ಹರಿವಂಶ: ಹರಿವಂಶ ಪರ್ವ

ಮನ್ವಂತರಗಣನಾಯಾಮ್

19008001 ಜನಮೇಜಯ ಉವಾಚ|

19008001a ಮನ್ವಂತರಸ್ಯ ಸಂಖ್ಯಾನಂ ಯುಗಾನಾಂ ಚ ಮಹಾಮತೇ |

19008001c ಬ್ರಹ್ಮಣೋಽಹ್ನಃ ಪ್ರಮಾಣಂ ಚ ವಕ್ತುಮರ್ಹಸಿ ಮೇ ದ್ವಿಜ ||

ಜನಮೇಜಯನು ಹೇಳಿದನು: “ಮಹಾಮತೇ! ದ್ವಿಜ! ನನಗೆ ಮನ್ವಂತರಗಳ ಮತ್ತು ಯುಗಗಳ ಸಂಖ್ಯೆಗಳನ್ನೂ ಬ್ರಹ್ಮನ ದಿನದ ಪ್ರಮಾಣವನ್ನು ಹೇಳಬೇಕು.”

19008002 ವೈಶಂಪಾಯನ ಉವಾಚ|

19008002a ಅಹೋರಾತ್ರಂ ಭಜೇತ್ಸೂರ್ಯೋ ಮಾನವಂ ಲೌಕಿಕಂ ಪರಮ್|

19008002c ತಾಮುಪಾದಾಯ ಗಣನಾಂ ಶೃಣು ಸಂಖ್ಯಾಮರಿಂದಮ ||

ವೈಶಂಪಾಯನನು ಹೇಳಿದನು: “ಅರಿಂದಮ! ಸೂರ್ಯನು ಮನುಷ್ಯನ ಹಗಲು-ರಾತ್ರಿಗಳನ್ನು ವಿಭಜಿಸುತ್ತಾನೆ. ಲೌಕಿಕವಾದ ಈ ಗಣನೆಯಿಂದ ಪ್ರಾರಂಭಿಸಿ ಮನ್ವಂತರ ಮತ್ತು ಯುಗಗಳ ಸಂಖ್ಯೆಗಳನ್ನು ಕೇಳು.

19008003a ನಿಮೇಷೈಃ ಪಂಚದಶಭಿಃ ಕಾಷ್ಠಾ  ತ್ರಿಂಶತ್ತು ತಾಃ ಕಲಾಃ |

19008003c ತ್ರಿಂಶತ್ಕಲೋ ಮುಹೂರ್ತಸ್ತು ತ್ರಿಂಶತಾ ತೈರ್ಮನೀಷಿಣಃ ||

19008004a ಅಹೋರಾತ್ರಮಿತಿ ಪ್ರಾಹುಶ್ಚಂದ್ರಸೂರ್ಯಗತಿಂ ನೃಪ |

19008004c ವಿಶೇಷೇಣ ತು ಸರ್ವೇಷು ಅಹೋರಾತ್ರೇ ಚ ನಿತ್ಯಶಃ ||

ನೃಪ! ಹದಿನೈದು ನಿಮಿಷಗಳಿಗೆ ಒಂದು ಕಾಷ್ಠವಾಗುತ್ತದೆ. ಮೂವತ್ತು ಕಾಷ್ಠಗಳಿಗೆ ಒಂದು ಕಲವಾಗುತ್ತದೆ. ಮೂವತ್ತು ಕಲಗಳಿಗೆ ಒಂದು ಮುಹೂರ್ತವಾಗುತ್ತದೆ. ಮನೀಷಿಣರು ಮೂವತ್ತು ಮುಹೂರ್ತಗಳಿಗೆ ಚಂದ್ರ-ಸೂರ್ಯರ ಗತಿಯಿಂದ ಉಂಟಾಗುವ ಒಂದು ಹಗಲು-ರಾತ್ರಿಯೆಂದೂ ಹೇಳುತ್ತಾರೆ. ವಿಶೇಷವಾಗಿ ಎಲ್ಲರಿಗೂ ನಿತ್ಯವೂ ಹಗಲು-ರಾತ್ರಿಗಳಾಗುತ್ತವೆ.

19008005a ಅಹೋರಾತ್ರಾಃ ಪಂಚದಶ ಪಕ್ಷ ಇತ್ಯಭಿಶಬ್ದಿತಃ |

19008005c ದ್ವೌ ಪಕ್ಷೌ ತು ಸ್ಮೃತೋ ಮಾಸೋ ಮಾಸೌ ದ್ವಾವೃತುರುಚ್ಯತೇ ||

ಹದಿನೈದು ಅಹೋರಾತ್ರಿಗಳಿಗೆ ಪಕ್ಷ ಎಂದು ಕರೆಯುತ್ತಾರೆ. ಎರಡು ಪಕ್ಷಗಳಿಗೆ ಒಂದು ಮಾಸವೆಂದೂ ಎರಡು ಮಾಸಗಳಿಗೆ ಒಂದು ಋತುವೆಂದೂ ಹೇಳುತ್ತಾರೆ.

19008006a ಅಬ್ದಂ ದ್ವ್ಯಯನಮುಕ್ತಂ ಚ ಅಯನಂ ತ್ವೃತುಭಿಸ್ತ್ರಿಭಿಃ |

19008006c ದಕ್ಷಿಣಂ ಚೋತ್ತರಂ ಚೈವ ಸಂಖ್ಯಾತತ್ತ್ವವಿಶಾರದೈಃ ||

ಮೂರು ಋತುಗಳಿಗೆ ಒಂದು ಅಯನವೆಂದು ಹೇಳುತ್ತಾರೆ. ಮತ್ತು ಎರಡು ಅಯನಗಳಿಗೆ ಒಂದು ವರ್ಷವಾಗುತ್ತದೆ. ಸಂಖ್ಯಾತತ್ತ್ವವಿಶಾರದರು ಆ ಅಯನಗಳು ದಕ್ಷಿಣ ಮತ್ತು ಉತ್ತರ ಅಯನಗಳೆಂದು ಹೇಳುತ್ತಾರೆ.

19008007a ಮಾನೇನಾನೇನ ಯೋ ಮಾಸಃ ಪಕ್ಷದ್ವಯಸಮನ್ವಿತಃ |

19008007c ಪಿತೄಣಾಂ ತದಹೋರಾತ್ರಮಿತಿ ಕಾಲವಿದೋ ವಿದುಃ ||

ಕಾಲವಿದರು ಎರಡು ಪಕ್ಷಗಳಿರುವ ಒಂದು ಮಾಸವನ್ನು ಪಿತೃಗಳ ಒಂದು ಅಹೋರಾತ್ರಿಯೆಂದು ಹೇಳುತ್ತಾರೆ.

19008008a ಕೃಷ್ಣಪಕ್ಷಸ್ತ್ವಹಸ್ತೇಷಾಂ ಶುಕ್ಲಪಕ್ಷಸ್ತು ಶರ್ವರೀ |

19008008c ಕೃಷ್ಣಪಕ್ಷಂ ತ್ವಹಃ ಶ್ರಾದ್ಧಂ ಪಿತೄಣಾಂ ವರ್ತತೇ ನೃಪ ||

ನೃಪ! ಕೃಷ್ಣಪಕ್ಷವು ಪಿತೃಗಳ ಹಗಲೂ ಶುಕ್ಲಪಕ್ಷವು ಅವರ ರಾತ್ರಿಯೂ ಆಗಿರುತ್ತದೆ. ಆದುದರಿಂದ ಪಿತೃಗಳ ಶ್ರಾದ್ಧವು ಕೃಷ್ಣಪಕ್ಷದಲ್ಲಿ ನಡೆಯುತ್ತದೆ.

19008009a ಮಾನುಷೇಣ ತು ಮಾನೇನ ಯೋ ವೈ ಸಂವತ್ಸರಃ ಸ್ಮೃತಃ |

19008009c ದೇವಾನಾಂ ತದಹೋರಾತ್ರಂ ದಿವಾ ಚೈವೋತ್ತರಾಯಣಮ್|

19008009e ದಕ್ಷಿಣಾಯನಂ ಸ್ಮೃತಾ ರಾತ್ರಿಃ ಪ್ರಾಜ್ಞೈಸ್ತತ್ತ್ವಾರ್ಥಕೋವಿದೈಃ||

ಮನುಷ್ಯರ ಮಾಪನದ ಒಂದು ವರ್ಷವು ದೇವತೆಗಳ ಒಂದು ಅಹೋರಾತ್ರಿಯೆಂದು ಹೇಳುತ್ತಾರೆ. ಉತ್ತರಾಯಣವು ದೇವತೆಗಳ ಹಗಲೆಂದೂ ದಕ್ಷಿಣಾಯನವು ಅವರ ರಾತ್ರಿಯೆಂದೂ ತತ್ತ್ವಾರ್ಥಕೋವಿದ ಪ್ರಾಜ್ಞರು ಹೇಳುತ್ತಾರೆ.

19008010a ದಿವ್ಯಮಬ್ದಂ ದಶಗುಣಮಹೋರಾತ್ರಂ ಮನೋಃ ಸ್ಮೃತಮ್ |

19008010c ಅಹೋರಾತ್ರಂ ದಶಗುಣಂ ಮಾನವಃ ಪಕ್ಷ ಉಚ್ಯತೇ ||

ದೇವತೆಗಳ ಹತ್ತು ವರ್ಷಗಳು ಮನುವಿನ ಒಂದು ಅಹೋರಾತ್ರಿಯೆಂದು ಹೇಳುತ್ತಾರೆ. ಹತ್ತುಗುಣ ಅಹೋರಾತ್ರಿಗಳನ್ನು ಮನುವಿನ ಪಕ್ಷವೆಂದು ಹೇಳುತ್ತಾರೆ.

19008011a ಪಕ್ಷೋ ದಶಗುಣೋ ಮಾಸೋ ಮಾಸೈರ್ದ್ವಾದಶಭಿರ್ಗುಣೈಃ|

19008011c ಋತುರ್ಮನೂನಾಂ ಸಂಪ್ರೋಕ್ತಃ ಪ್ರಾಜ್ಞೈಸ್ತತ್ವಾರ್ಥದರ್ಶಿಭಿಃ|

19008011e ಋತುತ್ರಯೇಣ ತ್ವಯನಂ ತದ್ದ್ವಯೇನೈವ ವತ್ಸರಃ ||

ಮನುವಿನ ಹತ್ತು ಪಕ್ಷಗಳು ಅವರ ಒಂದು ಮಾಸವೆಂದೂ, ಹನ್ನೆರಡು ಮಾಸಗಳು ಅವರ ಒಂದು ಋತುವೆಂದೂ ತತ್ತ್ವಾರ್ಥದರ್ಶಿ ಪ್ರಾಜ್ಞರು ಹೇಳಿದ್ದಾರೆ. ಮೂರು ಋತುಗಳಿಗೆ ಒಂದು ಅಯನವೂ ಮತ್ತು ಎರಡು ಅಯನಗಳಿಗೆ ಮನುವಿನ ಒಂದು ಸಂವತ್ಸರವೆಂದೂ ಹೇಳುತ್ತಾರೆ.

19008012a ಚತ್ವಾರ್ಯೇವ ಸಹಸ್ರಾಣಿ ವರ್ಷಾಣಾಂ ತು ಕೃತಂ ಯುಗಮ್|

19008012c ತಾವಚ್ಛತೀ ಭವೇತ್ಸಂಧ್ಯಾ ಸಂಧ್ಯಾಂಶಶ್ಚ ತಥಾ ನೃಪ ||

ನೃಪ! ಕೃತಯುಗದಲ್ಲಿ ದೇವತೆಗಳ ನಾಲ್ಕುಸಾವಿರ ವರ್ಷಗಳಿರುತ್ತವೆ. ಕೃತಯುಗದ ಎರಡು ಸಂಧ್ಯಗಳಲ್ಲಿ ತಲಾ ನಾಲ್ನೂರು ದೇವವರ್ಷಗಳಿರುತ್ತವೆ.

19008013a ತ್ರೀಣಿ ವರ್ಷಸಹಸ್ರಾಣಿ ತ್ರೇತಾ ಸ್ಯಾತ್ಪರಿಮಾಣತಃ |

19008013c ತಸ್ಯಾಶ್ಚ ತ್ರಿಶತೀ ಸಂಧ್ಯಾ ಸಂಧ್ಯಾಂಶಶ್ಚ ತಥಾವಿಧಃ ||

ತ್ರೇತಾಯುಗದಲ್ಲಿ ದೇವತೆಗಳ ಮೂರುಸಾವಿರ ವರ್ಷಗಳಿರುತ್ತವೆಯೆಂದು ಹೇಳುತ್ತಾರೆ. ತ್ರೇತಾಯುಗದ ಎರಡು ಸಂಧ್ಯಗಳಲ್ಲಿ ಕೂಡ ತಲಾ ಮುನ್ನೂರು ದೇವವರ್ಷಗಳಿರುತ್ತವೆ.

19008014a ತಥಾ ವರ್ಷಸಹಸ್ರೇ ದ್ವೇ ದ್ವಾಪರಂ ಪರಿಕೀರ್ತಿತಮ್ |

19008014c ತಸ್ಯಾಪಿ ದ್ವಿಶತೀ ಸಂಧ್ಯಾ ಸಂಧ್ಯಾಂಶಶ್ಚ ತಥಾವಿಧಃ ||

ದ್ವಾಪರಯುಗದಲ್ಲಿ ದೇವತೆಗಳ ಎರಡುಸಾವಿರ ವರ್ಷಗಳಿರುತ್ತವೆಯೆಂದು ಹೇಳುತ್ತಾರೆ. ದ್ವಾಪರಯುಗದ ಎರಡು ಸಂಧ್ಯಗಳಲ್ಲಿ ಕೂಡ ತಲಾ ಇನ್ನೂರು ದೇವವರ್ಷಗಳಿರುತ್ತವೆ.

19008015a ಕಲಿವರ್ಷಸಹಸ್ರಂ ಚ ಸಂಖ್ಯಾತೋಽತ್ರ ಮನೀಷಿಭಿಃ |

19008015c ತಸ್ಯಾಪಿ ಶತಿಕಾ ಸಂಧ್ಯಾ ಸಂಧ್ಯಾಂಶಶ್ಚೈವ ತದ್ವಿಧಃ ||

ಕಲಿಯುಗದಲ್ಲಿ ದೇವತೆಗಳ ಒಂದು ಸಾವಿರ ವರ್ಷಗಳಿರುತ್ತವೆಯೆಂದು ಹೇಳುತ್ತಾರೆ. ಕಲಿಯುಗದ ಎರಡು ಸಂಧ್ಯಗಳಲ್ಲಿ ಕೂಡ ತಲಾ ಒಂದು ನೂರು ದೇವವರ್ಷಗಳಿರುತ್ತವೆ.

19008016a ಏಷಾ ದ್ವಾದಶಸಾಹಸ್ರೀ ಯುಗಸಂಖ್ಯಾ ಪ್ರಕೀರ್ತಿತಾ |

19008016c ದಿವ್ಯೇನಾನೇನ ಮಾನೇನ ಯುಗಸಂಖ್ಯಾಂ ನಿಬೋಧ ಮೇ ||

ಹೀಗೆ ಒಂದು ಚತುರ್ಯುಗದ ಸಂಖ್ಯೆಯು ದೇವತೆಗಳ ಹನ್ನೆರಡು ಸಾವಿರ ವರ್ಷಗಳೆಂದು ಹೇಳಲಾಗಿದೆ. ಈ ಮಾಪನದಿಂದ ಯುಗಸಂಖ್ಯೆಗಳನ್ನು ತಿಳಿದುಕೋ[1].

19008017a ಕೃತಂ ತ್ರೇತಾ ದ್ವಾಪರಂ ಚ ಕಲಿಶ್ಚೈವ ಚತುರ್ಯುಗೀ |

19008017c ಯುಗಂ ತದೇಕಸಪ್ತತ್ಯಾ ಗಣಿತಂ ನೃಪಸತ್ತಮ ||

19008018a ಮನ್ವಂತರಮಿತಿ ಪ್ರೋಕ್ತಂ ಸಂಖ್ಯಾನಾರ್ಥವಿಶಾರದೈಃ |

19008018c ಅಯನಂ ಚಾಪಿ ತತ್ಪ್ರೋಕ್ತಂ ದ್ವೇಽಯನೇ ದಕ್ಷಿಣೋತ್ತರೇ ||

ನೃಪಸತ್ತಮ! ಕೃತ, ತ್ರೇತಾ, ದ್ವಾಪರ ಮತ್ತು ಕಲಿಯುಗಗಳನ್ನು ಚತುರ್ಯುಗವೆಂದು ಕರೆಯುತ್ತಾರೆ. ಇಂತಹ ಎಪ್ಪತ್ತೊಂದು[2] ಚತುರ್ಯುಗಗಳು ಒಂದು ಮನ್ವಂತರವೆಂದು ಸಂಖ್ಯೆಗಳ ಅರ್ಥವಿಶಾರದರು ಲೆಖ್ಕಮಾಡಿ ಹೇಳುತ್ತಾರೆ. ಒಂದು ಮನ್ವಂತರಕ್ಕೂ ದಕ್ಷಿಣ-ಉತ್ತರಗಳೆಂಬ ಎರಡು ಅಯನಗಳನ್ನು ಹೇಳಿದ್ದಾರೆ.

19008019a ಮನುಃ ಪ್ರಲೀಯತೇ ಯತ್ರ ಸಮಾಪ್ತೇ ಚಾಯನೇ ಪ್ರಭೋಃ |

19008019c ತತೋಽಪರೋ ಮನುಃ ಕಾಲಮೇತಾವಂತಂ ಭವತ್ಯುತ ||

ಉತ್ತರಾಯಣವು ಸಮಾಪ್ತವಾಗುತ್ತಲೇ ಮನುವು ಪ್ರಭು ಬ್ರಹ್ಮನಲ್ಲಿ ಲೀನನಾಗುತ್ತಾನೆ. ಅನಂತರ ಇನ್ನೊಬ್ಬ ಮನುವಿನ ಕಾಲವು ಪ್ರಾರಂಭವಾಗುತ್ತದೆ.

19008020a ಸಮತೀತೇಷು ರಾಜೇಂದ್ರ ಪ್ರೋಕ್ತಃ ಸಂವತ್ಸರಃ ಸ ವೈ |

19008020c ತದೇವ ಚಾಯುತಂ ಪ್ರೋಕ್ತಂ ಮುನಿನಾ ತತ್ತ್ವದರ್ಶಿನಾ ||

ರಾಜೇಂದ್ರ! ತತ್ತ್ವದರ್ಶೀ ಮುನಿಗಳು ಒಂದು ಸಾವಿರ ಮನ್ವಂತರಗಳಿಗೆ ಬ್ರಹ್ಮನ ಒಂದು ವರ್ಷವೆಂದು ಹೇಳುತ್ತಾರೆ.

19008021a ಬ್ರಹ್ಮಣಸ್ತದಹಃ ಪ್ರೋಕ್ತಂ ಕಲ್ಪಶ್ಚೇತಿ ಸ ಕಥ್ಯತೇ |

19008021c ಸಹಸ್ರಯುಗಪರ್ಯಂತಾ ಯಾ ನಿಶಾ ಪ್ರೋಚ್ಯತೇ ಬುಧೈಃ ||

ಬ್ರಹ್ಮನ ಒಂದು ಹಗಲು ಸಹಸ್ರ ದೇವ ಚತುರ್ಯುಗಗಳ ಒಂದು ಕಲ್ಪವೆಂದೂ ಹೇಳುತ್ತಾರೆ. ತಿಳಿದವರು ಅದೇ ರೀತಿ ಇನ್ನೊಂದು ಕಲ್ಪವು ಬ್ರಹ್ಮನ ರಾತ್ರಿಯೆಂದು ಹೇಳುತ್ತಾರೆ.

19008022a ನಿಮಜ್ಜತ್ಯಪ್ಸು ಯತ್ರೋರ್ವೀ ಸಶೈಲವನಕಾನನಾ |

19008022c ತಸ್ಮಿನ್ಯುಗಸಹಸ್ರೇ ತು ಪೂರ್ಣೇ ಭರತಸತ್ತಮ ||

ಭರತಸತ್ತಮ! ಬ್ರಹ್ಮನ ಹಗಲಾದ ಆ ಸಾವಿರ ದೇವಚತುರ್ಯುಗಗಳು ಪೂರ್ಣವಾಗಲು ಶೈಲವನಕಾನನಗಳ ಸಹಿತ ಈ ಭೂಮಿಯು ನೀರಿನಲ್ಲಿ ಮುಳುಗಿಹೋಗುತ್ತದೆ.

19008023a ಬ್ರಾಹ್ಮೇ ದಿವಸಪರ್ಯಂತೇ ಕಲ್ಪೋ ನಿಃಶೇಷ ಉಚ್ಯತೇ |

19008023c ಯುಗಾನಿ ಸಪ್ತತಿಸ್ತಾನಿ ಸಾಗ್ರಾಣಿ ಕಥಿತಾನಿ ತೇ ||

ಬ್ರಹ್ಮನ ರಾತ್ರಿಯಾದ ಒಂದು ಕಲ್ಪವು ಕಳೆದನಂತರ ಅವನ ಇನ್ನೊಂದು ಹಗಲು ಪ್ರಾರಂಭವಾಗುತ್ತದೆ ಎನ್ನುತ್ತಾರೆ.

19008024a ಕೃತತ್ರೇತಾನಿಬದ್ಧಾನಿ ಮನೋರಂತರಮುಚ್ಯತೇ |

19008024c ಚತುರ್ದಶೈತೇ ಮನವಃ ಕೀರ್ತಿತಾಃ ಕೀರ್ತಿವರ್ಧನಾಃ ||

ಎಪ್ಪತ್ತೊಂದು ಕೃತ-ತ್ರೇತಾದಿ ಚತುರ್ಯುಗಗಳಿಗೆ ಒಂದು ಮನ್ವಂತರವೆಂದು ಹೇಳುತ್ತಾರೆ. ಕೀರ್ತಿವರ್ಧಕ ಈ ಹದಿನಾಲ್ಕು ಮನುಗಳ ಕುರಿತು ಹೇಳಿದ್ದಾಗಿದೆ.

19008025a ವೇದೇಷು ಸಪುರಾಣೇಷು ಸರ್ವೇಷು ಪ್ರಭವಿಷ್ಣವಃ |

19008025c ಪ್ರಜಾನಾಂ ಪತಯೋ ರಾಜಂಧನ್ಯಮೇಷಾಂ ಪ್ರಕೀರ್ತನಮ್||

ರಾಜನ್! ವೇದ-ಪುರಾಣಗಳಲ್ಲಿ ಈ ಎಲ್ಲ ಮನುಗಳ ವರ್ಣನೆಯಿದೆ. ಈ ಪ್ರಜಾಪತಿಗಳ ಕೀರ್ತನೆಯಿಂದ ಧನ್ಯರಾಗುತ್ತಾರೆ.

19008026a ಮನ್ವಂತರೇಷು ಸಂಹಾರಾಃ ಸಂಹಾರಾಂತೇಷು ಸಂಭವಾಃ |

19008026c ನ ಶಕ್ಯಮಂತರಂ ತೇಷಾಂ ವಕ್ತುಂ ವರ್ಷಶತೈರಪಿ ||

ಸಹಸ್ರಾರು ಮನ್ವಂತರಗಳು ಕೊನೆಗೊಳ್ಳುತ್ತವೆ ಮತ್ತು ನಂತರ ಹುಟ್ಟಿಕೊಳ್ಳುತ್ತವೆ. ಆ ಮನ್ವಂತರಗಳ ಕುರಿತು ಹೇಳಲು ಒಂದು ವರ್ಷವೂ ಸಾಕಾಗುವುದಿಲ್ಲ.

19008027a ವಿಸರ್ಗಸ್ಯ ಪ್ರಜಾನಾಂ ವೈ ಸಂಹಾರಸ್ಯ ಚ ಭಾರತ |

19008027c ಮನ್ವಂತರೇಷು ಸಂಹಾರಾಃ ಶ್ರೂಯಂತೇ ಭರತರ್ಷಭ ||

ಭಾರತ! ಭರತರ್ಷಭ! ಪ್ರತಿ ಮನ್ವಂತರಗಳಲ್ಲಿ ಪ್ರಜೆಗಳ ಸೃಷ್ಟಿ-ಸಂಹಾರಗಳಾಗುತ್ತವೆ ಎಂದು ಕೇಳಿಬರುತ್ತದೆ.

19008028a ಸಶೇಷಾಸ್ತತ್ರ ತಿಷ್ಠಂತಿ ದೇವಾಃ ಸಪ್ತರ್ಷಿಭಿಃ ಸಹ |

19008028c ತಪಸಾ ಬ್ರಹ್ಮಚರ್ಯೇಣ ಶ್ರುತೇನ ಚ ಸಮಾಹಿತಾಃ ||

ಮನ್ವಂತರಗಳು ಕೊನೆಗೊಂಡರೂ ತಪಸ್ಸು-ಬ್ರಹ್ಮಚರ್ಯ-ವೇದಗಳಿಂದ ಸಮಾಹಿತರಾಗಿರುವ ದೇವತೆಗಳು ಸಪ್ತರ್ಷಿಗಳೊಂದಿಗೆ ಉಳಿದುಕೊಳ್ಳುತ್ತಾರೆ.

19008029a ಪೂರ್ಣೇ ಯುಗಸಹಸ್ರೇ ತು ಕಲ್ಪೋ ನಿಃಶೇಷ ಉಚ್ಯತೇ |

19008029c ತತ್ರ ಸರ್ವಾಣಿ ಭೂತಾನಿ ದಗ್ಧಾನ್ಯಾದಿತ್ಯತೇಜಸಾ ||

ಸಹಸ್ರ ಚತುರ್ಯುಗಗಳ ಒಂದು ಕಲ್ಪವು ಪೂರ್ಣವಾಗಲು ನಿಃಶೇಷವಾಗಿ ಸರ್ವ ಭೂತಗಳೂ ಆದಿತ್ಯನ ತೇಜಸ್ಸಿನಿಂದ ಸುಟ್ಟುಹೋಗುತ್ತವೆ.

19008030a ಬ್ರಹ್ಮಾಣಮಗ್ರತಃ ಕೃತ್ವಾ ಸಹಾದಿತ್ಯಗಣೈರ್ವಿಭುಮ್ |

19008030c ಯೋಗಂ ಯೋಗೀಶ್ವರಂ ದೇವಮಜಂ ಕ್ಷೇತ್ರಜ್ಞಮಚ್ಯುತಮ್ |

19008030e ಪ್ರವಿಶಂತಿ ಸುರಶ್ರೇಷ್ಠಂ ಹರಿಂ ನಾರಾಯಣಂ ಪ್ರಭುಮ್ ||

ಬ್ರಹ್ಮನನ್ನು ಮುಂದಿಟ್ಟುಕೊಂಡು ಆದಿತ್ಯಗಣಗಳೊಂದಿಗೆ ಎಲ್ಲರೂ ವಿಭು, ಯೋಗ, ಯೋಗೀಶ್ವರ, ದೇವ, ಅಜ, ಕ್ಷೇತ್ರಜ್ಞ, ಅಚ್ಯುತ, ಸುರಶ್ರೇಷ್ಠ, ಪ್ರಭು, ಹರಿ ನಾರಾಯಣನನ್ನು ಪ್ರವೇಶಿಸುತ್ತಾರೆ.

19008031a ಯಃ ಸ್ರಷ್ಟಾ ಸರ್ವಭೂತಾನಾಂ ಕಲ್ಪಾಂತೇಷು ಪುನಃ ಪುನಃ |

19008031c ಅವ್ಯಕ್ತಃ ಶಾಶ್ವತೋ ದೇವಸ್ತಸ್ಯ ಸರ್ವಮಿದಂ ಜಗತ್ ||

ಕಲ್ಪಗಳ ಕೊನೆಯಲ್ಲಿ ಯಾರು ಪುನಃ ಪುನಃ ಸರ್ವಭೂತಗಳ ಸೃಷ್ಟಿಯನ್ನು ಮಾಡುತ್ತಾನೋ ಆ ಅವ್ಯಕ್ತ ಶಾಶ್ವತ ದೇವನಿಗೇ ಈ ಜಗತ್ತೆಲ್ಲವೂ ಸೇರಿದೆ.

19008032a ತತ್ರ ಸಂವರ್ತತೇ ರಾತ್ರಿಃ ಸಕಲೈಕಾರ್ಣವೇ ತದಾ |

19008032c ನಾರಾಯಣೋದರೇ ನಿದ್ರಾಂ ಬ್ರಾಹ್ಮ್ಯಂ ವರ್ಷಸಹಸ್ರಕಮ್ ||

ಎಲ್ಲವೂ ಏಕಾರ್ಣವದಲ್ಲಿ ಮುಳುಗಿರುವಾಗ ಬ್ರಹ್ಮನ ಸಹಸ್ರ ವರ್ಷಗಳ ರಾತ್ರಿಯಾಗುತ್ತದೆ. ಆಗ ನಾರಾಯಣನು ಯೋಗ ನಿದ್ರೆಯಲ್ಲಿರುತ್ತಾನೆ.

19008033a ತಾವಂತಮಿತಿ ಕಾಲಸ್ಯ ರಾತ್ರಿರಿತ್ಯಭಿಶಬ್ದಿತಾ |

19008033c ನಿದ್ರಾಯೋಗಮನುಪ್ರಾಪ್ತೋ ಯಸ್ಯಾಂ ಶೇತೇ ಪಿತಾಮಹಃ ||

ಎಷ್ಟುಕಾಲದವರೆಗೆ ಪಿತಾಮನು ನಿದ್ರಾಯೋಗದಲ್ಲಿ ಮಲಗಿರುತ್ತಾನೋ ಅಷ್ಟು ಕಾಲವನ್ನು ಬ್ರಹ್ಮನ ರಾತ್ರಿಯೆಂದು ಹೇಳುತ್ತಾರೆ.

19008034a ಸಾ ಚ ರಾತ್ರಿರಪಕ್ರಾಂತಾ ಸಹಸ್ರಯುಗಪರ್ಯಯಾ |

19008034c ತದಾ ಪ್ರಬುದ್ಧೋ ಭಗವಾನ್ಬ್ರಹ್ಮಾ ಲೋಕಪಿತಾಮಹಃ ||

ಆ ಸಹಸ್ರಯುಗಗಳ ರಾತ್ರಿಯು ಕಳೆಯಲು ಲೋಕಪಿತಾಮಹ ಭಗವಾನ್ ಬ್ರಹ್ಮನು ಎದ್ದೇಳುತ್ತಾನೆ.

19008035a ಪುನಃ ಸಿಸೃಕ್ಷಯಾ ಯುಕ್ತಃ ಸರ್ಗಾಯ ವಿದಧೇ ಮನಃ |

19008035c ಸೈವ ಸ್ಮೃತಿಃ ಪುರಾಣೇಯಂ ತದ್ವೃತ್ತಂ ತದ್ವಿಚೇಷ್ಟಿತಮ್ ||

ಆಗ ಬ್ರಹ್ಮನು ಪುನಃ ಸೃಷ್ಟಿಮಾಡಲು ಬಯಸಿ ಮನಸ್ಸಿನಲ್ಲಿಯೇ ಸೃಷ್ಟಿಯ ಕುರಿತು ಯೋಚಿಸುತ್ತಾನೆ. ಆಗ ಅವನ ಚೇಷ್ಟೆ-ನಡತೆಗಳು ಹಿಂದಿನ ಕಲ್ಪದ ನೆನಪಿನಿಂದ ಹಾಗೆಯೇ ಇರುತ್ತದೆ.

19008036a ದೇವಸ್ಥಾನಾನಿ ತಾನ್ಯೇವ ಕೇವಲಂ ಚ ವಿಪರ್ಯಯಃ |

19008036c ತತೋ ದಗ್ಧಾನಿ ಭೂತಾನಿ ಸರ್ವಾಣ್ಯಾದಿತ್ಯರಶ್ಮಿಭಿಃ ||

19008037a ದೇವರ್ಷಿಯಕ್ಷಗಂಧರ್ವಾಃ ಪಿಶಾಚೋರಗರಾಕ್ಷಸಾಃ |

19008037c ಜಾಯಂತೇ ಚ ಪುನಸ್ತಾತ ಯುಗೇ ಭರತಸತ್ತಮ ||

ತಾತ! ಭರತಸತ್ತಮ! ಆದಿತ್ಯನ ರಶ್ಮಿಗಳಿಂದ ಸುಟ್ಟುಹೋಗಿದ್ದ ದೇವತೆಗಳು, ದೇವರ್ಷಿಗಳು, ಯಕ್ಷ-ಗಂಧರ್ವರು, ಪಿಶಾಚ-ಉರಗ-ರಾಕ್ಷಸರು ಪುನಃ ಮೊದಲಿನಂತೆಯೇ ಆದರೆ ಸ್ವಲ್ಪವೇ ವ್ಯತ್ಯಾಸಗೊಂಡು ಹೊಸಯುಗದಲ್ಲಿ ಹುಟ್ಟುತ್ತಾರೆ.

19008038a ಯಥರ್ತಾವೃತುಲಿಂಗಾನಿ ನಾನಾರೂಪಾಣಿ ಪರ್ಯಯೇ |

19008038c ದೃಶ್ಯಂತೇ ತಾನಿ ತಾನ್ಯೇವ ತಥಾ ಬ್ರಾಹ್ಮೀಷು ರಾತ್ರಿಷು ||

ಹೇಗೆ ಆಯಾ ಋತುವು ಪ್ರಾರಂಭವಾದಾಗ ಅದರ ಚಿಹ್ನೆಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆಯೋ ಹಾಗೆ ಬ್ರಹ್ಮನ ರಾತ್ರಿಯು ಕಳೆಯಲು ಹಿಂದಿನ ಕಲ್ಪದ ಚಿಹ್ನೆಗಳೇ ಕಂಡುಬರುತ್ತವೆ.

19008039a ನಿಷ್ಕ್ರಮಿತ್ವಾ ಪ್ರಜಾಕಾರಃ ಪ್ರಜಾಪತಿರಸಂಶಯಮ್ |

19008039c ಯೇ ಚ ವೈ ಮಾನವಾ ದೇವಾಃ ಸರ್ವೇ ಚೈವ ಮಹರ್ಷಯಃ||

19008040a ತೇ ಸಂಗತಾಃ ಶುದ್ಧಸಂಗಾಃ ಶಶ್ವದ್ಧರ್ಮವಿಸರ್ಗತಃ |

19008040c ನ ಭವಂತಿ ಪುನಸ್ತಾತ ಯುಗೇ ಭರತಸತ್ತಮ ||

ತಾತ! ಭರತಸತ್ತಮ! ಹಿಂದೆ ಇದ್ದ ಮಾನವರು, ದೇವತೆಗಳು, ಮಹರ್ಷಿಗಳು ಎಲ್ಲರೂ ಪ್ರಜೆಗಳನ್ನು ಸೃಷ್ಟಿಸುವ ಪ್ರಜಾಪತಿಯಿಂದ ಹೊರಬರುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಶರೀರಗಳ ಸ್ವಾಭಾವಿಕ ದೋಷಗಳನ್ನು ತ್ಯಜಿಸಿ ಶುದ್ಧ ಬ್ರಹ್ಮನಲ್ಲಿ ಲೀನನಾದವರು ಪುನಃ ಯುಗದಲ್ಲಿ ಹುಟ್ಟುವುದಿಲ್ಲ.

19008041a ತತ್ಸರ್ವಂ ಕ್ರಮಯೋಗೇನ ಕಾಲಸಂಖ್ಯಾವಿಭಾಗವಿತ್ |

19008041c ಸಹಸ್ರಯುಗಸಂಖ್ಯಾನಂ ಕೃತ್ವಾ ದಿವಸಮೀಶ್ವರಃ ||

19008042a ರಾತ್ರಿಂ ಯುಗಸಹಸ್ರಾಂತಾಂ ಕೃತ್ವಾ ಚ ಭಗವಾನ್ ವಿಭುಃ |

19008042c ಸಂಹರತ್ಯಥ ಭೂತಾನಿ ಸೃಜತೇ ಚ ಪುನಃ ಪುನಃ ||

ಕಾಲಸಂಖ್ಯೆಗಳ ವಿಭಾಗಗಳನ್ನು ತಿಳಿದಿರುವ ಈಶ್ವರ ಭಗವಾನ್ ವಿಭುವು ಯೋಗದಿಂದ ಕ್ರಮವಾಗಿ ಸಹಸ್ರಚತುರ್ಯುಗಗಳ ಹಗಲು ಮತ್ತು ಸಹಸ್ರಚತುರ್ಯುಗಗಳ ರಾತ್ರಿಯನ್ನು ಮಾಡಿಕೊಂಡು ಪುನಃ ಪುನಃ ಭೂತಗಳನ್ನು ಸೃಷ್ಟಿಸುತ್ತಿರುತ್ತಾನೆ ಮತ್ತು ಸಂಹರಿಸುತ್ತಿರುತ್ತಾನೆ.

19008043a ವ್ಯಕ್ತಾವ್ಯಕ್ತೋ ಮಹಾದೇವೋ ಹರಿರ್ನಾರಾಯಣಃ ಪ್ರಭುಃ |

19008043c ತಸ್ಯ ತೇ ಕೀರ್ತಯಿಷ್ಯಾಮಿ ಮನೋರ್ವೈವಸ್ವತಸ್ಯ ಹ ||

ವ್ಯಕ್ತ, ಅವ್ಯಕ್ತ, ಮಹಾದೇವ, ಹರಿ, ನಾರಯಣ ಪ್ರಭುವಿನ ಅಂಶವೇ ಆದ ವೈವಸ್ವತ ಮನುವಿನ ಕುರಿತು ಹೇಳುತ್ತೇನೆ.

19008044a ವಿಸರ್ಗಂ ಭರತಶ್ರೇಷ್ಠ ಸಾಂಪ್ರತಸ್ಯ ಮಹಾದ್ಯುತೇ|

19008044c ವೃಷ್ಣಿವಂಶಪ್ರಸಂಗೇನ ಕಥ್ಯಮಾನಂ ಪುರಾತನಮ್ ||

ಭರತಶ್ರೇಷ್ಠ! ಮಹಾದ್ಯುತೇ! ವೃಷ್ಣಿವಂಶದ ಕುರಿತು ಹೇಳುವ ಸಂದರ್ಭದಲ್ಲಿ ಅವನ ಪುರಾತನ ಸೃಷ್ಟಿಯ ಕುರಿತು ವರ್ಣಿಸುತ್ತೇನೆ.

19008045a ಯತ್ರೋತ್ಪನ್ನೋ ಮಹಾತ್ಮಾ ಸ ಹರಿರ್ವೃಷ್ಣಿಕುಲೇ ಪ್ರಭುಃ |

19008045c ಸರ್ವಾಸುರವಿನಾಶಾಯ ಸರ್ವಲೋಕಹಿತಾಯ ಚ ||

ಸರ್ವ ಅಸುರರ ವಿನಾಶಕ್ಕಾಗಿ ಮತ್ತು ಸರ್ವಲೋಕಗಳ ಹಿತಕ್ಕಾಗಿ ಪ್ರಭು ಮಹಾತ್ಮಾ ಹರಿಯು ಇದೇ ವೃಷ್ಣಿಕುಲದಲ್ಲಿ ಉತ್ಪನ್ನನಾದನು.”

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಮನ್ವಂತರಗಣನಾಯಾಮಷ್ಟಮೋಽಧ್ಯಾಯಃ|

ಇದು ಶ್ರೀಮಹಾಭಾರತದ ಖಿಲಭಾಗ ಹರಿವಂಶದಲ್ಲಿ ಹರಿವಂಶಪರ್ವದಲ್ಲಿ ಮನ್ವಂತರಗಣನ ಎನ್ನುವ ಎಂಟನೆಯ ಅಧ್ಯಾಯವು.Related image

[1] ಕೃತಯುಗ, ತ್ರೇತಾಯುಗ, ದ್ವಾಪರಯುಗ, ಮತ್ತು ಕಲಿಯುಗ ಇವುಗಳ ಒಂದು ಆವರ್ತನೆಯು ಒಂದು ಚತುರ್ಯುಗ. ಇವುಗಳ ಪ್ರಮಾಣ ಹನ್ನೆರಡು ಸಾವಿರ ದೇವವರ್ಷಗಳು. ಅರ್ಥಾತ್, ದೇವತೆಗಳ ಹತ್ತು ಸಾವಿರ ವರ್ಷಗಳು ಒಂದು ಚತುರ್ಯುಗ, ಒಂದು ಸಾವಿರ ವರ್ಷಗಳು ಚತುರ್ಯುಗದ ಸಂಧ್ಯೆ ಮತ್ತು ಇನ್ನೊಂದು ಸಾವಿರ ವರ್ಷಗಳು ಚತುರ್ಯುಗದ ಸಂಧ್ಯಾಂಶ.

[2] ಒಂದು ಸಾವಿರವನ್ನು ಹದಿನಾಲ್ಕರಿಂದ ಭಾಗಿಸಿದಾಗ ದೊರೆಯುವ ಸಂಖ್ಯೆ = ೭೧.೪೨೮೬

Comments are closed.