Drona Parva: Chapter 95

ದ್ರೋಣ ಪರ್ವ: ಜಯದ್ರಥವಧ ಪರ್ವ

೯೫

ಸಾತ್ಯಕಿ-ಸಾರಥಿಯರ ಸಂವಾದ (೧-೨೯). ಸಾತ್ಯಕಿಯು ಯವನರು ಮತ್ತು ಶಕರ ಸೇನೆಯನ್ನು ನಾಶಗೊಳಿಸಿದುದು (೩೦-೪೭).

07095001 ಸಂಜಯ ಉವಾಚ|

07095001a ತತಃ ಸ ಸಾತ್ಯಕಿರ್ಧೀಮಾನ್ಮಹಾತ್ಮಾ ವೃಷ್ಣಿಪುಂಗವಃ|

07095001c ಸುದರ್ಶನಂ ನಿಹತ್ಯಾಜೌ ಯಂತಾರಮಿದಮಬ್ರವೀತ್||

ಸಂಜಯನು ಹೇಳಿದನು: “ಆ ಧೀಮಂತ, ಮಹಾತ್ಮ, ವೃಷ್ಣಿಪುಂಗವ ಸಾತ್ಯಕಿಯು ಸುದರ್ಶನನನ್ನು ಸಂಹರಿಸಿ ತನ್ನ ಸಾರಥಿಗೆ ಹೇಳಿದನು:

07095002a ರಥಾಶ್ವನಾಗಕಲಿಲಂ ಶರಶಕ್ತ್ಯೂರ್ಮಿಮಾಲಿನಂ|

07095002c ಖಡ್ಗಮತ್ಸ್ಯಂ ಗದಾಗ್ರಾಹಂ ಶೂರಾಯುಧಮಹಾಸ್ವನಂ||

07095003a ಪ್ರಾಣಾಪಹಾರಿಣಂ ರೌದ್ರಂ ವಾದಿತ್ರೋತ್ಕ್ರುಷ್ಟನಾದಿತಂ|

07095003c ಯೋಧಾನಾಮಸುಖಸ್ಪರ್ಶಂ ದುರ್ಧರ್ಷಮಜಯೈಷಿಣಾಂ||

07095004a ತೀರ್ಣಾಃ ಸ್ಮ ದುಸ್ತರಂ ತಾತ ದ್ರೋಣಾನೀಕಮಹಾರ್ಣವಂ|

07095004c ಜಲಸಂಧಬಲೇನಾಜೌ ಪುರುಷಾದೈರಿವಾವೃತಂ||

“ಅಯ್ಯಾ! ರಥಾಶ್ವಗಜಸೈನಿಕರಿಂದ ಸಮೃದ್ಧವಾಗಿದ್ದ, ಬಾಣ-ಶಕ್ತ್ಯಾಯುಧಗಳೇ ಅಲೆಗಳಿಂತಿದ್ದ, ಖಡ್ಗಗಳೇ ಮತ್ಯ್ಸಗಳಂತಿದ್ದ, ಗದೆಗಳೇ ಮೊಸಳೆಗಳಂತಿದ್ದ, ಶೂರಯೋಧರ ಕೂಗೇ ಭೋರ್ಗರೆತವಾಗಿದ್ದ, ಪ್ರಾಣವನ್ನೇ ಅಪಹರಿಸಿಬಿಡುವ, ರೌದ್ರ ರಣವಾದ್ಯಗಳಿಂದ ನಿನಾದಿತವಾಗಿದ್ದ, ಯೋಧರಿಗೆ ಸುಖಸ್ಪರ್ಷಿಯಾಗಿರದ, ದುರ್ಧರ್ಷ ಜಯಿಸಲಸಾಧ್ಯ ಜಲಸಂಧನ ಸೈನ್ಯದ ಉಪಸ್ಥಿತಿಯಲ್ಲಿದ್ದ ದೈತ್ಯರಿಂದ ಆವೃತವಾದ ದ್ರೋಣನ ಮಹಾಸೇನೆಯನ್ನು ನಾವು ದಾಟಿ ಬಂದಿದ್ದೇವೆ.

07095005a ಅತೋಽನ್ಯಂ ಪೃತನಾಶೇಷಂ ಮನ್ಯೇ ಕುನದಿಕಾಮಿವ|

07095005c ತರ್ತವ್ಯಾಮಲ್ಪಸಲಿಲಾಂ ಚೋದಯಾಶ್ವಾನಸಂಭ್ರಮಂ||

ಇನ್ನೂ ಜಯಿಸದೇ ಇರುವ ಇನ್ನೊಂದು ಸೈನ್ಯವಿದೆ. ಆದರೆ ಆ ಸೈನ್ಯದ ವಿಷಯದಲ್ಲಿ ಗಾಬರಿಯಾಗಬೇಕಾದುದು ಏನೂ ಇಲ್ಲ. ಸ್ವಲ್ಪವೇ ನೀರಿನಿಂದ ಕೂಡಿದ ಚಿಕ್ಕ ನದಿಯಂತೆ ಸುಲಭವಾಗಿ ಅದನ್ನು ದಾಟಬಹುದು.

07095006a ಹಸ್ತಪ್ರಾಪ್ತಮಹಂ ಮನ್ಯೇ ಸಾಂಪ್ರತಂ ಸವ್ಯಸಾಚಿನಂ|

07095006c ನಿರ್ಜಿತ್ಯ ದುರ್ಧರಂ ದ್ರೋಣಂ ಸಪದಾನುಗಮಾಹವೇ||

ದುರ್ಧರ ದ್ರೋಣನನ್ನು ಸೈನ್ಯಸಮೇತ ಸೋಲಿಸಿ ನಮಗೆ ಸವ್ಯಸಾಚಿಯು ಕೈಗೆ ಸಿಕ್ಕಿದ ಹಾಗೆಯೇ!

07095007a ಹಾರ್ದಿಕ್ಯಂ ಯೋಧವರ್ಯಂ ಚ ಪ್ರಾಪ್ತಂ ಮನ್ಯೇ ಧನಂಜಯಂ|

07095007c ನ ಹಿ ಮೇ ಜಾಯತೇ ತ್ರಾಸೋ ದೃಷ್ಟ್ವಾ ಸೈನ್ಯಾನ್ಯನೇಕಶಃ|

07095007e ವಹ್ನೇರಿವ ಪ್ರದೀಪ್ತಸ್ಯ ಗ್ರೀಷ್ಮೇ ಶುಷ್ಕಂ ತೃಣೋಲಪಂ||

ಯೋಧಶ್ರೇಷ್ಠ ಹಾರ್ದಿಕ್ಯನನ್ನೂ ಸೋಲಿಸಿದ ನಂತರ ನಮಗೆ ಧನಂಜಯನು ಸಿಕ್ಕಿದ ಹಾಗೆಯೇ! ಗ್ರೀಷ್ಮ‌ಋತುವಿನಲ್ಲಿ ಉರಿಯುತ್ತಿರುವ ಅಗ್ನಿಯ ಮುಂದೆ ಒಣಹುಲ್ಲು ಹೇಗೋ ಹಾಗೆ ಈ ಅನೇಕ ಸೇನೆಗಳನ್ನು ನೋಡಿ ನನಗೆ ಕಷ್ಟವಾಗುತ್ತದೆ ಎಂದು ಅನ್ನಿಸುವುದೇ ಇಲ್ಲ.

07095008a ಪಶ್ಯ ಪಾಂಡವಮುಖ್ಯೇನ ಯಾತಾಂ ಭೂಮಿಂ ಕಿರೀಟಿನಾ|

07095008c ಪತ್ತ್ಯಶ್ವರಥನಾಗೌಘೈಃ ಪತಿತೈರ್ವಿಷಮೀಕೃತಾಂ||

ಪಾಂಡವಮುಖ್ಯ ಕಿರೀಟಿಯು ಕೆಳಗುರುಳಿಸಿರುವ ಪದಾತಿ, ಅಶ್ವ, ರಥ, ಆನೆಗಳ ಸಮೂಹಗಳಿಂದ ರಣಭೂಮಿಯು ಏರಿಳಿತಗಳಿಂದ ಕೂಡಿರುವುದನ್ನು ನೋಡು!

07095009a ಅಭ್ಯಾಶಸ್ಥಮಹಂ ಮನ್ಯೇ ಶ್ವೇತಾಶ್ವಂ ಕೃಷ್ಣಸಾರಥಿಂ|

07095009c ಸ ಏಷ ಶ್ರೂಯತೇ ಶಬ್ದೋ ಗಾಂಡೀವಸ್ಯಾಮಿತೌಜಸಃ||

ಕೃಷ್ಣನ ಸಾರಥ್ಯದಲ್ಲಿರುವ ಶ್ವೇತಾಶ್ವನು ಹತ್ತಿರದಲ್ಲಿಯೇ ಇರುವನೆಂದು ತೋರುತ್ತದೆ. ಆ ಅಮಿತತೇಜಸ್ವಿಯ ಗಾಂಡೀವದ ಶಬ್ಧವೂ ಕೇಳಿ ಬರುತ್ತಿದೆ.

07095010a ಯಾದೃಶಾನಿ ನಿಮಿತ್ತಾನಿ ಮಮ ಪ್ರಾದುರ್ಭವಂತಿ ವೈ|

07095010c ಅನಸ್ತಂಗತ ಆದಿತ್ಯೇ ಹಂತಾ ಸೈಂಧವಮರ್ಜುನಃ||

ನನಗೆ ತೋರುತ್ತಿರುವ ನಿಮಿತ್ತಗಳ ಪ್ರಕಾರ ಸೂರ್ಯನು ಅಸ್ತಂಗತನಾಗುವುದರೊಳಗೇ ಅರ್ಜುನನು ಸೈಂಧವನನ್ನು ಸಂಹರಿಸುತ್ತಾನೆ!

07095011a ಶನೈರ್ವಿಶ್ರಂಭಯನ್ನಶ್ವಾನ್ಯಾಹಿ ಯತ್ತೋಽರಿವಾಹಿನೀಂ|

07095011c ಯತ್ರೈತೇ ಸತನುತ್ರಾಣಾಃ ಸುಯೋಧನಪುರೋಗಮಾಃ||

ನಿಧಾನವಾಗಿ ಕುದುರೆಗಳಿಗೆ ಸ್ವಲ್ಪ ವಿಶ್ರಾಂತಿಯನ್ನಿತ್ತು ಸುಯೋಧನನ ನಾಯಕತ್ವದಲ್ಲಿ ಕವಚಗಳನ್ನು ಧರಿಸಿ ನಿಂತಿರುವ ಶತ್ರುಸೇನೆಯ ಕಡೆಗೆ ಹೋಗು.

07095012a ದಂಶಿತಾಃ ಕ್ರೂರಕರ್ಮಾಣಃ ಕಾಂಬೋಜಾ ಯುದ್ಧದುರ್ಮದಾಃ|

07095012c ಶರಬಾಣಾಸನಧರಾ ಯವನಾಶ್ಚ ಪ್ರಹಾರಿಣಃ||

07095013a ಶಕಾಃ ಕಿರಾತಾ ದರದಾ ಬರ್ಬರಾಸ್ತಾಮ್ರಲಿಪ್ತಕಾಃ|

07095013c ಅನ್ಯೇ ಚ ಬಹವೋ ಮ್ಲೇಚ್ಚಾ ವಿವಿಧಾಯುಧಪಾಣಯಃ|

07095013e ಮಾಮೇವಾಭಿಮುಖಾಃ ಸರ್ವೇ ತಿಷ್ಠಂತಿ ಸಮರಾರ್ಥಿನಃ||

ಕವಚಗಳನ್ನು ಧರಿಸಿರುವ ಕ್ರೂರಕರ್ಮಗಳನ್ನೆಸಗುವ ಯುದ್ಧದುರ್ಮದ ಕಾಂಬೋಜರು, ಧನುಸ್ಸು-ಬಾಣಗಳನ್ನು ಧರಿಸಿರುವ ಪ್ರಹಾರಿ ಯವನರು, ಶಕರು, ಕಿರಾತರು, ದರದರು, ಬರ್ಬರರು, ತಾಮ್ರಲಿಪ್ತರು ಮತ್ತು ಇನ್ನೂ ಇತರ ಅನೇಕ ಮ್ಲೇಚ್ಛರು ಎಲ್ಲರೂ ವಿವಿಧ ಆಯುಧಗಳನ್ನು ಹಿಡಿದು ಸಮರಾರ್ಥಿಗಳಾಗಿ ನನ್ನನ್ನೇ ಎದುರಾಗಿಸಿಕೊಂಡು ನಿಂತಿದ್ದಾರೆ.

07095014a ಏತಾನ್ಸರಥನಾಗಾಶ್ವಾನ್ನಿಹತ್ಯಾಜೌ ಸಪತ್ತಿನಃ|

07095014c ಇದಂ ದುರ್ಗಂ ಮಹಾಘೋರಂ ತೀರ್ಣಮೇಪಧಾರಯ||

ರಥ-ಆನೆ-ಕುದುರೆ ಪತ್ತಿಗಳಿಂದ ಕೂಡಿದ ಇವರನ್ನು ಯುದ್ಧದಲ್ಲಿ ಸಂಹರಿಸಿದ ನಂತರ ಅತ್ಯಂತ ದರ್ಗಮ ಮಹಾಘೋರ ಸಂಕಟದಿಂದ ಪಾರಾದೆವೆಂದು ಭಾವಿಸು!”

07095015 ಸೂತ ಉವಾಚ|

07095015a ನ ಸಂಭ್ರಮೋ ಮೇ ವಾರ್ಷ್ಣೇಯ ವಿದ್ಯತೇ ಸತ್ಯವಿಕ್ರಮ|

07095015c ಯದ್ಯಪಿ ಸ್ಯಾತ್ಸುಸಂಕ್ರುದ್ಧೋ ಜಾಮದಗ್ನ್ಯೋಽಗ್ರತಃ ಸ್ಥಿತಃ||

ಸೂತನು ಹೇಳಿದನು: “ವಾರ್ಷ್ಣೇಯ! ಸತ್ಯವಿಕ್ರಮ! ಕ್ರುದ್ಧ ಪರಶುರಾಮನೇ ಯುದ್ಧದಲ್ಲಿ ನಿನ್ನ ಎದುರಾದರೂ ನಾನು ಗಾಬರಿಗೊಳ್ಳುವವನಲ್ಲ!

07095016a ದ್ರೋಣೋ ವಾ ರಥಿನಾಂ ಶ್ರೇಷ್ಠಃ ಕೃಪೋ ಮದ್ರೇಶ್ವರೋಽಪಿ ವಾ|

07095016c ತಥಾಪಿ ಸಂಭ್ರಮೋ ನ ಸ್ಯಾತ್ತ್ವಾಮಾಶ್ರಿತ್ಯ ಮಹಾಭುಜ||

ಮಹಾಭುಜ! ರಥಿಗಳಲ್ಲಿ ಶ್ರೇಷ್ಠ ದ್ರೋಣ ಅಥವಾ ಕೃಪ ಅಥವಾ ಮದ್ರೇಶ್ವರ ಶಲ್ಯ ಇವರುಗಳೇ ನಿನ್ನೊಡನೆ ಯುದ್ಧಮಾಡಲು ಬಂದರೂ ನಿನ್ನ ಆಶ್ರಯವಿರುವ ನನಗೆ ಭಯವೆಂಬುದಿಲ್ಲ.

07095017a ತ್ವಯಾ ಸುಬಹವೋ ಯುದ್ಧೇ ನಿರ್ಜಿತಾಃ ಶತ್ರುಸೂದನ|

07095017c ನ ಚ ಮೇ ಸಂಭ್ರಮಃ ಕಶ್ಚಿದ್ಭೂತಪೂರ್ವಃ ಕದಾ ಚನ|

07095017e ಕಿಮು ಚೈತತ್ಸಮಾಸಾದ್ಯ ವೀರ ಸಂಯುಗಗೋಷ್ಪದಂ||

ಶತ್ರುಸೂದನ! ಯುದ್ಧದಲ್ಲಿ ನೀನು ಅನೇಕರನ್ನು ಸೋಲಿಸಿದ್ದೀಯೆ. ಹಿಂದೆ ಎಂದೂ ನನಗೆ ಯಾವರೀತಿಯ ಭಯವೂ ಆಗಿರಲಿಲ್ಲ. ವೀರ! ಇನ್ನು ಗೋವುಗಳ ಹಿಂಡಿನಂತಿರುವ ಇವರನ್ನು ಎದುರಿಸಿ ಎತ್ತಣ ಭಯ?

07095018a ಆಯುಷ್ಮನ್ಕತರೇಣ ತ್ವಾ ಪ್ರಾಪಯಾಮಿ ಧನಂಜಯಂ|

07095018c ಕೇಷಾಂ ಕ್ರುದ್ಧೋಽಸಿ ವಾರ್ಷ್ಣೇಯ ಕೇಷಾಂ ಮೃತ್ಯುರುಪಸ್ಥಿತಃ|

07095018e ಕೇಷಾಂ ಸಂಯಮನೀಮದ್ಯ ಗಂತುಮುತ್ಸಹತೇ ಮನಃ||

ಆಯುಷ್ಮನ್! ನಿನ್ನನ್ನು ಯಾವ ಮಾರ್ಗದಿಂದ ಧನಂಜಯನಲ್ಲಿಗೆ ಕರೆದೊಯ್ಯಲಿ? ವಾರ್ಷ್ಣೇಯ! ಇಂದು ನೀನು ಯಾರ ಮೇಲೆ ಕ್ರುದ್ಧನಾಗಿರುವೆ? ಯಾರ ಮೃತ್ಯುವು ಸನ್ನಿಹಿತವಾಗಿದೆ? ಯಾರ ಮನಸ್ಸು ಇಂದು ಯಮಸದನಕ್ಕೆ ಹೋಗಲು ಉತ್ಸುಕಗೊಂಡಿದೆ?

07095019a ಕೇ ತ್ವಾಂ ಯುಧಿ ಪರಾಕ್ರಾಂತಂ ಕಾಲಾಂತಕಯಮೋಪಮಂ|

07095019c ದೃಷ್ಟ್ವಾ ವಿಕ್ರಮಸಂಪನ್ನಂ ವಿದ್ರವಿಷ್ಯಂತಿ ಸಂಯುಗೇ|

07095019e ಕೇಷಾಂ ವೈವಸ್ವತೋ ರಾಜಾ ಸ್ಮರತೇಽದ್ಯ ಮಹಾಭುಜ||

ಯುದ್ಧದಲ್ಲಿ ಕಾಲಾಂತಕಯಮನಂತಿರುವ ವಿಕ್ರಮಸಂಪನ್ನನಾದ ನಿನ್ನನ್ನು ನೋಡಿ ಯಾರುತಾನೇ ಪಲಾಯನಮಾಡುವವರಿದ್ದಾರೆ? ಮತ್ತು ಮಹಾಭುಜ! ಇಂದು ಯಾರು ವೈವಸ್ವತ ರಾಜ ಯಮನನ್ನು ಸ್ಮರಿಸಿಕೊಳ್ಳುತ್ತಿದ್ದಾರೆ?”

07095020 ಸಾತ್ಯಕಿರುವಾಚ|

07095020a ಮುಂಡಾನೇತಾನ್ ಹನಿಷ್ಯಾಮಿ ದಾನವಾನಿವ ವಾಸವಃ|

07095020c ಪ್ರತಿಜ್ಞಾಂ ಪಾರಯಿಷ್ಯಾಮಿ ಕಾಂಬೋಜಾನೇವ ಮಾ ವಹ|

07095020e ಅದ್ಯೈಷಾಂ ಕದನಂ ಕೃತ್ವಾ ಕ್ಷಿಪ್ರಂ ಯಾಸ್ಯಾಮಿ ಪಾಂಡವಂ||

ಸಾತ್ಯಕಿಯು ಹೇಳಿದನು: “ವಾಸವನು ದಾನವರನ್ನು ಹೇಗೋ ಹಾಗೆ ನಾನು ಇಂದು ಮುಂಡನಮಾಡಿಕೊಂಡಿರುವ ಕಾಂಬೋಜರನ್ನು ಸಂಹರಿಸಿ ನನ್ನ ಪ್ರತಿಜ್ಞೆಯನ್ನು ಪೂರೈಸಿಕೊಳ್ಳುತ್ತೇನೆ. ಇಂದು ಇವರೊಂದಿಗೆ ಬೇಗನೆ ಯುದ್ಧಮಾಡಿ ಅರ್ಜುನನ ಸಮೀಪಕ್ಕೆ ಹೋಗುತ್ತೇನೆ.

07095021a ಅದ್ಯ ದ್ರಕ್ಷ್ಯಂತಿ ಮೇ ವೀರ್ಯಂ ಕೌರವಾಃ ಸಸುಯೋಧನಾಃ|

07095021c ಮುಂಡಾನೀಕೇ ಹತೇ ಸೂತ ಸರ್ವಸೈನ್ಯೇಷು ಚಾಸಕೃತ್||

ಸೂತ! ತಲೆಬೋಳಿಸಿಕೊಂಡಿರುವ ಈ ಸರ್ವ ಸೇನೆಗಳನ್ನು ಸಂಹರಿಸುವ ನನ್ನ ವೀರ್ಯವನ್ನು ಸುಯೋಧನನೊಂದಿಗೆ ಕೌರವರು ಇಂದು ನೋಡುವವರಿದ್ದಾರೆ.

07095022a ಅದ್ಯ ಕೌರವಸೈನ್ಯಸ್ಯ ದೀರ್ಯಮಾಣಸ್ಯ ಸಂಯುಗೇ|

07095022c ಶ್ರುತ್ವಾ ವಿರಾವಂ ಬಹುಧಾ ಸಂತಪ್ಸ್ಯತಿ ಸುಯೋಧನಃ||

ಇಂದು ಸಂಯುಗದಲ್ಲಿ ಕೌರವಸೇನೆಯು ಸೀಳಿ ಹೋಗಿ ಬಹುರೀತಿಯಲ್ಲಿ ರೋಧಿಸುವುದನ್ನು ಕೇಳಿ ಸುಯೋಧನನು ದುಃಖಪಡುವವನಿದ್ದಾನೆ!

07095023a ಅದ್ಯ ಪಾಂಡವಮುಖ್ಯಸ್ಯ ಶ್ವೇತಾಶ್ವಸ್ಯ ಮಹಾತ್ಮನಃ|

07095023c ಆಚಾರ್ಯಕಕೃತಂ ಮಾರ್ಗಂ ದರ್ಶಯಿಷ್ಯಾಮಿ ಸಂಯುಗೇ||

ನನ್ನ ಆಚಾರ್ಯ ಪಾಂಡವಮುಖ್ಯ, ಮಹಾತ್ಮ ಶ್ವೇತಾಶ್ವನು ತೋರಿಸಿದ ಮಾರ್ಗವನ್ನೇ ಇಂದು ನಾನು ಯುದ್ಧದಲ್ಲಿ ತೋರಿಸಿಕೊಡುತ್ತೇನೆ.

07095024a ಅದ್ಯ ಮದ್ಬಾಣನಿಹತಾನ್ಯೋಧಮುಖ್ಯಾನ್ಸಹಸ್ರಶಃ|

07095024c ದೃಷ್ಟ್ವಾ ದುರ್ಯೋಧನೋ ರಾಜಾ ಪಶ್ಚಾತ್ತಾಪಂ ಗಮಿಷ್ಯತಿ||

ಇಂದು ನನ್ನ ಬಾಣದಿಂದ ಸಹಸ್ರಾರು ಪ್ರಮುಖ ಯೋಧರು ಹತರಾದುದನ್ನು ನೋಡಿ ರಾಜಾ ದುರ್ಯೋಧನನು ಪಶ್ಚಾತ್ತಾಪ ಪಡುವವನಿದ್ದಾನೆ.

07095025a ಅದ್ಯ ಮೇ ಕ್ಷಿಪ್ರಹಸ್ತಸ್ಯ ಕ್ಷಿಪತಃ ಸಾಯಕೋತ್ತಮಾನ್|

07095025c ಅಲಾತಚಕ್ರಪ್ರತಿಮಂ ಧನುರ್ದ್ರಕ್ಷ್ಯಂತಿ ಕೌರವಾಃ||

ಇಂದು ಕ್ಷಿಪ್ರಹಸ್ತ ನಾನು ಬಿಡುವ ಉತ್ತಮ ಸಾಯಕಗಳನ್ನೂ, ಬೆಂಕಿಯ ಕೊಳ್ಳಿಯ ಚಕ್ರದಂತೆ ತಿರುಗುವ ನನ್ನ ಧನುಸ್ಸನ್ನೂ ಕೌರವರು ನೋಡುವರು!

07095026a ಮತ್ಸಾಯಕಚಿತಾಂಗಾನಾಂ ರುಧಿರಂ ಸ್ರವತಾಂ ಬಹು|

07095026c ಸೈನಿಕಾನಾಂ ವಧಂ ದೃಷ್ಟ್ವಾ ಸಂತಪ್ಸ್ಯತಿ ಸುಯೋಧನಃ||

ನನ್ನ ಸಾಯಕಗಳಿಂದ ತುಂಡಾದ ಅಂಗಗಳಿಂದ ರಕ್ತವು ಬಹಳವಾಗಿ ಸುರಿಯುವುದನ್ನು, ಮತ್ತು ಸೈನಿಕರ ವಧೆಯನ್ನು ನೋಡಿ ಇಂದು ಸುಯೋಧನನು ಸಂತಾಪಪಡುವವನಿದ್ದಾನೆ!

07095027a ಅದ್ಯ ಮೇ ಕ್ರುದ್ಧರೂಪಸ್ಯ ನಿಘ್ನತಶ್ಚ ವರಾನ್ವರಾನ್|

07095027c ದ್ವಿರರ್ಜುನಮಿಮಂ ಲೋಕಂ ಮಂಸ್ಯತೇ ಸ ಸುಯೋಧನಃ||

ಇಂದು ನನ್ನ ಕ್ರುದ್ಧರೂಪವನ್ನು ಮತ್ತು ಶ್ರೇಷ್ಠರ ವಧೆಯನ್ನು ನೋಡಿ ಲೋಕದಲ್ಲಿ ಇಬ್ಬರು ಅರ್ಜುನರಿರುವರೋ ಎಂದು ಸುಯೋಧನನು ಯೋಚಿಸಲಿದ್ದಾನೆ.

07095028a ಅದ್ಯ ರಾಜಸಹಸ್ರಾಣಿ ನಿಹತಾನಿ ಮಯಾ ರಣೇ|

07095028c ದೃಷ್ಟ್ವಾ ದುರ್ಯೋಧನೋ ರಾಜಾ ಸಂತಪ್ಸ್ಯತಿ ಮಹಾಮೃಧೇ||

ಇಂದು ರಣದಲ್ಲಿ ಸಹಸ್ರಾರು ರಾಜರು ನನ್ನಿಂದ ಹತರಾಗುವುದನ್ನು ನೋಡಿ ರಾಜಾ ದುರ್ಯೋಧನನು ಮಹಾಯುದ್ಧದಲ್ಲಿ ಸಂತಾಪಪಡುವವನಿದ್ದಾನೆ.

07095029a ಅದ್ಯ ಸ್ನೇಹಂ ಚ ಭಕ್ತಿಂ ಚ ಪಾಂಡವೇಷು ಮಹಾತ್ಮಸು|

07095029c ಹತ್ವಾ ರಾಜಸಹಸ್ರಾಣಿ ದರ್ಶಯಿಷ್ಯಾಮಿ ರಾಜಸು||

ಇಂದು ಸಹಸ್ರಾರು ರಾಜರನ್ನು ಸಂಹರಿಸಿ ಮಹಾತ್ಮ ಪಾಂಡವ ರಾಜನಲ್ಲಿ ನನಗಿರುವ ಸ್ನೇಹ ಮತ್ತು ಭಕ್ತಿಯನ್ನು ತೋರಿಸಿಕೊಡುತ್ತೇನೆ!””

07095030 ಸಂಜಯ ಉವಾಚ|

07095030a ಏವಮುಕ್ತಸ್ತದಾ ಸೂತಃ ಶಿಕ್ಷಿತಾನ್ಸಾಧುವಾಹಿನಃ|

07095030c ಶಶಾಂಕಸಮ್ನಿಕಾಶಾನ್ವೈ ವಾಜಿನೋಽಚೂಚುದದ್ಭೃಶಂ||

ಸಂಜಯನು ಹೇಳಿದನು: “ಹೀಗೆ ಹೇಳಲು ಸೂತನು ಒಳ್ಳೆಯ ಶಿಕ್ಷಣವನ್ನು ಹೊಂದಿದ್ದ, ಒಳ್ಳೆಯ ರೀತಿಯಲ್ಲಿ ರಥವನ್ನು ಒಯ್ಯುವ, ಚಂದ್ರನ ಪ್ರಭೆಗೆ ಸಮಾನ ಪ್ರಭೆಯುಳ್ಳ ಕುದುರೆಗಳನ್ನು ಮುಂದೆ ಹೋಗುವಂತೆ ಹುರಿದುಂಬಿಸಿದನು.

07095031a ತೇ ಪಿಬಂತ ಇವಾಕಾಶಂ ಯುಯುಧಾನಂ ಹಯೋತ್ತಮಾಃ|

07095031c ಪ್ರಾಪಯನ್ಯವನಾಂ ಶೀಘ್ರಂ ಮನಃಪವನರಂಹಸಃ||

ಮನಸ್ಸು-ವಾಯುವೇಗದಲ್ಲಿ ಹೋಗುತ್ತಿರುವ ಆ ಉತ್ತಮ ಕುದುರೆಗಳು ಆಕಾಶವನ್ನೇ ಕುಡಿಯುತ್ತಿವೆಯೋ ಎನ್ನುವಂತೆ ಶೀಘ್ರವಾಗಿ ಯುಯುಧಾನನನ್ನು ಯವನರ ಬಳಿ ಕರೆದೊಯ್ದವು.

07095032a ಸಾತ್ಯಕಿಂ ತೇ ಸಮಾಸಾದ್ಯ ಪೃತನಾಸ್ವನಿವರ್ತಿನಂ|

07095032c ಬಹವೋ ಲಘುಹಸ್ತಾಶ್ಚ ಶರವರ್ಷೈರವಾಕಿರನ್||

ಯುದ್ಧದಿಂದ ಹಿಂದಿರುಗದೇ ಇದ್ದ ಆ ಲಘುಹಸ್ತರು ಸಾತ್ಯಕಿಯನ್ನು ನೋಡಿ ಅವನನ್ನು ಅನೇಕ ಶರವರ್ಷಗಳಿಂದ ಮುಚ್ಚಿಬಿಟ್ಟರು.

07095033a ತೇಷಾಮಿಷೂನಥಾಸ್ತ್ರಾಣಿ ವೇಗವನ್ನತಪರ್ವಭಿಃ|

07095033c ಅಚ್ಚಿನತ್ಸಾತ್ಯಕೀ ರಾಜನ್ನೈನಂ ತೇ ಪ್ರಾಪ್ನುವಂ ಶರಾಃ||

ರಾಜನ್! ಅವರ ಬಾಣಗಳು ಮತ್ತು ಅಸ್ತ್ರಗಳು ತನಗೆ ತಾಗುವುದರೊಳಗೇ ವೇಗವಾನ್ ಸಾತ್ಯಕಿಯು ಸನ್ನತಪರ್ವಗಳಿಂದ ಕತ್ತರಿಸಿದನು.

07095034a ರುಕ್ಮಪುಂಖೈಃ ಸುನಿಶಿತೈರ್ಗಾರ್ಧ್ರಪತ್ರೈರಜಿಹ್ಮಗೈಃ|

07095034c ಉಚ್ಚಕರ್ತ ಶಿರಾಂಸ್ಯುಗ್ರೋ ಯವನಾನಾಂ ಭುಜಾನಪಿ||

ಬಂಗಾರದ ಪುಂಖಗಳುಳ್ಳ ಹರಿತಾದ ಹದ್ದಿನಗರಿಯ ಜಿಹ್ಮಗಗಳಿಂದ ಆ ಉಗ್ರನು ಯವನರ ಶಿರಗಳನ್ನೂ ಭುಜಗಳನ್ನೂ ಕತ್ತರಿಸಿದನು.

07095035a ಶೈಕ್ಯಾಯಸಾನಿ ವರ್ಮಾಣಿ ಕಾಂಸ್ಯಾನಿ ಚ ಸಮಂತತಃ|

07095035c ಭಿತ್ತ್ವಾ ದೇಹಾಂಸ್ತಥಾ ತೇಷಾಂ ಶರಾ ಜಗ್ಮುರ್ಮಹೀತಲಂ||

ಎಲ್ಲ ಕಡೆ ಕೆಂಪು ಲೋಹಗಳಿಂದಲೂ ಕಂಚಿನಿಂದಲೂ ನಿರ್ಮಿತವಾದ ಕವಚಗಳನ್ನು ಬೇಧಿಸಿ, ಯೋಧರ ದೇಹಗಳನ್ನು ಸೀಳಿ ಬಾಣಗಳು ಭೂಮಿಯನ್ನು ಸೇರಿದವು.

07095036a ತೇ ಹನ್ಯಮಾನಾ ವೀರೇಣ ಮ್ಲೇಚ್ಚಾಃ ಸಾತ್ಯಕಿನಾ ರಣೇ|

07095036c ಶತಶೋ ನ್ಯಪತಂಸ್ತತ್ರ ವ್ಯಸವೋ ವಸುಧಾತಲೇ||

ರಣದಲ್ಲಿ ಸಾತ್ಯಕಿಯಿಂದ ಸಂಹರಿಸಲ್ಪಟ್ಟ ನೂರಾರು ವೀರ ಮ್ಲೇಚ್ಛರು ಪ್ರಾಣಗಳನ್ನು ತೊರೆದು ಭೂಮಿಯ ಮೇಲೆ ಉರುಳಿದರು.

07095037a ಸುಪೂರ್ಣಾಯತಮುಕ್ತೈಸ್ತಾನವ್ಯವಚ್ಚಿನ್ನಪಿಂಡಿತೈಃ|

07095037c ಪಂಚ ಷಟ್ಸಪ್ತ ಚಾಷ್ಟೌ ಚ ಬಿಭೇದ ಯವನಾಂ ಶರೈಃ||

ಶಿಂಜಿನಿಯನ್ನು ಕಿವಿಯ ತುದಿಯವರೆಗೂ ಸೆಳೆದು ಮಧ್ಯೆ ಸ್ವಲ್ಪವೂ ಅಂತರವಿಲ್ಲದಂತೆ ಒಂದಕ್ಕೊಂದು ಅಂಟಿಕೊಂಡಿರುವಂತೆ ಬಾಣಗಳನ್ನು ಬಿಟ್ಟು ಸಾತ್ಯಕಿಯು ಐದು, ಆರು, ಏಳು ಮತ್ತು ಒಮ್ಮೊಮ್ಮೆ ಎಂಟು ಯವನರನ್ನು ಒಂದೇ ಬಾರಿಗೆ ಸಂಹರಿಸುತ್ತಿದ್ದನು.

07095038a ಕಾಂಬೋಜಾನಾಂ ಸಹಸ್ರೈಸ್ತು ಶಕಾನಾಂ ಚ ವಿಶಾಂ ಪತೇ|

07095038c ಶಬರಾಣಾಂ ಕಿರಾತಾನಾಂ ಬರ್ಬರಾಣಾಂ ತಥೈವ ಚ||

07095039a ಅಗಮ್ಯರೂಪಾಂ ಪೃಥಿವೀಂ ಮಾಂಸಶೋಣಿತಕರ್ದಮಾಂ|

07095039c ಕೃತವಾಂಸ್ತತ್ರ ಶೈನೇಯಃ ಕ್ಷಪಯಂಸ್ತಾವಕಂ ಬಲಂ||

ವಿಶಾಂಪತೇ! ಸಹಸ್ರಾರು ಕಾಂಬೋಜರನ್ನೂ, ಶಕರನ್ನೂ, ಶಬರರನ್ನೂ, ಕಿರಾತರನ್ನೂ, ಹಾಗೆಯೇ ಬರ್ಬರರನ್ನೂ ಸಂಹರಿಸಿ, ರಣಭೂಮಿಯನ್ನು ಮಾಂಸ ಮತ್ತು ರಕ್ತಗಳಿಂದ ಮಿಶ್ರಿತ ಕೆಸರಿನಿಂದ ಸಂಚರಿಸಲು ದುಃಸಾಧ್ಯವನ್ನಾಗಿ ಮಾಡಿದನು.

07095040a ದಸ್ಯೂನಾಂ ಸಶಿರಸ್ತ್ರಾಣೈಃ ಶಿರೋಭಿರ್ಲೂನಮೂರ್ಧಜೈಃ|

07095040c ತತ್ರ ತತ್ರ ಮಹೀ ಕೀರ್ಣಾ ವಿಬರ್ಹೈರಂಡಜೈರಿವ||

ನೀಳ ಗಡ್ಡಗಳನ್ನೂ, ಶಿರಸ್ತ್ರಾಣಗಳನ್ನು ಧರಿಸಿದ್ದ ಬೋಳು ತಲೆಗಳ ದಸ್ಯುಗಳ ಶಿರಗಳು ರಣಾಂಗಣದ ಸುತ್ತಲೂ ಪುಕ್ಕಗಳನ್ನು ಪರಚಿದ ಪಕ್ಷಿಗಳಂತೆ ವ್ಯಾಪ್ತವಾಗಿ ಹರಡಿದ್ದವು.

07095041a ರುಧಿರೋಕ್ಷಿತಸರ್ವಾಂಗೈಸ್ತೈಸ್ತದಾಯೋಧನಂ ಬಭೌ|

07095041c ಕಬಂಧೈಃ ಸಂವೃತಂ ಸರ್ವಂ ತಾಮ್ರಾಭ್ರೈಃ ಖಮಿವಾವೃತಂ||

ರಕ್ತದಿಂದ ತೋಯ್ದ ಸರ್ವಾಂಗಗಳ ಕಬಂಧಗಳಿಂದ ಆ ರಣಾಂಗಣವು ಕೆಂಪಾದ ಮೇಘಗಳಿಂದ ಆವೃತವಾದ ಆಕಾಶದಂತೆ ತೋರುತ್ತಿತ್ತು.

07095042a ವಜ್ರಾಶನಿಸಮಸ್ಪರ್ಶೈಃ ಸುಪರ್ವಭಿರಜಿಹ್ಮಗೈಃ|

07095042c ತೇ ಸಾಶ್ವಯಾನಾ ನಿಹತಾಃ ಸಮಾವವ್ರುರ್ವಸುಂಧರಾಂ||

ವಜ್ರಾಯುಧಕ್ಕೂ ಸಿಡಿಲಿಗೂ ಸಮಾನ ಸ್ಪರ್ಶವುಳ್ಳ, ಉತ್ತಮ ಗಿಣ್ಣುಗಳನ್ನುಳ್ಳ, ನೇರವಾಗಿ ಹೋಗುವ ಬಾಣಗಳ ಮೂಲಕ ಹತರಾದ ಯವನರು ರಣಾಂಗಣವನ್ನು ಆವರಿಸಿಕೊಂಡಿದ್ದರು.

07095043a ಅಲ್ಪಾವಶಿಷ್ಟಾಃ ಸಂಭಗ್ನಾಃ ಕೃಚ್ಚ್ರಪ್ರಾಣಾ ವಿಚೇತಸಃ|

07095043c ಜಿತಾಃ ಸಂಖ್ಯೇ ಮಹಾರಾಜ ಯುಯುಧಾನೇನ ದಂಶಿತಾಃ||

ಮಹಾರಾಜ! ಉಳಿದ ಅಲ್ಪಸಂಖ್ಯಾತ ಕವಚಧಾರಿ ಯವನರನ್ನೂ ಕೂಡ ಯುಯುಧಾನನು ಮೂರ್ಛೆಗೊಳಿಸಿ ಸಂಹರಿಸಿ ಗೆದ್ದನು.

07095044a ಪಾರ್ಷ್ಣಿಭಿಶ್ಚ ಕಶಾಭಿಶ್ಚ ತಾಡಯಂತಸ್ತುರಂಗಮಾನ್|

07095044c ಜವಮುತ್ತಮಮಾಸ್ಥಾಯ ಸರ್ವತಃ ಪ್ರಾದ್ರವನ್ಭಯಾತ್||

ಉಳಿದಿದ್ದವರು ಹಿಮ್ಮಡಿಗಳಿಂದಲೂ, ಚಾವಟಿಗಳಿಂದಲೂ ಕುದುರೆಗಳನ್ನು ಪ್ರಹರಿಸುತ್ತಾ ಅತ್ಯಂತ ವೇಗದಲ್ಲಿ ಸಾತ್ಯಕಿಯಿಂದ ಎಲ್ಲ ಕಡೆ ಓಡಿ ಹೋದರು.

07095045a ಕಾಂಬೋಜಸೈನ್ಯಂ ವಿದ್ರಾವ್ಯ ದುರ್ಜಯಂ ಯುಧಿ ಭಾರತ|

07095045c ಯವನಾನಾಂ ಚ ತತ್ಸೈನ್ಯಂ ಶಕಾನಾಂ ಚ ಮಹದ್ಬಲಂ||

07095046a ಸ ತತಃ ಪುರುಷವ್ಯಾಘ್ರಃ ಸಾತ್ಯಕಿಃ ಸತ್ಯವಿಕ್ರಮಃ|

07095046c ಪ್ರಹೃಷ್ಟಸ್ತಾವಕಾಂ ಜಿತ್ವಾ ಸೂತಂ ಯಾಹೀತ್ಯಚೋದಯತ್||

ಭಾರತ! ಸತ್ಯ ವಿಕ್ರಮಿ ಪುರುಷವ್ಯಾಘ್ರ ಸಾತ್ಯಕಿಯು ಹೀಗೆ ಜಯಿಸಲಸಾಧ್ಯ ಯವನರ ಮತ್ತು ಶಕರ ಮಹಾಸೇನೆಯನ್ನು ಯುದ್ಧದಲ್ಲಿ ಸೋಲಿಸಿ, ನಿನ್ನವರನ್ನು ಗೆದ್ದು ಪ್ರಹೃಷ್ಟನಾಗಿ ಸೂತನಿಗೆ ಮುಂದುವರೆಯಲು ಹೇಳಿದನು.

07095047a ತಂ ಯಾಂತಂ ಪೃಷ್ಠಗೋಪ್ತಾರಮರ್ಜುನಸ್ಯ ವಿಶಾಂ ಪತೇ|

07095047c ಚಾರಣಾಃ ಪ್ರೇಕ್ಷ್ಯ ಸಂಹೃಷ್ಟಾಸ್ತ್ವದೀಯಾಶ್ಚಾಪ್ಯಪೂಜಯನ್||

ವಿಶಾಂಪತೇ! ಅರ್ಜುನನ ಪೃಷ್ಟರಕ್ಷಕನಾದ ಆ ಸಾತ್ಯಕಿಯು ಹಾಗೆ ಹೋಗುತ್ತಿರುವುದನ್ನು ನೋಡಿ ಸಂಹೃಷ್ಟರಾದ ಚಾರಣರೂ ಮತ್ತು ನಿನ್ನವರೂ ಬಹಳವಾಗಿ ಪ್ರಶಂಸಿಸಿದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ಯವನಪರಾಜಯೇ ಚತುರ್ನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ಯವನಪರಾಜಯ ಎನ್ನುವ ತೊಂಭತ್ನಾಲ್ಕನೇ ಅಧ್ಯಾಯವು.

Image result for flowers against white background

Comments are closed.