Drona Parva: Chapter 59

ದ್ರೋಣ ಪರ್ವ: ಪ್ರತಿಜ್ಞಾ ಪರ್ವ

೫೯

ಯುದ್ಧದಲ್ಲಿ ಜಯವನ್ನು ಕರುಣಿಸೆಂದು ಯುಧಿಷ್ಠಿರನು ಕೃಷ್ಣನಲ್ಲಿ ಕೇಳಿಕೊಂಡಿದುದು (೧-೧೩). ಕೃಷ್ಣನು ಯುಧಿಷ್ಠಿರನಿಗಿತ್ತ ಆಶ್ವಾಸನೆ (೧೪-೨೦).

07059001 ಯುಧಿಷ್ಠಿರ ಉವಾಚ|

07059001a ಸುಖೇನ ರಜನೀ ವ್ಯುಷ್ಟಾ ಕಚ್ಚಿತ್ತೇ ಮಧುಸೂದನ|

07059001c ಕಚ್ಚಿಜ್ಜ್ಞಾನಾನಿ ಸರ್ವಾಣಿ ಪ್ರಸನ್ನಾನಿ ತವಾಚ್ಯುತ||

ಯುಧಿಷ್ಠಿರನು ಹೇಳಿದನು: “ಮಧುಸೂದನ! ನಿನ್ನ ರಾತ್ರಿಯು ಸುಖವಾಗಿ ಕಳೆಯಿತೇ? ಅಚ್ಯುತ! ನಿನ್ನ ಜ್ಞಾನೇಂದ್ರಿಯಗಳೆಲ್ಲವೂ ಪ್ರಸನ್ನವಾಗಿವೆಯೇ?””

07059002 ಸಂಜಯ ಉವಾಚ|

07059002a ವಾಸುದೇವೋಽಪಿ ತದ್ಯುಕ್ತಂ ಪರ್ಯಪೃಚ್ಚದ್ಯುಧಿಷ್ಠಿರಂ|

07059002c ತತಃ ಕ್ಷತ್ತಾ ಪ್ರಕೃತಯೋ ನ್ಯವೇದಯದುಪಸ್ಥಿತಾಃ||

ಸಂಜಯನು ಹೇಳಿದನು: “ಕೇಳಿದುದಕ್ಕೆ ವಾಸುದೇವನೂ ಕೂಡ ಯುಧಿಷ್ಠಿರನನ್ನು ಕೇಳಿದನು. ಆಗ ಸೇವಕರು ರಾಜರು ಉಪಸ್ಥಿತರಾಗಿದ್ದಾರೆಂದು ನಿವೇದಿಸಿದರು.

07059003a ಅನುಜ್ಞಾತಶ್ಚ ರಾಜ್ಞಾ ಸ ಪ್ರಾವೇಶಯತ ತಂ ಜನಂ|

07059003c ವಿರಾಟಂ ಭೀಮಸೇನಂ ಚ ಧೃಷ್ಟದ್ಯುಮ್ನಂ ಚ ಸಾತ್ಯಕಿಂ||

07059004a ಶಿಖಂಡಿನಂ ಯಮೌ ಚೈವ ಚೇಕಿತಾನಂ ಚ ಕೇಕಯಾನ್|

07059004c ಯುಯುತ್ಸುಂ ಚೈವ ಕೌರವ್ಯಂ ಪಾಂಚಾಲ್ಯಂ ಚೋತ್ತಮೌಜಸಂ||

ರಾಜನ ಅನುಜ್ಞೆಯ ಮೇರೆಗೆ ವಿರಾಟ, ಭೀಮಸೇನ, ಧೃಷ್ಟದ್ಯುಮ್ನ, ಸಾತ್ಯಕಿ, ಶಿಖಂಡಿ, ಯಮಳರು, ಚೇಕಿತಾನ, ಕೇಕಯರು, ಕೌರವ್ಯ ಯುಯುತ್ಸು, ಮತ್ತು ಪಾಂಚಾಲ್ಯ ಉತ್ತಮೌಜಸರನ್ನು ಪ್ರವೇಶಿಸಲಾಯಿತು.

07059005a ಏತೇ ಚಾನ್ಯೇ ಚ ಬಹವಃ ಕ್ಷತ್ರಿಯಾಃ ಕ್ಷತ್ರಿಯರ್ಷಭಂ|

07059005c ಉಪತಸ್ಥುರ್ಮಹಾತ್ಮಾನಂ ವಿವಿಶುಶ್ಚಾಸನೇಷು ತೇ||

ಇವರಲ್ಲದೇ ಇನ್ನೂ ಅನ್ಯ ಅನೇಕ ಕ್ಷತ್ರಿಯರು ಕ್ಷತ್ರಿಯರ್ಷಭ ಮಹಾತ್ಮನ ಉಪಸ್ಥಿತಿಯಲ್ಲಿ ಪ್ರವೇಶಿಸಿ ಆಸನಗಳಲ್ಲಿ ಕುಳಿತುಕೊಂಡರು.

07059006a ಏಕಸ್ಮಿನ್ನಾಸನೇ ವೀರಾವುಪವಿಷ್ಟೌ ಮಹಾಬಲೌ|

07059006c ಕೃಷ್ಣಶ್ಚ ಯುಯುಧಾನಶ್ಚ ಮಹಾತ್ಮಾನೌ ಮಹಾದ್ಯುತೀ||

ಒಂದೇ ಆಸನದಲ್ಲಿ ವೀರ ಮಹಾಬಲಶಾಲಿ ಮಹಾತ್ಮ ಮಹಾದ್ಯುತೀ ಕೃಷ್ಣ ಮತ್ತು ಯುಯುಧಾನರು ಕುಳಿತುಕೊಂಡರು.

07059007a ತತೋ ಯುಧಿಷ್ಠಿರಸ್ತೇಷಾಂ ಶೃಣ್ವತಾಂ ಮಧುಸೂದನಂ|

07059007c ಅಬ್ರವೀತ್ಪುಂಡರೀಕಾಕ್ಷಮಾಭಾಷ್ಯ ಮಧುರಂ ವಚಃ||

ಆಗ ಯುಧಿಷ್ಠಿರನು ಎಲ್ಲರೂ ಕೇಳುವಹಾಗೆ ಮಧುಸೂದನ ಪುಂಡರೀಕಾಕ್ಷನನ್ನು ಉದ್ದೇಶಿಸಿ ಈ ಮಧುರ ಮಾತನ್ನಾಡಿದನು:

07059008a ಏಕಂ ತ್ವಾಂ ವಯಮಾಶ್ರಿತ್ಯ ಸಹಸ್ರಾಕ್ಷಮಿವಾಮರಾಃ|

07059008c ಪ್ರಾರ್ಥಯಾಮೋ ಜಯಂ ಯುದ್ಧೇ ಶಾಶ್ವತಾನಿ ಸುಖಾನಿ ಚ||

“ಅಮರರು ಹೇಗೆ ಸಹಸ್ರಾಕ್ಷನನ್ನು ಆಶ್ರಯಿಸಿದ್ದಾರೋ ಹಾಗೆ ನಾವೂ ಕೂಡ ನಿನ್ನನ್ನೊಬ್ಬನನ್ನೇ ಯುದ್ಧದಲ್ಲಿ ಜಯ ಮತ್ತು ಶಾಶ್ವತ ಸುಖಗಳಿಗಾಗಿ ಪ್ರಾರ್ಥಿಸುತ್ತಿದ್ದೇವೆ.

07059009a ತ್ವಂ ಹಿ ರಾಜ್ಯವಿನಾಶಂ ಚ ದ್ವಿಷದ್ಭಿಶ್ಚ ನಿರಾಕ್ರಿಯಾಂ|

07059009c ಕ್ಲೇಶಾಂಶ್ಚ ವಿವಿಧಾನ್ ಕೃಷ್ಣ ಸರ್ವಾಂಸ್ತಾನಪಿ ವೇತ್ಥ ನಃ||

ಕೃಷ್ಣ! ಶತ್ರುಗಳಿಂದ ಮೋಸಗೊಂಡು ರಾಜ್ಯವನ್ನು ಕಳೆದುಕೊಂಡಿದುದು ಮತ್ತು ನಾವು ವಿವಿಧ ಕ್ಲೇಶಗಳನ್ನು ಅನುಭವಿಸಿದ್ದುದು ಇವೆಲ್ಲವೂ ನಿನಗೆ ತಿಳಿದೇ ಇದೆ.

07059010a ತ್ವಯಿ ಸರ್ವೇಶ ಸರ್ವೇಷಾಮಸ್ಮಾಕಂ ಭಕ್ತವತ್ಸಲ|

07059010c ಸುಖಮಾಯತ್ತಮತ್ಯರ್ಥಂ ಯಾತ್ರಾ ಚ ಮಧುಸೂದನ||

ಸರ್ವೇಶ! ಭಕ್ತವತ್ಸಲ! ಮಧುಸೂದನ! ನಮ್ಮದೆಲ್ಲವೂ- ನಮ್ಮ ಸುಖ, ಜೀವನ ನಿರ್ವಹಣೆ ಮತ್ತು ಯಾತ್ರೆ ಎಲ್ಲವೂ ನಿನ್ನದೇ!

07059011a ಸ ತಥಾ ಕುರು ವಾರ್ಷ್ಣೇಯ ಯಥಾ ತ್ವಯಿ ಮನೋ ಮಮ|

07059011c ಅರ್ಜುನಸ್ಯ ಯಥಾ ಸತ್ಯಾ ಪ್ರತಿಜ್ಞಾ ಸ್ಯಾಚ್ಚಿಕೀರ್ಷಿತಾ||

ವಾರ್ಷ್ಣೇಯ! ನನ್ನ ಮನಸ್ಸು ನಿನ್ನಲ್ಲಿಯೇ ಇರುವಂತೆ ಮಾಡು! ಅರ್ಜುನನು ಬಯಸಿದಂತೆ ಅವನ ಪ್ರತಿಜ್ಞೆಯು ಸತ್ಯವಾಗುವಂತೆ ಮಾಡು!

07059012a ಸ ಭವಾಂಸ್ತಾರಯತ್ವಸ್ಮಾದ್ದುಃಖಾಮರ್ಷಮಹಾರ್ಣವಾತ್|

07059012c ಪಾರಂ ತಿತೀರ್ಷತಾಮದ್ಯ ಪ್ಲವೋ ನೋ ಭವ ಮಾಧವ||

ಮಾಧವ! ದುಃಖ-ಕೋಪಮಯ ಮಹಾಸಾಗರವನ್ನು ದಾಟಲಿಚ್ಚಿಸುವ ನಮಗೆ ಇಂದು ನಮ್ಮನ್ನು ಪಾರುಗೊಳಿಸಲು ನೀನೊಂದು ನೌಕೆಯಾಗು.

07059013a ನ ಹಿ ತತ್ಕುರುತೇ ಸಂಖ್ಯೇ ಕಾರ್ತವೀರ್ಯಸಮಸ್ತ್ವಪಿ|

07059013c ರಥೀ ಯತ್ಕುರುತೇ ಕೃಷ್ಣ ಸಾರಥಿರ್ಯತ್ನಮಾಸ್ಥಿತಃ||

ಕೃಷ್ಣ! ಯುದ್ಧದಲ್ಲಿ ರಥಿಕನಾದ ಕಾರ್ತವೀರ್ಯಸಮನು ಕೂಡ ಮಾಡಲಾಗದುದನ್ನು ರಥದಲ್ಲಿ ಕುಳಿತ ಸಾರಥಿಯು ಮಾಡಬಲ್ಲನು!”

07059014 ವಾಸುದೇವ ಉವಾಚ|

07059014a ಸಾಮರೇಷ್ವಪಿ ಲೋಕೇಷು ಸರ್ವೇಷು ನ ತಥಾವಿಧಃ|

07059014c ಶರಾಸನಧರಃ ಕಶ್ಚಿದ್ಯಥಾ ಪಾರ್ಥೋ ಧನಂಜಯಃ||

ವಾಸುದೇವನು ಹೇಳಿದನು: “ಅಮರ ಲೋಕವನ್ನೂ ಸೇರಿ ಎಲ್ಲ ಲೋಕಗಳಲ್ಲಿ ಪಾರ್ಥ ಧನಂಜಯನಂತಿರುವ ಧನುರ್ಧರನು ಯಾರೂ ಇಲ್ಲ.

07059015a ವೀರ್ಯವಾನಸ್ತ್ರಸಂಪನ್ನಃ ಪರಾಕ್ರಾಂತೋ ಮಹಾಬಲಃ|

07059015c ಯುದ್ಧಶೌಂಡಃ ಸದಾಮರ್ಷೀ ತೇಜಸಾ ಪರಮೋ ನೃಣಾಂ||

07059016a ಸ ಯುವಾ ವೃಷಭಸ್ಕಂಧೋ ದೀರ್ಘಬಾಹುರ್ಮಹಾಬಲಃ|

07059016c ಸಿಂಹರ್ಷಭಗತಿಃ ಶ್ರೀಮಾನ್ದ್ವಿಷತಸ್ತೇ ಹನಿಷ್ಯತಿ||

ಆ ವೀರ್ಯವಾನ, ಅಸ್ತ್ರಸಂಪನ್ನ, ಪರಾಕ್ರಾಂತ, ಮಹಾಬಲ, ಯುದ್ಧಶೌಂಡ, ಸದಾಮರ್ಷೀ, ತೇಜಸ್ಸಿನಿಂದ ಮನುಷ್ಯರಲ್ಲಿಯೇ ಶ್ರೇಷ್ಠನಾದ, ಆ ಯುವಕ, ವೃಷಭಸ್ಕಂಧ, ದೀರ್ಘಬಾಹು, ಮಹಾಬಲ, ಸಿಂಹದಂತೆ ನಡೆಯುವ ಶ್ರೀಮಾನನು ನಿನ್ನ ಶತ್ರುವನ್ನು ಸಂಹರಿಸುತ್ತಾನೆ.

07059017a ಅಹಂ ಚ ತತ್ಕರಿಷ್ಯಾಮಿ ಯಥಾ ಕುಂತೀಸುತೋಽರ್ಜುನಃ|

07059017c ಧಾರ್ತರಾಷ್ಟ್ರಸ್ಯ ಸೈನ್ಯಾನಿ ಧಕ್ಷ್ಯತ್ಯಗ್ನಿರಿವೋತ್ಥಿತಃ||

ನಾನೂ ಕೂಡ ಕುಂತೀಸುತ ಅರ್ಜುನನು ಧಾರ್ತರಾಷ್ಟ್ರನ ಸೇನೆಗಳನ್ನು ಅಗ್ನಿಯು ಕಟ್ಟಿಗೆಯನ್ನು ಹೇಗೋ ಹಾಗೆ ಸುಟ್ಟುಬಿಡುವಂತೆ ಮಾಡುತ್ತೇನೆ.

07059018a ಅದ್ಯ ತಂ ಪಾಪಕರ್ಮಾಣಂ ಕ್ಷುದ್ರಂ ಸೌಭದ್ರಘಾತಿನಂ|

07059018c ಅಪುನರ್ದರ್ಶನಂ ಮಾರ್ಗಮಿಷುಭಿಃ ಕ್ಷೇಪ್ಸ್ಯತೇಽರ್ಜುನಃ||

ಇಂದು ಅರ್ಜುನನು ಆ ಪಾಪಕರ್ಮಿ, ಕ್ಷುದ್ರ, ಸೌಭದ್ರಘಾತಿಯು ಪುನಃ ಕಾಣಲು ಸಿಗದಂತಹ ಮಾರ್ಗಕ್ಕೆ ಬಾಣಗಳಿಂದ ಕಳುಹಿಸುವವನಿದ್ದಾನೆ.

07059019a ತಸ್ಯಾದ್ಯ ಗೃಧ್ರಾಃ ಶ್ಯೇನಾಶ್ಚ ವಡಗೋಮಾಯವಸ್ತಥಾ|

07059019c ಭಕ್ಷಯಿಷ್ಯಂತಿ ಮಾಂಸಾನಿ ಯೇ ಚಾನ್ಯೇ ಪುರುಷಾದಕಾಃ||

ಇಂದು ಅವನ ಮಾಂಸಗಳನ್ನು ಹದ್ದುಗಳು, ನರಿಗಳು, ತೋಳಗಳು ಮತ್ತು ಇತರ ಮಾಂಸಭಕ್ಷಕರು ಭಕ್ಷಿಸುತ್ತಾರೆ.

07059020a ಯದ್ಯಸ್ಯ ದೇವಾ ಗೋಪ್ತಾರಃ ಸೇಂದ್ರಾಃ ಸರ್ವೇ ತಥಾಪ್ಯಸೌ|

07059020c ರಾಜಧಾನೀಂ ಯಮಸ್ಯಾದ್ಯ ಹತಃ ಪ್ರಾಪ್ಸ್ಯತಿ ಸಂಕುಲೇ||

ಅವನ ರಕ್ಷಣೆಗೆ ಇಂದು ಇಂದ್ರನೊಂದಿಗೆ ದೇವತೆಗಳೇ ಬಂದರೂ ಸಂಕುಲ ಯುದ್ಧದಲ್ಲಿ ಅವನು ಇಂದು ಹತನಾಗಿ ಯಮನ ರಾಜಧಾನಿಗೆ ಹೋಗುವುದು ನಿಶ್ಚಯ.

07059021a ನಿಹತ್ಯ ಸೈಂಧವಂ ಜಿಷ್ಣುರದ್ಯ ತ್ವಾಮುಪಯಾಸ್ಯತಿ|

07059021c ವಿಶೋಕೋ ವಿಜ್ವರೋ ರಾಜನ್ ಭವ ಭೂತಿಪುರಸ್ಕೃತಃ||

ಇಂದು ಸೈಂಧವನನ್ನು ಸಂಹರಿಸಿ ಜಿಷ್ಣುವು ನಿನ್ನ ಬಳಿ ಬರುತ್ತಾನೆ. ರಾಜನ್! ಐಶ್ವರ್ಯಸಂಪನ್ನನಾಗಿರುವ ನೀನು ಶೋಕರಹಿತನಾಗು. ವ್ಯಾಕುಲಗೊಳ್ಳಬೇಡ.””

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಣಿ ಶ್ರೀಕೃಷ್ಣವಾಕ್ಯೇ ಏಕೋನಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವದಲ್ಲಿ ಶ್ರೀಕೃಷ್ಣವಾಕ್ಯ ಎನ್ನುವ ಐವತ್ತೊಂಭತ್ತನೇ ಅಧ್ಯಾಯವು.

Image result for rising sun against white background

Comments are closed.