ್|

10001042c ಪ್ರತಿಕೃತ್ಯ ಯಥಾಕಾಮಂ ಶತ್ರೂಣಾಂ ಶತ್ರುಸೂದನಃ||

ಶತ್ರುಸೂದನ ಆ ಗೂಬೆಯು ಬೇಕಾದಂತೆ ಶತ್ರುಗಳನ್ನು ಸಂಹರಿಸಿ ಪ್ರತೀಕಾರಮಾಡಿ ಆನಂದಿಸಿತು.

10001043a ತದ್ದೃಷ್ಟ್ವಾ ಸೋಪಧಂ ಕರ್ಮ ಕೌಶಿಕೇನ ಕೃತಂ ನಿಶಿ|

10001043c ತದ್ಭಾವಕೃತಸಂಕಲ್ಪೋ ದ್ರೌಣಿರೇಕೋ ವ್ಯಚಿಂತಯತ್||

ಗೂಬೆಯು ರಾತ್ರಿಯಲ್ಲಿ ವಂಚನೆಯಿಂದ ಮಾಡಿದ ಆ ಕ್ರೂರ ಕರ್ಮವನ್ನು ನೋಡಿದ ದ್ರೌಣಿಯು ತಾನೂ ಕೂಡ ಹಾಗೆ ಮಾಡಬೇಕೆಂಬ ಸಂಕಲ್ಪದಿಂದ ಒಬ್ಬನೇ ಯೋಚಿಸತೊಡಗಿದನು.

10001044a ಉಪದೇಶಃ ಕೃತೋಽನೇನ ಪಕ್ಷಿಣಾ ಮಮ ಸಂಯುಗೇ|

10001044c ಶತ್ರೂಣಾಂ ಕ್ಷಪಣೇ ಯುಕ್ತಃ ಪ್ರಾಪ್ತಕಾಲಶ್ಚ ಮೇ ಮತಃ||

“ಯುದ್ಧದಲ್ಲಿ ನಾನು ಏನು ಮಾಡಬೇಕೆನ್ನುವುದನ್ನು ಈ ಪಕ್ಷಿಯೇ ನನಗೆ ಉಪದೇಶಿಸಿದಂತಿದೆ! ಶತ್ರುಗಳ ವಿನಾಶಕಾರ್ಯಕ್ಕೆ ಸಮಯವು ಬಂದೊದಗಿದೆಯೆಂದು ನನಗನ್ನಿಸುತ್ತದೆ.

10001045a ನಾದ್ಯ ಶಕ್ಯಾ ಮಯಾ ಹಂತುಂ ಪಾಂಡವಾ ಜಿತಕಾಶಿನಃ|

10001045c ಬಲವಂತಃ ಕೃತೋತ್ಸಾಹಾ ಲಬ್ಧಲಕ್ಷಾಃ ಪ್ರಹಾರಿಣಃ|

10001045e ರಾಜ್ಞಃ ಸಕಾಶೇ ತೇಷಾಂ ಚ ಪ್ರತಿಜ್ಞಾತೋ ವಧೋ ಮಯಾ||

ವಿಜಯದ ಉತ್ಸಾಹದಿಂದ ಬಲವಂತರಾಗಿರುವ ಗುರಿಯಿಟ್ಟು ಪ್ರಹರಿಸಬಲ್ಲ ವಿಜಯಶಾಲಿ ಪಾಂಡವರನ್ನು ಸಂಹರಿಸಲು ಇಂದು ನನಗೆ ಶಕ್ಯವಿಲ್ಲ. ಆದರೆ ರಾಜ ದುರ್ಯೋಧನ ಸಮಕ್ಷಮದಲ್ಲಿ ಅವರನ್ನು ವಧಿಸುತ್ತೇನೆಂದು ನಾನು ಪ್ರತಿಜ್ಞೆಗೈದಿದ್ದೇನೆ.

10001046a ಪತಂಗಾಗ್ನಿಸಮಾಂ ವೃತ್ತಿಮಾಸ್ಥಾಯಾತ್ಮವಿನಾಶಿನೀಂ|

10001046c ನ್ಯಾಯತೋ ಯುಧ್ಯಮಾನಸ್ಯ ಪ್ರಾಣತ್ಯಾಗೋ ನ ಸಂಶಯಃ|

10001046e ಚದ್ಮನಾ ತು ಭವೇತ್ಸಿದ್ಧಿಃ ಶತ್ರೂಣಾಂ ಚ ಕ್ಷಯೋ ಮಹಾನ್||

ಆತ್ಮವಿನಾಶಕಾರಿ ಪತಂಗಾಗ್ನಿಸಮ ವೃತ್ತಿ[2]ಯನ್ನನುಸರಿಸಿ ಅವರೊಡನೆ ನ್ಯಾಯರೀತಿಯಲ್ಲಿ ಯುದ್ಧಮಾಡಿದರೆ ಪ್ರಾಣತ್ಯಾಗವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ವಂಚನೆಯಿಂದಲೂ ಶತ್ರುಗಳ ಮಹಾಕ್ಷಯವು ಸಾಧ್ಯವಾಗುತ್ತದೆ.

10001047a ತತ್ರ ಸಂಶಯಿತಾದರ್ಥಾದ್ಯೋಽರ್ಥೋ ನಿಃಸಂಶಯೋ ಭವೇತ್|

10001047c ತಂ ಜನಾ ಬಹು ಮನ್ಯಂತೇ ಯೇಽರ್ಥಶಾಸ್ತ್ರವಿಶಾರದಾಃ||

ಅರ್ಥಸಿದ್ಧಿಯ ಸಂಶಯವಿದ್ದಾಗ ನಿಃಸಂಶಯವಾಗಿ ಅರ್ಥಸಿದ್ಧಿಯನ್ನುಂಟು ಮಾಡಬಲ್ಲ ಮಾರ್ಗವನ್ನು ಅನುಸರಿಸಬೇಕೆಂದು ಅರ್ಥಶಾಸ್ತ್ರವಿಶಾರದ ಅನೇಕ ಜನರು ಅಭಿಪ್ರಾಯಪಡುತ್ತಾರೆ.

10001048a ಯಚ್ಚಾಪ್ಯತ್ರ ಭವೇದ್ವಾಚ್ಯಂ ಗರ್ಹಿತಂ ಲೋಕನಿಂದಿತಂ|

10001048c ಕರ್ತವ್ಯಂ ತನ್ಮನುಷ್ಯೇಣ ಕ್ಷತ್ರಧರ್ಮೇಣ ವರ್ತತಾ||

ಕ್ಷತ್ರಧರ್ಮವನ್ನು ಅನುಸರಿಸಿ ನಡೆದುಕೊಳ್ಳುವ ಮನುಷ್ಯನು ಲೋಕನಿಂದಿತವಾದುದನ್ನು ಅಥವಾ ಲೋಕವು ದೂಷಿತವೆಂದು ಹೇಳುವುದನ್ನು ಕರ್ತವ್ಯವೆಂದು ಪಾಲಿಸಬಹುದು.

10001049a ನಿಂದಿತಾನಿ ಚ ಸರ್ವಾಣಿ ಕುತ್ಸಿತಾನಿ ಪದೇ ಪದೇ|

10001049c ಸೋಪಧಾನಿ ಕೃತಾನ್ಯೇವ ಪಾಂಡವೈರಕೃತಾತ್ಮಭಿಃ||

ಅಕೃತಾತ್ಮ ಪಾಂಡವರೆಲ್ಲರೂ ಕೂಡ ಪದೇ ಪದೇ ನಿಂದನೀಯ ಕುತ್ಸಿತ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ.

10001050a ಅಸ್ಮಿನ್ನರ್ಥೇ ಪುರಾ ಗೀತೌ ಶ್ರೂಯೇತೇ ಧರ್ಮಚಿಂತಕೈಃ|

10001050c ಶ್ಲೋಕೌ ನ್ಯಾಯಮವೇಕ್ಷದ್ಭಿಸ್ತತ್ತ್ವಾರ್ಥಂ ತತ್ತ್ವದರ್ಶಿಭಿಃ||

ಇದೇ ವಿಷಯದ ಮೇಲೆ ಹಿಂದೆ ಧರ್ಮಚಿಂತಕ ತತ್ತ್ವದರ್ಶಿಗಳು ನ್ಯಾಯದೃಷ್ಟಿಯ ತತ್ತ್ವಾರ್ಥಗಳನ್ನು ಈ ಎರಡು ಶ್ಲೋಕಗಳ ಗೀತೆಯಲ್ಲಿ ತಿಳಿಸಿಕೊಟ್ಟಿದ್ದಾರೆ.

10001051a ಪರಿಶ್ರಾಂತೇ ವಿದೀರ್ಣೇ ಚ ಭುಂಜಾನೇ ಚಾಪಿ ಶತ್ರುಭಿಃ|

10001051c ಪ್ರಸ್ಥಾನೇ ಚ ಪ್ರವೇಶೇ ಚ ಪ್ರಹರ್ತವ್ಯಂ ರಿಪೋರ್ಬಲಂ||

ಶತ್ರುಗಳು ಬಳಲಿರುವಾಗ, ಚದುರಿಹೋಗಿರುವಾಗ, ಊಟಮಾಡುತ್ತಿರುವಾಗ, ಪ್ರಯಾಣಮಾಡುತ್ತಿರುವಾಗ, ಎಲ್ಲಿಯಾದರೂ ಪ್ರವೇಶಿಸುತ್ತಿರುವಾಗ ಶತ್ರುಸೇನೆಯನ್ನು ಸಂಹರಿಸಬಹುದು.

10001052a ನಿದ್ರಾರ್ತಮರ್ಧರಾತ್ರೇ ಚ ತಥಾ ನಷ್ಟಪ್ರಣಾಯಕಂ|

10001052c ಭಿನ್ನಯೋಧಂ ಬಲಂ ಯಚ್ಚ ದ್ವಿಧಾ ಯುಕ್ತಂ ಚ ಯದ್ಭವೇತ್||

ಅರ್ಥಸಿದ್ಧಿಯನ್ನು ಬಯಸುವ ಕ್ಷತ್ರಿಯನು ಅರ್ಧರಾತ್ರಿಯಲ್ಲಿ ನಿದ್ರಾವಶರಾಗಿರುವ, ಸೇನಾನಾಯಕನನ್ನು ಹೊಂದಿರದ, ಮತ್ತು ಯೋಧರು ಒಟ್ಟಾಗಿರದ ಸೇನೆಯನ್ನು ಸಂಹರಿಸಬೇಕು.”

10001053a ಇತ್ಯೇವಂ ನಿಶ್ಚಯಂ ಚಕ್ರೇ ಸುಪ್ತಾನಾಂ ಯುಧಿ ಮಾರಣೇ|

10001053c ಪಾಂಡೂನಾಂ ಸಹ ಪಾಂಚಾಲೈರ್ದ್ರೋಣಪುತ್ರಃ ಪ್ರತಾಪವಾನ್||

ಹೀಗೆ ಪ್ರತಾಪವಾನ್ ದ್ರೋಣಪುತ್ರನು ರಣದಲ್ಲಿ ಮಲಗಿರುವ ಪಾಂಡವರನ್ನು ಪಾಂಚಾಲರೊಂದಿಗೆ ಸಂಹರಿಸಲು ನಿಶ್ಚಯಿಸಿದನು.

10001054a ಸ ಕ್ರೂರಾಂ ಮತಿಮಾಸ್ಥಾಯ ವಿನಿಶ್ಚಿತ್ಯ ಮುಹುರ್ಮುಹುಃ|

10001054c ಸುಪ್ತೌ ಪ್ರಾಬೋಧಯತ್ತೌ ತು ಮಾತುಲಂ ಭೋಜಮೇವ ಚ||

ಆ ಕ್ರೂರ ಬುದ್ಧಿಯನ್ನನುಸರಿಸಿ ಪುನಃ ಪುನಃ ನಿರ್ಧಾರಕ್ಕೆ ಬಂದು ಅವನು ಮಲಗಿದ್ದ ಸೋದರಮಾವನನ್ನೂ ಬೋಜ ಕೃತವರ್ಮನನ್ನೂ ಎಚ್ಚರಿಸಿದನು.

10001055a ನೋತ್ತರಂ ಪ್ರತಿಪೇದೇ ಚ ತತ್ರ ಯುಕ್ತಂ ಹ್ರಿಯಾ ವೃತಃ|

10001055c ಸ ಮುಹೂರ್ತಮಿವ ಧ್ಯಾತ್ವಾ ಬಾಷ್ಪವಿಹ್ವಲಮಬ್ರವೀತ್||

ನಾಚಿಕೆಗೊಂಡ ಅವರು ಅವನಿಗೆ ಆಗ ಯುಕ್ತವಾದ ಯಾವ ಉತ್ತರವನ್ನೂ ಕೊಡದೇ ಹೋದರು. ಆಗ ಅಶ್ವತ್ಥಾಮನು ಮುಹೂರ್ತಕಾಲ ಯೋಚಿಸಿ ಕಣ್ಣೀರುತುಂಬಿ ವಿಹ್ವಲನಾಗಿ ಹೇಳಿದನು:

10001056a ಹತೋ ದುರ್ಯೋಧನೋ ರಾಜಾ ಏಕವೀರೋ ಮಹಾಬಲಃ|

10001056c ಯಸ್ಯಾರ್ಥೇ ವೈರಮಸ್ಮಾಭಿರಾಸಕ್ತಂ ಪಾಂಡವೈಃ ಸಹ||

“ಯಾರಿಗಾಗಿ ನಾವು ಪಾಂಡವರೊಂದಿಗೆ ವೈರವನ್ನು ಕಟ್ಟಿಕೊಂಡೆವೋ ಆ ಏಕವೀರ ಮಹಾಬಲ ರಾಜಾ ದುರ್ಯೋಧನನು ಹತನಾದನು.

10001057a ಏಕಾಕೀ ಬಹುಭಿಃ ಕ್ಷುದ್ರೈರಾಹವೇ ಶುದ್ಧವಿಕ್ರಮಃ|

10001057c ಪಾತಿತೋ ಭೀಮಸೇನೇನ ಏಕಾದಶಚಮೂಪತಿಃ||

ಹನ್ನೊಂದು ಅಕ್ಷೌಹಿಣೀ ಸೇನೆಗೆ ಒಡೆಯನಾಗಿದ್ದ ಆ ಶುದ್ಧವಿಕ್ರಮನು ಯುದ್ಧದಲ್ಲಿ ಅನೇಕ ಕ್ಷುದ್ರರಿಂದ ಸುತ್ತುವರೆಯಲ್ಪಟ್ಟು ಏಕಾಂಗಿಯಾಗಿ ಭೀಮಸೇನನಿಂದ ಕೆಳಗುರುಳಿಸಲ್ಪಟ್ಟನು.

10001058a ವೃಕೋದರೇಣ ಕ್ಷುದ್ರೇಣ ಸುನೃಶಂಸಮಿದಂ ಕೃತಂ|

10001058c ಮೂರ್ಧಾಭಿಷಿಕ್ತಸ್ಯ ಶಿರಃ ಪಾದೇನ ಪರಿಮೃದ್ನತಾ||

ಮೂರ್ಧಾಭಿಷಿಕ್ತನಾಗಿದ್ದವನ ಶಿರವನ್ನು ಪಾದದಿಂದ ಒದೆದು ವೃಕೋದರನು ಅತಿ ಹೀನ ಮತ್ತು ಕ್ರೂರ ಕಾರ್ಯವನ್ನೆಸಗಿದನು.

10001059a ವಿನರ್ದಂತಿ ಸ್ಮ ಪಾಂಚಾಲಾಃ ಕ್ಷ್ವೇಡಂತಿ ಚ ಹಸಂತಿ ಚ|

10001059c ಧಮಂತಿ ಶಂಖಾಂಶತಶೋ ಹೃಷ್ಟಾ ಘ್ನಂತಿ ಚ ದುಂದುಭೀನ್||

ಪಾಂಚಾಲರು ಸಂತೋಷದಿಂದ ಸಿಂಹನಾದಮಾಡುತ್ತಿದ್ದಾರೆ. ಅಟ್ಟಹಾಸದಿಂದ ನಗುತ್ತಿದ್ದಾರೆ. ಪ್ರಹೃಷ್ಟರಾಗಿ ನೂರಾರು ಶಂಖಗಳನ್ನು ಊದುತ್ತಿದ್ದಾರೆ. ದುಂದುಭಿಗಳನ್ನು ಬಾರಿಸುತ್ತಿದ್ದಾರೆ.

10001060a ವಾದಿತ್ರಘೋಷಸ್ತುಮುಲೋ ವಿಮಿಶ್ರಃ ಶಂಖನಿಸ್ವನೈಃ|

10001060c ಅನಿಲೇನೇರಿತೋ ಘೋರೋ ದಿಶಃ ಪೂರಯತೀವ ಹಿ||

ವಾದ್ಯಘೋಷಗಳ ತುಮುಲ ಶಬ್ಧವು ಶಂಖನಿನಾದಗಳಿಂದ ಕೂಡಿ ಗಾಳಿಯಲ್ಲಿ ತೇಲಿ ಘೋರವಾಗಿ ದಿಕ್ಕುಗಳಲ್ಲಿ ಮೊಳಗುತ್ತಿವೆ.

10001061a ಅಶ್ವಾನಾಂ ಹೇಷಮಾಣಾನಾಂ ಗಜಾನಾಂ ಚೈವ ಬೃಂಹತಾಂ|

10001061c ಸಿಂಹನಾದಶ್ಚ ಶೂರಾಣಾಂ ಶ್ರೂಯತೇ ಸುಮಹಾನಯಂ||

ಕುದುರೆಗಳ ಹೇಂಕಾರವೂ, ಆನೆಗಳ ಘೀಂಕಾರವೂ, ಶೂರರ ಸಿಂಹನಾದಗಳೂ ಜೋರಾಗಿ ಕೇಳಿಬರುತ್ತಿವೆ.

10001062a ದಿಶಂ ಪ್ರಾಚೀಂ ಸಮಾಶ್ರಿತ್ಯ ಹೃಷ್ಟಾನಾಂ ಗರ್ಜತಾಂ ಭೃಶಂ|

10001062c ರಥನೇಮಿಸ್ವನಾಶ್ಚೈವ ಶ್ರೂಯಂತೇ ಲೋಮಹರ್ಷಣಾಃ||

ಆನಂದತುಂದಿಲರಾಗಿ ಪೂರ್ವದಿಕ್ಕಿನಕಡೆ ಜೋರಾಗಿ ಗರ್ಜಿಸುತ್ತಾ ಹೋಗುತ್ತಿರುವವರ ರಥಚಕ್ರಗಳ ರೋಮಾಂಚಕಾರೀ ಶಬ್ಧಗಳೂ ಪೂರ್ವದಿಕ್ಕಿನಿಂದ ಕೇಳಿಬರುತ್ತಿವೆ.

10001063a ಪಾಂಡವೈರ್ಧಾರ್ತರಾಷ್ಟ್ರಾಣಾಂ ಯದಿದಂ ಕದನಂ ಕೃತಂ|

10001063c ವಯಮೇವ ತ್ರಯಃ ಶಿಷ್ಟಾಸ್ತಸ್ಮಿನ್ಮಹತಿ ವೈಶಸೇ||

ಧಾರ್ತರಾಷ್ಟ್ರರೊಂದಿಗೆ ಪಾಂಡವರು ನಡೆಸಿದ ಈ ಕದನದ ಮಹಾ ಸಂಹಾರಕಾರ್ಯದಲ್ಲಿ ನಾವು ಮೂವರು ಮಾತ್ರ ಉಳಿದುಕೊಂಡಿದ್ದೇವೆ.

10001064a ಕೇ ಚಿನ್ನಾಗಶತಪ್ರಾಣಾಃ ಕೇ ಚಿತ್ಸರ್ವಾಸ್ತ್ರಕೋವಿದಾಃ|

10001064c ನಿಹತಾಃ ಪಾಂಡವೇಯೈಃ ಸ್ಮ ಮನ್ಯೇ ಕಾಲಸ್ಯ ಪರ್ಯಯಂ||

ನಮ್ಮಲ್ಲಿ ಕೆಲವರಿಗೆ ನೂರು ಆನೆಗಳ ಬಲವಿದ್ದಿತು. ಕೆಲವರು ಸರ್ವಾಸ್ತ್ರಕೋವಿದರಾಗಿದ್ದರು. ಅವರು ಪಾಂಡವರಿಂದ ಹತರಾದರೆಂದರೆ ಇದು ಕಾಲದ ವೈಪರಿತ್ಯವೆಂದೇ ನಾವು ಭಾವಿಸಬೇಕಾಗುತ್ತದೆ.

10001065a ಏವಮೇತೇನ ಭಾವ್ಯಂ ಹಿ ನೂನಂ ಕಾರ್ಯೇಣ ತತ್ತ್ವತಃ|

10001065c ಯಥಾ ಹ್ಯಸ್ಯೇದೃಶೀ ನಿಷ್ಠಾ ಕೃತೇ ಕಾರ್ಯೇಽಪಿ ದುಷ್ಕರೇ||

ನಿಶ್ಚಯವಾಗಿಯೂ ಈ ಕಾರ್ಯದ ಪರಿಣಾಮವು ಹೀಗೆಯೇ ಆಗಬೇಕೆಂದಿತ್ತೇನೋ! ಈ ದುಷ್ಕರ ಕಾರ್ಯವನ್ನು ನಿಷ್ಠೆಯಿಂದ ಮಾಡಿದ್ದರೂ ಪರಿಣಾಮವು ಹೀಗಾಯಿತಲ್ಲ!

10001066a ಭವತೋಸ್ತು ಯದಿ ಪ್ರಜ್ಞಾ ನ ಮೋಹಾದಪಚೀಯತೇ|

10001066c ವ್ಯಾಪನ್ನೇಽಸ್ಮಿನ್ಮಹತ್ಯರ್ಥೇ ಯನ್ನಃ ಶ್ರೇಯಸ್ತದುಚ್ಯತಾಂ||

ಮೋಹದಿಂದ ನಿಮ್ಮ ಪ್ರಜ್ಞೆಯು ನಷ್ಟವಾಗಿ ಹೋಗದೇ ಇದ್ದರೆ ನಮ್ಮ ಕಡೆಯ ಎಲ್ಲವೂ ನಾಶವಾಗಿರುವಾಗ ನಮಗೆ ಶ್ರೇಯಸ್ಕರವಾದ ಏನನ್ನು ಮಾಡಬೇಕು ಎನ್ನುವುದನ್ನು ನೀವು ಹೇಳಬೇಕು!”

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ದ್ರೌಣಿಮಂತ್ರಣಾಯಾಂ ಪ್ರಥಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ದ್ರೌಣಿಮಂತ್ರಣ ಎನ್ನುವ ಮೊದಲನೇ ಅಧ್ಯಾಯವು.

[1] ನವಿರಾದ ಕಲಾಬತ್ತಿನ ವಸ್ತ್ರ

[2] ಪತಂಗವು ಬೆಂಕಿಯಿಂದ ಆಕರ್ಶಿತವಾಗಿ ತಾನೇ ತಾನಾಗಿ ಬೆಂಕಿಯೊಳಗೆ ಬಿದ್ದು ಪ್ರಾಣತೊರೆಯುವಂತೆ ತಾನೇ ತಾನಾಗಿ ಪಾಂಡವರೊಡನೆ ಯುದ್ಧಕ್ಕೆ ಹೋಗಿ ಪ್ರಾಣತೊರೆಯುವುದು.

Comments are closed.