Karna Parva: Chapter 33

ಕರ್ಣ ಪರ್ವ

೩೩

ಯುದ್ಧದಲ್ಲಿ ಕರ್ಣನು ಯುಧಿಷ್ಠಿರನನ್ನು ಪರಾಜಯಗೊಳಿಸಿದುದು (೧-೩೪). ಪಲಾಯನ ಮಾಡುತ್ತಿದ್ದ ಯುಧಿಷ್ಠಿರನನ್ನು ಹಿಂಬಾಲಿಸಿ ಕರ್ಣನು ಅವನ ಭುಜವನ್ನು ಮುಟ್ಟಿ ಹೀಯಾಳಿಸಿ ಕಳುಹಿಸಿದುದು (೩೫-೪೦). ಯುದ್ಧದ ವರ್ಣನೆ (೪೧-೭೦).

08033001 ಸಂಜಯ ಉವಾಚ|

08033001a ವಿದಾರ್ಯ ಕರ್ಣಸ್ತಾಂ ಸೇನಾಂ ಧರ್ಮರಾಜಮುಪಾದ್ರವತ್|

08033001c ರಥಹಸ್ತ್ಯಶ್ವಪತ್ತೀನಾಂ ಸಹಸ್ರೈಃ ಪರಿವಾರಿತಃ||

ಸಂಜಯನು ಹೇಳಿದನು: “ಆ ಸೇನೆಯನ್ನು ಭೇದಿಸಿ ಕರ್ಣನು ಸಹಸ್ರಾರು ರಥ-ಆನೆ-ಕುದುರೆ-ಪದಾತಿ ಸೇನೆಗಳಿಂದ ಪರಿವೃತನಾದ ಧರ್ಮರಾಜನನ್ನು ಆಕ್ರಮಣಿಸಿದನು.

08033002a ನಾನಾಯುಧಸಹಸ್ರಾಣಿ ಪ್ರೇಷಿತಾನ್ಯರಿಭಿರ್ವೃಷಃ|

08033002c ಚಿತ್ತ್ವಾ ಬಾಣಶತೈರುಗ್ರೈಸ್ತಾನವಿಧ್ಯದಸಂಭ್ರಮಃ||

ವೃಷ ಕರ್ಣನು ಸ್ವಲ್ಪವೂ ಗಾಬರಿಗೊಳ್ಳದೇ ಶತ್ರುಗಳು ಸುರಿಸುತ್ತಿದ್ದ ಸಹಸ್ರಾರು ನಾನಾ ಆಯುಧಗಳನ್ನು ನೂರಾರು ಉಗ್ರ ಬಾಣಗಳಿಂದ ತುಂಡರಿಸಿದನು.

08033003a ನಿಚಕರ್ತ ಶಿರಾಂಸ್ಯೇಷಾಂ ಬಾಹೂನೂರೂಂಶ್ಚ ಸರ್ವಶಃ|

08033003c ತೇ ಹತಾ ವಸುಧಾಂ ಪೇತುರ್ಭಗ್ನಾಶ್ಚಾನ್ಯೇ ವಿದುದ್ರುವುಃ||

ಅವನು ಎಲ್ಲಕಡೆ ಶತ್ರುಗಳ ಶಿರಗಳನ್ನೂ, ಬಾಹುಗಳನ್ನೂ, ತೊಡೆಗಳನ್ನೂ ಕತ್ತರಿಸಿದನು. ಅವರು ಭಗ್ನರಾಗಿ ಭೂಮಿಯ ಮೇಲೆ ಬಿದ್ದರು. ಅನ್ಯರು ಪಲಾಯನಗೈದರು.

08033004a ದ್ರವಿಡಾಂಧ್ರನಿಷಾಧಾಸ್ತು ಪುನಃ ಸಾತ್ಯಕಿಚೋದಿತಾಃ|

08033004c ಅಭ್ಯರ್ದಯಂ ಜಿಘಾಂಸಂತಃ ಪತ್ತಯಃ ಕರ್ಣಮಾಹವೇ||

ಆಗ ಸಾತ್ಯಕಿಯಿಂದ ಪ್ರಚೋದಿತರಾದ ದ್ರವಿಡ-ಆಂಧ್ರ-ನಿಷಾಧ ಪದಾತಿಗಳು ಯುದ್ಧದಲ್ಲಿ ಕರ್ಣನನ್ನು ಸಂಹರಿಸಲು ಬಯಸಿ ಅವನನ್ನು ಪುನಃ ಆಕ್ರಮಿಸಿದರು.

08033005a ತೇ ವಿಬಾಹುಶಿರಸ್ತ್ರಾಣಾಃ ಪ್ರಹತಾಃ ಕರ್ಣಸಾಯಕೈಃ|

08033005c ಪೇತುಃ ಪೃಥಿವ್ಯಾಂ ಯುಗಪಚ್ಚಿನ್ನಂ ಶಾಲವನಂ ಯಥಾ||

ಕರ್ಣನ ಸಾಯಕಗಳಿಂದ ಪ್ರಹರಿಸಲ್ಪಟ್ಟ ಅವರು ಬಾಹುಗಳು, ಶಿರಗಳು ಮತ್ತು ಕಿರೀಟಗಳನ್ನು ಕಳೆದುಕೊಂಡು ಕತ್ತರಿಸಲ್ಪಟ್ಟ ಶಾಲವೃಕ್ಷಗಳ ವನದಂತೆ ಭೂಮಿಯ ಮೇಲೆ ಬಿದ್ದರು.

08033006a ಏವಂ ಯೋಧಶತಾನ್ಯಾಜೌ ಸಹಸ್ರಾಣ್ಯಯುತಾನಿ ಚ|

08033006c ಹತಾನೀಯುರ್ಮಹೀಂ ದೇಹೈರ್ಯಶಸಾಪೂರಯನ್ದಿಶಃ||

ಹೀಗೆ ಹತರಾದ ನೂರಾರು ಸಹಸ್ರಾರು ಲಕ್ಷಗಟ್ಟಲೆ ಯೋಧರು ತಮ್ಮ ದೇಹಗಳಿಂದ ಭೂಮಿಯನ್ನೂ ಯಶಸ್ಸುಗಳಿಂದ ದಿಕ್ಕುಗಳನ್ನೂ ತುಂಬಿಬಿಟ್ಟರು.

08033007a ಅಥ ವೈಕರ್ತನಂ ಕರ್ಣಂ ರಣೇ ಕ್ರುದ್ಧಮಿವಾಂತಕಂ|

08033007c ರುರುಧುಃ ಪಾಂಡುಪಾಂಚಾಲಾ ವ್ಯಾಧಿಂ ಮಂತ್ರೌಷಧೈರಿವ||

ಆಗ ರಣರಂಗದಲ್ಲಿ ಕ್ರುದ್ಧ ಅಂತಕನಂತಿದ್ದ ವೈಕರ್ತನ ಕರ್ಣನನ್ನು ಪಾಂಡವ-ಪಾಂಚಾಲರು ವ್ಯಾಧಿಯನ್ನು ಮಂತ್ರೌಷಧಿಗಳಿಂದ ಹೇಗೋ ಹಾಗೆ ತಡೆದರು.

08033008a ಸ ತಾನ್ಪ್ರಮೃದ್ಯಾಭ್ಯಪತತ್ಪುನರೇವ ಯುಧಿಷ್ಠಿರಂ|

08033008c ಮಂತ್ರೌಷಧಿಕ್ರಿಯಾತೀತೋ ವ್ಯಾಧಿರತ್ಯುಲ್ಬಣೋ ಯಥಾ||

ಅತಿಯಾಗಿ ಉಲ್ಬಣಿಸಿದ ವ್ಯಾಧಿಯು ಮಂತ್ರೌಷಧಿಗೂ ನಿಲುಕದಂತೆ ಕರ್ಣನು ಅವರನ್ನು ಸದೆಬಡಿದು ಪುನಃ ಯುಧಿಷ್ಠಿರನನ್ನು ಆಕ್ರಮಣಿಸಿದನು.

08033009a ಸ ರಾಜಗೃದ್ಧಿಭೀ ರುದ್ಧಃ ಪಾಂಡುಪಾಂಚಾಲಕೇಕಯೈಃ|

08033009c ನಾಶಕತ್ತಾನತಿಕ್ರಾಂತುಂ ಮೃತ್ಯುರ್ಬ್ರಹ್ಮವಿದೋ ಯಥಾ||

ಆದರೆ ರಾಜನನ್ನು ರಕ್ಷಿಸುವ ಛಲದಿಂದ ತಡೆಯುತ್ತಿರುವ ಪಾಂಡವ-ಪಾಂಚಾಲ-ಕೇಕಯರನ್ನು ಮೃತ್ಯುವು ಬ್ರಹ್ಮವಿದನನ್ನು ಹೇಗೋ ಹಾಗೆ ಅತಿಕ್ರಮಿಸಲು ಅವನು ಶಕ್ತನಾಗಲಿಲ್ಲ.

08033010a ತತೋ ಯುಧಿಷ್ಠಿರಃ ಕರ್ಣಮದೂರಸ್ಥಂ ನಿವಾರಿತಂ|

08033010c ಅಬ್ರವೀತ್ಪರವೀರಘ್ನಃ ಕ್ರೋಧಸಂರಕ್ತಲೋಚನಃ||

ಆಗ ಅನತಿದೂರದಲ್ಲಿಯೇ ತಡೆಯಲ್ಪಟ್ಟು ನಿಂತಿದ್ದ ಕರ್ಣನಿಗೆ ಕ್ರೋಧಸಂರಕ್ತಲೋಚನ ಪರವೀರಘ್ನ ಯುಧಿಷ್ಠಿರನು ಇಂತೆಂದನು:

08033011a ಕರ್ಣ ಕರ್ಣ ವೃಥಾದೃಷ್ಟೇ ಸೂತಪುತ್ರ ವಚಃ ಶೃಣು|

08033011c ಸದಾ ಸ್ಪರ್ಧಸಿ ಸಂಗ್ರಾಮೇ ಫಲ್ಗುನೇನ ಯಶಸ್ವಿನಾ|

08033011e ತಥಾಸ್ಮಾನ್ಬಾಧಸೇ ನಿತ್ಯಂ ಧಾರ್ತರಾಷ್ಟ್ರಮತೇ ಸ್ಥಿತಃ||

“ಕರ್ಣ! ಕರ್ಣ! ಶೂನ್ಯದೃಷ್ಟಿಯವನೇ! ಸೂತಪುತ್ರ! ನನ್ನ ಮಾತನ್ನು ಕೇಳು! ಧಾರ್ತರಾಷ್ಟ್ರನ ಅಭಿಪ್ರಾಯದಂತೆ ನಡೆದುಕೊಳ್ಳುವ ನೀನು ಸದಾ ಸಂಗ್ರಾಮದಲ್ಲಿ ಯಶಸ್ವಿ ಫಲ್ಗುನನೊಂದಿಗೆ ಸ್ಪರ್ಧಿಸುತ್ತೀಯೆ ಮತ್ತು ನಿತ್ಯವೂ ನಮ್ಮನ್ನು ಬಾಧಿಸುತ್ತಿದ್ದೀಯೆ!

08033012a ಯದ್ಬಲಂ ಯಚ್ಚ ತೇ ವೀರ್ಯಂ ಪ್ರದ್ವೇಷೋ ಯಶ್ಚ ಪಾಂಡುಷು|

08033012c ತತ್ಸರ್ವಂ ದರ್ಶಯಸ್ವಾದ್ಯ ಪೌರುಷಂ ಮಹದಾಸ್ಥಿತಃ|

08033012e ಯುದ್ಧಶ್ರದ್ಧಾಂ ಸ ತೇಽದ್ಯಾಹಂ ವಿನೇಷ್ಯಾಮಿ ಮಹಾಹವೇ||

ನಿನ್ನಲ್ಲಿ ಎಷ್ಟು ಬಲವಿದೆಯೋ, ಎಷ್ಟು ವೀರ್ಯವಿದೆಯೋ, ಪಾಂಡವರ ಮೇಲೆ ಎಷ್ಟು ದ್ವೇಷವಿದೆಯೋ ಅವೆಲ್ಲವನ್ನೂ ಇಂದು ಮಹಾಪೌರುಷವನ್ನಾಶ್ರಯಿಸಿ ತೋರಿಸು!”

08033013a ಏವಮುಕ್ತ್ವಾ ಮಹಾರಾಜ ಕರ್ಣಂ ಪಾಂಡುಸುತಸ್ತದಾ|

08033013c ಸುವರ್ಣಪುಂಖೈರ್ದಶಭಿರ್ವಿವ್ಯಾಧಾಯಸ್ಮಯೈಃ ಶಿತೈಃ||

ಮಹಾರಾಜ! ಹೀಗೆ ಹೇಳಿ ಪಾಂಡುಸುತ ಯುಧಿಷ್ಠಿರನು ಹತ್ತು ಸುವರ್ಣಪುಂಖಗಳುಳ್ಳ ಲೋಹಮಯ ಬಾಣಗಳಿಂದ ಕರ್ಣನನ್ನು ಪ್ರಹರಿಸಿದನು.

08033014a ತಂ ಸೂತಪುತ್ರೋ ನವಭಿಃ ಪ್ರತ್ಯವಿಧ್ಯದರಿಂದಮಃ|

08033014c ವತ್ಸದಂತೈರ್ಮಹೇಷ್ವಾಸಃ ಪ್ರಹಸನ್ನಿವ ಭಾರತ||

ಭಾರತ! ಅವನನ್ನು ಪ್ರತಿಯಾಗಿ ಮಹೇಷ್ವಾಸ ಅರಿಂದಮ ಸೂತಪುತ್ರನು ನಗುತ್ತಿರುವನೋ ಎನ್ನುವಂತೆ ಒಂಭತ್ತು ವತ್ಸದಂತಗಳಿಂದ ಹೊಡೆದನು.

08033015a ತತಃ ಕ್ಷುರಾಭ್ಯಾಂ ಪಾಂಚಾಲ್ಯೌ ಚಕ್ರರಕ್ಷೌ ಮಹಾತ್ಮನಃ|

08033015c ಜಘಾನ ಸಮರೇ ಶೂರಃ ಶರೈಃ ಸನ್ನತಪರ್ವಭಿಃ||

ಅನಂತರ ಆ ಶೂರ ಮಹಾತ್ಮನು ಸಮರದಲ್ಲಿ ಯುಧಿಷ್ಠಿರನ ಚಕ್ರರಕ್ಷಕರಾಗಿದ್ದ ಇಬ್ಬರು ಪಾಂಚಾಲರನ್ನು[1] ಸನ್ನತಪರ್ವ ಕ್ಷುರಗಳಿಂದ ಸಂಹರಿಸಿದನು.

08033016a ತಾವುಭೌ ಧರ್ಮರಾಜಸ್ಯ ಪ್ರವೀರೌ ಪರಿಪಾರ್ಶ್ವತಃ|

08033016c ರಥಾಭ್ಯಾಶೇ ಚಕಾಶೇತೇ ಚಂದ್ರಸ್ಯೇವ ಪುನರ್ವಸೂ||

ಧರ್ಮರಾಜನ ರಥದ ಪಕ್ಕಗಳಲ್ಲಿ ಬಿದ್ದಿದ್ದ ಆ ಇಬ್ಬರು ಪ್ರವೀರರೂ ಚಂದ್ರನ ಬಳಿಯಲ್ಲಿದ್ದ ಪುನರ್ವಸು ನಕ್ಷತ್ರಗಳಂತೆ ಶೋಭಿಸುತ್ತಿದ್ದರು.

08033017a ಯುಧಿಷ್ಠಿರಃ ಪುನಃ ಕರ್ಣಮವಿಧ್ಯತ್ತ್ರಿಂಶತಾ ಶರೈಃ|

08033017c ಸುಷೇಣಂ ಸತ್ಯಸೇನಂ ಚ ತ್ರಿಭಿಸ್ತ್ರಿಭಿರತಾಡಯತ್||

ಪುನಃ ಯುಧಿಷ್ಠಿರನು ಕರ್ಣನನ್ನು ಮೂವತ್ತು ಬಾಣಗಳಿಂದ ಪ್ರಹರಿಸಿ, ಸುಷೇಣ-ಸತ್ಯಸೇನರನ್ನು ಮೂರು ಮೂರು ಬಾಣಗಳಿಂದ ಹೊಡೆದನು.

08033018a ಶಲ್ಯಂ ನವತ್ಯಾ ವಿವ್ಯಾಧ ತ್ರಿಸಪ್ತತ್ಯಾ ಚ ಸೂತಜಂ|

08033018c ತಾಂಶ್ಚಾಸ್ಯ ಗೋಪ್ತೄನ್ವಿವ್ಯಾಧ ತ್ರಿಭಿಸ್ತ್ರಿಭಿರಜಿಹ್ಮಗೈಃ||

ಶಲ್ಯನನ್ನು ತೊಂಭತ್ತು ಮತ್ತು ಸೂತಜನನ್ನು ಎಪ್ಪತ್ಮೂರು ಬಾಣಗಳಿಂದ ಹೊಡೆದು ಯುಧಿಷ್ಠಿರನು ಚಕ್ರರಕ್ಷಕರನ್ನು ಮೂರು ಮೂರು ಜಿಹ್ಮಗಗಳಿಂದ ಪ್ರಹರಿಸಿದನು.

08033019a ತತಃ ಪ್ರಹಸ್ಯಾಧಿರಥಿರ್ವಿಧುನ್ವಾನಃ ಸ ಕಾರ್ಮುಕಂ|

08033019c ಭಿತ್ತ್ವಾ ಭಲ್ಲೇನ ರಾಜಾನಂ ವಿದ್ಧ್ವಾ ಷಷ್ಟ್ಯಾನದನ್ಮುದಾ||

ಆಗ ಆಧಿರಥಿ ಕರ್ಣನು ಗಹಗಹಿಸಿ ನಗುತ್ತಾ ಧನುಸ್ಸನ್ನು ಜಗ್ಗಿಸುತ್ತಾ ಭಲ್ಲದಿಂದ ರಾಜ ಯುಧಿಷ್ಠಿರನನ್ನು ಹೊಡೆದು, ಪುನಃ ಅರವತ್ತರಿಂದ ಪ್ರಹರಿಸಿ ಸಿಂಹಗರ್ಜನೆ ಮಾಡಿದನು.

08033020a ತತಃ ಪ್ರವೀರಾಃ ಪಾಂಡೂನಾಮಭ್ಯಧಾವನ್ಯುಧಿಷ್ಠಿರಂ|

08033020c ಸೂತಪುತ್ರಾತ್ಪರೀಪ್ಸಂತಃ ಕರ್ಣಮಭ್ಯರ್ದಯಂ ಶರೈಃ||

ಆಗ ಪಾಂಡವ ಪ್ರವೀರರು ಸೂತಪುತ್ರನ ಪೀಡೆಗೊಳಗಾಗಿದ್ದ ಯುಧಿಷ್ಠಿರನನ್ನು ಸಮೀಪಿಸಿ ಶರಗಳಿಂದ ಕರ್ಣನನ್ನು ಆಕ್ರಮಣಿಸಿದರು.

08033021a ಸಾತ್ಯಕಿಶ್ಚೇಕಿತಾನಶ್ಚ ಯುಯುತ್ಸುಃ ಪಾಂಡ್ಯ ಏವ ಚ|

08033021c ಧೃಷ್ಟದ್ಯುಮ್ನಃ ಶಿಖಂಡೀ ಚ ದ್ರೌಪದೇಯಾಃ ಪ್ರಭದ್ರಕಾಃ||

08033022a ಯಮೌ ಚ ಭೀಮಸೇನಶ್ಚ ಶಿಶುಪಾಲಸ್ಯ ಚಾತ್ಮಜಃ|

08033022c ಕಾರೂಷಾ ಮತ್ಸ್ಯಶೇಷಾಶ್ಚ ಕೇಕಯಾಃ ಕಾಶಿಕೋಸಲಾಃ|

08033022e ಏತೇ ಚ ತ್ವರಿತಾ ವೀರಾ ವಸುಷೇಣಮವಾರಯನ್||

ಸಾತ್ಯಕಿ, ಚೇಕಿತಾನ, ಯುಯುತ್ಸು, ಪಾಂಡ್ಯ, ಧೃಷ್ಟದ್ಯುಮ್ನ, ಶಿಖಂಡೀ, ದ್ರೌಪದೇಯರು, ಪ್ರಭದ್ರಕರು, ಯಮಳರು, ಭೀಮಸೇನ, ಶಿಶುಪಾಲನ ಮಗ, ಕಾರೂಷರು, ಅಳಿದುಳಿದ ಮತ್ಸ್ಯರು, ಕೇಕಯರು, ಕಾಶಿ-ಕೋಸಲರು ಈ ವೀರರು ತ್ವರೆಮಾಡಿ ವಸುಷೇಣ ಕರ್ಣನನ್ನು ತಡೆದರು.

08033023a ಜನಮೇಜಯಶ್ಚ ಪಾಂಚಾಲ್ಯಃ ಕರ್ಣಂ ವಿವ್ಯಾಧ ಸಾಯಕೈಃ|

08033023c ವರಾಹಕರ್ಣೈರ್ನಾರಾಚೈರ್ನಾಲೀಕೈರ್ನಿಶಿತೈಃ ಶರೈಃ|

08033023e ವತ್ಸದಂತೈರ್ವಿಪಾಠೈಶ್ಚ ಕ್ಷುರಪ್ರೈಶ್ಚಟಕಾಮುಖೈಃ||

ಪಾಂಚಾಲ್ಯ ಜನಮೇಜಯನು ಕರ್ಣನನ್ನು ಸಾಯಕ, ವರಾಹಕರ್ಣ, ನಾರಾಚ, ನಾಲೀಕ, ವತ್ಸದಂತ, ವಿಪಾಠ, ಕ್ಷುರಪ್ರ, ಮತ್ತು ಚಟಕಾಮುಖಗಳೇ ಮೊದಲಾದ ನಿಶಿತ ಶರಗಳಿಂದ ಪ್ರಹರಿಸಿದನು.

08033024a ನಾನಾಪ್ರಹರಣೈಶ್ಚೋಗ್ರೈ ರಥಹಸ್ತ್ಯಶ್ವಸಾದಿನಃ|

08033024c ಸರ್ವತೋಽಭ್ಯಾದ್ರವನ್ಕರ್ಣಂ ಪರಿವಾರ್ಯ ಜಿಘಾಂಸಯಾ||

ಕರ್ಣನನ್ನು ಸಂಹರಿಸಲು ಬಯಸಿ ನಾನಾ ಉಗ್ರ ಪ್ರಹರಣಗಳಿಂದ, ರಥ-ಆನೆ-ಕುದುರೆ-ಪದಾತಿಗಣಗಳೊಂದಿಗೆ ಅವರು ಕರ್ಣನನ್ನು ಎಲ್ಲಕಡೆಗಳಿಂದ ಸುತ್ತುವರೆದು ಆಕ್ರಮಣಿಸಿದರು.

08033025a ಸ ಪಾಂಡವಾನಾಂ ಪ್ರವರೈಃ ಸರ್ವತಃ ಸಮಭಿದ್ರುತಃ|

08033025c ಉದೈರಯದ್ಬ್ರಾಹ್ಮಮಸ್ತ್ರಂ ಶರೈಃ ಸಂಪೂರಯನ್ದಿಶಃ||

ಪಾಂಡವ ಪ್ರವರರಿಂದ ಸುತ್ತಲೂ ಮುತ್ತಲ್ಪಟ್ಟ ಕರ್ಣನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾ ಸರ್ವದಿಕ್ಕುಗಳನ್ನೂ ಶರಗಳಿಂದ ಮುಚ್ಚಿಬಿಟ್ಟನು.

08033026a ತತಃ ಶರಮಹಾಜ್ವಾಲೋ ವೀರ್ಯೋಷ್ಮಾ ಕರ್ಣಪಾವಕಃ|

08033026c ನಿರ್ದಹನ್ಪಾಂಡವವನಂ ಚಾರು ಪರ್ಯಚರದ್ರಣೇ||

ಆಗ ಶರಗಳೆಂಬ ಮಹಾಜ್ವಾಲೆಗಳಿಂದಲೂ, ವೀರ್ಯವೆಂಬ ತಾಪದಿಂದಲೂ ಕರ್ಣನೆಂಬ ಪಾವಕನು ಪಾಂಡವರೆಂಬ ವನವನ್ನು ದಹಿಸುತ್ತಾ ರಣದಲ್ಲಿ ಸಂಚರಿಸುತ್ತಿದ್ದನು.

08033027a ಸ ಸಂವಾರ್ಯ ಮಹಾಸ್ತ್ರಾಣಿ ಮಹೇಷ್ವಾಸೋ ಮಹಾತ್ಮನಾಂ|

08033027c ಪ್ರಹಸ್ಯ ಪುರುಷೇಂದ್ರಸ್ಯ ಶರೈಶ್ಚಿಚ್ಚೇದ ಕಾರ್ಮುಕಂ||

ಮಹೇಷ್ವಾಸ ಮಹಾತ್ಮ ಕರ್ಣನು ಜೋರಾಗಿ ನಕ್ಕು ಮಹಾಸ್ತ್ರಗಳನ್ನು ಸಂಧಾನಮಾಡಿ ಶರಗಳಿಂದ ಪುರುಷೇಂದ್ರ ಯುಧಿಷ್ಠಿರನ ಕಾರ್ಮುಕವನ್ನು ಕತ್ತರಿಸಿದನು.

08033028a ತತಃ ಸಂಧಾಯ ನವತಿಂ ನಿಮೇಷಾನ್ನತಪರ್ವಣಾಂ|

08033028c ಬಿಭೇದ ಕವಚಂ ರಾಜ್ಞೋ ರಣೇ ಕರ್ಣಃ ಶಿತೈಃ ಶರೈಃ||

ನಂತರ ಕರ್ಣನು ರಣದಲ್ಲಿ ನಿಮಿಷಮಾತ್ರದಲ್ಲಿ ಹೊಸ ಸನ್ನತಪರ್ವ ಶರಗಳನ್ನು ಹೂಡಿ ಆ ನಿಶಿತ ಶರಗಳಿಂದ ರಾಜನ ಕವಚವನ್ನೂ ಕತ್ತರಿಸಿದನು.

08033029a ತದ್ವರ್ಮ ಹೇಮವಿಕೃತಂ ರರಾಜ ನಿಪತತ್ತದಾ|

08033029c ಸವಿದ್ಯುದಭ್ರಂ ಸವಿತುಃ ಶಿಷ್ಟಂ ವಾತಹತಂ ಯಥಾ||

ಹೇಮವಿಕೃತ ಆ ಕವಚವು ಬೀಳುವಾಗ ಸೂರ್ಯನೊಡನಿದ್ದ ಮೋಡವು ಭಿರುಗಾಳಿಗೆ ಸಿಲುಕಿ ಮಿಂಚಿನೊಂದಿಗೆ ಕೆಳಗೆ ಬೀಳುತ್ತಿರುವಂತೆ ರಾರಾಜಿಸಿತು.

08033030a ತದಂಗಂ ಪುರುಷೇಂದ್ರಸ್ಯ ಭ್ರಷ್ಟವರ್ಮ ವ್ಯರೋಚತ|

08033030c ರತ್ನೈರಲಂಕೃತಂ ದಿವ್ಯೈರ್ವ್ಯಭ್ರಂ ನಿಶಿ ಯಥಾ ನಭಃ||

ಪುರುಷೇಂದ್ರನ ದೇಹದಿಂದ ಕಳಚಿ ಬಿದ್ದ ರತ್ನಾಲಂಕೃತ ಆ ಕವಚವು ನಕ್ಷತ್ರಮಂಡಲದಿಂದ ಶೋಭಾಯಮಾನವಾದ ರಾತ್ರಿಯ ಆಕಾಶದಂತೆ ತೋರುತ್ತಿತ್ತು.

08033031a ಸ ವಿವರ್ಮಾ ಶರೈಃ ಪಾರ್ಥೋ ರುಧಿರೇಣ ಸಮುಕ್ಷಿತಃ|

08033031c ಕ್ರುದ್ಧಃ ಸರ್ವಾಯಸೀಂ ಶಕ್ತಿಂ ಚಿಕ್ಷೇಪಾಧಿರಥಿಂ ಪ್ರತಿ||

ಕವಚನ್ನು ಕಳೆದುಕೊಂಡ ಆ ಪಾರ್ಥನು ಶರಪ್ರಹಾರಗಳಿಂದ ರಕ್ತವನ್ನು ಸೋರಿಸುತ್ತಾ ಕ್ರುದ್ಧನಾಗಿ ಸರ್ವವೂ ಲೋಹಮಯವಾಗಿದ್ದ ಶಕ್ತಿಯನ್ನು ಆಧಿರಥಿಯ ಮೇಲೆ ಪ್ರಯೋಗಿಸಿದನು.

08033032a ತಾಂ ಜ್ವಲಂತೀಮಿವಾಕಾಶೇ ಶರೈಶ್ಚಿಚ್ಚೇದ ಸಪ್ತಭಿಃ|

08033032c ಸಾ ಚಿನ್ನಾ ಭೂಮಿಮಪತನ್ಮಹೇಷ್ವಾಸಸ್ಯ ಸಾಯಕೈಃ||

ಆಕಾಶದಲ್ಲಿ ಪ್ರಜ್ವಲಿಸುತ್ತಿರುವ ಆ ಶಕ್ತಿಯನ್ನು ಮಹೇಷ್ವಾಸ ಕರ್ಣನು ಏಳು ಸಾಯಕ ಶರಗಳಿಂದ ಕತ್ತರಿಸಿ ಭೂಮಿಯ ಮೇಲೆ ಕೆಡವಿದನು.

08033033a ತತೋ ಬಾಹ್ವೋರ್ಲಲಾಟೇ ಚ ಹೃದಿ ಚೈವ ಯುಧಿಷ್ಠಿರಃ|

08033033c ಚತುರ್ಭಿಸ್ತೋಮರೈಃ ಕರ್ಣಂ ತಾಡಯಿತ್ವಾ ಮುದಾನದತ್||

ಆಗ ಯುಧಿಷ್ಠಿರನು ಕರ್ಣನ ಬಾಹುಗಳು, ಹಣೆ ಮತ್ತು ಎದೆಗಳನ್ನು ನಾಲ್ಕು ತೋಮರಗಳಿಂದ ಹೊಡೆದು ಜೋರಾಗಿ ಗರ್ಜಿಸಿದನು.

08033034a ಉದ್ಭಿನ್ನರುಧಿರಃ ಕರ್ಣಃ ಕ್ರುದ್ಧಃ ಸರ್ಪ ಇವ ಶ್ವಸನ್|

08033034c ಧ್ವಜಂ ಚಿಚ್ಚೇದ ಭಲ್ಲೇನ ತ್ರಿಭಿರ್ವಿವ್ಯಾಧ ಪಾಂಡವಂ|

08033034e ಇಷುಧೀ ಚಾಸ್ಯ ಚಿಚ್ಚೇದ ರಥಂ ಚ ತಿಲಶೋಽಚ್ಚಿನತ್||

ಉಕ್ಕಿಬರುತ್ತಿರುವ ರಕ್ತಪ್ರವಾಹದಿಂದ ಕ್ರುದ್ಧನಾದ ಕರ್ಣನು ಸರ್ಪದಂತೆ ಭುಸುಗುಟ್ಟುತ್ತಾ ಭಲ್ಲದಿಂದ ಅವನ ಧ್ವಜವನ್ನು ತುಂಡರಿಸಿದನು ಮತ್ತು ಮೂರರಿಂದ ಪಾಂಡವ ಯುಧಷ್ಠಿರನನ್ನು ಹೊಡೆದನು. ಬಾಣಗಳಿಂದ ಅವನ ರಥವನ್ನು ಕೂಡ ಎಳ್ಳಿನ ಕಾಳುಗಳಷ್ಟು ಸಣ್ಣ ಸಣ್ಣ ಚೂರುಗಳನ್ನಾಗಿಸಿ ತುಂಡರಿಸಿದನು.

08033035a ಏವಂ ಪಾರ್ಥೋ ವ್ಯಪಾಯಾತ್ಸ ನಿಹತಪ್ರಾರ್ಷ್ಟಿಸಾರಥಿಃ|

08033035c ಅಶಕ್ನುವನ್ಪ್ರಮುಖತಃ ಸ್ಥಾತುಂ ಕರ್ಣಸ್ಯ ದುರ್ಮನಾಃ||

ತನ್ನ ಪಾರ್ಷ್ಣಿಸಾರಥಿಗಳನ್ನೂ ಕಳೆದುಕೊಂಡಿದ್ದ ಪಾರ್ಥನು ಕರ್ಣನನ್ನು ಎದುರಿಸಲಾಗದೇ ದುರ್ಮನಸ್ಕನಾಗಿ ಪಲಾಯನಗೈದನು.

08033036a ತಮಭಿದ್ರುತ್ಯ ರಾಧೇಯಃ ಸ್ಕಂದಂ ಸಂಸ್ಪೃಶ್ಯ ಪಾಣಿನಾ|

08033036c ಅಬ್ರವೀತ್ಪ್ರಹಸನ್ರಾಜನ್ಕುತ್ಸಯನ್ನಿವ ಪಾಂಡವಂ||

ರಾಜನ್! ಯುಧಿಷ್ಠಿರನನ್ನು ಹಿಂಬಾಲಿಸಿ ಹೋಗಿ ರಾಧೇಯನು ಕೈಯಿಂದ ಅವನ ಭುಜವನ್ನು ಮುಟ್ಟಿ ಪಾಂಡವನನ್ನು ಹೀಯಾಳಿಸುವಂತೆ ನಗುತ್ತಾ ಹೇಳಿದನು:

08033037a ಕಥಂ ನಾಮ ಕುಲೇ ಜಾತಃ ಕ್ಷತ್ರಧರ್ಮೇ ವ್ಯವಸ್ಥಿತಃ|

08033037c ಪ್ರಜಹ್ಯಾತ್ಸಮರೇ ಶತ್ರೂನ್ಪ್ರಾಣಾನ್ರಕ್ಷನ್ಮಹಾಹವೇ||

“ಶ್ರೇಷ್ಠ ಕುಲದಲ್ಲಿ ಹುಟ್ಟಿ ಕ್ಷತ್ರಧರ್ಮದಲ್ಲಿ ವ್ಯವಸ್ಥಿತನಾಗಿದ್ದುಕೊಂಡು ಈ ಮಹಾಸಮರದಲ್ಲಿ ಪ್ರಾಣಗಳನ್ನು ರಕ್ಷಿಸಿಕೊಳ್ಳಲೋಸುಗ ಏಕೆ ಪಲಾಯನಮಾಡುತ್ತಿರುವೆ?

08033038a ನ ಭವಾನ್ ಕ್ಷತ್ರಧರ್ಮೇಷು ಕುಶಲೋಽಸೀತಿ ಮೇ ಮತಿಃ|

08033038c ಬ್ರಾಹ್ಮೇ ಬಲೇ ಭವಾನ್ ಯುಕ್ತಃ ಸ್ವಾಧ್ಯಾಯೇ ಯಜ್ಞಕರ್ಮಣಿ||

ನೀನು ಕ್ಷತ್ರಧರ್ಮದಲ್ಲಿ ಕುಶಲನಲ್ಲವೆಂದು ನನಗನ್ನಿಸುತ್ತಿದೆ. ನೀನು ಸ್ವಾಧ್ಯಾಯ ಮತ್ತು ಯಜ್ಞಕರ್ಮಯುಕ್ತವಾದ ಬ್ರಹ್ಮಬಲದಿಂದ ಕೂಡಿರುವೆ.

08033039a ಮಾ ಸ್ಮ ಯುಧ್ಯಸ್ವ ಕೌಂತೇಯ ಮಾ ಚ ವೀರಾನ್ಸಮಾಸದಃ|

08033039c ಮಾ ಚೈನಾನಪ್ರಿಯಂ ಬ್ರೂಹಿ ಮಾ ಚ ವ್ರಜ ಮಹಾರಣಂ||

ಆದುದರಿಂದ ಕೌಂತೇಯ! ಯುದ್ಧಮಾಡಬೇಡ! ವೀರರೊಂದಿಗೆ ಸೆಣೆಸಬೇಡ! ವೀರರೊಂದಿಗೆ ಅಪ್ರಿಯ ಮಾತುಗಳನ್ನಾಡಬೇಡ. ಯುದ್ಧಭೂಮಿಗೆ ಇನ್ನೊಮ್ಮೆ ಕಾಲನ್ನೇ ಇಡಬೇಡ!”

08033040a ಏವಮುಕ್ತ್ವಾ ತತಃ ಪಾರ್ಥಂ ವಿಸೃಜ್ಯ ಚ ಮಹಾಬಲಃ|

08033040c ನ್ಯಹನತ್ಪಾಂಡವೀಂ ಸೇನಾಂ ವಜ್ರಹಸ್ತ ಇವಾಸುರೀಂ|

08033040e ತತಃ ಪ್ರಾಯಾದ್ದ್ರುತಂ ರಾಜನ್ ವ್ರೀಡನ್ನಿವ ಜನೇಶ್ವರಃ||

ಹೀಗೆ ಹೇಳಿ ಪಾರ್ಥನನ್ನು ಅಲ್ಲಿಯೇ ಬಿಟ್ಟು ವಜ್ರಪಾಣಿ ಇಂದ್ರನು ಅಸುರೀ ಸೇನೆಯನ್ನು ಹೇಗೋ ಹಾಗೆ ಪಾಂಡವೀ ಸೇನೆಯನ್ನು ಸಂಹರಿಸಿದನು. ರಾಜನ್! ಆಗ ಜನೇಶ್ವರ ಯುಧಿಷ್ಠಿರನು ನಾಚಿಕೊಂಡವನಂತೆ ಶೀಘ್ರವಾಗಿ ರಣದಿಂದ ಹೊರಟುಹೋದನು.

08033041a ಅಥ ಪ್ರಯಾಂತಂ ರಾಜಾನಮನ್ವಯುಸ್ತೇ ತದಾಚ್ಯುತಂ|

08033041c ಚೇದಿಪಾಂಡವಪಾಂಚಾಲಾಃ ಸಾತ್ಯಕಿಶ್ಚ ಮಹಾರಥಃ|

08033041e ದ್ರೌಪದೇಯಾಸ್ತಥಾ ಶೂರಾ ಮಾದ್ರೀಪುತ್ರೌ ಚ ಪಾಂಡವೌ||

ಆಗ ಹಿಂದಿರುಗುತ್ತಿದ್ದ ಆ ಅಚ್ಯುತ ಯುಧಿಷ್ಠಿರನನ್ನು ಅನುಸರಿಸಿ ಚೇದಿ-ಪಾಂಡವ-ಪಾಂಚಾಲರೂ, ಮಹಾರಥ ಸಾತ್ಯಕಿಯೂ, ಶೂರ ದ್ರೌಪದೇಯರೂ, ಪಾಂಡವ ಮಾದ್ರೀಪುತ್ರರಿಬ್ಬರೂ ಹೊರಟುಹೋದರು.

08033042a ತತೋ ಯುಧಿಷ್ಠಿರಾನೀಕಂ ದೃಷ್ಟ್ವಾ ಕರ್ಣಃ ಪರಾಙ್ಮುಖಂ|

08033042c ಕುರುಭಿಃ ಸಹಿತೋ ವೀರೈಃ ಪೃಷ್ಠಗೈಃ ಪೃಷ್ಠಮನ್ವಯಾತ್||

ಯುಧಿಷ್ಠಿರನ ಸೇನೆಯು ಪರಾಙ್ಮುಖವಾದುದನ್ನು ನೋಡಿ ಕರ್ಣನು ಕುರುವೀರರನ್ನೊಡಗೂಡಿ ಅವನ ಸೇನೆಯನ್ನು ಹಿಂಬಾಲಿಸಿ ಹೋದನು.

08033043a ಶಂಖಭೇರೀನಿನಾದೈಶ್ಚ ಕಾರ್ಮುಕಾಣಾಂ ಚ ನಿಸ್ವನೈಃ|

08033043c ಬಭೂವ ಧಾರ್ತರಾಷ್ಟ್ರಾಣಾಂ ಸಿಂಹನಾದರವಸ್ತದಾ||

ಆಗ ಧಾರ್ತರಾಷ್ಟ್ರರ ಕಡೆಯಲ್ಲಿ ಶಂಖ-ಭೇರಿ ನಿನಾದಗಳೂ, ಬಿಲ್ಲುಗಳ ಟೇಂಕಾರ ಶಬ್ಧವೂ, ಮತ್ತು ಜೋರಾದ ಸಿಂಹಗರ್ಜನೆಗಳೂ ಕೇಳಿಬಂದವು.

08033044a ಯುಧಿಷ್ಠಿರಸ್ತು ಕೌರವ್ಯ ರಥಮಾರುಹ್ಯ ಸತ್ವರಃ|

08033044c ಶ್ರುತಕೀರ್ತೇರ್ಮಹಾರಾಜ ದೃಷ್ಟವಾನ್ಕರ್ಣವಿಕ್ರಮಂ||

ಕೌರವ್ಯ! ಮಹಾರಾಜ! ಯುಧಿಷ್ಠಿರನಾದರೋ ಬಹುಬೇಗ ಶ್ರುತಕೀರ್ತಿಯ ರಥವನ್ನೇರಿ ಕರ್ಣನ ವಿಕ್ರಮವನ್ನು ನೋಡುತ್ತಿದ್ದನು.

08033045a ಕಾಲ್ಯಮಾನಂ ಬಲಂ ದೃಷ್ಟ್ವಾ ಧರ್ಮರಾಜೋ ಯುಧಿಷ್ಠಿರಃ|

08033045c ತಾನ್ಯೋಧಾನಬ್ರವೀತ್ ಕ್ರುದ್ಧೋ ಹತೈನಂ ವೈ ಸಹಸ್ರಶಃ||

ತನ್ನ ಸೇನೆಯು ಕದಡಿಹೋಗುತ್ತಿರುವುದನ್ನು ನೋಡಿ ಧರ್ಮರಾಜ ಯುಧಿಷ್ಠಿರನು ಕ್ರುದ್ಧನಾಗಿ ತನ್ನ ಯೋಧರಿಗೆ “ಸಹಸ್ರಾರು ಸಂಖ್ಯೆಗಳಲ್ಲಿ ಅವರನ್ನು ಕೊಲ್ಲಿರಿ!” ಎಂದು ಹೇಳಿದನು.

08033046a ತತೋ ರಾಜ್ಞಾಭ್ಯನುಜ್ಞಾತಾಃ ಪಾಂಡವಾನಾಂ ಮಹಾರಥಾಃ|

08033046c ಭೀಮಸೇನಮುಖಾಃ ಸರ್ವೇ ಪುತ್ರಾಂಸ್ತೇ ಪ್ರತ್ಯುಪಾದ್ರವನ್||

ಆಗ ರಾಜನಿಂದ ಆಜ್ಞಾಪಿತರಾದ ಪಾಂಡವ ಮಹಾರಥರೆಲ್ಲರೂ ಭೀಮಸೇನನನ್ನು ಮುಂದಾಗಿಸಿಕೊಂಡು ನಿನ್ನ ಪುತ್ರರನ್ನು ಎದುರಿಸಿ ಆಕ್ರಮಣಿಸಿದರು.

08033047a ಅಭವತ್ತುಮುಲಃ ಶಬ್ದೋ ಯೋಧಾನಾಂ ತತ್ರ ಭಾರತ|

08033047c ಹಸ್ತ್ಯಶ್ವರಥಪತ್ತೀನಾಂ ಶಸ್ತ್ರಾಣಾಂ ಚ ತತಸ್ತತಃ||

ಭಾರತ! ಆಗ ಅಲ್ಲಲ್ಲಿ ಆನೆ-ಕುದುರೆ-ರಥ-ಪದಾತಿಗಳ ಮತ್ತು ಯೋಧರ ಶಸ್ತ್ರಗಳ ತುಮುಲ ಶಬ್ಧವು ಕೇಳಿ ಬಂದಿತು.

08033048a ಉತ್ತಿಷ್ಠತ ಪ್ರಹರತ ಪ್ರೈತಾಭಿಪತತೇತಿ ಚ|

08033048c ಇತಿ ಬ್ರುವಾಣಾ ಅನ್ಯೋನ್ಯಂ ಜಘ್ನುರ್ಯೋಧಾ ರಣಾಜಿರೇ||

“ಮೇಲೇಳಿರಿ! ಪ್ರಹರಿಸಿರಿ! ಮುಂದೆ ಹೋಗಿರಿ! ಶತ್ರುವಿನ ಮೇಲೆ ಬೀಳಿರಿ!” ಹೀಗೆ ಹೇಳುತ್ತಾ ಯೋಧರು ರಣರಂಗದಲ್ಲಿ ಅನ್ಯೋನ್ಯರನ್ನು ಸಂಹರಿಸಿದರು.

08033049a ಅಭ್ರಚ್ಚಾಯೇವ ತತ್ರಾಸೀಚ್ಚರವೃಷ್ಟಿಭಿರಂಬರೇ|

08033049c ಸಮಾವೃತ್ತೈರ್ನರವರೈರ್ನಿಘ್ನದ್ಭಿರಿತರೇತರಂ||

ಇತರೇತರರನ್ನು ಸಂಹರಿಸುತ್ತಿದ್ದ ನರವರರು ಪ್ರಯೋಗಿಸುತ್ತಿದ್ದ ಶರವೃಷ್ಟಿಗಳು ಆಕಾಶವನ್ನು ತುಂಬಿ ಮೋಡಗಳಂತೆಯೇ ನೆರಳನ್ನು ನೀಡುತ್ತಿದ್ದವು.

08033050a ವಿಪತಾಕಾಧ್ವಜಚ್ಚತ್ರಾ ವ್ಯಶ್ವಸೂತಾಯುಧಾ ರಣೇ|

08033050c ವ್ಯಂಗಾಂಗಾವಯವಾಃ ಪೇತುಃ ಕ್ಷಿತೌ ಕ್ಷೀಣಾ ಹತೇಶ್ವರಾಃ||

ರಣದಲ್ಲಿ ಹತರಾದ ಭೂಪಾಲಕರು ಪತಾಕೆ-ಧ್ವಜ-ಚತ್ರ-ಅಶ್ವ-ಸೂತ-ಆಯುಧಗಳನ್ನು ಕಳೆದುಕೊಂಡು ಅಂಗ-ಅವಯವಗಳಿಂದ ವಿಹೀನರಾಗಿ ಭೂಮಿಯ ಮೇಲೆ ಬೀಳುತ್ತಿದ್ದರು.

08033051a ಪ್ರವರಾಣೀವ ಶೈಲಾನಾಂ ಶಿಖರಾಣಿ ದ್ವಿಪೋತ್ತಮಾಃ|

08033051c ಸಾರೋಹಾ ನಿಹತಾಃ ಪೇತುರ್ವಜ್ರಭಿನ್ನಾ ಇವಾದ್ರಯಃ||

ವಜ್ರದಿಂದ ಒಡೆದು ಹೋದ ಗಿರಿಗಳಂತೆ ಶೈಲಶಿಖರಗಳಂತಿದ್ದ ಉತ್ತಮ ಆನೆಗಳು ಸವಾರರೊಂದಿಗೆ ಹತರಾಗಿ ಕೆಳಗುರುಳುತ್ತಿದ್ದವು.

08033052a ಚಿನ್ನಭಿನ್ನವಿಪರ್ಯಸ್ತೈರ್ವರ್ಮಾಲಂಕಾರವಿಗ್ರಹೈಃ|

08033052c ಸಾರೋಹಾಸ್ತುರಗಾಃ ಪೇತುರ್ಹತವೀರಾಃ ಸಹಸ್ರಶಃ||

ಛಿನ್ನ-ಭಿನ್ನವಾದ ಮತ್ತು ಅಸ್ತವ್ಯಸ್ಥವಾದ ಅಲಂಕಾರ ಶರೀರಗಳಿಂದ ಕೂಡಿದ ಸಹಸ್ರಾರು ಕುದುರೆಗಳು ವೀರ ಆರೋಹಿಗಳೊಂದಿಗೆ ಹತಗೊಂಡು ಬೀಳುತ್ತಿದ್ದವು.

08033053a ವಿಪ್ರವಿದ್ಧಾಯುಧಾಂಗಾಶ್ಚ ದ್ವಿರದಾಶ್ವರಥೈರ್ಹತಾಃ|

08033053c ಪ್ರತಿವೀರೈಶ್ಚ ಸಮ್ಮರ್ದೇ ಪತ್ತಿಸಂಘಾಃ ಸಹಸ್ರಶಃ||

ಆನೆ-ಕುದುರೆ-ರಥಗಳಿಂದ ಹತರಾಗಿ, ಎದುರಿದ್ದ ವೀರರಿಂದ ಸದೆಬಡೆಯಲ್ಪಟ್ಟು ಗಾಯಗೊಂಡ ಮತ್ತು ಕಳೆದುಕೊಂಡ ಅಂಗಾಂಗಗಳಿಂದ ಯುಕ್ತವಾಗಿದ್ದ ಸಹಸ್ರಾರು ಪದಾತಿಸಂಘಗಳು ಬೀಳುತ್ತಿದ್ದವು.

08033054a ವಿಶಾಲಾಯತತಾಮ್ರಾಕ್ಷೈಃ ಪದ್ಮೇಂದುಸದೃಶಾನನೈಃ|

08033054c ಶಿರೋಭಿರ್ಯುದ್ಧಶೌಂಡಾನಾಂ ಸರ್ವತಃ ಸಂಸ್ತೃತಾ ಮಹೀ||

ವಿಶಾಲವೂ, ಅಗಲವೂ, ಕೆಂಪಾಗಿಯೂ ಇದ್ದ ಕಣ್ಣುಗಳಿಂದ ಮತ್ತು ಪದ್ಮ-ಚಂದ್ರರಂತಿದ್ದ ಮುಖಗಳಿಂದಲೂ ಕೂಡಿದ ಯುದ್ಧಶೌಂಡರ ಶಿರಗಳಿಂದ ಭೂಮಿಯು ಎಲ್ಲೆಲ್ಲಿಯೂ ತುಂಬಿಹೋಗಿತ್ತು.

08033055a ತಥಾ ತು ವಿತತೇ ವ್ಯೋಮ್ನಿ ನಿಸ್ವನಂ ಶುಶ್ರುವುರ್ಜನಾಃ|

08033055c ವಿಮಾನೈರಪ್ಸರಃಸಂಘೈರ್ಗೀತವಾದಿತ್ರನಿಸ್ವನೈಃ||

ಭೂಮಿಯಲ್ಲಿ ಹೇಗೋ ಹಾಗೆ ಆಕಾಶದಲ್ಲಿಯೂ ವಿಮಾನಗಳಲ್ಲಿದ್ದ ಅಪ್ಸರ ಸಂಘಗಳು ಗೀತ-ವಾದ್ಯಗಳ ಧ್ವನಿಯನ್ನು ಜನರು ಕೇಳುತ್ತಿದ್ದರು.

08033056a ಹತಾನ್ಕೃತ್ತಾನಭಿಮುಖಾನ್ವೀರಾನ್ವೀರೈಃ ಸಹಸ್ರಶಃ|

08033056c ಆರೋಪ್ಯಾರೋಪ್ಯ ಗಚ್ಚಂತಿ ವಿಮಾನೇಷ್ವಪ್ಸರೋಗಣಾಃ||

ಯುದ್ಧಾಭಿಮುಖರಾಗಿ ವೀರರಿಂದ ಹತರಾದ ಸಹಸ್ರಾರು ವೀರರನ್ನು ಅಪ್ಸರಗಣಗಳು ವಿಮಾನಗಳಲ್ಲಿ ಏರಿಸಿಕೊಂಡು ಹೋಗುತ್ತಿದ್ದವು.

08033057a ತದ್ದೃಷ್ಟ್ವಾ ಮಹದಾಶ್ಚರ್ಯಂ ಪ್ರತ್ಯಕ್ಷಂ ಸ್ವರ್ಗಲಿಪ್ಸಯಾ|

08033057c ಪ್ರಹೃಷ್ಟಮನಸಃ ಶೂರಾಃ ಕ್ಷಿಪ್ರಂ ಜಗ್ಮುಃ ಪರಸ್ಪರಂ||

ಪ್ರತ್ಯಕ್ಷವಾಗಿ ಆ ಮಹದಾಶ್ಚರ್ಯವನ್ನು ನೋಡಿ ಸ್ವರ್ಗವನ್ನು ಬಯಸಿ ಪ್ರಹೃಷ್ಟಮನಸ್ಕರಾಗಿ ಶೂರರು ಬೇಗಬೇಗನೆ ಪರಸ್ಪರರನ್ನು ಕೊಲ್ಲುತ್ತಿದ್ದರು.

08033058a ರಥಿನೋ ರಥಿಭಿಃ ಸಾರ್ಧಂ ಚಿತ್ರಂ ಯುಯುಧುರಾಹವೇ|

08033058c ಪತ್ತಯಃ ಪತ್ತಿಭಿರ್ನಾಗಾ ನಾಗೈಃ ಸಹ ಹಯೈರ್ಹಯಾಃ||

ಯುದ್ಧದಲ್ಲಿ ರಥಿಗಳು ರಥಿಗಳೊಂದಿಗೆ, ಪದಾತಿಗಳು ಪದಾತಿಗಳೊಂದಿಗೆ, ಆನೆಗಳು ಆನೆಗಳೊಂದಿಗೆ ಮತ್ತು ಕುದುರೆಗಳು ಕುದುರೆಗಳೊಂದಿಗೆ ವಿಚಿತ್ರವಾಗಿ ಹೋರಾಡಿದರು.

08033059a ಏವಂ ಪ್ರವೃತ್ತೇ ಸಂಗ್ರಾಮೇ ಗಜವಾಜಿಜನಕ್ಷಯೇ|

08033059c ಸೈನ್ಯೇ ಚ ರಜಸಾ ವ್ಯಾಪ್ತೇ ಸ್ವೇ ಸ್ವಾಂ ಜಘ್ನುಃ ಪರೇ ಪರಾನ್||

ಈ ರೀತಿ ಸಂಗ್ರಾಮದಲ್ಲಿ ಆನೆ-ಕುದುರೆ-ಜನರ ಕ್ಷಯವಾಗುತ್ತಿರಲು ಸೇನೆಯು ಧೂಳಿನಿಂದ ಆವೃತವಾಗಿ ದಿಕ್ಕುಕಾಣದೇ ನಮ್ಮವರು ನಮ್ಮವರನ್ನೇ ಮತ್ತು ಶತ್ರುಗಳು ಶತ್ರುಗಳನ್ನೇ ಕೊಲ್ಲತೊಡಗಿದರು.

08033060a ಕಚಾಕಚಿ ಬಭೌ ಯುದ್ಧಂ ದಂತಾದಂತಿ ನಖಾನಖಿ|

08033060c ಮುಷ್ಟಿಯುದ್ಧಂ ನಿಯುದ್ಧಂ ಚ ದೇಹಪಾಪ್ಮವಿನಾಶನಂ||

ದೇಹ-ಪಾಪಗಳನ್ನು ವಿನಾಶಿಸುವ ಆ ಯುದ್ಧದಲ್ಲಿ ಪರಸ್ಪರರ ಕೂದಲನ್ನು ಜಗ್ಗಾಡುತ್ತಿದ್ದರು. ಹಲ್ಲುಗಳಿಂದ ಕಚ್ಚುತ್ತಿದ್ದರು. ಉಗುರುಗಳಿಂದ ಪರೆದಾಡುತ್ತಿದ್ದರು. ಮುಷ್ಟಿಯುದ್ಧ ಮಾಡುತ್ತಿದ್ದರು.

08033061a ತಥಾ ವರ್ತತಿ ಸಂಗ್ರಾಮೇ ಗಜವಾಜಿಜನಕ್ಷಯೇ|

08033061c ನರಾಶ್ವಗಜದೇಹೇಭ್ಯಃ ಪ್ರಸೃತಾ ಲೋಹಿತಾಪಗಾ|

08033061e ನರಾಶ್ವಗಜದೇಹಾನ್ಸಾ ವ್ಯುವಾಹ ಪತಿತಾನ್ಬಹೂನ್||

ಆ ರೀತಿ ಆನೆ-ಕುದುರೆ-ಜನ ಕ್ಷಯವು ನಡೆಯುತ್ತಿರಲು ಸಂಗ್ರಾಮದಲ್ಲಿ ನರರು, ಆನೆಗಳು ಮತ್ತು ಕುದುರೆಗಳ ದೇಹದಿಂದ ಸುರಿಯುತ್ತಿದ್ದ ರಕ್ತವು ಪ್ರವಾಹವಾಗಿ ಹರಿದು ಕೆಳಗೆ ಬಿದ್ದಿದ್ದ ಅನೇಕ ನರರ, ಆನೆಗಳ ಮತ್ತು ಕುದುರೆಗಳ ದೇಹಗಳನ್ನೇ ಕೊಚ್ಚಿಕೊಂಡು ಹೋಗುತ್ತಿತ್ತು.

08033062a ನರಾಶ್ವಗಜಸಂಬಾಧೇ ನರಾಶ್ವಗಜಸಾದಿನಾಂ|

08033062c ಲೋಹಿತೋದಾ ಮಹಾಘೋರಾ ನದೀ ಲೋಹಿತಕರ್ದಮಾ|

08033062e ನರಾಶ್ವಗಜದೇಹಾನ್ಸಾ ವಹಂತೀ ಭೀರುಭೀಷಣೀ||

ನರಾಶ್ವಗಜ ಸಂಪನ್ನವಾಗಿದ್ದ ಆ ಮಹಾಘೋರ ನದಿಯಲ್ಲಿ ನರಾಶ್ವಗಜಸವಾರರ ರಕ್ತವೇ ನೀರಾಗಿದ್ದಿತು. ಮಾಂಸವೇ ಕೆಸರಾಗಿದ್ದಿತು. ನರಾಶ್ವಗಜದೇಹಗಳು ತೇಲುತ್ತಿದ್ದ ಆ ರಕ್ತದ ನದಿಯು ಹೇಡಿಗಳಿಗೆ ಭಯವನ್ನುಂಟುಮಾಡುತ್ತಿತ್ತು.

08033063a ತಸ್ಯಾಃ ಪರಮಪಾರಂ ಚ ವ್ರಜಂತಿ ವಿಜಯೈಷಿಣಃ|

08033063c ಗಾಧೇನ ಚ ಪ್ಲವಂತಶ್ಚ ನಿಮಜ್ಜ್ಯೋನ್ಮಜ್ಜ್ಯ ಚಾಪರೇ||

ವಿಜಯೈಷಿಣಿಗಳು ಆಳವಿಲ್ಲದ ಸ್ಥಳದಲ್ಲಿ ದಾಟಿಕೊಂಡು ಹೋಗುತ್ತಿದ್ದರು. ಆಳವಿದ್ದಲ್ಲಿ ಹಾರಿಕೊಂಡು ಹೋಗುತ್ತಿದ್ದರು ಮತ್ತು ಇನ್ನು ಕೆಲವರು ಆ ರಕ್ತಕೋಡಿಯಲ್ಲಿ ಮುಳುಗಿಹೋಗುತ್ತಿದ್ದರು.

08033064a ತೇ ತು ಲೋಹಿತದಿಗ್ಧಾಂಗಾ ರಕ್ತವರ್ಮಾಯುಧಾಂಬರಾಃ|

08033064c ಸಸ್ನುಸ್ತಸ್ಯಾಂ ಪಪುಶ್ಚಾಸೃಂ ಮಮ್ಲುಶ್ಚ ಭರತರ್ಷಭ||

ಭರತರ್ಷಭ! ರಕ್ತದಿಂದ ತೋಯ್ದು ಹೋಗಿದ್ದ ಅವರ ದೇಹಗಳು, ಕವಚಗಳು ಮತ್ತು ವಸ್ತ್ರಗಳು ರಕ್ತದಂತೆ ಕೆಂಪಾಗಿ ಕಾಣುತ್ತಿದ್ದವು. ಆ ರಕ್ತನದಿಯಲ್ಲಿ ಕೆಲವರು ಗುಟುಕುಹಾಕುತ್ತಿದ್ದರು, ಸ್ನಾನಮಾಡುತ್ತಿದ್ದರು ಮತ್ತು ಮೂರ್ಛೆಹೋಗುತ್ತಿದ್ದರು.

08033065a ರಥಾನಶ್ವಾನ್ನರಾನ್ನಾಗಾನಾಯುಧಾಭರಣಾನಿ ಚ|

08033065c ವಸನಾನ್ಯಥ ವರ್ಮಾಣಿ ಹನ್ಯಮಾನಾನ್ ಹತಾನಪಿ|

08033065e ಭೂಮಿಂ ಖಂ ದ್ಯಾಂ ದಿಶಶ್ಚೈವ ಪ್ರಾಯಃ ಪಶ್ಯಾಮ ಲೋಹಿತಂ||

ರಥ-ಕುದುರೆ-ಆನೆಗಳು, ಆಯುಧ-ಆಭರಣಗಳು, ವಸ್ತ್ರ-ಕವಚಗಳು, ಕೊಲ್ಲಲ್ಪಡುತ್ತಿದ್ದವರು ಮತ್ತು ಸತ್ತುಹೋದವರು, ಭೂಮಿ, ಆಕಾಶ, ಸ್ವರ್ಗ, ದಿಕ್ಕುಗಳು ಪ್ರಾಯಶಃ ಇವೆಲ್ಲವೂ ಕೆಂಪಾಗಿಯೇ ತೋರುತ್ತಿದ್ದವು.

08033066a ಲೋಹಿತಸ್ಯ ತು ಗಂದೇನ ಸ್ಪರ್ಶೇನ ಚ ರಸೇನ ಚ|

08033066c ರೂಪೇಣ ಚಾತಿರಿಕ್ತೇನ ಶಬ್ದೇನ ಚ ವಿಸರ್ಪತಾ|

08033066e ವಿಷಾದಃ ಸುಮಹಾನಾಸೀತ್ಪ್ರಾಯಃ ಸೈನ್ಯಸ್ಯ ಭಾರತ||

ಭಾರತ! ಆ ಕೆಂಪುನದಿಯ ವಾಸನೆ, ಸ್ಪರ್ಷ, ರುಚಿ, ರೂಪ, ಜೋರಾಗಿ ಹರಿದುಹೋಗುತ್ತಿದ್ದುದರ ಶಬ್ಧ, ಇವುಗಳಿಂದ ಪ್ರಾಯಶಃ ಸೇನೆಗಳು ಮಹಾ ವಿಷಾದಕ್ಕೊಳಗಾಗಿದ್ದರು.

08033067a ತತ್ತು ವಿಪ್ರಹತಂ ಸೈನ್ಯಂ ಭೀಮಸೇನಮುಖೈಸ್ತವ|

08033067c ಭೂಯಃ ಸಮಾದ್ರವನ್ವೀರಾಃ ಸಾತ್ಯಕಿಪ್ರಮುಖಾ ರಥಾಃ||

ಆಗಲೇ ನಾಶವಾಗಿಹೋಗಿದ್ದ ನಿನ್ನ ಸೇನೆಯನ್ನು ಭೀಮಸೇನನ ನಾಯಕತ್ವದಲ್ಲಿ ಸಾತ್ಯಕಿ ಮತ್ತು ಇತರ ಪ್ರಮುಖ ಮಹಾರಥರು ಪುನಃ ಆಕ್ರಮಣಿಸಿದರು.

08033068a ತೇಷಾಮಾಪತತಾಂ ವೇಗಮವಿಷಹ್ಯ ಮಹಾತ್ಮನಾಂ|

08033068c ಪುತ್ರಾಣಾಂ ತೇ ಮಹತ್ಸೈನ್ಯಮಾಸೀದ್ರಾಜನ್ಪರಾಙ್ಮುಖಂ||

ರಾಜನ್! ವೇಗವಾಗಿ ಆಕ್ರಮಣಿಸುತ್ತಿದ್ದ ಆ ಮಹಾತ್ಮರನ್ನು ಸಹಿಸಿಕೊಳ್ಳಲಾಗದೇ ನಿನ್ನ ಮಕ್ಕಳ ಆ ಮಹಾಸೇನೆಯು ಪರಾಙ್ಮುಖವಾಯಿತು.

08033069a ತತ್ಪ್ರಕೀರ್ಣರಥಾಶ್ವೇಭಂ ನರವಾಜಿಸಮಾಕುಲಂ|

08033069c ವಿಧ್ವಸ್ತಚರ್ಮಕವಚಂ ಪ್ರವಿದ್ಧಾಯುಧಕಾರ್ಮುಕಂ||

ರಥಾಶ್ವಗಜಪದಾತಿಗಣಗಳು ಚೆಲ್ಲಾಪಿಲ್ಲಿಯಾಗಿ ಹೋದವು. ಯೋಧರ ಕವಚ-ಆಭರಣಗಳು ವಿಧ್ವಸ್ತವಾದವು. ಆಯುಧ-ಧನುಸ್ಸುಗಳು ತುಂಡಾಗಿ ಭೂಮಿಯ ಮೇಲೆ ಬಿದ್ದವು.

08033070a ವ್ಯದ್ರವತ್ತಾವಕಂ ಸೈನ್ಯಂ ಲೋಡ್ಯಮಾನಂ ಸಮಂತತಃ|

08033070c ಸಿಂಹಾರ್ದಿತಂ ಮಹಾರಣ್ಯೇ ಯಥಾ ಗಜಕುಲಂ ತಥಾ||

ಮಹಾರಣ್ಯದಲ್ಲಿ ಸಿಂಹದಿಂದ ಆಕ್ರಮಣಿಸಲ್ಪಟ್ಟ ಗಜಸಂಕುಲವು ಹೇಗೋ ಹಾಗೆ ವಧಿಸಲ್ಪಡುತ್ತಿರುವ ನಿನ್ನ ಸೇನೆಯು ಎಲ್ಲ ಕಡೆಗಳಿಗೆ ಪಲಾಯನಗೈದಿತು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ತ್ರ್ಯಾತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಮೂವತ್ಮೂರನೇ ಅಧ್ಯಾಯವು.

[1] ಚಂದ್ರದೇವ ಮತ್ತು ದಂಡದಾರ

Comments are closed.