ಕರ್ಣ ಪರ್ವ
Contents
Toggle೩೫
ಭೀಮಸೇನನು ವಿವಿತ್ಸು, ವಿಕಟ, ಸಮ, ನಂದ ಮತ್ತು ಉಪನಂದರೆಂಬ ಧೃತರಾಷ್ಟ್ರನ ಐವರು ಪುತ್ರರನ್ನು ಸಂಹರಿಸಿದುದು (೧-೧೮) ಕರ್ಣ-ಭೀಮಸೇನರ ಮತ್ತು ಕರ್ಣ ಸಾತ್ಯಕಿಯರ ನಡುವೆ ಯುದ್ಧ (೧೯-೬೦).
08035001 ಧೃತರಾಷ್ಟ್ರ ಉವಾಚ|
08035001a ಸುದುಷ್ಕರಮಿದಂ ಕರ್ಮ ಕೃತಂ ಭೀಮೇನ ಸಂಜಯ|
08035001c ಯೇನ ಕರ್ಣೋ ಮಹಾಬಾಹೂ ರಥೋಪಸ್ಥೇ ನಿಪಾತಿತಃ||
ಧೃತರಾಷ್ಟ್ರನು ಹೇಳಿದನು: “ಸಂಜಯ! ರಥೋಪಸ್ಥನಾಗಿದ್ದ ಮಹಾಬಾಹು ಕರ್ಣನನ್ನು ಕೆಳಗುರುಳಿಸಿ ಭೀಮನು ತುಂಬಾ ದುಷ್ಕರ ಕರ್ಮವನ್ನೇ ಎಸಗಿದನು!
08035002a ಕರ್ಣೋ ಹ್ಯೇಕೋ ರಣೇ ಹಂತಾ ಸೃಂಜಯಾನ್ಪಾಂಡವೈಃ ಸಹ|
08035002c ಇತಿ ದುರ್ಯೋಧನಃ ಸೂತ ಪ್ರಾಬ್ರವೀನ್ಮಾಂ ಮುಹುರ್ಮುಹುಃ||
ಸೂತ! “ಕರ್ಣನೊಬ್ಬನೇ ರಣದಲ್ಲಿ ಸೃಂಜಯರೊಂದಿಗೆ ಪಾಂಡವರನ್ನು ಸಂಹರಿಸುತ್ತಾನೆ!” ಎಂದು ದುರ್ಯೋಧನನು ನನಗೆ ಪುನಃ ಪುನಃ ಹೇಳುತ್ತಿದ್ದನು.
08035003a ಪರಾಜಿತಂ ತು ರಾಧೇಯಂ ದೃಷ್ಟ್ವಾ ಭೀಮೇನ ಸಂಯುಗೇ|
08035003c ತತಃ ಪರಂ ಕಿಮಕರೋತ್ಪುತ್ರೋ ದುರ್ಯೋಧನೋ ಮಮ||
ಸಂಯುಗದಲ್ಲಿ ರಾಧೇಯನು ಭೀಮನಿಂದ ಪರಾಜಿತನಾದುದನ್ನು ಕಂಡು ನನ್ನ ಪುತ್ರ ದುರ್ಯೋಧನನು ಮುಂದೇನು ಮಾಡಿದನು?”
08035004 ಸಂಜಯ ಉವಾಚ|
08035004a ವಿಭ್ರಾಂತಂ ಪ್ರೇಕ್ಷ್ಯ ರಾಧೇಯಂ ಸೂತಪುತ್ರಂ ಮಹಾಹವೇ|
08035004c ಮಹತ್ಯಾ ಸೇನಯಾ ರಾಜನ್ಸೋದರ್ಯಾನ್ಸಮಭಾಷತ||
ಸಂಜಯನು ಹೇಳಿದನು: “ರಾಜನ್! ಮಹಾಹವದಲ್ಲಿ ಸೂತಪುತ್ರ ರಾಧೇಯನು ವಿಭ್ರಾಂತನಾದುದನ್ನು ನೋಡಿ ದುರ್ಯೋಧನನು ಮಹಾಸೇನೆಗಳೊಂದಿಗಿದ್ದ ಸಹೋದರರಿಗೆ ಹೇಳಿದನು:
08035005a ಶೀಘ್ರಂ ಗಚ್ಚತ ಭದ್ರಂ ವೋ ರಾಧೇಯಂ ಪರಿರಕ್ಷತ|
08035005c ಭೀಮಸೇನಭಯಾಗಾಧೇ ಮಜ್ಜಂತಂ ವ್ಯಸನಾರ್ಣವೇ||
“ನಿಮಗೆ ಮಂಗಳವಾಗಲಿ! ಭೀಮಸೇನನ ಭಯವೆಂಬ ಅಗಾಧ ವ್ಯಸನ ಸಾಗರದಲ್ಲಿ ಮುಳುಗುತ್ತಿರುವ ರಾಧೇಯನನ್ನು ರಕ್ಷಿಸಲು ಶೀಘ್ರವಾಗಿ ಹೋಗಿ!”
08035006a ತೇ ತು ರಾಜ್ಞಾ ಸಮಾದಿಷ್ಟಾ ಭೀಮಸೇನಜಿಘಾಂಸವಃ|
08035006c ಅಭ್ಯವರ್ತಂತ ಸಂಕ್ರುದ್ಧಾಃ ಪತಂಗಾ ಇವ ಪಾವಕಂ||
ರಾಜನಿಂದ ಹಾಗೆ ಆಜ್ಞಾಪಿಸಲ್ಪಟ್ಟ ಅವರು ಸಂಕ್ರುದ್ಧರಾಗಿ ಭೀಮಸೇನನನ್ನು ಸಂಹರಿಸಲು ಪತಂಗಗಳು ಬೆಂಕಿಯನ್ನು ಹೇಗೋ ಹಾಗೆ ಅವನನ್ನು ಆಕ್ರಮಣಿಸಿದರು.
08035007a ಶ್ರುತಾಯುರ್ದುರ್ಧರಃ ಕ್ರಾಥೋ ವಿವಿತ್ಸುರ್ವಿಕಟಃ ಸಮಃ|
08035007c ನಿಷಂಗೀ ಕವಚೀ ಪಾಶೀ ತಥಾ ನಂದೋಪನಂದಕೌ||
08035008a ದುಷ್ಪ್ರಧರ್ಷಃ ಸುಬಾಹುಶ್ಚ ವಾತವೇಗಸುವರ್ಚಸೌ|
08035008c ಧನುರ್ಗ್ರಾಹೋ ದುರ್ಮದಶ್ಚ ತಥಾ ಸತ್ತ್ವಸಮಃ ಸಹಃ||
08035009a ಏತೇ ರಥೈಃ ಪರಿವೃತಾ ವೀರ್ಯವಂತೋ ಮಹಾಬಲಾಃ|
08035009c ಭೀಮಸೇನಂ ಸಮಾಸಾದ್ಯ ಸಮಂತಾತ್ಪರ್ಯವಾರಯನ್|
08035009e ತೇ ವ್ಯಮುಂಚಂ ಶರವ್ರಾತಾನ್ನಾನಾಲಿಂಗಾನ್ಸಮಂತತಃ||
ಶ್ರುತಾಯು, ದುರ್ಧರ, ಕ್ರಾಥ, ವಿವಿತ್ಸು, ವಿಕಟ, ಸಮ, ನಿಷಂಗೀ, ಕವಚೀ, ಪಾಶೀ, ನಂದ, ಉಪನಂದ, ದುಷ್ಪ್ರಧರ್ಷ, ಸುಬಾಹು, ವಾತವೇಗ, ಸುವರ್ಚಸ, ಧನುರ್ಗ್ರಾಹ, ಸುಬಾಹು, ವಾತವೇಗ, ಸುವರ್ಚಸ – ಈ ವೀರ್ಯವಂತ ಮಹಾಬಲರು ರಥಗಳಿಂದ ಪರಿವೃತರಾಗಿ ಭೀಮಸೇನನನ್ನು ಸಂಧಿಸಿ ಅವನನ್ನು ಎಲ್ಲಕಡೆಗಳಿಂದ ಮುತ್ತಿದರು. ಅವರು ನಾನಾ ವಿಧದ ಶರವ್ರಾತಗಳನ್ನು ಎಲ್ಲಕಡೆಗಳಿಂದಲೂ ಪ್ರಯೋಗಿಸಿದರು.
08035010a ಸ ತೈರಭ್ಯರ್ದ್ಯಮಾನಸ್ತು ಭೀಮಸೇನೋ ಮಹಾಬಲಃ|
08035010c ತೇಷಾಮಾಪತತಾಂ ಕ್ಷಿಪ್ರಂ ಸುತಾನಾಂ ತೇ ನರಾಧಿಪ|
08035010e ರಥೈಃ ಪಂಚಾಶತಾ ಸಾರ್ಧಂ ಪಂಚಾಶನ್ನ್ಯಹನದ್ರಥಾನ್||
ನರಾಧಿಪ! ಅವರಿಂದ ಪೀಡಿಸಲ್ಪಟ್ಟ ಮಹಾಬಲ ಭೀಮಸೇನನು ತನ್ನ ಮೇಲೆ ಎರಗುತ್ತಿದ್ದ ನಿನ್ನ ಸುತರ ಬೆಂಬಲಿಗರಾಗಿದ್ದ ಐವತ್ತು ರಥಗಳಲ್ಲಿ ಉಪಸ್ಥಿತರಾಗಿದ್ದ ಐವತ್ತು ರಥಿಗಳನ್ನು ಕ್ಷಣಮಾತ್ರದಲ್ಲಿ ಧ್ವಂಸಗೊಳಿಸಿದನು.
08035011a ವಿವಿತ್ಸೋಸ್ತು ತತಃ ಕ್ರುದ್ಧೋ ಭಲ್ಲೇನಾಪಾಹರಚ್ಚಿರಃ|
08035011c ಸಕುಂಡಲಶಿರಸ್ತ್ರಾಣಂ ಪೂರ್ಣಚಂದ್ರೋಪಮಂ ತದಾ|
08035011e ಭೀಮೇನ ಚ ಮಹಾರಾಜ ಸ ಪಪಾತ ಹತೋ ಭುವಿ||
ಮಹಾರಾಜ! ಅನಂತರ ಭೀಮನು ಕ್ರುದ್ಧನಾಗಿ ಭಲ್ಲದಿಂದ ಕುಂಡಲ ಕಿರೀಟಗಳೊಂದಿಗೆ ವಿವಿತ್ಸುವಿನ ಚಂದ್ರೋಪಮ ಶಿರವನ್ನು ಅಪಹರಿಸಿದನು. ಭೀಮನಿಂದ ಹತನಾಗಿ ಅವನು ಭೂಮಿಯ ಮೇಲೆ ಬಿದ್ದನು.
08035012a ತಂ ದೃಷ್ಟ್ವಾ ನಿಹತಂ ಶೂರಂ ಭ್ರಾತರಃ ಸರ್ವತಃ ಪ್ರಭೋ|
08035012c ಅಭ್ಯದ್ರವಂತ ಸಮರೇ ಭೀಮಂ ಭೀಮಪರಾಕ್ರಮಂ||
ಪ್ರಭೋ! ಸಮರದಲ್ಲಿ ಶೂರ ಭ್ರಾತರನು ಹತನಾದುದನ್ನು ನೋಡಿ ಅವರು ಭೀಮಪರಾಕ್ರಮಿ ಭೀಮನನ್ನು ಎಲ್ಲ ಕಡೆಗಳಿಂದ ಆಕ್ರಮಣಿಸಿದರು.
08035013a ತತೋಽಪರಾಭ್ಯಾಂ ಭಲ್ಲಾಭ್ಯಾಂ ಪುತ್ರಯೋಸ್ತೇ ಮಹಾಹವೇ|
08035013c ಜಹಾರ ಸಮರೇ ಪ್ರಾಣಾನ್ಭೀಮೋ ಭೀಮಪರಾಕ್ರಮಃ||
ಆಗ ಸಮರದಲ್ಲಿ ಭೀಮಪರಾಕ್ರಮಿ ಭೀಮನು ಮಹಾಹವದಲ್ಲಿ ಇನ್ನೆರಡು ಭಲ್ಲಗಳಿಂದ ನಿನ್ನ ಇನ್ನಿಬ್ಬರು ಪುತ್ರರ ಪ್ರಾಣಗಳನ್ನು ಅಪಹರಿಸಿದನು.
08035014a ತೌ ಧರಾಮನ್ವಪದ್ಯೇತಾಂ ವಾತರುಗ್ಣಾವಿವ ದ್ರುಮೌ|
08035014c ವಿಕಟಶ್ಚ ಸಮಶ್ಚೋಭೌ ದೇವಗರ್ಭಸಮೌ ನೃಪ||
ನೃಪ! ಆಗ ಭಿರುಗಾಳಿಯಿಂದ ಹೊಡೆಯಲ್ಪಟ್ಟ ಮರಗಳಂತೆ ದೇವಗರ್ಭಸಮಾನ ವಿಕಟ ಮತ್ತು ಸಮರಿಬ್ಬರೂ ಧರೆಯ ಮೇಲೆ ಬಿದ್ದರು.
08035015a ತತಸ್ತು ತ್ವರಿತೋ ಭೀಮಃ ಕ್ರಾಥಂ ನಿನ್ಯೇ ಯಮಕ್ಷಯಂ|
08035015c ನಾರಾಚೇನ ಸುತೀಕ್ಷ್ಣೇನ ಸ ಹತೋ ನ್ಯಪತದ್ಭುವಿ||
ಅನಂತರ ತ್ವರೆಮಾಡಿ ಭೀಮನು ತೀಕ್ಷ್ಣ ನಾರಾಚದಿಂದ ಕ್ರಾಥನನ್ನು ಸಂಹರಿಸಿ ಭೂಮಿಯ ಮೇಲೆ ಕೆಡವಿ ಯಮಕ್ಷಯಕ್ಕೆ ಕಳುಹಿಸಿದನು.
08035016a ಹಾಹಾಕಾರಸ್ತತಸ್ತೀವ್ರಃ ಸಂಬಭೂವ ಜನೇಶ್ವರ|
08035016c ವಧ್ಯಮಾನೇಷು ತೇ ರಾಜಂಸ್ತದಾ ಪುತ್ರೇಷು ಧನ್ವಿಷು||
ಜನೇಶ್ವರ! ರಾಜನ್! ನಿನ್ನ ಧನ್ವಿ ಪುತ್ರರು ವಧಿಸಲ್ಪಡಲು ಅಲ್ಲಿ ತೀವ್ರ ಹಾಹಾಕಾರವುಂಟಾಯಿತು.
08035017a ತೇಷಾಂ ಸಂಲುಲಿತೇ ಸೈನ್ಯೇ ಭೀಮಸೇನೋ ಮಹಾಬಲಃ|
08035017c ನಂದೋಪನಂದೌ ಸಮರೇ ಪ್ರಾಪಯದ್ಯಮಸಾದನಂ||
ಹೀಗೆ ಆ ಸೈನ್ಯವು ಕ್ಷೋಭೆಗೊಳ್ಳಲು ಮಹಾಬಲ ಭೀಮಸೇನನು ಸಮರದಲ್ಲಿ ನಂದ-ಉಪನಂದರನ್ನು ಯಮಸಾದನಕ್ಕೆ ಕಳುಹಿಸಿದನು.
08035018a ತತಸ್ತೇ ಪ್ರಾದ್ರವನ್ಭೀತಾಃ ಪುತ್ರಾಸ್ತೇ ವಿಹ್ವಲೀಕೃತಾಃ|
08035018c ಭೀಮಸೇನಂ ರಣೇ ದೃಷ್ಟ್ವಾ ಕಾಲಾಂತಕಯಮೋಪಮಂ||
ಕಾಲಾಂತಕ ಯಮನಂತಿರುವ ಭೀಮಸೇನನನ್ನು ರಣದಲ್ಲಿ ನೋಡಿ ಭೀತರೂ ವಿಹ್ವಲರೂ ಆಗಿದ್ದ ನಿನ್ನ ಪುತ್ರರು ಪಲಾಯನಗೈದರು.
08035019a ಪುತ್ರಾಂಸ್ತೇ ನಿಹತಾನ್ದೃಷ್ಟ್ವಾ ಸೂತಪುತ್ರೋ ಮಹಾಮನಾಃ|
08035019c ಹಂಸವರ್ಣಾನ್ ಹಯಾನ್ಭೂಯಃ ಪ್ರಾಹಿಣೋದ್ಯತ್ರ ಪಾಂಡವಃ||
ನಿನ್ನ ಪುತ್ರರು ಹತರಾದುದನ್ನು ನೋಡಿ ಮಹಾಮನಸ್ವಿ ಸೂತಪುತ್ರನು ತನ್ನ ಹಂಸವರ್ಣದ ಕುದುರೆಗಳನ್ನು ಪುನಃ ಪಾಂಡವನಿದ್ದಲ್ಲಿಗೆ ಓಡಿಸಿದನು.
08035020a ತೇ ಪ್ರೇಷಿತಾ ಮಹಾರಾಜ ಮದ್ರರಾಜೇನ ವಾಜಿನಃ|
08035020c ಭೀಮಸೇನರಥಂ ಪ್ರಾಪ್ಯ ಸಮಸಜ್ಜಂತ ವೇಗಿತಾಃ||
ಮಹಾರಾಜ! ಮದ್ರರಾಜನಿಂದ ಪ್ರೇರಿತ ಆ ಕುದುರೆಗಳು ವೇಗವಾಗಿ ಭೀಮಸೇನನ ರಥದ ಬಳಿಸಾರಿ ಸಜ್ಜಾಗಿ ನಿಂತವು.
08035021a ಸ ಸನ್ನಿಪಾತಸ್ತುಮುಲೋ ಘೋರರೂಪೋ ವಿಶಾಂ ಪತೇ|
08035021c ಆಸೀದ್ರೌದ್ರೋ ಮಹಾರಾಜ ಕರ್ಣಪಾಂಡವಯೋರ್ಮೃಧೇ||
ವಿಶಾಂಪತೇ! ಮಹಾರಾಜ! ಆಗ ಕರ್ಣ-ಪಾಂಡವರ ನಡುವೆ ಘೋರರೂಪದ ರೌದ್ರ ತುಮುಲ ಯುದ್ಧವು ನಡೆಯಿತು.
08035022a ದೃಷ್ಟ್ವಾ ಮಮ ಮಹಾರಾಜ ತೌ ಸಮೇತೌ ಮಹಾರಥೌ|
08035022c ಆಸೀದ್ಬುದ್ಧಿಃ ಕಥಂ ನೂನಮೇತದದ್ಯ ಭವಿಷ್ಯತಿ||
ಮಹಾರಾಜ! ಆ ಇಬ್ಬರು ಮಹಾರಥರೂ ಸಂಘರ್ಷಿಸುತ್ತಿರುವುದನ್ನು ನೋಡಿ ಇಂದು ಯುದ್ಧವು ಯಾವರೀತಿಯಲ್ಲಿ ನಡೆಯುವುದೆಂದು ನನ್ನ ಬುದ್ಧಿಯು ಚಿಂತಿಸತೊಡಗಿತು.
08035023a ತತೋ ಮುಹೂರ್ತಾದ್ರಾಜೇಂದ್ರ ನಾತಿಕೃಚ್ಚ್ಸ್ರಾದ್ಧಸನ್ನಿವ|
08035023c ವಿರಥಂ ಭೀಮಕರ್ಮಾಣಂ ಭೀಮಂ ಕರ್ಣಶ್ಚಕಾರ ಹ||
ರಾಜೇಂದ್ರ! ಆಗ ಮುಹೂರ್ತಮಾತ್ರದಲ್ಲಿ ಕರ್ಣನು ಅತಿಕಷ್ಟಪಡದೇ ನಗುತ್ತಿರುವನೋ ಎನ್ನುವಂತೆ ಭೀಮಕರ್ಮಿ ಭೀಮನನ್ನು ವಿರಥನನ್ನಾಗಿಸಿದನು.
08035024a ವಿರಥೋ ಭರತಶ್ರೇಷ್ಠಃ ಪ್ರಹಸನ್ನನಿಲೋಪಮಃ|
08035024c ಗದಾಹಸ್ತೋ ಮಹಾಬಾಹುರಪತತ್ಸ್ಯಂದನೋತ್ತಮಾತ್||
ಅನಿಲೋಪಮ ಮಹಾಬಾಹು ಭರತಶ್ರೇಷ್ಠನು ನಗುತ್ತಿರುವನೋ ಎನ್ನುವಂತೆ ಗದೆಯನ್ನು ಹಿಡಿದು ತನ್ನ ಉತ್ತಮ ರಥದಿಂದ ಧುಮುಕಿದನು.
08035025a ನಾಗಾನ್ಸಪ್ತಶತಾನ್ರಾಜನ್ನೀಷಾದಂತಾನ್ಪ್ರಹಾರಿಣಃ|
08035025c ವ್ಯಧಮತ್ಸಹಸಾ ಭೀಮಃ ಕ್ರುದ್ಧರೂಪಃ ಪರಂತಪಃ||
ರಾಜನ್! ಕೂಡಲೇ ಕ್ರುದ್ಧರೂಪ ಪರಂತಪ ಭೀಮನು ಈಷಾದಂಡ ಸಮಾನ ದಂತಗಳಿಂದ ಪ್ರಹರಿಸುತ್ತಿದ್ದ ಏಳುನೂರು ಆನೆಗಳನ್ನು ವಧಿಸಿದನು.
08035026a ದಂತವೇಷ್ಟೇಷು ನೇತ್ರೇಷು ಕಂಭೇಷು ಸ ಕಟೇಷು ಚ|
08035026c ಮರ್ಮಸ್ವಪಿ ಚ ಮರ್ಮಜ್ಞೋ ನಿನದನ್ವ್ಯಧಮದ್ಭೃಶಂ||
ಆನೆಗಳ ಮರ್ಮಸ್ಥಾನಗಳನ್ನು ತಿಳಿದಿದ್ದ ಭೀಮಸೇನನು ಜೋರಾಗಿ ಗರ್ಜಿಸುತ್ತಾ ಆನೆಗಳ ಮರ್ಮಸ್ಥಳಗಳನ್ನೂ, ತುಟಿಗಳನ್ನೂ, ಕಣ್ಣುಗಳನ್ನೂ, ಕುಂಭಸ್ಥಳಗಳನ್ನೂ, ಕಪೋಲಗಳನ್ನೂ ಪ್ರಹರಿಸಿ ವಧಿಸುತ್ತಿದ್ದನು.
08035027a ತತಸ್ತೇ ಪ್ರಾದ್ರವನ್ಭೀತಾಃ ಪ್ರತೀಪಂ ಪ್ರಹಿತಾಃ ಪುನಃ|
08035027c ಮಹಾಮಾತ್ರೈಸ್ತಮಾವವ್ರುರ್ಮೇಘಾ ಇವ ದಿವಾಕರಂ||
ಭಯಗೊಂಡ ಆ ಆನೆಗಳು ಓಡಿಹೋಗಲು ಮಾವುತರು ಅವುಗಳನ್ನು ಪುನಃ ಯುದ್ಧಕ್ಕೆ ಎಳೆತಂದರು. ಆ ಮಹಾಕಾಯದ ಆನೆಗಳು ಮೇಘಗಳು ದಿವಾಕರನನ್ನು ಹೇಗೋ ಹಾಗೆ ಭೀಮಸೇನನನ್ನು ಸುತ್ತುವರೆದವು.
08035028a ತಾನ್ಸ ಸಪ್ತಶತಾನ್ನಾಗಾನ್ಸಾರೋಹಾಯುಧಕೇತನಾನ್|
08035028c ಭೂಮಿಷ್ಠೋ ಗದಯಾ ಜಘ್ನೇ ಶರನ್ಮೇಘಾನಿವಾನಿಲಃ||
ಮಾವುತ-ಆಯುಧ-ಕೇತುಗಳಿಂದ ಯುಕ್ತವಾಗಿದ್ದ ಆ ಏಳುನೂರು ಆನೆಗಳನ್ನು ಭೀಮಸೇನನು ಭೂಮಿಯ ಮೇಲೆ ನಿಂತುಕೊಂಡೇ ಗದೆಯಿಂದ – ಭಿರುಗಾಳಿಯು ಶರತ್ಕಾಲದ ಮೋಡಗಳನ್ನು ಹೇಗೋ ಹಾಗೆ – ನಾಶಗೊಳಿಸಿದನು.
08035029a ತತಃ ಸುಬಲಪುತ್ರಸ್ಯ ನಾಗಾನತಿಬಲಾನ್ಪುನಃ|
08035029c ಪೋಥಯಾಮಾಸ ಕೌಂತೇಯೋ ದ್ವಾಪಂಚಾಶತಮಾಹವೇ||
ಅನಂತರ ಕೌಂತೇಯನು ಯುದ್ಧದಲ್ಲಿ ಪುನಃ ಸುಬಲಪುತ್ರ ಶಕುನಿಯ ಐವತ್ತೆರಡು ಅತಿಬಲಶಾಲೀ ಆನೆಗಳನ್ನು ಸದೆಬಡಿದನು.
08035030a ತಥಾ ರಥಶತಂ ಸಾಗ್ರಂ ಪತ್ತೀಂಶ್ಚ ಶತಶೋಽಪರಾನ್|
08035030c ನ್ಯಹನತ್ಪಾಂಡವೋ ಯುದ್ಧೇ ತಾಪಯಂಸ್ತವ ವಾಹಿನೀಂ||
ಹಾಗೆಯೇ ಪಾಂಡವ ಭೀಮಸೇನನು ನೂರಕ್ಕೂ ಹೆಚ್ಚು ರಥಗಳನ್ನೂ ಪದಾತಿಗಳನ್ನೂ ಸಂಹರಿಸಿ ಯುದ್ಧದಲ್ಲಿ ನಿನ್ನ ಸೇನೆಯನ್ನು ಸಂತಾಪಗೊಳಿಸಿದನು.
08035031a ಪ್ರತಾಪ್ಯಮಾನಂ ಸೂರ್ಯೇಣ ಭೀಮೇನ ಚ ಮಹಾತ್ಮನಾ|
08035031c ತವ ಸೈನ್ಯಂ ಸಂಚುಕೋಚ ಚರ್ಮ ವಹ್ನಿಗತಂ ಯಥಾ||
ಪ್ರಜ್ವಲಿಸುತ್ತಿದ್ದ ಸೂರ್ಯನಿಂದ ಮತ್ತು ಮಹಾತ್ಮ ಭೀಮನಿಂದ ದಹಿಸಲ್ಪಡುತ್ತಿದ್ದ ನಿನ್ನ ಸೇನೆಯು ಬೆಂಕಿಯಲ್ಲಿ ಹಾಕಿದ ಚರ್ಮದಂತೆ ಕುಗ್ಗಿಹೋಯಿತು.
08035032a ತೇ ಭೀಮಭಯಸಂತ್ರಸ್ತಾಸ್ತಾವಕಾ ಭರತರ್ಷಭ|
08035032c ವಿಹಾಯ ಸಮರೇ ಭೀಮಂ ದುದ್ರುವುರ್ವೈ ದಿಶೋ ದಶ||
ಭರತರ್ಷಭ! ಭೀಮನ ಭಯದಿಂದ ನಡುಗುತ್ತಿದ್ದ ನಿನ್ನವರು ಭೀಮನೊಡನೆ ಯುದ್ಧಮಾಡುವುದನ್ನು ಬಿಟ್ಟು ಹತ್ತು ದಿಕ್ಕುಗಳಲ್ಲಿಯೂ ಪಲಾಯನಮಾಡತೊಡಗಿದರು.
08035033a ರಥಾಃ ಪಂಚಶತಾಶ್ಚಾನ್ಯೇ ಹ್ರಾದಿನಶ್ಚರ್ಮವರ್ಮಿಣಃ|
08035033c ಭೀಮಮಭ್ಯದ್ರವಂಸ್ತೂರ್ಣಂ ಶರಪೂಗೈಃ ಸಮಂತತಃ||
ಒಡನೆಯೇ ಚರ್ಮದ ಕವಚಗಳನ್ನು ಧರಿಸಿದ್ದ ಐದು ನೂರು ಅನ್ಯರು ಗಂಭೀರವಾಗಿ ಶಬ್ಧಮಾಡುತ್ತಿದ್ದ ರಥಗಳಲ್ಲಿ ಕುಳಿತು ಎಲ್ಲಕಡೆಗಳಿಂದ ಶರವೃಷ್ಟಿಗಳನ್ನು ಸುರಿಸುತ್ತಾ ಭೀಮನನ್ನು ಆಕ್ರಮಣಿಸಿದರು.
08035034a ತಾನ್ಸಸೂತರಥಾನ್ಸರ್ವಾನ್ಸಪತಾಕಾಧ್ವಜಾಯುಧಾನ್|
08035034c ಪೋಥಯಾಮಾಸ ಗದಯಾ ಭೀಮೋ ವಿಷ್ಣುರಿವಾಸುರಾನ್||
ವಿಷ್ಣುವು ಅಸುರರನ್ನು ಹೇಗೋ ಹಾಗೆ ಭೀಮನು ಗದೆಯಿಂದ ಅವರೆಲ್ಲರನ್ನು ಸಾರಥಿ, ರಥ, ಪತಾಕೆ, ಧ್ವಜ ಮತ್ತು ಆಯುಧಗಳ ಸಹಿತ ಪುಡಿಪುಡಿಮಾಡಿದನು.
08035035a ತತಃ ಶಕುನಿನಿರ್ದಿಷ್ಟಾಃ ಸಾದಿನಃ ಶೂರಸಮ್ಮತಾಃ|
08035035c ತ್ರಿಸಾಹಸ್ರಾ ಯಯುರ್ಭೀಮಂ ಶಕ್ತ್ಯೃಷ್ಟಿಪ್ರಾಸಪಾಣಯಃ||
ಅನಂತರ ಶಕುನಿಯಿಂದ ನಿರ್ದೇಶಿಸಲ್ಪಟ್ಟ ಮೂರುಸಾವಿರ ಶೂರಸಮ್ಮತ ಕುದುರೆಸವಾರರು ಶಕ್ತಿ-ಋಷ್ಟಿ-ಪ್ರಾಸಗಳನ್ನು ಹಿಡಿದು ಭೀಮನ ಮೇಲೆ ಎರಗಿದರು.
08035036a ತಾನ್ಪ್ರತ್ಯುದ್ಗಮ್ಯ ಯವನಾನಶ್ವಾರೋಹಾನ್ವರಾರಿಹಾ|
08035036c ವಿಚರನ್ವಿವಿಧಾನ್ಮಾರ್ಗಾನ್ಘಾತಯಾಮಾಸ ಪೋಥಯನ್||
ಆ ಅಶ್ವಾರೋಹೀ ಯವನರನ್ನು ವರಾರಿಹ ಭೀಮನು ಹಾರುತ್ತಾ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಾ ಹೊಡೆದು ಸಂಹರಿಸಿದನು.
08035037a ತೇಷಾಮಾಸೀನ್ಮಹಾಂ ಶಬ್ಧಸ್ತಾಡಿತಾನಾಂ ಚ ಸಾರ್ವಶಃ|
08035037c ಅಸಿಭಿಶ್ಚಿದ್ಯಮಾನಾನಾಂ ನಡಾನಾಮಿವ ಭಾರತ||
ಭಾರತ! ಖಡ್ಗದಿಂದ ವೃಕ್ಷಗಳನ್ನು ತುಂಡರಿಸುವಾಗ ಹೇಗೆ ಟಪಾ ಟಪಾ ಶಬ್ಧವುಂಟಾಗುವುದೋ ಹಾಗೆ ಗದೆಯ ಪ್ರಹಾರದಿಂದ ಎಲ್ಲಕಡೆ ಜೋರಾಗಿ ಶಬ್ಧವು ಕೇಳತೊಡಗಿತು.
08035038a ಏವಂ ಸುಬಲಪುತ್ರಸ್ಯ ತ್ರಿಸಾಹಸ್ರಾನ್ ಹಯೋತ್ತಮಾನ್|
08035038c ಹತ್ವಾನ್ಯಂ ರಥಮಾಸ್ಥಾಯ ಕ್ರುದ್ಧೋ ರಾಧೇಯಮಭ್ಯಯಾತ್||
ಹೀಗೆ ಸುಬಲಪುತ್ರನ ಮೂರುಸಾವಿರ ಉತ್ತಮ ಕುದುರೆಗಳನ್ನು ಸಂಹರಿಸಿ ಭೀಮಸೇನನು ಕ್ರುದ್ಧನಾಗಿ ಇನ್ನೊಂದು ರಥವನ್ನೇರಿ ರಾಧೇಯನನ್ನು ಆಕ್ರಮಣಿಸಿದನು.
08035039a ಕರ್ಣೋಽಪಿ ಸಮರೇ ರಾಜನ್ಧರ್ಮಪುತ್ರಮರಿಂದಮಂ|
08035039c ಶರೈಃ ಪ್ರಚ್ಚಾದಯಾಮಾಸ ಸಾರಥಿಂ ಚಾಪ್ಯಪಾತಯತ್||
ರಾಜನ್! ಕರ್ಣನಾದರೋ ಸಮರದಲ್ಲಿ ಅರಿಂದಮ ಧರ್ಮಪುತ್ರನನ್ನು ಶರಗಳಿಂದ ಮುಸುಕಿ, ಸಾರಥಿಯನ್ನು ಕೆಳಗುರುಳಿಸಿದನು.
08035040a ತತಃ ಸಂಪ್ರದ್ರುತಂ ಸಂಖ್ಯೇ ರಥಂ ದೃಷ್ಟ್ವಾ ಮಹಾರಥಃ|
08035040c ಅನ್ವಧಾವತ್ಕಿರನ್ಬಾಣೈಃ ಕಂಕಪತ್ರೈರಜಿಹ್ಮಗೈಃ||
ಯುದ್ಧದಲ್ಲಿ ಆ ರಥವು ಪಲಾಯನಮಾಡುತ್ತಿರುವುದನ್ನು ನೋಡಿ ಮಹಾರಥ ಕರ್ಣನು ಕಂಕಪತ್ರಿ ಜಿಹ್ಮಗ ಬಾಣಗಳನ್ನು ಸುರಿಸುತ್ತಾ ಅನುಸರಿಸಿ ಹೋದನು.
08035041a ರಾಜಾನಮಭಿ ಧಾವಂತಂ ಶರೈರಾವೃತ್ಯ ರೋದಸೀ|
08035041c ಕ್ರುದ್ಧಃ ಪ್ರಚ್ಚಾದಯಾಮಾಸ ಶರಜಾಲೇನ ಮಾರುತಿಃ||
ರಾಜನನ್ನು ಶರಗಳಿಂದ ಮುಚ್ಚಿ ಬೆನ್ನಟ್ಟಿ ಹೋಗುತ್ತಿದ್ದ ಕರ್ಣನನ್ನು ನೋಡಿ ಮಾರುತಿ ಭೀಮನು ಕ್ರುದ್ಧನಾಗಿ ಅವನನ್ನು ಶರಜಾಲಗಳಿಂದ ಮುಚ್ಚಿಬಿಟ್ಟನು.
08035042a ಸನ್ನಿವೃತ್ತಸ್ತತಸ್ತೂರ್ಣಂ ರಾಧೇಯಃ ಶತ್ರುಕರ್ಶನಃ|
08035042c ಭೀಮಂ ಪ್ರಚ್ಚಾದಯಾಮಾಸ ಸಮಂತಾನ್ನಿಶಿತೈಃ ಶರೈಃ||
ಕೂಡಲೆ ಶತ್ರುಕರ್ಶನ ರಾಧೇಯನು ಹಿಂದಿರುಗಿ ನಿಶಿತ ಶರಗಳಿಂದ ಭೀಮನನ್ನು ಎಲ್ಲಕಡೆಗಳಿಂದ ಮುಚ್ಚಿಬಿಟ್ಟನು.
08035043a ಭೀಮಸೇನರಥವ್ಯಗ್ರಂ ಕರ್ಣಂ ಭಾರತ ಸಾತ್ಯಕಿಃ|
08035043c ಅಭ್ಯರ್ದಯದಮೇಯಾತ್ಮಾ ಪಾರ್ಷ್ಣಿಗ್ರಹಣಕಾರಣಾತ್|
08035043e ಅಭ್ಯವರ್ತತ ಕರ್ಣಸ್ತಮರ್ದಿತೋಽಪಿ ಶರೈರ್ಭೃಶಂ||
ಭಾರತ! ಭೀಮಸೇನನ ರಥದ ಕಡೆ ತಿರುಗಿದ ಕರ್ಣನನ್ನು ಅಮೇಯಾತ್ಮ ಸಾತ್ಯಕಿಯು ಭೀಮಸೇನನ ಪಾರ್ಷ್ಣಿಗ್ರಹಣ ಕಾರ್ಯವನ್ನು ಮಾಡುತ್ತಿದ್ದುದರಿಂದ ಆಕ್ರಮಣಿಸಿದನು. ಅವನ ಶರಗಳಿಂದ ಚೆನ್ನಾಗಿ ಪ್ರಹರಿಸಲ್ಪಟ್ಟ ಕರ್ಣನು ಸಾತ್ಯಕಿಯನ್ನೇ ಆಕ್ರಮಣಿಸಿದನು.
08035044a ತಾವನ್ಯೋನ್ಯಂ ಸಮಾಸಾದ್ಯ ವೃಷಭೌ ಸರ್ವಧನ್ವಿನಾಂ|
08035044c ವಿಸೃಜಂತೌ ಶರಾಂಶ್ಚಿತ್ರಾನ್ವಿಭ್ರಾಜೇತಾಂ ಮನಸ್ವಿನೌ||
ಸರ್ವಧನ್ವಿಗಳಲ್ಲಿ ಶ್ರೇಷ್ಠರಾಗಿದ್ದ ಅವರಿಬ್ಬರು ಮನಸ್ವಿಗಳೂ ಅನ್ಯೋನ್ಯರನ್ನು ಎದುರಿಸಿ ವಿಚಿತ್ರ ಶರಗಳನ್ನು ಪ್ರಯೋಗಿಸುತ್ತಾ ಪ್ರಕಾಶಿಸುತ್ತಿದ್ದರು.
08035045a ತಾಭ್ಯಾಂ ವಿಯತಿ ರಾಜೇಂದ್ರ ವಿತತಂ ಭೀಮದರ್ಶನಂ|
08035045c ಕ್ರೌಂಚಪೃಷ್ಠಾರುಣಂ ರೌದ್ರಂ ಬಾಣಜಾಲಂ ವ್ಯದೃಶ್ಯತ||
ರಾಜೇಂದ್ರ! ಇಬ್ಬರೂ ಬಿಡುತ್ತಿದ್ದ ಬಾಣಜಾಲಗಳು ಕ್ರೌಂಚಪಕ್ಷಿಯ ಪುಚ್ಚದಂತೆ ಎಣ್ಣೆಗೆಂಪಾಗಿಯೂ, ರೌದ್ರವಾಗಿಯೂ, ಭಯಂಕರವಾಗಿಯೂ ಕಾಣುತ್ತಿದ್ದವು.
08035046a ನೈವ ಸೂರ್ಯಪ್ರಭಾಂ ಖಂ ವಾ ನ ದಿಶಃ ಪ್ರದಿಶಃ ಕುತಃ|
08035046c ಪ್ರಾಜ್ಞಾಸಿಷ್ಮ ವಯಂ ತಾಭ್ಯಾಂ ಶರೈರ್ಮುಕ್ತೈಃ ಸಹಸ್ರಶಃ||
ಅವರಿಬ್ಬರು ಪ್ರಯೋಗಿಸುತ್ತಿದ್ದ ಸಹಸ್ರಾರು ಶರಗಳಿಂದಾಗಿ ನಮಗೆ ಸೂರ್ಯನ ಪ್ರಭೆಯಾಗಲೀ, ಆಕಾಶವಾಗಲೀ, ದಿಕ್ಕು-ಉಪದಿಕ್ಕುಗಳಾಗಲೀ ತಿಳಿಯುತ್ತಿರಲಿಲ್ಲ.
08035047a ಮಧ್ಯಾಹ್ನೇ ತಪತೋ ರಾಜನ್ಭಾಸ್ಕರಸ್ಯ ಮಹಾಪ್ರಭಾಃ|
08035047c ಹೃತಾಃ ಸರ್ವಾಃ ಶರೌಘೈಸ್ತೈಃ ಕರ್ಣಮಾಧವಯೋಸ್ತದಾ||
ರಾಜನ್! ಮಧ್ಯಾಹ್ನದಲ್ಲಿ ಉರಿಯುತ್ತಿದ್ದ ಭಾಸ್ಕರನ ಮಹಾಪ್ರಭೆಯೆಲ್ಲವೂ ಕರ್ಣ-ಮಾಧವರ ಶರೌಘಗಳಿಂದ ಕುಂದಿಹೋಗಿತ್ತು.
08035048a ಸೌಬಲಂ ಕೃತವರ್ಮಾಣಂ ದ್ರೌಣಿಮಾಧಿರಥಿಂ ಕೃಪಂ|
08035048c ಸಂಸಕ್ತಾನ್ಪಾಂಡವೈರ್ದೃಷ್ಟ್ವಾ ನಿವೃತ್ತಾಃ ಕುರವಃ ಪುನಃ||
ಸೌಬಲ ಶಕುನಿ, ಕೃತವರ್ಮ, ದ್ರೌಣಿ, ಆಧಿರಥ ಕರ್ಣ ಮತ್ತು ಕೃಪರು ಪಾಂಡವರೊಂದಿಗೆ ಯುದ್ಧಮಾಡುತ್ತಿರುವುದನ್ನು ನೋಡಿ ಕುರುಸೈನಿಕರು ಪುನಃ ಹಿಂದಿರುಗಿದರು.
08035049a ತೇಷಾಮಾಪತತಾಂ ಶಬ್ಧಸ್ತೀವ್ರ ಆಸೀದ್ವಿಶಾಂ ಪತೇ|
08035049c ಉದ್ಧೂತಾನಾಂ ಯಥಾ ವೃಷ್ಟ್ಯಾ ಸಾಗರಾಣಾಂ ಭಯಾವಹಃ||
ವಿಶಾಂಪತೇ! ಆಕ್ರಮಣ ಮಾಡುತ್ತಿದ್ದ ಅವರ ಶಬ್ಧವು – ಮಳೆಯಿಂದ ಉಕ್ಕಿಬರುತ್ತಿರುವ ಸಾಗರದಂತೆ - ತೀವ್ರವಾಗಿ ಭಯವನ್ನುಂಟುಮಾಡುತ್ತಿತ್ತು.
08035050a ತೇ ಸೇನೇ ಭೃಶಸಂವಿಗ್ನೇ ದೃಷ್ಟ್ವಾನ್ಯೋನ್ಯಂ ಮಹಾರಣೇ|
08035050c ಹರ್ಷೇಣ ಮಹತಾ ಯುಕ್ತೇ ಪರಿಗೃಹ್ಯ ಪರಸ್ಪರಂ||
ಮಹಾರಣದಲ್ಲಿ ಅನ್ಯೋನ್ಯರನ್ನು ನೋಡಿ ಹರ್ಷ-ಉತ್ಸಾಹಗಳಿಂದ ಪರಸ್ಪರರನ್ನು ಹಿಡಿದು ಆ ಸೇನೆಗಳು ಯುದ್ಧಮಾಡತೊಡಗಿದವು.
08035051a ತತಃ ಪ್ರವವೃತೇ ಯುದ್ಧಂ ಮಧ್ಯಂ ಪ್ರಾಪ್ತೇ ದಿವಾಕರೇ|
08035051c ಯಾದೃಶಂ ನ ಕದಾ ಚಿದ್ಧಿ ದೃಷ್ಟಪೂರ್ವಂ ನ ಚ ಶ್ರುತಂ||
ದಿವಾಕರನು ಆಕಾಶಮಧ್ಯದಲ್ಲಿ ಬರಲು ಹಿಂದೆಂದೂ ನೋಡಿರದ ಮತ್ತು ಕೇಳಿರದ ರೀತಿಯ ಯುದ್ಧವು ಪ್ರಾರಂಭವಾಯಿತು.
08035052a ಬಲೌಘಸ್ತು ಸಮಾಸಾದ್ಯ ಬಲೌಘಂ ಸಹಸಾ ರಣೇ|
08035052c ಉಪಾಸರ್ಪತ ವೇಗೇನ ಜಲೌಘ ಇವ ಸಾಗರಂ||
ಜಲಪ್ರವಾಹವು ವೇಗವಾಗಿ ಹರಿದು ಸಾಗರವನ್ನು ಸೇರುವಂತೆ ರಣದಲ್ಲಿ ಒಂದು ಸೇನಾಸಾಗರವು ಇನ್ನೊಂದು ಸೇನಾಸಾಗರವನ್ನು ಸೇರಿ ಯುದ್ಧದಲ್ಲಿ ತೊಡಗಿತು.
08035053a ಆಸೀನ್ನಿನಾದಃ ಸುಮಹಾನ್ಬಲೌಘಾನಾಂ ಪರಸ್ಪರಂ|
08035053c ಗರ್ಜತಾಂ ಸಾಗರೌಘಾಣಾಂ ಯಥಾ ಸ್ಯಾನ್ನಿಸ್ವನೋ ಮಹಾನ್||
ಭೋರ್ಗರೆಯುವ ಮಹಾಸಾಗರಗಳಂತೆ ಪರಸ್ಪರರ ಮೇಲೆ ಪ್ರಯೋಗಿಸುತ್ತಿದ್ದ ಬಲಪ್ರಹಾರಗಳ ಶಬ್ಧವು ಘೋರವಾಗಿ ಕೇಳಿಸುತ್ತಿತ್ತು.
08035054a ತೇ ತು ಸೇನೇ ಸಮಾಸಾದ್ಯ ವೇಗವತ್ಯೌ ಪರಸ್ಪರಂ|
08035054c ಏಕೀಭಾವಮನುಪ್ರಾಪ್ತೇ ನದ್ಯಾವಿವ ಸಮಾಗಮೇ||
ನದಿಗಳ ಸಂಗಮದಲ್ಲಿ ಹೇಗೋ ಹಾಗೆ ವೇಗವತ್ತಾಗಿ ಪರಸ್ಪರರನ್ನು ಸೇರಿದ ಆ ಸೇನೆಗಳು ಒಂದೇ ಸೇನಾಸಮೂಹವೋ ಎನ್ನುವಂತೆ ತೋರುತ್ತಿದ್ದವು.
08035055a ತತಃ ಪ್ರವವೃತೇ ಯುದ್ಧಂ ಘೋರರೂಪಂ ವಿಶಾಂ ಪತೇ|
08035055c ಕುರೂಣಾಂ ಪಾಂಡವಾನಾಂ ಚ ಲಿಪ್ಸತಾಂ ಸುಮಹದ್ಯಶಃ||
ವಿಶಾಂಪತೇ! ಆಗ ಮಹಾಯಶಸ್ಸನ್ನು ಬಯಸುತ್ತಿದ್ದ ಆ ಕುರು-ಪಾಂಡವರ ನಡುವೆ ಘೋರರೂಪದ ಯುದ್ಧವು ನಡೆಯಿತು.
08035056a ಕುರೂಣಾಂ ಗರ್ಜತಾಂ ತತ್ರ ಅವಿಚ್ಚೇದಕೃತಾ ಗಿರಃ|
08035056c ಶ್ರೂಯಂತೇ ವಿವಿಧಾ ರಾಜನ್ನಾಮಾನ್ಯುದ್ದಿಶ್ಯ ಭಾರತ||
ರಾಜನ್! ಭಾರತ! ಹೆಸರುಗಳನ್ನು ಹೇಳಿಕೊಂಡು ಗರ್ಜಿಸುತ್ತಿದ್ದ ಕುರುಗಳ ವಿವಿಧ ಸ್ವರಗಳು ಅವಿಚ್ಛನ್ನವಾಗಿ ಕೇಳಿಬರುತ್ತಿದ್ದವು.
08035057a ಯಸ್ಯ ಯದ್ಧಿ ರಣೇ ನ್ಯಂಗಂ ಪಿತೃತೋ ಮಾತೃತೋಽಪಿ ವಾ|
08035057c ಕರ್ಮತಃ ಶೀಲತೋ ವಾಪಿ ಸ ತಚ್ಚ್ರಾವಯತೇ ಯುಧಿ||
ರಣದಲ್ಲಿ ಯಾರ ತಂದೆ ಅಥವಾ ತಾಯಿಯಲ್ಲಿ ಯಾವುದಾದರೂ ದೋಷವಿದ್ದಿದ್ದರೆ ಅಥವಾ ಕರ್ಮ-ಶೀಲಗಳಲ್ಲಿ ದೋಷವಿದ್ದಿದ್ದರೆ ಯುದ್ಧದಲ್ಲಿ ಅವುಗಳೇ ಕೇಳಿಬರುತ್ತಿದ್ದವು.
08035058a ತಾನ್ದೃಷ್ಟ್ವಾ ಸಮರೇ ಶೂರಾಂಸ್ತರ್ಜಯಾನಾನ್ಪರಸ್ಪರಂ|
08035058c ಅಭವನ್ಮೇ ಮತೀ ರಾಜನ್ನೈಷಾಮಸ್ತೀತಿ ಜೀವಿತಂ||
ರಾಜನ್! ಸಮರದಲ್ಲಿ ಆ ಶೂರರು ಪರಸ್ಪರರನ್ನು ಈ ರೀತಿ ನಿಂದಿಸುತ್ತಿರುವುದನ್ನು ಕೇಳಿ ನಾನು ಇವರ ಜೀವಗಳು ಉಳಿಯಲಾರವೆಂದು ನಿಶ್ಚಯಿಸಿಬಿಟ್ಟೆನು.
08035059a ತೇಷಾಂ ದೃಷ್ಟ್ವಾ ತು ಕ್ರುದ್ಧಾನಾಂ ವಪೂಂಷ್ಯಮಿತತೇಜಸಾಂ|
08035059c ಅಭವನ್ಮೇ ಭಯಂ ತೀವ್ರಂ ಕಥಮೇತದ್ಭವಿಷ್ಯತಿ||
ಕ್ರುದ್ಧರಾಗಿದ್ದ ಆ ಅಮಿತತೇಜಸ್ವಿಗಳ ಶರೀರಗಳನ್ನು ನೋಡಿ ಮುಂದೇನಾಗುವುದೋ ಎಂಬ ತೀವ್ರ ಭಯವು ನನ್ನನ್ನು ಆವರಿಸಿತು.
08035060a ತತಸ್ತೇ ಪಾಂಡವಾ ರಾಜನ್ಕೌರವಾಶ್ಚ ಮಹಾರಥಾಃ|
08035060c ತತಕ್ಷುಃ ಸಾಯಕೈಸ್ತೀಕ್ಷ್ಣೈರ್ನಿಘ್ನಂತೋ ಹಿ ಪರಸ್ಪರಂ||
ರಾಜನ್! ಆಗ ಮಹಾರಥ ಪಾಂಡವರು ಮತ್ತು ಕೌರವರು ತೀಕ್ಷ್ಣ ಸಾಯಕಗಳಿಂದ ಪರಸ್ಪರರನ್ನು ಪ್ರಹರಿಸುತ್ತಾ ಕ್ಷತ-ವಿಕ್ಷತಗೊಳಿಸಿದರು.”
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಪಂಚತ್ರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಮೂವತ್ತೈದನೇ ಅಧ್ಯಾಯವು.
