ಕರ್ಣ ಪರ್ವ
Contents
Toggle೨೩
ದುರ್ಯೋಧನನು ಶಲ್ಯನಿಗೆ ಕರ್ಣನ ಸಾರಥಿಯಾಗುವಂತೆ ಕೇಳಿದುದು
ದುರ್ಯೋಧನನು ಶಲ್ಯನಿಗೆ ಕರ್ಣನ ಸಾರಥಿಯಾಗುವಂತೆ ಕೇಳಿಕೊಂಡಿದುದು (೧-೧೮). ಅದನ್ನು ಕೇಳಿ ಕುಪಿತನಾದ ಶಲ್ಯನು ರಾಜನಾದ ತಾನು ಸೂತಪುತ್ರ ಕರ್ಣನಿಗೆ ಸಾರಥಿಯಾಗುವುದಿಲ್ಲ ಎಂದು ಹೇಳಿ ಸಭೆಯಿಂದ ಹೊರಟು ಹೋದುದು (೧೯-೪೦). “ಕರ್ಣನು ನಿನಗಿಂಥಲೂ ಅಧಿಕನಲ್ಲ ಮತ್ತು ನೀನು ಕೃಷ್ಣನಿಗಿಂತಲೂ ಅಧಿಕ” ಎಂದು ಮುಂತಾಗಿ ಹೇಳಿ ದುರ್ಯೋಧನನು ಶಲ್ಯನನ್ನು ಕರ್ಣನ ಸಾರಥಿಯಾಗುವಂತೆ ಒತ್ತಾಯಿಸಿದುದು (೪೧-೫೦). “ಕರ್ಣನ ಬಳಿಯಿರುವಾಗ ನಾನು ಅವನೊಡನೆ ಇಷ್ಟಬಂದಂತೆ ಮಾತನಾಡುತ್ತೇನೆ” ಎಂಬ ನಿಬಂಧನೆಯೊಂದಿಗೆ ಶಲ್ಯನು ಕರ್ಣನ ಸಾರಥಿಯಾಗಲು ಒಪ್ಪಿಕೊಳ್ಳುವುದು (೫೧-೫೪).
08023001 ಸಂಜಯ ಉವಾಚ|
08023001a ಪುತ್ರಸ್ತವ ಮಹಾರಾಜ ಮದ್ರರಾಜಮಿದಂ ವಚಃ|
08023001c ವಿನಯೇನೋಪಸಂಗಂಯ ಪ್ರಣಯಾದ್ವಾಕ್ಯಮಬ್ರವೀತ್||
ಸಂಜಯನು ಹೇಳಿದನು: “ಮಹಾರಾಜ! ನಿನ್ನ ಪುತ್ರನು ವಿನಯೋಪೇತನಾಗಿ ಬಳಿಸಾರಿ ಮದ್ರರಾಜನಿಗೆ ಪ್ರೀತಿಯಿಂದ ಈ ಮಾತುಗಳನ್ನಾಡಿದನು:
08023002a ಸತ್ಯವ್ರತ ಮಹಾಭಾಗ ದ್ವಿಷತಾಮಘವರ್ಧನ|
08023002c ಮದ್ರೇಶ್ವರ ರಣೇ ಶೂರ ಪರಸೈನ್ಯಭಯಂಕರ||
08023003a ಶ್ರುತವಾನಸಿ ಕರ್ಣಸ್ಯ ಬ್ರುವತೋ ವದತಾಂ ವರ|
08023003c ಯಥಾ ನೃಪತಿಸಿಂಹಾನಾಂ ಮಧ್ಯೇ ತ್ವಾಂ ವರಯತ್ಯಯಂ||
“ಸತ್ಯವ್ರತ! ಮಹಾಭಾಗ! ಶತ್ರುಗಳಿಗೆ ತಾಪವನ್ನು ಹೆಚ್ಚಿಸುವವನೇ! ಮದ್ರೇಶ್ವರ! ರಣಶೂರ! ಶತ್ರುಸೈನ್ಯಗಳ ಭಯಂಕರ! ಮಾತುಗಾರರಲ್ಲಿ ಶ್ರೇಷ್ಠ! ನೃಪತಿಸಿಂಹರ ಮಧ್ಯದಲ್ಲಿ ನಿನ್ನನ್ನು ಆರಿಸಿಕೊಂಡ ಕರ್ಣನಾಡಿದ ಈ ಮಾತನ್ನು ಕೇಳಿದ್ದೀಯೆ.
08023004a ತಸ್ಮಾತ್ಪಾರ್ಥವಿನಾಶಾರ್ಥಂ ಹಿತಾರ್ಥಂ ಮಮ ಚೈವ ಹಿ|
08023004c ಸಾರಥ್ಯಂ ರಥಿನಾಂ ಶ್ರೇಷ್ಠ ಸುಮನಾಃ ಕರ್ತುಮರ್ಹಸಿ||
ರಥಿಗಳಲ್ಲಿ ಶ್ರೇಷ್ಠ! ಪಾರ್ಥರ ವಿನಾಶಕ್ಕಾಗಿ ಮತ್ತು ನನ್ನ ಹಿತಕ್ಕಾಗಿ ಒಳ್ಳೆಯ ಮನಸ್ಸಿನಿಂದ ನೀನು ಸಾರಥ್ಯವನ್ನು ಮಾಡಬೇಕು.
08023005a ಅಸ್ಯಾಭೀಶುಗ್ರಹೋ ಲೋಕೇ ನಾನ್ಯೋಽಸ್ತಿ ಭವತಾ ಸಮಃ|
08023005c ಸ ಪಾತು ಸರ್ವತಃ ಕರ್ಣಂ ಭವಾನ್ಬ್ರಹ್ಮೇವ ಶಂಕರಂ||
ಕರ್ಣನ ಕುದುರೆಗಳ ಕಡಿವಾಣಗಳನ್ನು ಹಿಡಿಯಬಲ್ಲ, ನಿನಗೆ ಸರಿಸಾಟಿಯಾದ, ಇನ್ನೊಬ್ಬನು ಈ ಲೋಕದಲ್ಲಿಯೇ ಇಲ್ಲ. ಬ್ರಹ್ಮನು ಶಂಕರನನ್ನು ಹೇಗೋ ಹಾಗೆ ನೀನು ಕರ್ಣನನ್ನು ಸರ್ವತಃ ರಕ್ಷಿಸಬೇಕು.
08023006a ಪಾರ್ಥಸ್ಯ ಸಚಿವಃ ಕೃಷ್ಣೋ ಯಥಾಭೀಶುಗ್ರಹೋ ವರಃ|
08023006c ತಥಾ ತ್ವಮಪಿ ರಾಧೇಯಂ ಸರ್ವತಃ ಪರಿಪಾಲಯ||
ಕಡಿವಾಣಗಳನ್ನು ಹಿಡಿಯುವವರಲ್ಲಿ ಶ್ರೇಷ್ಠ ಕೃಷ್ಣನು ಹೇಗೆ ಪಾರ್ಥನ ಸಚಿವನೋ ಹಾಗೆ ನೀನೂ ಕೂಡ ರಾಧೇಯನನ್ನು ಸರ್ವತಃ ಪರಿಪಾಲಿಸು.
08023007a ಭೀಷ್ಮೋ ದ್ರೋಣಃ ಕೃಪಃ ಕರ್ಣೋ ಭವಾನ್ಭೋಜಶ್ಚ ವೀರ್ಯವಾನ್|
08023007c ಶಕುನಿಃ ಸೌಬಲೋ ದ್ರೌಣಿರಹಂ ಏವ ಚ ನೋ ಬಲಂ|
08023007e ಏಷಾಮೇವ ಕೃತೋ ಭಾಗೋ ನವಧಾ ಪೃತನಾಪತೇ||
ಪೃತನಾಪತೇ! ಭೀಷ್ಮ, ದ್ರೋಣ, ಕೃಪ, ಕರ್ಣ, ನೀನು, ವೀರ್ಯವಾನ್ ಭೋಜ, ಸೌಬಲ, ಶಕುನಿ ಮತ್ತು ದ್ರೌಣಿ – ಈ ಒಂಭತ್ತು ಮಂದಿ ನಮ್ಮ ಬಲಶಾಲಿಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದರಂತೆ ಪಾಂಡವ ಸೇನೆಯನ್ನು ಒಂಭತ್ತು ಪಾಲುಗಳನ್ನಾಗಿ ಮಾಡಿಕೊಂಡಿದ್ದೆವು.
08023008a ನೈವ ಭಾಗೋಽತ್ರ ಭೀಷ್ಮಸ್ಯ ದ್ರೋಣಸ್ಯ ಚ ಮಹಾತ್ಮನಃ|
08023008c ತಾಭ್ಯಾಮತೀತ್ಯ ತೌ ಭಾಗೌ ನಿಹತಾ ಮಮ ಶತ್ರವಃ||
ಈಗ ಭೀಷ್ಮನ ಮತ್ತು ಮಹಾತ್ಮ ದ್ರೋಣನ ಭಾಗಗಳು ಉಳಿದಿಲ್ಲ. ಅವರಿಬ್ಬರೂ ತಮ್ಮ ತಮ್ಮ ಪಾಲುಗಳನ್ನೂ ಮೀರಿ ನನ್ನ ಶತ್ರುಗಳನ್ನು ಸಂಹರಿಸಿದ್ದಾರೆ.
08023009a ವೃದ್ಧೌ ಹಿ ತೌ ನರವ್ಯಾಘ್ರೌ ಚಲೇನ ನಿಹತೌ ಚ ತೌ|
08023009c ಕೃತ್ವಾ ನಸುಕರಂ ಕರ್ಮ ಗತೌ ಸ್ವರ್ಗಮಿತೋಽನಘ||
ಅನಘ! ವೃದ್ಧರಾಗಿದ್ದ ಆ ಇಬ್ಬರು ನರವ್ಯಾಘ್ರರೂ ಛಲದಿಂದ ಸಂಹರಿಸಿ, ಅಸಾಧ್ಯಕರ್ಮಗಳನ್ನೆಸಗಿ ಸ್ವರ್ಗಕ್ಕೆ ಹೋದರು.
08023010a ತಥಾನ್ಯೇ ಪುರುಷವ್ಯಾಘ್ರಾಃ ಪರೈರ್ವಿನಿಹತಾ ಯುಧಿ|
08023010c ಅಸ್ಮದೀಯಾಶ್ಚ ಬಹವಃ ಸ್ವರ್ಗಾಯೋಪಗತಾ ರಣೇ|
08023010e ತ್ಯಕ್ತ್ವಾ ಪ್ರಾಣಾನ್ಯಥಾಶಕ್ತಿ ಚೇಷ್ಟಾಃ ಕೃತ್ವಾ ಚ ಪುಷ್ಕಲಾಃ||
ಹಾಗೆಯೇ ಅನ್ಯ ಪುರುಷವ್ಯಾಘ್ರರೂ ಶತ್ರುಗಳಿಂದ ಯುದ್ಧದಲ್ಲಿ ಹತರಾದರು. ನಮ್ಮ ಕಡೆಯ ಅನೇಕರು ಯಥಾಶಕ್ತಿಯಾಗಿ ಅನೇಕ ಕಠಿಣ ಕರ್ಮಗಳನ್ನೆಸಗಿ ರಣದಲ್ಲಿ ಪ್ರಾಣಗಳನ್ನು ತ್ಯಜಿಸಿ ಸ್ವರ್ಗದ ಕಡೆ ಹೊರಟುಹೋಗಿದ್ದಾರೆ.
08023011a ಕರ್ಣೋ ಹ್ಯೇಕೋ ಮಹಾಬಾಹುರಸ್ಮತ್ಪ್ರಿಯಹಿತೇ ರತಃ|
08023011c ಭವಾಂಶ್ಚ ಪುರುಷವ್ಯಾಘ್ರ ಸರ್ವಲೋಕಮಹಾರಥಃ|
08023011e ತಸ್ಮಿಂ ಜಯಾಶಾ ವಿಪುಲಾ ಮಮ ಮದ್ರಜನಾಧಿಪ||
ಪುರುಷವ್ಯಾಘ್ರ! ಮಹಾಬಾಹು ಕರ್ಣನೊಬ್ಬನೇ ಮತ್ತು ಸರ್ವಲೋಕಮಹಾರಥನಾದ ನೀನು ನನ್ನ ಪ್ರಿಯಹಿತಗಳಲ್ಲಿ ನಿರತನಾಗಿದ್ದೀರಿ. ಮದ್ರಜನಾಧಿಪ! ನನ್ನ ಜಯದ ಆಸೆಯು ವಿಪುಲವಾಗಿ ನಿನ್ನನ್ನವಲಂಬಿಸಿದೆ.
08023012a ಪಾರ್ಥಸ್ಯ ಸಮರೇ ಕೃಷ್ಣೋ ಯಥಾಭೀಶುವರಗ್ರಹಃ|
08023012c ತೇನ ಯುಕ್ತೋ ರಣೇ ಪಾರ್ಥೋ ರಕ್ಷ್ಯಮಾಣಶ್ಚ ಪಾರ್ಥಿವ|
08023012e ಯಾನಿ ಕರ್ಮಾಣಿ ಕುರುತೇ ಪ್ರತ್ಯಕ್ಷಾಣಿ ತಥೈವ ತೇ||
ಪಾರ್ಥಿವ! ಸಮರದಲ್ಲಿ ಕೃಷ್ಣನು ಪಾರ್ಥನ ಕುದುರೆಗಳ ಕಡಿವಾಣಗಳನ್ನು ಹಿಡಿಯುವವನಾಗಿ, ಅವನಿಂದ ರಕ್ಷಿತನಾದ ಪಾರ್ಥನು ರಣದಲ್ಲಿ ಯಾವ ಯಾವ ಮಹಾದ್ಭುತ ಕರ್ಮಗಳನ್ನು ಮಾಡುತ್ತಿದ್ದಾನೆ ಎನ್ನುವುದನ್ನು ಪ್ರತ್ಯಕ್ಷವಾಗಿಯೇ ನೀನು ಕಂಡಿರುವೆ!
08023013a ಪೂರ್ವಂ ನ ಸಮರೇ ಹ್ಯೇವಮವಧೀದರ್ಜುನೋ ರಿಪೂನ್|
08023013c ಅಹನ್ಯಹನಿ ಮದ್ರೇಶ ದ್ರಾವಯನ್ದೃಶ್ಯತೇ ಯುಧಿ||
ಮದ್ರೇಶ! ಹಿಂದೆ ಅರ್ಜುನನು ಸಮರದಲ್ಲಿ ಈ ರೀತಿ ಶತ್ರುಗಳನ್ನು ಸಂಹರಿಸುತ್ತಿರಲಿಲ್ಲ! ಈಗ ಯುದ್ಧದಲ್ಲಿ ಪ್ರತಿದಿನವೂ ಅವನು ಶತ್ರುಗಳನ್ನು ಓಡಿಸುತ್ತಿರುವುದು ಕಾಣುತ್ತಿದೆ.
08023014a ಭಾಗೋಽವಶಿಷ್ಟಃ ಕರ್ಣಸ್ಯ ತವ ಚೈವ ಮಹಾದ್ಯುತೇ|
08023014c ತಂ ಭಾಗಂ ಸಹ ಕರ್ಣೇನ ಯುಗಪನ್ನಾಶಯಾಹವೇ||
ಮಹಾದ್ಯುತೇ! ನಾವು ಮಾಡಿಕೊಂಡಿದ್ದ ಪಾಲುಗಳಲ್ಲಿ ನಿನ್ನ ಮತ್ತು ಕರ್ಣನ ಪಾಲುಗಳು ಉಳಿದುಕೊಂಡಿವೆ. ಯುದ್ಧದಲ್ಲಿ ಕರ್ಣನೊಂದಿಗೆ ಒಟ್ಟಾಗಿ ನಿನ್ನ ಪಾಲಿನ ಭಾಗವನ್ನೂ ನಾಶಪಡಿಸು.
08023015a ಸೂರ್ಯಾರುಣೌ ಯಥಾ ದೃಷ್ಟ್ವಾ ತಮೋ ನಶ್ಯತಿ ಮಾರಿಷ|
08023015c ತಥಾ ನಶ್ಯಂತು ಕೌಂತೇಯಾಃ ಸಪಾಂಚಾಲಾಃ ಸಸೃಂಜಯಾಃ||
ಮಾರಿಷ! ಸೂರ್ಯ ಮತ್ತು ಅರುಣರನ್ನು ನೋಡಿ ಕತ್ತಲೆಯು ಹೇಗೆ ನಾಶವಾಗುತ್ತದೆಯೋ ಹಾಗೆ ನಿಮ್ಮಿಬ್ಬರನ್ನು ನೋಡಿ ಪಾಂಚಾಲರು ಮತ್ತು ಸೃಂಜಯರೊಂದಿಗೆ ಕೌಂತೇಯರು ನಾಶವಾಗುತ್ತಾರೆ.
08023016a ರಥಾನಾಂ ಪ್ರವರಃ ಕರ್ಣೋ ಯತೄಣಾಂ ಪ್ರವರೋ ಭವಾನ್|
08023016c ಸಂನಿಪಾತಃ ಸಮೋ ಲೋಕೇ ಭವತೋರ್ನಾಸ್ತಿ ಕಶ್ಚನ||
ಕರ್ಣನು ರಥಿಗಳಲ್ಲಿ ಶ್ರೇಷ್ಠನು. ನೀನು ಸಾರಥಿಗಳಲ್ಲಿ ಶ್ರೇಷ್ಠನು. ನಿಮ್ಮಿಬ್ಬರ ಜೋಡಿಯಂಥಹುದು ಲೋಕದಲ್ಲಿ ಎಂದೂ ಇರಲಿಲ್ಲ, ಮುಂದೆ ಇರಲಿಕ್ಕಿಲ್ಲ.
08023017a ಯಥಾ ಸರ್ವಾಸ್ವವಸ್ಥಾಸು ವಾರ್ಷ್ಣೇಯಃ ಪಾತಿ ಪಾಂಡವಂ|
08023017c ತಥಾ ಭವಾನ್ಪರಿತ್ರಾತು ಕರ್ಣಂ ವೈಕರ್ತನಂ ರಣೇ||
ಸರ್ವಾವಸ್ಥೆಗಳಲ್ಲಿ ವಾರ್ಷ್ಣೇಯನು ಹೇಗೆ ಪಾಂಡವನನ್ನು ರಕ್ಷಿಸುತ್ತಿರುವನೋ ಹಾಗೆ ರಣದಲ್ಲಿ ನೀನು ವೈಕರ್ತನ ಕರ್ಣನನ್ನು ರಕ್ಷಿಸಬೇಕು.
08023018a ತ್ವಯಾ ಸಾರಥಿನಾ ಹ್ಯೇಷ ಅಪ್ರಧೃಷ್ಯೋ ಭವಿಷ್ಯತಿ|
08023018c ದೇವತಾನಾಮಪಿ ರಣೇ ಸಶಕ್ರಾಣಾಂ ಮಹೀಪತೇ|
08023018e ಕಿಂ ಪುನಃ ಪಾಂಡವೇಯಾನಾಂ ಮಾತಿಶಂಕೀರ್ವಚೋ ಮಮ||
ನಿನ್ನ ಸಾರಥ್ಯದಿಂದ ಇವನು ಅಜೇಯನಾಗುತ್ತಾನೆ. ಮಹೀಪತೇ! ರಣದಲ್ಲಿ ಇವನು ಶಕ್ರನೊಡನೆ ಬಂದ ದೇವತೆಗಳನ್ನೂ ಎದುರಿಸಬಲ್ಲನು. ಇನ್ನು ಪಾಂಡವೇಯರ ವಿಷಯದಲ್ಲೇನು? ನನ್ನ ಈ ಮಾತಿನಲ್ಲಿ ಶಂಕೆಪಡದಿರು!”
08023019a ದುರ್ಯೋಧನವಚಃ ಶ್ರುತ್ವಾ ಶಲ್ಯಃ ಕ್ರೋಧಸಮನ್ವಿತಃ|
08023019c ತ್ರಿಶಿಖಾಂ ಭ್ರುಕುಟೀಂ ಕೃತ್ವಾ ಧುನ್ವನ್ ಹಸ್ತೌ ಪುನಃ ಪುನಃ||
ದುರ್ಯೋಧನನ ಮಾತನ್ನು ಕೇಳಿ ಶಲ್ಯನು ಕ್ರೋಧಸಮನ್ವಿತನಾಗಿ, ಹುಬ್ಬುಗಳನ್ನು ಗಂಟಿಕ್ಕೆ, ಕೈಗಳೆರಡನ್ನು ಪುನಃ ಪುನಃ ಕೊಡವಿದನು.
08023020a ಕ್ರೋಧರಕ್ತೇ ಮಹಾನೇತ್ರೇ ಪರಿವರ್ತ್ಯ ಮಹಾಭುಜಃ|
08023020c ಕುಲೈಶ್ವರ್ಯಶ್ರುತಿಬಲೈರ್ದೃಪ್ತಃ ಶಲ್ಯೋಽಬ್ರವೀದಿದಂ||
ಕೆಂಪಾದ ಕಣ್ಣುಗಳನ್ನು ತಿರುಗಿಸುತ್ತಾ, ಕುಲ-ಐಶ್ವರ್ಯ-ವಿದ್ಯೆ-ಬಲಗಳಿಂದ ದರ್ಪಿತನಾಗಿದ್ದ ಮಹಾಭುಜ ಶಲ್ಯನು ಈ ಮಾತುಗಳನ್ನಾಡಿದನು:
08023021a ಅವಮನ್ಯಸೇ ಮಾಂ ಗಾಂದಾರೇ ಧ್ರುವಂ ಮಾಂ ಪರಿಶಂಕಸೇ|
08023021c ಯನ್ಮಾಂ ಬ್ರವೀಷಿ ವಿಸ್ರಬ್ಧಂ ಸಾರಥ್ಯಂ ಕ್ರಿಯತಾಮಿತಿ||
“ಗಾಂಧಾರೇ! ಸ್ವಲ್ಪವೂ ಪರಿಶಂಕಿಸದೇ ವಿಸ್ತಬ್ಧನಾಗಿ ಸಾರಥ್ಯವನ್ನು ಮಾಡು ಎಂದು ನನಗೆ ಹೇಳಿ ನನ್ನನ್ನು ಅಪಮಾನಿಸುತ್ತಿರುವೆ!
08023022a ಅಸ್ಮತ್ತೋಽಭ್ಯಧಿಕಂ ಕರ್ಣಂ ಮನ್ಯಮಾನಃ ಪ್ರಶಂಸಸಿ|
08023022c ನ ಚಾಹಂ ಯುಧಿ ರಾಧೇಯಂ ಗಣಯೇ ತುಲ್ಯಮಾತ್ಮನಾ||
ಕರ್ಣನು ನನಗಿಂತಲೂ ಅಧಿಕನೆಂದು ತಿಳಿದು ಅವನನ್ನು ಪ್ರಶಂಸಿಸುತ್ತಿದ್ದೀಯೆ! ಆದರೆ ಯುದ್ಧದಲ್ಲಿ ರಾಧೇಯನು ನನ್ನ ಸಮಾನನೆಂದು ನಾನು ಒಪ್ಪಿಕೊಳ್ಳುವುದಿಲ್ಲ!
08023023a ಆದಿಶ್ಯತಾಮಭ್ಯಧಿಕೋ ಮಮಾಂಶಃ ಪೃಥಿವೀಪತೇ|
08023023c ತಂ ಅಹಂ ಸಮರೇ ಹತ್ವಾ ಗಮಿಷ್ಯಾಮಿ ಯಥಾಗತಂ||
ಪೃಥಿವೀಪತೇ! ನನಗೆ ಶತ್ರುಸೇನೆಯ ಹೆಚ್ಚಿನ ಪಾಲನ್ನೇ ವಹಿಸಿಕೊಡು. ಸಮರದಲ್ಲಿ ನಾನು ಆ ಭಾಗವನ್ನು ಸಂಹರಿಸಿ ಎಲ್ಲಿಂದ ಬಂದಿದ್ದೆನೋ ಅಲ್ಲಿಗೆ ಹೊರಟುಹೋಗುತ್ತೇನೆ.
08023024a ಅಥ ವಾಪ್ಯೇಕ ಏವಾಹಂ ಯೋತ್ಸ್ಯಾಮಿ ಕುರುನಂದನ|
08023024c ಪಶ್ಯ ವೀರ್ಯಂ ಮಮಾದ್ಯ ತ್ವಂ ಸಂಗ್ರಾಮೇ ದಹತೋ ರಿಪೂನ್||
ಅಥವಾ ಕುರುನಂದನ! ನಾನೊಬ್ಬನೇ ಯುದ್ಧಮಾಡುತ್ತೇನೆ. ಸಂಗ್ರಾಮದಲ್ಲಿ ಶತ್ರುಗಳನ್ನು ಸುಡುವ ನನ್ನ ವೀರ್ಯವನ್ನು ಇಂದು ನೋಡು!
08023025a ನ ಚಾಭಿಕಾಮಾನ್ಕೌರವ್ಯ ವಿಧಾಯ ಹೃದಯೇ ಪುಮಾನ್|
08023025c ಅಸ್ಮದ್ವಿಧಃ ಪ್ರವರ್ತೇತ ಮಾ ಮಾ ತ್ವಮತಿಶಂಕಿಥಾಃ||
ಕೌರವ್ಯ! ನನ್ನಂಥಹ ಪುರುಷರು ಹೃದಯದಲ್ಲಿ ಆಸೆಗಳನ್ನಿಟ್ಟುಕೊಂಡು ಯುದ್ಧದಲ್ಲಿ ತೊಡಗುವುದಿಲ್ಲ. ನನ್ನ ಮೇಲೆ ಅಧಿಕ ಶಂಕೆಪಡಬೇಡ!
08023026a ಯುಧಿ ಚಾಪ್ಯವಮಾನೋ ಮೇ ನ ಕರ್ತವ್ಯಃ ಕಥಂ ಚನ|
08023026c ಪಶ್ಯ ಹೀಮೌ ಮಮ ಭುಜೌ ವಜ್ರಸಂಹನನೋಪಮೌ||
ಯುದ್ಧದಲ್ಲಿ ನನ್ನನ್ನು ಅಪಮಾನಗೊಳಿಸುವ ಕೆಲಸವನ್ನೆಂದೂ ಮಾಡಬೇಡ! ವಜ್ರಸಂಹನದಂತಿರುವ ನನ್ನ ಈ ಭುಜಗಳನ್ನಾದರೂ ನೀನು ನೋಡು!
08023027a ಧನುಃ ಪಶ್ಯ ಚ ಮೇ ಚಿತ್ರಂ ಶರಾಂಶ್ಚಾಶೀವಿಷೋಪಮಾನ್|
08023027c ರಥಂ ಪಶ್ಯ ಚ ಮೇ ಕ್ಷ್ಲಪ್ತಂ ಸದಶ್ವೈರ್ವಾತವೇಗಿತೈಃ|
08023027e ಗದಾಂ ಚ ಪಶ್ಯ ಗಾಂದಾರೇ ಹೇಮಪಟ್ಟವಿಭೂಷಿತಾಂ||
ಗಾಂಧಾರೇ! ಚಿತ್ರಿತವಾಗಿರುವ ನನ್ನ ಧನುಸ್ಸನ್ನು ಮತ್ತು ಸರ್ಪವಿಷಗಳಂತಿರುವ ನನ್ನ ಬಾಣಗಳನ್ನೂ ನೋಡು! ಗಾಳಿಯ ವೇಗದಲ್ಲಿ ಹೋಗುವ ಕುದುರೆಗಳುಳ್ಳ ನನ್ನ ಈ ಸುಂದರ ರಥವನ್ನೂ ನೋಡು! ಹೇಮಪಟ್ಟಿಗಳಿಂದ ವಿಭೂಷಿತವಾದ ನನ್ನ ಈ ಗದೆಯನ್ನೂ ನೋಡು!
08023028a ದಾರಯೇಯಂ ಮಹೀಂ ಕ್ರುದ್ಧೋ ವಿಕಿರೇಯಂ ಚ ಪರ್ವತಾನ್|
08023028c ಶೋಷಯೇಯಂ ಸಮುದ್ರಾಂಶ್ಚ ತೇಜಸಾ ಸ್ವೇನ ಪಾರ್ಥಿವ||
ಪಾರ್ಥಿವ! ಕ್ರುದ್ಧನಾದರೆ ಈ ಭೂಮಿಯನ್ನು ಸೀಳಿಯೇನು! ಪರ್ವತಗಳನ್ನು ಪುಡಿಪುಡಿಮಾಡಿಯೇನು! ನನ್ನ ತೇಜಸ್ಸಿನಿಂದ ಸಮುದ್ರಗಳನ್ನೂ ಒಣಗಿಸಬಲ್ಲೆನು!
08023029a ತನ್ಮಾಮೇವಂವಿಧಂ ಜಾನನ್ಸಮರ್ಥಮರಿನಿಗ್ರಹೇ|
08023029c ಕಸ್ಮಾದ್ಯುನಕ್ಷಿ ಸಾರಥ್ಯೇ ನ್ಯೂನಸ್ಯಾಧಿರಥೇರ್ನೃಪ||
ನೃಪ! ಅರಿನಿಗ್ರಹದಲ್ಲಿ ಸಮರ್ಥನಾದ ನನ್ನ ಈ ರೀತಿಯ ಪರಾಕ್ರಮವನ್ನು ತಿಳಿದೂ ನೀನು ನೀಚ ಅಧಿರಥನ ಸಾರಥ್ಯಕ್ಕೆ ನನ್ನನ್ನು ಏಕೆ ನಿಯೋಜಿಸುತ್ತಿರುವೆ?
08023030a ನ ನಾಮ ಧುರಿ ರಾಜೇಂದ್ರ ಪ್ರಯೋಕ್ತುಂ ತ್ವಮಿಹಾರ್ಹಸಿ|
08023030c ನ ಹಿ ಪಾಪೀಯಸಃ ಶ್ರೇಯಾನ್ಭೂತ್ವಾ ಪ್ರೇಷ್ಯತ್ವಮುತ್ಸಹೇ||
ರಾಜೇಂದ್ರ! ಈ ಕೀಳು ವೃತ್ತಿಯಲ್ಲಿ ನನ್ನನ್ನು ತೊಡಗಿಸುವುದು ನಿನಗೆ ಖಂಡಿತವಾಗಿಯೂ ಯೋಗ್ಯವೆನಿಸುವುದಿಲ್ಲ. ಶ್ರೇಯಾವಂತನಾಗಿದ್ದುಕೊಂಡು ನಾನು ಇಂತಹ ಪಾಪಿ ಪುರುಷನ ಸೇವೆಮಾಡಲು ಇಷ್ಟಪಡುವುದಿಲ್ಲ.
08023031a ಯೋ ಹ್ಯಭ್ಯುಪಗತಂ ಪ್ರೀತ್ಯಾ ಗರೀಯಾಂಸಂ ವಶೇ ಸ್ಥಿತಂ|
08023031c ವಶೇ ಪಾಪೀಯಸೋ ಧತ್ತೇ ತತ್ಪಾಪಮಧರೋತ್ತರಂ||
ಪ್ರೀತಿಯಿಂದ ಬಂದು ಆಜ್ಞಾಧಾರಕನಾಗಿರುವ ಹಿರಿಯನಾದವನನ್ನು ಪಾಪಿಯ ವಶದಲ್ಲಿ ಕೊಡುವವನಿಗೆ ಉಚ್ಚನನ್ನು ನೀಚನನ್ನಾಗಿಯೂ ನೀಚನನ್ನು ಉಚ್ಚನನ್ನಾಗಿಯೂ ಮಾಡುವವನಿಗೆ ದೊರೆಯುವ ಮಹಾ ಪಾಪವು ದೊರೆಯುತ್ತದೆ.
08023032a ಬ್ರಾಹ್ಮಣಾ ಬ್ರಹ್ಮಣಾ ಸೃಷ್ಟಾ ಮುಖಾತ್ ಕ್ಷತ್ರಮಥೋರಸಃ|
08023032c ಊರುಭ್ಯಾಮಸೃಜದ್ವೈಶ್ಯಾಂ ಶೂದ್ರಾನ್ಪದ್ಭ್ಯಾಮಿತಿ ಶ್ರುತಿಃ|
08023032e ತೇಭ್ಯೋ ವರ್ಣವಿಶೇಷಾಶ್ಚ ಪ್ರತಿಲೋಮಾನುಲೋಮಜಾಃ||
08023033a ಅಥಾನ್ಯೋನ್ಯಸ್ಯ ಸಂಯೋಗಾಚ್ಚಾತುರ್ವರ್ಣ್ಯಸ್ಯ ಭಾರತ|
ಬ್ರಹ್ಮನು ಬ್ರಾಹ್ಮಣರನ್ನು ತನ್ನ ಮುಖದಿಂದಲೂ, ಕ್ಷತ್ರಿಯರನ್ನು ಭುಜಗಳಿಂದಲೂ, ವೈಶ್ಯರನ್ನು ತೊಡೆಗಳಿಂದಲೂ ಮತ್ತು ಶೂದ್ರರನ್ನು ಪಾದಗಳಿಂದಲೂ ಸೃಷ್ಟಿಸಿದನೆಂದು ಶೃತಿಯಿದೆ. ಭಾರತ! ಈ ನಾಲ್ಕು ವರ್ಣಗಳ ಪರಸ್ಪರ ಸಂಕರದಿಂದ ಅನುಲೋಮ-ವಿಲೋಮ ವರ್ಣಗಳ ಉತ್ಪತ್ತಿಯಾಗುತ್ತದೆ.
08023033c ಗೋಪ್ತಾರಃ ಸಂಗ್ರಹೀತಾರೋ ದಾತಾರಃ ಕ್ಷತ್ರಿಯಾಃ ಸ್ಮೃತಾಃ||
08023034a ಯಾಜನಾಧ್ಯಾಪನೈರ್ವಿಪ್ರಾ ವಿಶುದ್ಧೈಶ್ಚ ಪ್ರತಿಗ್ರಹೈಃ|
08023034c ಲೋಕಸ್ಯಾನುಗ್ರಹಾರ್ಥಾಯ ಸ್ಥಾಪಿತಾ ಬ್ರಹ್ಮಣಾ ಭುವಿ||
ಕ್ಷತ್ರಿಯರು ರಕ್ಷಕರೆಂದೂ, ಕಪ್ಪು-ಕಾಣಿಕೆಗಳ ಸಂಗ್ರಹೀತಾರರೆಂದೂ, ದಾನ-ಧರ್ಮಗಳನ್ನು ಮಾಡುವವರೆಂದೂ ವಿಹಿತವಾಗಿದೆ. ಯಜ್ಞಮಾಡಿಸುವರು, ಅಧ್ಯಾಪನೆ ಮಾಡುವವರು ಮತ್ತು ವಿಶುದ್ಧ ದಾನಗಳನ್ನು ಸ್ವೀಕರಿಸುವವರು ವಿಪ್ರರು. ಲೋಕಗಳ ಅನುಗ್ರಹಕ್ಕಾಗಿ ಬ್ರಹ್ಮನು ಇದನ್ನು ಭುವಿಯಲ್ಲಿ ಸ್ಥಾಪಿಸಿದನು.
08023035a ಕೃಷಿಶ್ಚ ಪಾಶುಪಾಲ್ಯಂ ಚ ವಿಶಾಂ ದಾನಂ ಚ ಸರ್ವಶಃ|
08023035c ಬ್ರಹ್ಮಕ್ಷತ್ರವಿಶಾಂ ಶೂದ್ರಾ ವಿಹಿತಾಃ ಪರಿಚಾರಕಾಃ||
ಕೃಷಿ, ಪಶುಪಾಲನೆ ಮತ್ತು ದಾನಗಳು ವೈಶ್ಯರಿಗೆ, ಮತ್ತು ಬ್ರಾಹ್ಮಣ-ಕ್ಷತ್ರಿಯ-ವೈಶ್ಯರೆಲ್ಲರ ಸೇವೆಗಳು ಶೂದ್ರರಿಗೆ ವಿಹಿತವಾಗಿವೆ.
08023036a ಬ್ರಹ್ಮಕ್ಷತ್ರಸ್ಯ ವಿಹಿತಾಃ ಸೂತಾ ವೈ ಪರಿಚಾರಕಾಃ|
08023036c ನ ವಿಟ್ಶೂದ್ರಸ್ಯ ತತ್ರೈವ ಶೃಣು ವಾಕ್ಯಂ ಮಮಾನಘ||
ಬ್ರಾಹ್ಮಣ-ಕ್ಷತ್ರಿಯರಿಗೆ ಸೂತರು ಪರಿಚಾರಕರೆಂದು ವಿಹಿತವಾಗಿದೆ. ಇದಕ್ಕೆ ವಿರುದ್ಧವಾದುದು ಎಲ್ಲಿಯೂ ಇಲ್ಲ. ಅನಘ! ನನ್ನ ಈ ಮಾತನ್ನು ಕೇಳು!
08023037a ಸೋಽಹಂ ಮೂರ್ಧಾವಸಿಕ್ತಃ ಸನ್ರಾಜರ್ಷಿಕುಲಸಂಭವಃ|
08023037c ಮಹಾರಥಃ ಸಮಾಖ್ಯಾತಃ ಸೇವ್ಯಃ ಸ್ತವ್ಯಶ್ಚ ಬಂದಿನಾಂ||
08023038a ಸೋಽಹಂ ಏತಾದೃಶೋ ಭೂತ್ವಾ ನೇಹಾರಿಕುಲಮರ್ದನ|
08023038c ಸೂತಪುತ್ರಸ್ಯ ಸಂಗ್ರಾಮೇ ಸಾರಥ್ಯಂ ಕರ್ತುಮುತ್ಸಹೇ||
ನಾನಾದರೋ ರಾಜರ್ಷಿಕುಲದಲ್ಲಿ ಹುಟ್ಟಿ ಪಟ್ಟಾಭಿಷಿಕ್ತನಾಗಿದ್ದೇನೆ. ಮಹಾರಥನೆಂದು ಪ್ರಸಿದ್ಧನಾಗಿದ್ದೇನೆ. ವಂದಿಮಾಗಧರ ಸೇವೆ-ಸ್ತುತಿಗಳಿಗೆ ಪಾತ್ರನಾಗಿದ್ದೇನೆ. ಇಂತಹ ಅರಿಕುಲಮರ್ಧನನಾಗಿರುವ ನಾನು ಸಂಗ್ರಾಮದಲ್ಲಿ ಸೂತಪುತ್ರನ ಸಾರಥ್ಯವನ್ನು ಮಾಡುವುದಿಲ್ಲ.
08023039a ಅವಮಾನಮಹಂ ಪ್ರಾಪ್ಯ ನ ಯೋತ್ಸ್ಯಾಮಿ ಕಥಂ ಚನ|
08023039c ಆಪೃಚ್ಚ್ಯ ತ್ವಾದ್ಯ ಗಾಂದಾರೇ ಗಮಿಷ್ಯಾಮಿ ಯಥಾಗತಂ||
ಅಪಮಾನಿತನಾಗಿ ನಾನು ಎಂದೂ ಯುದ್ಧಮಾಡುವುದಿಲ್ಲ. ಗಾಂಧಾರೇ! ಅಪ್ಪಣೆಕೊಡು. ಇಂದೇ ನಾನು ನನ್ನ ದೇಶಕ್ಕೆ ಹೊರಟುಹೋಗುತ್ತೇನೆ!”
08023040a ಏವಮುಕ್ತ್ವಾ ನರವ್ಯಾಘ್ರಃ ಶಲ್ಯಃ ಸಮಿತಿಶೋಭನಃ|
08023040c ಉತ್ಥಾಯ ಪ್ರಯಯೌ ತೂರ್ಣಂ ರಾಜಮಧ್ಯಾದಮರ್ಷಿತಃ||
ಹೀಗೆ ಹೇಳಿ ನರವ್ಯಾಘ್ರ, ಸಮಿತಿಶೋಭನ ಶಲ್ಯನು ಮೇಲೆದ್ದು ರಾಜಮಧ್ಯದಿಂದ ಬೇಗನೇ ಹೊರಟುಹೋದನು.
08023041a ಪ್ರಣಯಾದ್ಬಹುಮಾನಾಚ್ಚ ತಂ ನಿಗೃಹ್ಯ ಸುತಸ್ತವ|
08023041c ಅಬ್ರವೀನ್ಮಧುರಂ ವಾಕ್ಯಂ ಸಾಮ ಸರ್ವಾರ್ಥಸಾಧಕಂ||
ನಿನ್ನ ಮಗನು ಅವನ ಮೇಲಿನ ಪ್ರೀತಿಯಿಂದಲೂ ಗೌರವದಿಂದಲೂ ಅವನನ್ನು ತಡೆದು ವಿನೀತನಾಗಿ ಸರ್ವಾರ್ಥಸಾಧಕವಾದ ಈ ಮಧುರ ಮತ್ತು ಸೌಮ್ಯ ಮಾತುಗಳನ್ನಾಡಿದನು:
08023042a ಯಥಾ ಶಲ್ಯ ತ್ವಮಾತ್ಥೇದಮೇವಮೇತದಸಂಶಯಂ|
08023042c ಅಭಿಪ್ರಾಯಸ್ತು ಮೇ ಕಶ್ಚಿತ್ತಂ ನಿಬೋಧ ಜನೇಶ್ವರ||
“ಶಲ್ಯ! ಜನೇಶ್ವರ! ಇದರ ಕುರಿತು ನೀನು ತಿಳಿದುಕೊಂಡಿರುವುದೇ ಸರಿ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ನನ್ನ ಈ ಒಂದು ಅಭಿಪ್ರಾಯವನ್ನೂ ಕೇಳು.
08023043a ನ ಕರ್ಣೋಽಭ್ಯಧಿಕಸ್ತ್ವತ್ತಃ ಶಂಕೇ ನೈವ ಕಥಂ ಚನ|
08023043c ನ ಹಿ ಮದ್ರೇಶ್ವರೋ ರಾಜಾ ಕುರ್ಯಾದ್ಯದನೃತಂ ಭವೇತ್||
ಕರ್ಣನು ನಿನಗಿಂತಲೂ ಅಧಿಕನಲ್ಲ ಎನ್ನುವುದರಲ್ಲಿ ಯಾವುದೇ ರೀತಿಯ ಶಂಕೆಯೂ ಇಲ್ಲ. ರಾಜಾ ಮದ್ರೇಶ್ವರನು ಇದನ್ನು ಸುಳ್ಳಾಗಿಸುವ ಕಾರ್ಯವೇನನ್ನೂ ಮಾಡಲಾರನು ಎನ್ನುವುದೂ ನಿಶ್ಚಯವಾದುದೇ.
08023044a ಋತಮೇವ ಹಿ ಪೂರ್ವಾಸ್ತೇ ವಹಂತಿ ಪುರುಷೋತ್ತಮಾಃ|
08023044c ತಸ್ಮಾದಾರ್ತಾಯನಿಃ ಪ್ರೋಕ್ತೋ ಭವಾನಿತಿ ಮತಿರ್ಮಮ||
ನಿನ್ನ ಪೂರ್ವಜ ಪುರುಷೋತ್ತಮರೆಲ್ಲರೂ ಸತ್ಯವನ್ನೇ ಹೇಳುತ್ತಿದ್ದರು. ಆದುದರಿಂದಲೇ ನಿನ್ನನ್ನು ಆರ್ತಾಯನಿ ಎಂದು ಕರೆಯುತ್ತಾರೆಂದು ನನ್ನ ಅನಿಸಿಕೆ.
08023045a ಶಲ್ಯಭೂತಶ್ಚ ಶತ್ರೂಣಾಂ ಯಸ್ಮಾತ್ತ್ವಂ ಭುವಿ ಮಾನದ|
08023045c ತಸ್ಮಾಚ್ಚಲ್ಯೇತಿ ತೇ ನಾಮ ಕಥ್ಯತೇ ಪೃಥಿವೀಪತೇ||
ಮಾನದ! ಪೃಥಿವೀಪತೇ! ಶತ್ರುಗಳಿಗೆ ನೀನು ಮುಳ್ಳಂತಿರುವೆಯಾದುದರಿಂದ ನಿನ್ನನ್ನು ಭುವಿಯಲ್ಲಿ ಶಲ್ಯ ಎಂದು ಕರೆಯುತ್ತಾರೆ.
08023046a ಯದೇವ ವ್ಯಾಹೃತಂ ಪೂರ್ವಂ ಭವತಾ ಭೂರಿದಕ್ಷಿಣ|
08023046c ತದೇವ ಕುರು ಧರ್ಮಜ್ಞ ಮದರ್ಥಂ ಯದ್ಯದುಚ್ಯಸೇ||
ಭೂರಿದಕ್ಷಿಣ! ಧರ್ಮಜ್ಞ! ನನಗೋಸ್ಕರವಾಗಿ ಹಿಂದೆ ನೀನು ಹೇಳಿದಂತೆ ಮತ್ತು ಈಗ ನೀನು ಹೇಳುವಂತೆಯೇ ಮಾಡು!
08023047a ನ ಚ ತ್ವತ್ತೋ ಹಿ ರಾಧೇಯೋ ನ ಚಾಹಮಪಿ ವೀರ್ಯವಾನ್|
08023047c ವೃಣೀಮಸ್ತ್ವಾಂ ಹಯಾಗ್ರ್ಯಾಣಾಂ ಯಂತಾರಮಿತಿ ಸಂಯುಗೇ||
ವೀರ್ಯವಾನ್! ನಿನಗೆ ಸಮನಾಗಿ ರಾಧೇಯನೂ ಇಲ್ಲ. ನಾನೂ ಕೂಡ ನಿನ್ನ ಸಮನಿಲ್ಲ. ಆದುದರಿಂದಲೇ ಸಂಗ್ರಾಮದಲ್ಲಿ ಅಶ್ವವಿಧ್ಯೆಯಲ್ಲಿ ಅಗ್ರಗಣ್ಯನಾಗಿರುವ ನಿನ್ನನ್ನೇ ಸಾರಥಿಯನ್ನಾಗಿ ಆರಿಸಿದ್ದೇನೆ.
08023048a ಯಥಾ ಹ್ಯಭ್ಯಧಿಕಂ ಕರ್ಣಂ ಗುಣೈಸ್ತಾತ ಧನಂಜಯಾತ್|
08023048c ವಾಸುದೇವಾದಪಿ ತ್ವಾಂ ಚ ಲೋಕೋಽಯಮಿತಿ ಮನ್ಯತೇ||
ಕರ್ಣನು ಹೇಗೆ ಗುಣದಲ್ಲಿ ಧನಂಜಯನಿಗಿಂತ ಅಧಿಕನೋ ಹಾಗೆಯೇ ನೀನೂ ಕೂಡ ವಾಸುದೇವನಿಗಿಂತಲೂ ಅಧಿಕನೆಂದು ಲೋಕವು ಮನ್ನಿಸುತ್ತದೆ.
08023049a ಕರ್ಣೋ ಹ್ಯಭ್ಯಧಿಕಃ ಪಾರ್ಥಾದಸ್ತ್ರೈರೇವ ನರರ್ಷಭ|
08023049c ಭವಾನಪ್ಯಧಿಕಃ ಕೃಷ್ಣಾದಶ್ವಯಾನೇ ಬಲೇ ತಥಾ||
ನರರ್ಷಭ! ಅಸ್ತ್ರಗಳಲ್ಲಿ ಕರ್ಣನು ಹೇಗೆ ಪಾರ್ಥನಿಗಿಂತಲೂ ಅಧಿಕನೋ ಹಾಗೆ ನೀನೂ ಕೂಡ ಅಶ್ವಯಾನದಲ್ಲಿ ಕೃಷ್ಣನಿಗಿಂತಲೂ ಅಧಿಕ ಬಲಶಾಲಿಯಾಗಿರುವೆ.
08023050a ಯಥಾಶ್ವಹೃದಯಂ ವೇದ ವಾಸುದೇವೋ ಮಹಾಮನಾಃ|
08023050c ದ್ವಿಗುಣಂ ತ್ವಂ ತಥಾ ವೇತ್ಥ ಮದ್ರರಾಜ ನ ಸಂಶಯಃ||
ಮದ್ರರಾಜ! ಅಶ್ವಹೃದಯವನ್ನು ಎಷ್ಟು ಮಹಾಮನಸ್ವಿ ವಾಸುದೇವನು ತಿಳಿದಿರುವನೋ ಅದಕ್ಕೂ ಎರಡು ಗುಣ ಹೆಚ್ಚು ನಿನಗೆ ತಿಳಿದಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.”
08023051 ಶಲ್ಯ ಉವಾಚ|
08023051a ಯನ್ಮಾ ಬ್ರವೀಷಿ ಗಾಂದಾರೇ ಮಧ್ಯೇ ಸೈನ್ಯಸ್ಯ ಕೌರವ|
08023051c ವಿಶಿಷ್ಟಂ ದೇವಕೀಪುತ್ರಾತ್ಪ್ರೀತಿಮಾನಸ್ಮ್ಯಹಂ ತ್ವಯಿ||
ಶಲ್ಯನು ಹೇಳಿದನು: “ಗಾಂಧಾರೇ! ಕೌರವ! ಸೈನ್ಯದ ಮಧ್ಯದಲ್ಲಿ ನಾನು ದೇವಕೀಪುತ್ರನಿಗಿಂತಲೂ ವಿಶಿಷ್ಟನೆಂದು ಹೇಳಿದುದಕ್ಕೆ ನಾನು ನಿನ್ನ ಮೇಲೆ ಪ್ರೀತನಾಗಿದ್ದೇನೆ.
08023052a ಏಷ ಸಾರಥ್ಯಮಾತಿಷ್ಠೇ ರಾಧೇಯಸ್ಯ ಯಶಸ್ವಿನಃ|
08023052c ಯುಧ್ಯತಃ ಪಾಂಡವಾಗ್ರ್ಯೇಣ ಯಥಾ ತ್ವಂ ವೀರ ಮನ್ಯಸೇ||
ವೀರ! ನೀನು ಇಚ್ಛಿಸಿರುವಂತೆ ಪಾಂಡವಾಗ್ರನೊಡನೆ ಯುದ್ಧಮಾಡುವ ಯಶಸ್ವಿ ರಾಧೇಯನ ಸಾರಥ್ಯವನ್ನು ವಹಿಸಿಕೊಳ್ಳುತ್ತೇನೆ.
08023053a ಸಮಯಶ್ಚ ಹಿ ಮೇ ವೀರ ಕಶ್ಚಿದ್ವೈಕರ್ತನಂ ಪ್ರತಿ|
08023053c ಉತ್ಸೃಜೇಯಂ ಯಥಾಶ್ರದ್ಧಮಹಂ ವಾಚೋಽಸ್ಯ ಸನ್ನಿಧೌ||
ವೀರ! ಆದರೆ ನನ್ನದೊಂದು ನಿಬಂಧನೆಯಿದೆ. ನಾನು ವೈಕರ್ತನನ ಬಳಿಯಿರುವಾಗ ನಾನು ಅವನೊಡನೆ ನನಗೆ ಇಷ್ಟವಾದಂತೆ ಮಾತನಾಡುತ್ತೇನೆ!””
08023054 ಸಂಜಯ ಉವಾಚ|
08023054a ತಥೇತಿ ರಾಜನ್ಪುತ್ರಸ್ತೇ ಸಹ ಕರ್ಣೇನ ಭಾರತ|
08023054c ಅಬ್ರವೀನ್ಮದ್ರರಾಜಸ್ಯ ಸುತಂ ಭರತಸತ್ತಮ||
ಭಾರತ! ರಾಜನ್! ಭರತಸತ್ತಮ! ಹಾಗೆಯೇ ಆಗಲೆಂದು ಕರ್ಣನೊಡನೆ ನಿನ್ನ ಮಗನೂ ಮದ್ರರಾಜಸುತನಿಗೆ ಹೇಳಿದರು.
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಶಲ್ಯಸಾರಥ್ಯೇ ತ್ರಯೋವಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಶಲ್ಯಸಾರಥ್ಯ ಎನ್ನುವ ಇಪ್ಪತ್ಮೂರನೇ ಅಧ್ಯಾಯವು.
