ಶಾಂತಿ ಪರ್ವ: ರಾಜಧರ್ಮ ಪರ್ವ

೪೬

12046001 ಯುಧಿಷ್ಠಿರ ಉವಾಚ

12046001a ಕಿಮಿದಂ ಪರಮಾಶ್ಚರ್ಯಂ ಧ್ಯಾಯಸ್ಯಮಿತವಿಕ್ರಮ|

12046001c ಕಚ್ಚಿಲ್ಲೋಕತ್ರಯಸ್ಯಾಸ್ಯ ಸ್ವಸ್ತಿ ಲೋಕಪರಾಯಣ||

ಯುಧಿಷ್ಠಿರನು ಹೇಳಿದನು: “ಅಮಿತವಿಕ್ರಮ! ಪರಮಾಶ್ಚರ್ಯ! ನೀನು ಯಾರಕುರಿತು ಧ್ಯಾನಮಗ್ನನಾಗಿರುವೆ? ಲೋಕಪರಾಯಣ! ಮೂರು ಲೋಕಗಳೂ ಕುಶಲವಾಗಿವೆ ತಾನೆ?

12046002a ಚತುರ್ಥಂ ಧ್ಯಾನಮಾರ್ಗಂ ತ್ವಮಾಲಂಬ್ಯ ಪುರುಷೋತ್ತಮ|

12046002c ಅಪಕ್ರಾಂತೋ ಯತೋ ದೇವ ತೇನ ಮೇ ವಿಸ್ಮಿತಂ ಮನಃ||

ಪುರುಷೋತ್ತಮ! ದೇವ! ನಾಲ್ಕನೆಯ ಧ್ಯಾನಮಾರ್ಗವನ್ನು ಆಶ್ರಯಿಸಿ ಅಪಕ್ರಾಂತನಾಗಿರುವ ನೀನು ನನ್ನ ಮನಸ್ಸನು ವಿಸ್ಮಯಗೊಳಿಸಿರುವೆ!

12046003a ನಿಗೃಹೀತೋ ಹಿ ವಾಯುಸ್ತೇ ಪಂಚಕರ್ಮಾ ಶರೀರಗಃ|

12046003c ಇಂದ್ರಿಯಾಣಿ ಚ ಸರ್ವಾಣಿ ಮನಸಿ ಸ್ಥಾಪಿತಾನಿ ತೇ||

ಶರೀರದಲ್ಲಿ ಪಂಚಕರ್ಮಗಳನ್ನು ಮಾಡುವ ವಾಯುವನ್ನು ನೀನು ನಿಗ್ರಹಿಸಿರುವೆ. ನಿನ್ನ ಇಂದ್ರಿಯಗಳೆಲ್ಲವನ್ನೂ ಮನಸ್ಸಿನಲ್ಲಿ ಸ್ಥಾಪಿಸಿಕೊಂಡಿರುವೆ.

12046004a ಇಂದ್ರಿಯಾಣಿ ಮನಶ್ಚೈವ ಬುದ್ಧೌ ಸಂವೇಶಿತಾನಿ ತೇ|

12046004c ಸರ್ವಶ್ಚೈವ ಗಣೋ ದೇವ ಕ್ಷೇತ್ರಜ್ಞೇ ತೇ ನಿವೇಶಿತಃ||

ಇಂದ್ರಿಯ-ಮನಸ್ಸುಗಳನ್ನು ಬುದ್ಧಿಯಲ್ಲಿ ಲೀನಗೊಳಿಸಿರುವೆ. ದೇವ! ಸರ್ವಗಣಗಳೂ ನಿನ್ನ ಆತ್ಮನಲ್ಲಿ ಲೀನವಾಗಿವೆ.

12046005a ನೇಂಗಂತಿ ತವ ರೋಮಾಣಿ ಸ್ಥಿರಾ ಬುದ್ಧಿಸ್ತಥಾ ಮನಃ|

12046005c ಸ್ಥಾಣುಕುಡ್ಯಶಿಲಾಭೂತೋ ನಿರೀಹಶ್ಚಾಸಿ ಮಾಧವ||

ಮಾಧವ! ನಿನ್ನ ರೋಮಗಳು ನಿಮಿರಿನಿಂತಿವೆ. ನಿನ್ನ ಮನಸ್ಸು-ಬುದ್ಧಿಗಳು ಸ್ಥಿರವಾಗಿವೆ. ಕಟ್ಟಿಗೆ, ಗೋಡೆ ಮತ್ತು ಶಿಲೆಗಳಂತೆ ನಿಶ್ಚೇಷ್ಟನಾಗಿರುವೆ!

12046006a ಯಥಾ ದೀಪೋ ನಿವಾತಸ್ಥೋ ನಿರಿಂಗೋ ಜ್ವಲತೇಽಚ್ಯುತ|

12046006c ತಥಾಸಿ ಭಗವನ್ದೇವ ನಿಶ್ಚಲೋ ದೃಢನಿಶ್ಚಯಃ||

ದೇವ! ಗಾಳಿಯಿಲ್ಲದ ಸ್ಥಳದಲ್ಲಿ ದೀಪವೂ ಆತ್ತಿತ್ತ ಅಗಲದೇ ಹೇಗೆ ಒಂದೇ ಸಮನೆ ಉರಿಯುತ್ತಿರುತ್ತದೆಯೋ ಹಾಗೆ ನೀನು ದೃಢನಿಶ್ಚಯನಾಗಿ ಶಿಲಾಮೂರ್ತಿಯಂತೆ ಕುಳಿತಿರುವೆ!

12046007a ಯದಿ ಶ್ರೋತುಮಿಹಾರ್ಹಾಮಿ ನ ರಹಸ್ಯಂ ಚ ತೇ ಯದಿ|

12046007c ಚಿಂಧಿ ಮೇ ಸಂಶಯಂ ದೇವ ಪ್ರಪನ್ನಾಯಾಭಿಯಾಚತೇ||

ದೇವ! ಈ ರಹಸ್ಯವನ್ನು ಕೇಳಲು ನಾನು ಅರ್ಹನಾಗಿದ್ದರೆ ನಮಸ್ಕರಿಸಿ ಕೇಳಿಕೊಳ್ಳುತ್ತಿರುವ ನನ್ನ ಈ ಸಂಶಯವನ್ನು ದೂರಮಾಡು!

12046008a ತ್ವಂ ಹಿ ಕರ್ತಾ ವಿಕರ್ತಾ ಚ ತ್ವಂ ಕ್ಷರಂ ಚಾಕ್ಷರಂ ಚ ಹಿ|

12046008c ಅನಾದಿನಿಧನಶ್ಚಾದ್ಯಸ್ತ್ವಮೇವ ಪುರುಷೋತ್ತಮ||

ಪುರುಷೋತ್ತಮ! ನೀನೇ ಕರ್ತ, ನೀನೇ ವಿಕರ್ತ. ನಾಶಹೊಂದುವವನೂ ನೀನೇ. ಅವಿನಾಶಿಯಾಗಿರುವವನೂ ನೀನೇ. ಆದಿ-ಅಂತ್ಯಗಳಿಲ್ಲದವನೂ ನೀನೇ!

12046009a ತ್ವತ್ಪ್ರಪನ್ನಾಯ ಭಕ್ತಾಯ ಶಿರಸಾ ಪ್ರಣತಾಯ ಚ|

12046009c ಧ್ಯಾನಸ್ಯಾಸ್ಯ ಯಥಾತತ್ತ್ವಂ ಬ್ರೂಹಿ ಧರ್ಮಭೃತಾಂ ವರ||

ಧರ್ಮಭೃತರಲ್ಲಿ ಶ್ರೇಷ್ಠನೇ! ಭಕ್ತಿಯಿಂದ ನಿನಗೆ ಶರಣುಬಂದಿರುವ ಮತ್ತು ಶಿರಸಾ ನಮಸ್ಕರಿಸುತ್ತಿರುವ ನನಗೆ ಈ ಧ್ಯಾನದ ತತ್ತ್ವವನ್ನು ಯಥಾವತ್ತಾಗಿ ಹೇಳು!””

12046010 ವೈಶಂಪಾಯನ ಉವಾಚ

12046010a ತತಃ ಸ್ವಗೋಚರೇ ನ್ಯಸ್ಯ ಮನೋ ಬುದ್ಧೀಂದ್ರಿಯಾಣಿ ಚ|

12046010c ಸ್ಮಿತಪೂರ್ವಮುವಾಚೇದಂ ಭಗವಾನ್ವಾಸವಾನುಜಃ||

ವೈಶಂಪಾಯನನು ಹೇಳಿದನು: “ಆಗ ಭಗವಾನ್ ವಾಸವಾನುಜನು ಮನಸ್ಸು-ಬುದ್ಧಿ-ಇಂದ್ರಿಯಗಳನ್ನು ತಮ್ಮ ತಮ್ಮ ಸ್ಥಾನಗಳಲ್ಲಿ ಇರಿಸಿ ಮಂದಹಾಸಬೀರುತ್ತಾ ಈ ಮಾತನ್ನಾಡಿದನು:

12046011a ಶರತಲ್ಪಗತೋ ಭೀಷ್ಮಃ ಶಾಮ್ಯನ್ನಿವ ಹುತಾಶನಃ|

12046011c ಮಾಂ ಧ್ಯಾತಿ ಪುರುಷವ್ಯಾಘ್ರಸ್ತತೋ ಮೇ ತದ್ಗತಂ ಮನಃ||

“ಆರಿಹೋಗುತ್ತಿರುವ ಅಗ್ನಿಯಂತಿರುವ, ಶರತಲ್ಪದಲ್ಲಿ ಮಲಗಿರುವ ಪುರುಷವ್ಯಾಘ್ರ ಭೀಷ್ಮನು ನನ್ನನ್ನು ಧ್ಯಾನಿಸುತ್ತಿದ್ದಾನೆ. ಅವನಲ್ಲಿಯೇ ನನ್ನ ಮನಸ್ಸು ಹೋಗಿತ್ತು.

12046012a ಯಸ್ಯ ಜ್ಯಾತಲನಿರ್ಘೋಷಂ ವಿಸ್ಫೂರ್ಜಿತಮಿವಾಶನೇಃ|

12046012c ನ ಸಹೇದ್ದೇವರಾಜೋಽಪಿ ತಮಸ್ಮಿ ಮನಸಾ ಗತಃ||

ಮಿಂಚಿನಂತೆ ಹೊರಹೊಮ್ಮುತ್ತಿದ್ದ ಯಾರ ಧನುಸ್ಸಿನ ಟೇಂಕಾರವನ್ನು ದೇವರಾಜನೂ ಕೂಡ ಸಹಿಸಲಸಾಧ್ಯವಾಗಿತ್ತೋ ಆ ಭೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು.

12046013a ಯೇನಾಭಿದ್ರುತ್ಯ ತರಸಾ ಸಮಸ್ತಂ ರಾಜಮಂಡಲಮ್|

12046013c ಊಢಾಸ್ತಿಸ್ರಃ ಪುರಾ ಕನ್ಯಾಸ್ತಮಸ್ಮಿ ಮನಸಾ ಗತಃ||

ಹಿಂದೆ ಸಮಸ್ತ ರಾಜಮಂಡಲವನ್ನೂ ಪರಾಜಯಗೊಳಿಸಿ ಮೂವರು ಕನ್ಯೆಯರನ್ನು ಯಾರು ಕರೆದುಕೊಂಡು ಹೋಗಿದ್ದನೋ ಆ ಬೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು.

12046014a ತ್ರಯೋವಿಂಶತಿರಾತ್ರಂ ಯೋ ಯೋಧಯಾಮಾಸ ಭಾರ್ಗವಮ್|

12046014c ನ ಚ ರಾಮೇಣ ನಿಸ್ತೀರ್ಣಸ್ತಮಸ್ಮಿ ಮನಸಾ ಗತಃ||

ಇಪ್ಪತ್ತು ಮೂರು ರಾತ್ರಿ ಭಾರ್ಗವನೊಂದಿಗೆ ಯುದ್ಧಮಾಡಿ ಯಾರು ರಾಮನಿಂದ ಪರಾಜಯಗೊಳ್ಳಲಿಲ್ಲವೋ ಅವನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು.

12046015a ಯಂ ಗಂಗಾ ಗರ್ಭವಿಧಿನಾ ಧಾರಯಾಮಾಸ ಪಾರ್ಥಿವಮ್|

12046015c ವಸಿಷ್ಠಶಿಷ್ಯಂ ತಂ ತಾತ ಮನಸಾಸ್ಮಿ ಗತೋ ನೃಪ||

ನೃಪ! ಅಯ್ಯಾ! ಗಂಗೆಯು ಯಾರನ್ನು ಗರ್ಭವಿಧಾನದಲ್ಲಿ ಧರಿಸಿದ್ದಳೋ ಆ ವಸಿಷ್ಠಶಿಷ್ಯ ಪಾರ್ಥಿವ ಭೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು.

12046016a ದಿವ್ಯಾಸ್ತ್ರಾಣಿ ಮಹಾತೇಜಾ ಯೋ ಧಾರಯತಿ ಬುದ್ಧಿಮಾನ್|

12046016c ಸಾಂಗಾಂಶ್ಚ ಚತುರೋ ವೇದಾಂಸ್ತಮಸ್ಮಿ ಮನಸಾ ಗತಃ||

ಮಹಾತೇಜಸ್ಸುಳ್ಳ ದಿವ್ಯಾಸ್ತ್ರಗಳನ್ನೂ, ಅಂಗಗಳ ಸಹಿತ ನಾಲ್ಕು ವೇದಗಳನ್ನೂ ಧಾರಣೆಮಾಡಿಕೊಂಡಿರುವ ಆ ಬುದ್ಧಿಮಾನ್ ಭೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು.

12046017a ರಾಮಸ್ಯ ದಯಿತಂ ಶಿಷ್ಯಂ ಜಾಮದಗ್ನ್ಯಸ್ಯ ಪಾಂಡವ|

12046017c ಆಧಾರಂ ಸರ್ವವಿದ್ಯಾನಾಂ ತಮಸ್ಮಿ ಮನಸಾ ಗತಃ||

ಪಾಂಡವ! ಜಾಮದಗ್ನ್ಯ ರಾಮನ ಪ್ರಿಯ ಶಿಷ್ಯ ಮತ್ತು ಸರ್ವ ವಿದ್ಯೆಗಳ ಆಧಾರ ಭೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು.

12046018a ಏಕೀಕೃತ್ಯೇಂದ್ರಿಯಗ್ರಾಮಂ ಮನಃ ಸಂಯಮ್ಯ ಮೇಧಯಾ|

12046018c ಶರಣಂ ಮಾಮುಪಾಗಚ್ಚತ್ತತೋ ಮೇ ತದ್ಗತಂ ಮನಃ||

ಇಂದ್ರಿಯಸಮೂಹಗಳನ್ನು ಮನಸ್ಸಿನಲ್ಲಿ ಏಕೀಕರಿಸಿ, ಮನಸ್ಸನ್ನು ಬುದ್ಧಿಯಲ್ಲಿ ಲೀನಗೊಳಿಸಿ ನನ್ನಲ್ಲಿ ಶರಣುಬಂದಿರುವ ಬೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು.

12046019a ಸ ಹಿ ಭೂತಂ ಚ ಭವ್ಯಂ ಚ ಭವಚ್ಚ ಪುರುಷರ್ಷಭ|

12046019c ವೇತ್ತಿ ಧರ್ಮಭೃತಾಂ ಶ್ರೇಷ್ಠಸ್ತತೋ ಮೇ ತದ್ಗತಂ ಮನಃ||

ಪುರುಷರ್ಷಭ! ಭೂತ-ಭವ್ಯ-ಭವಿಷ್ಯತ್ತುಗಳನ್ನು ತಿಳಿದಿರುವ ಆ ಧರ್ಮಭೃತರಲ್ಲಿ ಶ್ರೇಷ್ಠ ಭೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು.

12046020a ತಸ್ಮಿನ್ಹಿ ಪುರುಷವ್ಯಾಘ್ರೇ ಕರ್ಮಭಿಃ ಸ್ವೈರ್ದಿವಂ ಗತೇ|

12046020c ಭವಿಷ್ಯತಿ ಮಹೀ ಪಾರ್ಥ ನಷ್ಟಚಂದ್ರೇವ ಶರ್ವರೀ||

ಆ ಪುರುಷವ್ಯಾಘ್ರನು ತನ್ನ ಸತ್ಕರ್ಮಗಳ ಫಲವಾಗಿ ಸ್ವರ್ಗಕ್ಕೆ ಹೋಗಿಬಿಟ್ಟರೆ ಈ ಭೂಮಿಯು ಚಂದ್ರನಿಲ್ಲದ ರಾತ್ರಿಯಂತಾಗುತ್ತದೆ.

12046021a ತದ್ಯುಧಿಷ್ಠಿರ ಗಾಂಗೇಯಂ ಭೀಷ್ಮಂ ಭೀಮಪರಾಕ್ರಮಮ್|

12046021c ಅಭಿಗಮ್ಯೋಪಸಂಗೃಹ್ಯ ಪೃಚ್ಚ ಯತ್ತೇ ಮನೋಗತಮ್||

ಯುಧಿಷ್ಠಿರ! ಆ ಭೀಮಪರಾಕ್ರಮಿ ಭೀಷ್ಮ ಗಾಂಗೇಯನ ಬಳಿಹೋಗಿ, ಅವನ ಪಾದಗಳನ್ನು ಹಿಡಿದು, ನಿನ್ನ ಮನಸ್ಸಿನಲ್ಲಿರುವ ಸಂದೇಹಗಳನ್ನು ಕೇಳು.

12046022a ಚಾತುರ್ವೇದ್ಯಂ ಚಾತುರ್ಹೋತ್ರಂ ಚಾತುರಾಶ್ರಮ್ಯಮೇವ ಚ|

12046022c ಚಾತುರ್ವರ್ಣ್ಯಸ್ಯ ಧರ್ಮಂ ಚ ಪೃಚ್ಚೈನಂ ಪೃಥಿವೀಪತೇ||

ಪೃಥಿವೀಪತೇ! ಅವನನ್ನು ಕೇಳಿ ಚತುರ್ವೇದಗಳನ್ನೂ, ಚತುರ್ಹೋತ್ರಗಳನ್ನೂ[1], ಚತುರಾಶ್ರಮಗಳನ್ನೂ[2], ಚಾತುರ್ವರ್ಣ್ಯಗಳ ಧರ್ಮಗಳನ್ನೂ ಕೇಳಿ ತಿಳಿದುಕೋ!

12046023a ತಸ್ಮಿನ್ನಸ್ತಮಿತೇ ಭೀಷ್ಮೇ ಕೌರವಾಣಾಂ ಧುರಂಧರೇ|

12046023c ಜ್ಞಾನಾನ್ಯಲ್ಪೀಭವಿಷ್ಯಂತಿ ತಸ್ಮಾತ್ತ್ವಾಂ ಚೋದಯಾಮ್ಯಹಮ್||

ಕೌರವರ ದುರಂಧರ ಆ ಭೀಷ್ಮನು ಅಸ್ತಂಗತನಾಗಲು ಸಕಲ ಜ್ಞಾನಗಳೂ ಅವನೊಡನೆ ಅಸ್ತಮಿಸಿಬಿಡುತ್ತವೆ. ಆದುದರಿಂದ ನಿನ್ನನ್ನು ನಾನು ಈ ರೀತಿ ಪ್ರಚೋದಿಸುತ್ತಿದ್ದೇನೆ.”

12046024a ತಚ್ಚ್ರುತ್ವಾ ವಾಸುದೇವಸ್ಯ ತಥ್ಯಂ ವಚನಮುತ್ತಮಮ್|

12046024c ಸಾಶ್ರುಕಂಠಃ ಸ ಧರ್ಮಜ್ಞೋ ಜನಾರ್ದನಮುವಾಚ ಹ||

ವಾಸುದೇವನ ಆ ಅರ್ಥವತ್ತಾದ ಉತ್ತಮ ಮಾತನ್ನು ಕೇಳಿ, ಕಣ್ಣೀರಿನಿಂದ ಗಂಟಲು ಕಟ್ಟಿದ ಧರ್ಮಜ್ಞ ಯುಧಿಷ್ಠಿರನು ಜನಾರ್ದನನಿಗೆ ಹೇಳಿದನು:

12046025a ಯದ್ಭವಾನಾಹ ಭೀಷ್ಮಸ್ಯ ಪ್ರಭಾವಂ ಪ್ರತಿ ಮಾಧವ|

12046025c ತಥಾ ತನ್ನಾತ್ರ ಸಂದೇಹೋ ವಿದ್ಯತೇ ಮಮ ಮಾನದ||

“ಮಾಧವ! ಮಾನದ! ಭೀಷ್ಮನ ಪ್ರಭಾವದ ಕುರಿತು ನೀನು ಏನು ಹೇಳಿದೆಯೋ ಅದರಲ್ಲಿ ನನಗೆ ಸ್ವಲ್ಪವೂ ಸಂದೇಹವಿಲ್ಲ.

12046026a ಮಹಾಭಾಗ್ಯಂ ಹಿ ಭೀಷ್ಮಸ್ಯ ಪ್ರಭಾವಶ್ಚ ಮಹಾತ್ಮನಃ|

12046026c ಶ್ರುತಂ ಮಯಾ ಕಥಯತಾಂ ಬ್ರಾಹ್ಮಣಾನಾಂ ಮಹಾತ್ಮನಾಮ್||

ಮಹಾಭಾಗ್ಯ ಮಹಾತ್ಮ ಭೀಷ್ಮನ ಪ್ರಭಾವದ ಕುರಿತು ಮಹಾತ್ಮ ಬ್ರಾಹ್ಮಣರು ಹೇಳುತ್ತಿದ್ದುದನ್ನು ನಾನು ಕೇಳಿದ್ದೇನೆ.

12046027a ಭವಾಂಶ್ಚ ಕರ್ತಾ ಲೋಕಾನಾಂ ಯದ್ಬ್ರವೀತ್ಯರಿಸೂದನ|

12046027c ತಥಾ ತದನಭಿಧ್ಯೇಯಂ ವಾಕ್ಯಂ ಯಾದವನಂದನ||

ಅರಿಸೂದನ! ಯಾದವನಂದನ! ಲೋಕಗಳ ಕರ್ತೃವಾದ ನೀನೂ ಕೂಡ ಇದನ್ನೇ ಹೇಳುತ್ತಿರುವೆಯಾದರೆ ಅದರ ಕುರಿತು ಪುನಃ ಯೋಚಿಸಬೇಕಾದುದೇ ಇಲ್ಲ!

12046028a ಯತಸ್ತ್ವನುಗ್ರಹಕೃತಾ ಬುದ್ಧಿಸ್ತೇ ಮಯಿ ಮಾಧವ|

12046028c ತ್ವಾಮಗ್ರತಃ ಪುರಸ್ಕೃತ್ಯ ಭೀಷ್ಮಂ ಪಶ್ಯಾಮಹೇ ವಯಮ್||

ಮಾಧವ! ನಿನ್ನಲ್ಲಿ ನನಗೆ ಅನುಗ್ರಹಿಸುವ ಮನಸ್ಸಿದ್ದರೆ ನಿನ್ನನ್ನು ಮುಂದೆಮಾಡಿಕೊಂಡು ಭೀಷ್ಮನನ್ನು ನೋಡಬೇಕೆಂಬ ಮನಸ್ಸಾಗುತ್ತಿದೆ.

12046029a ಆವೃತ್ತೇ ಭಗವತ್ಯರ್ಕೇ ಸ ಹಿ ಲೋಕಾನ್ಗಮಿಷ್ಯತಿ|

12046029c ತ್ವದ್ದರ್ಶನಂ ಮಹಾಬಾಹೋ ತಸ್ಮಾದರ್ಹತಿ ಕೌರವಃ||

ಭಗವಾನ್ ಸೂರ್ಯನು ಉತ್ತರಾಯಣಕ್ಕೆ ತಿರುಗಿದೊಡನೆಯೇ ಅವನು ಲೋಕಗಳಿಗೆ ಹೊರಟುಹೋಗುತ್ತಾನೆ. ಆದುದರಿಂದ ಮಹಾಬಾಹೋ! ಆ ಕೌರವನು ನಿನ್ನ ದರ್ಶನಕ್ಕೆ ಅರ್ಹನಾಗಿದ್ದಾನೆ.

12046030a ತವ ಹ್ಯಾದ್ಯಸ್ಯ ದೇವಸ್ಯ ಕ್ಷರಸ್ಯೈವಾಕ್ಷರಸ್ಯ ಚ|

12046030c ದರ್ಶನಂ ತಸ್ಯ ಲಾಭಃ ಸ್ಯಾತ್ತ್ವಂ ಹಿ ಬ್ರಹ್ಮಮಯೋ ನಿಧಿಃ||

ಇಂದು ಅವನಿಗೆ ಕ್ಷರಾಕ್ಷರ ದೇವ ನಿನ್ನ ದರ್ಶನದ ಲಾಭವಾಗಲಿ. ಏಕೆಂದರೆ ನೀನು ಬ್ರಹ್ಮಮಯನೂ ಜ್ಞಾನನಿಧಿಯೂ ಆಗಿರುವೆ!”

12046031a ಶ್ರುತ್ವೈತದ್ಧರ್ಮರಾಜಸ್ಯ ವಚನಂ ಮಧುಸೂದನಃ|

12046031c ಪಾರ್ಶ್ವಸ್ಥಂ ಸಾತ್ಯಕಿಂ ಪ್ರಾಹ ರಥೋ ಮೇ ಯುಜ್ಯತಾಮಿತಿ||

ಧರ್ಮರಾಜನ ಮಾತನ್ನು ಕೇಳಿದ ಮಧುಸೂದನನು ಪಕ್ಕದಲ್ಲಿಯೇ ನಿಂತಿದ್ದ ಸಾತ್ಯಕಿಗೆ ರಥವನ್ನು ಹೂಡಲು ಹೇಳಿದನು.

12046032a ಸಾತ್ಯಕಿಸ್ತೂಪನಿಷ್ಕ್ರಮ್ಯ ಕೇಶವಸ್ಯ ಸಮೀಪತಃ|

12046032c ದಾರುಕಂ ಪ್ರಾಹ ಕೃಷ್ಣಸ್ಯ ಯುಜ್ಯತಾಂ ರಥ ಇತ್ಯುತ||

ಸಾತ್ಯಕಿಯು ಕೇಶವನ ಸಮೀಪದಿಂದ ಹೋಗಿ ದಾರುಕನಿಗೆ ಕೃಷ್ಣನ ರಥವನ್ನು ಸಿದ್ಧಗೊಳಿಸುವಂತೆ ಹೇಳಿದನು.

12046033a ಸ ಸಾತ್ಯಕೇರಾಶು ವಚೋ ನಿಶಮ್ಯ

ರಥೋತ್ತಮಂ ಕಾಂಚನಭೂಷಿತಾಂಗಮ್|

12046033c ಮಸಾರಗಲ್ವರ್ಕಮಯೈರ್ವಿಭಂಗೈರ್

ವಿಭೂಷಿತಂ ಹೇಮಪಿನದ್ಧಚಕ್ರಮ್||

12046034a ದಿವಾಕರಾಂಶುಪ್ರಭಮಾಶುಗಾಮಿನಂ

ವಿಚಿತ್ರನಾನಾಮಣಿರತ್ನಭೂಷಿತಮ್|

12046034c ನವೋದಿತಂ ಸೂರ್ಯಮಿವ ಪ್ರತಾಪಿನಂ

ವಿಚಿತ್ರತಾರ್ಕ್ಷ್ಯಧ್ವಜಿನಂ ಪತಾಕಿನಮ್||

12046035a ಸುಗ್ರೀವಸೈನ್ಯಪ್ರಮುಖೈರ್ವರಾಶ್ವೈರ್

ಮನೋಜವೈಃ ಕಾಂಚನಭೂಷಿತಾಂಗೈಃ|

12046035c ಸುಯುಕ್ತಮಾವೇದಯದಚ್ಯುತಾಯ

ಕೃತಾಂಜಲಿರ್ದಾರುಕೋ ರಾಜಸಿಂಹ||

ರಾಜಸಿಂಹ! ಸಾತ್ಯಕಿಯ ಮಾತನ್ನು ಕೇಳಿದ ದಾರುಕನು ಕಾಂಚನಗಳಿಂದ ಭೂಷಿತವಾದ, ಮರಕತ-ಸೂರ್ಯಕಾಂತ-ಚಂದ್ರಕಾಂತ ಮಣಿಗಳ ಕಾಂತಿಯಿಂದ ಕೂಡಿದ್ದ, ಸುವರ್ಣದ ಪಟ್ಟಿಗಳನ್ನು ಸುತ್ತಿದ್ದ ಚಕ್ರಗಳಿದ್ದ, ಸೂರ್ಯಕಿರಣಗಳಂತೆ ಹೊಳೆಯುತ್ತಿದ್ದ, ನಾನಾ ವಿಚಿತ್ರ ಮಣಿರತ್ನಗಳಿಂದ ವಿಭೂಷಿತವಾಗಿದ್ದ, ಉದಯಿಸುತ್ತಿರುವ ಸೂರ್ಯನಂತೆ ಬೆಳಗುತ್ತಿದ್ದ, ವಿಚಿತ್ರ ಗರುಡಧ್ವಜ-ಪತಾಕೆಗಳುಳ್ಳ, ಅಂಗಾಂಗಳಲ್ಲಿ ಸುವರ್ಣಗಳಿಂದ ಅಲಂಕರಿಸಲ್ಪಟ್ಟ ಮನೋವೇಗದ ಸುಗ್ರೀವ-ಸೈನ್ಯಪ್ರಮುಖ ಶ್ರೇಷ್ಠ ಅಶ್ವಗಳನ್ನು ಕಟ್ಟಿದ್ದ ರಥವನ್ನು ಸಿದ್ಧಪಡಿಸಿ ಬಂದು ಕೈಮುಗಿದು ಅಚ್ಯುತನಿಗೆ ನಿವೇದಿಸಿದನು.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಮಹಾಪುರುಷಸ್ತವೇ ಷಟ್ ಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಮಹಾಪುರುಷಸ್ತವ ಎನ್ನುವ ನಲ್ವತ್ತಾರನೇ ಅಧ್ಯಾಯವು.

[1] ಹೋತಾ-ಉದ್ಗಾತಾ-ಬ್ರಹ್ಮಾ-ಅಧ್ವರ್ಯು

[2] ಬ್ರಹ್ಮಚರ್ಯ-ಗೃಹಸ್ಥ-ವಾನಪ್ರಸ್ಥ-ಸಂನ್ಯಾಸ

Comments are closed.