ಶಾಂತಿ ಪರ್ವ: ರಾಜಧರ್ಮ ಪರ್ವ

೪೧

12041001 ವೈಶಂಪಾಯನ ಉವಾಚ

12041001a ಪ್ರಕೃತೀನಾಂ ತು ತದ್ವಾಕ್ಯಂ ದೇಶಕಾಲೋಪಸಂಹಿತಮ್|

12041001c ಶ್ರುತ್ವಾ ಯುಧಿಷ್ಠಿರೋ ರಾಜಾಥೋತ್ತರಂ ಪ್ರತ್ಯಭಾಷತ||

ವೈಶಂಪಾಯನನು ಹೇಳಿದನು: “ಪ್ರಜೆಗಳ ದೇಶ-ಕಾಲೋಚಿತವಾದ ಆ ಮಾತುಗಳನ್ನು ಕೇಳಿ ರಾಜಾ ಯುಧಿಷ್ಠಿರನು ಉತ್ತರಪೂರ್ವಕವಾಗಿ ಈ ಮಾತನ್ನಾಡಿದನು:

12041002a ಧನ್ಯಾಃ ಪಾಂಡುಸುತಾ ಲೋಕೇ ಯೇಷಾಂ ಬ್ರಾಹ್ಮಣಪುಂಗವಾಃ|

12041002c ತಥ್ಯಾನ್ವಾಪ್ಯಥ ವಾತಥ್ಯಾನ್ಗುಣಾನಾಹುಃ ಸಮಾಗತಾಃ||

“ಇಲ್ಲಿ ಸೇರಿರುವ ಬ್ರಾಹ್ಮಣಪುಂಗವರು ನಮ್ಮಲ್ಲಿರುವ ಗುಣಾವಗುಣಗಳನ್ನು ಗಮನಿಸದೇ ಕೇವಲ ಪ್ರೀತಿಯಿಂದ ನಮ್ಮನ್ನು ಗುಣವಂತರೆಂದೇ ಪ್ರಶಂಸಿಸಿರುವುದರಿಂದ ಪಾಂಡುಪುತ್ರರಾದ ನಾವೇ ಈ ಲೋಕದಲ್ಲಿ ಧನ್ಯರು!

12041003a ಅನುಗ್ರಾಹ್ಯಾ ವಯಂ ನೂನಂ ಭವತಾಮಿತಿ ಮೇ ಮತಿಃ|

12041003c ಯತ್ರೈವಂ ಗುಣಸಂಪನ್ನಾನಸ್ಮಾನ್ಬ್ರೂಥ ವಿಮತ್ಸರಾಃ||

ನಾವು ನಿಮ್ಮೆಲ್ಲರ ಅನುಗ್ರಹಕ್ಕೆ ಪಾತ್ರರಾಗಿದ್ದೇವೆಂದು ನನ್ನ ಅಭಿಪ್ರಾಯವಾಗಿದೆ. ಅಸೂಯಾರಹಿತರಾದ ನೀವು ನಮ್ಮನ್ನು ಗುಣಸಂಪನ್ನರೆಂದು ಹೇಳಿದ್ದೀರಿ.

12041004a ಧೃತರಾಷ್ಟ್ರೋ ಮಹಾರಾಜಃ ಪಿತಾ ನೋ ದೈವತಂ ಪರಮ್|

12041004c ಸಾಶನೇಽಸ್ಯ ಪ್ರಿಯೇ ಚೈವ ಸ್ಥೇಯಂ ಮತ್ಪ್ರಿಯಕಾಂಕ್ಷಿಭಿಃ||

ಮಹಾರಾಜ ಧೃತರಾಷ್ಟ್ರನು ನನ್ನ ಪಿತನೂ ಪರಮ ದೈವವೂ ಆಗಿದ್ದಾನೆ. ನನಗೆ ಪ್ರಿಯವನ್ನುಂಟುಮಾಡಲು ಅಪೇಕ್ಷಿಸುವವರು ಅವನ ಶಾಸನದಂತೆಯೇ ನಡೆದುಕೊಳ್ಳಬೇಕು.

12041005a ಏತದರ್ಥಂ ಹಿ ಜೀವಾಮಿ ಕೃತ್ವಾ ಜ್ಞಾತಿವಧಂ ಮಹತ್|

12041005c ಅಸ್ಯ ಶುಶ್ರೂಷಣಂ ಕಾರ್ಯಂ ಮಯಾ ನಿತ್ಯಮತಂದ್ರಿಣಾ||

ಈ ಮಹಾ ಜ್ಞಾತಿವಧೆಯನ್ನು ಮಾಡಿ ನಾನು ಇವನ ಸಲುವಾಗಿಯೇ ಜೀವಿಸಿರುತ್ತೇನೆ. ಆಲಸನಾಗಿರದೇ ನಿತ್ಯವೂ ಇವನ ಶುಶ್ರೂಷಣೆಯನ್ನು ಮಾಡುವುದೇ ನನ್ನ ಕಾರ್ಯವಾಗಿದೆ.

12041006a ಯದಿ ಚಾಹಮನುಗ್ರಾಹ್ಯೋ ಭವತಾಂ ಸುಹೃದಾಂ ತತಃ|

12041006c ಧೃತರಾಷ್ಟ್ರೇ ಯಥಾಪೂರ್ವಂ ವೃತ್ತಿಂ ವರ್ತಿತುಮರ್ಹಥ||

ನಾನು ಸುಹೃದಯರಾದ ನಿಮ್ಮ ಅನುಗ್ರಹಕ್ಕೆ ಪಾತ್ರನಾಗಿರುವುದೇ ಆದರೆ ಧೃತರಾಷ್ಟ್ರನ ವಿಷಯದಲ್ಲಿ ನೀವು ಹಿಂದೆ ಹೇಗೆ ನಡೆದುಕೊಳ್ಳುತ್ತಿದ್ದರೋ ಈಗಲೂ ಹಾಗೆಯೇ ನಡೆದುಕೊಳ್ಳಬೇಕು.

12041007a ಏಷ ನಾಥೋ ಹಿ ಜಗತೋ ಭವತಾಂ ಚ ಮಯಾ ಸಹ|

12041007c ಅಸ್ಯೈವ ಪೃಥಿವೀ ಕೃತ್ಸ್ನಾ ಪಾಂಡವಾಃ ಸರ್ವ ಏವ ಚ|

12041007e ಏತನ್ಮನಸಿ ಕರ್ತವ್ಯಂ ಭವದ್ಭಿರ್ವಚನಂ ಮಮ||

ನನಗೆ, ನಿಮಗೆ ಮತ್ತು ಈ ಜಗತ್ತಿಗೆ ಇವನೇ ಒಡೆಯನು. ಈ ಇಡೀ ಪೃಥ್ವಿ, ಪಾಂಡವರೆಲ್ಲರೂ ಮತ್ತು ನೀವೂ ಇದನ್ನು ಮನಸ್ಸಿನಲ್ಲಿಟ್ಟುಕೊಂಡು ನಡೆದುಕೊಳ್ಳಬೇಕೆಂದು ನಾನು ಕೇಳಿಕೊಳ್ಳುತ್ತಿದ್ದೇನೆ.”

12041008a ಅನುಗಮ್ಯ ಚ ರಾಜಾನಂ ಯಥೇಷ್ಟಂ ಗಮ್ಯತಾಮಿತಿ|

12041008c ಪೌರಜಾನಪದಾನ್ಸರ್ವಾನ್ವಿಸೃಜ್ಯ ಕುರುನಂದನಃ|

12041008e ಯೌವರಾಜ್ಯೇನ ಕೌರವ್ಯೋ ಭೀಮಸೇನಮಯೋಜಯತ್||

ರಾಜರು ಮತ್ತು ಪೌರಜನಪದದ ಎಲ್ಲರೂ ಇಷ್ಟಬಂದಂತೆ ಹೋಗಬಹುದೆಂದು ಕುರುನಂದನನು ಅನುಮತಿಯನ್ನಿತ್ತನು. ಕೌರವ್ಯನು ಭೀಮಸೇನನನ್ನು ಯುವರಾಜನನ್ನಾಗಿ ನಿಯಮಿಸಿಕೊಂಡನು.

12041009a ಮಂತ್ರೇ ಚ ನಿಶ್ಚಯೇ ಚೈವ ಷಾಡ್ಗುಣ್ಯಸ್ಯ ಚ ಚಿಂತನೇ|

12041009c ವಿದುರಂ ಬುದ್ಧಿಸಂಪನ್ನಂ ಪ್ರೀತಿಮಾನ್ವೈ ಸಮಾದಿಶತ್||

ಗುಪ್ತಸಲಹೆಗಳಿಗೆ ಮತ್ತು ನಿರ್ಧಾರಗಳಿಗೆ ಮತ್ತು ಆರುಗುಣ[1]ಗಳ ವಿಷಯವಾಗಿ ಸಮಾಲೋಚಿಸಲು ಪ್ರೀತಿಪಾತ್ರನಾದ ಬುದ್ಧಿಸಂಪನ್ನ ವಿದುರನನ್ನು ನಿಯಮಿಸಿಕೊಂಡನು.

12041010a ಕೃತಾಕೃತಪರಿಜ್ಞಾನೇ ತಥಾಯವ್ಯಯಚಿಂತನೇ|

12041010c ಸಂಜಯಂ ಯೋಜಯಾಮಾಸ ಋದ್ಧಮೃದ್ಧೈರ್ಗುಣೈರ್ಯುತಮ್||

ಮಾಡಬೇಕಾದ ಮತ್ತು ಮಾಡಬಾರದ ಕಾರ್ಯಗಳ ಕುರಿತು ಪರಿಜ್ಞಾನವನ್ನು ನೀಡಲು ಮತ್ತು ಆದಾಯ-ವೆಚ್ಚಗಳ ಕುರಿತು ಸಮಾಲೋಚಿಸಲು ವೃದ್ಧ-ಪ್ರಾಮಾಣಿಕ ಗುಣ ಸಂಪನ್ನನಾದ ಸಂಜಯನನ್ನು ನಿಯೋಜಿಸಿದನು.

12041011a ಬಲಸ್ಯ ಪರಿಮಾಣೇ ಚ ಭಕ್ತವೇತನಯೋಸ್ತಥಾ|

12041011c ನಕುಲಂ ವ್ಯಾದಿಶದ್ರಾಜಾ ಕರ್ಮಿಣಾಮನ್ವವೇಕ್ಷಣೇ||

ಬಲದ ಅಳತೆಗೂ, ಭತ್ಯ-ವೇತನಗಳ ವಿತರಣೆಗೂ ಮತ್ತು ಕಾರ್ಮಿಕರ ಮೇಲ್ವಿಚಾರಣೆಗೂ ರಾಜನು ನಕುಲನನ್ನು ನಿಯಮಿಸಿಕೊಂಡನು.

12041012a ಪರಚಕ್ರೋಪರೋಧೇ ಚ ದೃಪ್ತಾನಾಂ ಚಾವಮರ್ದನೇ|

12041012c ಯುಧಿಷ್ಠಿರೋ ಮಹಾರಾಜಃ ಫಲ್ಗುನಂ ವ್ಯಾದಿದೇಶ ಹ||

ಶತ್ರುಗಳ ಆಕ್ರಮಣಕ್ಕೂ ದರ್ಪದಲ್ಲಿರುವವರನ್ನು ಮರ್ದಿಸುವುದಕ್ಕೂ ಮಹಾರಾಜ ಯುಧಿಷ್ಠಿರನು ಫಲ್ಗುನನನ್ನು ನಿಯೋಜಿಸಿದನು.

12041013a ದ್ವಿಜಾನಾಂ ವೇದಕಾರ್ಯೇಷು ಕಾರ್ಯೇಷ್ವನ್ಯೇಷು ಚೈವ ಹಿ|

12041013c ಧೌಮ್ಯಂ ಪುರೋಧಸಾಂ ಶ್ರೇಷ್ಠಂ ವ್ಯಾದಿದೇಶ ಪರಂತಪಃ||

ದ್ವಿಜರ ವೇದಕಾರ್ಯಗಳಿಗೆ ಮತ್ತು ಅನ್ಯ ಕಾರ್ಯಗಳಿಗೆ ಪುರೋಹಿತ ಧೌಮ್ಯನನ್ನು ಆ ಪರಂತಪನು ನಿಯಮಿಸಿಕೊಂಡನು.

12041014a ಸಹದೇವಂ ಸಮೀಪಸ್ಥಂ ನಿತ್ಯಮೇವ ಸಮಾದಿಶತ್|

12041014c ತೇನ ಗೋಪ್ಯೋ ಹಿ ನೃಪತಿಃ ಸರ್ವಾವಸ್ಥೋ ವಿಶಾಂ ಪತೇ||

ವಿಶಾಂಪತೇ! ನೃಪತಿಯು ಸಹದೇವನನ್ನು ನಿತ್ಯವೂ ಸಮೀಪದಲ್ಲಿದ್ದುಕೊಂಡು ತನ್ನನ್ನು ರಕ್ಷಿಸುವ ಕಾರ್ಯವನ್ನು ವಹಿಸಿದನು.

12041015a ಯಾನ್ಯಾನಮನ್ಯದ್ಯೋಗ್ಯಾಂಶ್ಚ ಯೇಷು ಯೇಷ್ವಿಹ ಕರ್ಮಸು|

12041015c ತಾಂಸ್ತಾಂಸ್ತೇಷ್ವೇವ ಯುಯುಜೇ ಪ್ರೀಯಮಾಣೋ ಮಹೀಪತಿಃ||

ಅನಂತರ ಪ್ರಸನ್ನಚಿತ್ತನಾದ ಮಹೀಪತಿಯು ಯಾರ್ಯಾರು ಯಾವ್ಯಾವ ಕರ್ಮಗಳಲ್ಲಿ ಸಮರ್ಥರೆಂದು ತಿಳಿದು ಅದರಂತೆಯೇ ಕಾರ್ಯಗಳನ್ನು ವಹಿಸಿಕೊಟ್ಟನು.

12041016a ವಿದುರಂ ಸಂಜಯಂ ಚೈವ ಯುಯುತ್ಸುಂ ಚ ಮಹಾಮತಿಮ್|

12041016c ಅಬ್ರವೀತ್ಪರವೀರಘ್ನೋ ಧರ್ಮಾತ್ಮಾ ಧರ್ಮವತ್ಸಲಃ||

ಪರವೀರಘ್ನ ಧರ್ಮಾತ್ಮಾ ಧರ್ಮವತ್ಸಲ ಯುಧಿಷ್ಠಿರನು ವಿದುರ-ಸಂಜಯ ಮತ್ತು ಮಹಾಮತಿ ಯುಯುತ್ಸುವಿಗೆ ಈ ರೀತಿ ಹೇಳಿದನು:

12041017a ಉತ್ಥಾಯೋತ್ಥಾಯ ಯತ್ಕಾರ್ಯಮಸ್ಯ ರಾಜ್ಞಃ ಪಿತುರ್ಮಮ|

12041017c ಸರ್ವಂ ಭವದ್ಭಿಃ ಕರ್ತವ್ಯಮಪ್ರಮತ್ತೈರ್ಯಥಾತಥಮ್||

“ಬೆಳಗಾದೊಡನೆಯೇ ಎದ್ದು ಈ ನನ್ನ ತಂದೆ ರಾಜನ ಕಾರ್ಯವೆಲ್ಲವನ್ನೂ ಯಥಾವತ್ತಾಗಿ ಮಾಡಿಕೊಡಬೇಕಾಗಿರುವುದು ನಿಮ್ಮೆಲ್ಲರ ಕರ್ತವ್ಯವಾಗಿರುತ್ತದೆ.

12041018a ಪೌರಜಾನಪದಾನಾಂ ಚ ಯಾನಿ ಕಾರ್ಯಾಣಿ ನಿತ್ಯಶಃ|

12041018c ರಾಜಾನಂ ಸಮನುಜ್ಞಾಪ್ಯ ತಾನಿ ಕಾರ್ಯಾಣಿ ಧರ್ಮತಃ||

ಪೌರ-ಜನಪದರ ಎಲ್ಲ ಕಾರ್ಯಗಳನ್ನೂ ರಾಜನ ಅಪ್ಪಣೆಯಂತೆ ನಿತ್ಯವೂ ಪೂರ್ಣಗೊಳಿಸುವುದೂ ನಿಮ್ಮ ಕರ್ತವ್ಯವಾಗಿರುತ್ತದೆ.””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಭೀಮಾದಿಕರ್ಮನಿಯೋಗೇ ಏಕಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಭೀಮಾದಿಕರ್ಮನಿಯೋಗ ಎನ್ನುವ ನಲ್ವತ್ತೊಂದನೇ ಅಧ್ಯಾಯವು.

[1] ಸಂಧಿ-ವಿಗ್ರಹ-ಯಾನ-ಆಸನ-ದ್ವೈಧೀಭಾವ-ಸಮಾಶ್ರಯಗಳೆಂಬ ದೇಶಕ್ಕೆ ಸಂಬಂಧಿಸಿದ ಆರು ಗುಣಗಳು.

Comments are closed.