Drona Parva: Chapter 91

ದ್ರೋಣ ಪರ್ವ: ಜಯದ್ರಥವಧ ಪರ್ವ

೯೧

ಸಾತ್ಯಕಿಯು ಕೃತವರ್ಮನನ್ನು ಸೋಲಿಸಿ ಮುಂದುವರೆದುದು (೧-೯). ಸಾತ್ಯಕಿಯು ಗಜಸೇನೆಯನ್ನು ನಾಶಗೊಳಿಸಿದುದು (೧೦-೨೩). ಸಾತ್ಯಕಿಯಿಂದ ಮಾಗಧ ಜಲಸಂಧನ ವಧೆ (೨೪-೫೪).

07091001 ಸಂಜಯ ಉವಾಚ|

07091001a ಶೃಣುಷ್ವೈಕಮನಾ ರಾಜನ್ಯನ್ಮಾಂ ತ್ವಂ ಪರಿಪೃಚ್ಚಸಿ|

07091001c ದ್ರಾವ್ಯಮಾಣೇ ಬಲೇ ತಸ್ಮಿನ್ ಹಾರ್ದಿಕ್ಯೇನ ಮಹಾತ್ಮನಾ||

07091002a ಲಜ್ಜಯಾವನತೇ ಚಾಪಿ ಪ್ರಹೃಷ್ಟೈಶ್ಚೈವ ತಾವಕೈಃ|

ಸಂಜಯನು ಹೇಳಿದನು: “ರಾಜನ್! ನೀನು ಏನನ್ನು ಪ್ರಶ್ನಿಸಿದೆಯೋ ಅದನ್ನು ಏಕಾಗ್ರಚಿತ್ತನಾಗಿ ಕೇಳು. ಮಹಾತ್ಮ ಹಾರ್ದಿಕ್ಯನಿಂದ ಪಲಾಯನಗೊಳಿಸಲ್ಪಟ್ಟ ಅವರ ಸೇನೆಯು ನಾಚಿಕೆಯಿಂದ ತಲೆತಗ್ಗಿಸಿತು ಮತ್ತು ನಿನ್ನವರು ಸಂತೋಷದಿಂದ ಕುಣಿದಾಡಿದರು.

07091002c ದ್ವೀಪೋ ಯ ಆಸೀತ್ಪಾಂಡೂನಾಮಗಾಧೇ ಗಾಧಮಿಚ್ಚತಾಂ||

07091003a ಶ್ರುತ್ವಾ ತು ನಿನದಂ ಭೀಮಂ ತಾವಕಾನಾಂ ಮಹಾಹವೇ|

07091003c ಶೈನೇಯಸ್ತ್ವರಿತೋ ರಾಜನ್ಕೃತವರ್ಮಾಣಮಭ್ಯಯಾತ್||

ಅಗಾಧವಾದ ಸಮುದ್ರದಲ್ಲಿ ಆಶ್ರಯವನ್ನು ಪಡೆಯಲು ಬಯಸಿದ ಪಾಂಡವರಿಗೆ ದ್ವೀಪವೊಂದು ದೊರಕಿತು. ರಾಜನ್! ಮಹಾಹವದಲ್ಲಿ ನಿನ್ನ ಕಡೆಯವರು ಮಾಡಿದ ಭಯಂಕರ ಜಯಘೋಷವನ್ನು ಕೇಳಿಸಿಕೊಂಡ ಶೈನೇಯ ಸಾತ್ಯಕಿಯು ಕೃತವರ್ಮನ ಬಳಿಗೆ ಧಾವಿಸಿದನು.

07091004a ಕೃತವರ್ಮಾ ತು ಹಾರ್ದಿಕ್ಯಃ ಶೈನೇಯಂ ನಿಶಿತೈಃ ಶರೈಃ|

07091004c ಅವಾಕಿರತ್ಸುಸಂಕ್ರುದ್ಧಸ್ತತೋಽಕ್ರುಧ್ಯತ ಸಾತ್ಯಕಿಃ||

ಹಾರ್ದಿಕ್ಯ ಕೃತವರ್ಮನು ಶೈನೇಯನನ್ನು ನಿಶಿತ ಬಾಣಗಳಿಂದ ಮುಚ್ಚಿದನು. ಅದರಿಂದಾಗಿ ಸಾತ್ಯಕಿಯು ಅತ್ಯಂತ ಕ್ರೋಧಿತನಾದನು.

07091005a ತತಃ ಸುನಿಶಿತಂ ಭಲ್ಲಂ ಶೈನೇಯಃ ಕೃತವರ್ಮಣೇ|

07091005c ಪ್ರೇಷಯಾಮಾಸ ಸಮರೇ ಶರಾಂಶ್ಚ ಚತುರೋಽಪರಾನ್||

ಆಗ ಶೈನೇಯನು ನಿಶಿತವಾದ ಭಲ್ಲವೊಂದನ್ನು ಕೃತವರ್ಮನ ಮೇಲೆ ಪ್ರಯೋಗಿಸಿ, ಪುನಃ ಸಮರದಲ್ಲಿ ನಾಲ್ಕು ಬಾಣಗಳನ್ನು ಪ್ರಯೋಗಿಸಿದನು.

07091006a ತೇ ತಸ್ಯ ಜಘ್ನಿರೇ ವಾಹಾನ್ಭಲ್ಲೇನಾಸ್ಯಾಚ್ಚಿನದ್ಧನುಃ|

07091006c ಪೃಷ್ಠರಕ್ಷಂ ತಥಾ ಸೂತಮವಿಧ್ಯನ್ನಿಶಿತೈಃ ಶರೈಃ||

ಅವನು ಕೃತವರ್ಮನ ಕುದುರೆಗಳನ್ನು ಕೊಂದು, ಭಲ್ಲದಿಂದ ಧನುಸ್ಸನ್ನು ಕತ್ತರಿಸಿದನು. ಹಾಗೆಯೇ ನಿಶಿತ ಶರಗಳಿಂದ ಅವನ ಪೃಷ್ಠರಕ್ಷಕನನ್ನೂ ಸಾರಥಿಯನ್ನೂ ಸಂಹರಿಸಿದನು.

07091007a ತತಸ್ತಂ ವಿರಥಂ ಕೃತ್ವಾ ಸಾತ್ಯಕಿಃ ಸತ್ಯವಿಕ್ರಮಃ|

07091007c ಸೇನಾಮಸ್ಯಾರ್ದಯಾಮಾಸ ಶರೈಃ ಸನ್ನತಪರ್ವಭಿಃ||

ಸತ್ಯವಿಕ್ರಮಿ ಸಾತ್ಯಕಿಯು ಅವನನ್ನು ವಿರಥನನ್ನಾಗಿ ಮಾಡಿ ಸನ್ನತಪರ್ವ ಶರಗಳಿಂದ ಸೇನೆಗಳನ್ನು ಸದೆಬಡಿಯತೊಡಗಿದನು.

07091008a ಸಾಭಜ್ಯತಾಥ ಪೃತನಾ ಶೈನೇಯಶರಪೀಡಿತಾ|

07091008c ತತಃ ಪ್ರಾಯಾದ್ವೈ ತ್ವರಿತಃ ಸಾತ್ಯಕಿಃ ಸತ್ಯವಿಕ್ರಮಃ||

ಶೈನೇಯನ ಶರಗಳಿಂದ ಪೀಡಿತವಾದ ಸೇನೆಯು ಸಂಪೂರ್ಣವಾಗಿ ಭಗ್ನವಾಯಿತು. ಆಗ ಸತ್ಯವಿಕ್ರಮಿ ಸಾತ್ಯಕಿಯು ತ್ವರೆಮಾಡಿ ಮುಂದೆ ಸಾಗಿದನು.

07091009a ಶೃಣು ರಾಜನ್ಯದಕರೋತ್ತವ ಸೈನ್ಯೇಷು ವೀರ್ಯವಾನ್|

07091009c ಅತೀತ್ಯ ಸ ಮಹಾರಾಜ ದ್ರೋಣಾನೀಕಮಹಾರ್ಣವಂ||

ರಾಜನ್! ಮಹಾರಾಜ! ಮಹಾಸಮುದ್ರದಂತಿದ್ದ ದ್ರೋಣನ ಸೇನೆಯನ್ನು ದಾಟಿ ಮುಂದುವರೆದ ಆ ವೀರ್ಯವಾನನು ನಿನ್ನ ಸೇನೆಯನ್ನು ಏನು ಮಾಡಿದನು ಎನ್ನುವುದನ್ನು ಕೇಳು!

07091010a ಪರಾಜಿತ್ಯ ಚ ಸಂಹೃಷ್ಟಃ ಕೃತವರ್ಮಾಣಮಾಹವೇ|

07091010c ಯಂತಾರಮಬ್ರವೀಚ್ಚೂರಃ ಶನೈರ್ಯಾಹೀತ್ಯಸಂಭ್ರಮಂ||

ಯುದ್ಧದಲ್ಲಿ ಕೃತವರ್ಮನನ್ನು ಪರಾಜಯಗೊಳಿಸಿ ಸಂಹೃಷ್ಟನಾದ ಆ ಶೂರನು ಸಾರಥಿಗೆ “ಗಾಬರಿಗೊಳ್ಳದೇ ನಿಧಾನವಾಗಿ ಮುಂದೆ ಸಾಗು!” ಎಂದು ಹೇಳಿದನು.

07091011a ದೃಷ್ಟ್ವಾ ತು ತವ ತತ್ಸೈನ್ಯಂ ರಥಾಶ್ವದ್ವಿಪಸಂಕುಲಂ|

07091011c ಪದಾತಿಜನಸಂಪೂರ್ಣಮಬ್ರವೀತ್ಸಾರಥಿಂ ಪುನಃ||

ರಥ-ಕುದುರೆ-ಆನೆಗಳ ಸಮೂಹಗಳಿಂದ ಮತ್ತು ಪದಾತಿ ಸೈನಿಕರಿಂದ ಸಂಪೂರ್ಣವಾಗಿದ್ದ ಆ ನಿನ್ನ ಸೈನ್ಯವನ್ನು ನೋಡಿ ಪುನಃ ಸಾರಥಿಗೆ ಹೇಳಿದನು:

07091012a ಯದೇತನ್ಮೇಘಸಂಕಾಶಂ ದ್ರೋಣಾನೀಕಸ್ಯ ಸವ್ಯತಃ|

07091012c ಸುಮಹತ್ಕುಂಜರಾನೀಕಂ ಯಸ್ಯ ರುಕ್ಮರಥೋ ಮುಖಂ||

“ದ್ರೋಣನ ಸೇನೆಯ ಎಡಭಾಗಕ್ಕೆ ನೀನು ನೋಡುತ್ತಿರುವ ಮೋಡಗಳಂತಿರುವ ಸೇನೆಯು ಆನೆಗಳ ಸೇನೆ. ರುಕ್ಮರಥನು ಅದರ ನಾಯಕನು.

07091013a ಏತೇ ಹಿ ಬಹವಃ ಸೂತ ದುರ್ನಿವಾರ್ಯಾಶ್ಚ ಸಮ್ಯುಗೇ|

07091013c ದುರ್ಯೋಧನಸಮಾದಿಷ್ಟಾ ಮದರ್ಥೇ ತ್ಯಕ್ತಜೀವಿತಾಃ|

ಸೂತ! ಬಹಳಷ್ಟು ಸಂಖ್ಯೆಯಲ್ಲಿರುವ ಆ ಸೇನೆಯನ್ನು ಯುದ್ಧದಲ್ಲಿ ದಾಟಿ ಹೋಗುವುದು ಕಷ್ಟ. ದುರ್ಯೋಧನನಿಂದ ಆಜ್ಞಪ್ತರಾಗಿ ಅವು ನನಗಾಗಿ ಜೀವವನ್ನೇ ತೊರೆದು ಕಾಯುತ್ತಿವೆ.

07091013e ರಾಜಪುತ್ರಾ ಮಹೇಷ್ವಾಸಾಃ ಸರ್ವೇ ವಿಕ್ರಾಂತಯೋಧಿನಃ||

07091014a ತ್ರಿಗರ್ತಾನಾಂ ರಥೋದಾರಾಃ ಸುವರ್ಣವಿಕೃತಧ್ವಜಾಃ|

07091014c ಮಾಮೇವಾಭಿಮುಖಾ ವೀರಾ ಯೋತ್ಸ್ಯಮಾನಾ ವ್ಯವಸ್ಥಿತಾಃ|

ಆ ಮಹೇಷ್ವಾಸ ತ್ರಿಗರ್ತರ ರಾಜಪುತ್ರರೆಲ್ಲರೂ ವೀರ ಯೋಧರು. ರಥೋದಾರರು. ಸುವರ್ಣಮಯ ವಿಕೃತ ಧ್ವಜವುಳ್ಳವರು. ನನ್ನೊಡನೆ ಯುದ್ಧಮಾಡಲು ನನ್ನನ್ನೇ ಎದುರಿಸಿ ಆ ವೀರರು ನಿಂತಿರುವರು.

07091015a ಅತ್ರ ಮಾಂ ಪ್ರಾಪಯ ಕ್ಷಿಪ್ರಮಶ್ವಾಂಶ್ಚೋದಯ ಸಾರಥೇ|

07091015c ತ್ರಿಗರ್ತೈಃ ಸಹ ಯೋತ್ಸ್ಯಾಮಿ ಭಾರದ್ವಾಜಸ್ಯ ಪಶ್ಯತಃ||

ಸಾರಥೇ! ಕುದುರೆಗಳನ್ನು ಓಡಿಸು. ಅಲ್ಲಿಗೆ ನನ್ನನ್ನು ತಲುಪಿಸು. ಭಾರದ್ವಾಜನು ನೋಡುತ್ತಿರುವಂತೆಯೇ ನಾನು ತ್ರಿಗರ್ತರೊಡನೆ ಯುದ್ಧಮಾಡುತ್ತೇನೆ.”

07091016a ತತಃ ಪ್ರಾಯಾಚ್ಚನೈಃ ಸೂತಃ ಸಾತ್ವತಸ್ಯ ಮತೇ ಸ್ಥಿತಃ|

07091016c ರಥೇನಾದಿತ್ಯವರ್ಣೇನ ಭಾಸ್ವರೇಣ ಪತಾಕಿನಾ||

07091017a ತಮೂಹುಃ ಸಾರಥೇರ್ವಶ್ಯಾ ವಲ್ಗಮಾನಾ ಹಯೋತ್ತಮಾಃ|

07091017c ವಾಯುವೇಗಸಮಾಃ ಸಂಖ್ಯೇ ಕುಂದೇಂದುರಜತಪ್ರಭಾಃ||

ಸಾತ್ವತನ ಮಾತಿನಂತೆ ನಡೆಯುವ ಸೂತನು ಹೊಳೆಯುತ್ತಿರುವ ಪತಾಕೆಗಳಿಂದ ಕೂಡಿದ ಆದಿತ್ಯವರ್ಣದ ರಥವನ್ನು ನಿಧಾನವಾಗಿ ನಡೆಸಿದನು. ಅವನು ಹೇಳಿದಂತೆಯೇ ಆ ಸಾರಥಿಯ ವಶದಲ್ಲಿದ್ದ ವಾಯುವೇಗ ಸಮ, ಕುಂದಪುಷ್ಪ ಅಥವಾ ಚಂದ್ರ ಅಥವಾ ಬೆಳ್ಳಿಯ ಬಣ್ಣದ ಉತ್ತಮ ಕುದುರೆಗಳು ರಣದಲ್ಲಿ ಮುಂದುವರೆದವು.

07091018a ಆಪತಂತಂ ರಥಂ ತಂ ತು ಶಂಖವರ್ಣೈರ್ಹಯೋತ್ತಮೈಃ|

07091018c ಪರಿವವ್ರುಸ್ತತಃ ಶೂರಾ ಗಜಾನೀಕೇನ ಸರ್ವತಃ|

07091018e ಕಿರಂತೋ ವಿವಿಧಾಂಸ್ತೀಕ್ಷ್ಣಾನ್ಸಾಯಕಾಽಲ್ಲಘುವೇಧಿನಃ||

ಆ ಶಂಖವರ್ಣದ ಉತ್ತಮ ಕುದುರೆಗಳೊಂದಿಗೆ ಆಕ್ರಮಣ ಮಾಡಿದ ಸಾತ್ಯಕಿಯನ್ನು ಆ ಶೂರರು ಆನೆಗಳ ಸೇನೆಗಳೊಂದಿಗೆ ಸುಲಭವಾಗಿ ಭೇದಿಸಬಲ್ಲ ವಿವಿಧ ತೀಕ್ಷ್ಣ ಸಾಯಕಗಳನ್ನು ಎರಚುತ್ತಾ ಅವನನ್ನು ಸುತ್ತುವರೆದರು.

07091019a ಸಾತ್ವತೋಽಪಿ ಶಿತೈರ್ಬಾಣೈರ್ಗಜಾನೀಕಮಯೋಧಯತ್|

07091019c ಪರ್ವತಾನಿವ ವರ್ಷೇಣ ತಪಾಂತೇ ಜಲದೋ ಮಹಾನ್||

ಸಾತ್ವತನಾದರೋ ವರ್ಷಾಕಾಲದಲ್ಲಿ ಮಹಾಮೇಘವು ಜಲವರ್ಷದಿಂದ ಪರ್ವತಗಳನ್ನು ಮುಚ್ಚಿಬಿಡುವಂತೆ ನಿಶಿತ ಬಾಣಗಳಿಂದ ಆ ಗಜಸೇನೆಯನ್ನು ಮುಚ್ಚಿ ಯುದ್ಧಮಾಡಿದನು.

07091020a ವಜ್ರಾಶನಿಸಮಸ್ಪರ್ಶೈರ್ವಧ್ಯಮಾನಾಃ ಶರೈರ್ಗಜಾಃ|

07091020c ಪ್ರಾದ್ರವನ್ರಣಮುತ್ಸೃಜ್ಯ ಶಿನಿವೀರ್ಯಸಮೀರಿತೈಃ||

ಶಿನಿವೀರನು ಬಿಟ್ಟ ವಜ್ರದ ಸ್ಪರ್ಷಕ್ಕೆ ಸಮನಾದ ಶರಗಳಿಂದ ವಧಿಸಲ್ಪಡುತ್ತಿದ್ದ ಆನೆಗಳು ರಣವನ್ನು ಬಿಟ್ಟು ಓಡಿ ಹೋದವು.

07091021a ಶೀರ್ಣದಂತಾ ವಿರುಧಿರಾ ಭಿನ್ನಮಸ್ತಕಪಿಂಡಕಾಃ|

07091021c ವಿಶೀರ್ಣಕರ್ಣಾಸ್ಯಕರಾ ವಿನಿಯಂತೃಪತಾಕಿನಃ||

07091022a ಸಂಭಿನ್ನವರ್ಮಘಂಟಾಶ್ಚ ಸಮ್ನಿಕೃತ್ತಮಹಾಧ್ವಜಾಃ|

07091022c ಹತಾರೋಹಾ ದಿಶೋ ರಾಜನ್ಭೇಜಿರೇ ಭ್ರಷ್ಟಕಂಬಲಾಃ||

ರಾಜನ್! ಕತ್ತರಿಸಿಹೋದ ದಂತಗಳಿಂದಲೂ, ರಕ್ತಸಿಕ್ತವಾದ ಅಂಗಾಂಗಗಳಿಂದಲೂ, ಒಡೆದು ಹೋಗಿದ್ದ ತಲೆ-ಗಂಡಸ್ಥಲಗಳಿಂದಲೂ, ಸೀಳಿಹೋದ ಕಿವಿ-ಮುಖ-ಸೊಂಡಿಲುಗಳಿಂದಲೂ, ಸತ್ತುಹೋಗಿದ್ದ ಮಾವಟಿಗರಿಂದಲೂ, ಬಿದ್ದುಹೋಗಿದ್ದ ಪತಾಕೆಗಳಿಂದಲೂ, ಛಿನ್ನವಾದ ಮರ್ಮಸ್ಥಲಗಳಿಂದಲೂ, ಭಿನ್ನವಾದ ಗಂಟೆಗಳಿಂದಲೂ, ಕತ್ತರಿಸಲ್ಪಟ್ಟ ಮಹಾಧ್ವಜಗಳಿಂದಲೂ, ಹತಯೋಧರಿಂದಲೂ, ಜಾರಿಹೋಗಿದ್ದ ರತ್ನಗಂಬಳಿಗಳಿಂದಲೂ ಕೂಡಿದ್ದ ಆನೆಗಳು ಎಲ್ಲ ದಿಕ್ಕುಗಳಲ್ಲಿಯೂ ಪ್ರಕಾಶಿಸಿದವು.

07091023a ರುವಂತೋ ವಿವಿಧಾನ್ರಾವಾಂ ಜಲದೋಪಮನಿಸ್ವನಾಃ|

07091023c ನಾರಾಚೈರ್ವತ್ಸದಂತೈಶ್ಚ ಸಾತ್ವತೇನ ವಿದಾರಿತಾಃ||

ಸಾತ್ವತನ ವಿವಿಧ ನಾರಾಚ-ವತ್ಸದಂತಗಳಿಂದ ಗಾಯಗೊಂಡ ಮೋಡಗಳಂತಿದ್ದ ಆನೆಗಳು ರೋದಿಸುತ್ತಾ ಸುತ್ತಲೂ ತಿರುಗುತ್ತಿದ್ದವು.

07091024a ತಸ್ಮಿನ್ದ್ರುತೇ ಗಜಾನೀಕೇ ಜಲಸಂಧೋ ಮಹಾರಥಃ|

07091024c ಯತ್ತಃ ಸಂಪ್ರಾಪಯನ್ನಾಗಂ ರಜತಾಶ್ವರಥಂ ಪ್ರತಿ||

ಹಾಗೆ ಆ ಗಜಸೇನೆಯು ದಿಕ್ಕಾಪಾಲಾಗಿ ಓಡಿಹೋಗುತ್ತಿರಲು ಮಹಾರಥ ಜಲಸಂಧನು ತನ್ನ ಆನೆಯನ್ನು ರಜತಾಶ್ವ ಸಾತ್ಯಕಿಯ ಬಳಿಗೆ ಕೊಂಡೊಯ್ದನು.

07091025a ರುಕ್ಮವರ್ಣಕರಃ ಶೂರಸ್ತಪನೀಯಾಂಗದಃ ಶುಚಿಃ|

07091025c ಕುಂಡಲೀ ಮುಕುಟೀ ಶಂಖೀ ರಕ್ತಚಂದನರೂಷಿತಃ||

07091026a ಶಿರಸಾ ಧಾರಯನ್ದೀಪ್ತಾಂ ತಪನೀಯಮಯೀಂ ಸ್ರಜಂ|

07091026c ಉರಸಾ ಧಾರಯನ್ನಿಷ್ಕಂ ಕಂಠಸೂತ್ರಂ ಚ ಭಾಸ್ವರಂ||

07091027a ಚಾಪಂ ಚ ರುಕ್ಮವಿಕೃತಂ ವಿಧುನ್ವನ್ಗಜಮೂರ್ಧನಿ|

07091027c ಅಶೋಭತ ಮಹಾರಾಜ ಸವಿದ್ಯುದಿವ ತೋಯದಃ||

ಮಹಾರಾಜ! ಸುವರ್ಣಮಯ ಕವಚವನ್ನು ಧರಿಸಿದ್ದ, ಶೂರ, ಶುಚಿ, ಕುಂಡಲೀ, ಮುಕುಟಿ, ಶಂಖೀ, ರಕ್ತಚಂದನಲೇಪಿತನಾಗಿದ್ದ, ಕತ್ತಿನಲ್ಲಿ ಜ್ವಾಜ್ವಲ್ಯಮಾನ ಚಿನ್ನದ ಸರವನ್ನು ಧರಿಸಿದ್ದ, ವಕ್ಷಃಸ್ಥಲವನ್ನು ಪದಕದಿಂದ ಅಲಂಕರಿಸಿಕೊಂಡಿದ್ದ, ಪ್ರಕಾಶಮಾನವಾದ ಕಂಠಸೂತ್ರವನ್ನು ಧರಿಸಿದ್ದ ಜಲಸಂಧನು ರಣಾಂಗಣದಲ್ಲಿ ಸುವರ್ಣಮಯ ಧನುಸ್ಸನ್ನು ಠೇಂಕರಿಸುತ್ತಾ ವಿದ್ಯುತ್ತಿನಿಂದ ಕೂಡಿದ ಮೇಘದಂತೆ ಪ್ರಕಾಶಿಸಿದನು,

07091028a ತಮಾಪತಂತಂ ಸಹಸಾ ಮಾಗಧಸ್ಯ ಗಜೋತ್ತಮಂ|

07091028c ಸಾತ್ಯಕಿರ್ವಾರಯಾಮಾಸ ವೇಲೇವೋದ್ವೃತ್ತಮರ್ಣವಂ||

ಅತ್ಯಂತ ತ್ವರೆಯಿಂದ ತನ್ನ ಮೇಲೆ ಬೀಳಲು ಬರುತ್ತಿದ್ದ ಮಗಧರಾಜನ ಆ ಗಜನಾಯಕನನ್ನು ಸಾತ್ಯಕಿಯು ಉಕ್ಕಿ ಬರುತ್ತಿರುವ ಸಮುದ್ರವನ್ನು ತೀರವು ತಡೆಯುವಂತೆ ತಡೆದು ನಿಲ್ಲಿಸಿದನು.

07091029a ನಾಗಂ ನಿವಾರಿತಂ ದೃಷ್ಟ್ವಾ ಶೈನೇಯಸ್ಯ ಶರೋತ್ತಮೈಃ|

07091029c ಅಕ್ರುಧ್ಯತ ರಣೇ ರಾಜನ್ಜಲಸಂಧೋ ಮಹಾಬಲಃ||

ರಾಜನ್! ರಣದಲ್ಲಿ ಶೈನೇಯನ ಉತ್ತಮ ಶರಗಳಿಂದ ಆ ಅನೆಯು ತಡೆಯಲ್ಪಟ್ಟಿದುದನ್ನು ನೋಡಿ ಮಹಾಬಲ ಜಲಸಂಧನು ಕ್ರುದ್ಧನಾದನು.

07091030a ತತಃ ಕ್ರುದ್ಧೋ ಮಹೇಷ್ವಾಸೋ ಮಾರ್ಗಣೈರ್ಭಾರಸಾಧನೈಃ|

07091030c ಅವಿಧ್ಯತ ಶಿನೇಃ ಪೌತ್ರಂ ಜಲಸಂಧೋ ಮಹೋರಸಿ||

ಆಗ ಕ್ರುದ್ಧನಾದ ಮಹೇಷ್ವಾಸ ಜಲಸಂಧನು ಭಾರವನ್ನು ಹೊರಬಲ್ಲ ಮಾರ್ಗಣಗಳಿಂದ ಶಿನಿಯ ಮೊಮ್ಮೊಗನ ಮಹಾವಕ್ಷಸ್ಥಳಕ್ಕೆ ಹೊಡೆದನು.

07091031a ತತೋಽಪರೇಣ ಭಲ್ಲೇನ ಪೀತೇನ ನಿಶಿತೇನ ಚ|

07091031c ಅಸ್ಯತೋ ವೃಷ್ಣಿವೀರಸ್ಯ ನಿಚಕರ್ತ ಶರಾಸನಂ||

ಅನಂತರ ಇನ್ನೊಂದು ಹಿತ್ತಾಳೆಯ ನಿಶಿತ ಭಲ್ಲದಿಂದ ವೃಷ್ಣಿವೀರನ ಧನುಸ್ಸನ್ನು ಕತ್ತರಿಸಿದನು.

07091032a ಸಾತ್ಯಕಿಂ ಚಿನ್ನಧನ್ವಾನಂ ಪ್ರಹಸನ್ನಿವ ಭಾರತ|

07091032c ಅವಿಧ್ಯನ್ಮಾಗಧೋ ವೀರಃ ಪಂಚಭಿರ್ನಿಶಿತೈಃ ಶರೈಃ||

ಭಾರತ! ಅನಂತರ ನಗುತ್ತಾ ಧನುಸ್ಸಿನಿಂದ ವಿಹೀನನಾಗಿದ್ದ ಸಾತ್ಯಕಿಯನ್ನು ವೀರ ಮಾಗಧನು ನಗುತ್ತಾ ಐದು ನಿಶಿತ ಶರಗಳಿಂದ ಹೊಡೆದನು.

07091033a ಸ ವಿದ್ಧೋ ಬಹುಭಿರ್ಬಾಣೈರ್ಜಲಸಂಧೇನ ವೀರ್ಯವಾನ್|

07091033c ನಾಕಂಪತ ಮಹಾಬಾಹುಸ್ತದದ್ಭುತಮಿವಾಭವತ್||

ವೀರ್ಯವಾನ್ ಜಲಸಂಧನ ಅನೇಕ ಬಾಣಗಳಿಂದ ಗಾಯಗೊಂಡರೂ ಮಹಾಬಾಹು ಸಾತ್ಯಕಿಯು ವಿಚಲಿತನಾಗಲಿಲ್ಲ. ಅದೊಂದು ಮಹಾ ಅದ್ಭುತವಾಯಿತು.

07091034a ಅಚಿಂತಯನ್ವೈ ಸ ಶರಾನ್ನಾತ್ಯರ್ಥಂ ಸಂಭ್ರಮಾದ್ಬಲೀ|

07091034c ಧನುರನ್ಯತ್ಸಮಾದಾಯ ತಿಷ್ಠ ತಿಷ್ಠೇತ್ಯುವಾಚ ಹ||

ತನ್ನಮೇಲೆ ಬೀಳುತ್ತಿರುವ ಬಾಣಗಳನ್ನು ಪರಿಗಣಿಸದೇ, ಗಾಬರಿಗೊಳ್ಳದೆ ಸಾತ್ಯಕಿಯು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು “ನಿಲ್ಲು! ನಿಲ್ಲು!” ಎಂದು ಜಲಸಂಧನಿಗೆ ಕೂಗಿ ಹೇಳಿದನು.

07091035a ಏತಾವದುಕ್ತ್ವಾ ಶೈನೇಯೋ ಜಲಸಂಧಂ ಮಹೋರಸಿ|

07091035c ವಿವ್ಯಾಧ ಷಷ್ಟ್ಯಾ ಸುಭೃಶಂ ಶರಾಣಾಂ ಪ್ರಹಸನ್ನಿವ||

ಹೀಗೆ ಹೇಳಿ ನಗುತ್ತಾ ಶೈನೇಯನು ಜಲಸಂಧನ ಎದೆಗೆ ಗುರಿಯಿಟ್ಟು ಅರವತ್ತು ಬಾಣಗಳಿಂದ ಹೊಡೆದನು.

07091036a ಕ್ಷುರಪ್ರೇಣ ಚ ಪೀತೇನ ಮುಷ್ಟಿದೇಶೇ ಮಹದ್ಧನುಃ|

07091036c ಜಲಸಂಧಸ್ಯ ಚಿಚ್ಚೇದ ವಿವ್ಯಾಧ ಚ ತ್ರಿಭಿಃ ಶರೈಃ||

ಸುತೀಕ್ಷ್ಣ ಕ್ಷುರಪ್ರದಿಂದ ಜಲಸಂಧನ ಮಹಾಧನುಸ್ಸನ್ನು ಮುಷ್ಟಿಪ್ರದೇಶದಲ್ಲಿ ಕತ್ತರಿಸಿ ಬಳಿಕ ಮೂರು ಬಾಣಗಳಿಂದ ಅವನನ್ನು ಹೊಡೆದನು.

07091037a ಜಲಸಂಧಸ್ತು ತತ್ತ್ಯಕ್ತ್ವಾ ಸಶರಂ ವೈ ಶರಾಸನಂ|

07091037c ತೋಮರಂ ವ್ಯಸೃಜತ್ತೂರ್ಣಂ ಸಾತ್ಯಕಿಂ ಪ್ರತಿ ಮಾರಿಷ||

ಮಾರಿಷ! ಜಲಸಂಧನಾಧರೋ ಬಾಣಗಳಿಂದ ಯುಕ್ತವಾಗಿದ್ದ ಆ ಧನುಸ್ಸನ್ನು ಕೂಡಲೇ ವಿಸರ್ಜಿಸಿ ತೋಮರವನ್ನು ಕೈಗೆತ್ತಿಕೊಂಡು ಸಾತ್ಯಕಿಯ ಕಡೆ ರಭಸದಿಂದ ಎಸೆದನು.

07091038a ಸ ನಿರ್ಭಿದ್ಯ ಭುಜಂ ಸವ್ಯಂ ಮಾಧವಸ್ಯ ಮಹಾರಣೇ|

07091038c ಅಭ್ಯಗಾದ್ಧರಣೀಂ ಘೋರಃ ಶ್ವಸನ್ನಿವ ಮಹೋರಗಃ||

ಅದು ಮಹಾರಣದಲ್ಲಿ ಮಾಧವನ ಎಡಭುಜವನ್ನು ಗಾಯಗೊಳಿಸಿ ಮಹಾಸರ್ಪವು ಭುಸುಗುಟ್ಟುವಂತೆ ಸೊಯ್ ಶಬ್ಧದೊಡನೆ ಭೂಮಿಯನ್ನು ಸೇರಿತು.

07091039a ನಿರ್ಭಿನ್ನೇ ತು ಭುಜೇ ಸವ್ಯೇ ಸಾತ್ಯಕಿಃ ಸತ್ಯವಿಕ್ರಮಃ|

07091039c ತ್ರಿಂಶದ್ಭಿರ್ವಿಶಿಖೈಸ್ತೀಕ್ಷ್ಣೈರ್ಜಲಸಂಧಮತಾಡಯತ್||

ಎಡಭುಜವು ಗಾಯಗೊಳ್ಳಲು ಸತ್ಯವಿಕ್ರಮಿ ಸಾತ್ಯಕಿಯು ತೀಕ್ಷ್ಣವಾದ ಮೂವತ್ತು ವಿಶಿಖಗಳಿಂದ ಜಲಸಂಧನನ್ನು ಹೊಡೆದನು.

07091040a ಪ್ರಗೃಹ್ಯ ತು ತತಃ ಖಡ್ಗಂ ಜಲಸಂಧೋ ಮಹಾಬಲಃ|

07091040c ಆರ್ಷಭಂ ಚರ್ಮ ಚ ಮಹಚ್ಚತಚಂದ್ರಮಲಂಕೃತಂ|

07091040e ತತ ಆವಿಧ್ಯ ತಂ ಖಡ್ಗಂ ಸಾತ್ವತಾಯೋತ್ಸಸರ್ಜ ಹ||

ಅದಕ್ಕೆ ಪ್ರತಿಯಾಗಿ ಮಹಾಬಲ ಜಲಸಂಧನು ಖಡ್ಗವನ್ನೂ, ಎತ್ತಿನ ಚರ್ಮದಿಂದ ಮಾಡಿದ್ದ ಚಂದ್ರಾಕಾರದ ನೂರು ಚಿಹ್ನೆಗಳನ್ನುಳ್ಳ ಗುರಾಣಿಯನ್ನೂ ತೆಗೆದುಕೊಂಡು ಖಡ್ಗವನ್ನು ತಿರುಗಿಸಿ ಸಾತ್ವತನ ಮೇಲೆ ಎಸೆದನು.

07091041a ಶೈನೇಯಸ್ಯ ಧನುಶ್ಚಿತ್ತ್ವಾ ಸ ಖಡ್ಗೋ ನ್ಯಪತನ್ಮಹೀಂ|

07091041c ಅಲಾತಚಕ್ರವಚ್ಚೈವ ವ್ಯರೋಚತ ಮಹೀಂ ಗತಃ||

ಆ ಖಡ್ಗವು ಶೈನೇಯನ ಧನುಸ್ಸನ್ನು ತುಂಡರಿಸಿ ಭೂಮಿಯ ಮೇಲೆ ಬಿದ್ದಿತು. ಭೂಮಿಯ ಮೇಲೆ ಬಿದ್ದಿದ್ದ ಆ ಖಡ್ಗವು ಕೊಳ್ಳಿಯ ಚಕ್ರದಂತೆ ತೋರುತ್ತಿತ್ತು.

07091042a ಅಥಾನ್ಯದ್ಧನುರಾದಾಯ ಸರ್ವಕಾಯಾವದಾರಣಂ|

07091042c ಶಾಲಸ್ಕಂಧಪ್ರತೀಕಾಶಮಿಂದ್ರಾಶನಿಸಮಸ್ವನಂ|

07091042e ವಿಸ್ಫಾರ್ಯ ವಿವ್ಯಧೇ ಕ್ರುದ್ಧೋ ಜಲಸಂಧಂ ಶರೇಣ ಹ||

ಒಡನೆಯೇ ಸಾತ್ಯಕಿಯು ಕ್ರುದ್ಧನಾಗಿ ಎಲ್ಲ ಶರೀರಗಳನ್ನೂ ತುಂಡರಿಸಬಲ್ಲ, ಶಾಲವೃಕ್ಷದ ಕೊಂಬೆಯಂತೆ ದೀರ್ಘವಾದ ಇಂದ್ರನ ವಜ್ರಾಯುಧಕ್ಕೆ ಸಮನಾದ ಠೇಂಕಾರಶಬ್ಧವುಳ್ಳ ಧನುಸ್ಸಿನ ಶಿಂಜಿನಿಯನ್ನು ಮೀಟಿ ನಿಶಿತ ಬಾಣದಿಂದ ಜಲಸಂಧನನ್ನು ಪ್ರಹರಿಸಿದನು.

07091043a ತತಃ ಸಾಭರಣೌ ಬಾಹೂ ಕ್ಷುರಾಭ್ಯಾಂ ಮಾಧವೋತ್ತಮಃ|

07091043c ಸಾಂಗದೌ ಜಲಸಂಧಸ್ಯ ಚಿಚ್ಚೇದ ಪ್ರಹಸನ್ನಿವ||

ಆಗ ಮಾಧವೋತ್ತಮನು ನಗುತ್ತಾ ಆಭರಣಗಳಿಂದ ಕೂಡಿದ್ದ ಜಲಸಂಧನ ಎರಡು ತೋಳುಗಳನ್ನೂ ಎರಡು ಕ್ಷುರಪ್ರಗಳಿಂದ ಕತ್ತರಿಸಿಬಿಟ್ಟನು.

07091044a ತೌ ಬಾಹೂ ಪರಿಘಪ್ರಖ್ಯೌ ಪೇತತುರ್ಗಜಸತ್ತಮಾತ್|

07091044c ವಸುಂಧರಧರಾದ್ಭ್ರಷ್ಟೌ ಪಂಚಶೀರ್ಷಾವಿವೋರಗೌ||

ಜಲಸಂಧನ ಪರಿಘೋಪಮ ಎರಡು ತೋಳುಗಳೂ ಪರ್ವತದ ಮೇಲಿಂದ ಜಾರಿಬಿದ್ದ ಐದು ಹೆಡೆಗಳುಳ್ಳ ಸರ್ಪಗಳಂತೆ ಆನೆಯ ಮೇಲಿಂದ ವಸುಂಧರೆ ಧರೆಯ ಮೇಲೆ ಬಿದ್ದವು.

07091045a ತತಃ ಸುದಂಷ್ಟ್ರಂ ಸುಹನು ಚಾರುಕುಂಡಲಮುನ್ನಸಂ|

07091045c ಕ್ಷುರೇಣಾಸ್ಯ ತೃತೀಯೇನ ಶಿರಶ್ಚಿಚ್ಚೇದ ಸಾತ್ಯಕಿಃ||

ಅನಂತರ ಸಾತ್ಯಕಿಯು ಮೂರನೆಯ ಕ್ಷುರದಿಂದ ಮುತ್ತಿನಂಥಹ ಸುಂದರ ಹಲ್ಲುಗಳನ್ನು ಹೊಂದಿದ್ದ ಮನೋಹರ ಕರ್ಣಕುಂಡಲಗಳಿಂದ ಸಮಲಂಕೃತವಾಗಿದ್ದ ಜಲಸಂಧನ ವಿಶಾಲ ಶಿರಸ್ಸನ್ನು ಕತ್ತರಿಸಿದನು.

07091046a ತತ್ಪಾತಿತಶಿರೋಬಾಹುಕಬಂಧಂ ಭೀಮದರ್ಶನಂ|

07091046c ದ್ವಿರದಂ ಜಲಸಂಧಸ್ಯ ರುಧಿರೇಣಾಭ್ಯಷಿಂಚತ||

ತಲೆ ಮತ್ತು ಬಾಹುಗಳು ಕೆಳಗೆ ಬೀಳಲು ಅತ್ಯಂತ ಭಯಂಕರವಾಗಿ ಕಾಣುತ್ತಿದ್ದ ಜಲಸಂಧನ ಕಬಂಧವು ಚಿಮ್ಮುತ್ತಿರುವ ರಕ್ತದಿಂದ ಆ ಮಹಾಗಜವನ್ನು ತೋಯಿಸಿತು.

07091047a ಜಲಸಂಧಂ ನಿಹತ್ಯಾಜೌ ತ್ವರಮಾಣಸ್ತು ಸಾತ್ವತಃ|

07091047c ನೈಷಾದಿಂ ಪಾತಯಾಮಾಸ ಗಜಸ್ಕಂಧಾದ್ವಿಶಾಂ ಪತೇ||

ವಿಶಾಂಪತೇ! ಈ ರೀತಿ ಜಲಸಂಧನನ್ನು ಸಂಹರಿಸಿ ಸಾತ್ವತನು ತ್ವರೆಮಾಡಿ ಆನೆಯ ಭುಜದ ಮೇಲಿಂದ ಅದರ ಅಂಬಾರಿಯನ್ನೂ ಕೆಳಗುರುಳಿಸಿದನು.

07091048a ರುಧಿರೇಣಾವಸಿಕ್ತಾಂಗೋ ಜಲಸಂಧಸ್ಯ ಕುಂಜರಃ|

07091048c ವಿಲಂಬಮಾನಮವಹತ್ಸಂಶ್ಲಿಷ್ಟಂ ಪರಮಾಸನಂ||

ಆದರೆ ರಕ್ತದಿಂದ ತೋಯ್ದು ಹೋಗಿದ್ದ ದೇಹದ ಜಲಸಂಧನ ಆನೆಯು ಅದಕ್ಕೆ ಕಟ್ಟಿದ್ದ ಆ ಶ್ರೇಷ್ಠ ಅಂಬಾರಿಯನ್ನು ಜೋತಾಡಿಸುತ್ತಾ ಎಳೆದು ಕೊಂಡೇ ಓಡಿಹೋಯಿತು.

07091049a ಶರಾರ್ದಿತಃ ಸಾತ್ವತೇನ ಮರ್ದಮಾನಃ ಸ್ವವಾಹಿನೀಂ|

07091049c ಘೋರಮಾರ್ತಸ್ವರಂ ಕೃತ್ವಾ ವಿದುದ್ರಾವ ಮಹಾಗಜಃ||

ಸಾತ್ವತನ ಬಾಣಗಳಿಂದ ಪುನಃ ಪೀಡಿತವಾದ ಆ ದೊಡ್ಡ ಆನೆಯು ಭಯಂಕರವಾಗಿ ಚೀತ್ಕಾರ ಮಾಡುತ್ತಾ ತನ್ನ ಕಡೆಯ ಸೇನೆಯನ್ನೇ ಪದಾಘಾತದಿಂದ ಮರ್ದಿಸುತ್ತಾ ಓಡಿಹೋಯಿತು.

07091050a ಹಾಹಾಕಾರೋ ಮಹಾನಾಸೀತ್ತವ ಸೈನ್ಯಸ್ಯ ಮಾರಿಷ|

07091050c ಜಲಸಂಧಂ ಹತಂ ದೃಷ್ಟ್ವಾ ವೃಷ್ಣೀನಾಂ ಋಷಭೇಣ ಹ||

ಮಾರಿಷ! ವೃಷ್ಣಿಯರ ವೃಷಭನಿಂದ ಜಲಸಂಧನು ಹತನಾದುದನ್ನು ಕಂಡು ನಿನ್ನ ಸೇನೆಯಲ್ಲಿ ಮಹಾ ಹಾಹಾಕಾರವುಂಟಾಯಿತು.

07091051a ವಿಮುಖಾಶ್ಚಾಭ್ಯಧಾವಂತ ತವ ಯೋಧಾಃ ಸಮಂತತಃ|

07091051c ಪಲಾಯನೇ ಕೃತೋತ್ಸಾಹಾ ನಿರುತ್ಸಾಹಾ ದ್ವಿಷಜ್ಜಯೇ||

ಶತ್ರುವನ್ನು ಜಯಿಸುವುದರಲ್ಲಿ ನಿರುತ್ಸಾಹರಾಗಿದ್ದ ಪಲಾಯನದಲ್ಲಿ ಉತ್ಸಾಹಿತರಾಗಿದ್ದ ನಿನ್ನ ಯೋಧರು ಎಲ್ಲ ದಿಕ್ಕುಗಳಲ್ಲಿ ಹಿಮ್ಮೆಟ್ಟಿ ಓಡಿಹೋದರು.

07091052a ಏತಸ್ಮಿನ್ನಂತರೇ ರಾಜನ್ದ್ರೋಣಃ ಶಸ್ತ್ರಭೃತಾಂ ವರಃ|

07091052c ಅಭ್ಯಯಾಜ್ಜವನೈರಶ್ವೈರ್ಯುಯುಧಾನಂ ಮಹಾರಥಂ||

ರಾಜನ್! ಈ ಮಧ್ಯದಲ್ಲಿ ಶಸ್ತ್ರಗಳನ್ನು ಹಿಡಿದವರಲ್ಲಿಯೇ ಶ್ರೇಷ್ಠನಾದ ದ್ರೋಣನು ವೇಗವಾದ ಕುದುರೆಗಳ ಮೂಲಕ ಮಹಾರಥ ಸಾತ್ಯಕಿಯ ಸಮೀಪ ಬಂದನು.

07091053a ತಮುದೀರ್ಣಂ ತಥಾ ದೃಷ್ಟ್ವಾ ಶೈನೇಯಂ ಕುರುಪುಂಗವಾಃ|

07091053c ದ್ರೋಣೇನೈವ ಸಹ ಕ್ರುದ್ಧಾಃ ಸಾತ್ಯಕಿಂ ಪರ್ಯವಾರಯನ್||

ಅಡಿಗಡಿಯೂ ಜಯಶಾಲಿಯಾಗುತ್ತಿದ್ದ ಶೈನೇಯನನ್ನು ನೋಡಿ ಕ್ರುದ್ಧರಾದ ಕುರುಪುಂಗವರು ದ್ರೋಣನನ್ನು ಸೇರಿಕೊಂಡು ಸಾತ್ಯಕಿಯನ್ನು ಸುತ್ತುವರೆದರು.

07091054a ತತಃ ಪ್ರವವೃತೇ ಯುದ್ಧಂ ಕುರೂಣಾಂ ಸಾತ್ವತಸ್ಯ ಚ|

07091054c ದ್ರೋಣಸ್ಯ ಚ ರಣೇ ರಾಜನ್ಘೋರಂ ದೇವಾಸುರೋಪಮಂ||

ಆಗ ರಾಜನ್! ದ್ರೋಣನೊಂದಿಗಿದ್ದ ಕುರುಗಳ ಮತ್ತು  ಸಾತ್ವತನ ನಡುವೆ  ದೇವಾಸುರರ ಮಧ್ಯೆ ನಡೆದಂತೆ ಘೋರವಾದ ಯುದ್ಧವು ನಡೆಯಿತು.

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ಜಲಸಂಧವಧೇ ಏಕನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ಜಲಸಂಧವಧ ಎನ್ನುವ ತೊಂಭತ್ತೊಂದನೇ ಅಧ್ಯಾಯವು.

Image result for flowers against white background

Comments are closed.