Drona Parva: Chapter 62

ದ್ರೋಣ ಪರ್ವ: ಜಯದ್ರಥವಧ ಪರ್ವ

೬೨

ಸಂಜಯನು ಧೃತರಾಷ್ಟ್ರನೇ ಈ ಶೋಕಕ್ಕೆ ಕಾರಣನೆಂದು ಮಾತನಾಡಿದುದು (೧-೨೩).

07062001 ಸಂಜಯ ಉವಾಚ|

07062001a ಹಂತ ತೇ ಸಂಪ್ರವಕ್ಷ್ಯಾಮಿ ಸರ್ವಂ ಪ್ರತ್ಯಕ್ಷದರ್ಶಿವಾನ್|

07062001c ಶುಶ್ರೂಷಸ್ವ ಸ್ಥಿರೋ ಭೂತ್ವಾ ತವ ಹ್ಯಪನಯೋ ಮಹಾನ್||

ಸಂಜಯನು ಹೇಳಿದನು: “ನಿಲ್ಲು! ಪ್ರತ್ಯಕ್ಷವಾಗಿ ಕಂಡ ಎಲ್ಲವನ್ನೂ ನಾನು ನಿನಗೆ ಹೇಳುತ್ತೇನೆ. ಸ್ಥಿರನಾಗಿ ಕೇಳುವಂಥವನಾಗು. ನಿನ್ನದೂ ದೊಡ್ಡ ತಪ್ಪಾಗಿದೆ.

07062002a ಗತೋದಕೇ ಸೇತುಬಂಧೋ ಯಾದೃಕ್ತಾದೃಗಯಂ ತವ|

07062002c ವಿಲಾಪೋ ನಿಷ್ಫಲೋ ರಾಜನ್ಮಾ ಶುಚೋ ಭರತರ್ಷಭ||

ರಾಜನ್! ನೀರು ಹರಿದಹೋದ ನಂತರ ಸೇತುವೆಯನ್ನು ಕಟ್ಟುವುದು ಎಷ್ಟು ನಿಷ್ಪ್ರಯೋಜಕವೋ ಹಾಗೆ ನಿನ್ನ ವಿಲಾಪವೂ ನಿಷ್ಫಲವಾದುದು. ಭರತರ್ಷಭ! ಶೋಕಿಸಬೇಡ!

07062003a ಅನತಿಕ್ರಮಣೀಯೋಽಯಂ ಕೃತಾಂತಸ್ಯಾದ್ಭುತೋ ವಿಧಿಃ|

07062003c ಮಾ ಶುಚೋ ಭರತಶ್ರೇಷ್ಠ ದಿಷ್ಟಂ ಏತತ್ಪುರಾತನಂ||

ಕೃತಾಂತನ ಈ ಅದ್ಭುತವಿಧಿಯನ್ನು ಅತಿಕ್ರಮಿಸುವುದು ಅಸಾಧ್ಯ. ಭರತಶ್ರೇಷ್ಠ! ಶೋಕಿಸದಿರು. ಇದು ಹಳೆಯ ಕಥೆ.

07062004a ಯದಿ ಹಿ ತ್ವಂ ಪುರಾ ದ್ಯೂತಾತ್ಕುಂತೀಪುತ್ರಂ ಯುಧಿಷ್ಠಿರಂ|

07062004c ನಿವರ್ತಯೇಥಾಃ ಪುತ್ರಾಂಶ್ಚ ನ ತ್ವಾಂ ವ್ಯಸನಮಾವ್ರಜೇತ್||

ಒಂದು ವೇಳೆ ಹಿಂದೆ ನೀನು ದ್ಯೂತದಿಂದ ಕುಂತೀಪುತ್ರ ಯುಧಿಷ್ಠಿರ ಮತ್ತು ನಿನ್ನ ಪುತ್ರರು ಹಿಂದೆ ಸರಿಯುವಂತೆ ಮಾಡಿದ್ದಿದ್ದರೆ ನೀನು ಈ ವ್ಯಸನವನ್ನು ಅನುಭವಿಸಬೇಕಾಗಿರಲಿಲ್ಲ.

07062005a ಯುದ್ಧಕಾಲೇ ಪುನಃ ಪ್ರಾಪ್ತೇ ತದೈವ ಭವತಾ ಯದಿ|

07062005c ನಿವರ್ತಿತಾಃ ಸ್ಯುಃ ಸಂರಬ್ಧಾ ನ ತ್ವಾಂ ವ್ಯಸನಮಾವ್ರಜೇತ್||

ಪುನಃ ಯುದ್ಧಕಾಲವು ಪ್ರಾಪ್ತವಾದಾಗಲೂ ಕೂಡ ಒಂದುವೇಳೆ ನೀನು ಸಂರಬ್ಧರಾಗಿದ್ದ ಎರಡೂ ಪಕ್ಷಗಳೂ ಹಿಂದೆ ಸರಿಯುವಂತೆ ಮಾಡಿದ್ದರೆ ನೀನು ಈ ವ್ಯಸನವನ್ನು ಅನುಭವಿಸಬೇಕಾಗಿರಲಿಲ್ಲ.

07062006a ದುರ್ಯೋಧನಂ ಚಾವಿಧೇಯಂ ಬಧ್ನೀತೇತಿ ಪುರಾ ಯದಿ|

07062006c ಕುರೂನಚೋದಯಿಷ್ಯಸ್ತ್ವಂ ನ ತ್ವಾಂ ವ್ಯಸನಮಾವ್ರಜೇತ್||

ಒಂದುವೇಳೆ ಹಿಂದೆ ನೀನು ಅವಿಧೇಯನಾದ ದುರ್ಯೋಧನನನ್ನು ಸಂಹರಿಸಿ ಎಂದು ಕುರುಗಳಿಗೆ ಆದೇಶವಿತ್ತಿದ್ದರೆ ನೀನು ಈ ವ್ಯಸನವನ್ನು ಅನುಭವಿಸಬೇಕಾಗಿರಲಿಲ್ಲ.

07062007a ತತ್ತೇ ಬುದ್ಧಿವ್ಯಭೀಚಾರಮುಪಲಪ್ಸ್ಯಂತಿ ಪಾಂಡವಾಃ|

07062007c ಪಾಂಚಾಲಾ ವೃಷ್ಣಯಃ ಸರ್ವೇ ಯೇ ಚಾನ್ಯೇಽಪಿ ಮಹಾಜನಾಃ||

ಹಾಗೆ ಮಾಡಿದ್ದರೆ ಪಾಂಡವರು, ಪಾಂಚಾಲರು, ವೃಷ್ಣಿಯರು ಮತ್ತು ಇನ್ನೂ ಇತರ ಮಹಾಜನರು ನಿನ್ನ ಬುದ್ಧಿಯು ವ್ಯಭಿಚಾರಗೈಯುತ್ತಿದೆಯೆನ್ನುವುದನ್ನು ತಿಳಿಯುತ್ತಿರಲಿಲ್ಲ.

07062008a ಸ ಕೃತ್ವಾ ಪಿತೃಕರ್ಮ ತ್ವಂ ಪುತ್ರಂ ಸಂಸ್ಥಾಪ್ಯ ಸತ್ಪಥೇ|

07062008c ವರ್ತೇಥಾ ಯದಿ ಧರ್ಮೇಣ ನ ತ್ವಾಂ ವ್ಯಸನಮಾವ್ರಜೇತ್||

ನೀನು ತಂದೆಯ ಕರ್ಮವನ್ನು ಪೂರೈಸಿ ಮಗನನ್ನು ಸತ್ಪಥದಲ್ಲಿ ಇರಿಸಿ ಧರ್ಮದಲ್ಲಿ ನಡೆದುಕೊಳ್ಳುತ್ತಿದ್ದರೆ ಈ ವ್ಯಸನವನ್ನು ಅನುಭವಿಸಬೇಕಾಗಿರಲಿಲ್ಲ.

07062009a ತ್ವಂ ತು ಪ್ರಾಜ್ಞತಮೋ ಲೋಕೇ ಹಿತ್ವಾ ಧರ್ಮಂ ಸನಾತನಂ|

07062009c ದುರ್ಯೋಧನಸ್ಯ ಕರ್ಣಸ್ಯ ಶಕುನೇಶ್ಚಾನ್ವಗಾ ಮತಂ||

ಲೋಕದಲ್ಲಿ ಅತ್ಯಂತ ಪ್ರಾಜ್ಞನಾದ ನೀನು ಸನಾತನ ಧರ್ಮವನ್ನು ಬಿಸುಟು ದುರ್ಯೋಧನ, ಕರ್ಣ ಮತ್ತು ಶಕುನಿಯರ ಮತವನ್ನು ಅನುಸರಿಸಿದೆ.

07062010a ತತ್ತೇ ವಿಲಪಿತಂ ಸರ್ವಂ ಮಯಾ ರಾಜನ್ನಿಶಾಮಿತಂ|

07062010c ಅರ್ಥೇ ನಿವಿಶಮಾನಸ್ಯ ವಿಷಮಿಶ್ರಂ ಯಥಾ ಮಧು||

ರಾಜನ್! ಈ ಎಲ್ಲ ವಿಲಾಪಗಳೂ ವಿಷಯಗಳಿಗೆ ಅಂಟಿಕೊಂಡಿರುವವನ ವಿಷಮಿಶ್ರಿತ ಜೇತುತುಪ್ಪದಂತೆ ಎಂದು ನನಗೆ ಅನಿಸುತ್ತಿದೆ.

07062011a ನ ತಥಾ ಮನ್ಯತೇ ಕೃಷ್ಣೋ ರಾಜಾನಂ ಪಾಂಡವಂ ಪುರಾ|

07062011c ಭೀಷ್ಮಂ ನೈವ ಚ ದ್ರೋಣಂ ಯಥಾ ತ್ವಾಂ ಮನ್ಯತೇ ನೃಪ||

ನೃಪ! ಮೊದಮೊದಲು ಕೃಷ್ಣನು ನಿನಗೆ ಮನ್ನಣೆ ನೀಡುವಷ್ಟು ಪಾಂಡವ ರಾಜನಿಗಾಗಲೀ, ಭೀಷ್ಮನಿಗಾಗಲೀ, ದ್ರೋಣನಿಗಾಗಲೀ ನೀಡುತ್ತಿರಲಿಲ್ಲ.

07062012a ವ್ಯಜಾನತ ಯದಾ ತು ತ್ವಾಂ ರಾಜಧರ್ಮಾದಧಶ್ಚ್ಯುತಂ|

07062012c ತದಾ ಪ್ರಭೃತಿ ಕೃಷ್ಣಸ್ತ್ವಾಂ ನ ತಥಾ ಬಹು ಮನ್ಯತೇ||

ನೀನು ರಾಜಧರ್ಮದಿಂದ ಚ್ಯುತನಾಗಿದ್ದೀಯೆಂದು ಅವನಿಗೆ ತಿಳಿದಾಗಿನಿಂದ ಕೃಷ್ಣನು ನಿನ್ನನ್ನು ಬಹಳವಾಗಿ ಮನ್ನಿಸುತ್ತಿಲ್ಲ.

07062013a ಪರುಷಾಣ್ಯುಚ್ಯಮಾನಾಂಶ್ಚ ಯಥಾ ಪಾರ್ಥಾನುಪೇಕ್ಷಸೇ|

07062013c ತಸ್ಯಾನುಬಂಧಃ ಪ್ರಾಪ್ತಸ್ತ್ವಾಂ ಪುತ್ರಾಣಾಂ ರಾಜ್ಯಕಾಮುಕಂ||

ರಾಜ್ಯವನ್ನು ಬಯಸಿದ ನಿನ್ನ ಪುತ್ರರು ಪಾರ್ಥರನ್ನು ಅನುಪೇಕ್ಷಿಸಿ ಕ್ರೂರಮಾತುಗಳನ್ನು ಆಡಿದ್ದರು. ಅದರ ಫಲವನ್ನು ನೀನು ಪಡೆಯುತ್ತಿದ್ದೀಯೆ.

07062014a ಪಿತೃಪೈತಾಮಹಂ ರಾಜ್ಯಮಪವೃತ್ತಂ ತದಾನಘ|

07062014c ಅಥ ಪಾರ್ಥೈರ್ಜಿತಾಂ ಕೃತ್ಸ್ನಾಂ ಪೃಥಿವೀಂ ಪ್ರತ್ಯಪದ್ಯಥಾಃ||

ಅನಘ! ಪಿತೃ-ಪಿತಾಮಹರ ಈ ರಾಜ್ಯವು ಆಪತ್ತಿನಲ್ಲಿದೆ. ಈಗ ಪಾರ್ಥರಿಂದ ಜಯಿಸಲ್ಪಟ್ಟ ಇಡೀ ಪೃಥ್ವಿಯನ್ನು ಒಂದುಗೂಡಿಸು.

07062015a ಪಾಂಡುನಾವರ್ಜಿತಂ ರಾಜ್ಯಂ ಕೌರವಾಣಾಂ ಯಶಸ್ತಥಾ|

07062015c ತತಶ್ಚಾಭ್ಯಧಿಕಂ ಭೂಯಃ ಪಾಂಡವೈರ್ಧರ್ಮಚಾರಿಭಿಃ||

ಪಾಂಡುವು ರಾಜ್ಯವನ್ನೂ ಕೌರವರ ಯಶಸ್ಸನ್ನೂ ಗಳಿಸಿದ್ದನು. ಧರ್ಮಚಾರಿಗಳಾದ ಪಾಂಡವರು ಅದನ್ನು ಇನ್ನೂ ಹೆಚ್ಚಿಸಿದರು.

07062016a ತೇಷಾಂ ತತ್ತಾದೃಶಂ ಕರ್ಮ ತ್ವಾಮಾಸಾದ್ಯ ಸುನಿಷ್ಫಲಂ|

07062016c ಯತ್ಪಿತ್ರ್ಯಾದ್ಭ್ರಂಶಿತಾ ರಾಜ್ಯಾತ್ತ್ವಯೇಹಾಮಿಷಗೃದ್ಧಿನಾ||

ಆದರೆ ಅವರು ನಿನ್ನ ಸಂಗದಲ್ಲಿ ಬಂದು ಅವರ ಆ ಕರ್ಮವು ನಿಷ್ಫಲವಾಯಿತು. ಆಸೆಬುರುಕನಾದ ನಿನ್ನಿಂದ ಅವರು ತಮ್ಮ ಪಿತ್ರಾರ್ಜಿತ ರಾಜ್ಯವನ್ನೂ ಕಳೆದುಕೊಂಡರು.

07062017a ಯತ್ಪುನರ್ಯುದ್ಧಕಾಲೇ ತ್ವಂ ಪುತ್ರಾನ್ಗರ್ಹಯಸೇ ನೃಪ|

07062017c ಬಹುಧಾ ವ್ಯಾಹರನ್ದೋಷಾನ್ನ ತದದ್ಯೋಪಪದ್ಯತೇ||

ನೃಪ! ಈಗ ಪುನಃ ಯುದ್ಧದ ಸಮಯದಲ್ಲಿ ನೀನು ನಿನ್ನ ಮಕ್ಕಳನ್ನು ಅವರ ಅನೇಕ ವ್ಯವಹಾರ ದೋಷಗಳನ್ನು ಎತ್ತಿ ತೋರಿಸುತ್ತಾ ದೂರುತ್ತಿದ್ದೀಯೆ. ಇದು ಸರಿಯಲ್ಲ.

07062018a ನ ಹಿ ರಕ್ಷಂತಿ ರಾಜಾನೋ ಯುಧ್ಯಂತೋ ಜೀವಿತಂ ರಣೇ|

07062018c ಚಮೂಂ ವಿಗಾಹ್ಯ ಪಾರ್ಥಾನಾಂ ಯುಧ್ಯಂತೇ ಕ್ಷತ್ರಿಯರ್ಷಭಾಃ||

ರಣದಲ್ಲಿ ಯುದ್ಧಮಾಡುತ್ತಿರುವಾಗ ರಾಜರು ತಮ್ಮ ಜೀವವನ್ನೂ ರಕ್ಷಿಸಿಕೊಳ್ಳುವುದಿಲ್ಲ. ಈ ಕ್ಷತ್ರಿಯರ್ಷಭರು ಪಾಂಡವರ ಸೇನೆಗಳನ್ನು ನುಗ್ಗಿ ಯುದ್ಧಮಾಡುತ್ತಿದ್ದಾರೆ.

07062019a ಯಾಂ ತು ಕೃಷ್ಣಾರ್ಜುನೌ ಸೇನಾಂ ಯಾಂ ಸಾತ್ಯಕಿವೃಕೋದರೌ|

07062019c ರಕ್ಷೇರನ್ಕೋ ನು ತಾಂ ಯುಧ್ಯೇಚ್ಚಮೂಮನ್ಯತ್ರ ಕೌರವೈಃ||

ಕೌರವರಲ್ಲದೇ ಬೇರೆ ಯಾರು ತಾನೇ ಕೃಷ್ಣಾರ್ಜುನರು ಮತ್ತು ಸಾತ್ಯಕಿ-ವೃಕೋದರರು ರಕ್ಷಿಸುತ್ತಿರುವ ಸೇನೆಯನ್ನು ಎದುರಿಸಿ ಯುದ್ಧಮಾಡಿಯಾರು?

07062020a ಯೇಷಾಂ ಯೋದ್ಧಾ ಗುಡಾಕೇಶೋ ಯೇಷಾಂ ಮಂತ್ರೀ ಜನಾರ್ದನಃ|

07062020c ಯೇಷಾಂ ಚ ಸಾತ್ಯಕಿರ್ಗೋಪ್ತಾ ಯೇಷಾಂ ಗೋಪ್ತಾ ವೃಕೋದರಃ||

07062021a ಕೋ ಹಿ ತಾನ್ವಿಷಹೇದ್ಯೋದ್ಧುಂ ಮರ್ತ್ಯಧರ್ಮಾ ಧನುರ್ಧರಃ|

07062021c ಅನ್ಯತ್ರ ಕೌರವೇಯೇಭ್ಯೋ ಯೇ ವಾ ತೇಷಾಂ ಪದಾನುಗಾಃ||

ನಿನ್ನನ್ನು ಅನುಸರಿಸಿ ನಡೆಯುವ ಕೌರವರನ್ನು ಬಿಟ್ಟರೆ ಬೇರೆ ಯಾವ ಮರ್ತ್ಯಧರ್ಮಕ್ಕೊಳಗಾದ ಧನುರ್ಧರನು ಆ ಸೇನೆಯನ್ನು - ಯಾರ ಯೋಧನು ಗುಡಾಕೇಶನೋ, ಯಾರ ಮಂತ್ರಿಯು ಜನಾರ್ದನನೋ, ಯಾರ ರಕ್ಷಕರು ಸಾತ್ಯಕಿ-ವೃಕೋದರರೋ - ಎದುರಿಸಿ ಯುದ್ಧಮಾಡಲು ಬಯಸುತ್ತಾರೆ?

07062022a ಯಾವತ್ತು ಶಕ್ಯತೇ ಕರ್ತುಮನುರಕ್ತೈರ್ಜನಾಧಿಪೈಃ|

07062022c ಕ್ಷತ್ರಧರ್ಮರತೈಃ ಶೂರೈಸ್ತಾವತ್ಕುರ್ವಂತಿ ಕೌರವಾಃ||

ಅನುರಕ್ತರಾದ, ಕ್ಷತ್ರಧರ್ಮರತರಾದ, ಶೂರರಾದ ಕೌರವ ಜನಾಧಿಪರು ಏನು ಶಕ್ಯವೋ ಅವೆಲ್ಲವನ್ನೂ ಮಾಡುತ್ತಿದ್ದಾರೆ.

07062023a ಯಥಾ ತು ಪುರುಷವ್ಯಾಘ್ರೈರ್ಯುದ್ಧಂ ಪರಮಸಂಕಟಂ|

07062023c ಕುರೂಣಾಂ ಪಾಂಡವೈಃ ಸಾರ್ಧಂ ತತ್ಸರ್ವಂ ಶೃಣು ತತ್ತ್ವತಃ||

ಈಗ ಕುರು ಮತ್ತು ಪಾಂಡವ ಪುರುಷವ್ಯಾಘ್ರರ ನಡುವೆ ನಡೆದ ಪರಮ ಸಂಕಟದ ಯುದ್ಧವನ್ನು ಎಲ್ಲವನ್ನೂ ನಡೆದ ಹಾಗೆ ಕೇಳು!”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಂಜಯವಾಕ್ಯೇ ದ್ವಿಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಂಜಯವಾಕ್ಯ ಎನ್ನುವ ಅರವತ್ತೆರಡನೇ ಅಧ್ಯಾಯವು.

Related image

Comments are closed.