Drona Parva: Chapter 58

ದ್ರೋಣ ಪರ್ವ: ಪ್ರತಿಜ್ಞಾ ಪರ್ವ

೫೮

ಯುದ್ಧದ ಹದಿನಾಲ್ಕನೆಯ ದಿನದ ಬೆಳಿಗ್ಗೆ ಯುಧಿಷ್ಠಿರನು ಸಜ್ಜಾದುದು (೧-೩೩).

07058001 ಸಂಜಯ ಉವಾಚ|

07058001a ತಯೋಃ ಸಂವದತೋರೇವ ಕೃಷ್ಣದಾರುಕಯೋಸ್ತದಾ|

07058001c ಸಾತ್ಯಗಾದ್ರಜನೀ ರಾಜನ್ನಥ ರಾಜಾನ್ವಬುಧ್ಯತ||

ಸಂಜಯನು ಹೇಳಿದನು: “ರಾಜನ್! ಕೃಷ್ಣ ಮತ್ತು ದಾರುಕರ ಸಂವಾದವು ನಡೆಯುತ್ತಿದ್ದಂತೆಯೇ ರಾತ್ರಿಯು ಕಳೆಯಲು ರಾಜನು ಎಚ್ಚೆತ್ತನು.

07058002a ಪಠಂತಿ ಪಾಣಿಸ್ವನಿಕಾ ಮಾಗಧಾ ಮಧುಪರ್ಕಿಕಾಃ|

07058002c ವೈತಾಲಿಕಾಶ್ಚ ಸೂತಾಶ್ಚ ತುಷ್ಟುವುಃ ಪುರುಷರ್ಷಭಂ||

ಆ ಪುರುಷರ್ಷಭನನ್ನು ಪಾಣಿಸ್ವನಿಕರು, ಮಾಗಧರು, ಮಧುಪರ್ಕಿಕರು, ವೈತಾಲಿಕರು, ಮತ್ತು ಸೂತರು ಸಂತುಷ್ಟಗೊಳಿಸಿದರು.

07058003a ನರ್ತಕಾಶ್ಚಾಪ್ಯನೃತ್ಯಂತ ಜಗುರ್ಗೀತಾನಿ ಗಾಯಕಾಃ|

07058003c ಕುರುವಂಶಸ್ತವಾರ್ಥಾನಿ ಮಧುರಂ ರಕ್ತಕಂಠಿನಃ||

ನರ್ತಕರು ನಾಟ್ಯಮಾಡಿದರು. ಇಂಪಾದ ಕಂಠದ ಗಾಯಕರು ಕುರುವಂಶದ ಕೀರ್ತಿಯನ್ನು ಹೇಳುವ ಮಧುರ ಗೀತೆಗಳನ್ನು ಹಾಡಿದರು.

07058004a ಮೃದಂಗಾ ಝರ್ಝರಾ ಭೇರ್ಯಃ ಪಣವಾನಕಗೋಮುಖಾಃ|

07058004c ಆಡಂಬರಾಶ್ಚ ಶಂಖಾಶ್ಚ ದುಂದುಭ್ಯಶ್ಚ ಮಹಾಸ್ವನಾಃ||

ಮೃದಂಗ, ಝರ್ಝರ, ಭೇರಿ, ಪಣವಾನಕ, ಗೋಮುಖ, ಆಡಂಬರ, ಶಂಖ ಮತ್ತು ದುಂದುಭಿಗಳನ್ನು ಜೋರಾಗಿ ನುಡಿಸಲಾಯಿತು.

07058005a ಏವಮೇತಾನಿ ಸರ್ವಾಣಿ ತಥಾನ್ಯಾನ್ಯಪಿ ಭಾರತ|

07058005c ವಾದಯಂತಿ ಸ್ಮ ಸಂಹೃಷ್ಟಾಃ ಕುಶಲಾಃ ಸಾಧುಶಿಕ್ಷಿತಾಃ||

ಭಾರತ! ಇವು ಎಲ್ಲ ಮತ್ತು ಇನ್ನೂ ಅನ್ಯ ವಾದ್ಯಗಳನ್ನು ಕುಶಲರೂ ಚೆನ್ನಾಗಿ ಪಳಗಿದವರೂ ಸಂಹೃಷ್ಟರಾಗಿ ಬಾರಿಸಿದರು.

07058006a ಸ ಮೇಘಸಮನಿರ್ಘೋಷೋ ಮಹಾಂ ಶಬ್ದೋಽಸ್ಪೃಶದ್ದಿವಂ|

07058006c ಪಾರ್ಥಿವಪ್ರವರಂ ಸುಪ್ತಂ ಯುಧಿಷ್ಠಿರಮಬೋಧಯತ್||

ಮೇಘದಂತೆ ಮೊಳಗುತ್ತಿದ್ದ ನಿರ್ಘೋಷ ಮತ್ತು ದಿವವನ್ನು ಮುಟ್ಟುತ್ತಿದ್ದ ಮಹಾ ಶಬ್ಧವು ಮಲಗಿದ್ದ ಆ ಪಾರ್ಥಿವಪ್ರವರ ಯುಧಿಷ್ಠಿರನನ್ನು ಎಚ್ಚರಿಸಿತು.

07058007a ಪ್ರತಿಬುದ್ಧಃ ಸುಖಂ ಸುಪ್ತೋ ಮಹಾರ್ಹೇ ಶಯನೋತ್ತಮೇ|

07058007c ಉತ್ಥಾಯಾವಶ್ಯಕಾರ್ಯಾರ್ಥಂ ಯಯೌ ಸ್ನಾನಗೃಹಂ ತತಃ||

ಅತಿ ಬೆಲೆಬಾಳುವ ಉತ್ತಮ ಶಯನದಲ್ಲಿ ಸುಖವಾಗಿ ಮಲಗಿದ್ದ ಅವನು ಎಚ್ಚೆತ್ತನು. ಅನಂತರ ಅವಶ್ಯಕಾರ್ಯಗಳಿಗಾಗಿ ಎದ್ದು ಸ್ನಾನಗೃಹಕ್ಕೆ ತೆರಳಿದನು.

07058008a ತತಃ ಶುಕ್ಲಾಂಬರಾಃ ಸ್ನಾತಾಸ್ತರುಣಾಷ್ಟೋತ್ತರಂ ಶತಂ|

07058008c ಸ್ನಾಪಕಾಃ ಕಾಂಚನೈಃ ಕುಂಭೈಃ ಪೂರ್ಣೈಃ ಸಮುಪತಸ್ಥಿರೇ||

ಆಗ ನೂರಾ‌ಎಂಟು ಬಿಳಿಯ ವಸ್ತ್ರಗಳನ್ನುಟ್ಟಿದ್ದ ಸ್ನಾನಮಾಡಿಸುವ ತರುಣರು ಸ್ನಾನಮಾಡಿಸಲು ತುಂಬಿದ ಬಂಗಾರದ ಕೊಡಗಳಿಂದ ಸಿದ್ಧರಾಗಿದ್ದರು.

07058009a ಭದ್ರಾಸನೇ ಸೂಪವಿಷ್ಟಃ ಪರಿಧಾಯಾಂಬರಂ ಲಘು|

07058009c ಸಸ್ನೌ ಚಂದನಸಂಯುಕ್ತೈಃ ಪಾನೀಯೈರಭಿಮಂತ್ರಿತೈಃ||

ತೆಳು ಬಟ್ಟೆಯನ್ನುಟ್ಟು ಭದ್ರಾಸನದಲ್ಲಿ ಸುಖವಾಗಿ ಕುಳಿತ ಅವನಿಗೆ ಅವರು ಅಭಿಮಂತ್ರಿಸಿದ ಚಂದನಯುಕ್ತ ನೀರಿನಿಂದ ಸ್ನಾನಮಾಡಿಸಿದರು.

07058010a ಉತ್ಸಾದಿತಃ ಕಷಾಯೇಣ ಬಲವದ್ಭಿಃ ಸುಶಿಕ್ಷಿತೈಃ|

07058010c ಆಪ್ಲುತಃ ಸಾಧಿವಾಸೇನ ಜಲೇನ ಚ ಸುಗಂಧಿನಾ||

ಚೆನ್ನಾಗಿ ಪಳಗಿದ ಬಲವಂತರು ಅವನ ಅಂಗಾಂಗಗಳನ್ನು ಔಷಧ-ಸುಗಂಧ ಯುಕ್ತ ನೀರಿನಿಂದ ಚೆನ್ನಾಗಿ ತಿಕ್ಕಿದರು.

07058011a ಹರಿಣಾ ಚಂದನೇನಾಂಗಮನುಲಿಪ್ಯ ಮಹಾಭುಜಃ|

07058011c ಸ್ರಗ್ವೀ ಚಾಕ್ಲಿಷ್ಟವಸನಃ ಪ್ರಾಙ್ಮುಖಃ ಪ್ರಾಂಜಲಿಃ ಸ್ಥಿತಃ||

ಅರಿಷಿಣ ಚಂದನಗಳಿಂದ ಅಂಗಗಳನ್ನು ಲೇಪಿಸಿಯಾದ ನಂತರ ಮಹಾಭುಜನು ಹಾರವನ್ನು ಧರಿಸಿ, ಶುಚಿ ವಸ್ತ್ರಗಳನ್ನು ತೊಟ್ಟು ಕೈಜೋಡಿಸಿ ಪೂರ್ವಾಭಿಮುಖನಾಗಿ ನಿಂತನು.

07058012a ಜಜಾಪ ಜಪ್ಯಂ ಕೌಂತೇಯಃ ಸತಾಂ ಮಾರ್ಗಮನುಷ್ಠಿತಃ|

07058012c ತತೋಽಗ್ನಿಶರಣಂ ದೀಪ್ತಂ ಪ್ರವಿವೇಶ ವಿನೀತವತ್||

ಕೌಂತೇಯನು ಸಂತರ ಮಾರ್ಗವನ್ನು ಅನುಸರಿಸಿ ಜಪವನ್ನು ಜಪಿಸಿದನು. ಅನಂತರ ಉರಿಯುತ್ತಿರುವ ಅಗ್ನಿಯಿರುವ ಕೊಠಡಿಯನ್ನು ವಿನೀತನಾಗಿ ಪ್ರವೇಶಿಸಿದನು.

07058013a ಸಮಿದ್ಧಂ ಸ ಪವಿತ್ರಾಭಿರಗ್ನಿಮಾಹುತಿಭಿಸ್ತಥಾ|

07058013c ಮಂತ್ರಪೂತಾಭಿರರ್ಚಿತ್ವಾ ನಿಶ್ಚಕ್ರಾಮ ಗೃಹಾತ್ತತಃ||

ಪವಿತ್ರ ಸಮಿದ್ಧೆಯನ್ನು ಅಗ್ನಿಯಲ್ಲಿ ಆಹುತಿಯನ್ನಿತ್ತು, ಮಂತ್ರಪೂತಗಳಿಂದ ಅರ್ಚಿಸಿ ನಂತರ ಆ ಕೊಠಡಿಯಿಂದ ಹೊರಬಂದನು.

07058014a ದ್ವಿತೀಯಾಂ ಪುರುಷವ್ಯಾಘ್ರಃ ಕಕ್ಷ್ಯಾಂ ನಿಷ್ಕ್ರಮ್ಯ ಪಾರ್ಥಿವಃ|

07058014c ತತ್ರ ವೇದವಿದೋ ವಿಪ್ರಾನಪಶ್ಯದ್ಬ್ರಾಹ್ಮಣರ್ಷಭಾನ್||

ಆ ಪಾರ್ಥಿವ ಪುರುಷವ್ಯಾಘ್ರನು ಎರಡನೆಯ ಕಕ್ಷವನ್ನು ಪ್ರವೇಶಿಸಿ ಅಲ್ಲಿ ವೇದವಿದ ವಿಪ್ರರನ್ನೂ ಬ್ರಾಹ್ಮಣರ್ಷಭರನ್ನೂ ನೋಡಿದನು.

07058015a ದಾಂತಾನ್ವೇದವ್ರತಸ್ನಾತಾನ್ಸ್ನಾತಾನವಭೃಥೇಷು ಚ|

07058015c ಸಹಸ್ರಾನುಚರಾನ್ಸೌರಾನಷ್ಟೌ ದಶಶತಾನಿ ಚ||

ಶಾಂತರಾಗಿದ್ದ ಅವರು ವೇದವ್ರತ ಸ್ನಾನಮಾಡಿದ್ದರು ಮತ್ತು ಅವಭೃತ ಸ್ನಾನವನ್ನೂ ಮಾಡಿದ್ದರು. ಆ ಸೌರರು ಒಂದುಸಾವಿರವಿದ್ದರು. ಅವರ ಅನುಚರರು ಎಂಟು ಸಾವಿರವಿದ್ದರು.

07058016a ಅಕ್ಷತೈಃ ಸುಮನೋಭಿಶ್ಚ ವಾಚಯಿತ್ವಾ ಮಹಾಭುಜಃ|

07058016c ತಾನ್ದ್ವಿಜಾನ್ಮಧುಸರ್ಪಿರ್ಭ್ಯಾಂ ಫಲೈಃ ಶ್ರೇಷ್ಠೈಃ ಸುಮಂಗಲೈಃ||

07058017a ಪ್ರಾದಾತ್ಕಾಂಚನಮೇಕೈಕಂ ನಿಷ್ಕಂ ವಿಪ್ರಾಯ ಪಾಂಡವಃ|

07058017c ಅಲಂಕೃತಂ ಚಾಶ್ವಶತಂ ವಾಸಾಂಸೀಷ್ಟಾಶ್ಚ ದಕ್ಷಿಣಾಃ||

ಅವರು ಅಕ್ಷತೆ ಮತ್ತು ಸುಮನೋಹರ ಆಶೀರ್ವಾದಗಳನ್ನು ಪಠಿಸುತ್ತಿರಲು ಮಹಾಭುಜ ಪಾಂಡವನು ಆ ದ್ವಿಜರಿಗೆ ಜೇನು, ತುಪ್ಪ, ಶ್ರೇಷ್ಠ ಸುಮಂಗಲ ಫಲಗಳನ್ನು ಇತ್ತು, ಒಬ್ಬೊಬ್ಬರಿಗೂ ಒಂದೊಂದು ಬಂಗಾರದ ನಿಷ್ಕವನ್ನೂ, ಅಲಂಕರಿಸಲ್ಪಟ್ಟ ಒಂದು ನೂರು ಕುದುರೆಗಳನ್ನೂ, ವಸ್ತ್ರಗಳನ್ನೂ ದಕ್ಷಿಣೆಗಳನ್ನೂ ನೀಡಿದನು.

07058018a ತಥಾ ಗಾಃ ಕಪಿಲಾ ದೋಗ್ಧ್ರೀಃ ಸರ್ಷಭಾಃ ಪಾಂಡುನಂದನಃ|

07058018c ಹೇಮಶೃಂಗೀ ರೂಪ್ಯಖುರಾ ದತ್ತ್ವಾ ಚಕ್ರೇ ಪ್ರದಕ್ಷಿಣಂ||

ಹಾಗೆಯೇ ಪಾಂಡುನಂದನನು ಕೋಡುಗಳನ್ನು ಬಂಗಾರದಿಂದಲೂ ಖುರಗಳನ್ನು ಬೆಳ್ಳಿಯಿಂದಲೂ ಅಲಂಕರಿಸಲ್ಪಟ್ಟ, ಹಾಲುಕೊಡುವ ಕಪಿಲ ಗೋವುಗಳನ್ನು, ಕರುಳೊಂದಿಗೆ ಕೊಟ್ಟು ಪ್ರದಕ್ಷಿಣೆ ಹಾಕಿದನು.

07058019a ಸ್ವಸ್ತಿಕಾನ್ವರ್ಧಮಾನಾಂಶ್ಚ ನಂದ್ಯಾವರ್ತಾಂಶ್ಚ ಕಾಂಚನಾನ್|

07058019c ಮಾಲ್ಯಂ ಚ ಜಲಕುಂಭಾಂಶ್ಚ ಜ್ವಲಿತಂ ಚ ಹುತಾಶನಂ||

07058020a ಪೂರ್ಣಾನ್ಯಕ್ಷತಪಾತ್ರಾಣಿ ರುಚಕಾನ್ರೋಚನಾಂಸ್ತಥಾ|

07058020c ಸ್ವಲಂಕೃತಾಃ ಶುಭಾಃ ಕನ್ಯಾ ದಧಿಸರ್ಪಿರ್ಮಧೂದಕಂ||

07058021a ಮಂಗಲ್ಯಾನ್ಪಕ್ಷಿಣಶ್ಚೈವ ಯಚ್ಚಾನ್ಯದಪಿ ಪೂಜಿತಂ|

07058021c ದೃಷ್ಟ್ವಾ ಸ್ಪೃಷ್ಟ್ವಾ ಚ ಕೌಂತೇಯೋ ಬಾಹ್ಯಾಂ ಕಕ್ಷ್ಯಾಮಗಾತ್ತತಃ||

ಅನಂತರ ಕೌಂತೇಯನು ಆನಂದವನ್ನು ವೃದ್ಧಿಸುವ ಸ್ವಸ್ತಿಕಗಳನ್ನೂ, ಕಾಂಚನದ ನಂದ್ಯಾವರ್ತಗಳನ್ನೂ, ಮಾಲೆಗಳನ್ನೂ, ಜಲಕುಂಭಗಳನ್ನೂ, ಜ್ವಲಿಸುವ ಹುತಾಶನನನ್ನೂ, ಪೂರ್ಣವಾಗಿರುವ ನಕ್ಷತ್ರ ಪಾತ್ರೆಗಳನ್ನೂ, ಬಿಸಿಲಿನಲ್ಲಿ ಒಣಗಿಸಿದ ಅಕ್ಕಿಯನ್ನೂ, ಅಲಂಕೃತ ಶುಭ ಕನ್ಯೆಯರನ್ನೂ, ಮೊಸರು-ತುಪ್ಪ-ಜೇನು-ನೀರನ್ನೂ, ಮಂಗಲ ಪಕ್ಷಿಗಳನ್ನೂ, ಇತರ ಪೂಜಿತ ವಸ್ತುಗಳನ್ನೂ ನೋಡಿ ಮುಟ್ಟುತ್ತಾ ಹೊರಗಿನ ಕಕ್ಷಕ್ಕೆ ಬಂದನು.

07058022a ತತಸ್ತಸ್ಯ ಮಹಾಬಾಹೋಸ್ತಿಷ್ಠತಃ ಪರಿಚಾರಕಾಃ|

07058022c ಸೌವರ್ಣಂ ಸರ್ವತೋಭದ್ರಂ ಮುಕ್ತಾವೈಡೂರ್ಯಮಂಡಿತಂ||

07058023a ಪರಾರ್ಧ್ಯಾಸ್ತರಣಾಸ್ತೀರ್ಣಂ ಸೋತ್ತರಚ್ಚದಂ ಋದ್ಧಿಮತ್|

07058023c ವಿಶ್ವಕರ್ಮಕೃತಂ ದಿವ್ಯಮುಪಜಹ್ರುರ್ವರಾಸನಂ||

ಅಲ್ಲಿ ಮಹಾಬಾಹುವನ್ನು ಅವನ ಪರಿಚಾರಕರು ಬಂಗಾರದ, ಮುತ್ತು-ವೈಡೂರ್ಯಗಳನ್ನು ಕೂಡಿಸಿದ್ದ, ಅತಿ ಅಮೂಲ್ಯವಾದ ರತ್ನಗಂಬಳಿಯನ್ನು ಹೊದೆಸಿದ್ದ, ಅದರ ಮೇಲೆ ಮತ್ತೊಂದು ಮೃದು ವಸ್ತ್ರವನ್ನು ಹಾಸಿದ್ದ, ವಿಶ್ವಕರ್ಮನಿಂದ ನಿರ್ಮಿತವಾಗಿದ್ದ ದಿವ್ಯ ಸರ್ವತೋಭದ್ರ ವರಾಸನದ ಮೇಲೆ ಕುಳ್ಳಿರಿಸಿದರು.

07058024a ತತ್ರ ತಸ್ಯೋಪವಿಷ್ಟಸ್ಯ ಭೂಷಣಾನಿ ಮಹಾತ್ಮನಃ|

07058024c ಉಪಜಹ್ರುರ್ಮಹಾರ್ಹಾಣಿ ಪ್ರೇಷ್ಯಾಃ ಶುಭ್ರಾಣಿ ಸರ್ವಶಃ||

ಅಲ್ಲಿ ಅವನು ಕುಳಿತುಕೊಳ್ಳಲು ಎಲ್ಲ ಕಡೆಗಳಿಂದ ಮಹಾ ಅಮೂಲ್ಯ ಶುಭ್ರ ಭೂಷಣಗಳನ್ನು ತಂದರು.

07058025a ಯುಕ್ತಾಭರಣವೇಷಸ್ಯ ಕೌಂತೇಯಸ್ಯ ಮಹಾತ್ಮನಃ|

07058025c ರೂಪಮಾಸೀನ್ಮಹಾರಾಜ ದ್ವಿಷತಾಂ ಶೋಕವರ್ಧನಂ||

ಮಹಾರಾಜ! ಆಭರಣ ಉಡುಪುಗಳನ್ನು ಧರಿಸಿದ್ದ ಮಹಾತ್ಮ ಕೌಂತೇಯನ ರೂಪವು ಶತ್ರುಗಳ ಶೋಕವನ್ನು ಹೆಚ್ಚಿಸುವಂತಿತ್ತು.

07058026a ಪಾಂಡರೈಶ್ಚಂದ್ರರಶ್ಮ್ಯಾಭೈರ್ಹೇಮದಂಡೈಶ್ಚ ಚಾಮರೈಃ|

07058026c ದೋಧೂಯಮಾನಃ ಶುಶುಭೇ ವಿದ್ಯುದ್ಭಿರಿವ ತೋಯದಃ||

ಚಂದ್ರನ ಕಿರಣಗಳಂತೆ ಬೆಳ್ಳಗಿದ್ದ ಬಂಗಾರದ ದಂಡವಿದ್ದ ಚಾಮರಗಳನ್ನು ಬೀಸುತ್ತಿರಲು ಅವನು ಮಿಂಚಿನಿಂದ ಕೂಡಿದ ಮೋಡದಂತೆ ಶೋಭಿಸಿದನು.

07058027a ಸಂಸ್ತೂಯಮಾನಃ ಸೂತೈಶ್ಚ ವಂದ್ಯಮಾನಶ್ಚ ಬಂದಿಭಿಃ|

07058027c ಉಪಗೀಯಮಾನೋ ಗಂಧರ್ವೈರಾಸ್ತೇ ಸ್ಮ ಕುರುನಂದನಃ||

ಸ್ತುತಿಸುತ್ತಿದ್ದ ಸೂತರು, ವಂದಿಸುತ್ತಿದ್ದ ಬಂದಿಗಳು, ಹಾಡುತ್ತಿದ್ದ ಗಂಧರ್ವರು ಕುರುನಂದನನನ್ನು ಸಂತೋಷಗೊಳಿಸಿದರು.

07058028a ತತೋ ಮುಹೂರ್ತಾದಾಸೀತ್ತು ಬಂದಿನಾಂ ನಿಸ್ವನೋ ಮಹಾನ್|

07058028c ನೇಮಿಘೋಷಶ್ಚ ರಥಿನಾಂ ಖುರಘೋಷಶ್ಚ ವಾಜಿನಾಂ||

ಆಗ ಮುಹೂರ್ತದಲ್ಲಿಯೇ ಬಂದಿಗಳ ಸ್ವರ, ರಥಿಗಳ ಚಕ್ರಗಳ ಘೋಷ, ಕುದುರೆಗಳ ಖುರಗಳ ಶಬ್ಧಗಳು ಜೋರಾದವು.

07058029a ಹ್ರಾದೇನ ಗಜಘಂಟಾನಾಂ ಶಂಖಾನಾಂ ನಿನದೇನ ಚ|

07058029c ನರಾಣಾಂ ಪದಶಬ್ದೈಶ್ಚ ಕಂಪತೀವ ಸ್ಮ ಮೇದಿನೀ||

ಆನೆಗಳ ಗಂಟೆಗಳ ಬಾರಿಸುವಿಕೆಯಿಂದ, ಶಂಖಗಳ ನಿನಾದದಿಂದ, ಸೈನಿಕರ ಕಾಲ್ನಡುಗೆಯ ಶಬ್ಧಗಳಿಂದ ಮೇದಿನಿಯು ಕಂಪಿಸುವಂತಿತ್ತು.

07058030a ತತಃ ಶುದ್ಧಾಂತಮಾಸಾದ್ಯ ಜಾನುಭ್ಯಾಂ ಭೂತಲೇ ಸ್ಥಿತಃ|

07058030c ಶಿರಸಾ ವಂದನೀಯಂ ತಮಭಿವಂದ್ಯ ಜಗತ್ಪತಿಂ||

07058031a ಕುಂಡಲೀ ಬದ್ಧನಿಸ್ತ್ರಿಂಶಃ ಸನ್ನದ್ಧಕವಚೋ ಯುವಾ|

07058031c ಅಭಿಪ್ರಣಮ್ಯ ಶಿರಸಾ ದ್ವಾಃಸ್ಥೋ ಧರ್ಮಾತ್ಮಜಾಯ ವೈ|

07058031e ನ್ಯವೇದಯದ್ಧೃಷೀಕೇಶಮುಪಯಾತಂ ಮಹಾತ್ಮನೇ||

ಆಗ ಕುಂಡಲಗಳನ್ನು ಧರಿಸಿದ್ದ, ಖಡ್ಗವನ್ನು ಒರಸೆಯಲ್ಲಿ ಕಟ್ಟಿಕೊಂಡಿದ್ದ, ಸನ್ನದ್ಧ ಕವಚನಾದ ಯುವಕನು ಬಂದು ಕಾಲುಗಳನ್ನು ನೆಲಕ್ಕೆ ಊರಿ ವಂದನೀಯ ಜಗತ್ಪತಿಯನ್ನು ವಂದಿಸಿ, ದ್ವಾರದಲ್ಲಿ ಹೃಷೀಕೇಶನು ಒಳಬರನು ಕಾದುಕೊಂಡಿದ್ದಾನೆಂದು ಮಹಾತ್ಮ ಧರ್ಮಾತ್ಮಜನಿಗೆ ನಿವೇದಿಸಿದನು.

07058032a ಸೋಽಬ್ರವೀತ್ಪುರುಷವ್ಯಾಘ್ರಃ ಸ್ವಾಗತೇನೈವ ಮಾಧವಂ|

07058032c ಅರ್ಘ್ಯಂ ಚೈವಾಸನಂ ಚಾಸ್ಮೈ ದೀಯತಾಂ ಪರಮಾರ್ಚಿತಂ||

ಆಗ ಪುರುಷವ್ಯಾಘ್ರನು ಹೇಳಿದನು: “ಮಾಧವನನ್ನು ಸ್ವಾಗತಿಸಿ, ಆ ಪರಮಾರ್ಚಿತನಿಗೆ ಅರ್ಘ್ಯ ಆಸನಗಳನ್ನು ನೀಡಿ!”

07058033a ತತಃ ಪ್ರವೇಶ್ಯ ವಾರ್ಷ್ಣೇಯಮುಪವೇಶ್ಯ ವರಾಸನೇ|

07058033c ಸತ್ಕೃತ್ಯ ಸತ್ಕೃತಸ್ತೇನ ಪರ್ಯಪೃಚ್ಚದ್ಯುಧಿಷ್ಠಿರಃ||

ಆಗ ವಾರ್ಷ್ಣೇಯನು ಪ್ರವೇಶಿಸಿ ವರಾಸನದಲ್ಲಿ ಕುಳಿತುಕೊಳ್ಳಲು ಸತ್ಕೃತನಾಗಿ ಸತ್ಕರಿಸಿ ಯುಧಿಷ್ಠಿರನು ಅವನನ್ನು ಕೇಳಿದನು.

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಣಿ ಯುಧಿಷ್ಠಿರಸಜ್ಜತಾಯಾಂ ಅಷ್ಠಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವದಲ್ಲಿ ಯುಧಿಷ್ಠಿರಸಜ್ಜತ ಎನ್ನುವ ಐವತ್ತೆಂಟನೇ ಅಧ್ಯಾಯವು.

Image result for rising sun against white background

Comments are closed.