Drona Parva: Chapter 90

ದ್ರೋಣ ಪರ್ವ: ಜಯದ್ರಥವಧ ಪರ್ವ

೯೦

ಕೃತವರ್ಮನ ಪರಾಕ್ರಮ (೧-೫೦).

07090001 ಸಂಜಯ ಉವಾಚ|

07090001a ಆತ್ಮಾಪರಾಧಾತ್ಸಂಭೂತಂ ವ್ಯಸನಂ ಭರತರ್ಷಭ|

07090001c ಪ್ರಾಪ್ಯ ಪ್ರಾಕೃತವದ್ವೀರ ನ ತ್ವಂ ಶೋಚಿತುಮರ್ಹಸಿ||

ಸಂಜಯನು ಹೇಳಿದನು: “ತಾನೇ ಮಾಡಿದ ಅಪರಾಧದಿಂದ ಹುಟ್ಟಿದ ವ್ಯಸನವನ್ನು ಪಡೆದು ವೀರನಾದ ನೀನು ಸಾಮಾನ್ಯರಂತೆ ಶೋಕಿಸಕೂಡದು.

07090002a ತವ ನಿರ್ಗುಣತಾಂ ಜ್ಞಾತ್ವಾ ಪಕ್ಷಪಾತಂ ಸುತೇಷು ಚ|

07090002c ದ್ವೈಧೀಭಾವಂ ತಥಾ ಧರ್ಮೇ ಪಾಂಡವೇಷು ಚ ಮತ್ಸರಂ|

07090002e ಆರ್ತಪ್ರಲಾಪಾಂಶ್ಚ ಬಹೂನ್ಮನುಜಾಧಿಪಸತ್ತಮ||

07090003a ಸರ್ವಲೋಕಸ್ಯ ತತ್ತ್ವಜ್ಞಃ ಸರ್ವಲೋಕಗುರುಃ ಪ್ರಭುಃ|

07090003c ವಾಸುದೇವಸ್ತತೋ ಯುದ್ಧಂ ಕುರೂಣಾಮಕರೋನ್ಮಹತ್||

ಮನುಜಾಧಿಪಸತ್ತಮ! ನಿನ್ನ ನಿರ್ಗುಣತೆಗಳನ್ನು ತಿಳಿದು, ಮಕ್ಕಳಲ್ಲಿ ಪಕ್ಷಪಾತಮಾಡುತ್ತಿರುವೆಯೆಂದು, ಧರ್ಮದ ಕುರಿತು ನಿನ್ನ ದ್ವಂದ್ವವಿದೆಯೆಂದು, ಪಾಂಡವರಲ್ಲಿ ಅಸೂಯೆಯಿದೆಯೆಂದು, ಬಹಳ ಆರ್ತಪ್ರಲಾಪಮಾಡುತ್ತೀಯೆಂದು ಸರ್ವಲೋಕಗಳ ತತ್ತ್ವಜ್ಞ ಸರ್ವಲೋಕಗಳ ಗುರು ಪ್ರಭು ವಾಸುದೇವನು ಕುರುಗಳ ಈ ಮಹಾ ಯುದ್ಧವನ್ನು ರಚಿಸಿದ್ದಾನೆ.

07090004a ಆತ್ಮಾಪರಾಧಾತ್ಸುಮಹಾನ್ಪ್ರಾಪ್ತಸ್ತೇ ವಿಪುಲಃ ಕ್ಷಯಃ|

07090004c ನ ಹಿ ತೇ ಸುಕೃತಂ ಕಿಂ ಚಿದಾದೌ ಮಧ್ಯೇ ಚ ಭಾರತ|

07090004e ದೃಶ್ಯತೇ ಪೃಷ್ಠತಶ್ಚೈವ ತ್ವನ್ಮೂಲೋ ಹಿ ಪರಾಜಯಃ||

ಭಾರತ! ನಿನ್ನದೇ ಮಹಾ ಅಪರಾಧದಿಂದ ಈ ವಿಪುಲ ಕ್ಷಯವು ನಡೆಯುತ್ತಿರುವುದು. ನೀನು ಆದಿಯುಲ್ಲಾಗಲೀ ಮಧ್ಯದಲ್ಲಿಯಾಗಲೀ ಒಂದಿಷ್ಟೂ ಒಳ್ಳೆಯ ಕೆಲಸವನ್ನು ಮಾಡಿರದೇ ಇರುವುದರಿಂದ ಅಂತ್ಯದಲ್ಲಿ ಇದನ್ನು ನೋಡುತ್ತಿದ್ದೀಯೆ. ಪರಾಜಯಕ್ಕೆ ನೀನೇ ಕಾರಣ.

07090005a ತಸ್ಮಾದದ್ಯ ಸ್ಥಿರೋ ಭೂತ್ವಾ ಜ್ಞಾತ್ವಾ ಲೋಕಸ್ಯ ನಿರ್ಣಯಂ|

07090005c ಶೃಣು ಯುದ್ಧಂ ಯಥಾ ವೃತ್ತಂ ಘೋರಂ ದೇವಾಸುರೋಪಮಂ||

ಆದುದರಿಂದ ಇಂದು ಲೋಕದ ನಿರ್ಣಯವನ್ನು ಅರ್ಥಮಾಡಿಕೊಂಡು ಸ್ಥಿರನಾಗಿದ್ದುಕೊಂಡು ದೇವಾಸುರರ ಯುದ್ಧದಂತೆ ನಡೆಯುತ್ತಿರುವ ಘೋರ ಯುದ್ಧವು ನಡೆದಹಾಗೆ ಕೇಳು.

07090006a ಪ್ರವಿಷ್ಟೇ ತವ ಸೈನ್ಯಂ ತು ಶೈನೇಯೇ ಸತ್ಯವಿಕ್ರಮೇ|

07090006c ಭೀಮಸೇನಮುಖಾಃ ಪಾರ್ಥಾಃ ಪ್ರತೀಯುರ್ವಾಹಿನೀಂ ತವ||

ಸತ್ಯವಿಕ್ರಮ ಶೈನೇಯನು ನಿನ್ನ ಸೇನೆಯನ್ನು ಪ್ರವೇಶಿಸಿದ ನಂತರ ಭೀಮಸೇನ ಪ್ರಮುಖರಾದ ಪಾರ್ಥರು ನಿನ್ನ ಸೇನೆಯನ್ನು ಆಕ್ರಮಣಿಸಿದರು.

07090007a ಆಗಚ್ಚತಸ್ತಾನ್ಸಹಸಾ ಕ್ರುದ್ಧರೂಪಾನ್ಸಹಾನುಗಾನ್|

07090007c ದಧಾರೈಕೋ ರಣೇ ಪಾಂಡೂನ್ಕೃತವರ್ಮಾ ಮಹಾರಥಃ||

ಅನುಗರೊಂದಿಗೆ ಕ್ರುದ್ಧರಾಗಿ ಒಮ್ಮೆಲೇ ಎರಗಿದ ಪಾಂಡವರನ್ನು ರಣದಲ್ಲಿ ಮಹಾರಥ ಕೃತವರ್ಮನು ಒಬ್ಬನೇ ಎದುರಿಸಿದನು.

07090008a ಯಥೋದ್ವೃತ್ತಂ ಧಾರಯತೇ ವೇಲಾ ವೈ ಸಲಿಲಾರ್ಣವಂ|

07090008c ಪಾಂಡುಸೈನ್ಯಂ ತಥಾ ಸಂಖ್ಯೇ ಹಾರ್ದಿಕ್ಯಃ ಸಮವಾರಯತ್||

ಉಕ್ಕಿಬರುವ ಸಾಗರದ ನೀರನ್ನು ದಡವು ತಡೆಹಿಡಿಯುವಂತೆ ಹಾರ್ದಿಕ್ಯನು ಪಾಂಡುಸೇನೆಯನ್ನು ರಣದಲ್ಲಿ ತಡೆಹಿಡಿದನು.

07090009a ತತ್ರಾದ್ಭುತಮಮನ್ಯಂತ ಹಾರ್ದಿಕ್ಯಸ್ಯ ಪರಾಕ್ರಮಂ|

07090009c ಯದೇನಂ ಸಹಿತಾಃ ಪಾರ್ಥಾ ನಾತಿಚಕ್ರಮುರಾಹವೇ||

ಆಹವದಲ್ಲಿ ಪಾರ್ಥರು ಒಟ್ಟಿಗೇ ಅತಿಕ್ರಮಿಸಲಾಗದ ಹಾರ್ದಿಕ್ಯನ ಪರಾಕ್ರಮವನ್ನು ನಾವು ಅದ್ಭುತವೆಂದೇ ಪರಿಗಣಿಸಿದೆವು.

07090010a ತತೋ ಭೀಮಸ್ತ್ರಿಭಿರ್ವಿದ್ಧ್ವಾ ಕೃತವರ್ಮಾಣಮಾಯಸೈಃ|

07090010c ಶಂಖಂ ದಧ್ಮೌ ಮಹಾಬಾಹುರ್ಹರ್ಷಯನ್ಸರ್ವಪಾಂಡವಾನ್||

ಆಗ ಮಹಾಬಾಹು ಭೀಮನು ಕೃತವರ್ಮನನ್ನು ಮೂರು ಆಯಸಗಳಿಂದ ಹೊಡೆದು ಪಾಂಡವರನ್ನು ಹರ್ಷಗೊಳಿಸುತ್ತಾ ಶಂಖವನ್ನು ಊದಿದನು.

07090011a ಸಹದೇವಸ್ತು ವಿಂಶತ್ಯಾ ಧರ್ಮರಾಜಶ್ಚ ಪಂಚಭಿಃ|

07090011c ಶತೇನ ನಕುಲಶ್ಚಾಪಿ ಹಾರ್ದಿಕ್ಯಂ ಸಮವಿಧ್ಯತ||

ಸಹದೇವನು ಇಪ್ಪತ್ತರಿಂದ, ಧರ್ಮರಾಜನು ಐದರಿಂದ, ನಕುಲನು ನೂರರಿಂದ ಹಾರ್ದಿಕ್ಯನನ್ನು ಹೊಡೆದರು.

07090012a ದ್ರೌಪದೇಯಾಸ್ತ್ರಿಸಪ್ತತ್ಯಾ ಸಪ್ತಭಿಶ್ಚ ಘಟೋತ್ಕಚಃ|

07090012c ಧೃಷ್ಟದ್ಯುಮ್ನಸ್ತ್ರಿಭಿಶ್ಚಾಪಿ ಕೃತವರ್ಮಾಣಮಾರ್ದಯತ್|

07090012e ವಿರಾಟೋ ದ್ರುಪದಶ್ಚೈವ ಯಾಜ್ಞಸೇನಿಶ್ಚ ಪಂಚಭಿಃ||

ದ್ರೌಪದೇಯರು ಎಪ್ಪತ್ಮೂರರಿಂದ, ಘಟೋತ್ಕಚನು ಎಪ್ಪತ್ತರಿಂದ ಮತ್ತು ಧೃಷ್ಟದ್ಯುಮ್ನನು ಮೂರರಿಂದ, ವಿರಾಟ ಮತ್ತು ಯಾಜ್ಞಸೇನಿ ದ್ರುಪದರು ಐದರಿಂದ ಕೃತವರ್ಮನನ್ನು ಹೊಡೆದರು.

07090013a ಶಿಖಂಡೀ ಚಾಪಿ ಹಾರ್ದಿಕ್ಯಂ ವಿದ್ಧ್ವಾ ಪಂಚಭಿರಾಶುಗೈಃ|

07090013c ಪುನರ್ವಿವ್ಯಾಧ ವಿಂಶತ್ಯಾ ಸಾಯಕಾನಾಂ ಹಸನ್ನಿವ||

ಶಿಖಂಡಿಯೂ ಕೂಡ ಹಾರ್ದಿಕ್ಯನನ್ನು ಐದು ಆಶುಗಗಳಿಂದ ಹೊಡೆದು ಪುನಃ ನಗುತ್ತಾ ಅವನ ಮೇಲೆ ಇಪ್ಪತ್ತು ಸಾಯಕಗಳನ್ನು ಪ್ರಯೋಗಿಸಿದನು.

07090014a ಕೃತವರ್ಮಾ ತತೋ ರಾಜನ್ಸರ್ವತಸ್ತಾನ್ಮಹಾರಥಾನ್|

07090014c ಏಕೈಕಂ ಪಂಚಭಿರ್ವಿದ್ಧ್ವಾ ಭೀಮಂ ವಿವ್ಯಾಧ ಸಪ್ತಭಿಃ|

07090014e ಧನುರ್ಧ್ವಜಂ ಚ ಸಮ್ಯತ್ತೋ ರಥಾದ್ಭೂಮಾವಪಾತಯತ್||

ರಾಜನ್! ಆಗ ಕೃತವರ್ಮನು ಸುತ್ತುವರೆದಿದ್ದ ಆ ಒಬ್ಬೊಬ್ಬ ಮಹಾರಥರನ್ನೂ ಐದೈದು ಬಾಣಗಳಿಂದ ಹೊಡೆದು ಭೀಮನನ್ನು ಏಳರಿಂದ ಹೊಡೆದನು. ಅವನ ಧ್ವಜವನ್ನೂ ಧನುಸ್ಸನ್ನೂ ರಥದಿಂದ ಭೂಮಿಗೆ ಬೀಳಿಸಿದನು.

07090015a ಅಥೈನಂ ಚಿನ್ನಧನ್ವಾನಂ ತ್ವರಮಾಣೋ ಮಹಾರಥಃ|

07090015c ಆಜಘಾನೋರಸಿ ಕ್ರುದ್ಧಃ ಸಪ್ತತ್ಯಾ ನಿಶಿತೈಃ ಶರೈಃ||

ಆಗ ಮಹಾರಥ ಕೃತವರ್ಮನು ಕ್ರುದ್ಧನಾಗಿ ತ್ವರೆಮಾಡಿ ಧನುಸ್ಸನ್ನು ಕಳೆದುಕೊಂಡಿದ್ದ ಭೀಮಸೇನನ ಎದೆಗೆ ಎಪ್ಪತ್ತು ನಿಶಿತ ಬಾಣಗಳಿಂದ ಹೊಡೆದನು.

07090016a ಸ ಗಾಢವಿದ್ಧೋ ಬಲವಾನ್ ಹಾರ್ದಿಕ್ಯಸ್ಯ ಶರೋತ್ತಮೈಃ|

07090016c ಚಚಾಲ ರಥಮಧ್ಯಸ್ಥಃ ಕ್ಷಿತಿಕಂಪೇ ಯಥಾಚಲಃ||

ಬಲವಾನ್ ಹಾರ್ದಿಕ್ಯನ ಉತ್ತಮ ಶರಗಳಿಂದ ಆಳವಾಗಿ ಗಾಯಗೊಂಡ ರಥದ ಮಧ್ಯದಲ್ಲಿದ್ದ ಭೀಮನು ಭೂಕಂಪದಲ್ಲಿ ಪರ್ವತದಂತೆ ನಡುಗಿದನು.

07090017a ಭೀಮಸೇನಂ ತಥಾ ದೃಷ್ಟ್ವಾ ಧರ್ಮರಾಜಪುರೋಗಮಾಃ|

07090017c ವಿಸೃಜಂತಃ ಶರಾನ್ಘೋರಾನ್ಕೃತವರ್ಮಾಣಮಾರ್ದಯನ್||

ಭೀಮಸೇನನು ಹಾಗಾದುದನ್ನು ನೋಡಿ ಧರ್ಮರಾಜನೇ ಮೊದಲಾದವರು ಕೃತವರ್ಮನ ಮೇಲೆ ಘೋರ ಬಾಣಗಳನ್ನು ಪ್ರಯೋಗಿಸಿದರು.

07090018a ತಂ ತಥಾ ಕೋಷ್ಠಕೀಕೃತ್ಯ ರಥವಂಶೇನ ಮಾರಿಷ|

07090018c ವಿವ್ಯಧುಃ ಸಾಯಕೈರ್ಹೃಷ್ಟಾ ರಕ್ಷಾರ್ಥಂ ಮಾರುತೇರ್ಮೃಧೇ||

ಮಾರಿಷ! ಅವರು ಮಾರುತಿಯನ್ನು ರಕ್ಷಿಸಲೋಸುಗ ಹೃಷ್ಟರಾಗಿ ಕೃತವರ್ಮನನ್ನು ರಥಸಮೂಹಗಳ ಮಧ್ಯೆ ಸೇರಿಸಿಕೊಂಡು ಸಾಯಕಗಳಿಂದ ಅವನನ್ನು ಹೊಡೆದರು.

07090019a ಪ್ರತಿಲಭ್ಯ ತತಃ ಸಂಜ್ಞಾಂ ಭೀಮಸೇನೋ ಮಹಾಬಲಃ|

07090019c ಶಕ್ತಿಂ ಜಗ್ರಾಹ ಸಮರೇ ಹೇಮದಂಡಾಮಯಸ್ಮಯೀಂ|

07090019e ಚಿಕ್ಷೇಪ ಚ ರಥಾತ್ತೂರ್ಣಂ ಕೃತವರ್ಮರಥಂ ಪ್ರತಿ||

ಆಗ ಮಹಾಬಲ ಭೀಮಸೇನನು ಪುನಃ ಪ್ರಜ್ಞೆಯನ್ನು ಪಡೆದು ಸುವರ್ಣಮಯ ದಂಡದಿಂದ ಕೂಡಿದ ಲೋಹಮಹವಾಗಿದ್ದ ಶಕ್ತಿಯನ್ನು ಸಮರದಲ್ಲಿ ಕೈಗೆತ್ತಿಕೊಂಡು ಶೀಘ್ರವಾಗಿ ತನ್ನ ರಥದಿಂದ ಕೃತವರ್ಮನ ರಥದ ಕಡೆ ಎಸೆದನು.

07090020a ಸಾ ಭೀಮಭುಜನಿರ್ಮುಕ್ತಾ ನಿರ್ಮುಕ್ತೋರಗಸನ್ನಿಭಾ|

07090020c ಕೃತವರ್ಮಾಣಮಭಿತಃ ಪ್ರಜಜ್ವಾಲ ಸುದಾರುಣಾ||

ಭೀಮನ ಭುಜದಿಂದ ಹೊರಟ ಪೊರೆಬಿಟ್ಟ ಸರ್ಪದಂತಿದ್ದ ಆ ಸುದಾರುಣ ಶಕ್ತ್ಯಾಯುಧವು ಪ್ರಜ್ವಲಿಸುತ್ತಾ ಕೃತವರ್ಮನ ಸಮೀಪಕ್ಕೆ ಬಂದಿತು.

07090021a ತಾಮಾಪತಂತೀಂ ಸಹಸಾ ಯುಗಾಂತಾಗ್ನಿಸಮಪ್ರಭಾಂ|

07090021c ದ್ವಾಭ್ಯಾಂ ಶರಾಭ್ಯಾಂ ಹಾರ್ದಿಕ್ಯೋ ನಿಚಕರ್ತ ದ್ವಿಧಾ ತದಾ||

ತನ್ನ ಮೇಲೆ ರಭಸದಿಂದ ಬೀಳಲಿದ್ದ ಪ್ರಳಯಕಾಲದ ಅಗ್ನಿಯ ಪ್ರಭೆಗೆ ಸಮನಾಗಿದ್ದ ಆ ಶಕ್ತಿಯನ್ನು ಹಾರ್ದಿಕ್ಯನು ಎರಡು ಬಾಣಗಳಿಂದ ಎರಡಾಗಿ ಕತ್ತರಿಸಿದನು.

07090022a ಸಾ ಚಿನ್ನಾ ಪತಿತಾ ಭೂಮೌ ಶಕ್ತಿಃ ಕನಕಭೂಷಣಾ|

07090022c ದ್ಯೋತಯಂತೀ ದಿಶೋ ರಾಜನ್ಮಹೋಲ್ಕೇವ ದಿವಶ್ಚ್ಯುತಾ|

07090022e ಶಕ್ತಿಂ ವಿನಿಹತಾಂ ದೃಷ್ಟ್ವಾ ಭೀಮಶ್ಚುಕ್ರೋಧ ವೈ ಭೃಶಂ||

ರಾಜನ್! ಕತ್ತರಿಸಲ್ಪಟ್ಟ ಆ ಕನಕಭೂಷಣ ಶಕ್ತಿಯು ದಿವದಿಂದ ಚ್ಯುತಗೊಂಡ ಮಹಾ ಉಲ್ಕೆಯಂತೆ ದಿಕ್ಕುಗಳನ್ನು ಬೆಳಗಿಸುತ್ತಾ ಭೂಮಿಯ ಮೇಲೆ ಬಿದ್ದಿತು. ಶಕ್ತಿಯು ವಿನಾಶವಾದುದನ್ನು ಕಂಡು ಭೀಮನು ತುಂಬಾ ಕುಪಿತನಾದನು.

07090023a ತತೋಽನ್ಯದ್ಧನುರಾದಾಯ ವೇಗವತ್ಸುಮಹಾಸ್ವನಂ|

07090023c ಭೀಮಸೇನೋ ರಣೇ ಕ್ರುದ್ಧೋ ಹಾರ್ದಿಕ್ಯಂ ಸಮವಾರಯತ್||

ಆಗ ರಣದಲ್ಲಿ ಕ್ರುದ್ಧನಾದ ಭೀಮಸೇನನು ಮಹಾಶಬ್ಧವುಳ್ಳ ವೇಗವತ್ತಾದ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಹಾರ್ದಿಕ್ಯನನ್ನು ಹೊಡೆದನು.

07090024a ಅಥೈನಂ ಪಂಚಭಿರ್ಬಾಣೈರಾಜಘಾನ ಸ್ತನಾಂತರೇ|

07090024c ಭೀಮೋ ಭೀಮಬಲೋ ರಾಜಂಸ್ತವ ದುರ್ಮಂತ್ರಿತೇನ ಹ||

ರಾಜನ್! ನಿನ್ನ ದುರ್ಮಂತ್ರದಿಂದಾಗಿ ಅತಿ ಬಲಶಾಲಿಯಾಗಿರುವ ಭೀಮನು ಐದು ಬಾಣಗಳಿಂದ ಅವನ ವಕ್ಷಸ್ಥಳಕ್ಕೆ ಹೊಡೆದನು.

07090025a ಭೋಜಸ್ತು ಕ್ಷತಸರ್ವಾಂಗೋ ಭೀಮಸೇನೇನ ಮಾರಿಷ|

07090025c ರಕ್ತಾಶೋಕ ಇವೋತ್ಫುಲ್ಲೋ ವ್ಯಭ್ರಾಜತ ರಣಾಜಿರೇ||

ಮಾರಿಷ! ಭೋಜನಾದರೋ ಭೀಮಸೇನನಿಂದ ಸರ್ವಾಂಗಗಳಲ್ಲಿಯೂ ಗಾಯಗೊಂಡು ಕೆಂಪು ಹೂಬಿಟ್ಟ ಅಶೋಕವೃಕ್ಷದಂತೆ ರಣಾಜಿರದಲ್ಲಿ ಪ್ರಕಾಶಿಸಿದನು.

07090026a ತತಃ ಕ್ರುದ್ಧಸ್ತ್ರಿಭಿರ್ಬಾಣೈರ್ಭೀಮಸೇನಂ ಹಸನ್ನಿವ|

07090026c ಅಭಿಹತ್ಯ ದೃಢಂ ಯುದ್ಧೇ ತಾನ್ಸರ್ವಾನ್ಪ್ರತ್ಯವಿಧ್ಯತ||

07090027a ತ್ರಿಭಿಸ್ತ್ರಿಭಿರ್ಮಹೇಷ್ವಾಸೋ ಯತಮಾನಾನ್ಮಹಾರಥಾನ್|

07090027c ತೇಽಪಿ ತಂ ಪ್ರತ್ಯವಿಧ್ಯಂತ ಸಪ್ತಭಿಃ ಸಪ್ತಭಿಃ ಶರೈಃ||

ಆಗ ಕ್ರುದ್ಧನಾದ ಕೃತವರ್ಮನು ನಗುತ್ತಿರುವನೋ ಎಂಬಂತೆ ಭೀಮಸೇನನನ್ನು ದೃಢವಾಗಿ ಪ್ರಹರಿಸಿದನು. ಹಾಗೆಯೇ ತನ್ನೊಡನೆ ಪ್ರಯತ್ನಪಟ್ಟು ಯುದ್ಧಮಾಡುತ್ತಿದ್ದ ಆ ಎಲ್ಲ ಮಹಾರಥರನ್ನು ಮೂರು ಮೂರು ಬಾಣಗಳಿಂದ ಹೊಡೆದನು. ಅವರೂ ಕೂಡ ತಿರುಗಿ ಅವನನ್ನು ಏಳೇಳು ಬಾಣಗಳಿಂದ ಹೊಡೆದರು.

07090028a ಶಿಖಂಡಿನಸ್ತತಃ ಕ್ರುದ್ಧಃ ಕ್ಷುರಪ್ರೇಣ ಮಹಾರಥಃ|

07090028c ಧನುಶ್ಚಿಚ್ಚೇದ ಸಮರೇ ಪ್ರಹಸನ್ನಿವ ಭಾರತ||

ಭಾರತ! ಅನಂತರ ಆ ಮಹಾರಥನು ಕ್ರುದ್ಧನಾಗಿ ನಗುತ್ತಾ ಕ್ಷುರಪ್ರದಿಂದ ಶಿಖಂಡಿಯ ಧನುಸ್ಸನ್ನು ತುಂಡರಿಸಿದನು.

07090029a ಶಿಖಂಡೀ ತು ತತಃ ಕ್ರುದ್ಧಶ್ಚಿನ್ನೇ ಧನುಷಿ ಸತ್ವರಂ|

07090029c ಅಸಿಂ ಜಗ್ರಾಹ ಸಮರೇ ಶತಚಂದ್ರಂ ಚ ಭಾಸ್ವರಂ||

ಭಾರವುಳ್ಳ ಧನುಸ್ಸು ತುಂಡಾಗಲು ಕ್ರುದ್ಧನಾದ ಶಿಖಂಡಿಯು ಸಮರದಲ್ಲಿ ನೂರುಚಂದ್ರಗಳಂತೆ ಹೊಳೆಯುತ್ತಿದ್ದ ಖಡ್ಗವನ್ನು ಕೈಯಲ್ಲಿ ತೆಗೆದುಕೊಂಡನು.

07090030a ಭ್ರಾಮಯಿತ್ವಾ ಮಹಾಚರ್ಮ ಚಾಮೀಕರವಿಭೂಷಿತಂ|

07090030c ತಮಸಿಂ ಪ್ರೇಷಯಾಮಾಸ ಕೃತವರ್ಮರಥಂ ಪ್ರತಿ||

ಸುವರ್ಣಭೂಷಿತ ವಿಶಾಲ ಗುರಾಣಿಯನ್ನು ತಿರುಗಿಸುತ್ತಾ ಕತ್ತಿಯನ್ನು ಕೃತವರ್ಮನ ರಥದ ಕಡೆ ಎಸೆದನು.

07090031a ಸ ತಸ್ಯ ಸಶರಂ ಚಾಪಂ ಚಿತ್ತ್ವಾ ಸಂಖ್ಯೇ ಮಹಾನಸಿಃ|

07090031c ಅಭ್ಯಗಾದ್ಧರಣೀಂ ರಾಜಂಶ್ಚ್ಯುತಂ ಜ್ಯೋತಿರಿವಾಂಬರಾತ್||

ರಾಜನ್! ಆ ಮಹಾಖಡ್ಗವು ಶರದೊಂದಿಗೆ ಅವನ ಧನುಸ್ಸನ್ನು ತುಂಡರಿಸಿ ಅಂಬರದಿಂದ ಬಿದ್ದ ನಕ್ಷತ್ರದೋಪಾದಿಯಲ್ಲಿ ಭೂಮಿಯ ಮೇಲೆ ಬಿದ್ದಿತು.

07090032a ಏತಸ್ಮಿನ್ನೇವ ಕಾಲೇ ತು ತ್ವರಮಾಣಾ ಮಹಾರಥಾಃ|

07090032c ವಿವ್ಯಧುಃ ಸಾಯಕೈರ್ಗಾಢಂ ಕೃತವರ್ಮಾಣಮಾಹವೇ||

ಇದೇ ಸಮಯದಲ್ಲಿ ಮಹಾರಥರು ಆಹವದಲ್ಲಿ ತ್ವರೆಮಾಡಿ ಕೃತವರ್ಮನನ್ನು ಸಾಯಕಗಳಿಂದ ಗಾಢವಾಗಿ ಹೊಡೆದರು.

07090033a ಅಥಾನ್ಯದ್ಧನುರಾದಾಯ ತ್ಯಕ್ತ್ವಾ ತಚ್ಚ ಮಹದ್ಧನುಃ|

07090033c ವಿಶೀರ್ಣಂ ಭರತಶ್ರೇಷ್ಠ ಹಾರ್ದಿಕ್ಯಃ ಪರವೀರಹಾ||

07090034a ವಿವ್ಯಾಧ ಪಾಂಡವಾನ್ಯುದ್ಧೇ ತ್ರಿಭಿಸ್ತ್ರಿಭಿರಜಿಹ್ಮಗೈಃ|

07090034c ಶಿಖಂಡಿನಂ ಚ ವಿವ್ಯಾಧ ತ್ರಿಭಿಃ ಪಂಚಭಿರೇವ ಚ||

ಭರತಶ್ರೇಷ್ಠ! ಪರವೀರಹ ಹಾರ್ದಿಕ್ಯನು ತುಂಡಾದ ಧನುಸ್ಸನ್ನು ತೊರೆದು ಇನ್ನೊಂದು ಮಹಾ ಧನುಸ್ಸನ್ನು ತೆಗೆದುಕೊಂಡು ಯುದ್ಧದಲ್ಲಿ ಪಾಂಡವರನ್ನು ಮೂರು ಮೂರು ಜಿಹ್ಮಗಗಳಿಂದ ಹೊಡೆದನು. ಶಿಖಂಡಿಯನ್ನು ಮೂರು ಮತ್ತು ಐದು ಬಾಣಗಳಿಂದ ಹೊಡೆದನು.

07090035a ಧನುರನ್ಯತ್ಸಮಾದಾಯ ಶಿಖಂಡೀ ತು ಮಹಾಯಶಾಃ|

07090035c ಅವಾರಯತ್ಕೂರ್ಮನಖೈರಾಶುಗೈರ್ಹೃದಿಕಾತ್ಮಜಂ||

ಮಹಾಯಶಸ್ವೀ ಶಿಖಂಡಿಯಾದರೋ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಆಮೆಯ ಉಗುರಿನಂತೆ ಮೊನಚಾದ ಆಶುಗಗಳಿಂದ ಹಾರ್ದಿಕಾತ್ಮಜನನ್ನು ಹೊಡೆದನು.

07090036a ತತಃ ಕ್ರುದ್ಧೋ ರಣೇ ರಾಜನ್ ಹೃದಿಕಸ್ಯಾತ್ಮಸಂಭವಃ|

07090036c ಅಭಿದುದ್ರಾವ ವೇಗೇನ ಯಾಜ್ಞಸೇನಿಂ ಮಹಾರಥಂ||

07090037a ಭೀಷ್ಮಸ್ಯ ಸಮರೇ ರಾಜನ್ಮೃತ್ಯೋರ್ಹೇತುಂ ಮಹಾತ್ಮನಃ|

07090037c ವಿದರ್ಶಯನ್ಬಲಂ ಶೂರಃ ಶಾರ್ದೂಲ ಇವ ಕುಂಜರಂ||

ರಾಜನ್! ಆಗ ಹೃದಿಕನ ಆತ್ಮಸಂಭವ ಶೂರನು ರಣದಲ್ಲಿ ಕ್ರುದ್ಧನಾಗಿ ವೇಗದಿಂದ ಆನೆಯನ್ನು ಆಕ್ರಮಣಿಸುವ ಸಿಂಹದಂತೆ ಸಮರದಲ್ಲಿ ಮಹಾತ್ಮ ಭೀಷ್ಮನ ಮೃತ್ಯುವಿಗೆ ಕಾರಣನಾದ ಮಹಾರಥ ಯಾಜ್ಞಸೇನಿಯನ್ನು ಆಕ್ರಮಣಿಸಿದನು.

07090038a ತೌ ದಿಶಾಗಜಸಂಕಾಶೌ ಜ್ವಲಿತಾವಿವ ಪಾವಕೌ|

07090038c ಸಮಾಸೇದತುರನ್ಯೋನ್ಯಂ ಶರಸಂಘೈರರಿಂದಮೌ||

ದಿಗ್ಗಜಗಳಂತಿದ್ದ, ಅಗ್ನಿಗಳಂತೆ ಪ್ರಜ್ವಲಿಸುತ್ತಿದ್ದ ಆ ಇಬ್ಬರು ಅರಿಂದಮರೂ ಅನ್ಯೋನ್ಯರನ್ನು ಶರಸಂಘಗಳಿಂದ ಸಂಘರ್ಷಿಸಿದರು.

07090039a ವಿಧುನ್ವಾನೌ ಧನುಃಶ್ರೇಷ್ಠೇ ಸಂದಧಾನೌ ಚ ಸಾಯಕಾನ್|

07090039c ವಿಸೃಜಂತೌ ಚ ಶತಶೋ ಗಭಸ್ತೀನಿವ ಭಾಸ್ಕರೌ||

ತಮ್ಮ ತಮ್ಮ ಶ್ರೇಷ್ಠ ಧನುಸ್ಸುಗಳನ್ನು ಟೇಂಕರಿಸುತ್ತಾ ಸಾಯಕಗಳನ್ನು ಹೂಡುತ್ತಾ ಇಬ್ಬರು ಸೂರ್ಯರು ತಮ್ಮ ತಮ್ಮ ಕಿರಣಗಳನ್ನು ಪಸರಿಸುವಂತೆ ನೂರಾರು ಬಾಣಗಳನ್ನು ಪರಸ್ಪರರ ಮೇಲೆ ಸುರಿಸಿದರು.

07090040a ತಾಪಯಂತೌ ಶರೈಸ್ತೀಕ್ಷ್ಣೈರನ್ಯೋನ್ಯಂ ತೌ ಮಹಾರಥೌ|

07090040c ಯುಗಾಂತಪ್ರತಿಮೌ ವೀರೌ ರೇಜತುರ್ಭಾಸ್ಕರಾವಿವ||

ಆ ಇಬ್ಬರು ಅಪ್ರತಿಮ ವೀರ ಮಹಾರಥರು ತೀಕ್ಷ್ಣ ಶರಗಳಿಂದ ಅನ್ಯೋನ್ಯರನ್ನು ಸಂತಾಪಗೊಳಿಸುತ್ತಾ ಪ್ರಳಯಕಾಲದ ಭಾಸ್ಕರರಂತೆ ಪ್ರಕಾಶಿಸಿದರು.

07090041a ಕೃತವರ್ಮಾ ತು ರಭಸಂ ಯಾಜ್ಞಸೇನಿಂ ಮಹಾರಥಂ|

07090041c ವಿದ್ಧ್ವೇಷೂಣಾಂ ತ್ರಿಸಪ್ತತ್ಯಾ ಪುನರ್ವಿವ್ಯಾಧ ಸಪ್ತಭಿಃ||

ಕೃತವರ್ಮನಾದರೋ ಮಹಾರಥ ಯಾಜ್ಞಸೇನಿಯನ್ನು ರಭಸದಿಂದ ಎಪ್ಪತ್ಮೂರು ಬಾಣಗಳಿಂದ ಹೊಡೆದು ಪುನಃ ಏಳು ಬಾಣಗಳಿಂದ ಹೊಡೆದನು.

07090042a ಸ ಗಾಢವಿದ್ಧೋ ವ್ಯಥಿತೋ ರಥೋಪಸ್ಥ ಉಪಾವಿಶತ್|

07090042c ವಿಸೃಜನ್ಸಶರಂ ಚಾಪಂ ಮೂರ್ಚಯಾಭಿಪರಿಪ್ಲುತಃ||

ಅದರಿಂದ ವಿಪರೀತವಾಗಿ ಗಾಯಗೊಂಡ ಶಿಖಂಡಿಯು ವ್ಯಥಿತನಾಗಿ ರಥದಲ್ಲಿ ಆಸನದ ಪಕ್ಕಕ್ಕೆ ಜರುಗಿ ಕುಳಿತನು. ಧನುರ್ಬಾಣಗಳನ್ನು ಬಿಟ್ಟು ಮೂರ್ಛಿತನಾದನು.

07090043a ತಂ ವಿಷಣ್ಣಂ ರಥೇ ದೃಷ್ಟ್ವಾ ತಾವಕಾ ಭರತರ್ಷಭ|

07090043c ಹಾರ್ದಿಕ್ಯಂ ಪೂಜಯಾಮಾಸುರ್ವಾಸಾಂಸ್ಯಾದುಧುವುಶ್ಚ ಹ||

ಭರತರ್ಷಭ! ರಥದಲ್ಲಿ ವಿಷಣ್ಣನಾಗಿದ್ದ ಶಿಖಂಡಿಯನ್ನು ನೋಡಿ ನಿನ್ನವರು ಹಾರ್ದಿಕ್ಯನನ್ನು ಗೌರವಿಸಿ ಅಂಗವಸ್ತ್ರಗಳನ್ನು ಮೇಲಕ್ಕೆ ಹಾರಿಸಿದರು.

07090044a ಶಿಖಂಡಿನಂ ತಥಾ ಜ್ಞಾತ್ವಾ ಹಾರ್ದಿಕ್ಯಶರಪೀಡಿತಂ|

07090044c ಅಪೋವಾಹ ರಣಾದ್ಯಂತಾ ತ್ವರಮಾಣೋ ಮಹಾರಥಂ||

ಶಿಖಂಡಿಯು ಹಾರ್ದಿಕ್ಯನ ಶರಗಳಿಂದ ಹಾಗೆ ಪೀಡಿತನಾದುದನ್ನು ಕಂಡು ಅವನ ಸಾರಥಿಯು ಆ ಮಹಾರಥನನ್ನು ತ್ವರೆಮಾಡಿ ರಣದಿಂದ ದೂರಕ್ಕೆ ಕೊಂಡೊಯ್ದನು.

07090045a ಸಾದಿತಂ ತು ರಥೋಪಸ್ಥೇ ದೃಷ್ಟ್ವಾ ಪಾರ್ಥಾಃ ಶಿಖಂಡಿನಂ|

07090045c ಪರಿವವ್ರೂ ರಥೈಸ್ತೂರ್ಣಂ ಕೃತವರ್ಮಾಣಮಾಹವೇ||

ರಥದಲ್ಲಿ ಒರಗಿದ್ದ ಶಿಖಂಡಿಯನ್ನು ನೋಡಿದ ಪಾರ್ಥರು ತಕ್ಷಣವೇ ಆಹವದಲ್ಲಿ ರಥಗಳಿಂದ ಕೃತವರ್ಮನನ್ನು ಸುತ್ತುವರೆದರು.

07090046a ತತ್ರಾದ್ಭುತಂ ಪರಂ ಚಕ್ರೇ ಕೃತವರ್ಮಾ ಮಹಾರಥಃ|

07090046c ಯದೇಕಃ ಸಮರೇ ಪಾರ್ಥಾನ್ವಾರಯಾಮಾಸ ಸಾನುಗಾನ್||

ಅಲ್ಲಿ ಮಹಾರಥ ಕೃತವರ್ಮನು ಸಮರದಲ್ಲಿ ಒಬ್ಬನೇ ಅನುಯಾಯಿಗಳೊಡನಿದ್ದ ಪಾರ್ಥರನ್ನು ತಡೆದು ಪರಮ ಅದ್ಭುತ ಕೃತ್ಯವನ್ನೆಸಗಿದನು.

07090047a ಪಾರ್ಥಾನ್ಜಿತ್ವಾಜಯಚ್ಚೇದೀನ್ಪಾಂಚಾಲಾನ್ಸೃಂಜಯಾನಪಿ|

07090047c ಕೇಕಯಾಂಶ್ಚ ಮಹಾವೀರ್ಯಾನ್ಕೃತವರ್ಮಾ ಮಹಾರಥಃ||

ಮಹಾರಥ ಕೃತವರ್ಮನು ಚೇದಿ-ಪಾಂಚಾಲ-ಸೃಂಜಯ-ಕೇಕಯ ಮಹಾವೀರ್ಯರನ್ನು ಸೋಲಿಸಿ ಪಾರ್ಥರನ್ನೂ ಗೆದ್ದನು.

07090048a ತೇ ವಧ್ಯಮಾನಾಃ ಸಮರೇ ಹಾರ್ದಿಕ್ಯೇನ ಸ್ಮ ಪಾಂಡವಾಃ|

07090048c ಇತಶ್ಚೇತಶ್ಚ ಧಾವಂತೋ ನೈವ ಚಕ್ರುರ್ಧೃತಿಂ ರಣೇ||

ಸಮರದಲ್ಲಿ ಹಾರ್ದಿಕ್ಯನಿಂದ ವಧಿಸಲ್ಪಡುತ್ತಿದ್ದ ಪಾಂಡವ ಯೋಧರು ರಣಾಂಗಣದಲ್ಲಿ ನಿಲ್ಲುವ ಮನಸ್ಸು ಮಾಡದೇ ಇಲ್ಲಿಂದಲ್ಲಿಗೆ ಓಡುತ್ತಿದ್ದರು.

07090049a ಜಿತ್ವಾ ಪಾಂಡುಸುತಾನ್ಯುದ್ಧೇ ಭೀಮಸೇನಪುರೋಗಮಾನ್|

07090049c ಹಾರ್ದಿಕ್ಯಃ ಸಮರೇಽತಿಷ್ಠದ್ವಿಧೂಮ ಇವ ಪಾವಕಃ||

ಭೀಮಸೇನನ ನಾಯಕತ್ವದಲ್ಲಿದ್ದ ಪಾಂಡುಸುತರನ್ನು ಯುದ್ಧದಲ್ಲಿ ಗೆದ್ದು ಹಾರ್ದಿಕ್ಯನು ರಣದಲ್ಲಿ ಹೊಗೆಯಿಲ್ಲದ ಬೆಂಕಿಯಂತೆ ಪ್ರಕಾಶಿಸಿದನು.

07090050a ತೇ ದ್ರಾವ್ಯಮಾಣಾಃ ಸಮರೇ ಹಾರ್ದಿಕ್ಯೇನ ಮಹಾರಥಾಃ|

07090050c ವಿಮುಖಾಃ ಸಮಪದ್ಯಂತ ಶರವೃಷ್ಟಿಭಿರರ್ದಿತಾಃ||

ಸಮರದಲ್ಲಿ ಹಾರ್ದಿಕ್ಯನಿಂದ ಪಲಾಯನಗೊಳಿಸಲ್ಪಟ್ಟ ಆ ಮಹಾರಥರು ಅವನ ಶರವೃಷ್ಟಿಯಿಂದ ಪೀಡಿತರಾಗಿ ವಿಮುಖರಾದರು."

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ಕೃತವರ್ಮಪರಾಕ್ರಮೇ ನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ಕೃತವರ್ಮಪರಾಕ್ರಮ ಎನ್ನುವ ತೊಂಭತ್ತನೇ ಅಧ್ಯಾಯವು.

Related image

Comments are closed.