Karna Parva: Chapter 26

ಕರ್ಣ ಪರ್ವ

೨೬

ಹದಿನೇಳನೇ ದಿನದ ಯುದ್ಧ: ಕರ್ಣ-ಶಲ್ಯರ ಸಂವಾದ

ಶಲ್ಯ-ಕರ್ಣರು ಒಂದೇ ರಥದಲ್ಲಿ ಕುಳಿತು ರಣಕ್ಕೆ ಪ್ರಯಾಣಿಸಿದುದು (೧-೧೫). “ಧರ್ಮರಾಜನನ್ನು ಸೆರೆಹಿಡಿ ಅಥವಾ ಧನಂಜಯ, ಭೀಮಸೇನ, ಮತ್ತು ಮಾದ್ರೀಪುತ್ರರು ಇವರಲ್ಲಿ ಯಾರನ್ನಾದರೂ ಸಂಹರಿಸು!” ಎಂದು ದುರ್ಯೋಧನನು ಕರ್ಣನಲ್ಲಿ ಕೇಳಿಕೊಳ್ಳುವುದು (೧೬-೨೧). ಕರ್ಣನು ಪಾಂಡವರಿರುವಲ್ಲಿಗೆ ರಥವನ್ನು ಕೊಂಡೊಯ್ಯಿ ಎಂದು ಶಲ್ಯನಿಗೆ ಹೇಳಿದುದು (೨೨-೨೬). ಶಲ್ಯನು ಪಾಂಡವರನ್ನು ಹೊಗಳುತ್ತಾ ಅವರನ್ನು ಅಪಮಾನಿಸಬೇಡ ಎಂದು ಕರ್ಣನಿಗೆ ಹೇಳಿ ರಥವನ್ನು ಮುಂದುವರಿಸಿದುದು (೨೭-೩೦). ಕರ್ಣನು ಯುದ್ಧಕ್ಕೆ ಹೊರಡುವಾಗ ಕಂಡ ಅಪಶಕುನಗಳು (೩೧-೩೮). ಕರ್ಣನು ಶಲ್ಯನೊಡನೆ ಮಾತನಾಡುತ್ತಾ ತನ್ನ ಶೌರ್ಯದ ಕುರಿತು ಕೊಚ್ಚಿಕೊಳ್ಳುವದು (೩೯-೬೦). ಶಲ್ಯನು ಅರ್ಜುನನ ಶೌರ್ಯಗಳನ್ನು ವರ್ಣಿಸುತ್ತಾ  “ಇಂದು ಅವನಿಂದ ನೀನು ಹತನಾಗುವೆ!” ಎಂದು ಕರ್ಣನಿಗೆ ಹೇಳಿ, ರಥವನ್ನು ಮುಂದುವರಿಸಿದುದು (೬೧-೭೪).

08026001 ದುರ್ಯೋಧನ ಉವಾಚ|

08026001a ಅಯಂ ತೇ ಕರ್ಣ ಸಾರಥ್ಯಂ ಮದ್ರರಾಜಃ ಕರಿಷ್ಯತಿ|

08026001c ಕೃಷ್ಣಾದಭ್ಯಧಿಕೋ ಯಂತಾ ದೇವೇಂದ್ರಸ್ಯೇವ ಮಾತಲಿಃ||

ದುರ್ಯೋಧನನು ಹೇಳಿದನು: “ಕರ್ಣ! ಇಗೋ ಕೃಷ್ಣನಿಗಿಂತಲೂ ಅಧಿಕನಾದ, ದೇವೇಂದ್ರನ ಸಾರಥಿ ಮಾತಲಿಗಿಂತಲೂ ಹೆಚ್ಚಿನವನಾದ ಮದ್ರರಾಜನು ನಿನ್ನ ಸಾರಥ್ಯವನ್ನು ಮಾಡುತ್ತಾನೆ.

08026002a ಯಥಾ ಹರಿಹಯೈರ್ಯುಕ್ತಂ ಸಂಗೃಹ್ಣಾತಿ ಸ ಮಾತಲಿಃ|

08026002c ಶಲ್ಯಸ್ತವ ತಥಾದ್ಯಾಯಂ ಸಂಯಂತಾ ರಥವಾಜಿನಾಂ||

ಯಾವರೀತಿಯಲ್ಲಿ ಇಂದ್ರನ ಕುದುರೆಗಳ ಕಡಿವಾಣಗಳನ್ನು ಮಾತಲಿಯು ಹಿಡಿಯುತ್ತಾನೋ ಹಾಗೆ ಶಲ್ಯನು ನಿನ್ನ ರಥದ ಕುದುರೆಗಳ ಕಡಿವಾಣಗಳನ್ನು ಹಿಡಿದು ರಥವನ್ನು ನಿಯಂತ್ರಿಸುತ್ತಾನೆ.

08026003a ಯೋಧೇ ತ್ವಯಿ ರಥಸ್ಥೇ ಚ ಮದ್ರರಾಜೇ ಚ ಸಾರಥೌ|

08026003c ರಥಶ್ರೇಷ್ಠೋ ಧ್ರುವಂ ಸಂಖ್ಯೇ ಪಾರ್ಥೋ ನಾಭಿಭವಿಷ್ಯತಿ||

ಯೋಧನಾದ ನೀನು ಮತ್ತು ಸಾರಥಿಯಾಗಿ ಮದ್ರರಾಜನು ರಥದಲ್ಲಿ ಕುಳಿತಿರಲು ನಿನ್ನ ಶ್ರೇಷ್ಠ ರಥವು ಯುದ್ಧದಲ್ಲಿ ಖಂಡಿತವಾಗಿಯೂ ಪಾರ್ಥನನ್ನು ಇಲ್ಲದಂತಾಗಿಸುತ್ತದೆ.””

08026004 ಸಂಜಯ ಉವಾಚ|

08026004a ತತೋ ದುರ್ಯೋಧನೋ ಭೂಯೋ ಮದ್ರರಾಜಂ ತರಸ್ವಿನಂ|

08026004c ಉವಾಚ ರಾಜನ್ಸಂಗ್ರಾಮೇ ಸಂಯಚ್ಚಂತಂ ಹಯೋತ್ತಮಾನ್||

ಸಂಜಯನು ಹೇಳಿದನು: “ರಾಜನ್! ಆಗ ಸಂಗ್ರಾಮದಲ್ಲಿ ಉತ್ತಮ ಹಯಗಳನ್ನು ನಡೆಸುತ್ತಿದ್ದ ತರಸ್ವಿ ಮದ್ರರಾಜನಿಗೆ ದುರ್ಯೋಧನನು ಪುನಃ ಹೇಳಿದನು:

08026005a ತ್ವಯಾಭಿಗುಪ್ತೋ ರಾಧೇಯೋ ವಿಜೇಷ್ಯತಿ ಧನಂಜಯಂ|

08026005c ಇತ್ಯುಕ್ತೋ ರಥಮಾಸ್ಥಾಯ ತಥೇತಿ ಪ್ರಾಹ ಭಾರತ||

“ನಿನ್ನಿಂದ ರಕ್ಷಿತನಾದ ರಾಧೇಯನು ಧನಂಜಯನನ್ನು ಗೆಲ್ಲುತ್ತಾನೆ!” ಭಾರತ! ಹೀಗೆ ಹೇಳಲು ಶಲ್ಯನು ಹಾಗೆಯೇ ಆಗಲೆಂದು ರಥವನ್ನು ಮುಟ್ಟಿ ಹೇಳಿದನು.

08026006a ಶಲ್ಯೇಽಭ್ಯುಪಗತೇ ಕರ್ಣಃ ಸಾರಥಿಂ ಸುಮನೋಽಬ್ರವೀತ್|

08026006c ಸ್ವಂ ಸೂತ ಸ್ಯಂದನಂ ಮಹ್ಯಂ ಕಲ್ಪಯೇತ್ಯಸಕೃತ್ತ್ವರನ್||

ಶಲ್ಯನನ್ನು ಪಡೆದ ಕರ್ಣನು ಸುಮನಸ್ಕನಾಗಿ ತನ್ನ ಸಾರಥಿಗೆ ಹೇಳಿದನು: “ಸೂತ! ನನ್ನ ರಥವನ್ನು ಒಡನೆಯೇ ಸಜ್ಜುಗೊಳಿಸು!”

08026007a ತತೋ ಜೈತ್ರಂ ರಥವರಂ ಗಂಧರ್ವನಗರೋಪಮಂ|

08026007c ವಿಧಿವತ್ಕಲ್ಪಿತಂ ಭರ್ತ್ರೇ ಜಯೇತ್ಯುಕ್ತ್ವಾ ನ್ಯವೇದಯತ್||

ಆಗ ಗಂಧರ್ವನಗರದಂತೆ ವಿಶಾಲವಾಗಿದ್ದ ಆ ಶ್ರೇಷ್ಠ ರಥವನ್ನು ತನ್ನ ಸ್ವಾಮಿಗಾಗಿ ವಿಧಿವತ್ತಾಗಿ ಸಜ್ಜುಗೊಳಿಸಿ ಸಾರಥಿಯು “ಜಯವಾಗಲಿ!” ಎಂದು ನಿವೇದಿಸಿದನು.

08026008a ತಂ ರಥಂ ರಥಿನಾಂ ಶ್ರೇಷ್ಠಃ ಕರ್ಣೋಽಭ್ಯರ್ಚ್ಯ ಯಥಾವಿಧಿ|

08026008c ಸಂಪಾದಿತಂ ಬ್ರಹ್ಮವಿದಾ ಪೂರ್ವಮೇವ ಪುರೋಧಸಾ||

ಅದಕ್ಕೆ ಮೊದಲೇ ಬ್ರಹ್ಮವಿದರಿಂದ ಪರಿಶುದ್ಧಗೊಳಿಸಿ ಸಮೃದ್ಧವಾಗಿದ್ದ ಆ ರಥವನ್ನು ರಥಿಗಳಲ್ಲಿ ಶ್ರೇಷ್ಠ ಕರ್ಣನು ಯಥಾವಿಧಿಯಾಗಿ ಅರ್ಚಿಸಿದನು.

08026009a ಕೃತ್ವಾ ಪ್ರದಕ್ಷಿಣಂ ಯತ್ನಾದುಪಸ್ಥಾಯ ಚ ಭಾಸ್ಕರಂ|

08026009c ಸಮೀಪಸ್ಥಂ ಮದ್ರರಾಜಂ ಸಮಾರೋಪಯದಗ್ರತಃ||

ಪ್ರಯತ್ನಿಸಿ ಭಾಸ್ಕರನನ್ನು ಉಪಾಸಿಸಿ ಪ್ರದಕ್ಷಿಣೆಯನ್ನು ಮಾಡಿ ಸಮೀಪದಲ್ಲಿದ್ದ ಮದ್ರರಾಜನಿಗೆ ಮೊದಲು ರಥವನ್ನೇರುವಂತೆ ಹೇಳಿದನು.

08026010a ತತಃ ಕರ್ಣಸ್ಯ ದುರ್ಧರ್ಷಂ ಸ್ಯಂದನಪ್ರವರಂ ಮಹತ್|

08026010c ಆರುರೋಹ ಮಹಾತೇಜಾಃ ಶಲ್ಯಃ ಸಿಂಹ ಇವಾಚಲಂ||

ಆಗ ಮಹಾತೇಜಸ್ವಿ ಶಲ್ಯನು ಸಿಂಹವು ಪರ್ವತವನ್ನೇರುವಂತೆ ಕರ್ಣನ ಆ ಅತಿದೊಡ್ಡದಾದ ದುರ್ಧರ್ಷ ರಥಪ್ರವರವನ್ನು ಏರಿದನು.

08026011a ತತಃ ಶಲ್ಯಾಸ್ಥಿತಂ ರಾಜನ್ಕರ್ಣಃ ಸ್ವರಥಮುತ್ತಮಂ|

08026011c ಅಧ್ಯತಿಷ್ಠದ್ಯಥಾಂಭೋದಂ ವಿದ್ಯುತ್ವಂತಂ ದಿವಾಕರಃ||

ರಾಜನ್! ಶಲ್ಯನು ಕುಳಿತಿದ್ದ ತನ್ನ ಉತ್ತಮ ರಥವನ್ನು ಕರ್ಣನು ಮಿಂಚಿನಿಂದ ಕೂಡಿದ ಮೋಡಗಳ ಮೇಲೆ ದಿವಾಕರನು ಏರುವಂತೆ ಏರಿ ಕುಳಿತುಕೊಂಡನು.

08026012a ತಾವೇಕರಥಮಾರೂಢಾವಾದಿತ್ಯಾಗ್ನಿಸಮತ್ವಿಷೌ|

08026012c ವ್ಯಭ್ರಾಜೇತಾಂ ಯಥಾ ಮೇಘಂ ಸೂರ್ಯಾಗ್ನೀ ಸಹಿತೌ ದಿವಿ||

ಆದಿತ್ಯ-ಅಗ್ನಿಯರಂತೆ ಬೆಳಗುತ್ತಿದ್ದ ಅವರಿಬ್ಬರೂ ಒಂದೇ ರಥವನ್ನು ಏರಿರಲು ಆಕಾಶದಲ್ಲಿ ಮೇಘವನ್ನೇರಿರುವ ಸೂರ್ಯ-ಅಗ್ನಿಯರಂತೆ ಹೊಳೆಯುತ್ತಿದ್ದರು.

08026013a ಸಂಸ್ತೂಯಮಾನೌ ತೌ ವೀರೌ ತದಾಸ್ತಾಂ ದ್ಯುತಿಮತ್ತರೌ|

08026013c ಋತ್ವಿಕ್ಸದಸ್ಯೈರಿಂದ್ರಾಗ್ನೀ ಹೂಯಮಾನಾವಿವಾಧ್ವರೇ||

ಅಧ್ವರದಲ್ಲಿ ಋತ್ವಿಕರು ಸದಸ್ಯರನ್ನು ಕೂಡಿಕೊಂಡು ಇಂದ್ರ-ಅಗ್ನಿಯರನ್ನು ಸ್ತುತಿಸುವಂತೆ ದ್ಯುತಿಮತ್ತರಾದ ಆ ಇಬ್ಬರು ವೀರರನ್ನು ಯೋಧರು ಸಂಸ್ತುತಿಸುತ್ತಿದ್ದರು.

08026014a ಸ ಶಲ್ಯಸಂಗೃಹೀತಾಶ್ವೇ ರಥೇ ಕರ್ಣಃ ಸ್ಥಿತೋಽಭವತ್|

08026014c ಧನುರ್ವಿಸ್ಫಾರಯನ್ಘೋರಂ ಪರಿವೇಷೀವ ಭಾಸ್ಕರಃ||

ಶಲ್ಯನಿಂದ ನಿಯಂತ್ರಿಸಲ್ಪಟ್ಟ ಆ ರಥದಲ್ಲಿ ಕುಳಿತಿದ್ದ ಕರ್ಣನು ಘೋರ ಧನುಸ್ಸನ್ನು ಟೇಂಕರಿಸಿ ಪರಿವೇಷಿತ ಭಾಸ್ಕರನಂತೆ ಕಾಣುತ್ತಿದ್ದನು.

08026015a ಆಸ್ಥಿತಃ ಸ ರಥಶ್ರೇಷ್ಠಂ ಕರ್ಣಃ ಶರಗಭಸ್ತಿಮಾನ್|

08026015c ಪ್ರಬಭೌ ಪುರುಷವ್ಯಾಘ್ರೋ ಮಂದರಸ್ಥ ಇವಾಂಶುಮಾನ್||

ಆ ಶ್ರೇಷ್ಠ ರಥದಲ್ಲಿ ಕುಳಿತಿದ್ದ ಶರಗಳೇ ಕಿರಣಗಳಾಗಿದ್ದ ಪುರುಷವ್ಯಾಘ್ರ ಕರ್ಣನು ಮಂದರ ಪರ್ವತವನ್ನೇರಿದ ಸೂರ್ಯನಂತೆ ಪ್ರಕಾಶಿಸುತ್ತಿದ್ದನು.

08026016a ತಂ ರಥಸ್ಥಂ ಮಹಾವೀರಂ ಯಾಂತಂ ಚಾಮಿತತೇಜಸಂ|

08026016c ದುರ್ಯೋಧನಃ ಸ್ಮ ರಾಧೇಯಮಿದಂ ವಚನಮಬ್ರವೀತ್||

ಆ ರಥದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಆ ಮಹಾವೀರ ಅಮಿತತೇಜಸ್ವಿ ರಾಧೇಯನಿಗೆ ದುರ್ಯೋಧನನು ಈ ಮಾತುಗಳನ್ನಾಡಿದನು:

08026017a ಅಕೃತಂ ದ್ರೋಣಭೀಷ್ಮಾಭ್ಯಾಂ ದುಷ್ಕರಂ ಕರ್ಮ ಸಂಯುಗೇ|

08026017c ಕುರುಷ್ವಾಧಿರಥೇ ವೀರ ಮಿಷತಾಂ ಸರ್ವಧನ್ವಿನಾಂ||

“ವೀರ! ಆಧಿರಥೇ! ಯುದ್ಧದಲ್ಲಿ ಸರ್ವಧನ್ವಿಗಳೂ ನೋಡುತ್ತಿರುವಂತೆ ದ್ರೋಣ-ಭೀಷ್ಮ ಇಬ್ಬರೂ ಮಾಡಿರದಂತಹ ದುಷ್ಕರ ಕರ್ಮವನ್ನು ನೀನು ಮಾಡು!

08026018a ಮನೋಗತಂ ಮಮ ಹ್ಯಾಸೀದ್ಭೀಷ್ಮದ್ರೋಣೌ ಮಹಾರಥೌ|

08026018c ಅರ್ಜುನಂ ಭೀಮಸೇನಂ ಚ ನಿಹಂತಾರಾವಿತಿ ಧ್ರುವಂ||

ಮಹಾರಥರಾದ ಭೀಷ್ಮ-ದ್ರೋಣರು ಅರ್ಜುನ-ಭೀಮಸೇನರನ್ನು ನಿಶ್ಚಯವಾಗಿಯೂ ಸಂಹರಿಸುತ್ತಾರೆಂದು ನನ್ನ ಮನೋಗತವಾಗಿತ್ತು.

08026019a ತಾಭ್ಯಾಂ ಯದಕೃತಂ ವೀರ ವೀರಕರ್ಮ ಮಹಾಮೃಧೇ|

08026019c ತತ್ಕರ್ಮ ಕುರು ರಾಧೇಯ ವಜ್ರಪಾಣಿರಿವಾಪರಃ||

ವೀರ! ರಾಧೇಯ! ಮಹಾಯುದ್ಧದಲ್ಲಿ ವಜ್ರಪಾಣಿಯು ಶತ್ರುಗಳೊಂದಿಗೆ ಹೇಗೋ ಹಾಗೆ ಅವರಿಬ್ಬರೂ ಮಾಡಿರದ ವೀರಕರ್ಮವನ್ನು ನೀನು ಮಾಡು!

08026020a ಗೃಹಾಣ ಧರ್ಮರಾಜಂ ವಾ ಜಹಿ ವಾ ತ್ವಂ ಧನಂಜಯಂ|

08026020c ಭೀಮಸೇನಂ ಚ ರಾಧೇಯ ಮಾದ್ರೀಪುತ್ರೌ ಯಮಾವಪಿ||

ರಾಧೇಯ! ಧರ್ಮರಾಜನನ್ನು ಸೆರೆಹಿಡಿ ಅಥವಾ ಧನಂಜಯನನನ್ನಾಗಲೀ, ಭೀಮಸೇನನನ್ನಾಗಲೀ, ಮಾದ್ರೀಪುತ್ರ ಯಮಳರನ್ನಾಗಲೀ ಸಂಹರಿಸು!

08026021a ಜಯಶ್ಚ ತೇಽಸ್ತು ಭದ್ರಂ ಚ ಪ್ರಯಾಹಿ ಪುರುಷರ್ಷಭ|

08026021c ಪಾಂಡುಪುತ್ರಸ್ಯ ಸೈನ್ಯಾನಿ ಕುರು ಸರ್ವಾಣಿ ಭಸ್ಮಸಾತ್||

ಪುರುಷರ್ಷಭ! ನಿನಗೆ ಜಯವಾಗಲಿ! ಮಂಗಳವಾಗಲಿ! ಹೋಗು! ಪಾಂಡುಪುತ್ರರ ಸೇನೆಗಳೆಲ್ಲವನ್ನೂ ಭಸ್ಮಮಾಡು!”

08026022a ತತಸ್ತೂರ್ಯಸಹಸ್ರಾಣಿ ಭೇರೀಣಾಮಾಯುತಾನಿ ಚ|

08026022c ವಾದ್ಯಮಾನಾನ್ಯರೋಚಂತ ಮೇಘಶಬ್ಧಾ ಯಥಾ ದಿವಿ||

ಆಗ ಆಕಾಶದಲ್ಲಿ ಮೋಡಗಳು ಗುಡುಗುವಂತೆ ಸಹಸ್ರಾರು ಲಕ್ಷಗಟ್ಟಲೆ ಭೇರಿಗಳು ಮತ್ತು ವಾದ್ಯಗಳು ಮೊಳಗಿದವು.

08026023a ಪ್ರತಿಗೃಹ್ಯ ತು ತದ್ವಾಕ್ಯಂ ರಥಸ್ಥೋ ರಥಸತ್ತಮಃ|

08026023c ಅಭ್ಯಭಾಷತ ರಾಧೇಯಃ ಶಲ್ಯಂ ಯುದ್ಧವಿಶಾರದಂ||

ದುರ್ಯೋಧನನ ಆ ಮಾತನ್ನು ಸ್ವೀಕರಿಸಿ ರಥಸ್ಥನಾಗಿದ್ದ ರಥಸತ್ತಮ ರಾಧೇಯನು ಯುದ್ಧವಿಶಾರದ ಶಲ್ಯನಿಗೆ ಹೇಳಿದನು:

08026024a ಚೋದಯಾಶ್ವಾನ್ಮಹಾಬಾಹೋ ಯಾವದ್ಧನ್ಮಿ ಧನಂಜಯಂ|

08026024c ಭೀಮಸೇನಂ ಯಮೌ ಚೋಭೌ ರಾಜಾನಂ ಚ ಯುಧಿಷ್ಠಿರಂ||

“ಮಹಾಬಾಹೋ! ಎಲ್ಲಿ ಧನ್ವಿ ಧನಂಜಯ, ಭೀಮಸೇನ, ಯಮಳರಿಬ್ಬರು ಮತ್ತು ರಾಜಾ ಯುಧಿಷ್ಠಿರನಿರುವರೋ ಅಲ್ಲಿಗೆ ಅಶ್ವಗಳನ್ನು ಓಡಿಸು!

08026025a ಅದ್ಯ ಪಶ್ಯತು ಮೇ ಶಲ್ಯ ಬಾಹುವೀರ್ಯಂ ಧನಂಜಯಃ|

08026025c ಅಸ್ಯತಃ ಕಂಕಪತ್ರಾಣಾಂ ಸಹಸ್ರಾಣಿ ಶತಾನಿ ಚ||

ಶಲ್ಯ! ಲಕ್ಷಗಟ್ಟಲೆ ಕಂಕಪತ್ರ ಬಾಣಗಳನ್ನು ಬಿಡುವ ನನ್ನ ಬಾಹುವೀರ್ಯವನ್ನು ಇಂದು ಧನಂಜಯನು ನೋಡಲಿ!

08026026a ಅದ್ಯ ಕ್ಷೇಪ್ಸ್ಯಾಮ್ಯಹಂ ಶಲ್ಯ ಶರಾನ್ಪರಮತೇಜನಾನ್|

08026026c ಪಾಂಡವಾನಾಂ ವಿನಾಶಾಯ ದುರ್ಯೋಧನಜಯಾಯ ಚ||

ಶಲ್ಯ! ಇಂದು ನಾನು ದುರ್ಯೋಧನನ ಜಯಕ್ಕಾಗಿ ಮತ್ತು ಪಾಂಡವರ ವಿನಾಶಕ್ಕಾಗಿ ಪರಮತೇಜಸ್ಸಿನ ಶರಗಳನ್ನು ಪ್ರಯೋಗಿಸುತ್ತೇನೆ!”

08026027 ಶಲ್ಯ ಉವಾಚ|

08026027a ಸೂತಪುತ್ರ ಕಥಂ ನು ತ್ವಂ ಪಾಂಡವಾನವಮನ್ಯಸೇ|

08026027c ಸರ್ವಾಸ್ತ್ರಜ್ಞಾನ್ಮಹೇಷ್ವಾಸಾನ್ಸರ್ವಾನೇವ ಮಹಾರಥಾನ್||

08026028a ಅನಿವರ್ತಿನೋ ಮಹಾಭಾಗಾನಜೇಯಾನ್ಸತ್ಯವಿಕ್ರಮಾನ್|

ಶಲ್ಯನು ಹೇಳಿದನು: “ಸೂತಪುತ್ರ! ಯುದ್ಧದಿಂದ ಪಲಾಯನಮಾಡದ, ಸರ್ವಾಸ್ತ್ರಗಳನ್ನು ತಿಳಿದಿರುವ, ಮಹೇಷ್ವಾಸ, ಮಹಾರಥ, ಮಹಾಭಾಗ, ಅಜೇಯ ಸತ್ಯವಿಕ್ರಮ ಆ ಎಲ್ಲ ಪಾಂಡವರನ್ನು ನೀನು ಹೇಗೆತಾನೇ ಕೀಳಾಗಿ ತಿಳಿಯುವೆ?

08026028c ಅಪಿ ಸಂಜನಯೇಯುರ್ಯೇ ಭಯಂ ಸಾಕ್ಷಾಚ್ಚತಕ್ರತೋಃ||

08026029a ಯದಾ ಶ್ರೋಷ್ಯಸಿ ನಿರ್ಘೋಷಂ ವಿಸ್ಫೂರ್ಜಿತಮಿವಾಶನೇಃ|

08026029c ರಾಧೇಯ ಗಾಂಡಿವಸ್ಯಾಜೌ ತದಾ ನೈವಂ ವದಿಷ್ಯಸಿ||

ರಾಧೇಯ! ಅವರು ಸಾಕ್ಷಾತ್ ಶತಕ್ರತುವಿಗೂ ಭಯವನ್ನುಂಟುಮಾಡಬಲ್ಲರು. ಸಿಡಿಲಿನಂತೆ ಮೊಳಗುವ ಗಾಂಡೀವದ ಘೋಷವನ್ನು ಕೇಳಿದನಂತರ ನೀನು ಈ ರೀತಿ ಮಾತನಾಡುವುದಿಲ್ಲ!””

08026030 ಸಂಜಯ ಉವಾಚ|

08026030a ಅನಾದೃತ್ಯ ತು ತದ್ವಾಕ್ಯಂ ಮದ್ರರಾಜೇನ ಭಾಷಿತಂ|

08026030c ದ್ರಕ್ಷ್ಯಸ್ಯದ್ಯೇತ್ಯವೋಚದ್ವೈ ಶಲ್ಯಂ ಕರ್ಣೋ ನರೇಶ್ವರ||

ಸಂಜಯನು ಹೇಳಿದನು: “ನರೇಶ್ವರ! ಮದ್ರರಾಜನಾಡಿದ ಆ ಮಾತನ್ನು ಅನಾದರಿಸಿ ಕರ್ಣನು ಶಲ್ಯನಿಗೆ “ರಥವನ್ನು ಮುಂದುವರಿಸು!” ಎಂದು ಮಾತ್ರ ಹೇಳಿದನು.

08026031a ದೃಷ್ಟ್ವಾ ಕರ್ಣಂ ಮಹೇಷ್ವಾಸಂ ಯುಯುತ್ಸುಂ ಸಮವಸ್ಥಿತಂ|

08026031c ಚುಕ್ರುಶುಃ ಕುರವಃ ಸರ್ವೇ ಹೃಷ್ಟರೂಪಾಃ ಪರಂತಪ||

ಪರಂತಪ! ಯುದ್ಧಮಾಡಲು ಉತ್ಸುಕನಾಗಿ ಸಜ್ಜಾಗಿದ್ದ ಮಹೇಷ್ವಾಸ ಕರ್ಣನನ್ನು ನೋಡಿ ಕುರುಗಳೆಲ್ಲರೂ ಹೃಷ್ಟರೂಪರಾಗಿ ಜಯಕಾರ ಮಾಡಿದರು.

08026032a ತತೋ ದುಂದುಭಿಘೋಷೇಣ ಭೇರೀಣಾಂ ನಿನದೇನ ಚ|

08026032c ಬಾಣಶಬ್ದೈಶ್ಚ ವಿವಿಧೈರ್ಗರ್ಜಿತೈಶ್ಚ ತರಸ್ವಿನಾಂ|

08026032e ನಿರ್ಯಯುಸ್ತಾವಕಾ ಯುದ್ಧೇ ಮೃತ್ಯುಂ ಕೃತ್ವಾ ನಿವರ್ತನಂ||

ಆಗ ದುಂದುಭಿಘೋಷಗಳು, ಭೇರಿಗಳ ನಿನಾದಗಳು, ಬಾಣಗಳ ಶಬ್ಧಗಳು, ಮತ್ತು ತರಸ್ವಿಗಳ ವಿವಿಧ ಗರ್ಜನೆಗಳೊಂದಿಗೆ ನಿನ್ನವರು ಹಿಂದಿರುಗಲು ಮೃತ್ಯುವನ್ನೇ  ತಾಣವನ್ನಾಗಿಸಿಕೊಂಡು ಯುದ್ಧಕ್ಕೆ ಹೊರಟರು.

08026033a ಪ್ರಯಾತೇ ತು ತತಃ ಕರ್ಣೇ ಯೋಧೇಷು ಮುದಿತೇಷು ಚ|

08026033c ಚಚಾಲ ಪೃಥಿವೀ ರಾಜನ್ರರಾಸ ಚ ಸುವಿಸ್ವರಂ||

ರಾಜನ್! ಹಾಗೆ ಮುದಿತರಾದ ಯೋಧರು ಮತ್ತು ಕರ್ಣನು ಹೊರಡಲು ಪೃಥ್ವಿಯು ನಡುಗಿತು ಮತ್ತು ವಿಸ್ವರದಲ್ಲಿ ಕೂಗಿತು.

08026034a ನಿಶ್ಚರಂತೋ ವ್ಯದೃಶ್ಯಂತ ಸೂರ್ಯಾತ್ಸಪ್ತ ಮಹಾಗ್ರಹಾಃ|

08026034c ಉಲ್ಕಾಪಾತಶ್ಚ ಸಂಜಜ್ಞೇ ದಿಶಾಂ ದಾಹಸ್ತಥೈವ ಚ|

08026034e ತಥಾಶನ್ಯಶ್ಚ ಸಂಪೇತುರ್ವವುರ್ವಾತಾಶ್ಚ ದಾರುಣಾಃ||

ಸೂರ್ಯನಿಂದ ಸಪ್ತಮಹಾಗ್ರಹಗಳು ಹೊರಬರುತ್ತಿರುವುದು ಕಂಡುಬಂದಿತು. ಉಲ್ಕಾಪಾತಗಳಾದವು. ಎಲ್ಲ ದಿಕ್ಕುಗಳಲ್ಲಿಯೂ ಬೆಂಕಿಯು ಬೀಳುತ್ತಿತ್ತು. ಮೋಡಗಳಿಲ್ಲದ ಆಕಾಶದಲ್ಲಿ ಸಿಡಿಲಿನ ಶಬ್ಧವು ಕೇಳಿಬಂದಿತು. ದಾರುಣ ಚಂಡಮಾರುತವು ಬೀಸತೊಡಗಿತು.

08026035a ಮೃಗಪಕ್ಷಿಗಣಾಶ್ಚೈವ ಬಹುಶಃ ಪೃತನಾಂ ತವ|

08026035c ಅಪಸವ್ಯಂ ತದಾ ಚಕ್ರುರ್ವೇದಯಂತೋ ಮಹದ್ಭಯಂ||

ಮಹಾಭಯವನ್ನು ಸೂಚಿಸುವಂತೆ ಅನೇಕ ಸಂಖ್ಯೆಗಳಲ್ಲಿ ಮೃಗಪಕ್ಷಿಗಣಗಳು ನಿನ್ನ ಸೇನೆಯನ್ನು ಅಪ್ರದಕ್ಷಿಣೆಮಾಡಿ ಹೋಗುತ್ತಿದ್ದವು.

08026036a ಪ್ರಸ್ಥಿತಸ್ಯ ಚ ಕರ್ಣಸ್ಯ ನಿಪೇತುಸ್ತುರಗಾ ಭುವಿ|

08026036c ಅಸ್ಥಿವರ್ಷಂ ಚ ಪತಿತಮಂತರಿಕ್ಷಾದ್ಭಯಾನಕಂ||

ಕರ್ಣನು ಹೊರಟಾಗ ಅವನ ಕುದುರೆಗಳು ಮುಕ್ಕರಿಸಿ ನೆಲದಮೇಲೆ ಬಿದ್ದವು. ಅಂತರಿಕ್ಷದಿಂದ ಭಯಾನಕ ಅಸ್ಥಿವರ್ಷವುಂಟಾಯಿತು.

08026037a ಜಜ್ವಲುಶ್ಚೈವ ಶಸ್ತ್ರಾಣಿ ಧ್ವಜಾಶ್ಚೈವ ಚಕಂಪಿರೇ|

08026037c ಅಶ್ರೂಣಿ ಚ ವ್ಯಮುಂಚಂತ ವಾಹನಾನಿ ವಿಶಾಂ ಪತೇ||

ವಿಶಾಂಪತೇ! ಶಸ್ತ್ರಗಳು ಉರಿಯುತ್ತಿದ್ದವು. ಧ್ವಜಗಳು ಕಂಪಿಸಿದವು. ವಾಹನಗಳು ಕಣ್ಣೀರು ಸುರಿಸುತ್ತಿದ್ದವು.

08026038a ಏತೇ ಚಾನ್ಯೇ ಚ ಬಹವ ಉತ್ಪಾತಾಸ್ತತ್ರ ಮಾರಿಷ|

08026038c ಸಮುತ್ಪೇತುರ್ವಿನಾಶಾಯ ಕೌರವಾಣಾಂ ಸುದಾರುಣಾಃ||

ಮಾರಿಷ! ಕೌರವರ ವಿನಾಶವನ್ನು ಸೂಚಿಸುವ ಇನ್ನೂ ಇತರ ಅನೇಕ ಉತ್ಪಾತಗಳು ಅಲ್ಲಿ ಕಾಣಿಸಿಕೊಂಡವು.

08026039a ನ ಚ ತಾನ್ಗಣಯಾಮಾಸುಃ ಸರ್ವೇ ತೇ ದೈವಮೋಹಿತಾಃ|

08026039c ಪ್ರಸ್ಥಿತಂ ಸೂತಪುತ್ರಂ ಚ ಜಯೇತ್ಯೂಚುರ್ನರಾ ಭುವಿ|

08026039e ನಿರ್ಜಿತಾನ್ಪಾಂಡವಾಂಶ್ಚೈವ ಮೇನಿರೇ ತವ ಕೌರವಾಃ||

ಆದರೆ ದೈವಮೋಹಿತರಾಗಿದ್ದ ಅವರೆಲ್ಲರೂ ಅದನ್ನು ಗಣನೆಗೆ ತಂದುಕೊಳ್ಳಲಿಲ್ಲ. ಹೊರಟಿದ್ದ ಸೂತಪುತ್ರನಿಗೆ ಭುವಿಯಲ್ಲಿದ್ದ ನರರು “ಜಯವಾಗಲಿ!” ಎಂದು ಘೋಷಿಸಿದರು. ನಿನ್ನ ಕೌರವರು ಪಾಂಡವರನ್ನು ಗೆದ್ದರೆಂದೇ ಭಾವಿಸಿದರು.

08026040a ತತೋ ರಥಸ್ಥಃ ಪರವೀರಹಂತಾ

         ಭೀಷ್ಮದ್ರೋಣಾವಾತ್ತವೀರ್ಯೌ ನಿರೀಕ್ಷ್ಯ|

08026040c ಸಮಜ್ವಲದ್ಭಾರತ ಪಾವಕಾಭೋ

         ವೈಕರ್ತನೋಽಸೌ ರಥಕುಂಜರೋ ವೃಷಃ||

ಭಾರತ! ಆಗ ರಥಸ್ಥನಾಗಿ ಅಗ್ನಿಯ ತೇಜಸ್ಸಿಗೆ ಸಮಾನ ತೇಜಸ್ಸಿನಿಂದ ಬೆಳಗುತ್ತಿದ್ದ ಪರವೀರಹಂತಕ, ರಥಕುಂಜರ, ವೃಷ ವೈಕರ್ತನನು ಭೀಷ್ಮ-ದ್ರೋಣರ ವೀರ್ಯವೂ ಅಸ್ತವಾದುದನ್ನು ನಿರೀಕ್ಷಿಸಿದನು.

08026041a ಸ ಶಲ್ಯಮಾಭಾಷ್ಯ ಜಗಾದ ವಾಕ್ಯಂ

         ಪಾರ್ಥಸ್ಯ ಕರ್ಮಾಪ್ರತಿಮಂ ಚ ದೃಷ್ಟ್ವಾ|

08026041c ಮಾನೇನ ದರ್ಪೇಣ ಚ ದಹ್ಯಮಾನಃ

         ಕ್ರೋಧೇನ ದೀಪ್ಯನ್ನಿವ ನಿಃಶ್ವಸಿತ್ವಾ||

ಪಾರ್ಥನ ಆ ಅಪ್ರತಿಮ ಕರ್ಮಗಳನ್ನು ನೋಡಿ ಅಭಿಮಾನ-ದರ್ಪಗಳಿಂದ ಪ್ರಜ್ವಲಿಸುತ್ತಿದ್ದ ಕರ್ಣನು ಕ್ರೋಧದಿಂದ ಉರಿಯುತ್ತಿರುವನೋ ಎನ್ನುವಂತೆ ಸುದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ಶಲ್ಯನನ್ನು ಉದ್ದೇಶಿಸಿ ಹೇಳಿದನು:

08026042a ನಾಹಂ ಮಹೇಂದ್ರಾದಪಿ ವಜ್ರಪಾಣೇಃ

         ಕ್ರುದ್ಧಾದ್ಬಿಭೇಮ್ಯಾತ್ತಧನೂ ರಥಸ್ಥಃ|

08026042c ದೃಷ್ಟ್ವಾ ತು ಭೀಷ್ಮಪ್ರಮುಖಾಂ ಶಯಾನಾನ್

         ನ ತ್ವೇವ ಮಾಂ ಸ್ಥಿರತಾ ಸಂಜಹಾತಿ||

“ಧನುಸ್ಸನ್ನು ಹಿಡಿದು ರಥಸ್ಥನಾಗಿರುವ ನಾನು ಕ್ರುದ್ಧನಾದ ಮಹೇಂದ್ರನಿಗೂ ಹೆದರುವುದಿಲ್ಲ. ಭೀಷ್ಮಪ್ರಮುಖರು ರಣದಲ್ಲಿ ಮಲಗಿರುವುದನ್ನು ನೋಡಿಯೂ ನನ್ನ ಮನಸ್ಸು ಸ್ಥಿರವಾಗಿಯೇ ಇದೆ.

08026043a ಮಹೇಂದ್ರವಿಷ್ಣುಪ್ರತಿಮಾವನಿಂದಿತೌ

         ರಥಾಶ್ವನಾಗಪ್ರವರಪ್ರಮಾಥಿನೌ|

08026043c ಅವಧ್ಯಕಲ್ಪೌ ನಿಹತೌ ಯದಾ ಪರೈಸ್

         ತತೋ ಮಮಾದ್ಯಾಪಿ ರಣೇಽಸ್ತಿ ಸಾಧ್ವಸಂ||

ಅನಿಂದಿತ ಭೀಷ್ಮ-ದ್ರೋಣರು ಮಹೇಂದ್ರ-ವಿಷ್ಣುವಿನಂತಿದ್ದರು. ರಥಾಶ್ವಗಜ ಸಮೂಹಗಳನ್ನು ಪ್ರಮಥಿಸುತ್ತಿದ್ದರು. ಅವಧ್ಯರಂತಿದ್ದ ಅವರು ಶತ್ರುಗಳಿಂದ ಹತರಾಗಿದ್ದರೂ ಇಂದು ರಣದಲ್ಲಿ ನನಗೆ ಭಯವುಂಟಾಗಿಲ್ಲ.

08026044a ಸಮೀಕ್ಷ್ಯ ಸಂಖ್ಯೇಽತಿಬಲಾನ್ನರಾಧಿಪೈರ್

         ನರಾಶ್ವಮಾತಂಗರಥಾಂ ಶರೈರ್ಹತಾನ್|

08026044c ಕಥಂ ನ ಸರ್ವಾನಹಿತಾನ್ರಣೇಽವಧೀನ್

         ಮಹಾಸ್ತ್ರವಿದ್ಬ್ರಾಹ್ಮಣಪುಂಗವೋ ಗುರುಃ||

ಮಹಾಸ್ತ್ರವಿದು ಬ್ರಾಹ್ಮಣಪುಂಗವ ಗುರು ದ್ರೋಣನು ರಣದಲ್ಲಿ ಅತಿಬಲಾನ್ವಿತ ನರಾಧಿಪರು ಮತ್ತು ನರಾಶ್ವಮಾತಂಗರಥಗಳು ಶರಗಳಿಂದ ಹತರಾಗುತ್ತಿರುವುದನ್ನು ನೋಡಿಯೂ ಏಕೆ ಸರ್ವ ಶತ್ರುಗಳನ್ನೂ ವಧಿಸಲಿಲ್ಲ?

08026045a ಸ ಸಂಸ್ಮರನ್ದ್ರೋಣಹವಂ ಮಹಾಹವೇ

         ಬ್ರವೀಮಿ ಸತ್ಯಂ ಕುರವೋ ನಿಬೋಧತ|

08026045c ನ ವೋ ಮದನ್ಯಃ ಪ್ರಸಹೇದ್ರಣೇಽರ್ಜುನಂ

         ಕ್ರಮಾಗತಂ ಮೃತ್ಯುಮಿವೋಗ್ರರೂಪಿಣಂ||

ಮಹಾಹವದಲ್ಲಿ ಆ ದ್ರೋಣನನ್ನು ಸ್ಮರಿಸಿಕೊಂಡು ಸತ್ಯವನ್ನು ಹೇಳುತ್ತಿದ್ದೇನೆ. ಕುರುಗಳೇ! ಕೇಳಿರಿ! ರಣದಲ್ಲಿ ಮೃತ್ಯುವಿನಂತೆ ಉಗ್ರರೂಪದಲ್ಲಿ ಮುಂದುವರೆಯುತ್ತಿರುವ ಅರ್ಜುನನನ್ನು ನಾನಲ್ಲದೇ ಬೇರೆ ಯಾರೂ ಎದುರಿಸಲಾರರು!

08026046a ಶಿಕ್ಷಾ ಪ್ರಸಾದಶ್ಚ ಬಲಂ ಧೃತಿಶ್ಚ

         ದ್ರೋಣೇ ಮಹಾಸ್ತ್ರಾಣಿ ಚ ಸನ್ನತಿಶ್ಚ|

08026046c ಸ ಚೇದಗಾನ್ಮೃತ್ಯುವಶಂ ಮಹಾತ್ಮಾ

         ಸರ್ವಾನನ್ಯಾನಾತುರಾನದ್ಯ ಮನ್ಯೇ||

ದ್ರೋಣನಲ್ಲಿ ಶಿಕ್ಷಣ, ಪ್ರಸಾದ, ಬಲ, ಧೃತಿ, ಸನ್ನತಿ ಮತ್ತು ಮಹಾಸ್ತ್ರಗಳಿದ್ದವು. ಆದರೂ ಆ ಮಹಾತ್ಮನು ಮೃತ್ಯುವಶನಾದನೆಂದರೆ ಅನ್ಯ ಸರ್ವರೆಲ್ಲರೂ ಇಂದು ಮರಣರಾಗಿರುವರೆಂದೇ ನಾನು ಭಾವಿಸುತ್ತೇನೆ.

08026047a ನೇಹ ಧ್ರುವಂ ಕಿಂ ಚಿದಪಿ ಪ್ರಚಿಂತ್ಯಂ

         ವಿದುರ್ಲೋಕೇ ಕರ್ಮಣೋಽನಿತ್ಯಯೋಗಾತ್|

08026047c ಸೂರ್ಯೋದಯೇ ಕೋ ಹಿ ವಿಮುಕ್ತಸಂಶಯೋ

         ಗರ್ವಂ ಕುರ್ವೀತಾದ್ಯ ಗುರೌ ನಿಪಾತಿತೇ||

ನಾವೆಷ್ಟೇ ಚಿಂತಿಸಿದರೂ ಲೋಕದಲ್ಲಿ ಕರ್ಮಗಳು ಅನಿತ್ಯ ಎನ್ನುವುದು ಸತ್ಯ. ಭೀಷ್ಮ-ದ್ರೋಣರೇ ಹತರಾದಮೇಲೆ ನಾಳೆ ಸೂರ್ಯೋದಯವಾಗುವವರೆಗೆ ನಾನು ಜೀವಿಸಿಯೇ ಇರುವೆನೆಂದು ಯಾರು ತಾನೇ ನಿಸ್ಸಂದೇಹವಾಗಿ ಭಾವಿಸಬಲ್ಲನು?

08026048a ನ ನೂನಮಸ್ತ್ರಾಣಿ ಬಲಂ ಪರಾಕ್ರಮಃ

         ಕ್ರಿಯಾ ಸುನೀತಂ ಪರಮಾಯುಧಾನಿ ವಾ|

08026048c ಅಲಂ ಮನುಷ್ಯಸ್ಯ ಸುಖಾಯ ವರ್ತಿತುಂ

         ತಥಾ ಹಿ ಯುದ್ಧೇ ನಿಹತಃ ಪರೈರ್ಗುರುಃ||

ಅಸ್ತ್ರಗಳು, ಬಲ, ಪರಾಕ್ರಮ, ಕ್ರಿಯೆ, ಉತ್ತಮ ನೀತಿ, ಅಥವಾ ಪರಮಾಯುಧಗಳೂ ಮನುಷ್ಯನ ಸುಖಕ್ಕೆ ಸಾಧನಗಳಾಗಲಾರವು. ಈ ಎಲ್ಲ ಗುಣಗಳಿದ್ದ ಗುರು ದ್ರೋಣನೇ ಶತ್ರುಗಳಿಂದ ಯುದ್ಧದಲ್ಲಿ ಹತನಾದನಲ್ಲವೇ?

08026049a ಹುತಾಶನಾದಿತ್ಯಸಮಾನತೇಜಸಂ

         ಪರಾಕ್ರಮೇ ವಿಷ್ಣುಪುರಂದರೋಪಮಂ|

08026049c ನಯೇ ಬೃಹಸ್ಪತ್ಯುಶನಹ್ಸಮಂ ಸದಾ

         ನ ಚೈನಮಸ್ತ್ರಂ ತದಪಾತ್ಸುದುಃಸಹಂ||

ಹುತಾಶನ ಮತ್ತು ಆದಿತ್ಯರ ಸಮಾನ ತೇಜಸ್ಸಿದ್ದ, ಪರಾಕ್ರಮದಲ್ಲಿ ವಿಷ್ಣು-ಪುರಂದರರಂತಿದ್ದ, ನೀತಿಯಲ್ಲಿ ಸದಾ ಬೃಹಸ್ಪತಿ ಮತ್ತು ಶುಕ್ರರಿಗೆ ಸಮನಾಗಿದ್ದ ದ್ರೋಣನನ್ನು ಅವನಲ್ಲಿದ್ದ ದುಃಸ್ಸಹ ಅಸ್ತ್ರಗಳೂ ರಕ್ಷಿಸಲಿಲ್ಲ!

08026050a ಸಂಪ್ರಕ್ರುಷ್ಟೇ ರುದಿತಸ್ತ್ರೀಕುಮಾರೇ

         ಪರಾಭೂತೇ ಪೌರುಷೇ ಧಾರ್ತರಾಷ್ಟ್ರೇ|

08026050c ಮಯಾ ಕೃತ್ಯಮಿತಿ ಜಾನಾಮಿ ಶಲ್ಯ

         ಪ್ರಯಾಹಿ ತಸ್ಮಾದ್ದ್ವಿಷತಾಮನೀಕಂ||

ಸ್ತ್ರೀ-ಕುಮಾರರು ಆರ್ತರಾಗಿ ರೋಧಿಸುತ್ತಿರುವಾಗ ಮತ್ತು ಧಾರ್ತರಾಷ್ಟ್ರನ ಪೌರುಷವು ಪರಾಜಯಗೊಳ್ಳುವಾಗ ಅವರನ್ನು ರಕ್ಷಿಸುವುದು ನನ್ನ ಕರ್ತವ್ಯವೆಂದು ನಾನು ತಿಳಿದುಕೊಂಡಿದ್ದೇನೆ. ಆದುದರಿಂದ ಶಲ್ಯ! ಶತ್ರುಗಳ ಸೇನೆಯಿದ್ದಲ್ಲಿಗೆ ನನ್ನನ್ನು ಕೊಂಡೊಯ್ಯಿ!

08026051a ಯತ್ರ ರಾಜಾ ಪಾಂಡವಃ ಸತ್ಯಸಂಧೋ

         ವ್ಯವಸ್ಥಿತೋ ಭೀಮಸೇನಾರ್ಜುನೌ ಚ|

08026051c ವಾಸುದೇವಃ ಸೃಂಜಯಾಃ ಸಾತ್ಯಕಿಶ್ಚ

         ಯಮೌ ಚ ಕಸ್ತೌ ವಿಷಹೇನ್ಮದನ್ಯಃ||

ಎಲ್ಲಿ ಸತ್ಯಸಂಧ ರಾಜಾ ಪಾಂಡವ, ಭೀಮಸೇನ-ಅರ್ಜುನರು, ವಾಸುದೇವ, ಸೃಂಜಯರು ಮತ್ತು ಸಾತ್ಯಕಿ, ಹಾಗೂ ಯಮಳರಿರುವರೋ ಅಲ್ಲಿಗೆ ನಾನಲ್ಲದೇ ಬೇರೆ ಯಾರು ತಾನೇ ಹೋಗಿ ಅವರನ್ನು ಎದುರಿಸಬಲ್ಲರು?

08026052a ತಸ್ಮಾತ್ ಕ್ಷಿಪ್ರಂ ಮದ್ರಪತೇ ಪ್ರಯಾಹಿ

         ರಣೇ ಪಾಂಚಾಲಾನ್ಪಾಂಡವಾನ್ಸೃಂಜಯಾಂಶ್ಚ|

08026052c ತಾನ್ವಾ ಹನಿಷ್ಯಾಮಿ ಸಮೇತ್ಯ ಸಂಖ್ಯೇ

         ಯಾಸ್ಯಾಮಿ ವಾ ದ್ರೋಣಮುಖಾಯ ಮನ್ಯೇ||

ಮದ್ರಪತೇ! ಆದುದರಿಂದ ಬೇಗನೇ ಕೊಂಡೊಯ್ಯಿ! ರಣದಲ್ಲಿ ನಾನು ಪಾಂಚಾಲ-ಪಾಂಡವ-ಸೃಂಜಯರನ್ನು ಒಟ್ಟಿಗೇ ಸಂಹರಿಸುತ್ತೇನೆ ಅಥವಾ ದ್ರೋಣನು ಹೋದಲ್ಲಿಗೆ ಹೊರಟುಹೋಗುತ್ತೇನೆ.

08026053a ನ ತ್ವೇವಾಹಂ ನ ಗಮಿಷ್ಯಾಮಿ ಮಧ್ಯಂ

         ತೇಷಾಂ ಶೂರಾಣಾಮಿತಿ ಮಾ ಶಲ್ಯ ವಿದ್ಧಿ|

08026053c ಮಿತ್ರದ್ರೋಹೋ ಮರ್ಷಣೀಯೋ ನ ಮೇಽಯಂ

         ತ್ಯಕ್ತ್ವಾ ಪ್ರಾಣಾನನುಯಾಸ್ಯಾಮಿ ದ್ರೋಣಂ||

ಶಲ್ಯ! ಆ ಶೂರರ ಮಧ್ಯ ಹೋಗಿ ನಾನು ಯುದ್ಧಮಾಡುವುದಿಲ್ಲವೆಂದು ತಿಳಿಯಬೇಡ! ಮಿತ್ರದ್ರೋಹವನ್ನು ನಾನು ಸಹಿಸಿಕೊಳ್ಳಲಾರೆ. ಪ್ರಾಣವನ್ನಾದರೂ ತೊರೆದು ದ್ರೋಣನನ್ನು ಹಿಂಬಾಲಿಸುತ್ತೇನೆ!

08026054a ಪ್ರಾಜ್ಞಸ್ಯ ಮೂಢಸ್ಯ ಚ ಜೀವಿತಾಂತೇ

         ಪ್ರಾಣಪ್ರಮೋಕ್ಷೋಽಮ್ತಕವಕ್ತ್ರಗಸ್ಯ|

08026054c ಅತೋ ವಿದ್ವನ್ನಭಿಯಾಸ್ಯಾಮಿ ಪಾರ್ಥಂ

         ದಿಷ್ಟಂ ನ ಶಕ್ಯಂ ವ್ಯತಿವರ್ತಿತುಂ ವೈ||

ಪ್ರಾಜ್ಞನೇ ಆಗಿರಲಿ ಮೂಢನೇ ಆಗಿರಲಿ ಜೀವನದ ಅಂತ್ಯದಲ್ಲಿ ಪ್ರಾಣಹೋದಾಗ ಅಂತಕ ಯಮನ ಸತ್ಕಾರವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ! ಇದನ್ನು ತಿಳಿದ ನಾನು ಪಾರ್ಥನನ್ನು ಎದುರಿಸುತ್ತೇನೆ. ಅದೃಷ್ಟವನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ!

08026055a ಕಲ್ಯಾಣವೃತ್ತಃ ಸತತಂ ಹಿ ರಾಜನ್

         ವೈಚಿತ್ರವೀರ್ಯಸ್ಯ ಸುತೋ ಮಮಾಸೀತ್|

08026055c ತಸ್ಯಾರ್ಥಸಿದ್ಧ್ಯರ್ಥಮಹಂ ತ್ಯಜಾಮಿ

         ಪ್ರಿಯಾನ್ಭೋಗಾನ್ದುಸ್ತ್ಯಜಂ ಜೀವಿತಂ ಚ||

ರಾಜನ್! ವೈಚಿತ್ರವೀರ್ಯನ ಸುತ ದುರ್ಯೋಧನನು ಸತತವೂ ನನಗೆ ಕಲ್ಯಾಣವುಂಟುಮಾಡುವುದರಲ್ಲಿಯೇ ನಿರತನಾಗಿದ್ದಾನೆ. ಅವನ ಉದ್ದೇಶಸಾಧನೆಗಾಗಿ ನಾನು ಪ್ರಿಯ ಭೋಗಗಳನ್ನೂ, ತ್ಯಜಿಸಲು ಕಷ್ಟಕರವಾದ ಜೀವವನ್ನೂ, ತ್ಯಾಗಮಾಡುತ್ತೇನೆ.

08026056a ವೈಯಾಘ್ರಚರ್ಮಾಣಮಕೂಜನಾಕ್ಷಂ

         ಹೈಮತ್ರಿಕೋಶಂ ರಜತತ್ರಿವೇಣುಂ|

08026056c ರಥಪ್ರಬರ್ಹಂ ತುರಗಪ್ರಬರ್ಹೈಃ

         ಯುಕ್ತಂ ಪ್ರಾದಾನ್ಮಹ್ಯಮಿದಂ ಹಿ ರಾಮಃ||

ಪರಶುರಾಮನು ನನಗೆ ವೈಯಾಘ್ರಚರ್ಮದಿಂದ ಅಚ್ಛಾದಿತ, ಉತ್ತಮಾಶ್ವಗಳಿಂದ ಯುಕ್ತ, ಸುವರ್ಣಮಯ ಮೂರು ಕೋಶಗಳುಳ್ಳ, ಬೆಳ್ಳಿಯ ಮೂರು ವೇಣುಗಳಿರುವ, ಈ ಶ್ರೇಷ್ಠ ರಥವನ್ನು ನನಗೆ ದಯಪಾಲಿಸಿದ್ದಾನೆ.

08026057a ಧನೂಂಷಿ ಚಿತ್ರಾಣಿ ನಿರೀಕ್ಷ್ಯ ಶಲ್ಯ

         ಧ್ವಜಂ ಗದಾಂ ಸಾಯಕಾಂಶ್ಚೋಗ್ರರೂಪಾನ್|

08026057c ಅಸಿಂ ಚ ದೀಪ್ತಂ ಪರಮಾಯುಧಂ ಚ

         ಶಂಖಂ ಚ ಶುಭ್ರಂ ಸ್ವನವಂತಮುಗ್ರಂ||

ಶಲ್ಯ! ವಿಚಿತ್ರ ಧನುಸ್ಸುಗಳನ್ನೂ, ಧ್ವಜ, ಗದೆ, ಉಗ್ರರೂಪದ ಸಾಯಕಗಳನ್ನೂ, ಖಡ್ಗ, ಉರಿಯುತ್ತಿರುವ ಪರಮಾಯುಧವನ್ನೂ, ಉಗ್ರವಾದ ಧ್ವನಿಯನ್ನು ನೀಡುವ ಶುಭ್ರ ಶಂಖವನ್ನೂ ನೋಡು!

08026058a ಪತಾಕಿನಂ ವಜ್ರನಿಪಾತನಿಸ್ವನಂ

         ಸಿತಾಶ್ವಯುಕ್ತಂ ಶುಭತೂಣಶೋಭಿತಂ|

08026058c ಇಮಂ ಸಮಾಸ್ಥಾಯ ರಥಂ ರಥರ್ಷಭಂ

         ರಣೇ ಹನಿಷ್ಯಾಂಯಹಮರ್ಜುನಂ ಬಲಾತ್||

ಸಿಡಿಲಿನಂತೆ ಶಬ್ಧಗಳನ್ನುಂಟುಮಾಡಬಲ್ಲ ಪತಾಕೆಗಳಿಂದ, ಬಿಳಿಯ ಕುದುರೆಗಳಿಂದ, ಶುಭ ಬತ್ತಳಿಕೆಗಳಿಂದ ಶೋಭಿತವಾದ ಈ ರಥಶ್ರೇಷ್ಠ ರಥವನ್ನು ಏರಿ ನಾನು ಬಲವನ್ನುಪಯೋಗಿಸಿ ರಣದಲ್ಲಿ ಅರ್ಜುನನನ್ನು ಸಂಹರಿಸುತ್ತೇನೆ!

08026059a ತಂ ಚೇನ್ಮೃತ್ಯುಃ ಸರ್ವಹರೋಽಭಿರಕ್ಷತೇ

         ಸದಾಪ್ರಮತ್ತಃ ಸಮರೇ ಪಾಂಡುಪುತ್ರಂ|

08026059c ತಂ ವಾ ಹನಿಷ್ಯಾಮಿ ಸಮೇತ್ಯ ಯುದ್ಧೇ

         ಯಾಸ್ಯಾಮಿ ವಾ ಭೀಷ್ಮಮುಖೋ ಯಮಾಯ||

ಒಂದುವೇಳೆ ಸಮರದಲ್ಲಿ ಸರ್ವಹರ ಮೃತ್ಯುವೇ ಅಪ್ರಮತ್ತನಾಗಿ ಪಾಂಡುಪುತ್ರನನ್ನು ರಕ್ಷಿಸಿದರೂ ನಾನು ಅವನೊಂದಿಗೆ ಯುದ್ಧಮಾಡಿ ಅವನನ್ನೇ ಸಂಹರಿಸುತ್ತೇನೆ ಅಥವಾ ಭೀಷ್ಮನಂತೆ ಯಮನ ಮುಖದಲ್ಲಿ ಹೋಗುತ್ತೇನೆ!

08026060a ಯಮವರುಣಕುಬೇರವಾಸವಾ ವಾ

         ಯದಿ ಯುಗಪತ್ಸಗಣಾ ಮಹಾಹವೇ|

08026060c ಜುಗುಪಿಷವ ಇಹೈತ್ಯ ಪಾಂಡವಂ

         ಕಿಮು ಬಹುನಾ ಸಹ ತೈರ್ಜಯಾಮಿ ತಂ||

ಮಾತನಾಡಲು ಇನ್ನು ಹೆಚ್ಚೇನಿದೆ? ಇಂದು ತಮ್ಮ ತಮ್ಮ ಗಣಗಳೊಡನೆ ಯಮ, ವರುಣ, ಕುಬೇರ ಅಥವಾ ವಾಸವನೇ ಬಂದರೂ ಮಹಾಹವದಲ್ಲಿ ನಾನು ಪಾಂಡವನನ್ನು ಸಂಹರಿಸುತ್ತೇನೆ!”

08026061a ಇತಿ ರಣರಭಸಸ್ಯ ಕತ್ಥತಸ್

         ತದುಪನಿಶಮ್ಯ ವಚಃ ಸ ಮದ್ರರಾಟ್|

08026061c ಅವಹಸದವಮನ್ಯ ವೀರ್ಯವಾನ್

         ಪ್ರತಿಷಿಷಿಧೇ ಚ ಜಗಾದ ಚೋತ್ತರಂ||

ಹೀಗೆ ರಣರಭಸನು ಮಾತಿನಲ್ಲಿಯೇ ಕೊಚ್ಚಿಕೊಳ್ಳುವುದನ್ನು ಕೇಳಿದ ಮದ್ರರಾಜನು ಅವೆಲ್ಲವೂ ಪೊಳ್ಳುಮಾತುಗಳೆಂದು ಸೂಚಿಸುವಂತೆ ಜೋರಾಗಿ ನಕ್ಕು ಅವಮಾನಿಸಿ ಮುಂದೆ ಮಾತನಾಡದಂತೆ ತಡೆದನು. ಅವನ ಮಾತುಗಳಿಗೆ ಯಥೋಚಿತವಾದ ಉತ್ತರವನ್ನೂ ಹೇಳತೊಡಗಿದನು.

08026062a ವಿರಮ ವಿರಮ ಕರ್ಣ ಕತ್ಥನಾದ್

         ಅತಿರಭಸೋಽಸ್ಯತಿ ಚಾಪ್ಯಯುಕ್ತವಾಕ್|

08026062c ಕ್ವ ಚ ಹಿ ನರವರೋ ಧನಂಜಯಹ್

         ಕ್ವ ಪುನರಿಹ ತ್ವಮುಪಾರಮಾಬುಧ||

“ನಿಲ್ಲಿಸು! ಕರ್ಣ! ಈ ರೀತಿ ಕೊಚ್ಚಿಕೊಳ್ಳುವುದನ್ನು ನಿಲ್ಲಿಸು! ನೀನು ಮಾತನಾಡುವುದರಲ್ಲಿ ಅತಿರಭಸನಾಗಿರುವೆ. ನರವರನಾದ ಧನಂಜಯನೆಲ್ಲಿ? ಪುನಃ ತಿಳಿಯದೇ ಮಾತನಾಡುವ ನೀನೆಲ್ಲಿ?

08026063a ಯದುಸದನಮುಪೇಂದ್ರಪಾಲಿತಂ

         ತ್ರಿದಿವಮಿವಾಮರರಾಜರಕ್ಷಿತಂ|

08026063c ಪ್ರಸಭಮಿಹ ವಿಲೋಕ್ಯ ಕೋ ಹರೇತ್

         ಪುರುಷವರಾವರಜಾಂ ಋತೇಽರ್ಜುನಾತ್||

ಅಮರರಾಜನಿಂದ ರಕ್ಷಿತವಾದ ತ್ರಿದಿವದಂತೆ ಉಪೇಂದ್ರ ಕೃಷ್ಣನಿಂದ ಪಾಲಿತವಾದ ಯದುಸದನವನ್ನು ಬಲಪೂರ್ವಕವಾಗಿ ಅಲ್ಲೋಲಕಲ್ಲೋಲಗೊಳಿಸಿ ಪುರುಷಶ್ರೇಷ್ಠ ಕೃಷ್ಣನ ತಂಗಿಯನ್ನು ಅರ್ಜುನನಲ್ಲದೇ ಬೇರೆ ಯಾರು ತಾನೇ ಅಪಹರಿಸುತ್ತಿದ್ದರು?

08026064a ತ್ರಿಭುವನಸೃಜಮೀಶ್ವರೇಶ್ವರಂ

         ಕ ಇಹ ಪುಮಾನ್ಭವಮಾಹ್ವಯೇದ್ಯುಧಿ|

08026064c ಮೃಗವಧಕಲಹೇ ಋತೇಽರ್ಜುನಾತ್

         ಸುರಪತಿವೀರ್ಯಸಮಪ್ರಭಾವತಃ||

ಸುರಪತಿವೀರ್ಯಸಮನಾದ ಪ್ರಭಾವಂತನಾದ ಅರ್ಜುನನಲ್ಲದೇ ಬೇರೆ ಯಾರು ತಾನೇ ಮೃಗವಧೆಯ ಕಲಹದಲ್ಲಿ ತ್ರಿಭುವನಸೃಷ್ಟ ಈಶ್ವರೇಶ್ವರ ಭವನನ್ನೇ ಯುದ್ಧಕ್ಕೆ ಆಹ್ವಾನಿಸುತ್ತಿದ್ದನು?

08026065a ಅಸುರಸುರಮಹೋರಗಾನ್ನರಾನ್

         ಗರುಡಪಿಶಾಚಸಯಕ್ಷರಾಕ್ಷಸಾನ್|

08026065c ಇಷುಭಿರಜಯದಗ್ನಿಗೌರವಾತ್

         ಸ್ವಭಿಲಷಿತಂ ಚ ಹವಿರ್ದದೌ ಜಯಃ||

ಅಗ್ನಿಯ ಮೇಲಿನ ಗೌರವದಿಂದಾಗಿ ಜಯ ಅರ್ಜುನನು ಅಸುರ-ಸುರ-ಮಹೋರಗ-ನರರು, ಗರುಡ-ಪಿಶಾಚ-ಯಕ್ಷ-ರಾಕ್ಷಸರನ್ನೂ ಬಾಣಗಳಿಂದ ಸೋಲಿಸಿ ಅವನಿಗಿಷ್ಟವಾದ ಹವಿಸ್ಸನ್ನಿತ್ತನು.

08026066a ಸ್ಮರಸಿ ನನು ಯದಾ ಪರೈರ್ಹೃತಃ

         ಸ ಚ ಧೃತರಾಷ್ಟ್ರಸುತೋ ವಿಮೋಕ್ಷಿತಃ|

08026066c ದಿನಕರಜ ನರೋತ್ತಮೈರ್ಯದಾ

         ಮರುಷು ಬಹೂನ್ವಿನಿಹತ್ಯ ತಾನರೀನ್||

ಧೃತರಾಷ್ಟ್ರಸುತನು ಶತ್ರುಗಳಿಂದ ಅಪಹರಿಸಲ್ಪಟ್ಟಾಗ ಅವನನ್ನು ಅರ್ಜುನನು ಬಿಡುಗಡೆಗೊಳಿಸಿದುದು ನಿನ್ನ ಸ್ಮರಣೆಯಲ್ಲಿಲ್ಲವೇ? ಆಗ ಆ ನರೋತ್ತಮನು ಸೂರ್ಯನ ಕಿರಣಗಳಿಗೆ ಸಮಾನ ಅನೇಕ ಬಾಣಗಳಿಂದ ಶತ್ರುಗಳನ್ನು ಸಂಹರಿಸಿದನು.

08026067a ಪ್ರಥಮಮಪಿ ಪಲಾಯಿತೇ ತ್ವಯಿ

         ಪ್ರಿಯಕಲಹಾ ಧೃತರಾಷ್ಟ್ರಸೂನವಃ|

08026067c ಸ್ಮರಸಿ ನನು ಯದಾ ಪ್ರಮೋಚಿತಾಃ

         ಖಚರಗಣಾನವಜಿತ್ಯ ಪಾಂಡವೈಃ||

ಮೊಟ್ಟಮೊದಲನೆಯದಾಗಿ ನೀನೇ ಪಲಾಯನಮಾಡಲು, ಪಾಂಡವರು ಗಂಧರ್ವರನ್ನು ಸೋಲಿಸಿ ಕಲಹಪ್ರಿಯನಾದ ಧೃತರಾಷ್ಟ್ರಸೂನುವನ್ನು ಬಿಡುಗಡೆಗೊಳಿಸಿದುದು ನಿನಗೆ ನೆನಪಿಲ್ಲವೇ?

08026068a ಸಮುದಿತಬಲವಾಹನಾಃ ಪುನಃ

         ಪುರುಷವರೇಣ ಜಿತಾಃ ಸ್ಥ ಗೋಗ್ರಹೇ|

08026068c ಸಗುರುಗುರುಸುತಾಃ ಸಭೀಷ್ಮಕಾಃ

         ಕಿಮು ನ ಜಿತಃ ಸ ತದಾ ತ್ವಯಾರ್ಜುನಃ||

ಪುನಃ ಗೋಗ್ರಹಣದ ಸಮಯದಲ್ಲಿ ಬಲ-ವಾಹನಗಳಿಂದ ಸಮುದಿತರಾಗಿದ್ದ ದ್ರೋಣ-ಅಶ್ವತ್ಥಾಮ ಮತ್ತು ಭೀಷ್ಮರೊಂದಿಗೆ ನಿನ್ನನ್ನೂ ಆ ಪುರುಷವರೇಣ್ಯನು ಜಯಿಸಲಿಲ್ಲವೇ?

08026069a ಇದಮಪರಮುಪಸ್ಥಿತಂ ಪುನಃ

         ತವ ನಿಧನಾಯ ಸುಯುದ್ಧಮದ್ಯ ವೈ|

08026069c ಯದಿ ನ ರಿಪುಭಯಾತ್ಪಲಾಯಸೇ

         ಸಮರಗತೋಽದ್ಯ ಹತೋಽಸಿ ಸೂತಜ||

ಸೂತಜ! ಈಗ ನಿನ್ನ ವಧೆಗಾಗಿಯೇ ಪುನಃ ಮತ್ತೊಂದು ಉತ್ತಮ ಯುದ್ಧವು ಸನ್ನಿಹಿತವಾಗಿದೆ. ನೀನು ಶತ್ರುಭಯದಿಂದ ಪಲಾಯನಮಾಡದೇ ಇದ್ದರೆ ಸಮರಗತನಾದ ನೀನು ಇಂದು ಹತನಾಗುವೆ!””

08026070 ಸಂಜಯ ಉವಾಚ|

08026070a ಇತಿ ಬಹುಪರುಷಂ ಪ್ರಭಾಷತಿ

         ಪ್ರಮನಸಿ ಮದ್ರಪತೌ ರಿಪುಸ್ತವಂ|

08026070c ಭೃಶಮತಿರುಷಿತಃ ಪರಂ ವೃಷಃ

         ಕುರುಪೃತನಾಪತಿರಾಹ ಮದ್ರಪಂ||

ಸಂಜಯನು ಹೇಳಿದನು: “ಈ ರೀತಿ ಮನಸ್ವಿ ಮದ್ರಪತಿಯು ನಿನ್ನ ಶತ್ರುವನ್ನು ಹೊಗಳಿ ಅತಿ ಕ್ರೂರ ಮಾತುಗಳನ್ನಾಡಲು ಅತ್ಯಂತ ರೋಷಗೊಂಡ ಕುರುಸೇನಾಪತಿ ವೃಷ ಕರ್ಣನು ಮದ್ರರಾಜನಿಗೆ ಹೇಳಿದನು:

08026071a ಭವತು ಭವತು ಕಿಂ ವಿಕತ್ಥಸೇ

         ನನು ಮಮ ತಸ್ಯ ಚ ಯುದ್ಧಮುದ್ಯತಂ|

08026071c ಯದಿ ಸ ಜಯತಿ ಮಾಂ ಮಹಾಹವೇ

         ತತ ಇದಮಸ್ತು ಸುಕತ್ಥಿತಂ ತವ||

“ಇರಲಿ! ಇರಲಿ! ಶತ್ರುವನ್ನು ಹೀಗೇಕೆ ಹೊಗಳುತ್ತಿರುವೆ? ನನ್ನ ಮತ್ತು ಅವನ ಯುದ್ಧವು ಪ್ರಾರಂಭವಾಗುತ್ತಿದೆಯಲ್ಲವೇ? ಯುದ್ಧದಲ್ಲಿ ಅವನೇನಾದರೂ ನನ್ನನ್ನು ಜಯಿಸಿದರೆ ನೀನು ಹೇಳಿದುದು ಸುಶ್ಲಾಘನೆಯಾಗುತ್ತದೆ!”

08026072a ಏವಮಸ್ತ್ವಿತಿ ಮದ್ರೇಶ ಉಕ್ತ್ವಾ ನೋತ್ತರಮುಕ್ತವಾನ್|

08026072c ಯಾಹಿ ಮದ್ರೇಶ ಚಾಪ್ಯೇನಂ ಕರ್ಣಃ ಪ್ರಾಹ ಯುಯುತ್ಸಯಾ||

ಹಾಗೆಯೇ ಆಗಲೆಂದು ಹೇಳಿ ಮದ್ರೇಶನು ಮುಂದೆ ಏನೂ ಮಾತನಾಡಲಿಲ್ಲ. ಯುದ್ಧೋತ್ಸುಕನಾಗಿದ್ದ ಕರ್ಣನು “ಮದ್ರೇಶ! ಮುಂದೆ ಹೋಗು!” ಎಂದು ಹೇಳಿದನು.

08026073a ಸ ರಥಃ ಪ್ರಯಯೌ ಶತ್ರೂಂ ಶ್ವೇತಾಶ್ವಃ ಶಲ್ಯಸಾರಥಿಃ|

08026073c ನಿಘ್ನನ್ನಮಿತ್ರಾನ್ಸಮರೇ ತಮೋ ಘ್ನನ್ಸವಿತಾ ಯಥಾ||

ಆಗ ಶಲ್ಯನು ಸಾರಥ್ಯಮಾಡುತ್ತಿದ್ದ ಶ್ವೇತಾಶ್ವಗಳ ಆ ರಥವು ಕತ್ತಲೆಯನ್ನು ಕೊನೆಗೊಳಿಸುವ ಸೂರ್ಯನಂತೆ ಸಮರದಲ್ಲಿ ಶತ್ರುಗಳನ್ನು ಕೊನೆಗೊಳಿಸುತ್ತಾ ಮುಂದುವರೆಯಿತು.

08026074a ತತಃ ಪ್ರಾಯಾತ್ಪ್ರೀತಿಮಾನ್ವೈ ರಥೇನ

         ವೈಯಾಘ್ರೇಣ ಶ್ವೇತಯುಜಾಥ ಕರ್ಣಃ|

08026074c ಸ ಚಾಲೋಕ್ಯ ಧ್ವಜಿನೀಂ ಪಾಂಡವಾನಾಂ

         ಧನಂಜಯಂ ತ್ವರಯಾ ಪರ್ಯಪೃಚ್ಚತ್||

ವ್ಯಾಘ್ರಚರ್ಮದಿಂದ ಆಚ್ಛಾದಿತವಾಗಿದ್ದ ಶ್ವೇತವರ್ಣದ ಕುದುರೆಗಳನ್ನು ಕಟ್ಟಿದ್ದ ಆ ರಥದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಕರ್ಣನು ಪ್ರೀತನಾಗಿ ಪಾಂಡವರ ಸೇನೆಯನ್ನು ಅವಲೋಕಿಸಿ ತ್ವರೆಯಿಂದ ಧನಂಜಯನೆಲ್ಲಿರುವನೆಂದು ಕೇಳತೊಡಗಿದನು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕರ್ಣಶಲ್ಯಸಂವಾದೇ ಷಟ್ವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣಶಲ್ಯಸಂವಾದ ಎನ್ನುವ ಇಪ್ಪತ್ತಾರನೇ ಅಧ್ಯಾಯವು.

Kannada Yakshagana Talamaddale Shalya Nirgamana:

Comments are closed.