Mahaprasthanika Parva: Chapter 2

ಮಹಾಪ್ರಸ್ಥಾನಿಕ ಪರ್ವ

ಭೀಮಾದಿಗಳ ಪತನ (೧-೨೬).

17002001 ವೈಶಂಪಾಯನ ಉವಾಚ|

17002001a ತತಸ್ತೇ ನಿಯತಾತ್ಮಾನ ಉದೀಚೀಂ ದಿಶಮಾಸ್ಥಿತಾಃ|

17002001c ದದೃಶುರ್ಯೋಗಯುಕ್ತಾಶ್ಚ ಹಿಮವಂತಂ ಮಹಾಗಿರಿಮ್||

ವೈಶಂಪಾಯನನು ಹೇಳಿದನು: “ನಿಯತಾತ್ಮರೂ ಯೋಗಯುಕ್ತರೂ ಆಗಿ ಉತ್ತರ ದಿಕ್ಕಿನಲ್ಲಿ ಪ್ರಯಾಣಮಾಡುತ್ತಿದ್ದ ಅವರು ಮಹಾಗಿರಿ ಹಿಮಾಲಯವನ್ನು ಕಂಡರು.

17002002a ತಂ ಚಾಪ್ಯತಿಕ್ರಮಂತಸ್ತೇ ದದೃಶುರ್ವಾಲುಕಾರ್ಣವಮ್|

17002002c ಅವೈಕ್ಷಂತ ಮಹಾಶೈಲಂ ಮೇರುಂ ಶಿಖರಿಣಾಂ ವರಮ್||

ಅದನ್ನೂ ಅತಿಕ್ರಮಿಸಿ ಹೋದ ಅವರು ಮರಳಿನ ಮರುಭೂಮಿಯೊಂದನ್ನು ನೋಡಿದರು. ಅದಕ್ಕಿಂತಲೂ ಆಚೆ ಮಹಾಶೈಲ, ಪರ್ವತಶ್ರೇಷ್ಠ ಮೇರುವನ್ನು ನೋಡಿದರು.

17002003a ತೇಷಾಂ ತು ಗಚ್ಚತಾಂ ಶೀಘ್ರಂ ಸರ್ವೇಷಾಂ ಯೋಗಧರ್ಮಿಣಾಮ್|

17002003c ಯಾಜ್ಞಸೇನೀ ಭ್ರಷ್ಟಯೋಗಾ ನಿಪಪಾತ ಮಹೀತಲೇ||

ಆ ಎಲ್ಲ ಯೋಗಧರ್ಮಿಗಳೂ ಹಾಗೆ ಶೀಘ್ರವಾಗಿ ಹೋಗುತ್ತಿರಲು, ಯೋಗಭ್ರಷ್ಟಳಾದ ಯಾಜ್ಞಸೇನಿಯು ಕೆಳಕ್ಕೆ ಬಿದ್ದಳು.

17002004a ತಾಂ ತು ಪ್ರಪತಿತಾಂ ದೃಷ್ಟ್ವಾ ಭೀಮಸೇನೋ ಮಹಾಬಲಃ|

17002004c ಉವಾಚ ಧರ್ಮರಾಜಾನಂ ಯಾಜ್ಞಸೇನೀಮವೇಕ್ಷ್ಯ ಹ||

ಹಾಗೆ ಕೆಳಕ್ಕೆ ಬಿದ್ದ ಯಾಜ್ಞಸೇನಿಯನ್ನು ನೋಡಿ ಮಹಾಬಲ ಭೀಮಸೇನನು ಧರ್ಮರಾಜನಿಗೆ ಇಂತೆಂದನು:

17002005a ನಾಧರ್ಮಶ್ಚರಿತಃ ಕಶ್ಚಿದ್ರಾಜಪುತ್ರ್ಯಾ ಪರಂತಪ|

17002005c ಕಾರಣಂ ಕಿಂ ನು ತದ್ರಾಜನ್ಯತ್ಕೃಷ್ಣಾ ಪತಿತಾ ಭುವಿ||

“ಪರಂತಪ! ರಾಜಪುತ್ರಿಯು ಎಂದೂ ಅಧರ್ಮದಿಂದ ನಡೆದುಕೊಂಡಿರಲಿಲ್ಲ. ರಾಜನ್! ಆದರೂ ಕೃಷ್ಣೆಯು ಏಕೆ ಬಿದ್ದಳು?”

17002006 ಯುಧಿಷ್ಠಿರ ಉವಾಚ|

17002006a ಪಕ್ಷಪಾತೋ ಮಹಾನಸ್ಯಾ ವಿಶೇಷೇಣ ಧನಂಜಯೇ|

17002006c ತಸ್ಯೈತತ್ಫಲಮದ್ಯೈಷಾ ಭುಂಕ್ತೇ ಪುರುಷಸತ್ತಮ||

ಯುಧಿಷ್ಠಿರನು ಹೇಳಿದನು: “ಧನಂಜಯನಲ್ಲಿ ವಿಶೇಷವಾಗಿ ಇವಳ ಪಕ್ಷಪಾತವಿತ್ತು. ಪುರುಷಸತ್ತಮ! ಅದರ ಫಲವನ್ನೇ ಇಂದು ಅವಳು ಅನುಭವಿಸಿದ್ದಾಳೆ.””

17002007 ವೈಶಂಪಾಯನ ಉವಾಚ|

17002007a ಏವಮುಕ್ತ್ವಾನವೇಕ್ಷ್ಯೈನಾಂ ಯಯೌ ಧರ್ಮಸುತೋ ನೃಪಃ|

17002007c ಸಮಾಧಾಯ ಮನೋ ಧೀಮಾನ್ಧರ್ಮಾತ್ಮಾ ಪುರುಷರ್ಷಭಃ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಅವಳನ್ನು ನೋಡದೇ ಧರ್ಮಸುತ ನೃಪ ಧೀಮಾನ್ ಧರ್ಮಾತ್ಮ ಪುರುಷರ್ಷಭನು ಮನಸ್ಸನ್ನು ಕೇಂದ್ರೀಕರಿಸಿಟ್ಟುಕೊಂಡು ಮುಂದೆ ಹೋದನು.

17002008a ಸಹದೇವಸ್ತತೋ ಧೀಮಾನ್ನಿಪಪಾತ ಮಹೀತಲೇ|

17002008c ತಂ ಚಾಪಿ ಪತಿತಂ ದೃಷ್ಟ್ವಾ ಭೀಮೋ ರಾಜಾನಮಬ್ರವೀತ್||

ಅನಂತರ ಧೀಮಾನ್ ಸಹದೇವನು ಮಹೀತಲದಲ್ಲಿ ಬಿದ್ದನು. ಅವನೂ ಬಿದ್ದುದನ್ನು ಕಂಡ ಭೀಮನು ರಾಜನಿಗೆ ಹೇಳಿದನು:

17002009a ಯೋಽಯಮಸ್ಮಾಸು ಸರ್ವೇಷು ಶುಶ್ರೂಷುರನಹಂಕೃತಃ|

17002009c ಸೋಽಯಂ ಮಾದ್ರವತೀಪುತ್ರಃ ಕಸ್ಮಾನ್ನಿಪತಿತೋ ಭುವಿ||

“ಇವನು ಅಹಂಕಾರವಿಲ್ಲದೇ ನಮ್ಮೆಲ್ಲರ ಶುಶ್ರೂಷೆಮಾಡಿದನು. ಏಕೆ ಈ ಮಾದ್ರವತೀಪುತ್ರನು ಭೂಮಿಯ ಮೇಲೆ ಬಿದ್ದಿದ್ದಾನೆ?”

17002010 ಯುಧಿಷ್ಠಿರ ಉವಾಚ|

17002010a ಆತ್ಮನಃ ಸದೃಶಂ ಪ್ರಾಜ್ಞಂ ನೈಷೋಽಮನ್ಯತ ಕಂ ಚನ|

17002010c ತೇನ ದೋಷೇಣ ಪತಿತಸ್ತಸ್ಮಾದೇಷ ನೃಪಾತ್ಮಜಃ||

ಯುಧಿಷ್ಠಿರನು ಹೇಳಿದನು: “ಇವನು ತನಗೆ ಸಮಾನ ಪ್ರಾಜ್ಞನು ಬೇರೆ ಯಾರೂ ಇಲ್ಲವೆಂದು ಅಭಿಪ್ರಾಯಪಟ್ಟಿದ್ದನು. ಆ ದೋಷದಿಂದಲೇ ಈ ನೃಪತಾತ್ಮಜನು ಬಿದ್ದಿದ್ದಾನೆ.””

17002011 ವೈಶಂಪಾಯನ ಉವಾಚ|

17002011a ಇತ್ಯುಕ್ತ್ವಾ ತು ಸಮುತ್ಸೃಜ್ಯ ಸಹದೇವಂ ಯಯೌ ತದಾ|

17002011c ಭ್ರಾತೃಭಿಃ ಸಹ ಕೌಂತೇಯಃ ಶುನಾ ಚೈವ ಯುಧಿಷ್ಠಿರಃ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಸಹದೇವನನ್ನು ಅಲ್ಲಿಯೇ ಬಿಟ್ಟು ಸಹೋದರರು ಮತ್ತು ನಾಯಿಯೊಂದಿಗೆ ಕೌಂತೇಯ ಯುಧಿಷ್ಠಿರನು ಮುಂದುವರೆದನು.

17002012a ಕೃಷ್ಣಾಂ ನಿಪತಿತಾಂ ದೃಷ್ಟ್ವಾ ಸಹದೇವಂ ಚ ಪಾಂಡವಮ್|

17002012c ಆರ್ತೋ ಬಂಧುಪ್ರಿಯಃ ಶೂರೋ ನಕುಲೋ ನಿಪಪಾತ ಹ||

ಕೃಷ್ಣೆ ಮತ್ತು ಪಾಂಡವ ಸಹದೇವರು ಬಿದ್ದುದನ್ನು ನೋಡಿ ಆರ್ತನಾದ ಬಂಧುಪ್ರಿಯ ಶೂರ ನಕುಲನೂ ಬಿದ್ದನು.

17002013a ತಸ್ಮಿನ್ನಿಪತಿತೇ ವೀರೇ ನಕುಲೇ ಚಾರುದರ್ಶನೇ|

17002013c ಪುನರೇವ ತದಾ ಭೀಮೋ ರಾಜಾನಮಿದಮಬ್ರವೀತ್||

ಆ ಸುಂದರ ವೀರ ನಕುಲನು ಬೀಳಲು ಭೀಮನು ಪುನಃ ರಾಜನಿಗೆ ಹೇಳಿದನು:

17002014a ಯೋಽಯಮಕ್ಷತಧರ್ಮಾತ್ಮಾ ಭ್ರಾತಾ ವಚನಕಾರಕಃ|

17002014c ರೂಪೇಣಾಪ್ರತಿಮೋ ಲೋಕೇ ನಕುಲಃ ಪತಿತೋ ಭುವಿ||

“ಈ ಭ್ರಾತನು ಧರ್ಮಾತ್ಮನಾಗಿದ್ದು ಧರ್ಮದಿಂದ ಸ್ವಲ್ಪವೂ ಚ್ಯುತನಾಗಿರಲಿಲ್ಲ. ಹೇಳಿದ್ದನ್ನು ಮಾಡುತ್ತಿದ್ದನು. ಲೋಕದಲ್ಲಿ ಅಪ್ರತಿಮ ರೂಪವಂತನಾಗಿದ್ದನು. ಅಂಥಹ ನಕುಲನು ಭೂಮಿಯ ಮೇಲೆ ಬಿದ್ದಿದ್ದಾನೆ.”

17002015a ಇತ್ಯುಕ್ತೋ ಭೀಮಸೇನೇನ ಪ್ರತ್ಯುವಾಚ ಯುಧಿಷ್ಠಿರಃ|

17002015c ನಕುಲಂ ಪ್ರತಿ ಧರ್ಮಾತ್ಮಾ ಸರ್ವಬುದ್ಧಿಮತಾಂ ವರಃ||

ಭೀಮಸೇನನು ಹೀಗೆ ಹೇಳಲು ಧರ್ಮಾತ್ಮ ಸರ್ವಬುದ್ಧಿವಂತರಲ್ಲಿ ಶ್ರೇಷ್ಠ ಯುಧಿಷ್ಠಿರನು ನಕುಲನ ಕುರಿತು ಹೀಗೆ ಉತ್ತರಿಸಿದನು:

17002016a ರೂಪೇಣ ಮತ್ಸಮೋ ನಾಸ್ತಿ ಕಶ್ಚಿದಿತ್ಯಸ್ಯ ದರ್ಶನಮ್|

17002016c ಅಧಿಕಶ್ಚಾಹಮೇವೈಕ ಇತ್ಯಸ್ಯ ಮನಸಿ ಸ್ಥಿತಮ್||

“ರೂಪದಲ್ಲಿ ತನ್ನ ಸಮನಾಗಿರುವವರು ಯಾರೂ ಇಲ್ಲವೆಂದೂ, ರೂಪದಲ್ಲಿ ತಾನೊಬ್ಬನೇ ಅಧಿಕನೆಂದೂ ಇವನ ನಂಬಿಕೆಯಾಗಿತ್ತು.

17002017a ನಕುಲಃ ಪತಿತಸ್ತಸ್ಮಾದಾಗಚ್ಚ ತ್ವಂ ವೃಕೋದರ|

17002017c ಯಸ್ಯ ಯದ್ವಿಹಿತಂ ವೀರ ಸೋಽವಶ್ಯಂ ತದುಪಾಶ್ನುತೇ||

ಆದುದರಿಂದ ನಕುಲನು ಬಿದ್ದಿದ್ದಾನೆ. ಬಾ ವೃಕೋದರ! ವೀರ! ಯಾರಿಗೆ ಏನು ವಿಧಿವಿಹಿತವಾಗಿದೆಯೋ ಅದನ್ನು ಅವನು ಅವಶ್ಯವಾಗಿ ಪಡೆಯುತ್ತಾನೆ!”

17002018a ತಾಂಸ್ತು ಪ್ರಪತಿತಾನ್ದೃಷ್ಟ್ವಾ ಪಾಂಡವಃ ಶ್ವೇತವಾಹನಃ|

17002018c ಪಪಾತ ಶೋಕಸಂತಪ್ತಸ್ತತೋಽನು ಪರವೀರಹಾ||

ಅವರು ಕೆಳಗೆ ಬಿದ್ದುದನ್ನು ನೋಡಿ ಪಾಂಡವ ಶ್ವೇತವಾಹನ ಪರವೀರಹ ಅರ್ಜುನನೂ ಶೋಕಸಂತಪ್ತನಾಗಿ ಕೆಳಗೆ ಬಿದ್ದನು.

17002019a ತಸ್ಮಿಂಸ್ತು ಪುರುಷವ್ಯಾಘ್ರೇ ಪತಿತೇ ಶಕ್ರತೇಜಸಿ|

17002019c ಮ್ರಿಯಮಾಣೇ ದುರಾಧರ್ಷೇ ಭೀಮೋ ರಾಜಾನಮಬ್ರವೀತ್||

ಆ ಶಕ್ರತೇಜಸ್ವಿ ದುರಾಧರ್ಷ ಪುರುಷವ್ಯಾಘ್ರನೂ ಸತ್ತು ಬೀಳಲು ಭೀಮನು ರಾಜನಿಗೆ ಹೇಳಿದನು:

17002020a ಅನೃತಂ ನ ಸ್ಮರಾಮ್ಯಸ್ಯ ಸ್ವೈರೇಷ್ವಪಿ ಮಹಾತ್ಮನಃ|

17002020c ಅಥ ಕಸ್ಯ ವಿಕಾರೋಽಯಂ ಯೇನಾಯಂ ಪತಿತೋ ಭುವಿ||

“ಈ ಮಹಾತ್ಮನೂ ಅನೃತವಾಡಿದುದು ನನ್ನ ನೆನಪಿಗೆ ಬರುತ್ತಿಲ್ಲ. ಅವನು ಏಕೆ ಈ ರೀತಿಯ ವಿಕಾರನಾಗಿ ಭೂಮಿಯಮೇಲೆ ಬಿದ್ದನು?”

17002021 ಯುಧಿಷ್ಠಿರ ಉವಾಚ|

17002021a ಏಕಾಹ್ನಾ ನಿರ್ದಹೇಯಂ ವೈ ಶತ್ರೂನಿತ್ಯರ್ಜುನೋಽಬ್ರವೀತ್|

17002021c ನ ಚ ತತ್ಕೃತವಾನೇಷ ಶೂರಮಾನೀ ತತೋಽಪತತ್||

ಯುಧಿಷ್ಠಿರನು ಹೇಳಿದನು: “ಒಂದೇ ದಿನದಲ್ಲಿ ನಾನು ಶತ್ರುಗಳನ್ನು ಜಯಿಸುತ್ತೇನೆ!” ಎಂದು ಅರ್ಜುನನು ಹೇಳಿದ್ದನು. ಆ ಶೂರಮಾನಿನಿಯು ಹಾಗೆ ಮಾಡದೇ ಇದ್ದುದರಿಂದ ಈಗ ಬಿದ್ದಿದ್ದಾನೆ.

17002022a ಅವಮೇನೇ ಧನುರ್ಗ್ರಾಹಾನೇಷ ಸರ್ವಾಂಶ್ಚ ಫಲ್ಗುನಃ|

17002022c ಯಥಾ ಚೋಕ್ತಂ ತಥಾ ಚೈವ ಕರ್ತವ್ಯಂ ಭೂತಿಮಿಚ್ಚತಾ||

ಫಲ್ಗುನನು ಧನುರ್ಧಾರಿಗಳೆಲ್ಲರನ್ನೂ ಕೀಳಾಗಿ ಕಾಣುತ್ತಿದ್ದನು. ವೃದ್ಧಿಯನ್ನು ಬಯಸಿದವನು ತಾನು ಹೇಳಿದಂತೆ ಮಾಡಬೇಕಾಗುತ್ತದೆ.””

17002023 ವೈಶಂಪಾಯನ ಉವಾಚ|

17002023a ಇತ್ಯುಕ್ತ್ವಾ ಪ್ರಸ್ಥಿತೋ ರಾಜಾ ಭೀಮೋಽಥ ನಿಪಪಾತ ಹ|

17002023c ಪತಿತಶ್ಚಾಬ್ರವೀದ್ಭೀಮೋ ಧರ್ಮರಾಜಂ ಯುಧಿಷ್ಠಿರಮ್||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ರಾಜನು ಮುಂದುವರೆಯಲು ಭೀಮನೂ ಕೆಳಗೆ ಬಿದ್ದನು. ಕೆಳಗೆ ಬಿದ್ದ ಭೀಮನು ಧರ್ಮರಾಜ ಯುಧಿಷ್ಠಿರನಿಗೆ ಹೇಳಿದನು:

17002024a ಭೋ ಭೋ ರಾಜನ್ನವೇಕ್ಷಸ್ವ ಪತಿತೋಽಹಂ ಪ್ರಿಯಸ್ತವ|

17002024c ಕಿಂನಿಮಿತ್ತಂ ಚ ಪತನಂ ಬ್ರೂಹಿ ಮೇ ಯದಿ ವೇತ್ಥ ಹ||

“ಭೋ ಭೋ! ರಾಜನ್! ನಿನ್ನ ಪ್ರಿಯನಾದ ನಾನೂ ಬಿದ್ದಿದ್ದೇನೆ. ನಿನಗೆ ತಿಳಿದಿದ್ದರೆ ಯಾವ ಕಾರಣದಿಂದ ನಾನು ಬಿದ್ದೆ ಎನ್ನುವುದನ್ನೂ ಹೇಳು!”

17002025 ಯುಧಿಷ್ಠಿರ ಉವಾಚ|

17002025a ಅತಿಭುಕ್ತಂ ಚ ಭವತಾ ಪ್ರಾಣೇನ ಚ ವಿಕತ್ಥಸೇ|

17002025c ಅನವೇಕ್ಷ್ಯ ಪರಂ ಪಾರ್ಥ ತೇನಾಸಿ ಪತಿತಃ ಕ್ಷಿತೌ||

ಯುಧಿಷ್ಠಿರನು ಹೇಳಿದನು: “ನೀನು ತುಂಬಾ ತಿನ್ನುತ್ತಿದ್ದೆ ಮತ್ತು ನಿನ್ನ ಶಕ್ತಿಯ ಕುರಿತು ಕೊಚ್ಚಿಕೊಳ್ಳುತ್ತಿದ್ದೆ. ಪಾರ್ಥ! ಇತರರನ್ನು ಕೀಳಾಗಿ ಕಾಣುತ್ತಿದ್ದೆ. ಇದರಿಂದಾಗಿ ನೀನು ಭೂಮಿಯಲ್ಲಿ ಬಿದ್ದಿದ್ದೀಯೆ!””

17002026 ವೈಶಂಪಾಯನ ಉವಾಚ|

17002026a ಇತ್ಯುಕ್ತ್ವಾ ತಂ ಮಹಾಬಾಹುರ್ಜಗಾಮಾನವಲೋಕಯನ್|

17002026c ಶ್ವಾ ತ್ವೇಕೋಽನುಯಯೌ ಯಸ್ತೇ ಬಹುಶಃ ಕೀರ್ತಿತೋ ಮಯಾ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಆ ಮಹಾಬಾಹುವು ತಿರುಗಿ ನೋಡದೇ ಮುಂದುವರೆದನು. ನಾನು ಮೊದಲೇ ಬಹಳವಾಗಿ ಹೇಳಿದ್ದಂತೆ ಈಗ ಆ ನಾಯಿಯೊಂದೇ ಅವನನ್ನು ಅನುಸರಿಸಿ ಹೋಗುತ್ತಿತ್ತು.”

ಇತಿ ಶ್ರೀಮಹಾಭಾರತೇ ಮಹಾಪ್ರಸ್ಥಾನಿಕೇ ಪರ್ವಣಿ ದ್ರೌಪದ್ಯಾದಿಪತನೇ ದ್ವಿತೀಯೋಽಧ್ಯಾಯಃ ||

ಇದು ಶ್ರೀಮಹಾಭಾರತದಲ್ಲಿ ಮಹಾಪ್ರಸ್ಥಾನಿಕಪರ್ವದಲ್ಲಿ ದ್ರೌಪದ್ಯಾದಿಪತನ ಎನ್ನುವ ಎರಡನೇ ಅಧ್ಯಾಯವು.

Related image

Comments are closed.