Drona Parva: Chapter 82

ದ್ರೋಣ ಪರ್ವ: ಜಯದ್ರಥವಧ ಪರ್ವ

೮೨

ಬೃಹತ್ಕ್ಷತ್ರನಿಂದ ಕೇಕಯ ಕ್ಷೇಮಧೂರ್ತಿಯ ವಧೆ (೧-೮). ಚೇದಿರಾಜ ಧೃಷ್ಟಕೇತುವು ತ್ರಿಗರ್ತರ ವೀರಧನ್ವನನ್ನು ವಧಿಸಿದುದು (೯-೧೮).  ಸಹದೇವನು ತ್ರಿಗರ್ತ ರಾಜಕುಮಾರ ನಿರಮಿತ್ರನನ್ನು ವಧಿಸಿದುದು (೧೯-೨೯). ಸಾತ್ಯಕಿಯು ಮಗಧ ರಾಜಕುಮಾರ ವ್ಯಾಘ್ರದತ್ತನನ್ನು ವಧಿಸಿದುದು (೩೦-೩೯).

07082001 ಸಂಜಯ ಉವಾಚ|

07082001a ಬೃಹತ್ಕ್ಷತ್ರಮಥಾಯಾಂತಂ ಕೇಕಯಂ ದೃಢವಿಕ್ರಮಂ|

07082001c ಕ್ಷೇಮಧೂರ್ತಿರ್ಮಹಾರಾಜ ವಿವ್ಯಾಧೋರಸಿ ಮಾರ್ಗಣೈಃ||

ಸಂಜಯನು ಹೇಳಿದನು: “ಮಹಾರಾಜ! ಮುಂದೆ ಬರುತ್ತಿದ್ದ ದೃಢವಿಕ್ರಮಿ ಕೇಕಯನನ್ನು ಕ್ಷೇಮಧೂರ್ತಿಯು ಎದೆಗೆ ಗುರಿಯಿಟ್ಟು ಮಾರ್ಗಣಗಳಿಂದ ಹೊಡೆದನು.

07082002a ಬೃಹತ್ಕ್ಷತ್ರಸ್ತು ತಂ ರಾಜಾ ನವತ್ಯಾ ನತಪರ್ವಣಾಂ|

07082002c ಆಜಘ್ನೇ ತ್ವರಿತೋ ಯುದ್ಧೇ ದ್ರೋಣಾನೀಕಬಿಭಿತ್ಸಯಾ||

ರಾಜ ಬೃಹತ್ಕ್ಷತ್ರನಾದರೋ ಯುದ್ಧದಲ್ಲಿ ದ್ರೋಣನ ಸೇನೆಯನ್ನು ಭೇದಿಸಲು ಬಯಸಿ ತ್ವರೆಮಾಡಿ ಅವನನ್ನು ತೊಂಭತ್ತು ನತಪರ್ವಗಳಿಂದ ಪ್ರಹರಿಸಿದನು.

07082003a ಕ್ಷೇಮಧೂರ್ತಿಸ್ತು ಸಂಕ್ರುದ್ಧಃ ಕೇಕಯಸ್ಯ ಮಹಾತ್ಮನಃ|

07082003c ಧನುಶ್ಚಿಚ್ಚೇದ ಭಲ್ಲೇನ ಪೀತೇನ ನಿಶಿತೇನ ಚ||

ಸಂಕ್ರುದ್ಧನಾದ ಕ್ಷೇಮಧೂರ್ತಿಯಾದರೋ ಎಣ್ಣೆಕುಡಿದ ನಿಶಿತ ಭಲ್ಲದಿಂದ ಮಹಾತ್ಮ ಕೇಕಯನ ಧನುಸ್ಸನ್ನು ಕತ್ತರಿಸಿದನು.

07082004a ಅಥೈನಂ ಚಿನ್ನಧನ್ವಾನಂ ಶರೇಣ ನತಪರ್ವಣಾ|

07082004c ವಿವ್ಯಾಧ ಹೃದಯೇ ತೂರ್ಣಂ ಪ್ರವರಂ ಸರ್ವಧನ್ವಿನಾಂ||

ಮತ್ತು ತಕ್ಷಣವೇ ಧನುಸ್ಸನ್ನು ಕಳೆದುಕೊಂಡ ಆ ಸರ್ವಧನ್ವಿಗಳಲ್ಲಿ ಶ್ರೇಷ್ಠನ ಎದೆಗೆ ನತಪರ್ವ ಶರದಿಂದ ಹೊಡೆದನು.

07082005a ಅಥಾನ್ಯದ್ಧನುರಾದಾಯ ಬೃಹತ್ಕ್ಷತ್ರೋ ಹಸನ್ನಿವ|

07082005c ವ್ಯಶ್ವಸೂತಧ್ವಜಂ ಚಕ್ರೇ ಕ್ಷೇಮಧೂರ್ತಿಂ ಮಹಾರಥಂ||

ಆಗ ಬೃಹತ್ಕ್ಷತ್ರನು ನಸುನಕ್ಕು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಮಹಾರಥ ಕ್ಷೇಮಧೂರ್ತಿಯನ್ನು ಕುದುರೆ, ಸೂತ ಮತ್ತು ಧ್ವಜಗಳಿಂದ ವಿಹೀನನನ್ನಾಗಿ ಮಾಡಿದನು.

07082006a ತತೋಽಪರೇಣ ಭಲ್ಲೇನ ಪೀತೇನ ನಿಶಿತೇನ ಚ|

07082006c ಜಹಾರ ನೃಪತೇಃ ಕಾಯಾಚ್ಚಿರೋ ಜ್ವಲಿತಕುಂಡಲಂ||

ಇನ್ನೊಂದು ಎಣ್ಣೆಯನ್ನು ಕುಡಿದ ನಿಶಿತ ಭಲ್ಲದಿಂದ ಆ ನೃಪತಿಯ ಕುಂಡಲಗಳಿಂದ ಪ್ರಕಾಶಿಸುತ್ತಿದ್ದ ಶಿರಸ್ಸನ್ನು ದೇಹದಿಂದ ಕತ್ತರಿಸಿದನು.

07082007a ತಚ್ಚಿನ್ನಂ ಸಹಸಾ ತಸ್ಯ ಶಿರಃ ಕುಂಚಿತಮೂರ್ಧಜಂ|

07082007c ಸಕಿರೀಟಂ ಮಹೀಂ ಪ್ರಾಪ್ಯ ಬಭೌ ಜ್ಯೋತಿರಿವಾಂಬರಾತ್||

ಗುಂಗುರುಕೂದಲಿನ ಅವನ ತಲೆಯು ಕಿರೀಟದೊಂದಿಗೆ ಕ್ಷಣದಲ್ಲಿಯೇ ತುಂಡಾಗಿ ಅಂಬರದಲ್ಲಿಂದ ನಕ್ಷತ್ರದಂತೆ, ಭೂಮಿಯನ್ನು ಸೇರಿತು.

07082008a ತಂ ನಿಹತ್ಯ ರಣೇ ಹೃಷ್ಟೋ ಬೃಹತ್ಕ್ಷತ್ರೋ ಮಹಾರಥಃ|

07082008c ಸಹಸಾಭ್ಯಪತತ್ಸೈನ್ಯಂ ತಾವಕಂ ಪಾರ್ಥಕಾರಣಾತ್||

ರಣದಲ್ಲಿ ಅವನನ್ನು ಸಂಹರಿಸಿ ಹೃಷ್ಟನಾದ ಮಹಾರಥ ಬೃಹತ್ಕ್ಷತ್ರನು ಪಾರ್ಥನ ಕಾರಣದಿಂದ ತಕ್ಷಣವೇ ನಿನ್ನ ಸೇನೆಯ ಮೇಲೆ ಎರಗಿದನು.

07082009a ಧೃಷ್ಟಕೇತುಮಥಾಯಾಂತಂ ದ್ರೋಣಹೇತೋಃ ಪರಾಕ್ರಮೀ|

07082009c ವೀರಧನ್ವಾ ಮಹೇಷ್ವಾಸೋ ವಾರಯಾಮಾಸ ಭಾರತ||

ಭಾರತ! ದ್ರೋಣನ ಸಲುವಾಗಿ ಮುಂದುವರೆಯುತ್ತಿದ್ದ ಪರಾಕ್ರಮೀ ಧೃಷ್ಟಕೇತುವನ್ನು ಮಹೇಷ್ವಾಸ ವೀರಧನ್ವನು ತಡೆದನು.

07082010a ತೌ ಪರಸ್ಪರಮಾಸಾದ್ಯ ಶರದಂಷ್ಟ್ರೌ ತರಸ್ವಿನೌ|

07082010c ಶರೈರನೇಕಸಾಹಸ್ರೈರನ್ಯೋನ್ಯಮಭಿಜಘ್ನತುಃ||

ಪರಸ್ಪರರನ್ನು ಎದುರಿಸಿದ ಅವರಿಬ್ಬರು ಶರದಂಷ್ಟ್ರ ತರಸ್ವಿಗಳು ಅನೇಕ ಸಹಸ್ರ ಶರಗಳಿಂದ ಅನ್ಯೋನ್ಯರನ್ನು ಹೊಡೆದರು.

07082011a ತಾವುಭೌ ನರಶಾರ್ದೂಲೌ ಯುಯುಧಾತೇ ಪರಸ್ಪರಂ|

07082011c ಮಹಾವನೇ ತೀವ್ರಮದೌ ವಾರಣಾವಿವ ಯೂಥಪೌ||

ಅವರಿಬ್ಬರು ನರಶಾರ್ದೂಲರೂ ಮಹಾವನದಲ್ಲಿ ತೀವ್ರ ಮದವೇರಿದ ಎರಡು ಸಲಗಗಳಂತೆ ಪರಸ್ಪರರೊಡನೆ ಯುದ್ಧಮಾಡಿದರು.

07082012a ಗಿರಿಗಹ್ವರಮಾಸಾದ್ಯ ಶಾರ್ದೂಲಾವಿವ ರೋಷಿತೌ|

07082012c ಯುಯುಧಾತೇ ಮಹಾವೀರ್ಯೌ ಪರಸ್ಪರಜಿಘಾಂಸಯಾ||

ಗಿರಿಗಹ್ವರಗಳನ್ನು ಸೇರಿ ರೋಷಿತರಾಗಿ ಪರಸ್ಪರರನ್ನು ಕೊಲ್ಲಲು ಬಯಸಿದ ಶಾರ್ದೂಲಗಳಂತೆ ಆ ಮಹಾವೀರರು ಹೋರಾಡಿದರು.

07082013a ತದ್ಯುದ್ಧಮಾಸೀತ್ತುಮುಲಂ ಪ್ರೇಕ್ಷಣೀಯಂ ವಿಶಾಂ ಪತೇ|

07082013c ಸಿದ್ಧಚಾರಣಸಂಘಾನಾಂ ವಿಸ್ಮಯಾದ್ಭುತದರ್ಶನಂ||

ವಿಶಾಂಪತೇ! ಆಗ ಪ್ರೇಕ್ಷಣೀಯವಾದ ತುಮುಲ ಯುದ್ಧವು ನಡೆಯಿತು. ಆ ಅದ್ಭುತ ದರ್ಶನದಿಂದ ಸಿದ್ಧ-ಚಾರಣ ಸಂಘಗಳು ವಿಸ್ಮಯಗೊಂಡವು.

07082014a ವೀರಧನ್ವಾ ತತಃ ಕ್ರುದ್ಧೋ ಧೃಷ್ಟಕೇತೋಃ ಶರಾಸನಂ|

07082014c ದ್ವಿಧಾ ಚಿಚ್ಚೇದ ಭಲ್ಲೇನ ಪ್ರಹಸನ್ನಿವ ಭಾರತ||

ಭಾರತ! ಆಗ ವೀರಧನ್ವನು ಕ್ರುದ್ಧನಾಗಿ, ನಗುತ್ತಿರುವವನಂತೆ ಭಲ್ಲದಿಂದ ಧೃಷ್ಟಕೇತುವಿನ ಧನುಸ್ಸನ್ನು ಎರಡಾಗಿ ತುಂಡರಿಸಿದನು.

07082015a ತದುತ್ಸೃಜ್ಯ ಧನುಶ್ಚಿನ್ನಂ ಚೇದಿರಾಜೋ ಮಹಾರಥಃ|

07082015c ಶಕ್ತಿಂ ಜಗ್ರಾಹ ವಿಪುಲಾಂ ರುಕ್ಮದಂಡಾಮಯಸ್ಮಯೀಂ||

ತುಂಡಾದ ಆ ಧನುಸ್ಸನ್ನು ಎಸೆದು ಮಹಾರಥ ಚೇದಿರಾಜನು ದಪ್ಪನೆಯ ಉಕ್ಕಿನಿಂದ ಮಾಡಲ್ಪಟ್ಟ, ಬಂಗಾರದ ದಂಡವುಳ್ಳ, ಶಕ್ತಿಯನ್ನು ಹಿಡಿದನು.

07082016a ತಾಂ ತು ಶಕ್ತಿಂ ಮಹಾವೀರ್ಯಾಂ ದೋರ್ಭ್ಯಾಮಾಯಮ್ಯ ಭಾರತ|

07082016c ಚಿಕ್ಷೇಪ ಸಹಸಾ ಯತ್ತೋ ವೀರಧನ್ವರಥಂ ಪ್ರತಿ||

ಭಾರತ! ಆ ಶಕ್ತಿಯನ್ನು ಎರಡು ಭುಜಗಳಿಂದಲೂ ಮೇಲೆತ್ತಿ ಮಹಾವೀರ್ಯದಿಂದ ಪ್ರಯತ್ನಪಟ್ಟು ತಕ್ಷಣವೇ ವೀರಧನ್ವನ ರಥದ ಮೇಲೆ ಎಸೆದನು.

07082017a ಸ ತಯಾ ವೀರಘಾತಿನ್ಯಾ ಶಕ್ತ್ಯಾ ತ್ವಭಿಹತೋ ಭೃಶಂ|

07082017c ನಿರ್ಭಿನ್ನಹೃದಯಸ್ತೂರ್ಣಂ ನಿಪಪಾತ ರಥಾನ್ಮಹೀಂ||

ಆ ವೀರಘಾತಿ ಶಕ್ತಿಯಿಂದ ತುಂಬಾ ಗಾಯಗೊಂಡ ಅವನು ತಕ್ಷಣವೇ ಹೃದಯವು ಒಡೆದು ರಥದಿಂದ ನೆಲಕ್ಕೆ ಬಿದ್ದನು.

07082018a ತಸ್ಮಿನ್ವಿನಿಹತೇ ಶೂರೇ ತ್ರಿಗರ್ತಾನಾಂ ಮಹಾರಥೇ|

07082018c ಬಲಂ ತೇಽಭಜ್ಯತ ವಿಭೋ ಪಾಂಡವೇಯೈಃ ಸಮಂತತಃ||

ವಿಭೋ! ಆ ತ್ರಿಗರ್ತರ ಮಹಾರಥ ಶೂರನು ಹತನಾಗಲು ಪಾಂಡವೇಯರು ನಿನ್ನ ಸೇನೆಯನ್ನು ಎಲ್ಲ ಕಡೆಗಳಿಂದ ಸದೆಬಡಿದರು.

07082019a ಸಹದೇವೇ ತತಃ ಷಷ್ಟಿಂ ಸಾಯಕಾನ್ದುರ್ಮುಖೋಽಕ್ಷಿಪತ್|

07082019c ನನಾದ ಚ ಮಹಾನಾದಂ ತರ್ಜಯನ್ಪಾಂಡವಂ ರಣೇ||

ಆಗ ದುರ್ಮುಖನು ಸಹದೇವನ ಮೇಲೆ ಅರವತ್ತು ಸಾಯಕಗಳನ್ನು ಪ್ರಯೋಗಿಸಿ ಪಾಂಡವನನ್ನು ಹೆದರಿಸುತ್ತಾ ರಣದಲ್ಲಿ ಮಹಾನಾದವನ್ನು ಗರ್ಜಿಸಿದನು.

07082020a ಮದ್ರೇಯಸ್ತು ತತಃ ಕ್ರುದ್ಧೋ ದುರ್ಮುಖಂ ದಶಭಿಃ ಶರೈಃ|

07082020c ಭ್ರಾತಾ ಭ್ರಾತರಮಾಯಾಂತಂ ವಿವ್ಯಾಧ ಪ್ರಹಸನ್ನಿವ||

ಭ್ರಾತೃ ಮದ್ರೇಯನಾದರೋ ಆಗ ಕ್ರುದ್ಧನಾಗಿ ಎದುರಿಸಿ ಬರುತ್ತಿದ್ದ ಭ್ರಾತಾ ದುರ್ಮುಖನನ್ನು ನಸುನಗುತ್ತಿರುವನೋ ಎನ್ನುವಂತೆ ಹತ್ತು ಶರಗಳಿಂದ ಹೊಡೆದನು.

07082021a ತಂ ರಣೇ ರಭಸಂ ದೃಷ್ಟ್ವಾ ಸಹದೇವಂ ಮಹಾಬಲಂ|

07082021c ದುರ್ಮುಖೋ ನವಭಿರ್ಬಾಣೈಸ್ತಾಡಯಾಮಾಸ ಭಾರತ||

ಭಾರತ! ರಣದಲ್ಲಿ ರಭಸನಾಗಿದ್ದ ಆ ಮಹಾಬಲ ಸಹದೇವನನ್ನು ನೋಡಿ ದುರ್ಮುಖನು ಅವನನ್ನು ಒಂಭತ್ತು ಬಾಣಗಳಿಂದ ಹೊಡೆದನು.

07082022a ದುರ್ಮುಖಸ್ಯ ತು ಭಲ್ಲೇನ ಚಿತ್ತ್ವಾ ಕೇತುಂ ಮಹಾಬಲಃ|

07082022c ಜಘಾನ ಚತುರೋ ವಾಹಾಂಶ್ಚತುರ್ಭಿರ್ನಿಶಿತೈಃ ಶರೈಃ||

ಆ ಮಹಾಬಲನು ಭಲ್ಲದಿಂದ ದುರ್ಮುಖನ ಕೇತುವನ್ನು ತುಂಡರಿಸಿ ನಾಲ್ಕು ನಿಶಿತ ಶರಗಳಿಂದ ಅವನ ನಾಲ್ಕು ಕುದುರೆಗಳನ್ನು ಸಂಹರಿಸಿದನು.

07082023a ಅಥಾಪರೇಣ ಭಲ್ಲೇನ ಪೀತೇನ ನಿಶಿತೇನ ಚ|

07082023c ಚಿಚ್ಚೇದ ಸಾರಥೇಃ ಕಾಯಾಚ್ಚಿರೋ ಜ್ವಲಿತಕುಂಡಲಂ||

ಅನಂತರ ಇನ್ನೊಂದು, ಎಣ್ಣೆಕುಡಿದ, ನಿಶಿತ ಭಲ್ಲದಿಂದ ಅವನ ಸಾರಥಿಯ ಹೊಳೆಯುವ ಕುಂಡಲಗಳುಳ್ಳ ಶಿರವನ್ನು ಕಾಯದಿಂದ ಕತ್ತರಿಸಿದನು.

07082024a ಕ್ಷುರಪ್ರೇಣ ಚ ತೀಕ್ಷ್ಣೇನ ಕೌರವ್ಯಸ್ಯ ಮಹದ್ಧನುಃ|

07082024c ಸಹದೇವೋ ರಣೇ ಚಿತ್ತ್ವಾ ತಂ ಚ ವಿವ್ಯಾಧ ಪಂಚಭಿಃ||

ಸಹದೇವನು ತೀಕ್ಷ್ಣವಾದ ಕ್ಷುರಪ್ರದಿಂದ ರಣದಲ್ಲಿ ಕೌರವ್ಯನ ಮಹಾ ಧನುಸ್ಸನ್ನು ಕತ್ತರಿಸಿ ಅವನನ್ನೂ ಐದರಿಂದ ಹೊಡೆದನು.

07082025a ಹತಾಶ್ವಂ ತು ರಥಂ ತ್ಯಕ್ತ್ವಾ ದುರ್ಮುಖೋ ವಿಮನಾಸ್ತದಾ|

07082025c ಆರುರೋಹ ರಥಂ ರಾಜನ್ನಿರಮಿತ್ರಸ್ಯ ಭಾರತ||

ಭಾರತ! ರಾಜನ್! ಅಶ್ವಗಳು ಹತವಾದ ರಥವನ್ನು ತ್ಯಜಿಸಿ ದುರ್ಮುಖನು ವಿಮನಸ್ಕನಾಗಿ ನಿರಮಿತ್ರನ ರಥವನ್ನು ಏರಿದನು.

07082026a ಸಹದೇವಸ್ತತಃ ಕ್ರುದ್ಧೋ ನಿರಮಿತ್ರಂ ಮಹಾಹವೇ|

07082026c ಜಘಾನ ಪೃತನಾಮಧ್ಯೇ ಭಲ್ಲೇನ ಪರವೀರಹಾ||

ಆಗ ಪರವೀರಹ ಸಹದೇವನು ಮಹಾಹವದಲ್ಲಿ ಕ್ರುದ್ಧನಾಗಿ ಸೇನೆಗಳ ಮಧ್ಯದಲ್ಲಿ ನಿರಮಿತ್ರನನ್ನು ಭಲ್ಲದಿಂದ ಹೊಡೆದನು.

07082027a ಸ ಪಪಾತ ರಥೋಪಸ್ಥಾನ್ನಿರಮಿತ್ರೋ ಜನೇಶ್ವರಃ|

07082027c ತ್ರಿಗರ್ತರಾಜಸ್ಯ ಸುತೋ ವ್ಯಥಯಂಸ್ತವ ವಾಹಿನೀಂ||

ಜನೇಶ್ವರ ತ್ರಿಗರ್ತರಾಜನ ಮಗನಾದ ನಿರಮಿತ್ರನು ನಿನ್ನ ಸೇನೆಯನ್ನು ವ್ಯಥೆಗೀಡುಮಾಡುತ್ತಾ ರಥದ ಆಸನದಿಂದ ಕೆಳಗುರುಳಿದನು.

07082028a ತಂ ತು ಹತ್ವಾ ಮಹಾಬಾಹುಃ ಸಹದೇವೋ ವ್ಯರೋಚತ|

07082028c ಯಥಾ ದಾಶರಥೀ ರಾಮಃ ಖರಂ ಹತ್ವಾ ಮಹಾಬಲಂ||

ಅವನನ್ನು ಸಂಹರಿಸಿ ಮಹಾಬಾಹು ಸಹದೇವನು ಮಹಾಬಲ ಖರನನ್ನು ಸಂಹರಿಸಿ ರಾಮ ದಾಶರಥಿಯು ಹೇಗೋ ಹಾಗೆ ವಿರಾಜಿಸಿದನು.

07082029a ಹಾಹಾಕಾರೋ ಮಹಾನಾಸೀತ್ತ್ರಿಗರ್ತಾನಾಂ ಜನೇಶ್ವರ|

07082029c ರಾಜಪುತ್ರಂ ಹತಂ ದೃಷ್ಟ್ವಾ ನಿರಮಿತ್ರಂ ಮಹಾಬಲಂ||

ಜನೇಶ್ವರ! ರಾಜಪುತ್ರ ಮಹಾಬಲ ನಿರಮಿತ್ರನು ಹತನಾದುದನ್ನು ನೋಡಿ ತ್ರಿಗರ್ತರಲ್ಲಿ ಮಹಾ ಹಾಹಾಕಾರವುಂಟಾಯಿತು.

07082030a ನಕುಲಸ್ತೇ ಸುತಂ ರಾಜನ್ವಿಕರ್ಣಂ ಪೃಥುಲೋಚನಂ|

07082030c ಮುಹೂರ್ತಾಜ್ಜಿತವಾನ್ಸಂಖ್ಯೇ ತದದ್ಭುತಮಿವಾಭವತ್||

ರಾಜನ್! ನಕುಲನು ರಣರಂಗದಲ್ಲಿ ನಿನ್ನ ಮಗ ವಿಶಾಲಾಕ್ಷ ವಿಕರ್ಣನನ್ನು ಕ್ಷಣಮಾತ್ರದಲ್ಲಿ ಗೆದ್ದನು. ಅದೊಂದು ಅದ್ಭುತವಾಗಿತ್ತು.

07082031a ಸಾತ್ಯಕಿಂ ವ್ಯಾಘ್ರದತ್ತಸ್ತು ಶರೈಃ ಸನ್ನತಪರ್ವಭಿಃ|

07082031c ಚಕ್ರೇಽದೃಶ್ಯಂ ಸಾಶ್ವಸೂತಂ ಸಧ್ವಜಂ ಪೃತನಾಂತರೇ||

ರಣದ ಇನ್ನೊಂದು ಕಡೆ ವ್ಯಾಘ್ರದತ್ತನು ಸನ್ನತಪರ್ವ ಶರಗಳಿಂದ ಸಾತ್ಯಕಿಯನ್ನು ಅವನ ಕುದುರೆಗಳು, ಸಾರಥಿ ಮತ್ತು ಧ್ವಜಗಳೊಂದಿಗೆ ಕಾಣದಂತೆ ಮಾಡಿಬಿಟ್ಟನು.

07082032a ತಾನ್ನಿವಾರ್ಯ ಶರಾನ್ಶೂರಃ ಶೈನೇಯಃ ಕೃತಹಸ್ತವತ್|

07082032c ಸಾಶ್ವಸೂತಧ್ವಜಂ ಬಾಣೈರ್ವ್ಯಾಘ್ರದತ್ತಮಪಾತಯತ್||

ಆ ಶರಗಳನ್ನು ತಡೆದು ಕೈಚಳಕವುಳ್ಳ ಶೂರ ಶೈನೇಯನು ಬಾಣಗಳಿಂದ ವ್ಯಾಘ್ರದತ್ತನನ್ನು ಅವನ ಕುದುರೆಗಳು, ಸಾರಥಿ ಮತ್ತು ಧ್ವಜಗಳಿಂದ ಉರುಳಿಸಿದನು.

07082033a ಕುಮಾರೇ ನಿಹತೇ ತಸ್ಮಿನ್ಮಗಧಸ್ಯ ಸುತೇ ಪ್ರಭೋ|

07082033c ಮಾಗಧಾಃ ಸರ್ವತೋ ಯತ್ತಾ ಯುಯುಧಾನಮುಪಾದ್ರವನ್||

ಪ್ರಭೋ! ಮಗಧನ ಮಗ ಕುಮಾರನು ಹತನಾಗಲು ಮಾಗಧರು ಪ್ರಯತ್ನಿಸಿ ಯುಯುಧಾನನನ್ನು ಎಲ್ಲಕಡೆಗಳಿಂದ ಆಕ್ರಮಣಿಸಿದರು.

07082034a ವಿಸೃಜಂತಃ ಶರಾಂಶ್ಚೈವ ತೋಮರಾಂಶ್ಚ ಸಹಸ್ರಶಃ|

07082034c ಭಿಂಡಿಪಾಲಾಂಸ್ತಥಾ ಪ್ರಾಸಾನ್ಮುದ್ಗರಾನ್ಮುಸಲಾನಪಿ||

07082035a ಅಯೋಧಯನ್ರಣೇ ಶೂರಾಃ ಸಾತ್ವತಂ ಯುದ್ಧದುರ್ಮದಂ|

ಆ ಶೂರರು ರಣದಲ್ಲಿ ಯುದ್ಧದುರ್ಮದ ಸಾತ್ವತನೊಂದಿಗೆ ಸಹಸ್ರಾರು ಶರ-ತೋಮರ-ಭಿಂಡಿಪಾಲ-ಪ್ರಾಸ-ಮುದ್ಗರ-ಮುಸಲಗಳನ್ನು ಪ್ರಯೋಗಿಸುತ್ತಾ ಯುದ್ಧಮಾಡಿದರು.

07082035c ತಾಂಸ್ತು ಸರ್ವಾನ್ಸ ಬಲವಾನ್ಸಾತ್ಯಕ್ತಿರ್ಯುದ್ಧದುರ್ಮದಃ|

07082035e ನಾತಿಕೃಚ್ಚ್ರಾದ್ಧಸನ್ನೇವ ವಿಜಿಗ್ಯೇ ಪುರುಷರ್ಷಭ||

ಪುರುಷರ್ಷಭ! ಅವರೆಲ್ಲರನ್ನೂ ಬಲವಾನ್ ಯುದ್ಧದುರ್ಮದ ಸಾತ್ಯಕಿಯು ಸ್ವಲ್ಪವೂ ಕಷ್ಟಪಡದೇ ನಗುತ್ತಲೇ ಪರಾಜಯಗೊಳಿಸಿದನು.

07082036a ಮಾಗಧಾನ್ದ್ರವತೋ ದೃಷ್ಟ್ವಾ ಹತಶೇಷಾನ್ಸಮಂತತಃ|

07082036c ಬಲಂ ತೇಽಭಜ್ಯತ ವಿಭೋ ಯುಯುಧಾನಶರಾರ್ದಿತಂ||

ವಿಭೋ! ಹತಶೇಷರಾದ ಮಾಗಧರು ಓಡಿ ಹೋಗುತ್ತಿರುವುದನ್ನು ನೋಡಿ ಯುಯುಧಾನನ ಶರಗಳಿಂದ ಪೀಡಿತರಾದ ನಿನ್ನ ಸೇನೆಯು ಧೃತಿಗೆಟ್ಟಿತು.

07082037a ನಾಶಯಿತ್ವಾ ರಣೇ ಸೈನ್ಯಂ ತ್ವದೀಯಂ ಮಾಧವೋತ್ತಮಃ|

07082037c ವಿಧುನ್ವಾನೋ ಧನುಃಶ್ರೇಷ್ಠಂ ವ್ಯಭ್ರಾಜತ ಮಹಾಯಶಾಃ||

ಹೀಗೆ ರಣದಲ್ಲಿ ನಿನ್ನ ಸೈನ್ಯವನ್ನು ನಾಶಗೊಳಿಸುತ್ತಾ ಮಾಧವೋತ್ತಮ ಮಹಾಯಶಸ್ವಿಯು ತನ್ನ ಶ್ರೇಷ್ಠ ಧನುಸ್ಸನ್ನು ಟೇಂಕರಿಸುತ್ತಾ ಪ್ರಕಾಶಿಸಿದನು.

07082038a ಭಜ್ಯಮಾನಂ ಬಲಂ ರಾಜನ್ಸಾತ್ವತೇನ ಮಹಾತ್ಮನಾ|

07082038c ನಾಭ್ಯವರ್ತತ ಯುದ್ಧಾಯ ತ್ರಾಸಿತಂ ದೀರ್ಘಬಾಹುನಾ||

ರಾಜನ್! ಮಹಾತ್ಮ ಸಾತ್ವತನಿಂದ ಸದೆಬಡಿಯಲ್ಪಟ್ಟ ಸೇನೆಯು ಆ ದೀರ್ಘಬಾಹುವಿನಿಂದ ಭಯಗೊಂಡು ಯುದ್ಧಕ್ಕೆ ಹಿಂದಿರುಗಿ ಬರಲಿಲ್ಲ.

07082039a ತತೋ ದ್ರೋಣೋ ಭೃಶಂ ಕ್ರುದ್ಧಃ ಸಹಸೋದ್ವೃತ್ಯ ಚಕ್ಷುಷೀ|

07082039c ಸಾತ್ಯಕಿಂ ಸತ್ಯಕರ್ಮಾಣಂ ಸ್ವಯಮೇವಾಭಿದುದ್ರುವೇ||

ಆಗ ದ್ರೋಣನು ತುಂಬಾ ಕುಪಿತನಾಗಿ ಒಮ್ಮೆಲೇ ಅವನ ಮೇಲೆ ಕಣ್ಣುಹಾಯಿಸಿ ಆ ಸಾತ್ಯಕಿ ಸತ್ಯಕರ್ಮಿಯನ್ನು ಸ್ವಯಂ ತಾನೇ ಆಕ್ರಮಣಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಂಕುಲಯುದ್ಧೇ ದ್ವಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ಎಂಭತ್ತೆರಡನೇ ಅಧ್ಯಾಯವು.

Related image

Comments are closed.