Drona Parva: Chapter 77

ದ್ರೋಣ ಪರ್ವ: ಜಯದ್ರಥವಧ ಪರ್ವ

೭೭

ಎದುರಾದ ದುರ್ಯೋಧನನನ್ನು ಕೊಲ್ಲಲು ಕೃಷ್ಣನು ಅರ್ಜುನನಿಗೆ ಹೇಳಿದುದು (೧-೧೮). ದುರ್ಯೋಧನನ ಮಾತು (೧೯-೩೮).

07077001 ವಾಸುದೇವ ಉವಾಚ|

07077001a ಸುಯೋಧನಮತಿಕ್ರಾಂತಮೇನಂ ಪಶ್ಯ ಧನಂಜಯ|

07077001c ಆಪದ್ಗತಮಿಮಂ ಮನ್ಯೇ ನಾಸ್ತ್ಯಸ್ಯ ಸದೃಶೋ ರಥಃ||

ವಾಸುದೇವನು ಹೇಳಿದನು: “ಧನಂಜಯ! ನಮ್ಮನ್ನು ಅತಿಕ್ರಮಿಸಿರುವ ಸುಯೋಧನನನ್ನು ನೋಡು! ಇದನ್ನು ಅತ್ಯದ್ಭುತವೆಂದು ಪರಿಗಣಿಸುತ್ತೇನೆ. ಇವನ ಸದೃಶನಾದ ರಥನಿಲ್ಲ!

07077002a ದೂರಪಾತೀ ಮಹೇಷ್ವಾಸಃ ಕೃತಾಸ್ತ್ರೋ ಯುದ್ಧದುರ್ಮದಃ|

07077002c ದೃಢಾಸ್ತ್ರಶ್ಚಿತ್ರಯೋಧೀ ಚ ಧಾರ್ತರಾಷ್ಟ್ರೋ ಮಹಾಬಲಃ||

ಈ ಧಾರ್ತರಾಷ್ಟ್ರನು ದೂರ ಬಾಣವನ್ನು ಬೀಳಿಸಬಲ್ಲ. ಮಹೇಷ್ವಾಸ. ಕೃತಾಸ್ತ್ರ. ಯುದ್ಧ ದುರ್ಮದ. ದೃಢಾಸ್ತ್ರ. ಚಿತ್ರಯೋಧೀ ಮತ್ತು ಮಹಾಬಲಶಾಲೀ.

07077003a ಅತ್ಯಂತಸುಖಸಂವೃದ್ಧೋ ಮಾನಿತಶ್ಚ ಮಹಾರಥೈಃ|

07077003c ಕೃತೀ ಚ ಸತತಂ ಪಾರ್ಥ ನಿತ್ಯಂ ದ್ವೇಷ್ಟಿ ಚ ಪಾಂಡವಾನ್||

ಪಾರ್ಥ! ಇವನು ಅತ್ಯಂತ ಸುಖದಲ್ಲಿ ಬೆಳೆದವನು. ಮಹಾರಥರಿಂದಲೂ ಗೌರವಿಸಲ್ಪಡುವವನು. ಯಶಸ್ವಿಯಾದ ಇವನು ನಿತ್ಯವೂ ಪಾಂಡವರನ್ನು ದ್ವೇಷಿಸುತ್ತಾ ಬಂದವನು.

07077004a ತೇನ ಯುದ್ಧಮಹಂ ಮನ್ಯೇ ಪ್ರಾಪ್ತಕಾಲಂ ತವಾನಘ|

07077004c ಅತ್ರ ವೋ ದ್ಯೂತಮಾಯಾತಂ ವಿಜಯಾಯೇತರಾಯ ವಾ||

ಅನಘ! ಅವನೊಂದಿಗೆ ನೀನು ಯುದ್ಧಮಾಡುವ ಸರಿಯಾದ ಸಮಯ ಬಂದೊದಗಿದೆಯೆಂದು ನನಗನ್ನಿಸುತ್ತದೆ. ಅಲ್ಲಿ ದ್ಯೂತದಲ್ಲಿ ಪಣವಿದ್ದಂತೆ ಇವನ ಮೇಲೆ ಜಯವಿದೆ ಅಥವಾ ಇನ್ನೊಂದಿದೆ.

07077005a ಅತ್ರ ಕ್ರೋಧವಿಷಂ ಪಾರ್ಥ ವಿಮುಂಚ ಚಿರಸಂಭೃತಂ|

07077005c ಏಷ ಮೂಲಮನರ್ಥಾನಾಂ ಪಾಂಡವಾನಾಂ ಮಹಾರಥಃ||

ಪಾರ್ಥ! ತುಂಬಾ ಸಮಯದಿಂದ ಸಂಗ್ರಹಿಸಿಟ್ಟುಕೊಂಡಿರುವ ನಿನ್ನ ಕ್ರೋಧವೆಂಬ ವಿಷವನ್ನು ಇವನ ಮೇಲೆ ಎರಚು. ಪಾಂಡವರ ಅನರ್ಥಗಳಿಗೆ ಈ ಮಹಾರಥನೇ ಮೂಲ.

07077006a ಸೋಽಯಂ ಪ್ರಾಪ್ತಸ್ತವಾಕ್ಷೇಪಂ ಪಶ್ಯ ಸಾಫಲ್ಯಮಾತ್ಮನಃ|

07077006c ಕಥಂ ಹಿ ರಾಜಾ ರಾಜ್ಯಾರ್ಥೀ ತ್ವಯಾ ಗಚ್ಚೇತ ಸಮ್ಯುಗಂ||

ಈಗ ಇವನು ನಿನ್ನ ಬಾಣಗಳ ಸಿಲುಕಿನಲ್ಲಿಯೇ ಇದ್ದಾನೆ. ನೋಡು. ನಿನ್ನನ್ನು ನೀನೇ ಸಾಫಲ್ಯನಾಗಿಸಿಕೋ! ರಾಜ್ಯವನ್ನು ಬಯಸುವ ಈ ರಾಜನು ರಣದಲ್ಲಿ ನಿನ್ನ ಎದುರಿಗೆ ಏಕೆ ಬಂದಿದ್ದಾನೆ?

07077007a ದಿಷ್ಟ್ಯಾ ತ್ವಿದಾನೀಂ ಸಂಪ್ರಾಪ್ತ ಏಷ ತೇ ಬಾಣಗೋಚರಂ|

07077007c ಸ ಯಥಾ ಜೀವಿತಂ ಜಹ್ಯಾತ್ತಥಾ ಕುರು ಧನಂಜಯ||

ಅದೃಷ್ಟ! ಇಂದು ಇವನು ನಿನ್ನ ಬಾಣಗಳಿಗೆ ಗೋಚರನಾಗಿ ಒದಗಿದ್ದಾನೆ. ಧನಂಜಯ! ಅವನ ಜೀವಿತವನ್ನು ಅಪಹರಿಸುವಂತೆ ಮಾಡು.

07077008a ಐಶ್ವರ್ಯಮದಸಮ್ಮೂಢೋ ನೈಷ ದುಃಖಮುಪೇಯಿವಾನ್|

07077008c ನ ಚ ತೇ ಸಮ್ಯುಗೇ ವೀರ್ಯಂ ಜಾನಾತಿ ಪುರುಷರ್ಷಭ||

ಪುರುಷರ್ಷಭ! ಐಶ್ವರ್ಯ ಮದದಿಂದ ಸಮ್ಮೂಢನಾಗಿರುವ ಇವನು ದುಃಖವೆನ್ನುವುದನ್ನೇ ಅನುಭವಿಸಿಲ್ಲ. ಅವನು ಸಂಯುಗದಲ್ಲಿ ನಿನ್ನ ವೀರ್ಯವನ್ನೂ ತಿಳಿದಿಲ್ಲ.

07077009a ತ್ವಾಂ ಹಿ ಲೋಕಾಸ್ತ್ರಯಃ ಪಾರ್ಥ ಸಸುರಾಸುರಮಾನುಷಾಃ|

07077009c ನೋತ್ಸಹಂತೇ ರಣೇ ಜೇತುಂ ಕಿಮುತೈಕಃ ಸುಯೋಧನಃ||

ಪಾರ್ಥ! ಸುರಾಸುರಮನುಷ್ಯರೊಡನೆ ಮೂರು ಲೋಕಗಳೂ ರಣದಲ್ಲಿ ನಿನ್ನನ್ನು ಜಯಿಸಲು ಉತ್ಸುಕರಾಗುವುದಿಲ್ಲ. ಇನ್ನು ಒಬ್ಬ ಸುಯೋಧನನೆಲ್ಲಿ?

07077010a ಸ ದಿಷ್ಟ್ಯಾ ಸಮನುಪ್ರಾಪ್ತಸ್ತವ ಪಾರ್ಥ ರಥಾಂತಿಕಂ|

07077010c ಜಹ್ಯೇನಂ ವೈ ಮಹಾಬಾಹೋ ಯಥಾ ವೃತ್ರಂ ಪುರಂದರಃ||

ಒಳ್ಳೆಯದಾಯಿತು ಪಾರ್ಥ! ಇವನು ನಿನ್ನ ರಥದ ಬಳಿ ಬಂದೊದಗಿದ್ದಾನೆ! ಮಹಾಬಾಹೋ! ಪುರಂದರನು ವೃತ್ರನನ್ನು ಹೇಗೋ ಹಾಗೆ ಇವನನ್ನು ಸಂಹರಿಸು!

07077011a ಏಷ ಹ್ಯನರ್ಥೇ ಸತತಂ ಪರಾಕ್ರಾಂತಸ್ತವಾನಘ|

07077011c ನಿಕೃತ್ಯಾ ಧರ್ಮರಾಜಂ ಚ ದ್ಯೂತೇ ವಂಚಿತವಾನಯಂ||

ಅನಘ! ಇವನು ಸತತವೂ ನಿಮಗೆ ಅನರ್ಥವನ್ನುಂಟುಮಾಡಲು ಮುಂದಿದ್ದವನು. ಮೋಸದಿಂದ ಇವನು ದ್ಯೂತದಲ್ಲಿ ಧರ್ಮರಾಜನನ್ನು ವಂಚಿಸಿದನು.

07077012a ಬಹೂನಿ ಸುನೃಶಂಸಾನಿ ಕೃತಾನ್ಯೇತೇನ ಮಾನದ|

07077012c ಯುಷ್ಮಾಸು ಪಾಪಮತಿನಾ ಅಪಾಪೇಷ್ವೇವ ನಿತ್ಯದಾ||

ಮಾನದ! ಅಪಾಪಿಗಳಾದ ನಿಮ್ಮ ಮೇಲೆ ಪಾಪಮತಿಯಾದ ಇವನು ನಿತ್ಯವೂ ಅನೇಕ ಅತಿಕ್ರೂರ ಕೃತ್ಯಗಳನ್ನು ಮಾಡುತ್ತಾ ಬಂದಿದ್ದಾನೆ.

07077013a ತಮನಾರ್ಯಂ ಸದಾ ಕ್ಷುದ್ರಂ ಪುರುಷಂ ಕಾಮಚಾರಿಣಂ|

07077013c ಆರ್ಯಾಂ ಯುದ್ಧೇ ಮತಿಂ ಕೃತ್ವಾ ಜಹಿ ಪಾರ್ಥಾವಿಚಾರಯನ್||

ಪಾರ್ಥ! ಯುದ್ಧದಲ್ಲಿ ಆರ್ಯನಂತೆ ನಿಶ್ಚಯವನ್ನು ಮಾಡಿ, ವಿಚಾರಮಾಡದೇ ಈ ಅನಾರ್ಯ, ಸದಾ ಕ್ಷುದ್ರನಾಗಿರುವ, ಬೇಕಾದಂತೆ ನಡೆದುಕೊಳ್ಳುವ ಪುರುಷನನ್ನು ಸಂಹರಿಸು!

07077014a ನಿಕೃತ್ಯಾ ರಾಜ್ಯಹರಣಂ ವನವಾಸಂ ಚ ಪಾಂಡವ|

07077014c ಪರಿಕ್ಲೇಶಂ ಚ ಕೃಷ್ಣಾಯಾ ಹೃದಿ ಕೃತ್ವಾ ಪರಾಕ್ರಮ||

ಪಾಂಡವ! ಮೋಸದಿಂದ ರಾಜ್ಯಹರಣ, ವನವಾಸ, ಕೃಷ್ಣೆಯ ಪರಿಕ್ಲೇಶ ಇವುಗಳನ್ನು ಹೃದಯದಲ್ಲಿಟ್ಟುಕೊಂಡು ಪರಾಕ್ರಮವನ್ನು ತೋರಿಸು!

07077015a ದಿಷ್ಟ್ಯೈಷ ತವ ಬಾಣಾನಾಂ ಗೋಚರೇ ಪರಿವರ್ತತೇ|

07077015c ಪ್ರತಿಘಾತಾಯ ಕಾರ್ಯಸ್ಯ ದಿಷ್ಟ್ಯಾ ಚ ಯತತೇಽಗ್ರತಃ||

ಅದೃಷ್ಟವಶಾತ್ ಅವನು ನಿನ್ನ ಬಾಣಗಳಿಗೆ ಗೋಚರಿಸಿಯೇ ಇದ್ದಾನೆ. ಇನ್ನೂ ಅದೃಷ್ಟವೆಂದರೆ ಅವನು ನಿನ್ನ ಕಾರ್ಯಕ್ಕೆ ವಿಘ್ನವನ್ನುಂಟು ಮಾಡಲು ನಿನ್ನ ಎದುರಿಗೇ ಬಂದು ನಿಂತಿದ್ದಾನೆ.

07077016a ದಿಷ್ಟ್ಯಾ ಜಾನಾತಿ ಸಂಗ್ರಾಮೇ ಯೋದ್ಧವ್ಯಂ ಹಿ ತ್ವಯಾ ಸಹ|

07077016c ದಿಷ್ಟ್ಯಾ ಚ ಸಫಲಾಃ ಪಾರ್ಥ ಸರ್ವೇ ಕಾಮಾ ಹಿ ಕಾಮಿತಾಃ||

ಅದೃಷ್ಟವಶಾತ್ ಅವನು ಸಂಗ್ರಾಮದಲ್ಲಿ ನಿನ್ನೊಡನೆ ಯುದ್ಧಮಾಡಬೇಕೆಂದು ತಿಳಿದುಕೊಂಡೇ ಬಂದಿದ್ದಾನೆ. ಪಾರ್ಥ! ಅದೃಷ್ಟವೆಂದರೆ ನೀನು ಬಯಸದೇ ಇದ್ದಿದ್ದರೂ ನಿನ್ನ ಬಯಕೆಗಳನ್ನು ಪೂರೈಸುವ ಸಮಯವು ಬಂದೊದಗಿದೆ.

07077017a ತಸ್ಮಾಜ್ಜಹಿ ರಣೇ ಪಾರ್ಥ ಧಾರ್ತರಾಷ್ಟ್ರಂ ಕುಲಾಧಮಂ|

07077017c ಯಥೇಂದ್ರೇಣ ಹತಃ ಪೂರ್ವಂ ಜಂಭೋ ದೇವಾಸುರೇ ಮೃಧೇ||

ಹಿಂದೆ ದೇವಾಸುರರ ಯುದ್ಧದಲ್ಲಿ ಇಂದ್ರನು ಜಂಭಾಸುರನನ್ನು ಹೇಗೆ ಕೊಂದನೋ ಹಾಗೆ ಪಾರ್ಥ! ನೀನು ರಣದಲ್ಲಿ ಈ ಕುಲಾಧಮ ಧಾರ್ತರಾಷ್ಟ್ರನನ್ನು ಸಂಹರಿಸು.

07077018a ಅಸ್ಮಿನ್ ಹತೇ ತ್ವಯಾ ಸೈನ್ಯಮನಾಥಂ ಭಿದ್ಯತಾಮಿದಂ|

07077018c ವೈರಸ್ಯಾಸ್ಯಾಸ್ತ್ವವಭೃಥೋ ಮೂಲಂ ಚಿಂಧಿ ದುರಾತ್ಮನಾಂ||

ಇವನು ಹತನಾಗಲು ನೀನು ಈ ಅನಾಧ ಸೇನೆಯನ್ನೂ ಭೇದಿಸು. ದುರಾತ್ಮರ ಮೂಲವಾಗಿರುವ ಇವನನ್ನು ಚಿಂದಿ ಚಿಂದಿ ಮಾಡಿ ವೈರದ ಅವಭೃತಸ್ನಾನವನ್ನು ಮಾಡು!””

07077019 ಸಂಜಯ ಉವಾಚ|

07077019a ತಂ ತಥೇತ್ಯಬ್ರವೀತ್ಪಾರ್ಥಃ ಕೃತ್ಯರೂಪಮಿದಂ ಮಮ|

07077019c ಸರ್ವಮನ್ಯದನಾದೃತ್ಯ ಗಚ್ಚ ಯತ್ರ ಸುಯೋಧನಃ||

ಸಂಜಯನು ಹೇಳಿದನು: “ಹಾಗೆಯೇ ಆಗಲೆಂದು ಪಾರ್ಥನು ಹೇಳಿದನು: “ನಾನು ಮಾಡಿ ತೋರಿಸಬೇಕಾದುದು ಇದು. ಬೇರೆ ಎಲ್ಲರನ್ನೂ ಕಡೆಗಣಿಸಿ ಸುಯೋಧನನಿರುವಲ್ಲಿಗೆ ಹೋಗು.

07077020a ಯೇನೈತದ್ದೀರ್ಘಕಾಲಂ ನೋ ಭುಕ್ತಂ ರಾಜ್ಯಮಕಂಟಕಂ|

07077020c ಅಪ್ಯಸ್ಯ ಯುಧಿ ವಿಕ್ರಮ್ಯ ಚಿಂದ್ಯಾಂ ಮೂರ್ಧಾನಮಾಹವೇ||

ದೀರ್ಘಕಾಲದವರೆಗೆ ಯಾವ ಕಂಟಕವೂ ಇಲ್ಲದೇ ನಮ್ಮ ರಾಜ್ಯವನ್ನು ಭೋಗಿಸಿದ ಇವನನ್ನು ರಣಮೂರ್ಧನಿಯಲ್ಲಿ ಯುದ್ಧದಲ್ಲಿ ವಿಕ್ರಮದಿಂದ ಕತ್ತರಿಸಿಬಿಡುತ್ತೇನೆ.

07077021a ಅಪಿ ತಸ್ಯಾ ಅನರ್ಹಾಯಾಃ ಪರಿಕ್ಲೇಶಸ್ಯ ಮಾಧವ|

07077021c ಕೃಷ್ಣಾಯಾಃ ಶಕ್ನುಯಾಂ ಗಂತುಂ ಪದಂ ಕೇಶಪ್ರಧರ್ಷಣೇ||

ಮಾಧವ! ಕಷ್ಟಗಳಿಗೆ ಅನರ್ಹಳಾಗಿದ್ದ ಕೃಷ್ಣೆಯ ಕೂದಲನ್ನೆಳೆದುದರ ಪ್ರತೀಕಾರವನ್ನು ನಾನು ಮಾಡಬಲ್ಲೆನೇ?”

07077022a ಇತ್ಯೇವಂ ವಾದಿನೌ ಹೃಷ್ಟೌ ಕೃಷ್ಣೌ ಶ್ವೇತಾನ್ ಹಯೋತ್ತಮಾನ್|

07077022c ಪ್ರೇಷಯಾಮಾಸತುಃ ಸಂಖ್ಯೇ ಪ್ರೇಪ್ಸಂತೌ ತಂ ನರಾಧಿಪಂ||

ಕೃಷ್ಣಬ್ಬರೂ ಹೃಷ್ಟರಾಗಿ ಹೀಗೆ ಮಾತನಾಡಿಕೊಳ್ಳುತ್ತಾ ಆ ಉತ್ತಮ ಶ್ವೇತಾಶ್ವಗಳನ್ನು ರಣದಲ್ಲಿ ಆ ನರಾಧಿಪನನ್ನೇ ತಮ್ಮ ಲಕ್ಷ್ಯವನ್ನಾಗಿರಿಸಿಕೊಳ್ಳಲು ಅವನಲ್ಲಿಗೆ ಹೋದರು.

07077023a ತಯೋಃ ಸಮೀಪಂ ಸಂಪ್ರಾಪ್ಯ ಪುತ್ರಸ್ತೇ ಭರತರ್ಷಭ|

07077023c ನ ಚಕಾರ ಭಯಂ ಪ್ರಾಪ್ತೇ ಭಯೇ ಮಹತಿ ಮಾರಿಷ||

ಭರತರ್ಷಭ! ಮಾರಿಷ! ಅವರು ಸಮೀಪಕ್ಕೆ ಬರಲು ನಿನ್ನ ಮಗನು ಮಹಾ ಭಯವು ಪ್ರಾಪ್ತವಾದರೂ ಸ್ವಲ್ಪವೂ ಭಯಪಡಲಿಲ್ಲ.

07077024a ತದಸ್ಯ ಕ್ಷತ್ರಿಯಾಸ್ತತ್ರ ಸರ್ವ ಏವಾಭ್ಯಪೂಜಯನ್|

07077024c ಯದರ್ಜುನಹೃಷೀಕೇಶೌ ಪ್ರತ್ಯುದ್ಯಾತೋಽವಿಚಾರಯನ್||

ಎದುರಾಗಿ ಬಂದಿರುವ ಅರ್ಜುನ-ಹೃಷೀಕೇಶರನ್ನು ವಿಚಾರ ಮಾಡದೇ ಎದುರಿಸಿದ ಅವನನ್ನು ಅಲ್ಲಿದ್ದ ಕ್ಷತ್ರಿಯರೆಲ್ಲರೂ ಪ್ರಶಂಸಿಸಿದರು.

07077025a ತತಃ ಸರ್ವಸ್ಯ ಸೈನ್ಯಸ್ಯ ತಾವಕಸ್ಯ ವಿಶಾಂ ಪತೇ|

07077025c ಮಹಾನ್ನಾದೋ ಹ್ಯಭೂತ್ತತ್ರ ದೃಷ್ಟ್ವಾ ರಾಜಾನಮಾಹವೇ||

ವಿಶಾಂಪತೇ! ರಣದಲ್ಲಿ ರಾಜನನ್ನು ನೋಡಿ ನಿನ್ನ ಸೈನ್ಯಗಳಲೆಲ್ಲಾ ಮಹಾನಾದವುಂಟಾಯಿತು.

07077026a ತಸ್ಮಿನ್ಜನಸಮುನ್ನಾದೇ ಪ್ರವೃತ್ತೇ ಭೈರವೇ ಸತಿ|

07077026c ಕದರ್ಥೀಕೃತ್ಯ ತೇ ಪುತ್ರಃ ಪ್ರತ್ಯಮಿತ್ರಮವಾರಯತ್||

ಹೀಗೆ ಜನರು ಭಯಂಕರ ಕೋಲಾಹಲವನ್ನು ಮಾಡುತ್ತಿರಲು ನಿನ್ನ ಮಗನು ಅಮಿತ್ರರನ್ನು ಕಡೆಗಣಿಸಿ ಎದುರಿಸಿ ತಡೆದನು.

07077027a ಆವಾರಿತಸ್ತು ಕೌಂತೇಯಸ್ತವ ಪುತ್ರೇಣ ಧನ್ವಿನಾ|

07077027c ಸಂರಂಭಮಗಮದ್ಭೂಯಃ ಸ ಚ ತಸ್ಮಿನ್ಪರಂತಪಃ||

ನಿನ್ನ ಮಗ ಧನ್ವಿಯಿಂದ ತಡೆಯಲ್ಪಟ್ಟ ಪರಂತಪ ಕೌಂತೇಯನು ಅತ್ಯಂತ ಕುಪಿತನಾದನು.

07077028a ತೌ ದೃಷ್ಟ್ವಾ ಪ್ರತಿಸಂರಬ್ಧೌ ದುರ್ಯೋಧನಧನಂಜಯೌ|

07077028c ಅಭ್ಯವೈಕ್ಷಂತ ರಾಜಾನೋ ಭೀಮರೂಪಾಃ ಸಮಂತತಃ||

ದುರ್ಯೋಧನ-ಧನಂಜಯರು ಪರಸ್ಪರ ಮೇಲೆ ಕುಪಿತರಾದದನ್ನು ಸುತ್ತಲಿದ್ದ ಭೀಮರೂಪದ ರಾಜರು ನೋಡಿದರು.

07077029a ದೃಷ್ಟ್ವಾ ತು ಪಾರ್ಥಂ ಸಂರಬ್ಧಂ ವಾಸುದೇವಂ ಚ ಮಾರಿಷ|

07077029c ಪ್ರಹಸನ್ನಿವ ಪುತ್ರಸ್ತೇ ಯೋದ್ಧುಕಾಮಃ ಸಮಾಹ್ವಯತ್||

ಮಾರಿಷ! ಕೃದ್ಧರಾಗಿರುವ ಪಾರ್ಥನನ್ನೂ ವಾಸುದೇವನನ್ನೂ ನೋಡಿ ನಿನ್ನ ಮಗನು ಜೋರಾಗಿ ನಕ್ಕು, ಯುದ್ಧಮಾಡಲು ಬಯಸಿ ಆಹ್ವಾನಿಸಿದನು.

07077030a ತತಃ ಪ್ರಹೃಷ್ಟೋ ದಾಶಾರ್ಹಃ ಪಾಂಡವಶ್ಚ ಧನಂಜಯಃ|

07077030c ವ್ಯಾಕ್ರೋಶೇತಾಂ ಮಹಾನಾದಂ ದಧ್ಮತುಶ್ಚಾಂಬುಜೋತ್ತಮೌ||

ಆಗ ಪ್ರಹೃಷ್ಟರಾದ ದಾಶಾರ್ಹ ಮತ್ತು ಪಾಂಡವ ಧನಂಜಯರು ಮಹಾ ಸಿಂಹನಾದ ಮಾಡಿದರು ಮತ್ತು ಉತ್ತಮ ಶಂಖಗಳನ್ನು ಊದಿದರು.

07077031a ತೌ ಹೃಷ್ಟರೂಪೌ ಸಂಪ್ರೇಕ್ಷ್ಯ ಕೌರವೇಯಾಶ್ಚ ಸರ್ವಶಃ|

07077031c ನಿರಾಶಾಃ ಸಮಪದ್ಯಂತ ಪುತ್ರಸ್ಯ ತವ ಜೀವಿತೇ||

ಹೃಷ್ಟರೂಪರಾದ ಅವರನ್ನು ನೋಡಿ ಕೌರವೇಯರೆಲ್ಲರು ನಿನ್ನ ಮಗನ ಜೀವಿತದ ಕುರಿತು ನಿರಾಶರಾದರು.

07077032a ಶೋಕಮೀಯುಃ ಪರಂ ಚೈವ ಕುರವಃ ಸರ್ವ ಏವ ತೇ|

07077032c ಅಮನ್ಯಂತ ಚ ಪುತ್ರಂ ತೇ ವೈಶ್ವಾನರಮುಖೇ ಹುತಂ||

ಇತರರು ಕೂಡ ಶೋಕಿತರಾದರು. ನಿನ್ನ ಮಗನು ರಣಯಜ್ಞದ ವೈಶ್ವಾನರನಲ್ಲಿ ಆಹುತಿಯಾದನೆಂದೇ ಅವರೆಲ್ಲರೂ ಪರಿಗಣಿಸಿದರು.

07077033a ತಥಾ ತು ದೃಷ್ಟ್ವಾ ಯೋಧಾಸ್ತೇ ಪ್ರಹೃಷ್ಟೌ ಕೃಷ್ಣಪಾಂಡವೌ|

07077033c ಹತೋ ರಾಜಾ ಹತೋ ರಾಜೇತ್ಯೂಚುರೇವಂ ಭಯಾರ್ದಿತಾಃ||

ಪ್ರಹೃಷ್ಟರಾದ ಕೃಷ್ಣ-ಪಾಂಡವರನ್ನು ನೋಡಿ ನಿನ್ನ ಯೋಧರು ಭಯಾದಿತರಾಗಿ “ರಾಜನು ಹತನಾದ! ರಾಜನು ಹತನಾದ!” ಎಂದೂ ಕೂಗತೊಡಗಿದರು.

07077034a ಜನಸ್ಯ ಸಮ್ನಿನಾದಂ ತು ಶ್ರುತ್ವಾ ದುರ್ಯೋಧನೋಽಬ್ರವೀತ್|

07077034c ವ್ಯೇತು ವೋ ಭೀರಹಂ ಕೃಷ್ಣೌ ಪ್ರೇಷಯಿಷ್ಯಾಮಿ ಮೃತ್ಯವೇ||

ಜನರ ಆ ಕೋಲಾಹಲವನ್ನು ಕೇಳಿ ದುರ್ಯೋಧನನು ಅವರಿಗೆ “ಹೆದರಬೇಡಿ! ಕೃಷ್ಣರಿಬ್ಬರನ್ನೂ ನಾನು ಮೃತ್ಯುವಿಗೆ ಕಳುಹಿಸುತ್ತೇನೆ.” ಎಂದು ಹೇಳಿದನು.

07077035a ಇತ್ಯುಕ್ತ್ವಾ ಸೈನಿಕಾನ್ಸರ್ವಾನ್ಜಯಾಪೇಕ್ಷೀ ನರಾಧಿಪಃ|

07077035c ಪಾರ್ಥಮಾಭಾಷ್ಯ ಸಂರಂಭಾದಿದಂ ವಚನಮಬ್ರವೀತ್||

ಹೀಗೆ ಸೈನಿಕರೆಲ್ಲರಿಗೆ ಹೇಳಿ ಜಯಾಪೇಕ್ಷೀ ನರಾಧಿಪನು ಕೋಪದಿಂದ ಪಾರ್ಥನಿಗೆ ಈ ಮಾತನ್ನಾಡಿದನು:

07077036a ಪಾರ್ಥ ಯಚ್ಚಿಕ್ಷಿತಂ ತೇಽಸ್ತ್ರಂ ದಿವ್ಯಂ ಮಾನುಷಮೇವ ಚ|

07077036c ತದ್ದರ್ಶಯ ಮಯಿ ಕ್ಷಿಪ್ರಂ ಯದಿ ಜಾತೋಽಸಿ ಪಾಂಡುನಾ||

“ಪಾರ್ಥ! ನೀನು ಪಾಂಡುವಿಗೇ ಹುಟ್ಟಿದವನಾಗಿದ್ದರೆ ನೀನು ಕಲಿತಿರುವ ದಿವ್ಯವಾದ ಮತ್ತು ಮಾನುಷ ಅಸ್ತ್ರಗಳನ್ನು ನನಗೆ ಬೇಗನೇ ತೋರಿಸು!

07077037a ಯದ್ಬಲಂ ತವ ವೀರ್ಯಂ ಚ ಕೇಶವಸ್ಯ ತಥೈವ ಚ|

07077037c ತತ್ಕುರುಷ್ವ ಮಯಿ ಕ್ಷಿಪ್ರಂ ಪಶ್ಯಾಮಸ್ತವ ಪೌರುಷಂ||

ನಿನ್ನಲ್ಲಿ ಮತ್ತು ಹಾಗೆಯೇ ಕೇಶವನಲ್ಲಿ ಎಷ್ಟು ಬಲ-ವೀರ್ಯಗಳಿವೆಯೋ ಬೇಗನೆ ನನ್ನ ಎದಿರು ಮಾಡಿ ತೋರಿಸು. ನಿನ್ನ ಪೌರುಷವನ್ನು ನೋಡುತ್ತೇನೆ!

07077038a ಅಸ್ಮತ್ಪರೋಕ್ಷಂ ಕರ್ಮಾಣಿ ಪ್ರವದಂತಿ ಕೃತಾನಿ ತೇ|

07077038c ಸ್ವಾಮಿಸತ್ಕಾರಯುಕ್ತಾನಿ ಯಾನಿ ತಾನೀಹ ದರ್ಶಯ||

ಪರೋಕ್ಷವಾಗಿ ನೀನು ಮಾಡಿದ ಕರ್ಮಗಳ ಕುರಿತು ಹೇಳಿದುದನ್ನು ಕೇಳಿದ್ದೇನೆ. ಸ್ವಾಮಿಯ ಸತ್ಕಾರಗಳಿಗೆ ಯೋಗ್ಯವಾದ ಅವುಗಳನ್ನು ಇಲ್ಲಿಯೂ ಪ್ರದರ್ಶಿಸು!””

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದುರ್ಯೋಧನವಚನೇ ಸಪ್ತಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದುರ್ಯೋಧನವಚನ ಎನ್ನುವ ಎಪ್ಪತ್ತೇಳನೇ ಅಧ್ಯಾಯವು.

Related image

Comments are closed.