Drona Parva: Chapter 94

ದ್ರೋಣ ಪರ್ವ: ಜಯದ್ರಥವಧ ಪರ್ವ

೯೪

ಸಾತ್ಯಕಿಯಿಂದ ಸುದರ್ಶನನ ವಧೆ (೧-೧೮).

07094001 ಸಂಜಯ ಉವಾಚ|

07094001a ದ್ರೋಣಂ ಸ ಜಿತ್ವಾ ಪುರುಷಪ್ರವೀರಸ್

         ತಥೈವ ಹಾರ್ದಿಕ್ಯಮುಖಾಂಸ್ತ್ವದೀಯಾನ್|

07094001c ಪ್ರಹಸ್ಯ ಸೂತಂ ವಚನಂ ಬಭಾಷೇ

         ಶಿನಿಪ್ರವೀರಃ ಕುರುಪುಂಗವಾಗ್ರ್ಯ||

ಸಂಜಯನು ಹೇಳಿದನು: “ಕುರುಪುಂಗವಾಗ್ರ್ಯ! ದ್ರೋಣನನ್ನು ಮತ್ತು ಹಾರ್ದಿಕ್ಯನೇ ಮೊದಲಾದ ನಿನ್ನವರನ್ನು ಜಯಿಸಿ ಪುರುಷಪ್ರವೀರ ಶಿನಿಪ್ರವೀರನು ನಗುತ್ತಾ ಸೂತನಿಗೆ ಈ ಮಾತನ್ನಾಡಿದನು:

07094002a ನಿಮಿತ್ತಮಾತ್ರಂ ವಯಮತ್ರ ಸೂತ

         ದಗ್ಧಾರಯಃ ಕೇಶವಫಲ್ಗುನಾಭ್ಯಾಂ|

07094002c ಹತಾನ್ನಿಹನ್ಮೇಹ ನರರ್ಷಭೇಣ

         ವಯಂ ಸುರೇಶಾತ್ಮಸಮುದ್ಭವೇನ||

“ಸೂತ! ಈ ಶತ್ರುಗಳ ಸಂಹಾರದಲ್ಲಿ ನಾವು ನಿಮಿತ್ತಮಾತ್ರ. ಕೇಶವ-ಫಲ್ಗುನರಿಂದ ಇವರು ಈಗಾಗಲೇ ಸುಡಲ್ಪಟ್ಟಿದ್ದಾರೆ. ಸುರೇಶಾತ್ಮಜ ನರರ್ಷಭ ಅರ್ಜುನನಿಂದ ಕೊಲ್ಲಲ್ಪಟ್ಟ ಇವರನ್ನು ನಾವು ಈಗ ನೆಪಮಾತ್ರಕ್ಕೆ ಕೊಲ್ಲುತ್ತಿದ್ದೇವೆ.”

07094003a ತಮೇವಮುಕ್ತ್ವಾ ಶಿನಿಪುಂಗವಸ್ತದಾ

         ಮಹಾಮೃಧೇ ಸೋಽಗ್ರ್ಯಧನುರ್ಧರೋಽರಿಹಾ|

07094003c ಕಿರನ್ಸಮಂತಾತ್ಸಹಸಾ ಶರಾನ್ಬಲೀ

         ಸಮಾಪತಚ್ಚ್ಯೇನ ಇವಾಮಿಷಂ ಯಥಾ||

ಹೀಗೆ ಹೇಳಿ ಅಗ್ರ ಧನುರ್ಧರ ಅರಿನಾಶಿನಿ ಬಲಶಾಲಿ ಶಿನಿಪುಂಗವನು ಮಹಾಮೃಧದಲ್ಲಿ ಎಲ್ಲಕಡೆ ಶರಗಳನ್ನು ಎರಚುತ್ತಾ ಗಿಡುಗವು ಮಾಂಸದ ಮೇಲೆ ಎರಗುವಂತೆ ಶತ್ರುಗಳ ಮೇಲೆ ಎರಗಿದನು.

07094004a ತಂ ಯಾಂತಮಶ್ವೈಃ ಶಶಿಶಂಖವರ್ಣೈರ್

         ವಿಗಾಹ್ಯ ಸೈನ್ಯಂ ಪುರುಷಪ್ರವೀರಂ|

07094004c ನಾಶಕ್ನುವನ್ವಾರಯಿತುಂ ಸಮಂತಾದ್

         ಆದಿತ್ಯರಶ್ಮಿಪ್ರತಿಮಂ ನರಾಗ್ರ್ಯಂ||

ಚಂದ್ರ ಮತ್ತು ಶಂಖದ ಬಣ್ಣಗಳ ಕುದುರೆಗಳೊಂದಿಗೆ ಕುರುಸೇನೆಯನ್ನು ಪ್ರವೇಶಿಸುತ್ತಿದ್ದ ಆ ಪುರುಷಪ್ರವೀರ, ಸೂರ್ಯನ ರಶ್ಮಿಯಂತೆ ಬೆಳಗುತ್ತಿದ್ದ ನರಾಗ್ರ್ಯನನ್ನು ಸುತ್ತಲೂ ಯಾರೂ ತಡೆಯಲಾರದಾದರು.

07094005a ಅಸಹ್ಯವಿಕ್ರಾಂತಮದೀನಸತ್ತ್ವಂ

         ಸರ್ವೇ ಗಣಾ ಭಾರತ ದುರ್ವಿಷಹ್ಯಂ|

07094005c ಸಹಸ್ರನೇತ್ರಪ್ರತಿಮಪ್ರಭಾವಂ

         ದಿವೀವ ಸೂರ್ಯಂ ಜಲದವ್ಯಪಾಯೇ||

ಸಹಿಸಲು ಅಸಾಧ್ಯವಾದ ಪರಾಕ್ರಮವನ್ನು ಹೊಂದಿದ್ದ, ಮಹಾಬಲಶಾಲಿಯಾಗಿದ್ದ, ಸಹಸ್ರನೇತ್ರ ಇಂದ್ರನ ಸಮಾನ ಪರಾಕ್ರಮವನ್ನು ಹೊಂದಿದ್ದ, ಮೋಡಗಳಿಲ್ಲದ ಶರತ್ಕಾಲದ ಆಕಾಶದಲ್ಲಿ ಬೆಳಗುವ ಸೂರ್ಯನ ತೇಜಸ್ಸಿಗೆ ಸಮಾನ ತೇಜಸ್ಸನ್ನು ಹೊಂದಿದ್ದ ಸಾತ್ಯಕಿಯನ್ನು ಸಂಘಟಿತರಾದ ನಿನ್ನ ಎಲ್ಲ ಸೈನಿಕರೂ ತಡೆಯಲಾರದೇ ಹೋದರು.

07094006a ಅಮರ್ಷಪೂರ್ಣಸ್ತ್ವತಿಚಿತ್ರಯೋಧೀ

         ಶರಾಸನೀ ಕಾಂಚನವರ್ಮಧಾರೀ|

07094006c ಸುದರ್ಶನಃ ಸಾತ್ಯಕಿಮಾಪತಂತಂ

         ನ್ಯವಾರಯದ್ರಾಜವರಃ ಪ್ರಸಹ್ಯ||

ಆಗ ಕ್ರೋಧಪೂರ್ಣನಾಗಿದ್ದ, ವಿಚಿತ್ರರೀತಿಯಲ್ಲಿ ಯುದ್ಧಮಾಡುತ್ತಿದ್ದ, ಶರಾಸನೀ, ಕಾಂಚನ ಕವಚವನ್ನು ಧರಿಸಿದ್ದ ಸುದರ್ಶನನು ತನ್ನ ಕಡೆಗೆ ಬರುತ್ತಿದ್ದ ಸಾತ್ಯಕಿಯನ್ನು ನಗುತ್ತಾ ಬಲಪೂರ್ವಕವಾಗಿ ತಡೆದನು.

07094007a ತಯೋರಭೂದ್ಭರತ ಸಂಪ್ರಹಾರಃ

         ಸುದಾರುಣಸ್ತಂ ಸಮಭಿಪ್ರಶಂಸನ್|

07094007c ಯೋಧಾಸ್ತ್ವದೀಯಾಶ್ಚ ಹಿ ಸೋಮಕಾಶ್ಚ

         ವೃತ್ರೇಂದ್ರಯೋರ್ಯುದ್ಧಮಿವಾಮರೌಘಾಃ||

ಅವರಿಬ್ಬರ ನಡುವೆ ಸುದಾರುಣವಾದ ಪ್ರಹಾರಗಳುಳ್ಳ ಯುದ್ಧವು ನಡೆಯಿತು. ಅವರ ನಡುವಿನ ಈ ಯುದ್ಧವನ್ನು ವೃತ್ರ-ಇಂದ್ರರ ಯುದ್ಧವನ್ನು ಅಮರಗಣಗಳು ಹೇಗೋ ಹಾಗೆ ನಿನ್ನವರು ಮತ್ತು ಸೋಮಕರು ಪ್ರಶಂಸಿಸುತ್ತಾ ನೋಡತೊಡಗಿದರು.

07094008a ಶರೈಃ ಸುತೀಕ್ಷ್ಣೈಃ ಶತಶೋಽಭ್ಯವಿಧ್ಯತ್

         ಸುದರ್ಶನಃ ಸಾತ್ವತಮುಖ್ಯಮಾಜೌ|

07094008c ಅನಾಗತಾನೇವ ತು ತಾನ್ಪೃಷತ್ಕಾಂಶ್

         ಚಿಚ್ಚೇದ ಬಾಣೈಃ ಶಿನಿಪುಂಗವೋಽಪಿ||

ನೂರಾರು ಸುತೀಕ್ಷ್ಣ ಬಾಣಗಳಿಂದ ಸುದರ್ಶನನು ಸಾತ್ವತಮುಖ್ಯನನ್ನು ಹೊಡೆದನು. ಆದರೆ ಅವು ಬರುವುದರೊಳಗೇ ಶಿನಿಪುಂಗವನು ಅವುಗಳನ್ನು ಬಾಣಗಳಿಂದ ತುಂಡರಿಸಿ ಬಿಡುತ್ತಿದ್ದನು.

07094009a ತಥೈವ ಶಕ್ರಪ್ರತಿಮೋಽಪಿ ಸಾತ್ಯಕಿಃ

         ಸುದರ್ಶನೇ ಯಾನ್ ಕ್ಷಿಪತಿ ಸ್ಮ ಸಾಯಕಾನ್|

07094009c ದ್ವಿಧಾ ತ್ರಿಧಾ ತಾನಕರೋತ್ಸುದರ್ಶನಃ

         ಶರೋತ್ತಮೈಃ ಸ್ಯಂದನವರ್ಯಮಾಸ್ಥಿತಃ||

ಹಾಗೆಯೇ ಶಕ್ರಪ್ರತಿಮ ಸಾತ್ಯಕಿಯೂ ಕೂಡ ಸುದರ್ಶನನ ಮೇಲೆ ಯಾವ ಸಾಯಕಗಳನ್ನು ಪ್ರಯೋಗಿಸುತ್ತಿದ್ದನೋ ರಥದಲ್ಲಿ ಕುಳಿತಿದ್ದ ಸುದರ್ಶನನು ಉತ್ತಮ ಶರಗಳಿಂದ ಎರಡು-ಮೂರು ಭಾಗಗಳಾಗಿ ಕತ್ತರಿಸುತ್ತಿದ್ದನು.

07094010a ಸಂಪ್ರೇಕ್ಷ್ಯ ಬಾಣಾನ್ನಿಹತಾಂಸ್ತದಾನೀಂ

         ಸುದರ್ಶನಃ ಸಾತ್ಯಕಿಬಾಣವೇಗೈಃ|

07094010c ಕ್ರೋಧಾದ್ದಿಧಕ್ಷನ್ನಿವ ತಿಗ್ಮತೇಜಾಃ

         ಶರಾನಮುಂಚತ್ತಪನೀಯಚಿತ್ರಾನ್||

ಸಾತ್ಯಕಿಯ ಬಾಣಗಳ ವೇಗದಿಂದ ತಾನು ಬಿಡುತ್ತಿದ್ದ ಬಾಣಗಳು ವ್ಯರ್ಥವಾಗುತ್ತಿರುವುದನ್ನು ಕಂಡು ತೇಜಸ್ವಿ ಸುದರ್ಶನನು ರೋಷದಿಂದ ಸಾತ್ಯಕಿಯನ್ನು ದಹಿಸಿಬಿಡುವನೋ ಎನ್ನುವಂತೆ ಆವೇಶಪೂರ್ಣನಾಗಿ ಸುವರ್ಣ ರೇಖೆಗಳಿಂದ ಚಿತ್ರಿತವಾಗಿದ್ದ ಬಾಣಗಳನ್ನು ಅವನ ಮೇಲೆ ಪ್ರಯೋಗಿಸಿದನು.

07094011a ಪುನಃ ಸ ಬಾಣೈಸ್ತ್ರಿಭಿರಗ್ನಿಕಲ್ಪೈರ್

         ಆಕರ್ಣಪೂರ್ಣೈರ್ನಿಶಿತೈಃ ಸುಪುಂಖೈಃ|

07094011c ವಿವ್ಯಾಧ ದೇಹಾವರಣಂ ವಿಭಿದ್ಯ

         ತೇ ಸಾತ್ಯಕೇರಾವಿವಿಶುಃ ಶರೀರಂ||

ಪುನಃ ಸುದರ್ಶನನು ಅಗ್ನಿಸ್ವರೂಪದ ಸುಂದರ ಪುಂಖಗಳನ್ನು ಹೊಂದಿದ್ದ ಮೂರು ನಿಶಿತ ಬಾಣಗಳನ್ನು ಕಿವಿಯ ವರೆಗೂ ಸೆಳೆದು ಬಿಡಲು, ಅವು ಸಾತ್ಯಕಿಯ ದೇಹಾವರಣವನ್ನು ಭೇದಿಸಿ ಅವನ ಶರೀರವನ್ನು ಹೊಕ್ಕವು.

07094012a ತಥೈವ ತಸ್ಯಾವನಿಪಾಲಪುತ್ರಃ

         ಸಂಧಾಯ ಬಾಣೈರಪರೈರ್ಜ್ವಲದ್ಭಿಃ|

07094012c ಆಜಘ್ನಿವಾಂಸ್ತಾನ್ರಜತಪ್ರಕಾಶಾಂಶ್

         ಚತುರ್ಭಿರಶ್ವಾಂಶ್ಚತುರಃ ಪ್ರಸಹ್ಯ||

ಹಾಗೆಯೇ ರಾಜಕುಮಾರ ಸುದರ್ಶನನು ನಗುತ್ತಾ ಪ್ರಜ್ವಲಿಸುತ್ತಿದ್ದ ನಾಲ್ಕು ಬಾಣಗಳನ್ನು ಅನುಸಂಧಾನ ಮಾಡಿ ಬೆಳ್ಳಿಯಂತೆ ಪ್ರಕಾಶಿಸುತ್ತಿದ್ದ ನಾಲ್ಕು ಕುದುರೆಗಳನ್ನೂ ಬಲಪೂರ್ವಕವಾಗಿ ಪ್ರಹರಿಸಿದನು.

07094013a ತಥಾ ತು ತೇನಾಭಿಹತಸ್ತರಸ್ವೀ

         ನಪ್ತಾ ಶಿನೇರಿಂದ್ರಸಮಾನವೀರ್ಯಃ|

07094013c ಸುದರ್ಶನಸ್ಯೇಷುಗಣೈಃ ಸುತೀಕ್ಷ್ಣೈರ್

         ಹಯಾನ್ನಿಹತ್ಯಾಶು ನನಾದ ನಾದಂ||

ಹೀಗೆ ಅವನಿಂದ ಪ್ರಹರಿಸಲ್ಪಟ್ಟ ತರಸ್ವೀ ಇಂದ್ರಸಮಾನವೀರ್ಯ ಶಿನಿಯ ಮೊಮ್ಮಗನು ತೀಕ್ಷ್ಣ ಬಾಣಗಳಿಂದ ಸುದರ್ಶನನ ಕುದುರೆಗಳನ್ನು ಸಂಹರಿಸಿ ಸಿಂಹನಾದಗೈದನು.

07094014a ಅಥಾಸ್ಯ ಸೂತಸ್ಯ ಶಿರೋ ನಿಕೃತ್ಯ

         ಭಲ್ಲೇನ ವಜ್ರಾಶನಿಸಮ್ನಿಭೇನ|

07094014c ಸುದರ್ಶನಸ್ಯಾಪಿ ಶಿನಿಪ್ರವೀರಃ

         ಕ್ಷುರೇಣ ಚಿಚ್ಚೇದ ಶಿರಃ ಪ್ರಸಹ್ಯ||

ಕೂಡಲೇ ವಜ್ರಾಶನಿಸನ್ನಿಭ ಭಲ್ಲದಿಂದ ಅವನ ಸೂತನ ಶಿರವನ್ನು ಕತ್ತರಿಸಿ ಶಿನಿಪ್ರವೀರನು ಕ್ಷುರದಿಂದ ಸುದರ್ಶನನ ಶಿರವನ್ನು ತುಂಡರಿಸಿ ಗಹಗಹಿಸಿ ನಕ್ಕನು.

07094015a ಸಕುಂಡಲಂ ಪೂರ್ಣಶಶಿಪ್ರಕಾಶಂ

         ಭ್ರಾಜಿಷ್ಣು ವಕ್ತ್ರಂ ನಿಚಕರ್ತ ದೇಹಾತ್|

07094015c ಯಥಾ ಪುರಾ ವಜ್ರಧರಃ ಪ್ರಸಹ್ಯ

         ಬಲಸ್ಯ ಸಂಖ್ಯೇಽತಿಬಲಸ್ಯ ರಾಜನ್||

ರಾಜನ್! ಹಿಂದೆ ವಜ್ರಧರನು ನಗುತ್ತಾ ರಣದಲ್ಲಿ ಬಲನ ಶಿರವನ್ನು ಹೇಗೋ ಹಾಗೆ ಸಾತ್ಯಕಿಯು ಸುದರ್ಶನನ ಪೂರ್ಣಶಶಿಯ ಪ್ರಕಾಶವನ್ನು ಹೊಂದಿದ್ದ, ಭ್ರಾಜಿಷ್ಣು ಕುಂಡಲಯುಕ್ತ ವಕ್ತ್ರವನ್ನು ಅವನ ದೇಹದಿಂದ ಬೇರ್ಪಡಿಸಿದನು.

07094016a ನಿಹತ್ಯ ತಂ ಪಾರ್ಥಿವಪುತ್ರಪೌತ್ರಂ

         ರಣೇ ಯದೂನಾಂ ಋಷಭಸ್ತರಸ್ವೀ|

07094016c ಮುದಾ ಸಮೇತಃ ಪರಯಾ ಮಹಾತ್ಮಾ

         ರರಾಜ ರಾಜನ್ಸುರರಾಜಕಲ್ಪಃ||

ರಣದಲ್ಲಿ ಆ ರಾಜಪುತ್ರ, ರಾಜನ ಮೊಮ್ಮಗನನ್ನು ಸಂಹರಿಸಿ ಯದುಗಳ ವೃಷಭ, ತರಸ್ವೀ ಸುರರಾಜಕಲ್ಪಿ ಮಹಾತ್ಮ ಸಾತ್ಯಕಿಯು ಪರಮ ಸಂತೋಷದಿಂದ ವಿರಾಜಿಸಿದನು.

07094017a ತತೋ ಯಯಾವರ್ಜುನಮೇವ ಯೇನ

         ನಿವಾರ್ಯ ಸೈನ್ಯಂ ತವ ಮಾರ್ಗಣೌಘೈಃ|

07094017c ಸದಶ್ವಯುಕ್ತೇನ ರಥೇನ ನಿರ್ಯಾಲ್

         ಲೋಕಾನ್ ವಿಸಿಸ್ಮಾಪಯಿಷುರ್ನೃವೀರಃ||

ಲೋಕವನ್ನೇ ಆಶ್ಚರ್ಯಚಕಿತವನ್ನಾಗಿ ಮಾಡುವ ಇಚ್ಛೆಯುಳ್ಳ ನರವೀರ ಸಾತ್ಯಕಿಯು ಉತ್ತಮ ಕುದುರೆಗಳೊಂದಿಗೆ ಅರ್ಜುನನು ಯಾವ ಮಾರ್ಗದಲ್ಲಿ ಹೋಗಿದ್ದನೋ ಅದೇ ಮಾರ್ಗದ ಮೂಲಕವಾಗಿ ತಡೆಯಲು ಬರುತ್ತಿದ್ದ ನಿನ್ನ ಸೇನೆಗಳನ್ನು ನಿವಾರಿಸುತ್ತಾ ಮುಂದುವರೆದನು.

07094018a ತತ್ತಸ್ಯ ವಿಸ್ಮಾಪಯನೀಯಮಗ್ರ್ಯಂ

         ಅಪೂಜಯನ್ ಯೋಧವರಾಃ ಸಮೇತಾಃ|

07094018c ಯದ್ವರ್ತಮಾನಾನಿಷುಗೋಚರೇಽರೀನ್

         ದದಾಹ ಬಾಣೈರ್ಹುತಭುಗ್ಯಥೈವ||

ವಿಸ್ಮಯನೀಯರಲ್ಲಿ ಅಗ್ರ್ಯನಾದ ಸಾತ್ಯಕಿಯನ್ನು ಯೋಧಶ್ರೇಷ್ಠರು ಒಟ್ಟಾಗಿ ಪ್ರಶಂಸಿಸಿದರು. ಅವನು ತನ್ನ ಮಾರ್ಗದಲ್ಲಿ ಗೋಚರಿಸುತ್ತಿದ್ದ ಅರಿಗಳನ್ನು ಅಗ್ನಿಯಂತಿದ್ದ ತನ್ನ ಬಾಣಗಳಿಂದ ದಹಿಸಿಬಿಡುತ್ತಿದ್ದನು.” 

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ಸುದರ್ಶನವಧೇ ಚತುರ್ನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ಸುದರ್ಶನವಧ ಎನ್ನುವ ತೊಂಭತ್ನಾಲ್ಕನೇ ಅಧ್ಯಾಯವು.

Image result for flowers against white background

Comments are closed.