Mahaprasthanika Parva: Chapter 1

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಮಹಾಪ್ರಸ್ಥಾನಿಕ ಪರ್ವ

ಪಾಂಡವಪ್ರವ್ರಜನ

ಹಸ್ತಿನಾಪುರದಲ್ಲಿ ಪರಿಕ್ಷಿತನನ್ನು ಅಭಿಷೇಕಿಸಿ ಪಾಂಡವರು ದ್ರೌಪದಿಯೊಂದಿಗೆ ವಲ್ಕಲಗಳನ್ನು ಧರಿಸಿ ಮಹಾಪ್ರಸ್ಥಾನವನ್ನು ಕೈಗೊಂಡಿದುದು (೧-೨೬). ಮಾರ್ಗದಲ್ಲಿ ಅವರನ್ನು ಅಗ್ನಿಯು ತಡೆದು ಗಾಂಡೀವ-ಬತ್ತಳಿಕೆಗಳನ್ನು ವಿಸರ್ಜಿಸಬೇಕೆಂದು ಕೇಳಲು ಅರ್ಜುನನು ಅವುಗಳನ್ನು ಸಮುದ್ರದಲ್ಲಿ ವಿಸರ್ಜಿಸಿದುದು (೨೭-೪೪).

17001001 ಜನಮೇಜಯ ಉವಾಚ|

17001001a ಏವಂ ವೃಷ್ಣ್ಯಂಧಕಕುಲೇ ಶ್ರುತ್ವಾ ಮೌಸಲಮಾಹವಮ್|

17001001c ಪಾಂಡವಾಃ ಕಿಮಕುರ್ವಂತ ತಥಾ ಕೃಷ್ಣೇ ದಿವಂ ಗತೇ||

ಜನಮೇಜಯನು ಹೇಳಿದನು: “ವೃಷ್ಣಿ-ಅಂಧಕ ಕುಲಗಳಲ್ಲಿ ಈ ರೀತಿ ನಡೆದ ಮುಸುಲ ಯುದ್ಧದ ಕುರಿತು ಮತ್ತು ಕೃಷ್ಣನು ದಿವಂಗತನಾದುದನ್ನು ಕೇಳಿದ ಪಾಂಡವರು ಏನು ಮಾಡಿದರು?”

17001002 ವೈಶಂಪಾಯನ ಉವಾಚ|

17001002a ಶ್ರುತ್ವೈವ ಕೌರವೋ ರಾಜಾ ವೃಷ್ಣೀನಾಂ ಕದನಂ ಮಹತ್|

17001002c ಪ್ರಸ್ಥಾನೇ ಮತಿಮಾಧಾಯ ವಾಕ್ಯಮರ್ಜುನಮಬ್ರವೀತ್||

ವೈಶಂಪಾಯನನು ಹೇಳಿದನು: “ವೃಷ್ಣಿಗಳ ಮಹಾ ಕದನದ ಕುರಿತು ಕೇಳುತ್ತಲೇ ಕೌರವ ರಾಜನು ಪ್ರಸ್ಥಾನದ ಕುರಿತು ನಿಶ್ಚಯಿಸಿ ಅರ್ಜುನನಿಗೆ ಇಂತೆಂದನು:

17001003a ಕಾಲಃ ಪಚತಿ ಭೂತಾನಿ ಸರ್ವಾಣ್ಯೇವ ಮಹಾಮತೇ|

17001003c ಕರ್ಮನ್ಯಾಸಮಹಂ ಮನ್ಯೇ ತ್ವಮಪಿ ದ್ರಷ್ಟುಮರ್ಹಸಿ||

“ಮಹಾಮತೇ! ಕಾಲವು ಸರ್ವ ಭೂತಗಳನ್ನೂ ಬೇಯಿಸುತ್ತದೆ. ಕರ್ಮನ್ಯಾಸಮಾಡಬೇಕೆಂದು ನನಗನ್ನಿಸುತ್ತದೆ. ನೀನೂ ಕೂಡ ಇದರ ಕುರಿತು ಯೋಚಿಸಬೇಕಾಗಿದೆ.”

17001004a ಇತ್ಯುಕ್ತಃ ಸ ತು ಕೌಂತೇಯಃ ಕಾಲಃ ಕಾಲ ಇತಿ ಬ್ರುವನ್|

17001004c ಅನ್ವಪದ್ಯತ ತದ್ವಾಕ್ಯಂ ಭ್ರಾತುರ್ಜ್ಯೇಷ್ಠಸ್ಯ ವೀರ್ಯವಾನ್||

ಇದನ್ನು ಕೇಳಿದ ವೀರ್ಯವಾನ್ ಕೌಂತೇಯನು “ಕಾಲವೇ ಕಾಲ!” ಎಂದು ಹೇಳುತ್ತಾ ಜ್ಯೇಷ್ಠ ಭ್ರಾತರನ ಆ ಮಾತನ್ನು ಒಪ್ಪಿಕೊಂಡನು.

17001005a ಅರ್ಜುನಸ್ಯ ಮತಂ ಜ್ಞಾತ್ವಾ ಭೀಮಸೇನೋ ಯಮೌ ತಥಾ|

17001005c ಅನ್ವಪದ್ಯಂತ ತದ್ವಾಕ್ಯಂ ಯದುಕ್ತಂ ಸವ್ಯಸಾಚಿನಾ||

ಅರ್ಜುನನ ಮತವನ್ನು ಅರಿತ ಭೀಮಸೇನ ಮತ್ತು ಯಮಳರು ಸವ್ಯಸಾಚಿಯು ಆಡಿದ ಆ ಮಾತನ್ನು ಒಪ್ಪಿಕೊಂಡರು.

17001006a ತತೋ ಯುಯುತ್ಸುಮಾನಾಯ್ಯ ಪ್ರವ್ರಜನ್ಧರ್ಮಕಾಮ್ಯಯಾ|

17001006c ರಾಜ್ಯಂ ಪರಿದದೌ ಸರ್ವಂ ವೈಶ್ಯಾಪುತ್ರೇ ಯುಧಿಷ್ಠಿರಃ||

ಧರ್ಮಕಾಮನೆಯಿಂದ ಹೊರಟ ಯುಧಿಷ್ಠಿರನು ವೈಶ್ಯಾಪುತ್ರ ಯುಯುತ್ಸುವನ್ನು ಕರೆದು ಅವನಿಗೆ ರಾಜ್ಯವೆಲ್ಲವನ್ನೂ ಕೊಟ್ಟನು.

17001007a ಅಭಿಷಿಚ್ಯ ಸ್ವರಾಜ್ಯೇ ತು ತಂ ರಾಜಾನಂ ಪರಿಕ್ಷಿತಮ್|

17001007c ದುಃಖಾರ್ತಶ್ಚಾಬ್ರವೀದ್ರಾಜಾ ಸುಭದ್ರಾಂ ಪಾಂಡವಾಗ್ರಜಃ||

ಸ್ವರಾಜ್ಯದಲ್ಲಿ ರಾಜ ಪರಿಕ್ಷಿತನನ್ನು ಅಭಿಷೇಕಿಸಿ, ದುಃಖಾರ್ತನಾದ ಪಾಂಡವಾಗ್ರಜ ರಾಜನು ಸುಭದ್ರೆಗೆ ಹೇಳಿದನು:

17001008a ಏಷ ಪುತ್ರಸ್ಯ ತೇ ಪುತ್ರಃ ಕುರುರಾಜೋ ಭವಿಷ್ಯತಿ|

17001008c ಯದೂನಾಂ ಪರಿಶೇಷಶ್ಚ ವಜ್ರೋ ರಾಜಾ ಕೃತಶ್ಚ ಹ||

“ಈ ನಿನ್ನ ಮಗನ ಮಗನು ಕುರುರಾಜನಾಗುತ್ತಾನೆ. ಯದುಗಳಲ್ಲಿ ಕೊನೆಯವನಾಗಿ ಉಳಿದುಕೊಂಡಿರುವ ಈ ವಜ್ರನನ್ನೂ ರಾಜನನ್ನಾಗಿ ಮಾಡಿಯಾಗಿದೆ.

17001009a ಪರಿಕ್ಷಿದ್ಧಾಸ್ತಿನಪುರೇ ಶಕ್ರಪ್ರಸ್ಥೇ ತು ಯಾದವಃ|

17001009c ವಜ್ರೋ ರಾಜಾ ತ್ವಯಾ ರಕ್ಷ್ಯೋ ಮಾ ಚಾಧರ್ಮೇ ಮನಃ ಕೃಥಾಃ||

ಪರಿಕ್ಷಿತನು ಹಸ್ತಿನಾಪುರದಲ್ಲಿಯೂ ಯಾದವ ವಜ್ರನು ಇಂದ್ರಪ್ರಸ್ಥದಲ್ಲಿಯೂ ರಾಜ್ಯವಾಳಲಿ. ರಾಜಾ ವಜ್ರನು ನಿನ್ನ ರಕ್ಷಣೆಯಲ್ಲಿರಲಿ. ಅಧರ್ಮವೆಸಗುವ ಯೋಚನೆಯನ್ನೂ ಮಾಡಬೇಡ!”

17001010a ಇತ್ಯುಕ್ತ್ವಾ ಧರ್ಮರಾಜಃ ಸ ವಾಸುದೇವಸ್ಯ ಧೀಮತಃ|

17001010c ಮಾತುಲಸ್ಯ ಚ ವೃದ್ಧಸ್ಯ ರಾಮಾದೀನಾಂ ತಥೈವ ಚ||

17001011a ಮಾತೃಭಿಃ ಸಹ ಧರ್ಮಾತ್ಮಾ ಕೃತ್ವೋದಕಮತಂದ್ರಿತಃ|

17001011c ಶ್ರಾದ್ಧಾನ್ಯುದ್ದಿಶ್ಯ ಸರ್ವೇಷಾಂ ಚಕಾರ ವಿಧಿವತ್ತದಾ||

ಹೀಗೆ ಹೇಳಿ ಧರ್ಮಾತ್ಮ ಧರ್ಮರಾಜನು ತಾಯಿಯೊಂದಿಗೆ ಧೀಮತ ವಾಸುದೇವನ, ವೃದ್ಧ ಸೋದರ ಮಾವನ, ರಾಮಾದಿಗಳೆಲ್ಲರನ್ನೂ ಉದ್ದೇಶಿಸಿ ವಿಧಿವತ್ತಾಗಿ ಶುದ್ಧೋದಕಗಳಿಂದ ಶ್ರಾದ್ಧಗಳನ್ನು ನೆರವೇರಿಸಿದನು.

17001012a ದದೌ ರತ್ನಾನಿ ವಾಸಾಂಸಿ ಗ್ರಾಮಾನಶ್ವಾನ್ರಥಾನಪಿ|

17001012c ಸ್ತ್ರಿಯಶ್ಚ ದ್ವಿಜಮುಖ್ಯೇಭ್ಯೋ ಗವಾಂ ಶತಸಹಸ್ರಶಃ||

ದ್ವಿಜಮುಖ್ಯರಿಗೆ ರತ್ನಗಳನ್ನೂ, ವಸ್ತ್ರಗಳನ್ನೂ, ಗ್ರಾಮಗಳನ್ನೂ, ಕುದುರೆ-ರಥಗಳನ್ನೂ, ಸ್ತ್ರೀಯರನ್ನೂ, ನೂರು ಸಾವಿರ ಗೋವುಗಳನ್ನೂ ದಾನಮಾಡಿದನು.

17001013a ಕೃಪಮಭ್ಯರ್ಚ್ಯ ಚ ಗುರುಮರ್ಥಮಾನಪುರಸ್ಕೃತಮ್|

17001013c ಶಿಷ್ಯಂ ಪರಿಕ್ಷಿತಂ ತಸ್ಮೈ ದದೌ ಭರತಸತ್ತಮಃ||

ಆ ಭರತಸತ್ತಮನು ತನ್ನ ಗುರು ಕೃಪನನ್ನು ಧನ ಮತ್ತು ಮಾನ್ಯತೆಗಳಿಂದ ಪೂಜಿಸಿ ಅವನಿಗೆ ಪರಿಕ್ಷಿತನನ್ನು ಶಿಷ್ಯನನ್ನಾಗಿ ಒಪ್ಪಿಸಿದನು.

17001014a ತತಸ್ತು ಪ್ರಕೃತೀಃ ಸರ್ವಾಃ ಸಮಾನಾಯ್ಯ ಯುಧಿಷ್ಠಿರಃ|

17001014c ಸರ್ವಮಾಚಷ್ಟ ರಾಜರ್ಷಿಶ್ಚಿಕೀರ್ಷಿತಮಥಾತ್ಮನಃ||

ಅನಂತರ ರಾಜರ್ಷಿ ಯುಧಿಷ್ಠಿರನು ತನ್ನ ಸರ್ವ ಪ್ರಜೆಗಳನ್ನೂ ಕರೆಯಿಸಿ ತಾನು ಮಾಡಲು ಹೊರಟಿರುವ ಎಲ್ಲದರ ಕುರಿತು ಹೇಳಿದನು.

17001015a ತೇ ಶ್ರುತ್ವೈವ ವಚಸ್ತಸ್ಯ ಪೌರಜಾನಪದಾ ಜನಾಃ|

17001015c ಭೃಶಮುದ್ವಿಗ್ನಮನಸೋ ನಾಭ್ಯನಂದಂತ ತದ್ವಚಃ||

ಅವನ ಮಾತನ್ನು ಕೇಳಿದೊಡನೆಯೇ ಪೌರ ಮತ್ತು ಜಾನಪದ ಜನರು ತುಂಬಾ ಉದ್ವಿಗ್ನರಾಗಿ ಆ ಮಾತನ್ನು ಸ್ವೀಕರಿಸಲಿಲ್ಲ.

17001016a ನೈವಂ ಕರ್ತವ್ಯಮಿತಿ ತೇ ತದೋಚುಸ್ತೇ ನರಾಧಿಪಮ್|

17001016c ನ ಚ ರಾಜಾ ತಥಾಕಾರ್ಷೀತ್ಕಾಲಪರ್ಯಾಯಧರ್ಮವಿತ್||

“ಹೀಗೆ ಮಾಡಬಾರದು! ಕಾಲದ ಪರ್ಯಾಯವನ್ನೂ ಧರ್ಮವನ್ನೂ ತಿಳಿದ ಯಾವ ರಾಜನೂ ಹೀಗೆ ಮಾಡುವುದಿಲ್ಲ!” ಎಂದು ಅವರು ನರಾಧಿಪನಿಗೆ ಹೇಳಿದರು.

17001017a ತತೋಽನುಮಾನ್ಯ ಧರ್ಮಾತ್ಮಾ ಪೌರಜಾನಪದಂ ಜನಮ್|

17001017c ಗಮನಾಯ ಮತಿಂ ಚಕ್ರೇ ಭ್ರಾತರಶ್ಚಾಸ್ಯ ತೇ ತದಾ||

ಆಗ ಧರ್ಮಾತ್ಮನು ಪೌರ ಜಾನಪದ ಜನರನ್ನು ಒಪ್ಪಿಸಿದನು. ಅನಂತರ ಸಹೋದರರು ಹೊರಡಲು ನಿಶ್ಚಯಿಸಿದರು.

17001018a ತತಃ ಸ ರಾಜಾ ಕೌರವ್ಯೋ ಧರ್ಮಪುತ್ರೋ ಯುಧಿಷ್ಠಿರಃ|

17001018c ಉತ್ಸೃಜ್ಯಾಭರಣಾನ್ಯಂಗಾನ್ಜಗೃಹೇ ವಲ್ಕಲಾನ್ಯುತ||

ಆಗ ರಾಜಾ ಕೌರವ್ಯ ಧರ್ಮಪುತ್ರ ಯುಧಿಷ್ಠಿರನು ಅಂಗಗಳ ಮೇಲಿದ್ದ ಆಭರಣಗಳನ್ನು ತೆಗೆದಿಟ್ಟು ವಲ್ಕಲವಸ್ತ್ರವನ್ನು ಧರಿಸಿದನು.

17001019a ಭೀಮಾರ್ಜುನೌ ಯಮೌ ಚೈವ ದ್ರೌಪದೀ ಚ ಯಶಸ್ವಿನೀ|

17001019c ತಥೈವ ಸರ್ವೇ ಜಗೃಹುರ್ವಲ್ಕಲಾನಿ ಜನಾಧಿಪ||

ಜನಾಧಿಪ! ಹಾಗೆಯೇ ಭೀಮಾರ್ಜುನರೂ, ಯಮಳರೂ, ಯಶಸ್ವಿನೀ ದ್ರೌಪದಿ ಎಲ್ಲರೂ ವಲ್ಕಲಗಳನ್ನು ಧರಿಸಿದರು.

17001020a ವಿಧಿವತ್ಕಾರಯಿತ್ವೇಷ್ಟಿಂ ನೈಷ್ಠಿಕೀಂ ಭರತರ್ಷಭ|

17001020c ಸಮುತ್ಸೃಜ್ಯಾಪ್ಸು ಸರ್ವೇಽಗ್ನೀನ್ಪ್ರತಸ್ಥುರ್ನರಪುಂಗವಾಃ||

ಭರತರ್ಷಭ! ವಿಧಿವತ್ತಾಗಿ ಅಂತ್ಯೇಷ್ಟಿಯನ್ನು ಮಾಡಿಸಿಕೊಂಡು ಆ ಅಗ್ನಿಗಳನ್ನು ನದಿಯಲ್ಲಿ ವಿಸರ್ಜಿಸಿ ನರಪುಂಗವರೆಲ್ಲರೂ ಹೊರಟರು.

17001021a ತತಃ ಪ್ರರುರುದುಃ ಸರ್ವಾಃ ಸ್ತ್ರಿಯೋ ದೃಷ್ಟ್ವಾ ನರರ್ಷಭಾನ್|

17001021c ಪ್ರಸ್ಥಿತಾನ್ದ್ರೌಪದೀಷಷ್ಠಾನ್ಪುರಾ ದ್ಯೂತಜಿತಾನ್ಯಥಾ||

ಬಹುಕಾಲದ ಹಿಂದೆ ದ್ಯೂತದಲ್ಲಿ ಸೋತು ಹೋಗುತ್ತಿದ್ದಂತೆ ದ್ರೌಪದಿಯೊಡಗೂಡಿ ಹೊರಹೊರಟಿರುವ ಆ ನರರ್ಷಭರನ್ನು ನೋಡಿ ಸರ್ವ ಸ್ತ್ರೀಯರೂ ರೋದಿಸಿದರು.

17001022a ಹರ್ಷೋಽಭವಚ್ಚ ಸರ್ವೇಷಾಂ ಭ್ರಾತೄಣಾಂ ಗಮನಂ ಪ್ರತಿ|

17001022c ಯುಧಿಷ್ಠಿರಮತಂ ಜ್ಞಾತ್ವಾ ವೃಷ್ಣಿಕ್ಷಯಮವೇಕ್ಷ್ಯ ಚ||

ಆದರೆ ವೃಷ್ಣಿಗಳ ವಿನಾಶವನ್ನು ಕಂಡು ಮತ್ತು ಯುಧಿಷ್ಠಿರನ ಮತವನ್ನು ಅರಿತು ಆ ಸರ್ವ ಭ್ರಾತೃಗಳು ಹೊರಟಿರುವ ವಿಷಯದಲ್ಲಿ ಅವರು ಹರ್ಷವನ್ನೂ ತಾಳಿದ್ದರು.

17001023a ಭ್ರಾತರಃ ಪಂಚ ಕೃಷ್ಣಾ ಚ ಷಷ್ಠೀ ಶ್ವಾ ಚೈವ ಸಪ್ತಮಃ|

17001023c ಆತ್ಮನಾ ಸಪ್ತಮೋ ರಾಜಾ ನಿರ್ಯಯೌ ಗಜಸಾಹ್ವಯಾತ್||

17001023e ಪೌರೈರನುಗತೋ ದೂರಂ ಸರ್ವೈರಂತಃಪುರೈಸ್ತಥಾ||

ಐವರು ಸಹೋದರರು, ಆರನೆಯವಳಾಗಿ ಕೃಷ್ಣೆ, ಮತ್ತು ಏಳನೆಯದಾಗಿ ನಾಯಿಯೊಡನೆ ರಾಜನು ಹಸ್ತಿನಾಪುರದಿಂದ ಹೊರಟನು. ಅಂತಃಪುರದವರೂ ಪೌರರೂ ಎಲ್ಲರೂ ಬಹಳ ದೂರ ಅವರನ್ನು ಅನುಸರಿಸಿದರು.

17001024a ನ ಚೈನಮಶಕತ್ಕಶ್ಚಿನ್ನಿವರ್ತಸ್ವೇತಿ ಭಾಷಿತುಮ್|

17001024c ನ್ಯವರ್ತಂತ ತತಃ ಸರ್ವೇ ನರಾ ನಗರವಾಸಿನಃ||

ಅವರನ್ನು ಹಿಂದಿರುಗಿರೆಂದು ಹೇಳಲು ಯಾರೂ ಸಮರ್ಥರಾಗದೇ ನಗರವಾಸಿಗಳೆಲ್ಲರೂ ಹಿಂದಿರುಗಿದರು.

17001025a ಕೃಪಪ್ರಭೃತಯಶ್ಚೈವ ಯುಯುತ್ಸುಂ ಪರ್ಯವಾರಯನ್|

17001025c ವಿವೇಶ ಗಂಗಾಂ ಕೌರವ್ಯ ಉಲೂಪೀ ಭುಜಗಾತ್ಮಜಾ||

ಕೃಪನೇ ಮೊದಲಾದವರು ಹಸ್ತಿನಾಪುರದಲ್ಲಿ ಯುಯುತ್ಸುವಿನ ಬಳಿ ಇದ್ದರು. ಕೌರವ್ಯ! ಭುಜಗಾತ್ಮಜೆ ಉಲೂಪಿಯು ಗಂಗೆಯನ್ನು ಪ್ರವೇಶಿಸಿದಳು.

17001026a ಚಿತ್ರಾಂಗದಾ ಯಯೌ ಚಾಪಿ ಮಣಿಪೂರಪುರಂ ಪ್ರತಿ|

17001026c ಶಿಷ್ಟಾಃ ಪರಿಕ್ಷಿತಂ ತ್ವನ್ಯಾ ಮಾತರಃ ಪರ್ಯವಾರಯನ್||

ಚಿತ್ರಾಂಗದೆಯು ಮಣಿಪೂರಪುರಕ್ಕೆ ಹೋದಳು. ಉಳಿದ ಅನ್ಯ ತಾಯಂದಿರು ಪರಿಕ್ಷಿತನನ್ನು ನೋಡಿಕೊಂಡರು.

17001027a ಪಾಂಡವಾಶ್ಚ ಮಹಾತ್ಮಾನೋ ದ್ರೌಪದೀ ಚ ಯಶಸ್ವಿನೀ|

17001027c ಕೃತೋಪವಾಸಾಃ ಕೌರವ್ಯ ಪ್ರಯಯುಃ ಪ್ರಾಙ್ಮುಖಾಸ್ತತಃ||

ಕೌರವ್ಯ! ಮಹಾತ್ಮ ಪಾಂಡವರೂ ಯಶಸ್ವಿನೀ ದ್ರೌಪದಿಯೂ ಉಪವಾಸದಲ್ಲಿದ್ದುಕೊಂಡು ಪೂರ್ವಾಭಿಮುಖವಾಗಿ ಹೋದರು.

17001028a ಯೋಗಯುಕ್ತಾ ಮಹಾತ್ಮಾನಸ್ತ್ಯಾಗಧರ್ಮಮುಪೇಯುಷಃ|

17001028c ಅಭಿಜಗ್ಮುರ್ಬಹೂನ್ದೇಶಾನ್ ಸರಿತಃ ಪರ್ವತಾಂಸ್ತಥಾ||

ಯೋಗಯುಕ್ತರಾದ ಆ ಮಹಾತ್ಮರು ತ್ಯಾಗಧರ್ಮವನ್ನನುಸರಿಸಿ ಅನೇಕ ದೇಶ-ನದೀ-ಪರ್ವತಗಳನ್ನು ದಾಟಿದರು.

17001029a ಯುಧಿಷ್ಠಿರೋ ಯಯಾವಗ್ರೇ ಭೀಮಸ್ತು ತದನಂತರಮ್|

17001029c ಅರ್ಜುನಸ್ತಸ್ಯ ಚಾನ್ವೇವ ಯಮೌ ಚೈವ ಯಥಾಕ್ರಮಮ್||

ಎಲ್ಲರಿಗಿಂತ ಮುಂದೆ ಯುಧಿಷ್ಠಿರನು ಹೋಗುತ್ತಿದ್ದನು. ಅವನ ನಂತರ ಭೀಮ, ಅರ್ಜುನನು ಅವನ ನಂತರ ಮತ್ತು ಅವನ ಹಿಂದೆ ಯಥಾಕ್ರಮವಾಗಿ ಯಮಳರು ಹೋಗುತ್ತಿದ್ದರು.

17001030a ಪೃಷ್ಠತಸ್ತು ವರಾರೋಹಾ ಶ್ಯಾಮಾ ಪದ್ಮದಲೇಕ್ಷಣಾ|

17001030c ದ್ರೌಪದೀ ಯೋಷಿತಾಂ ಶ್ರೇಷ್ಠಾ ಯಯೌ ಭರತಸತ್ತಮ||

ಭರತಸತ್ತಮ! ಆರನೆಯವಳಾಗಿ ವರಾರೋಹೆ ಶ್ಯಾಮೆ ಪದ್ಮದಲೇಕ್ಷಣೆ ಸ್ತ್ರೀಶ್ರೇಷ್ಠೆ ದ್ರೌಪದಿಯು ಹೋಗುತ್ತಿದ್ದಳು.

17001031a ಶ್ವಾ ಚೈವಾನುಯಯಾವೇಕಃ ಪಾಂಡವಾನ್ ಪ್ರಸ್ಥಿತಾನ್ವನೇ|

17001031c ಕ್ರಮೇಣ ತೇ ಯಯುರ್ವೀರಾ ಲೌಹಿತ್ಯಂ ಸಲಿಲಾರ್ಣವಮ್||

ಪಾಂಡವರು ವನಕ್ಕೆ ಹೊರಟಾಗ ಅವರನ್ನು ಹಿಂಬಾಲಿಸಿ ಒಂಟಿ ನಾಯಿಯೂ ಹೊರಟಿತ್ತು. ಕ್ರಮೇಣವಾಗಿ ಆ ವೀರರು ಲೌಹಿತ್ಯವೆಂಬ ಸಮುದ್ರಕ್ಕೆ ಬಂದರು.

17001032a ಗಾಂಡೀವಂ ಚ ಧನುರ್ದಿವ್ಯಂ ನ ಮುಮೋಚ ಧನಂಜಯಃ|

17001032c ರತ್ನಲೋಭಾನ್ಮಹಾರಾಜ ತೌ ಚಾಕ್ಷಯ್ಯೌ ಮಹೇಷುಧೀ||

ಮಹಾರಾಜ! ಧನಂಜಯನು ತನ್ನ ಆ ದಿವ್ಯ ಧನುಸ್ಸು ಗಾಂಡೀವವನ್ನೂ ಎರಡು ಅಕ್ಷಯ ಭತ್ತಳಿಕೆಗಳನ್ನೂ ಬಿಟ್ಟಿರಲಿಲ್ಲ. ಪ್ರಿಯವಾದುದನ್ನು ಹಿಡಿದಿಟ್ಟುಕೊಳ್ಳುವ ಮೋಹವನ್ನಾದರೂ ನೋಡು!

17001033a ಅಗ್ನಿಂ ತೇ ದದೃಶುಸ್ತತ್ರ ಸ್ಥಿತಂ ಶೈಲಮಿವಾಗ್ರತಃ|

17001033c ಮಾರ್ಗಮಾವೃತ್ಯ ತಿಷ್ಠಂತಂ ಸಾಕ್ಷಾತ್ಪುರುಷವಿಗ್ರಹಮ್||

ಆಗ ಅವರು ಪರ್ವತದಂತಹ ಪುರುಷಾಕೃತಿಯಲ್ಲಿ ಎದಿರು ಮಾರ್ಗಕ್ಕೆ ಅಡ್ಡಕಟ್ಟಿ ನಿಂತಿರುವ ಅಗ್ನಿಯನ್ನು ನೋಡಿದರು.

17001034a ತತೋ ದೇವಃ ಸ ಸಪ್ತಾರ್ಚಿಃ ಪಾಂಡವಾನಿದಮಬ್ರವೀತ್|

17001034c ಭೋ ಭೋ ಪಾಂಡುಸುತಾ ವೀರಾಃ ಪಾವಕಂ ಮಾಂ ವಿಬೋಧತ||

ಆಗ ದೇವ ಸಪ್ತಾರ್ಚಿಯು ಪಾಂಡವರಿಗೆ ಇದನ್ನು ಹೇಳಿದನು: “ಭೋ! ಭೋ! ವೀರ ಪಾಂಡುಸುತರೇ! ನನ್ನನ್ನು ಪಾವಕನೆಂದು ತಿಳಿಯಿರಿ!

17001035a ಯುಧಿಷ್ಠಿರ ಮಹಾಬಾಹೋ ಭೀಮಸೇನ ಪರಂತಪ|

17001035c ಅರ್ಜುನಾಶ್ವಿಸುತೌ ವೀರೌ ನಿಬೋಧತ ವಚೋ ಮಮ||

ಯುಧಿಷ್ಠಿರ ಮಹಾಬಾಹೋ! ಪರಂತಪ ಭೀಮಸೇನ! ಅರ್ಜುನ ಮತ್ತು ವೀರ ಅಶ್ವಿನೀಸುತರೇ! ನನ್ನ ಮಾತನ್ನು ಕೇಳಿ!

17001036a ಅಹಮಗ್ನಿಃ ಕುರುಶ್ರೇಷ್ಠಾ ಮಯಾ ದಗ್ಧಂ ಚ ಖಾಂಡವಮ್|

17001036c ಅರ್ಜುನಸ್ಯ ಪ್ರಭಾವೇಣ ತಥಾ ನಾರಾಯಣಸ್ಯ ಚ||

ಕುರುಶ್ರೇಷ್ಠರೇ! ನಾನು ಅಗ್ನಿಯು! ಅರ್ಜುನ ಮತ್ತು ನಾರಾಯಣರ ಪ್ರಭಾವದಿಂದ ನಾನು ಖಾಂಡವವನ್ನು ದಹಿಸಿ ಭಸ್ಮಗೊಳಿಸಿದೆನು.

17001037a ಅಯಂ ವಃ ಫಲ್ಗುನೋ ಭ್ರಾತಾ ಗಾಂಡೀವಂ ಪರಮಾಯುಧಮ್|

17001037c ಪರಿತ್ಯಜ್ಯ ವನಂ ಯಾತು ನಾನೇನಾರ್ಥೋಽಸ್ತಿ ಕಶ್ಚನ||

ನಿನ್ನ ಈ ಭ್ರಾತಾ ಫಲ್ಗುನನು ಪರಮಾಯುಧ ಗಾಂಡಿವವನ್ನು ಇಲ್ಲಿಯೇ ಬಿಟ್ಟು ವನಕ್ಕೆ ತೆರಳಬೇಕು. ಅವನಿಗೆ ಇನ್ನು ಮುಂದೆ ಇದರ ಅವಶ್ಯಕತೆಯಿರುವುದಿಲ್ಲ.

17001038a ಚಕ್ರರತ್ನಂ ತು ಯತ್ಕೃಷ್ಣೇ ಸ್ಥಿತಮಾಸೀನ್ಮಹಾತ್ಮನಿ|

17001038c ಗತಂ ತಚ್ಚ ಪುನರ್ಹಸ್ತೇ ಕಾಲೇನೈಷ್ಯತಿ ತಸ್ಯ ಹ||

ಮಹಾತ್ಮ ಕೃಷ್ಣನಲ್ಲಿದ್ದ ಚಕ್ರರತ್ನವು ಆಗಲೇ ಹೊರಟು ಹೋಗಿ ಕಾಲಾಂತರದಲ್ಲಿ ಪುನಃ ಅವನ ಹಸ್ತವನ್ನು ಸೇರುತ್ತದೆ.

17001039a ವರುಣಾದಾಹೃತಂ ಪೂರ್ವಂ ಮಯೈತತ್ಪಾರ್ಥಕಾರಣಾತ್|

17001039c ಗಾಂಡೀವಂ ಕಾರ್ಮುಕಶ್ರೇಷ್ಠಂ ವರುಣಾಯೈವ ದೀಯತಾಮ್||

ಹಿಂದೆ ಅರ್ಜುನನಿಗೋಸ್ಕರ ವರುಣನಿಂದ ನಾನು ಪಡೆದಿದ್ದ ಈ ಕಾರ್ಮುಕಶ್ರೇಷ್ಠ ಗಾಂಡೀವವನ್ನು ವರುಣನಿಗೆ ಹಿಂದಿರುಗಿಸಬೇಕಾಗಿದೆ.”

17001040a ತತಸ್ತೇ ಭ್ರಾತರಃ ಸರ್ವೇ ಧನಂಜಯಮಚೋದಯನ್|

17001040c ಸ ಜಲೇ ಪ್ರಾಕ್ಷಿಪತ್ತತ್ತು ತಥಾಕ್ಷಯ್ಯೌ ಮಹೇಷುಧೀ||

ಆಗ ಅವನ ಸಹೋದರರೆಲ್ಲರೂ ಧನಂಜಯನನ್ನು ಒತ್ತಾಯಿಸಲು ಅವನು ಮಹಾ ಧನುಸ್ಸನ್ನೂ ಹಾಗೆಯೇ ಅಕ್ಷಯ ಭತ್ತಳಿಕೆಗಳನ್ನೂ ನೀರಿನಲ್ಲಿ ಹಾಕಿದನು.

17001041a ತತೋಽಗ್ನಿರ್ಭರತಶ್ರೇಷ್ಠ ತತ್ರೈವಾಂತರಧೀಯತ|

17001041c ಯಯುಶ್ಚ ಪಾಂಡವಾ ವೀರಾಸ್ತತಸ್ತೇ ದಕ್ಷಿಣಾಮುಖಾಃ||

ಭರತಶ್ರೇಷ್ಠ! ಆಗ ಅಗ್ನಿಯು ಅಲ್ಲಿಯೇ ಅಂತರ್ಧಾನನಾದನು. ಅನಂತರ ವೀರ ಪಾಂಡವರು ಅಲ್ಲಿಂದ ದಕ್ಷಿಣಾಭಿಮುಖರಾಗಿ ನಡೆದರು.

17001042a ತತಸ್ತೇ ತೂತ್ತರೇಣೈವ ತೀರೇಣ ಲವಣಾಂಭಸಃ|

17001042c ಜಗ್ಮುರ್ಭರತಶಾರ್ದೂಲ ದಿಶಂ ದಕ್ಷಿಣಪಶ್ಚಿಮಮ್||

ಭರತಶಾರ್ದೂಲ! ಆ ಸಮುದ್ರದ ಉತ್ತರ ತೀರದಿಂದ ಹೊರಟು ಅವರು ಅದರ ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ಹೋದರು.

17001043a ತತಃ ಪುನಃ ಸಮಾವೃತ್ತಾಃ ಪಶ್ಚಿಮಾಂ ದಿಶಮೇವ ತೇ|

17001043c ದದೃಶುರ್ದ್ವಾರಕಾಂ ಚಾಪಿ ಸಾಗರೇಣ ಪರಿಪ್ಲುತಾಮ್||

ಅಲ್ಲಿಂದ ಪುನಃ ಪಶ್ಚಿಮ ದಿಕ್ಕಿಗೆ ತಿರುಗಿ ನಡೆದು ಅಲ್ಲಿ ಸಮುದ್ರದಲ್ಲಿ ಮುಳುಗಿಹೋಗಿದ್ದ ದ್ವಾರಕೆಯನ್ನು ನೋಡಿದರು.

17001044a ಉದೀಚೀಂ ಪುನರಾವೃತ್ತ್ಯ ಯಯುರ್ಭರತಸತ್ತಮಾಃ|

17001044c ಪ್ರಾದಕ್ಷಿಣ್ಯಂ ಚಿಕೀರ್ಷಂತಃ ಪೃಥಿವ್ಯಾ ಯೋಗಧರ್ಮಿಣಃ||

ಭೂಮಿಯನ್ನು ಪ್ರದಕ್ಷಿಣೆ ಮಾಡುತ್ತಿರುವಂತೆ ಆ ಯೋಗಧರ್ಮಿ ಭರತಸತ್ತಮರು ಪುನಃ ಉತ್ತರ ದಿಕ್ಕಿನಲ್ಲಿ ನಡೆದರು.”

ಇತಿ ಶ್ರೀಮಹಾಭಾರತೇ ಮಹಾಪ್ರಸ್ಥಾನಿಕೇ ಪರ್ವಣಿ ಪಾಂಡವಪ್ರವ್ರಜನೇ ಪ್ರಥಮೋಽಧ್ಯಾಯಃ ||

ಇದು ಶ್ರೀಮಹಾಭಾರತದಲ್ಲಿ ಮಹಾಪ್ರಸ್ಥಾನಿಕಪರ್ವದಲ್ಲಿ ಪಾಂಡವಪ್ರವ್ರಜನ ಎನ್ನುವ ಮೊದಲನೇ ಅಧ್ಯಾಯವು.

Image result for indian motifs

Comments are closed.