Drona Parva: Chapter 6

ದ್ರೋಣ ಪರ್ವ: ದ್ರೋಣಾಭಿಷೇಕ ಪರ್ವ

ಕೌರವ-ಪಾಂಡವರ ವ್ಯೂಹರಚನೆ (೧-೨೧). ಉತ್ಪಾತದರ್ಶನ (೨೨-೨೯). ದ್ರೋಣನು ಪಾಂಡವ ಸೇನೆಯನ್ನು ಆಕ್ರಮಣಿಸಿದುದು (೩೦-೪೩).

07006001 ಸಂಜಯ ಉವಾಚ|

07006001a ಸೇನಾಪತ್ಯಂ ತು ಸಂಪ್ರಾಪ್ಯ ಭಾರದ್ವಾಜೋ ಮಹಾರಥಃ|

07006001c ಯುಯುತ್ಸುರ್ವ್ಯೂಃಯ ಸೈನ್ಯಾನಿ ಪ್ರಾಯಾತ್ತವ ಸುತೈಃ ಸಹ||

ಸಂಜಯನು ಹೇಳಿದನು: “ಸೇನಾಪತಿತ್ವವನ್ನು ಪಡೆದು ಮಹಾರಥ ಭಾರದ್ವಾಜನು ಸೈನ್ಯಗಳನ್ನು ವ್ಯೂಹದಲ್ಲಿ ರಚಿಸಿ ನಿನ್ನ ಮಕ್ಕಳೊಂದಿಗೆ ಹೊರಟನು.

07006002a ಸೈಂಧವಶ್ಚ ಕಲಿಂಗಶ್ಚ ವಿಕರ್ಣಶ್ಚ ತವಾತ್ಮಜಃ|

07006002c ದಕ್ಷಿಣಂ ಪಾರ್ಶ್ವಮಾಸ್ಥಾಯ ಸಮತಿಷ್ಠಂತ ದಂಶಿತಾಃ||

ಸೈಂಧವ, ಕಲಿಂಕ ಮತ್ತು ನಿನ್ನ ಮಗ ವಿಕರ್ಣರು ಕವಚಗಳನ್ನು ಧರಿಸಿ ಬಲಭಾಗದಲ್ಲಿ ನಿಂತರು.

07006003a ಪ್ರಪಕ್ಷಃ ಶಕುನಿಸ್ತೇಷಾಂ ಪ್ರವರೈರ್ಹಯಸಾದಿಭಿಃ|

07006003c ಯಯೌ ಗಾಂಧಾರಕೈಃ ಸಾರ್ಧಂ ವಿಮಲಪ್ರಾಸಯೋಧಿಭಿಃ||

ಅವರ ಬೆಂಬಲವಾಗಿ ಶಕುನಿಯು ಹೊಳೆಯುವ ಪ್ರಾಸಗಳನ್ನು ಹಿಡಿದಿದ್ದ ಶ್ರೇಷ್ಠ ಗಾಂಧಾರಕ ಅಶ್ವಯೋಧಿಗಳೊಂದಿಗೆ ನಡೆದನು.

07006004a ಕೃಪಶ್ಚ ಕೃತವರ್ಮಾ ಚ ಚಿತ್ರಸೇನೋ ವಿವಿಂಶತಿಃ|

07006004c ದುಃಶಾಸನಮುಖಾ ಯತ್ತಾಃ ಸವ್ಯಂ ಪಾರ್ಶ್ವಮಪಾಲಯನ್||

ಕೃಪ, ಕೃತವರ್ಮ, ಚಿತ್ರಸೇನ, ವಿವಿಂಶತಿಯರು ದುಃಶಾಸನನ ನಾಯಕತ್ವದಲ್ಲಿ ಎಡ ಭಾಗವನ್ನು ರಕ್ಷಿಸುತ್ತಿದ್ದರು.

07006005a ತೇಷಾಂ ಪ್ರಪಕ್ಷಾಃ ಕಾಂಬೋಜಾಃ ಸುದಕ್ಷಿಣಪುರಃಸರಾಃ|

07006005c ಯಯುರಶ್ವೈರ್ಮಹಾವೇಗೈಃ ಶಕಾಶ್ಚ ಯವನೈಃ ಸಹ||

ಅವರ ಬೆಂಬಲಿಗರಾಗಿ ಸುದಕ್ಷಿಣನನ್ನು ಮುಂದಿರಿಸಿಕೊಂಡು ಕಾಂಬೋಜರು ಶಕ ಮತ್ತು ಯವನರೊಂದಿಗೆ ಮಹಾವೇಗದ ಕುದುರೆಗಳ ಮೇಲೆ ಹೊರಟರು.

07006006a ಮದ್ರಾಸ್ತ್ರಿಗರ್ತಾಃ ಸಾಂಬಷ್ಠಾಃ ಪ್ರತೀಚ್ಯೋದೀಚ್ಯವಾಸಿನಃ|

07006006c ಶಿಬಯಃ ಶೂರಸೇನಾಶ್ಚ ಶೂದ್ರಾಶ್ಚ ಮಲದೈಃ ಸಹ||

07006007a ಸೌವೀರಾಃ ಕಿತವಾಃ ಪ್ರಾಚ್ಯಾ ದಾಕ್ಷಿಣಾತ್ಯಾಶ್ಚ ಸರ್ವಶಃ|

07006007c ತವಾತ್ಮಜಂ ಪುರಸ್ಕೃತ್ಯ ಸೂತಪುತ್ರಸ್ಯ ಪೃಷ್ಠತಃ||

07006008a ಹರ್ಷಯನ್ಸರ್ವಸೈನ್ಯಾನಿ ಬಲೇಷು ಬಲಮಾದಧತ್|

07006008c ಯಯೌ ವೈಕರ್ತನಃ ಕರ್ಣಃ ಪ್ರಮುಖೇ ಸರ್ವಧನ್ವಿನಾಂ||

ಮದ್ರರು, ತ್ರಿಗರ್ತರು, ಅಂಬಷ್ಠರು, ಪೂರ್ವದವರು, ಉತ್ತರದವರು, ಶಿಬಿಗಳು, ಶೂರಸೇನರು, ಶೂದ್ರರು, ಮಲದರು, ಸೌವೀರರು, ಕಿತವರು, ಪಶ್ಚಿಮದವರು, ದಕ್ಷಿಣದವರು ಎಲ್ಲರೂ ನಿನ್ನ ಮಗನನ್ನು ಮುಂದಿರಿಸಿಕೊಂಡು ಸೂತಪುತ್ರನ ಹಿಂದೆ ನಡೆದರು. ವೈಕರ್ತನ ಕರ್ಣನು ಸರ್ವ ಧನ್ವಿಗಳ ಪ್ರಮುಖನಾಗಿ ಸರ್ವ ಸೇನೆಗಳನ್ನು ಹರ್ಷಗೊಳಿಸುತ್ತಾ, ಸೇನೆಗಳಿಗೆ ಬಲವನ್ನು ನೀಡುತ್ತಾ ನಡೆದನು.

07006009a ತಸ್ಯ ದೀಪ್ತೋ ಮಹಾಕಾಯಃ ಸ್ವಾನ್ಯನೀಕಾನಿ ಹರ್ಷಯನ್|

07006009c ಹಸ್ತಿಕಕ್ಷ್ಯಾಮಹಾಕೇತುರ್ಬಭೌ ಸೂರ್ಯಸಮದ್ಯುತಿಃ||

ಆನೆಯ ಹಗ್ಗದ ಚಿಹ್ನೆಯನ್ನು ಹೊಂದಿದ ಅವನ ಅತಿ ದೊಡ್ಡದೂ ಎತ್ತರವೂ ಆದ ಧ್ವಜವು ಸೂರ್ಯನ ಬೆಳಕಿನಂತೆ ಬೆಳಗಿ ಅವನ ಸೇನೆಗಳನ್ನು ಹರ್ಷಗೊಳಿಸುತ್ತಿತ್ತು.

07006010a ನ ಭೀಷ್ಮವ್ಯಸನಂ ಕಶ್ಚಿದ್ದೃಷ್ಟ್ವಾ ಕರ್ಣಮಮನ್ಯತ|

07006010c ವಿಶೋಕಾಶ್ಚಾಭವನ್ಸರ್ವೇ ರಾಜಾನಃ ಕುರುಭಿಃ ಸಹ||

ಕರ್ಣನನ್ನು ನೋಡಿ ಕುರುಗಳೊಂದಿಗೆ ಎಲ್ಲ ರಾಜರೂ ಭೀಷ್ಮನನ್ನು ಕಳೆದುಕೊಂಡಿದುದರ ದುಃಖವನ್ನು ಮರೆತಿದ್ದರು.

07006011a ಹೃಷ್ಟಾಶ್ಚ ಬಹವೋ ಯೋಧಾಸ್ತತ್ರಾಜಲ್ಪಂತ ಸಂಗತಾಃ|

07006011c ನ ಹಿ ಕರ್ಣಂ ರಣೇ ದೃಷ್ಟ್ವಾ ಯುಧಿ ಸ್ಥಾಸ್ಯಂತಿ ಪಾಂಡವಾಃ||

ಅಲ್ಲಿ ಹೃಷ್ಟರಾಗಿದ್ದ ಅನೇಕ ಯೋಧರು ಒಟ್ಟಿಗೇ ಮಾತನಾಡಿಕೊಳ್ಳುತ್ತಿದ್ದರು: “ರಣದಲ್ಲಿ ಕರ್ಣನನ್ನು ನೋಡಿ ಪಾಂಡವರು ಯುದ್ಧದಲ್ಲಿ ನಿಲ್ಲಲಾರರು.

07006012a ಕರ್ಣೋ ಹಿ ಸಮರೇ ಶಕ್ತೋ ಜೇತುಂ ದೇವಾನ್ಸವಾಸವಾನ್|

07006012c ಕಿಮು ಪಾಂಡುಸುತಾನ್ಯುದ್ಧೇ ಹೀನವೀರ್ಯಪರಾಕ್ರಮಾನ್||

ಏಕೆಂದರೆ ಕರ್ಣನೊಬ್ಬನೇ ಸಮರದಲ್ಲಿ ವಾಸವನೊಂದಿಗೆ ದೇವತೆಗಳನ್ನು ಗೆಲ್ಲಲು ಶಕ್ತ. ಇನ್ನು ಯುದ್ಧದಲ್ಲಿ ಕಡಿಮೆ ವೀರ್ಯ-ಪರಾಕ್ರಮಗಳುಳ್ಳ ಪಾಂಡವರು ಯಾವ ಲೆಖ್ಕಕ್ಕೆ?

07006013a ಭೀಷ್ಮೇಣ ತು ರಣೇ ಪಾರ್ಥಾಃ ಪಾಲಿತಾ ಬಾಹುಶಾಲಿನಾ|

07006013c ತಾಂಸ್ತು ಕರ್ಣಃ ಶರೈಸ್ತೀಕ್ಷ್ಣೈರ್ನಾಶಯಿಷ್ಯತ್ಯಸಂಶಯಂ||

ಭೀಷ್ಮನಾದರೋ ರಣದಲ್ಲಿ ಪಾರ್ಥರನ್ನು ಪಾಲಿಸಿದನು. ಆದರೆ ಕರ್ಣನು ಅವರನ್ನು ತೀಕ್ಷ್ಣ ಶರಗಳಿಂದ ನಾಶಗೊಳಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.”

07006014a ಏವಂ ಬ್ರುವಂತಸ್ತೇಽನ್ಯೋನ್ಯಂ ಹೃಷ್ಟರೂಪಾ ವಿಶಾಂ ಪತೇ|

07006014c ರಾಧೇಯಂ ಪೂಜಯಂತಶ್ಚ ಪ್ರಶಂಸಂತಶ್ಚ ನಿರ್ಯಯುಃ||

ವಿಶಾಂಪತೇ! ಹೀಗೆ ಅನ್ಯೋನ್ಯರಲ್ಲಿ ಹೇಳಿಕೊಳ್ಳುತ್ತಾ ಹೃಷ್ಟರೂಪರಾಗಿ ಅವರು ರಾಧೇಯನನ್ನು ಗೌರವಿಸುತ್ತಾ ಪ್ರಶಂಸಿಸುತ್ತಾ ನಡೆದರು.

07006015a ಅಸ್ಮಾಕಂ ಶಕಟವ್ಯೂಹೋ ದ್ರೋಣೇನ ವಿಹಿತೋಽಭವತ್|

07006015c ಪರೇಷಾಂ ಕ್ರೌಂಚ ಏವಾಸೀದ್ವ್ಯೂಹೋ ರಾಜನ್ಮಹಾತ್ಮನಾಂ|

07006015e ಪ್ರೀಯಮಾಣೇನ ವಿಹಿತೋ ಧರ್ಮರಾಜೇನ ಭಾರತ||

ರಾಜನ್! ದ್ರೋಣನು ಹೇಳಿದಂತೆ ನಮ್ಮ ಸೇನೆಯು ಶಕಟವ್ಯೂಹದಲ್ಲಿ ರಚನೆಗೊಂಡಿತು. ಭಾರತ! ಧರ್ಮರಾಜನಿಂದ ವಿಹಿತವಾದ ಮಹಾತ್ಮ ಶತ್ರುಗಳ ಸೇನೆಯು ಸಂತೋಷದಿಂದ ಕ್ರೌಂಚ ವ್ಯೂಹದ್ದಾಗಿತ್ತು.

07006016a ವ್ಯೂಹಪ್ರಮುಖತಸ್ತೇಷಾಂ ತಸ್ಥತುಃ ಪುರುಷರ್ಷಭೌ|

07006016c ವಾನರಧ್ವಜಮುಚ್ಚ್ರಿತ್ಯ ವಿಷ್ವಕ್ಸೇನಧನಂಜಯೌ||

ಅವರ ಸೇನೆಯ ಪ್ರಮುಖಸ್ಥಾನದಲ್ಲಿ ವಾನರಧ್ವಜವನ್ನು ಹಾರಿಸಿಕೊಂಡು ಪುರುಷರ್ಷಭರಾದ ವಿಷ್ವಕ್ಸೇನ-ಧನಂಜಯರಿದ್ದರು.

07006017a ಕಕುದಂ ಸರ್ವಸೈನ್ಯಾನಾಂ ಲಕ್ಷ್ಮ ಸರ್ವಧನುಷ್ಮತಾಂ|

07006017c ಆದಿತ್ಯಪಥಗಃ ಕೇತುಃ ಪಾರ್ಥಸ್ಯಾಮಿತತೇಜಸಃ||

07006018a ದೀಪಯಾಮಾಸ ತತ್ಸೈನ್ಯಂ ಪಾಂಡವಸ್ಯ ಮಹಾತ್ಮನಃ|

07006018c ಯಥಾ ಪ್ರಜ್ವಲಿತಃ ಸೂರ್ಯೋ ಯುಗಾಂತೇ ವೈ ವಸುಂಧರಾಂ||

ಸರ್ವಸೈನ್ಯಗಳಿಗೂ ಗುರುತಾಗಿದ್ದ, ಸರ್ವಧನುಷ್ಮಂತರಿಗೂ ಆಶ್ರಯಭೂತವಾದ, ಸೂರ್ಯನ ಮಾರ್ಗವಾದ ಆಕಾಶದಲ್ಲಿ ಹಾರಾಡುತ್ತಿದ್ದ ಅಮಿತ ತೇಜಸ್ವಿ ಪಾರ್ಥನ ಆ ಧ್ವಜವು ಮಹಾತ್ಮ ಪಾಂಡವನ ಸೈನ್ಯವನ್ನು ಯುಗಾಂತದಲ್ಲಿ ಸೂರ್ಯನು ಭೂಮಿಯನ್ನು ಬೆಳಗುವಂತೆ ಪ್ರಜ್ವಲಿಸಿ ಬೆಳಗಿಸುತ್ತಿತ್ತು.

07006019a ಅಸ್ಯತಾಮರ್ಜುನಃ ಶ್ರೇಷ್ಠೋ ಗಾಂಡೀವಂ ಧನುಷಾಂ ವರಂ|

07006019c ವಾಸುದೇವಶ್ಚ ಭೂತಾನಾಂ ಚಕ್ರಾಣಾಂ ಚ ಸುದರ್ಶನಂ||

07006020a ಚತ್ವಾರ್ಯೇತಾನಿ ತೇಜಾಂಸಿ ವಹಂ ಶ್ವೇತಹಯೋ ರಥಃ|

07006020c ಪರೇಷಾಮಗ್ರತಸ್ತಸ್ಥೌ ಕಾಲಚಕ್ರಮಿವೋದ್ಯತಂ||

ಯೋಧರಲ್ಲಿ ಅರ್ಜುನನು ಶ್ರೇಷ್ಠ. ಧನುಸ್ಸುಗಳಲ್ಲಿ ಗಾಂಡೀವ, ಇರುವವರಲ್ಲಿ ವಾಸುದೇವ ಮತ್ತು ಚಕ್ರಗಳಲ್ಲಿ ಸುದರ್ಶನವು ಶ್ರೇಷ್ಠವು. ಈ ನಾಲ್ಕೂ ತೇಜಸ್ಸುಗಳನ್ನೂ ಏರಿಸಿಕೊಂಡ ಶ್ವೇತಹಯಗಳ ರಥವು ಕಾಲಚಕ್ರದಂತೆ ಶತ್ರುಸೇನೆಯ ಅಗ್ರಭಾಗದಲ್ಲಿ ನಿಂತಿತ್ತು.

07006021a ಏವಮೇತೌ ಮಹಾತ್ಮಾನೌ ಬಲಸೇನಾಗ್ರಗಾವುಭೌ|

07006021c ತಾವಕಾನಾಂ ಮುಖಂ ಕರ್ಣಃ ಪರೇಷಾಂ ಚ ಧನಂಜಯಃ||

ಹೀಗೆ ಅವರಿಬ್ಬರು ಮಹಾತ್ಮರೂ ಬಲಿಷ್ಟವಾದ ತಮ್ಮ ಸೇನೆಯ ಅಗ್ರಭಾಗದಲ್ಲಿ ಇದ್ದರು. ನಿನ್ನವರ ಮುಂಬಾಗದಲ್ಲಿ ಕರ್ಣ ಮತ್ತು ಶತ್ರುಸೇನೆಯ ಮುಂದೆ ಧನಂಜಯರರು ನಿಂತಿದ್ದರು.

07006022a ತತೋ ಜಾತಾಭಿಸಂರಂಭೌ ಪರಸ್ಪರವಧೈಷಿಣೌ|

07006022c ಅವೇಕ್ಷೇತಾಂ ತದಾನ್ಯೋನ್ಯಂ ಸಮರೇ ಕರ್ಣಪಾಂಡವೌ||

ಆಗ ಕರ್ಣ-ಪಾಂಡವರಿಬ್ಬರೂ ತಮ್ಮ ತಮ್ಮ ಪಕ್ಷಕ್ಕೆ ವಿಜಯವನ್ನು ಗಳಿಸಿಕೊಡಬೇಕೆಂದು ಕ್ರುದ್ಧರಾಗಿ ಅನ್ಯೋನ್ಯರನ್ನು ವಧೆಮಾಡುವ ಇಚ್ಛೆಯಿಂದ ಪರಸ್ಪರರನ್ನು ದುರುಗುಟ್ಟಿಕೊಂಡು ನೋಡುತ್ತಿದ್ದರು.

07006023a ತತಃ ಪ್ರಯಾತೇ ಸಹಸಾ ಭಾರದ್ವಾಜೇ ಮಹಾರಥೇ|

07006023c ಅಂತರ್ನಾದೇನ ಘೋರೇಣ ವಸುಧಾ ಸಮಕಂಪತ||

ಆಗ ಮಹಾರಥ ಭಾರದ್ವಾಜನು ಬರಲು ಘೋರ ಅಂತರ್ನಾದದೊಂದಿಗೆ ಭೂಮಿಯು ಕಂಪಿಸಿತು.

07006024a ತತಸ್ತುಮುಲಮಾಕಾಶಮಾವೃಣೋತ್ಸದಿವಾಕರಂ|

07006024c ವಾತೋದ್ಧೂತಂ ರಜಸ್ತೀವ್ರಂ ಕೌಶೇಯನಿಕರೋಪಮಂ||

ಆಗ ಪ್ರಚಂಡ ಭಿರುಗಾಳಿಯು ಬೀಸಿ ರೇಷ್ಮೆಯಂತೆ ನವಿರಾದ ಧೂಳೆದ್ದು ಅದು ಸೂರ್ಯಸಹಿತ ಆಕಾಶವನ್ನೇ ವ್ಯಾಪಿಸಿತು.

07006025a ಅನಭ್ರೇ ಪ್ರವವರ್ಷ ದ್ಯೌರ್ಮಾಂಸಾಸ್ಥಿರುಧಿರಾಣ್ಯುತ|

07006025c ಗೃಧ್ರಾಃ ಶ್ಯೇನಾ ಬಡಾಃ ಕಂಕಾ ವಾಯಸಾಶ್ಚ ಸಹಸ್ರಶಃ|

07006025e ಉಪರ್ಯುಪರಿ ಸೇನಾಂ ತೇ ತದಾ ಪರ್ಯಪತನ್ನೃಪ||

ನೃಪ! ಮೋಡಗಳಿಲ್ಲದಿದ್ದರೂ ಆಕಾಶದಿಂದ ಮಾಂಸ, ಮೂಳೆ ಮತ್ತು ರಕ್ತಗಳ ಮಳೆಯು ಸುರಿಯಿತು. ಹದ್ದುಗಳು, ಗಿಡುಗಗಳು, ಬಕಗಳು, ರಣಹದ್ದುಗಳು ಮತ್ತು ಕಾಗೆಗಳು ಸಹಸ್ರಾರು ಸಂಖ್ಯೆಗಳಲ್ಲಿ ನಿನ್ನ ಸೇನೆಯ ಮೇಲ್ಬಾಗದಲ್ಲಿ ಹಾರಾಡುತ್ತಿದ್ದವು.

07006026a ಗೋಮಾಯವಶ್ಚ ಪ್ರಾಕ್ರೋಶನ್ಭಯದಾನ್ದಾರುಣಾನ್ರವಾನ್|

07006026c ಅಕಾರ್ಷುರಪಸವ್ಯಂ ಚ ಬಹುಶಃ ಪೃತನಾಂ ತವ|

07006026e ಚಿಖಾದಿಷಂತೋ ಮಾಂಸಾನಿ ಪಿಪಾಸಂತಶ್ಚ ಶೋಣಿತಂ||

ಗುಳ್ಳೇನರಿಗಳು ಭಯಂಕರವಾಗಿ ವಿಕಾರವಾಗಿ ಕಿರುಚಿಕೊಳ್ಳುತ್ತಿದ್ದವು. ರಕ್ತವನ್ನು ಕುಡಿಯಲು ಮತ್ತು ಮಾಂಸವನ್ನು ತಿನ್ನಲು ಅವು ಅನೇಕ ಸಂಖ್ಯೆಗಳಲ್ಲಿ ನಿನ್ನ ಸೇನೆಯನ್ನು ಅಪ್ರದಕ್ಷಿಣೆಹಾಕಿ ಸುತ್ತುತ್ತಿದ್ದವು.

07006027a ಅಪತದ್ದೀಪ್ಯಮಾನಾ ಚ ಸನಿರ್ಘಾತಾ ಸಕಂಪನಾ|

07006027c ಉಲ್ಕಾ ಜ್ವಲಂತೀ ಸಂಗ್ರಾಮೇ ಪುಚ್ಚೇನಾವೃತ್ಯ ಸರ್ವಶಃ||

ಬೆಳಗುತ್ತಿರುವ ಉಲ್ಕೆಗಳು ಉರಿಯುತ್ತಾ ಬಾಲದಿಂದ ರಣರಂಗವನ್ನು ಎಲ್ಲ ಕಡೆಗಳಿಂದ ಆವರಿಸಿ, ಮಹಾ ಶಬ್ಧದೊಂದಿಗೆ ನಡುಗುತ್ತಾ ಬಿದ್ದಿತು.

07006028a ಪರಿವೇಷೋ ಮಹಾಂಶ್ಚಾಪಿ ಸವಿದ್ಯುತ್ಸಂತನಯಿತ್ನುಮಾನ್|

07006028c ಭಾಸ್ಕರಸ್ಯಾಭವದ್ರಾಜನ್ಪ್ರಯಾತೇ ವಾಹಿನೀಪತೌ||

ಆ ಸೇನಾಪತಿಗಳು ಮುಂದೆ ಬರುವಾಗ ಭಾಸ್ಕರನ ಮಂಡಲದಿಂದ ವಿದ್ಯುತ್ತಿನಂತೆ ಬೆಳಕು ಮತ್ತು ಗುಡುಗಿನಂತೆ ಶಬ್ಧಗಳು ಬರುತ್ತಿದ್ದವು.

07006029a ಏತೇ ಚಾನ್ಯೇ ಚ ಬಹವಃ ಪ್ರಾದುರಾಸನ್ಸುದಾರುಣಾಃ|

07006029c ಉತ್ಪಾತಾ ಯುಧಿ ವೀರಾಣಾಂ ಜೀವಿತಕ್ಷಯಕಾರಕಾಃ||

ಯುದ್ಧದಲ್ಲಿ ವೀರರ ಸಾವನ್ನು ಸೂಚಿಸುವ ಇವು ಮತ್ತು ಇನ್ನೂ ಅನೇಕ ದಾರುಣ ಉತ್ಪಾತಗಳು ಅಲ್ಲಿ ನಡೆಯಿತು.

07006030a ತತಃ ಪ್ರವವೃತೇ ಯುದ್ಧಂ ಪರಸ್ಪರವಧೈಷಿಣಾಂ|

07006030c ಕುರುಪಾಂಡವಸೈನ್ಯಾನಾಂ ಶಬ್ದೇನಾನಾದಯಜ್ಜಗತ್||

ಆಗ ಪರಸ್ಪರರನ್ನು ವಧಿಸಲು ಬಯಸಿದ್ದ ಕುರುಪಾಂಡವ ಸೈನ್ಯಗಳ ನಡುವೆ ಜಗತ್ತಾನೇ ಶಬ್ಧದಿಂದ ಮೊಳಗಿಸುತ್ತಾ ಯುದ್ಧವು ನಡೆಯಿತು.

07006031a ತೇ ತ್ವನ್ಯೋನ್ಯಂ ಸುಸಂರಬ್ಧಾಃ ಪಾಂಡವಾಃ ಕೌರವೈಃ ಸಹ|

07006031c ಪ್ರತ್ಯಘ್ನನ್ನಿಶಿತೈರ್ಬಾಣೈರ್ಜಯಗೃದ್ಧಾಃ ಪ್ರಹಾರಿಣಃ||

ಅನ್ಯೋನ್ಯರೊಡನೆ ಕ್ರೋಧಿತರಾಗಿ ಪ್ರಹಾರದಲ್ಲಿ ನಿಷ್ಣಾತರಾದ ಪಾಂಡವ-ಕೌರವರು ಒಟ್ಟಿಗೇ ನಿಶಿತ ಬಾಣಗಳಿಂದ ಕೊಲ್ಲತೊಡಗಿದರು.

07006032a ಸ ಪಾಂಡವಾನಾಂ ಮಹತೀಂ ಮಹೇಷ್ವಾಸೋ ಮಹಾದ್ಯುತಿಃ|

07006032c ವೇಗೇನಾಭ್ಯದ್ರವತ್ಸೇನಾಂ ಕಿರಂ ಶರಶತೈಃ ಶಿತೈಃ||

ಆ ಮಹೇಷ್ವಾಸ ಮಹಾದ್ಯುತಿಯು ವೇಗದಿಂದ ಆಕ್ರಮಣಿಸಿ ಪಾಂಡವರ ಮಹಾಸೇನೆಯ ಮೇಲೆ ನೂರಾರು ನಿಶಿತ ಶರಗಳನ್ನು ಎರಚಿದನು.

07006033a ದ್ರೋಣಮಭ್ಯುದ್ಯತಂ ದೃಷ್ಟ್ವಾ ಪಾಂಡವಾಃ ಸಹ ಸೃಂಜಯೈಃ|

07006033c ಪ್ರತ್ಯಗೃಹ್ಣಂಸ್ತದಾ ರಾಜನ್ ಶರವರ್ಷೈಃ ಪೃಥಕ್ ಪೃಥಕ್||

ರಾಜನ್! ದ್ರೋಣನು ಮೇಲೆ ಎರಗಿದುದನ್ನು ನೋಡಿ ಪಾಂಡವರೊಂದಿಗೆ ಸೃಂಜಯರು ಅವನನ್ನು ಮೇಲಿಂದ ಮೇಲೆ ಶರವರ್ಷಗಳಿಂದ ತಡೆದುಕೊಂಡರು.

07006034a ಸಂಕ್ಷೋಭ್ಯಮಾಣಾ ದ್ರೋಣೇನ ಭಿದ್ಯಮಾನಾ ಮಹಾಚಮೂಃ|

07006034c ವ್ಯಶೀರ್ಯತ ಸಪಾಂಚಾಲಾ ವಾತೇನೇವ ಬಲಾಹಕಾಃ||

ದ್ರೋಣನಿಂದ ಕ್ಷೋಭೆಗೊಂಡ ಮತ್ತು ಒಡೆದುಹೋದ ಪಾಂಚಾಲರ ಆ ಮಹಾಸೇನೆಯು ಭಿರುಗಾಳಿಗೆ ಸಿಲುಕಿದ ಬೆಳ್ಳಕ್ಕಿಗಳ ಸಾಲಿನಂತೆ ಚದುರಿ ಹೋಯಿತು.

07006035a ಬಹೂನೀಹ ವಿಕುರ್ವಾಣೋ ದಿವ್ಯಾನ್ಯಸ್ತ್ರಾಣಿ ಸಂಯುಗೇ|

07006035c ಅಪೀಡಯತ್ ಕ್ಷಣೇನೈವ ದ್ರೋಣಃ ಪಾಂಡವಸೃಂಜಯಾನ್||

ಸಂಯುಗದಲ್ಲಿ ಅನೇಕ ದಿವ್ಯಾಸ್ತ್ರಗಳನ್ನು ಪ್ರಯೋಗಿಸುತ್ತಾ ದ್ರೋಣನು ಕ್ಷಣದಲ್ಲಿಯೇ ಪಾಂಡವ-ಸೃಂಜಯರ ಸೇನೆಯನ್ನು ಪೀಡಿಸಿದನು.

07006036a ತೇ ವಧ್ಯಮಾನಾ ದ್ರೋಣೇನ ವಾಸವೇನೇವ ದಾನವಾಃ|

07006036c ಪಾಂಚಾಲಾಃ ಸಮಕಂಪಂತ ಧೃಷ್ಟದ್ಯುಮ್ನಪುರೋಗಮಾಃ||

ವಾಸವನಿಂದ ದಾನವರಂತೆ ದ್ರೋಣನಿಂದ ವಧಿಸಲ್ಪಡುತ್ತಿದ್ದ ಧೃಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ಪಾಂಚಾಲರು ತತ್ತರಿಸಿದರು.

07006037a ತತೋ ದಿವ್ಯಾಸ್ತ್ರವಿಚ್ಚೂರೋ ಯಾಜ್ಞಸೇನಿರ್ಮಹಾರಥಃ|

07006037c ಅಭಿನಚ್ಚರವರ್ಷೇಣ ದ್ರೋಣಾನೀಕಮನೇಕಧಾ||

ಆಗ ದಿವ್ಯಾಸ್ತ್ರಗಳನ್ನು ತಿಳಿದಿದ್ದ ಮಹಾರಥ ಶೂರ ಯಾಜ್ಞಸೇನಿಯು ಶರವರ್ಷಗಳಿಂದ ದ್ರೋಣನ ಸೇನೆಯನ್ನು ಅನೇಕ ಕಡೆಗಳಲ್ಲಿ ಭೇದಿಸಿದನು.

07006038a ದ್ರೋಣಸ್ಯ ಶರವರ್ಷೈಸ್ತು ಶರವರ್ಷಾಣಿ ಭಾಗಶಃ|

07006038c ಸನ್ನಿವಾರ್ಯ ತತಃ ಸೇನಾಂ ಕುರೂನಪ್ಯವಧೀದ್ಬಲೀ||

ದ್ರೋಣನ ಶರವರ್ಷಗಳನ್ನು ತನ್ನದೇ ಶರವರ್ಷಗಳಿಂದ ತುಂಡುಮಾಡಿ ಆ ಬಲಶಾಲಿಯು ಕುರುಗಳ ಸೇನೆಯನ್ನು ತಡೆದನು.

07006039a ಸಂಹೃತ್ಯ ತು ತತೋ ದ್ರೋಣಃ ಸಮವಸ್ಥಾಪ್ಯ ಚಾಹವೇ|

07006039c ಸ್ವಮನೀಕಂ ಮಹಾಬಾಹುಃ ಪಾರ್ಷತಂ ಸಮುಪಾದ್ರವತ್||

ಆಗ ಮಹಾಬಾಹು ದ್ರೋಣನು ಯುದ್ಧದಲ್ಲಿ ತನ್ನ ಸೇನೆಯನ್ನು ಒಟ್ಟುಗೂಡಿಸಿಕೊಂಡು ಪಾರ್ಷತನ ಮೇಲೆ ಆಕ್ರಮಣ ಮಾಡಿದನು.

07006040a ಸ ಬಾಣವರ್ಷಂ ಸುಮಹದಸೃಜತ್ಪಾರ್ಷತಂ ಪ್ರತಿ|

07006040c ಮಘವಾನ್ಸಮಭಿಕ್ರುದ್ಧಃ ಸಹಸಾ ದಾನವೇಷ್ವಿವ||

ಕ್ರುದ್ಧನಾದ ಮಘವಾನನು ಒಮ್ಮಿಂದೊಮ್ಮೆಲೇ ದಾನವರ ಮೇಲೆ ಹೇಗೋ ಹಾಗೆ ಅವನು ಪಾರ್ಷತನ ಮೇಲೆ ಬಾಣಗಳ ಅತಿದೊಡ್ಡ ಮಳೆಯನ್ನು ಸುರಿಸಿದನು.

07006041a ತೇ ಕಂಪ್ಯಮಾನಾ ದ್ರೋಣೇನ ಬಾಣೈಃ ಪಾಂಡವಸೃಂಜಯಾಃ|

07006041c ಪುನಃ ಪುನರಭಜ್ಯಂತ ಸಿಂಹೇನೇವೇತರೇ ಮೃಗಾಃ||

ದ್ರೋಣನ ಬಾಣಗಳಿಂದ ತತ್ತರಿಸಿದ ಪಾಂಡವ-ಸೃಂಜಯರು ಸಿಂಹನಿಂದ ಆಕ್ರಮಣಿಸಲ್ಪಟ್ಟ ಇತರ ಮೃಗಗಳಂತೆ ಪುನಃ ಪುನಃ ಚದುರಿ ಹೋಗುತ್ತಿದ್ದರು.

07006042a ಅಥ ಪರ್ಯಪತದ್ದ್ರೋಣಃ ಪಾಂಡವಾನಾಂ ಬಲಂ ಬಲೀ|

07006042c ಅಲಾತಚಕ್ರವದ್ರಾಜಂಸ್ತದದ್ಭುತಮಿವಾಭವತ್||

ಹೀಗೆ ಬಲಶಾಲೀ ದ್ರೋಣನು ಬೆಂಕಿಯ ಚಕ್ರದಂತೆ ಪಾಂಡವರ ಸೇನೆಯಲ್ಲಿ ರಾಜಿಸುತ್ತಿದ್ದನು. ಆಗ ಈ ಅದ್ಭುತವು ನಡೆಯಿತು.

07006043a ಖಚರನಗರಕಲ್ಪಂ ಕಲ್ಪಿತಂ ಶಾಸ್ತ್ರದೃಷ್ಟ್ಯಾ

         ಚಲದನಿಲಪತಾಕಂ ಹ್ರಾದಿನಂ ವಲ್ಗಿತಾಶ್ವಂ|

07006043c ಸ್ಫಟಿಕವಿಮಲಕೇತುಂ ತಾಪನಂ ಶಾತ್ರವಾಣಾಂ

         ರಥವರಮಧಿರೂಢಃ ಸಂಜಹಾರಾರಿಸೇನಾಂ||

ಆಕಾಶದಲ್ಲಿ ಚಲಿಸುತ್ತಿರುವ ನಗರದಂತೆ ಶಾಸ್ತ್ರೋಕ್ತವಾಗಿ ಸಜ್ಜುಗೊಳಿಸಿದ್ದ, ಗಾಳಿಯಿಂದ ಹಾರಾಡುತ್ತಿದ್ದ ಪತಾಕೆಯುಳ್ಳ, ರಣಭೂಮಿಯನ್ನೇ ತುಂಬುವ ಗಾಲಿಯ ಶಬ್ಧಗಳನ್ನುಳ್ಳ, ಸ್ಪಟಿಕದಂತೆ ಹೊಳೆಯುತ್ತಿದ್ದ ಬಾವುಟವುಳ್ಳ ಶತ್ರುಗಳನ್ನು ಸುಡುವ ಶ್ರೇಷ್ಠವಾದ ರಥವನ್ನೇರಿ ದ್ರೋಣನು ಅರಿಸೇನೆಯನ್ನು ಸಂಹರಿಸತೊಡಗಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ದ್ರೋಣಪರಾಕ್ರಮೇ ಷಷ್ಠೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ದ್ರೋಣಪರಾಕ್ರಮ ಎನ್ನುವ ಆರನೇ ಅಧ್ಯಾಯವು.

Image result for indian motifs against white background

Comments are closed.