ಶಾಂತಿ ಪರ್ವ: ರಾಜಧರ್ಮ ಪರ್ವ

೩೬

12036001 ವ್ಯಾಸ ಉವಾಚ

12036001a ತಪಸಾ ಕರ್ಮಭಿಶ್ಚೈವ ಪ್ರದಾನೇನ ಚ ಭಾರತ|

12036001c ಪುನಾತಿ ಪಾಪಂ ಪುರುಷಃ ಪೂತಶ್ಚೇನ್ನ ಪ್ರವರ್ತತೇ||

ವ್ಯಾಸನು ಹೇಳಿದನು: “ಭಾರತ! ತಪಸ್ಸಿನಿಂದ, ಕರ್ಮಗಳಿಂದ ಮತ್ತು ದಾನದಿಂದ ಮತ್ತು ಆ ಪಾಪಗಳನ್ನು ಪುನಃ ಮಾಡದೇ ಇರುವುದರಿಂದ ಪುರುಷನು ಪಾಪಗಳನ್ನು ತೊಳೆದುಕೊಂಡು ಪವಿತ್ರನಾಗುತ್ತಾನೆ.

12036002a ಏಕಕಾಲಂ ತು ಭುಂಜಾನಶ್ಚರನ್ಭೈಕ್ಷಂ ಸ್ವಕರ್ಮಕೃತ್|

12036002c ಕಪಾಲಪಾಣಿಃ ಖಟ್ವಾಂಗೀ ಬ್ರಹ್ಮಚಾರೀ ಸದೋತ್ಥಿತಃ||

12036003a ಅನಸೂಯುರಧಃಶಾಯೀ ಕರ್ಮ ಲೋಕೇ ಪ್ರಕಾಶಯನ್|

12036003c ಪೂರ್ಣೈರ್ದ್ವಾದಶಭಿರ್ವರ್ಷೈರ್ಬ್ರಹ್ಮಹಾ ವಿಪ್ರಮುಚ್ಯತೇ||

ಬ್ರಹ್ಮಹತ್ಯೆಯನ್ನು ಮಾಡಿದವನು ಭಿಕ್ಷೆಯನ್ನು ಮಾಡಿಕೊಂಡು ಒಂದೇ ಹೊತ್ತು ಊಟಮಾಡಬೇಕು. ತನ್ನ ಎಲ್ಲ ಕೆಲಸಗಳನ್ನೂ ತಾನೇ ಮಾಡಿಕೊಳ್ಳಬೇಕು. ಕಪಾಲವನ್ನೂ ದಂಡವನ್ನೂ ಹಿಡಿದು ಬ್ರಹ್ಮಚಾರಿಯಾಗಿರಬೇಕು. ಸದಾ ಚಟುವಟಿಕೆಯಿಂದಿರಬೇಕು. ಯಾರಲ್ಲಿಯೂ ದೋಷವನ್ನೆಣಿಸಬಾರದು. ನೆಲದ ಮೇಲೆ ಮಲಗಬೇಕು. ತಾನು ಮಾಡಿದ ಪಾಪವನ್ನು ಜನರಲ್ಲಿ ಹೇಳಿಕೊಳ್ಳಬೇಕು. ಈ ನಿಯಮಗಳನ್ನು ಸಂಪೂರ್ಣ ಹನ್ನೆರಡು ವರ್ಷಗಳವರೆಗೆ ಪಾಲಿಸಿದರೆ ಅವನು ಬ್ರಹ್ಮಹತ್ಯಾದೋಷದಿಂದ ಮುಕ್ತನಾಗುತ್ತಾನೆ.

12036004a ಷಡ್ಭಿರ್ವರ್ಷೈಃ ಕೃಚ್ಚ್ರಭೋಜೀ ಬ್ರಹ್ಮಹಾ ಪೂಯತೇ ನರಃ|

12036004c ಮಾಸೇ ಮಾಸೇ ಸಮಶ್ನಂಸ್ತು ತ್ರಿಭಿರ್ವರ್ಷೈಃ ಪ್ರಮುಚ್ಯತೇ||

ಆರು ವರ್ಷಗಳು ಕೃಚ್ಛ್ರವ್ರತಾನುಸಾರವಾಗಿ ಭೋಜನಮಾಡುತ್ತಿದ್ದರೆ  ಅಥವಾ ಮಾಸ-ಮಾಸಗಳಲ್ಲಿಯೂ ಕೃಚ್ಛ್ರವ್ರತಾಚರಣೆ ಮಾಡಿದರೆ ಬ್ರಹ್ಮಹತ್ಯೆಮಾಡಿದ ನರನು ಪವಿತ್ರನಾಗುತ್ತಾನೆ.

12036005a ಸಂವತ್ಸರೇಣ ಮಾಸಾಶೀ ಪೂಯತೇ ನಾತ್ರ ಸಂಶಯಃ|

12036005c ತಥೈವೋಪರಮನ್ರಾಜನ್ಸ್ವಲ್ಪೇನಾಪಿ ಪ್ರಮುಚ್ಯತೇ||

ರಾಜನ್! ತಿಂಗಳಿಗೊಮ್ಮೆ ಮಾತ್ರ ಊಟಮಾಡಿಕೊಂಡಿದ್ದರೆ ಒಂದೇ ವರ್ಷದಲ್ಲಿ ಬ್ರಹ್ಮಹತ್ಯೆಮಾಡಿದವನು ಪವಿತ್ರನಾಗುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅದಕ್ಕೂ ಹೆಚ್ಚು ಕಾಲ ಉಪವಾಸದಿಂದಿದ್ದರೆ ಅತ್ಯಲ್ಪಕಾಲದಲ್ಲಿಯೇ ಬ್ರಹ್ಮಹತ್ಯಾದೋಷದ ನಿವಾರಣೆಯಾಗುತ್ತದೆ.

12036006a ಕ್ರತುನಾ ಚಾಶ್ವಮೇಧೇನ ಪೂಯತೇ ನಾತ್ರ ಸಂಶಯಃ|

12036006c ಯ ಚಾಸ್ಯಾವಭೃಥೇ ಸ್ನಾಂತಿ ಕೇ ಚಿದೇವಂವಿಧಾ ನರಾಃ||

12036007a ತೇ ಸರ್ವೇ ಪೂತಪಾಪ್ಮಾನೋ ಭವಂತೀತಿ ಪರಾ ಶ್ರುತಿಃ|

ಅಶ್ವಮೇಧಯಾಗದಿಂದಲೂ ಬ್ರಹ್ಮಹತ್ಯಾದೋಷದಿಂದ ಮುಕ್ತನಾಗುವನು ಎನ್ನುವುದರಲ್ಲಿ ಸಂಶಯವಿಲ್ಲ. ಅಶ್ವಮೇಧದ ಅವಭೃಥಸ್ನಾನ ಮಾಡಿದ ನರನು ಈ ವಿಧದ ಎಲ್ಲ ಪಾಪಗಳಿಂದಲೂ ಮುಕ್ತನಾಗುತ್ತಾನೆ ಎಂದು ಶ್ರುತಿಗಳು ಹೇಳುತ್ತವೆ.

12036007c ಬ್ರಾಹ್ಮಣಾರ್ಥೇ ಹತೋ ಯುದ್ಧೇ ಮುಚ್ಯತೇ ಬ್ರಹ್ಮಹತ್ಯಯಾ||

12036008a ಗವಾಂ ಶತಸಹಸ್ರಂ ತು ಪಾತ್ರೇಭ್ಯಃ ಪ್ರತಿಪಾದಯನ್|

12036008c ಬ್ರಹ್ಮಹಾ ವಿಪ್ರಮುಚ್ಯೇತ ಸರ್ವಪಾಪೇಭ್ಯ ಏವ ಚ||

ಬ್ರಾಹ್ಮಣರಿಗಾಗಿ ಯುದ್ಧದಲ್ಲಿ ಹತನಾದರೆ ಬ್ರಹ್ಮಹತ್ಯಾದೋಷದಿಂದ ಮುಕ್ತನಾಗುತ್ತಾನೆ. ಒಂದು ಲಕ್ಷ ಗೋವುಗಳನ್ನು ಪಾತ್ರನಾದವನಿಗೆ ದಾನಮಾಡಿದರೆ ಬ್ರಹ್ಮಹತ್ಯೆ ಮತ್ತು ಎಲ್ಲ ದೋಷಗಳಿಂದಲೂ ಮುಕ್ತನಾಗುತ್ತಾನೆ.

12036009a ಕಪಿಲಾನಾಂ ಸಹಸ್ರಾಣಿ ಯೋ ದದ್ಯಾತ್ಪಂಚವಿಂಶತಿಮ್|

12036009c ದೋಗ್ಧ್ರೀಣಾಂ ಸ ಚ ಪಾಪೇಭ್ಯಃ ಸರ್ವೇಭ್ಯೋ ವಿಪ್ರಮುಚ್ಯತೇ||

ಹಾಲುಕೊಡುವ ಇಪ್ಪತ್ತೈದು ಸಾವಿರ ಕಪಿಲ ವರ್ಣದ ಗೋವುಗಳನ್ನು ದಾನಮಾಡಿದರೆ ಸರ್ವ ಪಾಪಗಳಿಂದ ಮುಕ್ತಿದೊರೆಯುತ್ತದೆ.

12036010a ಗೋಸಹಸ್ರಂ ಸವತ್ಸಾನಾಂ ದೋಗ್ಧ್ರೀಣಾಂ ಪ್ರಾಣಸಂಶಯೇ|

12036010c ಸಾಧುಭ್ಯೋ ವೈ ದರಿದ್ರೇಭ್ಯೋ ದತ್ತ್ವಾ ಮುಚ್ಯೇತ ಕಿಲ್ಬಿಷಾತ್||

ಕರುಗಳಿರುವ ಮತ್ತು ಹಾಲುಕರೆಯುವ ಸಹಸ್ರ ಗೋವುಗಳನ್ನು ಮರಣಕಾಲದಲ್ಲಿ ದರಿದ್ರ ಸತ್ಪುರುಷರಿಗೆ ದಾನಮಾಡಿದರೆ ಎಲ್ಲ ಪಾಪಗಳ ವಿಮೋಚನೆಯಾಗುತ್ತದೆ.

12036011a ಶತಂ ತೈ ಯಸ್ತು ಕಾಂಬೋಜಾನ್ಬ್ರಾಹ್ಮಣೇಭ್ಯಃ ಪ್ರಯಚ್ಚತಿ|

12036011c ನಿಯತೇಭ್ಯೋ ಮಹೀಪಾಲ ಸ ಚ ಪಾಪಾತ್ಪ್ರಮುಚ್ಯತೇ||

ಮಹೀಪಾಲ! ನಿಯಮಾನುಷ್ಠಾನ ಪರರಾದ ಬ್ರಾಹ್ಮಣರಿಗೆ ನೂರು ಕಾಂಬೋಜ ದೇಶದ ಕುದುರೆಗಳನ್ನು ದಾನಮಾಡುವುದರಿಂದಲೂ ಸರ್ವ ಪಾಪಗಳ ವಿಮೋಚನೆಯಾಗುತ್ತದೆ.

12036012a ಮನೋರಥಂ ತು ಯೋ ದದ್ಯಾದೇಕಸ್ಮಾ ಅಪಿ ಭಾರತ|

12036012c ನ ಕೀರ್ತಯೇತ ದತ್ತ್ವಾ ಯಃ ಸ ಚ ಪಾಪಾತ್ಪ್ರಮುಚ್ಯತೇ||

ಭಾರತ! ಕೇವಲ ಒಬ್ಬನ ಮನೋರಥವನ್ನು ಪೂರೈಸುವ ಹಾಗೆ ದಾನಮಾಡಿ ಆ ದಾನದ ಕುರಿತು ಬೇರೆಯವರಲ್ಲಿ ಹೇಳಿಕೊಳ್ಳದೇ ಇದ್ದವನೂ ಪಾಪದಿಂದ ಮುಕ್ತನಾಗುತ್ತಾನೆ.

12036013a ಸುರಾಪಾನಂ ಸಕೃತ್ಪೀತ್ವಾ ಯೋಽಗ್ನಿವರ್ಣಾಂ ಪಿಬೇದ್ದ್ವಿಜಃ|

12036013c ಸ ಪಾವಯತ್ಯಥಾತ್ಮಾನಮಿಹ ಲೋಕೇ ಪರತ್ರ ಚ||

ಸುರಾಪಾನವನ್ನು ಮಾಡಿದ ದ್ವಿಜನು ಕೆಂಪಾಗಿ ಕಾಸಿ ಕುದಿಯುತ್ತಿರುವ ಅಗ್ನಿವರ್ಣದ ಸುರೆಯನ್ನು ಕುಡಿದರೆ ಅವನು ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ಶುದ್ಧನಾಗುತ್ತಾನೆ.

12036014a ಮೇರುಪ್ರಪಾತಂ ಪ್ರಪತನ್ಜ್ವಲನಂ ವಾ ಸಮಾವಿಶನ್|

12036014c ಮಹಾಪ್ರಸ್ಥಾನಮಾತಿಷ್ಠನ್ಮುಚ್ಯತೇ ಸರ್ವಕಿಲ್ಬಿಷೈಃ||

ಪರ್ವತದಿಂದ ಹಾರಿ ಕೆಳಗೆ ಬೀಳುವುದರಿಂದಲೂ, ಅಗ್ನಿಯನ್ನು ಪ್ರವೇಶಿಸುವುದರಿಂದಲೂ ಮತ್ತು ಮರಣದೀಕ್ಷೆಯನ್ನು ಕೈಗೊಂಡು ಉತ್ತರಾಭಿಮುಖವಾಗಿ ಪ್ರಯಾಣಿಸುತ್ತಾ ಹಿಮಾಲಯದಲ್ಲಿ ಪ್ರಾಣತ್ಯಾಗಮಾಡುವುದರಿಂದಲೂ ಮನುಷ್ಯನು ಸರ್ವಪಾಪಗಳಿಂದ ವಿಮುಕ್ತನಾಗುತ್ತಾನೆ.

12036015a ಬೃಹಸ್ಪತಿಸವೇನೇಷ್ಟ್ವಾ ಸುರಾಪೋ ಬ್ರಾಹ್ಮಣಃ ಪುನಃ|

12036015c ಸಮಿತಿಂ ಬ್ರಾಹ್ಮಣೈರ್ಗಚ್ಚೇದಿತಿ ವೈ ಬ್ರಾಹ್ಮಣೀ ಶ್ರುತಿಃ||

ಸುರಾಪಾನ ಮಾಡಿದ ಬ್ರಾಹ್ಮಣನು ಬೃಹಸ್ಪತಿಸವ ಎನ್ನುವ ಯಾಗವನ್ನು ಮಾಡುವುದರಿಂದ ಬ್ರಾಹ್ಮಣರ ಸಭೆಗೆ ಪುನಃ ಹೋಗಲು ಅರ್ಹನಾಗುತ್ತಾನೆ ಎಂದು ಶ್ರುತಿಗಳು ಸಾರುತ್ತವೆ.

12036016a ಭೂಮಿಪ್ರದಾನಂ ಕುರ್ಯಾದ್ಯಃ ಸುರಾಂ ಪೀತ್ವಾ ವಿಮತ್ಸರಃ|

12036016c ಪುನರ್ನ ಚ ಪಿಬೇದ್ರಾಜನ್ಸಂಸ್ಕೃತಃ ಶುಧ್ಯತೇ ನರಃ||

ರಾಜನ್! ಸುರಾಪಾನ ಮಾಡಿದ ನರನು ಮಾತ್ಸರ್ಯರಹಿತನಾಗಿ ಭೂದಾನ ಮಾಡುವುದರಿಂದ ಮತ್ತು ಪುನಃ ಸುರಾಪಾನಮಾಡದೇ ಇರುವುದರಿಂದ ಸುಸಂಸ್ಕೃತನೂ ಶುದ್ಧನೂ ಆಗುತ್ತಾನೆ.

12036017a ಗುರುತಲ್ಪೀ ಶಿಲಾಂ ತಪ್ತಾಮಾಯಸೀಮಧಿಸಂವಿಶೇತ್|

12036017c ಪಾಣಾವಾಧಾಯ ವಾ ಶೇಫಂ ಪ್ರವ್ರಜೇದೂರ್ಧ್ವದರ್ಶನಃ||

12036018a ಶರೀರಸ್ಯ ವಿಮೋಕ್ಷೇಣ ಮುಚ್ಯತೇ ಕರ್ಮಣೋಽಶುಭಾತ್|

12036018c ಕರ್ಮಭ್ಯೋ ವಿಪ್ರಮುಚ್ಯಂತೇ ಯತ್ತಾಃ ಸಂವತ್ಸರಂ ಸ್ತ್ರಿಯಃ||

ಗುರುಪತ್ನಿಯೊಡನೆ ಸಮಾಗಮ ಮಾಡಿದವನು ಕಾದ ಶಿಲೆಯ ಮೇಲೆ ಮಲಗಬೇಕು ಅಥವಾ ತನ್ನ ಶಿಶ್ನವನ್ನು ಕತ್ತರಿಸಿಕೊಂಡು, ತಲೆಯನ್ನೆತ್ತಿ ಆಕಾಶವನ್ನೇ ನೋಡುತ್ತಾ ಪ್ರಯಾಣಿಸಬೇಕು. ಈ ರೀತಿ ಶರೀರವನ್ನು ತೊರೆಯುವುದರಿಂದಲೇ ಆ ಅಶುಭಕರ್ಮದ ಪಾಪದಿಂದ ಮುಕ್ತನಾಗುತ್ತಾನೆ. ಇಂತಹ ಪಾಪಕರ್ಮವನ್ನು ಮಾಡಿದ ಸ್ತ್ರೀಯರು ಒಂದು ವರ್ಷ ಸಂಯಮದಿಂದ ಇದ್ದರೆ ಪಾಪಮುಕ್ತರಾಗುತ್ತಾರೆ.

12036019a ಮಹಾವ್ರತಂ ಚರೇದ್ಯಸ್ತು ದದ್ಯಾತ್ಸರ್ವಸ್ವಮೇವ ತು|

12036019c ಗುರ್ವರ್ಥೇ ವಾ ಹತೋ ಯುದ್ಧೇ ಸ ಮುಚ್ಯೇತ್ಕರ್ಮಣೋಽಶುಭಾತ್||

ಮಹಾವ್ರತ[1]ವನ್ನು ಆಚರಿಸಿದವನು, ಸರ್ವವನ್ನೂ ದಾನಮಾಡಿದವನು ಮತ್ತು ಗುರುವಿನ ಪರವಾಗಿ ಯುದ್ಧದಲ್ಲಿ ಮಡಿದವನು ಅಶುಭ ಕರ್ಮದಿಂದ ಮುಕ್ತನಾಗುತ್ತಾನೆ.

12036020a ಅನೃತೇನೋಪಚರ್ತಾ ಚ ಪ್ರತಿರೋದ್ಧಾ ಗುರೋಸ್ತಥಾ|

12036020c ಉಪಹೃತ್ಯ ಪ್ರಿಯಂ ತಸ್ಮೈ ತಸ್ಮಾತ್ಪಾಪಾತ್ಪ್ರಮುಚ್ಯತೇ||

ಗುರುವಿಗೆ ಪ್ರಿಯವಾದುದನ್ನು ತಂದು ಕೊಡುವುದರಿಂದ ಗುರುವಿಗೆ ಸುಳ್ಳುಹೇಳಿದುದರ ಮತ್ತು ಗುರುವಿಗೆ ವಿರುದ್ಧವಾಗಿ ನಡೆದುಕೊಂಡಿದುದರ ಪಾಪದಿಂದ ಮುಕ್ತನಾಗುತ್ತಾನೆ.

12036021a ಅವಕೀರ್ಣಿನಿಮಿತ್ತಂ ತು ಬ್ರಹ್ಮಹತ್ಯಾವ್ರತಂ ಚರೇತ್|

12036021c ಖರಚರ್ಮವಾಸಾಃ ಷಣ್ಮಾಸಂ ತಥಾ ಮುಚ್ಯೇತ ಕಿಲ್ಬಿಷಾತ್||

ಬ್ರಹ್ಮಚರ್ಯವ್ರತದಿಂದ ಭ್ರಷ್ಟನಾದವನು ಗೋಚರ್ಮವನ್ನು ಹೊದೆದುಕೊಂಡು ಆರು ತಿಂಗಳ ಕಾಲ ಬ್ರಹ್ಮಹತ್ಯಾವ್ರತವನ್ನು ಆಚರಿಸಿದರೆ ಆ ಪಾಪದಿಂದ ಮುಕ್ತನಾಗುತ್ತಾನೆ.

12036022a ಪರದಾರಾಪಹಾರೀ ಚ ಪರಸ್ಯಾಪಹರನ್ ವಸು|

12036022c ಸಂವತ್ಸರಂ ವ್ರತೀ ಭೂತ್ವಾ ತಥಾ ಮುಚ್ಯೇತ ಕಿಲ್ಬಿಷಾತ್||

ಒಂದು ವರ್ಷ ಕಠೋರ ವ್ರತವನ್ನು ಆಚರಿಸಿದರೆ ಪರಸ್ತ್ರೀಯನ್ನು ಮತ್ತು ಪರರ ಸ್ವತ್ತನ್ನು ಅಪಹರಿಸಿದ ಪಾಪದಿಂದ ಮುಕ್ತನಾಗಬಹುದು.

12036023a ಸ್ತೇಯಂ ತು ಯಸ್ಯಾಪಹರೇತ್ತಸ್ಮೈ ದದ್ಯಾತ್ಸಮಂ ವಸು|

12036023c ವಿವಿಧೇನಾಭ್ಯುಪಾಯೇನ ತೇನ ಮುಚ್ಯೇತ ಕಿಲ್ಬಿಷಾತ್||

ಪರರ ಸ್ವತ್ತನ್ನು ಅಪಹರಿಸಿದವನು, ಅದಕ್ಕೆ ಸಮನಾದಷ್ಟು ಸಂಪತ್ತನ್ನು ವಿವಿಧ ಉಪಾಯಗಳಿಂದ ಹಿಂದಿರುಗಿಸಿದರೆ ಆ ಪಾಪದಿಂದ ಮುಕ್ತನಾಗುತ್ತಾನೆ.

12036024a ಕೃಚ್ಚ್ರಾದ್ದ್ವಾದಶರಾತ್ರೇಣ ಸ್ವಭ್ಯಸ್ತೇನ ದಶಾವರಮ್|

12036024c ಪರಿವೇತ್ತಾ ಭವೇತ್ಪೂತಃ ಪರಿವಿತ್ತಿಶ್ಚ ಭಾರತ||

ಭಾರತ! ಪರಿವೇತ್ತ[2] ಮತ್ತು ಪರಿವಿತ್ತಿ[3] ಇವರಿಬ್ಬರಿಗೂ ಹನ್ನೆರಡು ರಾತ್ರಿಗಳು ಜಿತೇಂದ್ರಿಯರಾಗಿದ್ದು ಕೃಚ್ಛ್ರವ್ರತವನ್ನಾಚರಿಸುವುದೇ ಪ್ರಾಯಶ್ಚಿತ್ತವಾಗಿದೆ.

12036025a ನಿವೇಶ್ಯಂ ತು ಭವೇತ್ತೇನ ಸದಾ ತಾರಯಿತಾ ಪಿತೃನ್|

12036025c ನ ತು ಸ್ತ್ರಿಯಾ ಭವೇದ್ದೋಷೋ ನ ತು ಸಾ ತೇನ ಲಿಪ್ಯತೇ||

ಪ್ರಾಯಶ್ಚಿತ್ತವನ್ನು ಮಾಡಿಕೊಂಡ ಪರಿವೇತ್ತಿಯು ವಿವಾಹವಾಗಿ ಪಿತೃಕಾರ್ಯಗಳನ್ನು ಮಾಡುತ್ತಾ ಬಂದರೆ ಅವನ ಪತ್ನಿಗೆ ಯಾವ ದೋಷವೂ ಆಗುವುದಿಲ್ಲ. ಅವಳಿಗೆ ಪಾಪಗಳು ಅಂಟಿಕೊಳ್ಳುವುದಿಲ್ಲ.

12036026a ಭಜನೇ ಹ್ಯೃತುನಾ ಶುದ್ಧಂ ಚಾತುರ್ಮಾಸ್ಯಂ ವಿಧೀಯತೇ|

12036026c ಸ್ತ್ರಿಯಸ್ತೇನ ವಿಶುಧ್ಯಂತಿ ಇತಿ ಧರ್ಮವಿದೋ ವಿದುಃ||

ಚಾತುರ್ಮಾಸ್ಯವ್ರತ[4]ದ ಮೂಲಕ ಶುದ್ಧಿಮಾಡಿಕೊಳ್ಳುವ ವಿಧಾನವಿದೆ. ಸ್ತ್ರೀಯರು ಈ ವ್ರತದ ಆಚರಣೆಯಿಂದ ಶುದ್ಧರಾಗುತ್ತಾರೆಂದು ಧರ್ಮವಿದರು ಹೇಳುತ್ತಾರೆ.

12036027a ಸ್ತ್ರಿಯಸ್ತ್ವಾಶಂಕಿತಾಃ ಪಾಪೈರ್ನೋಪಗಮ್ಯಾ ಹಿ ಜಾನತಾ|

12036027c ರಜಸಾ ತಾ ವಿಶುಧ್ಯಂತೇ ಭಸ್ಮನಾ ಭಾಜನಂ ಯಥಾ||

ಪತ್ನಿಯು ಪಾಪಿಯೆಂದು ಶಂಕಿಸಿದರೆ ಅವಳು ಪುನಃ ರಜಸ್ವಲೆಯಾಗುವವರೆಗೆ ಅವಳೊಡನೆ ಕೂಡಬಾರದು. ಭಸ್ಮಲೇಪನದಿಂದ ಪಾತ್ರೆಯು ಶುದ್ಧವಾಗುವಂತೆ ರಜೋದರ್ಶನದಿಂದ ಸ್ತ್ರೀಯರು ಶುದ್ಧರಾಗುತ್ತಾರೆ.

12036028a ಚತುಷ್ಪಾತ್ಸಕಲೋ ಧರ್ಮೋ ಬ್ರಾಹ್ಮಣಾನಾಂ ವಿಧೀಯತೇ|

12036028c ಪಾದಾವಕೃಷ್ಟೋ ರಾಜನ್ಯೇ ತಥಾ ಧರ್ಮೋ ವಿಧೀಯತೇ||

ಧರ್ಮದ ಎಲ್ಲ ನಾಲ್ಕು ಪಾದಗಳೂ ಬ್ರಾಹ್ಮಣರಿಗೆ ವಿಹಿತವಾಗಿವೆ. ರಾಜನಿಗೆ ಧರ್ಮದ ಮೂರು ಪಾದಗಳು ವಿಹಿತವಾಗಿವೆ.

12036029a ತಥಾ ವೈಶ್ಯೇ ಚ ಶೂದ್ರೇ ಚ ಪಾದಃ ಪಾದೋ ವಿಧೀಯತೇ|

12036029c ವಿದ್ಯಾದೇವಂವಿಧೇನೈಷಾಂ ಗುರುಲಾಘವನಿಶ್ಚಯಮ್||

ಹಾಗೆಯೇ ವೈಶ್ಯ ಮತ್ತು ಶೂದ್ರರಿಗೆ ಒಂದೊಂದು ಪಾದ ಕಡಿಮೆ ಧರ್ಮವು ವಿಹಿತವಾಗಿದೆ. ಇದರ ಪ್ರಕಾರ ಪಾಪಗಳ ಮಹತ್ತ್ವತೆ ಮತ್ತು ಲಘುತ್ವಗಳು ಮತ್ತು ಅವುಗಳ ಪ್ರಾಯಶ್ಚಿತ್ತಗಳು ನಿಶ್ಚಯಿಸಲ್ಪಟ್ಟಿವೆ.

12036030a ತಿರ್ಯಗ್ಯೋನಿವಧಂ ಕೃತ್ವಾ ದ್ರುಮಾಂಶ್ಚಿತ್ತ್ವೇತರಾನ್ಬಹೂನ್|

12036030c ತ್ರಿರಾತ್ರಂ ವಾಯುಭಕ್ಷಃ ಸ್ಯಾತ್ಕರ್ಮ ಚ ಪ್ರಥಯೇನ್ನರಃ||

ಪಶು-ಪಕ್ಷಿಗಳನ್ನು ವಧಿಸುವುದರಿಂದ ಮತ್ತು ಅನೇಕ ವೃಕ್ಷಗಳನ್ನು ಕಡಿಯುವುದರಿಂದ ಆದ ಪಾಪವನ್ನು ಮನುಷ್ಯನು ಮೂರುರಾತ್ರಿ ವಾಯುಭಕ್ಷಕನಾಗಿದ್ದು ಉಪವಾಸದಿಂದಿದ್ದರೆ ತೊರೆದುಕೊಳ್ಳುತ್ತಾನೆ.

12036031a ಅಗಮ್ಯಾಗಮನೇ ರಾಜನ್ಪ್ರಾಯಶ್ಚಿತ್ತಂ ವಿಧೀಯತೇ|

12036031c ಆರ್ದ್ರವಸ್ತ್ರೇಣ ಷಣ್ಮಾಸಂ ವಿಹಾರ್ಯಂ ಭಸ್ಮಶಾಯಿನಾ||

ರಾಜನ್! ಸಂಗಮಾಡಬಾರದೇ ಇದ್ದವರೊಡನೆ ಸಂಗಮಾಡಿದರೆ ಆರು ತಿಂಗಳ ಕಾಲ ಒದ್ದೆ ಬಟ್ಟೆಯನ್ನು ಉಟ್ಟುಕೊಂಡು ಸಂಚರಿಸುತ್ತಿರಬೇಕು ಮತ್ತು ಬೂದಿಯ ಮೇಲೆ ಮಲಗಬೇಕು ಎಂಬ ಪ್ರಾಯಶ್ಚಿತ್ತವಿದೆ.

12036032a ಏಷ ಏವ ತು ಸರ್ವೇಷಾಮಕಾರ್ಯಾಣಾಂ ವಿಧಿರ್ಭವೇತ್|

12036032c ಬ್ರಾಹ್ಮಣೋಕ್ತೇನ ವಿಧಿನಾ ದೃಷ್ಟಾಂತಾಗಮಹೇತುಭಿಃ||

ಮಾಡಬಾರದ ಎಲ್ಲ ಕರ್ಮಗಳಿಗೂ ಇದನ್ನೇ ಪ್ರಾಯಶ್ಚಿತ್ತವಾಗಿ ಬ್ರಾಹ್ಮಣಗಳಲ್ಲಿ ವಿಧಾನ-ದೃಷ್ಟಾಂತಗಳ ಮೂಲಕ ವಿಹಿಸಲಾಗಿದೆ.

12036033a ಸಾವಿತ್ರೀಮಪ್ಯಧೀಯಾನಃ ಶುಚೌ ದೇಶೇ ಮಿತಾಶನಃ|

12036033c ಅಹಿಂಸ್ರೋಽಮಂದಕೋಽಜಲ್ಪನ್ಮುಚ್ಯತೇ ಸರ್ವಕಿಲ್ಬಿಷೈಃ||

ಶುಚಿಪ್ರದೇಶದಲ್ಲಿ, ಅಲ್ಪಾಹಾರಗಳನ್ನು ತಿಂದು, ಅಹಿಂಸಾವ್ರತನಿಷ್ಟನಾಗಿ, ರಾಗ-ದ್ವೇಷ-ಮಾನಾಪಮಾನಶೂನ್ಯನಾಗಿ, ಮೌನಿಯಾಗಿ ಗಾಯತ್ರೀ ಮಂತ್ರವನ್ನು ಜಪಿಸುವವನು ಸರ್ವ ಪಾಪಗಳಿಂದಲೂ ವಿಮುಕ್ತನಾಗುತ್ತಾನೆ.

12036034a ಅಹಃಸು ಸತತಂ ತಿಷ್ಠೇದಭ್ಯಾಕಾಶಂ ನಿಶಿ ಸ್ವಪೇತ್|

12036034c ತ್ರಿರಹ್ನಸ್ತ್ರಿರ್ನಿಶಾಯಾಶ್ಚ ಸವಾಸಾ ಜಲಮಾವಿಶೇತ್||

12036035a ಸ್ತ್ರೀಶೂದ್ರಪತಿತಾಂಶ್ಚಾಪಿ ನಾಭಿಭಾಷೇದ್ವ್ರತಾನ್ವಿತಃ|

12036035c ಪಾಪಾನ್ಯಜ್ಞಾನತಃ ಕೃತ್ವಾ ಮುಚ್ಯೇದೇವಂವ್ರತೋ ದ್ವಿಜಃ||

ತಿಳಿಯದೇ ಪಾಪಮಾಡಿದ ದ್ವಿಜನು ಪಾಪವಿಮೋಚನೆಗಾಗಿ ಹಗಲಿನಲ್ಲಿ ಯಾವಾಗಲೂ ನಿಂತುಕೊಂಡೇ ಇರಬೇಕು. ರಾತ್ರಿಯಲ್ಲಿ ಆಕಾಶವನ್ನೇ ಹೊದ್ದಿಕೊಂಡು ಬಯಲಿನಲ್ಲಿ ಮಲಗಬೇಕು. ಹಗಲು ಮೂರು ಬಾರಿ ಮತ್ತು ರಾತ್ರಿ ಮೂರು ಬಾರಿ ಉಟ್ಟಬಟ್ಟೆಯಲ್ಲಿಯೇ ನೀರಿನಲ್ಲಿ ಮುಳುಗಿ ಸ್ನಾನಮಾಡಬೇಕು. ಈ ವ್ರತವನ್ನಾಚರಿಸುತ್ತಿರುವಾಗ ಸ್ತ್ರೀ-ಶೂದ್ರ-ಪತಿತರಲ್ಲಿ ಮಾತನಾಡಬಾರದು.

12036036a ಶುಭಾಶುಭಫಲಂ ಪ್ರೇತ್ಯ ಲಭತೇ ಭೂತಸಾಕ್ಷಿಕಃ|

12036036c ಅತಿರಿಚ್ಯೇತ್ತಯೋರ್ಯತ್ತು ತತ್ಕರ್ತಾ ಲಭತೇ ಫಲಮ್||

ಪಂಚಭೂತಗಳೇ ಸಾಕ್ಷಿಕವಾಗಿರುವ ಶುಭಾಶುಭಫಲಗಳು ಮರಣದ ನಂತರವೇ ದೊರೆಯುತ್ತವೆ. ಅವುಗಳಲ್ಲಿ ಯಾವ ಕರ್ಮಗಳನ್ನು ಹೆಚ್ಚು ಮಾಡಿರುವನೋ ಅವುಗಳ ಫಲವನ್ನು ಹೆಚ್ಚಾಗಿ ಪಡೆಯುತ್ತಾನೆ.

12036037a ತಸ್ಮಾದ್ದಾನೇನ ತಪಸಾ ಕರ್ಮಣಾ ಚ ಶುಭಂ ಫಲಮ್|

12036037c ವರ್ಧಯೇದಶುಭಂ ಕೃತ್ವಾ ಯಥಾ ಸ್ಯಾದತಿರೇಕವಾನ್||

ಆದುದರಿಂದ ದಾನ, ತಪಸ್ಸು ಮುಂತಾದ ಕರ್ಮಗಳಿಂದ ಶುಭಫಲಗಳು ಹೆಚ್ಚುತ್ತವೆ. ಅಶುಭ ಕರ್ಮಗಳಿಗಿಂತಲೂ ಪುಣ್ಯಕರ್ಮಗಳನ್ನು ಹೆಚ್ಚಾಗಿ ಮಾಡಿದರೆ ಪುಣ್ಯಫಲಗಳೇ ಹೆಚ್ಚು ದೊರೆಯುತ್ತವೆ.

12036038a ಕುರ್ಯಾಚ್ಚುಭಾನಿ ಕರ್ಮಾಣಿ ನಿಮಿತ್ತೇ ಪಾಪಕರ್ಮಣಾಮ್|

12036038c ದದ್ಯಾನ್ನಿತ್ಯಂ ಚ ವಿತ್ತಾನಿ ತಥಾ ಮುಚ್ಯೇತ ಕಿಲ್ಬಿಷಾತ್||

ಶುಭಕರ್ಮಗಳನ್ನು ಮಾಡುತ್ತಿರಬೇಕು; ಪಾಪಕರ್ಮಗಳನ್ನು ಮಾಡಬಾರದು. ನಿತ್ಯವೂ ಧನವನ್ನು ದಾನಮಾಡುವುದರಿಂದ ಪಾಪವಿಮುಕ್ತನಾಗುತ್ತಾನೆ.

12036039a ಅನುರೂಪಂ ಹಿ ಪಾಪಸ್ಯ ಪ್ರಾಯಶ್ಚಿತ್ತಮುದಾಹೃತಮ್|

12036039c ಮಹಾಪಾತಕವರ್ಜಂ ತು ಪ್ರಾಯಶ್ಚಿತ್ತಂ ವಿಧೀಯತೇ||

ಪಾಪಗಳಿಗೆ ಅನುರೂಪವಾದ ಪ್ರಾಯಶ್ಚಿತ್ತಗಳನ್ನು ಉದಾಹರಿಸಿದ್ದೇನೆ. ಮಹಾಪಾತಕವನ್ನು ಬಿಟ್ಟು ಉಳಿದವುಗಳಿಗೆ ಪ್ರಾಯಶ್ಚಿತ್ತಗಳನ್ನು ಹೇಳಲಾಗಿದೆ.

12036040a ಭಕ್ಷ್ಯಾಭಕ್ಷ್ಯೇಷು ಸರ್ವೇಷು ವಾಚ್ಯಾವಾಚ್ಯೇ ತಥೈವ ಚ|

12036040c ಅಜ್ಞಾನಜ್ಞಾನಯೋ ರಾಜನ್ವಿಹಿತಾನ್ಯನುಜಾನತೇ||

ರಾಜನ್! ತಿಳಿದೋ ಅಥವಾ ತಿಳಿಯದೆಯೋ ಅಭಕ್ಷ್ಯವಾದುದನ್ನು ಭಕ್ಷಿಸಿದರೆ, ಮತ್ತು ಅವಾಚ್ಯವಾದವುಗಳನ್ನು ಮಾತನಾಡಿದರೆ ಅವುಗಳಿಗೂ ಪ್ರಾಯಶ್ಚಿತ್ತಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ.

12036041a ಜಾನತಾ ತು ಕೃತಂ ಪಾಪಂ ಗುರು ಸರ್ವಂ ಭವತ್ಯುತ|

12036041c ಅಜ್ಞಾನಾತ್ಸ್ಖಲಿತೇ ದೋಷೇ ಪ್ರಾಯಶ್ಚಿತ್ತಂ ವಿಧೀಯತೇ||

ತಿಳಿದು ಮಾಡಿದ ಪಾಪಗಳೆಲ್ಲವೂ ಅಧಿಕ ಪಾಪಗಳಾಗುತ್ತವೆ. ಅಜ್ಞಾನದಿಂದ ಮಾಡಿದ ದೋಷಗಳಿಗೆ ಪ್ರಾಯಶ್ಚಿತ್ತಗಳನ್ನು ಹೇಳಿದ್ದಾರೆ.

12036042a ಶಕ್ಯತೇ ವಿಧಿನಾ ಪಾಪಂ ಯಥೋಕ್ತೇನ ವ್ಯಪೋಹಿತುಮ್|

12036042c ಆಸ್ತಿಕೇ ಶ್ರದ್ದಧಾನೇ ತು ವಿಧಿರೇಷ ವಿಧೀಯತೇ||

ಈಗ ಹೇಳಿದ ವಿಧಿಗಳಿಂದ ಪಾಪಗಳನ್ನು ಕಳೆದುಕೊಳ್ಳಲು ಶಕ್ಯವಿದೆ. ಆದರೆ ಆಸ್ತಿಕರಿಗೆ ಮತ್ತು ಶ್ರದ್ಧೆಯುಳ್ಳವರಿಗೆ ಮಾತ್ರ ಈ ವಿಧಿಗಳನ್ನು ಹೇಳಲಾಗಿದೆ.

12036043a ನಾಸ್ತಿಕಾಶ್ರದ್ದಧಾನೇಷು ಪುರುಷೇಷು ಕದಾ ಚನ|

12036043c ದಂಭದೋಷಪ್ರಧಾನೇಷು ವಿಧಿರೇಷ ನ ದೃಶ್ಯತೇ||

ದಂಭದೋಷವೇ ಪ್ರಧಾನವಾಗಿರುವ ನಾಸ್ತಿಕರು ಮತ್ತು ಶ್ರದ್ಧೆಯಿಲ್ಲದ ಪುರುಷರಿಗೆ ಪ್ರಾಯಶ್ಚಿತ್ತವಿಧಿಗಳು ಯಾವುವೂ ಇಲ್ಲ.

12036044a ಶಿಷ್ಟಾಚಾರಶ್ಚ ಶಿಷ್ಟಶ್ಚ ಧರ್ಮೋ ಧರ್ಮಭೃತಾಂ ವರ|

12036044c ಸೇವಿತವ್ಯೋ ನರವ್ಯಾಘ್ರ ಪ್ರೇತ್ಯ ಚೇಹ ಸುಖಾರ್ಥಿನಾ||

ಧರ್ಮಭೃತರಲ್ಲಿ ಶ್ರೇಷ್ಠನೇ! ನರವ್ಯಾಘ್ರ! ಮರಣಾನಂತರದಲ್ಲಿ ಮತ್ತು ಇಹದಲ್ಲಿ ಸುಖವನ್ನು ಬಯಸುವವರು ಶಿಷ್ಟಾಚಾರಿಗಳಾಗಿರಬೇಕು. ಧರ್ಮವನ್ನು ಅನುಸರಿಸಿ ನಡೆದುಕೊಳ್ಳಬೇಕು.

12036045a ಸ ರಾಜನ್ಮೋಕ್ಷ್ಯಸೇ ಪಾಪಾತ್ತೇನ ಪೂರ್ವೇಣ ಹೇತುನಾ|

12036045c ತ್ರಾಣಾರ್ಥಂ ವಾ ವಧೇನೈಷಾಮಥ ವಾ ನೃಪಕರ್ಮಣಾ||

ರಾಜನ್! ಈ ಮೊದಲು ಹೇಳಿದ ಕಾರಣಗಳಿಂದಾಗಿ ನೀನು ನಿನ್ನ ಪಾಪದಿಂದ ಮುಕ್ತನಾಗುವೆ.

12036046a ಅಥ ವಾ ತೇ ಘೃಣಾ ಕಾ ಚಿತ್ಪ್ರಾಯಶ್ಚಿತ್ತಂ ಚರಿಷ್ಯಸಿ|

12036046c ಮಾ ತ್ವೇವಾನಾರ್ಯಜುಷ್ಟೇನ ಕರ್ಮಣಾ ನಿಧನಂ ಗಮಃ||

ಅಥವಾ ಈ ಕರ್ಮಗಳನ್ನು ಮಾಡಿದೆನೆಲ್ಲಾ ಎಂದು ತಪ್ಪಿತಸ್ಥಭಾವವನ್ನು ಹೊಂದಿದ್ದರೆ ಪ್ರಾಯಶ್ಚಿತ್ತಗಳನ್ನು ಮಾಡಿಕೋ! ಅನಾರ್ಯಜುಷ್ಟವಾದ ಕಾರ್ಯವನ್ನೆಸಗಿ ಆತ್ಮವಿನಾಶವನ್ನು ಮಾಡಿಕೊಳ್ಳಬೇಡ!””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಪ್ರಾಯಶ್ಚಿತ್ತೀಯೇ ಷಟ್ ಸ್ತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಪ್ರಾಯಶ್ಚಿತ್ತೀಯ ಎನ್ನುವ ಮೂವತ್ತಾರನೇ ಅಧ್ಯಾಯವು.

[1] ಒಂದು ತಿಂಗಳು ನೀರನ್ನೂ ಕುಡಿಯದೇ ನಿರಾಹಾರಿಯಾಗಿರುವುದಕ್ಕೆ ಮಹಾವ್ರತವೆನ್ನುವರು.

[2] ಅಣ್ಣನಿಗಿಂತ ಮೊದಲು ಮದುವೆಯಾದವನು

[3] ತಮ್ಮನ ಮದುವೆಯಾದರೂ ಮದುವೆಯಾಗದೇ ಇರುವವನು

[4] ಚಾತುರ್ಮಾಸ್ಯದಲ್ಲಿ ದಿನಬಿಟ್ಟು ದಿನ ಊಟಮಾಡುವ ವಿಧಾನವಿದೆ.

Comments are closed.