Drona Parva: Chapter 54

ದ್ರೋಣ ಪರ್ವ: ಪ್ರತಿಜ್ಞಾ ಪರ್ವ

೫೪

ದಾರುಣ ಉತ್ಪಾತ ದರ್ಶನ (೧-೮). ಶ್ರೀಕೃಷ್ಣನು ಸುಭದ್ರೆಯನ್ನು ಸಂತವಿಸಿದ್ದುದು (೯-೨೬).

07054001 ಸಂಜಯ ಉವಾಚ|

07054001a ತಾಂ ನಿಶಾಂ ದುಃಖಶೋಕಾರ್ತೌ ಶ್ವಸಂತಾವಿವ ಚೋರಗೌ|

07054001c ನಿದ್ರಾಂ ನೈವೋಪಲೇಭಾತೇ ವಾಸುದೇವಧನಂಜಯೌ||

ಸಂಜಯನು ಹೇಳಿದನು: “ವಾಸುದೇವ-ಧನಂಜಯರು ದುಃಖಶೋಕಾರ್ತರಾಗಿ ಸರ್ಪಗಳಂತೆ ನಿಟ್ಟುಸಿರು ಬಿಡುತ್ತಾ ನಿದ್ರೆಯನ್ನು ಪಡೆಯಲಾರದೇ ಹೋದರು.

07054002a ನರನಾರಾಯಣೌ ಕ್ರುದ್ಧೌ ಜ್ಞಾತ್ವಾ ದೇವಾಃ ಸವಾಸವಾಃ|

07054002c ವ್ಯಥಿತಾಶ್ಚಿಂತಯಾಮಾಸುಃ ಕಿಂ ಸ್ವಿದೇತದ್ಭವಿಷ್ಯತಿ||

ನರ-ನಾರಾಯಣರು ಕ್ರುದ್ಧರಾಗಿದ್ದಾರೆ ಎನ್ನುವುದನ್ನು ತಿಳಿದು ವಾಸವನೊಂದಿಗೆ ದೇವತೆಗಳು ವ್ಯಥಿತರಾಗಿ ಮುಂದೇನು ನಡೆಯಲಿದೆ? ಎಂದು ಚಿಂತಿಸತೊಡಗಿದರು.

07054003a ವವುಶ್ಚ ದಾರುಣಾ ವಾತಾ ರೂಕ್ಷಾ ಗೋರಾಭಿಶಂಸಿನಃ|

07054003c ಸಕಬಂಧಸ್ತಥಾದಿತ್ಯೇ ಪರಿಘಃ ಸಮದೃಶ್ಯತ||

ಭಯಸೂಚಕವಾದ ದಾರುಣ ಕ್ರೂರ ಗಾಳಿಯು ಬೀಸತೊಡಗಿತು. ಸೂರ್ಯನ ಸುತ್ತಲೂ ದುಂಡಾದ ಪರಿಧಿಯು ಕಬಂಧದೊಡನೆ ಕಾಣಿಸಿಕೊಂಡಿತು.

07054004a ಶುಷ್ಕಾಶನ್ಯಶ್ಚ ನಿಷ್ಪೇತುಃ ಸನಿರ್ಘಾತಾಃ ಸವಿದ್ಯುತಃ|

07054004c ಚಚಾಲ ಚಾಪಿ ಪೃಥಿವೀ ಸಶೈಲವನಕಾನನಾ||

ಮಿಂಚಿನೊಡನೆ ಗರ್ಜಿಸುತ್ತಾ ಒಣ ಸಿಡಿಲುಗಳು ಸಿಡಿದವು. ಶೈಲ-ವನ-ಕಾನನಗಳೊಂದಿಗೆ ಭೂಮಿಯು ನಡುಗಿತು.

07054005a ಚುಕ್ಷುಭುಶ್ಚ ಮಹಾರಾಜ ಸಾಗರಾ ಮಕರಾಲಯಾಃ|

07054005c ಪ್ರತಿಸ್ರೋತಃ ಪ್ರವೃತ್ತಾಶ್ಚ ತಥಾ ಗಂತುಂ ಸಮುದ್ರಗಾಃ||

ಮಹಾರಾಜ! ಮಕರಾಲಯ ಸಾಗರಗಳು ಅಲ್ಲೋಲಕಲ್ಲೋಲಗೊಂಡವು. ಸಮುದ್ರದ ಕಡೆ ಹರಿಯುತ್ತಿದ್ದ ನದಿಗಳು ಹಿಂದಿರುಗಿ ಅವು ಹುಟ್ಟಿದ ಕಡೆ ಹರಿಯತೊಡಗಿದವು.

07054006a ರಥಾಶ್ವನರನಾಗಾನಾಂ ಪ್ರವೃತ್ತಮಧರೋತ್ತರಂ|

07054006c ಕ್ರವ್ಯಾದಾನಾಂ ಪ್ರಮೋದಾರ್ಥಂ ಯಮರಾಷ್ಟ್ರವಿವೃದ್ಧಯೇ||

ಯಮನ ರಾಷ್ಟ್ರನ ವೃದ್ಧಿಗಾಗಿ ಮತ್ತು ಕ್ರವ್ಯಾದಗಳ ಸಂತೋಷಾರ್ಥವಾಗಿ ಅಶ್ವ-ಗಜ-ರಥ-ಪದಾತಿ ಸೈನಿಕರ ಎರಡು ತುಟಿಗಳೂ ಅದುರತೊಡಗಿದವು.

07054007a ವಾಹನಾನಿ ಶಕೃನ್ಮೂತ್ರೇ ಮುಮುಚೂ ರುರುದುಶ್ಚ ಹ|

07054007c ತಾನ್ದೃಷ್ಟ್ವಾ ದಾರುಣಾನ್ಸರ್ವಾನುತ್ಪಾತಾಽಲ್ಲೋಮಹರ್ಷಣಾನ್||

ಆ ಎಲ್ಲ ರೋಮಾಂಚಕಾರೀ ದಾರುಣ ಉತ್ಪಾತಗಳನ್ನು ನೋಡಿ ವಾಹನಗಳು ರೋದಿಸಿದವು ಮತ್ತು ಮಲಮೂತ್ರಗಳನ್ನು ವಿಸರ್ಜಿಸಿದವು.

07054008a ಸರ್ವೇ ತೇ ವ್ಯಥಿತಾಃ ಸೈನ್ಯಾಸ್ತ್ವದೀಯಾ ಭರತರ್ಷಭ|

07054008c ಶ್ರುತ್ವಾ ಮಹಾಬಲಸ್ಯೋಗ್ರಾಂ ಪ್ರತಿಜ್ಞಾಂ ಸವ್ಯಸಾಚಿನಃ||

ಭರತರ್ಷಭ! ನಿನ್ನ ಸೇನೆಯವರೆಲ್ಲರೂ ಮಹಾಬಲ ಸವ್ಯಸಾಚಿಯ ಉಗ್ರ ಪ್ರತಿಜ್ಞೆಯನ್ನು ಕೇಳಿ ವ್ಯಥಿತರಾದರು.

07054009a ಅಥ ಕೃಷ್ಣಂ ಮಹಾಬಾಹುರಬ್ರವೀತ್ಪಾಕಶಾಸನಿಃ|

07054009c ಆಶ್ವಾಸಯ ಸುಭದ್ರಾಂ ತ್ವಂ ಭಗಿನೀಂ ಸ್ನುಷಯಾ ಸಹ||

ಆಗ ಮಹಾಬಾಹು ಪಾಕಶಾಸನಿಯು ಕೃಷ್ಣನಿಗೆ ಹೇಳಿದನು: “ಸೊಸೆಯೊಂದಿಗಿರುವ ನಿನ್ನ ತಂಗಿ ಸುಭದ್ರೆಯನ್ನು ಸಂತವಿಸು!

07054010a ಸ್ನುಷಾ ಶ್ವಶ್ವ್ರಾನಘಾಯಸ್ತೇ ವಿಶೋಕೇ ಕುರು ಮಾಧವ|

07054010c ಸಾಮ್ನಾ ಸತ್ಯೇನ ಯುಕ್ತೇನ ವಚಸಾಶ್ವಾಸಯ ಪ್ರಭೋ||

ಮಾಧವ! ಪ್ರಭೋ! ಸೊಸೆಯ ಮತ್ತು ಅವಳ ಸಖಿಯರ ಶೋಕವನ್ನು ಸಾಂತ್ವನದ ಮತ್ತು ಸತ್ಯದಿಂದ ಕೂಡಿದ ಮಾತುಗಳಿಂದ ದೂರಮಾಡು!”

07054011a ತತೋಽರ್ಜುನಗೃಹಂ ಗತ್ವಾ ವಾಸುದೇವಃ ಸುದುರ್ಮನಾಃ|

07054011c ಭಗಿನೀಂ ಪುತ್ರಶೋಕಾರ್ತಾಮಾಶ್ವಾಸಯತ ದುಃಖಿತಾಂ||

ಆಗ ವಾಸುದೇವನು ದುಃಖದಿಂದ ಅರ್ಜುನನ ಮನೆಗೆ ಹೋಗಿ ಪುತ್ರಶೋಕದಿಂದ ಆರ್ತಳಾಗಿ ದುಃಖಿತಳಾಗಿದ್ದ ತಂಗಿಯನ್ನು ಸಂತವಿಸಿದನು:

07054012a ಮಾ ಶೋಕಂ ಕುರು ವಾರ್ಷ್ಣೇಯಿ ಕುಮಾರಂ ಪ್ರತಿ ಸಸ್ನುಷಾ|

07054012c ಸರ್ವೇಷಾಂ ಪ್ರಾಣಿನಾಂ ಭೀರು ನಿಷ್ಠೈಷಾ ಕಾಲನಿರ್ಮಿತಾ||

“ವಾರ್ಷ್ಣೇಯೀ! ಸೊಸೆಯೊಂದಿಗೆ ಕುಮಾರನಿಗಾಗಿ ಶೋಕಿಸಬೇಡ! ಭೀರು! ಪ್ರಾಣಿಗಳೆಲ್ಲವೂ ಕಾಲನಿರ್ಮಿತವಾದ ಈ ಪರಿಸ್ಥಿತಿಗೆ ಬಂದೇ ಬರುತ್ತವೆ.

07054013a ಕುಲೇ ಜತಸ್ಯ ವೀರಸ್ಯ ಕ್ಷತ್ರಿಯಸ್ಯ ವಿಶೇಷತಃ|

07054013c ಸದೃಶಂ ಮರಣಂ ಹ್ಯೇತತ್ತವ ಪುತ್ರಸ್ಯ ಮಾ ಶುಚಃ||

ವಿಶೇಷವಾಗಿ ವೀರ ಕ್ಷತ್ರಿಯರ ಕುಲದಲ್ಲಿ ಹುಟ್ಟಿದ ಈ ನಿನ್ನ ಪುತ್ರನ ಮರಣವು ಅವನಿಗೆ ತಕ್ಕುದಾಗಿದೆ. ಶೋಕಿಸಬೇಡ!

07054014a ದಿಷ್ಟ್ಯಾ ಮಹಾರಥೋ ವೀರಃ ಪಿತುಸ್ತುಲ್ಯಪರಾಕ್ರಮಃ|

07054014c ಕ್ಷಾತ್ರೇಣ ವಿಧಿನಾ ಪ್ರಾಪ್ತೋ ವೀರಾಭಿಲಷಿತಾಂ ಗತಿಂ||

ಅದೃಷ್ಟದಿಂದ ತನ್ನ ತಂದೆಯ ಪರಾಕ್ರಮಕ್ಕೆ ಸಮನಾದ ವೀರ ಮಹಾರಥನು ಕ್ಷಾತ್ರ ವೀರರು ಬಯಸುವ ಗತಿಯನ್ನು ವಿಧಿವತ್ತಾಗಿಯೇ ಪಡೆದಿದ್ದಾನೆ.

07054015a ಜಿತ್ವಾ ಸುಬಹುಶಃ ಶತ್ರೂನ್ಪ್ರೇಷಯಿತ್ವಾ ಚ ಮೃತ್ಯವೇ|

07054015c ಗತಃ ಪುಣ್ಯಕೃತಾಂ ಲೋಕಾನ್ಸರ್ವಕಾಮದುಹೋಽಕ್ಷಯಾನ್||

ಬಹಳಷ್ಟು ಶತ್ರುಗಳನ್ನು ಗೆದ್ದು, ಮೃತ್ಯುಲೋಕಗಳಿಗೂ ಕಳುಹಿಸಿ ಅವನು ಸರ್ವಕಾಮಗಳನ್ನೂ ಪೂರೈಸಬಲ್ಲ ಪುಣ್ಯಕೃತರ ಅಕ್ಷಯ ಲೋಕಗಳಿಗೆ ಹೋಗಿದ್ದಾನೆ.

07054016a ತಪಸಾ ಬ್ರಹ್ಮಚರ್ಯೇಣ ಶ್ರುತೇನ ಪ್ರಜ್ಞಯಾಪಿ ಚ|

07054016c ಸಂತೋ ಯಾಂ ಗತಿಮಿಚ್ಚಂತಿ ಪ್ರಾಪ್ತಸ್ತಾಂ ತವ ಪುತ್ರಕಃ||

ತಪಸ್ಸು, ಬ್ರಹ್ಮಚರ್ಯ, ಶಾಸ್ತ್ರಜ್ಞಾನ ಮತ್ತು ಪ್ರಜ್ಞೆಯ ಮೂಲಕ ಸಂತರು ಯಾವ ಗತಿಯನ್ನು ಬಯಸುತ್ತಾರೋ ಆ ಗತಿಯನ್ನೇ ನಿನ್ನ ಮಗನು ಪಡೆದಿದ್ದಾನೆ.

07054017a ವೀರಸೂರ್ವೀರಪತ್ನೀ ತ್ವಂ ವೀರಶ್ವಶುರಬಾಂಧವಾ|

07054017c ಮಾ ಶುಚಸ್ತನಯಂ ಭದ್ರೇ ಗತಃ ಸ ಪರಮಾಂ ಗತಿಂ||

ಭದ್ರೇ! ವೀರಮಾತೆಯಾದ, ವೀರನ ಪತ್ನಿಯಾದ, ವೀರಪುತ್ರಿಯಾದ, ವೀರರನ್ನೇ ಬಾಂಧವರನ್ನಾಗಿ ಪಡೆದಿರುವ ನೀನು ಮಗನ ಕುರಿತು ಶೋಕಿಸಬೇಡ. ಅವನು ಪರಮ ಗತಿಯನ್ನು ಪಡೆದಿದ್ದಾನೆ.

07054018a ಪ್ರಾಪ್ಸ್ಯತೇ ಚಾಪ್ಯಸೌ ಕ್ಷುದ್ರಃ ಸೈಂಧವೋ ಬಾಲಘಾತಕಃ|

07054018c ಅಸ್ಯಾವಲೇಪಸ್ಯ ಫಲಂ ಸಸುಹೃದ್ಗಣಬಾಂಧವಃ||

ಕ್ಷುದ್ರ ಬಾಲಘಾತಕ ಸೈಂಧವನು ತನ್ನ ಸುಹೃದ್ಗಣ-ಬಾಂಧವರೊಂದಿಗೆ ಈ ಪಾಪದ ಫಲವನ್ನು ಪಡೆಯುತ್ತಾನೆ.

07054019a ವ್ಯುಷ್ಟಾಯಾಂ ತು ವರಾರೋಹೇ ರಜನ್ಯಾಂ ಪಾಪಕರ್ಮಕೃತ್|

07054019c ನ ಹಿ ಮೋಕ್ಷ್ಯತಿ ಪಾರ್ಥಾತ್ಸ ಪ್ರವಿಷ್ಟೋಽಪ್ಯಮರಾವತೀಂ||

ವರಾರೋಹೇ! ಈ ರಾತ್ರಿ ಕಳೆದರೆ ಆ ಪಾಪಕರ್ಮಿಯು ಅಮರಾವತಿಯಲ್ಲಿ ಹೊಕ್ಕಿಕೊಂಡರೂ ಪಾರ್ಥನಿಂದ ಬಿಡುಗಡೆ ಹೊಂದಲಾರ!

07054020a ಶ್ವಃ ಶಿರಃ ಶ್ರೋಷ್ಯಸೇ ತಸ್ಯ ಸೈಂಧವಸ್ಯ ರಣೇ ಹೃತಂ|

07054020c ಸಮಂತಪಂಚಕಾದ್ಬಾಹ್ಯಂ ವಿಶೋಕಾ ಭವ ಮಾ ರುದಃ||

ಸೈಂಧವನ ಶಿರಸ್ಸು ರಣದಲ್ಲಿ ಹಾರಿಹೋಗಿ ಸಮಂತಪಂಚಕದ ಹೊರಗೆ ಬಿದ್ದಿತು ಎನ್ನುವುದನ್ನು ನೀನು ನಾಳೆಯೇ ಕೇಳುವೆ. ಶೋಕರಹಿತಳಾಗಿರು. ರೋದಿಸಬೇಡ!

07054021a ಕ್ಷತ್ರಧರ್ಮಂ ಪುರಸ್ಕೃತ್ಯ ಗತಃ ಶೂರಃ ಸತಾಂ ಗತಿಂ|

07054021c ಯಾಂ ವಯಂ ಪ್ರಾಪ್ನುಯಾಮೇಹ ಯೇ ಚಾನ್ಯೇ ಶಸ್ತ್ರಜೀವಿನಃ||

ಕ್ಷತ್ರಧರ್ಮವನ್ನು ಆದರಿಸಿ ಅವನು ಶೂರ ಸಂತರ ಗತಿಯನ್ನು ಪಡೆದಿದ್ದಾನೆ. ನಾವು ಮತ್ತು ಅನ್ಯ ಶಸ್ತ್ರಜೀವಿಗಳೂ ಕೂಡ ಇದೇ ಗತಿಯನ್ನು ಪಡೆಯುತ್ತೇವೆ.

07054022a ವ್ಯೂಢೋರಸ್ಕೋ ಮಹಾಬಾಹುರನಿವರ್ತೀ ವರಪ್ರಣುತ್|

07054022c ಗತಸ್ತವ ವರಾರೋಹೇ ಪುತ್ರಃ ಸ್ವರ್ಗಂ ಜ್ವರಂ ಜಹಿ||

ವರಾರೋಹೇ! ವಿಶಾಲ ಹೆಗಲಿನ, ಯುದ್ಧದಲ್ಲಿ ಬೆನ್ನುತೋರಿಸದ, ಶತ್ರುಗಳನ್ನು ಗೆದ್ದ ನಿನ್ನ ಮಗ ಆ ಮಹಾಬಾಹುವು ಸ್ವರ್ಗಕ್ಕೆ ಹೋಗಿದ್ದಾನೆ. ಪರಿತಪಿಸುವುದನ್ನು ಬಿಡು!

07054023a ಅನು ಜಾತಶ್ಚ ಪಿತರಂ ಮಾತೃಪಕ್ಷಂ ಚ ವೀರ್ಯವಾನ್|

07054023c ಸಹಸ್ರಶೋ ರಿಪೂನ್ ಹತ್ವಾ ಹತಃ ಶೂರೋ ಮಹಾರಥಃ||

ಆ ಶೂರ ಮಹಾರಥ ವೀರ್ಯವಾನನು ತಂದೆ ಮತ್ತು ತಾಯಿಯ ಕುಲಗಳನ್ನು ಅನುಸರಿಸಿ ಸಹಸ್ರಾರು ಶತ್ರುಗಳನ್ನು ಸಂಹರಿಸಿ ಹತನಾದನು.

07054024a ಆಶ್ವಾಸಯ ಸ್ನುಷಾಂ ರಾಜ್ಞಿ ಮಾ ಶುಚಃ ಕ್ಷತ್ರಿಯೇ ಭೃಷಂ|

07054024c ಶ್ವಃ ಪ್ರಿಯಂ ಸುಮಹಚ್ಚ್ರುತ್ವಾ ವಿಶೋಕಾ ಭವ ನಂದಿನಿ||

ರಾಣಿ! ಕ್ಷತ್ರಿಯೇ! ನಿನ್ನ ಸೊಸೆಯನ್ನು ಸಂತವಿಸು. ತುಂಬಾ ದುಃಖಿಸಬೇಡ. ನಂದಿನಿ! ನಾಳೆಯೇ ನೀನು ಅತ್ಯಂತ ಪ್ರಿಯವಾರ್ತೆಯನ್ನು ಕೇಳುವೆ. ವಿಶೋಕಳಾಗು!

07054025a ಯತ್ಪಾರ್ಥೇನ ಪ್ರತಿಜ್ಞಾತಂ ತತ್ತಥಾ ನ ತದನ್ಯಥಾ|

07054025c ಚಿಕೀರ್ಷಿತಂ ಹಿ ತೇ ಭರ್ತುರ್ನ ಭವೇಜ್ಜಾತು ನಿಷ್ಫಲಂ||

ಪಾರ್ಥನು ಪ್ರತಿಜ್ಞೆಮಾಡಿದಂತೆಯೇ ನಡೆಯುತ್ತದೆ. ಅನ್ಯಥಾ ಅಲ್ಲ. ನಿನ್ನ ಗಂಡನು ಬಯಸಿದುದು ಎಂದೂ ನಿಷ್ಫಲವಾಗುವುದಿಲ್ಲ.

07054026a ಯದಿ ಚ ಮನುಜಪನ್ನಗಾಃ ಪಿಶಾಚಾ

        ರಜನಿಚರಾಃ ಪತಗಾಃ ಸುರಾಸುರಾಶ್ಚ|

07054026c ರಣಗತಮಭಿಯಾಂತಿ ಸಿಂಧುರಾಜಂ

        ನ ಸ ಭವಿತಾ ಸಹ ತೈರಪಿ ಪ್ರಭಾತೇ||

ಒಂದುವೇಳೆ ಮನುಷ್ಯರು, ಪನ್ನಗರು, ಪಿಶಾಚಿಗಳು, ರಜನೀಚರರು, ಪಕ್ಷಿಗಳು, ಸುರಾಸುರರೂ ಕೂಡ ರಣರಂಗದಲ್ಲಿ ಸೇರಿ ಸಿಂಧುರಾಜನನ್ನು ರಕ್ಷಿಸಲು ಬಂದರೂ ಬೆಳಿಗ್ಗೆ ಅವರೆಲ್ಲರೊಡನೆಯೂ ಅವನು ಉಳಿಯುವುದಿಲ್ಲ!””

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಣಿ ಸುಭದ್ರಾಶ್ವಾಸನೇ ಚತುಷ್ಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವದಲ್ಲಿ ಸುಭದ್ರಾಶ್ವಾಸನ ಎನ್ನುವ ಐವತ್ನಾಲ್ಕನೇ ಅಧ್ಯಾಯವು.

Image result for night against white background

Comments are closed.