Drona Parva: Chapter 80

ದ್ರೋಣ ಪರ್ವ: ಜಯದ್ರಥವಧ ಪರ್ವ

೮೦

ಪಾಂಡವರ ಮತ್ತು ಕೌರವರ ಧ್ವಜಗಳ ವರ್ಣನೆ (೧-೨೯). ಯುದ್ಧವು ಮುಂದುವರೆದುದು (೩೦-೩೮).

07080001 ಧೃತರಾಷ್ಟ್ರ ಉವಾಚ|

07080001a ಧ್ವಜಾನ್ಬಹುವಿಧಾಕಾರಾನ್ಭ್ರಾಜಮಾನಾನತಿಶ್ರಿಯಾ|

07080001c ಪಾರ್ಥಾನಾಂ ಮಾಮಕಾನಾಂ ಚ ತಾನ್ಮಮಾಚಕ್ಷ್ವ ಸಂಜಯ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಅತಿಯಾದ ಶ್ರೀಯಿಂದ ಬೆಳಗುತ್ತಿರುವ ಬಹುವಿಧದ ಆಕಾರಗಳ ಪಾರ್ಥರ ಮತ್ತು ನನ್ನವರ ಧ್ವಜಗಳ ಕುರಿತು ನನಗೆ ಹೇಳು.”

07080002 ಸಂಜಯ ಉವಾಚ|

07080002a ಧ್ವಜಾನ್ಬಹುವಿಧಾಕಾರಾಂ ಶೃಣು ತೇಷಾಂ ಮಹಾತ್ಮನಾಂ|

07080002c ರೂಪತೋ ವರ್ಣತಶ್ಚೈವ ನಾಮತಶ್ಚ ನಿಬೋಧ ಮೇ||

ಸಂಜಯನು ಹೇಳಿದನು: “ಆ ಮಹಾತ್ಮರ ಬಹುವಿಧದ ಆಕಾರಗಳನ್ನುಳ್ಳ ಧ್ವಜಗಳ ಕುರಿತು ಕೇಳು. ಅವುಗಳ ರೂಪ, ಬಣ್ಣ ಮತ್ತು ನಾಮಗಳನ್ನೂ ನಾನು ಹೇಳುತ್ತೇನೆ.

07080003a ತೇಷಾಂ ತು ರಥಮುಖ್ಯಾನಾಂ ರಥೇಷು ವಿವಿಧಾ ಧ್ವಜಾಃ|

07080003c ಪ್ರತ್ಯದೃಶ್ಯಂತ ರಾಜೇಂದ್ರ ಜ್ವಲಿತಾ ಇವ ಪಾವಕಾಃ||

ರಾಜೇಂದ್ರ! ಆ ರಥಮುಖ್ಯರ ರಥಗಳಲ್ಲಿ ಅಗ್ನಿಗಳಂತೆ ಪ್ರಜ್ವಲಿಸುತ್ತಿದ್ದ ವಿವಿಧ ಧ್ವಜಗಳು ಕಾಣಿಸುತ್ತಿದ್ದವು.

07080004a ಕಾಂಚನಾಃ ಕಾಂಚನಾಪೀಡಾಃ ಕಾಂಚನಸ್ರಗಲಂಕೃತಾಃ|

07080004c ಕಾಂಚನಾನೀವ ಶೃಂಗಾಣಿ ಕಾಂಚನಸ್ಯ ಮಹಾಗಿರೇಃ||

ಕಾಂಚನದ ಮಹಾಗಿರಿಯ ಕಾಂಚನ ಶಿಖರಗಳಂತೆ ಅವು ಸುವರ್ಣಮಯವಾಗಿಯೂ, ಸುವರ್ಣಗಳಿಂದ ಅಲಂಕೃತವಾಗಿಯೂ, ಸುವರ್ಣದ ಮಾಲೆಗಳಿಂದ ಭೂಷಿತವೂ ಆಗಿದ್ದವು.

07080005a ತೇ ಧ್ವಜಾಃ ಸಂವೃತಾಸ್ತೇಷಾಂ ಪತಾಕಾಭಿಃ ಸಮಂತತಃ|

07080005c ನಾನಾವರ್ಣವಿರಾಗಾಭಿರ್ವಿಬಭುಃ ಸರ್ವತೋ ವೃತಾಃ||

ಆ ಧ್ವಜಗಳು ಎಲ್ಲಕಡೆಗಳಿಂದ ಸುತ್ತಲೂ ನಾನಾ ಬಣ್ಣಗಳ ಪತಾಕೆಗಳಿಂದ ಸುತ್ತುವರೆಯಲ್ಪಟ್ಟು ಶೋಭಿಸುತ್ತಿದ್ದವು.

07080006a ಪತಾಕಾಶ್ಚ ತತಸ್ತಾಸ್ತು ಶ್ವಸನೇನ ಸಮೀರಿತಾಃ|

07080006c ನೃತ್ಯಮಾನಾಃ ವ್ಯದೃಶ್ಯಂತ ರಂಗಮಧ್ಯೇ ವಿಲಾಸಿಕಾಃ||

ಆ ಪತಾಕೆಗಳು ಗಾಳಿಯಿಂದ ಪಟ ಪಟನೆ ಹಾರಾಡುತ್ತಿದ್ದು ರಂಗಮಧ್ಯದಲ್ಲಿ ನರ್ತಿಸುವ ವಿಲಾಸಿನಿಯರಂತೆ ಕಾಣುತ್ತಿದ್ದವು.

07080007a ಇಂದ್ರಾಯುಧಸವರ್ಣಾಭಾಃ ಪತಾಕಾ ಭರತರ್ಷಭ|

07080007c ದೋಧೂಯಮಾನಾ ರಥಿನಾಂ ಶೋಭಯಂತಿ ಮಹಾರಥಾನ್||

ಭರತರ್ಷಭ! ಕಾಮನ ಬಿಲ್ಲಿನ ಬಣ್ಣಗಳಿಂದ ಹೊಳೆಯುತ್ತಿದ್ದ ಪತಾಕೆಗಳು ಹಾರಾಡುತ್ತಾ ಮಹಾರಥರ ರಥಗಳನ್ನು ಶೋಭಿಸುತ್ತಿದ್ದವು.

07080008a ಸಿಂಹಲಾಂಗೂಲಮುಗ್ರಾಸ್ಯಂ ಧ್ವಜಂ ವಾನರಲಕ್ಷಣಂ|

07080008c ಧನಂಜಯಸ್ಯ ಸಂಗ್ರಾಮೇ ಪ್ರತ್ಯಪಶ್ಯಾಮ ಭೈರವಂ||

ಸಿಂಹದ ಪುಚ್ಛವನ್ನು ಹೊಂದಿದ್ದ, ಉಗ್ರವಾದ ಮುಖವುಳ್ಳ ವಾನರ ಚಿಹ್ನೆಯುಳ್ಳ ಧನಂಜಯನ ಭೈರವ ಧ್ವಜವನ್ನು ನೋಡಿದೆವು.

07080009a ಸ ವಾನರವರೋ ರಾಜನ್ಪತಾಕಾಭಿರಲಂಕೃತಃ|

07080009c ತ್ರಾಸಯಾಮಾಸ ತತ್ಸೈನ್ಯಂ ಧ್ವಜೋ ಗಾಂಡೀವಧನ್ವನಃ||

ರಾಜನ್! ಗಾಂಡೀವಧನ್ವಿಯ ಧ್ವಜದಲ್ಲಿದ್ದ, ಪತಾಕೆಗಳಿಂದ ಅಲಂಕೃತಗೊಂಡಿದ್ದ ಆ ವಾನರವರನು ಸೈನ್ಯವನ್ನು ಭಯಪಡಿಸುತ್ತಿದ್ದನು.

07080010a ತಥೈವ ಸಿಂಹಲಾಂಗೂಲಂ ದ್ರೋಣಪುತ್ರಸ್ಯ ಭಾರತ|

07080010c ಧ್ವಜಾಗ್ರಂ ಸಮಪಶ್ಯಾಮ ಬಾಲಸೂರ್ಯಸಮಪ್ರಭಂ||

ಭಾರತ! ಹಾಗೆಯೇ ಬಾಲಸೂರ್ಯನ ಪ್ರಭೆಯುಳ್ಳ ದ್ರೋಣಪುತ್ರನ ಸಿಂಹದ ಪುಚ್ಛವುಳ್ಳ ಧ್ವಜವನ್ನು ನೋಡಿದೆವು.

07080011a ಕಾಂಚನಂ ಪವನೋದ್ಧೂತಂ ಶಕ್ರಧ್ವಜಸಮಪ್ರಭಂ|

07080011c ನಂದನಂ ಕೌರವೇಂದ್ರಾಣಾಂ ದ್ರೌಣೇರ್ಲಕ್ಷಣಮುಚ್ಚ್ರಿತಂ||

ಗಾಳಿಯಲ್ಲಿ ತೇಲುವಂತಿದ್ದ, ಪ್ರಭೆಯಲ್ಲಿ ಶಕ್ರಧ್ವಜಕ್ಕೆ ಸಮನಾದ, ದ್ರೌಣಿಯ ಲಕ್ಷಣಯುಕ್ತವಾದ ಬಂಗಾರದ ಧ್ವಜವು ಕೌರವೇಂದ್ರರನ್ನು ಹರ್ಷಗೊಳಿಸುತ್ತಿತ್ತು.

07080012a ಹಸ್ತಿಕಕ್ಷ್ಯಾ ಪುನರ್ಹೈಮೀ ಬಭೂವಾಧಿರಥೇರ್ಧ್ವಜೇ|

07080012c ಆಹವೇ ಖಂ ಮಹಾರಾಜ ದದೃಶೇ ಪೂರಯನ್ನಿವ||

ಮಹಾರಾಜ! ಆಧಿರಥ ಕರ್ಣನ ಧ್ವಜದಲ್ಲಿ ಬಂಗಾರದ ಗಜಶಾಲೆಯಿದ್ದಿತು. ಅದು ರಣರಂಗದಲ್ಲಿ ಆಕಾಶವನ್ನೇ ತುಂಬಿಬಿಡುವಂತಿತ್ತು.

07080013a ಪತಾಕೀ ಕಾಂಚನಸ್ರಗ್ವೀ ಧ್ವಜಃ ಕರ್ಣಸ್ಯ ಸಮ್ಯುಗೇ|

07080013c ನೃತ್ಯತೀವ ರಥೋಪಸ್ಥೇ ಶ್ವಸನೇನ ಸಮೀರಿತಃ||

ಸಂಯುಗದಲ್ಲಿ ಕರ್ಣನ ಕಾಂಚನ ಮಾಲೆಗಳಿಂದ ಅಲಂಕೃತವಾದ ಪತಾಕೆಯಲ್ಲಿದ್ದ ಧ್ವಜವು ಗಾಳಿಯಿಂದ ಹಾರಾಡಿ ರಥದ ಮೇಲೆ ನರ್ತಿಸುತ್ತಿರುವಂತೆ ಕಾಣುತ್ತಿತ್ತು.

07080014a ಆಚಾರ್ಯಸ್ಯ ಚ ಪಾಂಡೂನಾಂ ಬ್ರಾಹ್ಮಣಸ್ಯ ಯಶಸ್ವಿನಃ|

07080014c ಗೋವೃಷೋ ಗೌತಮಸ್ಯಾಸೀತ್ಕೃಪಸ್ಯ ಸುಪರಿಷ್ಕೃತಃ||

ಪಾಂಡವರ ಆಚಾರ್ಯನೂ ಆಗಿರುವ ಯಶಸ್ವಿ ಬ್ರಾಹ್ಮಣ ಗೌತಮ ಕೃಪನ ಧ್ವಜದಲ್ಲಿ ಸುಪರಿಷ್ಕೃತವಾದ ಎತ್ತಿನ ಹೋರಿಯ ಚಿಹ್ನೆಯಿತ್ತು.

07080015a ಸ ತೇನ ಭ್ರಾಜತೇ ರಾಜನ್ಗೋವೃಷೇಣ ಮಹಾರಥಃ|

07080015c ತ್ರಿಪುರಘ್ನರಥೋ ಯದ್ವದ್ಗೋವೃಷೇಣ ವಿರಾಜತೇ||

ರಾಜನ್! ಎತ್ತಿನ ಹೋರಿಯ ಧ್ವಜದಿಂದ ಆ ಮಹಾರಥನು ರಥದಲ್ಲಿ ಎತ್ತಿನ ಹೋರಿಯ ರಥದಲ್ಲಿ ಕುಳಿತಿದ್ದ ತ್ರಿಪುರಘ್ನ ಶಿವನಂತೆ ವಿರಾಜಿಸುತ್ತಿದ್ದನು.

07080016a ಮಯೂರೋ ವೃಷಸೇನಸ್ಯ ಕಾಂಚನೋ ಮಣಿರತ್ನವಾನ್|

07080016c ವ್ಯಾಹರಿಷ್ಯನ್ನಿವಾತಿಷ್ಠತ್ಸೇನಾಗ್ರಮಪಿ ಶೋಭಯನ್||

ವೃಷಸೇನನದು ಕಾಂಚನದ, ಮಣಿರತ್ನಗಳಿಂದ ಅಲಂಕೃತವಾದ ಮಯೂರ ಧ್ವಜ. ಸೇನೆಗಳ ಮೇಲೆ ಹಾರಾಡುತ್ತಿದ್ದ ಅದು ಶೋಭಿಸುತ್ತಿತ್ತು.

07080017a ತೇನ ತಸ್ಯ ರಥೋ ಭಾತಿ ಮಯೂರೇಣ ಮಹಾತ್ಮನಃ|

07080017c ಯಥಾ ಸ್ಕಂದಸ್ಯ ರಾಜೇಂದ್ರ ಮಯೂರೇಣ ವಿರಾಜತಾ||

ರಾಜೇಂದ್ರ! ಸ್ಕಂದನ ಮಯೂರದಂತೆ ಆ ಮಹಾತ್ಮನ ಮಯೂರವು ರಥದ ಮೇಲೆ ವಿರಾಜಿಸುತ್ತಿತ್ತು.

07080018a ಮದ್ರರಾಜಸ್ಯ ಶಲ್ಯಸ್ಯ ಧ್ವಜಾಗ್ರೇಽಗ್ನಿಶಿಖಾಮಿವ|

07080018c ಸೌವರ್ಣೀಂ ಪ್ರತಿಪಶ್ಯಾಮ ಸೀತಾಮಪ್ರತಿಮಾಂ ಶುಭಾಂ||

ಮದ್ರರಾಜ ಶಲ್ಯನ ಧ್ವಜಾಗ್ರದಲ್ಲಿ ಅಗ್ನಿಶಿಖೆಯಂತೆ ಸುವರ್ಣಮಯದ ಅಪ್ರತಿಮ ಶುಭವಾದ ನೇಗಿಲನ್ನು ನೋಡಿದೆವು.

07080019a ಸಾ ಸೀತಾ ಭ್ರಾಜತೇ ತಸ್ಯ ರಥಮಾಸ್ಥಾಯ ಮಾರಿಷ|

07080019c ಸರ್ವಬೀಜವಿರೂಢೇವ ಯಥಾ ಸೀತಾ ಶ್ರಿಯಾ ವೃತಾ||

ಮಾರಿಷ! ಎಲ್ಲ ಬೀಜಗಳನ್ನೇರಿ ಶ್ರೀಯಿಂದ ಆವೃತವಾದ ನೇಗಿಲಿನಂತೆ ಅವನ ರಥದ ಮೇಲೆ ಆ ನೇಗಿಲು ಹೊಳೆಯುತ್ತಿತ್ತು.

07080020a ವರಾಹಃ ಸಿಂಧುರಾಜಸ್ಯ ರಾಜತೋಽಭಿವಿರಾಜತೇ|

07080020c ಧ್ವಜಾಗ್ರೇಽಲೋಹಿತಾರ್ಕಾಭೋ ಹೇಮಜಾಲಪರಿಷ್ಕೃತಃ||

ಸಿಂಧುರಾಜನ ಧ್ವಜಾಗ್ರದಲ್ಲಿ ಸೂರ್ಯನ ಕೆಂಪಿನ ಹೇಮಜಾಲಗಳಿಂದ ಅಲಂಕೃತವಾದ ರಜತ ವರಾಹವು ವಿರಾಜಿಸುತ್ತಿತ್ತು.

07080021a ಶುಶುಭೇ ಕೇತುನಾ ತೇನ ರಾಜತೇನ ಜಯದ್ರಥಃ|

07080021c ಯಥಾ ದೇವಾಸುರೇ ಯುದ್ಧೇ ಪುರಾ ಪೂಷಾ ಸ್ಮ ಶೋಭತೇ||

ಆ ರಜತ ಕೇತುವಿನಿಂದಾಗಿ ಜಯದ್ರಥನು ಹಿಂದೆ ದೇವಾಸುರರ ಯುದ್ಧದಲ್ಲಿ ಸೂರ್ಯನು ಹೇಗೋ ಹಾಗೆ ಶೋಭಿಸಿದನು.

07080022a ಸೌಮದತ್ತೇಃ ಪುನರ್ಯೂಪೋ ಯಜ್ಞಶೀಲಸ್ಯ ಧೀಮತಃ|

07080022c ಧ್ವಜಃ ಸೂರ್ಯ ಇವಾಭಾತಿ ಸೋಮಶ್ಚಾತ್ರ ಪ್ರದೃಶ್ಯತೇ||

ಯಜ್ಞಶೀಲ, ಧೀಮತ ಸೌಮದತ್ತಿಯ ಸೂರ್ಯನಂತೆ ಪ್ರಕಾಶಿಸುತ್ತಿದ್ದ ಧ್ವಜದಲ್ಲಿ ಯೂಪಸ್ತಂಭದ ಮತ್ತು ಚಂದ್ರನ ಚಿಹ್ನೆಗಳು ಕಾಣುತ್ತಿದ್ದವು.

07080023a ಸ ಯೂಪಃ ಕಾಂಚನೋ ರಾಜನ್ಸೌಮದತ್ತೇರ್ವಿರಾಜತೇ|

07080023c ರಾಜಸೂಯೇ ಮಖಶ್ರೇಷ್ಠೇ ಯಥಾ ಯೂಪಃ ಸಮುಚ್ಚ್ರಿತಃ||

ರಾಜನ್! ಸೌಮದತ್ತಿಯ ಕಾಂಚನದ ಯೂಪವು ಮಖಶ್ರೇಷ್ಠವಾದ ರಾಜಸೂಯದಲ್ಲಿ ಎತ್ತರ ಯೂಪವು ಹೇಗೋ ಹಾಗೆ ವಿರಾಜಿಸುತ್ತಿತ್ತು.

07080024a ಶಲಸ್ಯ ತು ಮಹಾರಾಜ ರಾಜತೋ ದ್ವಿರದೋ ಮಹಾನ್|

07080024c ಕೇತುಃ ಕಾಂಚನಚಿತ್ರಾಂಗೈರ್ಮಯೂರೈರುಪಶೋಭಿತಃ||

07080025a ಸ ಕೇತುಃ ಶೋಭಯಾಮಾಸ ಸೈನ್ಯಂ ತೇ ಭರತರ್ಷಭ|

ಮಹಾರಾಜ! ಶಲನ ಧ್ವಜದಲ್ಲಿ ದೊಡ್ಡದಾದ ಆನೆಯ ಚಿಹ್ನೆಯಿತ್ತು. ಆ ಕೇತುವು ಬಂಗಾರದ ಚಿತ್ರಾಂಗಗಳಿಂದ ಮಯೂರಗಳಿಂದ ಶೋಭಿಸುತ್ತಿತ್ತು. ಭರತರ್ಷಭ! ಆ ಕೇತುವು ನಿನ್ನ ಸೇನೆಯನ್ನು ಶೋಭೆಗೊಳಿಸುತ್ತಿತ್ತು.

07080025c ಯಥಾ ಶ್ವೇತೋ ಮಹಾನಾಗೋ ದೇವರಾಜಚಮೂಂ ತಥಾ||

07080026a ನಾಗೋ ಮಣಿಮಯೋ ರಾಜ್ಞೋ ಧ್ವಜಃ ಕನಕಸಂವೃತಃ|

ಬಿಳಿಯ ಮಹಾ ಆನೆಯು ದೇವರಾಜನ ಸೇನೆಯನ್ನು ಹೇಗೋ ಹಾಗೆ ರಾಜನ ಮಣಿಮಯಧ್ವಜದಲ್ಲಿ ಕನಕಸಂವೃತವಾದ ಆನೆಯ ಚಿಹ್ನೆಯಿತ್ತು.

07080026c ಕಿಂಕಿಣೀಶತಸಂಹ್ರಾದೋ ಭ್ರಾಜಂಶ್ಚಿತ್ರೇ ರಥೋತ್ತಮೇ||

07080027a ವ್ಯಭ್ರಾಜತ ಭೃಶಂ ರಾಜನ್ಪುತ್ರಸ್ತವ ವಿಶಾಂ ಪತೇ|

ವಿಶಾಂಪತೇ! ನೂರಾರು ಸಣ್ಣ ಸಣ್ಣ ಗಂಟೆಗಳ ಕಿಲಕಿಲನಿನಾದದಿಂದ ಕೂಡಿದ ಆ ಧ್ವಜವು ನಿನ್ನ ಮಗನ ಉತ್ತಮ ರಥದಲ್ಲಿ ಶೋಭಾಯಮಾನವಾಗಿ ಕಾಣುತ್ತಿತ್ತು.

07080027c ಧ್ವಜೇನ ಮಹತಾ ಸಂಖ್ಯೇ ಕುರೂಣಾಂ ಋಷಭಸ್ತದಾ||

07080028a ನವೈತೇ ತವ ವಾಹಿನ್ಯಾಮುಚ್ಚ್ರಿತಾಃ ಪರಮಧ್ವಜಾಃ|

07080028c ವ್ಯದೀಪಯಂಸ್ತೇ ಪೃತನಾಂ ಯುಗಾಂತಾದಿತ್ಯಸಮ್ನಿಭಾಃ||

ರಣದಲ್ಲಿ ಕುರುವೃಷಭರ ಈ ಒಂಭತ್ತು ಮಹಾ ಪರಮಧ್ವಜಗಳು ನಿನ್ನ ಸೇನೆಯ ಮೇಲೆ ಎತ್ತರದಲ್ಲಿ ಹಾರಾಡುತ್ತಾ ಯುಗಾಂತದ ಆದಿತ್ಯನ ಪ್ರಕಾಶದಂತೆ ನಿನ್ನ ಸೇನೆಗಳನ್ನು ಬೆಳಗಿಸುತ್ತಿದ್ದವು.

07080029a ದಶಮಸ್ತ್ವರ್ಜುನಸ್ಯಾಸೀದೇಕ ಏವ ಮಹಾಕಪಿಃ|

07080029c ಅದೀಪ್ಯತಾರ್ಜುನೋ ಯೇನ ಹಿಮವಾನಿವ ವಹ್ನಿನಾ||

ಹತ್ತನೆಯದಾದ ಅರ್ಜುನನ ಮಹಾಕಪಿ ಒಬ್ಬನೇ ಅಗ್ನಿಯು ಹಿಮವಂತನನ್ನು ಬೆಳಗಿಸುವಂತೆ ಅರ್ಜುನನನ್ನು ಬೆಳಗಿಸುತ್ತಿದ್ದನು.

07080030a ತತಶ್ಚಿತ್ರಾಣಿ ಶುಭ್ರಾಣಿ ಸುಮಹಾಂತಿ ಮಹಾರಥಾಃ|

07080030c ಕಾರ್ಮುಕಾಣ್ಯಾದದುಸ್ತೂರ್ಣಮರ್ಜುನಾರ್ಥೇ ಪರಂತಪಾಃ||

ಆಗ ತಕ್ಷಣವೇ ಆ ಮಹಾರಥ ಪರಂತಪರು ಅರ್ಜುನನೊಡನೆ ಹೋರಾಡುವುದಕ್ಕಾಗಿ ವಿಚಿತ್ರವಾದ ಶುಭ್ರವಾದ ದೊಡ್ಡ ಕಾರ್ಮುಕಗಳನ್ನು ಕೈಗೆತ್ತಿಕೊಂಡರು.

07080031a ತಥೈವ ಧನುರಾಯಚ್ಚತ್ಪಾರ್ಥಃ ಶತ್ರುವಿನಾಶನಃ|

07080031c ಗಾಂಡೀವಂ ದಿವ್ಯಕರ್ಮಾ ತದ್ರಾಜನ್ದುರ್ಮಂತ್ರಿತೇ ತವ||

ರಾಜನ್! ನಿನ್ನ ದುರಾಲೋಚನೆಯ ಫಲವಾಗಿ ದಿವ್ಯಕರ್ಮಿ ಶತ್ರುವಿನಾಶಕ ಪಾರ್ಥನು ಗಾಂಡೀವ ಧನುಸ್ಸನ್ನು ಎತ್ತಿಕೊಂಡನು.

07080032a ತವಾಪರಾಧಾದ್ಧಿ ನರಾ ನಿಹತಾ ಬಹುಧಾ ಯುಧಿ|

07080032c ನಾನಾದಿಗ್ಭ್ಯಃ ಸಮಾಹೂತಾಃ ಸಹಯಾಃ ಸರಥದ್ವಿಪಾಃ||

ನಿನ್ನ ಅಪರಾಧದಿಂದಾಗಿ ನಾನಾ ದಿಕ್ಕುಗಳಿಂದ ಆಹ್ವಾನಿತರಾದ ಬಹಳಷ್ಟು ನರರು ರಥ-ಕುದುರೆ-ಆನೆಗಳೊಂದಿಗೆ ಯುದ್ಧದಲ್ಲಿ ಹತರಾದರು.

07080033a ತೇಷಾಮಾಸೀದ್ವ್ಯತಿಕ್ಷೇಪೋ ಗರ್ಜತಾಮಿತರೇತರಂ|

07080033c ದುರ್ಯೋಧನಮುಖಾನಾಂ ಚ ಪಾಂಡೂನಾಂ ಋಷಭಸ್ಯ ಚ||

ಇತರೇತರರ ಮೇಲೆ ಗುರಿಯಿಟ್ಟು ಗರ್ಜಿಸುತ್ತಿರುವ ದುರ್ಯೋಧನ ಪ್ರಮಖರ ಮತ್ತು ಪಾಂಡವ ವೃಷಭನ ಮಧ್ಯೆ ಅತಿ ಘೋರ ಯುದ್ಧವು ನಡೆಯಿತು.

07080034a ತತ್ರಾದ್ಭುತಂ ಪರಂ ಚಕ್ರೇ ಕೌಂತೇಯಃ ಕೃಷ್ಣಸಾರಥಿಃ|

07080034c ಯದೇಕೋ ಬಹುಭಿಃ ಸಾರ್ಧಂ ಸಮಾಗಚ್ಚದಭೀತವತ್||

ಕೃಷ್ಣಸಾರಥಿ ಕೌಂತೇಯನು ಒಬ್ಬನೇ ಅನೇಕರೊಂದಿಗೆ ಭಯಗೊಳ್ಳದೇ ಹೋರಾಡಿ ಅಲ್ಲಿ ಪರಮ ಅದ್ಭುತವಾದುದನ್ನು ಮಾಡಿದನು.

07080035a ಅಶೋಭತ ಮಹಾಬಾಹುರ್ಗಾಂಡೀವಂ ವಿಕ್ಷಿಪನ್ಧನುಃ|

07080035c ಜಿಗೀಷುಸ್ತಾನ್ನರವ್ಯಾಘ್ರಾಂ ಜಿಘಾಂಸುಶ್ಚ ಜಯದ್ರಥಂ||

ಆ ನರವ್ಯಾಘ್ರರನ್ನು ಗೆಲ್ಲಲು ಬಯಸಿದ ಜಯದ್ರಥನನ್ನು ಕೊಲ್ಲಲು ಬಯಸಿದ ಆ ಮಹಾಬಾಹುವು ಗಾಂಡೀವ ಧನುಸ್ಸನ್ನು ಸೆಳೆಯುತ್ತಾ ಶೋಭಿಸಿದನು.

07080036a ತತ್ರಾರ್ಜುನೋ ಮಹಾರಾಜ ಶರೈರ್ಮುಕ್ತೈಃ ಸಹಸ್ರಶಃ|

07080036c ಅದೃಶ್ಯಾನಕರೋದ್ಯೋಧಾಂಸ್ತಾವಕಾಂ ಶತ್ರುತಾಪನಃ||

ಮಹಾರಾಜ! ಅಲ್ಲಿ ಶತ್ರುತಾಪನ ಅರ್ಜುನನು ಪ್ರಯೋಗಿಸಿದ ಸಹಸ್ರಾರು ಶರಗಳು ನಿನ್ನವರ ಯೋಧರೇ ಕಾಣದಂತೆ ಮಾಡಿದವು.

07080037a ತತಸ್ತೇಽಪಿ ನರವ್ಯಾಘ್ರಾಃ ಪಾರ್ಥಂ ಸರ್ವೇ ಮಹಾರಥಾಃ|

07080037c ಅದೃಶ್ಯಂ ಸಮರೇ ಚಕ್ರುಃ ಸಾಯಕೌಘೈಃ ಸಮಂತತಃ||

ಆಗ ಆ ಮಹಾರಥ ನರವ್ಯಾಘ್ರರೆಲ್ಲರೂ ಕೂಡ ಸಾಯಕಗಳಿಂದ ಎಲ್ಲಕಡೆ ಸಮರದಲ್ಲಿ ಪಾರ್ಥನನ್ನು ಮುಚ್ಚಿ ಅದೃಶ್ಯನನ್ನಾಗಿಸಿದರು.

07080038a ಸಂವೃತೇ ನರಸಿಂಹೈಸ್ತೈಃ ಕುರೂಣಾಂ ಋಷಭೇಽರ್ಜುನೇ|

07080038c ಮಹಾನಾಸೀತ್ಸಮುದ್ಧೂತಸ್ತಸ್ಯ ಸೈನ್ಯಸ್ಯ ನಿಸ್ವನಃ||

ಕುರುಗಳ ಋಷಭ ಅರ್ಜುನನನ್ನು ಆ ನರಸಿಂಹರು ಸುತ್ತುವರೆದಿರಲು ಆಗ ಆ ಸೇನೆಯ ಮಧ್ಯದಲ್ಲಿ ದೊಡ್ಡದಾದ ಕೋಲಾಹಲ ಶಬ್ಧವೆದ್ದಿತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಧ್ವಜವರ್ಣನೇ ಆಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಧ್ವಜವರ್ಣನ ಎನ್ನುವ ಎಂಭತ್ತನೇ ಅಧ್ಯಾಯವು.

Related image

Comments are closed.