Drona Parva: Chapter 81

ದ್ರೋಣ ಪರ್ವ: ಜಯದ್ರಥವಧ ಪರ್ವ

೮೧

ಕೌರವ-ಪಾಂಡವರ ದ್ವಂದ್ವಯುದ್ಧ (೧-೧೭). ದ್ರೋಣ-ಯುಧಿಷ್ಠಿರರ ಯುದ್ಧ; ಯುಧಿಷ್ಠಿರನ ಪಲಾಯನ (೧೮-೪೬).

07081001 ಧೃತರಾಷ್ಟ್ರ ಉವಾಚ|

07081001a ಅರ್ಜುನೇ ಸೈಂಧವಂ ಪ್ರಾಪ್ತೇ ಭಾರದ್ವಾಜೇನ ಸಂವೃತಾಃ|

07081001c ಪಾಂಚಾಲಾಃ ಕುರುಭಿಃ ಸಾರ್ಧಂ ಕಿಮಕುರ್ವತ ಸಂಜಯ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಅರ್ಜುನನು ಸೈಂಧವನ ಸಮೀಪಕ್ಕೆ ಹೋಗಲು ಭಾರದ್ವಾಜನಿಂದ ಸುತ್ತುವರೆಯಲ್ಪಟ್ಟಿದ್ದ ಪಾಂಚಾಲರು ಕುರುಗಳೊಂದಿಗೆ ಏನು ಮಾಡಿದರು?”

07081002 ಸಂಜಯ ಉವಾಚ|

07081002a ಅಪರಾಹ್ಣೇ ಮಹಾರಾಜ ಸಂಗ್ರಾಮೇ ಲೋಮಹರ್ಷಣ|

07081002c ಪಾಂಚಾಲಾನಾಂ ಕುರೂಣಾಂ ಚ ದ್ರೋಣೇ ದ್ಯೂತಮವರ್ತತ||

ಸಂಜಯನು ಹೇಳಿದನು: “ಮಹಾರಾಜ! ಸಂಗ್ರಾಮದ ಅಪರಾಹ್ಣದಲ್ಲಿ ದ್ರೋಣನನ್ನೇ ಪಣವಾಗಿಟ್ಟಿದ್ದ ಲೋಮಹರ್ಷಣ ಯುದ್ಧವು ಪಾಂಚಾಲ-ಕುರುಗಳ ಮಧ್ಯೆ ನಡೆಯಿತು.

07081003a ಪಾಂಚಾಲಾ ಹಿ ಜಿಘಾಂಸಂತೋ ದ್ರೋಣಂ ಸಂಹೃಷ್ಟಚೇತಸಃ|

07081003c ಅಭ್ಯವರ್ಷಂತ ಗರ್ಜಂತಃ ಶರವರ್ಷಾಣಿ ಮಾರಿಷ||

ಮಾರಿಷ! ಹೃಷ್ಟಚೇತಸರಾದ ಪಾಂಚಾಲರು ದ್ರೋಣನನ್ನು ಸಂಹರಿಸಲು ಬಯಸಿ ಗರ್ಜಿಸುತ್ತಾ ಬಾಣಗಳ ಮಳೆಯನ್ನು ಸುರಿಸಿದರು.

07081004a ತತಃ ಸುತುಮುಲಸ್ತೇಷಾಂ ಸಂಗ್ರಾಮೋಽವರ್ತತಾದ್ಭುತಃ|

07081004c ಪಾಂಚಾಲಾನಾಂ ಕುರೂಣಾಂ ಚ ಘೋರೋ ದೇವಾಸುರೋಪಮಃ||

ಆಗ ಪಾಂಚಾಲರು ಮತ್ತು ಕುರುಗಳ ನಡುವೆ ದೇವಾಸುರರಂತೆ ಘೋರವಾದ ಅದ್ಭುತ ತುಮುಲ ಸಂಗ್ರಾಮವು ನಡೆಯಿತು.

07081005a ಸರ್ವೇ ದ್ರೋಣರಥಂ ಪ್ರಾಪ್ಯ ಪಾಂಚಾಲಾಃ ಪಂಡವೈಃ ಸಹ|

07081005c ತದನೀಕಂ ಬಿಭಿತ್ಸಂತೋ ಮಹಾಸ್ತ್ರಾಣಿ ವ್ಯದರ್ಶಯನ್||

ಎಲ್ಲ ಪಾಂಚಾಲರೂ ಪಾಂಡವರೊಂದಿಗೆ ದ್ರೋಣನ ರಥವನ್ನು ಸಮೀಪಿಸಿ ಆ ಸೇನೆಯನ್ನು ಬೆದರಿಸುತ್ತಾ ಮಹಾ ಅಸ್ತ್ರಗಳನ್ನು ಪ್ರದರ್ಶಿಸಿದರು.

07081006a ದ್ರೋಣಸ್ಯ ರಥಪರ್ಯಂತಂ ರಥಿನೋ ರಥಮಾಸ್ಥಿತಾಃ|

07081006c ಕಂಪಯಂತೋಽಭ್ಯವರ್ತಂತ ವೇಗಮಾಸ್ಥಾಯ ಮಧ್ಯಮಂ||

ದ್ರೋಣನ ರಥದ ವರೆಗೂ ರಥಗಳಲ್ಲಿದ್ದ ರಥಿಗಳು ಮಧ್ಯಮ ವೇಗದಲ್ಲಿ ಭೂಮಿಯನ್ನು ನಡುಗಿಸುತ್ತಾ ಮುಂದುವರೆಯುತ್ತಿದ್ದರು.

07081007a ತಮಭ್ಯಗಾದ್ಬೃಹತ್ಕ್ಷತ್ರಃ ಕೇಕಯಾನಾಂ ಮಹಾರಥಃ|

07081007c ಪ್ರವಪನ್ನಿಶಿತಾನ್ಬಾಣಾನ್ಮಹೇಂದ್ರಾಶನಿಸನ್ನಿಭಾನ್||

ಆಗ ಕೇಕಯರ ಮಹಾರಥ ಬೃಹತ್ಕ್ಷತ್ರನು ಮಹೇಂದ್ರನ ವಜ್ರದಂತಿರುವ ನಿಶಿತ ಬಾಣಗಳನ್ನು ಪ್ರಯೋಗಿಸುತ್ತಾ ಆಕ್ರಮಣಿಸಿದನು.

07081008a ತಂ ತು ಪ್ರತ್ಯುದಿಯಾಚ್ಚೀಘ್ರಂ ಕ್ಷೇಮಧೂರ್ತಿರ್ಮಹಾಯಶಾಃ|

07081008c ವಿಮುಂಚನ್ನಿಶಿತಾನ್ಬಾಣಾಂ ಶತಶೋಽಥ ಸಹಸ್ರಶಃ||

ಆಗ ಮಹಾಯಶಸ್ವಿ ಕ್ಷೇಮಧೂರ್ತಿಯು ನೂರಾರು ಸಹಸ್ರಾರು ನಿಶಿತ ಬಾಣಗಳನ್ನು ಬಿಡುತ್ತಾ ಶೀಘ್ರವಾಗಿ ಅವನನ್ನು ಎದುರಿಸಿದನು.

07081009a ಧೃಷ್ಟಕೇತುಶ್ಚ ಚೇದೀನಾಂ ಋಷಭೋಽತಿಬಲೋದಿತಃ|

07081009c ತ್ವರಿತೋಽಭ್ಯದ್ರವದ್ದ್ರೋಣಂ ಮಹೇಂದ್ರ ಇವ ಶಂಬರಂ||

ಅತಿಬಲಾನ್ವಿತನಾದ ಚೇದಿಗಳ ಋಷಭ ಧೃಷ್ಟಕೇತುವು ತ್ವರೆಮಾಡಿ ಶಂಬರನನ್ನು ಮಹೇಂದ್ರನಂತೆ ದ್ರೋಣನನ್ನು ಆಕ್ರಮಣಿಸಿದನು.

07081010a ತಮಾಪತಂತಂ ಸಹಸಾ ವ್ಯಾದಿತಾಸ್ಯಮಿವಾಂತಕಂ|

07081010c ವೀರಧನ್ವಾ ಮಹೇಷ್ವಾಸಸ್ತ್ವರಮಾಣಃ ಸಮಭ್ಯಯಾತ್||

ಬಾಯಿಕಳೆದ ಅಂತಕನಂತೆ ಒಮ್ಮೆಗೇ ಮೇಲೆಬೀಳುತ್ತಿದ್ದ ಅವನನ್ನು ತ್ವರೆಮಾಡಿ ಮಹೇಷ್ವಾಸ ವೀರಧನ್ವನು ಎದುರಿಸಿದನು.

07081011a ಯುಧಿಷ್ಠಿರಂ ಮಹಾರಾಜ ಜಿಗೀಷುಂ ಸಮವಸ್ಥಿತಂ|

07081011c ಸಹಾನೀಕಂ ತತೋ ದ್ರೋಣೋ ನ್ಯವಾರಯತ ವೀರ್ಯವಾನ್||

ಮಹಾರಾಜ! ಸೇನೆಗಳೊಂದಿಗೆ ವ್ಯವಸ್ಥಿತನಾದ ಯುಧಿಷ್ಠಿರನನ್ನು ಗೆಲ್ಲಲು ಬಯಸಿ ವೀರ್ಯವಾನ್ ದ್ರೋಣನು ತಡೆದನು.

07081012a ನಕುಲಂ ಕುಶಲಂ ಯುದ್ಧೇ ಪರಾಕ್ರಾಂತಂ ಪರಾಕ್ರಮೀ|

07081012c ಅಭ್ಯಗಚ್ಚತ್ಸಮಾಯಾಂತಂ ವಿಕರ್ಣಸ್ತೇ ಸುತಃ ಪ್ರಭೋ||

ಪ್ರಭೋ! ನಿನ್ನ ಮಗ ಪರಾಕ್ರಮೀ ವಿಕರ್ಣನು ಯುದ್ಧದಲ್ಲಿ ಕುಶಲನಾದ ಪರಾಕ್ರಾಂತ ನಕುಲನನ್ನು ಎದುರಿಸಿ ಯುದ್ಧಮಾಡಿದನು.

07081013a ಸಹದೇವಂ ತಥಾಯಾಂತಂ ದುರ್ಮುಖಃ ಶತ್ರುಕರ್ಶನಃ|

07081013c ಶರೈರನೇಕಸಾಹಸ್ರೈಃ ಸಮವಾಕಿರದಾಶುಗೈಃ||

ಹಾಗೆಯೇ ಮುಂದುವರೆದು ಬರುತ್ತಿದ್ದ ಸಹದೇವನನ್ನು ಶತ್ರುಕರ್ಶನ ದುರ್ಮುಖನು ಅನೇಕ ಸಾವಿರ ಆಶುಗ ಶರಗಳಿಂದ ಮುಚ್ಚಿಬಿಟ್ಟನು.

07081014a ಸಾತ್ಯಕಿಂ ತು ನರವ್ಯಾಘ್ರಂ ವ್ಯಾಘ್ರದತ್ತಸ್ತ್ವವಾರಯತ್|

07081014c ಶರೈಃ ಸುನಿಶಿತೈಸ್ತೀಕ್ಷ್ಣೈಃ ಕಂಪಯನ್ವೈ ಮುಹುರ್ಮುಹುಃ||

ನರವ್ಯಾಘ್ರ ಸಾತ್ಯಕಿಯನ್ನಾದರೋ ವ್ಯಾಘ್ರದತ್ತನು ತೀಕ್ಷ್ಣವಾದ ನಿಶಿತ ಶರಗಳಿಂದ ಪುನಃ ಪುನಃ ಕಂಪಿಸುತ್ತಾ ತಡೆದನು.

07081015a ದ್ರೌಪದೇಯಾನ್ನರವ್ಯಾಘ್ರಾನ್ಮುಂಚತಃ ಸಾಯಕೋತ್ತಮಾನ್|

07081015c ಸಂರಬ್ಧಾನ್ರಥಿನಾಂ ಶ್ರೇಷ್ಠಾನ್ಸೌಮದತ್ತಿರವಾರಯತ್||

ಸಂರಬ್ಧರಾದ, ರಥಿಗಳಲ್ಲಿ ಶ್ರೇಷ್ಠರಾದ, ನರವ್ಯಾಘ್ರ ದ್ರೌಪದೇಯರು ಸೌಮದತ್ತಿಯನ್ನು ಎದುರಿಸಿದರು.

07081016a ಭೀಮಸೇನಂ ತಥಾ ಕ್ರುದ್ಧಂ ಭೀಮರೂಪೋ ಭಯಾನಕಂ|

07081016c ಪ್ರತ್ಯವಾರಯದಾಯಾಂತಮಾರ್ಷ್ಯಶೃಂಗಿರ್ಮಹಾರಥಃ||

ಹಾಗೆಯೇ ಕ್ರುದ್ಧನಾಗಿ ಭೀಮರೂಪನಾಗಿ ಭಯಾನಕನಾಗಿ ಕಾಣುತ್ತಾ ಮುಂದೆ ಬರುತ್ತಿದ್ದ ಭೀಮಸೇನನನ್ನು ಮಹಾರಥ ಆರ್ಷ್ಯಶೃಂಗಿಯು ತಡೆದನು.

07081017a ತಯೋಃ ಸಮಭವದ್ಯುದ್ಧಂ ನರರಾಕ್ಷಸಯೋರ್ಮೃಧೇ|

07081017c ಯಾದೃಗೇವ ಪುರಾ ವೃತ್ತಂ ರಾಮರಾವಣಯೋರ್ನೃಪ||

ನೃಪ! ರಣರಂಗದಲ್ಲಿ ಅವರಿಬ್ಬರು ನರ-ರಾಕ್ಷಸರ ನಡುವೆ, ಹಿಂದೆ ರಾಮ-ರಾವಣರ ನಡುವೆ ನಡೆದಂತೆ, ಯುದ್ಧವು ನಡೆಯಿತು.

07081018a ತತೋ ಯುಧಿಷ್ಠಿರೋ ದ್ರೋಣಂ ನವತ್ಯಾ ನತಪರ್ವಣಾಂ|

07081018c ಆಜಘ್ನೇ ಭರತಶ್ರೇಷ್ಠ ಸರ್ವಮರ್ಮಸು ಭಾರತ||

ಭರತಶ್ರೇಷ್ಠ! ಭಾರತ! ಆಗ ಯುಧಿಷ್ಠಿರನು ತೊಂಭತ್ತು ನತಪರ್ವಗಳಿಂದ ದ್ರೋಣನ ಸರ್ವಮರ್ಮಗಳಿಗೆ ಹೊಡೆದನು.

07081019a ತಂ ದ್ರೋಣಃ ಪಂಚವಿಂಶತ್ಯಾ ನಿಜಘಾನ ಸ್ತನಾಂತರೇ|

07081019c ರೋಷಿತೋ ಭರತಶ್ರೇಷ್ಠ ಕೌಂತೇಯೇನ ಯಶಸ್ವಿನಾ||

ಭರತಶ್ರೇಷ್ಠ! ಯಶಸ್ವಿ ಕೌಂತೇಯನಿಂದ ರೋಷಗೊಂಡ ದ್ರೋಣನು ಅವನನ್ನು ಇಪ್ಪತ್ತೈದು ಬಾಣಗಳಿಂದ ಅವನ ಎದೆಯ ಮಧ್ಯೆ ಹೊಡೆದನು.

07081020a ಭೂಯ ಏವ ತು ವಿಂಶತ್ಯಾ ಸಾಯಕಾನಾಂ ಸಮಾಚಿನೋತ್|

07081020c ಸಾಶ್ವಸೂತಧ್ವಜಂ ದ್ರೋಣಃ ಪಶ್ಯತಾಂ ಸರ್ವಧನ್ವಿನಾಂ||

ಮತ್ತೆ ಇಪ್ಪತ್ತು ಸಾಯಕಗಳನ್ನು ಕಳುಹಿಸಿ ದ್ರೋಣನು ಸರ್ವಧನ್ವಿಗಳೂ ನೋಡುತ್ತಿರುವಂತೆ, ಅವನ ಕುದುರೆ-ಸೂತ-ಧ್ವಜಗಳನ್ನು ತುಂಡರಿಸಿದನು.

07081021a ತಾಂ ಶರಾನ್ದ್ರೋಣಮುಕ್ತಾಂಸ್ತು ಶರವರ್ಷೇಣ ಪಾಂಡವಃ|

07081021c ಅವಾರಯತ ಧರ್ಮಾತ್ಮಾ ದರ್ಶಯನ್ಪಾಣಿಲಾಘವಂ||

ದ್ರೋಣನು ಬಿಟ್ಟ ಆ ಶರಗಳನ್ನು ಧರ್ಮಾತ್ಮ ಪಾಂಡವನು ಶರವರ್ಷದಿಂದ ತಡೆದು ತನ್ನ ಕೈಚಳಕವನ್ನು ತೋರಿಸಿದನು.

07081022a ತತೋ ದ್ರೋಣೋ ಭೃಶಂ ಕ್ರುದ್ಧೋ ಧರ್ಮರಾಜಸ್ಯ ಸಂಯುಗೇ|

07081022c ಚಿಚ್ಚೇದ ಸಹಸಾ ಧನ್ವೀ ಧನುಸ್ತಸ್ಯ ಮಹಾತ್ಮನಃ||

ಆಗ ಸಂಯುಗದಲ್ಲಿ ಧರ್ಮರಾಜನ ಮೇಲೆ ತುಂಬಾ ಕ್ರೋಧಿತನಾಗಿ ಧನ್ವೀ ದ್ರೋಣನು ತಕ್ಷಣವೇ ಆ ಮಹಾತ್ಮನ ಧನುಸ್ಸನ್ನು ಕತ್ತರಿಸಿದನು.

07081023a ಅಥೈನಂ ಚಿನ್ನಧನ್ವಾನಂ ತ್ವರಮಾಣೋ ಮಹಾರಥಃ|

07081023c ಶರೈರನೇಕಸಾಹಸ್ರೈಃ ಪೂರಯಾಮಾಸ ಸರ್ವತಃ||

ಅವನ ಧನುಸ್ಸನ್ನು ಕತ್ತರಿಸಿ ತ್ವರೆಮಾಡಿ ಮಹಾರಥನು ಅವನನ್ನು ಅನೇಕ ಸಹಸ್ರ ಶರಗಳಿಂದ ಸುತ್ತಲೂ ಮುಚ್ಚಿಬಿಟ್ಟನು.

07081024a ಅದೃಶ್ಯಂ ದೃಶ್ಯ ರಾಜಾನಂ ಭಾರದ್ವಾಜಸ್ಯ ಸಾಯಕೈಃ|

07081024c ಸರ್ವಭೂತಾನ್ಯಮನ್ಯಂತ ಹತಮೇವ ಯುಧಿಷ್ಠಿರಂ||

ಭಾರದ್ವಾಜನ ಸಾಯಕಗಳಿಂದ ರಾಜನು ಅದೃಶ್ಯನಾದುದನ್ನು ನೋಡಿ ಸರ್ವಭೂತಗಳೂ ಯುಧಿಷ್ಠಿರನು ಹತನಾದನೆಂದೇ ತಿಳಿದುಕೊಂಡರು.

07081025a ಕೇ ಚಿಚ್ಚೈನಮಮನ್ಯಂತ ತಥಾ ವೈ ವಿಮುಖೀಕೃತಂ|

07081025c ಹೃತೋ ರಾಜೇತಿ ರಾಜೇಂದ್ರ ಬ್ರಾಹ್ಮಣೇನ ಯಶಸ್ವಿನಾ||

ರಾಜೇಂದ್ರ! ಕೆಲವರು ಅವನು ಪಲಾಯನ ಮಾಡಿದನೆಂದು ಅಂದುಕೊಂಡರು. ಇನ್ನು ಕೆಲವರು “ಯಶಸ್ವಿ ಬ್ರಾಹ್ಮಣನು ರಾಜನನ್ನು ಕೊಂದುಬಿಟ್ಟನು!” ಎಂದು ಕೊಂಡರು.

07081026a ಸ ಕೃಚ್ಚ್ರಂ ಪರಮಂ ಪ್ರಾಪ್ತೋ ಧರ್ಮರಾಜೋ ಯುಧಿಷ್ಠಿರಃ|

07081026c ತ್ಯಕ್ತ್ವಾ ತತ್ಕಾರ್ಮುಕಂ ಚಿನ್ನಂ ಭಾರದ್ವಾಜೇನ ಸಮ್ಯುಗೇ|

07081026e ಆದದೇಽನ್ಯದ್ಧನುರ್ದಿವ್ಯಂ ಭಾರಘ್ನಂ ವೇಗವತ್ತರಂ||

ಆ ಪರಮ ಕಷ್ಟವನ್ನು ಅನುಭವಿಸಿದ ಧರ್ಮರಾಜ ಯುಧಿಷ್ಠಿರನು ಸಂಯುಗದಲ್ಲಿ ಭಾರದ್ವಾಜನಿಂದ ಕತ್ತರಿಸಲ್ಪಟ್ಟ ಆ ಧನುಸ್ಸನು ತ್ಯಜಿಸಿ, ಇನ್ನೊಂದು ದಿವ್ಯವಾದ, ಭಾರವತ್ತಾದ, ವೇಗವತ್ತರ ಧನುಸ್ಸನ್ನು ಎತ್ತಿಕೊಂಡನು.

07081027a ತತಸ್ತಾನ್ಸಾಯಕಾನ್ಸರ್ವಾನ್ದ್ರೋಣಮುಕ್ತಾನ್ಸಹಸ್ರಶಃ|

07081027c ಚಿಚ್ಚೇದ ಸಮರೇ ವೀರಸ್ತದದ್ಭುತಮಿವಾಭವತ್||

ಆಗ ದ್ರೋಣನು ಬಿಟ್ಟ ಆ ಎಲ್ಲ ಸಹಸ್ರಾರು ಸಾಯಕಗಳನ್ನೂ ತುಂಡರಿಸಿ ಆ ವೀರನು ಸಮರದಲ್ಲಿ ಅದ್ಭುತವನ್ನೆಸಗಿದನು.

07081028a ಚಿತ್ತ್ವಾ ಚ ತಾಂ ಶರಾನ್ರಾಜಾ ಕ್ರೋಧಸಂರಕ್ತಲೋಚನಃ|

07081028c ಶಕ್ತಿಂ ಜಗ್ರಾಹ ಸಮರೇ ಗಿರೀಣಾಮಪಿ ದಾರಣೀಂ|

07081028e ಸ್ವರ್ಣದಂಡಾಂ ಮಹಾಘೋರಾಮಷ್ಟಘಂಟಾಂ ಭಯಾವಹಾಂ||

ಆ ಶರಗಳನ್ನು ತುಂಡರಿಸಿ ರಾಜನು ಕ್ರೋಧದಿಂದ ರಕ್ತಲೋಚನನಾಗಿ ಗಿರಿಗಳನ್ನೂ ಸೀಳಬಲ್ಲಂತಹ, ಬಂಗಾರದ ದಂಡವುಳ್ಳ, ಮಹಾಘೋರವಾದ, ಭಯವನ್ನುಂಟುಮಾಡುವ, ಎಂಟು ಗಂಟೆಗಳನ್ನುಳ್ಳ ಶಕ್ತಿಯನ್ನು ತೆಗೆದುಕೊಂಡನು.

07081029a ಸಮುತ್ಕ್ಷಿಪ್ಯ ಚ ತಾಂ ಹೃಷ್ಟೋ ನನಾದ ಬಲವದ್ಬಲೀ|

07081029c ನಾದೇನ ಸರ್ವಭೂತಾನಿ ತ್ರಾಸಯನ್ನಿವ ಭಾರತ||

ಅದನ್ನು ಬಿಸುಟು ಆ ಬಲಿಯು ನಾದದಿಂದ ಸರ್ವಭೂತಗಳನ್ನು ಬೆದರಿಸುತ್ತಿರುವನಂತೆ ಸಂತೋಷದಿಂದ ಜೋರಾಗಿ ಕೂಗಿದನು.

07081030a ಶಕ್ತಿಂ ಸಮುದ್ಯತಾಂ ದೃಷ್ಟ್ವಾ ಧರ್ಮರಾಜೇನ ಸಂಯುಗೇ|

07081030c ಸ್ವಸ್ತಿ ದ್ರೋಣಾಯ ಸಹಸಾ ಸರ್ವಭೂತಾನ್ಯಥಾಬ್ರುವನ್||

ಸಂಯುಗದಲ್ಲಿ ಧರ್ಮರಾಜನು ಶಕ್ತಿಯನ್ನು ಹಿಡಿದಿದ್ದುದನ್ನು ಕಂಡ ಸರ್ವಭೂತಗಳೂ ಒಮ್ಮೆಲೇ “ಸ್ವಸ್ತಿ!” ಎಂದು ದ್ರೋಣನಿಗೆ ಹೇಳಿದರು.

07081031a ಸಾ ರಾಜಭುಜನಿರ್ಮುಕ್ತಾ ನಿರ್ಮುಕ್ತೋರಗಸನ್ನಿಭಾ|

07081031c ಪ್ರಜ್ವಾಲಯಂತೀ ಗಗನಂ ದಿಶಶ್ಚ ವಿದಿಶಸ್ತಥಾ|

07081031e ದ್ರೋಣಾಂತಿಕಮನುಪ್ರಾಪ್ತಾ ದೀಪ್ತಾಸ್ಯಾ ಪನ್ನಗೀ ಯಥಾ||

ಬಿಡುಗಡೆಗೊಳಿಸಲ್ಪಟ್ಟ ಸರ್ಪದಂತೆ ರಾಜನ ಭುಜದಿಂದ ಹೊರಟ ಆ ಶಕ್ತಿಯು ಗಗನ, ದಿಕ್ಕು, ಉಪದಿಕ್ಕುಗಳನ್ನು ಪ್ರಜ್ವಲಗೊಳಿಸುತ್ತಾ ಉರಿಯುತ್ತಿರುವ ಬಾಯಿಯುಳ್ಳ ಪನ್ನಗಿಯಂತೆ ದ್ರೋಣನ ಬಳಿ ಹೋಯಿತು.

07081032a ತಾಮಾಪತಂತೀಂ ಸಹಸಾ ಪ್ರೇಕ್ಷ್ಯ ದ್ರೋಣೋ ವಿಶಾಂ ಪತೇ|

07081032c ಪ್ರಾದುಶ್ಚಕ್ರೇ ತತೋ ಬ್ರಾಹ್ಮಮಸ್ತ್ರಮಸ್ತ್ರವಿದಾಂ ವರಃ||

ವಿಶಾಂಪತೇ! ಒಮ್ಮಿಂದೊಮ್ಮೆಲೇ ಬೀಳುತ್ತಿದ್ದ ಅದನ್ನು ನೋಡಿ ಅಸ್ತ್ರವಿದರಲ್ಲಿ ಶ್ರೇಷ್ಠ ದ್ರೋಣನು ಬ್ರಹ್ಮಾಸ್ತ್ರವನ್ನು ಪ್ರಕಟಿಸಿದನು.

07081033a ತದಸ್ತ್ರಂ ಭಸ್ಮಸಾತ್ಕೃತ್ವಾ ತಾಂ ಶಕ್ತಿಂ ಘೋರದರ್ಶನಾಂ|

07081033c ಜಗಾಮ ಸ್ಯಂದನಂ ತೂರ್ಣಂ ಪಾಂಡವಸ್ಯ ಯಶಸ್ವಿನಃ||

ಆ ಅಸ್ತ್ರವು ಘೋರವಾಗಿ ಕಾಣುತ್ತಿದ್ದ ಆ ಶಕ್ತಿಯನ್ನು ಭಸ್ಮೀಕರಿಸಿ ಬೇಗನೆ ಯಶಸ್ವಿ ಪಾಂಡವನ ರಥದ ಕಡೆ ಹೋಯಿತು.

07081034a ತತೋ ಯುಧಿಷ್ಠಿರೋ ರಾಜಾ ದ್ರೋಣಾಸ್ತ್ರಂ ತತ್ಸಮುದ್ಯತಂ|

07081034c ಅಶಾಮಯನ್ಮಹಾಪ್ರಾಜ್ಞೋ ಬ್ರಹ್ಮಾಸ್ತ್ರೇಣೈವ ಭಾರತ||

ಭಾರತ! ಆಗ ಮಹಾಪ್ರಾಜ್ಞ ರಾಜಾ ಯುಧಿಷ್ಠಿರನು ದ್ರೋಣನ ಆಸ್ತ್ರವನ್ನು ಬ್ರಹ್ಮಾಸ್ತ್ರದಿಂದಲೇ ಶಾಂತಗೊಳಿಸಿದನು.

07081035a ವಿವ್ಯಾಧ ಚ ರಣೇ ದ್ರೋಣಂ ಪಂಚಭಿರ್ನತಪರ್ವಭಿಃ|

07081035c ಕ್ಷುರಪ್ರೇಣ ಚ ತೀಕ್ಷ್ಣೇನ ಚಿಚ್ಚೇದಾಸ್ಯ ಮಹದ್ಧನುಃ||

ಅವನು ರಣದಲ್ಲಿ ಐದು ನತಪರ್ವಗಳಿಂದ ದ್ರೋಣನನ್ನು ಹೊಡೆದು, ತೀಕ್ಷ್ಣ ಕ್ಷುರಪ್ರದಿಂದ ಅವನ ಮಹಾಧನುಸ್ಸನ್ನು ಕತ್ತರಿಸಿದನು.

07081036a ತದಪಾಸ್ಯ ಧನುಶ್ಚಿನ್ನಂ ದ್ರೋಣಃ ಕ್ಷತ್ರಿಯಮರ್ದನಃ|

07081036c ಗದಾಂ ಚಿಕ್ಷೇಪ ಸಹಸಾ ಧರ್ಮಪುತ್ರಾಯ ಮಾರಿಷ||

ಮಾರಿಷ! ಧನುಸ್ಸು ತುಂಡಾಗಲು ಕ್ಷತ್ರಿಯಮರ್ದನ ದ್ರೋಣನು ತಕ್ಷಣವೇ ಧರ್ಮಪುತ್ರನ ಮೇಲೆ ಗದೆಯನ್ನು ಎಸೆದನು.

07081037a ತಾಮಾಪತಂತೀಂ ಸಹಸಾ ಗದಾಂ ದೃಷ್ಟ್ವಾ ಯುಧಿಷ್ಠಿರಃ|

07081037c ಗದಾಮೇವಾಗ್ರಹೀತ್ಕ್ರುದ್ಧಶ್ಚಿಕ್ಷೇಪ ಚ ಪರಂತಪಃ||

ಮೇಲೆ ಬೀಳುತ್ತಿರುವ ಆ ಗದೆಯನ್ನು ನೋಡಿ ತಕ್ಷಣವೇ ಕ್ರುದ್ಧನಾಗಿ ಪರಂತಪ ಯುಧಿಷ್ಠಿರನು ತಾನೂ ಗದೆಯನ್ನು ತೆಗೆದು ಕೊಂಡು ಬೀಸಿ ಎಸೆದನು.

07081038a ತೇ ಗದೇ ಸಹಸಾ ಮುಕ್ತೇ ಸಮಾಸಾದ್ಯ ಪರಸ್ಪರಂ|

07081038c ಸಂಘರ್ಷಾತ್ಪಾವಕಂ ಮುಕ್ತ್ವಾ ಸಮೇಯಾತಾಂ ಮಹೀತಲೇ||

ವೇಗವಾಗಿ ಎಸೆಯಲ್ಪಟ್ಟ ಆ ಎರಡೂ ಗದೆಗಳೂ ಪರಸ್ಪರರನ್ನು ತಾಗಿ, ಸಂಘರ್ಷದಿಂದ ಬೆಂಕಿಯನ್ನು ಬಿಟ್ಟು ನೆಲಕ್ಕೆ ಸೇರಿಕೊಂಡವು.

07081039a ತತೋ ದ್ರೋಣೋ ಭೃಶಂ ಕ್ರುದ್ಧೋ ಧರ್ಮರಾಜಸ್ಯ ಮಾರಿಷ|

07081039c ಚತುರ್ಭಿರ್ನಿಶಿತೈಸ್ತೀಕ್ಷ್ಣೈರ್ಹಯಾಂ ಜಘ್ನೇ ಶರೋತ್ತಮೈಃ||

ಮಾರಿಷ! ಆಗ ದ್ರೋಣನು ತುಂಬಾ ಕ್ರುದ್ಧನಾಗಿ ನಾಲ್ಕು ನಿಶಿತ ತೀಕ್ಷ್ಣ ಉತ್ತಮ ಶರಗಳಿಂದ ಧರ್ಮರಾಜನ ಕುದುರೆಗಳನ್ನು ಸಂಹರಿಸಿದನು.

07081040a ಧನುಶ್ಚೈಕೇನ ಬಾಣೇನ ಚಿಚ್ಚೇದೇಂದ್ರಧ್ವಜೋಪಮಂ|

07081040c ಕೇತುಮೇಕೇನ ಚಿಚ್ಚೇದ ಪಾಂಡವಂ ಚಾರ್ದಯತ್ತ್ರಿಭಿಃ||

ಇಂದ್ರಧ್ವಜೋಪಮವಾದ ಅವನ ಧನುಸ್ಸನ್ನು ಒಂದೇ ಬಾಣದಿಂದ ಕತ್ತರಿಸಿದನು. ಇನ್ನೊಂದರಿಂದ ಕೇತುವನ್ನು ತುಂಡರಿಸಿ ಮೂರರಿಂದ ಪಾಂಡವನನ್ನು ಗಾಯಗೊಳಿಸಿದನು.

07081041a ಹತಾಶ್ವಾತ್ತು ರಥಾತ್ತೂರ್ಣಮವಪ್ಲುತ್ಯ ಯುಧಿಷ್ಠಿರಃ|

07081041c ತಸ್ಥಾವೂರ್ಧ್ವಭುಜೋ ರಾಜಾ ವ್ಯಾಯುಧೋ ಭರತರ್ಷಭ||

ಭರತರ್ಷಭ! ಆಗ ಕುದುರೆಗಳನ್ನು ಕಳೆದುಕೊಂಡ ರಥದಿಂದ ತಕ್ಷಣವೇ ಕೆಳಗೆ ಹಾರಿ ರಾಜಾ ಯುಧಿಷ್ಠಿರನು ಭುಜಗಳನ್ನು ಮೇಲೆತ್ತಿ ಆಯುಧಗಳಿಲ್ಲದೇ ನಿಂತುಕೊಂಡನು.

07081042a ವಿರಥಂ ತಂ ಸಮಾಲೋಕ್ಯ ವ್ಯಾಯುಧಂ ಚ ವಿಶೇಷತಃ|

07081042c ದ್ರೋಣೋ ವ್ಯಮೋಹಯಚ್ಚತ್ರೂನ್ಸರ್ವಸೈನ್ಯಾನಿ ಚಾಭಿಭೋ||

ವಿಭೋ! ಹೀಗೆ ದ್ರೋಣನು ಅವನನ್ನು ವಿರಥನಾಗಿಸಿದುದನ್ನು, ಅದರಲ್ಲೂ ವಿಶೇಷವಾಗಿ ನಿರಾಯುಧನಾಗಿ ಮಾಡಿದುದನ್ನು ನೋಡಿ ಶತ್ರು ಸೇನೆಗಳೆಲ್ಲವೂ ಮೂರ್ಛೆಗೊಂಡವು.

07081043a ಮುಂಚನ್ನಿಷುಗಣಾಂಸ್ತೀಕ್ಷ್ಣಾಽಲ್ಲಘುಹಸ್ತೋ ದೃಢವ್ರತಃ|

07081043c ಅಭಿದುದ್ರಾವ ರಾಜಾನಂ ಸಿಂಹೋ ಮೃಗಮಿವೋಲ್ಬಣಃ||

ಆಗ ತೀಕ್ಷ್ಣವಾದ ಶರಗುಂಪುಗಳನ್ನು ಪ್ರಯೋಗಿಸುತ್ತಾ ಆ ಲಘುಹಸ್ತ ದೃಢವ್ರತನು ಸಿಂಹವು ಜಿಂಕೆಯ ಮೇಲೆ ಬೀಳುವಂತೆ ರಾಜನ ಮೇಲೆ ಎರಗಿದನು.

07081044a ತಮಭಿದ್ರುತಮಾಲೋಕ್ಯ ದ್ರೋಣೇನಾಮಿತ್ರಘಾತಿನಾ|

07081044c ಹಾ ಹೇತಿ ಸಹಸಾ ಶಬ್ದಃ ಪಾಂಡೂನಾಂ ಸಮಜಾಯತ||

ಅಮಿತ್ರಘಾತಿ ದ್ರೋಣನಿಂದ ಅವನು ಆಕ್ರಮಣಿಸಲ್ಪಟ್ಟಿದುದನ್ನು ನೋಡಿ ಒಮ್ಮಿಂದೊಮ್ಮೆಲೇ ಪಾಂಡವರ ಕಡೆ ಹಾಹಾಕಾರದ ಶಬ್ಧವು ಕೇಳಿಬಂದಿತು.

07081045a ಹೃತೋ ರಾಜಾ ಹೃತೋ ರಾಜಾ ಭಾರದ್ವಾಜೇನ ಮಾರಿಷ|

07081045c ಇತ್ಯಾಸೀತ್ಸುಮಹಾಂ ಶಬ್ದಃ ಪಾಂಡುಸೈನ್ಯಸ್ಯ ಸರ್ವತಃ||

ಮಾರಿಷ! “ರಾಜನು ಹತನಾದನು! ಭಾರದ್ವಾಜನಿಂದ ರಾಜನು ಹತನಾದನು!” ಎಂದು ಪಾಂಡವ ಸೇನೆಯ ಎಲ್ಲಕಡೆ ಮಹಾ ಶಬ್ಧವುಂಟಾಯಿತು.

07081046a ತತಸ್ತ್ವರಿತಮಾರುಹ್ಯ ಸಹದೇವರಥಂ ನೃಪಃ|

07081046c ಅಪಾಯಾಜ್ಜವನೈರಶ್ವೈಃ ಕುಂತೀಪುತ್ರೋ ಯುಧಿಷ್ಠಿರಃ||

ಆಗ ನೃಪ ಕುಂತೀಪುತ್ರ ಯುಧಿಷ್ಠಿರನು ಸಹದೇವನ ರಥವನ್ನೇರಿ ವೇಗ ಅಶ್ವಗಳಿಂದ ಪಲಾಯನಗೈದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಯುಧಿಷ್ಠಿರಾಪಯಾನೇ ಏಕಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಯುಧಿಷ್ಠಿರಾಪಯಾನ ಎನ್ನುವ ಎಂಭತ್ತೊಂದನೇ ಅಧ್ಯಾಯವು.

Image result for indian motifs elephants

Comments are closed.