ಶಾಂತಿ ಪರ್ವ: ರಾಜಧರ್ಮ ಪರ್ವ

೪೭

ಭೀಷ್ಮಸ್ತವರಾಜಃ

12047001 ಜನಮೇಜಯ ಉವಾಚ

12047001a ಶರತಲ್ಪೇ ಶಯಾನಸ್ತು ಭರತಾನಾಂ ಪಿತಾಮಹಃ|

12047001c ಕಥಮುತ್ಸೃಷ್ಟವಾನ್ದೇಹಂ ಕಂ ಚ ಯೋಗಮಧಾರಯತ್||

ಜನಮೇಜಯನು ಹೇಳಿದನು: “ಶರತಲ್ಪದಲ್ಲಿ ಮಲಗಿದ್ದ ಭರತರ ಪಿತಾಮಹ ಭೀಷ್ಮನು ಹೇಗೆ ದೇಹತ್ಯಾಗ ಮಾಡಿದನು ಮತ್ತು ಆಗ ಅವನು ಯಾವ ಯೋಗಧಾರಣೆ ಮಾಡಿದ್ದನು?”

12047002 ವೈಶಂಪಾಯನ ಉವಾಚ

12047002a ಶೃಣುಷ್ವಾವಹಿತೋ ರಾಜನ್ಶುಚಿರ್ಭೂತ್ವಾ ಸಮಾಹಿತಃ|

12047002c ಭೀಷ್ಮಸ್ಯ ಕುರುಶಾರ್ದೂಲ ದೇಹೋತ್ಸರ್ಗಂ ಮಹಾತ್ಮನಃ||

ವೈಶಂಪಾಯನನು ಹೇಳಿದನು: “ರಾಜನ್! ಕುರುಶಾರ್ದೂಲ! ಶುಚಿಯಾಗಿ ಏಕಮನಸ್ಕನಾಗಿ ಸಾವಧಾನದಿಂದ ಮಹಾತ್ಮ ಭೀಷ್ಮನ ದೇಹತ್ಯಾಗದ ಕುರಿತು ಕೇಳು.

12047003a ನಿವೃತ್ತಮಾತ್ರೇ ತ್ವಯನ ಉತ್ತರೇ ವೈ ದಿವಾಕರೇ|

12047003c ಸಮಾವೇಶಯದಾತ್ಮಾನಮಾತ್ಮನ್ಯೇವ ಸಮಾಹಿತಃ||

ದಿವಾಕರನು ಉತ್ತರಾಯಣಕ್ಕೆ ತಿರುಗಿದೊಡನೆಯೇ ಭೀಷ್ಮನು ಏಕಾಗ್ರಚಿತ್ತನಾಗಿ ತನ್ನ ಮನಸ್ಸನ್ನು ಬುದ್ಧಿಯೊಡನೆ ಮತ್ತು ಬುದ್ಧಿಯನ್ನು ಆತ್ಮನಲ್ಲಿ ಲೀನಗೊಳಿಸಿದನು.

12047004a ವಿಕೀರ್ಣಾಂಶುರಿವಾದಿತ್ಯೋ ಭೀಷ್ಮಃ ಶರಶತೈಶ್ಚಿತಃ|

12047004c ಶಿಶ್ಯೇ ಪರಮಯಾ ಲಕ್ಷ್ಮ್ಯಾ ವೃತೋ ಬ್ರಾಹ್ಮಣಸತ್ತಮೈಃ||

12047005a ವ್ಯಾಸೇನ ವೇದಶ್ರವಸಾ ನಾರದೇನ ಸುರರ್ಷಿಣಾ|

12047005c ದೇವಸ್ಥಾನೇನ ವಾತ್ಸ್ಯೇನ ತಥಾಶ್ಮಕಸುಮಂತುನಾ||

12047006a ಏತೈಶ್ಚಾನ್ಯೈರ್ಮುನಿಗಣೈರ್ಮಹಾಭಾಗೈರ್ಮಹಾತ್ಮಭಿಃ|

12047006c ಶ್ರದ್ಧಾದಮಪುರಸ್ಕಾರೈರ್ವೃತಶ್ಚಂದ್ರ ಇವ ಗ್ರಹೈಃ||

ನೂರಾರು ಬಾಣಗಳಿಂದ ಚುಚ್ಚಲ್ಪಟ್ಟ ಭೀಷ್ಮನು ಕಿರಣಗಳನ್ನು ಪಸರಿಸುವ ಸೂರ್ಯನಂತೆಯೂ; ವೇದಗಳನ್ನು ತಿಳಿದಿದ್ದ ವ್ಯಾಸ, ಸುರರ್ಷಿ ನಾರದ, ದೇವಸ್ಥಾನ, ವಾತ್ಸ್ಯ, ಅಶ್ಮಕ, ಸುಮಂತು ಮತ್ತು ಇನ್ನೂ ಅನೇಕ ಮಹಾತ್ಮ ಮಹಾಭಾಗ ಮುನಿಗಣಗಳು, ಶ್ರದ್ಧೆ-ಶಮೋಪೇತರಾದ ಬ್ರಾಹ್ಮಣಸತ್ತಮರಿಂದ ಸುತ್ತುವರೆಯಲ್ಪಟ್ಟು,  ಗ್ರಹಗಳಿಂದ ಸುತ್ತುವರೆಯಲ್ಪಟ್ಟ ಚಂದ್ರನಂತೆ ಅಪಾರ ಕಾಂತಿಯಿಂದ ಪ್ರಕಾಶಿಸುತ್ತಿದ್ದನು.

12047007a ಭೀಷ್ಮಸ್ತು ಪುರುಷವ್ಯಾಘ್ರಃ ಕರ್ಮಣಾ ಮನಸಾ ಗಿರಾ|

12047007c ಶರತಲ್ಪಗತಃ ಕೃಷ್ಣಂ ಪ್ರದಧ್ಯೌ ಪ್ರಾಂಜಲಿಃ ಸ್ಥಿತಃ||

ಶರತಲ್ಪದಲ್ಲಿ ಮಲಗಿದ್ದ ಪುರುಷವ್ಯಾಘ್ರ ಭೀಷ್ಮನಾದರೋ ಕೈಮುಗಿದು ಕರ್ಮ-ಮನಸ್ಸು-ವಾಣಿಗಳ ಮೂಲಕ ಕೃಷ್ಣನನ್ನು ಧ್ಯಾನಿಸತೊಡಗಿದನು.

12047008a ಸ್ವರೇಣ ಪುಷ್ಟನಾದೇನ ತುಷ್ಟಾವ ಮಧುಸೂದನಮ್|

12047008c ಯೋಗೇಶ್ವರಂ ಪದ್ಮನಾಭಂ ವಿಷ್ಣುಂ ಜಿಷ್ಣುಂ ಜಗತ್ಪತಿಮ್||

ಅವನು ಪುಷ್ಟನಾದದ ಸ್ವರದಲ್ಲಿ ಮಧುಸೂದನ, ಯೋಗೇಶ್ವರ, ಪದ್ಮನಾಭ, ಜಿಷ್ಣು, ಜಗತ್ಪತಿ ವಿಷ್ಣುವನ್ನು ಸ್ತುತಿಸತೊಡಗಿದನು.

12047009a ಕೃತಾಂಜಲಿಃ ಶುಚಿರ್ಭೂತ್ವಾ ವಾಗ್ವಿದಾಂ ಪ್ರವರಃ ಪ್ರಭುಮ್|

12047009c ಭೀಷ್ಮಃ ಪರಮಧರ್ಮಾತ್ಮಾ ವಾಸುದೇವಮಥಾಸ್ತುವತ್||

ಶುಚಿಯಾಗಿ ಆ ವಾಗ್ವಿದರಲ್ಲಿ ಶ್ರೇಷ್ಠ ಪರಮಧರ್ಮಾತ್ಮ ಭೀಷ್ಮನು ಪ್ರಭು ವಾಸುದೇವನನ್ನು ಈ ರೀತಿ ಸ್ತುತಿಸಿದನು:

12047010a ಆರಿರಾಧಯಿಷುಃ ಕೃಷ್ಣಂ ವಾಚಂ ಜಿಗಮಿಷಾಮಿ ಯಾಮ್|

12047010c ತಯಾ ವ್ಯಾಸಸಮಾಸಿನ್ಯಾ ಪ್ರೀಯತಾಂ ಪುರುಷೋತ್ತಮಃ||

“ವಿವರವಾದ ಮತ್ತು ಸಂಕ್ಷೇಪವಾದ ಯಾವ ವಾಣಿಯಿಂದ ಕೃಷ್ಣನನ್ನು ಆರಾಧಿಸುವೆನೋ ಅದರಿಂದಲೇ ಆ ಪುರುಷೋತ್ತಮನು ಸುಪ್ರೀತನಾಗಲಿ!

12047011a ಶುಚಿಃ ಶುಚಿಷದಂ[1] ಹಂಸಂ ತತ್ಪರಃ ಪರಮೇಷ್ಠಿನಮ್|

12047011c ಯುಕ್ತ್ವಾ ಸರ್ವಾತ್ಮನಾತ್ಮಾನಂ ತಂ ಪ್ರಪದ್ಯೇ ಪ್ರಜಾಪತಿಮ್||

ಶುಚಿಯಾಗಿ ತತ್ಪರನಾಗಿ ನನ್ನ ಸರ್ವವನ್ನೂ ಆತ್ಮನಲ್ಲಿ ಯೋಜಿಸಿ ಆ ಶುಚಿಷದ, ಹಂಸ, ಪರಮೇಷ್ಟಿ, ಪ್ರಜಾಪತಿಯನ್ನು ಶರಣುಹೋಗುತ್ತೇನೆ.

[2]12047012a ಯಸ್ಮಿನ್ವಿಶ್ವಾನಿ ಭೂತಾನಿ ತಿಷ್ಠಂತಿ ಚ ವಿಶಂತಿ ಚ|

12047012c ಗುಣಭೂತಾನಿ ಭೂತೇಶೇ ಸೂತ್ರೇ ಮಣಿಗಣಾ ಇವ||

12047013a ಯಸ್ಮಿನ್ನಿತ್ಯೇ ತತೇ ತಂತೌ ದೃಢೇ ಸ್ರಗಿವ ತಿಷ್ಠತಿ|

12047013c ಸದಸದ್ಗ್ರಥಿತಂ ವಿಶ್ವಂ ವಿಶ್ವಾಂಗೇ ವಿಶ್ವಕರ್ಮಣಿ||

12047014a ಹರಿಂ ಸಹಸ್ರಶಿರಸಂ ಸಹಸ್ರಚರಣೇಕ್ಷಣಮ್|

12047014c ಪ್ರಾಹುರ್ನಾರಾಯಣಂ ದೇವಂ ಯಂ ವಿಶ್ವಸ್ಯ ಪರಾಯಣಮ್||

12047015a ಅಣೀಯಸಾಮಣೀಯಾಂಸಂ ಸ್ಥವಿಷ್ಠಂ ಚ ಸ್ಥವೀಯಸಾಮ್|

12047015c ಗರೀಯಸಾಂ ಗರಿಷ್ಠಂ ಚ ಶ್ರೇಷ್ಠಂ ಚ ಶ್ರೇಯಸಾಮಪಿ||

12047016a ಯಂ ವಾಕೇಷ್ವನುವಾಕೇಷು ನಿಷತ್ಸೂಪನಿಷತ್ಸು ಚ|

12047016c ಗೃಣಂತಿ ಸತ್ಯಕರ್ಮಾಣಂ ಸತ್ಯಂ ಸತ್ಯೇಷು ಸಾಮಸು||

12047017a ಚತುರ್ಭಿಶ್ಚತುರಾತ್ಮಾನಂ ಸತ್ತ್ವಸ್ಥಂ ಸಾತ್ವತಾಂ ಪತಿಮ್|

12047017c ಯಂ ದಿವ್ಯೈರ್ದೇವಮರ್ಚಂತಿ ಗುಹ್ಯೈಃ ಪರಮನಾಮಭಿಃ||

[3]12047018a ಯಂ ದೇವಂ ದೇವಕೀ ದೇವೀ ವಸುದೇವಾದಜೀಜನತ್|

12047018c ಭೌಮಸ್ಯ ಬ್ರಹ್ಮಣೋ ಗುಪ್ತ್ಯೈ ದೀಪ್ತಮಗ್ನಿಮಿವಾರಣಿಃ||

12047019a ಯಮನನ್ಯೋ ವ್ಯಪೇತಾಶೀರಾತ್ಮಾನಂ ವೀತಕಲ್ಮಷಮ್|

12047019c ಇಷ್ಟ್ವಾನಂತ್ಯಾಯ ಗೋವಿಂದಂ ಪಶ್ಯತ್ಯಾತ್ಮನ್ಯವಸ್ಥಿತಮ್||

12047020a ಪುರಾಣೇ ಪುರುಷಃ ಪ್ರೋಕ್ತೋ ಬ್ರಹ್ಮಾ ಪ್ರೋಕ್ತೋ ಯುಗಾದಿಷು|

12047020c ಕ್ಷಯೇ ಸಂಕರ್ಷಣಃ ಪ್ರೋಕ್ತಸ್ತಮುಪಾಸ್ಯಮುಪಾಸ್ಮಹೇ||

ದಾರದಲ್ಲಿ ಪೋಣಿಸಲ್ಪಟ್ಟ ಮಣಿಗಳಂತೆ ವಿಶ್ವ-ಭೂತಗಳು ಯಾರಲ್ಲಿ ನೆಲೆಸಿ ಸೇರಿಕೊಂಡಿವೆಯೋ ಅವನನ್ನು; ಗಟ್ಟಿಯಾದ ದಾರದಿಂದ ಕಟ್ಟಲ್ಪಟ್ಟ ಹೂವಿನ ಮಾಲೆಯಂತೆ ಯಾರಲ್ಲಿ ಈ ವಿಶ್ವವೇ ದೃಢವಾಗಿ ನಿಂತಿರುವುದೋ ಆ ವಿಶ್ವಾಂಗ ವಿಶ್ವಕರ್ಮಿಯನ್ನು; ವಿಶ್ವಪರಾಯಣನೂ, ಸಹಸ್ರಶಿರಸ್ಸುಗಳುಳ್ಳವನೂ, ಸಹಸ್ರಚರಣಗಳುಳ್ಳವನೂ, ಸಹಸ್ರಾಕ್ಷನೂ, ಮತ್ತು ನಾರಾಯಣನೆಂದು ಕರೆಯಲ್ಪಡುವ ದೇವನನ್ನೂ; ಸೂಕ್ಷ್ಮಗಳಲ್ಲಿ ಸೂಕ್ಷ್ಮನೂ, ಸ್ಥೂಲಗಳಲ್ಲಿ ಸ್ಥೂಲನೂ, ಭಾರವಾದವುಗಳಿಗಿಂತ ಭಾರವಾದವನೂ, ಶ್ರೇಷ್ಠವಾದವುಗಳಲ್ಲಿ ಶ್ರೇಷ್ಠನೂ ಆಗಿರುವವನನ್ನು; ವಾಕ್[4], ಅನುವಾಕ್[5], ನಿಷತ್[6], ಉಪನಿಷತ್ತು ಮತ್ತು ಸತ್ಯ ಸಾಮ[7]ಗಳಲ್ಲಿ ಯಾರನ್ನು ಸತ್ಯಕರ್ಮನೆಂದು ವರ್ಣಿಸುತ್ತಾರೋ ಅವನನ್ನು; ನಾಲ್ಕರಿಂದಾದ ಚತುರಾತ್ಮನನ್ನು[8], ಸತ್ಯದಲ್ಲಿ ನೆಲೆಸಿರುವ ಸಾತ್ವತರ ಒಡೆಯನನ್ನೂ, ದಿವ್ಯವೂ ಗುಹ್ಯವೂ ಆದ ಪರಮ ನಾಮಗಳಿಂದ ಯಾರನ್ನು ಅರ್ಚಿಸುತ್ತಾರೋ ಆ ದೇವನನ್ನು; ಭೂಮಿಯಲ್ಲಿ ಬ್ರಹ್ಮಜ್ಞಾನವನ್ನ ರಕ್ಷಿಸಲು ಅರಣಿಯ ಮಂಥನದಿಂದ ಪ್ರಜ್ವಲಿಸವ ಅಗ್ನಿಯನ್ನು ಹುಟ್ಟಿಸುವಂತೆ ದೇವಕೀ ದೇವೀ ಮತ್ತು ವಸುದೇವರು ಹುಟ್ಟಿಸಿದ ದೇವನನ್ನು; ಅನಂತ ಮೋಕ್ಷವನ್ನು ಬಯಸಿ, ಕಾಮನೆಗಳನ್ನು ತ್ಯಜಿಸಿ, ಅನನ್ಯಭಾವದಿಂದ ಆತ್ಮನಲ್ಲಿ ವ್ಯವಸ್ಥಿತನಾಗಿರವ ಯಾರನ್ನು ಕಾಣುತ್ತಾರೋ ಆ ಕಲ್ಮಷರಹಿತ ಗೋವಿಂದನನ್ನು; ಪುರಾಣಗಳಲ್ಲಿ ಪುರುಷನೆಂದೂ, ಯುಗಾದಿಗಳಲ್ಲಿ ಬ್ರಹ್ಮನೆಂದೂ, ಲಯಕಾಲಗಳಲ್ಲಿ ಸಂಕರ್ಷಣನೆಂದೂ ಕರೆಯಲ್ಪಡುವ ಆದ ಆ ಉಪಾಸ್ಯ ಕೃಷ್ಣನನ್ನು ಉಪಾಸಿಸುತ್ತೇನೆ.

12047021a ಅತಿವಾಯ್ವಿಂದ್ರಕರ್ಮಾಣಮತಿಸೂರ್ಯಾಗ್ನಿತೇಜಸಮ್|

12047021c ಅತಿಬುದ್ಧೀಂದ್ರಿಯಾತ್ಮಾನಂ ತಂ ಪ್ರಪದ್ಯೇ ಪ್ರಜಾಪತಿಮ್||

ಯಾರು ಇಂದ್ರ-ವಾಯುಗಳನ್ನೂ ಮೀರಿಸಿದ ಕಾರ್ಯಗಳನ್ನು ಮಾಡುವನೋ, ಯಾರ ತೇಜಸ್ಸು ಸೂರ್ಯನ ತೇಜಸ್ಸಿಗಿಂತಲೂ ಅಧಿಕವಾಗಿರುವುದೋ, ಇಂದ್ರಿಯ-ಮನಸ್ಸು-ಬುದ್ಧಿಗಳಿಗೂ ಯಾರು ಅತೀತನಾಗಿರುವನೋ ಆ ಪ್ರಜಾಪತಿಗೆ ಶರಣು ಹೋಗುತ್ತೇನೆ.

12047022a ಯಂ ವೈ ವಿಶ್ವಸ್ಯ ಕರ್ತಾರಂ ಜಗತಸ್ತಸ್ಥುಷಾಂ ಪತಿಮ್|

12047022c ವದಂತಿ ಜಗತೋಽಧ್ಯಕ್ಷಮಕ್ಷರಂ ಪರಮಂ ಪದಮ್||

ಯಾರನ್ನು ವಿಶ್ವಕರ್ತಾರನೆಂದೂ, ಜಗತ್ತಿನಲ್ಲಿರುವುಗಳಿಗೆ ಒಡೆಯನೆಂದೂ, ಜಗತ್ತಿನ ಅಧ್ಯಕ್ಷನೆಂದೂ ಕರೆಯುತ್ತಾರೋ ಆ ಅಕ್ಷರ ಪರಮಪದನಿಗೆ ನಮಸ್ಕಾರಗಳು.

12047023a ಹಿರಣ್ಯವರ್ಣಂ ಯಂ ಗರ್ಭಮದಿತಿರ್ದೈತ್ಯನಾಶನಮ್|

12047023c ಏಕಂ ದ್ವಾದಶಧಾ ಜಜ್ಞೇ ತಸ್ಮೈ ಸೂರ್ಯಾತ್ಮನೇ ನಮಃ||

ಅದಿತಿಯ ಗರ್ಭದಲ್ಲಿ ಉದಿಸಿ ದೈತ್ಯರನ್ನು ನಾಶಪಡಿಸಿದ, ಒಬ್ಬನಾಗಿದ್ದರೂ ಹನ್ನೆರಡಾಗಿ ಜನಿಸಿದ, ಚಿನ್ನದ ಕಾಂತಿಯನ್ನು ಹೊಂದಿರುವ ಸೂರ್ಯಾತ್ಮನಿಗೆ ನಮಸ್ಕರಿಸುತ್ತೇನೆ.

12047024a ಶುಕ್ಲೇ ದೇವಾನ್ಪಿತೃನ್ಕೃಷ್ಣೇ ತರ್ಪಯತ್ಯಮೃತೇನ ಯಃ|

12047024c ಯಶ್ಚ ರಾಜಾ ದ್ವಿಜಾತೀನಾಂ ತಸ್ಮೈ ಸೋಮಾತ್ಮನೇ ನಮಃ||

ಶುಕ್ಲಪಕ್ಷಗಳಲ್ಲಿ ದೇವತೆಗಳನ್ನೂ ಕೃಷ್ಣಪಕ್ಷಗಳಲ್ಲಿ ಪಿತೃಗಳನ್ನೂ ಅಮೃತದಿಂದ ತೃಪ್ತಿಪಡಿಸುವ, ದ್ವಿಜಾತಿಯವರ ರಾಜ ಸೋಮಾತ್ಮನಿಗೆ ನಮಸ್ಕರಿಸುತ್ತೇನೆ.

12047025a ಮಹತಸ್ತಮಸಃ ಪಾರೇ ಪುರುಷಂ ಜ್ವಲನದ್ಯುತಿಮ್|

12047025c ಯಂ ಜ್ಞಾತ್ವಾ ಮೃತ್ಯುಮತ್ಯೇತಿ ತಸ್ಮೈ ಜ್ಞೇಯಾತ್ಮನೇ ನಮಃ||

ಮಹಾ ತಪಸ್ಸಿನ ಆಚೆ ಬೆಳಕಿನಿಂದ ಪ್ರಜ್ಚಲಿಸುತ್ತಿರುವ ಯಾವ ಪುರುಷನನ್ನು ತಿಳಿದು ಮೃತ್ಯುವನ್ನು ಅತಿಕ್ರಮಿಸಬಹುದೋ ಆ ಜ್ಞೇಯಾತ್ಮನಿಗೆ ನಮಸ್ಕರಿಸುತ್ತೇನೆ.

12047026a ಯಂ ಬೃಹಂತಂ ಬೃಹತ್ಯುಕ್ಥೇ ಯಮಗ್ನೌ ಯಂ ಮಹಾಧ್ವರೇ|

12047026c ಯಂ ವಿಪ್ರಸಂಘಾ ಗಾಯಂತಿ ತಸ್ಮೈ ವೇದಾತ್ಮನೇ ನಮಃ||

ಮಹಾ ಉಕ್ಥಯಜ್ಞದಲ್ಲಿ ಬೃಹಂತನೆಂದೂ, ಮಹಾಧ್ವರದಲ್ಲಿ ಅಗ್ನಿಯೆಂದೂ ಯಾರನ್ನು ವಿಪ್ರಸಂಘಗಳು ಹಾಡುತ್ತಾರೋ ಆ ವೇದಾತ್ಮನಿಗೆ ನಮಸ್ಕರಿಸುತ್ತೇನೆ.

12047027a ಋಗ್ಯಜುಃಸಾಮಧಾಮಾನಂ ದಶಾರ್ಧಹವಿರಾಕೃತಿಮ್|

12047027c ಯಂ ಸಪ್ತತಂತುಂ ತನ್ವಂತಿ ತಸ್ಮೈ ಯಜ್ಞಾತ್ಮನೇ ನಮಃ||

ಋಗ್ಯಜುಃಸಾಮಗಳನ್ನೇ ಆಶ್ರಯಿಸಿ, ಐದು ವಿಧದ ಹವಿಸ್ಸು[9]ಗಳನ್ನು ಹೊಂದಿರುವ, ಗಾಯತ್ರಿಯೇ ಮೊದಲಾದ ಐದು ಛಂದಸ್ಸುಗಳೇ ತಂತುಗಳಾಗಿರುವ ಯಜ್ಞವನ್ನು ಯಾರಕುರಿತು ಮಾಡುತ್ತಾರೋ ಆ ಯಜ್ಞಾತ್ಮನಿಗೆ ನಮಸ್ಕರಿಸುತ್ತೇನೆ.

[10]12047028a ಯಃ ಸುಪರ್ಣೋ ಯಜುರ್ನಾಮ ಚಂದೋಗಾತ್ರಸ್ತ್ರಿವೃಚ್ಚಿರಾಃ|

12047028c ರಥಂತರಬೃಹತ್ಯಕ್ಷಸ್ತಸ್ಮೈ ಸ್ತೋತ್ರಾತ್ಮನೇ ನಮಃ||

ಯಜುಸ್ಸೆಂಬ ಹೆಸರನ್ನೂ, ಛಂಧಸ್ಸುಗಳೆಂಬ ಅಂಗಾಂಗಗಳನ್ನೂ, ಋಗ್ಯಜುಸ್ಸಾಮಾತ್ಮಿಕ ಯಜ್ಞವೆಂಬ ಶಿರಸ್ಸನ್ನೂ, ರಥಂತರ ಮತ್ತು ಬೃಹತ್ ಗಳನ್ನು ಪ್ರೀತಿವಾಕ್ಯಗಳನ್ನೂ ಹೊಂದಿರುವ ಸುಪರ್ಣ ಎನ್ನುವ ಸ್ತೋತ್ರಾತ್ಮನಿಗೆ ನಮಸ್ಕರಿಸುತ್ತೇನೆ.

12047029a ಯಃ ಸಹಸ್ರಸವೇ ಸತ್ರೇ ಜಜ್ಞೇ ವಿಶ್ವಸೃಜಾಮೃಷಿಃ|

12047029c ಹಿರಣ್ಯವರ್ಣಃ ಶಕುನಿಸ್ತಸ್ಮೈ ಹಂಸಾತ್ಮನೇ ನಮಃ||

ಪ್ರಜಾಪತಿಗಳ ಸಹಸ್ರವರ್ಷಪರ್ಯಂತದ ಯಜ್ಞದಲ್ಲಿ ಸುವರ್ಣಮಯ ರೆಕ್ಕೆಗಳ ಪಕ್ಷಿಯ ರೂಪವನ್ನು ಧರಿಸಿ ಪ್ರಕಟವಾದ ಆ ಋಷಿ ಹಂಸಾತ್ಮನಿಗೆ ನಮಸ್ಕರಿಸುತ್ತೇನೆ.

12047030a ಪದಾಂಗಂ ಸಂಧಿಪರ್ವಾಣಂ ಸ್ವರವ್ಯಂಜನಲಕ್ಷಣಮ್|

12047030c ಯಮಾಹುರಕ್ಷರಂ ನಿತ್ಯಂ ತಸ್ಮೈ ವಾಗಾತ್ಮನೇ ನಮಃ||

ಶ್ಲೋಕಪಾದಗಳ ಸಮೂಹಗಳೇ ಅವಯವಗಳಾಗಿರುವ, ಪದಗಳ ಸಂಧಿಗಳೇ ಗಿಣ್ಣುಗಳಾಗಿರುವ, ಸ್ವರಾಕ್ಷರ-ವ್ಯಂಜನಗಳೇ ಅಲಂಕಾರಪ್ರಾಯವಾಗಿರುವ ದಿವ್ಯಾಕ್ಷರ ಎಂಬ ಹೆಸರಿನಿಂದ ಕರೆಯಲ್ಪಡುವ ವಾಗಾತ್ಮನಿಗೆ ನಮಸ್ಕರಿಸುತ್ತೇನೆ.

[11]12047031a ಯಶ್ಚಿನೋತಿ ಸತಾಂ ಸೇತುಮೃತೇನಾಮೃತಯೋನಿನಾ|

12047031c ಧರ್ಮಾರ್ಥವ್ಯವಹಾರಾಂಗೈಸ್ತಸ್ಮೈ ಸತ್ಯಾತ್ಮನೇ ನಮಃ||

ಧರ್ಮಾರ್ಥವ್ಯವಹಾರಗಳೆಂಬ ಅಂಗಗಳಿಂದಲೂ, ಅಮೃತಯೋನಿ ಸತ್ಯದಿಂದಲೂ ಸತ್ಪುರುಷರು ಅಮರತ್ವವನ್ನು ಹೊಂದಲು ಸೇತುವೆಯನ್ನು ಕಲ್ಪಿಸಿಕೊಡುವ ಸತ್ಯಾತ್ಮನಿಗೆ ನಮಸ್ಕರಿಸುತ್ತೇನೆ.

12047032a ಯಂ ಪೃಥಗ್ಧರ್ಮಚರಣಾಃ ಪೃಥಗ್ಧರ್ಮಫಲೈಷಿಣಃ|

12047032c ಪೃಥಗ್ಧರ್ಮೈಃ ಸಮರ್ಚಂತಿ ತಸ್ಮೈ ಧರ್ಮಾತ್ಮನೇ ನಮಃ||

ಪ್ರತ್ಯೇಕ ಧರ್ಮಾಚರಣೆಗಳುಳ್ಳವರು, ಪ್ರತ್ಯೇಕ ಧರ್ಮಗಳ ಫಲವನ್ನು ಅಪೇಕ್ಷಿಸುವವರು ಯಾರನ್ನು ಪ್ರತ್ಯೇಕ ಧರ್ಮಗಳಿಂದ ಅರ್ಚಿಸುತ್ತಾರೋ ಆ ಧರ್ಮಾತ್ಮನಿಗೆ ನಮಸ್ಕರಿಸುತ್ತೇನೆ.

[12]12047033a ಯಂ ತಂ ವ್ಯಕ್ತಸ್ಥಮವ್ಯಕ್ತಂ ವಿಚಿನ್ವಂತಿ ಮಹರ್ಷಯಃ|

12047033c ಕ್ಷೇತ್ರೇ ಕ್ಷೇತ್ರಜ್ಞಮಾಸೀನಂ ತಸ್ಮೈ ಕ್ಷೇತ್ರಾತ್ಮನೇ ನಮಃ||

ವ್ಯಕ್ತವಾದವುಗಳಲ್ಲಿ ಅವ್ಯಕ್ತನಾಗಿರುವ ಅಥವಾ ಬುದ್ಧಿಯಲ್ಲಿರುವ ಯಾವ ಕ್ಷೇತ್ರಜ್ಞನನ್ನು ಮಹರ್ಷಿಗಳು ಹುಡುಕುತ್ತಾರೆಯೋ ಆ ಕ್ಷೇತ್ರಾತ್ಮನಿಗೆ ನಮಸ್ಕರಿಸುತ್ತೇನೆ.

12047034a ಯಂ ದೃಗಾತ್ಮಾನಮಾತ್ಮಸ್ಥಂ[13] ವೃತಂ ಷೋಡಶಭಿರ್ಗುಣೈಃ|

12047034c ಪ್ರಾಹುಃ ಸಪ್ತದಶಂ ಸಾಂಖ್ಯಾಸ್ತಸ್ಮೈ ಸಾಂಖ್ಯಾತ್ಮನೇ ನಮಃ||

ಹದಿನಾರು ಗುಣ[14]ಗಳಿಂದ ಆವೃತನಾಗಿರುವ ಹದಿನೇಳನೆಯದಾಗಿ ಆತ್ಮಾ ಎಂದು ಸಾಂಖ್ಯರು ಕರೆಯುವ ಆ ಆತ್ಮಸ್ಥ ಸಾಂಖ್ಯಾತ್ಮನಿಗೆ ನಮಸ್ಕರಿಸುತ್ತೇನೆ.

12047035a ಯಂ ವಿನಿದ್ರಾ ಜಿತಶ್ವಾಸಾಃ ಸತ್ತ್ವಸ್ಥಾಃ ಸಂಯತೇಂದ್ರಿಯಾಃ|

12047035c ಜ್ಯೋತಿಃ ಪಶ್ಯಂತಿ ಯುಂಜಾನಾಸ್ತಸ್ಮೈ ಯೋಗಾತ್ಮನೇ ನಮಃ||

ನಿದ್ರೆಯಿಲ್ಲದೇ ಶ್ವಾಸಗಳನ್ನು ನಿಯಂತ್ರಿಸಿ ಇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಂಡು ಸತ್ತ್ವದಲ್ಲಿಯೇ ನೆಲೆಸಿಕೊಂಡು ಮನಸ್ಸನ್ನು ಬುದ್ಧಿಯಲ್ಲಿ ಲೀನಗೊಳಿಸಿದ ಯೋಗಿಗಳು ಯಾವ ಜ್ಯೋತಿಯನ್ನು ಕಾಣುತ್ತಾರೋ ಆ ಯೋಗಾತ್ಮನಿಗೆ ನಮಸ್ಕರಿಸುತ್ತೇನೆ.

12047036a ಅಪುಣ್ಯಪುಣ್ಯೋಪರಮೇ ಯಂ ಪುನರ್ಭವನಿರ್ಭಯಾಃ|

12047036c ಶಾಂತಾಃ ಸಂನ್ಯಾಸಿನೋ ಯಾಂತಿ ತಸ್ಮೈ ಮೋಕ್ಷಾತ್ಮನೇ ನಮಃ||

ಪುಣ್ಯ-ಪಾಪಗಳು ಕ್ಷಯಹೊಂದಿದ ನಂತರ ಪುನಃ ಹುಟ್ಟು-ಸಾವುಗಳ ಭಯವಿಲ್ಲದ ಶಾಂತ ಸಂನ್ಯಾಸಿಗಳು ಯಾರನ್ನು ಸೇರುತ್ತಾರೆಯೋ ಆ ಮೋಕ್ಷಾತ್ಮನಿಗೆ ನಮಸ್ಕರಿಸುತ್ತೇನೆ.

12047037a ಯೋಽಸೌ ಯುಗಸಹಸ್ರಾಂತೇ ಪ್ರದೀಪ್ತಾರ್ಚಿರ್ವಿಭಾವಸುಃ|

12047037c ಸಂಭಕ್ಷಯತಿ ಭೂತಾನಿ ತಸ್ಮೈ ಘೋರಾತ್ಮನೇ ನಮಃ||

ಸಹಸ್ರಯುಗಗಳ ಅಂತ್ಯದಲ್ಲಿ ಧಗಧಗಿಸುವ ಜ್ವಾಲೆಗಳೊಂದಿಗೆ ಪ್ರಳಯಾಗ್ನಿಯ ರೂಪವನ್ನು ಹೊಂದಿ ಎಲ್ಲವನ್ನೂ ಭಕ್ಷಿಸುವ ಘೋರಾತ್ಮನಿಗೆ ನಮಸ್ಕರಿಸುತ್ತೇನೆ.

12047038a ಸಂಭಕ್ಷ್ಯ ಸರ್ವಭೂತಾನಿ ಕೃತ್ವಾ ಚೈಕಾರ್ಣವಂ ಜಗತ್|

12047038c ಬಾಲಃ ಸ್ವಪಿತಿ ಯಶ್ಚೈಕಸ್ತಸ್ಮೈ ಮಾಯಾತ್ಮನೇ ನಮಃ||

ಇರುವ ಎಲ್ಲವನ್ನೂ ಭಕ್ಷಿಸಿ ಜಗತ್ತನ್ನು ಜಲಮಯವನ್ನಾಗಿಸಿ ಅದರ ಮೇಲೆ ಬಾಲಕನಾಗಿ ಮಲಗುವ ಆ ಮಾಯಾತ್ಮನಿಗೆ ನಮಸ್ಕರಿಸುತ್ತೇನೆ.

[15]12047039a ಸಹಸ್ರಶಿರಸೇ ತಸ್ಮೈ ಪುರುಷಾಯಾಮಿತಾತ್ಮನೇ|

12047039c ಚತುಃಸಮುದ್ರಪರ್ಯಾಯಯೋಗನಿದ್ರಾತ್ಮನೇ ನಮಃ||

ನಾಲ್ಕು ಸಮುದ್ರಗಳನ್ನೂ ಒಂದುಗೂಡಿಸಿ ಹಾಸಿಗೆಯನ್ನಾಗಿಸಿಕೊಂಡು ಅದರ ಮೇಲೆ ಮಲಗುವ ಆ ಸಹಸ್ರಶಿರಸ, ಪುರುಷ, ಅಮಿತಾತ್ಮ, ಯೋಗನಿದ್ರಾತ್ಮನಿಗೆ ನಮಸ್ಕರಿಸುತ್ತೇನೆ.

12047040a ಅಜಸ್ಯ ನಾಭಾವಧ್ಯೇಕಂ ಯಸ್ಮಿನ್ವಿಶ್ವಂ ಪ್ರತಿಷ್ಠಿತಮ್|

12047040c ಪುಷ್ಕರಂ ಪುಷ್ಕರಾಕ್ಷಸ್ಯ ತಸ್ಮೈ ಪದ್ಮಾತ್ಮನೇ ನಮಃ||

ಹುಟ್ಟೇ ಇಲ್ಲದ ಮತ್ತು ಇಲ್ಲದಿರುವಂತಾಗದ ಯಾರ ಮೇಲೆ ಈ ವಿಶ್ವವು ಪ್ರತಿಷ್ಠಿತವಾಗಿದೆಯೋ ಆ ಪುಷ್ಕರ ಪುಷ್ಕರಾಕ್ಷ ಪದ್ಮಾತ್ಮನಿಗೆ ನಮಸ್ಕರಿಸುತ್ತೇನೆ.

12047041a ಯಸ್ಯ ಕೇಶೇಷು ಜೀಮೂತಾ ನದ್ಯಃ ಸರ್ವಾಂಗಸಂಧಿಷು|

12047041c ಕುಕ್ಷೌ ಸಮುದ್ರಾಶ್ಚತ್ವಾರಸ್ತಸ್ಮೈ ತೋಯಾತ್ಮನೇ ನಮಃ||

ಯಾರ ಕೇಶರಾಶಿಗಳಲ್ಲಿ ಮೇಘಗಳಿವೆಯೋ, ಯಾರ ಸರ್ವಾಂಗಸಂಧಿಗಳಲ್ಲಿ ನದಿಗಳಿವೆಯೋ, ಮತ್ತು ಯಾರ ಹೊಟ್ಟೆಯಲ್ಲಿ ನಾಲ್ಕೂ ಸಮುದ್ರಗಳಿವೆಯೋ ಆ ತೋಯಾತ್ಮನಿಗೆ ನಮಸ್ಕರಿಸುತ್ತೇನೆ.

[16]12047042a ಯುಗೇಷ್ವಾವರ್ತತೇ ಯೋಽಂಶೈರ್ದಿನರ್ತ್ವನಯಹಾಯನೈಃ|

12047042c ಸರ್ಗಪ್ರಲಯಯೋಃ ಕರ್ತಾ ತಸ್ಮೈ ಕಾಲಾತ್ಮನೇ ನಮಃ||

ಯಾರು ಯುಗಯುಗದಲ್ಲಿಯೂ ಯೋಗಮಾಯೆಯಿಂದ ಅವತರಿಸುವನೋ, ಮಾಸ-ಋತು-ಆಯನ-ಸಂವತ್ಸರಗಳು ಉರುಳಿದಂತೆ ಸೃಷ್ಟಿ-ಲಯಗಳನ್ನ ನಡೆಸುತ್ತಾನೋ ಆ ಕಾಲಾತ್ಮನಿಗೆ ನಮಸ್ಕರಿಸುತ್ತೇನೆ.

12047043a ಬ್ರಹ್ಮ ವಕ್ತ್ರಂ ಭುಜೌ ಕ್ಷತ್ರಂ ಕೃತ್ಸ್ನಮೂರೂದರಂ ವಿಶಃ|

12047043c ಪಾದೌ ಯಸ್ಯಾಶ್ರಿತಾಃ ಶೂದ್ರಾಸ್ತಸ್ಮೈ ವರ್ಣಾತ್ಮನೇ ನಮಃ||

ಯಾರಿಗೆ ಬ್ರಾಹ್ಮಣನೇ ಮುಖನಾಗಿರುವನೋ, ಸಮಸ್ತ ಕ್ಷತ್ರಿಯರೂ ಭುಜಗಳಾಗಿರುವರೋ, ವೈಶ್ಯರು ಹೊಟ್ಟೆ-ತೊಡೆಗಳಾಗಿರುವರೋ ಮತ್ತು ಯಾರ ಪಾದಗಳಲ್ಲಿ ಶೂದ್ರರು ಆಶ್ರಿತರಾಗಿರುವರೋ ಆ ವರ್ಣಾತ್ಮನಿಗೆ ನಮಸ್ಕರಿಸುತ್ತೇನೆ.

12047044a ಯಸ್ಯಾಗ್ನಿರಾಸ್ಯಂ ದ್ಯೌರ್ಮೂರ್ಧಾ ಖಂ ನಾಭಿಶ್ಚರಣೌ ಕ್ಷಿತಿಃ|

12047044c ಸೂರ್ಯಶ್ಚಕ್ಷುರ್ದಿಶಃ ಶ್ರೋತ್ರೇ ತಸ್ಮೈ ಲೋಕಾತ್ಮನೇ ನಮಃ||

ಯಾರಿಗೆ ಅಗ್ನಿಯು ಮುಖನಾಗಿರುವನೋ, ಸ್ವರ್ಗವು ತಲೆಯಾಗಿರುವುದೋ, ಆಕಾಶವು ನಾಭಿಯಾಗಿರುವುದೋ, ಭೂಮಿಯು ಪಾದಗಳಾಗಿರುವುದೋ, ಸೂರ್ಯನೇ ಕಣ್ಣಾಗಿರುವನೋ, ಮತ್ತು ದಿಕ್ಕುಗಳೇ ಕಿವಿಗಳಾಗಿರುವವೋ ಆ ಲೋಕಾತ್ಮನಿಗೆ ನಮಸ್ಕರಿಸುತ್ತೇನೆ.

12047045a ವಿಷಯೇ ವರ್ತಮಾನಾನಾಂ ಯಂ ತಂ ವೈಶೇಷಿಕೈರ್ಗುಣೈಃ|

12047045c ಪ್ರಾಹುರ್ವಿಷಯಗೋಪ್ತಾರಂ ತಸ್ಮೈ ಗೋಪ್ತ್ರಾತ್ಮನೇ ನಮಃ||

ವೈಶೇಷಿಕ ಗುಣಗಳಿಂದ ಆಕರ್ಷಿತರಾಗಿ ವಿಷಯಸುಖಗಳಲ್ಲಿಯೇ ಇರುವವರನ್ನು ವಿಷಯಗಳಿಂದ ರಕ್ಷಿಸುವವನೆಂದು ಯಾರನ್ನು ಕರೆಯುತ್ತಾರೋ ಆ ಗೋಪ್ತ್ರಾತ್ಮನಿಗೆ ನಮಸ್ಕರಿಸುತ್ತೇನೆ.

12047046a ಅನ್ನಪಾನೇಂಧನಮಯೋ ರಸಪ್ರಾಣವಿವರ್ಧನಃ|

12047046c ಯೋ ಧಾರಯತಿ ಭೂತಾನಿ ತಸ್ಮೈ ಪ್ರಾಣಾತ್ಮನೇ ನಮಃ||

ಅನ್ನ-ಪಾನಗಳೆಂಬ ಇಂಧನರೂಪನಾಗಿ ರಸ-ಪ್ರಾಣಗಳನ್ನು ವೃದ್ಧಿಪಡಿಸುತ್ತಾ ಯಾರು ಪ್ರಾಣಿಗಳನ್ನು ಧರಿಸಿರುವನೋ ಆ ಪ್ರಾಣಾತ್ಮನಿಗೆ ನಮಸ್ಕರಿಸುತ್ತೇನೆ.

12047047a ಪರಃ ಕಾಲಾತ್ಪರೋ ಯಜ್ಞಾತ್ಪರಃ ಸದಸತೋಶ್ಚ ಯಃ|

12047047c ಅನಾದಿರಾದಿರ್ವಿಶ್ವಸ್ಯ ತಸ್ಮೈ ವಿಶ್ವಾತ್ಮನೇ ನಮಃ||

ಯಾರು ಕಾಲಾತೀತನಾಗಿ, ಯಜ್ಞಾತೀತನಾಗಿ, ಪರಕ್ಕಿಂತಲೂ ಅತ್ಯಂತ ಶ್ರೇಷ್ಠನಾಗಿ, ಆದ್ಯಂತರಹಿತನಾಗಿ, ವಿಶ್ವಕ್ಕೇ ಆದಿಭೂತನಾಗಿರುವನೋ ಆ ವಿಶ್ವಾತ್ಮನಿಗೆ ನಮಸ್ಕರಿಸುತ್ತೇನೆ.

[17] 12047048a ಯೋ ಮೋಹಯತಿ ಭೂತಾನಿ ಸ್ನೇಹರಾಗಾನುಬಂಧನೈಃ|

12047048c ಸರ್ಗಸ್ಯ ರಕ್ಷಣಾರ್ಥಾಯ ತಸ್ಮೈ ಮೋಹಾತ್ಮನೇ ನಮಃ||

ಯಾರು ಸೃಷ್ಟಿಪರಂಪರೆಯ ರಕ್ಷಣಾರ್ಥವಾಗಿ ಎಲ್ಲ ಪ್ರಾಣಿಗಳನ್ನೂ ಸ್ನೇಹಪಾಶಗಳ ಬಂಧನಗಳಿಂದ ವಿಮೋಹಗೊಳಿಸುತ್ತಾನೆಯೋ ಆ ಮೋಹಾತ್ಮನಿಗೆ ನಮಸ್ಕರಿಸುತ್ತೇನೆ.

12047049a ಆತ್ಮಜ್ಞಾನಮಿದಂ ಜ್ಞಾನಂ ಜ್ಞಾತ್ವಾ ಪಂಚಸ್ವವಸ್ಥಿತಮ್|

12047049c ಯಂ ಜ್ಞಾನಿನೋಽಧಿಗಚ್ಚಂತಿ ತಸ್ಮೈ ಜ್ಞಾನಾತ್ಮನೇ ನಮಃ||

ಈ ಆತ್ಮಜ್ಞಾನವು ಅನ್ನಮಯ-ಪ್ರಾಣಮಯ-ಮನೋಮಯ-ವಿಜ್ಞಾನಮಯ-ಆನಂದಮಯಗಳೆಂಬ ಐದು ಕೋಶಗಳಲ್ಲಿರುವುದೆನ್ನುವುದನ್ನು ತಿಳಿದು ಜ್ಞಾನಯೋಗದ ಮೂಲಕ ಯೋಗಿಗಳು ಯಾರನ್ನು ಸಾಕ್ಷಾತ್ಕರಿಸಿಕೊಳ್ಳುವರೋ ಆ ಜ್ಞಾನಾತ್ಮನಿಗೆ ನಮಸ್ಕರಿಸುತ್ತೇನೆ.

12047050a ಅಪ್ರಮೇಯಶರೀರಾಯ ಸರ್ವತೋಽನಂತಚಕ್ಷುಷೇ|

12047050c ಅಪಾರಪರಿಮೇಯಾಯ ತಸ್ಮೈ ಚಿಂತ್ಯಾತ್ಮನೇ[18] ನಮಃ||

ಯಾರು ಅಳತೆಗೆ ವಿಷಯವಾಗದೇ ಇರುವ ಶರೀರವನ್ನು ಹೊಂದಿರುವನೋ, ಯಾರ ಬುದ್ಧಿರೂಪೀ ಕಣ್ಣುಗಳು ಸರ್ವತ್ರ ವ್ಯಾಪಿಸಿರುವವೋ, ಯಾರಲ್ಲಿ ಅನಂತ ವಿಷಯಗಳ ಸಮಾವೇಶವಿರುವುದೋ, ಯಾರ ತುದಿಯನ್ನು ಕಾಣಲು ಸಾಧ್ಯವಿಲ್ಲವೋ ಆ ಚಿಂತ್ಯಾತ್ಮನಿಗೆ ನಮಸ್ಕರಿಸುತ್ತೇನೆ.

12047051a ಜಟಿನೇ ದಂಡಿನೇ ನಿತ್ಯಂ ಲಂಬೋದರಶರೀರಿಣೇ|

12047051c ಕಮಂಡಲುನಿಷಂಗಾಯ ತಸ್ಮೈ ಬ್ರಹ್ಮಾತ್ಮನೇ ನಮಃ||

ಜಟೆಯನ್ನೂ-ದಂಡವನ್ನೂ ಧರಿಸಿರುವ, ಲಂಬೋದರ ಶರೀರೀ, ಯಾವಾಗಲೂ ಕಮಂಡಲುವನ್ನು ಹಿಡಿದಿರುವ ಬ್ರಹ್ಮಾತ್ಮನಿಗೆ ನಮಸ್ಕರಿಸುತ್ತೇನೆ.

12047052a ಶೂಲಿನೇ ತ್ರಿದಶೇಶಾಯ ತ್ರ್ಯಂಬಕಾಯ ಮಹಾತ್ಮನೇ|

12047052c ಭಸ್ಮದಿಗ್ಧೋರ್ಧ್ವಲಿಂಗಾಯ ತಸ್ಮೈ ರುದ್ರಾತ್ಮನೇ ನಮಃ||

ಶೂಲಿಯೂ, ತ್ರಿದಶೇಶನೂ, ತ್ಯಂಬಕನೂ, ಮಹಾತ್ಮನೂ, ಭಸ್ಮದಿಗ್ಧನೂ, ಊರ್ಧ್ವಲಿಂಗನೂ ಆದ ರುದ್ರಾತ್ಮನಿಗೆ ನಮಸ್ಕರಿಸುತ್ತೇನೆ.

[19]12047053a ಪಂಚಭೂತಾತ್ಮಭೂತಾಯ[20] ಭೂತಾದಿನಿಧನಾತ್ಮನೇ|

12047053c ಅಕ್ರೋಧದ್ರೋಹಮೋಹಾಯ ತಸ್ಮೈ ಶಾಂತಾತ್ಮನೇ ನಮಃ||

ಪ್ರಾಣಿಗಳಲ್ಲಿ ಪಂಚಭೂತಾತ್ಮನಾಗಿರುವ, ಪ್ರಾಣಿಗಳ ಹುಟ್ಟು-ಸಾವುಗಳಿಗೆ ಕಾರಣನಾಗಿರುವ, ಯಾರಲ್ಲಿ ಕ್ರೋಧ-ದ್ರೋಹ-ಮೋಹಗಳಿಲ್ಲವೋ ಆ ಶಾಂತಾತ್ಮನಿಗೆ ನಮಸ್ಕರಿಸುತ್ತೇನೆ.

12047054a ಯಸ್ಮಿನ್ಸರ್ವಂ ಯತಃ ಸರ್ವಂ ಯಃ ಸರ್ವಂ ಸರ್ವತಶ್ಚ ಯಃ|

12047054c ಯಶ್ಚ ಸರ್ವಮಯೋ ನಿತ್ಯಂ ತಸ್ಮೈ ಸರ್ವಾತ್ಮನೇ ನಮಃ||

ಯಾರಲ್ಲಿ ಸರ್ವವೂ ಇರುವವೋ, ಯಾರಿಂದ ಈ ಎಲ್ಲವೂ ಸೃಷ್ಟಿಸಲ್ಪಟ್ಟಿರುವವೋ, ಯಾರು ಎಲ್ಲದರಲ್ಲಿಯೂ ಇರುವನೋ, ಯಾರು ಎಲ್ಲ ಕಡೆಗಳಲ್ಲಿಯೂ ಇರುವನೋ ಆ ಸರ್ವಮಯ ಸರ್ವಾತ್ಮನಿಗೆ ನಮಸ್ಕರಿಸುತ್ತೇನೆ.

12047055a ವಿಶ್ವಕರ್ಮನ್ನಮಸ್ತೇಽಸ್ತು ವಿಶ್ವಾತ್ಮನ್ವಿಶ್ವಸಂಭವ|

12047055c ಅಪವರ್ಗೋಽಸಿ ಭೂತಾನಾಂ ಪಂಚಾನಾಂ ಪರತಃ ಸ್ಥಿತಃ||

ವಿಶ್ವವನ್ನು ರಚಿಸಿರುವವನೇ! ವಿಶ್ವಾತ್ಮನೇ! ವಿಶ್ವಸಂಭವನೇ! ನಿನಗೆ ನಮಸ್ಕಾರ! ಪಂಚಭೂತಗಳಿಗೂ ಅತೀತನಾದ ನೀನು ಪ್ರಾಣಿಗಳಿಗೆ ಮೋಕ್ಷದಾಯಕನಾಗಿರುವೆ!

12047056a ನಮಸ್ತೇ ತ್ರಿಷು ಲೋಕೇಷು ನಮಸ್ತೇ ಪರತಸ್ತ್ರಿಷು|

12047056c ನಮಸ್ತೇ ದಿಕ್ಷು ಸರ್ವಾಸು ತ್ವಂ ಹಿ ಸರ್ವಪರಾಯಣಮ್||

ಮೂರುಲೋಕಗಳಲ್ಲಿಯೂ ವ್ಯಾಪಿಸಿರುವ ನಿನಗೆ ನಮಸ್ಕಾರ! ಈ ಮೂರು ಲೋಕಗಳ ಆಚೆಯೂ ಇರುವ ನಿನಗೆ ನಮಸ್ಕಾರ! ಎಲ್ಲ ದಿಕ್ಕುಗಳಲ್ಲಿಯೂ ವ್ಯಾಪಿಸಿರುವ ನಿನಗೆ ನಮಸ್ಕಾರ! ಸರ್ವರ ಪರಾಯಣನಾಗಿರುವ ನಿನಗೆ ನಮಸ್ಕಾರ!

12047057a ನಮಸ್ತೇ ಭಗವನ್ವಿಷ್ಣೋ ಲೋಕಾನಾಂ ಪ್ರಭವಾಪ್ಯಯ|

12047057c ತ್ವಂ ಹಿ ಕರ್ತಾ ಹೃಷೀಕೇಶ ಸಂಹರ್ತಾ ಚಾಪರಾಜಿತಃ||

ಭಗವನ್ ವಿಷ್ಣೋ! ಲೋಕಗಳ ಉತ್ಪತ್ತಿ-ವಿನಾಶಗಳ ಕರ್ತನೇ! ನಿನಗೆ ನಮಸ್ಕಾರ! ಹೃಷೀಕೇಶ! ನೀನೇ ಸೃಷ್ಟಿಕರ್ತನೂ ಸಂಹಾರಕರ್ತನೂ ಆಗಿರುವೆ. ಯಾರಿಂದಲೂ ನಿನಗೆ ಪರಾಜಯವಿಲ್ಲ!

12047058a ತೇನ ಪಶ್ಯಾಮಿ ತೇ ದಿವ್ಯಾನ್ಭಾವಾನ್ಹಿ ತ್ರಿಷು ವರ್ತ್ಮಸು|

12047058c ತಚ್ಚ ಪಶ್ಯಾಮಿ ತತ್ತ್ವೇನ ಯತ್ತೇ ರೂಪಂ ಸನಾತನಮ್||

ಮೂರು ಲೋಕಗಳಲ್ಲಿಯೂ ವ್ಯಾಪ್ತವಾಗಿರುವ ನಿನ್ನ ದಿವ್ಯತೆ ಭಾವಗಳನ್ನು ನಾನು ಕಾಣಲಾರೆನು. ಆದರೆ ತತ್ತ್ವದೃಷ್ಟಿಯಿಂದ ನಿನ್ನ ಸನಾತನ ರೂಪವನ್ನು ಕಾಣುತ್ತಿದ್ದೇನೆ.

12047059a ದಿವಂ ತೇ ಶಿರಸಾ ವ್ಯಾಪ್ತಂ ಪದ್ಭ್ಯಾಂ ದೇವೀ ವಸುಂಧರಾ|

12047059c ವಿಕ್ರಮೇಣ ತ್ರಯೋ ಲೋಕಾಃ ಪುರುಷೋಽಸಿ ಸನಾತನಃ||

ಆಕಾಶವು ನಿನ್ನ ಶಿರಸ್ಸಿನಿಂದ ವ್ಯಾಪ್ತವಾಗಿದೆ. ದೇವೀ ವಸುಂಧರೆಯು ನಿನ್ನ ಪಾದಗಳಿಂದ ವ್ಯಾಪ್ತಳಾಗಿದ್ದಾಳೆ. ಮೂರು ಲೋಕಗಳೂ ನಿನ್ನ ವಿಕ್ರಮದಿಂದ ವ್ಯಾಪ್ತವಾಗಿದೆ. ನೀನು ಸನಾತನ ಪುರುಷ!

[21]12047060a ಅತಸೀಪುಷ್ಪಸಂಕಾಶಂ ಪೀತವಾಸಸಮಚ್ಯುತಮ್|

12047060c ಯೇ ನಮಸ್ಯಂತಿ ಗೋವಿಂದಂ ನ ತೇಷಾಂ ವಿದ್ಯತೇ ಭಯಮ್||

ಅಗಸೇ ಹೂವಿನ ಕಾಂತಿಯನ್ನು ಹೊಂದಿರುವ, ಪೀತವಾಸಸ, ಅಚ್ಯುತ ಗೋವಿಂದನನ್ನು ಯಾರು ನಮಸ್ಕರಿಸುತ್ತಾರೋ ಅವರಿಗೆ ಭಯವೆನ್ನುವುದೇ ತಿಳಿಯದು.

[22]12047061a ಯಥಾ ವಿಷ್ಣುಮಯಂ ಸತ್ಯಂ ಯಥಾ ವಿಷ್ಣುಮಯಂ ಹವಿಃ|

12047061c ಯಥಾ ವಿಷ್ಣುಮಯಂ ಸರ್ವಂ ಪಾಪ್ಮಾ ಮೇ ನಶ್ಯತಾಂ ತಥಾ||

ಸತ್ಯವು ಹೇಗೆ ವಿಷ್ಣುಮಯವಾಗಿರುವುದೋ, ಜಗತ್ತು ಹೇಗೆ ವಿಷ್ಣುಮಯವಾಗಿರುವುದೋ, ಸರ್ವವೂ ಹೇಗೆ ವಿಷ್ಣುಮಯವಾಗಿರುವುದೋ ಹಾಗೆ ಈ ಸತ್ಯದ ಪ್ರಭಾವದಿಂದ ನನ್ನ ಸಕಲ ಪಾಪಗಳೂ ನಾಶಹೊಂದಲಿ.

12047062a ತ್ವಾಂ ಪ್ರಪನ್ನಾಯ ಭಕ್ತಾಯ ಗತಿಮಿಷ್ಟಾಂ ಜಿಗೀಷವೇ|

12047062c ಯಚ್ಚ್ರೇಯಃ ಪುಂಡರೀಕಾಕ್ಷ ತದ್ಧ್ಯಾಯಸ್ವ ಸುರೋತ್ತಮ||

ಸುರೋತ್ತಮ! ಪುಂಡರೀಕಾಕ್ಷ! ನಿನ್ನನ್ನೇ ಅನನ್ಯಶರಣನಾಗಿ ಶರಣುಹೊಂದಿರುವ ಭಕ್ತನಾದ ಅಭೀಷ್ಟ ಗತಿಯನ್ನು ಇಚ್ಛಿಸುತ್ತಿರುವ ನನಗೆ ಯಾವುದು ಶ್ರೇಯಸ್ಕರವೆನ್ನುವುದನ್ನು ನೀನೇ ಯೋಚಿಸಿ ನಿರ್ಧರಿಸು!

12047063a ಇತಿ ವಿದ್ಯಾತಪೋಯೋನಿರಯೋನಿರ್ವಿಷ್ಣುರೀಡಿತಃ|

12047063c ವಾಗ್ಯಜ್ಞೇನಾರ್ಚಿತೋ ದೇವಃ ಪ್ರೀಯತಾಂ ಮೇ ಜನಾರ್ದನಃ||

ಈ ರೀತಿ ವಿದ್ಯೆ-ತಪಸ್ಸುಗಳಿಗೆ ಜನ್ಮಸ್ಥಾನನಾದ ಅಯೋನಿಜ ಭಗವಂತ ವಿಷ್ಣುವು ನನ್ನಿಂದ ಸ್ತುತಿಸಲ್ಪಟ್ಟು ದೇವ ಜನಾರ್ದನನು ನನ್ನಮೇಲೆ ಪ್ರಸನ್ನನಾಗಲಿ!”

[23]12047064a ಏತಾವದುಕ್ತ್ವಾ ವಚನಂ ಭೀಷ್ಮಸ್ತದ್ಗತಮಾನಸಃ|

12047064c ನಮ ಇತ್ಯೇವ ಕೃಷ್ಣಾಯ ಪ್ರಣಾಮಮಕರೋತ್ತದಾ||

ಈ ಮಾತನ್ನು ಹೇಳಿ ಕೃಷ್ಣನಲ್ಲಿಯೇ ಮನಸ್ಸಿಟ್ಟು ಭೀಷ್ಮನು “ನಮಃ ಕೃಷ್ಣಾಯ!” ಎಂದು ಹೇಳಿ ಪ್ರಣಾಮ ಮಾಡಿದನು.

12047065a ಅಭಿಗಮ್ಯ ತು ಯೋಗೇನ ಭಕ್ತಿಂ ಭೀಷ್ಮಸ್ಯ ಮಾಧವಃ|

12047065c ತ್ರೈಕಾಲ್ಯದರ್ಶನಂ ಜ್ಞಾನಂ ದಿವ್ಯಂ ದಾತುಂ ಯಯೌ ಹರಿಃ||

ತನ್ನ ಯೋಗಬಲದಿಂದ ಭೀಷ್ಮನ ಭಕ್ತಿಯನ್ನು ತಿಳಿದುಕೊಂಡ ಮಾಧವ ಹರಿಯು ಅವನಿಗೆ ತ್ರಿಕಾಲದೃಷ್ಟಿಯ ದಿವ್ಯ ಜ್ಞಾನವನ್ನು ನೀಡಲು ಹೊರಟನು.

12047066a ತಸ್ಮಿನ್ನುಪರತೇ ಶಬ್ದೇ ತತಸ್ತೇ ಬ್ರಹ್ಮವಾದಿನಃ|

12047066c ಭೀಷ್ಮಂ ವಾಗ್ಭಿರ್ಬಾಷ್ಪಕಂಠಾಸ್ತಮಾನರ್ಚುರ್ಮಹಾಮತಿಮ್||

ಭೀಷ್ಮನ ಸ್ತೋತ್ರವು ನಿಲ್ಲಲು ಸುತ್ತಲೂ ನೆರೆದಿದ್ದ ಬ್ರಹ್ಮವಾದಿಗಳು ಆನಂದಭಾಷ್ಪದಿಂದ ಕೂಡಿದವರಾಗಿ ಗದ್ಗದಧ್ವನಿಯಲ್ಲಿ ಭೀಷ್ಮನನ್ನು ಪ್ರಶಂಸಿಸಿದರು.

12047067a ತೇ ಸ್ತುವಂತಶ್ಚ ವಿಪ್ರಾಗ್ರ್ಯಾಃ ಕೇಶವಂ ಪುರುಷೋತ್ತಮಮ್|

12047067c ಭೀಷ್ಮಂ ಚ ಶನಕೈಃ ಸರ್ವೇ ಪ್ರಶಶಂಸುಃ ಪುನಃ ಪುನಃ||

ಕೇಶವ ಪುರುಷೋತ್ತಮನನ್ನು ಸ್ತುತಿಸುತ್ತಿದ್ದ ಆ ವಿಪ್ರಾಗ್ರ್ಯರು ಎಲ್ಲರೂ ಮೆಲ್ಲನೆ ಪುನಃ ಪುನಃ ಭೀಷ್ಮನನ್ನು ಪ್ರಶಂಸಿಸಿದರು.

12047068a ವಿದಿತ್ವಾ ಭಕ್ತಿಯೋಗಂ ತು ಭೀಷ್ಮಸ್ಯ ಪುರುಷೋತ್ತಮಃ|

12047068c ಸಹಸೋತ್ಥಾಯ ಸಂಹೃಷ್ಟೋ ಯಾನಮೇವಾನ್ವಪದ್ಯತ||

ಭೀಷ್ಮನ ಭಕ್ತಿಯೋಗವನ್ನು ಅರಿತ ಪುರುಷೋತ್ತಮನು ಸಂಹೃಷ್ಟನಾಗಿ ತಕ್ಷಣವೇ ಮೇಲೆದ್ದು ರಥವನ್ನೇರಿ ಕುಳಿತುಕೊಂಡನು.

12047069a ಕೇಶವಃ ಸಾತ್ಯಕಿಶ್ಚೈವ ರಥೇನೈಕೇನ ಜಗ್ಮತುಃ|

12047069c ಅಪರೇಣ ಮಹಾತ್ಮಾನೌ ಯುಧಿಷ್ಠಿರಧನಂಜಯೌ||

ಕೇಶವ-ಸಾತ್ಯಕಿಯರು ಒಂದು ರಥದಲ್ಲಿ ಮತ್ತು ಇನ್ನೊಂದು ರಥದಲ್ಲಿ ಮಹಾತ್ಮ ಯುಧಿಷ್ಠಿರ-ಧನಂಜಯರು ಹೊರಟರು.

12047070a ಭೀಮಸೇನೋ ಯಮೌ ಚೋಭೌ ರಥಮೇಕಂ ಸಮಾಸ್ಥಿತೌ|

12047070c ಕೃಪೋ ಯುಯುತ್ಸುಃ ಸೂತಶ್ಚ ಸಂಜಯಶ್ಚಾಪರಂ ರಥಮ್||

ಭೀಮಸೇನ ಮತ್ತು ನಕುಲ-ಸಹದೇವರು ಒಂದೇ ರಥದಲ್ಲಿ ಕುಳಿತಿದ್ದರು. ಕೃಪ, ಯುಯುತ್ಸು, ಮತ್ತು ಸೂತ ಸಂಜಯರು ಇನ್ನೊಂದು ರಥದಲ್ಲಿದ್ದರು.

12047071a ತೇ ರಥೈರ್ನಗರಾಕಾರೈಃ ಪ್ರಯಾತಾಃ ಪುರುಷರ್ಷಭಾಃ|

12047071c ನೇಮಿಘೋಷೇಣ ಮಹತಾ ಕಂಪಯಂತೋ ವಸುಂಧರಾಮ್||

ಆ ಪುರುಷರ್ಷಭರು ನಗರಾಕಾರದ ರಥಗಳಲ್ಲಿ ಕುಳಿತು ರಥಚಕ್ರಗಳ ಘೋಷದಿಂದ ಭೂಮಿಯನ್ನೇ ನಡುಗಿಸುತ್ತಾ ಪ್ರಯಾಣಮಾಡಿದರು.

12047072a ತತೋ ಗಿರಃ ಪುರುಷವರಸ್ತವಾನ್ವಿತಾ| ದ್ವಿಜೇರಿತಾಃ ಪಥಿ ಸುಮನಾಃ ಸ ಶುಶ್ರುವೇ|

12047072c ಕೃತಾಂಜಲಿಂ ಪ್ರಣತಮಥಾಪರಂ ಜನಂ| ಸ ಕೇಶಿಹಾ ಮುದಿತಮನಾಭ್ಯನಂದತ||

ಆಗ ಪುರುಷೋತ್ತಮನು ಮಾರ್ಗದಲ್ಲಿ ಅನೇಕ ಬ್ರಾಹ್ಮಣರು ಸುಮನಸ್ಕರಾಗಿ ಸ್ತುತಿಸುತ್ತಿದ್ದುದನ್ನು ಕೇಳಿದನು. ಕೇಶಿಹಂತಕ ಕೃಷ್ಣನು ಆನಂದತುಂದಿಲನಾಗಿ ಕೈಮುಗಿದು ಪ್ರಣಾಮಮಾಡುತ್ತಿದ್ದ ಇತರ ಜನರನ್ನು ಅಭಿನಂದಿಸಿದನು.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಭೀಷ್ಮಸ್ತವರಾಜೇ ಸಪ್ತಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಭೀಷ್ಮಸ್ತವರಾಜ ಎನ್ನುವ ನಲ್ವತ್ತೇಳನೇ ಅಧ್ಯಾಯವು.

[1] ಶುಚಿಂ ಶುಚಿಪದಂ ಎನ್ನುವ ಪಾಠಾಂತರವಿದೆ (ಭಾರತ ದರ್ಶನ)

[2] ಭಾರತದರ್ಶನದಲ್ಲಿ ಇದರ ಮೊದಲು ಈ ಕೆಳಗಿನ ಮೂರು ಶ್ಲೋಕಗಳು ಸೇರಿಕೊಂಡಿವೆ: (೧) ಅನಾದ್ಯಂತಂ ಪರಂ ಬ್ರಹ್ಮ ನ ದೇವಾನರ್ಷಯೋ ವಿದುಃ| ಏಕೋ ಯಂ ವೇದ ಭಗವಾನ್ ಧಾತಾ ನಾರಾಯಣೋ ಹರಿಃ|| ಅರ್ಥಾತ್: ಆದಿ-ಅಂತ್ಯಗಳಿಲ್ಲದಿರುವ, ಪ್ರರಬ್ರಹ್ಮ ಸ್ವರೂಪನನ್ನು ದೇವತೆಗಳಾಗಲೀ ಋಷಿಗಳಾಗಲಿ ತಿಳಿದುಕೊಂಡಿಲ್ಲ. ಎಲ್ಲರ ಧಾರಣೆ-ಪೋಷಣೆಗಳನ್ನೂ ಮಾಡುವ ನಾರಾಯಣ ಅಥವಾ ಹರಿಯು ಏಕಮಾತ್ರನು. (೨) ನಾರಾಣಾದೃಷಿಗಣಾಸ್ತಥಾ ಸಿದ್ಧಮಹೋರಗಾಃ| ದೇವಾ ದೇವರ್ಷಯಶ್ಚೈವ ಯಂ ವಿದುಃ ಪರಮವ್ಯಯಂ|| ಅರ್ಥಾತ್: ಆ ನಾರಾಯಣನಿಂದಲೇ ಋಷಿಗಣಗಳು, ಸಿದ್ಧರೂ, ಮಹಾಸರ್ಪಗಳೂ, ದೇವತೆಗಳೂ, ಮತ್ತು ದೇವರ್ಷಿಗಳೂ ಆವಿರ್ಭವಿಸಿರುತ್ತಾರೆ ಮತ್ತು ಅವನನ್ನು ಪರಮ ಅವ್ಯಯನೆಂದು ತಿಳಿದುಕೊಂಡಿರುತ್ತಾರೆ. (೩) ದೇವದಾನವಗಂಧರ್ವಾ ಯಕ್ಷರಾಕ್ಷಸಪನ್ನಗಾಃ| ಯಂ ನ ಜಾನಂತಿ ಕೋ ಹ್ಯೇಷ ಕುತೋ ವಾ ಭಗವಾನಿತಿ|| ಅರ್ಥಾತ್: ದೇವ-ದಾನವ ಗಂಧರ್ವರಾಗಲೀ, ಯಕ್ಷ-ರಾಕ್ಷಸ-ಪನ್ನಗಗಳಾಗಲೀ ಈ ಭಗವಂತನು ಯಾರು ಮತ್ತು ಎಲ್ಲಿಂದ ಬಂದನು ಎನ್ನುವದನ್ನು ಅರಿತಿಲ್ಲ.

[3] ಭಾರತದರ್ಶನದಲ್ಲಿ ಈ ಶ್ಲೋಕದ ಮೊದಲು ಇನ್ನೊಂದು ಶ್ಲೋಕವಿದೆ: ಯಸ್ಮಿನ್ನಿತ್ಯಂ ತಪಸ್ತಪ್ತಂ ಯದಂಗೇಷ್ವನುತಿಷ್ಠತಿ| ಸರ್ವಾತ್ಮಾ ಸರ್ವವಿತ್ಸರ್ವಃ ಸರ್ವಜ್ಞಃ ಸರ್ವಭಾವನಃ|| ಅರ್ಥತ್: ಯಾರ ಅನುಗ್ರಹಕ್ಕಾಗಿ ನಿರಂತರ ತಪಸ್ಸನ್ನಾಚರಿಸುವರೋ, ಯಾರು ಎಲ್ಲರ ಹೃದಯಗಳಲ್ಲಿ ವಿರಾಜಮಾನನಾಗಿರುವನೋ, ಯಾರು ಸಮಸ್ತರ ಆತ್ಮಸ್ವರೂಪನೋ, ಅಂತಹ ಸರ್ವಜ್ಞ, ಸರ್ವಭಾವನ, ಸರ್ವನೂ ಆಗಿರುವವನನ್ನು ಶರಣುಹೋಗುತ್ತೇನೆ.

[4] ಕರ್ಮಾಂಗಗಳಿಗೆ ಸಂಬಂಧಿಸಿದ ವೇದ ಮಂತ್ರಗಳು

[5] ಮಂತ್ರಾರ್ಥಗಳನ್ನು ವಿವರಿಸುವ ಬ್ರಾಹ್ಮಣವೇ ಇತ್ಯಾದಿಗಳು

[6] ದೇವತಾದಿಗಳನ್ನು ಸ್ತುತಿಸುವ ಮಂತ್ರಗಳು

[7] ಜ್ಯೇಷ್ಠ ಸಾಮ

[8] ಪರಮಾತ್ಮ-ಜೀವ-ಮನಸ್ಸು-ಅಹಂಕಾರಗಳೆಂಬ ನಾಲ್ಕು ತತ್ತ್ವಗಳಿಂದ ವಾಸುದೇವ-ಸಂಕರ್ಷಣ-ಪ್ರದ್ಯುಮ್ನ-ಅನಿರುದ್ಧರೆಂಬ ನಾಲ್ಕು ರೂಪಗಳನ್ನು ತಾಳಿರುವವನು

[9] ಧಾನಾಕರಂಭ-ಪರಿವಾಪ-ಪುರೋಡಾಶ-ಪಯಸ್ಯ ಇವು ಐದು ವಿಧದ ಹವಿಸ್ಸುಗಳು.

[10] ಇದಕ್ಕೆ ಮೊದಲು ಭಾರತ ದರ್ಶನದಲ್ಲಿ ಈ ಶ್ಲೋಕವಿದೆ: ಚತುರ್ಭಿಶ್ಚ ಚತುರ್ಭಿಶ್ಚ ದ್ವಾಭ್ಯಾಂ ಪಂಚಭಿರೇವ ಚ| ಹೂಯತೇ ಚ ಪುನರ್ದ್ವಾಭ್ಯಾಂ ತಸ್ಮೈ ಹೋಮಾತ್ಮನೇ ನಮಃ|| ಅರ್ಥಾತ್: ಆಶ್ರಾವಯ ಎಂಬ ನಾಲ್ಕು ಅಕ್ಷರಗಳು, ಅಸ್ತುಶ್ರೌಷಟ್ ಎಂಬ ನಾಲ್ಕು ಅಕ್ಷರಗಳು, ಯಜ ಎಂಬ ಎರಡಕ್ಷರಗಳು, ಯೇ ಯಜಾಮಹೇ ಎಂಬ ಐದು ಅಕ್ಷರಗಳು, ವಷಟ್ ಎಂಬ ಎರಡಕ್ಷರಗಳು – ಒಟ್ಟು ಹದಿನೇಳು ಅಕ್ಷರಗಳ ಮಂತ್ರದಿಂದ ಹೋಮಮಾಡಲ್ಪಡುವ ಹೋಮಾತ್ಮನಿಗೆ ನಮಸ್ಕರಿಸತ್ತೇನ.

[11] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಎರಡು ಶ್ಲೋಕಗಳಿವೆ: (೧) ಯಜ್ಞಾಂಗೋ ಯೋ ವರಾಹೋ ವೈ ಭೂತ್ವಾ ಗಾಮುಜ್ಜಹಾರ ಹ| ಲೋಕತ್ರಯಹಿತಾರ್ಥಾಯ ತಸ್ಮೈ ವೀರಾತ್ಮನೇ ನಮಃ|| ಅರ್ಥಾತ್: ಯಾರು ಮೂರುಲೋಕಗಳ ಹಿತಾರ್ಥವಾಗಿ ಯಜ್ಞಮಯ ವರಾಹರೂಪವನ್ನು ಧರಿಸಿ ಪೃಥ್ವಿಯನ್ನು ರಸಾತಲದಿಂದ ಮೇಲಕ್ಕೆತ್ತಿದನೋ ಆ ವೀರ್ಯಾತ್ಮನಿಗೆ ನಮಸ್ಕರಿಸುತ್ತೇನೆ. (೨) ಯಃ ಶೇತೇ ಯಾಗಮಾಸ್ಥಾಯ ಪರ್ಯಂಕೇ ನಾಗಭೂಷಿತೇ| ಫಣಾಸಹಸ್ರರಚಿತೇ ತಸ್ಮೈ ನಿದ್ರಾತ್ಮನೇ ನಮಃ|| ಅರ್ಥಾತ್: ಯಾರು ಯೋಗಮಾಯೆಯನ್ನಾಶ್ರಯಿಸಿ ಶೇಷನಾಗನ ಸಾವಿರ ಹೆಡೆಗಳಿಂದ ರಚಿತವಾದ ದಿವ್ಯಮಂಚದ ಮೇಲೆ ಪವಡಿಸಿರುವನೋ ಆ ನಿದ್ರಾತ್ಮನಿಗೆ ನಮಸ್ಕರಿಸುತ್ತೇನೆ.

[12] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ಯತಃ ಸರ್ವೇ ಪ್ರಸೂಯಂತೇ ಹ್ಯನಂಗಾತ್ಮಾಂಗದೇಹಿನಃ| ಉನ್ಮಾದಃ ಸರ್ವಭೂತಾನಾಂ ತಸ್ಮೈ ಕಾಮಾತ್ಮನೇ ನಮಃ|| ಅರ್ಥಾತ್: ಯಾವ ಅನಂಗದೇಹಿಯಿಂದ ಎಲ್ಲರೂ ಸಂತಾನವನ್ನು ಪಡೆಯುತ್ತಾರೋ ಆ ಸರ್ವಪ್ರಾಣಿಗಳನ್ನೂ ಉನ್ಮತ್ತರನ್ನಾಗಿಸುವ ಕಾಮಾತ್ಮನಿಗೆ ನಮಸ್ಕರಿಸುತ್ತೇನೆ.

[13] ಯಂ ತ್ರಿಧಾತ್ಮಾನಮಾತ್ಮಸ್ಥಂ ಅರ್ಥಾತ್ ಆತ್ಮನಲ್ಲಿರುವ ಸತ್ವ-ರಜಸ್ಸು-ತಮೋ ಎಂಬ ಮೂರು ಗುಣಗಳಿಂದ ಕೂಡಿದವನು ಎನ್ನುವ ಪಾಠಂತರವಿದೆ (ಭಾರತ ದರ್ಶನ).

[14] ಹನ್ನೊಂದು ಇಂದ್ರಿಯಗಳು (ಐದು ಜ್ಞಾನೇಂದ್ರಿಯಗಳು (ಶ್ರೋತ್ರ, ತ್ವಕ್ಕು, ಜಕ್ಷುಸು, ಜಿಹ್ವಾ, ಮತ್ತು ನಾಸಿಕ); ಐದು ಕರ್ಮೇಂದ್ರಿಯಗಳು (ವಾಕ್ಕು, ಪಾಣಿ, ಪಾದ, ಪಾಯು ಮತ್ತು ಉಪಸ್ಥ); ಮತ್ತು ಮನಸ್ಸು) ಮತ್ತು ಪಂಚಭೂತಗಳು (ಪೃಥ್ವೀ, ಆಪ್, ತೇಜಸ್ಸು, ವಾಯು, ಆಕಾಶ) – ಒಟ್ಟು ಹದಿನಾರು.

[15] ಇದಕ್ಕೆ ಮೊದಲು ಭಾರತದರ್ಶನದಲ್ಲಿ ಈ ಶ್ಲೋಕವಿದೆ: ತದ್ಯಸ್ಯ ನಾಭ್ಯಾಂ ಸಂಭೂತಂ ಯಸ್ಮಿನ್ವಿಶ್ವಂ ಪ್ರತಿಷ್ಠಿತಂ| ಪುಷ್ಕರೇ ಪುಷ್ಕರಾಕ್ಷಸ್ಯ ತಸ್ಮೈ ಪದ್ಮಾತ್ಮನೇ ನಮಃ|| ಅರ್ಥಾತ್: ಯಾರ ನಾಭಿಯಿಂದ ಕಮಲವು ಹುಟ್ಟಿತೋ ಮತ್ತು ಆ ಕಮಲದಲ್ಲಿಯೇ ವಿಶ್ವವು ಪ್ರತಿಷ್ಠಿತವಾಗಿರುವುದೋ ಆ ಪುಷ್ಕರಾಕ್ಷ ಪದ್ಮಾತ್ಮನಿಗೆ ನಮಸ್ಕರಿಸುತ್ತೇನೆ.

[16] ಇದಕ್ಕೆ ಮೊದಲು ಭಾರತದರ್ಶನದಲ್ಲಿ ಈ ಐದು ಶ್ಲೋಕಗಳಿವೆ: (೧) ಯಸ್ಮಾತ್ಸರ್ವಾಃ ಪ್ರಸೂಯಂತೇ ಸರ್ಗಪ್ರಲಯವಿಕ್ರಿಯಾಃ| ಯಸ್ಮಿಂಶ್ಚೈವ ಪ್ರಲೀಯಂತೇ ತಸ್ಮೈ ಹೇತ್ವಾತ್ಮನೇ ನಮಃ|| ಅರ್ಥಾತ್: ಸೃಷ್ಟಿ-ಪ್ರಳಯ ರೂಪದ ಸಮಸ್ತ ವಿಕಾರಗಳೂ ಯಾರಿಂದ ಹುಟ್ಟುತ್ತವೆಯೋ, ಮತ್ತು ಅಂತ್ಯದಲ್ಲಿ ಯಾರಲ್ಲಿ ಲೀನಗೊಳ್ಳುತ್ತವೆಯೋ ಆ ಹೇತ್ವಾತ್ಮ(ಎಲ್ಲಕ್ಕೂ ಕಾರಣನಾದವ) ನಿಗೆ ನಮಸ್ಕರಿಸುತ್ತೇನೆ. (೨) ಯೋ ನಿಷಣ್ಣೋ ಭವೇದ್ರಾತ್ರೌ ದಿವಾ ಭವತಿ ವಿಷ್ಠಿತಃ| ಇಷ್ಟಾನಿಷ್ಟಸ್ಯ ಚ ದ್ರಷ್ಟಾ ತಸ್ಮೈ ದ್ರಷ್ಟಾತ್ಮನೇ ನಮಃ|| ಅರ್ಥಾತ್: ಯಾರು ರಾತ್ರಿಯಲ್ಲಿ ಪ್ರಾಣಿಗಳೆಲ್ಲವೂ ಮಲಗಿ ನಿದ್ರಿಸುತ್ತಿರುವಾಗ ಎಲ್ಲರ ಹೃದಯಗಳಲ್ಲಿಯೂ ಇರುವ ತಾನು ಮಾತ್ರ ಜಾಗ್ರತನಾಗಿಯೇ ಇರುವನೋ, ಯಾರು ಹಗಲಿನಲ್ಲಿ ಪ್ರಾಣಿಗಳ ಕರ್ಮಗಳಿಗೆ ಸಾಕ್ಷಿಯಾಗಿರುವನೋ ಮತ್ತು ಯಾರು ಸದಾಕಾಲ ಪ್ರಾಣಿಗಳ ಇಷ್ಟಾನಿಷ್ಟಗಳನ್ನು ಗಮನಿಸುತ್ತಿರುವನೋ ಆ ದ್ರಷ್ಟಾತ್ಮನಿಗೆ ನಮಸ್ಕರಿಸುತ್ತೇನೆ. (೩) ಅಕುಂಠಂ ಸರ್ವಕಾರ್ಯೇಷು ಧರ್ಮಕಾರ್ಯಾರ್ಥಮುದ್ಯತಂ| ವೈಕುಂಠಂ ಸ್ಯ ಚ ತದ್ರೂಪಂ ತಸ್ಮೈ ಕಾರ್ಯಾತ್ಮನೇ ನಮಃ|| ಅರ್ಥಾತ್: ಅಡಗಡೆಗಳಿಲ್ಲದೇ ಸರ್ವಕಾರ್ಯಗಳನ್ನು ಮಾಡುವ, ಧರ್ಮಾರ್ಥಕಾರ್ಯಗಳಲ್ಲಿಯೇ ತೊಡಗಿರುವ, ಮತ್ತು ವೈಕುಂಠರೂಪನಾಗಿರುವ ಕಾರ್ಯಾತ್ಮನಿಗೆ ನಮಸ್ಕರಿಸುತ್ತೇನೆ. (೪) ತ್ರಿಃಸಪ್ತಕೃತ್ವೋ ಯಃ ಕ್ಷತ್ರಂ ಧರ್ಮವ್ಯುತ್ಕ್ರಾಂತಗೌರವಂ| ಕ್ರುದ್ಧೋ ನಿಜಘ್ನೇ ಸಮರೇ ತಸ್ಮೈ ಶೌರ್ಯಾತ್ಮನೇ ನಮಃ|| ಅರ್ಥಾತ್: ಕ್ರುದ್ಧನಾಗಿ ಯಾರು ಧರ್ಮಗೌರವವನ್ನು ಉಲ್ಲಂಘಿಸಿದ ಕ್ಷತ್ರಿಯ ಸಮೂಹವನ್ನು ಇಪ್ಪತ್ತೊಂದು ಬಾರಿ ಸಂಹರಿಸಿದನೋ ಆ ಶೌರ್ಯಾತ್ಮನಿಗೆ ನಮಸ್ಕರಿಸುತ್ತೇನೆ. (೫) ವಿಭಜ್ಯ ಪಂಚದಾತ್ಮಾನಂ ವಾಯುರ್ಭೂತ್ವಾ ಶರೀರಗಃ| ಯಶ್ಚೇಷ್ಟಯತಿ ಭೂತಾನಿ ತಸ್ಮೈ ವಾಯ್ವಾತ್ಮನೇ ನಮಃ|| ಅರ್ಥಾತ್: ಯಾರ ವಾಯುಸ್ವರೂಪವನ್ನ ತಾಳಿ ಎಲ್ಲ ಪ್ರಾಣಿಗಳ ಶರೀರಗಳನ್ನೂ ಪ್ರವೇಶಿಸಿ ತನ್ನನ್ನು ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನಗಳೆಂದು ಐದು ಪ್ರಕಾರವಾಗಿ ವಿಭಾಗಿಸಿಕೊಂಡು ಕ್ರಿಯಾಶೀಲರನ್ನಾಗಿ ಮಾಡುತ್ತಾನೋ ಆ ವಾಯ್ವಾತ್ಮನಿಗೆ ನಮಸ್ಕರಿಸುತ್ತೇನೆ. 

[17] ಇದಕ್ಕೆ ಮೊದಲು ಭಾರತದರ್ಶನದಲ್ಲಿ ಈ ನಾಲ್ಕು ಶ್ಲೋಕಗಳಿವೆ: (೧) ಪ್ರಾಣಾನಾಂ ಧಾರಣಾರ್ಥಾಯ ಯೋಽನ್ನಂ ಭುಂಕ್ತೇ ಚತುರ್ವಿಧಮ್| ಅಂತರ್ಭೂತಃ ಪಚತ್ಯಗ್ನಿಸ್ತಸ್ಮೈ ಪಾಕಾತ್ಮನೇ ನಮಃ|| ಪ್ರಾಣಗಳನ್ನು ಧರಿಸಿರಲು ಚತುರ್ವಿಧ ಆಹಾರವನ್ನು ಸೇವಿಸುವ ಮತ್ತು ತಾನೇ ಪ್ರಾಣಿಗಳಲ್ಲಿ ಜಠರಾಗ್ನಿಯಾಗಿ ಆಹಾರವನ್ನು ಪಚನಮಾಡುವ ಆ ಪಾಕಾತ್ಮನಿಗೆ ನಮಸ್ಕರಿಸುತ್ತೇನೆ. (೨) ಪಿಂಗೇಕ್ಷಣಸಟಂ ಯಸ್ಯ ರೂಪಂ ದಂಷ್ಟ್ರಾನಖಾಯುಧಂ| ದಾನವೇಂದ್ರಾಂತಕರಣಂ ತಸ್ಮೈ ದೃಪ್ತಾತ್ಮನೇ ನಮಃ|| ಅರ್ಥಾತ್:  ಯಾರ ಕಣ್ಣು-ಕೇಸರಗಳು ಹಳದೀ ಬಣ್ಣದ್ದಾಗಿತ್ತೋ, ಯಾರ ಆಯುಧಗಳು ಕೋರೆದಾಡೆ-ಉಗುರುಗಳಾಗಿದ್ದವೋ ಮತ್ತು ಯಾರು ದಾನವೇಂದ್ರ ಹಿರಣ್ಯಕಶಿಪುವನ್ನು ಅಂತ್ಯಗೊಳಿಸಿದನೋ ಆ ದೃಪ್ತಾತ್ಮನಿಗೆ ನಮಸ್ಕರಿಸುತ್ತೇನೆ. (೩) ಯಂ ನ ದೇವಾ ನ ಗಂಧರ್ವಾ ನ ದೈತ್ಯಾ ನ ಚ ದಾನವಾಃ| ತತ್ತ್ವತೋ ಹಿ ವಿಜಾನಂತಿ ತಸ್ಮೈ ಸೂಕ್ಷಾತ್ಮನೇ ನಮಃ|| ಅರ್ಥಾತ್: ಯಾರನ್ನು ದೇವತೆಗಳಾಗಲೀ, ಗಂಧರ್ವರಾಗಲೀ, ದೈತ್ಯರಾಗಲೀ, ದಾನವರಾಗಲೀ ತತ್ತ್ವತಃ ಅರಿಯಲಾರರೋ ಆ ಸೂಕ್ಷ್ಮಾತ್ಮನಿಗೆ ನಮಸ್ಕರಿಸುತ್ತೇನೆ. (೪) ರಸಾತಲಗತಃ ಶ್ರೀಮಾನನಂತೋ ಭಗವಾನ್ವಿಭುಃ| ಜಗದ್ಧಾರಯತೇ ಕೃತ್ಸಂ ತಸ್ಮೈ ವೀರಾತ್ಮನೇ ನಮಃ|| ಅರ್ಥಾತ್: ರಸಾತಲಕ್ಕೆ ಹೋಗಿ ಇಡೀ ಜಗತ್ತನ್ನೂ ಹೊತ್ತಿರುವ ಶ್ರೀಮಾನ್ ಅನಂತ, ಭಗವಾನ್, ವಿಭು ವೀರಾತ್ಮನಿಗೆ ನಮಸ್ಕರಿಸುತ್ತೇನೆ.

[18] ದಿವ್ಯಾತ್ಮನೇ ನಮಃ ಎನ್ನುವ ಪಾಠಾಂತರವಿದೆ.

[19] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ಚಂದ್ರಾರ್ಧಕೃತಶೀರ್ಷಾಯ ವ್ಯಾಲಯಜ್ಞೋಪವಿತಿನೇ| ಪಿನಾಕಶೂಲಹಸ್ತಾಯ ತಸ್ಮೈ ಉಗ್ರಾತ್ಮನೇ ನಮಃ|| ಅರ್ಥಾತ್: ಯಾರ ತಲೆಯಲ್ಲಿ ಅರ್ಧಚಂದ್ರನ ಮುಕುಟವಿರುವುದೋ, ಯಾರು ಸರ್ಪವನ್ನೇ ಯಜ್ಞೋಪವೀತವನ್ನಾಗಿ ಧರಿಸಿರುವನೋ, ಯಾರ ಕೈಯಲ್ಲಿ ಪಿನಾಕವೂ ತ್ರಿಶೂಲವೂ ಇರುವವೋ ಆ ಉಗ್ರಾತ್ಮನಿಗೆ ನಮಸ್ಕರಿಸುತ್ತೇನೆ.

[20] ಸರ್ವಭೂತಾತ್ಮಭೂತಾಯ ಎಂಬ ಪಾಠಾಂತರವಿದೆ.

[21] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ದಿಶೋ ಭುಜಾ ರವಿಶ್ಚಕ್ಷುರ್ವೀರ್ಯೇ ಶುಕ್ರಃ ಪ್ರತಿಷ್ಠಿತಃ| ಸಪ್ತ ಮಾರ್ಗಾನಿರುದ್ಧಾಸ್ತೇ ವಾಯೋರಮಿತತೇಜಸಃ|| ಅರ್ಥಾತ್: ದಿಕ್ಕುಗಳೇ ನಿನ್ನ ಭುಜಗಳು. ಸೂರ್ಯನೇ ನಿನ್ನ ಕಣ್ಣುಗಳಲ್ಲಿದ್ದಾನೆ. ಶುಕ್ರನು ನಿನ್ನ ವೀರ್ಯದಲ್ಲಿದ್ದಾನೆ. ಅಮಿತತೇಜಸ್ವೀ ವಾಯುವಿನ ಏಳು ಮಾರ್ಗಗಳನ್ನೂ ನೀನು ತಡೆದಿರುವೆ.

[22] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಐದು ಶ್ಲೋಕಗಳಿವೆ: (೧) ಏಕೋಽಪಿ ಕೃಷ್ಣಸ್ಯ ಕೃತಃ ಪ್ರಣಾಮೋ| ದಶಾಶ್ವಮೇಧಾವಭೃಥೇನ ತುಲ್ಯಃ|| ದಶಾಶ್ವಮೇಧೀ ಪುನರೇತಿ ಜನ್ಮ| ಕೃಷ್ಣಪ್ರಣಾಮೀ ನ ಪುನರ್ಭವಾಯ|| ಅರ್ಥಾತ್: ಕೃಷ್ಣನಿಗೆ ಮಾಡಿದ ಒಂದೇ ಪ್ರಣಾಮವು ಹತ್ತು ಅಶ್ವಮೇಧಯಾಗಗಳ ಅವಭೃಥಸ್ನಾನವನ್ನು ಮಾಡಿದ ಫಲಕ್ಕೆ ಸಮನಾಗಿದೆ. ಆದರೆ ಒಂದೇ ವ್ಯತ್ಯಾಸ. ಹತ್ತು ಅಶ್ವಮೇಧಯಾಗಗಳನ್ನು ಮಾಡಿದವನಿಗೆ ಪುನರ್ಜನ್ಮವು ತಪ್ಪಿದ್ದಲ್ಲ. ಕೃಷ್ಣನಿಗೆ ಪ್ರಣಾಮ ಮಾಡಿದವನಿಗೆ ಪುನರ್ಜನ್ಮವೇ ಇಲ್ಲ. (೨) ಕೃಷ್ಣವ್ರತಾಃ ಕೃಷ್ಣ ಮನುಸ್ಮರಂತೋ| ರಾತ್ರೌ ಚ ಕೃಷ್ಣಂ ಪುನರುತ್ಥಿತಾ ಯೇ|| ತೇ ಕೃಷ್ಣದೇಹಾಃ ಪ್ರವಿಶಂತಿ ಕೃಷ್ಣ|ಮಾಜ್ಯಂ ಯಥಾಮಂತ್ರಹುತಂ ಹುತಾಶೇ|| ಅರ್ಥಾತ್: ಕೃಷ್ಣನನ್ನೇ ವ್ರತವನ್ನಾಗಿಟ್ಟುಕೊಂಡಿರುವ, ಕೃಷ್ಣನನ್ನೇ  ಧ್ಯಾನಿಸುತ್ತಿರುವ, ರಾತ್ರಿಯಲ್ಲಿ ಕೃಷ್ಣ ಮತ್ತು ಬೆಳಿಗ್ಗೆ ಎದ್ದಾಗ ಕೃಷ್ಣ ಎಂದು ಸ್ಮರಿಸಿಕೊಳ್ಳುತ್ತಿರುವವರು ಕೃಷ್ಣನ ದೇಹವನ್ನೇ ಪ್ರವೇಶಿಸುತ್ತಾರೆ. ಮಂತ್ರಪೂರ್ವಕವಾಗಿ ಅಗ್ನಿಯಲ್ಲಿ ಹೋಮಮಾಡಲ್ಪಟ್ಟ ಆಜ್ಯವು ಯಜ್ಞೇಶ್ವರನಲ್ಲಿಯೇ ಲೀನವಾಗುವಂತೆ ಕೃಷ್ಣನಲ್ಲಿಯೇ ಲೀನರಾಗುತ್ತಾರೆ. (೩) ನಮೋ ನರಕಸಂತ್ರಾಸರಕ್ಷಾಮಂಡಲಕಾರಿಣೇ| ಸಂಸಾರನಿಮ್ನಗಾವರ್ತತರಿಕಾಷ್ಠಾಯ ವಿಷ್ಣವೇ|| ಅರ್ಥಾತ್: ನರಕಭಯಪೀಡಿತರಿಗೆ ರಕ್ಷಾಮಂಡಲವನ್ನು ರಚಿಸುವವನೇ! ಸಂಸಾರವೆಂಬ ಹೊಳೆಯಲ್ಲಿ ಸುಳಿಯನ್ನು ದಾಟಲಿಚ್ಛಿಸುವವರಿಗೆ ತೆಪ್ಪದ ರೂಪದಲ್ಲಿರುವವನೇ! ಮಹಾವಿಷ್ಣುವೇ! ನಿನಗೆ ನಮಸ್ಕರಿಸುತ್ತೇನೆ. (೪) ನಮೋ ಬ್ರಹ್ಮಣ್ಯದೇವಾಯ ಗೋಬ್ರಾಹ್ಮಣಹಿತಕರಾಯ ಚ| ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ|| ಅರ್ಥಾತ್: ಬ್ರಹ್ಮಕ್ಕೆ (ತಪಸ್ಸು, ವೇದ, ಬ್ರಾಹ್ಮಣ ಮತ್ತು ಜ್ಞಾನಗಳಿಗೆ) ಹಿತನಾಗಿರುವ, ಜಗತ್ತಿಗೆ ಹಿತವನ್ನುಂಟುಮಾಡಲು ಗೋ-ಬ್ರಾಹ್ಮಣರಿಗೆ ಹಿತವನ್ನುಂಟುಮಾಡುವ ಕೃಷ್ಣ ಗೋವಿಂದನಿಗೆ ನಮಸ್ಕರಿಸುತ್ತೇನೆ. (೫) ಪ್ರಾಣಕಾಂತಾರಪಾಥೇಯಂ ಸಂಸಾರೋಚ್ಛೇದಭೇಷಜಂ| ದುಃಖಶೋಕಪರಿತ್ರಾಣಂ ಹರಿರಿತ್ಯಕ್ಷರದ್ವಯಂ|| ಅರ್ಥಾತ್: ಹರಿ ಎಂಬ ಎರಡಕ್ಷರವು ಪ್ರಾಣಪ್ರಯಾಣಸಮಯದಲ್ಲಿ ನಡುಗಾಡಿನ ಬುತ್ತಿಯ ರೂಪದಲ್ಲಿರುತ್ತದೆ. ಸಂಸಾರವೆಂಬ ರೋಗದ ನಿವಾರಣೆಗೆ ಔಷಧಪ್ರಾಯವಾಗಿದೆ. ಸಕಲವಿಧದ ದುಃಖ-ಶೋಕಗಳನ್ನೂ ಪರಿಹರಿಸಿ ರಕ್ಷಣೆ ನೀಡುತ್ತದೆ.

[23] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ನಾರಾಯಣಃ ಪರಂ ಬ್ರಹ್ಮ ನಾರಾಯಣಪರಂ ತಪಃ| ನಾರಾಯಣಃ ಪರೋ ದೇವಃ ಸರ್ವಂ ನಾರಾಯಣಂ ಸದಾ|| ಅರ್ಥಾತ್: ನಾರಾಯಣನೇ ಪರಬ್ರಹ್ಮನು. ನಾರಾಯಣನೇ ಪರಮ ತಪಸ್ಸು. ನಾರಾಯಣನೇ ಎಲ್ಲ ದೇವತೆಗಳಲ್ಲಿಯೂ ಶ್ರೇಷ್ಠ ದೇವನು. ಸರ್ವವೂ ನಾರಾಯಣನೇ!”

Comments are closed.