Drona Parva: Chapter 78

ದ್ರೋಣ ಪರ್ವ: ಜಯದ್ರಥವಧ ಪರ್ವ

೭೮

ದುರ್ಯೋಧನನಿಗೆ ದ್ರೋಣನು ಕವಚವನ್ನು ತೊಡಿಸಿದ್ದಾನೆ ಎಂದು ಕೃಷ್ಣಾರ್ಜುನರು ಮಾತನಾಡಿಕೊಳ್ಳುವುದು (೧-೨೦). ಕವಚದ ಕುರಿತು ತಿಳಿದಿದ್ದ ಅರ್ಜುನನು ದುರ್ಯೋಧನನನ್ನು ಪರಾಜಯಗೊಳಿಸಿದುದು (೨೧-೪೬).

07078001 ಸಂಜಯ ಉವಾಚ|

07078001a ಏವಮುಕ್ತ್ವಾರ್ಜುನಂ ರಾಜಾ ತ್ರಿಭಿರ್ಮರ್ಮಾತಿಗೈಃ ಶರೈಃ|

07078001c ಪ್ರತ್ಯವಿಧ್ಯನ್ಮಹಾವೇಗೈಶ್ಚತುರ್ಭಿಶ್ಚತುರೋ ಹಯಾನ್||

ಸಂಜಯನು ಹೇಳಿದನು: “ಹೀಗೆ ಹೇಳಿ ರಾಜನು ಅರ್ಜುನನನ್ನು ಮೂರು ಮರ್ಮಾತಿಗ ಶರಗಳಿಂದ ಹೊಡೆದು ಮಹಾವೇಗದಿಂದ ನಾಲ್ಕು ಕುದುರೆಗಳನ್ನೂ ಹೊಡೆದನು.

07078002a ವಾಸುದೇವಂ ಚ ದಶಭಿಃ ಪ್ರತ್ಯವಿಧ್ಯತ್ಸ್ತನಾಂತರೇ|

07078002c ಪ್ರತೋದಂ ಚಾಸ್ಯ ಭಲ್ಲೇನ ಚಿತ್ತ್ವಾ ಭೂಮಾವಪಾತಯತ್||

ವಾಸುದೇವನನ್ನೂ ಅವನ ಎದೆಗೆ ಗುರಿಯಿಟ್ಟು ಹತ್ತು ಬಾಣಗಳಿಂದ ಹೊಡೆದು, ಭಲ್ಲದಿಂದ ಅವನ ಕೈಯಲ್ಲಿದ್ದ ಬಾರಿಕೋಲನ್ನು ಕಿತ್ತು ಭೂಮಿಗೆ ಬೀಳಿಸಿದನು.

07078003a ತಂ ಚತುರ್ದಶಭಿಃ ಪಾರ್ಥಶ್ಚಿತ್ರಪುಂಖೈಃ ಶಿಲಾಶಿತೈಃ|

07078003c ಅವಿಧ್ಯತ್ತೂರ್ಣಮವ್ಯಗ್ರಸ್ತೇಽಸ್ಯಾಭ್ರಶ್ಯಂತ ವರ್ಮಣಃ||

ತಕ್ಷಣವೇ ಪಾರ್ಥನು ಅವ್ಯಗ್ರನಾಗಿ ಹದಿನಾಲ್ಕು ಚಿತ್ರಪುಂಖಗಳುಳ್ಳ ಶಿಲಾಶಿತಗಳಿಂದ ಹೊಡೆಯಲು ಅವುಗಳನ್ನು ಅವನ ಕವಚವು ಹಿಂದಿರುಗಿಸಿತು.

07078004a ತೇಷಾಂ ವೈಫಲ್ಯಮಾಲೋಕ್ಯ ಪುನರ್ನವ ಚ ಪಂಚ ಚ|

07078004c ಪ್ರಾಹಿಣೋನ್ನಿಶಿತಾನ್ಬಾಣಾಂಸ್ತೇ ಚಾಭ್ರಶ್ಯಂತ ವರ್ಮಣಃ||

ಅವುಗಳನ್ನು ವಿಫಲವಾದುದನ್ನು ನೋಡಿ ಪುನಃ ಒಂಭತ್ತು ಮತ್ತು ಐದು ಪ್ರಾಣಗಳನ್ನು ಹಾರಿಸಬಲ್ಲ ನಿಶಿತ ಬಾಣಗಳನ್ನು ಪ್ರಯೋಗಿಸಲು ಅವೂ ಕೂಡ ಅವನ ಕವಚದಿಂದಾಗಿ ನಿರರ್ಥಕವಾದವು.

07078005a ಅಷ್ಟಾವಿಂಶತ್ತು ತಾನ್ಬಾಣಾನಸ್ತಾನ್ವಿಪ್ರೇಕ್ಷ್ಯ ನಿಷ್ಫಲಾನ್|

07078005c ಅಬ್ರವೀತ್ಪರವೀರಘ್ನಃ ಕೃಷ್ಣೋಽರ್ಜುನಮಿದಂ ವಚಃ||

ಆ ಇಪ್ಪತ್ತೆಂಟು ಬಾಣಗಳು ನಿಷ್ಫಲವಾದುದನ್ನು ನೋಡಿ ಪರವೀರಘ್ನ ಕೃಷ್ಣನು ಅರ್ಜುನನಿಗೆ ಇದನ್ನು ಹೇಳಿದನು:

07078006a ಅದೃಷ್ಟಪೂರ್ವಂ ಪಶ್ಯಾಮಿ ಶಿಲಾನಾಮಿವ ಸರ್ಪಣಂ|

07078006c ತ್ವಯಾ ಸಂಪ್ರೇಷಿತಾಃ ಪಾರ್ಥ ನಾರ್ಥಂ ಕುರ್ವಂತಿ ಪತ್ರಿಣಃ||

“ಪಾರ್ಥ! ಶಿಲೆಗಳು ಹರಿದುಹೋಗುವಂತೆ ಹಿಂದೆ ಕಂಡಿರದೇ ಇದ್ದುದನ್ನು ನಾನು ನೋಡುತ್ತಿದ್ದೇನೆ. ನೀನು ಪ್ರಯೋಗಿಸಿದ ಪತ್ರಿಗಳು ನಿರರ್ಥಕವಾಗುತ್ತಿವೆ.

07078007a ಕಚ್ಚಿದ್ಗಾಂಡೀವತಃ ಪ್ರಾಣಾಸ್ತಥೈವ ಭರತರ್ಷಭ|

07078007c ಮುಷ್ಟಿಶ್ಚ ತೇ ಯಥಾಪೂರ್ವಂ ಭುಜಯೋಶ್ಚ ಬಲಂ ತವ||

ಭರತರ್ಷಭ! ಗಾಂಡೀವದಲ್ಲಿದ್ದ ಪ್ರಾಣ ಮತ್ತು ಹಾಗೆಯೇ ನಿನ್ನ ಮುಷ್ಟಿ ಮತ್ತು ಭುಜಗಳ ಬಲವು ಮೊದಲಿನಂತೆಯೇ ಇದೆ ತಾನೇ?

07078008a ನ ಚೇದ್ವಿಧೇರಯಂ ಕಾಲಃ ಪ್ರಾಪ್ತಃ ಸ್ಯಾದದ್ಯ ಪಶ್ಚಿಮಃ|

07078008c ತವ ಚೈವಾಸ್ಯ ಶತ್ರೋಶ್ಚ ತನ್ಮಮಾಚಕ್ಷ್ವ ಪೃಚ್ಚತಃ||

ಇದು ನಿನ್ನ ಮತ್ತು ಈ ಶತ್ರುವಿನ ಕೊನೆಯ ಭೇಟಿಯಲ್ಲವೇ? ನಾನು ಕೇಳುತ್ತಿದ್ದೇನೆ. ಹೇಳು.

07078009a ವಿಸ್ಮಯೋ ಮೇ ಮಹಾನ್ಪಾರ್ಥ ತವ ದೃಷ್ಟ್ವಾ ಶರಾನಿಮಾನ್|

07078009c ವ್ಯರ್ಥಾನ್ನಿಪತತಃ ಸಂಖ್ಯೇ ದುರ್ಯೋಧನರಥಂ ಪ್ರತಿ||

ಪಾರ್ಥ! ಈ ರೀತಿ ರಣದಲ್ಲಿ ದುರ್ಯೋಧನನ ರಥದ ಕಡೆ ಕಳುಹಿಸಿದ ಈ ಶರಗಳು ವ್ಯರ್ಥವಾಗಿ ಬೀಳುತ್ತಿವೆಯೆಂದರೆ ನನಗೆ ಮಹಾ ವಿಸ್ಮಯವಾಗುತ್ತಿದೆ.

07078010a ವಜ್ರಾಶನಿಸಮಾ ಘೋರಾಃ ಪರಕಾಯಾವಭೇದಿನಃ|

07078010c ಶರಾಃ ಕುರ್ವಂತಿ ತೇ ನಾರ್ಥಂ ಪಾರ್ಥ ಕಾದ್ಯ ವಿಡಂಬನಾ||

ಪಾರ್ಥ! ಇಂದು ಇದೇನು ವಿಡಂಬನೆ! ವಜ್ರದಂತೆ ಘೋರವಾಗಿರುವ, ಶತ್ರುಗಳ ಕಾಯವನ್ನು ಭೇದಿಸಬಲ್ಲ ನಿನ್ನ ಈ ಶರಗಳು ಮಾಡಬೇಕಾದುದನ್ನು ಮಾಡುತ್ತಿಲ್ಲವಲ್ಲ!”

07078011 ಅರ್ಜುನ ಉವಾಚ|

07078011a ದ್ರೋಣೇನೈಷಾ ಮತಿಃ ಕೃಷ್ಣ ಧಾರ್ತರಾಷ್ಟ್ರೇ ನಿವೇಶಿತಾ|

07078011c ಅಂತೇ ವಿಹಿತಮಸ್ತ್ರಾಣಾಂ ಏತತ್ಕವಚಧಾರಣಂ||

ಅರ್ಜುನನು ಹೇಳಿದನು: “ಕೃಷ್ಣ! ನನಗನಿಸುತ್ತದೆ - ಧಾರ್ತರಾಷ್ಟ್ರನಿಗೆ ದ್ರೋಣನು ಕವಚವನ್ನು ತೊಡಿಸಿದ್ದಾನೆ. ಇವನು ಧರಿಸಿರುವ ಈ ಕವಚವು ಅಸ್ತ್ರಗಳಿಗೆ ಅಭೇದ್ಯವಾದುದು.

07078012a ಅಸ್ಮಿನ್ನಂತರ್ಹಿತಂ ಕೃಷ್ಣ ತ್ರೈಲೋಕ್ಯಮಪಿ ವರ್ಮಣಿ|

07078012c ಏಕೋ ದ್ರೋಣೋ ಹಿ ವೇದೈತದಹಂ ತಸ್ಮಾಚ್ಚ ಸತ್ತಮಾತ್||

ಕೃಷ್ಣ! ಈ ಕವಚದೊಳಗೆ ಮೂರು ಲೋಕಗಳೂ ಅಡಗಿವೆ. ದ್ರೋಣನೊಬ್ಬನಿಗೇ ಇದು ತಿಳಿದಿದೆ. ಮತ್ತು ಆ ಸತ್ತಮನಿಂದ ನಾನೂ ಇದನ್ನು ಕಲಿತಿದ್ದೇನೆ.

07078013a ನ ಶಕ್ಯಮೇತತ್ಕವಚಂ ಬಾಣೈರ್ಭೇತ್ತುಂ ಕಥಂ ಚನ|

07078013c ಅಪಿ ವಜ್ರೇಣ ಗೋವಿಂದ ಸ್ವಯಂ ಮಘವತಾ ಯುಧಿ||

ಗೋವಿಂದ! ಈ ಕವಚವನ್ನು ಬಾಣಗಳಿಂದ - ಯುದ್ಧದಲ್ಲಿ ಸ್ವಯಂ ಮಘವತನಿಗೂ ವಜ್ರದಿಂದ ಕೂಡ - ಎಂದೂ ಭೇದಿಸಲು ಸಾಧ್ಯವಿಲ್ಲ.

07078014a ಜಾನಂಸ್ತ್ವಮಪಿ ವೈ ಕೃಷ್ಣ ಮಾಂ ವಿಮೋಹಯಸೇ ಕಥಂ|

07078014c ಯದ್ವೃತ್ತಂ ತ್ರಿಷು ಲೋಕೇಷು ಯಚ್ಚ ಕೇಶವ ವರ್ತತೇ||

ಕೇಶವ! ಮೂರು ಲೋಕಗಳಲ್ಲಿ ನಡೆಯುವ ಎಲ್ಲವೂ ನಿನಗೆ ತಿಳಿದಿದ್ದರೂ ಏಕೆ ಹೀಗೆ ನನ್ನನ್ನು ಮೋಹಗೊಳಿಸುತ್ತಿರುವೆ ಕೃಷ್ಣ!

07078015a ತಥಾ ಭವಿಷ್ಯದ್ಯಚ್ಚೈವ ತತ್ಸರ್ವಂ ವಿದಿತಂ ತವ|

07078015c ನ ತ್ವೇವಂ ವೇದ ವೈ ಕಶ್ಚಿದ್ಯಥಾ ತ್ವಂ ಮಧುಸೂದನ||

ಹಾಗೆಯೇ ಮುಂದೆ ಆಗುವವೆಲ್ಲವೂ ನಿನಗೆ ತಿಳಿದೇ ಇದೆ. ಮಧುಸೂದನ! ನಿನಗೆ ತಿಳಿಯದೇ ಇರುವುದು ಯಾವುದೂ ಇಲ್ಲ.

07078016a ಏಷ ದುರ್ಯೋಧನಃ ಕೃಷ್ಣ ದ್ರೋಣೇನ ವಿಹಿತಾಮಿಮಾಂ|

07078016c ತಿಷ್ಠತ್ಯಭೀತವತ್ಸಂಖ್ಯೇ ಬಿಭ್ರತ್ಕವಚಧಾರಣಾಂ||

ಕೃಷ್ಣ! ಈ ದುರ್ಯೋಧನನು ದ್ರೋಣನು ತೊಡಿಸಿದ ಈ ಹೊಳೆಯುವ ಕವಚವನ್ನು ಧರಿಸಿ ರಣದಲ್ಲಿ ಭಯವಿಲ್ಲದೇ ನಿಂತಿದ್ದಾನೆ.

07078017a ಯತ್ತ್ವತ್ರ ವಿಹಿತಂ ಕಾರ್ಯಂ ನೈಷ ತದ್ವೇತ್ತಿ ಮಾಧವ|

07078017c ಸ್ತ್ರೀವದೇಷ ಬಿಭರ್ತ್ಯೇತಾಂ ಯುಕ್ತಾಂ ಕವಚಧಾರಣಾಂ||

ಆದರೆ ಆ ಕವಚವನ್ನು ಧರಿಸಿದವನು ಏನು ಮಾಡಬೇಕು ಎನ್ನುವುದು ಅವನಿಗೆ ತಿಳಿದಿಲ್ಲ ಮಾಧವ! ಸ್ತ್ರೀಯಂತೆ ಇವನು ಇದನ್ನು ಧರಿಸಿ ಮಿರುಗುತ್ತಿದ್ದಾನೆ ಅಷ್ಟೆ!

07078018a ಪಶ್ಯ ಬಾಹ್ವೋಶ್ಚ ಮೇ ವೀರ್ಯಂ ಧನುಷಶ್ಚ ಜನಾರ್ದನ|

07078018c ಪರಾಜಯಿಷ್ಯೇ ಕೌರವ್ಯಂ ಕವಚೇನಾಪಿ ರಕ್ಷಿತಂ||

ಜನಾರ್ದನ! ನನ್ನ ಬಾಹುಗಳ ಮತ್ತು ಧನುಸ್ಸಿನ ವೀರ್ಯವನ್ನು ನೋಡು! ಕವಚದಿಂದ ರಕ್ಷಿತನಾಗಿದ್ದರೂ ಕೂಡ ಕೌರವ್ಯನನ್ನು ಪರಾಜಯಗೊಳಿಸುತ್ತೇನೆ.

07078019a ಇದಮಂಗಿರಸೇ ಪ್ರಾದಾದ್ದೇವೇಶೋ ವರ್ಮ ಭಾಸ್ವರಂ|

07078019c ಪುನರ್ದದೌ ಸುರಪತಿರ್ಮಹ್ಯಂ ವರ್ಮ ಸಸಂಗ್ರಹಂ||

ಹೊಳೆಯುವ ಈ ಕವಚವನ್ನು ದೇವೇಶನು ಅಂಗಿರಸನಿಗೆ ಕೊಟ್ಟಿದ್ದನು. ಪುನಃ ಸುರಪತಿಯು ನನಗೆ ಈ ಕವಚವನ್ನು, ತೊಡುವ ಮಂತ್ರಗಳೊಡನೆ, ನನಗೆ ಕೊಟ್ಟಿದ್ದನು.

07078020a ದೈವಂ ಯದ್ಯಸ್ಯ ವರ್ಮೈತದ್ಬ್ರಹ್ಮಣಾ ವಾ ಸ್ವಯಂ ಕೃತಂ|

07078020c ನೈತದ್ಗೋಪ್ಸ್ಯತಿ ದುರ್ಬುದ್ಧಿಮದ್ಯ ಬಾಣಹತಂ ಮಯಾ||

ಈ ಕವಚವು ದೈವವಾಗಿದ್ದರೂ, ಸ್ವಯಂ ಬ್ರಹ್ಮನಿಂದ ನಿರ್ಮಿತವಾಗಿದ್ದರೂ, ನನ್ನ ಬಾಣಗಳಿಂದ ಹತನಾಗುವ ಈ ದುರ್ಬುದ್ಧಿಯನ್ನು ಇಂದು ರಕ್ಷಿಸುವುದಿಲ್ಲ!””

07078021 ಸಂಜಯ ಉವಾಚ|

07078021a ಏವಮುಕ್ತ್ವಾರ್ಜುನೋ ಬಾಣಾನಭಿಮಂತ್ರ್ಯ ವ್ಯಕರ್ಷಯತ್|

07078021c ವಿಕೃಷ್ಯಮಾಣಾಂಸ್ತೇನೈವಂ ಧನುರ್ಮಧ್ಯಗತಾಂ ಶರಾನ್|

07078021e ತಾನಸ್ಯಾಸ್ತ್ರೇಣ ಚಿಚ್ಚೇದ ದ್ರೌಣಿಃ ಸರ್ವಾಸ್ತ್ರಘಾತಿನಾ||

ಸಂಜಯನು ಹೇಳಿದನು: “ಹೀಗೆ ಹೇಳಿ ಅರ್ಜುನನು ಬಾಣಗಳನ್ನು ಅಭಿಮಂತ್ರಿಸಿ, ಶಿಂಜಿನಿಯನ್ನು ಎಳೆದು ಧನುಸ್ಸಿನ ಮಧ್ಯದಲ್ಲಿ ಹೂಡುತ್ತಿರಲು ದ್ರೌಣಿಯು ಆ ಶರಗಳನ್ನು ಸರ್ವಾಸ್ತ್ರಗಳನ್ನೂ ನಿರಸನಗೊಳಿಸಬಲ್ಲ ಅಸ್ತ್ರದಿಂದ ತುಂಡರಿಸಿದನು.

07078022a ತಾನ್ನಿಕೃತ್ತಾನಿಷೂನ್ದೃಷ್ಟ್ವಾ ದೂರತೋ ಬ್ರಹ್ಮವಾದಿನಾ|

07078022c ನ್ಯವೇದಯತ್ಕೇಶವಾಯ ವಿಸ್ಮಿತಃ ಶ್ವೇತವಾಹನಃ||

ದೂರದಿಂದಲೇ ಆ ಬ್ರಹ್ಮವಾದಿಯು ಅವುಗಳನ್ನು ಕತ್ತರಿಸಿದುದನ್ನು ನೋಡಿ ವಿಸ್ಮಿತನಾದ ಶ್ವೇತವಾಹನನು ಕೇಶವನಿಗೆ ನಿವೇದಿಸಿದನು:

07078023a ನೈತದಸ್ತ್ರಂ ಮಯಾ ಶಕ್ಯಂ ದ್ವಿಃ ಪ್ರಯೋಕ್ತುಂ ಜನಾರ್ದನ|

07078023c ಅಸ್ತ್ರಂ ಮಾಮೇವ ಹನ್ಯಾದ್ಧಿ ಪಶ್ಯ ತ್ವದ್ಯ ಬಲಂ ಮಮ||

“ಜನಾರ್ದನ! ಈ ಅಸ್ತ್ರವನ್ನು ನಾನು ಎರಡನೆಯ ಬಾರಿ ಪ್ರಯೋಗಿಸಲು ಶಕ್ಯನಿಲ್ಲ. ಈ ಅಸ್ತ್ರವು ನನ್ನನ್ನೇ ನನ್ನ ಬಲವನ್ನೇ ಕೊಂದುಬಿಡುತ್ತದೆ!”

07078024a ತತೋ ದುರ್ಯೋಧನಃ ಕೃಷ್ಣೌ ನವಭಿರ್ನತಪರ್ವಭಿಃ|

07078024c ಅವಿಧ್ಯತ ರಣೇ ರಾಜನ್ ಶರೈರಶೀವಿಷೋಪಮೈಃ|

ಆಗ ರಣದಲ್ಲಿ ರಾಜನ್! ದುರ್ಯೋಧನನು ಕೃಷ್ಣರಿಬ್ಬರನ್ನೂ ಒಂಭತ್ತು ಸರ್ಪಗಳ ವಿಷದಂತಿರುವ ನತಪರ್ವ ಶರಗಳಿಂದ ಹೊಡೆದನು.

07078024e ಭೂಯ ಏವಾಭ್ಯವರ್ಷಚ್ಚ ಸಮರೇ ಕೃಷ್ಣಪಾಂಡವೌ||

07078025a ಶರವರ್ಷೇಣ ಮಹತಾ ತತೋಽಹೃಷ್ಯಂತ ತಾವಕಾಃ|

07078025c ಚಕ್ರುರ್ವಾದಿತ್ರನಿನದಾನ್ಸಿಂಹನಾದರವಾಂಸ್ತಥಾ||

ಪುನಃ ಸಮರದಲ್ಲಿ ಕೃಷ್ಣ-ಪಾಂಡವರ ಮೇಲೆ ಶರಗಳನ್ನು ಸುರಿಸಿದನು. ಆ ಮಹಾ ಶರವರ್ಷದಿಂದ ನಿನ್ನವರು ಹರ್ಷಗೊಂಡರು. ಅವರು ವಾದ್ಯಗಳನ್ನು ಬಾರಿಸಿದರು ಮತ್ತು ಸಿಂಹನಾದವನ್ನು ಕೂಗಿದರು.

07078026a ತತಃ ಕ್ರುದ್ಧೋ ರಣೇ ಪಾರ್ಥಃ ಸೃಕ್ಕಣೀ ಪರಿಸಂಲಿಹನ್|

07078026c ನಾಪಶ್ಯತ ತತೋಽಸ್ಯಾಂಗಂ ಯನ್ನ ಸ್ಯಾದ್ವರ್ಮರಕ್ಷಿತಂ||

07078027a ತತೋಽಸ್ಯ ನಿಶಿತೈರ್ಬಾಣೈಃ ಸುಮುಕ್ತೈರಂತಕೋಪಮೈಃ|

07078027c ಹಯಾಂಶ್ಚಕಾರ ನಿರ್ದೇಹಾನುಭೌ ಚ ಪಾರ್ಷ್ಣಿಸಾರಥೀ||

ಆಗ ರಣದಲ್ಲಿ ಕ್ರುದ್ಧನಾಗಿ ಪಾರ್ಥನು ಕಟವಾಯಿಯನ್ನು ನೆಕ್ಕುತ್ತಾ ಕವಚವು ರಕ್ಷಿಸುತ್ತಿದ್ದ ಅವನ ಅಂಗಗಳನ್ನು ನೋಡದೆಯೇ ಉತ್ತಮವಾಗಿ ಹೂಡಿದ ಅಂತಕನಂತಿರುವ ನಿಶಿತ ಬಾಣಗಳಿಂದ ಅವನ ಎರಡು ಕುದುರೆಗಳನ್ನೂ ಪಾರ್ಷ್ಣಸಾರಥಿಗಳನ್ನೂ ನಿರ್ದೇಹರನ್ನಾಗಿಸಿದನು.

07078028a ಧನುರಸ್ಯಾಚ್ಚಿನಚ್ಚಿತ್ರಂ ಹಸ್ತಾವಾಪಂ ಚ ವೀರ್ಯವಾನ್|

07078028c ರಥಂ ಚ ಶಕಲೀಕರ್ತುಂ ಸವ್ಯಸಾಚೀ ಪ್ರಚಕ್ರಮೇ||

ಆ ವೀರ್ಯವಾನ್ ಸವ್ಯಸಾಚಿಯು ಅವನ ಚಿತ್ರ ಧನುಸ್ಸನ್ನೂ, ಹಸ್ತವಾಪವನ್ನೂ ಕತ್ತರಿಸಿ, ರಥವನ್ನೂ ಚೂರು ಚೂರು ಮಾಡಲು ಉಪಕ್ರಮಿಸಿದನು.

07078029a ದುರ್ಯೋಧನಂ ಚ ಬಾಣಾಭ್ಯಾಂ ತೀಕ್ಷ್ಣಾಭ್ಯಾಂ ವಿರಥೀಕೃತಂ|

07078029c ಅವಿಧ್ಯದ್ಧಸ್ತತಲಯೋರುಭಯೋರರ್ಜುನಸ್ತದಾ||

ಆಗ ತೀಕ್ಷ್ಣವಾದ ಎರಡು ಬಾಣಗಳಿಂದ ದುರ್ಯೋಧನನನ್ನು ವಿರಥನನ್ನಾಗಿ ಮಾಡಿ ಅರ್ಜುನನನು ಅವನ ಎರಡೂ ಅಂಗೈಗಳ ಮಧ್ಯದಲ್ಲಿ ಹೊಡೆದನು.

07078030a ತಂ ಕೃಚ್ಚ್ರಾಮಾಪದಂ ಪ್ರಾಪ್ತಂ ದೃಷ್ಟ್ವಾ ಪರಮಧನ್ವಿನಃ|

07078030c ಸಮಾಪೇತುಃ ಪರೀಪ್ಸಂತೋ ಧನಂಜಯಶರಾರ್ದಿತಂ||

ಆ ಪರಮಧನ್ವಿಯಿಂದ ಅವನು ಕಷ್ಟಹೊಂದಿದುದನ್ನು ನೋಡಿ ಧನಂಜಯನ ಶರಗಳಿಂದ ಪೀಡಿತನಾದ ಅವನನ್ನು ರಕ್ಷಿಸಲು ಮುಂದಾದರು.

07078031a ತೇ ರಥೈರ್ಬಹುಸಾಹಸ್ರೈಃ ಕಲ್ಪಿತೈಃ ಕುಂಜರೈರ್ಹಯೈಃ|

07078031c ಪದಾತ್ಯೋಘೈಶ್ಚ ಸಂರಬ್ಧೈಃ ಪರಿವವ್ರುರ್ಧನಂಜಯಂ||

ಅವರು ಅನೇಕ ಸಹಸ್ರ ಸಜ್ಜಾಗಿದ್ದ ರಥಗಳಿಂದ, ಕುದುರೆ-ಆನೆಗಳಿಂದ ಮತ್ತು ಸಂರಬ್ಧ ಪದಾತಿಗಳಿಂದ ಧನಂಜಯನನ್ನು ಸುತ್ತುವರೆದರು.

07078032a ಅಥ ನಾರ್ಜುನಗೋವಿಂದೌ ರಥೋ ವಾಪಿ ವ್ಯದೃಶ್ಯತ|

07078032c ಅಸ್ತ್ರವರ್ಷೇಣ ಮಹತಾ ಜನೌಘೈಶ್ಚಾಪಿ ಸಂವೃತೌ||

ಮಹಾ ಅಸ್ತ್ರವರ್ಷಗಳಿಂದ ಮತ್ತು ಜನರ ಗುಂಪುಗಳಿಂದ ಆವೃತರಾದ ಅರ್ಜುನ-ಗೋವಿಂದರಾಗಲೀ, ಅವರ ರಥವಾಗಲೀ ಕಾಣಿಸಲಿಲ್ಲ.

07078033a ತತೋಽರ್ಜುನೋಽಸ್ತ್ರವೀರ್ಯೇಣ ನಿಜಘ್ನೇ ತಾಂ ವರೂಥಿನೀಂ|

07078033c ತತ್ರ ವ್ಯಂಗೀಕೃತಾಃ ಪೇತುಃ ಶತಶೋಽಥ ರಥದ್ವಿಪಾಃ||

ಆಗ ಅರ್ಜುನನು ಅಸ್ತ್ರವೀರ್ಯದಿಂದ ಆ ವರೂಥಿಗಳನ್ನು ಸಂಹರಿಸಿದನು. ಅಲ್ಲಿ ನೂರಾರು ರಥಗಳೂ ಆನೆಗಳು ತುಂಡಾಗಿ ಬಿದ್ದವು.

07078034a ತೇ ಹತಾ ಹನ್ಯಮಾನಾಶ್ಚ ನ್ಯಗೃಹ್ಣಂಸ್ತಂ ರಥೋತ್ತಮಂ|

07078034c ಸ ರಥಸ್ತಂಭಿತಸ್ತಸ್ಥೌ ಕ್ರೋಶಮಾತ್ರಂ ಸಮಂತತಃ||

ಕೊಲ್ಲಲು ಬಂದವರು ಅವನ ಉತ್ತಮ ರಥದ ಸಮೀಪ ಬರುವ ಮೊದಲೇ ಹತರಾದರು. ಅವರ ರಥವು ಸುತ್ತುವರೆಯಲ್ಪಟ್ಟು ಒಂದು ಕ್ರೋಶ ದೂರದವರೆಗೆ ಹಾಗೆಯೇ ನಿಂತಿತ್ತು.

07078035a ತತೋಽರ್ಜುನಂ ವೃಷ್ಣಿವೀರಸ್ತ್ವರಿತೋ ವಾಕ್ಯಮಬ್ರವೀತ್|

07078035c ಧನುರ್ವಿಸ್ಫಾರಯಾತ್ಯರ್ಥಮಹಂ ಧ್ಮಾಸ್ಯಾಮಿ ಚಾಂಬುಜಂ||

ಆಗ ತ್ವರೆಮಾಡಿ ವೃಷ್ಣಿವೀರನು ಅರ್ಜುನನಿಗೆ ಹೇಳಿದನು: “ಧನುಸ್ಸನ್ನು ಟೇಂಕರಿಸು. ನಾನು ಶಂಖವನ್ನು ಊದುತ್ತೇನೆ.”

07078036a ತತೋ ವಿಸ್ಫಾರ್ಯ ಬಲವದ್ಗಾಂಡೀವಂ ಜಘ್ನಿವಾನ್ರಿಪೂನ್|

07078036c ಮಹತಾ ಶರವರ್ಷೇಣ ತಲಶಬ್ದೇನ ಚಾರ್ಜುನಃ||

ಆಗ ಅರ್ಜುನನು ಬಲವಾಗಿ ಗಾಂಡೀವವನ್ನು ಟೇಂಕರಿಸಿ ಮಹಾ ಶರವರ್ಷಗಳಿಂದ ಮತ್ತು ಚಪ್ಪಾಳೆಗಳಿಂದ ಶತ್ರುಗಳನ್ನು ಸಂಹರಿಸಿದನು.

07078037a ಪಾಂಚಜನ್ಯಂ ಚ ಬಲವದ್ದಧ್ಮೌ ತಾರೇಣ ಕೇಶವಃ|

07078037c ರಜಸಾ ಧ್ವಸ್ತಪಕ್ಷ್ಮಾಂತಃ ಪ್ರಸ್ವಿನ್ನವದನೋ ಭೃಶಂ||

ಧೂಳಿನಿಂದ ಮುಖವು ಮಸುಕಾಗಿದ್ದ ಕೇಶವನು ಜೋರಾಗಿ ಬಲವನ್ನುಪಯೋಗಿಸಿ ಪಾಂಚಜನ್ಯವನ್ನು ಊದಿದನು.

07078038a ತಸ್ಯ ಶಂಖಸ್ಯ ನಾದೇನ ಧನುಷೋ ನಿಸ್ವನೇನ ಚ|

07078038c ನಿಃಸತ್ತ್ವಾಶ್ಚ ಸಸತ್ತ್ವಾಶ್ಚ ಕ್ಷಿತೌ ಪೇತುಸ್ತದಾ ಜನಾಃ||

ಅವನ ಶಂಖದ ನಾದದಿಂದ ಮತ್ತು ಧನುಸ್ಸಿನ ನಿಸ್ವನದಿಂದ ಸತ್ತ್ವವಿಲ್ಲದ ಮತ್ತು ಸತ್ತ್ವವಿದ್ದ ಜನರು ನೆಲದ ಮೇಲೆ ಬಿದ್ದರು.

07078039a ತೈರ್ವಿಮುಕ್ತೋ ರಥೋ ರೇಜೇ ವಾಯ್ವೀರಿತ ಇವಾಂಬುದಃ|

07078039c ಜಯದ್ರಥಸ್ಯ ಗೋಪ್ತಾರಸ್ತತಃ ಕ್ಷುಬ್ಧಾಃ ಸಹಾನುಗಾಃ||

ಅವರಿಂದ ವಿಮುಕ್ತವಾದ ಅವರ ರಥವು ಗಾಳಿಯಿಂದ ತೂರಲ್ಪಟ್ಟ ಮೋಡಗಳಿಂದ ಹೊರಬಂದಿತು. ಆಗ ಜಯದ್ರಥನ ಗೋಪ್ತಾರರು ಅವರ ಅನುಯಾಯಿಗಳೊಂದಿಗೆ ತಲ್ಲಣಿಸಿದರು.

07078040a ತೇ ದೃಷ್ಟ್ವಾ ಸಹಸಾ ಪಾರ್ಥಂ ಗೋಪ್ತಾರಃ ಸೈಂಧವಸ್ಯ ತು|

07078040c ಚಕ್ರುರ್ನಾದಾನ್ಬಹುವಿಧಾನ್ಕಂಪಯಂತೋ ವಸುಂಧರಾಂ||

ಪಾರ್ಥನನ್ನು ನೋಡಿದೊಡನೆಯೇ ಸೈಂಧವನ ರಕ್ಷಕರು ವಸುಂಧರೆಯನ್ನು ನಡುಗಿಸುತ್ತಾ ಬಹುವಿಧದ ನಾದಗೈದರು.

07078041a ಬಾಣಶಬ್ದರವಾಂಶ್ಚೋಗ್ರಾನ್ವಿಮಿಶ್ರಾಂ ಶಂಖನಿಸ್ವನೈಃ|

07078041c ಪ್ರಾದುಶ್ಚಕ್ರುರ್ಮಹಾತ್ಮಾನಃ ಸಿಂಹನಾದರವಾನಪಿ||

ಬಾಣದ ಶಬ್ಧ, ಉಗ್ರ ಕೂಗುಗಳು ಶಂಖನಿಸ್ವನಗಳೊಂದಿಗೆ ಸೇರಲು ಆ ಮಹಾತ್ಮರು ಸಿಂಹನಾದಗಳನ್ನೂ ಕೂಗಿದರು.

07078042a ತಂ ಶ್ರುತ್ವಾ ನಿನದಂ ಘೋರಂ ತಾವಕಾನಾಂ ಸಮುತ್ಥಿತಂ|

07078042c ಪ್ರದಧ್ಮತುಸ್ತದಾ ಶಂಖೌ ವಾಸುದೇವಧನಂಜಯೌ||

ನಿಮ್ಮವರಿಂದ ಹೊರಹೊಮ್ಮಿದ ಆ ಘೋರ ನಿನಾದವನ್ನು ಕೇಳಿ ವಾಸುದೇವ-ಧನಂಜಯರು ಶಂಖಗಳನ್ನು ಊದಿದರು.

07078043a ತೇನ ಶಬ್ದೇನ ಮಹತಾ ಪೂರಿತೇಯಂ ವಸುಂಧರಾ|

07078043c ಸಶೈಲಾ ಸಾರ್ಣವದ್ವೀಪಾ ಸಪಾತಾಲಾ ವಿಶಾಂ ಪತೇ||

ವಿಶಾಂಪತೇ! ಆ ಮಹಾ ಶಬ್ಧದಿಂದ ಶೈಲ-ಸಾಗರ-ದ್ವೀಪ-ಪಾತಾಲಗಳೊಂದಿಗೆ ಈ ಭೂಮಿಯು ತುಂಬಿಕೊಂಡಿತು.

07078044a ಸ ಶಬ್ದೋ ಭರತಶ್ರೇಷ್ಠ ವ್ಯಾಪ್ಯ ಸರ್ವಾ ದಿಶೋ ದಶ|

07078044c ಪ್ರತಿಸಸ್ವಾನ ತತ್ರೈವ ಕುರುಪಾಂಡವಯೋರ್ಬಲೇ||

ಭರತಶ್ರೇಷ್ಠ! ಆ ಶಬ್ದವು ಸರ್ವ ದಶ ದಿಶಗಳನ್ನೂ ತಲುಪಿ ಅಲ್ಲಿಯೇ ಕುರು-ಪಾಂಡವರ ಸೇನೆಗಳಲ್ಲಿ ಪ್ರತಿಧ್ವನಿಸಿತು.

07078045a ತಾವಕಾ ರಥಿನಸ್ತತ್ರ ದೃಷ್ಟ್ವಾ ಕೃಷ್ಣಧನಂಜಯೌ|

07078045c ಸಂರಂಭಂ ಪರಮಂ ಪ್ರಾಪ್ತಾಸ್ತ್ವರಮಾಣಾ ಮಹಾರಥಾಃ||

ಅಲ್ಲಿ ನಿನ್ನವರಾದ ರಥಿಗಳನ್ನು ನೋಡಿ ಮಹಾರಥ ಕೃಷ್ಣ-ಧನಂಜಯರು ಪರಮ ಕುಪಿತರಾಗಿ ತ್ವರೆಮಾಡಿ ಮುಂದುವರೆದರು.

07078046a ಅಥ ಕೃಷ್ಣೌ ಮಹಾಭಾಗೌ ತಾವಕಾ ದೃಶ್ಯ ದಂಶಿತೌ|

07078046c ಅಭ್ಯದ್ರವಂತ ಸಂಕ್ರುದ್ಧಾಸ್ತದದ್ಭುತಮಿವಾಭವತ್||

ಆಗ ಮಹಾಭಾಗರಾದ ಕೃಷ್ಣರಿಬ್ಬರೂ ಕವಚಧಾರಿಗಳಾದ ನಿನ್ನವರನ್ನು ನೋಡಿ ಸಂಕ್ರುದ್ಧರಾಗಿ ಆಕ್ರಮಣಿಸಿದರು. ಅದೊಂದು ಅದ್ಭುತವಾಗಿತ್ತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದುರ್ಯೋಧನಪರಾಜಯೇ ಅಷ್ಠಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದುರ್ಯೋಧನಪರಾಜಯ ಎನ್ನುವ ಎಪ್ಪತ್ತೆಂಟನೇ ಅಧ್ಯಾಯವು.

Image result for flowers against white background

Comments are closed.