ಶಾಂತಿ ಪರ್ವ: ರಾಜಧರ್ಮ ಪರ್ವ

೫೯

“ರಾಜ” ಶಬ್ಧದ ಮೂಲ; ಬ್ರಹ್ಮನ ನೀತಿಶಾಸ್ತ್ರ; ವೈನ್ಯ ಚರಿತ್ರೆ

Image result for vainya12059001 ವೈಶಂಪಾಯನ ಉವಾಚ

12059001a ತತಃ ಕಾಲ್ಯಂ ಸಮುತ್ಥಾಯ ಕೃತಪೌರ್ವಾಹ್ಣಿಕಕ್ರಿಯಾಃ|

12059001c ಯಯುಸ್ತೇ ನಗರಾಕಾರೈ ರಥೈಃ ಪಾಂಡವಯಾದವಾಃ||

ವೈಶಂಪಾಯನನು ಹೇಳಿದನು: “ಅನಂತರ ಬೆಳಗಾಗುತ್ತಲೇ ಎದ್ದು ಪೂರ್ವಾಹ್ಣಿಕಕ್ರಿಯೆಗಳನ್ನು ಮಾಡಿ ಪಾಂಡವ-ಯಾದವರು ನಗರಾಕಾರದ ರಥಗಳಲ್ಲಿ ಕುಳಿತು ಹೊರಟರು.

12059002a ಪ್ರಪದ್ಯ ಚ ಕುರುಕ್ಷೇತ್ರಂ ಭೀಷ್ಮಮಾಸಾದ್ಯ ಚಾನಘಮ್|

12059002c ಸುಖಾಂ ಚ ರಜನೀಂ ಪೃಷ್ಟ್ವಾ ಗಾಂಗೇಯಂ ರಥಿನಾಂ ವರಮ್||

ಕುರುಕ್ಷೇತ್ರವನ್ನು ತಲುಪಿ ಅನಘ ಭೀಷ್ಮನ ಬಳಿಸಾರಿ ರಥಿಗಳಲ್ಲಿ ಶ್ರೇಷ್ಠ ಗಾಂಗೇಯನನ್ನು “ರಾತ್ರಿಯು ಸುಖವಾಗಿತ್ತೇ?” ಎಂದು ಪ್ರಶ್ನಿಸಿದರು.

12059003a ವ್ಯಾಸಾದೀನಭಿವಾದ್ಯರ್ಷೀನ್ಸರ್ವೈಸ್ತೈಶ್ಚಾಭಿನಂದಿತಾಃ|

12059003c ನಿಷೇದುರಭಿತೋ ಭೀಷ್ಮಂ ಪರಿವಾರ್ಯ ಸಮಂತತಃ||

ವ್ಯಾಸಾದಿ ಋಷಿಗಳಿಗೆ ನಮಸ್ಕರಿಸಿ, ಅವರೆಲ್ಲರಿಂದಲೂ ಅಭಿನಂದಿತರಾಗಿ ಭೀಷ್ಮನ ಸುತ್ತಲೂ ಕುಳಿತುಕೊಂಡರು.

12059004a ತತೋ ರಾಜಾ ಮಹಾತೇಜಾ ಧರ್ಮರಾಜೋ ಯುಧಿಷ್ಠಿರಃ|

12059004c ಅಬ್ರವೀತ್ಪ್ರಾಂಜಲಿರ್ಭೀಷ್ಮಂ ಪ್ರತಿಪೂಜ್ಯಾಭಿವಾದ್ಯ ಚ||

ಆಗ ಮಹಾತೇಜಸ್ವೀ ರಾಜಾ ಧರ್ಮರಾಜ ಯುಧಿಷ್ಠಿರನು ಕೈಮುಗಿದು ಭೀಷ್ಮನನ್ನು ಪ್ರಶ್ನಿಸಿದನು:

12059005a ಯ ಏಷ ರಾಜಾ-ರಾಜೇತಿ ಶಬ್ದಶ್ಚರತಿ ಭಾರತ|

12059005c ಕಥಮೇಷ ಸಮುತ್ಪನ್ನಸ್ತನ್ಮೇ ಬ್ರೂಹಿ ಪಿತಾಮಹ||

“ಭಾರತ! ಪಿತಾಮಹ! ಈ ರಾಜಾ-ರಾಜಾ ಎನ್ನುವ ಶಬ್ಧವು ಬಳಕೆಯಲ್ಲಿದೆಯಲ್ಲಾ ಆ ಶಬ್ಧವು ಹೇಗೆ ಹುಟ್ಟಿಕೊಂಡಿತು ಎನ್ನುವುದನ್ನು ನನಗೆ ಹೇಳು!

12059006a ತುಲ್ಯಪಾಣಿಶಿರೋಗ್ರೀವಸ್ತುಲ್ಯಬುದ್ಧೀಂದ್ರಿಯಾತ್ಮಕಃ|

12059006c ತುಲ್ಯದುಃಖಸುಖಾತ್ಮಾ ಚ ತುಲ್ಯಪೃಷ್ಠಭುಜೋದರಃ||

12059007a ತುಲ್ಯಶುಕ್ರಾಸ್ಥಿಮಜ್ಜಶ್ಚ ತುಲ್ಯಮಾಂಸಾಸೃಗೇವ ಚ|

12059007c ನಿಃಶ್ವಾಸೋಚ್ಚ್ವಾಸತುಲ್ಯಶ್ಚ ತುಲ್ಯಪ್ರಾಣಶರೀರವಾನ್||

12059008a ಸಮಾನಜನ್ಮಮರಣಃ ಸಮಃ ಸರ್ವಗುಣೈರ್ನೃಣಾಮ್|

12059008c ವಿಶಿಷ್ಟಬುದ್ಧೀನ್ಶೂರಾಂಶ್ಚ ಕಥಮೇಕೋಽಧಿತಿಷ್ಠತಿ||

ಒಬ್ಬನೇ ಹೇಗೆ ಬುದ್ಧಿಯಲ್ಲಿ ವಿಶಿಷ್ಠರಾಗಿರುವ, ಶೂರರಾಗಿರುವ, ತನ್ನಂತೆಯೇ ಕೈಗಳು, ತಲೆ, ಕುತ್ತಿಗೆಗಳಿರುವ, ತನ್ನದಂಥಹ ಬುದ್ಧಿ-ಇಂದ್ರಿಯಗಳೂ ಇರುವ, ತನ್ನಂತೆಯೇ ದುಃಖ-ಸುಖಗಳನ್ನು ಅನುಭವಿಸುವ, ತನ್ನಂತೆಯೇ ಬೆನ್ನು-ಭುಜ-ಉದರಗಳನ್ನು ಹೊಂದಿರುವ; ತನ್ನಂತೆಯೇ ವೀರ್ಯ-ಮೂಳೆ-ಮಜ್ಜೆಗಳನ್ನು ಹೊಂದಿರುವ, ತನ್ನಂತೆಯೇ ಮಾಂಸ-ರಕ್ತಗಳಿರುವ, ತನ್ನಂತೆಯೇ ಉಚ್ಛಾಸ-ನಿಃಶ್ವಾಸಗಳಿರುವ, ತನ್ನಂತೆಯೇ ಪ್ರಾಣ-ಶರೀರಗಳನ್ನು ಪಡೆದಿರುವ, ಜನ್ಮ-ಮರಣಗಳಲ್ಲಿಯೂ ತನಗೆ ಸಮಾನರಾಗಿರುವ, ಸರ್ವಗುಣಗಳಲ್ಲಿಯೂ ತನ್ನಂತೆಯೇ ಇರುವ ಎಲ್ಲ ಮನುಷ್ಯರನ್ನೂ ಆಳುತ್ತಾನೆ?

12059009a ಕಥಮೇಕೋ ಮಹೀಂ ಕೃತ್ಸ್ನಾಂ ವೀರಶೂರಾರ್ಯಸಂಕುಲಾಮ್|

12059009c ರಕ್ಷತ್ಯಪಿ ಚ ಲೋಕೋಽಸ್ಯ ಪ್ರಸಾದಮಭಿವಾಂಚತಿ||

ಒಬ್ಬನೇ ವೀರ-ಶೂರ-ಆರ್ಯ ಸಂಕುಲಗಳಿಂದ ಕೂಡಿರುವ ಈ ಇಡೀ ಮಹಿಯನ್ನು ರಕ್ಷಿಸುವವನಾದರೂ ಈ ಲೋಕದ ಜನರ ಮೆಚ್ಚುಗೆಯನ್ನು ಏಕೆ ಬಯಸುತ್ತಿರುತ್ತಾನೆ?

12059010a ಏಕಸ್ಯ ಚ ಪ್ರಸಾದೇನ ಕೃತ್ಸ್ನೋ ಲೋಕಃ ಪ್ರಸೀದತಿ|

12059010c ವ್ಯಾಕುಲೇನಾಕುಲಃ ಸರ್ವೋ ಭವತೀತಿ ವಿನಿಶ್ಚಯಃ||

ಅವನೊಬ್ಬನು ಪ್ರಸನ್ನನಾಗಿದ್ದರೆ ಲೋಕವೆಲ್ಲವೂ ಪ್ರಸನ್ನವಾಗಿರುತ್ತದೆ. ಅವನೇನಾದರೂ ವ್ಯಾಕುಲಗೊಂಡರೆ ಸರ್ವವೂ ವ್ಯಾಕುಲಗೊಳ್ಳುತ್ತದೆ. ಇದು ಹೀಗೆಯೇ ನಿಶ್ಚಿತವಾಗಿದೆ.

12059011a ಏತದಿಚ್ಚಾಮ್ಯಹಂ ಸರ್ವಂ ತತ್ತ್ವೇನ ಭರತರ್ಷಭ|

12059011c ಶ್ರೋತುಂ ತನ್ಮೇ ಯಥಾತತ್ತ್ವಂ ಪ್ರಬ್ರೂಹಿ ವದತಾಂ ವರ||

ಭರತರ್ಷಭ! ಮಾತನಾಡುವವರಲ್ಲಿ ಶ್ರೇಷ್ಠ! ಈ ವಿಷಯವನ್ನು ಯಥಾವತ್ತಾಗಿ ನಿನ್ನಿಂದ ಕೇಳ ಬಯಸುತ್ತೇನೆ. ಇದನ್ನು ಸಂಪೂರ್ಣವಾಗಿ ಯಥಾತತ್ತ್ವವಾಗಿ ಹೇಳು.

12059012a ನೈತತ್ಕಾರಣಮಲ್ಪಂ ಹಿ ಭವಿಷ್ಯತಿ ವಿಶಾಂ ಪತೇ|

12059012c ಯದೇಕಸ್ಮಿನ್ಜಗತ್ಸರ್ವಂ ದೇವವದ್ಯಾತಿ ಸಂನತಿಮ್||

ವಿಶಾಂಪತೇ! ಒಬ್ಬನನ್ನೇ ಈ ಸರ್ವ ಜಗತ್ತೂ ದೇವರಿಗೆ ಸಮಾನನಾಗಿ ಕಂಡುಕೊಂಡು ತಲೆತಗ್ಗಿಸುತ್ತದೆಯೆಂದರೆ ಇದಕ್ಕೆ ಕಾರಣ ಅಲ್ಪವಾಗಿರಲಾರದು!”

12059013 ಭೀಷ್ಮ ಉವಾಚ

12059013a ನಿಯತಸ್ತ್ವಂ ನರಶ್ರೇಷ್ಠ ಶೃಣು ಸರ್ವಮಶೇಷತಃ|

12059013c ಯಥಾ ರಾಜ್ಯಂ ಸಮುತ್ಪನ್ನಮಾದೌ ಕೃತಯುಗೇಽಭವತ್||

ಭೀಷ್ಮನು ಹೇಳಿದನು: “ನರಶ್ರೇಷ್ಠ! ಕೃತಯುಗದಲ್ಲಿ ಮೊಟ್ಟಮೊದಲನೆಯದಾಗಿ ರಾಜ ಮತ್ತು ರಾಜ್ಯವು ಹೇಗೆ ಹುಟ್ಟಿಕೊಂಡವೆನ್ನುವುದನ್ನು ಎಲ್ಲವನ್ನೂ ಸಂಪೂರ್ಣವಾಗಿ, ನಿಯತನಾಗಿ ಕೇಳು. 

12059014a ನೈವ ರಾಜ್ಯಂ ನ ರಾಜಾಸೀನ್ನ ದಂಡೋ ನ ಚ ದಾಂಡಿಕಃ|

12059014c ಧರ್ಮೇಣೈವ ಪ್ರಜಾಃ ಸರ್ವಾ ರಕ್ಷಂತಿ ಚ ಪರಸ್ಪರಮ್||

ಆಗ ರಾಜ್ಯವೆಂಬುದೂ ಇರಲಿಲ್ಲ; ರಾಜನೆನ್ನುವವನೂ ಇರಲಿಲ್ಲ. ದಂಡವೂ ಇರಲಿಲ್ಲ; ದಂಡಿಸುವವನೂ ಇರಲಿಲ್ಲ. ಎಲ್ಲ ಪ್ರಜೆಗಳೂ ಧರ್ಮದಿಂದ ಪರಸ್ಪರರನ್ನು ರಕ್ಷಿಸಿಕೊಂಡಿದ್ದರು.

12059015a ಪಾಲಯಾನಾಸ್ತಥಾನ್ಯೋನ್ಯಂ ನರಾ ಧರ್ಮೇಣ ಭಾರತ|

12059015c ಖೇದಂ ಪರಮಮಾಜಗ್ಮುಸ್ತತಸ್ತಾನ್ಮೋಹ ಆವಿಶತ್||

ಭಾರತ! ಹೀಗೆ ನರಧರ್ಮದ ಪ್ರಕಾರ ಅನ್ಯೋನ್ಯರನ್ನು ಪಾಲಿಸುತ್ತಿರಲು, ಅವರಲ್ಲಿ ಪರಮ ಖೇದವುಂಟಾಯಿತು ಮತ್ತು ಮೋಹವು ಆವರಿಸಿತು.

12059016a ತೇ ಮೋಹವಶಮಾಪನ್ನಾ ಮಾನವಾ ಮನುಜರ್ಷಭ|

12059016c ಪ್ರತಿಪತ್ತಿವಿಮೋಹಾಚ್ಚ ಧರ್ಮಸ್ತೇಷಾಮನೀನಶತ್||

ಮನುಜರ್ಷಭ! ಮೋಹವಶಕ್ಕೆ ಸಿಲುಕಿದ ಆ ಮಾನವರಲ್ಲಿ ಕರ್ತವ್ಯಪ್ರಜ್ಞೆಯೇ ದೂರವಾಯಿತು ಮತ್ತು ಧರ್ಮಾಚರಣೆಯು ಅಳಿದುಹೋಯಿತು.

12059017a ನಷ್ಟಾಯಾಂ ಪ್ರತಿಪತ್ತೌ ತು ಮೋಹವಶ್ಯಾ ನರಾಸ್ತದಾ|

12059017c ಲೋಭಸ್ಯ ವಶಮಾಪನ್ನಾಃ ಸರ್ವೇ ಭಾರತಸತ್ತಮ||

ಭಾರತಸತ್ತಮ! ಮೋಹವಶರಾಗಿ ಕರ್ತ್ಯವ್ಯವಿವೇಕವನ್ನೇ ಕಳೆದುಕೊಂಡಿದ್ದ ಮನುಷ್ಯರು ಎಲ್ಲರೂ ಲೋಭದ ವಶರಾದರು.

12059018a ಅಪ್ರಾಪ್ತಸ್ಯಾಭಿಮರ್ಶಂ ತು ಕುರ್ವಂತೋ ಮನುಜಾಸ್ತತಃ|

12059018c ಕಾಮೋ ನಾಮಾಪರಸ್ತತ್ರ ಸಮಪದ್ಯತ ವೈ ಪ್ರಭೋ||

ಪ್ರಭೋ! ದೊರಕದೇ ಇರುವ ವಸ್ತುಗಳನ್ನು ಪಡೆಯಲು ಪ್ರಯತ್ನಿಸುತ್ತಿರುವ ಆ ಮನುಷ್ಯರನ್ನು ಆಗ ಕಾಮ ಎಂಬ ಹೆಸರಿನ ಇನ್ನೊಂದು ಶತ್ರುವು ಆಕ್ರಮಿಸಿತು.

12059019a ತಾಂಸ್ತು ಕಾಮವಶಂ ಪ್ರಾಪ್ತಾನ್ರಾಗೋ ನಾಮ ಸಮಸ್ಪೃಶತ್|

12059019c ರಕ್ತಾಶ್ಚ ನಾಭ್ಯಜಾನಂತ ಕಾರ್ಯಾಕಾರ್ಯಂ ಯುಧಿಷ್ಠಿರ||

ಕಾಮವಶರಾದ ಅವರನ್ನು ರಾಗ ಎನ್ನುವ ಇನ್ನೊಂದು ಭೂತವೂ ಆವರಿಸಿಕೊಂಡಿತು. ಯುಧಿಷ್ಠಿರ! ರಾಗವಶರಾದ ಅವರು ಕಾರ್ಯ-ಅಕಾರ್ಯಗಳನ್ನು ತಿಳಿಯುತ್ತಿರಲಿಲ್ಲ.

12059020a ಅಗಮ್ಯಾಗಮನಂ ಚೈವ ವಾಚ್ಯಾವಾಚ್ಯಂ ತಥೈವ ಚ|

12059020c ಭಕ್ಷ್ಯಾಭಕ್ಷ್ಯಂ ಚ ರಾಜೇಂದ್ರ ದೋಷಾದೋಷಂ ಚ ನಾತ್ಯಜನ್||

ರಾಜೇಂದ್ರ! ಯಾರೊಡನೆ ಸೇರಬಾರದೋ ಅವರೊಡನೆ ಸೇರುತ್ತಿದ್ದರು; ಏನನ್ನು ಮಾತನಾಡಬಾರದೋ ಅದನ್ನೇ ಮಾತನಾಡುತ್ತಿದ್ದರು, ಮತ್ತು ದೋಷ-ಅದೋಷಗಳು, ಭಕ್ಷ್ಯ-ಅಭಕ್ಷ್ಯಗಳು ಯಾವುದನ್ನೂ ತಿರಸ್ಕರಿಸುತ್ತಿರಲಿಲ್ಲ.

12059021a ವಿಪ್ಲುತೇ ನರಲೋಕೇಽಸ್ಮಿಂಸ್ತತೋ ಬ್ರಹ್ಮ ನನಾಶ ಹ|

12059021c ನಾಶಾಚ್ಚ ಬ್ರಹ್ಮಣೋ ರಾಜನ್ಧರ್ಮೋ ನಾಶಮಥಾಗಮತ್||

ಹೀಗೆ ನರಲೋಕದಲ್ಲಿ ಕ್ಷೋಭೆಯುಂಟಾಗಲು, ಬ್ರಹ್ಮಜ್ಞಾನವು ನಾಶವಾಯಿತು. ರಾಜನ್! ಬ್ರಹ್ಮಜ್ಞಾನವು ನಾಶವಾಗಲು ಧರ್ಮನಾಶವೂ ಪ್ರಾರಂಭವಾಯಿತು.

12059022a ನಷ್ಟೇ ಬ್ರಹ್ಮಣಿ ಧರ್ಮೇ ಚ ದೇವಾಸ್ತ್ರಾಸಮಥಾಗಮನ್|

12059022c ತೇ ತ್ರಸ್ತಾ ನರಶಾರ್ದೂಲ ಬ್ರಹ್ಮಾಣಂ ಶರಣಂ ಯಯುಃ||

ಬ್ರಹ್ಮ ವಿದ್ಯೆ ಮತ್ತು ಧರ್ಮವು ನಶಿಸಲು, ದೇವತೆಗಳಲ್ಲಿ ಭಯವುಂಟಾಯಿತು. ನರಶಾರ್ದೂಲ! ಭಯಭೀತರಾದ ಅವರು ಬ್ರಹ್ಮನ ಶರಣು ಹೋದರು.

12059023a ಪ್ರಪದ್ಯ ಭಗವಂತಂ ತೇ ದೇವಾ ಲೋಕಪಿತಾಮಹಮ್|

12059023c ಊಚುಃ ಪ್ರಾಂಜಲಯಃ ಸರ್ವೇ ದುಃಖಶೋಕಭಯಾರ್ದಿತಾಃ||

ದುಃಖ-ಶೋಕ-ಭಯಾರ್ದಿತರಾದ ಆ ಎಲ್ಲ ದೇವತೆಗಳೂ ಕೈಮುಗಿದು ಲೋಕಪಿತಾಮಹ ಭಗವಂತನನ್ನು ಪ್ರಾರ್ಥಿಸುತ್ತಾ ಕೇಳಿಕೊಂಡರು:

12059024a ಭಗವನ್ನರಲೋಕಸ್ಥಂ ನಷ್ಟಂ ಬ್ರಹ್ಮ ಸನಾತನಮ್|

12059024c ಲೋಭಮೋಹಾದಿಭಿರ್ಭಾವೈಸ್ತತೋ ನೋ ಭಯಮಾವಿಶತ್||

“ಭಗವನ್! ನರಲೋಕದಲ್ಲಿದ್ದ ಸನಾತನ ಬ್ರಹ್ಮವಿದ್ಯೆಯು ನಷ್ಟವಾಗಿ ಹೋಗಿದೆ. ಮನುಷ್ಯರು ಲೋಭ-ಮೋಹಾದಿ ಭಾವಗಳಿಗೆ ಸಿಲುಕಿದುದರಿಂದ ನಮ್ಮನ್ನು ಭಯವು ಆವರಿಸಿಬಿಟ್ಟಿದೆ.

12059025a ಬ್ರಹ್ಮಣಶ್ಚ ಪ್ರಣಾಶೇನ ಧರ್ಮೋಽಪ್ಯನಶದೀಶ್ವರ|

12059025c ತತಃ ಸ್ಮ ಸಮತಾಂ ಯಾತಾ ಮರ್ತ್ಯೈಸ್ತ್ರಿಭುವನೇಶ್ವರ||

ಈಶ್ವರ! ತ್ರಿಭುವನೇಶ್ವರ! ಬ್ರಹ್ಮಜ್ಞಾನದ ನಾಶದಿಂದಾಗಿ ಧರ್ಮವೂ ಕೂಡ ನಶಿಸಿ ಹೋಗುತ್ತಿದೆ. ಇದರಿಂದಾಗಿ ನಾವೂ ಕೂಡ ಮನುಷ್ಯರಿಗೆ ಸಮನಾಗಿಬಿಟ್ಟಿದ್ದೇವೆ!

12059026a ಅಧೋ ಹಿ ವರ್ಷಮಸ್ಮಾಕಂ ಮರ್ತ್ಯಾಸ್ತೂರ್ಧ್ವಪ್ರವರ್ಷಿಣಃ|

12059026c ಕ್ರಿಯಾವ್ಯುಪರಮಾತ್ತೇಷಾಂ ತತೋಽಗಚ್ಚಾಮ ಸಂಶಯಮ್||

ಮಳೆ-ಬೆಳೆಗಳನ್ನು ಕೆಳಗೆ ಸುರಿಸುತ್ತಿರುವ ನಮಗೆ ಮರ್ತ್ಯರು ಯಜ್ಞಾದಿಗಳ ಮೂಲಕ ಹವಿಸ್ಸನ್ನು ಮೇಲ್ಮುಖವಾಗಿ ಸುರಿಸುತ್ತಿದ್ದರು. ಈಗ ಅವರು ಯಜ್ಞಾದಿ ಕಾರ್ಯಗಳನ್ನೇ ನಿಲ್ಲಿಸಿದುದರಿಂದ ನಮಗೆ ಸಂಶಯವಾಗ ತೊಡಗಿದೆ!

12059027a ಅತ್ರ ನಿಃಶ್ರೇಯಸಂ ಯನ್ನಸ್ತದ್ಧ್ಯಾಯಸ್ವ ಪಿತಾಮಹ|

12059027c ತ್ವತ್ಪ್ರಭಾವಸಮುತ್ಥೋಽಸೌ ಪ್ರಭಾವೋ ನೋ ವಿನಶ್ಯತಿ||

ಪಿತಾಮಹ! ಈಗ ನಮಗೆ ಶ್ರೇಯಸ್ಸು ಯಾವುದರಿಂದಾಗುವುದೋ ಅದರ ಕುರಿತು ನೀನೇ ಚಿಂತಿಸು! ನಿನ್ನ ಪ್ರಭಾವದಿಂದಲೇ ಪ್ರಾಪ್ತವಾಗಿರುವ ನಮ್ಮ ಈ ದೈವಪ್ರಭಾವವು ಯಾವುದೇ ಕಾರಣದಿಂದಲೂ ವಿನಾಶಹೊಂದಬಾರದು!”

12059028a ತಾನುವಾಚ ಸುರಾನ್ಸರ್ವಾನ್ಸ್ವಯಂಭೂರ್ಭಗವಾಂಸ್ತತಃ|

12059028c ಶ್ರೇಯೋಽಹಂ ಚಿಂತಯಿಷ್ಯಾಮಿ ವ್ಯೇತು ವೋ ಭೀಃ ಸುರರ್ಷಭಾಃ||

ಆಗ ಭಗವಾನ್ ಸ್ವಯಂಭುವು ಆ ಸರ್ವ ಸುರರಿಗೆ ಉತ್ತರಿಸಿದನು: “ಸುರರ್ಷಭರೇ! ನಿಮ್ಮ ಶ್ರೇಯಸ್ಸಿಗಾಗಿ ನಾನು ಯೋಚಿಸುತ್ತೇನೆ. ನಿಮ್ಮ ಭಯವನ್ನು ದೂರಮಾಡಿಕೊಳ್ಳಿ!”

12059029a ತತೋಽಧ್ಯಾಯಸಹಸ್ರಾಣಾಂ ಶತಂ ಚಕ್ರೇ ಸ್ವಬುದ್ಧಿಜಮ್|

12059029c ಯತ್ರ ಧರ್ಮಸ್ತಥೈವಾರ್ಥಃ ಕಾಮಶ್ಚೈವಾನುವರ್ಣಿತಃ||

ಆಗ ಬ್ರಹ್ಮನು ತನ್ನ ಬುದ್ಧಿಗೆ ತೋಚಿದಂತೆ, ಧರ್ಮ-ಅರ್ಥ-ಕಾಮಗಳನ್ನು ವರ್ಣಿಸುವ ಒಂದು ಲಕ್ಷ ಅಧ್ಯಾಯಗಳನ್ನು ರಚಿಸಿದನು.

12059030a ತ್ರಿವರ್ಗ ಇತಿ ವಿಖ್ಯಾತೋ ಗಣ ಏಷ ಸ್ವಯಂಭುವಾ|

12059030c ಚತುರ್ಥೋ ಮೋಕ್ಷ ಇತ್ಯೇವ ಪೃಥಗರ್ಥಃ ಪೃಥಗ್ಗಣಃ||

ಸ್ವಯಂಭುವಿನ ಈ ಸಮೂಹಗ್ರಂಥವು ತ್ರಿವರ್ಗ ಎಂದು ವಿಖ್ಯಾತವಾಯಿತು. ಬೇರೆಯದೇ ಅರ್ಥವುಳ್ಳ ನಾಲ್ಕನೆಯ ಮೋಕ್ಷ ಎನ್ನುವ ಪ್ರಕರಣವು ಇನ್ನೊಂದು ಪ್ರತ್ಯೇಕ ಸಂಹಿತವು.

12059031a ಮೋಕ್ಷಸ್ಯಾಪಿ ತ್ರಿವರ್ಗೋಽನ್ಯಃ ಪ್ರೋಕ್ತಃ ಸತ್ತ್ವಂ ರಜಸ್ತಮಃ|

12059031c ಸ್ಥಾನಂ ವೃದ್ಧಿಃ ಕ್ಷಯಶ್ಚೈವ ತ್ರಿವರ್ಗಶ್ಚೈವ ದಂಡಜಃ||

ಮೋಕ್ಷದಲ್ಲಿಯೂ ಸತ್ತ್ವ-ರಜ-ತಮಗಳೆಂಬ ಮೂರು ವರ್ಗಗಳಿವೆಯೆಂದು ಹೇಳುತ್ತಾರೆ. ದಂಡದಿಂದ ಹುಟ್ಟಿದ ತ್ರಿವರ್ಗಗಳು ಸ್ಥಾನ, ವೃದ್ಧಿ ಮತ್ತು ಕ್ಷಯಗಳು[1].

12059032a ಆತ್ಮಾ ದೇಶಶ್ಚ ಕಾಲಶ್ಚಾಪ್ಯುಪಾಯಾಃ ಕೃತ್ಯಮೇವ ಚ|

12059032c ಸಹಾಯಾಃ ಕಾರಣಂ ಚೈವ ಷಡ್ವರ್ಗೋ ನೀತಿಜಃ ಸ್ಮೃತಃ||

ಇದರಲ್ಲಿರುವ ಆತ್ಮ, ದೇಶ, ಕಾಲ, ಉಪಾಯ, ಕರ್ತವ್ಯ ಮತ್ತು ಸಹಾಯ – ಈ ಷಡ್ವರ್ಗಗಳ ನೀತಿಯೇ ಸರ್ವೋನ್ನತಿಗೆ ಕಾರಣವಾಗುತ್ತದೆಯೆಂದು ಹೇಳುತ್ತಾರೆ.

12059033a ತ್ರಯೀ ಚಾನ್ವೀಕ್ಷಿಕೀ ಚೈವ ವಾರ್ತಾ ಚ ಭರತರ್ಷಭ|

12059033c ದಂಡನೀತಿಶ್ಚ ವಿಪುಲಾ ವಿದ್ಯಾಸ್ತತ್ರ ನಿದರ್ಶಿತಾಃ||

ಭರತರ್ಷಭ! ಇದರಲ್ಲಿ ತ್ರಯೀ[2], ಅನ್ವೀಕ್ಷಿಕೀ[3], ವಾರ್ತೆ[4] ಮತ್ತು ದಂಡನೀತಿ – ಈ ವಿಪುಲ ವಿದ್ಯೆಗಳ ನಿರೂಪಣೆಯಿದೆ.

12059034a ಅಮಾತ್ಯರಕ್ಷಾಪ್ರಣಿಧೀ ರಾಜಪುತ್ರಸ್ಯ ರಕ್ಷಣಮ್|

12059034c ಚಾರಶ್ಚ ವಿವಿಧೋಪಾಯಃ ಪ್ರಣಿಧಿಶ್ಚ ಪೃಥಗ್ವಿಧಃ||

12059035a ಸಾಮ ಚೋಪಪ್ರದಾನಂ ಚ ಭೇದೋ ದಂಡಶ್ಚ ಪಾಂಡವ|

12059035c ಉಪೇಕ್ಷಾ ಪಂಚಮೀ ಚಾತ್ರ ಕಾರ್ತ್ಸ್ನ್ಯೇನ ಸಮುದಾಹೃತಾ||

ಪಾಂಡವ! ಇದರಲ್ಲಿ ಮಂತ್ರಿಗಳ ರಕ್ಷಣೆ, ರಾಜದೂತರು ಮತ್ತು ರಾಜಪುತ್ರರ ರಕ್ಷಣೆ. ಚಾರರ ವಿವಿಧ ಉಪಾಯಗಳು, ಬೇರೆ ಬೇರೆ ವಿಧದ ಗುಪ್ತಚರರು, ಸಾಮ, ದಾನ, ಭೇದ, ದಂಡ ಮತ್ತು ಉಪೇಕ್ಷೆ ಈ ಐದು ಉಪಾಯಗಳು ಇವೆಲ್ಲವೂ ವಿಸ್ತಾರವಾಗಿ ವರ್ಣಿತವಾಗಿವೆ.

12059036a ಮಂತ್ರಶ್ಚ ವರ್ಣಿತಃ ಕೃತ್ಸ್ನಸ್ತಥಾ ಭೇದಾರ್ಥ ಏವ ಚ|

12059036c ವಿಭ್ರಂಶಶ್ಚೈವ ಮಂತ್ರಸ್ಯ ಸಿದ್ಧ್ಯಸಿದ್ಧ್ಯೋಶ್ಚ ಯತ್ಫಲಮ್||

ಇದರಲ್ಲಿ ಮಂತ್ರಾಲೋಚನೆ ಮತ್ತು ಭೇದಗಳ ಅರ್ಥವನ್ನು ಸಂಪೂರ್ಣವಾಗಿ – ಮಂತ್ರಾಲೋಚನೆಯು ಬಹಿರಂಗವಾದರೆ ಮತ್ತು ಭೇದವು ಸಿದ್ಧಿಯಾದರೆ ದೊರೆಯುವ ಫಲಗಳೂ – ವರ್ಣಿತವಾಗಿವೆ.

12059037a ಸಂಧಿಶ್ಚ ವಿವಿಧಾಭಿಖ್ಯೋ ಹೀನೋ ಮಧ್ಯಸ್ತಥೋತ್ತಮಃ|

12059037c ಭಯಸತ್ಕಾರವಿತ್ತಾಖ್ಯಃ ಕಾರ್ತ್ಸ್ನ್ಯೇನ ಪರಿವರ್ಣಿತಃ||

ಇದರಲ್ಲಿ ಸಂಧಿಯ ವಿವಿಧ ಪ್ರಕಾರಗಳು – ಭಯದಿಂದ ಮಾಡಿಕೊಂಡ ಹೀನ ಸಂಧಿ, ಸತ್ಕಾರವನ್ನು ಪಡೆದು ಮಾಡಿಕೊಂಡ ಮಧ್ಯಮ ಸಂಧಿ, ಮತ್ತು ವಿತ್ತವನ್ನು ಪಡೆದು ಮಾಡಿಕೊಂಡ ಉತ್ತಮ ಸಂಧಿ – ಈ ಮೊದಲಾದ ಹೀನ, ಮಧ್ಯಮ ಮತ್ತು ಉತ್ತಮ ಸಂಧಿಗಳ ಕುರಿತು ಸಂಪೂರ್ಣ ವರ್ಣನೆಯಿದೆ.

12059038a ಯಾತ್ರಾಕಾಲಾಶ್ಚ ಚತ್ವಾರಸ್ತ್ರಿವರ್ಗಸ್ಯ ಚ ವಿಸ್ತರಃ|

12059038c ವಿಜಯೋ ಧರ್ಮಯುಕ್ತಶ್ಚ ತಥಾರ್ಥವಿಜಯಶ್ಚ ಹ||

12059039a ಆಸುರಶ್ಚೈವ ವಿಜಯಸ್ತಥಾ ಕಾರ್ತ್ಸ್ನ್ಯೇನ ವರ್ಣಿತಃ|

12059039c ಲಕ್ಷಣಂ ಪಂಚವರ್ಗಸ್ಯ ತ್ರಿವಿಧಂ ಚಾತ್ರ ವರ್ಣಿತಮ್||

ಇದರಲ್ಲಿ ದಂಡ ಯಾತ್ರೆಯ ನಾಲ್ಕು ಕಾಲಗಳೂ[5], ವಿಜಯದ ನಾಲ್ಕು ವರ್ಗಗಳೂ – ಧರ್ಮ ವಿಜಯ, ಅರ್ಥ ವಿಜಯ ಮತ್ತು ಆಸುರ ವಿಜಯ – ವಿಸ್ತಾರವಾಗಿ ವರ್ಣಿತಗೊಂಡಿವೆ. ಮತ್ತು ಪಂಚವರ್ಗಗಳ[6] ಲಕ್ಷಣಗಳೂ, ಮೂರು ವಿಧಗಳೂ[7] ವರ್ಣಿತವಾಗಿವೆ.

12059040a ಪ್ರಕಾಶಶ್ಚಾಪ್ರಕಾಶಶ್ಚ ದಂಡೋಽಥ ಪರಿಶಬ್ದಿತಃ|

12059040c ಪ್ರಕಾಶೋಽಷ್ಟವಿಧಸ್ತತ್ರ ಗುಹ್ಯಸ್ತು ಬಹುವಿಸ್ತರಃ||

ಇದರಲ್ಲಿ ಪ್ರಕಾಶ ಮತ್ತು ಅಪ್ರಕಾಶ ಈ ಎರಡೂ ಸೇನಾದಂಡಗಳ ಕುರಿತು, ಎಂಟು ವಿಧದ ಪ್ರಕಾಶ ಸೇನಾದಂಡಗಳು ಮತ್ತು ಗುಪ್ತ ಸೇನಾದಂಡದ ಕುರಿತು ಬಹಳ ವಿಸ್ತಾರವಾಗಿ ವಿವರಿಸಲ್ಪಟ್ಟಿದೆ.

12059041a ರಥಾ ನಾಗಾ ಹಯಾಶ್ಚೈವ ಪಾದಾತಾಶ್ಚೈವ ಪಾಂಡವ|

12059041c ವಿಷ್ಟಿರ್ನಾವಶ್ಚರಾಶ್ಚೈವ ದೇಶಿಕಾಃ ಪಥಿ ಚಾಷ್ಟಕಮ್||

12059042a ಅಂಗಾನ್ಯೇತಾನಿ ಕೌರವ್ಯ ಪ್ರಕಾಶಾನಿ ಬಲಸ್ಯ ತು|

12059042c ಜಂಗಮಾಜಂಗಮಾಶ್ಚೋಕ್ತಾಶ್ಚೂರ್ಣಯೋಗಾ ವಿಷಾದಯಃ||

ಪಾಂಡವ! ಕೌರವ್ಯ! ರಥಗಳು, ಆನೆಗಳು, ಕುದುರೆಗಳು, ಪದಾತಿಗಳು, ಭಾರವನ್ನು ಹೊರುವವರು, ನಾವಿಕರು, ಗೂಢಚಾರರು ಮತ್ತು ದೇಶಿಕಾಚಾರ್ಯರು – ಇವೇ ಪ್ರಕಾಶ ಸೇನಾದಂಡದ ಎಂಟು ಅಂಗಗಳು. ಚಲಿಸುವ ಸರ್ಪಾದಿಗಳಿಂದ ತಯಾರಾದ ಮತ್ತು ಚಲಿಸದ ಮರ-ಗಿಡ-ಬಳ್ಳಿಗಳಿಂದ ತಯಾರಾದ ವಿಷ ಇವೇ ಮೊದಲಾದವುಗಳು ಗುಪ್ತ ಸೇನೆಯ ಅಂಗಗಳು.

12059043a ಸ್ಪರ್ಶೇ ಚಾಭ್ಯವಹಾರ್ಯೇ ಚಾಪ್ಯುಪಾಂಶುರ್ವಿವಿಧಃ ಸ್ಮೃತಃ|

12059043c ಅರಿರ್ಮಿತ್ರಮುದಾಸೀನ ಇತ್ಯೇತೇಽಪ್ಯನುವರ್ಣಿತಾಃ||

ವಿಷಾದಿ ಗುಪ್ತ ಸೇನಾಂಗವಿಷಯಗಳನ್ನು ಆಯುಧ ಅಥವಾ ವಸ್ತ್ರದ ಮೂಲಕ ಶತ್ರುವಿಗೆ ಸ್ಪರ್ಶವಾಗುವಂತೆ ಮಾಡಬೇಕು ಅಥವಾ ಶತ್ರುವಿನ ಭೋಜನಾದಿಗಳಲ್ಲಿ ಬೆರೆಸಬೇಕು ಎಂದು ಹೇಳಿದ್ದಾರೆ. ಅಲ್ಲದೇ ಈ ನೀತಿ ಶಾಸ್ತ್ರದಲ್ಲಿ ಅರಿ, ಮಿತ್ರ ಮತ್ತು ಉದಾಸೀನ ಇವರ ಬಗ್ಗೆಯ ವರ್ಣನೆಯೂ ಇದೆ.

12059044a ಕೃತ್ಸ್ನಾ ಮಾರ್ಗಗುಣಾಶ್ಚೈವ ತಥಾ ಭೂಮಿಗುಣಾಶ್ಚ ಹ|

12059044c ಆತ್ಮರಕ್ಷಣಮಾಶ್ವಾಸಃ ಸ್ಪಶಾನಾಂ ಚಾನ್ವವೇಕ್ಷಣಮ್||

ಇದರಲ್ಲಿ ಗ್ರಹ-ನಕ್ಷತ್ರಗಳ ಸಮಸ್ತ ಮಾರ್ಗಗುಣಗಳು[8] ಮತ್ತು ಭೂಮಿಯ ಗುಣಗಳು[9], ಆತ್ಮರಕ್ಷಣೆಯ ವಿಧಾನಗಳು, ಆಶ್ವಾಸನೆ, ರಥಾದಿಗಳ ನಿರ್ಮಾಣ ಮತ್ತು ಇವುಗಳ ನಿರೀಕ್ಷೆ ಇವುಗಳ ಕುರಿತು ವರ್ಣನೆಯಿದೆ.

12059045a ಕಲ್ಪನಾ ವಿವಿಧಾಶ್ಚಾಪಿ ನೃನಾಗರಥವಾಜಿನಾಮ್|

12059045c ವ್ಯೂಹಾಶ್ಚ ವಿವಿಧಾಭಿಖ್ಯಾ ವಿಚಿತ್ರಂ ಯುದ್ಧಕೌಶಲಮ್||

12059046a ಉತ್ಪಾತಾಶ್ಚ ನಿಪಾತಾಶ್ಚ ಸುಯುದ್ಧಂ ಸುಪಲಾಯನಮ್|

12059046c ಶಸ್ತ್ರಾಣಾಂ ಪಾಯನಜ್ಞಾನಂ ತಥೈವ ಭರತರ್ಷಭ||

ಭರತರ್ಷಭ! ಅದರಲ್ಲಿ ನರ-ನಾಗ-ರಥ-ವಾಜಿಗಳ ವಿವಿಧ ವ್ಯೂಹಗಳ ಕಲ್ಪನೆಗಳು ಮತ್ತು ವಿವಿಧ ವಿಚಿತ್ರ ಯುದ್ಧಕೌಶಲಗಳು ಹೇಳಲ್ಪಟ್ಟಿವೆ. ಹಾಗೆಯೇ ಮೇಲಕ್ಕೆ ಹಾರುವುದು, ಕೆಳಕ್ಕೆ ಬೀಳುವುದು, ಎದುರಿಸಿ ಯುದ್ಧಮಾಡುವುದು, ಉತ್ತಮವಾಗಿ ಪಲಾಯನ ಮಾಡುವುದು, ಶಸ್ತ್ರಗಳನ್ನು ಹರಿತಹೊಳಿಸುವ ವಿಧಾನ ಇವುಗಳ ವರ್ಣನೆಯೂ ಇದೆ.

12059047a ಬಲವ್ಯಸನಮುಕ್ತಂ ಚ ತಥೈವ ಬಲಹರ್ಷಣಮ್|

12059047c ಪೀಡನಾಸ್ಕಂದಕಾಲಶ್ಚ ಭಯಕಾಲಶ್ಚ ಪಾಂಡವ||

ಪಾಂಡವ! ಸೇನೆಗೆ ಬಂದೊದಗುವ ವ್ಯಸನಗಳು, ಸೇನೆಯನ್ನು ಹರ್ಷಗೊಳಿಸುವುದು, ಪೀಡೆಗೊಳಗಾದಾಗ ಬೇರೆ ವಾಸಿಸುವ ಸಮಯ, ಭಯದ ಕಾಲ ಇವುಗಳ ವರ್ಣನೆಯೂ ಇದೆ.

12059048a ತಥಾ ಖಾತವಿಧಾನಂ ಚ ಯೋಗಸಂಚಾರ ಏವ ಚ|

12059048c ಚೌರಾಟವ್ಯಬಲೈಶ್ಚೋಗ್ರೈಃ ಪರರಾಷ್ಟ್ರಸ್ಯ ಪೀಡನಮ್||

12059049a ಅಗ್ನಿದೈರ್ಗರದೈಶ್ಚೈವ ಪ್ರತಿರೂಪಕಚಾರಕೈಃ|

12059049c ಶ್ರೇಣಿಮುಖ್ಯೋಪಜಾಪೇನ ವೀರುಧಶ್ಚೇದನೇನ ಚ||

12059050a ದೂಷಣೇನ ಚ ನಾಗಾನಾಮಾಶಂಕಾಜನನೇನ ಚ|

12059050c ಆರೋಧನೇನ ಭಕ್ತಸ್ಯ ಪಥಶ್ಚೋಪಾರ್ಜನೇನ ಚ||

ಕಂದಕಗಳನ್ನು ತೋಡುವ ಕ್ರಮ, ಸಜ್ಜಾದ ಸೇನೆಯ ಪ್ರಯಾಣಕ್ರಮ, ಕಾಡುಜನರು ಮತ್ತು ಕಳ್ಳಕಾಕರ ಮೂಲಕ ಶತ್ರುರಾಜ್ಯಕ್ಕೆ ಪೀಡೆಯನ್ನುಂಟುಮಾಡುವುದು, ಬೆಂಕಿ-ವಿಷ-ಕೃತ್ರಿಮ ದೂತರಿಂದ ಶತ್ರುಗಳಿಗೆ ಹಾನಿಯನ್ನುಂಟುಮಾಡುವುದು, ಮಂತ್ರಿಮುಖ್ಯರ ವೇಷಧಾರಿಗಳನ್ನು ಕಳುಹಿಸಿ ಶತ್ರುಗಳನ್ನು ಮೋಸಗೊಳಿಸುವುದು, ಶತ್ರುಸೇನೆಗಳ ಮುಖ್ಯರೊಳಗೆ ಭಿನ್ನಾಭಿಪ್ರಾಯಗಳನ್ನುಂಟುಮಾಡುವುದು, ಬೆಳೆದುನಿಂತಿರುವ ಫಸಲನ್ನು ಕತ್ತರಿಸುವುದು, ಶತ್ರುಪಕ್ಷದ ಆನೆಗಳನ್ನು ರೇಗಿಸುವುದು, ಶತ್ರುರಾಜ್ಯದ ಪ್ರಜೆಗಳಿಗೆ ಆತಂಕವನ್ನುಂಟುಮಾಡುವುದು, ಶತ್ರುಪಕ್ಷದ ಮುಖ್ಯನನ್ನು ವಿಶೇಷವಾಗಿ ಪುರಸ್ಕರಿಸಿ ತನ್ನ ಕಡೆಗೆ ಒಲಿಸಿಕೊಳ್ಳುವುದು – ಈ ವಿಷಯಗಳೂ ಬ್ರಹ್ಮನ ನೀತಿಶಾಸ್ತ್ರದಲ್ಲಿ ವಿವರಿಸಲಾಗಿದೆ.

12059051a ಸಪ್ತಾಂಗಸ್ಯ ಚ ರಾಜ್ಯಸ್ಯ ಹ್ರಾಸವೃದ್ಧಿಸಮಂಜಸಮ್|

12059051c ದೂತಸಾಮರ್ಥ್ಯಯೋಗಶ್ಚ ರಾಷ್ಟ್ರಸ್ಯ ಚ ವಿವರ್ಧನಮ್||

12059052a ಅರಿಮಧ್ಯಸ್ಥಮಿತ್ರಾಣಾಂ ಸಮ್ಯಕ್ಚೋಕ್ತಂ ಪ್ರಪಂಚನಮ್|

12059052c ಅವಮರ್ದಃ ಪ್ರತೀಘಾತಸ್ತಥೈವ ಚ ಬಲೀಯಸಾಮ್||

ರಾಜ್ಯದ ಏಳು ಅಂಗಗಳ ಕ್ಷಯ, ವೃದ್ಧಿ ಮತ್ತು ಸಮತ್ವಗಳು; ದೂತನ ಸಾಮರ್ಥ್ಯ-ಸಹಯೋಗಗಳಿಂದ ರಾಷ್ಟ್ರದ ವೃದ್ಧಿ; ಶತ್ರು-ಮಧ್ಯಸ್ಥ-ಮಿತ್ರರ ವಿಸ್ತಾರ ವಿವೇಚನೆ; ಬಲಶಾಲಿ ಶತ್ರುಗಳ ಉಪಾಯಗಳನ್ನು ಭಂಗಗೊಳಿಸಿ ಸೋಲಿಸುವುದು ಇವೆಲ್ಲವುಗಳ ಕುರಿತು ಬ್ರಹ್ಮನ ನೀತಿಶಾಸ್ತ್ರದಲ್ಲಿ ವಿವರಿಸಲಾಗಿದೆ.

12059053a ವ್ಯವಹಾರಃ ಸುಸೂಕ್ಷ್ಮಶ್ಚ ತಥಾ ಕಂಟಕಶೋಧನಮ್|

12059053c ಶಮೋ ವ್ಯಾಯಾಮಯೋಗಶ್ಚ ಯೋಗೋ ದ್ರವ್ಯಸ್ಯ ಸಂಚಯಃ||

12059054a ಅಭೃತಾನಾಂ ಚ ಭರಣಂ ಭೃತಾನಾಂ ಚಾನ್ವವೇಕ್ಷಣಮ್|

12059054c ಅರ್ಥಕಾಲೇ ಪ್ರದಾನಂ ಚ ವ್ಯಸನೇಷ್ವಪ್ರಸಂಗಿತಾ||

ಶಾಸನ ಸಂಬಂಧದ ಅತಿಸೂಕ್ಷ್ಮ ವ್ಯವಹಾರ; ರಾಷ್ಟ್ರಕಂಟಕರನ್ನು ಶೋಧಿಸಿ ಶಾಂತಗೊಳಿಸುವುದು; ವ್ಯಾಯಮಯೋಗ, ದ್ರವ್ಯಗಳ ಸಂಗ್ರಹ ಯೋಗ; ನಿರ್ಗತಿಕರ ಭರಣ-ಪೋಷಣೆಗಳು; ಭರಣ-ಪೋಷಣಾಕಾರ್ಯಗಳ ಮೇಲ್ವಿಚಾರಣೆ; ಕಾಲಕಾಲಕ್ಕೆ ಸಂಪತ್ತಿನ ದಾನ; ಮತ್ತು ವ್ಯಸನಗಳ ಕುರಿತು ಬ್ರಹ್ಮನ ನೀತಿಶಾಸ್ತ್ರದಲ್ಲಿ ವಿವರಿಸಲಾಗಿದೆ.

12059055a ತಥಾ ರಾಜಗುಣಾಶ್ಚೈವ ಸೇನಾಪತಿಗುಣಾಶ್ಚ ಯೇ|

12059055c ಕಾರಣಸ್ಯ ಚ ಕರ್ತುಶ್ಚ ಗುಣದೋಷಾಸ್ತಥೈವ ಚ||

ಹಾಗೆಯೇ ರಾಜನ ಗುಣಗಳು, ಸೇನಾಪತಿಯ ಗುಣಗಳು, ಕರ್ತವ್ಯಗಳ ಕಾರಣ-ಗುಣ-ದೋಷಗಳನ್ನೂ ಬ್ರಹ್ಮನ ನೀತಿಶಾಸ್ತ್ರದಲ್ಲಿ ವಿವರಿಸಲಾಗಿದೆ.

12059056a ದುಷ್ಟೇಂಗಿತಂ ಚ ವಿವಿಧಂ ವೃತ್ತಿಶ್ಚೈವಾನುಜೀವಿನಾಮ್|

12059056c ಶಂಕಿತತ್ವಂ ಚ ಸರ್ವಸ್ಯ ಪ್ರಮಾದಸ್ಯ ಚ ವರ್ಜನಮ್||

12059057a ಅಲಬ್ಧಲಿಪ್ಸಾ ಲಬ್ಧಸ್ಯ ತಥೈವ ಚ ವಿವರ್ಧನಮ್|

12059057c ಪ್ರದಾನಂ ಚ ವಿವೃದ್ಧಸ್ಯ ಪಾತ್ರೇಭ್ಯೋ ವಿಧಿವತ್ತಥಾ||

12059058a ವಿಸರ್ಗೋಽರ್ಥಸ್ಯ ಧರ್ಮಾರ್ಥಮರ್ಥಾರ್ಥಂ ಕಾಮಹೇತುನಾ|

12059058c ಚತುರ್ಥೋ ವ್ಯಸನಾಘಾತೇ ತಥೈವಾತ್ರಾನುವರ್ಣಿತಃ||

ವಿವಿಧ ದುಷ್ಟ ಆಸೆಗಳು; ತನ್ನನ್ನೇ ಅವಲಂಬಿಸಿರುವವರಿಗೆ ವಹಿಸಿಕೊಡಬಹುದಾದ ಕಾರ್ಯಭಾರಗಳು; ಎಲ್ಲವನ್ನೂ ಶಂಕಿಸುವುದು; ಪ್ರಮಾದದ ವರ್ಜನೆ; ಲಭಿಸದೇ ಇರುವುದನ್ನು ಪಡೆದುಕೊಳ್ಳುವುದು ಮತ್ತು ಅದನ್ನು ವೃದ್ಧಿಗೊಳಿಸುವುದು; ವೃದ್ಧಿಯಾದುದನ್ನು ಪಾತ್ರರಿಗೆ ವಿಧಿವತ್ತಾಗಿ ದಾನಮಾಡುವುದು; ಧರ್ಮ-ಅರ್ಥ-ಕಾಮಗಳಿಗೆ ಮತ್ತು ನಾಲ್ಕನೆಯದಾಗಿ ವ್ಯಸನವೊದಗಿದಾಗ ಅದನ್ನು ಪರಿಹರಿಸಲು ಸಂಪತ್ತನ್ನು ವಿನಿಯೋಗಿಸುವುದು ಇವೆಲ್ಲವೂ ಬ್ರಹ್ಮನ ನೀತಿಶಾಸ್ತ್ರದಲ್ಲಿ ವರ್ಣಿತವಾಗಿವೆ.

12059059a ಕ್ರೋಧಜಾನಿ ತಥೋಗ್ರಾಣಿ ಕಾಮಜಾನಿ ತಥೈವ ಚ|

12059059c ದಶೋಕ್ತಾನಿ ಕುರುಶ್ರೇಷ್ಠ ವ್ಯಸನಾನ್ಯತ್ರ ಚೈವ ಹ||

ಕುರುಶ್ರೇಷ್ಠ! ಕಾಮ-ಕ್ರೋಧಗಳಿಂದ ಹುಟ್ಟುವ ಹತ್ತು ಉಗ್ರ ವ್ಯಸನಗಳ ಕುರಿತು ಇದರಲ್ಲಿ ವರ್ಣಿಸಲಾಗಿದೆ.

12059060a ಮೃಗಯಾಕ್ಷಾಸ್ತಥಾ ಪಾನಂ ಸ್ತ್ರಿಯಶ್ಚ ಭರತರ್ಷಭ|

12059060c ಕಾಮಜಾನ್ಯಾಹುರಾಚಾರ್ಯಾಃ ಪ್ರೋಕ್ತಾನೀಹ ಸ್ವಯಂಭುವಾ||

ಸ್ವಯಂಭುವು ಇದರಲ್ಲಿ ಆಚಾರ್ಯರು ಹೇಳುವ ಬೇಟೆ, ಜೂಜು, ಮದ್ಯಪಾನ, ಸ್ತ್ರೀಸಂಗ ಈ ನಾಲ್ಕು ಕಾಮಜನ್ಯ ವ್ಯಸನಗಳನ್ನು ವರ್ಣಿಸಿದ್ದಾನೆ.

12059061a ವಾಕ್ಪಾರುಷ್ಯಂ ತಥೋಗ್ರತ್ವಂ ದಂಡಪಾರುಷ್ಯಮೇವ ಚ|

12059061c ಆತ್ಮನೋ ನಿಗ್ರಹಸ್ತ್ಯಾಗೋಽಥಾರ್ಥದೂಷಣಮೇವ ಚ||

ಹಾಗೆಯೇ ಕ್ರೂರವಾದ ಮಾತು, ಉಗ್ರತೆ, ಕಠಿಣವಾಗಿ ದಂಡಿಸುವುದು, ತನ್ನನ್ನೇ ದಂಡಿಸಿಕೊಳ್ಳುವುದು, ಬಂಧು-ಬಳಗದವರನ್ನು ತ್ಯಜಿಸುವುದು, ಸಂಪತ್ತನ್ನು ದೂಷಿಸುವುದು – ಈ ಆರು ಕ್ರೋಧಜನ್ಯ ವ್ಯಸನಗಳ ವರ್ಣನೆಯೂ ಬ್ರಹ್ಮನ ನೀತಿಶಾಸ್ತ್ರದಲ್ಲಿದೆ.

12059062a ಯಂತ್ರಾಣಿ ವಿವಿಧಾನ್ಯೇವ ಕ್ರಿಯಾಸ್ತೇಷಾಂ ಚ ವರ್ಣಿತಾಃ|

12059062c ಅವಮರ್ದಃ ಪ್ರತೀಘಾತಃ ಕೇತನಾನಾಂ ಚ ಭಂಜನಮ್||

12059063a ಚೈತ್ಯದ್ರುಮಾಣಾಮಾಮರ್ದೋ ರೋಧಃಕರ್ಮಾಂತನಾಶನಮ್|

12059063c ಅಪಸ್ಕರೋಽಥ ಗಮನಂ ತಥೋಪಾಸ್ಯಾ ಚ ವರ್ಣಿತಾ||

ವಿವಿಧ ಯಂತ್ರಗಳೂ ಮತ್ತು ಅವುಗಳ ಕ್ರಿಯೆಗಳೂ ಇಲ್ಲಿ ವರ್ಣಿತವಾಗಿವೆ. ಶತ್ರುರಾಷ್ಟ್ರವನ್ನು ಧ್ವಂಸಗೊಳಿಸುವುದು; ಶತ್ರುವಿಗೆ ಆಘಾತವನ್ನುಂಟುಮಾಡುವುದು; ಕಟ್ಟಡಗಳ ನಾಶ; ಚೈತ್ಯ-ವೃಕ್ಷಗಳನ್ನು ಧ್ವಂಸಗೊಳಿಸುವುದು; ರಾಜಭವನವನ್ನು ನಾಲ್ಕೂ ಕಡೆಗಳಿಂದ ಮುತ್ತಿಗೆ ಹಾಕುವುದು ಇವುಗಳ ಉಪಾಯ-ವಿಧಾನಗಳ ಕುರಿತಾದ ವರ್ಣನೆಗಳಿವೆ.

12059064a ಪಣವಾನಕಶಂಖಾನಾಂ ಭೇರೀಣಾಂ ಚ ಯುಧಾಂ ವರ|

12059064c ಉಪಾರ್ಜನಂ ಚ ದ್ರವ್ಯಾಣಾಂ ಪರಮರ್ಮ ಚ ತಾನಿ ಷಟ್||

ಯೋದ್ಧರಲ್ಲಿ ಶ್ರೇಷ್ಠ! ಇದರಲ್ಲಿ ಮದ್ದಳೆ, ನಗಾರಿ, ಶಂಖ, ಭೇರಿ ಇವುಗಳನ್ನು ಬಾರಿಸುವ ಕ್ರಮ; ಆರು ದ್ರವ್ಯಗಳನ್ನು[10] ಸಂಪಾದಿಸುವ ಮತ್ತು ಶತ್ರುವಿನ ಈ ಆರು ದ್ರವ್ಯಗಳನ್ನು ನಾಶಪಡಿಸುವ ವಿಧಾನಗಳ ವರ್ಣನೆಯೂ ಇದೆ.

12059065a ಲಬ್ಧಸ್ಯ ಚ ಪ್ರಶಮನಂ ಸತಾಂ ಚೈವ ಹಿ ಪೂಜನಮ್|

12059065c ವಿದ್ವದ್ಭಿರೇಕೀಭಾವಶ್ಚ ಪ್ರಾತರ್ಹೋಮವಿಧಿಜ್ಞತಾ||[11]

12059066a ಮಂಗಲಾಲಂಭನಂ ಚೈವ ಶರೀರಸ್ಯ ಪ್ರತಿಕ್ರಿಯಾ|

12059066c ಆಹಾರಯೋಜನಂ ಚೈವ ನಿತ್ಯಮಾಸ್ತಿಕ್ಯಮೇವ ಚ||

ಪಡೆದುಕೊಂಡ ರಾಷ್ಟ್ರದಲ್ಲಿ ಶಾಂತಿಯ ಸ್ಥಾಪನೆ; ಸತ್ಪುರುಷರ ಪೂಜನ; ವಿದ್ವಾಂಸರೊಡನೆ ಏಕೀಭಾವದಿಂದಿರುವುದು; ಪ್ರಾತಃಕಾಲದಲ್ಲಿ ಮಾಡುವ ಹೋಮ, ಮಂಗಲ ವಸ್ತುಗಳನ್ನು ಮುಟ್ಟುವುದು; ಶರೀರದ ಸಿಂಗಾರ; ಆಹಾರಯೋಜನೆ ಮತ್ತು ನಿತ್ಯವೂ ಆಸ್ತಿಕ್ಯಭಾವದಿಂದಿರುವುದು ಇವುಗಳ ಕುರಿತ ಜ್ಞಾನವೂ ಬ್ರಹ್ಮನ ನೀತಿಶಾಸ್ತ್ರದಲ್ಲಿ ದೊರೆಯುತ್ತದೆ.

12059067a ಏಕೇನ ಚ ಯಥೋತ್ಥೇಯಂ ಸತ್ಯತ್ವಂ ಮಧುರಾ ಗಿರಃ|

12059067c ಉತ್ಸವಾನಾಂ ಸಮಾಜಾನಾಂ ಕ್ರಿಯಾಃ ಕೇತನಜಾಸ್ತಥಾ||

ಏಕಾಂಗಿಯಾಗಿದ್ದರೂ ಉನ್ನತನಾಗುವುದು; ಉತ್ಸವ ಮತ್ತು ಸಮಾಜದಲ್ಲಿ ಆಡಬೇಕಾದ ಸತ್ಯ-ಮಧುರ ಮಾತು-ಕ್ರಿಯೆ ಇವುಗಳ ಉಲ್ಲೇಖವೂ ಬ್ರಹ್ಮನ ನೀತಿಶಾಸ್ತ್ರದಲ್ಲಿದೆ.

12059068a ಪ್ರತ್ಯಕ್ಷಾ ಚ ಪರೋಕ್ಷಾ ಚ ಸರ್ವಾಧಿಕರಣೇಷು ಚ|

12059068c ವೃತ್ತಿರ್ಭರತಶಾರ್ದೂಲ ನಿತ್ಯಂ ಚೈವಾನ್ವವೇಕ್ಷಣಮ್||

ಭರತಶಾರ್ದೂಲ! ಎಲ್ಲ ಅಧಿಕಾರಿಗಳ ವೃತ್ತಿಗಳ ಕುರಿತು ಪ್ರತ್ಯಕ್ಷವಾಗಲೀ ಅಥವಾ ಪರೋಕ್ಷವಾಗಲೀ ನಿತ್ಯವೂ ತಿಳಿದುಕೊಂಡು ಮೇಲ್ವಿಚಾರಣೆ ಮಾಡುವುದರ ಕುರಿತೂ ಬ್ರಹ್ಮನ ನೀತಿಶಾಸ್ತ್ರದಲ್ಲಿ ವರ್ಣನೆಯಿದೆ.

12059069a ಅದಂಡ್ಯತ್ವಂ ಚ ವಿಪ್ರಾಣಾಂ ಯುಕ್ತ್ಯಾ ದಂಡನಿಪಾತನಮ್|

12059069c ಅನುಜೀವಿಸ್ವಜಾತಿಭ್ಯೋ ಗುಣೇಷು ಪರಿರಕ್ಷಣಮ್||

ವಿಪ್ರರನ್ನು ದಂಡಿಸದೇ ಇರುವುದು; ಯುಕ್ತಿಪೂರ್ವಕವಾಗಿ ದಂಡನೆಯನ್ನು ನೀಡುವುದು; ಅನುಯಾಯಿಗಳು, ಸ್ವಜಾತಿಯವರು ಮತ್ತು ಗುಣವಂತರ ರಕ್ಷಣೆ ಇವುಗಳ ಕುರಿತೂ ಬ್ರಹ್ಮನ ನೀತಿಶಾಸ್ತ್ರದಲ್ಲಿ ವರ್ಣನೆಯಿದೆ.

12059070a ರಕ್ಷಣಂ ಚೈವ ಪೌರಾಣಾಂ ಸ್ವರಾಷ್ಟ್ರಸ್ಯ ವಿವರ್ಧನಮ್|

12059070c ಮಂಡಲಸ್ಥಾ ಚ ಯಾ ಚಿಂತಾ ರಾಜನ್ದ್ವಾದಶರಾಜಿಕಾ||

12059071a ದ್ವಾಸಪ್ತತಿಮತಿಶ್ಚೈವ ಪ್ರೋಕ್ತಾ ಯಾ ಚ ಸ್ವಯಂಭುವಾ|

12059071c ದೇಶಜಾತಿಕುಲಾನಾಂ ಚ ಧರ್ಮಾಃ ಸಮನುವರ್ಣಿತಾಃ||

ರಾಜನ್! ಪೌರರ ರಕ್ಷಣೆ; ಸ್ವರಾಷ್ಟ್ರದ ಅಭಿವೃದ್ಧಿ; ಮಂಡಲಸ್ಥರಾಗಿರುವ ದ್ವಾದಶರಾಜಿಕರ[12] ಕುರಿತಾದ ಚಿಂತೆ; ಶರೀರಕ್ಕಿರುವ ಎಪ್ಪತ್ತೆರಡು ಚಿಕಿತ್ಸೆಗಳು; ಮತ್ತು ದೇಶ-ಜಾತಿ-ಕುಲಗಳ ಧರ್ಮಗಳು ಇವೆಲ್ಲವುಗಳನ್ನೂ ಸ್ವಯಂಭುವು ವರ್ಣಿಸಿದ್ದಾನೆ.

12059072a ಧರ್ಮಶ್ಚಾರ್ಥಶ್ಚ ಕಾಮಶ್ಚ ಮೋಕ್ಷಶ್ಚಾತ್ರಾನುವರ್ಣಿತಃ|

12059072c ಉಪಾಯಶ್ಚಾರ್ಥಲಿಪ್ಸಾ ಚ ವಿವಿಧಾ ಭೂರಿದಕ್ಷಿಣಾಃ||

ಭೂರಿದಕ್ಷಿಣ! ಈ ಗ್ರಂಥದಲ್ಲಿ ಧರ್ಮ-ಅರ್ಥ-ಕಾಮ-ಮೋಕ್ಷಗಳನ್ನು ಪಡೆಯುವ ವಿವಿಧ ಉಪಾಯಗಳೂ ವರ್ಣಿತವಾಗಿವೆ.

12059073a ಮೂಲಕರ್ಮಕ್ರಿಯಾ ಚಾತ್ರ ಮಾಯಾ ಯೋಗಶ್ಚ ವರ್ಣಿತಃ|

12059073c ದೂಷಣಂ ಸ್ರೋತಸಾಮತ್ರ ವರ್ಣಿತಂ ಚ ಸ್ಥಿರಾಂಭಸಾಮ್||

ಇದರಲ್ಲಿ ಮೂಲಕರ್ಮಕ್ರಿಯೆಗಳು, ಮಾಯೆಯನ್ನು ಬಳಸುವುದು, ಹರಿಯುವ ಮತ್ತು ನಿಂತನೀರಿನ ದೂಷಣೆ ಇವುಗಳ ಕುರಿತಾದ ವರ್ಣನೆಯೂ ಇದೆ.

12059074a ಯೈರ್ಯೈರುಪಾಯೈರ್ಲೋಕಶ್ಚ ನ ಚಲೇದಾರ್ಯವರ್ತ್ಮನಃ|

12059074c ತತ್ಸರ್ವಂ ರಾಜಶಾರ್ದೂಲ ನೀತಿಶಾಸ್ತ್ರೇಽನುವರ್ಣಿತಮ್||

ರಾಜಶಾರ್ದೂಲ! ಯಾವ ಯಾವ ಉಪಾಯಗಳಿಂದ ಈ ಲೋಕವು ಸನ್ಮಾರ್ಗದಿಂದ ವಿಚಲಿತವಾಗುವುದಿಲ್ಲವೋ ಆ ಎಲ್ಲವನ್ನೂ ಈ ನೀತಿಶಾಸ್ತ್ರದಲ್ಲಿ ವರ್ಣಿಸಲಾಗಿದೆ.

12059075a ಏತತ್ಕೃತ್ವಾ ಶುಭಂ ಶಾಸ್ತ್ರಂ ತತಃ ಸ ಭಗವಾನ್ಪ್ರಭುಃ|

12059075c ದೇವಾನುವಾಚ ಸಂಹೃಷ್ಟಃ ಸರ್ವಾನ್ಶಕ್ರಪುರೋಗಮಾನ್||

ಈ ಶುಭ ಶಾಸ್ತ್ರವನ್ನು ರಚಿಸಿ ಭಗವಾನ್ ಪ್ರಭುವು ಸಂಹೃಷ್ಟನಾಗಿ ಶಕ್ರನನ್ನೇ ಮುಂದಿಟ್ಟುಕೊಂಡಿದ್ದ ಸರ್ವ ದೇವತೆಗಳಿಗೂ ಹೇಳಿದನು:

12059076a ಉಪಕಾರಾಯ ಲೋಕಸ್ಯ ತ್ರಿವರ್ಗಸ್ಥಾಪನಾಯ ಚ|

12059076c ನವನೀತಂ ಸರಸ್ವತ್ಯಾ ಬುದ್ಧಿರೇಷಾ ಪ್ರಭಾವಿತಾ||

“ಲೋಕದ ಉಪಕಾರಕ್ಕಾಗಿ ಮತ್ತು ತ್ರಿವರ್ಗಗಳ ಸ್ಥಾಪನೆಗಾಗಿ ಸರಸ್ವತಿಯಿಂದ ನನ್ನ ಬುದ್ಧಿಯಲ್ಲಿ ಈ ನವನೀತವು ಪ್ರಕಾಶಗೊಂಡಿದೆ.

12059077a ದಂಡೇನ ಸಹಿತಾ ಹ್ಯೇಷಾ ಲೋಕರಕ್ಷಣಕಾರಿಕಾ|

12059077c ನಿಗ್ರಹಾನುಗ್ರಹರತಾ ಲೋಕಾನನು ಚರಿಷ್ಯತಿ||

ದಂಡಶಾಸ್ತ್ರವನ್ನು ಹೊಂದಿರುವ ಇದು ಲೋಕರಕ್ಷಣೆಗೆ ಕಾರಣವಾಗುತ್ತದೆ. ನಿಗ್ರಹ-ಅನುಗ್ರಹಗಳನ್ನು ವರ್ಣಿಸುವ ಇದು ಲೋಕಗಳಲ್ಲಿ ಪ್ರಚಲಿತವಾಗುತ್ತದೆ.

12059078a ದಂಡೇನ ನೀಯತೇ ಚೇಯಂ ದಂಡಂ ನಯತಿ ಚಾಪ್ಯುತ|

12059078c ದಂಡನೀತಿರಿತಿ ಪ್ರೋಕ್ತಾ ತ್ರೀಽಲ್ಲೋಕಾನನುವರ್ತತೇ||

ದಂಡದ ಮೂಲಕ ಲೋಕವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಬಹುದು. ಮತ್ತು ದಂಡವೇ ಲೋಕವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತದೆ. ದಂಡನೀತಿಯೆಂದು ಕರೆಯಲ್ಪಡುವ ಈ ನೀತಿಶಾಸ್ತ್ರವು ಮೂರು ಲೋಕಗಳನ್ನೂ ವ್ಯಾಪಿಸಿದೆ.

12059079a ಷಾಡ್ಗುಣ್ಯಗುಣಸಾರೈಷಾ ಸ್ಥಾಸ್ಯತ್ಯಗ್ರೇ ಮಹಾತ್ಮಸು|

12059079c ಮಹತ್ತ್ವಾತ್ತಸ್ಯ ದಂಡಸ್ಯ ನೀತಿರ್ವಿಸ್ಪಷ್ಟಲಕ್ಷಣಾ||

ಆರುಗುಣಗಳ ಸಾರವು ಇದರಲ್ಲಿದೆ. ಮಹಾತ್ಮರ ಪ್ರಕಾರ ಇದರ ಸ್ಥಾನವು ಅತ್ಯುನ್ನತವಾಗಿದೆ. ದಂಡನೀತಿಯ ಸ್ಪಷ್ಟಲಕ್ಷಣಗಳೇ ಇದರ ಮಹತ್ತ್ವ.”

12059080a ನಯಚಾರಶ್ಚ ವಿಪುಲೋ ಯೇನ ಸರ್ವಮಿದಂ ತತಮ್|

12059080c ಆಗಮಶ್ಚ ಪುರಾಣಾನಾಂ ಮಹರ್ಷೀಣಾಂ ಚ ಸಂಭವಃ||

12059081a ತೀರ್ಥವಂಶಶ್ಚ ವಂಶಶ್ಚ ನಕ್ಷತ್ರಾಣಾಂ ಯುಧಿಷ್ಠಿರ|

12059081c ಸಕಲಂ ಚಾತುರಾಶ್ರಮ್ಯಂ ಚಾತುರ್ಹೋತ್ರಂ ತಥೈವ ಚ||

12059082a ಚಾತುರ್ವರ್ಣ್ಯಂ ತಥೈವಾತ್ರ ಚಾತುರ್ವೇದ್ಯಂ ಚ ವರ್ಣಿತಮ್|

12059082c ಇತಿಹಾಸೋಪವೇದಾಶ್ಚ ನ್ಯಾಯಃ ಕೃತ್ಸ್ನಶ್ಚ ವರ್ಣಿತಃ||

ಯುಧಿಷ್ಠಿರ! ಸಂಪೂರ್ಣ ಶಿಷ್ಟಾಚಾರಗಳೆಲ್ಲವೂ; ಆಗಮ-ಪುರಾಣ ಮತ್ತು ಮಹರ್ಷಿಗಳ ಹುಟ್ಟು; ತೀರ್ಥಕ್ಷೇತ್ರಗಳ ವಂಶ, ನಕ್ಷತ್ರಗಳ ವಂಶ, ಚತುರಾಶ್ರಮಗಳ ಸಕಲವೂ; ನಾಲ್ಕು ಹೋತ್ರಗಳೂ, ಇತಿಹಾಸ-ಉಪವೇದಗಳು ಮತ್ತು ನ್ಯಾಯ ಇವೆಲ್ಲವೂ ಇದರಲ್ಲಿ ಸಂಪೂರ್ಣವಾಗಿ ವರ್ಣಿತಗೊಂಡಿವೆ.

12059083a ತಪೋ ಜ್ಞಾನಮಹಿಂಸಾ ಚ ಸತ್ಯಾಸತ್ಯೇ ನಯಃ ಪರಃ|

12059083c ವೃದ್ಧೋಪಸೇವಾ ದಾನಂ ಚ ಶೌಚಮುತ್ಥಾನಮೇವ ಚ||

12059084a ಸರ್ವಭೂತಾನುಕಂಪಾ ಚ ಸರ್ವಮತ್ರೋಪವರ್ಣಿತಮ್|

12059084c ಭುವಿ ವಾಚೋಗತಂ ಯಚ್ಚ ತಚ್ಚ ಸರ್ವಂ ಸಮರ್ಪಿತಮ್||

ತಪಸ್ಸು, ಜ್ಞಾನ, ಅಹಿಂಸೆ, ಸತ್ಯ, ಅಸತ್ಯ ಮತ್ತು ನ್ಯಾಯ, ವೃದ್ಧರ ಸೇವೆ, ದಾನ, ಶೌಚ, ಉತ್ಥಾನ, ಸರ್ವಭೂತಾನುಕಂಪ, ಇವೆಲ್ಲವೂ ಇದರಲ್ಲಿ ವರ್ಣಿತವಾಗಿವೆ. ಭುವಿಯಲ್ಲಿ ಮಾತನಾಡಲು ಏನೆಲ್ಲ ಇವೆಯೋ ಅವೆಲ್ಲವೂ ಇದರಲ್ಲಿವೆ.

12059085a ತಸ್ಮಿನ್ಪೈತಾಮಹೇ ಶಾಸ್ತ್ರೇ ಪಾಂಡವೈತದಸಂಶಯಮ್|

12059085c ಧರ್ಮಾರ್ಥಕಾಮಮೋಕ್ಷಾಶ್ಚ ಸಕಲಾ ಹ್ಯತ್ರ ಶಬ್ದಿತಾಃ||

ಪಾಂಡವ! ಪಿತಾಮಹನ ಈ ಶಾಸ್ತ್ರದಲ್ಲಿ ನಿಸ್ಸಂಶಯವಾಗಿಯು ಧರ್ಮ-ಅರ್ಥ-ಕಾಮ-ಮೋಕ್ಷಗಳ ಕುರಿತಾದ ಎಲ್ಲವೂ ವರ್ಣಿತವಾಗಿವೆ.

12059086a ತತಸ್ತಾಂ ಭಗವಾನ್ನೀತಿಂ ಪೂರ್ವಂ ಜಗ್ರಾಹ ಶಂಕರಃ|

12059086c ಬಹುರೂಪೋ ವಿಶಾಲಾಕ್ಷಃ ಶಿವಃ ಸ್ಥಾಣುರುಮಾಪತಿಃ||

ಮೊದಲು ಆ ನೀತಿಶಾಸ್ತ್ರವನ್ನು ಭಗವಾನ್ ಶಂಕರ ಬಹುರೂಪ ವಿಶಾಲಾಕ್ಷ ಶಿವ ಸ್ಥಾಣು ಉಮಾಪತಿಯು ಪ್ರತಿಗ್ರಹಿಸಿದನು.

12059087a ಯುಗಾನಾಮಾಯುಷೋ ಹ್ರಾಸಂ ವಿಜ್ಞಾಯ ಭಗವಾನ್ಶಿವಃ|

12059087c ಸಂಚಿಕ್ಷೇಪ ತತಃ ಶಾಸ್ತ್ರಂ ಮಹಾರ್ಥಂ ಬ್ರಹ್ಮಣಾ ಕೃತಮ್||

ಯುಗಗಳ ಆಯಸ್ಸು ಕಡಿಮೆಯಾಗುತ್ತದೆಯೆಂದು ತಿಳಿದ ಭಗವಾನ್ ಶಿವನು ಮಹಾರ್ಥವುಳ್ಳ ಬ್ರಹ್ಮಕೃತ ಆ ಶಾಸ್ತ್ರವನ್ನು ಸಂಕ್ಷಿಪ್ತಗೊಳಿಸಿದನು.

12059088a ವೈಶಾಲಾಕ್ಷಮಿತಿ ಪ್ರೋಕ್ತಂ ತದಿಂದ್ರಃ ಪ್ರತ್ಯಪದ್ಯತ|

12059088c ದಶಾಧ್ಯಾಯಸಹಸ್ರಾಣಿ ಸುಬ್ರಹ್ಮಣ್ಯೋ ಮಹಾತಪಾಃ||

ವೈಶಾಲಾಕ್ಷವೆಂದು ಕರೆಯಲ್ಪಟ್ಟ ಹತ್ತು ಸಾವಿರ ಅಧ್ಯಾಯಗಳುಳ್ಳ ಅದನ್ನು ಮಹಾತಪಸ್ವಿ ಸುಬ್ರಹ್ಮಣ್ಯ ಇಂದ್ರನು ಪಡೆದುಕೊಂಡನು.

12059089a ಭಗವಾನಪಿ ತಚ್ಚಾಸ್ತ್ರಂ ಸಂಚಿಕ್ಷೇಪ ಪುರಂದರಃ|

12059089c ಸಹಸ್ರೈಃ ಪಂಚಭಿಸ್ತಾತ ಯದುಕ್ತಂ ಬಾಹುದಂತಕಮ್||

ಭಗವಾನ್ ಪುರಂದರನು ಅದನ್ನು ಇನ್ನೂ ಸಂಕ್ಷೇಪಗೊಳಿಸಿದನು. ಅಯ್ಯಾ! ಐದು ಸಾವಿರ ಅಧ್ಯಾಯಗಳಿದ್ದ ಅದು ಬಾಹುದಂತಕ ಎಂದಾಯಿತು.

12059090a ಅಧ್ಯಾಯಾನಾಂ ಸಹಸ್ರೈಸ್ತು ತ್ರಿಭಿರೇವ ಬೃಹಸ್ಪತಿಃ|

12059090c ಸಂಚಿಕ್ಷೇಪೇಶ್ವರೋ ಬುದ್ಧ್ಯಾ ಬಾರ್ಹಸ್ಪತ್ಯಂ ತದುಚ್ಯತೇ||

ಈಶ್ವರ ಬೃಹಸ್ಪತಿಯು ತನ್ನ ಬುದ್ಧಿಯಿಂದ ಅದನ್ನು ಮೂರು ಸಾವಿರ ಅಧ್ಯಾಯಗಳಿದ್ದುದನ್ನು ಮಾಡಿ ಇನ್ನೂ ಸಂಕ್ಷೇಪಿಸಿದನು. ಅದನ್ನು ಬಾರ್ಹಸ್ಪತ್ಯ ಎಂದು ಕರೆಯುತ್ತಾರೆ.

12059091a ಅಧ್ಯಾಯಾನಾಂ ಸಹಸ್ರೇಣ ಕಾವ್ಯಃ ಸಂಕ್ಷೇಪಮಬ್ರವೀತ್|

12059091c ತಚ್ಚಾಸ್ತ್ರಮಮಿತಪ್ರಜ್ಞೋ ಯೋಗಾಚಾರ್ಯೋ ಮಹಾತಪಾಃ||

ಆ ಶಾಸ್ತ್ರವನ್ನು ಯೋಗಾಚಾರ್ಯ ಮಹಾತಪಸ್ವಿ ಅಮಿತಪ್ರಜ್ಞ ಕಾವ್ಯನು ಒಂದು ಸಾವಿರ ಅಧ್ಯಾಯಗಳಾಗಿ ಸಂಕ್ಷೇಪಿಸಿದನು.

12059092a ಏವಂ ಲೋಕಾನುರೋಧೇನ ಶಾಸ್ತ್ರಮೇತನ್ಮಹರ್ಷಿಭಿಃ|

12059092c ಸಂಕ್ಷಿಪ್ತಮಾಯುರ್ವಿಜ್ಞಾಯ ಮರ್ತ್ಯಾನಾಂ ಹ್ರಾಸಿ ಪಾಂಡವ||

ಪಾಂಡವ! ಹೀಗೆ ಲೋಕದಲ್ಲಿ ಮನುಷ್ಯರ ಆಯುಃ ಪ್ರಮಾಣವು ಕಡಿಮೆಯಾಗುತ್ತಿರುವುದನ್ನು ಮನಗಂಡ ಮಹರ್ಷಿಗಳು ಬ್ರಹ್ಮರಚಿತ ನೀತಿಶಾಸ್ತ್ರವನ್ನು ಲೋಕಹಿತಕ್ಕಾಗಿ ಸಂಕ್ಷಿಪ್ತಗೊಳಿಸುತ್ತಾ ಬಂದಿದ್ದಾರೆ.

12059093a ಅಥ ದೇವಾಃ ಸಮಾಗಮ್ಯ ವಿಷ್ಣುಮೂಚುಃ ಪ್ರಜಾಪತಿಮ್|

12059093c ಏಕೋ ಯೋಽರ್ಹತಿ ಮರ್ತ್ಯೇಭ್ಯಃ ಶ್ರೈಷ್ಠ್ಯಂ ತಂ ವೈ ಸಮಾದಿಶ||

ಒಮ್ಮೆ ದೇವತೆಗಳು ಪ್ರಜಾಪತಿ ವಿಷ್ಣುವಿನ ಬಳಿಸಾರಿ “ಮನುಷ್ಯರಲ್ಲಿ ಶ್ರೇಷ್ಠನೆನಿಸಿಕೊಳ್ಳಲು ಅರ್ಹನಾದವನು ಯಾರು ಎನ್ನುವುದನ್ನು ತಿಳಿಸಿಕೊಡು!” ಎಂದು ಕೇಳಿಕೊಂಡರು.

12059094a ತತಃ ಸಂಚಿಂತ್ಯ ಭಗವಾನ್ದೇವೋ ನಾರಾಯಣಃ ಪ್ರಭುಃ|

12059094c ತೈಜಸಂ ವೈ ವಿರಜಸಂ ಸೋಽಸೃಜನ್ಮಾನಸಂ ಸುತಮ್||

ಆಗ ಭಗವಾನ್ ದೇವ ನಾರಾಯಣ ಪ್ರಭುವು ಸ್ವಲ್ಪ ಹೊತ್ತು ಯೋಚಿಸಿ ತನ್ನ ತೇಜಸ್ಸಿನಿಂದ ವಿರಜಸನೆಂಬ ಮಾನಸ ಪುತ್ರನನ್ನು ಸೃಷ್ಟಿಸಿದನು.

12059095a ವಿರಜಾಸ್ತು ಮಹಾಭಾಗ ವಿಭುತ್ವಂ ಭುವಿ ನೈಚ್ಚತ|

12059095c ನ್ಯಾಸಾಯೈವಾಭವದ್ಬುದ್ಧಿಃ ಪ್ರಣೀತಾ ತಸ್ಯ ಪಾಂಡವ||

ಮಹಾಭಾಗ! ಪಾಂಡವ! ಆದರೆ ವಿರಜಸನು ಭುವಿಯ ವಿಭುತ್ವವನ್ನು ಬಯಸಲಿಲ್ಲ. ಅವನ ಬುದ್ಧಿಯು ಸಂನ್ಯಾಸದಲ್ಲಿಯೇ ತೊಡಗಿಕೊಂಡಿತ್ತು.

12059096a ಕೀರ್ತಿಮಾಂಸ್ತಸ್ಯ ಪುತ್ರೋಽಭೂತ್ಸೋಽಪಿ ಪಂಚಾತಿಗೋಽಭವತ್|

12059096c ಕರ್ದಮಸ್ತಸ್ಯ ಚ ಸುತಃ ಸೋಽಪ್ಯತಪ್ಯನ್ಮಹತ್ತಪಃ||

ಅವನಿಗೆ ಕೀರ್ತಿಮಾನನೆಂಬ ಮಗನು ಹುಟ್ಟಿದನು. ಆದರೆ ಅವನೂ ಪಂಚತತ್ತ್ವಗಳಿಗೂ ಅತೀತವಾದ ಅಧ್ಯಾತ್ಮವನ್ನೇ ಅನುಸರಿಸಿದನು. ಅವನ ಮಗ ಕರ್ದಮನೂ ಕೂಡ ಮಹಾತಪಸ್ಸಿನಲ್ಲಿಯೇ ನಿರತನಾದನು.

12059097a ಪ್ರಜಾಪತೇಃ ಕರ್ದಮಸ್ಯ ಅನಂಗೋ ನಾಮ ವೈ ಸುತಃ|

12059097c ಪ್ರಜಾನಾಂ ರಕ್ಷಿತಾ ಸಾಧುರ್ದಂಡನೀತಿವಿಶಾರದಃ||

ಪ್ರಜಾಪತಿ ಕರ್ದಮನ ಮಗನ ಹೆಸರು ಅನಂಗ. ಅವನು ಪ್ರಜೆಗಳ ರಕ್ಷಕನೂ, ಸಾಧುವೂ, ದಂಡನೀತಿ ವಿಶಾರದನೂ ಆಗಿದ್ದನು.

12059098a ಅನಂಗಪುತ್ರೋಽತಿಬಲೋ ನೀತಿಮಾನಧಿಗಮ್ಯ ವೈ|

12059098c ಅಭಿಪೇದೇ ಮಹೀರಾಜ್ಯಮಥೇಂದ್ರಿಯವಶೋಽಭವತ್||

ಅನಂಗನ ಮಗನು ಅತಿಬಲನು. ಅವನು ನೀತಿಶಾಸ್ತ್ರದಲ್ಲಿ ಪಾರಂಗತನಾಗಿದ್ದನು. ಅವನು ಮಹೀರಾಜ್ಯವನ್ನು ಆಳಿದನು. ಆದರೆ ಅವನು ಇಂದ್ರಿಯಗಳಿಗೆ ವಶನಾಗಿಬಿಟ್ಟಿದ್ದನು.

12059099a ಮೃತ್ಯೋಸ್ತು ದುಹಿತಾ ರಾಜನ್ಸುನೀಥಾ ನಾಮ ಮಾನಸೀ|

12059099c ಪ್ರಖ್ಯಾತಾ ತ್ರಿಷು ಲೋಕೇಷು ಯಾ ಸಾ ವೇನಮಜೀಜನತ್||

ರಾಜನ್! ಮೃತ್ಯುವಿಗೆ ಸುನೀಥಾ ಎಂಬ ಹೆಸರಿನ ಮಾನಸ ಪುತ್ರಿಯಿದ್ದಳು. ಮೂರು ಲೋಕಗಳಲ್ಲಿಯೂ ವಿಖ್ಯಾತಳಾಗಿದ್ದ ಅವಳು ಅತಿಬಲನ ಮಗ ವೇನನಿಗೆ ಜನ್ಮವಿತ್ತಳು.

12059100a ತಂ ಪ್ರಜಾಸು ವಿಧರ್ಮಾಣಂ ರಾಗದ್ವೇಷವಶಾನುಗಮ್|

12059100c ಮಂತ್ರಪೂತೈಃ ಕುಶೈರ್ಜಘ್ನುರೃಷಯೋ ಬ್ರಹ್ಮವಾದಿನಃ||

ರಾಗ-ದ್ವೇಷಗಳ ವಶಕ್ಕೆ ಸಿಲುಕಿ, ಪ್ರಜೆಗಳಲ್ಲಿ ಅಧರ್ಮವನ್ನೆಸಗುತ್ತಿದ್ದ ಅವನನ್ನು ಬ್ರಹ್ಮವಾದಿ ಋಷಿಗಳು ಮಂತ್ರಪೂತ ದರ್ಭೆಗಳಿಂದ ಸಂಹರಿಸಿದರು.

12059101a ಮಮಂಥುರ್ದಕ್ಷಿಣಂ ಚೋರುಮೃಷಯಸ್ತಸ್ಯ ಮಂತ್ರತಃ|

12059101c ತತೋಽಸ್ಯ ವಿಕೃತೋ ಜಜ್ಞೇ ಹ್ರಸ್ವಾಂಗಃ ಪುರುಷೋ ಭುವಿ||

ಅನಂತರ ಋಷಿಗಳು ಮಂತ್ರಪೂರ್ವಕವಾಗಿ ಅವನ ಎಡತೊಡೆಯನ್ನು ಮಥಿಸಿದರು. ಅದರಿಂದ ಆಗ ಭುವಿಯಲ್ಲಿ ವಿಕೃತನಾಗಿದ್ದ ಕುಬ್ಜ ಪುರುಷನೊಬ್ಬನು ಜನಿಸಿದನು.

12059102a ದಗ್ಧಸ್ಥಾಣುಪ್ರತೀಕಾಶೋ ರಕ್ತಾಕ್ಷಃ ಕೃಷ್ಣಮೂರ್ಧಜಃ|

12059102c ನಿಷೀದೇತ್ಯೇವಮೂಚುಸ್ತಮೃಷಯೋ ಬ್ರಹ್ಮವಾದಿನಃ||

ಸುಟ್ಟ ಕಲ್ಲಿನಂತೆ ತೋರುತ್ತಿದ್ದ, ಕೆಂಪುಕಣ್ಣಿನ ಮತ್ತು ಕಪ್ಪು ತಲೆಗೂದಲಿನ ಅವನಿಗೆ ಬ್ರಹ್ಮವಾದಿ ಋಷಿಗಳು “ಕುಳಿತುಕೋ!” ಎಂದು ಹೇಳಿದರು.

12059103a ತಸ್ಮಾನ್ನಿಷಾದಾಃ ಸಂಭೂತಾಃ ಕ್ರೂರಾಃ ಶೈಲವನಾಶ್ರಯಾಃ|

12059103c ಯೇ ಚಾನ್ಯೇ ವಿಂಧ್ಯನಿಲಯಾ ಮ್ಲೇಚ್ಚಾಃ ಶತಸಹಸ್ರಶಃ||

ಅವನಿಂದಲೇ ಪರ್ವತ-ವನಗಳನ್ನು ಆಶ್ರಯಿಸಿದ ಕ್ರೂರ ನಿಷಾದರು ಮತ್ತು ವಿಂಧ್ಯಾಚಲ ನಿವಾಸಿಗಳಾದ ಅನ್ಯ ನೂರಾರು ಸಹಸ್ರಾರು ಮ್ಲೇಚ್ಛರೂ ಹುಟ್ಟಿದರು.

12059104a ಭೂಯೋಽಸ್ಯ ದಕ್ಷಿಣಂ ಪಾಣಿಂ ಮಮಂಥುಸ್ತೇ ಮಹರ್ಷಯಃ|

12059104c ತತಃ ಪುರುಷ ಉತ್ಪನ್ನೋ ರೂಪೇಣೇಂದ್ರ ಇವಾಪರಃ||

ಮಹರ್ಷಿಗಳು ಪುನಃ ವೇನನ ಬಲಗೈಯನ್ನು ಕಡೆದರು. ಆಗ ಅದರಿಂದ ಇಂದ್ರನ ರೂಪವುಳ್ಳ ಇನ್ನೊಬ್ಬ ಪುರುಷನು ಉತ್ಪನ್ನನಾದನು.

12059105a ಕವಚೀ ಬದ್ಧನಿಸ್ತ್ರಿಂಶಃ ಸಶರಃ ಸಶರಾಸನಃ|

12059105c ವೇದವೇದಾಂಗವಿಚ್ಚೈವ ಧನುರ್ವೇದೇ ಚ ಪಾರಗಃ||

ಕವಚವನ್ನು ಧರಿಸಿ, ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಂಡು, ಧನುಸ್ಸು-ಬಾಣಗಳನ್ನು ಹಿಡಿದಿದ್ದ ಅವನು ವೇದವೇದಾಂಗವಿದುವೂ ಧನುರ್ವೇದ ಪಾರಂಗತನೂ ಆಗಿದ್ದನು.

12059106a ತಂ ದಂಡನೀತಿಃ ಸಕಲಾ ಶ್ರಿತಾ ರಾಜನ್ನರೋತ್ತಮಮ್|

12059106c ತತಃ ಸ ಪ್ರಾಂಜಲಿರ್ವೈನ್ಯೋ ಮಹರ್ಷೀಂಸ್ತಾನುವಾಚ ಹ||

ರಾಜನ್! ಆ ನರೋತ್ತಮನನ್ನು ಸಕಲ ದಂಡನೀತಿಗಳೂ ಆಶ್ರಯಿಸಿದವು. ಅನಂತರ ಆ ವೈನ್ಯನು ಮಹರ್ಷಿಗಳಿಗೆ ಕೈಮುಗಿದು ಹೇಳಿದನು:

12059107a ಸುಸೂಕ್ಷ್ಮಾ ಮೇ ಸಮುತ್ಪನ್ನಾ ಬುದ್ಧಿರ್ಧರ್ಮಾರ್ಥದರ್ಶಿನೀ|

12059107c ಅನಯಾ ಕಿಂ ಮಯಾ ಕಾರ್ಯಂ ತನ್ಮೇ ತತ್ತ್ವೇನ ಶಂಸತ||

“ಧರ್ಮಾರ್ಥಗಳನ್ನು ಕಾಣುವ ಸೂಕ್ಷ್ಮ ಬುದ್ಧಿಯು ನನ್ನಲ್ಲಿ ಪ್ರಾದುರ್ಭವಿಸಿದೆ. ಇದರಿಂದ ನಾನು ಏನು ಕಾರ್ಯವನ್ನು ಮಾಡಬೇಕು ಎನ್ನುವುದನ್ನು ಯಥಾವತ್ತಾಗಿ ಹೇಳಿರಿ!

12059108a ಯನ್ಮಾಂ ಭವಂತೋ ವಕ್ಷ್ಯಂತಿ ಕಾರ್ಯಮರ್ಥಸಮನ್ವಿತಮ್|

12059108c ತದಹಂ ವೈ ಕರಿಷ್ಯಾಮಿ ನಾತ್ರ ಕಾರ್ಯಾ ವಿಚಾರಣಾ||

ನೀವು ನನಗೆ ಅರ್ಥಸಮನ್ವಿತವಾದ ಯಾವ ಕಾರ್ಯದ ಕುರಿತು ಹೇಳುತ್ತೀರೋ ಅದನ್ನೇ ನಾನು ಮಾಡುತ್ತೇನೆ. ಅದರ ಕುರಿತು ವಿಚಾರಿಸಬೇಕಾಗಿಲ್ಲ!”

12059109a ತಮೂಚುರಥ ದೇವಾಸ್ತೇ ತೇ ಚೈವ ಪರಮರ್ಷಯಃ|

12059109c ನಿಯತೋ ಯತ್ರ ಧರ್ಮೋ ವೈ ತಮಶಂಕಃ ಸಮಾಚರ||

ಆಗ ದೇವತೆಗಳೂ ಪರಮಋಷಿಗಳೂ ಅವನಿಗೆ ಹೇಳಿದರು: “ಯಾವುದರಲ್ಲಿ ಧರ್ಮವು ನಿಯತವಾಗಿದೆಯೋ ಶಂಕೆಯಿಲ್ಲದೇ ಅದರಂತೆ ನಡೆದುಕೋ!

12059110a ಪ್ರಿಯಾಪ್ರಿಯೇ ಪರಿತ್ಯಜ್ಯ ಸಮಃ ಸರ್ವೇಷು ಜಂತುಷು|

12059110c ಕಾಮಕ್ರೋಧೌ ಚ ಲೋಭಂ ಚ ಮಾನಂ ಚೋತ್ಸೃಜ್ಯ ದೂರತಃ||

ಪ್ರಿಯ-ಅಪ್ರಿಯವೆಂಬ ವಿಚಾರವನ್ನು ಪರಿತ್ಯಜಿಸಿ, ಕಾಮ-ಕ್ರೋಧ ಮತ್ತು ಲೋಭ-ಮಾನಗಳನ್ನು ದೂರ ಬಿಸುಟು ಸರ್ವ ಜಂತುಗಳ ಕುರಿತೂ ಸಮಭಾವದಿಂದಿರು!

12059111a ಯಶ್ಚ ಧರ್ಮಾತ್ಪ್ರವಿಚಲೇಲ್ಲೋಕೇ ಕಶ್ಚನ ಮಾನವಃ|

12059111c ನಿಗ್ರಾಹ್ಯಸ್ತೇ ಸ ಬಾಹುಭ್ಯಾಂ ಶಶ್ವದ್ಧರ್ಮಮವೇಕ್ಷತಃ||

ಯಾವಾಗಲೂ ಧರ್ಮವನ್ನೇ ಕಾಣುವ ನೀನು ಲೋಕದಲ್ಲಿ ಯಾವುದೇ ಮಾನವನು ಈ ಧರ್ಮವನ್ನು ಉಲ್ಲಂಘಿಸಿ ನಡೆದುಕೊಂಡರೆ ಅವನನ್ನು ನಿನ್ನ ಬಾಹುಗಳಿಂದ ನಿಗ್ರಹಿಸು.

12059112a ಪ್ರತಿಜ್ಞಾಂ ಚಾಧಿರೋಹಸ್ವ ಮನಸಾ ಕರ್ಮಣಾ ಗಿರಾ|

12059112c ಪಾಲಯಿಷ್ಯಾಮ್ಯಹಂ ಭೌಮಂ ಬ್ರಹ್ಮ ಇತ್ಯೇವ ಚಾಸಕೃತ್||

ಅಲ್ಲದೇ ಈ ಪ್ರತಿಜ್ಞೆಯನ್ನೂ ಕೈಗೊಳ್ಳು: “ಮನಸ್ಸು, ಮಾತು ಮತ್ತು ಕರ್ಮಗಳಿಂದ ನಾನು ಈ ಭೂಮಿಯಲ್ಲಿ ಬ್ರಹ್ಮವಿದ್ಯೆಯನ್ನು ಪಾಲಿಸುತ್ತೇನೆ!

12059113a ಯಶ್ಚಾತ್ರ ಧರ್ಮನೀತ್ಯುಕ್ತೋ ದಂಡನೀತಿವ್ಯಪಾಶ್ರಯಃ|

12059113c ತಮಶಂಕಃ ಕರಿಷ್ಯಾಮಿ ಸ್ವವಶೋ ನ ಕದಾ ಚನ||

ದಂಡನೀತಿಯಲ್ಲಿ ಧರ್ಮವೆಂದು ಏನು ಹೇಳಲ್ಪಟ್ಟಿದೆಯೋ ಅದನ್ನು ಶಂಕಿಸದೇ ಪಾಲಿಸುತ್ತೇನೆ. ನಾನು ಎಂದೂ ಸ್ವ-ವಶನಾಗುವುದಿಲ್ಲ!”

12059114a ಅದಂಡ್ಯಾ ಮೇ ದ್ವಿಜಾಶ್ಚೇತಿ ಪ್ರತಿಜಾನೀಷ್ವ ಚಾಭಿಭೋ|

12059114c ಲೋಕಂ ಚ ಸಂಕರಾತ್ಕೃತ್ಸ್ನಾತ್ತ್ರಾತಾಸ್ಮೀತಿ ಪರಂತಪ||

ವಿಭೋ! ಪರಂತಪ! “ದ್ವಿಜರನ್ನು ದಂಡಿಸುವುದಿಲ್ಲ ಮತ್ತು ಲೋಕವನ್ನು ಸಂಕರದಿಂದ ಕಾಪಾಡುತ್ತೇನೆ!” ಎಂದೂ ಪ್ರತಿಜ್ಞೆಮಾಡು!”

12059115a ವೈನ್ಯಸ್ತತಸ್ತಾನುವಾಚ ದೇವಾನೃಷಿಪುರೋಗಮಾನ್|

12059115c ಬ್ರಾಹ್ಮಣಾ ಮೇ ಸಹಾಯಾಶ್ಚೇದೇವಮಸ್ತು ಸುರರ್ಷಭಾಃ||

ಆಗ ವೈನ್ಯನು ಋಷಿಗಳನ್ನು ಮುಂದಿರಿಸಿಕೊಂಡು ಇದ್ದ ದೇವತೆಗಳಿಗೆ “ಬ್ರಾಹ್ಮಣರು ಮತ್ತು ಸುರರ್ಷಭ ದೇವತೆಗಳು ನನ್ನ ಸಹಾಯಕರಾಗಿರಬೇಕು!” ಎಂದು ಕೇಳಿಕೊಂಡನು.

12059116a ಏವಮಸ್ತ್ವಿತಿ ವೈನ್ಯಸ್ತು ತೈರುಕ್ತೋ ಬ್ರಹ್ಮವಾದಿಭಿಃ|

12059116c ಪುರೋಧಾಶ್ಚಾಭವತ್ತಸ್ಯ ಶುಕ್ರೋ ಬ್ರಹ್ಮಮಯೋ ನಿಧಿಃ||

ಆ ಬ್ರಹ್ಮವಾದಿಗಳು ವೈನ್ಯನಿಗೆ ಹಾಗೆಯೇ ಆಗಲೆಂದು ಹೇಳಲು, ಬ್ರಹ್ಮಮಯ ನಿಧಿ ಶುಕ್ರನು ಅವನ ಪುರೋಹಿತನಾದನು.

12059117a ಮಂತ್ರಿಣೋ ವಾಲಖಿಲ್ಯಾಸ್ತು ಸಾರಸ್ವತ್ಯೋ ಗಣೋ ಹ್ಯಭೂತ್|

12059117c ಮಹರ್ಷಿರ್ಭಗವಾನ್ಗರ್ಗಸ್ತಸ್ಯ ಸಾಂವತ್ಸರೋಽಭವತ್||

ವಾಲಖಿಲ್ಯರೂ ಸಾರಸ್ವತ ಗಣಗಳೂ ಮಂತ್ರಿಗಳಾದರು. ಮಹರ್ಷಿ ಭಗವಾನ್ ಗರ್ಗನು ಅವನು ಜ್ಯೋತಿಷಿಯಾದನು.

12059118a ಆತ್ಮನಾಷ್ಟಮ ಇತ್ಯೇವ ಶ್ರುತಿರೇಷಾ ಪರಾ ನೃಷು|

12059118c ಉತ್ಪನ್ನೌ ಬಂದಿನೌ ಚಾಸ್ಯ ತತ್ಪೂರ್ವೌ ಸೂತಮಾಗಧೌ||

ಇವನು ಆತ್ಮರಲ್ಲಿ ಅಷ್ಟಮನೆಂದು ನರರಲ್ಲಿ ಪ್ರಖ್ಯಾತನಾದನು. ಅವನ ಮೊದಲೇ ಸೂತ-ಮಾಗಧರೆಂಬ ಸ್ತುತಿಪಾಠಕರು ಹುಟ್ಟಿದ್ದರು.

12059119a ಸಮತಾಂ ವಸುಧಾಯಾಶ್ಚ ಸ ಸಮ್ಯಗುಪಪಾದಯತ್|

12059119c ವೈಷಮ್ಯಂ ಹಿ ಪರಂ ಭೂಮೇರಾಸೀದಿತಿ ಹ ನಃ ಶ್ರುತಮ್||

ವೈನ್ಯನು ಹಳ್ಳ-ತಿಟ್ಟುಗಳಿಂದ ಕೂಡಿದ್ದ ಭೂಮಿಯನ್ನು ಸಮತಟ್ಟಾಗಿ ಮಾಡಿದನೆಂದು ಕೇಳಿದ್ದೇವೆ.

12059120a ಸ ವಿಷ್ಣುನಾ ಚ ದೇವೇನ ಶಕ್ರೇಣ ವಿಬುಧೈಃ ಸಹ|

12059120c ಋಷಿಭಿಶ್ಚ ಪ್ರಜಾಪಾಲ್ಯೇ ಬ್ರಹ್ಮಣಾ ಚಾಭಿಷೇಚಿತಃ||

ವಿಷ್ಣು, ಋಷಿಗಳು, ಪ್ರಜಾಪತಿಗಳು, ಬ್ರಾಹ್ಮಣರು ಮತ್ತು ವಿಬುಧರೊಂದಿಗೆ ದೇವ ಶಕ್ರನು ಅವನನ್ನು ಅಭಿಷೇಕಿಸಿದನು.

12059121a ತಂ ಸಾಕ್ಷಾತ್ಪೃಥಿವೀ ಭೇಜೇ ರತ್ನಾನ್ಯಾದಾಯ ಪಾಂಡವ|

12059121c ಸಾಗರಃ ಸರಿತಾಂ ಭರ್ತಾ ಹಿಮವಾಂಶ್ಚಾಚಲೋತ್ತಮಃ||

ಪಾಂಡವ! ಸಾಕ್ಷಾತ್ ಪೃಥ್ವಿ, ಸರಿತಾಪತಿ ಸಾಗರ ಮತ್ತು ಅಚಲೋತ್ತಮ ಹಿಮವಾನರು ಅವನಿಗೆ ರತ್ನಗಳನ್ನಿತ್ತು ಸೇವೆಸಲ್ಲಿಸಿದರು.

12059122a ಶಕ್ರಶ್ಚ ಧನಮಕ್ಷಯ್ಯಂ ಪ್ರಾದಾತ್ತಸ್ಯ ಯುಧಿಷ್ಠಿರ|

12059122c ರುಕ್ಮಂ ಚಾಪಿ ಮಹಾಮೇರುಃ ಸ್ವಯಂ ಕನಕಪರ್ವತಃ||

ಯುಧಿಷ್ಠಿರ! ಶಕ್ರನು ಅಕ್ಷಯ ಧನವನ್ನೂ, ಕನಕ ಪರ್ವತ ಸ್ವಯಂ ಮಹಾಮೇರುವು ಚಿನ್ನವನ್ನೂ ಅವನಿಗೆ ನೀಡಿದರು.

12059123a ಯಕ್ಷರಾಕ್ಷಸಭರ್ತಾ ಚ ಭಗವಾನ್ನರವಾಹನಃ|

12059123c ಧರ್ಮೇ ಚಾರ್ಥೇ ಚ ಕಾಮೇ ಚ ಸಮರ್ಥಂ ಪ್ರದದೌ ಧನಮ್||

ಯಕ್ಷ-ರಾಕ್ಷಸರ ಒಡೆಯ, ನರವಾಹನ ಕುಬೇರನೂ ಕೂಡ ಅವನ ಧರ್ಮ-ಅರ್ಥ-ಕಾಮಗಳನ್ನು ಪೂರೈಸುವಷ್ಟು ಧನವನ್ನಿತ್ತನು.

12059124a ಹಯಾ ರಥಾಶ್ಚ ನಾಗಾಶ್ಚ ಕೋಟಿಶಃ ಪುರುಷಾಸ್ತಥಾ|

12059124c ಪ್ರಾದುರ್ಬಭೂವುರ್ವೈನ್ಯಸ್ಯ ಚಿಂತನಾದೇವ ಪಾಂಡವ||

ಪಾಂಡವ! ವೈನ್ಯನು ಯೋಚಿಸಿದಂತಷ್ಟು ಕುದುರೆಗಳು, ರಥಗಳು, ಆನೆಗಳು, ಮತ್ತು ಕೋಟಿಗಟ್ಟಲೆ ಸೈನಿಕರು ಆವಿರ್ಭವಿಸಿದರು.

12059124E ನ ಜರಾ ನ ಚ ದುರ್ಭಿಕ್ಷಂ ನಾಧಯೋ ವ್ಯಾಧಯಸ್ತಥಾ

12059125a ಸರೀಸೃಪೇಭ್ಯಃ ಸ್ತೇನೇಭ್ಯೋ ನ ಚಾನ್ಯೋನ್ಯಾತ್ಕದಾ ಚನ|

12059125c ಭಯಮುತ್ಪದ್ಯತೇ ತತ್ರ ತಸ್ಯ ರಾಜ್ಞೋಽಭಿರಕ್ಷಣಾತ್||

ಅವನ ರಾಜ್ಯಭಾರದ ರಕ್ಷಣೆಯಲ್ಲಿ ಯಾರಿಗೂ ಮುಪ್ಪಿರಲಿಲ್ಲ. ದುರ್ಭಿಕ್ಷವಿರಲಿಲ್ಲ. ಮಾನಸಿಕ ಮತ್ತು ಶಾರೀರಿಕ ವ್ಯಾಧಿಗಳಿರಲಿಲ್ಲ. ಸರ್ಪಗಳಿಂದಾಗಲೀ ಕಳ್ಳಕಾಕರಿಂದಾಗಲೀ, ಮತ್ತು ಅನ್ಯೋನ್ಯರಿಂದಾಗಲೀ ಯಾರಿಗೂ ಭಯವೆನ್ನುವುದೇ ಇರಲಿಲ್ಲ.

12059126a ತೇನೇಯಂ ಪೃಥಿವೀ ದುಗ್ಧಾ ಸಸ್ಯಾನಿ ದಶ ಸಪ್ತ ಚ|

12059126c ಯಕ್ಷರಾಕ್ಷಸನಾಗೈಶ್ಚಾಪೀಪ್ಸಿತಂ ಯಸ್ಯ ಯಸ್ಯ ಯತ್||

ಅವನು ಪೃಥ್ವಿಯಿಂದ ಹದಿನೇಳು ಸಸ್ಯಗಳನ್ನು ಕರೆದನು. ಯಕ್ಷ-ರಾಕ್ಷಸ-ನಾಗರಿಗೆ, ಅವರವರು ಬಯಸಿದಂಥಹ ವಸ್ತುಗಳನ್ನು ಕೂಡ ಭೂಮಿಯಿಂದ ಕರೆದನು.

12059127a ತೇನ ಧರ್ಮೋತ್ತರಶ್ಚಾಯಂ ಕೃತೋ ಲೋಕೋ ಮಹಾತ್ಮನಾ|

12059127c ರಂಜಿತಾಶ್ಚ ಪ್ರಜಾಃ ಸರ್ವಾಸ್ತೇನ ರಾಜೇತಿ ಶಬ್ದ್ಯತೇ||

ಆ ಮಹಾತ್ಮನು ಲೋಕದಲ್ಲಿ ಧರ್ಮದ ಪ್ರಾಧಾನ್ಯತೆಯನ್ನು ಪ್ರತಿಷ್ಠಾಪಿಸಿದನು. ಯಾರು ಸರ್ವ ಪ್ರಜೆಗಳನ್ನೂ ರಂಜಿಸುತ್ತಾನೆಯೋ ಅವನನ್ನೇ ರಾಜನೆಂದು ಕರೆಯುತ್ತಾರೆ.

12059128a ಬ್ರಾಹ್ಮಣಾನಾಂ ಕ್ಷತತ್ರಾಣಾತ್ತತಃ ಕ್ಷತ್ರಿಯ ಉಚ್ಯತೇ|

12059128c ಪ್ರಥಿತಾ ಧನತಶ್ಚೇಯಂ[13] ಪೃಥಿವೀ ಸಾಧುಭಿಃ ಸ್ಮೃತಾ||

ಬ್ರಾಹ್ಮಣರು ನಾಶಗೊಳ್ಳದಂತೆ ರಕ್ಷಿಸುವವನಿಗೆ ಕ್ಷತ್ರಿಯ ಎಂದು ಹೇಳುತ್ತಾರೆ. ಇವನಿಂದ ಧನವುಳ್ಳಂತಾದುದರಿಂದ ಸಾಧುಗಳು ಇದನ್ನು ಪೃಥ್ವಿ ಎಂದು ಕರೆಯತೊಡಗಿದರು.

12059129a ಸ್ಥಾಪನಂ ಚಾಕರೋದ್ವಿಷ್ಣುಃ ಸ್ವಯಮೇವ ಸನಾತನಃ|

12059129c ನಾತಿವರ್ತಿಷ್ಯತೇ ಕಶ್ಚಿದ್ರಾಜಂಸ್ತ್ವಾಮಿತಿ ಪಾರ್ಥಿವ||

“ಪಾರ್ಥಿವ! ನಿನ್ನನ್ನು ಅತಿಕ್ರಮಿಸಿ ಯಾರೂ ನಡೆದುಕೊಳ್ಳುವುದಿಲ್ಲ!” ಎಂದು ಸ್ವಯಂ ಸನಾತನ ವಿಷ್ಣುವೇ ಅವನನ್ನು ಸ್ಥಾಪಿಸಿದನು.

12059130a ತಪಸಾ ಭಗವಾನ್ವಿಷ್ಣುರಾವಿವೇಶ ಚ ಭೂಮಿಪಮ್|

12059130c ದೇವವನ್ನರದೇವಾನಾಂ ನಮತೇ ಯಜ್ಜಗನ್ನೃಪ||

ತಪಸ್ಸಿನಿಂದ ವಿಷ್ಣುವು ಆ ಭೂಮಿಪನನ್ನು ಪ್ರವೇಶಿಸಿದನು. ನೃಪ! ಆಗ ಇಡೀ ಜಗತ್ತು ದೇವತೆಯೋ ಎನ್ನುವಂತೆ ಆ ನರದೇವನನ್ನು ಸಮಸ್ಕರಿಸಿತು.

12059131a ದಂಡನೀತ್ಯಾ ಚ ಸತತಂ ರಕ್ಷಿತಂ ತಂ ನರೇಶ್ವರ|

12059131c ನಾಧರ್ಷಯತ್ತತಃ ಕಶ್ಚಿಚ್ಚಾರನಿತ್ಯಾಚ್ಚ ದರ್ಶನಾತ್||

ನರೇಶ್ವರ! ನಿತ್ಯವೂ ಚಾರರನ್ನು ಕಾಣುತ್ತಾ ದಂಡನೀತಿಯಿಂದ ಸತತವೂ ರಕ್ಷಿತವಾದ ಅವನ ಆ ರಾಜ್ಯವನ್ನು ಯಾರೂ ಉಲ್ಲಂಘಿಸಲಾಗುತ್ತಿರಲಿಲ್ಲ.

12059132a ಆತ್ಮನಾ ಕರಣೈಶ್ಚೈವ ಸಮಸ್ಯೇಹ ಮಹೀಕ್ಷಿತಃ|

12059132c ಕೋ ಹೇತುರ್ಯದ್ವಶೇ ತಿಷ್ಠೇಲ್ಲೋಕೋ ದೈವಾದೃತೇ ಗುಣಾತ್||

ಮಹೀಕ್ಷಿತನು ಆತ್ಮ ಮತ್ತು ಕರ್ಮಗಳ ಮೂಲಕ ಸರ್ವಸಮಭಾವದಿಂದ ಇರಬೇಕು. ಲೋಕವು ಒಬ್ಬನ ಅಧೀನದಲ್ಲಿರಬೇಕಾದರೆ ಅವನಲ್ಲಿರುವ ದೈವಗುಣಗಳಲ್ಲದೇ ಬೇರೆ ಯಾವ ಕಾರಣವಿರಲು ಸಾಧ್ಯ?

12059133a ವಿಷ್ಣೋರ್ಲಲಾಟಾತ್ಕಮಲಂ ಸೌವರ್ಣಮಭವತ್ತದಾ|

12059133c ಶ್ರೀಃ ಸಂಭೂತಾ ಯತೋ ದೇವೀ ಪತ್ನೀ ಧರ್ಮಸ್ಯ ಧೀಮತಃ||

ಆಗ ವಿಷ್ಣುವಿನ ಲಲಾಟದಿಂದ ಸುವರ್ಣಮಯ ಕಮಲವು ಉದ್ಭವಿಸಿತು. ಅದರಿಂದ ಧೀಮತ ಧರ್ಮನ ಪತ್ನಿ ಶ್ರೀಯು ಹುಟ್ಟಿದಳು.

12059134a ಶ್ರಿಯಃ ಸಕಾಶಾದರ್ಥಶ್ಚ ಜಾತೋ ಧರ್ಮೇಣ ಪಾಂಡವ|

12059134c ಅಥ ಧರ್ಮಸ್ತಥೈವಾರ್ಥಃ ಶ್ರೀಶ್ಚ ರಾಜ್ಯೇ ಪ್ರತಿಷ್ಠಿತಾ||

ಪಾಂಡವ! ಧರ್ಮದಿಂದ ಶ್ರೀಯಲ್ಲಿ ಅರ್ಥವು ಹುಟ್ಟಿಕೊಂಡಿತು. ಹಾಗೆ ರಾಜ್ಯದಲ್ಲಿ ಧರ್ಮ, ಅರ್ಥ ಮತ್ತು ಶ್ರೀಗಳು ಪ್ರತಿಷ್ಠಿತಗೊಂಡವು.

12059135a ಸುಕೃತಸ್ಯ ಕ್ಷಯಾಚ್ಚೈವ ಸ್ವರ್ಲೋಕಾದೇತ್ಯ ಮೇದಿನೀಮ್|

12059135c ಪಾರ್ಥಿವೋ ಜಾಯತೇ ತಾತ ದಂಡನೀತಿವಶಾನುಗಃ||

ಮಗೂ! ಸ್ವರ್ಲೋಕದಲ್ಲಿದ್ದವನ ಸುಕೃತಗಳು ಕ್ಷಯಿಸಿದ ನಂತರ ಅವನು ಮೇದಿನಿಯ ಮೇಲೆ ದಂಡನೀತಿಯ ವಶಾನುಗನಾದ ಪಾರ್ಥಿವನಾಗಿ ಹುಟ್ಟುತ್ತಾನೆ.

12059136a ಮಹತ್ತ್ವೇನ ಚ ಸಂಯುಕ್ತೋ ವೈಷ್ಣವೇನ ನರೋ ಭುವಿ|

12059136c ಬುದ್ಧ್ಯಾ ಭವತಿ ಸಂಯುಕ್ತೋ ಮಾಹಾತ್ಮ್ಯಂ ಚಾಧಿಗಚ್ಚತಿ||

ಆ ನರನು ಭುವಿಯಲ್ಲಿ ವೈಷ್ಣವ ಮಹತ್ತ್ವದಿಂದ ಸಂಯುಕ್ತನಾಗಿ ಬುದ್ಧಿಸಂಪನ್ನನಾಗಿ ವಿಶೇಷ ಹಿರಿಮೆಯನ್ನೂ ಹೊಂದುತ್ತಾನೆ.

12059137a ಸ್ಥಾಪನಾಮಥ ದೇವಾನಾಂ ನ ಕಶ್ಚಿದತಿವರ್ತತೇ|

12059137c ತಿಷ್ಠತ್ಯೇಕಸ್ಯ ಚ ವಶೇ ತಂ ಚೇದನುವಿಧೀಯತೇ||

ದೇವತೆಗಳಿಂದ ಸ್ಥಾಪಿತನಾದ ರಾಜನನ್ನು ಯಾರೂ ಅತಿಕ್ರಮಿಸುವುದಿಲ್ಲ. ಒಬ್ಬನೇ ವಶದಲ್ಲಿ ಎಲ್ಲರೂ ಇರುತ್ತಾರೆ. ಯಾರೂ ಅವನಿಗೆ ಆಜ್ಞೆಮಾಡುವುದಿಲ್ಲ.

12059138a ಶುಭಂ ಹಿ ಕರ್ಮ ರಾಜೇಂದ್ರ ಶುಭತ್ವಾಯೋಪಕಲ್ಪತೇ|

12059138c ತುಲ್ಯಸ್ಯೈಕಸ್ಯ ಯಸ್ಯಾಯಂ ಲೋಕೋ ವಚಸಿ ತಿಷ್ಠತಿ||

ರಾಜೇಂದ್ರ! ಶುಭಕರ್ಮಗಳು ಶುಭಪಲಗಳಿಂದಲೇ ಕೂಡಿರುತ್ತವೆ. ಎಲ್ಲರಂತೆ ಇವನ ಅವಯವಗಳಿದ್ದರೂ ಲೋಕವು ಅವನ ಮಾತಿನಂತೆ ನಡೆಯುತ್ತದೆ.

12059139a ಯೋ ಹ್ಯಸ್ಯ ಮುಖಮದ್ರಾಕ್ಷೀತ್ಸೋಮ್ಯ ಸೋಽಸ್ಯ ವಶಾನುಗಃ|

12059139c ಸುಭಗಂ ಚಾರ್ಥವಂತಂ ಚ ರೂಪವಂತಂ ಚ ಪಶ್ಯತಿ||

ಅವನ ಸೌಮ್ಯ ಮುಖವನ್ನು ನೋಡಿ, ಅವನು ಸೌಭಾಗ್ಯಶಾಲಿಯೂ, ಧನವಂತನಾಗಿಯೂ, ರೂಪವಂತನಾಗಿಯೂ ಇರುವುದರಿಂದ ಜನರು ಅವನ ವಶವರ್ತಿಯಾಗಿರುತ್ತಾರೆ.

12059140a ತತೋ ಜಗತಿ ರಾಜೇಂದ್ರ ಸತತಂ ಶಬ್ದಿತಂ ಬುಧೈಃ|

12059140c ದೇವಾಶ್ಚ ನರದೇವಾಶ್ಚ ತುಲ್ಯಾ ಇತಿ ವಿಶಾಂ ಪತೇ||

ರಾಜೇಂದ್ರ! ವಿಶಾಂಪತೇ! ಅನಂತರ ಜಗತ್ತಿನಲ್ಲಿ ತಿಳಿದವರು ದೇವತೆಗಳೂ ಮತ್ತು ರಾಜರೂ ಸಮಾನರು ಎಂದು ಹೇಳತೊಡಗಿದರು.

12059141a ಏತತ್ತೇ ಸರ್ವಮಾಖ್ಯಾತಂ ಮಹತ್ತ್ವಂ ಪ್ರತಿ ರಾಜಸು|

12059141c ಕಾರ್ತ್ಸ್ನ್ಯೇನ ಭರತಶ್ರೇಷ್ಠ ಕಿಮನ್ಯದಿಹ ವರ್ತತಾಮ್||

ಭರತಶ್ರೇಷ್ಠ! ರಾಜರ ಮಹತ್ವದ ಕುರಿತು ನಿನಗೆ ಎಲ್ಲವನ್ನೂ ಅಮೂಲಾಗ್ರವಾಗಿ ಹೇಳಿದ್ದೇನೆ. ಇದರ ಕುರಿತು ಇನ್ನು ಏನನ್ನು ಹೇಳಬೇಕು?””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಸೂತ್ರಾಧ್ಯಾಯೇ ಏಕೋನಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಸೂತ್ರಾಧ್ಯಾಯ ಎನ್ನುವ ಐವತ್ತೊಂಭತ್ತನೇ ಅಧ್ಯಾಯವು.

[1] ದಂಡಾತ್ ಸ್ಥಾನಂ-ಸಾಮ್ಯಂ ವಣಿಜಾಂ ಅರ್ಥಾತ್ ವರ್ತಕರು ಒಂದೇ ಸ್ಥಿತಿಯಲ್ಲಿರುವಂತೆ ಮಾಡುವುದು, ಹೆಚ್ಚಿನ ಲಾಭವನ್ನು ಪಡೆಯದಂತೆ ತೆರಿಗೆ ಮೊದಲಾದುವುಗಳನ್ನು ಹಾಕಿ ಸ್ತಿಮಿತದಲ್ಲಿಡುವುದು; ವೃದ್ಧಿ ತಪಸ್ವಿನಾಂ ಅರ್ಥಾತ್ ತಪಸ್ವಿಗಳ ವೃದ್ಧಿ ಮತ್ತು ಕ್ಷಯಶ್ಚೋರಾಣಾಂ ಅರ್ಥಾತ್ ಕಳ್ಳಕಾಕರ ವಿನಾಶ – ಇವು ದಂಡಜನ್ಯವಾದ ತ್ರಿವರ್ಗಗಳು.

[2] ಕರ್ಮಕಾಂಡ

[3] ಜ್ಞಾನಕಾಂಡ

[4] ಕೃಷಿ, ಗೋರಕ್ಷಣೆ ಮತ್ತು ವಾಣಿಜ್ಯ

[5] ಶತ್ರುವಿನ ಮೇಲೆ ಯುದ್ಧಕ್ಕೆ ಹೊರಡಲು ಇರುವ ನಾಲ್ಕು ಕಾಲವಿಶೇಷಗಳು: (೧) ತನ್ನ ಮಿತ್ರನ ವೃದ್ಧಿ (೨) ತನ್ನ ರಾಜ್ಯದ ಧನಕೋಶವನ್ನು ತುಂಬಿಸುವುದು (೩) ಶತ್ರುವಿನ ಮಿತ್ರನ ನಾಶ (೪) ಶತ್ರುವಿನ ಧನಕೋಶದ ನಾಶ.

[6] ಮಂತ್ರಿ, ರಾಷ್ಟ್ರ, ದುರ್ಗ, ಸೈನ್ಯ ಮತ್ತು ಕೋಶ  - ಇವು ಪಂಚವರ್ಗಗಳು.

[7] ಪಂಚವರ್ಗಗಳ ಪ್ರತಿಯೊಂದರಲ್ಲಿಯೂ ಇರುವ ಉತ್ತಮ, ಮಧ್ಯಮ ಮತ್ತು ಅಧಮಗಳೆಂಬ ವಿಧಗಳು.

[8] ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗುವುದರಿಂದ ಉಂಟಾಗುವ ಮಾರ್ಪಾಡುಗಳು

[9] ಭೂಮಿಯ ೮೪ ಗುಣಗಳು ಅಥವಾ ಬಲಗಳು

[10] ಮಣಿ, ಪಶು, ಭೂಮಿ, ವಸ್ತ್ರ, ದಾಸ-ದಾಸಿಯರು ಮತ್ತು ಸುವರ್ಣ ಇವುಗಳೇ ಷಟ್ ದ್ರವ್ಯಗಳು.

[11] ವಿದ್ವದ್ಭಿರೇಕೀಭಾವಶ್ಚ ದಾನಹೋಮವಿಧಿಜ್ಞತಾ| ಎಂಬ ಪಾಠಾಂತರವಿದೆ.

[12] ಹನ್ನೆರಡು ರಾಜರ ಸಮೂಹ. ನಾಲ್ಕು ದಿಕ್ಕುಗಳಲ್ಲಿಯೂ ಇರುವ ನಾಲ್ವರು ಶತ್ರುರಾಜರು, ನಾಲ್ವರು ಮಿತ್ರರಾಜರು ಮತ್ತು ನಾಲ್ವರು ಉದಾಸೀನರಾಜರು – ಒಟ್ಟು ಹನ್ನೆರಡು ರಾಜರು.

[13] ಧರ್ಮತಶ್ಚೇಯಂ ಅರ್ಥಾತ್ ಧರ್ಮದ ಮೂಲಕವಾಗಿಯೇ ಈ ಭೂಮಿಯನ್ನು ಖ್ಯಾತಿಗೊಳಿಸಿದುದರಿಂದ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.