ಹರಿವಂಶ: ಹರಿವಂಶ ಪರ್ವ

೧೧

ಧುಂಧುವಧಃ

19011001 ಜನಮೇಜಯ ಉವಾಚ|

19011001a ಕಥಂ ಬಹುಯುಗೇ ಕಾಲೇ ಸಮತೀತೇ ದ್ವಿಜೋತ್ತಮ |

19011001c ನ ಜರಾ ರೇವತೀಂ ಪ್ರಾಪ್ತಾ ರೈವತಂ ಚ ಕಕುದ್ಮಿನಮ್ ||

ಜನಮೇಜಯನು ಹೇಳಿದನು: “ದ್ವಿಜೋತ್ತಮ! ಅನೇಕ ಯುಗಗಳ ಕಾಲವು ಕಳೆದುಹೋದರೂ ರೇವತೀ ಮತ್ತು ರೈವತ ಕಕುದ್ಮಿಯರು ಹೇಗೆ ವೃದ್ಧರಾಗದೇ ಇದ್ದರು?

19011002a ಮೇರುಂ ಗತಸ್ಯ ವಾ ತಸ್ಯ ಶರ್ಯಾತೇಃ ಸಂತತಿಃ ಕಥಮ್ |

19011002c ಸ್ಥಿತಾ ಪೃಥಿವ್ಯಾಮದ್ಯಾಪಿ ಶ್ರೋತುಮಿಚ್ಛಾಮಿ ತತ್ತ್ವತಃ ||

ಶರ್ಯಾತಿಯ ಪ್ರಪೌತ್ರನು ಮೇರುಪರ್ವತಕ್ಕೆ ಹೊರಟು ಹೋದರೂ ಪೃಥ್ವಿಯಲ್ಲಿ ಈಗಲೂ ಅವನ ಸಂತತಿಯು ಹೇಗೆ ಇದೆ ಎನ್ನುವುದರ ಕುರಿತು ತತ್ತ್ವತಃ ಕೇಳಬಯಸುತ್ತೇನೆ.”

19011003 ವೈಶಂಪಾಯನ ಉವಾಚ|

19011003a ನ ಜರಾ ಕ್ಷುತ್ಪಿಪಾಸೇ ವಾ ನ ಮೃತ್ಯುರ್ಭರತರ್ಷಭ  |

19011003c ಋತುಚಕ್ರಂ ನ ಭವತಿ ಬ್ರಹ್ಮಲೋಕೇ ಸದಾನಘ ||

ವೈಶಂಪಾಯನನು ಹೇಳಿದನು: “ಭರತರ್ಷಭ! ಅನಘ! ಬ್ರಹ್ಮಲೋಕದಲ್ಲಿ ಸದಾ ಮುಪ್ಪು, ಹಸಿವೆ, ಬಾಯಾರಿಕೆ ಮತ್ತು ಮೃತ್ಯುವು ಇಲ್ಲ. ಅಲ್ಲಿ ಋತುಚಕ್ರವೂ ನಡೆಯುವುದಿಲ್ಲ.

19011004a ಕಕುದ್ಮಿನಸ್ತು ತಂ ಲೋಕಂ ರೈವತಸ್ಯ ಗತಸ್ಯ ಹ |

19011004c ಹತಾ ಪುಣ್ಯಜನೈಸ್ತಾತ ರಾಕ್ಷಸೈಃ ಸಾ ಕುಶಸ್ಥಲೀ ||

ತಾತ! ರೈವತ ಕಕುದ್ಮಿಯು ಬ್ರಹ್ಮ ಲೋಕಕ್ಕೆ ಹೋಗಿದ್ದಾಗ ಕುಶಸ್ಥಲಿಯು ಯಕ್ಷ-ರಾಕ್ಷಸರಿಂದ ನಾಶಗೊಂಡಿತು.

19011005a ತಸ್ಯ ಭ್ರಾತೃಶತಂ ಚಾಸೀದ್ಧಾರ್ಮಿಕಸ್ಯ ಮಹಾತ್ಮನಃ |

19011005c ತದ್ವಧ್ಯಮಾನಂ ರಕ್ಷೋಭಿರ್ದಿಶಃ ಪ್ರಾದ್ರವದಚ್ಯುತಮ್ ||

ಆ ಧಾರ್ಮಿಕ ಮಹಾತ್ಮ ರೈವತನಿಗೆ ನೂರು ಸಹೋದರರಿದ್ದರು. ರಾಕ್ಷಸರಿಂದ ಪೀಡಿತರಾದ ಅವರು ದಿಕ್ಕಾಪಾಲಾಗಿ ಓಡಿಹೋದರು.

19011006a ವಿದ್ರುತಸ್ಯ ತು ರಾಜೇಂದ್ರ ತಸ್ಯ  ಭ್ರಾತೃಶತಸ್ಯ ವೈ |

19011006c ತೇಷಾಂ ತು ತೇ ಭಯಾಕ್ರಾಂತಾಃ ಕ್ಷತ್ರಿಯಾಸ್ತತ್ರ ತತ್ರ ಹ ||

ರಾಜೇಂದ್ರ! ಆ ನೂರು ಸಹೋದರರು ಓಡಿಹೋಗಲು ರಾಕ್ಷಸರ ಭಯದಿಂದ ಆಕ್ರಂತರಾದ ಕ್ಷತ್ರಿಯರು ಅಲ್ಲಲ್ಲಿ ನೆಲೆಸಿದರು.

19011007a ಅನ್ವವಾಯಸ್ತು ಸುಮಹಾಂಸ್ತತ್ರ ತತ್ರ ವಿಶಾಂಪತೇ |

19011007c ಯೇಷಾಮೇತೇ ಮಹಾರಾಜ ಶರ್ಯಾತಾ ಇತಿ ವಿಶ್ರುತಾಃ ||

ವಿಶಾಂಪತೇ! ಮಹಾರಾಜ! ಅಲ್ಲಲ್ಲಿ ನೆಲೆಸಿದ್ದ ಈ ಮಹಾ ಕುಲದಲ್ಲಿ ಹುಟ್ಟಿದವರೇ ಶರ್ಯಾತರು ಎಂದು ವಿಶ್ರುತರಾದರು.

19011008a ಕ್ಷತ್ರಿಯಾ ಭರತಶ್ರೇಷ್ಠ ದಿಕ್ಷು ಸರ್ವಾಸು ಧಾರ್ಮಿಕಾಃ |

19011008c ಸರ್ವಶಃ ಪರ್ವತಗಣಾನ್ಪ್ರವಿಷ್ಟಾಃ ಕುರುನಂದನ||

ಭರತಶ್ರೇಷ್ಠ! ಕುರುನಂದನ! ಈ ಎಲ್ಲ ಧಾರ್ಮಿಕ ಕ್ಷತ್ರಿಯರೂ ಎಲ್ಲಕಡೆ ಪರ್ವತ-ಕಣಿವೆಗಳಲ್ಲಿ ವಾಸಿಸುತ್ತಿದ್ದರು.

19011009a ನಾಭಾಗಾರಿಷ್ಟಪುತ್ರೌ ದ್ವೌ ವೈಶ್ಯೌ ಬ್ರಾಹ್ಮಣತಾಂ ಗತೌ |

19011009c ಕರೂಷಸ್ಯ ತು ಕಾರೂಷಾಃ ಕ್ಷತ್ರಿಯಾ ಯುದ್ಧದುರ್ಮದಾಃ ||

ನಾಭಾಗ ಮತ್ತು ಅರಿಷ್ಟರ ಇಬ್ಬರು ಮಕ್ಕಳೂ ಮೊದಲು ವೈಶ್ವತ್ವವನ್ನು ಪಡೆತು ನಂತರ ಬ್ರಾಹ್ಮಣತ್ವವನ್ನು ಪಡೆದರು. ಕರೂಷನ ಸಂತಾನವು ಯುದ್ಧದುರ್ಮದ ಕ್ಷತ್ರಿಯ ಕಾರೂಷರು.

19011010a ಪ್ರಾಂಶೋರೇಕೋಽಭವತ್ಪುತ್ರಃ ಪ್ರಜಾತಿರಿತಿ ನಃ ಶ್ರುತಮ್ |

19011010c ಪೃಷಧ್ರೋ ಹಿಂಸಯಿತ್ವಾ ತು ಗುರೋರ್ಗಾಂ ಜನಮೇಜಯ ||

19011011a ಶಾಪಾಚ್ಛೂದ್ರತ್ವಮಾಪನ್ನೋ ನವೈತೇ ಪರಿಕೀರ್ತಿತಾಃ |

19011011c ವೈವಸ್ವತಸ್ಯ ತನಯಾ ಮನೋರ್ವೈ ಭರತರ್ಷಭ ||

ಜನಮೇಜಯ! ಪ್ರಾಂಶುವಿಗೆ ಪ್ರಜಾತಿ ಎಂಬ ಓರ್ವನೇ ಪುತ್ರನಾದನೆಂದು ಕೇಳಿದ್ದೇವೆ. ಪೃಷಧ್ರನು ಗುರುವಿನ ಗೋವನ್ನು ಹಿಂಸಿಸಿದ ಕಾರಣ ಶಾಪವನ್ನು ಪಡೆದು ಶೂದ್ರತ್ವವನ್ನು ಹೊಂದಿದನು ಎಂದು ಹೇಳುತ್ತಾರೆ. ಭರತರ್ಷಭ! ಇದೂವರೆಗೆ ನಾನು ವೈವಸ್ವತ ಮನುವಿನ ಒಂಭತ್ತು ಮಕ್ಕಳ ಕುರಿತು ಹೇಳಿದೆ.

19011012a ಕ್ಷುವತಶ್ಚ ಮನೋಸ್ತಾತ ಇಕ್ಷ್ವಾಕುರಭವತ್ಸುತಃ |

19011012c ತಸ್ಯ ಪುತ್ರಶತಂ ತ್ವಾಸೀದಿಕ್ಷ್ವಾಕೋರ್ಭೂರಿದಕ್ಷಿಣಮ್ ||

ತಾತ! ಮನುವಿನ ಸೀನುವಿಕೆಯಿಂದ ಅವನ ಸುತ ಇಕ್ಷ್ವಾಕುವು ಹುಟ್ಟಿದ್ದನು. ಇಕ್ಷ್ವಾಕುವಿಗೆ ಭೂರಿದಕ್ಷಿಣ ನೂರು ಪುತ್ರರಾದರು.

19011013a ತೇಷಾಂ ವಿಕುಕ್ಷಿರ್ಜ್ಯೇಷ್ಠಸ್ತು ವಿಕುಕ್ಷಿತ್ವಾದಯೋಧತಾಮ್ |

19011013c ಪ್ರಾಪ್ತಃ ಪರಮಧರ್ಮಜ್ಞಃ ಸೋಽಯೋಧ್ಯಾಧಿಪತಿಃ ಪ್ರಭುಃ ||

ಅವರಲ್ಲಿ ವಿಕುಕ್ಷಿಯು ಜ್ಯೇಷ್ಠನಾಗಿದ್ದನು. ಅವನ ವಕ್ಷಸ್ಥಲವು ವಿಶಾಲವಾಗಿದ್ದುದರಿಂದ ಯುದ್ಧದಲ್ಲಿ ಅವನು ಜಯಿಸಲಸಾಧ್ಯನಾಗಿದ್ದನು. ಅಯೋಧನಾದ ಆ ಪ್ರಭುವೇ ಅಯೋಧ್ಯೆಯ ಅಧಿಪತಿಯಾದನು.

19011014a ಶಕುನಿಪ್ರಮುಖಾಸ್ತಸ್ಯ ಪುತ್ರಾಃ ಪಂಚಾಶದುತ್ತಮಾಃ |

19011014c ಉತ್ತರಾಪಥದೇಶಸ್ಥಾ ರಕ್ಷಿತಾರೋ ಮಹೀಪತೇ |

ಅವನಿಗೆ ಶಕುನಿಯೇ ಮೊದಲಾದ ಐವತ್ತು ಉತ್ತಮ ಪುತ್ರರಿದ್ದರು. ಮಹೀಪತೇ! ಉತ್ತರಾಪಥ ಪ್ರದೇಶದಲ್ಲಿದ್ದುಕೊಂಡು ಅವರು ಉತ್ತರದಿಕ್ಕನ್ನು ರಕ್ಷಿಸುತ್ತಿದ್ದರು.

19011015a ಚತ್ವಾರಿಂಶದಥಾಷ್ಟೌ ಚ ದಕ್ಷಿಣಸ್ಯಾಂ ತಥಾ ದಿಶಿ |

19011015c ಶಶಾದಪ್ರಮುಖಾಶ್ಚಾನ್ಯೇ ರಕ್ಷಿತಾರೋ ವಿಶಾಂಪತೇ ||

ವಿಶಾಂಪತೇ! ಶಶಾದನೇ ಮೊದಲಾದ ಅವನ ನಲವತ್ತೆಂಟು ಅನ್ಯ ಪುತ್ರರು ದಕ್ಷಿಣಭಾಗದಲ್ಲಿದ್ದುಕೊಂಡು ಆ ದಿಕ್ಕನ್ನು ರಕ್ಷಿಸಿದರು.

19011016a ಇಕ್ಷ್ವಾಕುಸ್ತು ವಿಕುಕ್ಷಿರ್ವೈ ಅಷ್ಟಕಾಯಾಮಥಾದಿಶತ್ |

19011016c ಮಾಂಸಮಾನಯ ಶ್ರಾದ್ಧಾರ್ಥಂ ಮೃಗಾನ್ಹತ್ವಾ ಮಹಾಬಲ ||

ಮಹಾಬಲ ಇಕ್ಷ್ವಾಕುವು ಅಷ್ಟಕನ ಶ್ರಾದ್ಧಕ್ಕಾಗಿ ತನ್ನ ಮಗ ವಿಕುಕ್ಷಿಗೆ ಮೃಗವನ್ನು ಕೊಂದು ಮಾಂಸವನ್ನು ತರಲು ಅದೇಶವಿತ್ತನು.

19011017a ಶ್ರಾದ್ಧಕರ್ಮಣಿ ಚೋದ್ದಿಷ್ಟ ಅಕೃತೇ ಶ್ರಾದ್ಧಕರ್ಮಣಿ |

19011017c ಭಕ್ಷಯಿತ್ವಾ ಶಶಂ ತಾತ ಶಶಾದೋ ಮೃಗಯಾಂ ಗತಃ ||

ತಾತ! ಆದರೆ ವಿಕುಕ್ಷಿಯು ಶ್ರಾದ್ಧಕರ್ಮಕ್ಕಾಗಿ ಕೊಂದ ವೃಗ ಶಶವನ್ನು ಶ್ರಾದ್ಧದ ಮೊದಲೇ ತಿಂದು ಹಿಂದಿರುಗಿದನು ಮತ್ತು ಶಶಾದನಾದನು.

19011018a ಇಕ್ಷ್ವಾಕುಣಾ ಪರಿತ್ಯಕ್ತೋ ವಸಿಷ್ಠವಚನಾತ್ ಪ್ರಭುಃ |

19011018c ಇಕ್ಷ್ವಾಕೌ ಸಂಸ್ಥಿತೇ ತಾತ ಶಶಾದಃ ಪುರಮಾವಸತ್ ||

ವಸಿಷ್ಠನ ವಚನದಂತೆ ಪ್ರಭು ಇಕ್ಷ್ವಾಕುವಿನಿಂದ ಪರಿತ್ಯಕ್ತನಾದ ಶಶಾದನು ಇಕ್ಷ್ವಾಕುವಿನ ನಂತರ ಪುರಕ್ಕೆ ಹಿಂದಿರುಗಿದನು.

19011019a ಶಶಾದಸ್ಯ ತು ದಾಯಾದಃ ಕಕುತ್ಸ್ಥೋ ನಾಮ ವೀರ್ಯವಾನ್|

19011019c ಇಂದ್ರಸ್ಯ ವೃಷಭೂತಸ್ಯ ಕಕುತ್ಸ್ಥೋ ಽಜಯತಾಸುರಾನ್ ||

19011020a ಪೂರ್ವಂ ದೇವಾಸುರೇ ಯುದ್ಧೇ ಕಕುತ್ಸ್ಥಸ್ತೇನ ಹಿ ಸ್ಮೃತಃ |

19011020c ಅನೇನಾಸ್ತು ಕಕುತ್ಸ್ಥಸ್ಯ ಪೃಥುರಾನೇನಸಃ ಸ್ಮೃತಃ ||

ಶಶಾದನಿಗೆ ಕುಕುತ್ಸ್ಥ ಎಂಬ ಹೆಸರಿನ ವೀರ್ಯವಾನ್ ಪುತ್ರನಿದ್ದನು. ಹಿಂದೆ ದೇವಾಸುರರ ಯುದ್ಧದಲ್ಲಿ ಇಂದ್ರನು ಕಕುತ್ಸ್ಥನನ್ನು ಸ್ಮರಿಸಿದ್ದನು. ಆಗ ಇಂದ್ರನು ಕಕುತ್ಸ್ಥನನ್ನು ವೃಷಭನನ್ನಾಗಿಸಿ ಅವನ ಬೆನ್ನಮೇಲೆ ಕುಳಿತು ಅಸುರರನ್ನು ಗೆದ್ದಿದನು. ಆದುದರಿಂದ ಅವನ ಹೆಸರು ಕಕುತ್ಸ್ಥ ಎಂದಾಯಿತು. ಕಕುತ್ಸ್ಥನಿಗೆ ಅನೇನ ಎಂಬ ಮಗನಿದ್ದನು. ಅನೇನನ ಮಗನು ಪೃಥು ಎಂದು ಹೇಳುತ್ತಾರೆ.

19011021a ವಿಷ್ಟರಾಶ್ವಃ ಪೃಥೋಃ ಪುತ್ರಸ್ತಸ್ಮಾದಾರ್ದ್ರಸ್ತ್ವಜಾಯತ |

19011021c ಆರ್ದ್ರಸ್ಯ ಯುವನಾಶ್ವಸ್ತು ಶ್ರಾವಸ್ತಸ್ಯ ತು ಚಾತ್ಮಜಃ ||

ಪೃಥುವಿನ ಮಗ ವಿಷ್ಟರಾಶ್ವ, ಮತ್ತು ಆರ್ದ್ರನು ವಿಷ್ಟರಾಶ್ವನ ಮಗ. ಆರ್ದ್ರನ ಮಗ ಯುವನಾಶ್ವ ಮತ್ತು ಶ್ರಾವನು ಯುವನಾಶ್ವನ ಮಗನಾಗಿದ್ದನು.

19011022a ಜಜ್ಞೇ ಶ್ರಾವಸ್ತಕೋ ರಾಜಾ ಶ್ರಾವಸ್ತೀ ಯೇನ ನಿರ್ಮಿತಾ |

19011022c ಶ್ರಾವಸ್ತಸ್ಯ ತು ದಾಯಾದೋ ಬೃಹದಶ್ವೋ ಮಹಯಶಾಃ ||

ಅವನು ಶ್ರಾವಸ್ತಕನೆಂಬ ಹೆಸರಿನಿಂದ ರಾಜನಾದನು ಮತ್ತು ಶ್ರಾವಸ್ತಿಯು ಅವನಿಂದಲೇ ನಿರ್ಮಿತಗೊಂಡಿತು.

19011023a ಕುವಲಾಶ್ವಃ ಸುತಸ್ತಸ್ಯ ರಾಜಾ ಪರಮಧಾರ್ಮಿಕಃ |

19011023c ಯಃ ಸ ಧುಂಧುವಧಾದ್ರಾಜಾ ಧುಂಧುಮಾರತ್ವಮಾಗತಃ ||

ರಾಜ ಶ್ರಾವಸ್ತನ ಮಗನು ರಾಜ ಕುವಲಾಶ್ವ. ಪರಮಧಾರ್ಮಿಕನಾದ ಅವನು ಧುಂಧುವಧೆಯಿಂದ ಧುಂಧುಮಾರನೆಂದಾದನು.”

19011024 ಜನಮೇಜಯ ಉವಾಚ|

19011024a ಧುಂಧೋರ್ವಧಮಹಂ ಬ್ರಹ್ಮನ್ಶ್ರೋತುಮಿಚ್ಛಾಮಿ ತತ್ತ್ವತಃ|

19011024c ಯದರ್ಥಂ ಕುವಲಾಶ್ವಃ ಸಂಧುಂಧುಮಾರತ್ವಮಾಗತಃ ||

ಜನಮೇಜಯನು ಹೇಳಿದನು: “ಬ್ರಹ್ಮನ್! ಯಾವ ಕಾರಣದಿಂದ ಕುವಲಾಶ್ವನು ಧುಂಧುಮಾರನೆಂದಾದನೋ ಆ ಧುಂಧುವಿನ ವಧೆಯಕುರಿತು ತತ್ತ್ವತಃ ಕೇಳಲು ಬಯಸುತ್ತೇನೆ.”

19011025 ವೈಶಂಪಾಯನ ಉವಾಚ|

19011025a ಕುವಲಾಶ್ವಸ್ಯ ಪುತ್ರಾಣಾಂ ಶತಮುತ್ತಮಧನ್ವಿನಾಮ್ |

19011025c ಸರ್ವೇ ವಿದ್ಯಾಸು ನಿಷ್ಣಾತಾ ಬಲವಂತೋ ದುರಾಸದಾಃ ||

ವೈಶಂಪಾಯನನು ಹೇಳಿದನು: “ಕುವಲಾಶ್ವನಿಗೆ ಉತ್ತಮ ಧನ್ವಿಗಳಾದ ನೂರು ಪುತ್ರರಿದ್ದರು. ಅವರು ಸರ್ವ ವಿದ್ಯೆಗಳಲ್ಲಿ ನಿಷ್ಣಾತರಾಗಿದ್ದರು. ಬಲವಂತರೂ ಯುದ್ಧದಲ್ಲಿ ದುರಾಸದರೂ ಆಗಿದ್ದರು.

19011026a ಬಭೂವುರ್ಧಾರ್ಮಿಕಾಃ ಸರ್ವೇ ಯಜ್ವಾನೋ ಭೂರಿದಕ್ಷಿಣಾಃ|

19011026c ಕುವಲಾಶ್ವಂ ಸುತಂ ರಾಜ್ಯೇ ಬೃಹದಶ್ವೋ ನ್ಯಯೋಜಯತ್ ||

ಅವರೆಲ್ಲರೂ ಧಾರ್ಮಿಕರಾಗಿದ್ದು ಭೂರಿದಕ್ಷಿಣ ಯಜ್ಞಗಳನ್ನು ನೆರವೇರಿಸಿದ್ದರು. ಬೃಹದಶ್ವನು ಕುವಲಾಶ್ವನನ್ನು ರಾಜ್ಯಭಾರಕ್ಕೆ ನಿಯೋಜಿಸಿದನು.

19011027a ಪುತ್ರಸಂಕ್ರಾಮಿತಶ್ರೀಸ್ತು ವನಂ ರಾಜಾ ಸಮಾವಿಶತ್ |

19011027c ತಮುತ್ತಂಕೋಽಥ ವಿಪ್ರರ್ಷಿಃ ಪ್ರಯಾಂತಂ ಪ್ರತ್ಯವಾರಯತ್ ||

ರಾಜಾ ಬೃಹದಶ್ವನು ರಾಜ್ಯಶ್ರೀಯನ್ನು ತನ್ನ ಮಗನಿಗೆ ಒಪ್ಪಿಸಿ ವನವನ್ನು ಸೇರಿದನು. ಆಗ ವಿಪ್ರರ್ಷಿ ಉತ್ತಂಕನು ಅವನ ವನಪ್ರಯಾಣವನ್ನು ತಡೆದನು.

19011028 ಉತ್ತಂಕ ಉವಾಚ|

19011028a ಭವತಾ ರಕ್ಷಣಂ ಕಾರ್ಯಂ ತತ್ತಾವತ್ಕರ್ತುಮರ್ಹಸಿ |

19011028c ನಿರುದ್ವಿಗ್ನಸ್ತಪಶ್ಚರ್ತುಂ ನ ಹಿ ಶಕ್ನೋಷಿ ಪಾರ್ಥಿವ ||

ಉತ್ತಂಕನು ಹೇಳಿದನು: “ಪಾರ್ಥಿವ! ನೀನು ನಮ್ಮ ರಕ್ಷಣೆಯ ಕಾರ್ಯವನ್ನು ಮಾಡಬೇಕು. ಅದನ್ನು ಮಾಡದೇ ನೀನು ನಿರುದ್ವಿಗ್ನನಾಗಿ ತಪಸ್ಸನ್ನಾಚರಿಸಲು ಶಕ್ಯನಾಗುವುದಿಲ್ಲ.

19011029a ತ್ವಯಾ ಹಿ ಪೃಥಿವೀ ರಾಜನ್ರಕ್ಷ್ಯಮಣಾ ಮಹಾತ್ಮನಾ |

19011029c ಭವಿಷ್ಯತಿ ನಿರುದ್ವಿಗ್ನಾ ನಾರಣ್ಯಂ ಗಂತುಮರ್ಹಸಿ ||

ರಾಜನ್! ನಿನ್ನಂತಹ ಮಹಾತ್ಮರು ಪೃಥ್ವಿಯನ್ನು ರಕ್ಷಿಸಿದರೇ ಇಲ್ಲಿ ಶಾಂತಿಯುಂಟಾಗುತ್ತದೆ. ಆದುದರಿಂದ ಈಗ ನೀನು ಅರಣ್ಯಕ್ಕೆ ಹೋಗಬಾರದು.

19011030a ಪಾಲನೇ ಹಿ ಮಹಾಂಧರ್ಮಃ ಪ್ರಜಾನಾಮಿಹ ದೃಶ್ಯತೇ |

19011030c ನ ತಥಾ ದೃಶ್ಯತೇಽರಣ್ಯೇ ಮಾ ತೇಽಭೂದ್ಬುದ್ಧಿರೀದೃಶೀ||

ಇಲ್ಲಿ ಇದ್ದುಕೊಂಡು ಪ್ರಜೆಗಳನ್ನು ಪಾಲಿಸುವುದೇ ಮಹಾ ಧರ್ಮವೆಂದು ಕಾಣುತ್ತಿದೆ. ಅರಣ್ಯದಲ್ಲಿದ್ದರೆ ಹಾಗಾಗುವುದಿಲ್ಲ ಎಂದು ಕಾಣುತ್ತಿದೆ. ಆದುದರಿಂದ ಈ ರೀತಿಯ ನಿರ್ಧಾರವನ್ನು ಕೈಗೊಳ್ಳಬೇಡ!

19011031a ಈದೃಶೋ ನ ಹಿ ರಾಜೇಂದ್ರ ಧರ್ಮಃ ಕ್ವಚನ ದೃಶ್ಯತೇ |

19011031c ಪ್ರಜಾನಾಂ ಪಾಲನೇ ಯೋ ವೈ ಪುರಾ ರಾಜರ್ಷಿಭಿಃ ಕೃತಃ |

19011031e ರಕ್ಷಿತವ್ಯಾಃ ಪ್ರಜಾ ರಾಜ್ಞಾ ತಾಸ್ತ್ವಂ ರಕ್ಷಿತುಮರ್ಹಸಿ ||

ರಾಜೇಂದ್ರ! ಹಿಂದೆ ರಾಜರ್ಷಿಗಳು ಮಾಡಿದ ಪ್ರಜಾಪಾಲನೆ ಮತ್ತು ಧರ್ಮಪಾಲನೆಯು ಬೇರೆ ಎಲ್ಲಿಯೂ ಕಾಣಸಿಗುವುದಿಲ್ಲ. ರಾಜರು ಪ್ರಜೆಗಳನ್ನು ರಕ್ಷಿಸಬೇಕು. ನೀನೂ ಕೂಡ ಅವರನ್ನು ರಕ್ಷಿಸಬೇಕು.

19011032a ಮಮಾಶ್ರಮಸಮೀಪೇ ಹಿ ಸಮೇಷು ಮರುಧನ್ವಸು |

19011032c ಸಮುದ್ರೋ ವಾಲುಕಾಪೂರ್ಣ ಉಜ್ಜಾನಕ ಇತಿ ಶ್ರುತಃ |

19011032e ದೇವತಾನಾಮವಧ್ಯಶ್ಚ ಮಹಾಕಾಯೋ ಮಹಾಬಲಃ ||

19011033a ಅಂತರ್ಭೂಮಿಗತಸ್ತತ್ರ ವಾಲುಕಾಂತರ್ಹಿತೋ ಮಹಾನ್ |

19011033c ರಾಕ್ಷಸಸ್ಯ ಮಧೋಃ ಪುತ್ರೋ ಧುಂಧುನಾಮಾ ಮಹಾಸುರಃ |

19011033e ಶೇತೇ ಲೋಕವಿನಾಶಾಯ ತಪ ಆಸ್ಥಾಯ ದಾರುಣಮ್ ||

ನನ್ನ ಆಶ್ರಮದ ಸಮೀಪದ ಮರುಪ್ರದೇಶದ ಸಮತಟ್ಟಿನಲ್ಲಿ ಉಜ್ಜಾನಕ ಎಂದು ವಿಖ್ಯಾತವಾದ ಮರಳಿನಿಂದ ತುಂಬಿದ ಸಮುದ್ರವಿದೆ. ಅಲ್ಲಿ ದೇವತೆಗಳಿಗೂ ಅವಧ್ಯನಾದ ಮಹಾಕಾಯ ಮಹಾಬಲ ರಾಕ್ಷಸನಿದ್ದಾನೆ. ಅವನು ಮಹಾನ್ ರಾಕ್ಷಸ ಮಧುವಿನ ಪುತ್ರ. ಆ ಮಹಾಸುರನ ಹೆಸರು ಧುಂಧು. ಅವನು ಮರಳಿನಲ್ಲಿ ಮುಚ್ಚಿಕೊಂಡು ಭೂಮಿಯ ಒಳಗೆ ಮಲಗಿ ಲೋಕವಿನಾಶಕ್ಕಾಗಿ ದಾರುಣ ತಪಸ್ಸನ್ನು ಆಚರಿಸುತ್ತಿದ್ದಾನೆ.

19011034a ಸಂವತ್ಸರಸ್ಯ ಪರ್ಯಂತೇ ಸ ನಿಶ್ವಾಸಂ ಪ್ರಮುಂಚತಿ |

19011034c ಯದಾ ತದಾ ಭೂಶ್ಚಲತಿ ಸಶೈಲವನಕಾನನಾ ||

ವರ್ಷದ ನಂತರ ಅವನು ನಿಶ್ವಾಸವನ್ನು ಬಿಟ್ಟಾಗ ಶೈಲ-ವನ-ಕಾನನಗಳೊಂದಿಗೆ ಭೂಮಿಯು ನಡುಗುತ್ತದೆ.

19011035a ತಸ್ಯ ನಿಃಶ್ವಾಸವಾತೇನ ರಜ ಉದ್ಧೂಯತೇ ಮಹತ್ |

19011035c ಆದಿತ್ಯಪಥಮಾವೃತ್ಯ ಸಪ್ತಾಹಂ ಭೂಮಿಕಂಪನಮ್ ||

ಅವನ ನಿಃಶ್ವಾಸದಿಂದ ಮಹಾ ಧೂಳು ಮೇಲೆದ್ದು ಸೂರ್ಯನ ಪಥವನ್ನೂ ಮುತ್ತುತ್ತದೆ ಮತ್ತು ಒಂದು ವಾರದ ವರೆಗೆ ಭೂಕಂಪನವಾಗುತ್ತಿರುತ್ತದೆ.

19011036a ಸವಿಸ್ಫುಲಿಂಗಂ ಸಾಂಗಾರಂ ಸಧೂಮಮತಿದಾರುಣಮ್ |

19011036c ತೇನ ತಾತ ನ ಶಕ್ನೋಮಿ ತಸ್ಮಿನ್ಸ್ಥಾತುಂ ಸ್ವಕಾಶ್ರಮೇ ||

ಆ ಸಮಯದಲ್ಲಿ ಭೂಮಿಯೊಳಗಿನಿಂದ ಕಿಡಿಗಳು ಮತ್ತು ಹೊಗೆಯೊಂದಿಗೆ ಕೆಂಡಗಳು ಹೊರಹೊಮ್ಮುತ್ತಿರುತ್ತವೆ. ತಾತ! ಇದರಿಂದಾಗಿ ನಾನು ನನ್ನ ಆಶ್ರಮದಲ್ಲಿ ಇರಲು ಶಕ್ಯನಾಗಿಲ್ಲ.

19011037a ತಂ ಮಾರಯ ಮಹಾಕಾಯಂ ಲೋಕಾನಾಂ ಹಿತಕಾಮ್ಯಯಾ |

19011037c ಲೋಕಾಃ ಸ್ವಸ್ಥಾ ಭವಂತ್ಯದ್ಯ ತಸ್ಮಿನ್ವಿನಿಹತೇಽಸುರೇ ||

ಲೋಕಗಳ ಹಿತವನ್ನು ಬಯಸಿ ನೀನು ಆ ಮಹಾಕಾಯನನ್ನು ಸಂಹರಿಸು. ಆ ಅಸುರನ ವಧೆಯಿಂದ ಇಂದು ಲೋಕಗಳು ಸುಖಿಯಾಗಲಿ.

19011038a ತ್ವಂ ಹಿ ತಸ್ಯ ವಧಾಯೈಕಃ ಸಮರ್ಥಃ ಪೃಥಿವೀಪತೇ |

19011038c ವಿಷ್ಣುನಾ ಚ ವರೋ ದತ್ತೋ ಮಹ್ಯಂ ಪೂರ್ವಯುಗೇಽನಘ||

ಪೃಥಿವೀಪತೇ! ಅನಘ! ನೀನೊಬ್ಬನೇ ಅವನನ್ನು ವಧಿಸಲು ಸಮರ್ಥನು. ಏಕೆಂದರೆ ಪೂರ್ವಯುಗದಲ್ಲಿ ವಿಷ್ಣುವು ನನಗೆ ಒಂದು ವರವನ್ನಿತ್ತಿದ್ದನು.

19011039a ಯಸ್ತ್ವಂ ಮಹಾಸುರಂ ರೌದ್ರಂ ಹನಿಷ್ಯಸಿ ಮಹಾಬಲಮ್ |

19011039c ತಸ್ಯ ತ್ವಂ ವರದಾನೇನ ತೇಜ ಆಪ್ಯಾಯಯಿಷ್ಯಸಿ ||

ಈ ರೌದ್ರ ಮಹಾಬಲ ಮಹಾಸುರನನ್ನು ಸಂಹರಿಸುವಾಗ ವಿಷ್ಣುವಿನ ವರದಾನದಿಂದ ನೀನು ಅವನ ತೇಜಸ್ಸನ್ನು ಪಡೆದುಕೊಳ್ಳುತ್ತೀಯೆ.

19011040a ನ ಹಿ ಧುಂಧುರ್ಮಹಾತೇಜಾಸ್ತೇಜಸಾಲ್ಪೇನ ಶಕ್ಯತೇ |

19011040c ನಿರ್ದಗ್ಧುಂ ಪೃಥಿವೀಪಾಲ ಸ ಹಿ ವರ್ಷಶತೈರಪಿ |

19011040e ವೀರ್ಯಂ ಹಿ ಸುಮಹತ್ತಸ್ಯ ದೇವೈರಪಿ ದುರಾಸದಮ್ ||

ಪೃಥಿವೀಪಾಲ! ಮಹಾತೇಜಸ್ವೀ ಧುಂಧುವನ್ನು ಅಲ್ಪತೇಜಸ್ಸಿನಿಂದ ನೂರು ವರ್ಷಗಳು ಹೋರಾಡಿದರೂ ಸುಡಲು ಸಾಧ್ಯವಿಲ್ಲ. ಅವನ ಆ ಮಹಾವೀರ್ಯವು ದೇವತೆಗಳಿಗೂ ದುರಾಸದವಾದುದು.”

19011041a ಸ ಏವಮುಕ್ತೋ ರಾಜರ್ಷಿರುತ್ತಂಕೇನ ಮಹಾತ್ಮನಾ |

19011041c ಕುವಲಾಶ್ವಂ ಸುತಂ ಪ್ರಾದಾತ್ತಸ್ಮೈ ಧುಂಧುನಿವಾರಣೇ ||

ಮಹಾತ್ಮ ಉತ್ತಂಕನು ಹೀಗೆ ಹೇಳಲು ಆ ರಾಜರ್ಷಿಯು ಧುಂಧುವನ್ನು ನಿವಾರಿಸಲು ಅವನಿಗೆ ತನ್ನ ಮಗ ಕುವಲಾಶ್ವನನ್ನು ನೀಡಿದನು.

19011042 ಬೃಹದಶ್ವ ಉವಾಚ|

19011042a ಭಗವನ್ನ್ಯಸ್ತಶಸ್ತ್ರೋಽಹಮಯಂ ತು ತನಯೋ ಮಮ |

19011042c ಭವಿಷ್ಯತಿ ದ್ವಿಜಶ್ರೇಷ್ಠ ಧುಂಧುಮಾರೋ ನ ಸಂಶಯಃ ||

ಬೃಹದಶ್ವನು ಹೇಳಿದನು: “ಭಗವನ್! ನಾನು ಈಗಾಗಲೇ ಶಸ್ತ್ರತ್ಯಾಗ ಮಾಡಿಬಿಟ್ಟಿದ್ದೇನೆ. ದ್ವಿಜಶ್ರೇಷ್ಠ! ಆದರೆ ನನ್ನ ಈ ಮಗನು ಧುಂಧುಮಾರನಾಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.”

19011043a ಸ ತಂ ವ್ಯಾದಿಶ್ಯ ತನಯಂ ರಾಜರ್ಷಿರ್ಧುಂಧುಮಾರಣೇ |

19011043c ಜಗಾಮ ಪರ್ವತಾಯೈವ  ತಪಸೇ ಸಂಶಿತವ್ರತಃ ||

ಹೀಗೆ ಮಗನಿಗೆ ಧುಂಧುವನ್ನು ವಧಿಸಲು ಆದೇಶವನ್ನಿತ್ತು ಆ ಸಂಶಿತವ್ರತ ರಾಜರ್ಷಿಯು ತಪಸ್ಸಿಗಾಗಿ ಪರ್ವತಕ್ಕೆ ಹೊರಟುಹೋದನು.

19011044a ಕುವಲಾಶ್ವಸ್ತು ಪುತ್ರಾಣಾಂ ಶತೇನ ಸಹ ಪಾರ್ಥಿವಃ |

19011044c ಪ್ರಾಯಾದುತ್ತಂಕಸಹಿತೋ ಧುಂಧೋಸ್ತಸ್ಯ ವಿನಿಗ್ರಹೇ ||

ಪಾರ್ಥಿವ ಕುವಲಾಶ್ವನಾದರೋ ತನ್ನ ನೂರು ಪುತ್ರರೊಂದಿಗೆ ಧುಂಧುವನ್ನು ನಿಗ್ರಹಿಸಲು ಉತ್ತಂಕನೊಡಗೂಡಿ ಹೊರಟನು.

19011045a ತಮಾವಿಶತ್ತದಾ ವಿಷ್ಣುರ್ಭಗವಾಂಸ್ತೇಜಸಾ ಪ್ರಭುಃ |

19011045c ಉತ್ತಂಕಸ್ಯ ನಿಯೋಗಾದ್ವೈ ಲೋಕಾಸ್ಯ ಹಿತಕಾಮ್ಯಯಾ ||

ಲೋಕಗಳ ಹಿತಕಾಮನೆಯಿಂದ ಮತ್ತು ಉತ್ತಂಕನ ನಿಯೋಗದಿಂದ ಪ್ರಭು ಭಗವಾನ್ ವಿಷ್ಣುವು ಕುವಲಾಶ್ವನನ್ನು ಆವೇಶಿಸಿದನು.

19011046a ತಸ್ಮಿನ್ಪ್ರಯಾತೇ ದುರ್ಧರ್ಷೇ ದಿವಿ ಶಬ್ದೋ ಮಹಾನಭೂತ್ |

19011046c ಏಷ ಶ್ರೀಮಾನವಧ್ಯೋಽದ್ಯ ಧುಂಧುಮಾರೋ ಭವಿಷ್ಯತಿ ||

ಆ ದುರ್ಧರ್ಷನು ಪ್ರಯಾಣಿಸುತ್ತಿದ್ದಾಗ ದಿವಿಯಲ್ಲಿ ಮಹಾ ಶಬ್ಧವುಂಟಾಯಿತು: “ಈ ಶ್ರೀಮನ್ ರಾಜನು ಅವಧ್ಯನು. ಇಂದು ಅವನು ಧುಂಧುಮಾರನಾಗುತ್ತಾನೆ!”

19011047a ದಿವ್ಯೈರ್ಗಂಧೈಶ್ಚ  ತಂ ದೇವಾಃ ಸಮಂತಾತ್ಸಮವಾಕಿರನ್ |

19011047c ದೇವದುಂದುಭಯಶ್ಚಾಪಿ ಪ್ರಣೇದುರ್ಭರತರ್ಷಭ ||

ಭರತರ್ಷಭ! ದೇವತೆಗಳು ತಮ್ಮ ದೇವದುಂದುಭಿಗಳನ್ನು ಬಾರಿಸಿ, ಎಲ್ಲಕಡೆಗಳಿಂದಲೂ ದಿವ್ಯಗಂಧ ಪುಷ್ಪಗಳನ್ನು ಸುರಿಸಿದರು.

19011048a ಸ ಗತ್ವಾ ಜಯತಾಂ ಶ್ರೇಷ್ಠಸ್ತನಯೈಃ ಸಹ ವೀರ್ಯವಾನ್ |

19011048c ಸಮುದ್ರಂ ಖಾನಯಾಮಾಸ ವಾಲುಕಾರ್ಣವಮವ್ಯಯಮ್ ||

ಆ ವಿಜಯಿಗಳಲ್ಲಿ ಶ್ರೇಷ್ಠ ವೀರ್ಯವಾನ್ ರಾಜನು ತನ್ನ ತನಯರೊಂದಿಗೆ ಮರಳಿನಿಂದ ತುಂಬಿದ್ದ ಅವ್ಯಯ ಸಮುದ್ರವನ್ನು ಅಗೆಯಿಸತೊಡಗಿದನು.

19011049a ನಾರಾಯಣೇನ ಕೌರವ್ಯ ತೇಜಸಾಽಽಪ್ಯಾಯಿತಃ ಸ ವೈ |

19011049c ಬಭೂವ ಸ ಮಹಾತೇಜಾಃ ಭೂಯೋ  ಬಲಸಮನ್ವಿತಃ ||

ಕೌರವ್ಯ! ನಾರಾಯಣನ ತೇಜಸ್ಸನ್ನು ಪಡೆದುಕೊಂಡಿದ್ದ ಅವನು ಮಹಾತೇಜಸ್ವಿಯೂ ಇನ್ನೂ ಹೆಚ್ಚಿನ ಬಲವಂತನೂ ಆದನು.

19011050a ತಸ್ಯ ಪುತ್ರೈಃ ಖನದ್ಭಿಸ್ತು ವಾಲುಕಾಂತರ್ಹಿತಸ್ತದಾ |

19011050c ಧುಂಧುರಾಸಾದಿತೋ ರಾಜಂದಿಶಮಾವೃತ್ಯ ಪಶ್ಚಿಮಾಮ್ ||

ರಾಜನ್! ಅವನ ಪುತ್ರರು ಮರಳಿನ ರಾಶಿಯನ್ನು ಅಗೆದು ಅದರೊಳಗೆ ಪಶ್ಚಿಮ ದಿಕ್ಕನ್ನೇ ಆವರಿಸಿದ್ದ ಧುಂಧುವನ್ನು ಕಂಡರು.

19011051a ಮುಖಜೇನಾಗ್ನಿನಾ ಕ್ರೋಧಾಲ್ಲೋಕಾನುದ್ವರ್ತಯನ್ನಿವ |

19011051c ವಾರಿ ಸುಸ್ರಾವ ವೇಗೇನ ಮಹೋದಧಿರಿವೋದಯೇ ||

19011052a ಸೋಮಸ್ಯ ಭರತಶ್ರೇಷ್ಠ ಧಾರೋರ್ಮಿಕಲಿಲಂ ಮಹತ್ |

19011052c ತಸ್ಯ ಪುತ್ರಶತಂ ದಗ್ಧಂ ತ್ರಿಭಿರೂನಂ ತು ರಕ್ಷಸಾ ||

ಭರತಶ್ರೇಷ್ಠ! ಕ್ರೋಧಿತನಾದ ಅವನ ಮುಖದಿಂದ ಹುಟ್ಟಿದ ಅಗ್ನಿಯು ಲೋಕವನ್ನೇ ದಹಿಸಿಬಿಡುವಂತಿತ್ತು. ಚಂದ್ರನ ಉದಯಕಾಲದಲ್ಲಿ ಸಮುದ್ರವು ಉಕ್ಕಿಬರುವಂತೆ ಅಲ್ಲಿ ವೇಗದಿಂದ ಕೆಸರಿನೊಂದಿಗೆ ನೀರು ಚಿಮ್ಮಿ ಬಂದಿತು. ಆ ರಕ್ಷಸನು ರಾಜನ ಮೂರು ಮಕ್ಕಳನ್ನು ಬಿಟ್ಟು ನೂರು ಮಕ್ಕಳನ್ನೂ ಸುಟ್ಟುಹಾಕಿದನು.

19011053a ತತಃ ಸ ರಾಜಾ ಕೌರವ್ಯ ರಾಕ್ಷಸಂ ತಂ ಮಹಾಬಲಮ್ |

19011053c ಆಸಸಾದ ಮಹಾತೇಜಾ ಧುಂಧುಂ ಧುಂಧುನಿಬರ್ಹಣಃ ||

ಕೌರವ್ಯ! ಆಗ ಮಹಾತೇಜಸ್ವೀ ಧುಂಧುನಿಬರ್ಹಣ ರಾಜನು ಆ ಮಹಾಬಲ ರಾಕ್ಷಸ ಧುಂಧುವಿನ ಸಮೀಪ ಹೋದನು.

19011054a ತಸ್ಯ ವಾರಿಮಯಂ ವೇಗಮಾಪೀಯ ಸ ನರಾಧಿಪಃ |

19011054c ಯೋಗೀ ಯೋಗೇನ ವಹ್ನಿಂ ಚ ಶಮಯಾಮಾಸ ವಾರಿಣಾ ||

ಆ ನರಾಧಿಪ ಯೋಗಿಯು ಯೋಗದಿಂದ ವೇಗವಾಗಿ ಚಿಮ್ಮುತ್ತಿದ್ದ ನೀರಿನ ರಾಶಿಯನ್ನು ಕುಡಿದು ಆ ನೀರಿನಿಂದ ಬೆಂಕಿಯನ್ನು ಆರಿಸಿದನು.

19011055a ನಿಹತ್ಯ ತಂ ಮಹಾಕಾಯಂ ಬಲೇನೋದಕರಾಕ್ಷಸಮ್ |

19011055c ಉತ್ತಂಕಂ ದರ್ಶಯಾಮಾಸ ಕೃತಕರ್ಮಾ ನರಾಧಿಪಃ ||

ಆ ಮಹಾಕಾಯ ಉದಕರಾಕ್ಷಸನನ್ನು ಬಲದಿಂದ ಸಂಹರಿಸಿ ಕೃತಕರ್ಮಿಯಾದ ನರಾಧಿಪನು ಅದನ್ನು ಉತ್ತಂಕನಿಗೆ ತೋರಿಸಿದನು.

19011056a ಉತ್ತಂಕಸ್ತು ವರಂ ಪ್ರಾದಾತ್ತಸ್ಮೈ ರಾಜ್ಞೇ ಮಹಾತ್ಮನೇ |

19011056c ದದೌ ತಸ್ಯಾಕ್ಷಯಂ ವಿತ್ತಂ ಶತ್ರುಭಿಶ್ಚಾಪರಾಜಯಮ್ ||

19011057a ಧರ್ಮೇ ರತಿಂ ಚ ಸತತಂ ಸ್ವರ್ಗವಾಸಂ ತಥಾಕ್ಷಯಮ್ |

19011057c ಪುತ್ರಾಣಾಂ ಚಾಕ್ಷಯಾಽಲ್ಲೋಕಾನ್ಸ್ವರ್ಗೇ ಯೇ ರಕ್ಷಸಾ ಹತಾಃ ||

ಉತ್ತಂಕನಾದರೋ ಆ ಮಹಾತ್ಮ ರಾಜನಿಗೆ ಅಕ್ಷಯ ವಿತ್ತವನ್ನಿತ್ತು ಶತ್ರುಗಳೊಂದಿಗೆ ಪರಾಜಯಗೊಳ್ಳದೇ ಇರುವ ವರವನ್ನಿತ್ತನು. ಜೊತೆಗೆ ಧರ್ಮದಲ್ಲಿ ಸತತ ಶ್ರದ್ಧೆ, ಅಕ್ಷಯ ಸ್ವರ್ಗವಾಸ, ಮತ್ತು ರಾಕ್ಷಸನಿಂದ ಹತರಾದ ಪುತ್ರರಿಗೂ ಅಕ್ಷಯ ಲೋಕ-ಸ್ವರ್ಗವಾಸವನ್ನು ಕರುಣಿಸಿದನು.”

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಧುಂಧುವಧೇ ಏಕಾದಶೋಽಧ್ಯಾಯಃ|

ಇದು ಶ್ರೀಮಹಾಭಾರತದ ಖಿಲಭಾಗ ಹರಿವಂಶದಲ್ಲಿ ಹರಿವಂಶಪರ್ವದಲ್ಲಿ ಧುಂಧುವಧ ಎನ್ನುವ ಹನ್ನೊಂದನೆಯ ಅಧ್ಯಾಯವು.Related image

Comments are closed.