Drona Parva: Chapter 92

ದ್ರೋಣ ಪರ್ವ: ಜಯದ್ರಥವಧ ಪರ್ವ

೯೨

ಸಾತ್ಯಕಿಯಿಂದ ದುರ್ಯೋಧನನ ಪರಾಜಯ (೧-೨೪). ಸಾತ್ಯಕಿಯು ಕೃತವರ್ಮನನ್ನು ಪರಾಜಯಗೊಳಿಸಿದುದು (೨೫-೪೪).

07092001 ಸಂಜಯ ಉವಾಚ|

07092001a ತೇ ಕಿರಂತಃ ಶರವ್ರಾತಾನ್ಸರ್ವೇ ಯತ್ತಾಃ ಪ್ರಹಾರಿಣಃ|

07092001c ತ್ವರಮಾಣಾ ಮಹಾರಾಜ ಯುಯುಧಾನಮಯೋಧಯನ್||

ಸಂಜಯನು ಹೇಳಿದನು: “ಮಹಾರಾಜ! ಪ್ರಹಾರಕುಶಲ ಅವರೆಲ್ಲರೂ ಬಾಣಗಳ ಸಮೂಹಗಳನ್ನು ಪ್ರಯೋಗಿಸುತ್ತಾ ತ್ವರೆಮಾಡಿ ಯುಯುಧಾನನೊಡನೆ ಯುದ್ಧ ಮಾಡಿದರು.

07092002a ತಂ ದ್ರೋಣಃ ಸಪ್ತಸಪ್ತತ್ಯಾ ಜಘಾನ ನಿಶಿತೈಃ ಶರೈಃ|

07092002c ದುರ್ಮರ್ಷಣೋ ದ್ವಾದಶಭಿರ್ದುಃಸ್ಸಹೋ ದಶಭಿಃ ಶರೈಃ||

ಅವನನ್ನು ದ್ರೋಣನು ಎಪ್ಪತ್ತೇಳು ನಿಶಿತ ಬಾಣಗಳಿಂದ, ದುರ್ಮರ್ಷಣನು ಹನ್ನೆರಡು ಮತ್ತು ದುಃಸ್ಸಹನು ಹತ್ತು ಬಾಣಗಳಿಂದ ಹೊಡೆದರು.

07092003a ವಿಕರ್ಣಶ್ಚಾಪಿ ನಿಶಿತೈಸ್ತ್ರಿಂಶದ್ಭಿಃ ಕಂಕಪತ್ರಿಭಿಃ|

07092003c ವಿವ್ಯಾಧ ಸವ್ಯೇ ಪಾರ್ಶ್ವೇ ತು ಸ್ತನಾಭ್ಯಾಮಂತರೇ ತಥಾ||

ಹಾಗೆಯೇ ವಿಕರ್ಣನೂ ಕೂಡ ರಣಹದ್ದಿನ ರೆಕ್ಕೆಗಳ ಮೂವತ್ತು ನಿಶಿತ ಕಂಕಪತ್ರಗಳಿಂದ ಅವನ ಎಡಪಾರ್ಶ್ವವನ್ನೂ ಮತ್ತು ವಕ್ಷಸ್ಥಳವನ್ನೂ ಪ್ರಹರಿಸಿದನು.

07092004a ದುರ್ಮುಖೋ ದಶಭಿರ್ಬಾಣೈಸ್ತಥಾ ದುಃಶಾಸನೋಽಷ್ಟಭಿಃ|

07092004c ಚಿತ್ರಸೇನಶ್ಚ ಶೈನೇಯಂ ದ್ವಾಭ್ಯಾಂ ವಿವ್ಯಾಧ ಮಾರಿಷ||

ಮಾರಿಷ! ದುರ್ಮುಖನು ಹತ್ತು ಬಾಣಗಳಿಂದ, ಹಾಗೆಯೇ ದುಃಶಾಸನನು ಎಂಟು ಬಾಣಗಳಿಂದ ಮತ್ತು ಚಿತ್ರಸೇನನು ಎರಡರಿಂದ ಶೈನೇಯನನ್ನು ಹೊಡೆದರು.

07092005a ದುರ್ಯೋಧನಶ್ಚ ಮಹತಾ ಶರವರ್ಷೇಣ ಮಾಧವಂ|

07092005c ಅಪೀಡಯದ್ರಣೇ ರಾಜನ್ ಶೂರಾಶ್ಚಾನ್ಯೇ ಮಹಾರಥಾಃ||

ರಾಜನ್! ದುರ್ಯೋಧನನೂ ಮತ್ತು ರಣದಲ್ಲಿದ್ದ ಅನ್ಯ ಮಹಾರಥ ಶೂರರೂ ಮಾಧವನನ್ನು ಮಹಾ ಶರವರ್ಷದಿಂದ ಪೀಡಿಸಿದರು.

07092006a ಸರ್ವತಃ ಪ್ರತಿವಿದ್ಧಸ್ತು ತವ ಪುತ್ರೈರ್ಮಹಾರಥೈಃ|

07092006c ತಾನ್ಪ್ರತ್ಯವಿಧ್ಯಚ್ಚೈನೇಯಃ ಪೃಥಕ್ಪೃಥಗಜಿಹ್ಮಗೈಃ||

ನಿನ್ನ ಮಹಾರಥ ಪುತ್ರರಿಂದ ಎಲ್ಲ ಕಡೆಗಳಿಂದ ಹೀಗೆ ಹೊಡೆಯಲ್ಪಟ್ಟ ಶೈನೇಯನು ಅವರಿಗೆ ಪ್ರತಿಯಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಒಬ್ಬೊಬ್ಬರನ್ನೂ ಜಿಹ್ಮಗಗಳಿಂದ ಹೊಡೆದನು.

07092007a ಭಾರದ್ವಾಜಂ ತ್ರಿಭಿರ್ಬಾಣೈರ್ದುಃಸಹಂ ನವಭಿಸ್ತಥಾ|

07092007c ವಿಕರ್ಣಂ ಪಂಚವಿಂಶತ್ಯಾ ಚಿತ್ರಸೇನಂ ಚ ಸಪ್ತಭಿಃ||

07092008a ದುರ್ಮರ್ಷಣಂ ದ್ವಾದಶಭಿಶ್ಚತುರ್ಭಿಶ್ಚ ವಿವಿಂಶತಿಂ|

07092008c ಸತ್ಯವ್ರತಂ ಚ ನವಭಿರ್ವಿಜಯಂ ದಶಭಿಃ ಶರೈಃ||

ಭಾರದ್ವಾಜನನ್ನು ಮೂರು ಬಾಣಗಳಿಂದ, ದುಃಸ್ಸಹನನ್ನು ಒಂಭತ್ತರಿಂದ, ವಿಕರ್ಣನನ್ನು ಇಪ್ಪತ್ತೈದರಿಂದ, ಚಿತ್ರಸೇನನನ್ನು ಏಳರಿಂದ, ದುರ್ಮರ್ಷಣನನ್ನು ಹನ್ನೆರಡರಿಂದ, ವಿವಿಂಶತಿಯನ್ನು ನಾಲ್ಕರಿಂದ, ಸತ್ಯವ್ರತನನ್ನು ಒಂಭತ್ತರಿಂದ ಮತ್ತು ವಿಜಯನನ್ನು ಹತ್ತು ಶರಗಳಿಂದ ಹೊಡೆದನು.

07092009a ತತೋ ರುಕ್ಮಾಂಗದಂ ಚಾಪಂ ವಿಧುನ್ವಾನೋ ಮಹಾರಥಃ|

07092009c ಅಭ್ಯಯಾತ್ಸಾತ್ಯಕಿಸ್ತೂರ್ಣಂ ಪುತ್ರಂ ತವ ಮಹಾರಥಂ||

ಆಗ ತಕ್ಷಣವೇ ಮಹಾರಥಿ ಸಾತ್ಯಕಿಯು ಧನುಸ್ಸನ್ನು ಟೇಂಕರಿಸುತ್ತಾ ನಿನ್ನ ಮಗ ರುಕ್ಮಾಂಗದ ಮಹಾರಥ ದುರ್ಯೋಧನನನ್ನು ಎದುರಿಸಿದನು.

07092010a ರಾಜಾನಂ ಸರ್ವಲೋಕಸ್ಯ ಸರ್ವಶಸ್ತ್ರಭೃತಾಂ ವರಂ|

07092010c ಶರೈರಭ್ಯಾಹನದ್ಗಾಢಂ ತತೋ ಯುದ್ಧಮಭೂತ್ತಯೋಃ||

ಸರ್ವಲೋಕಗಳಿಗೂ ರಾಜನಾಗಿದ್ದ, ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠನಾಗಿದ್ದ ಅವನನ್ನು ಸಾತ್ಯಕಿಯು ಶರಗಳಿಂದ ಗಾಢವಾಗಿ ಪ್ರಹರಿಸಿದನು. ಹೀಗೆ ಅವರಿಬ್ಬರ ನಡುವೆ ಯುದ್ಧವು ನಡೆಯಿತು.

07092011a ವಿಮುಂಚಂತೌ ಶರಾಂಸ್ತೀಕ್ಷ್ಣಾನ್ಸಂದಧಾನೌ ಚ ಸಾಯಕಾನ್|

07092011c ಅದೃಶ್ಯಂ ಸಮರೇಽನ್ಯೋನ್ಯಂ ಚಕ್ರತುಸ್ತೌ ಮಹಾರಥೌ||

ಆ ಇಬ್ಬರು ಮಹಾರಥರು ತೀಕ್ಷ್ಣ ಶರಗಳನ್ನು ಅನುಸಂಧಾನ ಮಾಡುತ್ತಾ, ಪ್ರಹರಿಸುತ್ತಾ, ಸಮರದಲ್ಲಿ ಅನ್ಯೋನ್ಯರನ್ನು ಬಾಣಗಳಿಂದ ಮುಚ್ಚಿ ಅದೃಶ್ಯರನ್ನಾಗಿಸಿಬಿಟ್ಟರು.

07092012a ಸಾತ್ಯಕಿಃ ಕುರುರಾಜೇನ ನಿರ್ವಿದ್ಧೋ ಬಹ್ವಶೋಭತ|

07092012c ಅಸ್ರವದ್ರುಧಿರಂ ಭೂರಿ ಸ್ವರಸಂ ಚಂದನೋ ಯಥಾ||

ಕುರುರಾಜನಿಂದ ಬಹಳವಾಗಿ ಗಾಯಗೊಂಡ ಸಾತ್ಯಕಿಯು ರಕ್ತವನ್ನು ಸುರಿಸುತ್ತಾ ಕೆಂಪು ರಸವನ್ನು ಸುರಿಸುವ ಚಂದನ ವೃಕ್ಷದಂತೆ ಶೋಭಿಸಿದನು.

07092013a ಸಾತ್ವತೇನ ಚ ಬಾಣೌಘೈರ್ನಿರ್ವಿದ್ಧಸ್ತನಯಸ್ತವ|

07092013c ಶಾತಕುಂಭಮಯಾಪೀಡೋ ಬಭೌ ಯೂಪ ಇವೋಚ್ಚ್ರಿತಃ||

ಸಾತ್ವತನ ಬಾಣಗಳ ಗುಂಪುಗಳಿಂದ ಗಾಯಗೊಂಡ ನಿನ್ನ ಮಗನು ಸುವರ್ಣಮಯ ಶಿರೋಭೂಷಣವಿರುವ ಎತ್ತರ ಯೂಪಸ್ಥಂಭದಂತೆ ಶೋಭಿಸಿದನು.

07092014a ಮಾಧವಸ್ತು ರಣೇ ರಾಜನ್ಕುರುರಾಜಸ್ಯ ಧನ್ವಿನಃ|

07092014c ಧನುಶ್ಚಿಚ್ಚೇದ ಸಹಸಾ ಕ್ಷುರಪ್ರೇಣ ಹಸನ್ನಿವ|

07092014e ಅಥೈನಂ ಚಿನ್ನಧನ್ವಾನಂ ಶರೈರ್ಬಹುಭಿರಾಚಿನೋತ್||

ರಾಜನ್! ಮಾಧವನಾದರೋ ರಣದಲ್ಲಿ ಒಮ್ಮೆಲೇ ನಗುತ್ತಾ ಧನ್ವಿ ಕುರುರಾಜನ ಧನುಸ್ಸನ್ನು ಕ್ಷುರಪ್ರದಿಂದ ಕತ್ತರಿಸಿದನು. ಕೂಡಲೇ ಧನುಸ್ಸನ್ನು ಕಳೆದುಕೊಂಡ ಅವನನ್ನು ಬಹಳ ಶರಗಳಿಂದ ಪ್ರಹರಿಸಿದನು.

07092015a ನಿರ್ಭಿನ್ನಶ್ಚ ಶರೈಸ್ತೇನ ದ್ವಿಷತಾ ಕ್ಷಿಪ್ರಕಾರಿಣಾ|

07092015c ನಾಮೃಷ್ಯತ ರಣೇ ರಾಜಾ ಶತ್ರೋರ್ವಿಜಯಲಕ್ಷಣಂ||

ಕ್ಷಿಪ್ರಕಾರೀ ಶತ್ರುವಿನ ಶರಗಳಿಂದ ತನ್ನ ಧನುಸ್ಸು ತುಂಡಾದುದನ್ನು ಮತ್ತು ಶತ್ರುವಿನ ವಿಜಯಲಕ್ಷಣವನ್ನು ರಾಜ ದುರ್ಯೋಧನನು ಸಹಿಸಿಕೊಳ್ಳಲಿಲ್ಲ.

07092016a ಅಥಾನ್ಯದ್ಧನುರಾದಾಯ ಹೇಮಪೃಷ್ಠಂ ದುರಾಸದಂ|

07092016c ವಿವ್ಯಾಧ ಸಾತ್ಯಕಿಂ ತೂರ್ಣಂ ಸಾಯಕಾನಾಂ ಶತೇನ ಹ||

ಆಗ ಅವನು ಹೇಮಪೃಷ್ಠದ ಇನ್ನೊಂದು ದುರಾಸದ ಧನುಸ್ಸನ್ನು ತೆಗೆದುಕೊಂಡು ತಕ್ಷಣವೇ ನೂರು ಸಾಯಕಗಳಿಂದ ಸಾತ್ಯಕಿಯನ್ನು ಹೊಡೆದನು.

07092017a ಸೋಽತಿವಿದ್ಧೋ ಬಲವತಾ ಪುತ್ರೇಣ ತವ ಧನ್ವಿನಾ|

07092017c ಅಮರ್ಷವಶಮಾಪನ್ನಸ್ತವ ಪುತ್ರಮಪೀಡಯತ್||

ನಿನ್ನ ಬಲವಂತ ಮಗ ಧನ್ವಿಯಿಂದ ಅತಿಯಾಗಿ ಗಾಯಗೊಂಡ ಸಾತ್ಯಕಿಯು ಸಹಿಸಿಕೊಳ್ಳಲಾಗದೇ ನಿನ್ನ ಮಗನನ್ನೂ ಬಹಳವಾಗಿ ಪೀಡಿಸಿದನು.

07092018a ಪೀಡಿತಂ ನೃಪತಿಂ ದೃಷ್ಟ್ವಾ ತವ ಪುತ್ರಾ ಮಹಾರಥಾಃ|

07092018c ಸಾತ್ವತಂ ಶರವರ್ಷೇಣ ಚಾದಯಾಮಾಸುರಂಜಸಾ||

ನೃಪತಿಯು ಪೀಡಿತನಾಗಿದ್ದುದನ್ನು ನೋಡಿ ನಿನ್ನ ಮಹಾರಥ ಮಕ್ಕಳು ಸಾತ್ವತನನ್ನು ಶರವರ್ಷಗಳಿಂದ ಮುಚ್ಚಿಬಿಟ್ಟರು.

07092019a ಸ ಚಾದ್ಯಮಾನೋ ಬಹುಭಿಸ್ತವ ಪುತ್ರೈರ್ಮಹಾರಥೈಃ|

07092019c ಏಕೈಕಂ ಪಂಚಭಿರ್ವಿದ್ಧ್ವಾ ಪುನರ್ವಿವ್ಯಾಧ ಸಪ್ತಭಿಃ||

ನಿನ್ನ ಮಹಾರಥ ಪುತ್ರರಿಂದ ಬಹಳವಾಗಿ ಗಾಯಗೊಂಡ ಸಾತ್ಯಕಿಯು ಒಬ್ಬೊಬ್ಬರನ್ನೂ ಐದೈದು ಮತ್ತು ಪುನಃ ಏಳೇಳರಿಂದ ಹೊಡೆದನು.

07092020a ದುರ್ಯೋಧನಂ ಚ ತ್ವರಿತೋ ವಿವ್ಯಾಧಾಷ್ಟಭಿರಾಶುಗೈಃ|

07092020c ಪ್ರಹಸಂಶ್ಚಾಸ್ಯ ಚಿಚ್ಚೇದ ಕಾರ್ಮುಕಂ ರಿಪುಭೀಷಣಂ||

ತ್ವರೆಮಾಡಿ ದುರ್ಯೋಧನನನ್ನು ಎಂಟು ಆಶುಗಗಳಿಂದ ಹೊಡೆದು ನಗುತ್ತಾ ರಿಪುಭೀಷಣವಾಗಿದ್ದ ಅವನ ಧನುಸ್ಸನ್ನು ತುಂಡರಿಸಿದನು.

07092021a ನಾಗಂ ಮಣಿಮಯಂ ಚೈವ ಶರೈರ್ಧ್ವಜಮಪಾತಯತ್|

07092021c ಹತ್ವಾ ತು ಚತುರೋ ವಾಹಾಂಶ್ಚತುರ್ಭಿರ್ನಿಶಿತೈಃ ಶರೈಃ|

07092021e ಸಾರಥಿಂ ಪಾತಯಾಮಾಸ ಕ್ಷುರಪ್ರೇಣ ಮಹಾಯಶಾಃ||

ಅನಂತರ ಆನೆಯ ಚಿಹ್ನೆಯುಳ್ಳ ಮಣಿಮಯವಾದ ಅವನ ಧ್ವಜವನ್ನು ಶರಗಳಿಂದ ಕೆಳಗುರುಳಿಸಿದನು. ಮತ್ತು ಆ ಮಹಾಯಶಸ್ವಿಯು ನಿಶಿತ ಶರಗಳಿಂದ ನಾಲ್ಕು ಕುದುರೆಗಳನ್ನೂ ಕೊಂದು ಕ್ಷುರಪ್ರದಿಂದ ಸಾರಥಿಯನ್ನೂ ಕೆಳಗುರುಳಿಸಿದನು.

07092022a ಏತಸ್ಮಿನ್ನಂತರೇ ಚೈವ ಕುರುರಾಜಂ ಮಹಾರಥಂ|

07092022c ಅವಾಕಿರಚ್ಚರೈರ್ಹೃಷ್ಟೋ ಬಹುಭಿರ್ಮರ್ಮಭೇದಿಭಿಃ||

ಇದರ ಮಧ್ಯದಲ್ಲಿಯೇ ಮಹಾರಥ ಕುರುರಾಜನನ್ನು ಹೃಷ್ಟ ಸಾತ್ಯಕಿಯು ಅನೇಕ ಮರ್ಮಭೇದಿ ಬಾಣಗಳಿಂದ ಮುಚ್ಚಿಬಿಟ್ಟನು.

07092023a ಸ ವಧ್ಯಮಾನಃ ಸಮರೇ ಶೈನೇಯಸ್ಯ ಶರೋತ್ತಮೈಃ|

07092023c ಪ್ರಾದ್ರವತ್ಸಹಸಾ ರಾಜನ್ಪುತ್ರೋ ದುರ್ಯೋಧನಸ್ತವ|

ರಾಜನ್! ಸಮರದಲ್ಲಿ ಶೈನೇಯನ ಉತ್ತಮ ಶರಗಳಿಂದ ಗಾಯಗೊಂಡ ನಿನ್ನ ಮಗ ದುರ್ಯೋಧನನು ತಕ್ಷಣವೇ ಓಡಿಹೋದನು.

07092023e ಆಪ್ಲುತಶ್ಚ ತತೋ ಯಾನಂ ಚಿತ್ರಸೇನಸ್ಯ ಧನ್ವಿನಃ||

07092024a ಹಾಹಾಭೂತಂ ಜಗಚ್ಚಾಸೀದ್ದೃಷ್ಟ್ವಾ ರಾಜಾನಮಾಹವೇ|

07092024c ಗ್ರಸ್ಯಮಾನಂ ಸಾತ್ಯಕಿನಾ ಖೇ ಸೋಮಮಿವ ರಾಹುಣಾ||

ಓಡಿಹೋಗುವಾಗ ಧನ್ವಿ ಚಿತ್ರಸೇನನ ರಥವನ್ನು ಏರಿದನು. ಆಕಾಶದಲ್ಲಿ ರಾಹುವಿನಿಂದ ಗ್ರಸ್ತನಾದ ಸೋಮನಂತೆ ಆಹವದಲ್ಲಿ ಸಾತ್ಯಕಿಯಿಂದ ಗ್ರಸ್ತನಾದ ರಾಜನನ್ನು ನೋಡಿ ಹಾಹಾಕಾರವುಂಟಾಯಿತು.

07092025a ತಂ ತು ಶಬ್ದಂ ಮಹಚ್ಚ್ರುತ್ವಾ ಕೃತವರ್ಮಾ ಮಹಾರಥಃ|

07092025c ಅಭ್ಯಯಾತ್ಸಹಸಾ ತತ್ರ ಯತ್ರಾಸ್ತೇ ಮಾಧವಃ ಪ್ರಭುಃ||

07092026a ವಿಧುನ್ವಾನೋ ಧನುಃಶ್ರೇಷ್ಠಂ ಚೋದಯಂಶ್ಚೈವ ವಾಜಿನಃ|

07092026c ಭರ್ತ್ಸಯನ್ಸಾರಥಿಂ ಚೋಗ್ರಂ ಯಾಹಿ ಯಾಹೀತಿ ಸತ್ವರಃ||

ಆ ಮಹಾಶಬ್ಧವನ್ನು ಕೇಳಿ ಮಹಾರಥ ಕೃತವರ್ಮನು ಧನುಸ್ಸನ್ನು ಟೇಂಕರಿಸಿ ಅಲ್ಲಾಡಿಸುತ್ತಾ, ಕುದುರೆಗಳನ್ನು ಬೇಗ ಹೋಗುವಂತೆ ಚಪ್ಪರಿಸುತ್ತಾ, “ಬೇಗ ಹೋಗು!” ಎಂದು ಸಾರಥಿಯನ್ನು ಗದರಿಸುತ್ತಾ ತಕ್ಷಣವೇ ಪ್ರಭು ಮಾಧವನು ಎಲ್ಲಿದ್ದನೋ ಅಲ್ಲಿಗೆ ಧಾವಿಸಿ ಬಂದನು.

07092027a ತಮಾಪತಂತಂ ಸಂಪ್ರೇಕ್ಷ್ಯ ವ್ಯಾದಿತಾಸ್ಯಮಿವಾಂತಕಂ|

07092027c ಯುಯುಧಾನೋ ಮಹಾರಾಜ ಯಂತಾರಮಿದಮಬ್ರವೀತ್||

ಮಹಾರಾಜ! ಬಾಯ್ದೆರೆದ ಅಂತಕನಂತೆಯೇ ತನ್ನ ಮೇಲೆ ಬೀಳಲು ಬರುತ್ತಿದ್ದ ಅವನನ್ನು ನೋಡಿ ಯುಯುಧಾನನು ಸಾರಥಿಗೆ ಹೀಗೆ ಹೇಳಿದನು:

07092028a ಕೃತವರ್ಮಾ ರಥೇನೈಷ ದ್ರುತಮಾಪತತೇ ಶರೀ|

07092028c ಪ್ರತ್ಯುದ್ಯಾಹಿ ರಥೇನೈನಂ ಪ್ರವರಂ ಸರ್ವಧನ್ವಿನಾಂ||

“ಕೃತವರ್ಮನು ಕೈಯಲ್ಲಿ ಬಾಣವನ್ನು ಹಿಡಿದು ರಥದಲ್ಲಿ ಕುಳಿತು ತೀವ್ರ ವೇಗದಿಂದ ನನ್ನ ಕಡೆಗೇ ಬರುತ್ತಿದ್ದಾನೆ. ಸರ್ವಧನುಷ್ಮಂತರಲ್ಲಿ ಶ್ರೇಷ್ಠನಾದ ಅವನನ್ನು ನಮ್ಮ ರಥದೊಂದಿಗೆ ಎದುರಿಸು!”

07092029a ತತಃ ಪ್ರಜವಿತಾಶ್ವೇನ ವಿಧಿವತ್ಕಲ್ಪಿತೇನ ಚ|

07092029c ಆಸಸಾದ ರಣೇ ಭೋಜಂ ಪ್ರತಿಮಾನಂ ಧನುಷ್ಮತಾಂ||

ಅನಂತರ ವಿಧಿವತ್ತಾಗಿ ಸಜ್ಜುಗೊಳಿಸಿದ್ದ ವೇಗದ ಕುದುರೆಗಳಿಂದ ಯುಕ್ತವಾಗಿದ್ದ ರಥದಲ್ಲಿ ಕುಳಿತು ಸಾತ್ಯಕಿಯು ಧನುಷ್ಮಂತರಿಗೆ ಆದರ್ಶಪ್ರಾಯನಾಗಿದ್ದ ಭೋಜನ ಸಮೀಪಕ್ಕೆ ಹೋದನು.

07092030a ತತಃ ಪರಮಸಂಕ್ರುದ್ಧೌ ಜ್ವಲಂತಾವಿವ ಪಾವಕೌ|

07092030c ಸಮೇಯಾತಾಂ ನರವ್ಯಾಘ್ರೌ ವ್ಯಾಘ್ರಾವಿವ ತರಸ್ವಿನೌ||

ಆಗ ಪರಮ ಕ್ರುದ್ಧರಾಗಿದ್ದ, ಪ್ರಜ್ವಲಿಸುವ ಅಗ್ನಿಗಳಂತೆಯೇ ಕಾಣುತ್ತಿದ್ದ, ವೇಗಶಾಲಿಗಳಾದ, ಆ ನರಶ್ರೇಷ್ಠ ಸಾತ್ಯಕಿ-ಕೃತವರ್ಮರಿಬ್ಬರೂ ಕೊಬ್ಬಿದ ಎರಡು ವ್ಯಾಘ್ರಗಳೋಪಾದಿಯಲ್ಲಿ ಯುದ್ಧಕ್ಕೆ ತೊಡಗಿದರು.

07092031a ಕೃತವರ್ಮಾ ತು ಶೈನೇಯಂ ಷಡ್ವಿಂಶತ್ಯಾ ಸಮಾರ್ಪಯತ್|

07092031c ನಿಶಿತೈಃ ಸಾಯಕೈಸ್ತೀಕ್ಷ್ಣೈರ್ಯಂತಾರಂ ಚಾಸ್ಯ ಸಪ್ತಭಿಃ||

ಕೃತವರ್ಮನಾದರೋ ಶೈನೇಯನನ್ನು ಇಪ್ಪತ್ತಾರು ಬಾಣಗಳಿಂದ ಪ್ರಹರಿಸಿ ಅವನ ಸಾರಥಿಯನ್ನು ನಿಶಿತ ತೀಕ್ಷ್ಣ ಏಳು ಬಾಣಗಳಿಂದ ಹೊಡೆದನು.

07092032a ಚತುರಶ್ಚ ಹಯೋದಾರಾಂಶ್ಚತುರ್ಭಿಃ ಪರಮೇಷುಭಿಃ|

07092032c ಅವಿಧ್ಯತ್ಸಾಧುದಾಂತಾನ್ವೈ ಸೈಂಧವಾನ್ಸಾತ್ವತಸ್ಯ ಹ||

ಪುನಃ ನಾಲ್ಕು ಶ್ರೇಷ್ಠ ಬಾಣಗಳಿಂದ ಸಾತ್ವತನ ಸುಶಿಕ್ಷಿತವೂ ವಿನೀತವೂ ಆಗಿದ್ದ ಸಿಂಧುದೇಶದ ನಾಲ್ಕು ಕುದುರೆಗಳನ್ನೂ ಗಾಯಗೊಳಿಸಿದನು.

07092033a ರುಕ್ಮಧ್ವಜೋ ರುಕ್ಮಪೃಷ್ಠಂ ಮಹದ್ವಿಸ್ಫಾರ್ಯ ಕಾರ್ಮುಕಂ|

07092033c ರುಕ್ಮಾಂಗದೀ ರುಕ್ಮವರ್ಮಾ ರುಕ್ಮಪುಂಖಾನವಾಕಿರತ್||

ಬಂಗಾರದ ಧ್ವಜವುಳ್ಳ, ಬಂಗಾರದ ಅಂಗದವನ್ನು ತೊಟ್ಟಿದ್ದ, ಬಂಗಾರದ ಕವಚವನ್ನು ತೊಟ್ಟಿದ್ದ ಕೃತವರ್ಮನು ಬಂಗಾರದ ಬೆನ್ನುಳ್ಳ ಧನುಸ್ಸನ್ನು ಟೇಂಕರಿಸಿ ಬಂಗಾರದ ರೆಕ್ಕೆಗಳನ್ನು ಹೊಂದಿದ್ದ ಬಾಣಗಳಿಂದ ಸಾತ್ಯಕಿಯನ್ನು ಮುಚ್ಚಿ ಬಿಟ್ಟನು.

07092034a ತತೋಽಶೀತಿಂ ಶಿನೇಃ ಪೌತ್ರಃ ಸಾಯಕಾನ್ಕೃತವರ್ಮಣೇ|

07092034c ಪ್ರಾಹಿಣೋತ್ತ್ವರಯಾ ಯುಕ್ತೋ ದ್ರಷ್ಟುಕಾಮೋ ಧನಂಜಯಂ||

ಧನಂಜಯನನ್ನು ನೋಡುವ ಅವಸರದಲ್ಲಿದ್ದ ಶಿನಿಯ ಮೊಮ್ಮೊಗನು ಎಂಭತ್ತು ಬಾಣಗಳನ್ನು ಕೃತವರ್ಮನ ಮೇಲೆ ಪ್ರಯೋಗಿಸಿದನು.

07092035a ಸೋಽತಿವಿದ್ಧೋ ಬಲವತಾ ಶತ್ರುಣಾ ಶತ್ರುತಾಪನಃ|

07092035c ಸಮಕಂಪತ ದುರ್ಧರ್ಷಃ ಕ್ಷಿತಿಕಂಪೇ ಯಥಾಚಲಃ||

ಬಲಿಷ್ಠ ಶತ್ರುವಿನ ಬಾಣಗಳಿಂದ ಬಹಳವಾಗಿ ಗಾಯಗೊಂಡ ದುರ್ಧರ್ಷ ಶತ್ರುತಾಪನ ಕೃತವರ್ಮನು ಭೂಕಂಪವಾದಾಗ ಪರ್ವತವು ನಡುಗುವಂತೆ ತತ್ತರಿಸಿದನು.

07092036a ತ್ರಿಷಷ್ಟ್ಯಾ ಚತುರೋಽಸ್ಯಾಶ್ವಾನ್ಸಪ್ತಭಿಃ ಸಾರಥಿಂ ಶರೈಃ|

07092036c ವಿವ್ಯಾಧ ನಿಶಿತೈಸ್ತೂರ್ಣಂ ಸಾತ್ಯಕಿಃ ಕೃತವರ್ಮಣಃ||

ಅದೇ ಸಮಯದಲ್ಲಿ ಸಾತ್ಯಕಿಯು ತಕ್ಷಣವೇ ಅರವತ್ಮೂರು ನಿಶಿತ ಬಾಣಗಳಿಂದ ಕೃತವರ್ಮನ ಕುದುರೆಗಳನ್ನೂ, ಏಳು ಬಾಣಗಳಿಂದ ಅವನ ಸಾರಥಿಯನ್ನೂ ಹೊಡೆದನು.

07092037a ಸುವರ್ಣಪುಂಖಂ ವಿಶಿಖಂ ಸಮಾಧಾಯ ಸ ಸಾತ್ಯಕಿಃ|

07092037c ವ್ಯಸೃಜತ್ತಂ ಮಹಾಜ್ವಾಲಂ ಸಂಕ್ರುದ್ಧಮಿವ ಪನ್ನಗಂ||

ಅನಂತರ ಸಾತ್ಯಕಿಯು ಚಿನ್ನದ ರೆಕ್ಕೆಗಳನ್ನು ಹೊಂದಿದ್ದ ಕೋಪಗೊಂಡ ಸರ್ಪದಂತಿದ್ದ ಮಹಾಜ್ವಾಲೆಯಿಂದ ಯುಕ್ತವಾಗಿದ್ದ ವಿಶಿಖವನ್ನು ಹೂಡಿ ಕೃತವರ್ಮನ ಮೇಲೆ ಪ್ರಯೋಗಿಸಿದನು.

07092038a ಸೋಽವಿಶತ್ ಕೃತವರ್ಮಾಣಂ ಯಮದಂಡೋಪಮಃ ಶರಃ|

07092038c ಜಾಂಬೂನದವಿಚಿತ್ರಂ ಚ ವರ್ಮ ನಿರ್ಭಿದ್ಯ ಭಾನುಮತ್|

07092038e ಅಭ್ಯಗಾದ್ಧರಣೀಮುಗ್ರೋ ರುಧಿರೇಣ ಸಮುಕ್ಷಿತಃ||

ಯಮದಂಡ ಸದೃಶವಾಗಿದ್ದ ಅತ್ಯುಗ್ರವಾಗಿದ್ದ ಆ ಬಾಣವು ಸುವರ್ಣಮಯವೂ, ಚಿತ್ರಿತವೂ, ಪ್ರಕಾಶಮಾನವೂ ಆಗಿದ್ದ ಕೃತವರ್ಮನ ಕವಚವನ್ನು ಭೇದಿಸಿ, ಅವನ ಶರೀರವನ್ನು ಹೊಕ್ಕು, ರಕ್ತದಲ್ಲಿ ತೋಯ್ದು ಹೊರಬಂದು ಭೂಮಿಯ ಮೇಲೆ ಬಿದ್ದಿತು.

07092039a ಸಂಜಾತರುಧಿರಶ್ಚಾಜೌ ಸಾತ್ವತೇಷುಭಿರರ್ದಿತಃ|

07092039c ಪ್ರಚಲನ್ಧನುರುತ್ಸೃಜ್ಯ ನ್ಯಪತತ್ಸ್ಯಂದನೋತ್ತಮೇ||

ಸಾತ್ವತನ ಬಾಣದಿಂದ ಗಾಯಗೊಂಡ ಕೃತವರ್ಮನ ದೇಹದಿಂದ ರಕ್ತವು ಧಾರಾಕಾರವಾಗಿ ಸುರಿಯತೊಡಗಿತು. ಶಕ್ತಿಗುಂದಿದ ಅವನ ಕೈಗಳಿಂದ ಧನುರ್ಬಾಣಗಳು ಜಾರಿದವು. ಅವನೂ ಕೂಡ ಉತ್ತಮ ರಥದಲ್ಲಿ ಕುಸಿದು ಬಿದ್ದನು.

07092040a ಸ ಸಿಂಹದಂಷ್ಟ್ರೋ ಜಾನುಭ್ಯಾಮಾಪನ್ನೋಽಮಿತವಿಕ್ರಮಃ|

07092040c ಶರಾರ್ದಿತಃ ಸಾತ್ಯಕಿನಾ ರಥೋಪಸ್ಥೇ ನರರ್ಷಭಃ||

ಸಿಂಹದಂಥ ಹಲ್ಲುಗಳುಳ್ಳ[1] ಅಮಿತವಿಕ್ರಮಿ ಸಾತ್ಯಕಿಯ ಬಾಣಗಳಿಂದ ಪೀಡಿತನಾದ ನರರ್ಷಭ ಕೃತವರ್ಮನು ಮಂಡಿಗಳನ್ನು ಊರಿದ್ದಂತೆಯೇ ಆಸನದಲ್ಲಿ ಪಕ್ಕಕ್ಕೆ ಬಿದ್ದನು.

07092041a ಸಹಸ್ರಬಾಹೋಃ ಸದೃಶಮಕ್ಷೋಭ್ಯಮಿವ ಸಾಗರಂ|

07092041c ನಿವಾರ್ಯ ಕೃತವರ್ಮಾಣಂ ಸಾತ್ಯಕಿಃ ಪ್ರಯಯೌ ತತಃ||

ಸಹಸ್ರಬಾಹು ಕಾರ್ತವೀರ್ಯಾರ್ಜುನನಿಗೆ ಸಮಾನನಾಗಿದ್ದ, ಸಾಗರೋಪಾದಿಯಲ್ಲಿ ಕದಲಿಸಲು ಅಶಕ್ಯನಾಗಿದ್ದ ಕೃತವರ್ಮನನ್ನು ಪರಾಜಯಗೊಳಿಸಿ ಸಾತ್ಯಕಿಯು ಅಲ್ಲಿಂದ ಹೊರಟುಬಿಟ್ಟನು.

07092042a ಖಡ್ಗಶಕ್ತಿಧನುಃಕೀರ್ಣಾಂ ಗಜಾಶ್ವರಥಸಂಕುಲಾಂ|

07092042c ಪ್ರವರ್ತಿತೋಗ್ರರುಧಿರಾಂ ಶತಶಃ ಕ್ಷತ್ರಿಯರ್ಷಭೈಃ||

07092043a ಪ್ರೇಕ್ಷತಾಂ ಸರ್ವಸೈನ್ಯಾನಾಂ ಮಧ್ಯೇನ ಶಿನಿಪುಂಗವಃ|

07092043c ಅಭ್ಯಗಾದ್ವಾಹಿನೀಂ ಭಿತ್ತ್ವಾ ವೃತ್ರಹೇವಾಸುರೀಂ ಚಮೂಂ||

ಖಡ್ಗ-ಶಕ್ತಿ-ಧನುಸ್ಸುಗಳಿಂದ ತುಂಬಿಹೋಗಿದ್ದ, ಗಜ-ಅಶ್ವ-ರಥ ಸಂಕುಲಗಳಿಂದ ಕೂಡಿದ್ದ, ನೂರಾರು ಕ್ಷತ್ರಿಯರ್ಷಭರಿಂದ ಪ್ರವರ್ತಿತವಾದ, ಭಯಂಕರ ರಕ್ತದ ಕೋಡಿಯೇ ಹರಿದುಹೋಗುತ್ತಿದ್ದ ಆ ಸೇನೆಯ ಮಧ್ಯದಿಂದಲೇ ಎಲ್ಲರೂ ನೋಡುತ್ತಿದ್ದಂತೆಯೇ, ಇಂದ್ರನು ಅಸುರರ ಸೇನೆಯನ್ನು ಹೇಗೋ ಹಾಗೆ, ಶಿನಿಪುಂಗವನು ಹೊರಟುಹೋದನು.

07092044a ಸಮಾಶ್ವಾಸ್ಯ ಚ ಹಾರ್ದಿಕ್ಯೋ ಗೃಹ್ಯ ಚಾನ್ಯನ್ಮಹದ್ಧನುಃ|

07092044c ತಸ್ಥೌ ತತ್ರೈವ ಬಲವಾನ್ವಾರಯನ್ಯುಧಿ ಪಾಂಡವಾನ್||

ಬಲವಾನ್ ಹಾರ್ದಿಕ್ಯನಾದರೋ ಚೇತರಿಸಿಕೊಂಡು ಮತ್ತೊಂದು ಮಹಾಧನುಸ್ಸನ್ನು ಕೈಗೆತ್ತಿಕೊಂಡು ಪಾಂಡವರು ಮುಂದೆ ಹೋಗದಂತೆ ತಡೆಯುತ್ತಾ ಅಲ್ಲಿಯೇ ನಿಂತನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ದುರ್ಯೋಧನಕೃತವರ್ಮಪರಾಜಯೇ ದ್ವಿನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ದುರ್ಯೋಧನಕೃತವರ್ಮಪರಾಜಯ ಎನ್ನುವ ತೊಂಭತ್ತೆರಡನೇ ಅಧ್ಯಾಯವು.

Image result for flowers against white background

[1] ಸಿಂಹದಂಷ್ಟ್ರನು ಯಾರೆಂಬುದನ್ನು ಲಕ್ಷಣಕಾರರು ಹೀಗೆ ಹೇಳಿದ್ದಾರೆ: ದಂಷ್ಟ್ರಾಶ್ಚತಸ್ರೋ ಯಸ್ಯ ಸ್ಯುರ್ದಶನೇಭ್ಯಃ ಸಮುಚ್ಛ್ರಿತಾಃ| ಸಿಂಹದಂಷ್ಟ್ರಃ ಸ ಗದಿತಶ್ಚತುರ್ದಂಷ್ಟ್ರಶ್ಚ ಸೂರಿಭಿಃ|| ಯಾರ ನಾಲ್ಕು ಹಲ್ಲುಗಳು ಹೊರಕ್ಕೆ ಕಾಣುವ ರೀತಿಯಲ್ಲಿ ಉಬ್ಬಿಕೊಂಡಿವೆಯೋ ಅವನಿಗೆ ಸಿಂಹದಂಷ್ಟ್ರ ಅಥವಾ ಚತುರ್ದಂಷ್ಟ್ರನೆಂದು ವಿಧ್ವಾಂಸರು ಹೇಳುತ್ತಾರೆ.

Comments are closed.