Drona Parva: Chapter 61

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ: ಜಯದ್ರಥವಧ ಪರ್ವ

೬೧

ಅಭಿಮನ್ಯುವಿನ ವಧೆಯ ಮರುದಿನದ ಯುದ್ಧದ ಕುರಿತು ಧೃತರಾಷ್ಟ್ರನು ಸಂಜಯನನ್ನು ಪ್ರಶ್ನಿಸುತ್ತಾ ಶೋಕಿಸುವುದು (೧-೫೧).

07061001 ಧೃತರಾಷ್ಟ್ರ ಉವಾಚ|

07061001a ಶ್ವೋಭೂತೇ ಕಿಮಕಾರ್ಷುಸ್ತೇ ದುಃಖಶೋಕಸಮನ್ವಿತಾಃ|

07061001c ಅಭಿಮನ್ಯೌ ಹತೇ ತತ್ರ ಕೇ ವಾಯುಧ್ಯಂತ ಮಾಮಕಾಃ||

ಧೃತರಾಷ್ಟ್ರನು ಹೇಳಿದನು: “ಅಭಿಮನ್ಯುವಿನ ವಧೆಯ ಮರುದಿನ ದುಃಖಶೋಕಸಮನ್ವಿತರಾದ ಅವರು ಏನು ಮಾಡಿದರು? ನಮ್ಮವರಲ್ಲಿ ಯಾರು ಅಲ್ಲಿ ಅವರೊಂದಿಗೆ ಯುದ್ಧ ಮಾಡಿದರು?

07061002a ಜಾನಂತಸ್ತಸ್ಯ ಕರ್ಮಾಣಿ ಕುರವಃ ಸವ್ಯಸಾಚಿನಃ|

07061002c ಕಥಂ ತತ್ಕಿಲ್ಬಿಷಂ ಕೃತ್ವಾ ನಿರ್ಭಯಾ ಬ್ರೂಹಿ ಮಾಮಕಾಃ||

ಸವ್ಯಸಾಚಿಯ ಸಾಧನೆಗಳನ್ನು ತಿಳಿದಿದ್ದ ನಮ್ಮವರು ಅಂಥಹ ಪಾಪಕೃತ್ಯವನ್ನು ಮಾಡಿಯೂ ಹೇಗೆ ನಿರ್ಭಯರಾಗಿದ್ದರು ಹೇಳು!

07061003a ಪುತ್ರಶೋಕಾಭಿಸಂತಪ್ತಂ ಕ್ರುದ್ಧಂ ಮೃತ್ಯುಮಿವಾಂತಕಂ|

07061003c ಆಯಾಂತಂ ಪುರುಷವ್ಯಾಘ್ರಂ ಕಥಂ ದದೃಶುರಾಹವೇ||

ಪುತ್ರಶೋಕಾಭಿಸಂತಪ್ತನಾಗಿ ಕ್ರುದ್ಧನಾಗಿ ಮೃತ್ಯು-ಅಂತಕನಂತೆ ಯುದ್ಧಕ್ಕೆ ಬರುತ್ತಿದ್ದ ಆ ಪುರುಷವ್ಯಾಘ್ರನನ್ನು ಹೇಗೆ ನೋಡಿದರು?

07061004a ಕಪಿರಾಜಧ್ವಜಂ ಸಂಖ್ಯೇ ವಿಧುನ್ವಾನಂ ಮಹದ್ಧನುಃ|

07061004c ದೃಷ್ಟ್ವಾ ಪುತ್ರಪರಿದ್ಯೂನಂ ಕಿಮಕುರ್ವಂತ ಮಾಮಕಾಃ||

ಕಪಿರಾಜನ ಧ್ವಜವುಳ್ಳ, ಮಹಾಧನುಸ್ಸನ್ನು ಟೇಂಕರಿಸುತ್ತಿದ್ದ ಆ ಶತ್ರುವನ್ನು ನೋಡಿ ನನ್ನ ಮಕ್ಕಳು ಏನು ಮಾಡಿದರು?

07061005a ಕಿಂ ನು ಸಂಜಯ ಸಂಗ್ರಾಮೇ ವೃತ್ತಂ ದುರ್ಯೋಧನಂ ಪ್ರತಿ|

07061005c ಪರಿದೇವೋ ಮಹಾನತ್ರ ಶ್ರುತೋ ಮೇ ನಾಭಿನಂದನಂ||

ಸಂಜಯ! ಸಂಗ್ರಾಮದಲ್ಲಿ ದುರ್ಯೋಧನನ ಕಡೆಯಲ್ಲಿ ಏನಾಯಿತು? ಅಲ್ಲಿ ಮಹಾ ಪರಿವೇದನೆಯಿದ್ದಂತಿದೆ! ಅವರ ಹರ್ಷದ ಕೂಗು ನನಗೆ ಕೇಳಿಸುತ್ತಿಲ್ಲ!

07061006a ಬಭೂವುರ್ಯೇ ಮನೋಗ್ರಾಹ್ಯಾಃ ಶಬ್ದಾಃ ಶ್ರುತಿಸುಖಾವಹಾಃ|

07061006c ನ ಶ್ರೂಯಂತೇಽದ್ಯ ತೇ ಸರ್ವೇ ಸೈಂಧವಸ್ಯ ನಿವೇಶನೇ||

ಕೇಳಿದರೆ ಸುಖವನ್ನು ನೀಡುವ, ಮನಸ್ಸಿಗೆ ಹಿಡಿಯುವ ಶಬ್ಧಗಳು ಆಗುತ್ತಿದ್ದವು. ಇಂದು ಅವೆಲ್ಲವೂ ಸೈಂಧವನ ಮನೆಯಿಂದ ಕೇಳಿಬರುತ್ತಿಲ್ಲವಲ್ಲ!

07061007a ಸ್ತುವತಾಂ ನಾದ್ಯ ಶ್ರೂಯಂತೇ ಪುತ್ರಾಣಾಂ ಶಿಬಿರೇ ಮಮ|

07061007c ಸೂತಮಾಗಧಸಂಘಾನಾಂ ನರ್ತಕಾನಾಂ ಚ ಸರ್ವಶಃ||

ಇಂದು ನನ್ನ ಪುತ್ರರ ಶಿಬಿರದಲ್ಲಿ ಎಲ್ಲಿಂದಲೂ ಸೂತ-ಮಾಗಧರ ಗುಂಪುಗಳು ಸ್ತುತಿಸುವ ಮತ್ತು ನರ್ತಕರ ಶಬ್ಧಗಳು ಕೇಳಿಬರುತ್ತಿಲ್ಲ!

07061008a ಶಬ್ದೇನ ನಾದಿತಾಭೀಕ್ಷ್ಣಮಭವದ್ಯತ್ರ ಮೇ ಶ್ರುತಿಃ|

07061008c ದೀನಾನಾಮದ್ಯ ತಂ ಶಬ್ದಂ ನ ಶೃಣೋಮಿ ಸಮೀರಿತಂ||

ಮೊದಲು ಆ ನಾದ ಶಬ್ಧಗಳು ನನಗೆ ಒಂದೇಸಮನೆ ಕೇಳಿಬರುತ್ತಿದ್ದವು. ಆದರೆ ಇಂದು ದೀನರಾಗಿರುವ ಅವರ ಶಿಬಿರಗಳಿಂದ ಆ ಶಬ್ಧವನ್ನು ನಾನು ಕೇಳುತ್ತಿಲ್ಲ.

07061009a ನಿವೇಶನೇ ಸತ್ಯಧೃತೇಃ ಸೋಮದತ್ತಸ್ಯ ಸಂಜಯ|

07061009c ಆಸೀನೋಽಹಂ ಪುರಾ ತಾತ ಶಬ್ದಮಶ್ರೌಷಮುತ್ತಮಂ||

ಮಗೂ! ಸಂಜಯ! ಸತ್ಯಧೃತ ಸೋಮದತ್ತನ ಮನೆಯಿಂದ ಹಿಂದೆ ಉತ್ತಮ ಶಬ್ಧವು ಕೇಳಿಬರುತ್ತಿತ್ತು.

07061010a ತದದ್ಯ ಹೀನಪುಣ್ಯೋಽಹಮಾರ್ತಸ್ವರನಿನಾದಿತಂ|

07061010c ನಿವೇಶನಂ ಹತೋತ್ಸಾಹಂ ಪುತ್ರಾಣಾಂ ಮಮ ಲಕ್ಷಯೇ||

ಆದರೆ ಇಂದು ಪುಣ್ಯವನ್ನು ಕಳೆದುಕೊಂಡಿರುವ ನಾನು ಆರ್ತಸ್ವರವನ್ನು ಕೇಳುತ್ತಿದ್ದೇನೆ. ನನ್ನ ಮಕ್ಕಳ ಮನೆಗಳು ಹತಾಶವಾಗಿವೆಯೆಂದು ನನಗೆ ಕಾಣುತ್ತಿವೆ.

07061011a ವಿವಿಂಶತೇರ್ದುರ್ಮುಖಸ್ಯ ಚಿತ್ರಸೇನವಿಕರ್ಣಯೋಃ|

07061011c ಅನ್ಯೇಷಾಂ ಚ ಸುತಾನಾಂ ಮೇ ನ ತಥಾ ಶ್ರೂಯತೇ ಧ್ವನಿಃ||

ವಿವಿಂಶತಿ, ದುರ್ಮುಖ, ಚಿತ್ರಸೇನ, ವಿಕರ್ಣ ಮತ್ತು ನನ್ನ ಇತರ ಮಕ್ಕಳ ಮನೆಗಳಿಂದಲೂ ನನಗೆ ಅಂಥಹ ಧ್ವನಿಯು ಕೇಳಿಸುತ್ತಿಲ್ಲ.

07061012a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾ ಯಂ ಶಿಷ್ಯಾಃ ಪರ್ಯುಪಾಸತೇ|

07061012c ದ್ರೋಣಪುತ್ರಂ ಮಹೇಷ್ವಾಸಂ ಪುತ್ರಾಣಾಂ ಮೇ ಪರಾಯಣಂ||

07061013a ವಿತಂಡಾಲಾಪಸಂಲಾಪೈರ್ಹುತಯಾಚಿತವಂದಿತೈಃ|

07061013c ಗೀತೈಶ್ಚ ವಿವಿಧೈರಿಷ್ಟೈ ರಮತೇ ಯೋ ದಿವಾನಿಶಂ||

07061014a ಉಪಾಸ್ಯಮಾನೋ ಬಹುಭಿಃ ಕುರುಪಾಂಡವಸಾತ್ವತೈಃ|

07061014c ಸೂತ ತಸ್ಯ ಗೃಹೇ ಶಬ್ಧೋ ನಾದ್ಯ ದ್ರೌಣೇರ್ಯಥಾ ಪುರಾ||

ಸೂತ! ಯಾರನ್ನು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ ಶಿಷ್ಯರು ಉಪಾಸಿಸುತ್ತಿದ್ದರೋ ಆ ದ್ರೋಣಪುತ್ರ, ಮಹೇಷ್ವಾಸ, ನನ್ನ ಮಕ್ಕಳಲ್ಲಿ ನಿರತನಾಗಿರುವ, ಯಾರು ಹಗಲು-ರಾತ್ರಿ ವಾದ-ವಿವಾದ, ಆಲಾಪ-ಸಲ್ಲಾಪಗಳಲ್ಲಿ, ವಿವಿಧ ಇಷ್ಟ ಗೀತಗಳಿಂದ ರಮಿಸುತ್ತಿದ್ದ, ಅನೇಕ ಕುರು-ಪಾಂಡವ-ಸಾತ್ವತರಿಂದ ಗೌರವಿಸಲ್ಪಡುವ ಆ ದ್ರೌಣಿಯ ಮನೆಯಿಂದ ಮೊದಲಿನಂತೆ ಆ ಶಬ್ಧಗಳು ಕೇಳಿಬರುತ್ತಿಲ್ಲ.

07061015a ದ್ರೋಣಪುತ್ರಂ ಮಹೇಷ್ವಾಸಂ ಗಾಯನಾ ನರ್ತಕಾಶ್ಚ ಯೇ|

07061015c ಅತ್ಯರ್ಥಮುಪತಿಷ್ಠಂತಿ ತೇಷಾಂ ನ ಶ್ರೂಯತೇ ಧ್ವನಿಃ||

ಮಹೇಷ್ವಾಸ ದ್ರೋಣಪುತ್ರನನ್ನು ಗಾಯಕರು ಮತ್ತು ನರ್ತಕರು ಅನೇಕ ಸಂಖ್ಯೆಗಳಲ್ಲಿ ಸೇವೆಗೈಯುತ್ತಿದ್ದರು. ಅವರ ಧ್ವನಿಯೂ ಕೇಳಿ ಬರುತ್ತಿಲ್ಲ.

07061016a ವಿಂದಾನುವಿಂದಯೋಃ ಸಾಯಂ ಶಿಬಿರೇ ಯೋ ಮಹಾಧ್ವನಿಃ|

07061016c ಶ್ರೂಯತೇ ಸೋಽದ್ಯ ನ ತಥಾ ಕೇಕಯಾನಾಂ ಚ ವೇಶ್ಮಸು||

ಸಾಯಂಕಾಲ ವಿಂದಾನುವಿಂದರ ಶಿಬಿರದಲ್ಲಿ ಮತ್ತು ಹಾಗೆಯೇ ಕೇಕಯರ ಮನೆಯಲ್ಲಿ ಯಾವ ಮಹಾಧ್ವನಿಯು ಕೇಳಿಬರುತ್ತಿತ್ತೋ ಅದು ಇಂದು ಕೇಳಿಬರುತ್ತಿಲ್ಲ.

07061017a ನಿತ್ಯಪ್ರಮುದಿತಾನಾಂ ಚ ತಾಲಗೀತಸ್ವನೋ ಮಹಾನ್|

07061017c ನೃತ್ಯತಾಂ ಶ್ರೂಯತೇ ತಾತ ಗಣಾನಾಂ ಸೋಽದ್ಯ ನ ಧ್ವನಿಃ||

ಅಯ್ಯಾ! ನಿತ್ಯವೂ ಚಪ್ಪಾಳೆ-ಗೀತಗಳ ಮಹಾ ಧ್ವನಿಯೊಂದಿಗೆ ಸಂತೋಷಪಡುತ್ತಿದ್ದ, ಕೇಳುತ್ತಾ ಕುಣಿಯುತ್ತಿದ್ದ ಆ ಗಣಗಳ ಧ್ವನಿಯು ಇಂದು ಕೇಳಿಸುತ್ತಿಲ್ಲ.

07061018a ಸಪ್ತತಂತೂನ್ವಿತನ್ವಾನಾ ಯಮುಪಾಸಂತಿ ಯಾಜಕಾಃ|

07061018c ಸೌಮದತ್ತಿಂ ಶ್ರುತನಿಧಿಂ ತೇಷಾಂ ನ ಶ್ರೂಯತೇ ಧ್ವನಿಃ||

ಯಾರನ್ನು ಏಳು ಎಳೆಗಳನ್ನು ಹಾಸುವ ಯಾಜಕರು ಉಪಾಸಿಸುತ್ತಾರೋ ಆ ಶ್ರುತನಿಧಿ ಸೌಮದತ್ತಿಯ ಮನೆಯಿಂದ ಧ್ವನಿಯು ಕೇಳಿಬರುತ್ತಿಲ್ಲ.

07061019a ಜ್ಯಾಘೋಷೋ ಬ್ರಹ್ಮಘೋಷಶ್ಚ ತೋಮರಾಸಿರಥಧ್ವನಿಃ|

07061019c ದ್ರೋಣಸ್ಯಾಸೀದವಿರತೋ ಗೃಹೇ ತನ್ನ ಶೃಣೋಮ್ಯಹಂ||

ದ್ರೋಣನ ಮನೆಯಲ್ಲಿ ಅವಿರತವಾಗಿ ಕೇಳಿಬರುತ್ತಿದ್ದ ಶಿಂಜಿನಿಯ ಟೇಂಕಾರ, ಬ್ರಹ್ಮಘೋಷ ಮತ್ತು ಖಡ್ಗ-ತೋಮರಗಳ ಧ್ವನಿಯು ನನಗೆ ಕೇಳುತ್ತಿಲ್ಲ.

07061020a ನಾನಾದೇಶಸಮುತ್ಥಾನಾಂ ಗೀತಾನಾಂ ಯೋಽಭವತ್ಸ್ವನಃ|

07061020c ವಾದಿತ್ರನಾದಿತಾನಾಂ ಚ ಸೋಽದ್ಯ ನ ಶ್ರೂಯತೇ ಮಹಾನ್||

ಅಲ್ಲಿ ನಡೆಯುತ್ತಿದ್ದ ನಾನಾದೇಶಗಳ ಗೀತೆಗಳ ಮತ್ತು ವಾದ್ಯವನ್ನು ನುಡಿಸುವವರ ಮಹಾನ್ ಧ್ವನಿಯು ಉಂಟಾಗುತ್ತಿತ್ತು. ಅವು ಇಂದು ಕೇಳುತ್ತಿಲ್ಲ.

07061021a ಯದಾ ಪ್ರಭೃತ್ಯುಪಪ್ಲವ್ಯಾಚ್ಚಾಂತಿಮಿಚ್ಚಂ ಜನಾರ್ದನಃ|

07061021c ಆಗತಃ ಸರ್ವಭೂತಾನಾಮನುಕಂಪಾರ್ಥಮಚ್ಯುತಃ||

07061022a ತತೋಽಹಮಬ್ರುವನ್ಸೂತ ಮಂದಂ ದುರ್ಯೋಧನಂ ತದಾ|

07061022c ವಾಸುದೇವೇನ ತೀರ್ಥೇನ ಪುತ್ರ ಸಂಶಾಮ್ಯ ಪಾಂಡವೈಃ||

ಸೂತ! ಸರ್ವಭೂತಗಳ ಮೇಲಿನ ಅನುಕಂಪದಿಂದಾಗಿ ಶಾಂತಿಯನ್ನು ಇಚ್ಛಿಸಿ ಉಪಪ್ಲವದಿಂದ ಹೊರಟು ಅಚ್ಯುತ ಜನಾರ್ದನನು ಬಂದಾಗ ನಾನು ಮಂದಬುದ್ಧಿ ದುರ್ಯೋಧನನಿಗೆ ಹೇಳಿದ್ದೆ: “ಪುತ್ರ! ವಾಸುದೇವನ ಮೂಲಕ ಪಾಂಡವರೊಂದಿಗೆ ಶಾಂತಿಯನ್ನು ಪಾಲಿಸು!

07061023a ಕಾಲಪ್ರಾಪ್ತಮಹಂ ಮನ್ಯೇ ಮಾ ತ್ವಂ ದುರ್ಯೋಧನಾತಿಗಾಃ|

07061023c ಶಮೇ ಚೇದ್ಯಾಚಮಾನಂ ತ್ವಂ ಪ್ರತ್ಯಾಖ್ಯಾಸ್ಯಸಿ ಕೇಶವಂ|

07061023e ಹಿತಾರ್ಥಮಭಿಜಲ್ಪಂತಂ ನ ತಥಾಸ್ತ್ಯಪರಾಜಯಃ||

ಸಮಯವು ಬಂದೊದಗಿದೆ ಎಂದು ನನಗನ್ನಿಸುತ್ತದೆ. ನನ್ನನ್ನು ಮೀರಿ ನಡೆಯಬೇಡ! ಶಾಂತಿಯನ್ನು ಯಾಚಿಸುತ್ತಿರುವ, ನಮ್ಮ ಹಿತಕ್ಕಾಗಿ ಮಾತನಾಡುತ್ತಿರುವ ಕೇಶವನನ್ನು ದೂರಮಾಡಿದರೆ ನಿನಗೆ ಪರಾಜಯವೇ ಸರಿ!”

07061024a ಪ್ರತ್ಯಾಚಷ್ಟ ಸ ದಾಶಾರ್ಹಂ ಋಷಭಂ ಸರ್ವಧನ್ವಿನಾಂ|

07061024c ಅನುನೇಯಾನಿ ಜಲ್ಪಂತಮನಯಾನ್ನಾನ್ವಪದ್ಯತ||

ಆದರೆ ಅವನು ಒಳ್ಳೆಯದನ್ನೇ ಹೇಳುತ್ತಿದ್ದ ಸರ್ವಧನ್ವಿಗಳಿಗೆ ವೃಷಭನಂತಿದ್ದ ದಾಶಾರ್ಹನನ್ನು ತಿರಸ್ಕರಿಸಿದನು. ಹೀಗೆ ತನಗೆ ಆಪತ್ತನ್ನೇ ತಂದುಕೊಂಡನು.

07061025a ತತೋ ದುಃಶಾಸನಸ್ಯೈವ ಕರ್ಣಸ್ಯ ಚ ಮತಂ ದ್ವಯೋಃ|

07061025c ಅನ್ವವರ್ತತ ಹಿತ್ವಾ ಮಾಂ ಕೃಷ್ಟಃ ಕಾಲೇನ ದುರ್ಮತಿಃ||

ಸಾವಿನಿಂದ ಸೆಳೆಯಲ್ಪಟ್ಟು ಆ ದುರ್ಮತಿಯು ನನ್ನನ್ನು ತಿರಸ್ಕರಿಸಿ ದುಃಶಾಸನ ಮತ್ತು ಕರ್ಣ ಈ ಇಬ್ಬರ ಮತವನ್ನು ಅನುಸರಿಸಿದನು.

07061026a ನ ಹ್ಯಹಂ ದ್ಯೂತಮಿಚ್ಚಾಮಿ ವಿದುರೋ ನ ಪ್ರಶಂಸತಿ|

07061026c ಸೈಂಧವೋ ನೇಚ್ಚತೇ ದ್ಯೂತಂ ಭೀಷ್ಮೋ ನ ದ್ಯೂತಮಿಚ್ಚತಿ||

ನಾನು ದ್ಯೂತವನ್ನು ಬಯಸಿರಲಿಲ್ಲ! ವಿದುರನೂ ಅದು ಬೇಡವೆಂದು ಹೇಳಿದ್ದನು. ಸೈಂಧವನು ದ್ಯೂತವನ್ನು ಬಯಸಿರಲಿಲ್ಲ. ಭೀಷ್ಮನೂ ದ್ಯೂತವನ್ನು ಬಯಸಿರಲ್ಲ.

07061027a ಶಲ್ಯೋ ಭೂರಿಶ್ರವಾಶ್ಚೈವ ಪುರುಮಿತ್ರೋ ಜಯಸ್ತಥಾ|

07061027c ಅಶ್ವತ್ಥಾಮಾ ಕೃಪೋ ದ್ರೋಣೋ ದ್ಯೂತಂ ನೇಚ್ಚಂತಿ ಸಂಜಯ||

ಸಂಜಯ! ಶಲ್ಯ-ಭೂರಿಶ್ರವರೂ, ಪುರುಮಿತ್ರ-ಜಯರೂ, ಅಶ್ವತ್ಥಾಮ-ಕೃಪರೂ ದ್ರೋಣರೂ ದ್ಯೂತವನ್ನು ಇಚ್ಛಿಸಿರಲಿಲ್ಲ.

07061028a ಏತೇಷಾಂ ಮತಮಾಜ್ಞಾಯ ಯದಿ ವರ್ತೇತ ಪುತ್ರಕಃ|

07061028c ಸಜ್ಞಾತಿಮಿತ್ರಃ ಸಸುಹೃಚ್ಚಿರಂ ಜೀವೇದನಾಮಯಃ||

ಒಂದುವೇಳೆ ನನ್ನ ಮಗನು ಇವರೆಲ್ಲರ ಅಭಿಪ್ರಾಯವನ್ನು ತಿಳಿದುಕೊಂಡು ನಡೆದುಕೊಂಡಿದ್ದರೆ ಜ್ಞಾತಿಮಿತ್ರರೊಂದಿಗೆ, ಸುಹೃದರೊಂದಿಗೆ ದೀರ್ಘಕಾಲ ಆರೋಗ್ಯವಾಗಿ ಜೀವಿಸಬಹುದಾಗಿತ್ತು.

07061029a ಶ್ಲಕ್ಷ್ಣಾ ಮಧುರಸಂಭಾಷಾ ಜ್ಞಾತಿಮಧ್ಯೇ ಪ್ರಿಯಂವದಾಃ|

07061029c ಕುಲೀನಾಃ ಸಮ್ಮತಾಃ ಪ್ರಾಜ್ಞಾಃ ಸುಖಂ ಪ್ರಾಪ್ಸ್ಯಂತಿ ಪಾಂಡವಾಃ||

ಮೃದುವಾಗಿ ಮಧುರವಾಗಿ ಮಾತನಾಡುವ, ಕುಟುಂಬದವರೊಡನೆ ಪ್ರಿಯವಾಗಿ ಮಾತನಾಡುವ, ಕುಲೀನರೂ, ಸಮ್ಮತರೂ, ಪ್ರಾಜ್ಞರೂ ಆದ ಪಾಂಡವರು ಸುಖವನ್ನು ಪಡೆಯುತ್ತಾರೆ.

07061030a ಧರ್ಮಾಪೇಕ್ಷೋ ನರೋ ನಿತ್ಯಂ ಸರ್ವತ್ರ ಲಭತೇ ಸುಖಂ|

07061030c ಪ್ರೇತ್ಯಭಾವೇ ಚ ಕಲ್ಯಾಣಂ ಪ್ರಸಾದಂ ಪ್ರತಿಪದ್ಯತೇ||

ಧರ್ಮಾಪೇಕ್ಷನಾದ ಮನುಷ್ಯನು ಸದಾ ಸರ್ವತ್ರ ಸುಖವನ್ನು ಪಡೆಯುತ್ತಾನೆ. ಅವನು ಸಾವಿನ ನಂತರವೂ ಕಲ್ಯಾಣ ಪ್ರಸಾದವನ್ನು ಪಡೆಯುತ್ತಾನೆ.

07061031a ಅರ್ಹಂತ್ಯರ್ಧಂ ಪೃಥಿವ್ಯಾಸ್ತೇ ಭೋಕ್ತುಂ ಸಾಮರ್ಥ್ಯಸಾಧನಾಃ|

07061031c ತೇಷಾಮಪಿ ಸಮುದ್ರಾಂತಾ ಪಿತೃಪೈತಾಮಹೀ ಮಹೀ||

ಅವರು ಈ ಪೃಥ್ವಿಯನ್ನು ಭೋಗಿಸಲು ಸಾಮರ್ಥ್ಯರಾಗಿದ್ದಾರೆ ಮತ್ತು ಅವರಲ್ಲಿ ಇದಕ್ಕೆ ಸಾಧನವೂ ಇದೆ. ಸಮುದ್ರಾಂತವಾಗಿರುವ ಈ ಭೂಮಿಯು ಅವರ ಪಿತೃ-ಪಿತಾಮಹರದ್ದೂ ಹೌದು.

07061032a ನಿಯುಜ್ಯಮಾನಾಃ ಸ್ಥಾಸ್ಯಂತಿ ಪಾಂಡವಾ ಧರ್ಮವರ್ತ್ಮನಿ|

07061032c ಸಂತಿ ನೋ ಜ್ಞಾತಯಸ್ತಾತ ಯೇಷಾಂ ಶ್ರೋಷ್ಯಂತಿ ಪಾಂಡವಾಃ||

ಅಯ್ಯಾ! ನಿಯೋಜಿಸಿದ ಕೆಲಸಗಳನ್ನು ಪಾಂಡವರು ಮಾಡಿ ಧರ್ಮದಲ್ಲಿಯೇ ನಡೆದುಕೊಳ್ಳುತ್ತಾರೆ. ನನಗಿದ್ದ ಜ್ಞಾತಿಬಾಂಧವರನ್ನು ಕೂಡ ಪಾಂಡವರು ಕೇಳುತ್ತಾರೆ.

07061033a ಶಲ್ಯಸ್ಯ ಸೋಮದತ್ತಸ್ಯ ಭೀಷ್ಮಸ್ಯ ಚ ಮಹಾತ್ಮನಃ|

07061033c ದ್ರೋಣಸ್ಯಾಥ ವಿಕರ್ಣಸ್ಯ ಬಾಹ್ಲಿಕಸ್ಯ ಕೃಪಸ್ಯ ಚ||

07061034a ಅನ್ಯೇಷಾಂ ಚೈವ ವೃದ್ಧಾನಾಂ ಭರತಾನಾಂ ಮಹಾತ್ಮನಾಂ|

07061034c ತ್ವದರ್ಥಂ ಬ್ರುವತಾಂ ತಾತ ಕರಿಷ್ಯಂತಿ ವಚೋ ಹಿತಂ||

ಅಯ್ಯಾ! ಶಲ್ಯ, ಸೋಮದತ್ತ, ಮಹಾತ್ಮ ಭೀಷ್ಮ, ದ್ರೋಣ, ವಿಕರ್ಣ, ಬಾಹ್ಲಿಕ, ಕೃಪ ಮತ್ತು ಇತರ ಮಹಾತ್ಮಾ ಭಾರತ ವೃದ್ಧರ, ಅವರ ಒಳಿತಿಗಾಗಿ ಹೇಳುವ ಹಿತ ವಚನಗಳಂತೆಯೇ ಮಾಡುತ್ತಾರೆ.

07061035a ಕಂ ವಾ ತ್ವಂ ಮನ್ಯಸೇ ತೇಷಾಂ ಯಸ್ತ್ವಾ ಬ್ರೂಯಾದತೋಽನ್ಯಥಾ|

07061035c ಕೃಷ್ಣೋ ನ ಧರ್ಮಂ ಸಂಜಹ್ಯಾತ್ಸರ್ವೇ ತೇ ಚ ತ್ವದನ್ವಯಾಃ||

ನಾನು ಹೇಳಿದುದಕ್ಕೆ ವಿರೋಧವಾಗಿ ಹೇಳುವ ಬೇರೆ ಯಾರನ್ನಾದರೂ ನೀನು ಕೇಳಿದ್ದೀಯಾ? ಇಲ್ಲವೇ ಇಲ್ಲ. ಏಕೆಂದರೆ ಅವರೆಲ್ಲರೂ ಧರ್ಮದಲ್ಲಿಯೇ ನಡೆಯುವ ಕೃಷ್ಣನನ್ನು ಅನುಸರಿಸುತ್ತಾರೆ.

07061036a ಮಯಾಪಿ ಚೋಕ್ತಾಸ್ತೇ ವೀರಾ ವಚನಂ ಧರ್ಮಸಂಹಿತಂ|

07061036c ನಾನ್ಯಥಾ ಪ್ರಕರಿಷ್ಯಂತಿ ಧರ್ಮಾತ್ಮಾನೋ ಹಿ ಪಾಂಡವಾಃ||

ಧರ್ಮಯುಕ್ತವಾದ ಮಾತನ್ನು ನಾನೇ ಹೇಳಿದರೂ ಆ ವೀರರು ನನ್ನ ಮಾತನ್ನು ಖಂಡಿತವಾಗಿ ತಿರಸ್ಕರಿಸುವುದಿಲ್ಲ. ಏಕೆಂದರೆ ಪಾಂಡವರು ಧರ್ಮಾತ್ಮರು.

07061037a ಇತ್ಯಹಂ ವಿಲಪನ್ಸೂತ ಬಹುಶಃ ಪುತ್ರಮುಕ್ತವಾನ್|

07061037c ನ ಚ ಮೇ ಶ್ರುತವಾನ್ಮೂಢೋ ಮನ್ಯೇ ಕಾಲಸ್ಯ ಪರ್ಯಯಂ||

ಸೂತ! ಹೀಗೆ ನಾನು ವಿಲಪಿಸುತ್ತಾ ಮಗನಿಗೆ ಬಹಳಷ್ಟನ್ನು ಹೇಳಿದ್ದೆನು. ಆದರೆ ಆ ಮೂಢನು ನನ್ನನ್ನು ಕೇಳಿಸಿಕೊಳ್ಳಲಿಲ್ಲ. ಇದು ಕಾಲದ ವೈಪರೀತ್ಯವೆಂದೇ ಭಾವಿಸುತ್ತೇನೆ.

07061038a ವೃಕೋದರಾರ್ಜುನೌ ಯತ್ರ ವೃಷ್ಣಿವೀರಶ್ಚ ಸಾತ್ಯಕಿಃ|

07061038c ಉತ್ತಮೌಜಾಶ್ಚ ಪಾಂಚಾಲ್ಯೋ ಯುಧಾಮನ್ಯುಶ್ಚ ದುರ್ಜಯಃ||

07061039a ಧೃಷ್ಟದ್ಯುಮ್ನಶ್ಚ ದುರ್ಧರ್ಷಃ ಶಿಖಂಡೀ ಚಾಪರಾಜಿತಃ|

07061039c ಅಶ್ಮಕಾಃ ಕೇಕಯಾಶ್ಚೈವ ಕ್ಷತ್ರಧರ್ಮಾ ಚ ಸೌಮಕಿಃ||

07061040a ಚೈದ್ಯಶ್ಚ ಚೇಕಿತಾನಶ್ಚ ಪುತ್ರಃ ಕಾಶ್ಯಸ್ಯ ಚಾಭಿಭುಃ|

07061040c ದ್ರೌಪದೇಯಾ ವಿರಾಟಶ್ಚ ದ್ರುಪದಶ್ಚ ಮಹಾರಥಃ|

07061040e ಯಮೌ ಚ ಪುರುಷವ್ಯಾಘ್ರೌ ಮಂತ್ರೀ ಚ ಮಧುಸೂದನಃ||

07061041a ಕ ಏತಾಂ ಜಾತು ಯುಧ್ಯೇತ ಲೋಕೇಽಸ್ಮಿನ್ವೈ ಜಿಜೀವಿಷುಃ|

ಎಲ್ಲಿ ವೃಕೋದರ-ಅರ್ಜುನರು, ವೃಷ್ಣಿವೀರ ಸಾತ್ಯಕಿ, ಪಾಂಚಾಲ್ಯ ಉತ್ತಮೌಜ, ದುರ್ಜಯ ಯುಧಾಮನ್ಯು, ದುರ್ಧರ್ಷ ಧೃಷ್ಟದ್ಯುಮ್ನ, ಅಪರಾಜಿತ ಶಿಖಂಡೀ, ಅಶ್ಮಕರು, ಕೇಕಯರು, ಕ್ಷತ್ರಧರ್ಮ, ಸೌಮಕಿ, ಚೈದ್ಯ, ಚೇಕಿತಾನ, ಕಾಶ್ಯನ ಮಗ ಅಭಿಭು, ದ್ರೌಪದೇಯರು, ವಿರಾಟ, ಮಹಾರಥ ದ್ರುಪದ, ಪುರುಷವ್ಯಾಘ್ರರಾದ ಯಮಳರು, ಮತ್ತು ಮಂತ್ರಿ ಮಧುಸೂದನರಿರುವರೋ ಅವರೊಡನೆ ಈ ಲೋಕದಲ್ಲಿ ಜೀವಿಸ ಬಯಸುವ ಯಾರುತಾನೇ ಯುದ್ಧಮಾಡಿಯಾರು?

07061041c ದಿವ್ಯಮಸ್ತ್ರಂ ವಿಕುರ್ವಾಣಾನ್ಸಂಹರೇಯುರರಿಂದಮಾಃ||

07061042a ಅನ್ಯೋ ದುರ್ಯೋಧನಾತ್ಕರ್ಣಾಚ್ಚಕುನೇಶ್ಚಾಪಿ ಸೌಬಲಾತ್|

07061042c ದುಃಶಾಸನಚತುರ್ಥಾನಾಂ ನಾನ್ಯಂ ಪಶ್ಯಾಮಿ ಪಂಚಮಂ||

ದಿವ್ಯಾಸ್ತ್ರಗಳನ್ನು ಪ್ರಯೋಗಿಸಿ ಸಂಹರಿಸುವ ಈ ಅರಿಂದಮರನ್ನು ಎದುರಿಸಲು ದುರ್ಯೋಧನ, ಕರ್ಣ, ಶಕುನಿ ಸೌಬಲ ಮತ್ತು ದುಃಶಾಸನ ಈ ನಾಲ್ಕುಮಂದಿಯನ್ನು ಬಿಟ್ಟು ಬೇರೆ ಯಾವ ಐದನೆಯವನನ್ನೂ ನಾನು ಕಾಣೆನು.

07061043a ಯೇಷಾಮಭೀಶುಹಸ್ತಃ ಸ್ಯಾದ್ವಿಷ್ವಕ್ಸೇನೋ ರಥೇ ಸ್ಥಿತಃ|

07061043c ಸನ್ನದ್ಧಶ್ಚಾರ್ಜುನೋ ಯೋದ್ಧಾ ತೇಷಾಂ ನಾಸ್ತಿ ಪರಾಜಯಃ||

ಯಾರಕಡೆ ವಿಷ್ವಕ್ಸೇನನೇ ಚಾವಟಿಯನ್ನು ಹಿಡಿದು ರಥದಲ್ಲಿರುವನೋ, ಯಾರ ಯೋಧನು ಸನ್ನದ್ಧನಾದ ಅರ್ಜುನನೋ ಅವರಿಗೆ ಪರಾಜಯವೆನ್ನುವುದು ಇಲ್ಲ.

07061044a ತೇಷಾಂ ಮಮ ವಿಲಾಪಾನಾಂ ನ ಹಿ ದುರ್ಯೋಧನಃ ಸ್ಮರೇತ್|

07061044c ಹತೌ ಹಿ ಪುರುಷವ್ಯಾಘ್ರೌ ಭೀಷ್ಮದ್ರೋಣೌ ತ್ವಮಾತ್ಥ ಮೇ||

ಆ ನನ್ನ ವಿಲಾಪಗಳು ದುರ್ಯೋಧನನಿಗೆ ನೆನಪೂ ಇಲ್ಲ. ಪುರುಷವ್ಯಾಘ್ರರಾದ ಭೀಷ್ಮ-ದ್ರೋಣರು ಹತರಾದರೆಂದು ನನಗೆ ಹೇಳಿದೆ.

07061045a ತೇಷಾಂ ವಿದುರವಾಕ್ಯಾನಾಮುಕ್ತಾನಾಂ ದೀರ್ಘದರ್ಶಿನಾಂ|

07061045c ದೃಷ್ಟ್ವೇಮಾಂ ಫಲನಿರ್ವೃತ್ತಿಂ ಮನ್ಯೇ ಶೋಚಂತಿ ಪುತ್ರಕಾಃ||

ದೂರದೃಷ್ಟಿಯ ವಿದುರನು ಹೇಳಿದ ಆ ಮಾತುಗಳು ಫಲವನ್ನು ನೀಡುತ್ತಿರುವುದನ್ನು ಕಂಡು ನನ್ನ ಮಕ್ಕಳು ಶೋಕಿಸುತ್ತಿರಬಹುದೆಂದು ಅನಿಸುತ್ತಿದೆ.

07061046a ಹಿಮಾತ್ಯಯೇ ಯಥಾ ಕಕ್ಷಂ ಶುಷ್ಕಂ ವಾತೇರಿತೋ ಮಹಾನ್|

07061046c ಅಗ್ನಿರ್ದಹೇತ್ತಥಾ ಸೇನಾಂ ಮಾಮಿಕಾಂ ಸ ಧನಂಜಯಃ||

ಛಳಿಗಾಲದ ಕೊನೆಯಲ್ಲಿ ಒಣಗಿದ ಹುಲ್ಲುರಾಶಿಯನ್ನು ಭಿರುಗಾಳಿಯ ಸಹಾಯದಿಂದ ಅಗ್ನಿಯು ಹೇಗೆ ದಹಿಸುತ್ತಾನೋ ಹಾಗೆ ಆ ಧನಂಜಯನು ನನ್ನ ಸೇನೆಯನ್ನು ದಹಿಸುತ್ತಿದ್ದಾನೆ.

07061047a ಆಚಕ್ಷ್ವ ತದ್ಧಿ ನಃ ಸರ್ವಂ ಕುಶಲೋ ಹ್ಯಸಿ ಸಂಜಯ|

07061047c ಯದುಪಾಯಾತ್ತು ಸಾಯಾಹ್ನೇ ಕೃತ್ವಾ ಪಾರ್ಥಸ್ಯ ಕಿಲ್ಬಿಷಂ|

07061047e ಅಭಿಮನ್ಯೌ ಹತೇ ತಾತ ಕಥಮಾಸೀನ್ ಮನೋ ಹಿ ವಃ||

ಸಂಜಯ! ನೀನು ಕುಶಲನಾಗಿದ್ದೀಯೆ. ಅಲ್ಲಿ ನಡೆದುದೆಲ್ಲವನ್ನೂ ನನಗೆ ಹೇಳು. ಆ ಸಾಯಂಕಾಲ ಪಾರ್ಥನಿಗೆ ದುಃಖವನ್ನು ಕೊಟ್ಟು ಏನಾಯಿತು? ಅಯ್ಯಾ! ಅಭಿಮನ್ಯುವು ಹತನಾದ ನಂತರ ನಿನ್ನ ಮನಸ್ಸು ಹೇಗಿದ್ದಿತು?

07061048a ನ ಜಾತು ತಸ್ಯ ಕರ್ಮಾಣಿ ಯುಧಿ ಗಾಂಡೀವಧನ್ವನಃ|

07061048c ಅಪಕೃತ್ವಾ ಮಹತ್ತಾತ ಸೋಢುಂ ಶಕ್ಷ್ಯಂತಿ ಮಾಮಕಾಃ||

ಅಯ್ಯಾ! ಗಾಂಡೀವಧನ್ವಿಯನ್ನು ಅಪಮಾನಿಸಿ ನನ್ನವರು ಯುದ್ಧದಲ್ಲಿ ಅವನ ಮಹಾ ಕರ್ಮಗಳನ್ನು ತಡೆದುಕೊಳ್ಳಲು ಶಕ್ಯರಾಗಿಲ್ಲ.

07061049a ಕಿಂ ನು ದುರ್ಯೋಧನಃ ಕೃತ್ಯಂ ಕರ್ಣಃ ಕೃತ್ಯಂ ಕಿಮಬ್ರವೀತ್|

07061049c ದುಃಶಾಸನಃ ಸೌಬಲಶ್ಚ ತೇಷಾಮೇವಂ ಗತೇ ಅಪಿ|

07061049e ಸರ್ವೇಷಾಂ ಸಮವೇತಾನಾಂ ಪುತ್ರಾಣಾಂ ಮಮ ಸಂಜಯ||

ದುರ್ಯೋಧನನು ಏನು ಮಾಡಿದನು? ಕರ್ಣನು ಏನು ಹೇಳಿ ಮಾಡಿದನು? ದುಃಶಾಸನ ಮತ್ತು ಸೌಬಲರು ಏನು ಮಾಡಿದರು? ಅಲ್ಲಿ ಸೇರಿದ್ದ ನನ್ನ ಪುತ್ರರೆಲ್ಲರೂ ಏನು ಮಾಡಿದರು?

07061050a ಯದ್ವೃತ್ತಂ ತಾತ ಸಂಗ್ರಾಮೇ ಮಂದಸ್ಯಾಪನಯೈರ್ಭೃಶಂ|

07061050c ಲೋಭಾನುಗತದುರ್ಬುದ್ಧೇಃ ಕ್ರೋಧೇನ ವಿಕೃತಾತ್ಮನಃ||

07061051a ರಾಜ್ಯಕಾಮಸ್ಯ ಮೂಢಸ್ಯ ರಾಗೋಪಹತಚೇತಸಃ|

07061051c ದುರ್ನೀತಂ ವಾ ಸುನೀತಂ ವಾ ತನ್ಮಮಾಚಕ್ಷ್ವ ಸಂಜಯ||

ಅಯ್ಯಾ ಸಂಜಯ! ಸಂಗ್ರಾಮದಲ್ಲಿ ಆ ಮಂದಬುದ್ಧಿ, ತುಂಬಾ ಅನ್ಯಾಯಗಳನ್ನು ಮಾಡಿರುವ, ಲೋಭಿ, ದುರ್ಬುದ್ಧಿ, ಕ್ರೋಧದಿಂದ ಮನಸ್ಸನ್ನು ವಿಕಾರಮಾಡಿಕೊಂಡಿರುವ, ರಾಜ್ಯಕಾಮಿ, ಮೂಢ, ಆಸೆಯಿಂದ ಚೇತನವನ್ನೇ ಕಳೆದುಕೊಂಡಿರುವ ಅವನು ಏನನ್ನು - ಸರಿಯಾಗಿರಲಿ ಅಥವಾ ತಪ್ಪಾಗಿರಲಿ – ಮಾಡಿದನು ಎಂದು ನನಗೆ ಹೇಳು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಧೃತರಾಷ್ಟ್ರವಾಕ್ಯೇ ಏಕಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಧೃತರಾಷ್ಟ್ರವಾಕ್ಯ ಎನ್ನುವ ಅರವತ್ತೊಂದನೇ ಅಧ್ಯಾಯವು.

Image result for flowers against white background

Comments are closed.