Drona Parva: Chapter 52

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ: ಪ್ರತಿಜ್ಞಾ ಪರ್ವ

೫೨

ಅರ್ಜುನನ ಪ್ರತಿಜ್ಞೆಯ ಕುರಿತು ಕೇಳಿದ ಜಯದ್ರಥನು ಭಯದಿಂದ ತನಗೆ ರಕ್ಷಣೆಯನ್ನು ನೀಡದಿದ್ದರೆ ತಾನು ಮನೆಗೆ ತೆರಳುತ್ತೇನೆಂದು ಕುರುರಾಜಸಭೆಯಲ್ಲಿ ಹೇಳಿಕೊಂಡಿದುದು (೧-೧೨). ದುರ್ಯೋಧನ ಮತ್ತು ದ್ರೋಣರಿಂದ ಆಶ್ವಾಸಿತನಾದ ಜಯದ್ರಥನು ಭಯವನ್ನು ತೊರೆದು ಪಾರ್ಥನೊಂದಿಗೆ ಯುದ್ಧಮಾಡುವ ಮನಸ್ಸು ಮಾಡಿದುದು (೧೩-೩೩).

07052001 ಸಂಜಯ ಉವಾಚ|

07052001a ಶ್ರುತ್ವಾ ತು ತಂ ಮಹಾಶಬ್ದಂ ಪಾಂಡೂನಾಂ ಪುತ್ರಗೃದ್ಧಿನಾಂ|

07052001c ಚಾರೈಃ ಪ್ರವೇದಿತೇ ತತ್ರ ಸಮುತ್ಥಾಯ ಜಯದ್ರಥಃ||

ಸಂಜಯನು ಹೇಳಿದನು: “ಪುತ್ರಶೋಕದಿಂದಿದ್ದ ಪಾಂಡವರ ಆ ಮಹಾಶಬ್ಧವನ್ನು ಚಾರರಿಂದ ಕೇಳಿ ಅಲ್ಲಿ ಜಯದ್ರಥನು ಸಂಕಟದಿಂದ ಮೇಲೆದ್ದನು.

07052002a ಶೋಕಸಮ್ಮೂಢಹೃದಯೋ ದುಃಖೇನಾಭಿಹತೋ ಭೃಶಂ|

07052002c ಮಜ್ಜಮಾನ ಇವಾಗಾಧೇ ವಿಪುಲೇ ಶೋಕಸಾಗರೇ||

07052003a ಜಗಾಮ ಸಮಿತಿಂ ರಾಜ್ಞಾಂ ಸೈಂಧವೋ ವಿಮೃಶನ್ಬಹು|

07052003c ಸ ತೇಷಾಂ ನರದೇವಾನಾಂ ಸಕಾಶೇ ಪರಿದೇವಯನ್||

ಶೋಕಸಮ್ಮೂಢಹೃದಯನಾಗಿ, ದುಃಖದಿಂದ ತುಂಬಾ ಪೀಡಿತನಾಗಿ, ವಿಪುಲ ಅಗಾಧ ಶೋಕಸಾಗರದಲ್ಲಿ ಮುಳುಗಿದವನಾಗಿ, ಸೈಂಧವನು ರಾಜರ ಸಭೆಗೆ ನಡೆದನು. ಅಲ್ಲಿ ನರದೇವರ ಮುಂದೆ ಅವನು ವಿಲಪಿಸಿದನು.

07052004a ಅಭಿಮನ್ಯೋಃ ಪಿತುರ್ಭೀತಃ ಸವ್ರೀಡೋ ವಾಕ್ಯಮಬ್ರವೀತ್|

07052004c ಯೋಽಸೌ ಪಾಂಡೋಃ ಕಿಲ ಕ್ಷೇತ್ರೇ ಜಾತಃ ಶಕ್ರೇಣ ಕಾಮಿನಾ||

07052005a ಸ ನಿನೀಷತಿ ದುರ್ಬುದ್ಧಿರ್ಮಾಂ ಕಿಲೈಕಂ ಯಮಕ್ಷಯಂ|

07052005c ತತ್ಸ್ವಸ್ತಿ ವೋಽಸ್ತು ಯಾಸ್ಯಾಮಿ ಸ್ವಗೃಹಂ ಜೀವಿತೇಪ್ಸಯಾ||

ಅಭಿಮನ್ಯುವಿನ ತಂದೆಗೆ ಹೆದರಿ ಭಯಪಡುತ್ತಾ ಈ ಮಾತನ್ನಾಡಿದನು: “ಪಾಂಡುವಿನ ಕ್ಷೇತ್ರದಲ್ಲಿ ಕಾಮಿ ಶಕ್ರನಿಂದ ಯಾವನು ಹುಟ್ಟಿದ್ದಾನೋ ಆ ದುರ್ಬುದ್ಧಿಯು ನನ್ನೊಬ್ಬನನ್ನೇ ಯಮಕ್ಷಯಕ್ಕೆ ಕಳುಹಿಸಲು ಇಚ್ಛಿಸಿದ್ದಾನೆ. ಬದುಕಿರುವ ಇಚ್ಛೆಯಿಂದ ನಾನು ನನ್ನ ಮನೆಗೆ ತೆರಳುತ್ತೇನೆ. ನಿಮಗೆ ಮಂಗಳವಾಗಲಿ!

07052006a ಅಥ ವಾ ಸ್ಥ ಪ್ರತಿಬಲಾಸ್ತ್ರಾತುಂ ಮಾಂ ಕ್ಷತ್ರಿಯರ್ಷಭಾಃ|

07052006c ಪಾರ್ಥೇನ ಪ್ರಾರ್ಥಿತಂ ವೀರಾಸ್ತೇ ದದಂತು ಮಮಾಭಯಂ||

ಕ್ಷತ್ರಿಯರ್ಷಭರೇ! ಅಥವಾ ಅವನಿಗೆ ಸರಿಸಾಟಿಯಾದ ಬಲದಿಂದ ನನ್ನನ್ನು ರಕ್ಷಿಸಬೇಕು. ಪಾರ್ಥನ ಪ್ರತಿಜ್ಞೆಗೆ ಪ್ರತಿಯಾಗಿ ವೀರರಾದ ನೀವು ನನಗೆ ಅಭಯವನ್ನು ನೀಡಬೇಕು.

07052007a ದ್ರೋಣದುರ್ಯೋಧನಕೃಪಾಃ ಕರ್ಣಮದ್ರೇಶಬಾಹ್ಲಿಕಾಃ|

07052007c ದುಃಶಾಸನಾದಯಃ ಶಕ್ತಾಸ್ತ್ರಾತುಮಪ್ಯಂತಕಾದ್ರಿತಂ||

ದ್ರೋಣ, ದುರ್ಯೋಧನ, ಕೃಪ, ಕರ್ಣ, ಮದ್ರೇಶ, ಬಾಹ್ಲಿಕರು ಮತ್ತು ದುಃಶಾಸನಾದಿಗಳು ಕಂಟಕವೊದಗಿರುವ ನನ್ನನ್ನು ಯಮನ ಬಾಧೆಯಿಂದಲೂ ಪಾರುಮಾಡಬಲ್ಲರು.

07052008a ಕಿಮಂಗ ಪುನರೇಕೇನ ಫಲ್ಗುನೇನ ಜಿಘಾಂಸತಾ|

07052008c ನ ತ್ರಾಯೇಯುರ್ಭವಂತೋ ಮಾಂ ಸಮಸ್ತಾಃ ಪತಯಃ ಕ್ಷಿತೇಃ||

ಹಾಗಿರುವಾಗ ನನ್ನೊಬ್ಬನನ್ನೇ ಕೊಲ್ಲಲು ಬಯಸಿರುವ ಫಲ್ಗುನನು ಯಾವ ಲೆಖ್ಕಕ್ಕೆ? ಭೂಮಂಡಲಕ್ಕೇ ಒಡೆಯರಾಗಿರುವ ನೀವೆಲ್ಲರೂ ಸೇರಿ ನನ್ನೊಬ್ಬನನ್ನು ರಕ್ಷಿಸಲಾರಿರೇ?

07052009a ಪ್ರಹರ್ಷಂ ಪಾಂಡವೇಯಾನಾಂ ಶ್ರುತ್ವಾ ಮಮ ಮಹದ್ಭಯಂ|

07052009c ಸೀದಂತೀವ ಚ ಮೇಽಂಗಾನಿ ಮುಮೂರ್ಷೋರಿವ ಪಾರ್ಥಿವಾಃ||

ಪಾಂಡವೇಯರ ಹರ್ಷದ ಕೂಗನ್ನು ಕೇಳಿ ನನಗೆ ಮಹಾಭಯವಾಗುತ್ತಿದೆ. ಪಾರ್ಥಿವರೇ! ಸಾಯುವವನಿಗೆ ಆಗುವಂತೆ ನನ್ನ ಅಂಗಗಳು ಶಿಥಿಲಗೊಳ್ಳುತ್ತಿವೆ.

07052010a ವಧೋ ನೂನಂ ಪ್ರತಿಜ್ಞಾತೋ ಮಮ ಗಾಂಡೀವಧನ್ವನಾ|

07052010c ತಥಾ ಹಿ ಹೃಷ್ಟಾಃ ಕ್ರೋಶಂತಿ ಶೋಕಕಾಲೇಽಪಿ ಪಾಂಡವಾಃ||

ಗಾಂಡೀವ ಧನ್ವಿಯು ಪ್ರತಿಜ್ಞೆ ಮಾಡಿದುದರಿಂದ ನನ್ನ ವಧೆಯು ನಿಶ್ಚಿತವಾಗಿಬಿಟ್ಟಿದೆ. ಆದುದರಿಂದಲೇ ಶೋಕಪಡಬೇಕಾಗಿದ್ದ ಸಮಯದಲ್ಲಿಯೂ ಪಾಂಡವರು ಸಂತೋಷದಿಂದ ಕೂಗುತ್ತಿದ್ದಾರೆ.

07052011a ನ ದೇವಾ ನ ಚ ಗಂಧರ್ವಾ ನಾಸುರೋರಗರಾಕ್ಷಸಾಃ|

07052011c ಉತ್ಸಹಂತೇಽನ್ಯಥಾ ಕರ್ತುಂ ಕುತ ಏವ ನರಾಧಿಪಾಃ||

“ದೇವತೆಗಳಾಗಲೀ, ಗಂಧರ್ವರಾಗಲೀ, ಅಸುರ-ಉರಗ-ರಾಕ್ಷಸರಾಗಲೀ ಇದನ್ನು ಸುಳ್ಳಾಗಿಸಲು ಉತ್ಸುಕರಿಲ್ಲದಿರುವಾಗ ಇನ್ನು ನರಾಧಿಪರು ಯಾವ ಲೆಖ್ಕಕ್ಕೆ?” ಎಂದು ಹೇಳಿಕೊಳ್ಳುತ್ತಿದ್ದಾರೆ.

07052012a ತಸ್ಮಾನ್ಮಾಮನುಜಾನೀತ ಭದ್ರಂ ವೋಽಸ್ತು ನರರ್ಷಭಾಃ|

07052012c ಅದರ್ಶನಂ ಗಮಿಷ್ಯಾಮಿ ನ ಮಾಂ ದ್ರಕ್ಷ್ಯಂತಿ ಪಾಂಡವಾಃ||

ಆದುದರಿಂದ ನರರ್ಷಭರೇ! ನನಗೆ ಅನುಜ್ಞೆಯನ್ನು ನೀಡಿ. ನಿಮಗೆ ಮಂಗಳವಾಗಲಿ! ಪಾಂಡವರು ಪತ್ತೇ ಹಚ್ಚದ ಹಾಗೆ ಕಣ್ಣುತಪ್ಪಿಸಿಕೊಂಡು ಹೋಗುತ್ತೇನೆ!”

07052013a ಏವಂ ವಿಲಪಮಾನಂ ತಂ ಭಯಾದ್ವ್ಯಾಕುಲಚೇತಸಂ|

07052013c ಆತ್ಮಕಾರ್ಯಗರೀಯಸ್ತ್ವಾದ್ರಾಜಾ ದುರ್ಯೋಧನೋಽಬ್ರವೀತ್||

ತನ್ನ ಕಾರ್ಯಸಾಧನೆಯೇ ಹೆಚ್ಚಿನದೆಂದು ತಿಳಿದ ರಾಜಾ ದುರ್ಯೋಧನನು ಹೀಗೆ ಭಯದಿಂದ ವ್ಯಾಕುಲಗೊಂಡ ಬುದ್ಧಿಯುಳ್ಳವನಾಗಿ ವಿಲಪಿಸುತ್ತಿದ್ದ ಅವನಿಗೆ ಹೇಳಿದನು:

07052014a ನ ಭೇತವ್ಯಂ ನರವ್ಯಾಘ್ರ ಕೋ ಹಿ ತ್ವಾ ಪುರುಷರ್ಷಭ|

07052014c ಮಧ್ಯೇ ಕ್ಷತ್ರಿಯವೀರಾಣಾಂ ತಿಷ್ಠಂತಂ ಪ್ರಾರ್ಥಯೇದ್ಯುಧಿ||

07052015a ಅಹಂ ವೈಕರ್ತನಃ ಕರ್ಣಶ್ಚಿತ್ರಸೇನೋ ವಿವಿಂಶತಿಃ|

07052015c ಭೂರಿಶ್ರವಾಃ ಶಲಃ ಶಲ್ಯೋ ವೃಷಸೇನೋ ದುರಾಸದಃ||

07052016a ಪುರುಮಿತ್ರೋ ಜಯೋ ಭೋಜಃ ಕಾಂಬೋಜಶ್ಚ ಸುದಕ್ಷಿಣಃ|

07052016c ಸತ್ಯವ್ರತೋ ಮಹಾಬಾಹುರ್ವಿಕರ್ಣೋ ದುರ್ಮುಖಃ ಸಹಃ||

07052017a ದುಃಶಾಸನಃ ಸುಬಾಹುಶ್ಚ ಕಲಿಂಗಶ್ಚಾಪ್ಯುದಾಯುಧಃ|

07052017c ವಿಂದಾನುವಿಂದಾವಾವಂತ್ಯೌ ದ್ರೋಣೋ ದ್ರೌಣಿಃ ಸಸೌಬಲಃ||

“ನರವ್ಯಾಘ್ರ! ಪುರುರ್ಷಭ! ಹೆದರಬೇಡ! ಈ ಕ್ಷತ್ರಿಯ ವೀರರಾದ - ನಾನು, ವೈಕರ್ತನ ಕರ್ಣ, ಚಿತ್ರಸೇನ, ವಿವಿಂಶತಿ, ಭೂರಿಶ್ರವ, ಶಲ, ಶಲ್ಯ, ದುರಾಸದ ವೃಷಸೇನ, ಪುರುಮಿತ್ರ, ಜಯ, ಭೋಜ, ಕಾಂಭೋಜ, ಸುದಕ್ಷಿಣ, ಸತ್ಯವ್ರತ, ಮಹಾಬಾಹು ವಿಕರ್ಣ, ದುರ್ಮುಖ, ಜೊತೆಗೆ ದುಃಶಾಸನ, ಸುಬಾಹು, ಕಲಿಂಗ, ಯುಧಾಯುಧ, ಅವಂತಿಯ ವಿಂದಾನುವಿಂದರು, ದ್ರೋಣ, ದ್ರೌಣಿ, ಸೌಬಲ - ಇವರ ಮಧ್ಯೆ ನಿಂತಿರುವ ನಿನ್ನೊಡನೆ ಹೋರಾಡಲು ಯಾರು ತಾನೇ ಬಯಸುತ್ತಾರೆ?

07052018a ತ್ವಂ ಚಾಪಿ ರಥಿನಾಂ ಶ್ರೇಷ್ಠಃ ಸ್ವಯಂ ಶೂರೋಽಮಿತದ್ಯುತಿಃ|

07052018c ಸ ಕಥಂ ಪಾಂಡವೇಯೇಭ್ಯೋ ಭಯಂ ಪಶ್ಯಸಿ ಸೈಂಧವ||

ರಥಿಗಳಲ್ಲಿ ಶ್ರೇಷ್ಠ, ಅಮಿತದ್ಯುತಿ, ಶೂರ ಸ್ವಯಂ ನೀನು ಹೇಗೆ ಪಾಂಡವೇಯರಿಂದ ಭಯವನ್ನು ಕಾಣುತ್ತಿರುವೆ?

07052019a ಅಕ್ಷೌಹಿಣ್ಯೋ ದಶೈಕಾ ಚ ಮದೀಯಾಸ್ತವ ರಕ್ಷಣೇ|

07052019c ಯತ್ತಾ ಯೋತ್ಸ್ಯಂತಿ ಮಾ ಭೈಸ್ತ್ವಂ ಸೈಂಧವ ವ್ಯೇತು ತೇ ಭಯಂ||

ನನ್ನ ಈ ಹನ್ನೊಂದು ಅಕ್ಷೌಹಿಣೀ ಸೇನೆಗಳೂ ನಿನ್ನ ರಕ್ಷಣೆಯನ್ನೇ ಗುರಿಯಾಗಿಟ್ಟುಕೊಂಡು ಪ್ರಯತ್ನಿಸಿ ಹೋರಾಡುತ್ತವೆ. ಸೈಂಧವ! ನೀನು ಭಯಪಟ್ಟುಕೊಳ್ಳಬೇಡ! ನಿನ್ನ ಭಯವನ್ನು ಹೊರಹಾಕು!”

07052020a ಏವಮಾಶ್ವಾಸಿತೋ ರಾಜನ್ಪುತ್ರೇಣ ತವ ಸೈಂಧವಃ|

07052020c ದುರ್ಯೋಧನೇನ ಸಹಿತೋ ದ್ರೋಣಂ ರಾತ್ರಾವುಪಾಗಮತ್||

ರಾಜನ್! ನಿನ್ನ ಮಗನಿಂದ ಹೀಗೆ ಆಶ್ವಾಸನೆಯನ್ನು ಪಡೆದ ಸೈಂಧವನು ದುರ್ಯೋಧನನನ್ನೊಡಗೂಡಿ ರಾತ್ರಿ ದ್ರೋಣನ ಬಳಿ ಹೋದನು.

07052021a ಉಪಸಂಗ್ರಹಣಂ ಕೃತ್ವಾ ದ್ರೋಣಾಯ ಸ ವಿಶಾಂ ಪತೇ|

07052021c ಉಪೋಪವಿಶ್ಯ ಪ್ರಣತಃ ಪರ್ಯಪೃಚ್ಚದಿದಂ ತದಾ||

ವಿಶಾಂಪತೇ! ಅಲ್ಲಿ ಅವನು ದ್ರೋಣನಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಅನುಮತಿಯನ್ನು ಪಡೆದು ಸಮೀಪದಲ್ಲಿ ಕುಳಿತು ವಿನಯಾನ್ವಿತನಾಗಿ ಕೇಳಿದನು:

07052022a ನಿಮಿತ್ತೇ ದೂರಪಾತಿತ್ವೇ ಲಘುತ್ವೇ ದೃಢವೇಧನೇ|

07052022c ಮಮ ಬ್ರವೀತು ಭಗವಾನ್ವಿಶೇಷಂ ಫಲ್ಗುನಸ್ಯ ಚ||

“ಭಗವನ್! ಲಕ್ಷ್ಯಭೇದನದಲ್ಲಿ, ದೂರ ಎಸೆಯುವುದರಲ್ಲಿ, ಕೈಚಳಕದಲ್ಲಿ, ದೃಢವಾಗಿ ಹೊಡೆಯುವುದರಲ್ಲಿ ನನಗೆ ಮತ್ತು ಫಲ್ಗುನನಿಗೆ ಇರುವ ವ್ಯತ್ಯಾಸವನ್ನು ಹೇಳಿ.

07052023a ವಿದ್ಯಾವಿಶೇಷಮಿಚ್ಚಾಮಿ ಜ್ಞಾತುಮಾಚಾರ್ಯ ತತ್ತ್ವತಃ|

07052023c ಮಮಾರ್ಜುನಸ್ಯ ಚ ವಿಭೋ ಯಥಾತತ್ತ್ವಂ ಪ್ರಚಕ್ಷ್ವ ಮೇ||

ಆಚಾರ್ಯ! ವಿಭೋ! ಧನುರ್ವಿದ್ಯೆಯಲ್ಲಿ ನನಗೂ ಅರ್ಜುನನಿಗೂ ಇರುವ ವ್ಯತ್ಯಾಸವನ್ನು ಯಥಾವತ್ತಾಗಿ ತಿಳಿಯ ಬಯಸಿದ್ದೇನೆ. ಇದನ್ನು ನಿಮಗೆ ತಿಳಿದಹಾಗೆ ಹೇಳಿ.”

07052024 ದ್ರೋಣ ಉವಾಚ|

07052024a ಸಮಮಾಚಾರ್ಯಕಂ ತಾತ ತವ ಚೈವಾರ್ಜುನಸ್ಯ ಚ|

07052024c ಯೋಗಾದ್ದುಃಖೋಚಿತತ್ವಾಚ್ಚ ತಸ್ಮಾತ್ತ್ವತ್ತೋಽಧಿಕೋಽರ್ಜುನಃ||

ದ್ರೋಣನು ಹೇಳಿದನು: “ಅಯ್ಯಾ! ನಾನು ನಿನಗೆ ಮತ್ತು ಅರ್ಜುನ ಇಬ್ಬರಿಗೂ ಸಮನಾಗಿಯೇ ಆಚಾರ್ಯತ್ವವನ್ನು ಮಾಡಿದ್ದೇನೆ. ಆದರೆ, ಯೋಗ ಮತ್ತು ಪಟ್ಟ ದುಃಖಗಳಿಂದಾಗಿ ಅರ್ಜುನನು ನಿನಗಿಂತಲೂ ಅಧಿಕನು.

07052025a ನ ತು ತೇ ಯುಧಿ ಸಂತ್ರಾಸಃ ಕಾರ್ಯಃ ಪಾರ್ಥಾತ್ಕಥಂ ಚನ|

07052025c ಅಹಂ ಹಿ ರಕ್ಷಿತಾ ತಾತ ಭಯಾತ್ತ್ವಾಂ ನಾತ್ರ ಸಂಶಯಃ||

ಆದರೆ ನೀನು ಯುದ್ಧದಲ್ಲಿ ಎಂದೂ ಪಾರ್ಥನಿಂದ ಹೆದರಬೇಕಾಗಿಲ್ಲ. ಅಯ್ಯಾ! ಈ ಭಯದಿಂದ ನಾನು ನಿನ್ನನ್ನು ರಕ್ಷಿಸುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.

07052026a ನ ಹಿ ಮದ್ಬಾಹುಗುಪ್ತಸ್ಯ ಪ್ರಭವಂತ್ಯಮರಾ ಅಪಿ|

07052026c ವ್ಯೂಹಿಷ್ಯಾಮಿ ಚ ತಂ ವ್ಯೂಹಂ ಯಂ ಪಾರ್ಥೋ ನ ತರಿಷ್ಯತಿ||

ನನ್ನ ಬಾಹುಗಳಿಂದ ರಕ್ಷಿಸಲ್ಪಟ್ಟವನನ್ನು ಅಮರರೂ ಕೂಡ ಆಳಲಾರರು! ಪಾರ್ಥನು ಸೀಳಲಾರದಂಥಹ ವ್ಯೂಹವನ್ನು ನಾನು ರಚಿಸುತ್ತೇನೆ.

07052027a ತಸ್ಮಾದ್ಯುಧ್ಯಸ್ವ ಮಾ ಭೈಸ್ತ್ವಂ ಸ್ವಧರ್ಮಮನುಪಾಲಯ|

07052027c ಪಿತೃಪೈತಾಮಹಂ ಮಾರ್ಗಮನುಯಾಹಿ ನರಾಧಿಪ||

ಆದುದರಿಂದ ನರಾಧಿಪ! ಪಿತೃಪಿತಾಮಹರ ಮಾರ್ಗವನ್ನು ಅನುಸರಿಸಿ, ಸ್ವಧರ್ಮವನ್ನು ಪಾಲಿಸಿ, ಯುದ್ಧಮಾಡು! ಭಯಪಡಬೇಡ!

07052028a ಅಧೀತ್ಯ ವಿಧಿವದ್ವೇದಾನಗ್ನಯಃ ಸುಹುತಾಸ್ತ್ವಯಾ|

07052028c ಇಷ್ಟಂ ಚ ಬಹುಭಿರ್ಯಜ್ಞೈರ್ನ ತೇ ಮೃತ್ಯುಭಯಾದ್ಭಯಂ||

ವೇದಗಳನ್ನು ವಿಧಿವತ್ತಾಗಿ ಅಧ್ಯಯನ ಮಾಡಿ ಅಗ್ನಿಯಲ್ಲಿ ನೀನು ಆಹುತಿಗಳನ್ನಿತ್ತಿರುವೆ. ಬಹಳಷ್ಟು ಯಜ್ಞಗಳನ್ನೂ ಇಷ್ಟಿಗಳನ್ನೂ ಮಾಡಿರುವೆ. ಆದುದರಿಂದ ನಿನಗೆ ಮೃತ್ಯುಭಯದ ಭಯವು ಇರಬಾರದು.

07052029a ದುರ್ಲಭಂ ಮಾನುಷೈರ್ಮಂದೈರ್ಮಹಾಭಾಗ್ಯಮವಾಪ್ಯ ತು|

07052029c ಭುಜವೀರ್ಯಾರ್ಜಿತಾಽಲ್ಲೋಕಾನ್ದಿವ್ಯಾನ್ಪ್ರಾಪ್ಸ್ಯಸ್ಯನುತ್ತಮಾನ್||

ಮಂದ ಮನುಷ್ಯರಿಗೆ ದುರ್ಲಭವಾದ ಮಹಾಭಾಗ್ಯವನ್ನು ನೀನು ಪಡೆದಿರುವೆ. ಭುಜವೀರ್ಯದಿಂದ ದಿವ್ಯ ಲೋಕಗಳನ್ನು ಗೆದ್ದು ಅನುತ್ತಮವಾದುದನ್ನು ಪಡೆಯುತ್ತೀಯೆ.

07052030a ಕುರವಃ ಪಾಂಡವಾಶ್ಚೈವ ವೃಷ್ಣಯೋಽನ್ಯೇ ಚ ಮಾನವಾಃ|

07052030c ಅಹಂ ಚ ಸಹ ಪುತ್ರೇಣ ಅಧ್ರುವಾ ಇತಿ ಚಿಂತ್ಯತಾಂ||

ಕೌರವರು, ಪಾಂಡವರು, ವೃಷ್ಣಿಗಳು ಮತ್ತು ಅನ್ಯ ಮಾನವರು, ಪುತ್ರನೊಂದಿಗೆ ನಾನೂ ಕೂಡ ಚಿರರಲ್ಲ. ಇದರ ಕುರಿತು ಯೋಚಿಸು.

07052031a ಪರ್ಯಾಯೇಣ ವಯಂ ಸರ್ವೇ ಕಾಲೇನ ಬಲಿನಾ ಹತಾಃ|

07052031c ಪರಲೋಕಂ ಗಮಿಷ್ಯಾಮಃ ಸ್ವೈಃ ಸ್ವೈಃ ಕರ್ಮಭಿರನ್ವಿತಾಃ||

ಒಬ್ಬೊಬ್ಬರಾಗಿ ನಾವೆಲ್ಲರೂ ಬಲಶಾಲಿ ಕಾಲನಿಂದ ಹತರಾಗಿ ತಮ್ಮ ತಮ್ಮ ಕರ್ಮಗಳಿಗನುಗುಣವಾದ ಪರಲೋಕಕ್ಕೆ ಹೋಗುತ್ತೇವೆ.

07052032a ತಪಸ್ತಪ್ತ್ವಾ ತು ಯಾಽಲ್ಲೋಕಾನ್ಪ್ರಾಪ್ನುವಂತಿ ತಪಸ್ವಿನಃ|

07052032c ಕ್ಷತ್ರಧರ್ಮಾಶ್ರಿತಾಃ ಶೂರಾಃ ಕ್ಷತ್ರಿಯಾಃ ಪ್ರಾಪ್ನುವಂತಿ ತಾನ್||

ತಪಸ್ಸನ್ನು ತಪಿಸಿ ತಪಸ್ವಿಗಳು ಯಾವ ಲೋಕಗಳನ್ನು ಪಡೆಯುತ್ತಾರೋ ಆ ಲೋಕಗಳನ್ನೇ ಕ್ಷತ್ರಧರ್ಮಾಶ್ರಿತ ಶೂರ ಕ್ಷತ್ರಿಯರು ಪಡೆಯುತ್ತಾರೆ.””

07052033 ಸಂಜಯ ಉವಾಚ|

07052033a ಏವಮಾಶ್ವಾಸಿತೋ ರಾಜನ್ಭಾರದ್ವಾಜೇನ ಸೈಂಧವಃ|

07052033c ಅಪಾನುದದ್ಭಯಂ ಪಾರ್ಥಾದ್ಯುದ್ಧಾಯ ಚ ಮನೋ ದಧೇ||

ಸಂಜಯನು ಹೇಳಿದನು: “ರಾಜನ್! ಭಾರದ್ವಾಜನಿಂದ ಹೀಗೆ ಆಶ್ವಾಸಿತನಾದ ಸೈಂದವನು ಆ ಭಯವನ್ನು ತೊರೆದು ಪಾರ್ಥನೊಂದಿಗೆ ಯುದ್ಧಮಾಡುವ ಮನಸ್ಸು ಮಾಡಿಕೊಂಡನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಣಿ ಜಯದ್ರಥಾಶ್ವಾಸೇ ದ್ವಿಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವದಲ್ಲಿ ಜಯದ್ರಥಾಶ್ವಾಸ ಎನ್ನುವ ಐವತ್ತೆರಡನೇ ಅಧ್ಯಾಯವು.

Image result for night against white background

Comments are closed.