ಕರ್ಣ ಪರ್ವ
Contents
Toggle೪೫
ಅರ್ಜುನ-ಅಶ್ವತ್ಥಾಮರ ಯುದ್ಧ; ಅಶ್ವತ್ಥಾಮನ ಪರಾಜಯ (೧-೨೧). ಪಲಾಯನ ಮಾಡುತ್ತಿರುವ ಕುರುಸೇನೆಯನ್ನು ರಕ್ಷಿಸುವಂತೆ ದುರ್ಯೋಧನನು ಕರ್ಣನಿಗೆ ಹೇಳಿದುದು (೨೨-೩೦). ಕರ್ಣನು ಪಾಂಡವ ಸೇನೆಯನ್ನು ಧ್ವಂಸಗೊಳಿಸುತ್ತಾ ಭಾರ್ಗವಾಸ್ತ್ರವನ್ನು ಪ್ರಯೋಗಿಸಿದ್ದುದು (೩೧-೪೪). ಅರ್ಜುನನು ಕೃಷ್ಣನಿಗೆ ಕರ್ಣನ ಪರಾಕ್ರಮವನ್ನು ವರ್ಣಿಸಿದುದು (೪೫-೪೯). ಇತರರೊಂದಿಗೆ ಹೋರಾಡಲು ಕರ್ಣನನ್ನು ರಣರಂಗದಲ್ಲಿಯೇ ಬಿಟ್ಟು ಕೃಷ್ಣನು ರಥವನ್ನು ಯುಧಿಷ್ಠಿರನ ಶಬಿರಕ್ಕೆ ಕೊಂಡೊಯ್ದು, ಅಲ್ಲಿ ವಿಶ್ರಮಿಸುತ್ತಿದ್ದ ಯುಧಿಷ್ಠಿರನನ್ನು ಕಂಡಿದುದು (೫೦-೭೩).
08045001 ಸಂಜಯ ಉವಾಚ|
08045001a ದ್ರೌಣಿಸ್ತು ರಥವಂಶೇನ ಮಹತಾ ಪರಿವಾರಿತಃ|
08045001c ಆಪತತ್ಸಹಸಾ ರಾಜನ್ಯತ್ರ ರಾಜಾ ವ್ಯವಸ್ಥಿತಃ||
ಸಂಜಯನು ಹೇಳಿದನು: “ರಾಜನ್! ದ್ರೌಣಿಯಾದರೋ ಮಹಾ ರಥಸಂಘಗಳಿಂದ ಪರಿವೃತನಾಗಿ ಎಲ್ಲಿ ರಾಜನಿದ್ದನೋ ಅಲ್ಲಿಗೆ ಕೂಡಲೇ ಬಂದೆರಗಿದನು.
08045002a ತಮಾಪತಂತಂ ಸಹಸಾ ಶೂರಃ ಶೌರಿಸಹಾಯವಾನ್|
08045002c ದಧಾರ ಸಹಸಾ ಪಾರ್ಥೋ ವೇಲೇವ ಮಕರಾಲಯಂ||
ಒಮ್ಮೆಲೇ ಬಂದು ಎರಗಿದ ಅವನನ್ನು ಶೌರಿಯನ್ನೇ ಸಹಾಯಕನನ್ನಾಗಿ ಹೊಂದಿದ್ದ ಶೂರ ಪಾರ್ಥನು ತೀರವು ಸಮುದ್ರವನ್ನು ತಡೆಯುವಂತೆ ತಡೆದು ನಿಲ್ಲಿಸಿದನು.
08045003a ತತಃ ಕ್ರುದ್ಧೋ ಮಹಾರಾಜ ದ್ರೋಣಪುತ್ರಃ ಪ್ರತಾಪವಾನ್|
08045003c ಅರ್ಜುನಂ ವಾಸುದೇವಂ ಚ ಚಾದಯಾಮಾಸ ಪತ್ರಿಭಿಃ||
ಮಹಾರಾಜ! ಆಗ ಕ್ರುದ್ಧನಾದ ಪ್ರತಾಪವಾನ್ ದ್ರೋಣಪುತ್ರನು ಅರ್ಜುನ-ವಾಸದೇವರನ್ನು ಪತ್ರಿಗಳಿಂದ ಮುಚ್ಚಿಬಿಟ್ಟನು.
08045004a ಅವಚ್ಚನ್ನೌ ತತಃ ಕೃಷ್ಣೌ ದೃಷ್ಟ್ವಾ ತತ್ರ ಮಹಾರಥಾಃ|
08045004c ವಿಸ್ಮಯಂ ಪರಮಂ ಗತ್ವಾ ಪ್ರೈಕ್ಷಂತ ಕುರವಸ್ತದಾ||
ಮಹಾರಥ ಕೃಷ್ಣರಿಬ್ಬರೂ ಆ ರೀತಿ ಮುಚ್ಚಿಹೋಗಿದುದನ್ನು ನೋಡಿ ಅಲ್ಲಿ ನೋಡುತ್ತಿದ್ದ ಕುರುಗಳು ಪರಮ ವಿಸ್ಮಿತರಾದರು.
08045005a ಅರ್ಜುನಸ್ತು ತತೋ ದಿವ್ಯಮಸ್ತ್ರಂ ಚಕ್ರೇ ಹಸನ್ನಿವ|
08045005c ತದಸ್ತ್ರಂ ಬ್ರಾಹ್ಮಣೋ ಯುದ್ಧೇ ವಾರಯಾಮಾಸ ಭಾರತ||
ಅರ್ಜುನನಾದರೋ ನಗುತ್ತಿರುವನೋ ಎನ್ನುವಂತೆ ದಿವ್ಯಾಸ್ತ್ರವನ್ನು ಪ್ರಕಟಿಸಿದನು. ಭಾರತ! ಯುದ್ಧದಲ್ಲಿ ಬ್ರಾಹ್ಮಣ ಅಶ್ವತ್ಥಾಮನು ಆ ಅಸ್ತ್ರವನ್ನು ತಡೆದುಬಿಟ್ಟನು.
08045006a ಯದ್ಯದ್ಧಿ ವ್ಯಾಕ್ಷಿಪದ್ಯುದ್ಧೇ ಪಾಂಡವೋಽಸ್ತ್ರಂ ಜಿಘಾಂಸಯಾ|
08045006c ತತ್ತದಸ್ತ್ರಂ ಮಹೇಷ್ವಾಸೋ ದ್ರೋಣಪುತ್ರೋ ವ್ಯಶಾತಯತ್||
ಯುದ್ಧದಲ್ಲಿ ಅಶ್ವತ್ಥಾಮನನ್ನು ಸಂಹರಿಸಲು ಪಾಂಡವ ಅರ್ಜುನನು ಯಾವ್ಯಾವ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದನೋ ಅವೆಲ್ಲವನ್ನೂ ಮಹೇಷ್ವಾಸ ದ್ರೋಣಪುತ್ರನು ನಾಶಗೊಳಿಸುತ್ತಿದ್ದನು.
08045007a ಅಸ್ತ್ರಯುದ್ಧೇ ತತೋ ರಾಜನ್ವರ್ತಮಾನೇ ಭಯಾವಹೇ|
08045007c ಅಪಶ್ಯಾಮ ರಣೇ ದ್ರೌಣಿಂ ವ್ಯಾತ್ತಾನನಮಿವಾಂತಕಂ||
ರಾಜನ್! ನಡೆಯುತ್ತಿದ್ದ ಆ ಭಯವನ್ನುಂಟುಮಾಡುವ ಅಸ್ತ್ರಯುದ್ಧದಲ್ಲಿ ನಮಗೆ ದ್ರೌಣಿಯು ಬಾಯಿಕಳೆದ ಅಂತಕನಂತೆ ತೋರುತ್ತಿದ್ದನು.
08045008a ಸ ದಿಶೋ ವಿದಿಶಶ್ಚೈವ ಚಾದಯಿತ್ವಾ ವಿಜಿಹ್ಮಗೈಃ|
08045008c ವಾಸುದೇವಂ ತ್ರಿಭಿರ್ಬಾಣೈರವಿಧ್ಯದ್ದಕ್ಷಿಣೇ ಭುಜೇ||
ಅವನು ಜಿಹ್ಮಗಗಳಿಂದ ದಿಕ್ಕು-ಉಪದಿಕ್ಕುಗಳನ್ನು ಮುಚ್ಚಿ, ವಾಸುದೇವನ ಬಲಭುಜವನ್ನು ಮೂರು ಬಾಣಗಳಿಂದ ಪ್ರಹರಿಸಿದನು.
08045009a ತತೋಽರ್ಜುನೋ ಹಯಾನ್ ಹತ್ವಾ ಸರ್ವಾಂಸ್ತಸ್ಯ ಮಹಾತ್ಮನಃ|
08045009c ಚಕಾರ ಸಮರೇ ಭೂಮಿಂ ಶೋಣಿತೌಘತರಂಗಿಣೀಂ||
ಆಗ ಮಹಾತ್ಮ ಅರ್ಜುನನು ಅಶ್ವತ್ಥಾಮನ ಎಲ್ಲ ಕುದುರೆಗಳನ್ನೂ ಸಂಹರಿಸಿ ಸಮರಭೂಮಿಯನ್ನು ರಕ್ತಪ್ರವಾಹದ ನದಿಯನ್ನಾಗಿಸಿದನು.
08045010a ನಿಹತಾ ರಥಿನಃ ಪೇತುಃ ಪಾರ್ಥಚಾಪಚ್ಯುತೈಃ ಶರೈಃ|
08045010c ಹಯಾಶ್ಚ ಪರ್ಯಧಾವಂತ ಮುಕ್ತಯೋಕ್ತ್ರಾಸ್ತತಸ್ತತಃ||
ಆಗ ಪಾರ್ಥನ ಧನುಸ್ಸಿನಿಂದ ಹೊರಟ ಶರಗಳಿಂದ ರಥಿಗಳು ಹತರಾಗಿ ಉರುಳಿದರು. ಕಡಿವಾಣಗಳಿಂದ ಮುಕ್ತ ಕುದುರೆಗಳು ಅಲ್ಲಿಂದಿಲ್ಲಿಗೆ ಓಡತೊಡಗಿದವು.
08045011a ತದ್ದೃಷ್ಟ್ವಾ ಕರ್ಮ ಪಾರ್ಥಸ್ಯ ದ್ರೌಣಿರಾಹವಶೋಭಿನಃ|
08045011c ಅವಾಕಿರದ್ರಣೇ ಕೃಷ್ಣಂ ಸಮಂತಾನ್ನಿಶಿತೈಃ ಶರೈಃ||
ಪಾರ್ಥನ ಆ ಕರ್ಮವನ್ನು ನೋಡಿ ಆಹವಶೋಭೀ ದ್ರೌಣಿಯು ರಣದಲ್ಲಿ ಕೃಷ್ಣನನ್ನು ಎಲ್ಲಕಡೆಗಳಿಂದ ನಿಶಿತ ಶರಗಳಿಂದ ಮುಚ್ಚಿಬಿಟ್ಟನು.
08045012a ತತೋಽರ್ಜುನಂ ಮಹಾರಾಜ ದ್ರೌಣಿರಾಯಮ್ಯ ಪತ್ರಿಣಾ|
08045012c ವಕ್ಷೋದೇಶೇ ಸಮಾಸಾದ್ಯ ತಾಡಯಾಮಾಸ ಸಂಯುಗೇ||
ಮಹಾರಾಜ! ಅನಂತರ ದ್ರೌಣಿಯು ಸಂಯುಗದಲ್ಲಿ ಪತ್ರಿಗಳನ್ನು ಹೂಡಿ ಅರ್ಜುನನ ಎದೆಗೆ ಗುರಿಯಿಟ್ಟು ಹೊಡೆಯತೊಡಗಿದನು.
08045013a ಸೋಽತಿವಿದ್ಧೋ ರಣೇ ತೇನ ದ್ರೋಣಪುತ್ರೇಣ ಭಾರತ|
08045013c ಆದತ್ತ ಪರಿಘಂ ಘೋರಂ ದ್ರೌಣೇಶ್ಚೈನಮವಾಕ್ಷಿಪತ್||
ಭಾರತ! ರಣದಲ್ಲಿ ಆ ದ್ರೋಣಪುತ್ರನಿಂದ ಅತಿಯಾಗಿ ಪ್ರಹರಿಸಲ್ಪಟ್ಟ ಅರ್ಜುನನು ಘೋರ ಪರಿಘವನ್ನು ತೆಗೆದುಕೊಂಡು ಅದನ್ನು ದ್ರೌಣಿಯ ಮೇಲೆ ಎಸೆದನು.
08045014a ತಮಾಪತಂತಂ ಪರಿಘಂ ಕಾರ್ತಸ್ವರವಿಭೂಷಿತಂ|
08045014c ದ್ರೌಣಿಶ್ಚಿಚ್ಚೇದ ಸಹಸಾ ತತ ಉಚ್ಚುಕ್ರುಶುರ್ಜನಾಃ||
ತನ್ನ ಮೇಲೆ ಬೀಳಲು ಬರುತ್ತಿದ್ದ ಆ ಸುವರ್ಣವಿಭೂಷಿತ ಪರಿಘವನ್ನು ದ್ರೌಣಿಯು ಒಮ್ಮೆಲೇ ತುಂಡರಿಸಿದನು. ಆಗ ಜನರು ಕೂಗಿಕೊಂಡರು.
08045015a ಸೋಽನೇಕಧಾಪತದ್ಭೂಮೌ ಭಾರದ್ವಾಜಸ್ಯ ಸಾಯಕೈಃ|
08045015c ವಿಶೀರ್ಣಃ ಪರ್ವತೋ ರಾಜನ್ಯಥಾ ಸ್ಯಾನ್ಮಾತರಿಶ್ವನಾ||
ರಾಜನ್! ಭಾರದ್ವಾಜನ ಸಾಯಕಗಳಿಂದ ಅನೇಕ ಚೂರುಗಳಾದ ಆ ಪರಿಘವು ವಜ್ರಾಯುಧದಿಂದ ಕತ್ತರಿಸಲ್ಪಟ್ಟ ಪರ್ವತವು ತುಂಡಾಗಿ ಬೀಳುವಂತೆ ಭೂಮಿಯ ಮೇಲೆ ಬಿದ್ದಿತು.
08045016a ತತೋಽರ್ಜುನೋ ರಣೇ ದ್ರೌಣಿಂ ವಿವ್ಯಾಧ ದಶಭಿಃ ಶರೈಃ|
08045016c ಸಾರಥಿಂ ಚಾಸ್ಯ ಭಲ್ಲೇನ ರಥನೀಡಾದಪಾಹರತ್||
ಆಗ ರಣದಲ್ಲಿ ಅರ್ಜುನನು ಹತ್ತು ಶರಗಳಿಂದ ದ್ರೌಣಿಯನ್ನು ಹೊಡೆದು ಭಲ್ಲದಿಂದ ಅವನ ಸಾರಥಿಯನ್ನು ರಥನೀಡದಿಂದ ಅಪಹರಿಸಿದನು.
08045017a ಸ ಸಂಗೃಹ್ಯ ಸ್ವಯಂ ವಾಹಾನ್ಕೃಷ್ಣೌ ಪ್ರಾಚ್ಚಾದಯಚ್ಚರೈಃ|
08045017c ತತ್ರಾದ್ಭುತಮಪಶ್ಯಾಮ ದ್ರೌಣೇರಾಶು ಪರಾಕ್ರಮಂ||
ದ್ರೌಣಿಯಾದರೋ ಸಯಂ ತಾನೇ ಕುದುರೆಗಳನ್ನು ಹಿಡಿದು ನಡೆಸುತ್ತಾ ಕೃಷ್ಣರಿಬ್ಬರನ್ನೂ ಶರಗಳಿಂದ ಮುಚ್ಚಿದನು. ಅಲ್ಲಿ ನಾವು ದ್ರೌಣಿಯ ಅದ್ಭುತ ಪರಾಕ್ರಮವನ್ನು ನೋಡಿದೆವು.
08045018a ಅಯಚ್ಚತ್ತುರಗಾನ್ಯಚ್ಚ ಫಲ್ಗುನಂ ಚಾಪ್ಯಯೋಧಯತ್|
08045018c ತದಸ್ಯ ಸಮರೇ ರಾಜನ್ಸರ್ವೇ ಯೋಧಾ ಅಪೂಜಯನ್||
ಅಶ್ವತ್ಥಾಮನು ಇತ್ತ ನಾಲ್ಕು ಕುದುರೆಗಳನ್ನೂ ನಿಯಂತ್ರಿಸುತ್ತಿದ್ದನು ಮತ್ತು ಅತ್ತ ಫಲ್ಗುನನ್ನೂ ಆಕ್ರಮಣಿಸುತ್ತಿದ್ದನು. ರಾಜನ್! ಅದರಿಂದಾಗಿ ಸಮರದಲ್ಲಿದ್ದ ಸರ್ವ ಯೋಧರೂ ಅವನನ್ನು ಪ್ರಶಂಸಿಸಿದರು.
08045019a ಯದಾ ತ್ವಗ್ರಸ್ಯತ ರಣೇ ದ್ರೋಣಪುತ್ರೇಣ ಫಲ್ಗುನಃ|
08045019c ತತೋ ರಶ್ಮೀನ್ರಥಾಶ್ವಾನಾಂ ಕ್ಷುರಪ್ರೈಶ್ಚಿಚ್ಚಿದೇ ಜಯಃ||
ರಣದಲ್ಲಿ ದ್ರೋಣಪುತ್ರನು ಫಲ್ಗುನನನ್ನು ಮೀರಿಸುವಂತಿರುವಾಗ ಜಯ ಅರ್ಜುನನು ಕ್ಷುರಪ್ರದಿಂದ ರಥದ ಕುದುರೆಗಳ ಕಡಿವಾಣಗಳನ್ನು ಕತ್ತರಿಸಿದನು.
08045020a ಪ್ರಾದ್ರವಂಸ್ತುರಗಾಸ್ತೇ ತು ಶರವೇಗಪ್ರಬಾಧಿತಾಃ|
08045020c ತತೋಽಭೂನ್ನಿನದೋ ಭೂಯಸ್ತವ ಸೈನ್ಯಸ್ಯ ಭಾರತ||
ಶರವೇಗದಿಂದ ಬಾಧಿತರಾದ ಆ ಕುದುರೆಗಳು ಓಡಿಹೋದವು. ಆಗ ನಿನ್ನ ಸೈನ್ಯದಲ್ಲಿ ಪುನಃ ನಿನಾದಗಳಾದವು.
08045021a ಪಾಂಡವಾಸ್ತು ಜಯಂ ಲಬ್ಧ್ವಾ ತವ ಸೈನ್ಯಮುಪಾದ್ರವನ್|
08045021c ಸಮಂತಾನ್ನಿಶಿತಾನ್ಬಾಣಾನ್ವಿಮುಂಚಂತೋ ಜಯೈಷಿಣಃ||
ಜಯೈಷಿಣಿ ಪಾಂಡವರಾದರೋ ಜಯವನ್ನು ಪಡೆದು ಎಲ್ಲಕಡೆ ನಿಶಿತ ಬಾಣಗಳನ್ನು ಎರಚುತ್ತಾ ನಿನ್ನ ಸೇನೆಯನ್ನು ಆಕ್ರಮಣಿಸಿದರು.
08045022a ಪಾಂಡವೈಸ್ತು ಮಹಾರಾಜ ಧಾರ್ತರಾಷ್ಟ್ರೀ ಮಹಾಚಮೂಃ|
08045022c ಪುನಃ ಪುನರಥೋ ವೀರೈರಭಜ್ಯತ ಜಯೋದ್ಧತೈಃ||
08045023a ಪಶ್ಯತಾಂ ತೇ ಮಹಾರಾಜ ಪುತ್ರಾಣಾಂ ಚಿತ್ರಯೋಧಿನಾಂ|
08045023c ಶಕುನೇಃ ಸೌಬಲೇಯಸ್ಯ ಕರ್ಣಸ್ಯ ಚ ಮಹಾತ್ಮನಃ||
ಮಹಾರಾಜ! ಧಾರ್ತರಾಷ್ಟ್ರರ ಮಹಾಸೇನೆಯನ್ನು ವಿಜಯೋಲ್ಲಾಸೀ ಪಾಂಡವ ವೀರರು ಪುನಃ ಪುನಃ ನಿನ್ನ ಚಿತ್ರಯೋಧೀ ಪುತ್ರರು, ಸೌಬಲ ಶಕುನಿ ಮತ್ತು ಮಹಾತ್ಮ ಕರ್ಣರು ನೋಡುತ್ತಿದ್ದಂತೆಯೇ ಸದೆಬಡಿಯುತ್ತಿದ್ದರು.
08045024a ವಾರ್ಯಮಾಣಾ ಮಹಾಸೇನಾ ಪುತ್ರೈಸ್ತವ ಜನೇಶ್ವರ|
08045024c ನಾವತಿಷ್ಠತ ಸಂಗ್ರಾಮೇ ತಾಡ್ಯಮಾನಾ ಸಮಂತತಃ||
ಜನೇಶ್ವರ! ಸಂಗ್ರಾಮದಲ್ಲಿ ಎಲ್ಲ ಕಡೆಗಳಿಂದ ಪ್ರಹರಿಸಲ್ಪಡುತ್ತಿದ್ದ ಮಹಾಸೇನೆಯು ನಿನ್ನ ಪುತ್ರರು ತಡೆದರೂ ನಿಲ್ಲಲಿಲ್ಲ.
08045025a ತತೋ ಯೋಧೈರ್ಮಹಾರಾಜ ಪಲಾಯದ್ಭಿಸ್ತತಸ್ತತಃ|
08045025c ಅಭವದ್ವ್ಯಾಕುಲಂ ಭೀತೈಃ ಪುತ್ರಾಣಾಂ ತೇ ಮಹದ್ಬಲಂ||
ಮಹಾರಾಜ! ಯೋಧರು ಎಲ್ಲಕಡೆ ಪಲಾಯನ ಮಾಡುತ್ತಿರಲು ನಿನ್ನ ಮಕ್ಕಳ ಮಹಾಸೇನೆಯಲ್ಲಿ ಭೀತಿ ವ್ಯಾಕುಲಗಳುಂಟಾದವು.
08045026a ತಿಷ್ಠ ತಿಷ್ಠೇತಿ ಸತತಂ ಸೂತಪುತ್ರಸ್ಯ ಜಲ್ಪತಃ|
08045026c ನಾವತಿಷ್ಠತ ಸಾ ಸೇನಾ ವಧ್ಯಮಾನಾ ಮಹಾತ್ಮಭಿಃ||
ಮಹಾತ್ಮರಿಂದ ವಧಿಸಲ್ಪಡುತ್ತಿರುವ ಆ ಸೇನೆಯು ಸೂತಪುತ್ರನು ಸತತವೂ “ನಿಲ್ಲಿ! ನಿಲ್ಲಿ!” ಎಂದು ಕೂಗಿಕೊಳ್ಳುತ್ತಿದ್ದರೂ ನಿಲ್ಲಲಿಲ್ಲ.
08045027a ಅಥೋತ್ಕ್ರುಷ್ಟಂ ಮಹಾರಾಜ ಪಾಂಡವೈರ್ಜಿತಕಾಶಿಭಿಃ|
08045027c ಧಾರ್ತರಾಷ್ಟ್ರಬಲಂ ದೃಷ್ಟ್ವಾ ದ್ರವಮಾಣಂ ಸಮಂತತಃ||
ಮಹಾರಾಜ! ಧಾರ್ತರಾಷ್ಟ್ರರ ಸೇನೆಯು ಎಲ್ಲಕಡೆ ಓಡಿಹೋಗುತ್ತಿರುವುದನ್ನು ನೋಡಿ ವಿಜಯೋತ್ಸಾಹೀ ಪಾಂಡವರು ಜೋರಾಗಿ ಸಿಂಹನಾದಗೈದರು.
08045028a ತತೋ ದುರ್ಯೋಧನಃ ಕರ್ಣಮಬ್ರವೀತ್ಪ್ರಣಯಾದಿವ|
08045028c ಪಶ್ಯ ಕರ್ಣ ಯಥಾ ಸೇನಾ ಪಾಂಡವೈರರ್ದಿತಾ ಭೃಶಂ||
ಆಗ ದುರ್ಯೋಧನನು ಕರ್ಣನಿಗೆ ಪ್ರೀತಿಪೂರ್ವಕವಾಗಿ ಇಂತೆಂದನು: “ಕರ್ಣ! ಪಾಂಡವರಿಂದ ತುಂಬಾ ಪೀಡೆಗೊಳಗಾದ ನಮ್ಮ ಸೇನೆಯನ್ನು ನೋಡು!
08045029a ತ್ವಯಿ ತಿಷ್ಠತಿ ಸಂತ್ರಾಸಾತ್ಪಲಾಯತಿ ಸಮಂತತಃ|
08045029c ಏತಜ್ಞಾತ್ವಾ ಮಹಾಬಾಹೋ ಕುರು ಪ್ರಾಪ್ತಮರಿಂದಮ||
ನೀನು ಯುದ್ಧದಲ್ಲಿರುವಾಗಲೇ ಅವರು ಭಯಗೊಂಡು ಎಲ್ಲಕಡೆ ಪಲಾಯನಮಾಡುತ್ತಿದ್ದಾರೆ! ಮಹಾಬಾಹೋ! ಅರಿಂದಮ! ಇದನ್ನು ತಿಳಿದು ಮಾಡಬೇಕಾದುದನ್ನು ಮಾಡು!
08045030a ಸಹಸ್ರಾಣಿ ಚ ಯೋಧಾನಾಂ ತ್ವಾಮೇವ ಪುರುಷರ್ಷಭ|
08045030c ಕ್ರೋಶಂತಿ ಸಮರೇ ವೀರ ದ್ರಾವ್ಯಮಾಣಾನಿ ಪಾಂಡವೈಃ||
ಪುರುಷರ್ಷಭ! ವೀರ! ಸಮರದಲ್ಲಿ ಪಾಂಡವರಿಂದ ಓಡಿಸಲ್ಪಡುತ್ತಿರುವ ಆ ಸಹಸ್ರಾರು ಯೋಧರು ನಿನ್ನನ್ನೇ ಕೂಗಿ ಕರೆಯುತ್ತಿದ್ದಾರೆ!”
08045031a ಏತಚ್ಛೃತ್ವಾ ತು ರಾಧೇಯೋ ದುರ್ಯೋಧನವಚೋ ಮಹತ್|
08045031c ಮದ್ರರಾಜಮಿದಂ ವಾಕ್ಯಮಬ್ರವೀತ್ಸೂತನಂದನಃ||
ದುರ್ಯೋಧನನ ಆ ಮಹಾ ಮಾತನ್ನು ಕೇಳಿದ ರಾಧೇಯ ಸೂತನಂದನನು ಮದ್ರರಾಜನಿಗೆ ಈ ಮಾತನ್ನಾಡಿದನು:
08045032a ಪಶ್ಯ ಮೇ ಭುಜಯೋರ್ವೀರ್ಯಮಸ್ತ್ರಾಣಾಂ ಚ ಜನೇಶ್ವರ|
08045032c ಅದ್ಯ ಹನ್ಮಿ ರಣೇ ಸರ್ವಾನ್ಪಾಂಚಾಲಾನ್ಪಾಂಡುಭಿಃ ಸಹ|
08045032e ವಾಹಯಾಶ್ವಾನ್ನರವ್ಯಾಘ್ರ ಭದ್ರೇಣೈವ ಜನೇಶ್ವರ||
“ಜನೇಶ್ವರ! ನನ್ನ ಈ ಭುಜಗಳ ಮತ್ತು ಅಸ್ತ್ರಗಳ ವೀರ್ಯವನ್ನು ನೋಡು! ಇಂದು ರಣದಲ್ಲಿ ಪಾಂಡವರ ಸಹಿತ ಎಲ್ಲ ಪಾಂಚಾಲರನ್ನು ಸಂಹರಿಸುತ್ತೇನೆ! ನರವ್ಯಾಘ್ರ! ಜನೇಶ್ವರ! ಮಂಗಳಮಯ ಮನಸ್ಸಿನಿಂದ ಕುದುರೆಗಳನ್ನು ಓಡಿಸು!”
08045033a ಏವಮುಕ್ತ್ವಾ ಮಹಾರಾಜ ಸೂತಪುತ್ರಃ ಪ್ರತಾಪವಾನ್|
08045033c ಪ್ರಗೃಹ್ಯ ವಿಜಯಂ ವೀರೋ ಧನುಃಶ್ರೇಷ್ಠಂ ಪುರಾತನಂ|
08045033e ಸಜ್ಯಂ ಕೃತ್ವಾ ಮಹಾರಾಜ ಸಮ್ಮೃಜ್ಯ ಚ ಪುನಃ ಪುನಃ||
08045034a ಸಂನಿವಾರ್ಯ ಚ ಯೋಧಾನ್ಸ್ವಾನ್ಸತ್ಯೇನ ಶಪಥೇನ ಚ|
ಮಹಾರಾಜ! ಹೀಗೆ ಹೇಳಿ ಪ್ರತಾಪವಾನ್ ವೀರ ಸೂತಪುತ್ರನು ಪುರಾತನವಾದ ಶ್ರೇಷ್ಠ ಧನುಸ್ಸು ವಿಜಯವನ್ನು ಹಿಡಿದುಕೊಂಡನು. ಮಹಾರಾಜ! ಅದನ್ನು ಹೆದೆಯೇರಿಸಿ ಬಾರಿ ಬಾರಿಗೂ ಶಿಂಜಿನಿಯನ್ನು ತೀಡುತ್ತಾ ಸತ್ಯ ಶಪಥಗಳಿಂದ ತನ್ನಕಡೆಯ ಯೋಧರನ್ನು ತಡೆದನು.
08045034c ಪ್ರಾಯೋಜಯದಮೇಯಾತ್ಮಾ ಭಾರ್ಗವಾಸ್ತ್ರಂ ಮಹಾಬಲಃ||
08045035a ತತೋ ರಾಜನ್ಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ|
08045035c ಕೋಟಿಶಶ್ಚ ಶರಾಸ್ತೀಕ್ಷ್ಣಾ ನಿರಗಚ್ಚನ್ಮಹಾಮೃಧೇ||
08045036a ಜ್ವಲಿತೈಸ್ತೈರ್ಮಹಾಘೋರೈಃ ಕಂಕಬರ್ಹಿಣವಾಜಿತೈಃ|
08045036c ಸಂಚನ್ನಾ ಪಾಂಡವೀ ಸೇನಾ ನ ಪ್ರಾಜ್ಞಾಯತ ಕಿಂ ಚನ||
ಮಹಾಬಲ ಅಮೇಯಾತ್ಮ ಕರ್ಣನು ಭಾರ್ಗವಾಸ್ತ್ರವನ್ನು ಪ್ರಕಟಿಸಿದನು. ರಾಜನ್! ಆಗ ಸಹಸ್ರಾರು ಲಕ್ಷೋಪಲಕ್ಷ, ಕೋಟ್ಯಾನುಕೋಟಿ ತಿಕ್ಷ್ಣ ಶರಗಳು ಮಹಾಮೃಧದಲ್ಲಿ ಹೊರಬಂದವು. ಪ್ರಜ್ವಲಿಸುತ್ತಿದ್ದ ಆ ಮಹಾಘೋರ ಕಂಕಬರ್ಹಿಣವಾಜಿಗಳು ಪಾಂಡವೀ ಸೇನೆಯನ್ನು ಮುಸುಕಿ ಏನೂ ತಿಳಿಯದಂತಾಯಿತು.
08045037a ಹಾಹಾಕಾರೋ ಮಹಾನಾಸೀತ್ಪಾಂಚಾಲಾನಾಂ ವಿಶಾಂ ಪತೇ|
08045037c ಪೀಡಿತಾನಾಂ ಬಲವತಾ ಭಾರ್ಗವಾಸ್ತ್ರೇಣ ಸಂಯುಗೇ||
ವಿಶಾಂಪತೇ! ಸಂಯುಗದಲ್ಲಿ ಬಲವತ್ತಾದ ಭಾರ್ಗವಾಸ್ತ್ರದಿಂದ ಪೀಡಿತ ಪಾಂಚಾಲರಲ್ಲಿ ಮಹಾ ಹಾಹಾಕಾರವುಂಟಾಯಿತು.
08045038a ನಿಪತದ್ಭಿರ್ಗಜೈ ರಾಜನ್ನರೈಶ್ಚಾಪಿ ಸಹಸ್ರಶಃ|
08045038c ರಥೈಶ್ಚಾಪಿ ನರವ್ಯಾಘ್ರ ಹಯೈಶ್ಚಾಪಿ ಸಮಂತತಃ||
ರಾಜನ್! ನರವ್ಯಾಘ್ರ! ಸಹಸ್ರಾರು ಸಂಖ್ಯೆಗಳಲ್ಲಿ ಆನೆಗಳೂ, ಮನುಷ್ಯರೂ, ರಥಗಳೂ, ಕುದುರೆಗಳೂ ಎಲ್ಲ ಕಡೆ ಬೀಳತೊಡಗಿದವು.
08045039a ಪ್ರಾಕಂಪತ ಮಹೀ ರಾಜನ್ನಿಹತೈಸ್ತೈಸ್ತತಸ್ತತಃ|
08045039c ವ್ಯಾಕುಲಂ ಸರ್ವಮಭವತ್ಪಾಂಡವಾನಾಂ ಮಹದ್ಬಲಂ||
ರಾಜನ್! ಹತರಾಗಿ ಬೀಳುತ್ತಿದ್ದವರಿಂದ ಭೂಮಿಯೇ ನಡುಗಿತು. ಪಾಂಡವರ ಮಹಾಸೇನೆಯಲ್ಲಿ ಎಲ್ಲರೂ ವ್ಯಾಕುಲಗೊಂಡರು.
08045040a ಕರ್ಣಸ್ತ್ವೇಕೋ ಯುಧಾಂ ಶ್ರೇಷ್ಠೋ ವಿಧೂಮ ಇವ ಪಾವಕಃ|
08045040c ದಹಂ ಶತ್ರೂನ್ನರವ್ಯಾಘ್ರ ಶುಶುಭೇ ಸ ಪರಂತಪಃ||
ನರವ್ಯಾಘ್ರ! ಯೋಧರಲ್ಲಿ ಶ್ರೇಷ್ಠ ಪರಂತಪ ಕರ್ಣನೊಬ್ಬನೇ ಹೊಗೆಯಿಲ್ಲದ ಪಾವಕನಂತೆ ಶತ್ರುಗಳನ್ನು ದಹಿಸುತ್ತಾ ಶೋಭಿಸಿದನು.
08045041a ತೇ ವಧ್ಯಮಾನಾಃ ಕರ್ಣೇನ ಪಾಂಚಾಲಾಶ್ಚೇದಿಭಿಃ ಸಹ|
08045041c ತತ್ರ ತತ್ರ ವ್ಯಮುಹ್ಯಂತ ವನದಾಹೇ ಯಥಾ ದ್ವಿಪಾಃ|
08045041e ಚುಕ್ರುಶುಸ್ತೇ ನರವ್ಯಾಘ್ರ ಯಥಾಪ್ರಾಗ್ವಾ ನರೋತ್ತಮಾಃ||
ಕರ್ಣನಿಂದ ವಧಿಸಲ್ಪಡುತ್ತಿದ್ದ ಚೇದಿಗಳೊಡನೆ ಆ ಪಾಂಚಾಲರು ಕಾಡ್ಗಿಚ್ಚಿನಲ್ಲಿ ಆನೆಗಳು ಮುದುಡಿ ಬೀಳುವಂತೆ ಬೀಳುತ್ತಿದ್ದರು. ನರವ್ಯಾಘ್ರ! ಆ ನರೋತ್ತಮರು ವ್ಯಾಘ್ರಗಳಂತೆ ಚೀತ್ಕರಿಸುತ್ತಿದ್ದರು.
08045042a ತೇಷಾಂ ತು ಕ್ರೋಶತಾಂ ಶ್ರುತ್ವಾ ಭೀತಾನಾಂ ರಣಮೂರ್ಧನಿ|
08045042c ಧಾವತಾಂ ಚ ದಿಶೋ ರಾಜನ್ವಿತ್ರಸ್ತಾನಾಂ ಸಮಂತತಃ|
08045042e ಆರ್ತನಾದೋ ಮಹಾಂಸ್ತತ್ರ ಪ್ರೇತಾನಾಮಿವ ಸಂಪ್ಲವೇ||
ರಾಜನ್! ರಣಮೂರ್ಧನಿಯಲ್ಲಿ ಭಯಗೊಂಡು ದಿಕ್ಕುದಿಕ್ಕುಗಳಲ್ಲಿ ಓಡುತ್ತಿದ್ದ ಅವರ ಭಯದ ಕೂಗುಗಳು ಪ್ರಳಯಕಾಲದಲ್ಲಿ ಪ್ರಾಣಿಗಳ ಆರ್ತನಾದದಂತೆ ಜೋರಾಗಿ ಕೇಳಿಬರುತ್ತಿತ್ತು.
08045043a ವಧ್ಯಮಾನಾಂಸ್ತು ತಾನ್ದೃಷ್ಟ್ವಾ ಸೂತಪುತ್ರೇಣ ಮಾರಿಷ|
08045043c ವಿತ್ರೇಸುಃ ಸರ್ವಭೂತಾನಿ ತಿರ್ಯಗ್ಯೋನಿಗತಾನ್ಯಪಿ||
ಮಾರಿಷ! ಸೂತಪುತ್ರನಿಂದ ವಧಿಸಲ್ಪಡುತ್ತಿರುವ ಅವರನ್ನು ನೋಡಿ ಸಮಸ್ತ ಪ್ರಾಣಿಗಳೂ, ಪಶುಪಕ್ಷಿಗಳೂ ಭಯಗೊಂಡವು.
08045044a ತೇ ವಧ್ಯಮಾನಾಃ ಸಮರೇ ಸೂತಪುತ್ರೇಣ ಸೃಂಜಯಾಃ|
08045044c ಅರ್ಜುನಂ ವಾಸುದೇವಂ ಚ ವ್ಯಾಕ್ರೋಶಂತ ಮುಹುರ್ಮುಹುಃ|
08045044e ಪ್ರೇತರಾಜಪುರೇ ಯದ್ವತ್ಪ್ರೇತರಾಜಂ ವಿಚೇತಸಃ||
ಸಮರದಲ್ಲಿ ಸೂತಪುತ್ರನಿಂದ ವಧಿಸಲ್ಪಡುತ್ತಿರುವ ಸೃಂಜಯರು ಪ್ರೇತರಾಜನ ಪಟ್ಟಣಕ್ಕೆ ಹೋಗಿ ವಿಚೇತಸರಾಗಿ ಪ್ರೇತರಾಜನನ್ನು ಕೂಗಿಕೊಳ್ಳುವಂತೆ ಅರ್ಜುನ-ವಾಸುದೇವರನ್ನು ಪುನಃ ಪುನಃ ಕೂಗಿ ಕರೆಯುತ್ತಿದ್ದರು.
08045045a ಅಥಾಬ್ರವೀದ್ವಾಸುದೇವಂ ಕುಂತೀಪುತ್ರೋ ಧನಂಜಯಃ|
08045045c ಭಾರ್ಗವಾಸ್ತ್ರಂ ಮಹಾಘೋರಂ ದೃಷ್ಟ್ವಾ ತತ್ರ ಸಭೀರಿತಂ||
ಭಯವನ್ನುಂಟುಮಾಡಿದ ಆ ಮಹಾಘೋರ ಭಾರ್ಗವಾಸ್ತ್ರವನ್ನು ನೋಡಿ ಕುಂತೀಪುತ್ರ ಧನಂಜಯನು ವಾಸುದೇವನಿಗೆ ಇಂತೆಂದನು:
08045046a ಪಶ್ಯ ಕೃಷ್ಣ ಮಹಾಬಾಹೋ ಭಾರ್ಗವಾಸ್ತ್ರಸ್ಯ ವಿಕ್ರಮಂ|
08045046c ನೈತದಸ್ತ್ರಂ ಹಿ ಸಮರೇ ಶಕ್ಯಂ ಹಂತುಂ ಕಥಂ ಚನ||
“ಮಹಾಬಾಹೋ! ಕೃಷ್ಣ! ಭಾರ್ಗವಾಸ್ತ್ರದ ವಿಕ್ರಮವನ್ನು ನೋಡು! ಸಮರದಲ್ಲಿ ಈ ಮಹಾಸ್ತ್ರವನ್ನು ಉಪಶಮನಗೊಳಿಸಲು ಯಾರಿಗೂ ಸಾಧ್ಯವಿಲ್ಲ!
08045047a ಸೂತಪುತ್ರಂ ಚ ಸಂರಬ್ಧಂ ಪಶ್ಯ ಕೃಷ್ಣ ಮಹಾರಣೇ|
08045047c ಅಂತಕಪ್ರತಿಮಂ ವೀರಂ ಕುರ್ವಾಣಂ ಕರ್ಮ ದಾರುಣಂ||
ಕೃಷ್ಣ! ಮಹಾರಣದಲ್ಲಿ ಸಂರಬ್ಧನಾಗಿ ದಾರುಣ ಕರ್ಮವನ್ನೆಸಗುತ್ತಿರುವ ಅಂತಕಪ್ರತಿಮ ವೀರ ಸೂತಪುತ್ರನನ್ನು ನೋಡು!
08045048a ಸುತೀಕ್ಷ್ಣಂ ಚೋದಯನ್ನಶ್ವಾನ್ಪ್ರೇಕ್ಷತೇ ಮಾಂ ಮುಹುರ್ಮುಹುಃ|
08045048c ನ ಚ ಪಶ್ಯಾಮಿ ಸಮರೇ ಕರ್ಣಸ್ಯ ಪ್ರಪಲಾಯಿತಂ||
ಕುದುರೆಗಳನ್ನು ತೀಕ್ಷ್ಣವಾಗಿ ಪ್ರಚೋದಿಸುತ್ತಾ ಅವನು ನನ್ನನ್ನೇ ಪುನಃ ಪುನಃ ನೋಡುತ್ತಿದ್ದಾನೆ. ಸಮರದಲ್ಲಿ ಕರ್ಣನನ್ನು ಪಲಾಯನಗೊಳಿಸುವನನ್ನು ನಾನು ಕಾಣೆ!
08045049a ಜೀವನ್ಪ್ರಾಪ್ನೋತಿ ಪುರುಷಃ ಸಂಖ್ಯೇ ಜಯಪರಾಜಯೌ|
08045049c ಜಿತಸ್ಯ ತು ಹೃಷೀಕೇಶ ವಧ ಏವ ಕುತೋ ಜಯಃ||
ಹೃಷೀಕೇಶ! ಪುರುಷನು ಜೀವಿಸಿದ್ದರೆ ಯುದ್ಧದಲ್ಲಿ ಜಯವನ್ನೋ ಪರಾಜಯವನ್ನೋ ಪಡೆಯುತ್ತಾನೆ. ಆದರೆ ಗೆದ್ದವನ ವಧೆಯಾದರೆ ಜಯವು ಎಲ್ಲಿಂದ?”
08045050a ತತೋ ಜನಾರ್ದನಃ ಪ್ರಾಯಾದ್ದ್ರಷ್ಟುಮಿಚ್ಚನ್ಯುಧಿಷ್ಠಿರಂ|
08045050c ಶ್ರಮೇಣ ಗ್ರಾಹಯಿಷ್ಯಂಶ್ಚ ಕರ್ಣಂ ಯುದ್ಧೇನ ಮಾರಿಷ||
ಮಾರಿಷ! ಆಗ ಜನಾರ್ದನನು ಯುಧಿಷ್ಠಿರನನ್ನು ನೋಡಲು ಇಚ್ಛಿಸಿ, ಕರ್ಣನನ್ನು ಶ್ರಮಪಟ್ಟು ಇತರರೊಂದಿಗೆ ಯುದ್ಧಮಾಡಲು ಬಿಟ್ಟು ಅಲ್ಲಿಂದ ರಥವನ್ನು ಓಡಿಸಿದನು.
08045051a ಅರ್ಜುನಂ ಚಾಬ್ರವೀತ್ಕೃಷ್ಣೋ ಭೃಶಂ ರಾಜಾ ಪರಿಕ್ಷತಃ|
08045051c ತಮಾಶ್ವಾಸ್ಯ ಕುರುಶ್ರೇಷ್ಠ ತತಃ ಕರ್ಣಂ ಹನಿಷ್ಯಸಿ||
ಕೃಷ್ಣನು ಅರ್ಜುನನಿಗೆ ಹೇಳಿದನು: “ರಾಜಾ ಯುಧಿಷ್ಠಿರನು ಕ್ಷತವಿಕ್ಷತನಾಗಿದ್ದಾನೆ. ಕುರುಶ್ರೇಷ್ಠ! ಅವನನ್ನು ಸಮಾಧಾನಗೊಳಿಸಿದ ನಂತರ ನೀನು ಕರ್ಣನನ್ನು ವಧಿಸುವೆಯಂತೆ!”
08045052a ತತೋ ಧನಂಜಯೋ ದ್ರಷ್ಟುಂ ರಾಜಾನಂ ಬಾಣಪೀಡಿತಂ|
08045052c ರಥೇನ ಪ್ರಯಯೌ ಕ್ಷಿಪ್ರಂ ಸಂಗ್ರಾಮೇ ಕೇಶವಾಜ್ಞಯಾ||
ಆಗ ಕೇಶವನ ಆಜ್ಞೆಯಂತೆ ಸಂಗ್ರಾಮವನ್ನು ಬಿಟ್ಟು ಬಾಣಪೀಡಿತ ರಾಜ ಯುಧಿಷ್ಠಿರನನ್ನು ಕಾಣಲು ಬೇಗನೆ ರಥದಲ್ಲಿ ಕುಳಿತು ಹೋದನು.
08045053a ಗಚ್ಚನ್ನೇವ ತು ಕೌಂತೇಯೋ ಧರ್ಮರಾಜದಿದೃಕ್ಷಯಾ|
08045053c ಸೈನ್ಯಮಾಲೋಕಯಾಮಾಸ ನಾಪಶ್ಯತ್ತತ್ರ ಚಾಗ್ರಜಂ||
08045054a ಯುದ್ಧಂ ಕೃತ್ವಾ ತು ಕೌಂತೇಯೋ ದ್ರೋಣಪುತ್ರೇಣ ಭಾರತ|
08045054c ದುಃಸಹಂ ವಜ್ರಿಣಾ ಸಂಖ್ಯೇ ಪರಾಜಿಗ್ಯೇ ಭೃಗೋಃ ಸುತಂ||
ಭಾರತ! ಕೌಂತೇಯನು ಯುದ್ಧದಲ್ಲಿ ವಜ್ರಿಣಿ ಇಂದ್ರನಿಂದಲೂ ಪರಾಜಯಗೊಳಿಸಲು ದುಃಸಾಧ್ಯನಾದ ಭೃಗುಸುತನೊಡನೆ ಯುದ್ಧಮಾಡಿ ಧರ್ಮರಾಜನನ್ನು ನೋಡಲು ಹೊರಟ ಕೌಂತೇಯನು ಸೈನ್ಯದಲ್ಲಿ ಹುಡುಕಲು ಅಲ್ಲಿ ತನ್ನ ಅಗ್ರಜನನ್ನು ಕಾಣಲಿಲ್ಲ.
08045055a ದ್ರೌಣಿಂ ಪರಾಜಿತ್ಯ ತತೋಗ್ರಧನ್ವಾ
ಕೃತ್ವಾ ಮಹದ್ದುಷ್ಕರಮಾರ್ಯಕರ್ಮ|
08045055c ಆಲೋಕಯಾಮಾಸ ತತಃ ಸ್ವಸೈನ್ಯಂ
ಧನಂಜಯಃ ಶತ್ರುಭಿರಪ್ರಧೃಷ್ಯಃ||
ದ್ರೌಣಿಯನ್ನು ಪರಾಜಯಗೊಳಿಸುವ ಆ ಮಹಾ ದುಷ್ಕರ ಆರ್ಯಕರ್ಮವನ್ನೆಸಗಿದ ನಂತರ ಶತ್ರುಗಳಿಂದ ಎದುರಿಸಲು ಅಸಾಧ್ಯನಾದ ಉಗ್ರಧನ್ವಿ ಧನಂಜಯನು ತನ್ನ ಸೇನೆಯನ್ನು ಅವಲೋಕಿಸಿದನು.
08045056a ಸ ಯುಧ್ಯಮಾನಃ ಪೃತನಾಮುಖಸ್ಥಾಂ
ಶೂರಾಂ ಶೂರೋ ಹರ್ಷಯನ್ಸವ್ಯಸಾಚೀ|
08045056c ಪೂರ್ವಾಪದಾನೈಃ ಪ್ರಥಿತೈಃ ಪ್ರಶಂಸನ್
ಸ್ಥಿರಾಂಶ್ಚಕಾರಾತ್ಮರಥಾನನೀಕೇ||
ಶೂರ ಸವ್ಯಸಾಚಿಯು ಸೇನೆಯ ಅಗ್ರಭಾಗದಲ್ಲಿ ಯುದ್ಧಮಾಡುತ್ತಿದ್ದ ಶೂರರನ್ನು ಪ್ರಶಂಸೆಮಾಡಿ ಹರ್ಷಗೊಳಿಸುತ್ತಾ ಸೇನೆಯ ಹಿಂದಿರುವವರನ್ನೂ ಪ್ರಶಂಸಿಸುತ್ತಾ ಅವರೆಲ್ಲರನ್ನೂ ರಥಾನೀಕದಲ್ಲಿ ಸ್ಥಿರರಾಗಿ ನಿಲ್ಲುವಂತೆ ಪ್ರಚೋದಿಸಿದನು.
08045057a ಅಪಶ್ಯಮಾನಸ್ತು ಕಿರೀಟಮಾಲೀ
ಯುಧಿ ಜ್ಯೇಷ್ಠಂ ಭ್ರಾತರಮಾಜಮೀಢಂ|
08045057c ಉವಾಚ ಭೀಮಂ ತರಸಾಭ್ಯುಪೇತ್ಯ
ರಾಜ್ಞಃ ಪ್ರವೃತ್ತಿಸ್ತ್ವಿಹ ಕೇತಿ ರಾಜನ್||
ಯುದ್ಧದಲ್ಲಿ ಜ್ಯೇಷ್ಠ ಭ್ರಾತರ ಆಜಮೀಢ ಬೀಮನನ್ನು ನೋಡಿ ಕಿರೀಟಮಾಲೀ ಅರ್ಜುನನು ಬೇಗನೆ ಅವನ ಬಳಿಸಾರಿ ರಾಜನ ವೃತ್ತಾಂತವನ್ನು ತಿಳಿಯಲು ರಾಜನೆಲ್ಲಿ ಎಂದು ಕೇಳಿದನು.
8045058 ಭೀಮ ಉವಾಚ|
08045058a ಅಪಯಾತ ಇತೋ ರಾಜಾ ಧರ್ಮಪುತ್ರೋ ಯುಧಿಷ್ಠಿರಃ|
08045058c ಕರ್ಣಬಾಣವಿಭುಗ್ನಾಂಗೋ ಯದಿ ಜೀವೇತ್ಕಥಂ ಚನ||
ಭೀಮನು ಹೇಳಿದನು: “ಕರ್ಣನ ಬಾಣಗಳಿಂದ ಗಾಯಗೊಂಡಿರುವ ರಾಜಾ ಧರ್ಮಪುತ್ರ ಯುಧಿಷ್ಠಿರನು ಇಲ್ಲಿಂದ ಹೊರಟುಹೋಗಿದ್ದಾನೆ. ಹೇಗೋ ಅವನಿನ್ನೂ ಜೀವಿಸಿರಬಹುದು!”
8045059 ಅರ್ಜುನ ಉವಾಚ|
08045059a ತಸ್ಮಾದ್ಭವಾಂ ಶೀಘ್ರಮಿತಃ ಪ್ರಯಾತು
ರಾಜ್ಞಃ ಪ್ರವೃತ್ತ್ಯೈ ಕುರುಸತ್ತಮಸ್ಯ|
08045059c ನೂನಂ ಹಿ ವಿದ್ಧೋಽತಿಭೃಶಂ ಪೃಷತ್ಕೈಹ್
ಕರ್ಣೇನ ರಾಜಾ ಶಿಬಿರಂ ಗತೋಽಸೌ||
ಅರ್ಜುನನು ಹೇಳಿದನು: “ಇಲ್ಲಿಂದ ನೀನು ಶೀಘ್ರವಾಗಿ ಹೋಗಿ ಕುರುಸತ್ತಮ ರಾಜನ ಸಮಾಚಾರವನ್ನು ತಿಳಿದುಕೋ! ಕರ್ಣನ ಬಾಣಗಳಿಂದ ಅತಿಯಾಗಿ ಗಾಯಗೊಂಡಿರುವ ರಾಜನು ಶಿಬಿರಕ್ಕೆ ಹೋಗಿರಬಹುದು!
08045060a ಯಃ ಸಂಪ್ರಹಾರೇ ನಿಶಿ ಸಂಪ್ರವೃತ್ತೇ
ದ್ರೋಣೇನ ವಿದ್ಧೋಽತಿಭೃಶಂ ತರಸ್ವೀ|
08045060c ತಸ್ಥೌ ಚ ತತ್ರಾಪಿ ಜಯಪ್ರತೀಕ್ಷೋ
ದ್ರೋಣೇನ ಯಾವನ್ನ ಹತಃ ಕಿಲಾಸೀತ್||
ರಾತ್ರಿಯುದ್ಧದಲ್ಲಿ ಕೂಡ ಆ ತರಸ್ವಿಯು ದ್ರೋಣನ ಪ್ರಹಾರಗಳಿಂದ ಅತಿಯಾಗಿ ಗಾಯಗೊಂಡಿದ್ದನು. ಆದರೆ ಜಯವನ್ನು ಪ್ರತೀಕ್ಷಿಸುತ್ತಿದ್ದ ಅವನು ದ್ರೋಣನು ಹತನಾಗುವವರೆಗೂ ರಣದಲ್ಲಿಯೇ ನಿಂತಿದ್ದನು.
08045061a ಸ ಸಂಶಯಂ ಗಮಿತಃ ಪಾಂಡವಾಗ್ರ್ಯಃ
ಸಂಖ್ಯೇಽದ್ಯ ಕರ್ಣೇನ ಮಹಾನುಭಾವಃ|
08045061c ಜ್ಞಾತುಂ ಪ್ರಯಾಃಯಾಶು ತಮದ್ಯ ಭೀಮ
ಸ್ಥಾಸ್ಯಾಮ್ಯಹಂ ಶತ್ರುಗಣಾನ್ನಿರುಧ್ಯ||
ಆದರೆ ಇಂದು ಕರ್ಣನಿಂದ ಪೀಡಿತನಾದ ಮಹಾನುಭಾವ ಪಾಂಡವಾಗ್ರ್ಯನು ಶಿಬಿರಕ್ಕೆ ಹೊರಟುಹೋಗಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಭೀಮ! ಇಂದು ಅವನ ಬಗ್ಗೆ ತಿಳಿಯಲು ನೀನು ಹೊರಟುಹೋಗು. ನಾನು ಶತ್ರುಗಣಗಳನ್ನು ವಿರೋಧಿಸಿ ಇಲ್ಲಿಯೇ ನಿಲ್ಲುತ್ತೇನೆ!”
8045062 ಭೀಮ ಉವಾಚ|
08045062a ತ್ವಮೇವ ಜಾನೀಹಿ ಮಹಾನುಭಾವ
ರಾಜ್ಞಃ ಪ್ರವೃತ್ತಿಂ ಭರತರ್ಷಭಸ್ಯ|
08045062c ಅಹಂ ಹಿ ಯದ್ಯರ್ಜುನ ಯಾಮಿ ತತ್ರ
ವಕ್ಷ್ಯಂತಿ ಮಾಂ ಭೀತ ಇತಿ ಪ್ರವೀರಾಃ||
ಭೀಮನು ಹೇಳಿದನು: “ಮಹಾನುಭಾವ! ನೀನೇ ಹೋಗಿ ಭರತರ್ಷಭ ರಾಜನ ವಿಚಾರವನ್ನು ತಿಳಿದುಕೊಂಡು ಬಾ! ಅರ್ಜುನ! ಒಂದುವೇಳೆ ನಾನೇ ಅಲ್ಲಿಗೆ ಹೋದರೆ ಯುದ್ಧ ಪ್ರವೀರರು ಭಯದಿಂದ ನಾನು ಹೊರಟುಹೋದನೆಂದು ಮಾತನಾಡಿಕೊಳ್ಳುತ್ತಾರೆ!”
08045063a ತತೋಽಬ್ರವೀದರ್ಜುನೋ ಭೀಮಸೇನಂ
ಸಂಶಪ್ತಕಾಃ ಪ್ರತ್ಯನೀಕಂ ಸ್ಥಿತಾ ಮೇ|
08045063c ಏತಾನಹತ್ವಾ ನ ಮಯಾ ತು ಶಕ್ಯಂ
ಇತೋಽಪಯಾತುಂ ರಿಪುಸಂಘಗೋಷ್ಠಾತ್||
ಆಗ ಅರ್ಜುನನು ಭೀಮಸೇನನಿಗೆ ಇಂತೆಂದನು: “ಸಂಶಪ್ತಕರು ನನ್ನ ಎದುರಾಗಿ ನಿಂತಿದ್ದಾರೆ. ಇವರನ್ನು ಸಂಹರಿಸದೆ ಶತ್ರುಸೇನೆಗಳನ್ನು ಬಿಟ್ಟು ಇಲ್ಲಿಂದ ಹೋಗಲು ನನಗೆ ಶಕ್ಯವಾಗುತ್ತಿಲ್ಲ!”
08045064a ಅಥಾಬ್ರವೀದರ್ಜುನಂ ಭೀಮಸೇನಹಃ
ಸ್ವವೀರ್ಯಮಾಶ್ರಿತ್ಯ ಕುರುಪ್ರವೀರ|
08045064c ಸಂಶಪ್ತಕಾನ್ಪ್ರತಿಯೋತ್ಸ್ಯಾಮಿ ಸಂಖ್ಯೇ
ಸರ್ವಾನಹಂ ಯಾಹಿ ಧನಂಜಯೇತಿ||
ಆಗ ತನ್ನ ವೀರ್ಯವನ್ನೇ ಆಶ್ರಯಿಸಿದ್ದ ಭೀಮಸೇನನು ಅರ್ಜುನನಿಗೆ ಹೇಳಿದನು: “ಕುರುಪ್ರವೀರ! ಧನಂಜಯ! ಯುದ್ಧದಲ್ಲಿ ಸಂಶಪ್ತಕರೊಡನೆ ನಾನು ಹೋರಾಡುತ್ತೇನೆ. ಸರ್ವರನ್ನೂ ನಾನು ಸಂಹರಿಸುತ್ತೇನೆ. ನೀನು ಹೋಗು!”
08045065a ತದ್ಭೀಮಸೇನಸ್ಯ ವಚೋ ನಿಶಂಯ
ಸುದುರ್ವಚಂ ಭ್ರಾತುರಮಿತ್ರಮಧ್ಯೇ|
08045065c ದ್ರಷ್ಟುಂ ಕುರುಶ್ರೇಷ್ಠಮಭಿಪ್ರಯಾತುಂ
ಪ್ರೋವಾಚ ವೃಷ್ಣಿಪ್ರವರಂ ತದಾನೀಂ||
ಶತ್ರುಗಳ ಮಧ್ಯದಲ್ಲಿ ಅಣ್ಣ ಭೀಮಸೇನನ ಆ ಸುದುಷ್ಕರ ಮಾತನ್ನು ಆಲಿಸಿ ಅರ್ಜುನನು ಕುರುಶ್ರೇಷ್ಠ ಯುಧಿಷ್ಠಿರನನ್ನು ನೋಡಲು ಮುಂದೆ ಹೋಗುತ್ತಾ ವೃಷ್ಣಿಪ್ರವರ ಕೃಷ್ಣನಿಗೆ ಇಂತೆಂದನು:
08045066a ಚೋದಯಾಶ್ವಾನ್ ಹೃಷೀಕೇಶ ವಿಗಾಹ್ಯೈತಂ ರಥಾರ್ಣವಂ|
08045066c ಅಜಾತಶತ್ರುಂ ರಾಜಾನಂ ದ್ರಷ್ಟುಮಿಚ್ಚಾಮಿ ಕೇಶವ||
“ಹೃಷೀಕೇಶ! ಕೇಶವ! ಸಮುದ್ರರೂಪದ ಈ ರಣವನ್ನು ದಾಟಿ ಕುದುರೆಗಳನ್ನು ಓಡಿಸು! ಅಜಾತಶತ್ರು ರಾಜನನ್ನು ನೋಡಲು ಬಯಸುತ್ತೇನೆ!”
08045067a ತತೋ ಹಯಾನ್ಸರ್ವದಾಶಾರ್ಹಮುಖ್ಯಃ
ಪ್ರಾಚೋದಯದ್ಭೀಮಮುವಾಚ ಚೇದಂ|
08045067c ನೈತಚ್ಚಿತ್ರಂ ತವ ಕರ್ಮಾದ್ಯ ವೀರ
ಯಾಸ್ಯಾಮಹೇ ಜಹಿ ಭೀಮಾರಿಸಂಘಾನ್||
ಆಗ ಸರ್ವದಾಶಾರ್ಹರ ಪ್ರಮುಖ ಕೇಶವನು ಕುದುರೆಗಳನ್ನು ಓಡಿಸುತ್ತಾ ಭೀಮನಿಗೆ ಇಂತೆಂದನು: “ಭೀಮ! ವೀರ! ನಿನ್ನ ಕರ್ಮದಲ್ಲಿ ಆಶ್ಚರ್ಯವೇನೂ ಇಲ್ಲ. ಅರಿಸಂಘಗಳನ್ನು ನೀನು ಸಂಹರಿಸಲು ಶಕ್ತನಾಗಿರುವೆ!”
08045068a ತತೋ ಯಯೌ ಹೃಷೀಕೇಶೋ ಯತ್ರ ರಾಜಾ ಯುಧಿಷ್ಠಿರಃ|
08045068c ಶೀಘ್ರಾಚ್ಚೀಘ್ರತರಂ ರಾಜನ್ವಾಜಿಭಿರ್ಗರುಡೋಪಮೈಃ||
ರಾಜನ್! ಆಗ ಗರುಡನಂತಿರುವ ಕುದುರೆಗಳ ಮೂಲಕ ಶೀಘ್ರಾತಿಶೀಘ್ರವಾಗಿ ರಾಜಾ ಯುಧಿಷ್ಠಿರನಿರುವಲ್ಲಿಗೆ ಹೃಷೀಕೇಶ ಮತ್ತು ಅರ್ಜುನರು ಬಂದರು.
08045069a ಪ್ರತ್ಯನೀಕೇ ವ್ಯವಸ್ಥಾಪ್ಯ ಭೀಮಸೇನಂ ಅರಿಂದಮಂ|
08045069c ಸಂದಿಶ್ಯ ಚೈವ ರಾಜೇಂದ್ರ ಯುದ್ಧಂ ಪ್ರತಿ ವೃಕೋದರಂ||
ರಾಜೇಂದ್ರ! ಅವರು ಶತ್ರುಸೇನೆಗಳನ್ನು ಎದುರಿಸಲು ಅರಿಂದಮ ಭೀಮನನ್ನಿರಿಸಿ ವೃಕೋದರನಿಗೆ ಯುದ್ಧದ ಕುರಿತಾಗಿ ಸಲಹೆಗಳನ್ನೂ ನೀಡಿದ್ದರು.
08045070a ತತಸ್ತು ಗತ್ವಾ ಪುರುಷಪ್ರವೀರೌ
ರಾಜಾನಮಾಸಾದ್ಯ ಶಯಾನಂ ಏಕಂ|
08045070c ರಥಾದುಭೌ ಪ್ರತ್ಯವರುಃಯ ತಸ್ಮಾದ್
ವವಂದತುರ್ಧರ್ಮರಾಜಸ್ಯ ಪಾದೌ||
ಆಗ ಆ ಇಬ್ಬರು ಪುರುಷಪ್ರವೀರರೂ ಹೊರಟು ಒಬ್ಬನೇ ಮಲಗಿದ್ದ ರಾಜಾ ಯುಧಿಷ್ಠಿರನನ್ನು ತಲುಪಿ ರಥದಿಂದ ಇಬ್ಬರೂ ಕೆಳಕ್ಕಿಳಿದು ಧರ್ಮರಾಜನ ಪಾದಗಳಿಗೆ ವಂದಿಸಿದರು.
08045071a ತೌ ದೃಷ್ಟ್ವಾ ಪುರುಷವ್ಯಾಘ್ರೌ ಕ್ಷೇಮಿಣೌ ಪುರುಷರ್ಷಭ|
08045071c ಮುದಾಭ್ಯುಪಗತೌ ಕೃಷ್ಣಾವಶ್ವಿನಾವಿವ ವಾಸವಂ||
08045072a ತಾವಭ್ಯನಂದದ್ರಾಜಾ ಹಿ ವಿವಸ್ವಾನಶ್ವಿನಾವಿವ|
08045072c ಹತೇ ಮಹಾಸುರೇ ಜಂಭೇ ಶಕ್ರವಿಷ್ಣೂ ಯಥಾ ಗುರುಃ||
ಪುರುಷರ್ಷಭ! ಅಶ್ವಿನೀ ದೇವತೆಗಳು ವಾಸವನನ್ನು ಹೇಗೋ ಹಾಗೆ ಅಭಿನಂದಿಸಿದ ಆ ಇಬ್ಬರು ಪುರುಷವ್ಯಾಘ್ರ ಕುಶಲಿ ಕೃಷ್ಣಾರ್ಜುನರನ್ನು ನೋಡಿ ರಾಜಾ ಯುಧಿಷ್ಠಿರನು ವಿವಸ್ವತನು ಅಶ್ವಿನೀ ದೇವತೆಗಳನ್ನು ಹೇಗೋ ಹಾಗೆ ಮತ್ತು ಮಹಾಸುರ ಜಂಭನು ಹತನಾಗಲು ಗುರು ಬೃಹಸ್ಪತಿಯು ಶಕ್ರ-ವಿಷ್ಣು ಇಬ್ಬರನ್ನೂ ಹೇಗೋ ಹಾಗೆ ಸಂತೋಷದಿಂದ ಅಭಿನಂದಿಸಿದನು.
08045073a ಮನ್ಯಮಾನೋ ಹತಂ ಕರ್ಣಂ ಧರ್ಮರಾಜೋ ಯುಧಿಷ್ಠಿರಃ|
08045073c ಹರ್ಷಗದ್ಗದಯಾ ವಾಚಾ ಪ್ರೀತಃ ಪ್ರಾಹ ಪರಂತಪೌ||
ಕರ್ಣನು ಹತನಾದನೆಂದೇ ಭಾವಿಸಿ ಧರ್ಮರಾಜ ಯುಧಿಷ್ಠಿರನು ಆ ಪರಂತಪರಿಬ್ಬರಿಗೆ ಪ್ರೀತಿಯಿಂದ ಹರ್ಷಗದ್ಗದನಾಗಿ ಈ ಮಾತುಗಳನ್ನಾಡಿದನು.”
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಧರ್ಮರಾಜಶೋಧನೇ ಪಂಚಚತ್ವಾರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಧರ್ಮರಾಜಶೋಧನ ಎನ್ನುವ ನಲ್ವತ್ತೈದನೇ ಅಧ್ಯಾಯವು.
