Drona Parva: Chapter 79

ದ್ರೋಣ ಪರ್ವ: ಜಯದ್ರಥವಧ ಪರ್ವ

೭೯

ಅರ್ಜುನನೊಂದಿಗೆ ಎಂಟು ಮಹಾರಥರ - ಭೂರಿಶ್ರವ, ಶಲ, ಕರ್ಣ, ವೃಷಸೇನ, ಜಯದ್ರಥ, ಕೃಪ, ಶಲ್ಯ ಮತ್ತು ಅಶ್ವತ್ಥಾಮ – ಯುದ್ಧ (೧-೩೩).

07079001 ಸಂಜಯ ಉವಾಚ|

07079001a ತಾವಕಾಸ್ತು ಸಮೀಕ್ಷ್ಯೈವ ವೃಷ್ಣ್ಯಂಧಕಕುರೂತ್ತಮೌ|

07079001c ಪ್ರಾಗತ್ವರಂ ಜಿಘಾಂಸಂತಸ್ತಥೈವ ವಿಜಯಃ ಪರಾನ್||

ಸಂಜಯನು ಹೇಳಿದನು: “ವೃಷ್ಣಿ-ಅಂಧಕ-ಮತ್ತು ಕುರು ಉತ್ತಮರನ್ನು ನೋಡಿ ನಿನ್ನವರು ಅವರನ್ನು ಕೊಲ್ಲಲು ನಾಮುಂದು ತಾಮುಂದು ಎಂದು ಮುನ್ನುಗ್ಗಲು ವಿಜಯನೂ ಶತ್ರುಗಳ ಮೇಲೆ ಎರಗಿದನು.

07079002a ಸುವರ್ಣಚಿತ್ರೈರ್ವೈಯಾಘ್ರೈಃ ಸ್ವನವದ್ಭಿರ್ಮಹಾರಥೈಃ|

07079002c ದೀಪಯಂತೋ ದಿಶಃ ಸರ್ವಾ ಜ್ವಲದ್ಭಿರಿವ ಪಾವಕೈಃ||

07079003a ರುಕ್ಮಪೃಷ್ಠೈಶ್ಚ ದುಷ್ಪ್ರೇಕ್ಷ್ಯೈಃ ಕಾರ್ಮುಕೈಃ ಪೃಥಿವೀಪತೇ|

07079003c ಕೂಜದ್ಭಿರತುಲಾನ್ನಾದಾನ್ರೋಷಿತೈರುರಗೈರಿವ||

07079004a ಭೂರಿಶ್ರವಾಃ ಶಲಃ ಕರ್ಣೋ ವೃಷಸೇನೋ ಜಯದ್ರಥಃ|

07079004c ಕೃಪಶ್ಚ ಮದ್ರರಾಜಶ್ಚ ದ್ರೌಣಿಶ್ಚ ರಥಿನಾಂ ವರಃ||

07079005a ತೇ ಪಿಬಂತ ಇವಾಕಾಶಮಶ್ವೈರಷ್ಟೌ ಮಹಾರಥಾಃ|

07079005c ವ್ಯರಾಜಯನ್ದಶ ದಿಶೋ ವೈಯಾಘ್ರೈರ್ಹೇಮಚಂದ್ರಕೈಃ||

ಪೃಥಿವೀಪತೇ! ಸುವರ್ಣ ಚಿತ್ರಗಳಿಂದ, ವ್ಯಾಘ್ರಚರ್ಮಗಳಿಂದ ಅಲಂಕೃತಗೊಂಡ, ಉತ್ತಮ ಶಬ್ಧಮಾಡುತ್ತಿರುವ ಮಹಾರಥಗಳಲ್ಲಿ, ಎಲ್ಲ ದಿಕ್ಕುಗಳನ್ನೂ ಪ್ರಜ್ವಲಿಸುತ್ತಿರುವ ಪಾವಕನಂತೆ ಬೆಳಗಿಸುತ್ತಾ, ಬಂಗಾರದ ಹಿಡಿಯನ್ನುಳ್ಳ ಕಾರ್ಮುಕಗಳನ್ನು ಎತ್ತಿ ತೋರಿಸುತ್ತಾ, ಸರಿಸಾಟಿಯಿಲ್ಲದ ಕೂಗುಗಳನ್ನು ಕೂಗುತ್ತಾ, ಕ್ರುದ್ಧರಾದ ಕುದುರೆಗಳಂತೆ ಭೂರಿಶ್ರವ, ಶಲ, ಕರ್ಣ, ವೃಷಸೇನ, ಜಯದ್ರಥ, ಕೃಪ, ಮದ್ರರಾಜ, ಮತ್ತು ರಥಿಗಳಲ್ಲಿ ಶ್ರೇಷ್ಠ ದ್ರೌಣಿ ಈ ಎಂಟು ಮಹಾರಥರು ಇಡೀ ಆಕಾಶವನ್ನೇ ಕುಡಿದು ಬಿಡುತ್ತಾರೋ ಎನ್ನುವಂತೆ ವೈಯಾಘ್ರ-ಹೇಮಚಂದ್ರಕಗಳಿಂದ ದಶ-ದಿಶಗಳನ್ನೂ ಬೆಳಗಿಸಿದರು.

07079006a ತೇ ದಂಶಿತಾಃ ಸುಸಂರಬ್ಧಾ ರಥೈರ್ಮೇಘೌಘನಿಸ್ವನೈಃ|

07079006c ಸಮಾವೃಣ್ವನ್ದಿಶಃ ಸರ್ವಾಃ ಪಾರ್ಥಂ ಚ ವಿಶಿಖೈಃ ಶಿತೈಃ||

ತುಂಬಾ ಕುಪಿತರಾಗಿದ್ದ ಆ ಕವಚಧಾರಿಗಳು ಮೋಡಗಳ ಗುಂಪುಗಳಂತೆ ಗುಡುಗುತ್ತಿದ್ದ ರಥಗಳಲ್ಲಿ ಎಲ್ಲ ದಿಕ್ಕುಗಳನ್ನೂ ಪಾರ್ಥನನ್ನೂ ಹರಿತ ವಿಶಿಖಗಳಿಂದ ಮುಚ್ಚಿಬಿಟ್ಟರು.

07079007a ಕೌಲೂತಕಾ ಹಯಾಶ್ಚಿತ್ರಾ ವಹಂತಸ್ತಾನ್ಮಹಾರಥಾನ್|

07079007c ವ್ಯಶೋಭಂತ ತದಾ ಶೀಘ್ರಾ ದೀಪಯಂತೋ ದಿಶೋ ದಶ||

ಆ ಮಹಾರಥರನ್ನು ಕೊಂಡೊಯ್ಯುತ್ತಿದ್ದ ಉತ್ತಮ ಥಳಿಯ ಸುಂದರ ಶೀಘ್ರ ಕುದುರೆಗಳು ಹತ್ತು ದಿಕ್ಕುಗಳನ್ನೂ ಬೆಳಗಿಸುತ್ತಿರುವಂತೆ ಪ್ರಕಾಶಿಸುತ್ತಿದ್ದವು.

07079008a ಆಜಾನೇಯೈರ್ಮಹಾವೇಗೈರ್ನಾನಾದೇಶಸಮುತ್ಥಿತೈಃ|

07079008c ಪಾರ್ವತೀಯೈರ್ನದೀಜೈಶ್ಚ ಸೈಂಧವೈಶ್ಚ ಹಯೋತ್ತಮೈಃ||

ಮಹಾವೇಗವುಳ್ಳವುಗಳಾಗಿದ್ದ ಆ ಉತ್ತಮ ಕುದುರೆಗಳು ನಾನಾ ದೇಶಗಳಲ್ಲಿ ಹುಟ್ಟಿದ್ದವು; ಪರ್ವತಗಳಲ್ಲಿ, ನದಿಗಳಲ್ಲಿ ಮತ್ತು ಸಿಂಧುದೇಶಗಳಲ್ಲಿ ಹುಟ್ಟಿದ್ದವು.

07079009a ಕುರುಯೋಧವರಾ ರಾಜಂಸ್ತವ ಪುತ್ರಂ ಪರೀಪ್ಸವಃ|

07079009c ಧನಂಜಯರಥಂ ಶೀಘ್ರಂ ಸರ್ವತಃ ಸಮುಪಾದ್ರವನ್||

ರಾಜನ್! ನಿನ್ನ ಮಗನನ್ನು ರಕ್ಷಿಸುವ ಕುರುಯೋಧ ಶ್ರೇಷ್ಠರು ಶೀಘ್ರದಲ್ಲಿಯೇ ಧನಂಜಯನ ರಥವನ್ನು ಎಲ್ಲ ಕಡೆಗಳಿಂದ ಸುತ್ತುವರೆದರು.

07079010a ತೇ ಪ್ರಗೃಹ್ಯ ಮಹಾಶಂಖಾನ್ದಧ್ಮುಃ ಪುರುಷಸತ್ತಮಾಃ|

07079010c ಪೂರಯಂತೋ ದಿವಂ ರಾಜನ್ಪೃಥಿವೀಂ ಚ ಸಸಾಗರಾಂ||

ರಾಜನ್! ಆ ಪುರುಷಸತ್ತಮರು ಮಹಾ ಶಂಖಗಳನ್ನು ತೆಗೆದುಕೊಂಡು ಸಾಗರಗಳೊಂದಿಗೆ ಪೃಥ್ವಿಯನ್ನೂ ದಿವವನ್ನೂ ತುಂಬುತ್ತಾ ಊದಿದರು.

07079011a ತಥೈವ ದಧ್ಮತುಃ ಶಂಖೌ ವಾಸುದೇವಧನಂಜಯೌ|

07079011c ಪ್ರವರೌ ಸರ್ವಭೂತಾನಾಂ ಸರ್ವಶಂಖವರೌ ಭುವಿ|

07079011e ದೇವದತ್ತಂ ಚ ಕೌಂತೇಯಃ ಪಾಂಚಜನ್ಯಂ ಚ ಕೇಶವಃ||

ಹಾಗೆಯೇ ಸರ್ವಭೂತಗಳಲ್ಲಿ ಶ್ರೇಷ್ಠರಾದ ವಾಸುದೇವ ಧನಂಜಯರು ಭುವಿಯಲ್ಲಿರುವ ಎಲ್ಲ ಶಂಖಗಳಲ್ಲಿ ಶ್ರೇಷ್ಠವಾದ ಶಂಖಗಳನ್ನು ಕೌಂತೇಯನು ದೇವದತ್ತವನ್ನೂ ಕೇಶವನು ಪಾಂಚಜನ್ಯವನ್ನೂ ಊದಿದರು.

07079012a ಶಬ್ದಸ್ತು ದೇವದತ್ತಸ್ಯ ಧನಂಜಯಸಮೀರಿತಃ|

07079012c ಪೃಥಿವೀಂ ಚಾಂತರಿಕ್ಷಂ ಚ ದಿಶಶ್ಚೈವ ಸಮಾವೃಣೋತ್||

ಧನಂಜಯನು ಊದಿದ ದೇವದತ್ತದ ಶಬ್ಧವು ಪೃಥ್ವಿಯನ್ನೂ, ಅಂತರಿಕ್ಷವನ್ನೂ, ಮತ್ತು ದಿಕ್ಕುಗಳನ್ನೂ ತುಂಬಿತು.

07079013a ತಥೈವ ಪಾಂಚಜನ್ಯೋಽಪಿ ವಾಸುದೇವಸಮೀರಿತಃ|

07079013c ಸರ್ವಶಬ್ದಾನತಿಕ್ರಮ್ಯ ಪೂರಯಾಮಾಸ ರೋದಸೀ||

ಹಾಗೆಯೇ ವಾಸುದೇವನು ಊದಿದ ಪಾಂಚಜನ್ಯವೂ ಕೂಡ ಎಲ್ಲ ಶಬ್ಧಗಳನ್ನೂ ಮೀರಿಸಿ ಭೂಮಿ ಅಂತರಿಕ್ಷಗಳನ್ನು ತುಂಬಿತು.

07079014a ತಸ್ಮಿಂಸ್ತಥಾ ವರ್ತಮಾನೇ ದಾರುಣೇ ನಾದಸಂಕುಲೇ|

07079014c ಭೀರೂಣಾಂ ತ್ರಾಸಜನನೇ ಶೂರಾಣಾಂ ಹರ್ಷವರ್ಧನೇ||

07079015a ಪ್ರವಾದಿತಾಸು ಭೇರೀಷು ಝರ್ಝರೇಷ್ವಾನಕೇಷು ಚ|

07079015c ಮೃದಂಗೇಷು ಚ ರಾಜೇಂದ್ರ ವಾದ್ಯಮಾನೇಷ್ವನೇಕಶಃ||

ರಾಜೇಂದ್ರ! ಹಾಗೆ ದಾರುಣವಾದ ನಾದಸಂಕುಲವು ನಡೆಯುತ್ತಿರಲು - ಭೇರಿಗಳು, ಝರ್ಝರಗಳು, ಅನಕಗಳು, ಮೃದಂಗಗಳು ಮತ್ತು ಅನೇಕ ವಾದ್ಯಗಳು ಬಾರಿಸಲ್ಪಡಲು - ಹೇಡಿಗಳಿಗೆ ಭಯವುಂಟಾಯಿತು ಮತ್ತು ಶೂರರಿಗೆ ಹರ್ಷವು ಹೆಚ್ಚಾಯಿತು.

07079016a ಮಹಾರಥಸಮಾಖ್ಯಾತಾ ದುರ್ಯೋಧನಹಿತೈಷಿಣಃ|

07079016c ಅಮೃಷ್ಯಮಾಣಾಸ್ತಂ ಶಬ್ದಂ ಕ್ರುದ್ಧಾಃ ಪರಮಧನ್ವಿನಃ|

07079016e ನಾನಾದೇಶ್ಯಾ ಮಹೀಪಾಲಾಃ ಸ್ವಸೈನ್ಯಪರಿರಕ್ಷಿಣಃ||

07079017a ಅಮರ್ಷಿತಾ ಮಹಾಶಂಖಾನ್ದಧ್ಮುರ್ವೀರಾ ಮಹಾರಥಾಃ|

07079017c ಕೃತೇ ಪ್ರತಿಕರಿಷ್ಯಂತಃ ಕೇಶವಸ್ಯಾರ್ಜುನಸ್ಯ ಚ||

ಅಲ್ಲಿ ಸೇರಿದ್ದ ದುರ್ಯೋಧನನ ಹಿತೈಷಿಣಿಗಳಾದ, ತಮ್ಮ ಸೇನೆಗಳನ್ನೂ ಪರಿರಕ್ಷಿಸುತ್ತಿದ್ದ ನಾನಾ ದೇಶದ ಮಹೀಪಾಲ ಮಹಾರಥ ವೀರರು ಆ ಪರಮಧನ್ವಿಯ ಶಬ್ಧವನ್ನು ಸಹಿಸಲಾರದೇ ಕ್ರುದ್ಧರಾಗಿ ಅಸಹನೆಯಿಂದ ಕೇಶವಾರ್ಜುನರನ್ನು ಮೀರಿಸಬೇಕೆಂದು ತಮ್ಮ ತಮ್ಮ ಶಂಖಗಳನ್ನು ಊದಿದರು.

07079018a ಬಭೂವ ತವ ತತ್ಸೈನ್ಯಂ ಶಂಖಶಬ್ದಸಮೀರಿತಂ|

07079018c ಉದ್ವಿಗ್ನರಥನಾಗಾಶ್ವಮಸ್ವಸ್ಥಮಿವ ಚಾಭಿಭೋ||

ವಿಭೋ! ಶಂಖಶಬ್ಧದಿಂದ ತುಂಬಿಹೋದ ಸೈನ್ಯವು - ರಥ, ಆನೆ, ಕುದುರೆಗಳು ಅಸ್ವಸ್ಥರಾದವರಂತೆ ಉದ್ವಿಗ್ನಗೊಂಡರು.

07079019a ತತ್ಪ್ರಯುಕ್ತಮಿವಾಕಾಶಂ ಶೂರೈಃ ಶಂಖನಿನಾದಿತಂ|

07079019c ಬಭೂವ ಭೃಶಮುದ್ವಿಗ್ನಂ ನಿರ್ಘಾತೈರಿವ ನಾದಿತಂ||

ಶೂರರ ಆ ಶಂಖನಿನಾದವು ಆಕಾಶವೇ ಕೆಳಗೆ ಬಿದ್ದರೆ ಹೇಗೋ ಹಾಗೆ ಶಬ್ಧಗೊಳ್ಳಲು ತುಂಬಾ ಉದ್ವಿಗ್ನತೆಯುಂಟಾಯಿತು.

07079020a ಸ ಶಬ್ದಃ ಸುಮಹಾನ್ರಾಜನ್ದಿಶಃ ಸರ್ವಾ ವ್ಯನಾದಯತ್|

07079020c ತ್ರಾಸಯಾಮಾಸ ತತ್ಸೈನ್ಯಂ ಯುಗಾಂತ ಇವ ಸಂಭೃತಃ||

ರಾಜನ್! ಆ ಮಹಾ ಶಬ್ಧವು ಯುಗವೇ ಅಂತ್ಯವಾಗುತ್ತಿದೆಯೋ ಎನ್ನುವಂತೆ ಎಲ್ಲ ದಿಕ್ಕುಗಳಲ್ಲಿಯೂ ಮೊಳಗಿ ಆ ಸೈನ್ಯವನ್ನು ಭ್ರಾಂತಗೊಳಿಸಿ ತತ್ತರಿಸುವಂತೆ ಮಾಡಿತು.

07079021a ತತೋ ದುರ್ಯೋಧನೋಽಷ್ಟೌ ಚ ರಾಜಾನಸ್ತೇ ಮಹಾರಥಾಃ|

07079021c ಜಯದ್ರಥಸ್ಯ ರಕ್ಷಾರ್ಥಂ ಪಾಂಡವಂ ಪರ್ಯವಾರಯನ್||

ಆಗ ರಾಜನ್! ದುರ್ಯೋಧನ ಮತ್ತು ಆ ಎಂಟು ಮಂದಿಗಳು ಜಯದ್ರಥನನ್ನು ರಕ್ಷಿಸಲು ಪಾಂಡವನನ್ನು ಸುತ್ತುವರೆದರು.

07079022a ತತೋ ದ್ರೌಣಿಸ್ತ್ರಿಸಪ್ತತ್ಯಾ ವಾಸುದೇವಮತಾಡಯತ್|

07079022c ಅರ್ಜುನಂ ಚ ತ್ರಿಭಿರ್ಭಲ್ಲೈರ್ಧ್ವಜಮಶ್ವಾಂಶ್ಚ ಪಂಚಭಿಃ||

ಆಗ ದ್ರೌಣಿಯು ಎಪ್ಪತ್ತ್ಮೂರರಿಂದ ವಾಸುದೇವನನ್ನು ಹೊಡೆದನು. ಅರ್ಜುನನನ್ನು ಮೂರು ಭಲ್ಲೆಗಳಿಂದ ಮತ್ತು ಐದರಿಂದ ಅವನ ಧ್ವಜ-ಅಶ್ವಗಳನ್ನು ಹೊಡೆದನು.

07079023a ತಮರ್ಜುನಃ ಪೃಷತ್ಕಾನಾಂ ಶತೈಃ ಷಡ್ಭಿರತಾಡಯತ್|

07079023c ಅತ್ಯರ್ಥಮಿವ ಸಂಕ್ರುದ್ಧಃ ಪ್ರತಿವಿದ್ಧೇ ಜನಾರ್ದನೇ||

ಜನಾರ್ದನನಿಗೆ ಹೊಡೆದುದನ್ನು ನೋಡಿ ಸಂಕ್ರುದ್ಧನಾದ ಅರ್ಜುನನು ಅವನನ್ನು ನೂರಾ ಆರು ಬಾಣಗಳಿಂದ ಹೊಡೆದನು.

07079024a ಕರ್ಣಂ ದ್ವಾದಶಭಿರ್ವಿದ್ಧ್ವಾ ವೃಷಸೇನಂ ತ್ರಿಭಿಸ್ತಥಾ|

07079024c ಶಲ್ಯಸ್ಯ ಸಶರಂ ಚಾಪಂ ಮುಷ್ಟೌ ಚಿಚ್ಚೇದ ವೀರ್ಯವಾನ್||

ಕರ್ಣನನ್ನು ಹನ್ನೆರಡರಿಂದ ಮತ್ತು ವೃಷಸೇನನನ್ನು ಮೂರರಿಂದ ಹೊಡೆದು ಆ ವೀರ್ಯವಾನನು ಶಲ್ಯನ ಮುಷ್ಟಿಯಲ್ಲಿದ್ದ ಶರಗಳೊಡನೆ ಚಾಪವನ್ನು ಕತ್ತರಿಸಿದನು.

07079025a ಗೃಹೀತ್ವಾ ಧನುರನ್ಯತ್ತು ಶಲ್ಯೋ ವಿವ್ಯಾಧ ಪಾಂಡವಂ|

07079025c ಭೂರಿಶ್ರವಾಸ್ತ್ರಿಭಿರ್ಬಾಣೈರ್ಹೇಮಪುಂಖೈಃ ಶಿಲಾಶಿತೈಃ||

07079026a ಕರ್ಣೋ ದ್ವಾತ್ರಿಂಶತಾ ಚೈವ ವೃಷಸೇನಶ್ಚ ಪಂಚಭಿಃ|

07079026c ಜಯದ್ರಥಸ್ತ್ರಿಸಪ್ತತ್ಯಾ ಕೃಪಶ್ಚ ದಶಭಿಃ ಶರೈಃ|

07079026e ಮದ್ರರಾಜಶ್ಚ ದಶಭಿರ್ವಿವ್ಯಧುಃ ಫಲ್ಗುನಂ ರಣೇ||

ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಶಲ್ಯನು ಪಾಂಡವನನ್ನು ಹೊಡೆದನು. ಭೂರಿಶ್ರವನು ಮೂರು ಶಿಲಾಶಿತ ಹೇಮಪುಂಖಗಳ ಬಾಣಗಳಿಂದ, ಕರ್ಣನು ಮೂವತ್ತೆರಡರಿಂದ, ವೃಷಸೇನನು ಐದರಿಂದ, ಜಯದ್ರಥನು ಎಪ್ಪತ್ತ್ಮೂರರಿಂದ, ಕೃಪನು ಹತ್ತರಿಂದ ಮತ್ತು ಮದ್ರರಾಜನು ಹತ್ತು ಶರಗಳಿಂದ ಫಲ್ಗುನನನ್ನು ರಣದಲ್ಲಿ ಹೊಡೆದರು.

07079027a ತತಃ ಶರಾಣಾಂ ಷಷ್ಟ್ಯಾ ತು ದ್ರೌಣಿಃ ಪಾರ್ಥಮವಾಕಿರತ್|

07079027c ವಾಸುದೇವಂ ಚ ಸಪ್ತತ್ಯಾ ಪುನಃ ಪಾರ್ಥಂ ಚ ಪಂಚಭಿಃ||

ಆಗ ದ್ರೌಣಿಯು ಅರವತ್ತು ಶರಗಳಿಂದ ಪಾರ್ಥನನ್ನು, ಎಪ್ಪತ್ತರಿಂದ ವಾಸುದೇವನನ್ನೂ, ಪುನಃ ಪಾರ್ಥನನ್ನು ಐದರಿಂದ ಮುಚ್ಚಿದನು.

07079028a ಪ್ರಹಸಂಸ್ತು ನರವ್ಯಾಘ್ರಃ ಶ್ವೇತಾಶ್ವಃ ಕೃಷ್ಣಸಾರಥಿಃ|

07079028c ಪ್ರತ್ಯವಿಧ್ಯತ್ಸ ತಾನ್ಸರ್ವಾನ್ದರ್ಶಯನ್ಪಾಣಿಲಾಘವಂ||

ನರವ್ಯಾಘ್ರ ಶ್ವೇತಾಶ್ವ ಕೃಷ್ಣಸಾರಥಿಯು ಜೋರಾಗಿ ನಕ್ಕು ಅವರೆಲ್ಲರನ್ನು ತಿರುಗಿ ಹೊಡೆದು ತನ್ನ ಹಸ್ತಲಾಘವವನ್ನು ಪ್ರದರ್ಶಿಸಿದನು.

07079029a ಕರ್ಣಂ ದ್ವಾದಶಭಿರ್ವಿದ್ಧ್ವಾ ವೃಷಸೇನಂ ತ್ರಿಭಿಃ ಶರೈಃ|

07079029c ಶಲ್ಯಸ್ಯ ಸಮರೇ ಚಾಪಂ ಮುಷ್ಟಿದೇಶೇ ನ್ಯಕೃಂತತ||

ಕರ್ಣನನ್ನು ಹನ್ನೆರಡು ಮತ್ತು ವೃಷಸೇನನನ್ನು ಮೂರು ಶರಗಳಿಂದ ಹೊಡೆದು ಸಮರದಲ್ಲಿ ಶಲ್ಯನ ಮುಷ್ಟಿದೇಶದಲ್ಲಿ ಅವನ ಚಾಪವನ್ನು ಕತ್ತರಿಸಿದನು.

07079030a ಸೌಮದತ್ತಿಂ ತ್ರಿಭಿರ್ವಿದ್ಧ್ವಾ ಶಲ್ಯಂ ಚ ದಶಭಿಃ ಶರೈಃ|

07079030c ಶಿತೈರಗ್ನಿಶಿಖಾಕಾರೈರ್ದ್ರೌಣಿಂ ವಿವ್ಯಾಧ ಚಾಷ್ಟಭಿಃ||

ಸೌಮದತ್ತಿಯನ್ನು ಮೂರರಿಂದ ಮತ್ತು ಶಲ್ಯನನ್ನು ಹತ್ತು ಶರಗಳಿಂದ ಹೊಡೆದು ದ್ರೌಣಿಯನ್ನು ಎಂಟು ಅಗ್ನಿಶಿಖೆಗಳಂತೆ ತೀಕ್ಷ್ಣವಾಗಿರುವ ಎಂಟರಿಂದ ಹೊಡೆದನು.

07079031a ಗೌತಮಂ ಪಂಚವಿಂಶತ್ಯಾ ಸೈಂಧವಂ ಚ ಶತೇನ ಹ|

07079031c ಪುನರ್ದ್ರೌಣಿಂ ಚ ಸಪ್ತತ್ಯಾ ಶರಾಣಾಂ ಸೋಽಭ್ಯತಾಡಯತ್||

ಗೌತಮನನ್ನು ಇಪ್ಪತ್ತೈದರಿಂದ, ಸೈಂಧವನನ್ನು ನೂರರಿಂದ ಮತ್ತೆ ಪುನಃ ದ್ರೌಣಿಯನ್ನು ಎಪ್ಪತ್ತು ಶರಗಳಿಂದ ಅವನು ಹೊಡೆದನು.

07079032a ಭೂರಿಶ್ರವಾಸ್ತು ಸಂಕ್ರುದ್ಧಃ ಪ್ರತೋದಂ ಚಿಚ್ಚಿದೇ ಹರೇಃ|

07079032c ಅರ್ಜುನಂ ಚ ತ್ರಿಸಪ್ತತ್ಯಾ ಬಾಣಾನಾಮಾಜಘಾನ ಹ||

ಭೂರಿಶ್ರವನಾದರೋ ಸಂಕ್ರುದ್ಧನಾಗಿ ಹರಿಯ ಬಾರಿಕೋಲನ್ನು ತುಂಡರಿಸಿ ಅರ್ಜುನನನ್ನು ಎಪ್ಪತ್ಮೂರು ಬಾಣಗಳಿಂದ ಹೊಡೆದನು.

07079033a ತತಃ ಶರಶತೈಸ್ತೀಕ್ಷ್ಣೈಸ್ತಾನರೀಂ ಶ್ವೇತವಾಹನಃ|

07079033c ಪ್ರತ್ಯಷೇಧದ್ದ್ರುತಂ ಕ್ರುದ್ಧೋ ಮಹಾವಾತೋ ಘನಾನಿವ||

ಆಗ ಶ್ವೇತವಾಹನನು ಕ್ರುದ್ಧನಾಗಿ ಭಿರುಗಾಳಿಯಿಂದ ಚಲಿಸಲ್ಪಟ್ಟ ಮೋಡಗಳಂತೆ ಶತ್ರುಗಳ ಮೇಲೆ ನೂರಾರು ತೀಕ್ಷ್ಣವಾದ ಶರಗಳನ್ನು ಸುರಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಂಕುಲಯುದ್ಧೇ ಏಕೋನಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ಎಪ್ಪತ್ತೊಂಭತ್ತನೇ ಅಧ್ಯಾಯವು.

Related image

Comments are closed.