Drona Parva: Chapter 7

ದ್ರೋಣ ಪರ್ವ: ದ್ರೋಣಾಭಿಷೇಕ ಪರ್ವ

ದ್ರೋಣಪರಾಕ್ರಮ ವರ್ಣನೆ (೧-೨೮). ದ್ರೋಣವಧಶ್ರವಣ (೨೯-೩೬).

07007001 ಸಂಜಯ ಉವಾಚ|

07007001a ತಥಾ ದ್ರೋಣಮಭಿಘ್ನಂತಂ ಸಾಶ್ವಸೂತರಥದ್ವಿಪಾನ್|

07007001c ವ್ಯಥಿತಾಃ ಪಾಂಡವಾ ದೃಷ್ಟ್ವಾ ನ ಚೈನಂ ಪರ್ಯವಾರಯನ್||

ಸಂಜಯನು ಹೇಳಿದನು: “ಹಾಗೆ ದ್ರೋಣನು ಅಶ್ವ-ಸೂತ-ರಥ-ಗಜಗಳೊಡನೆ ಸಂಹರಿಸುತ್ತಾ ಅವರನ್ನು ಸುತ್ತುವರೆದುದನ್ನು ನೋಡಿ ಪಾಂಡವರು ವ್ಯಥಿತರಾದರು.

07007002a ತತೋ ಯುಧಿಷ್ಠಿರೋ ರಾಜಾ ಧೃಷ್ಟದ್ಯುಮ್ನಧನಂಜಯೌ|

07007002c ಅಬ್ರವೀತ್ಸರ್ವತೋ ಯತ್ತೈಃ ಕುಂಭಯೋನಿರ್ನಿವಾರ್ಯತಾಂ||

ಆಗ ರಾಜಾ ಯುಧಿಷ್ಠಿರನು ಧೃಷ್ಟದ್ಯುಮ್ನ ಧನಂಜಯರಿಗೆ “ಕುಂಭಯೋನಿಜನನ್ನು ತಡೆಯುವ ಸರ್ವ ಯತ್ನಗಳೂ ನಡೆಯಲಿ!” ಎಂದನು.

07007003a ತತ್ರೈನಮರ್ಜುನಶ್ಚೈವ ಪಾರ್ಷತಶ್ಚ ಸಹಾನುಗಃ|

07007003c ಪರ್ಯಗೃಹ್ಣಂಸ್ತತಃ ಸರ್ವೇ ಸಮಾಯಾಂತಂ ಮಹಾರಥಾಃ||

ಆಗ ಅರ್ಜುನ ಮತ್ತು ಪಾರ್ಷತರು ಎಲ್ಲ ಮಹಾರಥ ಅನುಯಾಯಿಗಳೊಂದಿಗೆ ದ್ರೋಣನನ್ನು ಮುತ್ತಿದರು.

07007004a ಕೇಕಯಾ ಭೀಮಸೇನಶ್ಚ ಸೌಭದ್ರೋಽಥ ಘಟೋತ್ಕಚಃ|

07007004c ಯುಧಿಷ್ಠಿರೋ ಯಮೌ ಮತ್ಸ್ಯಾ ದ್ರುಪದಸ್ಯಾತ್ಮಜಾಸ್ತಥಾ||

07007005a ದ್ರೌಪದೇಯಾಶ್ಚ ಸಂಹೃಷ್ಟಾ ಧೃಷ್ಟಕೇತುಃ ಸಸಾತ್ಯಕಿಃ|

07007005c ಚೇಕಿತಾನಶ್ಚ ಸಂಕ್ರುದ್ಧೋ ಯುಯುತ್ಸುಶ್ಚ ಮಹಾರಥಃ||

07007006a ಯೇ ಚಾನ್ಯೇ ಪಾರ್ಥಿವಾ ರಾಜನ್ಪಾಂಡವಸ್ಯಾನುಯಾಯಿನಃ|

07007006c ಕುಲವೀರ್ಯಾನುರೂಪಾಣಿ ಚಕ್ರುಃ ಕರ್ಮಾಣ್ಯನೇಕಶಃ||

ರಾಜನ್! ಕೇಕಯರು, ಭೀಮಸೇನ, ಸೌಭದ್ರ, ಘಟೋತ್ಕಚ, ಯುಧಿಷ್ಠಿರ, ಯಮಳರು, ಮತ್ಸ್ಯರು, ದ್ರುಪದನ ಮಕ್ಕಳು, ದ್ರೌಪದಿಯ ಮಕ್ಕಳು, ಸಂಹೃಷ್ಟನಾಗಿದ್ದ ಧೃಷ್ಟಕೇತು ಸಾತ್ಯಕಿಯರು, ಚೇಕಿತಾನ, ಸಂಕ್ರುದ್ಧನಾಗಿದ್ದ ಮಹಾರಥಿ ಯುಯುತ್ಸು ಇವರು ಮತ್ತು ಪಾಂಡವರನ್ನು ಬೆಂಬಲಿಸಿದ ಅನ್ಯ ಪಾರ್ಥಿವರು ಅವರವರ ಕುಲ ವೀರ್ಯಗಳಿಗನುಗುಣವಾಗಿ ಅನೇಕ ಕರ್ಮಗಳನ್ನೆಸಗಿದರು.

07007007a ಸಂಗೃಹ್ಯಮಾಣಾಂ ತಾಂ ದೃಷ್ಟ್ವಾ ಪಾಂಡವೈರ್ವಾಹಿನೀಂ ರಣೇ|

07007007c ವ್ಯಾವೃತ್ಯ ಚಕ್ಷುಷೀ ಕೋಪಾದ್ಭಾರದ್ವಾಜೋಽನ್ವವೈಕ್ಷತ||

ರಣದಲ್ಲಿ ಪಾಂಡವರು ಸಂಗ್ರಹಿಸಿ ಸಂರಕ್ಷಿಸಿದ್ದ ಆ ಸೇನೆಯನ್ನು ನೋಡಿ ಭಾರದ್ವಾಜನು ಕೋಪದಿಂದ ಕಣ್ಣುಗಳನ್ನರಳಿಸಿ ನೋಡಿದನು.

07007008a ಸ ತೀವ್ರಂ ಕೋಪಮಾಸ್ಥಾಯ ರಥೇ ಸಮರದುರ್ಮದಃ|

07007008c ವ್ಯಧಮತ್ ಪಾಂಡವಾನೀಕಮಭ್ರಾಣೀವ ಸದಾಗತಿಃ||

ಆ ಸಮರದುರ್ಮದನು ತೀವ್ರವಾಗಿ ಕೋಪಗೊಂಡು ಪಾಂಡವರ ಸೇನೆಯನ್ನು ಮೋಡಗಳನ್ನು ಚದುರಿಸುವಂತೆ ಭೇದಿಸಿದನು.

07007009a ರಥಾನಶ್ವಾನ್ನರಾನ್ನಾಗಾನಭಿಧಾವಂಸ್ತತಸ್ತತಃ|

07007009c ಚಚಾರೋನ್ಮತ್ತವದ್ದ್ರೋಣೋ ವೃದ್ಧೋಽಪಿ ತರುಣೋ ಯಥಾ||

ವೃದ್ಧನಾಗಿದ್ದರೂ ತರುಣನಂತೆ ಉನ್ಮತ್ತನಾಗಿರುವನೋ ಎನ್ನುವಂತೆ ದ್ರೋಣನು ಅಲ್ಲಿಂದಿಲ್ಲಿಗೆ ಧಾವಿಸುತ್ತಾ ಅವರ ರಥಗಳನ್ನೂ, ಕುದುರೆಗಳನ್ನೂ, ಸೈನಿಕರನ್ನೂ, ಆನೆಗಳನ್ನೂ ವಧಿಸುತ್ತಿದ್ದರು.

07007010a ತಸ್ಯ ಶೋಣಿತದಿಗ್ಧಾಂಗಾಃ ಶೋಣಾಸ್ತೇ ವಾತರಂಹಸಃ|

07007010c ಆಜಾನೇಯಾ ಹಯಾ ರಾಜನ್ನವಿಭ್ರಾಂತಾಃ ಶ್ರಿಯಂ ದಧುಃ||

ರಾಜನ್! ಸ್ವಭಾವತಃ ಕೆಂಪಾಗಿದ್ದ ಅವನ ಕುದುರೆಗಳು ರಕ್ತದಿಂದ ತೋಯ್ದ ಶರೀರಗಳಿಂದ ಇನ್ನೂ ಹೆಚ್ಚು ಕೆಂಪಾಗಿ ಕಾಣುತ್ತಿದ್ದವು. ವಾಯುವೇಗದ ಅವು ಅವಿಭ್ರಾಂತರಾಗಿ ಅವನನ್ನು ಕೊಂಡೊಯ್ಯುತ್ತಿದ್ದವು.

07007011a ತಮಂತಕಮಿವ ಕ್ರುದ್ಧಮಾಪತಂತಂ ಯತವ್ರತಂ|

07007011c ದೃಷ್ಟ್ವಾ ಸಂಪ್ರಾದ್ರವನ್ಯೋಧಾಃ ಪಾಂಡವಸ್ಯ ತತಸ್ತತಃ||

ಅಂತಕನಂತೆ ಕ್ರುದ್ಧನಾಗಿ ಮೇಲೆ ಬೀಳುತ್ತಿದ್ದ ಆ ಯತವ್ರತನನ್ನು ನೋಡಿ ಪಾಂಡವರ ಯೋಧರು ಎಲ್ಲ ಕಡೆಗಳಲ್ಲಿ ಓಡಿ ಹೋಗುತ್ತಿದ್ದರು.

07007012a ತೇಷಾಂ ಪ್ರದ್ರವತಾಂ ಭೀಮಃ ಪುನರಾವರ್ತತಾಮಪಿ|

07007012c ವೀಕ್ಷತಾಂ ತಿಷ್ಠತಾಂ ಚಾಸೀಚ್ಚಬ್ದಃ ಪರಮದಾರುಣಃ||

ಹೀಗೆ ಓಡಿಹೋಗುತ್ತಿರುವವರ, ಪುನಃ ಹಿಂದಿರುಗುತ್ತಿರುವವರ, ಸುಮ್ಮನೆ ನಿಂತು ನೋಡುತ್ತಿದ್ದವರ, ನಿಂತು ಕೂಗಿಕೊಳ್ಳುತ್ತಿದ್ದವರ ಭೀಕರ ಶಬ್ಧವು ಪರಮ ದಾರುಣವಾಗಿತ್ತು.

07007013a ಶೂರಾಣಾಂ ಹರ್ಷಜನನೋ ಭೀರೂಣಾಂ ಭಯವರ್ಧನಃ|

07007013c ದ್ಯಾವಾಪೃಥಿವ್ಯೋರ್ವಿವರಂ ಪೂರಯಾಮಾಸ ಸರ್ವತಃ||

ಆಕಾಶ-ಭೂಮಿಗಳನ್ನು ಎಲ್ಲ ಕಡೆಯಿಂದಲೂ ತುಂಬಿಬಿಟ್ಟಿದ್ದ ಆ ತುಮುಲವು ಶೂರರಿಗೆ ಹರ್ಷವನ್ನಿತ್ತರೆ ದುರ್ಬಲಹೃದಯದವರ ಭಯವನ್ನು ಹೆಚ್ಚಿಸುತ್ತಿತ್ತು.

07007014a ತತಃ ಪುನರಪಿ ದ್ರೋಣೋ ನಾಮ ವಿಶ್ರಾವಯನ್ಯುಧಿ|

07007014c ಅಕರೋದ್ರೌದ್ರಮಾತ್ಮಾನಂ ಕಿರಂ ಶರಶತೈಃ ಪರಾನ್||

ಆಗ ಪುನಃ ದ್ರೋಣನು ಯುದ್ಧದಲ್ಲಿ ತನ್ನ ಹೆಸರನ್ನು ಕೇಳಿಸುತ್ತಾ ತನ್ನ ರೂಪವನ್ನು ರೌದ್ರವಾಗಿಸಿಕೊಂಡು ಶತ್ರುಗಳ ಮೇಲೆ ನೂರಾರು ಬಾಣಗಳನ್ನು ಎರಚಿದನು.

07007015a ಸ ತಥಾ ತಾನ್ಯನೀಕಾನಿ ಪಾಂಡವೇಯಸ್ಯ ಧೀಮತಃ|

07007015c ಕಾಲವನ್ನ್ಯವಧೀದ್ದ್ರೋಣೋ ಯುವೇವ ಸ್ಥವಿರೋ ಬಲೀ||

ವೃದ್ಧನಾಗಿದ್ದರೂ ಬಲಶಾಲಿ ಯುವಕನಂತಿದ್ದ ಧೀಮತ ದ್ರೋಣನು ಪಾಂಡವನ ಸೇನೆಗಳ ಮಧ್ಯೆ ಅಂತಕನಂತೆ ಸಂಚರಿಸುತ್ತಿದ್ದನು.

07007016a ಉತ್ಕೃತ್ಯ ಚ ಶಿರಾಂಸ್ಯುಗ್ರೋ ಬಾಹೂನಪಿ ಸಭೂಷಣಾನ್|

07007016c ಕೃತ್ವಾ ಶೂನ್ಯಾನ್ರಥೋಪಸ್ಥಾನುದಕ್ರೋಶನ್ಮಹಾರಥಃ||

ಆ ಮಹಾರಥನು ಉಗ್ರನಾಗಿ ರಥದಲ್ಲಿದ್ದವರ ಶಿರಗಳನ್ನು ಮತ್ತು ಸುಭೂಷಣ ಬಾಹುಗಳನ್ನೂ ಕತ್ತರಿಸಿ ರಥಗಳನ್ನು ಬರಿದುಮಾಡಿ ಗರ್ಜಿಸುತ್ತಿದ್ದನು.

07007017a ತಸ್ಯ ಹರ್ಷಪ್ರಣಾದೇನ ಬಾಣವೇಗೇನ ಚಾಭಿಭೋ|

07007017c ಪ್ರಾಕಂಪಂತ ರಣೇ ಯೋಧಾ ಗಾವಃ ಶೀತಾರ್ದಿತಾ ಇವ||

ವಿಭೋ! ಅವನ ಹರ್ಷಗರ್ಜನೆಯಿಂದ ಮತ್ತು ಬಾಣಗಳ ವೇಗದಿಂದ ರಣದಲ್ಲಿ ಯೋಧರು ಛಳಿಯಿಂದ ನಡುಗುವ ಗೋವುಗಳಂತೆ ನಡುಗುತ್ತಿದ್ದರು.

07007018a ದ್ರೋಣಸ್ಯ ರಥಘೋಷೇಣ ಮೌರ್ವೀನಿಷ್ಪೇಷಣೇನ ಚ|

07007018c ಧನುಃಶಬ್ದೇನ ಚಾಕಾಶೇ ಶಬ್ದಃ ಸಮಭವನ್ಮಹಾನ್||

ದ್ರೋಣನ ರಥ ಘೋಷದಿಂದ, ಶಿಂಜನಿಯನ್ನು ಉಜ್ಜುವುದರಿಂದಲೂ, ಧನುಸ್ಸಿನ ಟೇಂಕಾರದಿಂದ ಉಂಟಾದ ಶಬ್ಧವು ಆಕಾಶವನ್ನು ತಲುಪಿ ಅತಿ ಜೋರಾಯಿತು.

07007019a ಅಥಾಸ್ಯ ಬಹುಶೋ ಬಾಣಾ ನಿಶ್ಚರಂತಃ ಸಹಸ್ರಶಃ|

07007019c ವ್ಯಾಪ್ಯ ಸರ್ವಾ ದಿಶಃ ಪೇತುರ್ಗಜಾಶ್ವರಥಪತ್ತಿಷು||

ಅವನು ಬಿಟ್ಟ ಸಹಸ್ರಾರು ಬಾಣಗಳು ಹೆಚ್ಚಾಗಿ ಎಲ್ಲ ದಿಕ್ಕುಗಳನ್ನೂ ವ್ಯಾಪಿಸಿ ಆನೆ-ಕುದುರೆ-ರಥ-ಪದಾತಿಗಳ ಮೇಲೆ ಬೀಳುತ್ತಿದ್ದವು.

07007020a ತಂ ಕಾರ್ಮುಕಮಹಾವೇಗಮಸ್ತ್ರಜ್ವಲಿತಪಾವಕಂ|

07007020c ದ್ರೋಣಮಾಸಾದಯಾಂ ಚಕ್ರುಃ ಪಾಂಚಾಲಾಃ ಪಾಂಡವೈಃ ಸಹ||

ಆ ಮಹಾಧನ್ವಿ, ಮಹಾವೇಗಿ, ಅಸ್ತ್ರಗಳನ್ನು ಹೊಂದಿದ್ದ, ಪಾವಕನಂತೆ ಪ್ರಜ್ವಲಿಸುತ್ತಿದ್ದ ದ್ರೋಣನನ್ನು ಆಕ್ರಮಣಿಸಲು ಪಾಂಡವರೊಂದಿಗೆ ಪಾಂಚಾಲರು ಪ್ರಯತ್ನಿಸಿದರು.

07007021a ತಾನ್ವೈ ಸರಥಹಸ್ತ್ಯಶ್ವಾನ್ಪ್ರಾಹಿಣೋದ್ಯಮಸಾದನಂ|

07007021c ದ್ರೋಣೋಽಚಿರೇಣಾಕರೋಚ್ಚ ಮಹೀಂ ಶೋಣಿತಕರ್ದಮಾಂ||

ಅವರನ್ನು ರಥ-ಆನೆ-ಕುದುರೆಗಳೊಂದಿಗೆ ಯಮಸಾದನಕ್ಕೆ ಕಳುಹಿಸಿ ದ್ರೋಣನು ಕ್ಷಣಮಾತ್ರದಲ್ಲಿ ಭೂಮಿಯನ್ನು ರಕ್ತದ ಕೆಸರಿನಿಂದ ತುಂಬಿಸಿದನು.

07007022a ತನ್ವತಾ ಪರಮಾಸ್ತ್ರಾಣಿ ಶರಾನ್ಸತತಮಸ್ಯತಾ|

07007022c ದ್ರೋಣೇನ ವಿಹಿತಂ ದಿಕ್ಷು ಬಾಣಜಾಲಮದೃಶ್ಯತ||

ದ್ರೋಣನಿಂದ ಸತತವಾಗಿ ಪ್ರಯೋಗಿಸಲ್ಪಟ್ಟ ಪರಮಾಸ್ತ್ರಗಳೂ ಶರಗಳೂ ದಿಕ್ಕುಗಳನ್ನು ಬಾಣಗಳ ಜಾಲದಂತೆ ಮುಚ್ಚಿರುವುದು ಕಂಡುಬಂದಿತು.

07007023a ಪದಾತಿಷು ರಥಾಶ್ವೇಷು ವಾರಣೇಷು ಚ ಸರ್ವಶಃ|

07007023c ತಸ್ಯ ವಿದ್ಯುದಿವಾಭ್ರೇಷು ಚರನ್ಕೇತುರದೃಶ್ಯತ||

ಪದಾತಿಗಳ, ರಥ-ಕುದುರೆಗಳ, ಆನೆಗಳ ಮಧ್ಯೆ ಎಲ್ಲೆಡೆಯಲ್ಲಿ ಮೋಡಗಳ ಮಧ್ಯೆ ಕಾಣುವ ಮಿಂಚಿನಂತೆ ಅವನ ಧ್ವಜವು ಕಾಣುತ್ತಿತ್ತು.

07007024a ಸ ಕೇಕಯಾನಾಂ ಪ್ರವರಾಂಶ್ಚ ಪಂಚ

         ಪಾಂಚಾಲರಾಜಂ ಚ ಶರೈಃ ಪ್ರಮೃದ್ಯ|

07007024c ಯುಧಿಷ್ಠಿರಾನೀಕಮದೀನಯೋಧೀ

         ದ್ರೋಣೋಽಭ್ಯಯಾತ್ಕಾರ್ಮುಕಬಾಣಪಾಣಿಃ||

ದ್ರೋಣನು ಬಿಲ್ಲು ಬಾಣಗಳನ್ನು ಹಿಡಿದು ಕೇಕಯರ ಐವರು ಮುಖ್ಯರನ್ನೂ ಪಾಂಚಾಲರಾಜನನ್ನೂ ಶರಗಳಿಂದ ಹೊಡೆದು ಯುಧಿಷ್ಠಿರನ ಸೇನೆಯನ್ನು ಆಕ್ರಮಣಿಸಿದನು.

07007025a ತಂ ಭೀಮಸೇನಶ್ಚ ಧನಂಜಯಶ್ಚ

         ಶಿನೇಶ್ಚ ನಪ್ತಾ ದ್ರುಪದಾತ್ಮಜಶ್ಚ|

07007025c ಶೈಬ್ಯಾತ್ಮಜಃ ಕಾಶಿಪತಿಃ ಶಿಬಿಶ್ಚ

         ಹೃಷ್ಟಾ ನದಂತೋ ವ್ಯಕಿರಂ ಶರೌಘೈಃ||

ಭೀಮಸೇನ-ಧನಂಜಯರು, ಸಾತ್ಯಕಿ, ಧೃಷ್ಟದ್ಯುಮ್ನ, ಶೈಬ್ಯನ ಮಗ, ಕಾಶಿರಾಜ, ಶಿಬಿ ಮೊದಲಾದವರು ಹೃಷ್ಟರಾಗಿ ಕೂಗುತ್ತಾ ಶರಸಮೂಹಗಳಿಂದ ಅವನನ್ನು ಮುಚ್ಚಿದರು.

07007026a ತೇಷಾಮಥೋ ದ್ರೋಣಧನುರ್ವಿಮುಕ್ತಾಃ

         ಪತತ್ರಿಣಃ ಕಾಂಚನಚಿತ್ರಪುಂಖಾಃ|

07007026c ಭಿತ್ತ್ವಾ ಶರೀರಾಣಿ ಗಜಾಶ್ವಯೂನಾಂ

         ಜಗ್ಮುರ್ಮಹೀಂ ಶೋಣಿತದಿಗ್ಧವಾಜಾಃ||

ಆಗ ದ್ರೋಣನ ಧನುಸ್ಸಿನಿಂದ ಹೊರಟ ಕಾಂಚನದ ಬಣ್ಣದ ರೆಕ್ಕೆಗಳುಳ್ಳ ಪತತ್ರಿಗಳು ಆನೆ ಕುದುರೆಗಳ ಶರೀರಗಳನ್ನು ಭೇದಿಸಿ ರಕ್ತದಲ್ಲಿ ತೋಯ್ದು ಭೂಮಿಯನ್ನು ಹೊಕ್ಕವು.

07007027a ಸಾ ಯೋಧಸಂಘೈಶ್ಚ ರಥೈಶ್ಚ ಭೂಮಿಃ

         ಶರೈರ್ವಿಭಿನ್ನೈರ್ಗಜವಾಜಿಭಿಶ್ಚ|

07007027c ಪ್ರಚ್ಚಾದ್ಯಮಾನಾ ಪತಿತೈರ್ಬಭೂವ

         ಸಮಂತತೋ ದ್ಯೌರಿವ ಕಾಲಮೇಘೈಃ||

ಎಲ್ಲ ಕಡೆ ಬಿದ್ದಿದ್ದ ಆ ಯೋಧರ ಗುಂಪುಗಳಿಂದ ಮತ್ತು ರಥಗಳಿಂದ, ಶರಗಳಿಂದ ತುಂಡಾದ ಆನೆ-ಕುದುರೆಗಳಿಂದ ರಣಭೂಮಿಯು ಕಪ್ಪು ಮೋಡಗಳಿಂದ ಕೂಡಿದ ಆಕಾಶದಂತೆ ತೋರಿತು.

07007028a ಶೈನೇಯಭೀಮಾರ್ಜುನವಾಹಿನೀಪಾಂ

         ಶೈಬ್ಯಾಭಿಮನ್ಯೂ ಸಹ ಕಾಶಿರಾಜ್ಞಾ|

07007028c ಅನ್ಯಾಂಶ್ಚ ವೀರಾನ್ಸಮರೇ ಪ್ರಮೃದ್ನಾದ್

         ದ್ರೋಣಃ ಸುತಾನಾಂ ತವ ಭೂತಿಕಾಮಃ||

ನಿನ್ನ ಸುತರಿಗೆ ಒಳಿತನ್ನು ಮಾಡಬಯಸಿ ದ್ರೋಣನು ಶೈನೇಯ-ಭೀಮ-ಅರ್ಜುನರಿಂದ ಪಾಲಿತವಾದ ವಾಹಿನಿಯನ್ನೂ, ಶೈಬ್ಯ, ಅಭಿಮನ್ಯು, ಕಾಶಿರಾಜ, ಮತ್ತು ಇತರ ವೀರರನ್ನು ಸಮರದಲ್ಲಿ ಮರ್ದಿಸುತ್ತಿದ್ದನು.

07007029a ಏತಾನಿ ಚಾನ್ಯಾನಿ ಚ ಕೌರವೇಂದ್ರ

         ಕರ್ಮಾಣಿ ಕೃತ್ವಾ ಸಮರೇ ಮಹಾತ್ಮಾ|

07007029c ಪ್ರತಾಪ್ಯ ಲೋಕಾನಿವ ಕಾಲಸೂರ್ಯೋ

         ದ್ರೋಣೋ ಗತಃ ಸ್ವರ್ಗಮಿತೋ ಹಿ ರಾಜನ್||

ಕೌರವೇಂದ್ರ! ರಾಜನ್! ಈ ಮತ್ತು ಅನ್ಯ ಕರ್ಮಗಳನ್ನೆಸಗಿ ಆ ಮಹಾತ್ಮ ದ್ರೋಣನು ಕಾಲಾಂತದ ಸೂರ್ಯನಂತೆ ಲೋಕವನ್ನು ಸುಟ್ಟು ಸ್ವರ್ಗಕ್ಕೆ ಹೋದನು.

07007030a ಏವಂ ರುಕ್ಮರಥಃ ಶೂರೋ ಹತ್ವಾ ಶತಸಹಸ್ರಶಃ|

07007030c ಪಾಂಡವಾನಾಂ ರಣೇ ಯೋಧಾನ್ಪಾರ್ಷತೇನ ನಿಪಾತಿತಃ||

ಹೀಗೆ ನೂರಾರು ಸಹಸ್ರಾರು ಪಾಂಡವ ಯೋಧರನ್ನು ರಣದಲ್ಲಿ ಸಂಹರಿಸಿ ಆ ರುಕ್ಮರಥ ಶೂರನು ಪಾರ್ಷತನಿಂದ ಬೀಳಿಸಲ್ಪಟ್ಟನು.

07007031a ಅಕ್ಷೌಹಿಣೀಮಭ್ಯಧಿಕಾಂ ಶೂರಾಣಾಮನಿವರ್ತಿನಾಂ|

07007031c ನಿಹತ್ಯ ಪಶ್ಚಾದ್ಧೃತಿಮಾನಗಚ್ಚತ್ಪರಮಾಂ ಗತಿಂ||

ಯುದ್ಧದಿಂದ ಪಲಾಯನ ಮಾಡದೇ ಇದ್ದ ಒಂದು ಅಕ್ಷೌಹಿಣಿಗಿಂತಲೂ ಅಧಿಕ ಶೂರರನ್ನು ಸಂಹರಿಸಿ ನಂತರ ಆ ಧೃತಿಮಾನನು ಪರಮ ಗತಿಯನ್ನು ಹೊಂದಿದನು.

07007032a ಪಾಂಡವೈಃ ಸಹ ಪಾಂಚಾಲೈರಶಿವೈಃ ಕ್ರೂರಕರ್ಮಭಿಃ|

07007032c ಹತೋ ರುಕ್ಮರಥೋ ರಾಜನ್ಕೃತ್ವಾ ಕರ್ಮ ಸುದುಷ್ಕರಂ||

ರಾಜನ್! ಪಾಂಡವರೊಂದಿಗೆ ಪಾಂಚಾಲರ ಅಮಂಗಳಕರ ಕ್ರೂರ ಕೃತ್ಯದಿಂದ ಆ ರುಕ್ಮರಥನು ಸುದುಷ್ಕರ ಕರ್ಮಗಳನ್ನೆಸಗಿ ಹತನಾದನು.

07007033a ತತೋ ನಿನಾದೋ ಭೂತಾನಾಮಾಕಾಶೇ ಸಮಜಾಯತ|

07007033c ಸೈನ್ಯಾನಾಂ ಚ ತತೋ ರಾಜನ್ನಾಚಾಚಾರ್ಯೇ ನಿಹತೇ ಯುಧಿ||

ರಾಜನ್! ಯುದ್ಧದಲ್ಲಿ ಆಚಾರ್ಯನು ನಿಹತನಾಗಲು ಆಕಾಶದಲ್ಲಿ ಭೂತಗಳ ನಿನಾದವುಂಟಾಯಿತು.

07007034a ದ್ಯಾಂ ಧರಾಂ ಖಂ ದಿಶೋ ವಾರಿ ಪ್ರದಿಶಶ್ಚಾನುನಾದಯನ್|

07007034c ಅಹೋ ಧಿಗಿತಿ ಭೂತಾನಾಂ ಶಬ್ದಃ ಸಮಭವನ್ಮಹಾನ್||

ಸ್ವರ್ಗ, ಭೂಮಿ, ಆಕಾಶ ಮತ್ತು ದಿಕ್ಕುಗಳಲ್ಲಿ “ಅಯ್ಯೋ! ಧಿಕ್ಕಾರ!” ಎಂಬ ಮಹಾ ಆರ್ತನಾದವು ಕೇಳಿಬಂದಿತು.

07007035a ದೇವತಾಃ ಪಿತರಶ್ಚೈವ ಪೂರ್ವೇ ಯೇ ಚಾಸ್ಯ ಬಾಂಧವಾಃ|

07007035c ದದೃಶುರ್ನಿಹತಂ ತತ್ರ ಭಾರದ್ವಾಜಂ ಮಹಾರಥಂ||

ದೇವತೆಗಳು, ಪಿತೃಗಳು ಮತ್ತು ಅವನಿಗೆ ಹಿಂದೆ ಬಂಧುಗಳಾಗಿದ್ದವರು ಅಲ್ಲಿ ಮಹಾರಥ ಭಾರದ್ವಾಜನು ನಿಹತನಾದುದನ್ನು ನೋಡಿದರು.

07007036a ಪಾಂಡವಾಸ್ತು ಜಯಂ ಲಬ್ಧ್ವಾ ಸಿಂಹನಾದಾನ್ಪ್ರಚಕ್ರಿರೇ|

07007036c ತೇನ ನಾದೇನ ಮಹತಾ ಸಮಕಂಪತ ಮೇದಿನೀ||

ಪಾಂಡವರಾದರೋ ಜಯವನ್ನು ಪಡೆದು ಸಿಂಹನಾದಗೈದರು. ಅವರ ಆ ನಾದದಿಂದ ಮೇದಿನಿಯೇ ಕಂಪಿಸಿತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ದ್ರೋಣವಧಶ್ರವಣೇ ಸಪ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ದ್ರೋಣವಧಶ್ರವಣ ಎನ್ನುವ ಏಳನೇ ಅಧ್ಯಾಯವು.

Image result for indian motifs against white background

Comments are closed.