ಶಾಂತಿ ಪರ್ವ: ರಾಜಧರ್ಮ ಪರ್ವ

೧೯

12019001 ಯುಧಿಷ್ಠಿರ ಉವಾಚ

12019001a ವೇದಾಹಂ ತಾತ ಶಾಸ್ತ್ರಾಣಿ ಅಪರಾಣಿ ಪರಾಣಿ ಚ|

12019001c ಉಭಯಂ ವೇದವಚನಂ ಕುರು ಕರ್ಮ ತ್ಯಜೇತಿ ಚ||

ಯುಧಿಷ್ಠಿರನು ಹೇಳಿದನು: “ಅಯ್ಯಾ! ನಾನು ಅಪರ ಮತ್ತು ಪರ ಶಾಸ್ತ್ರಗಳೆರಡನ್ನೂ ತಿಳಿದುಕೊಂಡಿದ್ದೇನೆ. ಕರ್ಮವನ್ನು ಮಾಡು ಮತ್ತು ತ್ಯಜಿಸು ಇವೆರಡೂ ವೇದವಚನಗಳೇ!

12019002a ಆಕುಲಾನಿ ಚ ಶಾಸ್ತ್ರಾಣಿ ಹೇತುಭಿಶ್ಚಿತ್ರಿತಾನಿ ಚ|

12019002c ನಿಶ್ಚಯಶ್ಚೈವ ಯನ್ಮಾತ್ರೋ ವೇದಾಹಂ ತಂ ಯಥಾವಿಧಿ||

ವಿರೋಧಾಭಾಸವಾದಂತೆ ಚಿತ್ರಿತವಾಗಿರುವ ಈ ಶಾಸ್ತ್ರವಾಕ್ಯಗಳನ್ನು ಅವುಗಳ ಕಾರಣ-ನಿಶ್ಚಯಗಳೊಂದಿಗೆ ಯಥಾವಿಧಿಯಾಗಿ ನಾನು ತಿಳಿದುಕೊಂಡಿರುವೆನು.

12019003a ತ್ವಂ ತು ಕೇವಲಮಸ್ತ್ರಜ್ಞೋ ವೀರವ್ರತಮನುಷ್ಠಿತಃ|

12019003c ಶಾಸ್ತ್ರಾರ್ಥಂ ತತ್ತ್ವತೋ ಗಂತುಂ ನ ಸಮರ್ಥಃ ಕಥಂ ಚನ||

ನೀನಾದರೋ ಕೇವಲ ಅಸ್ತ್ರಗಳನ್ನು ತಿಳಿದವನು. ವೀರವ್ರತಾನುಷ್ಠಾನದಲ್ಲಿರುವವನು. ಶಾಸ್ತ್ರಾರ್ಥವನ್ನು ತತ್ತ್ವತಃ ತಿಳಿದುಕೊಳ್ಳಲು ನೀನು ಎಂದಿಗೂ ಸಮರ್ಥನಲ್ಲ!

12019004a ಶಾಸ್ತ್ರಾರ್ಥಸೂಕ್ಷ್ಮದರ್ಶೀ ಯೋ ಧರ್ಮನಿಶ್ಚಯಕೋವಿದಃ|

12019004c ತೇನಾಪ್ಯೇವಂ ನ ವಾಚ್ಯೋಽಹಂ ಯದಿ ಧರ್ಮಂ ಪ್ರಪಶ್ಯಸಿ||

ನೀನು ಶಾಸ್ತ್ರಗಳ ಸೂಕ್ಷ್ಮಾರ್ಥಗಳನ್ನು ಕಂಡುಕೊಂಡಿದ್ದರೆ ಮತ್ತು ಧರ್ಮನಿಶ್ಚಯಗಳ ಕೋವಿದನಾಗಿದ್ದರೆ, ಧರ್ಮವನ್ನು ಕಂಡುಕೊಂಡಿದ್ದರೆ ನೀನೂ ಕೂಡ ನನಗೆ ಈ ಮಾತುಗಳನ್ನಾಡುತ್ತಿರಲಿಲ್ಲ!

12019005a ಭ್ರಾತೃಸೌಹೃದಮಾಸ್ಥಾಯ ಯದುಕ್ತಂ ವಚನಂ ತ್ವಯಾ|

12019005c ನ್ಯಾಯ್ಯಂ ಯುಕ್ತಂ ಚ ಕೌಂತೇಯ ಪ್ರೀತೋಽಹಂ ತೇನ ತೇಽರ್ಜುನ||

ಅರ್ಜುನ! ಕೌಂತೇಯ! ಅಣ್ಣನ ಸುಹೃದಯವನ್ನು ತಾಳಿ ನೀನು ಹೇಳಿದ ನ್ಯಾಯವೂ ಯುಕ್ತವೂ ಆದ ಮಾತಿನಿಂದ ಸಂತೋಷಗೊಂಡಿದ್ದೇನೆ.

12019006a ಯುದ್ಧಧರ್ಮೇಷು ಸರ್ವೇಷು ಕ್ರಿಯಾಣಾಂ ನೈಪುಣೇಷು ಚ|

12019006c ನ ತ್ವಯಾ ಸದೃಶಃ ಕಶ್ಚಿತ್ತ್ರಿಷು ಲೋಕೇಷು ವಿದ್ಯತೇ||

ಯುದ್ಧಧರ್ಮದ ಸರ್ವ ಕ್ರಿಯೆಗಳಲ್ಲಿ ಮತ್ತು ನೈಪುಣ್ಯತೆಯಲ್ಲಿ ನಿನ್ನ ಸಮನಾಗಿರುವವರು ಮೂರು ಲೋಕಗಳಲ್ಲೇ ಯಾರೂ ಇಲ್ಲವೆಂದು ತಿಳಿಯುತ್ತದೆ.

12019007a ಧರ್ಮಸೂಕ್ಷ್ಮಂ ತು ಯದ್ವಾಕ್ಯಂ ತತ್ರ ದುಷ್ಪ್ರತರಂ ತ್ವಯಾ|

12019007c ಧನಂಜಯ ನ ಮೇ ಬುದ್ಧಿಮಭಿಶಂಕಿತುಮರ್ಹಸಿ||

ಧನಂಜಯ! ಆದರೆ ನೀನು ಈಗ ಹೇಳಿರುವ ಧರ್ಮಸೂಕ್ಷ್ಮದ ಮಾತುಗಳು ನನ್ನ ಬುದ್ಧಿಗೆ ತಿಳಿಯಲಿಲ್ಲ ಎಂದು ಶಂಕಿಸಬಾರದು.

12019008a ಯುದ್ಧಶಾಸ್ತ್ರವಿದೇವ ತ್ವಂ ನ ವೃದ್ಧಾಃ ಸೇವಿತಾಸ್ತ್ವಯಾ|

12019008c ಸಮಾಸವಿಸ್ತರವಿದಾಂ ನ ತೇಷಾಂ ವೇತ್ಸಿ ನಿಶ್ಚಯಮ್||

ನೀನು ಯುದ್ಧಶಾಸ್ತ್ರವನ್ನು ಮಾತ್ರವೇ ತಿಳಿದಿರುವೆ. ನೀನೆಂದೂ ವೃದ್ಧರ ಸೇವೆಯನ್ನು ಮಾಡಿದವನಲ್ಲ. ಆದುದರಿಂದ ಸಂಕ್ಷಿಪ್ತವಾಗಿಯೂ ವಿಸ್ತಾರವಾಗಿಯೂ ಇರುವ ಧರ್ಮ ನಿಶ್ಚಯವು ನಿನಗೆ ತಿಳಿಯಲಾರದು!

12019009a ತಪಸ್ತ್ಯಾಗೋ ವಿಧಿರಿತಿ ನಿಶ್ಚಯಸ್ತಾತ ಧೀಮತಾಮ್|

12019009c ಪರಂ ಪರಂ ಜ್ಯಾಯ ಏಷಾಂ ಸೈಷಾ ನೈಃಶ್ರೇಯಸೀ ಗತಿಃ||

ಅಯ್ಯಾ! ತಪಸ್ಸು-ತ್ಯಾಗ ಮತ್ತು ಬ್ರಹ್ಮಜ್ಞಾನ ಇವು ಶ್ರೇಯಸ್ಕರವೆಂದು ತಿಳಿದವರ ನಿಶ್ಚಯ. ಈ ಮೂರರಲ್ಲಿ ಮೊದಲನೆಯದಕ್ಕಿಂತಲೂ ಎರಡನೆಯದು ಶ್ರೇಷ್ಠವು ಮತ್ತು ಎರಡನೆಯದಕ್ಕಿಂತಲೂ ಮೂರನೆಯದು ಶ್ರೇಷ್ಠವು.

12019010a ನ ತ್ವೇತನ್ಮನ್ಯಸೇ ಪಾರ್ಥ ನ ಜ್ಯಾಯೋಽಸ್ತಿ ಧನಾದಿತಿ|

12019010c ಅತ್ರ ತೇ ವರ್ತಯಿಷ್ಯಾಮಿ ಯಥಾ ನೈತತ್ಪ್ರಧಾನತಃ||

ಪಾರ್ಥ! ಧನಕ್ಕಿಂತಲೂ ಮಿಗಿಲಾದುದು ಇಲ್ಲವೆಂದು ನಿನ್ನ ಅಭಿಪ್ರಾಯವಾಗಿದೆ. ಆದರೆ, ಅದು ಪ್ರಧಾನವಾದುದಲ್ಲವೆನ್ನುವುದನ್ನು ನಾನು ನಿನಗೆ ಹೇಳುತ್ತಿದ್ದೇನೆ.

12019011a ತಪಃಸ್ವಾಧ್ಯಾಯಶೀಲಾ ಹಿ ದೃಶ್ಯಂತೇ ಧಾರ್ಮಿಕಾ ಜನಾಃ|

12019011c ಋಷಯಸ್ತಪಸಾ ಯುಕ್ತಾ ಯೇಷಾಂ ಲೋಕಾಃ ಸನಾತನಾಃ||

ತಪಸ್ಸು ಮತ್ತು ಸ್ವಾಧ್ಯಾಯಗಳಲ್ಲಿ ನಿರತರಾದ ಧಾರ್ಮಿಕ ಜನರು ಕಾಣಸಿಗುತ್ತಾರೆ. ತಪಸ್ಸಿನಿಂದ ಯುಕ್ತರಾದ ಋಷಿಗಳಿಗೆ ಸನಾತನ ಲೋಕಗಳು ದೊರೆಯುತ್ತವೆ.

12019012a ಅಜಾತಶ್ಮಶ್ರವೋ[1] ಧೀರಾಸ್ತಥಾನ್ಯೇ ವನವಾಸಿನಃ|

12019012c ಅನಂತಾ ಅಧನಾ ಏವ ಸ್ವಾಧ್ಯಾಯೇನ ದಿವಂ ಗತಾಃ||

ಶತ್ರುಗಳೇ ಇಲ್ಲದ ಅನ್ಯ ಧೀರ ವನವಾಸಿಗಳು ಬಹಳ ಕಾಲ ಧನವಿಲ್ಲದೇ ಸ್ವಾಧ್ಯಾಯದಲ್ಲಿ ನಿರತರಾಗಿದ್ದುಕೊಂಡು ಸ್ವರ್ಗಕ್ಕೆ ಹೋಗುತ್ತಾರೆ.

12019013a ಉತ್ತರೇಣ ತು ಪಂಥಾನಮಾರ್ಯಾ ವಿಷಯನಿಗ್ರಹಾತ್|

12019013c ಅಬುದ್ಧಿಜಂ ತಮಸ್ತ್ಯಕ್ತ್ವಾ ಲೋಕಾಂಸ್ತ್ಯಾಗವತಾಂ ಗತಾಃ||

ಅನೇಕ ಆರ್ಯರು ವಿಷಯನಿಗ್ರಹದ ಮೂಲಕ ಮೌಢ್ಯದ ಕತ್ತಲೆಯನ್ನು ತ್ಯಜಿಸಿ ಉತ್ತರ[2] ಮಾರ್ಗವಾಗಿ ಉತ್ತಮ ಲೋಕಗಳಿಗೆ ಹೋಗಿದ್ದಾರೆ.

12019014a ದಕ್ಷಿಣೇನ ತು ಪಂಥಾನಂ ಯಂ ಭಾಸ್ವಂತಂ ಪ್ರಪಶ್ಯಸಿ|

12019014c ಏತೇ ಕ್ರಿಯಾವತಾಂ ಲೋಕಾ ಯೇ ಶ್ಮಶಾನಾನಿ ಭೇಜಿರೇ||

ದಕ್ಷಿಣ[3] ಮಾರ್ಗದಲ್ಲಿ ತೋರುವ ಪ್ರಕಾಶಮಾನ ಲೋಕಗಳು ಸದಾ ಶ್ಮಶಾನ ಯಾತ್ರೆಗಳನ್ನು ಮಾಡುತ್ತಿರುವ ಕ್ರಿಯಾವಂತರಿಗಿರುವವು.

12019015a ಅನಿರ್ದೇಶ್ಯಾ ಗತಿಃ ಸಾ ತು ಯಾಂ ಪ್ರಪಶ್ಯಂತಿ ಮೋಕ್ಷಿಣಃ|

12019015c ತಸ್ಮಾತ್ತ್ಯಾಗಃ[4] ಪ್ರಧಾನೇಷ್ಟಃ ಸ ತು ದುಃಖಃ ಪ್ರವೇದಿತುಮ್||

ಮೋಕ್ಷಿಣಿಗಳು ಯಾವ ಮಾರ್ಗದಲ್ಲಿ ಹೋದರೆನ್ನುವುದನ್ನು ನಿರ್ಧಿಷ್ಠವಾಗಿ ಹೇಳುವುದು ಕಷ್ಟ. ಆದುದರಿಂದ ತ್ಯಾಗವು ಪ್ರಧಾನವಾದುದು. ಆದರೆ ಅದನ್ನು ತಿಳಿದುಕೊಳ್ಳುವುದು ಕಷ್ಟ.

12019016a ಅನುಸೃತ್ಯ ತು ಶಾಸ್ತ್ರಾಣಿ ಕವಯಃ ಸಮವಸ್ಥಿತಾಃ|

12019016c ಅಪೀಹ ಸ್ಯಾದಪೀಹ ಸ್ಯಾತ್ಸಾರಾಸಾರದಿದೃಕ್ಷಯಾ||

ವಿದ್ವಾಂಸರು ಒಂದೆಡೆ ಸೇರಿ ಶಾಸ್ತ್ರಗಳ ಸಾರಾಸಾರಗಳನ್ನು ಪರಿಶೀಲಿಸಿ ಇವುಗಳಲ್ಲಿ ಯಾವುದರಿಂದ ಬ್ರಹ್ಮಸಾಕ್ಷಾತ್ಕಾರವು ಸಾಧ್ಯ ಎನ್ನುವುದನ್ನು ಅವಲೋಕಿಸಿದ್ದಾರೆ.

12019017a ವೇದವಾದಾನತಿಕ್ರಮ್ಯ ಶಾಸ್ತ್ರಾಣ್ಯಾರಣ್ಯಕಾನಿ ಚ|

12019017c ವಿಪಾಟ್ಯ ಕದಲೀಸ್ಕಂಧಂ ಸಾರಂ ದದೃಶಿರೇ ನ ತೇ||

ಕಡಿದುರುಳಿಸಿದ ಬಾಳೆಯ ದಿಂಡಿನಲ್ಲಿ ಸಾರವನ್ನು ಕಾಣದಂತೆ ವೇದವಾದಗಳನ್ನೂ ದಾಟಿ ಮುಂದೆ ಹೋಗಿ ಶಾಸ್ತ್ರ-ಅರಣ್ಯಕಗಳನ್ನು ಪರಿಶೀಲಿಸಿದರೂ ಅವುಗಳಲ್ಲಿ ಅವರು ಸಾರವನ್ನು ಕಾಣಲಿಲ್ಲ.

12019018a ಅಥೈಕಾಂತವ್ಯುದಾಸೇನ ಶರೀರೇ ಪಂಚಭೌತಿಕೇ|

12019018c ಇಚ್ಚಾದ್ವೇಷಸಮಾಯುಕ್ತಮಾತ್ಮಾನಂ ಪ್ರಾಹುರಿಂಗಿತೈಃ||

ಕೆಲವರು ಪಂಚಭೌತಿಕವಾದ ಈ ಶರೀರದಲ್ಲಿರುವ ಆತ್ಮನು ಸ್ವಭಾವತಃ ಇಚ್ಛೆ-ದ್ವೇಷಗಳಿಂದ ಕೂಡಿದವನು ಎಂದು ಹೇಳುತ್ತಾರೆ.

12019019a ಅಗ್ರಾಹ್ಯಶ್ಚಕ್ಷುಷಾ ಸೋಽಪಿ ಅನಿರ್ದೇಶ್ಯಂ ಚ ತದ್ ಗಿರಾ|

12019019c ಕರ್ಮಹೇತುಪುರಸ್ಕಾರಂ ಭೂತೇಷು ಪರಿವರ್ತತೇ||

ಆದರೆ ಈ ಆತ್ಮವು ಕಣ್ಣಿಗೆ ಕಾಣಿಸುವುದಿಲ್ಲ. ಮಾತಿನ ಮೂಲಕ ವರ್ಣಿಸಲಾಗುವುದಿಲ್ಲ. ಅದರ ಎದುರಿರುವ ಕರ್ಮಕಾರಣಗಳು ಜೀವಿಗಳಲ್ಲಿ ಪರಿವರ್ತನೆ ಹೊಂದುತ್ತಿರುತ್ತವೆಯೇ ಹೊರತು ಆತ್ಮವು ಪರಿವರ್ತಿತವಾಗದಕ್ಕುದಲ್ಲ.

12019020a ಕಲ್ಯಾಣಗೋಚರಂ ಕೃತ್ವಾ ಮನಸ್ತೃಷ್ಣಾಂ ನಿಗೃಹ್ಯ ಚ|

12019020c ಕರ್ಮಸಂತತಿಮುತ್ಸೃಜ್ಯ ಸ್ಯಾನ್ನಿರಾಲಂಬನಃ ಸುಖೀ||

ಮನಸ್ಸನ್ನು ಕಲ್ಯಾಣಮಾರ್ಗದಲ್ಲಿ ತೊಡಗಿಸಿ, ಮನಸ್ಸಿನ ಬಾಯಾರಿಕೆಯನ್ನು ನಿಗ್ರಹಿಸಿಕೊಂಡು ಕರ್ಮಗಳ ಪರಂಪರೆಯನ್ನು ತ್ಯಜಿಸಿ ನಿರಾಲಂಬನಾಗಿರುವವನೇ ಪರಮ ಸುಖಿಯು.

12019021a ಅಸ್ಮಿನ್ನೇವಂ ಸೂಕ್ಷ್ಮಗಮ್ಯೇ ಮಾರ್ಗೇ ಸದ್ಭಿರ್ನಿಷೇವಿತೇ|

12019021c ಕಥಮರ್ಥಮನರ್ಥಾಢ್ಯಮರ್ಜುನ ತ್ವಂ ಪ್ರಶಂಸಸಿ||

ಅರ್ಜುನ! ಸಾಧುಗಳು ಬಳಸುವ ಈ ಸೂಕ್ಷ್ಮಗಮ್ಯ ಮಾರ್ಗವಿರುವಾಗ ಅನರ್ಥವಾಗಿರುವ ಅರ್ಥವನ್ನೇಕೆ ನೀನು ಪ್ರಶಂಸಿಸುತ್ತಿರುವೆ?

12019022a ಪೂರ್ವಶಾಸ್ತ್ರವಿದೋ ಹ್ಯೇವಂ ಜನಾಃ ಪಶ್ಯಂತಿ ಭಾರತ|

12019022c ಕ್ರಿಯಾಸು ನಿರತಾ ನಿತ್ಯಂ ದಾನೇ ಯಜ್ಞೇ ಚ ಕರ್ಮಣಿ||

ಭಾರತ! ನಿತ್ಯವೂ ಯಜ್ಞ-ದಾನ ಕರ್ಮಗಳಲ್ಲಿ ನಿರತರಾಗಿದ್ದ ಹಿಂದಿನ ಶಾಸ್ತ್ರವಿದ್ವಾಂಸ ಜನರೂ ಈ ವಿಷಯದಲ್ಲಿ ಇದೇ ಅಭಿಪ್ರಾಯವನ್ನು ತಾಳಿದ್ದರು.

12019023a ಭವಂತಿ ಸುದುರಾವರ್ತಾ ಹೇತುಮಂತೋಽಪಿ ಪಂಡಿತಾಃ|

12019023c ದೃಢಪೂರ್ವಶ್ರುತಾ ಮೂಢಾ ನೈತದಸ್ತೀತಿ ವಾದಿನಃ||

ಆದರೆ ಕಾರಣಗಳನ್ನು ತಿಳಿದುಕೊಂಡಿರುವ ಪಂಡಿತರೂ ಕೂಡ ತಮ್ಮ ಹಿಂದಿನ ದೃಢಸಂಸ್ಕಾರದಿಂದ ಪ್ರಭಾವಿತರಾಗಿ ದುರಾವರ್ತ ಮೂಢರಾಗಿ ಇದು ಹಾಗಲ್ಲ ಎಂದು ವಾದಿಸುತ್ತಾರೆ.

12019024a ಅಮೃತಸ್ಯಾವಮಂತಾರೋ ವಕ್ತಾರೋ ಜನಸಂಸದಿ|

12019024c ಚರಂತಿ ವಸುಧಾಂ ಕೃತ್ಸ್ನಾಂ ವಾವದೂಕಾ ಬಹುಶ್ರುತಾಃ||

ಆತ್ಮನ ಅಮೃತತ್ವವನ್ನು ಒಪ್ಪಿಕೊಳ್ಳದೇ ಬಹುವಿದ್ವಾಂಸರೂ ಜನಸಂಸದಿಗಳಲ್ಲಿ ಅನೃತವಾದಿಗಳಾಗಿ ಇಡೀ ಭೂಮಿಯನ್ನು ಸಂಚರಿಸುತ್ತಿರುತ್ತಾರೆ.

12019025a ಯಾನ್ವಯಂ ನಾಭಿಜಾನೀಮಃ ಕಸ್ತಾನ್ ಜ್ಞಾತುಮಿಹಾರ್ಹತಿ|

12019025c ಏವಂ ಪ್ರಾಜ್ಞಾನ್ಸತಶ್ಚಾಪಿ ಮಹತಃ ಶಾಸ್ತ್ರವಿತ್ತಮಾನ್||

ಅಂಥವರನ್ನು ನಾವೇ ತಿಳಿಯಲಾರೆವು ಎಂದಾದಮೇಲೆ ಸಾಧಾರಣ ಮನುಷ್ಯರು ತಾನೇ ಹೇಗೆ ತಿಳಿದುಕೊಳ್ಳುತ್ತಾರೆ? ಮಹಾ ಪ್ರಾಜ್ಞರಾದ ಸಾಧು ಶಾಸ್ತ್ರಪಂಡಿತರೂ ಇದ್ದಾರೆ.

12019026a ತಪಸಾ ಮಹದಾಪ್ನೋತಿ ಬುದ್ಧ್ಯಾ ವೈ ವಿಂದತೇ ಮಹತ್|

12019026c ತ್ಯಾಗೇನ ಸುಖಮಾಪ್ನೋತಿ ಸದಾ ಕೌಂತೇಯ ಧರ್ಮವಿತ್||

ಕೌಂತೇಯ! ಬುದ್ಧಿಯಿಂದ ಮಹತ್ತನ್ನು ತಿಳಿದುಕೊಂಡವನು ಮಹಾ ತಪಸ್ಸಿನ ಫಲವನ್ನು ಪಡೆಯುತ್ತಾನೆ. ತತ್ತ್ವವಿದನು ಸದಾ ತ್ಯಾಗದಿಂದ ಸುಖವನ್ನು ಹೊಂದುತ್ತಾನೆ.””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಯುಧಿಷ್ಠಿರವಾಕ್ಯೇ ಏಕೋನವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಯುಧಿಷ್ಠಿರವಾಕ್ಯ ಎನ್ನುವ ಹತ್ತೊಂಭತ್ತನೇ ಅಧ್ಯಾಯವು.

[1] ಭಾರತದರ್ಶನದಲ್ಲಿ ಅಜಾತಶತ್ರವೋ ಎಂದಿದೆ.

[2] ದೇವಯಾನದ ಮೂಲಕ

[3] ಪಿತೃಮಾರ್ಗ

[4] ಭಾರತ ದರ್ಶನದಲ್ಲಿ ತಸ್ಮಾದ್ಯೋಗಃ ಎಂದಿದೆ.

Comments are closed.