Drona Parva: Chapter 60

ದ್ರೋಣ ಪರ್ವ: ಪ್ರತಿಜ್ಞಾ ಪರ್ವ

೬೦

ಹದಿನಾಲ್ಕನೇ ದಿನದ ಬೆಳಿಗ್ಗೆ ಅರ್ಜುನನು ಯುದ್ಧಕ್ಕೆ ಹೊರಟಿದುದು (೧-೨೫). ಯುಧಿಷ್ಠಿರನನ್ನು ರಕ್ಷಿಸಬೇಕೆಂದೂ ಯಾವುದೇ ಕಾರಣಕ್ಕಾಗಿ ತನ್ನ ಸಹಾಯಕ್ಕೆ ಬರಕೂಡದೆಂದೂ ಅರ್ಜುನನು ಸಾತ್ಯಕಿಗೆ ಹೇಳಿದುದು (೨೬-೩೪).

07060001 ಸಂಜಯ ಉವಾಚ|

07060001a ತಥಾ ಸಂಭಾಷತಾಂ ತೇಷಾಂ ಪ್ರಾದುರಾಸೀದ್ಧನಂಜಯಃ|

07060001c ದಿದೃಕ್ಷುರ್ಭರತಶ್ರೇಷ್ಠಂ ರಾಜಾನಂ ಸಸುಹೃದ್ಗಣಂ||

ಸಂಜಯನು ಹೇಳಿದನು: “ಅವರು ಹೀಗೆ ಮಾತನಾಡಿಕೊಳ್ಳುತ್ತಿರಲು ಸುಹೃದ್ಗಣಗಳೊಂದಿಗಿದ್ದ ರಾಜ ಭರತಶ್ರೇಷ್ಠನನ್ನು ಕಾಣಲು ಅರ್ಜುನನು ಆಗಮಿಸಿದನು.

07060002a ತಂ ಪ್ರವಿಷ್ಟಂ ಶುಭಾಂ ಕಕ್ಷ್ಯಾಮಭಿವಾದ್ಯಾಗ್ರತಃ ಸ್ಥಿತಂ|

07060002c ಸಮುತ್ಥಾಯಾರ್ಜುನಂ ಪ್ರೇಮ್ಣಾ ಸಸ್ವಜೇ ಪಾಂಡವರ್ಷಭಃ||

ಆ ಶುಭ ಕ್ಷಕ್ಷೆಯನ್ನು ಪ್ರವೇಶಿಸಿ ಎದಿರು ನಮಸ್ಕರಿಸಿ ನಿಂತಿದ್ದ ಅರ್ಜುನನನ್ನು ಪಾಂಡವರ್ಷಭನು ಪ್ರೇಮದಿಂದ ಮೇಲೆತ್ತಿ ಅಪ್ಪಿಕೊಂಡನು.

07060003a ಮೂರ್ಧ್ನಿ ಚೈನಮುಪಾಘ್ರಾಯ ಪರಿಷ್ವಜ್ಯ ಚ ಬಾಹುನಾ|

07060003c ಆಶಿಷಃ ಪರಮಾಃ ಪ್ರೋಚ್ಯ ಸ್ಮಯಮಾನೋಽಭ್ಯಭಾಷತ||

ನೆತ್ತಿಯನ್ನು ಆಘ್ರಾಣಿಸಿ, ಬಾಹುಗಳಿಂದ ಬಿಗಿದಪ್ಪಿ, ಪರಮ ಆಶೀರ್ವಚನವನ್ನು ಹೇಳಿ ನಸುನಗುತ್ತಾ ಹೇಳಿದನು:

07060004a ವ್ಯಕ್ತಮರ್ಜುನ ಸಂಗ್ರಾಮೇ ಧ್ರುವಸ್ತೇ ವಿಜಯೋ ಮಹಾನ್|

07060004c ಯಾದೃಗ್ರೂಪಾ ಹಿ ತೇ ಚಾಯಾ ಪ್ರಸನ್ನಶ್ಚ ಜನಾರ್ದನಃ||

“ಅರ್ಜುನ! ಇಂದಿನ ಮಹಾ ಸಂಗ್ರಾಮದಲ್ಲಿ ನಿನ್ನ ವಿಜಯವು ನಿಶ್ಚಯ. ಅದನ್ನು ಸೂಚಿಸುವಂತೆ ನಿನ್ನ ರೂಪದಲ್ಲಿ ಕಾಂತಿಯಿದೆ ಮತ್ತು ಜನಾರ್ದನನೂ ಪ್ರಸನ್ನನಾಗಿದ್ದಾನೆ.”

07060005a ತಮಬ್ರವೀತ್ತತೋ ಜಿಷ್ಣುರ್ಮಹದಾಶ್ಚರ್ಯಮುತ್ತಮಂ|

07060005c ದೃಷ್ಟವಾನಸ್ಮಿ ಭದ್ರಂ ತೇ ಕೇಶವಸ್ಯ ಪ್ರಸಾದಜಂ||

ಅವನಿಗೆ ಜಿಷ್ಣುವು ಹೇಳಿದನು: “ನಿನಗೆ ಮಂಗಳವಾಗಲಿ. ಕೇಶವನ ಪ್ರಸಾದದಿಂದುಂಟಾದ ಒಂದು ಉತ್ತಮ ಮಹದಾಶ್ಚರ್ಯವನ್ನು ನೋಡಿದೆನು!”

07060006a ತತಸ್ತತ್ಕಥಯಾಮಾಸ ಯಥಾದೃಷ್ಟಂ ಧನಂಜಯಃ|

07060006c ಆಶ್ವಾಸನಾರ್ಥಂ ಸುಹೃದಾಂ ತ್ರ್ಯಂಬಕೇನ ಸಮಾಗಮಂ||

ಆಗ ಧನಂಜಯನು ಸುಹೃದರಿಗೆ ಆಶ್ವಾಸನೆಯನ್ನು ನೀಡಲೋಸುಗ ತ್ರ್ಯಂಬಕನೊಂದಿಗಿನ ಸಮಾಗಮವನ್ನು ಕಂಡಹಾಗೆ ವರ್ಣಿಸಿ ಹೇಳಿದನು.

07060007a ತತಃ ಶಿರೋಭಿರವನಿಂ ಸ್ಪೃಷ್ಟ್ವಾ ಸರ್ವೇ ಚ ವಿಸ್ಮಿತಾಃ|

07060007c ನಮಸ್ಕೃತ್ಯ ವೃಷಾಂಕಾಯ ಸಾಧು ಸಾಧ್ವಿತ್ಯಥಾಬ್ರುವನ್||

ಆಗ ಎಲ್ಲರೂ ವಿಸ್ಮಿತರಾಗಿ ಶಿರದಿಂದ ನೆಲವನ್ನು ಮುಟ್ಟಿ ವೃಷಾಂಕನನ್ನು ನಮಸ್ಕರಿಸಿ “ಸಾಧು! ಸಾಧು!” ಎಂದರು.

07060008a ಅನುಜ್ಞಾತಾಸ್ತತಃ ಸರ್ವೇ ಸುಹೃದೋ ಧರ್ಮಸೂನುನಾ|

07060008c ತ್ವರಮಾಣಾಃ ಸುಸನ್ನದ್ಧಾ ಹೃಷ್ಟಾ ಯುದ್ಧಾಯ ನಿರ್ಯಯುಃ||

ಅನಂತರ ಎಲ್ಲ ಸುಹೃದರೂ ಧರ್ಮಸೂನುವಿನ ಅಪ್ಪಣೆಯನ್ನು ಪಡೆದು ಹೃಷ್ಟರಾಗಿ, ತ್ವರೆಮಾಡಿ ಸುಸನ್ನದ್ಧರಾಗಿ ಯುದ್ಧಕ್ಕೆ ಹೊರಟರು.

07060009a ಅಭಿವಾದ್ಯ ತು ರಾಜಾನಂ ಯುಯುಧಾನಾಚ್ಯುತಾರ್ಜುನಾಃ|

07060009c ಹೃಷ್ಟಾ ವಿನಿರ್ಯಯುಸ್ತೇ ವೈ ಯುಧಿಷ್ಠಿರನಿವೇಶನಾತ್||

ರಾಜನನ್ನು ಅಭಿವಂದಿಸಿ ಯುಯುಧಾನ, ಅಚ್ಯುತ, ಅರ್ಜುನರೂ ಯುಧಿಷ್ಠಿರನ ನಿವೇಶನದಿಂದ ಹೃಷ್ಟರಾಗಿ ಹೊರಟರು.

07060010a ರಥೇನೈಕೇನ ದುರ್ಧರ್ಷೌ ಯುಯುಧಾನಜನಾರ್ದನೌ|

07060010c ಜಗ್ಮತುಃ ಸಹಿತೌ ವೀರಾವರ್ಜುನಸ್ಯ ನಿವೇಶನಂ||

ಒಂದೇ ರಥದಲ್ಲಿ ದುರ್ಧರ್ಷರಾದ ಯುಯುಧಾನ-ಜನಾರ್ದನರು ಒಟ್ಟಿಗೇ ವೀರ ಅರ್ಜುನನ ನಿವೇಶನಕ್ಕೆ ಹೋದರು.

07060011a ತತ್ರ ಗತ್ವಾ ಹೃಷೀಕೇಶಃ ಕಲ್ಪಯಾಮಾಸ ಸೂತವತ್|

07060011c ರಥಂ ರಥವರಸ್ಯಾಜೌ ವಾನರರ್ಷಭಲಕ್ಷಣಂ||

ಅಲ್ಲಿಗೆ ಹೋಗಿ ಹೃಷೀಕೇಶನು ಸೂತನಂತೆ ರಥವರನ ವಾನರರ್ಷಭಧ್ವಜವುಳ್ಳ ರಥವನ್ನು ಸಜ್ಜುಗೊಳಿಸಿದನು.

07060012a ಸ ಮೇಘಸಮನಿರ್ಘೋಷಸ್ತಪ್ತಕಾಂಚನಸಪ್ರಭಃ|

07060012c ಬಭೌ ರಥವರಃ ಕ್ಲಪ್ತಃ ಶಿಶುರ್ದಿವಸಕೃದ್ಯಥಾ||

ಮೇಘಸಮ ನಿರ್ಘೋಷವುಳ್ಳ, ಪುಟವಿಟ್ಟ ಕಾಂಚನದ ಪ್ರಭೆಯುಳ್ಳ ಆ ರಥವು ಬೆಳಗಿನ ಸೂರ್ಯನಂತೆ ಪ್ರಕಾಶಮಾನವಾಗಿ ಕಾಣುತ್ತಿತ್ತು.

07060013a ತತಃ ಪುರುಷಶಾರ್ದೂಲಃ ಸಜ್ಜಃ ಸಜ್ಜಂ ಪುರಃಸರಃ|

07060013c ಕೃತಾಹ್ನಿಕಾಯ ಪಾರ್ಥಾಯ ನ್ಯವೇದಯತ ತಂ ರಥಂ||

ಆಗ ಸುಸಜ್ಜಿತರಲ್ಲಿ ಶ್ರೇಷ್ಠನಾದ ಪುರುಷ ಶಾರ್ದೂಲನು ಆಹ್ನೀಕವನ್ನು ಮಾಡಿ ರಥವನ್ನು ಪಾರ್ಥನಿಗೆ ನಿವೇದಿಸಿದನು.

07060014a ತಂ ತು ಲೋಕೇ ವರಃ ಪುಂಸಾಂ ಕಿರೀಟೀ ಹೇಮವರ್ಮಭೃತ್|

07060014c ಬಾಣಬಾಣಾಸನೀ ವಾಹಂ ಪ್ರದಕ್ಷಿಣಮವರ್ತತ||

ಲೋಕದಲ್ಲಿ ಪುರುಷಶ್ರೇಷ್ಠ ಕಿರೀಟಿಯು ಬಂಗಾರದ ಕವಚವನ್ನು ತೊಟ್ಟು, ಧನುರ್ಬಾಣಗಳನ್ನು ಹಿಡಿದು, ರಥವನ್ನು ಪ್ರದಕ್ಷಿಣೆ ಮಾಡಿದನು.

07060015a ತತೋ ವಿದ್ಯಾವಯೋವೃದ್ಧೈಃ ಕ್ರಿಯಾವದ್ಭಿರ್ಜಿತೇಂದ್ರಿಯೈಃ|

07060015c ಸ್ತೂಯಮಾನೋ ಜಯಾಶೀಭಿರಾರುರೋಹ ಮಹಾರಥಂ||

ಅನಂತರ ವಿದ್ಯೆ-ವಯಸ್ಸು-ಕ್ರಿಯೆಗಳಲ್ಲಿ ವೃದ್ಧ ಜಿತೇಂದ್ರಿಯರು ಜಯವನ್ನು ಆಶಿಸಿ ಸ್ತುತಿಸುತ್ತಿರಲು ಅವನು ಆ ಮಹಾರಥವನ್ನೇರಿದನು.

07060016a ಜೈತ್ರೈಃ ಸಾಂಗ್ರಾಮಿಕೈರ್ಮಂತ್ರೈಃ ಪೂರ್ವಮೇವ ರಥೋತ್ತಮಂ|

07060016c ಅಭಿಮಂತ್ರಿತಮರ್ಚಿಷ್ಮಾನುದಯಂ ಭಾಸ್ಕರೋ ಯಥಾ||

ಮೊದಲೇ ವಿಜಯ ಸಾಧಕವಾದ ಯುದ್ಧಸಂಬಂಧ ಮಂತ್ರಗಳಿಂದ ಅಭಿಮಂತ್ರಿಸಲ್ಪಟ್ಟಿದ್ದ ಆ ಉತ್ತಮ ರಥವನ್ನೇರಿ ಅವನು ಉದಯಿಸುತ್ತಿರುವ ಭಾಸ್ಕರನಂತೆ ಪ್ರಕಾಶಿಸುತ್ತಿದ್ದನು.

07060017a ಸ ರಥೇ ರಥಿನಾಂ ಶ್ರೇಷ್ಠಃ ಕಾಂಚನೇ ಕಾಂಚನಾವೃತಃ|

07060017c ವಿಬಭೌ ವಿಮಲೋಽರ್ಚಿಷ್ಮಾನ್ಮೇರಾವಿವ ದಿವಾಕರಃ||

ಆ ಕಾಂಚನ ರಥದಲ್ಲಿ ಕಾಂಚನದಿಂದ ಆವೃತನಾಗಿದ್ದ ಆ ರಥಿಗಳಲ್ಲಿ ಶ್ರೇಷ್ಠನು ಮೇರು ಪರ್ವತವನ್ನೇರಿದ ವಿಮಲ, ಅರ್ಚಿಷ್ಮಾನ್ ದಿವಾಕರನಂತೆ ಹೊಳೆಯುತ್ತಿದ್ದನು.

07060018a ಅನ್ವಾರುರೋಹತುಃ ಪಾರ್ಥಂ ಯುಯುಧಾನಜನಾರ್ದನೌ|

07060018c ಶರ್ಯಾತೇರ್ಯಜ್ಞಮಾಯಾಂತಂ ಯಥೇಂದ್ರಂ ದೇವಮಶ್ವಿನೌ||

ಶರ್ಯಾತಿಯ ಯಜ್ಞಕ್ಕೆ ಹೋಗುತ್ತಿದ್ದ ಇಂದ್ರನನ್ನು ಅಶ್ವಿನೀ ದೇವತೆಗಳು ಅನುಸರಿಸಿ ಹೋಗುತ್ತಿದ್ದಂತೆ ಯುಯುಧಾನ-ಜನಾರ್ದನರಿಬ್ಬರೂ ಪಾರ್ಥನನ್ನು ಅನುಸರಿಸಿ ರಥಾರೋಹಣ ಮಾಡಿದರು.

07060019a ಅಥ ಜಗ್ರಾಹ ಗೋವಿಂದೋ ರಶ್ಮೀನ್ರಶ್ಮಿವತಾಂ ವರಃ|

07060019c ಮಾತಲಿರ್ವಾಸವಸ್ಯೇವ ವೃತ್ರಂ ಹಂತುಂ ಪ್ರಯಾಸ್ಯತಃ||

ಆಗ ವೃತ್ರನ ಸಂಹಾರಕ್ಕೆ ವಾಸವನು ಹೊರಡುವಾಗ ಮಾತಲಿಯು ಹೇಗೋ ಹಾಗೆ ಕಡಿವಾಣಗಳನ್ನು ಹಿಡಿಯುವವರಲ್ಲಿ ಶ್ರೇಷ್ಠ ಗೋವಿಂದನು ಕಡಿವಾಣಗಳನ್ನು ಹಿಡಿದನು.

07060020a ಸ ತಾಭ್ಯಾಂ ಸಹಿತಃ ಪಾರ್ಥೋ ರಥಪ್ರವರಮಾಸ್ಥಿತಃ|

07060020c ಸಹಿತೋ ಬುಧಶುಕ್ರಾಭ್ಯಾಂ ತಮೋ ನಿಘ್ನನ್ಯಥಾ ಶಶೀ||

ಅಂಧಕಾರವನ್ನು ನಾಶಗೊಳಿಸಲು ಬುಧ ಮತ್ತು ಶುಕ್ರರ ಜೊತೆಗೂಡಿ ಹೊರಟ ಶಶಿಯಂತೆ ಪಾರ್ಥನು ಅವರಿಬ್ಬರೊಡನೆ ಪ್ರವರ ರಥದಲ್ಲಿ ಕುಳಿತಿದ್ದನು.

07060021a ಸೈಂಧವಸ್ಯ ವಧಪ್ರೇಪ್ಸುಃ ಪ್ರಯಾತಃ ಶತ್ರುಪೂಗಹಾ|

07060021c ಸಹಾಂಬುಪತಿಮಿತ್ರಾಭ್ಯಾಂ ಯಥೇಂದ್ರಸ್ತಾರಕಾಮಯೇ||

ತಾರಕಾಸುರನ ವಧೆಗೆ ಮಿತ್ರಾವರುಣರೊಡನೆ ಇಂದ್ರನು ಹೊರಟಂತೆ ಸೈಂಧವನನ್ನು ವಧಿಸಲು ಬಯಸಿ ಆ ಶತ್ರುಸೇನಾನಾಶಕನು ಹೊರಟನು.

07060022a ತತೋ ವಾದಿತ್ರನಿರ್ಘೋಷೈರ್ಮಂಗಲ್ಯೈಶ್ಚ ಸ್ತವೈಃ ಶುಭೈಃ|

07060022c ಪ್ರಯಾಂತಮರ್ಜುನಂ ಸೂತಾ ಮಾಗಧಾಶ್ಚೈವ ತುಷ್ಟುವುಃ||

ಹೊರಟಿರುವ ಅರ್ಜುನನನ್ನು ವಾದ್ಯನಿರ್ಘೋಷಗಳಿಂದ, ಮಂಗಲ ಶುಭ ಸ್ತವಗಳಿಂದ ಸೂತ ಮಾಗಧರು ಸಂತೋಷಗೊಳಿಸಿದರು.

07060023a ಸಜಯಾಶೀಃ ಸಪುಣ್ಯಾಹಃ ಸೂತಮಾಗಧನಿಸ್ವನಃ|

07060023c ಯುಕ್ತೋ ವಾದಿತ್ರಘೋಷೇಣ ತೇಷಾಂ ರತಿಕರೋಽಭವತ್||

ಜಯದ ಆಶೀರ್ವಾದಗಳು, ಪುಣ್ಯಾಹ ವಾಚನಗಳು, ಸೂತಮಾಗಧರ ಸ್ತುತಿಗಳೊಂದಿಗೆ ವಾದ್ಯಘೋಷಗಳು ಸೇರಿ ಅವರನ್ನು ರಮಿಸಿದವು.

07060024a ತಮನುಪ್ರಯತೋ ವಾಯುಃ ಪುಣ್ಯಗಂಧವಹಃ ಶುಚಿಃ|

07060024c ವವೌ ಸಂಹರ್ಷಯನ್ಪಾರ್ಥಂ ದ್ವಿಷತಶ್ಚಾಪಿ ಶೋಷಯನ್||

ಅವನು ಹೊರಟಾಗ ಪುಣ್ಯಗಂಧವನ್ನು ಹೊತ್ತ ಶುಚಿ ಗಾಳಿಯು ಹಿಂದಿನಿಂದ ಅವನು ಹೊರಟ ದಿಕ್ಕಿನಲ್ಲಿ, ಪಾರ್ಥನನ್ನು ಹರ್ಷಗೊಳಿಸುತ್ತ ಮತ್ತು ಶತ್ರುಗಳನ್ನು ಶೋಷಿಸುತ್ತಾ ಬೀಸುತ್ತಿತ್ತು.

07060025a ಪ್ರಾದುರಾಸನ್ನಿಮಿತ್ತಾನಿ ವಿಜಯಾಯ ಬಹೂನಿ ಚ|

07060025c ಪಾಂಡವಾನಾಂ ತ್ವದೀಯಾನಾಂ ವಿಪರೀತಾನಿ ಮಾರಿಷ||

ಮಾರಿಷ! ಆಗ ಪಾಂಡವರ ವಿಜಯದ ಮತ್ತು ನಿನ್ನವರ ಸೋಲನ್ನು ಸೂಚಿಸುವ ಅನೇಕ ನಿಮಿತ್ತಗಳು ನಡೆದವು.

07060026a ದೃಷ್ಟ್ವಾರ್ಜುನೋ ನಿಮಿತ್ತಾನಿ ವಿಜಯಾಯ ಪ್ರದಕ್ಷಿಣಂ|

07060026c ಯುಯುಧಾನಂ ಮಹೇಷ್ವಾಸಮಿದಂ ವಚನಮಬ್ರವೀತ್||

ಅರ್ಜುನನು ತನ್ನ ಬಲಬಾಗದಲ್ಲಿ ವಿಜಯದ ನಿಮಿತ್ತಗಳನ್ನು ನೋಡಿ ಮಹೇಷ್ವಾಸ ಯುಯುಧಾನನಿಗೆ ಈ ಮಾತನ್ನಾಡಿದನು:

07060027a ಯುಯುಧಾನಾದ್ಯ ಯುದ್ಧೇ ಮೇ ದೃಶ್ಯತೇ ವಿಜಯೋ ಧ್ರುವಃ|

07060027c ಯಥಾ ಹೀಮಾನಿ ಲಿಂಗಾನಿ ದೃಶ್ಯಂತೇ ಶಿನಿಪುಂಗವ||

“ಯುಯುಧಾನ! ಶಿನಿಪುಂಗವ! ಈ ಸೂಚನೆಗಳನ್ನು ನೋಡಿದರೆ ಇಂದು ಯುದ್ಧದಲ್ಲಿ ನನಗೆ ವಿಜಯವು ನಿಶ್ಚಿತವೆಂದು ತೋರುತ್ತಿದೆ.

07060028a ಸೋಽಹಂ ತತ್ರ ಗಮಿಷ್ಯಾಮಿ ಯತ್ರ ಸೈಂಧವಕೋ ನೃಪಃ|

07060028c ಯಿಯಾಸುರ್ಯಮಲೋಕಾಯ ಮಮ ವೀರ್ಯಂ ಪ್ರತೀಕ್ಷತೇ||

ಯಮಲೋಕಕ್ಕೆ ಹೋಗಲು ಬಯಸಿ ನನ್ನ ವೀರ್ಯವನ್ನು ನೋಡಲು ಬಯಸುವ ನೃಪ ಸೈಂಧವನು ಎಲ್ಲಿದ್ದಾನೋ ಅಲ್ಲಿಗೆ ಹೋಗುತ್ತೇನೆ.

07060029a ಯಥಾ ಪರಮಕಂ ಕೃತ್ಯಂ ಸೈಂಧವಸ್ಯ ವಧೇ ಮಮ|

07060029c ತಥೈವ ಸುಮಹತ್ಕೃತ್ಯಂ ಧರ್ಮರಾಜಸ್ಯ ರಕ್ಷಣೇ||

ನಾನು ಹೇಗೆ ಸೈಂಧವನ ವಧೆಯೆಂಬ ಪರಮ ಕೃತ್ಯವನ್ನು ಮಾಡಲಿರುವೆನೋ ಹಾಗೆಯೇ ಧರ್ಮರಾಜನ ರಕ್ಷಣೆಯೂ ಕೂಡ ಮಹಾ ಕೃತ್ಯವಾಗಿದೆ.

07060030a ಸ ತ್ವಮದ್ಯ ಮಹಾಬಾಹೋ ರಾಜಾನಂ ಪರಿಪಾಲಯ|

07060030c ಯಥೈವ ಹಿ ಮಯಾ ಗುಪ್ತಸ್ತ್ವಯಾ ಗುಪ್ತೋ ಭವೇತ್ತಥಾ||

ಮಹಾಬಾಹೋ! ಇಂದು ನೀನು ರಾಜನನ್ನು ಪರಿಪಾಲಿಸು. ನಾನು ಹೇಗೆ ಅವನನ್ನು ರಕ್ಷಿಸುತ್ತೇನೋ ಹಾಗೆ ಅವನು ನಿನ್ನಿಂದಲೂ ರಕ್ಷಿಸಲ್ಪಡಲಿ.

07060031a ತ್ವಯಿ ಚಾಹಂ ಪರಾಶ್ವಸ್ಯ ಪ್ರದ್ಯುಮ್ನೇ ವಾ ಮಹಾರಥೇ|

07060031c ಶಕ್ನುಯಾಂ ಸೈಂಧವಂ ಹಂತುಮನಪೇಕ್ಷೋ ನರರ್ಷಭ||

ನರರ್ಷಭ! ನಾನು ನಿನ್ನಮೇಲೆ ಅಥವಾ ಮಹಾರಥಿ ಪ್ರದ್ಯುಮ್ನನ ಮೇಲೆ ಭರವಸೆಯಿಡಬಲ್ಲೆನು. ಇತರರ ಸಹಾಯವನ್ನು ಬಯಸದೇ ನಾನು ಸೈಂಧವನನ್ನು ಸಂಹರಿಸಲು ಶಕ್ಯ.

07060032a ಮಯ್ಯಪೇಕ್ಷಾ ನ ಕರ್ತವ್ಯಾ ಕಥಂ ಚಿದಪಿ ಸಾತ್ವತ|

07060032c ರಾಜನ್ಯೇವ ಪರಾ ಗುಪ್ತಿಃ ಕಾರ್ಯಾ ಸರ್ವಾತ್ಮನಾ ತ್ವಯಾ||

ಸಾತ್ವತ! ಯಾವುದೇ ಕಾರಣಕ್ಕಾಗಿ ನೀನು ನನಗಾಗಿ ಬರಬೇಕಾಗಿಲ್ಲ. ರಾಜನ ರಕ್ಷಣೆಯೇ ನಿನ್ನ ಪರಮ ಕಾರ್ಯ. ಅದನ್ನು ಸರ್ವಾತ್ಮನಾಗಿ ನಿರ್ವಹಿಸು.

07060033a ನ ಹಿ ಯತ್ರ ಮಹಾಬಾಹುರ್ವಾಸುದೇವೋ ವ್ಯವಸ್ಥಿತಃ|

07060033c ಕಿಂ ಚಿದ್ವ್ಯಾಪದ್ಯತೇ ತತ್ರ ಯತ್ರಾಹಮಪಿ ಚ ಧ್ರುವಂ||

ಎಲ್ಲಿ ಮಹಾದೇವ ವಾಸುದೇವನಿರುವನೋ ಎಲ್ಲಿ ನಾನೂ ಇರುವೆನೋ ಅಲ್ಲಿ ಯಾವುದೇ ರೀತಿಯ ಆಪತ್ತು ಇರುವುದಿಲ್ಲವೆಂಬುದು ನಿಶ್ಚಿತ.”

07060034a ಏವಮುಕ್ತಸ್ತು ಪಾರ್ಥೇನ ಸಾತ್ಯಕಿಃ ಪರವೀರಹಾ|

07060034c ತಥೇತ್ಯುಕ್ತ್ವಾಗಮತ್ತತ್ರ ಯತ್ರ ರಾಜಾ ಯುಧಿಷ್ಠಿರಃ||

ಪಾರ್ಥನು ಹೀಗೆ ಹೇಳಲು ಪರವೀರಹ ಸಾತ್ಯಕಿಯು ಹಾಗೆಯೇ ಆಗಲೆಂದು ಹೇಳಿ ರಾಜಾ ಯುಧಿಷ್ಠಿರನಿರುವಲ್ಲಿಗೆ ಹೋದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಣಿ ಅರ್ಜುನವಾಕ್ಯೇ ಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವದಲ್ಲಿ ಅರ್ಜುನವಾಕ್ಯ ಎನ್ನುವ ಅರವತ್ತನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೬/೧೮, ಉಪಪರ್ವಗಳು-೬೮/೧೦೦, ಅಧ್ಯಾಯಗಳು-೧೦೩೭/೧೯೯೫, ಶ್ಲೋಕಗಳು-೩೫೫೨೯/೭೩೭೮೪

Image result for rising sun against white background

Comments are closed.