ಶಾಂತಿ ಪರ್ವ: ರಾಜಧರ್ಮ ಪರ್ವ

೪೪

12044001 ವೈಶಂಪಾಯನ ಉವಾಚ

12044001a ತತೋ ವಿಸರ್ಜಯಾಮಾಸ ಸರ್ವಾಃ ಪ್ರಕೃತಯೋ ನೃಪಃ|

12044001c ವಿವಿಶುಶ್ಚಾಭ್ಯನುಜ್ಞಾತಾ ಯಥಾಸ್ವಾನಿ ಗೃಹಾಣಿ ಚ||

ಅನಂತರ ನೃಪನು ಪ್ರಜೆಗಳೆಲ್ಲರನ್ನೂ ಬೀಳ್ಕೊಟ್ಟನು. ಅವನ ಅಪ್ಪಣೆಪಡೆದು ಅವರು ತಮ್ಮ ತಮ್ಮ ಮನೆಗಳಿಗೆ ಹೋದರು.

12044002a ತತೋ ಯುಧಿಷ್ಠಿರೋ ರಾಜಾ ಭೀಮಂ ಭೀಮಪರಾಕ್ರಮಮ್|

12044002c ಸಾಂತ್ವಯನ್ನಬ್ರವೀದ್ಧೀಮಾನರ್ಜುನಂ ಯಮಜೌ ತಥಾ||

ಅನಂತರ ರಾಜಾ ಯುಧಿಷ್ಠಿರನು ಭೀಮಪರಾಕ್ರಮಿ ಭೀಮನನ್ನು ಸಂತವಿಸುತ್ತಾ ಅರ್ಜುನ ಮತ್ತು ಯಮಳರಿಗೆ ಹೇಳಿದನು:

12044003a ಶತ್ರುಭಿರ್ವಿವಿಧೈಃ ಶಸ್ತ್ರೈಃ ಕೃತ್ತದೇಹಾ ಮಹಾರಣೇ|

12044003c ಶ್ರಾಂತಾ ಭವಂತಃ ಸುಭೃಶಂ ತಾಪಿತಾಃ ಶೋಕಮನ್ಯುಭಿಃ||

“ಮಹಾರಣದಲ್ಲಿ ಶತ್ರುಗಳ ವಿವಿಧ ಶಸ್ತ್ರಗಳಿಂದ ನಿಮ್ಮ ಶರೀರಗಳು ಗಾಯಗೊಂಡಿವೆ. ಶೋಕ-ಕ್ರೋಧಗಳಿಂದ ತಪಿಸಿ ಬಳಲಿದ್ದೀರಿ.

12044004a ಅರಣ್ಯೇ ದುಃಖವಸತೀರ್ಮತ್ಕೃತೇ ಪುರುಷೋತ್ತಮಾಃ|

12044004c ಭವದ್ಭಿರನುಭೂತಾಶ್ಚ ಯಥಾ ಕುಪುರುಷೈಸ್ತಥಾ||

ಪುರುಷೋತ್ತಮರಾದ ನೀವು ನನ್ನಿಂದಾಗಿ ಅರಣ್ಯದಲ್ಲಿ, ಭಾಗ್ಯಹೀನರಂತೆ ವಾಸಿಸಿ ದುಃಖಗಳನ್ನು ಅನುಭವಿಸಿದಿರಿ.

12044005a ಯಥಾಸುಖಂ ಯಥಾಜೋಷಂ ಜಯೋಽಯಮನುಭೂಯತಾಮ್|

12044005c ವಿಶ್ರಾಂತಾಽಲ್ಲಬ್ಧವಿಜ್ಞಾನಾನ್ಶ್ವಃ ಸಮೇತಾಸ್ಮಿ ವಃ ಪುನಃ||

ಯಥಾಸುಖವಾಗಿ ಯಥೇಚ್ಛೆಯಿಂದ ಈ ಜಯವನ್ನು ಅನಂದಿಸಿರಿ! ಸಂಪೂರ್ಣ ವಿಶ್ರಾಂತಿಯನ್ನು ಪಡೆದು ಸ್ವಸ್ಥಚಿತ್ತರಾದನಂತರ ನಾಳೆ ಪುನಃ ನಿಮ್ಮೊಡನೆ ಸೇರುತ್ತೇನೆ.”

12044006a ತತೋ ದುರ್ಯೋಧನಗೃಹಂ ಪ್ರಾಸಾದೈರುಪಶೋಭಿತಮ್|

12044006c ಬಹುರತ್ನಸಮಾಕೀರ್ಣಂ ದಾಸೀದಾಸಸಮಾಕುಲಮ್||

12044007a ಧೃತರಾಷ್ಟ್ರಾಭ್ಯನುಜ್ಞಾತಂ ಭ್ರಾತ್ರಾ ದತ್ತಂ ವೃಕೋದರಃ|

12044007c ಪ್ರತಿಪೇದೇ ಮಹಾಬಾಹುರ್ಮಂದರಂ ಮಘವಾನಿವ||

ಅನಂತರ ಧೃತರಾಷ್ಟ್ರನ ಅನುಮತಿಯನ್ನು ಪಡೆದು ಅವನು ಪ್ರಾಸಾದಗಳಿಂದ ಶೋಭಿಸುತ್ತಿದ್ದ, ಅನೇಕ ರತ್ನಗಳಿಂದ ಕೂಡಿದ್ದ, ದಾಸೀ-ದಾಸರ ಗುಂಪುಗಳಿದ್ದ ದುರ್ಯೋಧನನ ಅರಮನೆಯನ್ನು ಸಹೋದರ ವೃಕೋದರನಿಗಿತ್ತನು. ಮಂದರವನ್ನು ಇಂದ್ರನು ಹೇಗೋ ಹಾಗೆ ಮಹಾಬಾಹು ಭೀಮಸೇನನು ಅದನ್ನು ಸ್ವೀಕರಿಸಿದನು.

12044008a ಯಥಾ ದುರ್ಯೋಧನಗೃಹಂ ತಥಾ ದುಃಶಾಸನಸ್ಯ ಚ|

12044008c ಪ್ರಾಸಾದಮಾಲಾಸಂಯುಕ್ತಂ ಹೇಮತೋರಣಭೂಷಿತಮ್||

12044009a ದಾಸೀದಾಸಸುಸಂಪೂರ್ಣಂ ಪ್ರಭೂತಧನಧಾನ್ಯವತ್|

12044009c ಪ್ರತಿಪೇದೇ ಮಹಾಬಾಹುರರ್ಜುನೋ ರಾಜಶಾಸನಾತ್||

ದುರ್ಯೋಧನನ ಅರಮನೆಯಂತೆಯೇ ಪ್ರಾಸಾದಗಳ ಸಾಲುಗಳಿಂದ ಕೂಡಿದ್ದ, ಹೇಮತೋರಣಭೂಷಿತವಾದ, ದಾಸೀ-ದಾಸರಿಂದ ಸಂಪೂರ್ಣವಾಗಿದ್ದ, ಧನ-ಧಾನ್ಯಗಳಿಂದ ಸಮೃದ್ಧವಾಗಿದ್ದ ದುಃಶಾಸನನ ಅರಮನೆಯನ್ನು ರಾಜಶಾಸನದಂತೆ ಮಹಾಬಾಹು ಅರ್ಜುನನು ಪಡೆದುಕೊಂಡನು.

12044010a ದುರ್ಮರ್ಷಣಸ್ಯ ಭವನಂ ದುಃಶಾಸನಗೃಹಾದ್ವರಮ್|

12044010c ಕುಬೇರಭವನಪ್ರಖ್ಯಂ ಮಣಿಹೇಮವಿಭೂಷಿತಮ್||

12044011a ನಕುಲಾಯ ವರಾರ್ಹಾಯ ಕರ್ಶಿತಾಯ ಮಹಾವನೇ|

12044011c ದದೌ ಪ್ರೀತೋ ಮಹಾರಾಜ ಧರ್ಮರಾಜೋ ಯುಧಿಷ್ಠಿರಃ||

ಮಹಾರಾಜ! ದುಃಶಾಸನನ ಅರಮನೆಗಿಂತಲೂ ಶ್ರೇಷ್ಠವಾಗಿದ್ದ, ಕುಬೇರಭವನದಂತಿದ್ದ, ಮಣಿಹೇಮವಿಭೂಷಿತವಾಗಿದ್ದ ದುರ್ಮರ್ಷಣನ ಅರಮನೆಯನ್ನು ಮಹಾವನದಲ್ಲಿ ಅನೇಕ ಕಷ್ಟಗಳನ್ನನುಭವಿಸಿ, ಬಹುಮಾನಕ್ಕೆ ಯೋಗ್ಯನಾಗಿದ್ದ ನಕುಲನಿಗೆ ಧರ್ಮರಾಜ ಯುಧಿಷ್ಠಿರನು ಪ್ರೀತಿಯಿಂದ ಕೊಟ್ಟನು.

12044012a ದುರ್ಮುಖಸ್ಯ ಚ ವೇಶ್ಮಾಗ್ರ್ಯಂ ಶ್ರೀಮತ್ಕನಕಭೂಷಿತಮ್|

12044012c ಪೂರ್ಣಂ ಪದ್ಮದಲಾಕ್ಷೀಣಾಂ ಸ್ತ್ರೀಣಾಂ ಶಯನಸಂಕುಲಮ್||

12044013a ಪ್ರದದೌ ಸಹದೇವಾಯ ಸತತಂ ಪ್ರಿಯಕಾರಿಣೇ|

12044013c ಮುಮುದೇ ತಚ್ಚ ಲಬ್ಧ್ವಾ ಸ ಕೈಲಾಸಂ ಧನದೋ ಯಥಾ||

ಕಾಂತಿಯುಕ್ತವಾಗಿದ್ದ, ಕನಕಭೂಷಿತ, ಪದ್ಮದಲಯತಾಕ್ಷೀ ಸ್ತ್ರೀಯರ ಶಯನಮಂದಿರಗಳಿಂದ ಸಂಪನ್ನವಾಗಿದ್ದ ದುರ್ಮುಖನ ಅಗ್ರ ಅರಮನೆಯನ್ನು ಯುಧಿಷ್ಠಿರನು ಸತತವೂ ಪ್ರಿಯಕಾರಣಿಯಾಗಿದ್ದ ಸಹದೇವನಿಗೆ ಕೊಟ್ಟನು. ಕೈಲಾಸವನ್ನು ಪಡೆದ ಕುಬೇರನಂತೆ ಆ ಅರಮನೆಯನ್ನು ಪಡೆದ ಸಹದೇವನು ಮುದಿತನಾದನು.

12044014a ಯುಯುತ್ಸುರ್ವಿದುರಶ್ಚೈವ ಸಂಜಯಶ್ಚ ಮಹಾದ್ಯುತಿಃ|

12044014c ಸುಧರ್ಮಾ ಚೈವ ಧೌಮ್ಯಶ್ಚ ಯಥಾಸ್ವಂ ಜಗ್ಮುರಾಲಯಾನ್||

ಯುಯುತ್ಸು, ವಿದುರ, ಮಹಾದ್ಯುತಿ ಸಂಜಯ, ಸುಧರ್ಮಾ ಮತ್ತು ಧೌಮ್ಯರು ತಾವು ಹಿಂದೆ ವಾಸಮಾಡುತ್ತಿದ್ದ ಮನೆಗಳಿಗೇ ತೆರಳಿದರು.

12044015a ಸಹ ಸಾತ್ಯಕಿನಾ ಶೌರಿರರ್ಜುನಸ್ಯ ನಿವೇಶನಮ್|

12044015c ವಿವೇಶ ಪುರುಷವ್ಯಾಘ್ರೋ ವ್ಯಾಘ್ರೋ ಗಿರಿಗುಹಾಮಿವ||

ಸಾತ್ಯಕಿಯೊಂದಿಗೆ ಪುರುಷವ್ಯಾಘ್ರ ಶೌರಿಯು, ಗಿರಿಗುಹೆಯನ್ನು ಪ್ರವೇಶಿಸುವ ವ್ಯಾಘ್ರದಂತೆ, ಅರ್ಜುನನ ಅರಮನೆಯನ್ನು ಪ್ರವೇಶಿಸಿದನು.

12044016a ತತ್ರ ಭಕ್ಷಾನ್ನಪಾನೈಸ್ತೇ ಸಮುಪೇತಾಃ ಸುಖೋಷಿತಾಃ|

12044016c ಸುಖಪ್ರಬುದ್ಧಾ ರಾಜಾನಮುಪತಸ್ಥುರ್ಯುಧಿಷ್ಠಿರಮ್||

ಅಲ್ಲಿ ಭಕ್ಷಾನ್ನ ಪಾನೀಯಗಳಿಂದ ತೃಪ್ತರಾಗಿ, ಸುಖವಾಗಿ ರಾತ್ರಿಯನ್ನು ಕಳೆದು, ಸುಖಿಗಳಾಗಿಯೇ ಎಚ್ಚೆತ್ತು ರಾಜ ಯುಧಿಷ್ಠಿರನ ಬಳಿ ಹೋದರು.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಗೃಹವಿಭಾಗೇ ಚತುಶ್ಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಗೃಹವಿಭಾಗ ಎನ್ನುವ ನಲ್ವತ್ನಾಲ್ಕನೇ ಅಧ್ಯಾಯವು.

Comments are closed.