Harivamsha: Chapter 5

ಹರಿವಂಶ: ಹರಿವಂಶ ಪರ್ವ

ಪೃಥೂಪಾಖ್ಯಾನಮ್

19005001 ವೈಶಂಪಾಯನ ಉವಾಚ|

19005001a ಆಸೀದ್ಧರ್ಮಸ್ಯ ಗೋಪ್ತಾ ವೈ ಪೂರ್ವಮತ್ರಿಸಮಃ ಪ್ರಭುಃ |

19005001c ಅತ್ರಿವಂಶಸಮುತ್ಪನ್ನಸ್ತ್ವಂಗೋ ನಾಮ ಪ್ರಜಾಪತಿಃ ||

ವೈಶಂಪಾಯನನು ಹೇಳಿದನು: “ಹಿಂದೆ ಅತ್ರಿವಂಶದಲ್ಲಿ ಹುಟ್ಟಿದ ಅತ್ರಿಯ ಸಮನಾದ ಧರ್ಮರಕ್ಷಕ ಅಂಗ ಎಂಬ ಹೆಸರಿನ ಪ್ರಭು ಪ್ರಜಾಪತಿಯಿದ್ದನು.

19005002a ತಸ್ಯ ಪುತ್ರೋಽಭವದ್ವೇನೋ ನಾತ್ಯರ್ಥಂ ಧರ್ಮಕೋವಿದಃ |

19005002c ಜಾತೋ ಮೃತ್ಯುಸುತಾಯಾಂ ವೈ ಸುನೀಥಾಯಾಂ ಪ್ರಜಾಪತಿಃ||

ಅವನ ಪುತ್ರನು ವೇನನಾದನು. ಆದರೆ ಅವನು ಧರ್ಮಾರ್ಥಕೋವಿದನಾಗಿರಲಿಲ್ಲ. ಆ ಪ್ರಜಾಪತಿಯು ಮೃತ್ಯುವಿನ ಮಗಳು ಸುನಥೆಯಲ್ಲಿ ಹುಟ್ಟಿದ್ದನು.

19005003a ಸ ಮಾತಾಮಹದೋಷೇಣ ವೇನಃ ಕಾಲಾತ್ಮಜಾತ್ಮಜಃ |

19005003c ಸ್ವಧರ್ಮಂ ಪೃಷ್ಠತಃ ಕೃತ್ವಾ ಕಾಮಾಲ್ಲೋಭೇಷ್ವವರ್ತತ ||

ಕಾಲನ ಮಗಳಲ್ಲಿ ಹುಟ್ಟಿದ ವೇನನು ತನ್ನ ಮಾತಾಮಹನ ದೋಷದಿಂದ ಸ್ವಧರ್ಮವನ್ನು ಹಿಂದೆಹಾಕಿ ಕಾಮ-ಲೋಭಗಳಿಂದ ವರ್ತಿಸುತ್ತಿದ್ದನು.

19005004a ಮರ್ಯಾದಾಂ ಸ್ಥಾಪಯಾಮಾಸ ಧರ್ಮೋಪೇತಾಂ ಸ ಪಾರ್ಥಿವಃ|

19005004c ವೇದಧರ್ಮಾನತಿಕ್ರಮ್ಯ ಸೋಽಧರ್ಮನಿರತೋಽಭವತ್ ||

ಆ ರಾಜನು ಧರ್ಮವಿಹೀನ ಮರ್ಯಾದೆಗಳನ್ನು ಸ್ಥಾಪಿಸತೊಡಗಿದನು. ವೇದಧರ್ಮಗಳನ್ನು ಅತಿಕ್ರಮಿಸಿ ಅವನು ಅಧರ್ಮದಲ್ಲಿ ನಿರತನಾದನು.

19005005a ನಿಃಸ್ವಾಧ್ಯಾಯವಷಟ್ಕಾರಾಸ್ತಸ್ಮಿನ್ರಾಜನಿ ಶಾಸತಿ |

19005005c ಪ್ರವೃತ್ತಂ ನ ಪಪುಃ ಸೋಮಂ ಹುತಂ ಯಜ್ಞೇಷು ದೇವತಾಃ ||

ಆ ರಾಜನ ಶಾಸನಕಾಲದಲ್ಲಿ ಸ್ವಾಧ್ಯಾಯ-ವಷಟ್ಕಾರಗಳೇ ಇರಲಿಲ್ಲ. ಯಜ್ಞಗಳಲ್ಲಿ ಆಹುತಿಯನ್ನಾಗಿತ್ತ ಸೋಮವನ್ನು ಕುಡಿಯಲು ದೇವತೆಗಳಿಗೆ ಆಗುತ್ತಿರಲಿಲ್ಲ.

19005006a ನ ಯಷ್ಟವ್ಯಂ ನ ಹೋತವ್ಯಮಿತಿ ತಸ್ಯ ಪ್ರಜಾಪತೇಃ |

19005006c ಆಸೀತ್ಪ್ರತಿಜ್ಞಾ ಕ್ರೂರೇಯಂ ವಿನಾಶೇ ಪ್ರತ್ಯುಪಸ್ಥಿತೇ ||

“ಯಜ್ಞಗಳನ್ನು ಮಾಡಬಾರದು! ಹೋಮಗಳನ್ನು ಮಾಡಬಾರದು!” ಎಂದು ಆ ಕ್ರೂರ ಪ್ರಜಾಪತಿಯ ಪ್ರತಿಜ್ಞೆಯಾಗಿತ್ತು. ಅವನ ವಿನಾಶವು ಬಹುಬೇಗ ಬಂದೊದಗಿತು.

19005007a ಅಹಮಿಜ್ಯಶ್ಚ ಯಷ್ಟಾ ಚ ಯಜ್ಞಶ್ಚೇತಿ ಕುರೂದ್ವಹ |

19005007c ಮಯಿ ಯಜ್ಞೋ ವಿಧಾತವ್ಯೋ ಮಯಿ ಹೋತವ್ಯಮಿತ್ಯಪಿ ||

ಕುರೂದ್ವಹ! “ನಾನೇ ಯಜ್ಞಗಳ ಆರಾಧ್ಯ. ನಾನೇ ಯಜ್ಞ. ನನಗಾಗಿಯೇ ಯಜ್ಞಗಳನ್ನು ಮಾಡಬೇಕು. ನನಗಾಗಿಯೇ ಹವಿಸ್ಸನ್ನು ನೀಡಬೇಕು.” ಎಂದು ಅವನು ಹೇಳುತ್ತಿದ್ದನು.

19005008a ತಮತಿಕ್ರಾಂತಮರ್ಯಾದಮಾದದಾನಮಸಾಂಪ್ರತಮ್ |

19005008c ಊಚುರ್ಮಹರ್ಷಯಃ ಸರ್ವೇ ಮರೀಚಿಪ್ರಮುಖಾಸ್ತದಾ ||

ಹೀಗೆ ಅವನು ಮರ್ಯಾದೆಗಳನ್ನು ಮುರಿದು ಅನುಚಿತ ಮಾರ್ಗಗಳಿಂದ ಎಲ್ಲವನ್ನೂ ತನ್ನದಾಗಿಸಿಕೊಳ್ಳಲು ತೊಡಗಿದಾಗ ಮರೀಚಿಯೇ ಮೊದಲಾದ ಮಹರ್ಷಿಗಳೆಲ್ಲರೂ ಅವನಿಗೆ ಹೇಳಿದರು:

19005009a ವಯಂ ದೀಕ್ಷಾಂ ಪ್ರವೇಕ್ಷ್ಯಾಮಃ ಸಂವತ್ಸರಗಣಾನ್ಬಹೂನ್ |

19005009c ಅಧರ್ಮಂ ಕುರು ಮಾ ವೇನ ನೈಷ ಧರ್ಮಃ ಸನಾತನಃ ||

“ನಾವು ಅನೇಕ ವರ್ಷಗಳ ದೀಕ್ಷೆಯನ್ನು ಪ್ರವೇಶಿಸುತ್ತಿದ್ದೇವೆ. ವೇನ! ಈಗ ನೀನು ಅಧರ್ಮವನ್ನು ಮಾಡಬೇಡ. ನಿನ್ನದು ಸನಾತನ ಧರ್ಮವಲ್ಲ!

19005010a ನಿಧನೇಽತ್ರ ಪ್ರಸೂತಸ್ತ್ವಂ ಪ್ರಜಾಪತಿರಸಂಶಯಮ್ |

19005010c ಪ್ರಜಾಶ್ಚ ಪಾಲಯಿಷ್ಯೇಽಹಮಿತಿ ತೇ ಸಮಯಃ ಕೃತಃ ||

ನೀನು ಪ್ರಜಾಪತಿಯ ಸಂಕುಲದಲ್ಲಿ ಹುಟ್ಟಿರುವೆ ಮತ್ತು “ಪ್ರಜೆಗಳನ್ನು ಪಾಲಿಸುತ್ತೇನೆ!” ಎಂಬ ಪ್ರತಿಜ್ಞೆಯನ್ನೂ ಮಾಡಿರುವೆ!”

19005011a ತಾಂಸ್ತದಾ ಬ್ರುವತಃ ಸರ್ವಾನ್ಮಹರ್ಷೀನಬ್ರವೀತ್ತದಾ |

19005011c ವೇನಃ ಪ್ರಹಸ್ಯ ದುರ್ಬುದ್ಧಿರಿಮಮರ್ಥಮನರ್ಥವಿತ್ ||

ಹೀಗೆ ಹೇಳುತ್ತಿದ್ದ ಆ ಋಷಿಗಳೆಲ್ಲರಿಗೂ, ತಾನು ಅನರ್ಥವನ್ನು ಮಾಡಿಕೊಳ್ಳುತ್ತಿದ್ದೇನೆ ಎಂಬ ಅರಿವಿಲ್ಲದ ದುರ್ಬುದ್ಧಿ ವೇನನು ಜೋರಾಗಿ ನಕ್ಕು ಹೇಳಿದನು:

19005012 ವೇನ ಉವಾಚ|

19005012a ಸ್ರಷ್ಟಾ ಧರ್ಮಸ್ಯ ಕಶ್ಚಾನ್ಯಃ ಶ್ರೋತವ್ಯಂ ಕಸ್ಯ ವೈ ಮಯಾ |

19005012c ಶ್ರುತವೀರ್ಯತಪಃಸತ್ಯೈರ್ಮಯಾ ವಾ ಕಃ ಸಮೋ ಭುವಿ ||

ವೇನನು ಹೇಳಿದನು: “ಧರ್ಮವನ್ನು ಸೃಷ್ಟಿಸುವವನು ನಾನಲ್ಲದೇ ಬೇರೆ ಯಾರಿದ್ದಾರೆ? ನಾನು ಯಾರ ಮಾತನ್ನು ಕೇಳಬೇಕು? ವೇದ, ವೀರ್ಯ, ತಪಸ್ಸು ಮತ್ತು ಸತ್ಯಗಳಲ್ಲಿ ನನಗೆ ಸಮನಾಗಿರುವವರು ಈ ಭೂಮಿಯಲ್ಲಿ ಯಾರಿದ್ದಾರೆ?

19005013a ಪ್ರಭವಂ ಸರ್ವಭೂತಾನಾಂ ಧರ್ಮಾಣಾಂ ಚ ವಿಶೇಷತಃ |

19005013c ಸಂಮೂಢಾ ನ ವಿದುರ್ನೂನಂ ಭವಂತೋ ಮಾಮಚೇತಸಃ ||

ಸರ್ವಭೂತಗಳ, ಅದರಲ್ಲೂ ವಿಶೇಷವಾಗಿ ಧರ್ಮಗಳ, ಉತ್ಪತ್ತಿಸ್ಥಾನನಾದ ನನ್ನನ್ನು ಚೆನ್ನಾಗಿ ತಿಳಿದುಕೊಳ್ಳದ ನೀವು ಅಚೇತಸರೂ ಸಮ್ಮೂಢರೂ ಆಗಿದ್ದೀರಿ.

19005014a ಇಚ್ಛಂದಹೇಯಂ ಪೃಥಿವೀಂ ಪ್ಲಾವಯೇಯಂ ತಥಾ ಜಲೈಃ |

19005014c ಖಂ ಭುವಂ ಚೈವ ರುಂಧೇಯಂ ನಾತ್ರ ಕಾರ್ಯಾ ವಿಚಾರಣಾ||

ನಾನು ಇಚ್ಛಿಸಿದರೆ ಈ ಪೃಥ್ವಿಯನ್ನು ಸುಡಬಲ್ಲೆ ಅಥವಾ ನೀರಿನಲ್ಲಿ ಮುಳಿಗಿಸಬಲ್ಲೆ! ಅಥವಾ ಈ ಆಕಾಶ-ಭೂಮಿಗಳೆರಡನ್ನೂ ಅಪ್ಪಳಿಸಬಲ್ಲೆ! ಈ ವಿಷಯದಲ್ಲಿ ವಿಚಾರಮಾಡಬೇಕಾದ್ದುದು ಏನೂ ಇಲ್ಲ.”

19005015a ಯದಾ ನ ಶಕ್ಯತೇ ಮೋಹಾದವಲೇಪಾಚ್ಚ ಪಾರ್ಥಿವಃ |

19005015c ಅನುನೇತುಂ ತದಾ ವೇನಸ್ತತಃ ಕ್ರುದ್ಧಾ ಮಹರ್ಷಯಃ ||

ಮೋಹ-ದರ್ಪಗಳಿಂದ ಮೋಹಿತನಾಗಿದ್ದ ಪಾರ್ಥಿವ ವೇನನನ್ನು ಧರ್ಮಮಾರ್ಗಕ್ಕೆ ಕರೆತರಲು ಹೀಗೆ ಅಶಕ್ಯರಾದ ಮಹರ್ಷಿಗಳು ಕ್ರುದ್ಧರಾದರು.

19005016a ನಿಗೃಹ್ಯ ತಂ ಮಹಾತ್ಮಾನೋ ವಿಸ್ಫುರಂತಂ ಮಹಾಬಲಮ್ |

19005016c ತತೋಽಸ್ಯ ಸವ್ಯಮೂರುಂ ತೇ ಮಮಂಥುರ್ಜಾತಮನ್ಯವಃ ||

ಹೀಗೆ ಬಡಬಡಿಸುತ್ತಿದ್ದ ಆ ಮಹಾಬಲನನ್ನು ಸಿಟ್ಟಿಗೆದ್ದ ಆ ಮಹಾತ್ಮ ಋಷಿಗಳು ಹಿಡಿದೆಳೆದು ಅವನ ಎಡ ತೊಡೆಯನ್ನು ಮಥಿಸಿದರು.

19005017a ತಸ್ಮಿಂಸ್ತು ಮಥ್ಯಮಾನೇ ವೈ ರಾಜ್ಞ ಊರೌ ಪ್ರಜಜ್ಞಿವಾನ್ |

19005017c ಹ್ರಸ್ವೋಽತಿಮಾತ್ರಃ ಪುರುಷಃ ಕೃಷ್ಣಶ್ಚಾತಿಬಭೂವ ಹ ||

ಮಥಿಸಲ್ಪಡುತ್ತಿದ್ದ ರಾಜನ ತೊಡೆಯಿಂದ ಗಿಡ್ಡನೂ, ಸಣ್ಣವನೂ ಮತ್ತು ಅತಿ ಕಪ್ಪಾಗಿರುವವನೂ ಆದ ಪುರುಷನೋರ್ವನು ಜನಿಸಿದನು.

19005018a ಸ ಭೀತಃ ಪ್ರಾಂಜಲಿರ್ಭೂತ್ವಾ ಸ್ಥಿತವಾಂಜನಮೇಜಯ |

19005018c ತಮತ್ರಿರ್ವಿಹ್ವಲಂ ದೃಷ್ಟ್ವಾ ನಿಷೀದೇತ್ಯಬ್ರವೀತ್ತದಾ ||

ಜನಮೇಜಯ! ಭೀತನಾದ ಅವನು ಅಂಜಲೀ ಬದ್ಧನಾಗಿ ನಿಂತಿದ್ದನು. ಅತಿ ವಿಹ್ವಲನಾಗಿದ್ದ ಅವನನ್ನು ನೋಡಿ ಮಹರ್ಷಿಗಳು “ನಿಷೀದ!” ಅರ್ಥಾತ್ “ಕುಳಿತುಕೋ!” ಎಂದು ಹೇಳಿದರು.

19005019a ನಿಷಾದವಂಶಕರ್ತಾಸೌ ಬಭೂವ ವದತಾಂ ವರ |

19005019c ಧೀವರಾನಸೃಜಚ್ಚಾಥ ವೇನಕಲ್ಮಷಸಂಭವಾನ್ ||

ಮಾತನಾಡುವವರಲ್ಲಿ ಶ್ರೇಷ್ಠ! ಅವನು ನಿಷಾದ ವಂಶದ ಕರ್ತಾರನಾದನು ಮತ್ತು ಧೀವರರಿಗೆ ಜನ್ಮವಿತ್ತನು ಅವರೆಲ್ಲರೂ ವೇನನ ಪಾಪದಿಂದ ಹುಟ್ಟಿದವರಾಗಿದ್ದರು.

19005020a ಯೇ ಚಾನ್ಯೇ ವಿಂಧ್ಯನಿಲಯಾಸ್ತುಷಾರಾಸ್ತುಂಬರಾಸ್ತಥಾ |

19005020c ಅಧರ್ಮರುಚಯೋ ಯೇ ಚ ವಿದ್ಧಿ ತಾನ್ವೇನಸಂಭವಾನ್  ||

ವಿಂಧ್ಯಾಚಲದಲ್ಲಿ ವಾಸಿಸುವ ಮತ್ತು ಅಧರ್ಮದಲ್ಲಿ ರುಚಿಯನ್ನಿಟ್ಟುಕೊಂಡಿರುವ ಇನ್ನೂ ಇತರರು – ತುಷಾರರು ಮತ್ತು  ತುಂಬುರರು – ವೇನನಿಂದ ಹುಟ್ಟಿದವರೆಂದು ತಿಳಿದುಕೋ.

19005021a ತತಃ ಪುನರ್ಮಹಾತ್ಮಾನಃ ಪಾಣಿಂ ವೇನಸ್ಯ ದಕ್ಷಿಣಮ್ |

19005021c ಅರಣೀಮಿವ ಸಂರಬ್ಧಾ ಮಮಂಥುಸ್ತೇ ಮಹರ್ಷಯಃ ||

ಅನಂತರ ಕುಪಿತರಾದ ಆ ಮಹಾತ್ಮ ಮಹರ್ಷಿಗಳು ಪುನಃ ವೇನನ ಎಡಗೈಯನ್ನು ಅರಣಿಯಂತೆ ಮಥಿಸಿದರು.

19005022a ಪೃಥುಸ್ತಸ್ಮಾತ್ಸಮುತ್ತಸ್ಥೌ ಕರಾಜ್ಜ್ವಲನಸಂನಿಭಃ |

19005022c ದೀಪ್ಯಮಾನಃ ಸ್ವವಪುಷಾ ಸಾಕ್ಷಾದಗ್ನಿರಿವ ಜ್ವಲನ್ ||

ಆ ಕೈಯಿಂದ ಅಗ್ನಿಯಂತೆ ಪ್ರಕಾಶಿಸುತ್ತಿದ್ದ ಪೃಥುವು ಉದ್ಭವಿಸಿದನು. ಅವನು ತನ್ನ ಶರೀರದ ಕಾಂತಿಯಲ್ಲಿ ಪ್ರಜ್ವಲಿಸುತ್ತಿದ್ದ ಅಗ್ನಿಯಂತೆಯೇ ಬೆಳಗುತ್ತಿದ್ದನು.

19005023a ಸ ಧನ್ವೀ ಕವಚೀ ಜಾತಃ ಪೃಥುರೇವ ಮಹಾಯಶಾಃ |

19005023c ಆದ್ಯಮಾಜಗವಂ ನಾಮ ಧನುರ್ಗೃಹ್ಯ ಮಹಾರವಮ್ |

19005023e ಶರಾಂಶ್ಚ ದಿವ್ಯಾನ್ರಕ್ಷಾರ್ಥಂ ಕವಚಂ ಚ ಮಹಾಪ್ರಭಮ್ ||

ಮಹಾಯಶಸ್ವೀ ಪೃಥುವು ಹುಟ್ಟುವಾಗಲೇ ಧನುಸ್ಸು-ಕವಚಗಳನ್ನು ಧರಿಸಿದ್ದನು. ರಕ್ಷಣೆಗಾಗಿ ಅವನು ಮಹಾಠೇಂಕಾರವುಳ್ಳ ಆಜಗವ ಎಂಬ ಪುರಾತನ ಧನುಸ್ಸನ್ನೂ, ದಿವ್ಯ ಶರಗಳನ್ನೂ ಮತ್ತು ಮಹಾಪ್ರಭೆಯಿದ್ದ ಕವಚವನ್ನೂ ಧರಿಸಿದ್ದನು.

19005024a ತಸ್ಮಿಂಜಾತೇಽಥ ಭೂತಾನಿ ಸಂಪ್ರಹೃಷ್ಟಾನಿ ಸರ್ವಶಃ |

19005024c ಸಮಾಪೇತುರ್ಮಹಾರಾಜ ವೇನಶ್ಚ ತ್ರಿದಿವಂ ಗತಃ ||

ಮಹಾರಾಜ! ಅವನು ಹುಟ್ಟುತ್ತಲೇ ಎಲ್ಲ ಕಡೆಗಳಿಂದ ಸಂಪ್ರಹೃಷ್ಟ ಭೂತಗಳು ಅವನ ಬಳಿಸಾರಿದವು. ವೇನನು ತ್ರಿದಿವಕ್ಕೆ ತೆರಳಿದನು.

19005025a ಸಮುತ್ಪನ್ನೇನ ಕೌರವ್ಯ ಸತ್ಪುತ್ರೇಣ ಮಹಾತ್ಮನಾ |

19005025c ತ್ರಾತಃ ಸ ಪುರುಷವ್ಯಾಘ್ರ ಪುನ್ನಾಮ್ನೋ ನರಕಾತ್ತದಾ ||

ಕೌರವ್ಯ! ಪುರುಷವ್ಯಾಘ್ರ! ಆ ಮಹಾತ್ಮ ಸತ್ಪುತ್ರನು ಹುಟ್ಟಿದುದರಿಂದ ವೇನನಿಗೆ “ಪು” ಎಂಬ ಹೆಸರಿನ ನರಕದಿಂದ ಬಿಡುಗಡೆಯಾಯಿತು.

19005026a ತಂ ಸಮುದ್ರಾಶ್ಚ ನದ್ಯಶ್ಚ ರತ್ನಾನ್ಯಾದಾಯ ಸರ್ವಶಃ |

19005026c ತೋಯಾನಿ ಚಾಭಿಷೇಕಾರ್ಥಂ ಸರ್ವ ಏವೋಪತಸ್ಥಿರೇ ||

ಪೃಥುವಿನ ಅಭಿಷೇಕಕ್ಕಾಗಿ ಎಲ್ಲಕಡೆಗಳಿಂದ ಸಮುದ್ರಗಳು ಮತ್ತು ನದಿಗಳು ಜಲ-ರತ್ನಗಳನ್ನು ತೆಗೆದುಕೊಂಡು ಅಲ್ಲಿ ಉಪಸ್ಥಿತರಾದವು.

19005027a ಪಿತಾಮಹಶ್ಚ ಭಗವಾಂದೇವೈರಾಂಗಿರಸೈಃ ಸಹ |

19005027c ಸ್ಥಾವರಾಣಿ ಚ ಭೂತಾನಿ ಜಂಗಮಾನಿ ತಥೈವ ಚ ||

19005028a ಸಮಾಗಮ್ಯ ತದಾ ವೈನ್ಯಮಭ್ಯಷಿಂಚನ್ನರಾಧಿಪಮ್ |

19005028c ಮಹತಾ ರಾಜರಾಜ್ಯೇನ ಪ್ರಜಾಪಾಲಂ ಮಹಾದ್ಯುತಿಮ್ ||

ಅಂಗಿರಸನ ಪುತ್ರ-ಪೌತ್ರರೊಂದಿಗೆ ಭಗವಾನ್ ಪಿತಾಮಹ ಮತ್ತು ಎಲ್ಲ ಸ್ಥಾವರ-ಜಂಗಮ ಭೂತಗಳೂ ಅಲ್ಲಿಗೆ ಬಂದು ಮಹಾದ್ಯುತಿ ಪ್ರಜಾಪಾಲಕ ಮಹಾತ್ಮ ವೈನ್ಯನನ್ನು ರಾಜರಾಜ ನರಾಧಿಪನನ್ನಾಗಿ ಅಭಿಷೇಕಿಸಿದರು.

19005029a ಸೋಽಭಿಷಿಕ್ತೋ ಮಹಾತೇಜಾ ವಿಧಿವದ್ಧರ್ಮಕೋವಿದೈಃ |

19005029c ಆದಿರಾಜ್ಯೇ ತದಾ ರಾಜ್ಞಾಂ ಪೃಥುರ್ವೈನ್ಯಃ ಪ್ರತಾಪವಾನ್ ||

ಹೀಗೆ ಧರ್ಮಕೋವಿದರಿಂದ ಆ ಮಹಾತೇಜಸ್ವೀ ಪ್ರತಾಪವಾನ್ ವೈನ್ಯ ಪೃಥುವು ಆದಿರಾಜನೆಂದು ಅಭಿಷಿಕ್ತನಾದನು.

19005030a ಪಿತ್ರಾಽಪರಂಜಿತಾಸ್ತಸ್ಯ ಪ್ರಜಾಸ್ತೇನಾನುರಂಜಿತಾಃ |

19005030c ಅನುರಾಗಾತ್ತತಸ್ತಸ್ಯ ನಾಮ ರಾಜೇತ್ಯಜಾಯತ ||

ತಂದೆಯಿಂದ ಪೀಡಿತರಾದ ಪ್ರಜೆಗಳನ್ನು ಅವನು ಅನುರಂಜಿಸಿದನು. ಅವನ ಮೇಲೆ ಪ್ರಜೆಗಳ ಅನುರಾಗವಿದ್ದುದರಿಂದ ಅವನ ಹೆಸರು “ರಾಜಾ” ಎಂದಾಯಿತು.

19005031a ಆಪಸ್ತಸ್ತಂಭಿರೇ ಚಾಸ್ಯ ಸಮುದ್ರಮಭಿಯಾಸ್ಯತಃ |

19005031c ಪರ್ವತಾಶ್ಚ ದದುರ್ಮಾರ್ಗಂ ಧ್ವಜಭಂಗಶ್ಚ ನಾಭವತ್ ||

ಅವನು ಸಮುದ್ರದ ಮೇಲೆ ಹೋಗುತ್ತಿರುವಾಗ ನೀರು ಸ್ತಂಭನಗೊಳ್ಳುತ್ತಿತ್ತು. ಆಕಾಶಮಾರ್ಗದಲ್ಲಿ ಹೋಗುವಾಗ ಪರ್ವತಗಳು ಅವನಿಗೆ ಮಾರ್ಗಮಾಡಿ ಕೊಡುತ್ತಿದ್ದವು. ಹೀಗೆ ಎಂದೂ ಅವನ ಧ್ವಜಭಂಗವಾಗಲಿಲ್ಲ.

19005032a ಅಕೃಷ್ಟಪಚ್ಯಾ ಪೃಥಿವೀ ಸಿಧ್ಯಂತ್ಯನ್ನಾನಿ ಚಿಂತಯಾ |

19005032c ಸರ್ವಕಾಮದುಘಾ ಗಾವಃ ಪುಟಕೇ ಪುಟಕೇ ಮಧು ||

ಉತ್ತದೇ ಭೂಮಿಯು ಬೆಳೆಯನ್ನು ನೀಡುತ್ತಿತ್ತು. ಯೋಚಿಸಿದ ಕೂಡಲೇ ಆಹಾರ ಪದಾರ್ಥಗಳು ಸಿದ್ಧವಾಗುತ್ತಿದ್ದವು. ಗೋವುಗಳು ಸರ್ವಕಾಮನೆಗಳನ್ನೂ ಪೂರೈಸುತ್ತಿದ್ದವು. ಮರಗಳ ಎಲೆ-ಎಲೆಗಳಿಂದಲೂ ಮಧುರ ರಸವು ಸುರಿಯುತ್ತಿದ್ದವು.

19005033a ಏತಸ್ಮಿನ್ನೇವ ಕಾಲೇ ತು ಯಜ್ಞೇ ಪೈತಾಮಹೇ ಶುಭೇ |

19005033c ಸೂತಃ ಸೂತ್ಯಾಂ ಸಮುತ್ಪನ್ನಃ ಸೌತ್ಯೇಽಹನಿ ಮಹಾಮತಿಃ ||

ಇವನ ಕಾಲದಲ್ಲಿಯೇ ಪಿತಾಮಹನ ಶುಭಯಜ್ಞದಲ್ಲಿ ಸೋಮದಿಂದ ಸೋಮರಸವನ್ನು ತೆಗೆಯುವ ದಿವಸ ಮಹಾಮತಿ ಸೂತನ ಜನ್ಮವಾಗಿತ್ತು.

19005034a ತಸ್ಮಿನ್ನೇವ ಮಹಾಯಜ್ಞೇ ಜಜ್ಞೇ ಪ್ರಾಜ್ಞೋಽಥ ಮಾಗಧಃ |

19005034c ಪೃಥೋಃ ಸ್ತವಾರ್ಥಂ ತೌ ತತ್ರ ಸಮಾಹೂತೌ ಸುರರ್ಷಿಭಿಃ ||

ಅದೇ ಮಹಾಯಜ್ಞದಲ್ಲಿ ಪ್ರಾಜ್ಞ ಮಾಗಧನೂ ಹುಟ್ಟಿದನು. ಪೃಥುವನ್ನು ಸ್ತುತಿಸುವ ಸಲುವಾಗಿಯೇ ಸುರರ್ಷಿಗಳು ಸೂತ-ಮಾಗಧ ಇಬ್ಬರನ್ನೂ ಆವಾಹಿಸಿದ್ದರು.

19005035a ತಾವೂಚುರೃಷಯಃ ಸರ್ವೇ ಸ್ತೂಯತಾಮೇಷ ಪಾರ್ಥಿವಃ |

19005035c ಕರ್ಮೈಸ್ತದನುರೂಪಂ ವಾಂ ಪಾತ್ರಂ ಚಾಯಂ ನರಾಧಿಪಃ ||

ಋಷಿಗಳೆಲ್ಲರೂ ಅವರಿಬ್ಬರಿಗೆ “ಈ ಪಾರ್ಥಿವನನ್ನು ಸ್ತುತಿಸಿ. ಈ ಕರ್ಮವು ನಿಮಗೆ ಅನುರೂಪವಾಗಿದೆ ಮತ್ತು ಈ ನಾರಧಿಪನೂ ಸ್ತುತಿಗಳಿಗೆ ಪಾತ್ರನಾಗಿದ್ದಾನೆ” ಎಂದರು.

19005036a ತಾವೂಚತುಸ್ತದಾ ಸರ್ವಾಂಸ್ತಾನೃಷೀನ್ಸೂತಮಾಗಧೌ |

19005036c ಆವಾಂ ದೇವಾನೃಷೀಂಶ್ಚೈವ ಪ್ರೀಣಯಾವಃ ಸ್ವಕರ್ಮಭಿಃ ||

ಆಗ ಆ ಸೂತ-ಮಾಗಧರು ಸರ್ವ ಋಷಿಗಳಿಗೆ ಹೇಳಿದರು: “ನಾವು ನಮ್ಮ ಕರ್ಮಗಳಿಂದ ದೇವತೆಗಳ ಮತ್ತು ಋಷಿಗಳನ್ನು ಪ್ರೀತಗೊಳಿಸುತ್ತೇವೆ.

19005037a ನ ಚಾಸ್ಯ ವಿದ್ಮೋ ವೈ ಕರ್ಮ ನ ತಥಾ ಲಕ್ಷಣಂ ಯಶಃ |

19005037c ಸ್ತೋತ್ರಂ ಯೇನಾಸ್ಯ ಕುರ್ಯಾವ ರಾಜ್ಞಸ್ತೇಜಸ್ವಿನೋ ದ್ವಿಜಾಃ ||

ಆದರೆ ದ್ವಿಜರೇ! ನಾವು ಯಾರ ಸ್ತೋತ್ರವನ್ನು ಮಾಡಬೇಕೋ ಆ ರಾಜನ ಕರ್ಮಗಳು, ಲಕ್ಷಣಗಳು ಮತ್ತು ಯಶಸ್ಸುಗಳು ಯಾವುವೂ ನಮಗೆ ತಿಳಿದಿಲ್ಲ.”

19005038a ಋಷಿಭಿಸ್ತೌ ನಿಯುಕ್ತೌ ಚ ಭವಿಷ್ಯೈಃ ಸ್ತೂಯತಾಮಿತಿ |

19005038c ಯಾನಿ ಕರ್ಮಾಣಿ ಕೃತವಾನ್ಪೃಥುಃ ಪಶ್ಚಾನ್ಮಹಾಬಲಃ ||

ಆಗ ಋಷಿಗಳು “ಮುಂದೆ ಆಗುವುದನ್ನು ಸ್ತುತಿಸಿ!” ಎಂದು ಅವರನ್ನು ನಿಯುಕ್ತಗೊಳಿಸಿದರು. ಆಗ ಸೂತ-ಮಾಗಧರು ಏನೆಂದು ಸ್ತುತಿಗೈದರೋ ನಂತರ ಅದರಂತೆಯೇ ಮಹಾಬಲ ಪೃಥುವು ನಡೆದುಕೊಳ್ಳುತ್ತಿದ್ದನು.

19005039a ಸತ್ಯವಾಗ್ದಾನಶೀಲೋಽಯಂ ಸತ್ಯಸಂಧೋ ನರೇಶ್ವರಃ |

19005039c ಶ್ರೀಮಾಂಜೈತ್ರಃ ಕ್ಷಮಾಶೀಲೋ ವಿಕ್ರಾಂತೋ ದುಷ್ಟಶಾಸನಃ ||

ಸೂತ-ಮಾಗಧರು ಈ ರೀತಿ ಪೃಥುವಿನ ಸ್ತುತಿಗೈದರು: “ಈ ನರೇಶ್ವರನು ಸತ್ಯವಾದಿಯೂ, ದಾನಶೀಲನೂ, ಸತ್ಯಸಂಧನೂ, ಶ್ರೀಮಂತನೂ, ವಿಜಯಶಾಲಿಯೂ, ಕ್ಷಮಾಶೀಲನೂ, ವಿಕ್ರಾಂತನೂ ಮತ್ತು ದುಷ್ಟಶಾಸನನೂ ಆಗಿದ್ದಾನೆ.

19005040a ಧರ್ಮಜ್ಞಶ್ಚ ಕೃತಜ್ಞಶ್ಚ ದಯಾವಾನ್ಪ್ರಿಯಭಾಷಣಃ |

19005040c ಮಾನ್ಯೋ ಮಾನಯಿತಾ ಯಜ್ವಾ ಬ್ರಹ್ಮಣ್ಯಃ ಸತ್ಯಸಂಗರಃ ||

ಇವನು ಧರ್ಮಜ್ಞನೂ, ಕೃತಜ್ಞನೂ, ದಯಾವಂತನೂ, ಪ್ರಿಯಭಾಷಣನೂ, ಮಾನ್ಯನೂ, ಇತರರನ್ನು ಗೌರವಿಸುವವನೂ, ಯಜ್ಞಗಳನ್ನು ಮಾಡುವವನೂ, ಬ್ರಾಹ್ಮಣ ಪ್ರಿಯನೂ ಸತ್ಯಸಂಗರನೂ ಆಗಿದ್ದಾನೆ.

19005041a ಶಮಃ ಶಾಂತಶ್ಚ ನಿರತೋ ವ್ಯವಹಾರಸ್ಥಿತೋ ನೃಪಃ |

19005041c ತತಃ ಪ್ರಭೃತಿ  ಲೋಕೇಷು  ಸ್ತವೇಷು ಜನಮೇಜಯ |

19005041e ಆಶೀರ್ವಾದಾಃ ಪ್ರಯುಜ್ಯಂತೇ ಸೂತಮಾಗಧಬಂದಿಭಿಃ ||

ಈ ರಾಜನು ಶಮಾವಂತ, ಶಾಂತ ಮತ್ತು ತನ್ನ ವ್ಯವಹಾರಗಳಲ್ಲಿ ನಿರತನಾಗಿರುವವನು.” ಜನಮೇಜಯ! ಅಂದಿನಿಂದ ಲೋಕದಲ್ಲಿ ಸೂತ-ಮಾಗಧ-ಬಂದಿಗಳಿಂದ ಸ್ತುತಿ ಮತ್ತು ಆಶೀರ್ವಾದಗಳ ಪದ್ಧತಿಯು ಪ್ರಾರಂಭವಾಯಿತು.

19005042a ತಯೋಃ ಸ್ತವೈಸ್ತೈಃ ಸುಪ್ರೀತಃ ಪೃಥುಃ ಪ್ರಾದಾತ್ಪ್ರಜೇಶ್ವರಃ |

19005042c ಅನೂಪದೇಶಂ ಸೂತಾಯ ಮಗಧಾನ್ಮಾಗಧಾಯ ಚ ||

ಅವರ ಸ್ತುತಿಗಳಿಂದ ಸಂಪ್ರೀತನಾದ ಪ್ರಜೇಶ್ವರ ಪೃಥುವು ಸೂತನಿಗೆ ಅನೂಪ ದೇಶವನ್ನೂ ಮಾಗಧನಿಗೆ ಮಗಧ ದೇಶವನ್ನೂ ನೀಡಿದನು.

19005043a ತಂ ದೃಷ್ಟ್ವಾ ಪರಮಪ್ರೀತಾಃ ಪ್ರಜಾಃ ಪ್ರಾಹುರ್ಮಹರ್ಷಯಃ|

19005043c ವೃತ್ತೀನಾಮೇಷ ವೋ ದಾತಾ ಭವಿಷ್ಯತಿ ಜನೇಶ್ವರಃ ||

ಅದನ್ನು ಕಂಡು ಪರಮಪ್ರೀತರಾದ ಮಹರ್ಷಿಗಳು ಪ್ರಜೆಗಳಿಗೆ “ಈ ಜನೇಶ್ವರನು ನಿಮಗೆ ವೃತ್ತಿಗಳನ್ನು ನೀಡುವವನಾಗುತ್ತಾನೆ!” ಎಂದು ಹೇಳಿದರು.

19005044a ತತೋ ವೈನ್ಯಂ ಮಹಾರಾಜ ಪ್ರಜಾಃ ಸಮಭಿದುದ್ರುವುಃ |

19005044c ತ್ವಂ ನೋ ವೃತ್ತಿಂ ವಿಧತ್ಸ್ವೇತಿ ಮಹರ್ಷಿವಚನಾತ್ತದಾ ||

ಮಹಾರಾಜ! ಮಹರ್ಷಿಗಳು ಹೀಗೆ ಹೇಳಲು ಪ್ರಜೆಗಳು ವೈನ್ಯನ ಬಳಿ ಓಡಿ ಬಂದು “ನಮಗೆ ವೃತ್ತಿಯನ್ನು ವಿಧಿಸು!” ಎಂದು ಕೇಳಿಕೊಂಡರು.

19005045a ಸೋಽಭಿದ್ರುತಃ ಪ್ರಜಾಭಿಸ್ತು ಪ್ರಜಾಹಿತಚಿಕೀರ್ಷಯಾ |

19005045c ಧನುರ್ಗೃಹ್ಯ ಪೃಷತ್ಕಾಂಶ್ಚ ಪೃಥಿವೀಮಾರ್ದ್ದಯದ್ಬಲೀ ||

ಹಾಗೆ ಪ್ರಜೆಗಳು ಬಂದು ಕೇಳಿಕೊಳ್ಳಲು ಪ್ರಜೆಗಳ ಹಿತವನ್ನು ಮಾಡಲು ಬಯಸಿದ ಬಲಶಾಲೀ ಪೃಥುವು ಧನುರ್ಬಾಣಗಳನ್ನು ಹಿಡಿದು ಪೃಥ್ವಿಯನ್ನು ಕಾಡಿಸಿದನು.

19005046a ತತೋ ವೈನ್ಯಭಯತ್ರಸ್ತಾ ಗೌರ್ಭೂತ್ವಾ ಪ್ರಾದ್ರವನ್ಮಹೀ |

19005046c ತಾಂ ಪೃಥುರ್ಧನುರಾದಾಯ ದ್ರವಂತೀಮನ್ವಧಾವತ ||

ಆಗ ವೈನ್ಯನ ಭಯದಿಂದ ನಡುಗಿದ ಮಹಿಯು ಗೋವಾಗಿ ಓಡಿಹೋದಳು. ಓಡಿ ಹೋಗುತ್ತಿದ್ದ ಅವಳನ್ನು ಪೃಥುವು ಧನುವನ್ನೆತ್ತಿಕೊಂಡು ಬೆನ್ನಟ್ಟಿದನು.

19005047a ಸಾ ಲೋಕಾನ್ಬ್ರಹ್ಮಲೋಕಾದೀನ್ಗತ್ವಾ ವೈನ್ಯಭಯಾತ್ತದಾ |

19005047c ಪ್ರದದರ್ಶಾಗ್ರತೋ ವೈನ್ಯಂ ಪ್ರಗೃಹೀತಶರಾಸನಮ್ ||

19005048a ಜ್ವಲದ್ಭಿರ್ನಿಶಿತೈರ್ಬಾಣೈರ್ದೀಪ್ತತೇಜಸಮಚ್ಯುತಮ್ |

19005048c ಮಹಾಯೋಗಂ ಮಹಾತ್ಮಾನಂ ದುರ್ಧರ್ಷಮಮರೈರಪಿ ||

ವೈನ್ಯನ ಭಯದಿಂದ ಬ್ರಹ್ಮಲೋಕವೇ ಮೊದಲಾದ ಲೋಕಗಳಿಗೆ ಹೋದರೂ ಧನುಸ್ಸು ಮತ್ತು ಪ್ರಜ್ವಲಿತ ನಿಶಿತ ಬಾಣಗಳನ್ನು ಹಿಡಿದು ತೇಜಸ್ಸಿನಿಂದ ಬೆಳಗುತ್ತಿದ್ದ ಅಚ್ಯುತ ಮಹಾಯೋಗಿ ಮಹಾತ್ಮ ಅಮರರಿಗೂ ದುರ್ಧರ್ಷ ವೈನ್ಯನನ್ನು ಅವಳು ಎದಿರು ಕಾಣುತ್ತಿದ್ದಳು.

19005049a ಅಲಭಂತೀ ತು ಸಾ ತ್ರಾಣಂ ವೈನ್ಯಮೇವಾನ್ವಪದ್ಯತ |

19005049c ಕೃತಾಂಜಲಿಪುಟಾ ಭೂತ್ವಾ ಪೂಜ್ಯಾ ಲೋಕೈಸ್ತ್ರಿಭಿಃ ಸದಾ ||

19005050a ಉವಾಚ ವೈನ್ಯಂ ನಾಧರ್ಮ್ಯಂ ಸ್ತ್ರೀವಧಂ ಕರ್ತುಮರ್ಹಸಿ |

19005050c ಕಥಂ ಧಾರಯಿತಾ ಚಾಸಿ ಪ್ರಜಾ ರಾಜನ್ವಿನಾ ಮಯಾ ||

ತ್ರಾತರನ್ನು ಕಾಣದೇ ತ್ರಿಲೋಕಗಳಿಂದಲೂ ಸದಾ ಪೂಜಿತ ಪೃಥ್ವಿಯು ಅಂಜಲೀ ಬದ್ಧಳಾಗಿ ವೈನ್ಯನನ್ನೇ ಮೊರೆಹೊಕ್ಕು, ವೈನ್ಯನಿಗೆ ಹೇಳಿದಳು: “ರಾಜನ್! ಅಧರ್ಮವಾದ ಸ್ತ್ರೀವಧೆಯನ್ನು ಮಾಡಬೇಡ. ನಾನಿಲ್ಲದೇ ಹೋದರೆ ಪ್ರಜೆಗಳು ಎಲ್ಲಿ ವಾಸಿಸುತ್ತಾರೆ?

19005051a ಮಯಿ ಲೋಕಾಃ ಸ್ಥಿತಾ ರಾಜನ್ಮಯೇದಂ ಧಾರ್ಯತೇ ಜಗತ್|

19005051c ಮದ್ವಿನಾಶೇ ವಿನಶ್ಯೇಯುಃ ಪ್ರಜಾಃ ಪಾರ್ಥಿವ ವಿದ್ಧಿ ತತ್ ||

ರಾಜನ್! ನನ್ನಲ್ಲಿಯೇ ಲೋಕಗಳು ನೆಲೆಗೊಂಡಿವೆ ಮತ್ತು ನಾನೇ ಈ ಜಗತ್ತನ್ನು ಧರಿಸಿದ್ದೇನೆ. ಪಾರ್ಥಿವ! ನಾನು ವಿನಾಶವಾದರೆ ಪ್ರಜೆಗಳೂ ವಿನಾಶವಾಗುತ್ತಾರೆ ಎನ್ನುವುದನ್ನು ತಿಳಿದುಕೋ.

19005052a ನ ತ್ವಮರ್ಹಸಿ ಮಾಂ ಹಂತುಂ ಶ್ರೇಯಶ್ಚೇತ್ತ್ವಂ ಚಿಕೀರ್ಷಸಿ |

19005052c ಪ್ರಜಾನಾಂ ಪೃಥಿವೀಪಾಲ ಶೃಣು ಚೇದಂ ವಚೋ ಮಮ ||

ಪೃಥಿವೀಪಾಲ! ಪ್ರಜೆಗಳ ಶ್ರೇಯಸ್ಸನ್ನು ಬಯಸುವೆಯಾದರೆ ನನ್ನನ್ನು ನೀನು ಕೊಲ್ಲಬಾರದು. ನನ್ನ ಈ ಮಾತನ್ನು ಕೇಳು.

19005053a ಉಪಾಯತಃ ಸಮಾರಬ್ಧಾಃ ಸರ್ವೇ ಸಿಧ್ಯಂತ್ಯುಪಕ್ರಮಾಃ |

19005053c ಉಪಾಯಂ ಪಶ್ಯ ಯೇನ ತ್ವಂ ಧಾರಯೇಥಾಃ ಪ್ರಜಾ ನೃಪ ||

ಉಪಾಯದಿಂದ ಪ್ರಾರಂಭಗೊಂಡ ಎಲ್ಲ ಕಾರ್ಯಗಳೂ ಸಿದ್ಧಿಗೊಳ್ಳುತ್ತವೆ. ನೃಪ! ಪ್ರಜೆಗಳ ಪಾಲನೆಯ ಕುರಿತಾದ ಉಪಾಯವನ್ನು ಯೋಚಿಸು.

19005054a ಹತ್ವಾಪಿ ಮಾಂ ನ ಶಕ್ತಸ್ತ್ವಂ ಪ್ರಜಾ ಧಾರಯಿತುಂ ನೃಪ |

19005054c ಅನುಭೂತಾ ಭವಿಷ್ಯಾಮಿ ಯಚ್ಛ ಕೋಪಂ ಮಹಾದ್ಯುತೇ ||

ನೃಪ! ಮಹಾದ್ಯುತೇ! ನನ್ನನ್ನು ಕೊಂದೂ ಕೂಡ ನೀನು ಪ್ರಜೆಗಳನ್ನು ಪಾಲಿಸಲು ಶಕ್ಯನಾಗುವುದಿಲ್ಲ. ನಿನ್ನ ಕೋಪವನ್ನು ನೀಗಿಸು. ನೀನು ಹೇಳಿದಂತೆಯೇ ಮಾಡುತ್ತೇನೆ.

19005055a ಅವಧ್ಯಾಸ್ಚ ಸ್ತ್ರಿಯಃ ಪ್ರಾಹುಸ್ತಿರ್ಯಗ್ಯೋನಿಗತೇಷ್ವಪಿ |

19005055c ಸತ್ತ್ವೇಷು ಪೃಥಿವೀಪಾಲ ನ ಧರ್ಮಂ ತ್ಯಕ್ತುಮರ್ಹಸಿ ||

ಪೃಥಿವೀಪಾಲ! ತಿರ್ಯಗ್ಯೋನಿಗಳಲ್ಲಿಯೂ ಸ್ತ್ರೀಯು ಅವಧ್ಯಳೆನೆಸಿಕೊಂಡಿದ್ದಾಳೆ. ಆದುದರಿಂದ ನೀನು ಧರ್ಮವನ್ನು ತ್ಯಜಿಸಬೇಡ.”

19005056a ಏವಂ ಬಹುವಿಧಂ ವಾಕ್ಯಂ ಶ್ರುತ್ವಾ ರಾಜಾ ಮಹಾಮನಾಃ |

19005056c ಕೋಪಂ ನಿಗೃಹ್ಯ ಧರ್ಮಾತ್ಮಾ ವಸುಧಾಮಿದಮಬ್ರವೀತ್ ||

ಈ ರೀತಿಯ ಬಹುವಿಧದ ಮಾತನ್ನು ಕೇಳಿ ಮಹಾಮನಸ್ವಿ ಧರ್ಮಾತ್ಮ ರಾಜನು ಕೋಪವನ್ನು ನಿಯಂತ್ರಿಸಿಕೊಂಡು ವಸುಧೆಗೆ ಈ ರೀತಿ ಹೇಳಿದನು.

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶಪರ್ವಣಿ ಪೃಥೂಪಾಖ್ಯಾನೇ ಪಂಚಮೋಽಧ್ಯಾಯಃ|

ಇದು ಶ್ರೀಮಹಾಭಾರತದ ಖಿಲಭಾಗ ಹರಿವಂಶದಲ್ಲಿ ಹರಿವಂಶಪರ್ವದಲ್ಲಿ ಪೃಥೂಪಾಖ್ಯಾನ ಎನ್ನುವ ಐದನೆಯ ಅಧ್ಯಾಯವು.Related image

Comments are closed.