Drona Parva: Chapter 93

ದ್ರೋಣ ಪರ್ವ: ಜಯದ್ರಥವಧ ಪರ್ವ

೯೩

ಸಾತ್ಯಕಿಯು ದ್ರೋಣನ ರಥವನ್ನು ಓಡಿಸಿ ಪರಾಜಯಗೊಳಿಸಿದುದು (೧-೩೫).

07093001 ಸಂಜಯ ಉವಾಚ|

07093001a ಕಾಲ್ಯಮಾನೇಷು ಸೈನ್ಯೇಷು ಶೈನೇಯೇನ ತತಸ್ತತಃ|

07093001c ಭಾರದ್ವಾಜಃ ಶರವ್ರಾತೈರ್ಮಹದ್ಭಿಃ ಸಮವಾಕಿರತ್||

ಸಂಜಯನು ಹೇಳಿದನು: “ಶೈನೇಯನು ಅಲ್ಲಲ್ಲಿ ಸೇನೆಗಳನ್ನು ನಾಶಪಡಿಸುತ್ತಿರಲು ಭಾರದ್ವಾಜ ದ್ರೋಣನು ಮಹಾ ಶರವ್ರಾತಗಳಿಂದ ಅವನನ್ನು ಮುಚ್ಚಿದನು.

07093002a ಸ ಸಂಪ್ರಹಾರಸ್ತುಮುಲೋ ದ್ರೋಣಸಾತ್ವತಯೋರಭೂತ್|

07093002c ಪಶ್ಯತಾಂ ಸರ್ವಸೈನ್ಯಾನಾಂ ಬಲಿವಾಸವಯೋರಿವ||

ಆಗ ಎಲ್ಲ ಸೇನೆಗಳೂ ನೋಡುತ್ತಿದ್ದಂತೆ ಬಲಿ ಮತ್ತು ವಾಸವರ ನಡುವೆ ನಡೆದ ಯುದ್ಧದಂಥಹ ಸಂಪ್ರಹಾರ ತುಮುಲ ಯುದ್ಧವು ದ್ರೋಣ ಮತ್ತು ಸಾತ್ಯಕಿಯರ ನಡುವೆ ನಡೆಯಿತು.

07093003a ತತೋ ದ್ರೋಣಃ ಶಿನೇಃ ಪೌತ್ರಂ ಚಿತ್ರೈಃ ಸರ್ವಾಯಸೈಃ ಶರೈಃ|

07093003c ತ್ರಿಭಿರಾಶೀವಿಷಾಕಾರೈರ್ಲಲಾಟೇ ಸಮವಿಧ್ಯತ||

ದ್ರೋಣನು ಶಿನಿಯ ಮೊಮ್ಮೊಗನ ಹಣೆಗೆ ಮೂರು ಚಿತ್ರಿತ ಲೋಹಮಯ ಸರ್ಪಸದೃಶ ಬಾಣಗಳನ್ನು ಪ್ರಹರಿಸಿದನು.

07093004a ತೈರ್ಲಲಾಟಾರ್ಪಿತೈರ್ಬಾಣೈರ್ಯುಯುಧಾನಸ್ತ್ವಜಿಹ್ಮಗೈಃ|

07093004c ವ್ಯರೋಚತ ಮಹಾರಾಜ ತ್ರಿಶೃಂಗ ಇವ ಪರ್ವತಃ||

ಮಹಾರಾಜ! ಹಣೆಗೆ ಚುಚ್ಚಿಕೊಂಡ ಆ ಜಿಹ್ಮಗಗಳಿಂದ ಯುಯುಧಾನನು ತ್ರಿಶೃಂಗ ಪರ್ವತದಂತೆ ಶೋಭಿಸಿದನು.

07093005a ತತೋಽಸ್ಯ ಬಾಣಾನಪರಾನಿಂದ್ರಾಶನಿಸಮಸ್ವನಾನ್|

07093005c ಭಾರದ್ವಾಜೋಽಮ್ತರಪ್ರೇಕ್ಷೀ ಪ್ರೇಷಯಾಮಾಸ ಸಂಯುಗೇ||

ಶತ್ರುವಿನ ದುರ್ಬಲ ಛಿದ್ರವನ್ನೇ ಹುಡುಕುತ್ತಿದ್ದ ದ್ರೋಣನು ಇಂದ್ರನ ವಜ್ರಾಯುಧ ಸಮಾನ ಧ್ವನಿಯಿದ್ದ ಇನ್ನೂ ಅನೇಕ ಬಾಣಗಳನ್ನು ಸಂಯುಗದಲ್ಲಿ ಸಾತ್ಯಕಿಯ ಮೇಲೆ ಸಮಯವರಿತು ಪ್ರಯೋಗಿಸಿದನು.

07093006a ತಾನ್ದ್ರೋಣಚಾಪನಿರ್ಮುಕ್ತಾನ್ದಾಶಾರ್ಹಃ ಪತತಃ ಶರಾನ್|

07093006c ದ್ವಾಭ್ಯಾಂ ದ್ವಾಭ್ಯಾಂ ಸುಪುಂಖಾಭ್ಯಾಂ ಚಿಚ್ಚೇದ ಪರಮಾಸ್ತ್ರವಿತ್||

ದ್ರೋಣನ ಧನುಸ್ಸಿನಿಂದ ಹೊರಟು ಬೀಳುತ್ತಿದ್ದ ಆ ಶರಗಳನ್ನು ಪರಮಾಸ್ತ್ರವಿದು ದಾಶಾರ್ಹನು ಪುಂಖಗಳುಳ್ಳ ಎರೆಡೆರಡು ಬಾಣಗಳಿಂದ ಕತ್ತರಿಸಿದನು.

07093007a ತಾಮಸ್ಯ ಲಘುತಾಂ ದ್ರೋಣಃ ಸಮವೇಕ್ಷ್ಯ ವಿಶಾಂ ಪತೇ|

07093007c ಪ್ರಹಸ್ಯ ಸಹಸಾವಿಧ್ಯದ್ವಿಂಶತ್ಯಾ ಶಿನಿಪುಂಗವಂ||

ವಿಶಾಂಪತೇ! ಅವನ ಹಸ್ತಲಾಘವವನ್ನು ನೋಡಿದ ದ್ರೋಣನು ಜೋರಾಗಿ ನಕ್ಕು ತಕ್ಷಣವೇ ಶಿನಿಪುಂಗವನನ್ನು ಇಪ್ಪತ್ತು ಬಾಣಗಳಿಂದ ಹೊಡೆದನು.

07093008a ಪುನಃ ಪಂಚಾಶತೇಷೂಣಾಂ ಶತೇನ ಚ ಸಮಾರ್ಪಯತ್|

07093008c ಲಘುತಾಂ ಯುಯುಧಾನಸ್ಯ ಲಾಘವೇನ ವಿಶೇಷಯನ್||

ಯುಯುಧಾನನ ಹಸ್ತಲಾಘವವನ್ನು ತನ್ನ ಹಸ್ತಲಾಘವದಿಂದ ಮೀರಿಸುತ್ತಾ ದ್ರೋಣನು ಪುನಃ ಐವತ್ತು ನಿಶಿತ ಬಾಣಗಳಿಂದ ಪ್ರಹರಿಸಿದನು.

07093009a ಸಮುತ್ಪತಂತಿ ವಲ್ಮೀಕಾದ್ಯಥಾ ಕ್ರುದ್ಧಾ ಮಹೋರಗಾಃ|

07093009c ತಥಾ ದ್ರೋಣರಥಾದ್ರಾಜನ್ನುತ್ಪತಂತಿ ತನುಚ್ಚಿದಃ||

ಕ್ರುದ್ಧ ಮಹಾಸರ್ಪಗಳು ಹುತ್ತದಿಂದ ಹೇಗೆ ಒಂದೊಂದಾಗಿ ಹೊರಬರುತ್ತವೆಯೋ ಹಾಗೆ ದ್ರೋಣನ ರಥದಿಂದ ದೇಹವನ್ನು ಸೀಳಬಲ್ಲ ಬಾಣಗಳು ಹೊರಬರುತ್ತಿದ್ದವು.

07093010a ತಥೈವ ಯುಯುಧಾನೇನ ಸೃಷ್ಟಾಃ ಶತಸಹಸ್ರಶಃ|

07093010c ಅವಾಕಿರನ್ದ್ರೋಣರಥಂ ಶರಾ ರುಧಿರಭೋಜನಾಃ||

ಅದೇ ರೀತಿಯಲ್ಲಿ ಯುಯುಧಾನನು ಸೃಷ್ಟಿಸಿದ ನೂರಾರು ಸಾವಿರಾರು ರಕ್ತವನ್ನು ಕುಡಿಯುವ ಶರಗಳು ದ್ರೋಣನ ರಥವನ್ನು ಮುತ್ತಿದವು.

07093011a ಲಾಘವಾದ್ದ್ವಿಜಮುಖ್ಯಸ್ಯ ಸಾತ್ವತಸ್ಯ ಚ ಮಾರಿಷ|

07093011c ವಿಶೇಷಂ ನಾಧ್ಯಗಚ್ಚಾಮ ಸಮಾವಾಸ್ತಾಂ ನರರ್ಷಭೌ||

ಮಾರಿಷ! ದ್ವಿಜಮುಖ್ಯ ದ್ರೋಣ ಮತ್ತು ಸಾತ್ವತ ಇವರಿಬ್ಬರು ನರರ್ಷಭರ ನಡುವೆ ಹಸ್ತ ಲಾಘವದಲ್ಲಿ ನಾವು ಯಾವ ರೀತಿಯ ವ್ಯತ್ಯಾಸವನ್ನೂ ಕಾಣಲಿಲ್ಲ.

07093012a ಸಾತ್ಯಕಿಸ್ತು ತತೋ ದ್ರೋಣಂ ನವಭಿರ್ನತಪರ್ವಭಿಃ|

07093012c ಆಜಘಾನ ಭೃಶಂ ಕ್ರುದ್ಧೋ ಧ್ವಜಂ ಚ ನಿಶಿತೈಃ ಶರೈಃ|

07093012e ಸಾರಥಿಂ ಚ ಶತೇನೈವ ಭಾರದ್ವಾಜಸ್ಯ ಪಶ್ಯತಃ||

ಅನಂತರ ಸಾತ್ಯಕಿಯು ದ್ರೋಣನನ್ನು ಒಂಭತ್ತು ನತಪರ್ವಗಳಿಂದ ಹೊಡೆದನು. ಮತ್ತು ಅತ್ಯಂತ ಕ್ರುದ್ಧನಾಗಿ ಭಾರದ್ವಾಜನು ನೋಡುತ್ತಿದ್ದಂತೆಯೇ ನೂರು ನಿಶಿತ ಶರಗಳಿಂದ ಅವನ ಧ್ವಜವನ್ನೂ ಸಾರಥಿಯನ್ನೂ ಹೊಡೆದನು.

07093013a ಲಾಘವಂ ಯುಯುಧಾನಸ್ಯ ದೃಷ್ಟ್ವಾ ದ್ರೋಣೋ ಮಹಾರಥಃ|

07093013c ಸಪ್ತತ್ಯಾ ಸಾತ್ಯಕಿಂ ವಿದ್ಧ್ವಾ ತುರಗಾಂಶ್ಚ ತ್ರಿಭಿಸ್ತ್ರಿಭಿಃ|

07093013e ಧ್ವಜಮೇಕೇನ ವಿವ್ಯಾಧ ಮಾಧವಸ್ಯ ರಥೇ ಸ್ಥಿತಂ||

ಯುಯುಧಾನನ ಹಸ್ತಲಾಘವವನ್ನು ಕಂಡು ಮಹಾರಥ ದ್ರೋಣನು ಸಾತ್ಯಕಿಯನ್ನು ಎಪ್ಪತ್ತು ಬಾಣಗಳಿಂದ ಹೊಡೆದು, ಮೂರರಿಂದ ಕುದುರೆಗಳನ್ನೂ, ಒಂದರಿಂದ ಮಾಧವನ ರಥದಲ್ಲಿದ್ದ ಧ್ವಜವನ್ನೂ ಹೊಡೆದನು.

07093014a ಅಥಾಪರೇಣ ಭಲ್ಲೇನ ಹೇಮಪುಂಖೇನ ಪತ್ರಿಣಾ|

07093014c ಧನುಶ್ಚಿಚ್ಚೇದ ಸಮರೇ ಮಾಧವಸ್ಯ ಮಹಾತ್ಮನಃ||

ಸಮರದಲ್ಲಿ ದ್ರೋಣನು ಚಿನ್ನದ ರೆಕ್ಕೆಗಳಿದ್ದ ಇನ್ನೊಂದು ಭಲ್ಲದಿಂದ ಮಹಾತ್ಮ ಮಾಧವನ ಧನುಸ್ಸನ್ನು ತುಂಡರಿಸಿದನು.

07093015a ಸಾತ್ಯಕಿಸ್ತು ತತಃ ಕ್ರುದ್ಧೋ ಧನುಸ್ತ್ಯಕ್ತ್ವಾ ಮಹಾರಥಃ|

07093015c ಗದಾಂ ಜಗ್ರಾಹ ಮಹತೀಂ ಭಾರದ್ವಾಜಾಯ ಚಾಕ್ಷಿಪತ್||

ಆಗ ಮಹಾರಥ ಸಾತ್ಯಕಿಯಾದರೋ ಕ್ರುದ್ಧನಾಗಿ ಧನುಸ್ಸನ್ನು ಬಿಸುಟು ಮಹಾ ಗದೆಯೊಂದನ್ನು ಹಿಡಿದು ಭಾರದ್ವಾಜನ ಮೇಲೆ ಎಸೆದನು.

07093016a ತಾಮಾಪತಂತೀಂ ಸಹಸಾ ಪಟ್ಟಬದ್ಧಾಮಯಸ್ಮಯೀಂ|

07093016c ನ್ಯವಾರಯಚ್ಚರೈರ್ದ್ರೋಣೋ ಬಹುಭಿರ್ಬಹುರೂಪಿಭಿಃ||

ತನ್ನ ಮೇಲೆ ರಭಸದಿಂದ ಬರುತ್ತಿದ್ದ ಆ ಚಿನ್ನದ ಪಟ್ಟಿಯಿಂದ ಸುತ್ತಲ್ಪಟ್ಟಿದ್ದ ಲೋಹಮಯ ಗದೆಯನ್ನು ದ್ರೋಣನು ಅನೇಕ ಬಹುರೂಪೀ ಬಾಣಗಳಿಂದ ನಿರಸನಗೊಳಿಸಿದನು.

07093017a ಅಥಾನ್ಯದ್ಧನುರಾದಾಯ ಸಾತ್ಯಕಿಃ ಸತ್ಯವಿಕ್ರಮಃ|

07093017c ವಿವ್ಯಾಧ ಬಹುಭಿರ್ವೀರಂ ಭಾರದ್ವಾಜಂ ಶಿಲಾಶಿತೈಃ||

ಅನಂತರ ಸತ್ಯವಿಕ್ರಮಿ ಸಾತ್ಯಕಿಯು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ವೀರ ಭಾರದ್ವಾಜನನ್ನು ಅನೇಕ ಶಿಲಾಶಿತ ಶರಗಳಿಂದ ಗಾಯಗೊಳಿಸಿದನು.

07093018a ಸ ವಿದ್ಧ್ವಾ ಸಮರೇ ದ್ರೋಣಂ ಸಿಂಹನಾದಮಮುಂಚತ|

07093018c ತಂ ವೈ ನ ಮಮೃಷೇ ದ್ರೋಣಃ ಸರ್ವಶಸ್ತ್ರಭೃತಾಂ ವರಃ||

ಸಮರದಲ್ಲಿ ದ್ರೋಣನನ್ನು ಹಾಗೆ ಗಾಯಗೊಳಿಸಿ ಸಾತ್ಯಕಿಯು ಸಿಂಹನಾದಗೈದನು. ಆಗ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠನಾದ ದ್ರೋಣನು ಅವನ ಆ ಕೃತ್ಯವನ್ನು ಸಹಿಸಿಕೊಳ್ಳಲಿಲ್ಲ.

07093019a ತಥಃ ಶಕ್ತಿಂ ಗೃಹೀತ್ವಾ ತು ರುಕ್ಮದಂಡಾಮಯಸ್ಮಯೀಂ|

07093019c ತರಸಾ ಪ್ರೇಷಯಾಮಾಸ ಮಾಧವಸ್ಯ ರಥಂ ಪ್ರತಿ||

ಚಿನ್ನದ ದಂಡದಿಂದ ಕೂಡಿದ್ದ ಲೋಹಮಯ ಶಕ್ತ್ಯಾಯುಧವನ್ನೆತ್ತಿಕೊಂಡು ಮಾಧವನ ರಥದ ಮೇಲೆ ರಭಸದಿಂದ ಎಸೆದನು.

07093020a ಅನಾಸಾದ್ಯ ತು ಶೈನೇಯಂ ಸಾ ಶಕ್ತಿಃ ಕಾಲಸನ್ನಿಭಾ|

07093020c ಭಿತ್ತ್ವಾ ರಥಂ ಜಗಾಮೋಗ್ರಾ ಧರಣೀಂ ದಾರುಣಸ್ವನಾ||

ಕಾಲನಂತಿದ್ದ ಆ ಶಕ್ತಿಯು ಶೈನೇಯನನ್ನು ಮುಟ್ಟದೇ ಅವನ ರಥವನ್ನು ಮಾತ್ರ ಭೇದಿಸಿ ಉಗ್ರ ದಾರುಣ ಸ್ವರದೊಂದಿಗೆ ಭೂಮಿಯ ಮೇಲೆ ಬಿದ್ದಿತು.

07093021a ತತೋ ದ್ರೋಣಂ ಶಿನೇಃ ಪೌತ್ರೋ ರಾಜನ್ವಿವ್ಯಾಧ ಪತ್ರಿಣಾ|

07093021c ದಕ್ಷಿಣಂ ಭುಜಮಾಸಾದ್ಯ ಪೀಡಯನ್ಭರತರ್ಷಭ||

ರಾಜನ್! ಭರತರ್ಷಭ! ಆಗ ಶಿನಿಯ ಮೊಮ್ಮಗನು ದ್ರೋಣನನ್ನು ಪತ್ರಿಗಳಿಂದ ಹೊಡೆದನು. ಅದು ದ್ರೋಣನ ಬಲಭುಜಕ್ಕೆ ತಾಗಿ ಪೀಡೆಯನ್ನುಂಟುಮಾಡಿತು.

07093022a ದ್ರೋಣೋಽಪಿ ಸಮರೇ ರಾಜನ್ಮಾಧವಸ್ಯ ಮಹದ್ಧನುಃ|

07093022c ಅರ್ಧಚಂದ್ರೇಣ ಚಿಚ್ಚೇದ ರಥಶಕ್ತ್ಯಾ ಚ ಸಾರಥಿಂ||

ರಾಜನ್! ದ್ರೋಣನಾದರೋ ಸಮರದಲ್ಲಿ ಮಾಧವನ ಮಹಾ ಧನುಸ್ಸನ್ನು ಅರ್ಧಚಂದ್ರದಿಂದ ತುಂಡರಿಸಿ ರಥಶಕ್ತಿ[1]ಯಿಂದ ಸಾರಥಿಯನ್ನು ಹೊಡೆದನು.

07093023a ಮುಮೋಹ ಸರಥಿಸ್ತಸ್ಯ ರಥಶಕ್ತ್ಯಾ ಸಮಾಹತಃ|

07093023c ಸ ರಥೋಪಸ್ಥಮಾಸಾದ್ಯ ಮುಹೂರ್ತಂ ಸಮ್ನ್ಯಷೀದತ||

ರಥಶಕ್ತಿಯಿಂದ ಪ್ರಹೃತನಾದ ಸಾರಥಿಯು ಮೂರ್ಛೆಹೊಂದಿ ಮುಹೂರ್ತಕಾಲ ರಥಪೀಠದ ಹಿಂಬದಿಯಲ್ಲಿ ಸುಮ್ಮನೇ ಕುಳಿತುಕೊಂಡನು.

07093024a ಚಕಾರ ಸಾತ್ಯಕೀ ರಾಜಂಸ್ತತ್ರ ಕರ್ಮಾತಿಮಾನುಷಂ|

07093024c ಅಯೋಧಯಚ್ಚ ಯದ್ದ್ರೋಣಂ ರಶ್ಮೀಂ ಜಗ್ರಾಹ ಚ ಸ್ವಯಂ||

ರಾಜನ್! ಆಗ ಸಾತ್ಯಕಿಯು ಅಲ್ಲಿ ಅತಿಮಾನುಷ ಕರ್ಮವನ್ನು ಮಾಡಿದನು. ಸ್ವಯಂ ತಾನೇ ಕುದುರೆಗಳ ಕಡಿವಾಣಗಳನ್ನು ಹಿಡಿದುಕೊಂಡು ದ್ರೋಣನೊಂದಿಗೆ ಯುದ್ಧಮಾಡಿದನು.

07093025a ತತಃ ಶರಶತೇನೈವ ಯುಯುಧಾನೋ ಮಹಾರಥಃ|

07093025c ಅವಿಧ್ಯದ್ಬ್ರಾಹ್ಮಣಂ ಸಂಖ್ಯೇ ಹೃಷ್ಟರೂಪೋ ವಿಶಾಂ ಪತೇ||

ವಿಶಾಂಪತೇ! ಆಗ ಯುದ್ಧದಲ್ಲಿ ಹೃಷ್ಟರೂಪನಾದ ಮಹಾರಥ ಯುಯುಧಾನನು ಬ್ರಾಹ್ಮಣನನ್ನು ನೂರು ಬಾಣಗಳಿಂದ ಹೊಡೆದನು.

07093026a ತಸ್ಯ ದ್ರೋಣಃ ಶರಾನ್ಪಂಚ ಪ್ರೇಷಯಾಮಾಸ ಭಾರತ|

07093026c ತೇ ತಸ್ಯ ಕವಚಂ ಭಿತ್ತ್ವಾ ಪಪುಃ ಶೋಣಿತಮಾಹವೇ||

ಭಾರತ! ಆಗ ರಣದಲ್ಲಿ ದ್ರೋಣನು ಅವನ ಮೇಲೆ ಐದು ಬಾಣಗಳನ್ನು ಪ್ರಯೋಗಿಸಲು ಅವು ಅವನ ಕವಚವನ್ನು ಕತ್ತರಿಸಿ ರಕ್ತವನ್ನು ಕುಡಿದವು.

07093027a ನಿರ್ವಿದ್ಧಸ್ತು ಶರೈರ್ಘೋರೈರಕ್ರುಧ್ಯತ್ಸಾತ್ಯಕಿರ್ಭೃಶಂ|

07093027c ಸಾಯಕಾನ್ವ್ಯಸೃಜಚ್ಚಾಪಿ ವೀರೋ ರುಕ್ಮರಥಂ ಪ್ರತಿ||

ಘೋರ ಶರಗಳಿಂದ ಗಾಯಗೊಂಡ ಸಾತ್ಯಕಿಯು ತುಂಬಾ ಕ್ರುದ್ಧನಾದನು. ಆ ವೀರನು ದ್ರೋಣನ ಬಂಗಾರದ ರಥದ ಮೇಲೆ ಸಾಯಕಗಳ ಮಳೆಯನ್ನೇ ಸುರಿಸಿದನು.

07093028a ತತೋ ದ್ರೋಣಸ್ಯ ಯಂತಾರಂ ನಿಪಾತ್ಯೈಕೇಷುಣಾ ಭುವಿ|

07093028c ಅಶ್ವಾನ್ವ್ಯದ್ರಾವಯದ್ಬಾಣೈರ್ಹತಸೂತಾನ್ಮಹಾತ್ಮನಃ||

ಅನಂತರ ಅವನು ಒಂದೇ ಬಾಣದಿಂದ ಮಹಾತ್ಮ ದ್ರೋಣನ ಸಾರಥಿಯನ್ನು ಹೊಡೆದು ನೆಲಕ್ಕೆ ಬೀಳಿಸಿದನು. ಮತ್ತು ಸೂತನು ಹತನಾಗಲು ಬಾಣಗಳಿಂದ ಹೊಡೆದು ಕುದುರೆಗಳನ್ನು ಓಡಿಸಿದನು.

07093029a ಸ ರಥಃ ಪ್ರದ್ರುತಃ ಸಂಖ್ಯೇ ಮಂಡಲಾನಿ ಸಹಸ್ರಶಃ|

07093029c ಚಕಾರ ರಾಜತೋ ರಾಜನ್ಭ್ರಾಜಮಾನ ಇವಾಂಶುಮಾನ್||

ರಾಜನ್! ಬೆಳ್ಳಿಯಂತೆ ಹೊಳೆಯುತ್ತಿದ್ದ ಆ ರಥವು ರಣದಲ್ಲಿ ಸಹಸ್ರಾರು ಸುತ್ತುಗಳನ್ನು ಹಾಕಿ, ಸೂರ್ಯನಂತೆ ಪ್ರಕಾಶಿಸಿತು.

07093030a ಅಭಿದ್ರವತ ಗೃಹ್ಣೀತ ಹಯಾನ್ದ್ರೋಣಸ್ಯ ಧಾವತ|

07093030c ಇತಿ ಸ್ಮ ಚುಕ್ರುಶುಃ ಸರ್ವೇ ರಾಜಪುತ್ರಾಃ ಸರಾಜಕಾಃ||

ಆಗ ಅಲ್ಲಿದ್ದ ರಾಜರು ಮತ್ತು ರಾಜಪುತ್ರರು ಎಲ್ಲರೂ “ಓಡಿಹೋಗಿ! ಹಿಡಿಯಿರಿ! ದ್ರೋಣನ ಕುದುರೆಗಳನ್ನು ತಡೆಯಿರಿ!” ಎಂದು ಕೂಗಿಕೊಳ್ಳುತ್ತಿದ್ದರು.

07093031a ತೇ ಸಾತ್ಯಕಿಮಪಾಸ್ಯಾಶು ರಾಜನ್ಯುಧಿ ಮಹಾರಥಾಃ|

07093031c ಯತೋ ದ್ರೋಣಸ್ತತಃ ಸರ್ವೇ ಸಹಸಾ ಸಮುಪಾದ್ರವನ್||

ರಾಜನ್! ಯುದ್ಧದಲ್ಲಿ ಸಾತ್ಯಕಿಯನ್ನು ಅಲ್ಲಿಯೇ ಬಿಟ್ಟು ಮಹಾರಥರೆಲ್ಲರೂ ಕೂಡಲೇ ದ್ರೋಣನ ರಥವು ಹೋಗುತ್ತಿದ್ದ ಕಡೆಗೇ ತಮ್ಮ ರಥಗಳನ್ನೂ ಓಡಿಸಿದರು.

07093032a ತಾನ್ದೃಷ್ಟ್ವಾ ಪ್ರದ್ರುತಾನ್ಸರ್ವಾನ್ಸಾತ್ವತೇನ ಶರಾರ್ದಿತಾನ್|

07093032c ಪ್ರಭಗ್ನಂ ಪುನರೇವಾಸೀತ್ತವ ಸೈನ್ಯಂ ಸಮಾಕುಲಂ||

ಸಾತ್ವತನ ಶರಗಳಿಂದ ಪೀಡಿತವಾಗಿದ್ದ ನಿನ್ನ ಸೈನ್ಯ ಸಮಾಕುಲವು ಅವರು ಓಡಿ ಹೋಗುತ್ತಿದ್ದುದನ್ನು ನೋಡಿ ಪುನಃ ಪ್ರಭಗ್ನವಾಯಿತು.

07093033a ವ್ಯೂಹಸ್ಯೈವ ಪುನರ್ದ್ವಾರಂ ಗತ್ವಾ ದ್ರೋಣೋ ವ್ಯವಸ್ಥಿತಃ|

07093033c ವಾತಾಯಮಾನೈಸ್ತೈರಶ್ವೈರ್ಹೃತೋ ವೃಷ್ಣಿಶರಾರ್ದಿತೈಃ||

ವೃಷ್ಣಿಯ ಶರಗಳಿಂದ ಪೀಡಿತಗೊಂಡು ವಾಯುವೇಗದಿಂದ ಓಡಿ ಹೋಗುತ್ತಿದ್ದ ಕುದುರೆಗಳಿಂದಲೇ ಪುನಃ ಹಿಂದಕ್ಕೆ ಕರತರಲ್ಪಟ್ಟ ದ್ರೋಣನು ವ್ಯೂಹದ ಮಹಾದ್ವಾರಕ್ಕೆ ಹೋಗಿ ಪುನಃ ಅಲ್ಲಿಯೇ ವ್ಯವಸ್ಥಿತನಾದನು.

07093034a ಪಾಂಡುಪಾಂಚಾಲಸಂಭಗ್ನಂ ವ್ಯೂಹಮಾಲೋಕ್ಯ ವೀರ್ಯವಾನ್|

07093034c ಶೈನೇಯೇ ನಾಕರೋದ್ಯತ್ನಂ ವ್ಯೂಹಸ್ಯೈವಾಭಿರಕ್ಷಣೇ||

ಪಾಂಡವರು ಮತ್ತು ಪಾಂಚಾಲರಿಂದ ತನ್ನ ವ್ಯೂಹವು ಭಗ್ನವಾಗುತ್ತಿರುವುದನ್ನು ನೋಡಿ ವೀರ್ಯವಾನ್ ದ್ರೋಣನು ಶೈನೇಯನನ್ನು ಹಿಂಬಾಲಿಸಿ ಹೋಗದೇ ವ್ಯೂಹದ ರಕ್ಷಣೆಯಲ್ಲಿಯೇ ನಿರತನಾದನು.

07093035a ನಿವಾರ್ಯ ಪಾಂಡುಪಾಂಚಾಲಾನ್ದ್ರೋಣಾಗ್ನಿಃ ಪ್ರದಹನ್ನಿವ|

07093035c ತಸ್ಥೌ ಕ್ರೋಧಾಗ್ನಿಸಂದೀಪ್ತಃ ಕಾಲಸೂರ್ಯ ಇವೋದಿತಃ||

ಕೋಪವೆಂಬ ಕಟ್ಟಿಗೆಯಿಂದ ಪ್ರಜ್ವಲಿಸುತ್ತಿದ್ದ ದ್ರೋಣನು ಪಾಂಡು ಪಾಂಚಾಲ ಯೋಧರನ್ನು ದಹಿಸಿಬಿಡುವನೋ ಎಂಬಂತೆ ವ್ಯೂಹದ ಅಗ್ರಭಾಗದಲ್ಲಿ ನಿಂತು ಪ್ರಳಯಕಾಲದ ಸೂರ್ಯನಂತೆ ಪ್ರಕಾಶಿಸುತ್ತಿದ್ದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ಸಾತ್ಯಕಿಪರಾಕ್ರಮೇ ತ್ರಿನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ಸಾತ್ಯಕಿಪರಾಕ್ರಮ ಎನ್ನುವ ತೊಂಭತ್ಮೂರನೇ ಅಧ್ಯಾಯವು.

Image result for flowers against white background

[1] ರಥಶಕ್ತಿ ಎನ್ನುವುದಕ್ಕೆ ವ್ಯಾಖ್ಯಾನಕಾರರು ’ಕೇತಕಪತ್ರಾಕಾರಮುಖಯಾ ಶಕ್ತಿ’ ಎಂದರೆ ಕೇದಗೆಯ ಪತ್ರದ (ತಾಳೇಗರಿಯ) ಆಕಾರದ ಮುಖದಿಂದ ಕೂಡಿದ ಶಕ್ತ್ಯಾಯುಧವೆಂದು ಅರ್ಥಮಾಡಿರುತ್ತಾರೆ.

Comments are closed.